ಕರ್ಣಪರ್ವ: ೨೫. ಇಪ್ಪತ್ತೈದನೆಯ ಸಂಧಿ

<ಕುಮಾರವ್ಯಾಸ ಭಾರತ

ಕರ್ಣ ಪರ್ವ-ಇಪ್ಪತ್ತೈದನೆಯ ಸಂಧಿ ಸಂಪಾದಿಸಿ

ಸೂ. ರಾಯಪರಬಲಮಥನ ಕೌರವ
ರಾಯಧರಣಿವರಾಹ ಕಲಿರಾ
ಧೇಯನೆಚ್ಚನು ರೌದ್ರದರ್ಪದ ಸರ್ಪಬಾಣದಲಿ ||

ಹೇಳು ಸಂಜಯ ಹಗೆಗೆ ಬಿದ್ದ ವಿ
ತಾಳವಾವುದು ಕಿವಿಗಳೈದವು
ನಾಲಗೆಯನೊಡ್ಡುವೆನು ವಚನಾಮೃತದ ಸವಿ ಹಿರಿದೆ
ಜಾಳಿಸಿತೆ ಹಗೆ ಕರ್ಣ ಗೆಲಿದನೆ
ಕಾಳೆಗವನೀ ಮಾತುಗಳನೇ
ಹೇಳುತಿರು ಸಾಕೆಂದು ನುಡಿದನು ನಗುತ ಜನನಾಥ ೧

ಅವನಿಪತಿ ಕೇಳುವಡೆ ಸಾವಿರ
ಕಿವಿಗಳೈದವು ನಿಮ್ಮ ಕರ್ಣನ
ಬವರದಲಿ ರೂಢಿಸಿದ ರೌದ್ರದ ರಾಜಕಾರಿಯವ
ಸವಡಿವೆರಳಿನ ಸೇದುವಂಬಿನ
ತವಕಿಗನ ತಗ್ಗಿಸುವೆ ನಿಲ್ಲೆನು
ತವಗಡದ ಕೋಪದಲಿ ಕಿಡಿಕಿಡಿವೋದನಾ ಕರ್ಣ ೨

ಮೀರಿತುರಿ ಸುಯ್ಲಿನಲಿ ಕಂಗಳು
ಹೇರಿದವು ಕಡುಗೆಂಪನೊಗಡಿಸಿ
ಕಾರಿದವು ರೋಮಾಳಿ ರೋಷಸ್ವೇದಬಿಂದುಗಳ
ಕೌರಿದವು ಕುಡಿಮೀಸೆ ಕಾದುದು
ಮೋರೆ ಬದ್ಧಭ್ರುಕಟಿಯಲಿ ಹುರಿ
ಯೇರಿತಧಿಕಕ್ರೋಧತಾಮಸ ನಿಮ್ಮ ದಳಪತಿಯ ೩

ಉಗಿದನುರಗಾಸ್ತ್ರವನು ಹೊಮ್ಮೂ
ಡಿಗೆಯೊಳಗೆ ಹೊರಕಯ್ಯ ಗಾಳಿಗೆ
ಹೊಗೆಯ ಹೊದರಿನ ಹೊರಳಿ ಹಬ್ಬಿತು ಕೂಡೆ ಕಿಡಿಯಿಡುತ
ಗಗನ ಗಮನದ ನಿಖಿಳ ವಿಹಗಾ
ಳಿಗಳು ಬೆಂದವು ಗಾಢ ಗರಳದ
ಸೊಗಡ ಸೋಹಿಗೆ ಕಂಠಣಿಸಿತೆರಡೊಡ್ಡು ಕಳವಳಿಸಿ ೪

ಬೆರಳಲಂಬನು ತೂಗಲುರಿ ಪೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ ೫

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ ೬

ಆವರಿಸಿದವು ಪುಷ್ಕಳಾವ
ರ್ತಾವಳಿಗಳೆನೆ ಬಹಳವಿಷಧೂ
ಮಾವಳಿಯಲೇ ಧಾತುಗೆಟ್ಟುದು ಸಕಳಭುವನಜನ
ದೇವತತಿ ಬೆಂಡಾಯ್ತು ಮೊದಲಿನ
ದೇವರುಬ್ಬಿದರುರಗಪತಿಯ ಫ
ಣಾವಳಿಯ ಗುಡಿಧಿಯೆತ್ತಿದವು ಪಾತಾಳ ಲೋಕದಲಿ ೭

ಭುಜವ ಹೊಯ್ದರು ಸೂರ‍್ಯತಕ್ಷಕ
ರಜನ ಸಭೆಯಲಿ ಭಯದಿ ಸುರಪತಿ
ಭಜಿಸಿದನು ಗರುಡನನು ನಿರ‍್ವಿಷಮಸ್ತು ನರಗೆನುತ
ಗಜರಿದವು ನಿಸ್ಸಾಳವಾದ್ಯ
ವ್ರಜದ ಕಹಳೆಯ ಭಟರ ಬೊಬ್ಬೆಯ
ಗಜಬಜಿಕೆ ಘಾಡಿಸಿತು ಕೌರವ ಸೈನ್ಯಶರಧಿಯಲಿ ೮

ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣನೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ‍್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ ೯

ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಲೀ ಹದನಾಯ್ತು ಚಾಪದೊ
ಳೋಡಿಸಿದಡೇನಹುದು ಹರಹರ ಹರ ಮಸಾಸ್ತ್ರವಲೆ
ನೋಡಿರೈ ಗುರುಸುತಕೃಪಾದಿಗ
ಳೋಡದಿರಿ ನೀವೆನುತ ಪುಳಕದ
ಬೀಡಿನಲಿ ಮೈಮುಳುಗಿ ತೂಗಾಡಿದನು ಕುರುರಾಯ ೧೦

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ ೧೧

ಹೂಡಿದನು ತಿರುವಿನಲಿ ಬಾಣದ
ಝಾಡಿಯುರಿನಾಲಗೆಯ ನಿರುತವ
ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
ನೋಡಿದನು ಶಲ್ಯನನು ಮಿಗೆ ತೂ
ಗಾಡಿದನು ಕೌರವನ ಪುಣ್ಯದ
ಬೀಡು ಬಿಡುವಡೆ ಕಾಣಲಹುದಿಂದೆಂದನಾ ಕರ್ಣ ೧೨

ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ ೧೩

ಲೇಸುಮಾಡಿದೆ ಕರ್ಣ ಕೌರವ
ನೀಸುದಿನ ಸಾಕಿದ ಫಲವ ನೀ
ನೈಸಲೇ ತೋರಿದವನೀ ನೃಪಸೈನ್ಯಶರಧಿಯಲಿ
ಈಸು ಕಾಳೆಗವಾದುದೀ ಕ
ಟ್ಟಾಸುರದ ಸರಳೆಲ್ಲಿ ಗುಪ್ತಾ
ವಾಸವಾದುದು ಪೂತುರೆಂದನು ಶಲ್ಯನಿನಸುತನ ೧೪

ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳೆಂದ ೧೫

ಕೊರಳಿಗೊಡ್ಡಲು ಹೊಳ್ಳುವಾರಿದ
ಸರಳು ಮಕುಟವ ತಾಗುವುದು ಮೇ
ಣುರಕೆ ತೊಟ್ಟರೆ ಕೊಯ್ವುದೀಗಳೆ ಕೊರಳನರ್ಜುನನ
ಮರಳಿ ತೊಡು ತೊಡು ಬೇಗ ಕೌರವ
ನರಸುತನವುಳಿವುದು ಕಣಾ ಹೇ
ವರಿಸದಿರು ಹೇಳುವುದು ಪಥ್ಯವಿದೆಂದನಾ ಶಲ್ಯ ೧೬

ಒಂದು ಶರಸಂಧಾನ ನಾಲಗೆ
ಯೊಂದು ನಮ್ಮಲಿ ಕುಟಿಲವಿದ್ಯವ
ನೆಂದು ಕಂಡೈ ಶಲ್ಯ ನಾವಡಿಯಿಡೆವಧರ್ಮದಲಿ
ಇಂದು ಹೂಡಿದ ಶರವನಿಳುಹುವು
ದಂದವೇ ನೀನರಿಯೆ ಹೆರಸಾ (೧೭
ರೆಂದು ತಿರುವಿನೊಳಂಬನೊದೆದನು ಕರ್ಣ ಬೊಬ್ಬಿಡುತ

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೋಡಿದರು ವೈ
ಮಾನಿಕರು ವೆಂಠನಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ ೧೮

ಕಾದಲೆಳಸಿದ ಪಾಂಡವರ ಸಂ
ವಾದ ತೀರಿತು ಕೌರವೇಂದ್ರನು
ಸಾಧಿಸಿದ ಹಗೆ ಸಫಲವಾದುದು ಸಮರಭೂಮಿಯಲಿ
ಹೋದನರ್ಜುನನೀ ಮಹಾಸ್ತ್ರದ
ಬಾಧೆಗಿದಿರಿಲ್ಲೆನುತ ಘನಚಿಂ (೧೯
ತೋದಧಿಯಲುರೆ ಮುಳುಗಿ ಮರುಗಿತು ಮೇಲೆ ಸುರಕಟಕ

ಹಾ ವೃಕೋದರ ನಕುಲ ಹಾ ಸಹ
ದೇವ ಹಾ ಧರ್ಮಜ ಧನಂಜಯ
ಹಾವಿನಗ್ನಿಗೆ ಹವಿಗಳಾದಿರೆ ಹಾ ಮಹಾದೇವ
ಸಾವಡೆಯು ಶಸ್ತ್ರಪ್ರಹಾರದ
ಸಾವು ಕ್ಷತ್ರಿಯ ಕುಲಕೆ ಭಂಗವೆ (೨೦
ಹಾ ವಿಧಿಯೆ ಎಂದೊದರಿ ಮರುಗಿತು ಪಾಂಡುಸುತಸೇನೆ

ತುರಗತತಿ ತಲೆಗುತ್ತಿದವು ಮದ
ಕರಿಗಳೊದರಿದವಸವಳಿದು ರಥ
ತುರಗವೆಳೆದವು ರಥವನಾಗಳೆ ವಿಷದ ಝಳಹೊಯ್ದು
ಸುರಿವ ಗರಳದ ಗಾಳಿ ಸೋಂಕಿದ
ನರಗೆ ನಂಜೇರಿತು ಭಯಂಕರ
ತರದ ಭಾರಿಯ ವಿಷಕೆ ಕೊಳ್ಗುದಿಗೊಂಡುದರಿಸೇನೆ ೨೧

ಗರುಡಪಂಚಾಕ್ಷರಿಯ ಮಂತ್ರೋ
ಚ್ಚರಣೆಯಲಿ ಭೂನಾಗಸತ್ವದ
ಬೆರಳ ಮುದ್ರಿಕೆಗಳಲಿ ರಕ್ಷಾಯಂತ್ರಮಂತ್ರದಲಿ
ಮರಕತದ ಘುಟಿಕೆಯಲಿ ವಿಷಸಂ
ಹರಣ ವಿವಿಧೋಪಾಯದಲಿ ನೃಪ
ವರರು ನಿಂದುದು ಭೀಮಸೇನಾದಿಗಳು ದುಗುಡದಲಿ ೨೨

ಹಿಂದೆ ಭಗದತ್ತಾಯುಧದಿ ನೆರೆ
ಬೆಂದು ಬದುಕಿತು ಬಳಿಕಲೀ ಗುರು
ನಂದನನ ನಾರಾಯಣಾಸ್ತ್ರದಿನಾದುದಪಘಾತ
ಅಂದುಪಾಯದಲುಳಿದೆವೀ ಗೋ
ವಿಂದನಿಂದಪಮೃತ್ಯುವಿದನು ಮು
ಕುಂದ ತಾನೇ ಬಲ್ಲನೆನುತಿರ್ದುದು ಭಟಸ್ತೋಮ ೨೩

ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ ೨೪

ಆರು ನಿಲಿಸುವರಕಟ ದುಷ್ಪ್ರತಿ
ಕಾರ ಶರವಿದು ಭೀಮಪಾರ್ಥರ
ಕೂರಲಗುಗಳು ಶಿವಶಿವಾ ಕೆಚ್ಚಾಯ್ತು ಕದಳಿಗಳ
ಕೌರವನ ಜಯವಧುವಿನೊಡೆನೆಯ
ಸೇರುಗೆಯ ಕೂಟಣೆಯೊ ಶರವಿ
ನ್ನಾರಿಗೊರಲುವೆವಕಟೆನುತ ತಲ್ಲಣಿಸಿತರಿಸೇನೆ ೨೫

ನಾಲಗೆಯ ಚೂರಣದ ದಳ್ಳುರಿ
ಜಾಳಿಗೆಯ ಚಮ್ಮಟದ ಗರಳದ
ಲೋಳೆಗಳ ಚಾರಣದ ಕಿಡಿಗಳ ಖಡುಗ ಪೂರಯದ
ಧೂಳಿಯುಗೆಯಬ್ಬರದ ಬಲುಗೈ
ಯಾಳವೊಲು ಭುಗಿಲೆಂಬ ರವದಲಿ
ಮೇಲುವಾಯ್ದುದು ಕೊರಳ ಸರಿಸಕೆ ಕಲಿಧನಂಜಯನಾ ೨೬

ಅರಸ ಕೇಳೇಸೇಸು ಬಾರಿಯ
ಕೊರಳಡಾಯುಧ ಕಳಚದೇಸು
ಬ್ಬರದ ಮಾರಿಯ ಬಿಂಕ ಮುರಿಯದು ಪಾಂಡುತನಯರಿಗೆ
ಹರಿಯ ಹರಹಿನ ವಜ್ರಪಂಜರ
ದರಗಿಣಿಯಲೇ ಪಾರ್ಥನಹಿ ಮಂ
ಜರನ ಮರುಕವ ಕೊಂಬುದೇ ಧೃತರಾಷ್ಟ್ರ ಕೇಳೆಂದ ೨೭

ನಡುಗುತಿರ್ದುದು ಸುರಕಟಕ ಬೊ
ಬ್ಬಿಡುತಲಿರ್ದುದು ನಮ್ಮ ಬಲ ಮೊರೆ
ಯಿಡುತಲಿರ್ದುದು ಪಾರ್ಥನಳವಿಗೆ ಪಾಂಡುಸುತಸೇನೆ
ತಡೆಯದೈದಂಗುಲಕೆ ರಥವನು
ನೆಡಿಸಿದನು ಹರಿ ಧರೆಗೆ ಪಾರ್ಥನ (೨೮
ಮುಡಿಯ ಸರಿಸಕೆ ಬಾಣ ಬಂದುದು ಕೊಲುವ ತವಕದಲಿ

ಅಣೆದುದಹಿ ಮಕುಟವನು ತಾರಾ
ಗಣದ ಮಧ್ಯದ ಚಂದ್ರಮನ ಹೊ
ಯ್ದಣಲೊಳಡಸಿದ ರಾಹುವಿನ ರಹಿಯಾಯ್ತು ನಿಮಿಷದಲಿ
ಕುಣಿಕೆ ಮುರಿದುದು ಮೌಕ್ತಿಕದ ಕೀ
ಲಣದ ವಜ್ರದ ಮಾಣಿಕದ ವರ
ಮಣಿಗಳೊಕ್ಕವು ರಕುತ ಮಿದುಳೊಡಸೂಸಿದಂದದಲಿ ೨೯

ಬಿದ್ದುದೇ ಫಲುಗುಣನ ತಲೆಯಡಿ
ಗದ್ದುದೇ ನಮ್ಮಾಟ ಜಯವಧು
ಕದ್ದಳೇ ರಣದೊಸಗೆಗೇಳ್ವಳೆ ದ್ರೌಪದಾದೇವಿ
ಇದ್ದುದೇ ಧರ್ಮಜನ ಸಿರಿ ತಳ
ಕದ್ದುದೇ ನಮ್ಮೊಡಲನಸು ಬಿಡ
ದಿದ್ದುದೇ ಹಾ ಎನುತ ಭೀಮಾದಿಗಳು ಹೊರಳಿದರು ೩೦

ವಿಷವ ತೆಗೆದಳು ದ್ರುಪದಸುತೆ ಕೈ
ಮುಸುಕಿನಲಿ ಚೀಲಾಯವುಗಿದನು
ವಸುಮತೀಶ್ವರನಾ ಮುಹೂರ್ತಕೆ ದೂತರೈತಂದು
ಒಸಗೆ ಜೀಯರ್ಜುನನ ಮಕುಟದ
ಬೆಸುಗೆ ಮುರಿದುದು ಹರಿ ವರೂಥವ
ಕುಸಿಯಲೊತ್ತಿದನಿಂದು ತಪ್ಪಿತು ತೀವ್ರ ಫಣಿಬಾಣ ೩೧

ಎನಲು ಸಂತೈಸಿತ್ತು ರಾಯನ
ಮನೆಯವರು ಪಾಂಡವರ ಸೇನಾ
ವನಧಿ ಬಿಡೆ ಗರ್ಜಿಸಿತು ಬಹುವಿಧ ವಾದ್ಯರಭಸದಲಿ
ವಿನುತ ಮಕುಟವ ಕಡಿದು ಕಂಗನೆ
ಕನಲಿತಹಿ ತಲೆ ಬದುಕಿತೇ ಹಾ
ಎನುತ ಹಲುಮೊರೆಯುತ್ತ ಹರಿದುದು ಕರ್ಣನಿದ್ದೆಡೆಗೆ ೩೨

ತೊಡು ತೊಡಿನ್ನೊಮ್ಮೆನ್ನನಕಟಾ
ಕೆಡಿಸಿದೆಯಲಾ ರಾಜಕಾರ‍್ಯವ
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ
ಅಡಗಲಿನ್ನೀರೇಳು ಭುವನದೊ
ಳಡಗಿ ತಿಂಬೆನು ನರನನೆಂದವ
ಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ ೩೩

ಶಿವನ ಮರೆಯನು ಹೊಗಲಿ ಮೇಣ್ ವಾ
ಸವನ ಸೀಮೆಯೊಳಿರಲಿ ಪಾತಾ
ಳವನು ಹೊಗಲಂಬುಧಿಯ ಮುಳುಗಲಿ ಜವನ ಕೆಳೆಗೊಳಲಿ
ಭುವನಕತಿಶಯವಾಗಿ ರಣದಲಿ
ತಿವಿವೆ ಪಾರ್ಥನನೆನಲು ಕೇಳಿದು
ರವಿಯ ಮಗ ಬೆರಗಾಗಿ ಬೆಸಗೊಂಡನು ಶಿಳೀಮುಖವ ೩೪

ಎಸಲು ಸರಳುಗಳತ್ತಲೇ ಕೀ
ಲಿಸುವವಲ್ಲದೆ ಮತ್ತೆ ಮರಳಿದು
ಬೆಸನ ಬೇಡುವ ಬಾಣವೆಂಬುದನರಿಯೆ ನಾ ಕೇಳ್ದು
ವಿಶಿಖ ನೀನಾರೆನಲು ಕಿಡಿಗಳ
ಕುಸುರಿಗಳನುದ್ಗರಿಸಿ ನುಡಿದುದು
ವಿಷಮನರಿಯಾ ಕಾಳಕೂಟ ಕರಂಡ ಕಾನನದ ೩೫

ಉರಗಪತಿ ತಾನಶ್ವಸೇನನು
ಸುರಪತಿಯ ಖಾಂಡವದೊಳಿಹೆನದ
ನುರುಹುವಂದಿನೊಳೆನ್ನನರೆಗಡಿದೀ ದುರಾತ್ಮಕನ
ಶಿರವನರಿವೆನು ಬೇಗ ತೊಡು ತೊಡು
ಬೆರಗ ಹಾರದಿರೆನಲು ಸತ್ಯದ
ಪರಮಸೀಮೆಗೆ ತಪ್ಪಲಮ್ಮದೆ ಕರ್ಣನಿಂತೆಂದ ೩೬

ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು ೩೭

ತೊಡು ತೊಡೆಲವೋ ಶರವು ರಿಪುವನು
ತಡೆಗಡಿವೆನೆಂದೊದರುತದೆ ನೃಪ
ನೊಡೆತನಕೆ ನೀ ಬಯಸಿದಾ ಮತವುಂಟೆ ರಿಪುಗಳಲಿ
ನುಡಿದ ಭಾಷೆಗೆ ನಾವು ಹೇಳಿತ
ನೊಡಬಡುವ ನೀನಲ್ಲ ಕುರುಪತಿ
ಬಿಡದೆ ನಿನ್ನನು ಸಲಹಿತಕ್ಕುಪಕಾರಿ ನೀನೆಂದ ೩೮

ಎಲವೊ ನಿನ್ನನು ಜಗವರಿಯೆ ಕ
ಬ್ಬಿಲನ ಮಗನನು ಮರಸಿ ಕುರುಪತಿ
ಕುಲಜನನು ಮಾಡಿದನಲಾ ಒಡನುಂಡು ಪತಿಕರಿಸಿ
ನೆಲನು ಹೇಸದೆ ನಿನ್ನ ಕೀರ್ತಿಯ
ಬೆಳಗು ಮಾಸದೆ ಬಿಡದೆ ಸಾಕಿದ
ಹೊಲೆಯನವಸರಕೊದಗುವನು ನೀ ಕಷ್ಟ ಹೋಗೆಂದ ೩೯

ನಂಬಿ ಹಿಡಿದರೆ ನದಿಯಮಗ ಹಗೆ
ಯಂಬಿಗಿತ್ತನು ಕಾಯವನು ಮಗ
ನೆಂಬ ನೆವದಲಿ ತನುವ ಬಿಸುಟನು ಗರುಡಿಯಾಚಾರ‍್ಯ
ಅಂಬು ಬೆಸನನು ಬೇಡಿದಡೆ ನೀ
ನೆಂಬನೀ ವಿಧಿಯಾದೆ ಮೂವರ
ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ ೪೦

ಮಾತೆಗಿತ್ತೆನು ಭಾಷೆಯನು ನಿ
ನ್ನಾತಗಳೊಳೈವರೊಳಗಾರಿದಿ
ರಾತಡೆಯು ತಲೆಗಾದು ಬಿಡುವೆನು ಕೊಲುವುದಿಲ್ಲೆಂದು
ಮಾತುಗಳು ಕವಲಾದ ಬಳಿಕಿ
ನ್ನೇತಕೀ ತನುವಿದನು ಪಾರ್ಥನ
ಖಾತಿಗೊಪ್ಪಿಸಿ ಕಲೆವೆನೆಂದನು ತನ್ನ ಮನದೊಳಗೆ ೪೧

ಮರುಳಲಾ ಮಾದ್ರೇಶ ಮರಳಿದ
ಶರವ ತೊಡುವೆನೆ ಸೈರಿಸೆನೆ ಕಾ
ತರಿಸಿ ವಾಘೆಯ ಬಿಸುಟು ಕಿಡಿಕಿಡಿವೋಗಿ ಖಾತಿಯಲಿ
ಅರಸನೊಲಿದಂತಾಗಲೆನ್ನದು
ಮರುಳುತನ ಕುಲಹೀನನಲಿ ಗುಣ
ವರಸಲೇಕೆಂದೆನುತ ಧುಮ್ಮಿಕ್ಕಿದನು ಧಾರುಣಿಗೆ ೪೨

ಕಂಡುದೀ ವ್ಯತಿಕರವನೀತನ
ನಂಡಲೆದು ಫಲವಿಲ್ಲಲಾ ಕೈ
ಕೊಂಡು ನೋಡುವೆನೆನ್ನ ಸಾಮರ್ಥ್ಯದ ಸಘಾಡದಲಿ
ಚಂಡಿಯಾದೆನು ತಾನೆನುತ ಖತಿ
ಗೊಂಡು ಮರಳಿತು ಸರ್ಪಶರವಾ
ಖಂಡಳಾತ್ಮಜನತ್ತ ಹಾಳಾಹಳದ ಚೂಣಿಯಲಿ ೪೩

ಇವನ ಬಲ್ಲೈ ಪಾರ್ಥ ಚಕ್ಷು
ಶ್ರವನಿವನು ತಕ್ಷಕನ ಮಗ ಖಾಂ
ಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು
ಇವನ ಮೂಡಿಗೆಯೊಳಗೆ ಶರವಾ
ಯ್ತಿವನು ತಾನೇ ಮರಳಿದನು ನೀ
ನವಧರಿಸಿಕೊಳ್ಳೆನುತ ನುಡಿದನು ದೈತ್ಯರಿಪು ನಗುತ ೪೪

ಅರಸ ಕೇಳೈ ಕರ್ಣಶಕ್ತಿ
ಸ್ಫುರಣಸಹಿತೀ ಬಾಣವತಿ ದು
ರ್ಧರವದಲ್ಲದೆ ಬರಿಯ ವಿಷದುಬ್ಬರದ ಸಾಹಸವ
ನರನಲೇ ಕೈಕೊಳ್ಳದೀ ಬಹ
ಸರಳನೈದಂಬುಗಳಲೆಡೆಯಲಿ
ತರಿದು ಬಿಸುಟನು ವೀರನಾರಾಯಣನ ನೇಮದಲಿ ೪೫

[೧]

ನೋಡಿ ಸಂಪಾದಿಸಿ

ಸಂಧಿಗಳು ಸಂಪಾದಿಸಿ

ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
-ಸಂಧಿಗಳು- ೧೫ ೧೬ ೧೭ ೧೮ ೧೯ ೨೦ ೨೦ ೨೨ ೨೩ ೨೪ ೨೫ ೨೬ ೨೭ -೦೦-

ಪರ್ವಗಳು ಸಂಪಾದಿಸಿ

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.