ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ |
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ॥ ಪ || ಕರುಣಿಸೋ ॥
ರುಕುಮಾಂಗದನಂತೆ ವ್ರತವ ನಾನರಿಯೆ |
ಶುಕಮುನಿಯಂತೆ ಸ್ತುತಿಸಲು ಅರಿಯೆ |
ಬಕವೈರಿಯಂತೆ ಧ್ಯಾನವ ಮಾಡಲರಿಯೇ |
ದೇವಕಿಯಂತೆ ಮುದ್ದಿಸಲೂ ಅರಿಯೆನೋ || ೧ || ಕರುಣಿಸೋ ||
ಗರುಡನಂದದಿ ಪೊತ್ತು ತಿರುಗಲು ಅರಿಯೆ |
ಕರಿಯಲು ಅರಿಯೆ ಕರಿರಾಜ ನಂತೆ |
ವರಕಪಿ ಯಂತೆ ದಾಸ್ಯವ ಮಾಡಲರಿಯೇ |
ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || ೨ || ಕರುಣಿಸೋ ||
ಬಲಿಯಂತೆ ದಾನವ ಕೊಡಲು ಅರಿಯೆ |
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ |
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ |
ಸಲಹೋ ದೇವರ ದೇವ ಶ್ರೀಪುರಂದರವಿಠ್ಠಲ || ೩ || ಕರುಣಿಸೋ ||