ಕರ್ಣಪರ್ವ: ೨೪. ಇಪ್ಪತ್ತ್ನಾಲ್ಕನೆಯ ಸಂಧಿ

<ಕುಮಾರವ್ಯಾಸ ಭಾರತ

ಕರ್ಣ ಪರ್ವ-ಇಪ್ಪತ್ತ ನಾಲ್ಕನೆಯ ಸಂಧಿ

ಸಂಪಾದಿಸಿ

ಸೂ. ರಾಯಸಾಹಸಮಲ್ಲ ವೆಗ್ಗಳ
ರಾಯ ಸುಭಟಶಿರೋರತುನ ರಾ
ಧೇಯಪಾರ್ಥರ ವಿಷಮ ರಣ ರಂಜಿಸಿತು ಮೂಜಗವ

ರಾಯ ಕೇಳೈ ಮತ್ತೆ ಕರ್ಣರ
ಸಾಯನವ ಕಟ್ಟಾಳು ರಣದಲಿ
ಸಾಯಲಾಗದೆ ಶಿವಶಿವಾ ಸಾಯರೆ ಸುರಾಸುರರು
ಬಾಯಬಿಡೆ ಪರಸೇನೆ ಭೀತಿಯ
ಲಾಯದಲಿ ಕಟ್ಟಿದನು ಪಾರ್ಥನ
ವಾಯುಜನ ಕರಣೇಂದ್ರಿಯಾಶ್ವಂಗಳನು ಕಲಿಕರ್ಣ ೧

ಎಲೆ ಮುರಾಂತಕ ಸಾಕು ರಥದಿಂ
ದಿಳಿ ಸುದರ್ಶನವೆಲ್ಲಿ ಚಾಪವ
ಕಳೆದುಕೊಳು ಕೌಮೋದಕಿಯ ಹಿಡಿ ಹಾಯ್ಕು ವಾಘೆಯವ
ಉಳುಹುವವರಾವಲ್ಲ ಕೊಳ್ಳೆನು
ತಳವಿಯಲಿ ಕೈಕೊಂಡು ಕೃಷ್ಣನ
ನಳುಕದೆಚ್ಚನು ನೂರು ಶರದಲಿ ಕರ್ಣ ಬೊಬ್ಬಿರಿದು ೨

ಜೋಡಿನಲಿ ಸೀಸಕದ ಮೇಲ
ಕ್ಕಾಡಿದವು ಕವಲಂಬು ಕವಚವ
ತೋಡಿ ನಟ್ಟವು ನೂಕಿದವು ನಾರಾಚ ಗರಿಸಹಿತ
ನೋಡಲೀ ವ್ಯಥೆಯುಂಟೆ ಭುವನದ
ಗೂಡು ಕೃಷ್ಣನ ದೇಹವಿದು ನಾ
ಡಾಡಿಗಳ ನಾಟಕವಲೈ ನರನಾಥ ಕೇಳೆಂದ ೩

ಏನ ಹೇಳುವೆ ಹೂಡಿದಾ ಸಂ
ಧಾನವನು ರಥಹಯದ ವಾಘೆಯ
ಜೀನಗೆಲಸದ ಹಕ್ಕರಿಕೆಗಳ ನೊಗನ ಜೊತ್ತಗೆಯ
ಭಾನುಸುತ ಮುರಿಯೆಚ್ಚು ನಿನಗಿ
ನ್ನೇನು ಹದನೈ ಹನುಮ ಲಂಕೆಯ
ದಾನವರು ನಾವಲ್ಲೆನುತ ಕೈಮಾಡಿ ಬೊಬ್ಬಿರಿದ ೪

ಸೈರಿಸರ್ಜುನ ಶಿವನೊಡನೆ ನೀ
ಹೋರಿದಾತನು ನಿನ್ನ ಕೊಲುವಡೆ
ತೀರದೇ ತಪ್ಪೇನು ತಳುವಿತು ಪೇಳಲೇಕೆನುತ
ಕೂರಲಗಿನಂಬುಗಳ ಹಿಳುಕಿನ
ಸಾರದಲಿ ಮುದ್ರಿಸಿದನುದಯದ
ಲಾರನಿದಿರಲಿ ಕಂಡನೋ ಕಡುನೊಂದನಾ ಪಾರ್ಥ ೫

ಹರಿದುದಿಮ್ಮೈಜೋಡು ನೆತ್ತರಿ
ನೊರತೆ ನೂಕಿತು ಭದ್ರಪೀಠದ
ಹೊರಗು ನನೆದುದು ಝೊಮ್ಮಿನಲಿ ಜೋಲಿದನು ಮಲಗಿನಲಿ
ಉರುಕುಗೊಂಡುದು ಕರಣಚಯವರೆ
ದೆರೆದ ಕಂಗಳು ರೋಮಕಂಪದೊ
ಳರಿದುದಿಲ್ಲರೆಘಳಿಗೆ ಕೋಳಾಹಳವನಾ ಪಾರ್ಥ ೬

ಮತ್ತೆ ಕೇಳವನೀತ ಭೀಮನ
ನೆತ್ತಿ ಬಿಸುಟವು ಬಾಣ ನಕುಲನ
ಕುತ್ತಿದವು ಸಹದೇವನೊಡಲಲಿ ಮಾಡಿದವು ಪಥವ
ಇತ್ತ ಸಾತ್ಯಕಿ ಚೇಕಿತಾನಕ
ನುತ್ತಮೌಂಜ ಶಿಖಂಡಿ ದಳಪತಿ (೭
ಕೆತ್ತಿದೊಡಲಿನ ಜೋರಿನಲಿ ಹೊರಳಿದರು ಹುಡಿ ನನೆಯೆ

ಒಸಗೆಯಾದುದು ನೆಲನ ದಿಕ್ಕಿನ
ಬೆಸುಗೆ ಬಿಡೆ ನಿಸ್ಸಾಳತತಿ ಗ
ರ್ಜಿಸಿದವುಬ್ಬಿದ ಬೊಬ್ಬೆ ಬಿಡಿಸಿತು ಧ್ರುವನ ಮಂಡಲವ
ಅಸಮಭುಜಬಲ ಪೂತುರೇ ಸಾ
ಹಸಿಕೆ ಮಝರೇ ಭಾಪು ಧಣುಧಣು
ವಿಷಮರಣನರಸಿಂಹ ಜಾಗೆಂದುದು ಭಟಸ್ತೋಮ ೮

ಜನಪ ಕೇಳೈ ಮತ್ತೆ ಸುತಸೋ
ಮನ ಶತಾನೀಕಾದಿ ರಿಪುನಂ
ದನರನೈವರನೆಚ್ಚು ಬೆರಸಿದನವರ ಸೀಮೆಯಲಿ
ಅನಿಲಜನ ಮರಳೆಚ್ಚು ಪಾಂಚಾ
ಳನ ವಿಭಾಡಿಸಿ ಥಟ್ಟಿನೊಳು ಮು
ಮ್ಮೊನೆಯ ಬೋಳೆಯ ಸರಿಯ ಸುರಿದುದು ಕರ್ಣನವ ಮೇಘ ೯

ಸಾಲ ಝಲ್ಲರಿಗಳ ಪತಾಕಾ
ಜಾಲವನು ಚಾಮರವ ಗೋವಳಿ
ಗೋಲ ಡೊಂಕಣಿಯೊಡ್ಡನೆತ್ತಿದ ಸಿಂಧ ಸೀಗುರಿಯ
ಧೂಳಿಪಟಮಾಡಿದನು ಮಿಡುಕು
ಳ್ಳಾಳಕೊಂದನು ಗಜರಥಾಶ್ವದ
ಮಾಲೆಯನು ಮುತ್ತಿದುದು ಕರ್ಣನ ಶಿಳಿಮುಖವ್ರಾತ ೧೦

ಅರಸ ಕೇಳಾ ನರನನಾ ವಾ
ನರನನಾ ಮುರಹರನನಾ ರಥ
ತುರಗನಿಚಯವನಾ ರಥವನಾ ಶರವನಾ ಧನುವ
ಹುರುಳುಗೆಡಿಸಿದು ಭುಜಪರಾಕ್ರಮ
ದುರಿಯೊಳಗೆ ಬಿಡೆಕಾಸಿ ಹಗೆನೆ
ತ್ತರಲಿ ನೀರೂಡಿದನು ನಿಜಶರನಿಕರವನು ಕರ್ಣ ೧೧

ಹೇಳಲರಿಯೆನು ವಿಕ್ರಮಾಗ್ನಿ ಛ
ಡಾಳಿಸಿದುದಡಿಗಡಿಗೆ ಸೇನಾ
ಜಾಳವನು ಬೇಳಿದನು ಕೂರಂಬುಗಳ ಕೊಂಡದಲಿ
ಆಲಿಗಳು ಸವಿನೋಡಲಿಂದಿನ
ಕಾಳೆಗವ ಬರಹೇಳು ಕುರುಭೂ
ಪಾಲಕನ ಬರಹೇಳು ಬರಹೇಳೆನುತ ಬೊಬ್ಬಿರಿದ ೧೨

ಶರಹತಿಗೆ ಮುಖದಿರುಹಿ ಕಾಲಾಳ್
ತುರಗಸೇನೆಯ ಮರೆಯ ಸಾರಿತು
ತುರಗದಳ ಬಗಿದಂಡುಗೊಂಡುದು ಗಜಘಟಾವಳಿಯ
ಕರಿಘಟಾವಳಿ ಕೋಲಿನುರುಬೆಗೆ
ತೆರಳಿದವು ತೇರುಗಳ ಮರೆಯಲಿ (೧೩
ಹೊರಳಿಯೊಡೆದುದು ತೇರ ಥಟ್ಟು ನಿಹಾರದೆಸುಗೆಯಲಿ

ಕೋಲ ಕೋಳಾಹಳಕೆ ತೇರಿನ
ಗಾಲಿಗಳನೊಡ್ಡಿದರು ಹರಿಗೆಯ
ಹೇಳಿದರು ಹಮ್ಮುಗೆಯ ಕೊಯ್ದೊಡ್ಡಿದರು ರೆಂಚೆಗಳ
ಮೇಳೆಯವ ಮೋಹಿದರು ಕಂಬುಗೆ
ನೂಲು ಹರಿಗೆ ತನುತ್ರ ಸೀಸಕ
ಜಾಲ ಗುಳ ಹಕ್ಕರಿಕೆ ಹಲ್ಲಣ ಬಾಹುರಕ್ಷೆಗಳ ೧೪

ಉರಿಯ ಮಳೆಗಾಲದಲಿ ದಡ್ಡಿಯ
ನರಗಿನಲಿ ಮಾಡಿದರೊ ಗಡ ಕಾ
ರಿರುಳ ಕೋಟೆಯ ರಚಿಸಿದರು ಗಡ ರವಿಯ ಮುತ್ತಿಗೆಗೆ
ಹರಿಗೆ ಸೀಸಕ ಜೋಡು ಕಾವವೆ
ಕೆರಳಿದಡೆ ಕರ್ಣಾಸ್ತ್ರವನು ನಿ
ಬ್ಬರದ ರಣದುಬ್ಬಟೆಯ ಕಂಡುಬ್ಬಿದನು ಕುರುರಾಯ ೧೫

ನೋಡಿರೈ ನಿಮ್ಮವರ ದಳ ಕೈ
ಮಾಡುತದೆ ನಮ್ಮಾತನನು ನೀವ್
ಖೋಡಿಗಾಬರಿ ನಿಮ್ಮ ಫಲುಗುಣ ಭೀಮರುಬ್ಬಟೆಯ
ನೋಡಿರೈ ಲೇಸಾಗಿ ನೀವ್ ಮಾ
ತಾಡಲಾಗದೆ ನಿಮ್ಮ ನಾಲಗೆ
ಗೂಡುಗೊಂಡವೆಯೆಂದನವನಿಪ ಕೃಪನ ಗುರುಸುತನ ೧೬

ನರನ ಬಿಗಿದುದು ಮೂರ್ಛೆ ಭೀಮನ
ಹರಣ ಕೊರಳಲಿ ಮಿಡುಕುತದೆ ಮುರ
ಹರನುಸುರ ವೈಹಾಳಿಯದೆ ಮೂಗಿನಲಿ ಮೋಹರಿಸಿ
ಬಿರುದ ಸಾತ್ಯಕಿ ನಕುಲ ಸಹದೇ
ವರಿಗದಾವದು ಹದನು ನಾವಿ (೧೭
ನ್ನರಿಯೆವೈ ನೀವ್ ನೋಡಿಯೆಂದನು ನಗುತ ಕುರುರಾಯ

ನೋಡಿ ಮಕ್ಕಳನಿಕ್ಕಿ ತಂದೆಗ
ಳೋಡುತದೆ ಸರಳಿಂಗೆ ತಮ್ಮನ
ನೀಡಿ ತೋರಿಸಿ ಜಾರುತದೆಯಣ್ಣಂದಿರಾದವರು
ಓಡುತದೆ ಆಳೊಡೆಯನನು ಬೀ
ಸಾಡಿ ತಾಯಿಗೆ ಮಕ್ಕಳಾಗದೆ
ಕೂಡೆ ಮುಮ್ಮಳಿ ಮಸಗುತದೆ ಗುರುತನುಜ ನೋಡೆಂದ ೧೮

ಅರಿಬಲದ ಕಡುಗೇಡು ಹಬ್ಬಿತು
ಸುರಬಲದೊಳಕಟಕಟ ನೋಡೈ
ಸುರಪತಿಗೆ ದುಮ್ಮಾನವಡಸಿತಲಾ ಮಹಾದೇವ
ಸುರನದೀಜದ್ರೋಣರೀ ಪರಿ
ಪರಮ ಶೌರ‍್ಯದಲೊದಗಿದರೆ ನಿ
ಷ್ಠುರದ ನುಡಿಯೆನ್ನದಿರಿ ಕಂಡುದನಾಡಬೇಕೆಂದ ೧೯

ಉಂಟು ಜೀಯ ವಿರೋಧಿಬಲವತಿ
ಕಂಟಣಿಸುತದೆ ಪಾಂಡುತನಯರ
ನಂಟರಿಷ್ಟರಿಗಾದುದೈ ದುಮ್ಮಾನ ಪುಸಿಯೇಕೆ
ಎಂಟುಮಡಿ ನಿಮಗಾದ ಜಯ ಹದಿ
ನೆಂಟುಮಡಿಯಾಚೆಯಲಿ ಸೇರುವು
ದುಂಟು ಪುಸಿದರೆ ಕೊಯ್ಸಿಕೊಟ್ಟೆವು ನಮ್ಮ ನಾಲಗೆಯ ೨೦

ಮುಗುಳುನಗೆಯೊಬ್ಬರಲಿ ಸವಿವಾ
ತುಗಳ ರಸವೊಬ್ಬರಲಿ ಕಡೆಗ
ಣ್ಣುಗಳ ಮಿಂಚೊಬ್ಬರಲಿ ನೇವುರದೆಳೆಮೊಳಗು ಸಹಿತ
ಸೊಗಸು ಬೇರೊಬ್ಬರಲಿ ನೇಹದ
ತಗಹು ಬೇರೊಬ್ಬರಲಿ ಸತಿಯರ
ವಿಗಡತನವಿದು ಸಹಜ ಜಯವಧು ಜಾರೆ ನೋಡೆಂದ ೨೧
ಒಂದು ಕಡೆಗಣ್ಣಿನಲಿ ಕೌರವ
ವೃಂದವನು ನೋಡುವಳು ಕಯ್ಯೊಡ
ನೊಂದು ಕಡೆಗಣ್ಣಿನಲಿ ಮಾತಾಡಿಸುವಳರಿಬಲವ
ಇಂದು ಜಯವಧು ದೃಢಪತಿವ್ರತೆ
ಯೆಂದು ಬಗೆದೈ ಭೂಪ ಹುಸಿ ಹೋ
ಗೆಂದು ಗುರುಸುತ ನಗುತ ಹೋದನು ತನ್ನ ಮೋಹರಕೆ ೨೨

ಅರಸ ಚಿತ್ತೈಸಿತ್ತಲರ್ಜುನ
ನರೆಮುಗಿದ ಕಣ್ಣರಳ್ದವಂತಃ
ಕರಣ ಪಂಚೇಂದ್ರಿಯಕೆ ಬಿಟ್ಟುದು ತಗಹು ಕಳಕಳವ
ಮುರಿದು ಮುರಿದೆಡಬಲದ ತನ್ನವ
ರಿರವನೀಕ್ಷಿಸಿ ಕೋಪಶಿಖಿಯು
ಬ್ಬರದಲಿಬ್ಬಗಿಯಾದುದಂತರ್ಭಾವವಡಿಗಡಿಗೆ ೨೩

ಕಳಶಜಲದಲಿ ಮೆಯ್ಯ ನೆತ್ತರ
ತೊಳೆದು ಪೊಸಮಡಿವರ್ಗದಲಿ ಮುರಿ
ಮಲಕ ಬಿಗಿದನು ಧರಿಸಿ ಸಾಧು ಜವಾಜಿ ಕಸ್ತುರಿಯ
ಲುಳಿಯ ಹೊಸ ಸೀಸಕದ ಕವಚವ
ನಳವಡಿಸಿ ಕರ್ಪುರದ ಕವಳದ
ಹಳುಕ ಹಾಯಿಕಿಕೊಳುತ ಕೊಂಡನು ಮತ್ತೆ ಗಾಂಡಿವವ ೨೪

ನಿಮ್ಮ ಸಿರಿಯೊಡಲಿನಲಿ ಜೋಡಿನ
ಹಮ್ಮುಗೆಯನುಡಿದಂಬು ಹಾಯ್ದವು
ನಮ್ಮ ದುಷ್ಕೃತವೈಸಲೇ ನಿಮಗೆತ್ತಲೀ ವ್ಯಸನ
ನಿಮ್ಮಡಿಗಳೇ ಬಲ್ಲಿರಿಂತಿರ
ಲೆಮ್ಮ ರಾಜ್ಯದ ಹುದುವೆ ನೊಂದನು
ನಿಮ್ಮ ಹನುಮನ ನೋಡಿಯೆಂದನು ಹರಿಗೆ ಕಲಿಪಾರ್ಥ ೨೫

ಸಾಕದಂತಿರಲಾಹವಕೆ ಬರ
ಲೇಕೆ ಕಬ್ಬಿನ ಬನವೆ ಬಾಣಾ
ನೀಕಕಭಿಮುಖವಾಗೆ ಸಾವರು ನೋವರಿದಕೇನು
ಈ ಕುಠಾರನನೀಕ್ಷಣಕೆ ಕೈ
ತೂಕದಲಿ ಕಾದದೆ ವಿವೇಕದೊ
ಳಾಕರಿಸು ಜಯವಧುವನೆಂದನು ಕೃಷ್ಣನರ್ಜುನನ ೨೬

ಹರಿಸು ರಥವನು ವೈರಿಯುರುಬೆಗೆ
ತೆರಳುತದೆ ನಮ್ಮವರು ಕರ್ಣನ
ಕೊರಳ ಬಾರಲಿ ನಿಲುಕಿಸುವೆನೀ ಶರಸಲಾಕೆಗಳ
ಅರಸ ಕೇಳೈ ಮಾತು ಹಿಂಚಿತು
ನರನ ರಥ ಜೋಡಿಸಿತು ಕರ್ಣನ
ಸರಿಸದಲಿ ಜೀವಿಸಿತು ಪಾಂಡವಸೇನೆ ನಿಮಿಷದಲಿ ೨೭

ಎಲೆಲೆ ಕರ್ಣ ಕಿರೀಟಿಯುರುಬೆಗೆ
ನಿಲುವುದರಿದೈ ಹಾವನರೆಗಡಿ
ದುಳುಹಿ ಕೆಡಿಸಿದೆ ಪಾಪಿ ರಾಯನ ರಾಜಕಾರಿಯವ
ತೊಲಗಿಸುವೆನೇ ರಥವನೆನೆ ಹೆ
ಕ್ಕಳಿಸಿ ಜರೆದನು ಕರ್ಣ ಶಲ್ಯನ
ನೆಲವೊ ಫಡ ನೋಡೆನುತ ತೆಗೆದೆಚ್ಚನು ಧನಂಜಯನ ೨೮

ಎಡೆಯಲೀತನ ಸರಳ ಸಾರವ
ಕಡಿದು ಕಯ್ಯೊಡನೆಚ್ಚು ಮಗುಳೆ
ಚ್ಚಡಿಗಡಿಗೆ ಬಿಡದೆಚ್ಚು ಪುನರಪಿ ಮತ್ತೆ ಮಗುಳೆಚ್ಚು
ಪಡಿಬಲಕೆ ರೋಷಾಗ್ನಿ ಯದನಿ
ಮ್ಮಡಿಸಿ ಬೀಸುವ ಖೇದಪವನನು
ಸುಡದೆ ಬಿಡುವನೆ ಕಲಿಧನಂಜಯನಹಿತ ತೃಣವನವ ೨೯

ಒದೆದು ಕವಚವನೊಡೆದು ಗರಿದೋ
ರಿದವು ವಕ್ಷದ ಮೇಲೆ ಮೊನೆಮೂ
ಡಿದವು ಬೆನ್ನಲಿ ಕರ್ಣ ನನೆದನು ರುಧಿರಧಾರೆಯಲಿ
ಉದುರಿದವು ಕಯ್ಯಂಬು ಬಲುಕಾ
ರಿದನು ರಕುತವ ಕಳವಳದ ಕಂ (೩೦
ಪದಲಿ ಝೊಂಪಿಸಿ ಮಲಗಿದನು ಮಣಿಮಯದ ಗದ್ದುಗೆಯ

ತೋರಿಸಾ ನಿನ್ನೊಡೆಯನೋಲೆಯ
ಕಾರತನವನು ನಮ್ಮ ಬಲವನು
ಮೂರು ಮೂಲೆಯ ಹೊಗಿಸಿ ಬೆಚ್ಚನೆ ಬೆರೆತ ಗರುವನಲೆ
ಜಾರಿದವೆ ಕಯ್ಯಂಬು ಬಲು ರಣ
ವೀರಸಿರಿ ಹಾರಿದುದೆ ಶೌರ‍್ಯದ
ಮೋರೆಗೇಕೈ ಮರುಕವೆಂದನು ನಗುತ ಕಲಿಪಾರ್ಥ ೩೧

ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ ೩೨

ದಳಪತಿಯ ದುಮ್ಮಾನದಲಿ ಕಳ
ವಳಿಸಿತೀಚೆಯ ಥಟ್ಟು ಪಾರ್ಥನ
ಹಿಳುಕು ಹೊಕ್ಕವು ಹರಹಿ ತಿವಿದುವು ರಾಯನಿದಿರಿನಲಿ
ಹಲವು ಮಾತೇನಾ ಕೃಪನ ಕೌ
ಸಲನನಾ ಗುರುಸುತನನಾ ಸೌ
ಬಲನನಾ ಕೃತವರ್ಮಕನ ಮುರಿಯೆಚ್ಚು ಬೊಬ್ಬಿರಿದ ೩೩

ಸಿಕ್ಕಿದನು ಕುರುರಾಯನಾದುದು
ಮಕ್ಕಳಾಟಿಕೆ ಗುರುನದೀಸುತ
ರಿಕ್ಕಿ ಹೋದರು ನಮ್ಮ ದಳಪತಿ ಕಾದಿ ಬಳಲಿದನು
ಪೊಕ್ಕನರ್ಜುನನಿವರ ದರ್ಪವ
ನೊಕ್ಕಿ ತೂರಿದನಿನ್ನು ಪರಿವಾ
ರಕ್ಕೆ ಬಂದುದು ಪಂಥವೆನುತಿದ್ದುದು ಭಟಸ್ತೋಮ ೩೪

ಅರಸ ಚಿತ್ತೈಸಾರುಸಾವಿರ
ವರಮಹಾರಥರೌಕಿದರು ಝ
ಲ್ಲರಿಯ ಝಾಡಿಯ ಸೆಳೆಯ ಸಿಂಧದ ಸುಳಿವ ಸೀಗುರಿಯ
ಬಿರಿಯೆ ನೆಲನುಬ್ಬೇಳ್ವ ಬೊಬ್ಬೆಯ
ಮುರಜ ಡಿಂಡಿಮ ಪಟಹದಾಡಂ
ಬರದಲೊದಗಿತು ಕೆಲನ ಕೈವಾರಿಗಳ ರಭಸದಲಿ ೩೫

ಫಡಫಡೆಲವೋ ಪಾರ್ಥ ರಾಯನ
ತುಡುಕಲಹುದೇ ಕೂಟಗಿರಿಯಲಿ
ಕಡಲು ಹೂಳುವುದೇ ಸಧಾರನಲಾ ಮಹಾದೇವ
ಹಿಡಿ ಮಹಾಸ್ತ್ರವನಿನ್ನು ಮುಂದಡಿ
ಮಿಡುಕಿದಡೆ ತಮ್ಮಾಣೆಯೆನುತವ
ಗಡಿಸಿ ನೂಕಿತು ನಿನ್ನವನ ಮನ್ನಣೆಯ ಪರಿವಾರ ೩೬

ಜನಪ ಕೇಳೈ ರಕುತಜಲದಲಿ
ನನೆದ ನೆಲ ಪುಡಿಮಸಗೆ ಕೆಂಧೂ
ಳಿನಳಿ ಕತ್ತಲಿಸಿತ್ತು ದಿಗ್ಭ್ರಮೆಯಾದುದಡಿಗಡಿಗೆ
ಇನಿಬರಾವೆಡೆ ಕರ್ಣನೋ ಫಲು
ಗುಣನೊ ಪಾಂಡವಬಲವೊ ನಿನ್ನಾ
ತನೊ ನಿಧಾನಿಸಲರಿಯೆನೊಂದರೆಗಳಿಗೆ ಮಾತ್ರದಲಿ ೩೭

ಮಳೆಗೆ ಹೆಚ್ಚಿದ ಧೂಳಿನಬ್ಬರ
ವಳಿವವೊಲು ವಿಜಯಾಸ್ತ್ರ ಹತಿಯಲಿ
ಹಿಳಿದ ಕರಿ ನರ ತುರಗದೊಡಲರುಣಾಂಬುಧಾರೆಯಲಿ
ಕಳಚಿತೀ ಕೆಂಧೂಳಿ ಬಾಣಾ
ವಳಿಯ ಕತ್ತಲೆಯೊಳಗೆ ಕಾಣೆನು
ದಳದೊಳಾರಾರೆಂದು ಮತ್ತರೆಗಳಿಗೆ ಮಾತ್ರದಲಿ ೩೮

ಬೆರಸಿ ಹೊಯ್ದರು ರಾವುತರು ರಥ
ತುರಗನಿಕರದ ಬೆಸುಗೆ ಬಿಡೆ ಮದ
ಕರಿಗಳಂಘವಿಸಿದವು ರಥ ಚಾಚಿದವು ಮುಂದಣಿಗೆ
ಹರಿಗೆಗಳ ತಲೆಗೊಡ್ಡಿ ಕಕ್ಕಡ
ಪರಶು ಖಂಡೆಯದವರು ಮಂಡಿಯ
ತೆರಳದಾಂತರು ಫಲುಗುಣನ ರಥದೆರಡುಪಕ್ಕದಲಿ ೩೯

ಅರಸ ಕೇಳು ಜಯದ್ರಥನ ಮೋ
ಹರದ ಮಧ್ಯದೊಳಂದು ಸಿಲುಕದ
ನರನ ರಥವೀ ಹೊಳ್ಳುಗರ ಹೋರಟೆಗೆ ಹೆದರುವುದೇ
ಕರಿಘಟಾವಳಿಗೊಂದು ಶರವಾ
ತುರಗದಳಕೊಂದಂಬು ಬಳಿಕೆರ
ಡೆರಡು ಶರದಲಿ ಕೆಡಹಿದನು ಕಾಲಾಳುತೇರುಗಳ ೪೦

ಆಳು ಮುರಿದುದಲೈ ಮಹಾರಥ
ರೇಳಿರೈ ನೀವಾರುಸಾವಿರ
ಮೇಲುದಳದವರಾಕೆವಾಳರು ನಿಮ್ಮ ಥಟ್ಟಿನಲಿ
ಮೇಳವದ ಪರಿ ಲೇಸು ಕರ್ಣನ
ಸೋಲದಲಿ ಸೀವರಿಸಿದರೆ ಭೂ
ಪಾಲನಾಣೆ ದೊಠಾರರಹಿರೆನುತೆಚ್ಚನಾ ಪಾರ್ಥ ೪೧

ಬಾಣಹತಿಗಕ್ಕುಡಿಸಿ ರಾಜ್ಯ
ಶ್ರೇಣಿ ಜರುಗಿತು ಶೌರ‍್ಯನಗರದ
ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ
ಗೋಣಕೊಯ್ಲಿನ ಕಾವಣಕೆ ಮುಂ
ಗೇಣಿಕಾರನು ಮೊಳಗಿದನು ಫಡ
ಕೇಣವಿನ್ನೇಕೆನುತ ಕೈದೋರಿತು ಭಟಸ್ತೋಮ ೪೨

ಸೀಳಿದನು ಸಮರಥರ ಸುಳಿಗೊಂ
ಡಾಳ ಸದೆದನು ಸವರಿದನು ಭೂ
ಪಾಲಪುತ್ರರನಖಿಳದೇಶದ ರಾಜಸಂತತಿಯ
ಆಳು ಮುರಿದುದು ಮಾನಹಾನಿಯ
ಹೇಳುವಡೆ ನಗೆಯದನು ಕುರುಬಲ
ಜಾಲದಲಿ ಜಳ್ಳುಗರು ಬಿದ್ದುದು ಭಂಗ ಶರಧಿಯಲಿ ೪೩

ಬಿಡುದಲೆಯಲೋಡಿದರು ಬಿರುದಿನ
ತೊಡರ ಬಿಸುಟರು ವಾಹನಂಗಳ
ತೊಡಕ ಬಿಟ್ಟರು ನೆಲಕೆ ಕೈಲೆಡೆಗೊಟ್ಟು ಕೈದುಗಳ
ಅಡಸಿ ಕಾವ ನರಪ್ರತಾಪದ
ಕಡುವಿಸಿಲ ಬೇಗೆಯಲಿ ವೀರದ
ಮಡುಗಳುರೆ ಬತ್ತಿದವು ಮೋರೆಗಳೊಣಗಿ ಪಟುಭಟರ ೪೪

ಹೋಗದಿರಿ ಹೋಗದಿರಿ ದಳಪತಿ
ಯಾಗುಹೋಗರಿಯದೆ ನೃಪಾಲನ
ಮೂಗನಾರಿಗೆ ಮಾರಿದಿರಿ ಕೊಂಬವರು ನಾವಲ್ಲ
ಈ ಗರುವರೀ ಪರಿ ಪಲಾಯನ
ಯೋಗಸಿದ್ಧರೆ ಸಾಹಸಿಕರೈ
ಜಾಗೆನುತ ಬೆಂಬತ್ತಿ ಹುಡಿಗುಟ್ಟಿದ ಮಹಾರಥರ ೪೫

ಇವರ ಹದನಿದು ಕರ್ಣನಾಡಿದ
ಕವಡಿಕೆಯ ಬೆಸಗೊಳ್ಳಿರೈ ಕೌ
ರವನ ಸರ‍್ವಗ್ರಾಸಕಿವೆ ರಾಹುಗಳು ಲಟಕಟಿಸಿ
ನಿವಗೆ ಹರಿಬದೊಳೊಂದು ಮುಟ್ಟಿಗೆ
ರವಣವುಂಟೇ ಹಾಯ್ಕಿ ನಿಮ್ಮಾ (೪೬
ಟವನು ನೋಡುವೆನೆಂದು ಕರೆದನು ಕೃಪನ ಗುರುಸುತನ

ಅರಸ ಕೇಳಾಕ್ಷಣಕೆ ಮುಗ್ಗಿತು
ಮರವೆ ನೆಗ್ಗಿತು ಭೀತಿ ಧೈರ‍್ಯದ
ತಿರುಳು ಬಲಿದುದು ಕೋಪ ತಳಿದುದು ಖೋಡಿ ನೀರೊರೆಯೆ
ಕರಣಪಲ್ಲಟಪಾಡಿನಲಿ ಸಂ
ವರಿಸಿಕೊಂಡುದು ವೀರರಸವು
ಬ್ಬರಿಸಿ ಸರ‍್ವೇಂದ್ರಿಯವ ಮುಸುಕಿತು ನಿಮ್ಮ ದಳಪತಿಯ ೪೭

ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ ೪೮

ಬೋಳವಸಿದನು ಶಲ್ಯನನು ಮಿಗೆ
ಸೂಳವಿಸಿದನು ಭುಜವನುಬ್ಬಿನೊ
ಳಾಳವಿಸಿದನು ಚಾಪಗಾನಸ್ವಾನಕವನರಿದು
ಮೇಳವಿಸಿ ನಿಜರಥವ ಕೆಲದಲಿ
ಜೋಳವಿಸಿ ಹೊದೆಯಂಬನಹಿತನ
ಪಾಳಿಸುವಡಂಬಿದೆಯೆನುತ ತೂಗಿದನು ಮಾರ್ಗಣೆಯ ೪೯

ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ‍್ವರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ ೫೦

ಅರಸ ಕೇಳೈ ಸಿಡಿಲಗರ್ಜನೆ
ಗುರವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ ೫೧

ಭರತಭಾಷೆಯಲಾ ವಿಧಾವಂ
ತರು ವಿರಾಟನ ಮನೆಯಲಿದ್ದುದ
ನರಿಯೆವೇ ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ
ಸರಸಮಾತಂತಿರಲಿ ಚಾಪ
ಸು ರಣದಭಿನಯದಂಗಹಾರದ
ಪರಿಯ ತೋರಾ ಎನುತ ತೆಗೆದೆಚ್ಚನು ಧನಂಜಯನ ೫೨

ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ ೫೩

ಪರಶುರಾಮನ ಕಾರ್ತವೀರ‍್ಯನ
ವರ ದಿಳೀಪನ ದುಂದುಮಾರನ
ಭರತ ದಶರಥ ನಹುಷ ನಳ ರಾಘವನ ಲಕ್ಷ್ಮಣನ
ಸರಿಮಿಗಿಲು ಕಲಿಪಾರ್ಥನೀ ಮಿ
ಕ್ಕರಸುಗಳ ಪಾಡೇ ಕಿರೀಟಿಯ
ದೊರೆಯದಾವವನೆನುತ ಕೊಂಡಾಡಿತು ಸುರಸ್ತೋಮ ೫೪

ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಿಹೃದಯರು ನಿನಗೆ ಸರಿಯಿಲ್ಲೆಂದುದಮರಗಣ ೫೫

ಪೂತು ಮಝರೇ ಕರ್ಣ ವಿಶಿಖ
ವ್ರಾತವೊಂದಿನಿತಿಲ್ಲ ಲಂಕೆಯ
ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ
ಈತನತಿಶಯಬಾಣರಚನಾ
ಜಾತಿಯಿದು ಭೀಷ್ಮಾದಿಸುಭಟ
ವ್ರಾತಕೆಲ್ಲಿಯದೆಂದು ತಲೆದೂಗಿದನು ಹನುಮಂತ ೫೬

ಅದ್ದು ದುಮ್ಮಾನದಲಿ ಹೊಡೆಮಗು
ಳೆದ್ದುದೀ ಕುರುಸೇನೆ ತಡೆಯಲಿ
ಬಿದ್ದುದತಿಸಂತೋಷ ಸಾರಕ್ಷೀರಜಲಧಿಯಲಿ
ಗೆದ್ದನೈ ನಿನ್ನಾತನೊಸಗೆಯ
ಬಿದ್ದಿನರಲೈ ನಾವು ಪರರಿಗೆ
ಬಿದ್ದುದೊಂದು ವಿಘಾತಿಯೆಂದನು ಸಂಜಯನು ನಗುತ ೫೭

ಸಂಧಿಗಳು

ಸಂಪಾದಿಸಿ
ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
-ಸಂಧಿಗಳು- ೧೫ ೧೬ ೧೭ ೧೮ ೧೯ ೨೦ ೨೦ ೨೨ ೨೩ ೨೪ ೨೫ ೨೬ ೨೭ -೦೦-
<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ