೧೪ನೆಯ ಪ್ರಕರಣ
ವಿಲಕ್ಷಣ ಭಾವನೆ
ರಾಮರಾಜನಿಗೆ ಏಕಾಂತದ ಮಾತುಗಳನ್ನು ಹೇಳಲಿಕ್ಕೆ ಸಂಕೋಚವಾಗಹತ್ತಿತು. ಆತನಿಗೆ ರಣಮಸ್ತಖಾನನ್ನು ನೋಡಿ ಒಂದು ಬಗೆಯ ಸಂಶಯವು ಉತ್ಪನ್ನವಾಗಿತ್ತು. ಮೆಹೆರ್ಜಾನಳು ತನ್ನನ್ನು ಬಿಟ್ಟುಹೋದಾಗ ಗರ್ಭಿಣಿಯಿದ್ದದ್ದು ರಾಮರಾಜನಿಗೆ ಗೊತ್ತಿತ್ತು. ಆ ಮಾತಿಗೆ ಸರಾಸರಿ ೩೦-೩೫ ವರ್ಷಗಳಾಗಿದ್ದು, ರಣಮಸ್ತಖಾನನ ವಯಸೂ ಅಷ್ಟೇ ವರ್ಷದ್ದಾಗಿತ್ತು, ರಣಮಸ್ತಖಾನನ ರೂಪವು ರಾಮರಾಜನ ರೂಪವನ್ನು ಅಚ್ಚಳಿಯದೆ ಹೋಲುತ್ತಿತ್ತು ಮತ್ತು ರಣಮಸ್ತಖಾನನನ್ನು ನೋಡಿದ ಕೂಡಲೆ ರಾಮರಾಜನ ಮನಸ್ಸಿನಲ್ಲಿ ಒಂದು ಪ್ರಕಾರದ ಪ್ರೇಮವು ಸ್ವಭಾವಿಕವಾಗಿಯೇ ಉತ್ಪನ್ನವಾಗುತ್ತಿತ್ತು. ಮೇಲಾಗಿ ಮೆಹೆರ್ಜಾನಳ ಮುಖ ಮುದ್ರೆಯ ಕೆಲವು ಚಿಹ್ನೆಗಳು ರಣಮಸ್ತಖಾನನ ಮುಖದಲ್ಲಿ ತೋರುತ್ತಿದ್ದವು. ಇವೆಲ್ಲ ಲಕ್ಷಣಗಳಿಂದ ರಾಮರಾಜನು ಮನಸ್ಸಿನಲ್ಲಿ “ರಣಮಸ್ತಖಾನನು ಮೆಹರ್ಜಾನಳಲ್ಲಿ ಹುಟ್ಟಿದ ತನ್ನ ಮಗನಾಗಿರಬಹುದೋ ಎಂಬ ಸಂಶಯವು ಉತ್ಪನ್ನವಾಗುತ್ತಿತ್ತು. ನಿನ್ನೆ ರಾತ್ರಿ ಮೆಹೆರ್ಜಾನಳ ನೆನಪು ಆದಕೂಡಲೆ ಇವೆಲ್ಲ ಮಾತುಗಳು ಅವನ ಮನಸ್ಸಿನಲ್ಲಿ ಒಮ್ಮೆಲೆ ಹೊಳೆಯಲು, ಆತನು ಕುಂಜವನದಲ್ಲಿ ಮೆಹೆರ್ಜಾನಳು ಇರಬಹುದೆಂದು ಸಂಶಯದಿಂದ ತಟ್ಟನೆ ಕುಂಜವನಕ್ಕೆ ಬಂದಿದ್ದನು. ಇದೇ ವಿಷಯವಾಗಿಯೇ ಕೆಲವು ಮಾತುಗಳನ್ನು ರಣಮಸ್ತಖಾನನಿಗೆ ಏಕಾಂತದಲ್ಲಿ ಕೇಳಬೇಕೆಂದು ಆತನು ಮಾಡಿದ್ದಿನು; ಆದರೆ ಹಾಗೆ ಕೇಳಲಿಕ್ಕೆ ಪರಮಾವಧಿ ಸಂಕೋಚವಾಗಿ ಆತನು ಆ ಮಾತಿನ ಉಸಾಬರಿಯನ್ನೇ ಬಿಟ್ಟು ಸುಮ್ಮನೆ ಏನಾದರೂ ಮಾತಾಡಿ ಹೊತ್ತುಗಳೆಯುವದಕ್ಕಾಗಿ ಆತನು ರಣಮಸ್ತಖಾನನನ್ನು ಕುರಿತು-ನಾನು ಹ್ಯಾಗು ಇಂದು ಇಲ್ಲಿಗೆ ಅನಾಯಾಸವಾಗಿ ಬಂದಿದ್ದೇನೆ. ಒಮ್ಮೆ ಆ ಪುಷ್ಕರಣಿಯ ಕಡೆಗೆ ಹೋಗಿಬರೋಣ ದಂಡೆಯ ಮೇಲಿಂದ ಒಮ್ಮೆ ಅದರ ಪ್ರದಕ್ಷಿಣೆ ಹಾಕಬೇಕೆಂಬ ಇಚ್ಛೆಯು ನನಗೆ ಆಗಿರುತ್ತದೆ. ನೀವೂ ಸಂಗಡ ಬರುತ್ತಿದ್ದರೆ ಬರ್‍ರಿ, ಇಲ್ಲವೆ ನನ್ನೊಬ್ಬನನ್ನೇ ಅಲ್ಲಿಗೆ ಹೋಗಗೊಡಿರಿ. ನಾನು ಒಮ್ಮೆ ಸತ್ತುವರಿದು ಬರುವೆನು. ಮನಸ್ಸಿಗೆ ಬಂದರೆ ಒತ್ತಟ್ಟಿಗೆ ಗಳಿಗೆರಡುಗಳಿಗೆ ಕುಳಿತು ಸ್ವಲ್ಪ ವಿಶ್ರಾಂತಿಯನ್ನು ಹೊಂದುವೆನು, ಇಲ್ಲದಿದ್ದರೆ ಬೇಗನೆ ತಿರುಗಿ ಬರುವೆನು.” ಎಂದು ನುಡಿಯಲು ರಾಮರಾಜನ ಇಂದಿನ ವಿಚಿತ್ರ ಸ್ಥಿತಿಯನ್ನು ನೋಡಿ ರಣಮಸ್ತಖಾನನಿಗೆ ಬಹಳ ಆಶ್ಚರ್ಯವಾಯಿತು. ರಾಮರಾಜನ ದಿನದ ಉದ್ದಾಮ ವೃತ್ತಿಯು ಇಂದು ಎಲ್ಲಿಯೋ ಹೋಗಿ ಬಿಟ್ಟಿತ್ತು. ಕುಂಜವನದೊಳಗೆ ಬಂದಾಗಿನಿಂದ ಈತನು ತನ್ನ ಸಂಗಡ ಇಷ್ಟು ನಮ್ರತೆಯಿಂದ ಯಾಕೆ ನಡಕ್ಕೊತ್ತಾನೆಂಬದು ರಣಮಸ್ತಖಾನನಿಗೆ ತಿಳಿಯದಾಯಿತು. ರಾಮರಾಜನ ನಡತೆಯಲ್ಲಿ ಬರಿಯ ನಮ್ರತೆಯಷ್ಟೇ ಅಲ್ಲ, ಸ್ವಲ್ಪ ಪ್ರೇಮದ ಲಕ್ಷಣವೂ ರಣಮಸ್ತಖಾನನಿಗೆ ತೋರಿತು. ಆಗ ಆ ತರುಣ ಸರದಾರನ ಮನಸ್ಸಿನಲ್ಲಿ- “ಈ ಸ್ಥಳವು ರಾಮರಾಜನದಿದ್ದು, ಈತನಿಗೆ ಒಂದು ಸಾರೆ ಪುಷ್ಕರಣಿಯ ಸುತ್ತು ತಿರುಗಿ ಬರಲಿಕ್ಕೆ ಬೇಡವೆನ್ನುವದು ಹ್ಯಾಗೆಂದು” ಯೋಚಿಸಿ. ರಾಮರಾಜನನ್ನು ಕುರಿತು-ಅಲಬತ್-ಅಲಬತ್! ತಾವು ಅವಶ್ಯವಾಗಿ ಪುಷ್ಕರಣಿಯನ್ನು ಸುತ್ತು ಹಾಕಿಕೊಂಡು ಬರಿ, ತಮ್ಮ ಮನಸ್ಸಿಗೆ ಅಲ್ಲಿ ಕೆಲವು ಹೊತ್ತು ಕುಳಿತುಕೊಳ್ಳುವ ಹಾಗಾದರೆ ಅವಶ್ಯವಾಗಿ ಕುಳಿತುಕೊಳ್ಳಿರಿ. ನೀವು ಹೀಗೆ ಸಂಕೋಚ ಪಡುವುದೇಕೆ ? ಎಂದು ಕೇಳಿದನು. ಅದಕ್ಕೆ ರಾಮರಾಜನು-ಸಂಕೋಚವೇನೂ ಇಲ್ಲ; ಆದರೆ ನೀವು ನನ್ನ ಸಂಗಡ ಬರುವ ಹಾಗಿದ್ದರೆ ಬರ್‍ರಿ, ಪುಷ್ಕರಣಿಯ ದರ್ಶನದಿಂದ ನನಗೆ ಬಹಳ ಸಮಾಧಾನವಾಗುವದು, ಆದ್ದರಿಂದ ಬರ್‍ರಿ, ಹೋಗಿ ಬರೋಣ.
ರಣಮಸ್ತಖಾನನು ರಾಮರಾಜನ ಈ ಮಾತಿಗೆ ಒಪ್ಪಿಕೊಂಡು ಆತನೊಡನೆ ಪುಷ್ಕರಣಿಯ ದಾರಿಯನ್ನು ಹಿಡಿದನು. ಬರುತ್ತ ಬರುತ್ತ ಅವರಿಬ್ಬರು ಪುಷ್ಕರಣಿಯ ದಂಡೆಯನ್ನು ಮುಟ್ಟಿದರು. ಅಲ್ಲಿ ಹೋದ ಕೂಡಲೆ ರಾಮರಾಜನಿಗೆ ಹಿಂದಿನದೆಲ್ಲ ನೆನಪಾಗಿ, ಮೆಹೆರ್ಜಾನಳು ಆತನ ಕಣ್ಣಿಗೆ ಕಟ್ಟಿದಳು. ಪುಷ್ಕರಣಿಯ ದಂಡೆಯ ಮೇಲೆ ನಿಂತುಕೊಂಡು ಆತನು ಸುತ್ತು ಮುತ್ತು ನೋಡಹತ್ತಿದನು. ಹಿಂದಕ್ಕೆ ೩೫ ವರ್ಷಗಳ ಹಿಂದೆ ಇದ್ದಂತೆಯೇ ಪುಷ್ಕರಣಿಯ ಸೌಂದರ್ಯವು ಈಗಾದರೂ ಇತ್ತು. ತನ್ನ ಸಂಗಡ ರಣಮಸ್ತಖಾನನು ಇರುವನೆಂಬದನ್ನು ರಾಮರಾಜನು ಮರೆತು ಬಿಟ್ಟಂತೆ ತೋರಿತು. ಆತನಿಗೆ ಪುಷ್ಕರಣಿಯ ಹೊರತು ಬೇರೆಯೇನೂ ಕಾಣುತ್ತಿದ್ದಿಲ್ಲ. ಅವನು ಪುಷ್ಕರಣಿಯ ಸುತ್ತು ಮುತ್ತು ನೋಡಿದನು, ಕೆಳಗೆ ಕಮಲಮಯವಾದ ಜಲದ ಕಡೆಗೆ ನೋಡಿದನು, ಆಮೇಲೆ ಆಕಾಶದ ಕಡೆಗೆ ನೋಡಿ ಒಮ್ಮೆ ಗಟ್ಟಿಯಾಗಿ ನಿಟ್ಟುಸಿರುಬಿಟ್ಟನು. ಅಷ್ಟರಲ್ಲಿ ಒಂದು ಮಗ್ಗಲಿಗೆ ಕಟ್ಟಿದ್ದ ನೌಕೆಯ ಕಡೆಗೆ ಆತನ ದೃಷ್ಟಿಯು ಹೋಯಿತು. ನೌಕೆಯನ್ನು ನೋಡಿದ ಕೂಡಲೇ ರಾಮರಾಜನ ವೃತ್ತಿಯು ಅತ್ಯಂತ ವ್ಯಾಕುಲವಾಯಿತು. ಕೂಡಲೆ ಆತನ ಕಣ್ಣೊಳಗಿಂದ ನೀರುಗಳು ಬಂದವು. ಆತನು ತನ್ನ ಮೋರೆಯನ್ನು ಒತ್ತಟ್ಟಿಗೆ ತಿರುಗಿಸಿ ಕಣ್ಣುಮುಚ್ಚಲು, ಕಣ್ಣೀರ ಹನಿಗಳು ಆತನ ಗಲ್ಲಗಳ ಮೇಲೆ ಪಟಪಟ ಬಿದ್ದವು. ಅವನ್ನು ರಾಮರಾಜನು ಮೆಲ್ಲನೆ ಒರೆಸಿಕೊಂಡು ಎರಡು ಕ್ಷಣ ಹಾಗೆ ಕಣ್ಣುಗಳನ್ನು ಮುಚ್ಚಿಕೊಂಡಿದ್ದನು. ಆಮೇಲೆ ಕಣ್ಣು ತೆರೆಯಲು ಎದುರಿಗಿನ ಲತಾ ಮಂಟಪದಲ್ಲಿ ಒಬ್ಬ ಸ್ತ್ರೀಯು ನಿಂತು ಕೊಂಡಿದ್ದು, ಆಕೆಯು ತನ್ನನ್ನು ಎವೆಯಿಕ್ಕದೆ ನೋಡುತ್ತಿರುವಂತೆ ರಾಮರಾಜನಿಗೆ ತೋರಿತು. ಆಗ ಆತನಿಗೆ ತಾನು ಎಲ್ಲಿ ಇರುತ್ತೇನೆ, ಏನು ಮಾಡುತ್ತೇನೆ ಎಂಬುದರ ಎಚ್ಚರ ಉಳಿಯದೆ, ಆತನು ಬಾಯಿಂದ- 'ಮೆಹೆರ್ಜಾನ ! ಮೆಹೆರ್ಜಾನ !” ಎಂದು ಒಟಗುಟುತ್ತ ಆ ಕುಂಜವನದ ಕಡೆಗೆ ಓಡಿದನು. ಕರ್ಮಧರ್ಮ ಸಂಯೋಗದಿಂದ ರಾಮರಾಜನು ಒಟಗುಟ್ಟಿದ್ದು ರಣಮಸ್ತಖಾನನಿಗೆ ಕೇಳಲಿಲ್ಲ. ಕೇಳಿದ್ದರೂ ಅವರ ಅರ್ಥವು ಆತನಿಗೆ ನೆಟ್ಟಗೆ ತಿಳಿಯಲಿಲ್ಲ. ಏನಾದರೂ ನೆನಪಾದ್ದರಿಂದ ಈತನು ಒಟಗುಟ್ಟುತ್ತ ಹೀಗೆ ಓಡಿ ಹೋಗಿರಬಹುದು; ಆದರೆ ನಾನು ಆತನ ಬೆನ್ನಹತ್ತಿ ಹೋಗುವರು ಸರಿಯಲ್ಲ ಎಂದು ರಣಮಸ್ತಖಾನನು ಅಲ್ಲಿಯೇ ನಿಂತುಕೊಂಡು. ಇನ್ನೊಂದು ಮಾತಿನಲ್ಲಿ ದೇವರು ಕಾದನು; ಯಾಕೆಂದರೆ, ರಾಮರಾಜನ ಕಣ್ಣಿಗೆ ಬಿದ್ದ ಸ್ತ್ರೀಯು ರಣಮಸ್ತಖಾನನ ಕಣ್ಣಿಗೆ ಬೀಳಲಿಲ್ಲ.
ರಾಮರಾಜನು ಓಡಿದವನು ಆ ಲತಾಮಂಟಪವನ್ನು ಪ್ರವೇಶಿಸಿ ನೋಡಿದನು; ಆದರೆ ಅಲ್ಲಿ ಸ್ತ್ರೀಯು ಇದ್ದಿಲ್ಲ. ಆಕೆಯು ಇಲ್ಲಿಯೇ ಎಲ್ಲಿಯಾದರೂ ಗಿಡಗಳ ಮರೆಯಲ್ಲಿ ಅಡಗಿರಬಹುದೆಂದು ತಿಳಿದು ಆತನು- “ಮೆಹೆರ್ಜಾನ ! ಮೆಹೆರ್ಜಾನ !” ಎಂದು ಗಟ್ಟಿಯಾಗಿ ಕೂಗುತ್ತ ಅತ್ತ ಇತ್ತ ಓಡಾಡಿ ಹುಡಕಹತ್ತಿದನು. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ತಾನೂ ಕುಂಜವನದಲ್ಲೆಲ್ಲ ಹುಡುಕಿದರೂ ಮೆಹೆರ್ಜಾನಳು ಸಿಗದಿರಲು, ರಾಮರಾಜನು ಒಂದು ಕಡೆಗೆ ಸುಮ್ಮನೆ ನಿಂತು ಕೊಂಡನು. ನಿಂತನಿಂತಿರುವಾಗ ಆತನು ಮನಸ್ಸಿನಲ್ಲಿ - “ಇದು ಕೇವಲ ನನ್ನ ಭ್ರಾಂತಿಯಾಗಿರಬಹುದು. ಇಲ್ಲದಿದ್ದರೆ ಇಷ್ಟು ವರ್ಷಗಳ ಮೇಲೆ ಮೆಹೆರ್ಜಾನಳು ಇಲ್ಲಿ ನನ್ನ ಕಣ್ಣಿಗೆ ಹ್ಯಾಗ ಬಿದ್ದಾಳು ? ಭ್ರಾಂತಿಯು, ನಿಶ್ಚಯವಾಗಿ ಭ್ರಾಂತಿಯು” ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು, ಇನ್ನು ಹಿಂದಕ್ಕೆ ತಿರುಗಬೇಕೆನ್ನುತ್ತಿರಲು, ಮತ್ತೆ ಆತನ ಮನಸ್ಸಿನಲ್ಲಿ- “ಭ್ರಾಂತಿಯೆಂದು ಹ್ಯಾಗೆ ಅನ್ನಬೇಕು? ಮೆಹೆರ್ಜಾನಳನ್ನು ನಾನು ಈಗ ಪ್ರತ್ಯಕ್ಷ ನೋಡಿದ್ದೇನೆ. ಮೇಲಾಗಿ ರಣಮಸ್ತಖಾನನ ರೂಪವು ನನ್ನ ರೂಪವನ್ನು ಅಚ್ಚಳಿಯದೆ ಹೋಲುತ್ತದೆ. ಇದಲ್ಲದೆ ಮೆಹೆರ್ಜಾನಳ ಕೆಲವು ಲಕ್ಷಣಗಳು ಆ ತರುಣ ಸರದಾರನ ಮೋರೆ-ಮಾತು-ನಡಿಗೆ-ದನಿ ಮೊದಲಾದವುಗಳಲ್ಲಿ ತೋರುತ್ತವೆ. ಮೆಹೆರ್ಜಾನಳು ಇಲ್ಲಿಗೆ ಬಂದಿರಲಿಕ್ಕಿಲ್ಲೆಂದು ಹ್ಯಾಗೆ ಹೇಳಬೇಕು? ಅದರಲ್ಲಿ ಧನಮಲ್ಲನೂ ಇಲ್ಲಿಯೇ ಇದ್ದಾನೆ; ರಣಮಸ್ತಖಾನನು ನನ್ನಿಂದ ಆಕೆಯಲ್ಲಿ ಮಗನೇ ನಿಶ್ಚಯವು ! ಆದರೆ ಆತನು ವಿಜಾಪುರದ ಬಾದಶಹನ ವಕೀಲನಾಗಿ ಬರುವ ಸಂಭವವು ಹ್ಯಾಗೆ ? ಹೆಮೆರ್ಜಾನಳು ನನಗೆ ವಿರೋಧಿಯಾಗಿದ್ದ ಪಕ್ಷದಲ್ಲಿ ತನ್ನ ಮಗನನ್ನು ವಕೀಲನನ್ನಾಗಿ ಹ್ಯಾಗೆ ಬರಗೊಟ್ಟಾಳು ? ನನ್ನ ಮೇಲೆ ಆಕೆಯ ಪ್ರೇಮವು ಯಥಾಸ್ಥಿತವಾಗಿದ್ದ ಪಕ್ಷದಲ್ಲಿ, ಇಷ್ಟು ದಿನ ಆಕೆಯು ನನ್ನ ಬಳಿಗೆ ಬಾರದೆ ಉಳಿಯುವದಾದರೂ ಹ್ಯಾಗೆ ? ಒಟ್ಟಿಗೆ ಇದೇನು ನಿಜವೋ, ಭ್ರಾಂತಿಯೋ, ಸ್ವಪ್ನವೋ ನನಗಂತು ತಿಳಿಯದಾಗಿದೆ. ಎಲ! ನಾನು ಭಯಂಕರವಾದ ಇಂದ್ರಜಾಲದಲ್ಲಿ ಸಿಕ್ಕಿಕೊಂಡೆನೋ ಏನೋ.
ಈ ಮೇರೆಗೆ ರಾಮರಾಜನು ಭ್ರಮಿಷ್ಟನಂತೆ ಆಚರಿಸುತ್ತಿರಲು, ರಣಮಸ್ತಖಾನನು ತಾನು ನಿಂತ ಸ್ಥಳದಲ್ಲಿಯೇ ನಿಂತುಕೊಂಡು ಅದನ್ನು ನೋಡಿ, ಈತನು ಇಂದೇ ಹೀಗೆ ಯಾಕೆ ಮಾಡುತ್ತಿರಬಹುದೆಂದು ಯೋಚಿಸ ಹತ್ತಿದನು. ಆತನಿಗೆ ರಾಮರಾಜನು ಒದರಿದ್ದೂ ಕೇಳಿಸಿದ್ದಿಲ್ಲ; ಕಣ್ಣೀರು ಸುರಿಸಿದ್ದೂ ಕಂಡಿದ್ದಿಲ್ಲ; ವಿಲಕ್ಷಣ ಬುದ್ದಿಶಾಲಿಯಾದ ಈ ಕುಲೀನ ಮನುಷ್ಯನು ಇಂದು ಹೀಗೆ ಯಾಕೆ ಮಾಡುತ್ತಿರಬಹುದೆಂಬದರ ಗೂಢವೇ ರಣಮಸ್ತಖಾನನಿಗೆ ತಿಳಿಯದಾಯಿತು. ತನ್ನ ಪ್ರೀತಿಯ ಕುಂಜವನದಲ್ಲಿ ಹಿಂದಕ್ಕೆ ಒದಗಿದ್ದೊಂದು ಮನೋಹರ ಪ್ರಸಂಗದ ನೆನಪಾದದ್ದರಿಂದ ಈತನು ಹೀಗೆ ಮಾಡುತ್ತಿರಬಹುದೆಂದು ತರ್ಕಿಸಿ ಆತನು ತನ್ನ ಸಮಾಧಾನ ಮಾಡಿಕೊಳ್ಳುತ್ತಿದ್ದನು. ಅಷ್ಟರಲ್ಲಿ ರಾಮರಾಜನು ನಿರಾಶೆಪಟ್ಟು ಇನ್ನು ವಿಜಯನಗರಕ್ಕೆ ಹೋಗಬೇಕೆಂದು ನಿಶ್ಚಯಿಸಿ ರಣಸ್ತಖಾನನು ನಿಂತಲ್ಲಿಗೆ ಬಂದು-ಕುಂಜವನವನ್ನು ನೋಡಲಿಕ್ಕೆ ನನಗೆ ಪರವಾನಿಗೆಯನ್ನು ಕೊಟ್ಟಿದ್ದರಿಂದ ನನ್ನ ಮೇಲೆ ನೀವು ಬಹಳ ಉಪಕಾರಮಾಡಿದಂತಾಯಿತು. ಆ ಉಪಕಾರವನ್ನು ಹ್ಯಾಗೆ ತೀರಿಸಬೇಕೆಂದಬುದು ನನಗೆ ತಿಳಿಯದಾಗಿದೆ. ತಿರುಗಿ ಮತ್ತೆ ಯಾವಾಗ ನನಗೆ ಕುಂಜವನಕ್ಕೆ ಬರುವ ಮನಸ್ಸಾದೀತೋ ಆಗ ನಾನು ಬರುವೆನು. ಈಗಿನಂತೆಯೇ ಆಗ ನನಗೆ ಪರವಾನಿಗೆಯನ್ನು ಕೊಡಿರೆಂದರಾಯಿತು” ಅನ್ನಲು, ರಣಮಸ್ತಖಾನನು ಅತ್ಯಂತ ಸಹಾನುಭೂತಿಯಿಂದ ಛೇ ಛೇ, ಇದೇನು ಮಾತಾಡೋಣವು! ಕುಂಜವನವು ನಿಮ್ಮದಿದ್ದು ನನಗಿಷ್ಟು ಯಾಕೆ ಹೇಳಿಕೊಳ್ಳಬೇಕು? ಕುಂಜವನದ ಮೇಲೆ ತಮ್ಮದಿಷ್ಟು ಪ್ರೇಮವಿರುತ್ತದೆಂಬದು ನನಗೆ ಮೊದಲಿಗೆ ಗೊತ್ತಾಗಿದ್ದರೆ, ನಾನು ಇಲ್ಲಿ ಇರುತ್ತಿದ್ದಿಲ್ಲ, ಬೇರೆ ಕಡೆಗೆ ಇರುತ್ತಿದ್ದನು. ಸ್ಥಳವು ನಿಮ್ಮದು ನಾನೇನು ನಾಲ್ಕು ದಿವಸ ಇದ್ದು ಹೋಗುವವನು, ತಾವು ಬೇಕಾದಾಗ ಬರ್‍ರಿ, ಬೇಕಾದ ಹಾಗೆ ತಿರುಗಾಡಿರಿ, ನಿಮಗೆ ಬೇಡೆನ್ನುವವರು ಯಾರು ? ಈಗ ನಾನು ವಿನಯದಿಂದ ತಮ್ಮನ್ನು ಬೇಡಿಕೊಳ್ಳುವದೇನಂದರೆ, ಹೊತ್ತು ಬಹಳವಾಗಿದೆ. ಸ್ನಾನ-ಸಂಧ್ಯೆ ತೀರಿಸಿಕೊಂಡು ಊಟಮಾಡಿ ಹೋಗಬೇಕು, ಇಲ್ಲಿ ಬಂದು ತಾವು ಉಪವಾಸ ಹೋಗುವದೂ, ತಮ್ಮನ್ನು ನಾವು ಹಾಗೆ ಹೋಗಗೊಡುವದೂ ಸರಿಯಲ್ಲ ; ಎಲ್ಲ ಪದಾರ್ಥಗಳನ್ನು ಸಿದ್ಧಮಾಡಿಸಿ ಕೊಡುವೆನು. ತಮಗೆ ಅಡಿಗೆಮಾಡಿ ಹಾಕಲಿಕ್ಕೆ ಜನರು ಇಲ್ಲಿ ಇರುತ್ತಾರೆ, ಅನ್ನುತ್ತಿರಲು, ರಾಮರಾಜನು ಆದನ್ನು ಪೂರಾ ಕಿವಿಯ ಮೇಲೆ ಸಹ ಹಾಕಿಕೊಳ್ಳದೆ, ಬಗೆಬಗೆಯಿಂದ ಆತನನ್ನು ಕುರಿತು-ಬೇಡ ಬೇಡ, ಅದರ ಸಲುವಾಗಿ ನೀವು ನನಗೆ ಆಗ್ರಹ ಮಾಡಬೇಡಿರಿ. ಉಂಡದ್ದಕ್ಕಿಂತಲೂ ಹೆಚ್ಚೆಂದು ತಿಳಿಯಿರಿ. ನಾನು ಇನ್ನು ಇಲ್ಲಿ ಒಂದು ಕಣವಾದರೂ ನಿಂತುಕೊಳ್ಳಲಿಚ್ಚಿಸುವದಿಲ್ಲ. ಎಂದು ನುಡಿದವನೇ ತಟ್ಟನೆ ಹೊರಟನು, ರಣಮಸ್ತಖಾನನೂ ಆತನ ಬೆನ್ನುಹತ್ತಿನಡೆದನು. ರಾಮರಾಜನು ತನ್ನ ಕುದುರೆಯನ್ನು ಬಿಟ್ಟಿದ್ದ ಸ್ಥಳಕ್ಕೆ ಬಂದು ಅದನ್ನು ಹತ್ತಿದನು; ಇಲ್ಲಿಯವರೆಗೆ ತನ್ನ ಸಂಗಡ ಬಂದಿದ್ದ ಸೇವಕನ ನೆನಪು ಸಹ ಆತನಿಗೆ ಆಗಿದ್ದಿಲ್ಲ; ಆದರೆ ಸೇವಕನು ತನ್ ಬಳಿಯಲ್ಲಿ ನಿಂತದ್ದನ್ನು ನೋಡಿ ರಾಮರಾಜನು ಆತನಿಗೆ “ನಡೆ” ಎಂದು ನುಡಿದು, ರಣಮಸ್ತಖಾನನ ಕಡೆಗೆ ಹೊರಳಿ ಆತನ ಆನುಜ್ಞೆಯನ್ನು ಪಡೆದಂತೆ ಸಂಜ್ಞೆಮಾಡಿ ಕುದುರೆಯನ್ನು ಮುಂದಕ್ಕೆ ಬಿಟ್ಟನು. ಇತ್ತ ರಣಮಸ್ತಕಾನನು ಇಂದಿನ ರಾಮರಾಜನ ವಿಲಕ್ಷಣ ಸ್ಥಿತಿಯ ಬಗ್ಗೆ ಆಲೋಚಿಸುತ್ತ ತನ್ನ ತಾಯಿಯ ಕೋಣೆಯ ಕಡೆಗೆ ಹೊರಟನು. ನಿನ್ನೆತನ್ನ ಬಳಿಗೆ ಬಂದಿದ್ದ ಸುಂದರಿಯ ಯೋಗಕ್ಷೇಮವನ್ನು ತಕ್ಕೊಳ್ಳುವದಕ್ಕೆ ಆತನ ಮನಸ್ಸು ಹರಿಯಹತ್ತಿತು. ಆತನು ತನ್ನ ತಾಯಿಯ ವೃದ್ದ ದಾಸಿಯಾದ ಲೈಲಿಯೆಂಬವಳನ್ನು ಕಂಡು ಆಕೆಯನ್ನು ಕುರಿತು-
ರಣಮಸ್ತಖಾನ-ನಿನ್ನೆ ಬಂದಿರುವ ತರುಣಿಯ ಯೋಗಕ್ಷೇಮವು ಸರಿಯಾಗಿ ನಡೆದಿರುವದಷ್ಟೇ ?
ದಾಸಿ-ಆ ತರುಣಿಯ ವ್ಯವಸ್ಥೆಯು ಬಹಳ ನೆಟ್ಟಗಿರುತ್ತದೆ. ಮಾಸಾಹೇಬರು ಆಕೆಗೆ ತಮ್ಮ ಹತ್ತರ ಇರ ಹೇಳಿದ್ದಾರೆ. ರಾತ್ರಿ ಆಕೆಯ ಹಾಸಿಗೆಯನ್ನು ಸಹ ತಮ್ಮ ಬಳಿಯಲ್ಲಿ ಹಾಸಬೇಕೆಂದು ಹೇಳಿದರು. ಏನು ಚಮತ್ಕಾರವೋ ತಿಳಿಯದು, ಆ ತರುಣಿಯು ಕೇವಲ ಹೊಟ್ಟೆಯ ಮಗಳಂತೆ ಮಾಸಾಹೇಬರ ಸೇವೆಯನ್ನು ಮಾಡಹತ್ತಿದ್ದಾಳೆ. ಆಕೆಯ ಸ್ಥಿತಿಯನ್ನು ನೋಡಿದರೆ, ಆಕೆಯು ಇಲ್ಲಿಂದ ಹೋಗುವ ಹಾಗೆ ತೋರುವದಿಲ್ಲ.
ರಣಮಸ್ತಖಾನ-ಏನಂದಿ ? ಆಕೆಯು ಇಲ್ಲಿಂದ ಹೋಗುವಹಾಗೆ ಕಾಣುವದಿಲ್ಲವೆ ? ಹಾಗಾದರೆ ಆಕೆಯು ಇಲ್ಲಿಯೇ ಇರುತ್ತಾಳೋ ಏನು ?
ದಾಸಿ-ಹೌದು, ಆಕೆಯು ಇಲ್ಲಿಯೇ ಇರುವಂತೆ ತೋರುತ್ತದೆ. ಇಂದು ಮುಂಜಾನೆ ನನ್ನ ಮುಂದೆ ಆಕೆಯು-ಮಾಸಾಹೇಬರ ಸಹವಾಸದಲ್ಲಿಯೇ ನನ ಜನ್ಮವನ್ನು ಕಳೆಯುವ ಪ್ರಸಂಗ ಬಂದರೆ, ನಾನು ಧನ್ಯಳಾಗುವೆನು, ಎಂದು ಹೇಳಿದಳು, ನಿಮ್ಮನ್ನಂತು ಆಕೆಯು “ನವಾಬ ಸಾಹೇಬರು” ಎಂದು ಕರೆದ ಹೊರತು ಬಾಯಿ ಎತ್ತುವದಿಲ್ಲ.
ರಣಮಸ್ತಖಾನ-ಶಾಬಾಶ್ ! ಆ ತರುಣಿಯು ಒಳ್ಳೆ ಸುಂದರ ಹೆಸರು ಹುಡುಕಿ ತೆಗೆದಿದ್ದಾಳೆ ಬಿಡು ! ಇದಕ್ಕಾಗಿ ನಾನು ಆಕೆಯನ್ನು ಪ್ರತ್ಯಕ್ಷ ಕಂಡು ಕೃತಜ್ಞತೆಯನ್ನು ಪ್ರಕಟಿಸತಕ್ಕದ್ದು ನೀನು ಅದಷ್ಟು ಸಂಧಿಯನ್ನು ಸಾಧಿಸಿಕೊಳ್ಳುವಹಾಗಿದ್ದರೆ ನೋಡಬಾರದೆ ?
ದಾಸಿ-ಆ ಸಂಧಿಯನ್ನು ಒದಗಿಸಿ ಕೊಡಲಿಕ್ಕೆ ನಾನು ಯಾಕೆ ಬೇಕು ? ಆಕೆಯ ಮನಸ್ಸಿಗೆ ಬಂದರೆ ತಾನಾಗಿ ನಿಮಗೆ ಆ ಸಂಧಿಯನ್ನು ಒದಗಿಸಿ ಕೊಟ್ಟಾಳು ಆಕೆಯ ಎಲ್ಲ ಸ್ಥಿತಿ ರೀತಿಗಳನ್ನು ನೋಡುವದರ ಮೇಲಿಂದ, ಆಕೆಯು ಸ್ವಚ್ಛಂದಿ ವೃತ್ತಿಯವಳಿರುವಂತೆ ನನಗೆ ತೋರುತ್ತದೆ. ಈಗ ಆಕೆಯು ಪುಷ್ಕರಣಿಯ ಕಡೆಗೆ ಹೋಗಿರುತ್ತಾಳೆ.
ದಾಸಿಯ ಈ ಮಾತುಗಳನ್ನು ಕೇಳಿ ರಣಮಸ್ತಖಾನನು ಅಲ್ಲಿ ಬಹಳ ಹೊತ್ತು ನಿಲ್ಲದೆ ಅಲ್ಲಿಂದ ಹೊರಟು ಹೋದನು. ಆ ಸುಂದರಿಯು ಕುಂಜವನದಲ್ಲಿ ಹೋಗಿರುವದರಿಂದ ತಾನು ಅತ್ತ ಕಡೆಗೆ ಹೋಗಬೇಕೆಂದು ಮಾಡಿದನು. ಆದರೆ ಅಪರಿಚಿತ ತರುಣಿಯೊಬ್ಬಳು, ಅಕಸ್ಮಾತ್ತಾಗಿ ತನ್ನ ಮನೆಗೆ ಬಂದಿರಲು, ತಾನು ಆಕೆಯನ್ನು ಏಕಾಂತದಲ್ಲಿ ಕಾಣಲಿಚ್ಛಿಸುವದೂ, ಆಕೆಯೊಡನೆ ಏಕಾಂತದಲ್ಲಿ ಮಾತಾಡುವದೂ ದೊಡ್ಡಸ್ತನಕ್ಕೆ ಒಪ್ಪುವದಿಲ್ಲೆಂಬ ವಿಚಾರವು ಆತನ ಮನಸ್ಸಿನಲ್ಲಿ ಉತ್ಪನ್ನವಾಯಿತು; ಆದರೂ ಆತನು ತನ್ನ ವಿಚಾರವನ್ನು ತಿರುಗಿಸಲಿಲ್ಲ. ದೂರದಿಂದ ಅಕೆಯನ್ನು ನೋಡಿದರೆ ತಪ್ಪೇನು ? ಮುಂದೆ ಪ್ರಸಂಗನೋಡಿ, ನಡೆದರಾಯಿತು, ಎಂದು ಆಲೋಚಿಸುತ್ತಿರಲು, ಮಂದಿರದ ಕಡೆಗೆ ನಡೆದಿದ್ದ ಅವನ ಕಾಲುಗಳು ಮೆಲ್ಲಮೆಲ್ಲನೆ ಕುಂಜವನದೊಳಗಿನ ಪುಷ್ಕರಣಿಯ ಕಡೆಗೆ ಸಾಗಹತ್ತಿದವು. ಆತನು ಹಲವು ಲತಾಮಂಟಪಗಳನ್ನು ಲಕ್ಷ್ಯಪೂರ್ವಕವಾಗಿ ಹುಡುಕಿದನು; ಆದರೆ ಎಲ್ಲಿಯೂ ಆ ಸುಂದರಿಯ ಗೊತ್ತು ಹತ್ತಲಿಲ್ಲ. ಆ ಸುಂದರಿಯು ಅಕಸ್ಮಾತ್ತಾಗಿ ಭೆಟ್ಟಿಯಾದರೆ, ತಾನು ಹ್ಯಾಗೆ ನಿಲ್ಲಬೇಕು ? ಹ್ಯಾಗೆ ಮಾತಾಡಬೇಕು ಎಂಬ ವಿಚಾರಗಳಲ್ಲಿ ಆತನ ಮನಸ್ಸು ತೊಡಗಿತ್ತು. ಆತನು ಆ ತರುಣಿಯನ್ನು ಶೋಧಿಸುತ್ತ ಹೋಗುತ್ತಿರಲು, ಲತಾಮಂಟಪದೊಳಗಿನ ಪೀಠದಲ್ಲಿ ತಾನು ಹುಡುಕುತ್ತಿದ್ದ ತರುಣಿಯು ಸಚಿಂತ ಮುದ್ರೆಯಿಂದ ಆಲೋಚಿಸುತ್ತ ಕುಳಿತದ್ದನ್ನು ಆತನು ನೋಡಿದನು. ಆಗ ಆ ತರುಣಿಯ ದರ್ಶನದ ವಿಷಯವಾಗಿ ಅತ್ಯಂತ ಆತುರವಾಗಿದ್ದ ಆ ತರುಣ ಸರದಾರನು ಹಿಂದುಮುಂದಿನ ವಿಚಾರ ವಿಲ್ಲದೆ ತಟ್ಟನೆ ಆಕೆಯ ಮುಂದೆ ಹೋಗಿ ನಿಂತುಕೊಂಡನು. ಹೀಗೆ ರಣಮಸ್ತಖಾನನು ಆ ತರುಣಿಯ ಎದುರಿಗೆ ಹೋಗಿ ನಿಂತದ್ದೊಂದೇ ತಡ, ಆಕೆಯು ಮೆಟ್ಟಿಬಿದ್ದು ತಟ್ಟನೆ ಎದ್ದು ನಿಂತುಕೊಂಡು ಮೈತುಂಬ ಸೆರಗು ಹೊದ್ದುಕೊಂಡಳು. ಆಗ ರಣಮಸ್ತಖಾನನ ಮನಸ್ಸಿನಲ್ಲಿ ಈ ವರೆಗೆ ಎಂದೂ ಅನುಭವಕ್ಕೆ ಬಾರದ ವಿಲಕ್ಷಣ ಭಾವನೆಯುಂಟಾಯಿತು.
****