೩೨
ಕರ್ನಾಟಕ ಗತವೈಭವ


೫ನೆಯ ಪ್ರಕರಣ


ಸಾಧನ-ಸಾಮಗ್ರಿ


ವಾ
ಚಕರೇ, ಹಿಂದಿನ ಪ್ರಕರಣದಲ್ಲಿ, ಕರ್ನಾಟಕದೊಳಗೆ ಬಾಳಿದ ಬಲಾಢರಾದ ಅರಸರನ್ನೂ, ಧರ್ಮಸ್ಥಾಪಕರಾದ ಆಚಾರ್ಯರನ್ನೂ, ತೇಜೋಶಿಷ್ಟರಾದ ತತ್ವಜ್ಞಾನಿಗಳನ್ನೂ, ಪ್ರತಿಭಾ ಸಂಪನ್ನರಾದ ವರಕವಿಗಳನ್ನೂ, ಕವಯಿತ್ರಿಯರನ್ನೂ, ವೀರ್ಯವತಿಯರಾದ ವೀರಾಂಗನೆಯರನ್ನೂ, ನಾವು ಕಟ್ಟಿದ ಕಟ್ಟಡಗಳನ್ನೂ ಒಂದರ ಹಿಂದೊಂದು ನಿಮ್ಮ ಅವಲೋಕನಕ್ಕೆ ತಂದು ಕೊಟ್ಟೆವು. ಈ ನಾಮಾವಳಿಯು ನಿಮ್ಮ ನೆನಪಿನಲ್ಲಿರಬೇಕಾದರೆ ಅವರು ಯಾವಾಗ ಹುಟ್ಟಿದರು, ಯಾವಾಗ ಪ್ರಬಲ ಸ್ಥಿತಿಗೆ ಬಂದರು, ಇವೇ ಮುಂತಾದ ಸಂಗತಿಗಳ ಜ್ಞಾನವಿರುವುದು ಅವಶ್ಯವಿದೆ. ನಾವು ಹಿಂದೆ ಹೇಳಿದ ಸಂಗತಿಗಳಿಂದ ನಮ್ಮ ಕನ್ನಡಿಗರಲ್ಲಿ, ಕರ್ನಾಟಕದ ಬಗ್ಗೆ ಸಕೌತುಕವಾದ ಅಭಿಮಾನವೂ, ಕರ್ನಾಟಕ ಇತಿಹಾಸದ ಬಗ್ಗೆ ಜಿಜ್ಞಾಸೆಯೂ ಹುಟ್ಟಿರಬಹುದೆಂದು ಕಲ್ಪನೆ ಮಾಡಿದರೂ ಆ ಜಿಜ್ಞಾಸೆಯನ್ನೂ ತಣಿಸುವಂಥ ಇತಿಹಾಸವೆಲ್ಲಿದೆ? ಆ ತೆರನಾದ ಕನ್ನಡಿಗರ ಆದ್ಯಂತವಾದ ಇತಿಹಾಸವು ಹೊಸತಾಗಿ ಇನ್ನು ನಿರ್ಮಾಣವಾಗಬೇಕಾಗಿದೆ. ಕರ್ನಾಟಕದ ನಿಜವಾದ ಸ್ಥಿತಿಯನ್ನರಿತು, ಅಂಥದೊಂದು ಇತಿಹಾಸವನ್ನು ಬರೆಯುವುದೂ, ಅದು ಕರ್ನಾಟಕದ ಏಳಿಗೆಗೆ ಹೇಗೆ ಸಾಧನವಾಗುತ್ತದೆಂಬುದನ್ನು ಅರಿತುಕೊಳ್ಳುವುದೂ, ಇವೇ ಈಗ ಕನ್ನಡಿಗರ ಪ್ರಥಮ ಕರ್ತವ್ಯಗಳು. ಸದ್ಯಕ್ಕೆ 'ಕರ್ನಾಟಕ'ವೆಂಬ ಶಬ್ದವು ನನ್ನ ಕಿವಿಗೆ ಬಿದ್ದ ಕೂಡಲೆ ಅದರ ಬಗ್ಗೆ ನಮ್ಮ ಮನಸ್ಸಿನಲ್ಲಿ ಮಸಮಸಕಾದ ವಿಚಾರಗಳು ಮಾತ್ರ ತಲೆದೋರುತ್ತವೆ. ನಾವು 'ಕರ್ನಾಟಕರು' ಏಕೆ? 'ಕರ್ನಾಟಕ'೦ದೆನಿಸಿಕೊಳ್ಳುವುದರಲ್ಲಿ ನಾವೇಕೆ ಹೆಮ್ಮೆ ಪಡಬೇಕು? ಇವೇ ಮುಂತಾದ ಪ್ರಶ್ನೆಗಳಿಗೆ ನಮ್ಮ ಹತ್ತರ ಸರಿಯಾದ ಉತ್ತರವಿರುವುದಿಲ್ಲ. ಆದುದರಿಂದ, ನಮ್ಮ ಮನದಲ್ಲಿ ಈಗ ಮುಖ ಹಾಳಾಗಿ ನೆಲೆಗೊಂಡಿರುವ ಕಲ್ಪನೆಗಳು
೫ನೆಯ ಪ್ರಕರಣ - ಸಾಧನ-ಸಾಮಗ್ರಿ
೨೩

ಢಾಳವಾಗಿ ಮೂಡಿ, ಕರ್ನಾಟಕದ ಪ್ರಕಾಶಮಾನವಾದ ಚಿತ್ರವು ನನ್ನ ಕಣ್ಣಿನ ಮುಂದೆ ಎದ್ದು ಕಾಣಬೇಕಾದರೆ, ನಾವು ನಮ್ಮ ನಾಡಿನ ಇತಿಹಾಸವನ್ನು, ಅಭಿಮಾನ ಪೂರ್ವಕವಾದ ಪ್ರತಿಯೊಂದು ಸಂಗತಿಯೂ ಗೊತ್ತಾಗುವಂತೆ ಅಭ್ಯಾಸ ಮಾಡಬೇಕು. ಕರ್ನಾಟಕದ ನಿಜವಾದ ಮಾಹಾತ್ಮ್ಯವನ್ನೂ ಹೆಚ್ಚಳವನ್ನೂ ತಿಳಿಯಲಿಕ್ಕೆ ಅದರ ನಿಜವಾದ ಇತಿಹಾಸವೇ ದಾರಿಯು.

ದರೆ, ಕನ್ನಡಿಗರ ದುರದೃಷ್ಟವಶದಿಂದ, ಆ ಇತಿಹಾಸವನ್ನು ಹೊರಗೆಡವಲಿಕ್ಕೆ ಬೇಕಾಗುವ ಸಾಧನಗಳು ಈಗ ಸಾಕಾದಷ್ಟು ದೊರೆಯುವುದಿಲ್ಲ. ಒಂದು ವೇಳೆ ಎಲ್ಲಿಯೋ ಒಂದೆರಡು ದೊರೆತರೂ ಅವು ಹರಕು ಮುರಕುಗಳು. ಈ ತಪ್ಪು ಯಾರದು ? ಮೊದಲೇ, ಕರ್ನಾಟಕದ ವೈಭವವು ನಷ್ಟ ಹೊಂದಿ ಮುನ್ನೂರು ನಾನೂರು ವರ್ಷಗಳಾಗಿ ಹೋಗಿವೆ. ಮೇಲಾಗಿ ಪರಕೀಯ ಜನರು ಆಗಿನ ಕಾಲದ ತಮ್ಮ ಹಗೆಗಳ ಮೇಲಿನ ಡಂಕಿನಿಂದ ಅವರ ವೈಭವ ಚಿಹ್ನಗಳನ್ನು ತುಂಡರಿಸಿದ್ದಾರೆ. ಇಂಥ ಸ್ಥಿತಿಯಲ್ಲಿ ಕೂಡ, ಉಳಿದಷ್ಟು ಸಾಮಗ್ರಿಯನ್ನು ಕಲೆ ಹಾಕುವ ಬುದ್ದಿಯು ನಮ್ಮಲ್ಲಿದ್ದರೆ, ಇತಿಹಾಸಕ್ಕೆ ಎಷ್ಟೋ ಸಹಾಯವಾಗಬಹುದಾಗಿತ್ತು. ಆದರೆ ನಮ್ಮಲ್ಲಿ ಅಂಥ ಬುದ್ಧಿಯೂ ವಿಶೇಷವಾಗಿ ಹುಟ್ಟಲಿಲ್ಲ. ಅಂದ ಬಳಿಕ, ಈಗ ನಮ್ಮ ಹತ್ತಿರ ಆದ್ಯಂತವಾದ ಇತಿಹಾಸವನ್ನು ಬರೆಯು ವುದಕ್ಕೆ ಬೇಕಾಗುವಷ್ಟು ಸಾಧನಗಳಿಲ್ಲದ ತಪ್ಪು ನಮ್ಮದೇ ಅಲ್ಲವೆ? ಕನ್ನಡಿಗರೇ ! ಇನ್ನಾದರೂ ಏಳಿರಿ ! ಸಾಧ್ಯವಾದಷ್ಟು ಸಾಧನಗಳನ್ನು ಕಲೆ ಹಾಕಿದರೂ ಎಷ್ಟೋ ಕಾರ್ಯವಾಗುವಂತಿದೆ ! ಯಾಕಂದರೆ, ಈ ನಿಮ್ಮ ನಿರಭಿಮಾನತೆಯನ್ನು ನಿಮ್ಮ ಪೂರ್ವಜರು ಮೊದಲೇ ಕಂಡು ಹಿಡಿದುದರಿಂದಲೋ ಏನೋ ಅವರು ತಮ್ಮ ವೈಭವದ ಕುರುಹುಗಳನ್ನು ಶಾಶ್ವತವಾದ ಶಿಲಾಲಿಸಿ, ಕಟ್ಟಡ ಮುಂತಾದುವುಗಳಲ್ಲಿ ಇಟ್ಟು ಹೋಗಿದ್ದಾರೆ. ೧೦೦೦-೧೫೦೦ ವರ್ಷಗಳವರೆಗೆ ಆಳಿದ ಕರ್ನಾಟಕದಂಥ ವೈಭವಶಾಲಿಯಾದ ರಾಷ್ಟ್ರವೆಂದರೇನು! ಹಿಂದುಸ್ಥಾನದ ದೊಡ್ಡ ದೊಡ್ಡ ಇತಿಹಾಸ ಗ್ರಂಥಗಳಲ್ಲಿ ಕೂಡ ಅದರ ಚರಿತ್ರದ ಪಾಲಿಗೆ ಹತ್ತೆಂಟು ಪುಟಗಳೇ ಬರುವುದೆಂದರೇನು! ಕನ್ನಡಿಗರೇ, ಇದು ಅಪಮಾನಕಾರಕವಲ್ಲವೆ? ಈ ಕುಂದಕವನ್ನು ಹೋಗಲಾಡಿಸುವುದು ನಿಮ್ಮ ಕರ್ತವ್ಯವಲ್ಲವೆ?
೩೪
ಕರ್ನಾಟಕ ಗತವೈಭವ

ಮ್ಮ ಪೂರ್ವಜರು ಬಿಟ್ಟು ಹೋದ ಸಾಧನ ಸಾಮಗ್ರಿಯು ಶಾಶ್ವತವಾಗಿದೆಯೆಂದು ಹೇಳಿದೆನಷ್ಟೆ ! ಆದರೆ ಆ ಸಾಧನಗಳು ಯಾವುವೆಂಬುದನ್ನು ಇನ್ನು ನೋಡುವ, ಅಂಥ ಸಾಧನಗಳು ವಿಪುಲವಾಗಿರದಿದ್ದರೂ, ಸ್ವದೇಶ ಭಕ್ತಿಯಿಂದ ಪ್ರೇರಿತನಾದವನಿಗೆ, ಇತಿಹಾಸವನ್ನು ಬರೆಯುವುದಕ್ಕೆ ಅಸಾಕಾಗುವಷ್ಟು ಇರುತ್ತವೆಂದು ಕಂಡುಬರುವುದು. ಅಂಥವನಿಗೆ ಕರ್ನಾಟಕದೊಳಗೆ ಎಲ್ಲಿ ನೋಡಿದರೂ ಇತಿಹಾಸ ಸಾಮಗ್ರಿಯ ರಾಶಿಗಳು ಅಲ್ಲಲ್ಲಿಗೆ ಒಟ್ಟಿರುವುದಾಗಿ ಕಾಣುವುವು. ಯಾಕಂದರೆ, ನಮ್ಮ ನಾಡಿನಲ್ಲಿ ಎತ್ತ ನೋಡಿದರತ್ತ ಶಿಲಾಲಿಪಿಗಳು ಹರಡಿಕೊಂಡಿರುವುವು. ಇಲ್ಲಿ ದೊರೆಯುವಷ್ಟು ಶಿಲಾಲಿಪಿಗಳು ಬೇರೆ ಯಾವ ಕಡೆಗೂ ದೊರೆಯುವುದಿಲ್ಲ, ನಮ್ಮ ನಾಡು ಶಿಲಾಲಿಪಿಗಳ ತವರು ಮನೆಯೆಂದರೂ ಸಲ್ಲುವುದು, ಕರ್ನಾಟಕದೊಳಗೆ ಕಲ್ಲು ಗುಡಿಯಿಲ್ಲದ ಊರಿಲ್ಲ; ಶಿಲಾಲಿಪಿಯಿಲ್ಲದ ಗುಡಿಯಿಲ್ಲ; ನಮ್ಮ ಅರಸರ ಔದಾರ್ಯವನ್ನೂ ದಾನಶೌಂಡತ್ವವನ್ನೂ ಹೊಗಳದ ಶಿಲಾಲಿಪಿಯಿಲ್ಲ, ನಮ್ಮ ಸುದೈವದಿಂದ ಮೈಸೂರಿನ ಸರಕಾರದವರು ತಮ್ಮ ಪ್ರಾಂತದ ಮಟ್ಟಿಗೆ ಏಕಾಗಲೊಲ್ಲದು, - ತಮ್ಮ ದೇಶದ ಮೂಲೆ ಕೊಂಪೆಗಳನ್ನು ಸಹ ಹುಡುಕಿ, ಸುಮಾರು ೮೦೦೦ ಶಿಲಾಲಿಪಿ ಮತ್ತು ತಾಮ್ರಶಾಸನಗಳನ್ನು ಅಚ್ಚು ಹಾಕಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿಯೂ ಕನಿಷ್ಠ ಸಾವಿರಾರು ಶಿಲಾ ಲೇಖಗಳು ಸಿಕ್ಕಬಹುದು. ಧಾರವಾಡದ ಒಂದೇ ಜಿಲ್ಲೆಯಲ್ಲಿರುವ ಒಟ್ಟು ೧೦೦-೧೧೦ ದೊಡ್ಡ ಗ್ರಾಮಗಳೊಳಗೆ ನಾಲ್ಕೆಂಟು ಗ್ರಾಮಗಳನ್ನು ಮಾತ್ರವೇ ಬಿಟ್ಟು ಉಳಿದ ಎಲ್ಲ ಗ್ರಾಮಗಳಲ್ಲಿ ಶಿಲಾಲಿಪಿಗಳು ದೊರೆಯುತ್ತವೆ. ಲಕ್ಕುಂಡಿ, ಅಣ್ಣಗೇರಿ ಮುಂತಾದ ಗ್ರಾಮಗಳಲ್ಲಂತೂ ೨೦-೩೦ ಶಿಲಾಲಿಪಿಗಳು ಒಂದೊಂದೇ ಊರಿನಲ್ಲಿ ದೊರೆಯುತ್ತವೆ, ಸಾರಾಂಶ, ನಮ್ಮ ನಾಡು ಶಿಲಾಲಿಪಿಮಯವಾಗಿರುವುದಂದರೂ ಅತ್ಯುಕ್ತಿಯಾಗದು! ಎಂದೂ ಸವೆಯದಂಥ ಇಂಥ ಮೂಲಧನವು ನಮ್ಮಲ್ಲಿರಲು ಅದರ ಅವಸ್ಥೆ ಏನಾಗಿರುವುದು ನೋಡಿದಿರೊ? ಅಕಟಕಟ ! ಅದು ನೆನಪಾದೊಡನೆಯೇ ಎದೆ ಹಾರುತ್ತದೆ! ನಮ್ಮಲ್ಲಿ 'ನಾ ನೀ' ಎಂದೆನುವ ವಿದ್ವಾಂಸರಿಗೂ ಅವುಗಳ ಮೇಲ್ಮೆಯು ಚೆನ್ನಾಗಿ ಹೊಳೆದಿರುವುದಿಲ್ಲ. ಸಾಮಾನ್ಯ ಜನರ ಮಾತಂತೂ ದೂರವೇ ! ಸಾಮಾನ್ಯ ಜನರಲ್ಲಿ, ಕೆಲವರು ಅವುಗಳ ಮೇಲೆ ಎಣ್ಣೆ ಸುರಿಯುತ್ತಾರೆ, ಮತ್ತೆ ಕೆಲವರು ಅವಕ್ಕೆ ಬಣ್ಣ ಬಳಿಯುತ್ತಾರೆ; ಬೇರೆ ಕೆಲವು ಹುಡು 
೫ನೆಯ ಪ್ರಕರಣ - ಸಾಧನ-ಸಾಮಗ್ರಿ
೩೫

ಗರು ತಮ್ಮ ಸ್ವಭಾವಾನುಗುಣವಾಗಿ ಅವನ್ನು ಮನಬಂದಂತೆ ಕಟಿದು ಕೆಡಿಸುತ್ತಾರೆ. ಹೀಗಾದ ಶಿಲಾಶಾಸನಗಳನ್ನು ನಾವು ಸಾವಿರಗಟ್ಲೆ ನೋಡಬಹುದು. ಅವುಗಳ ಮಹತ್ವವನ್ನರಿತವರಾದ ಸರ್ ಜಾರ್ಜ್ ಇಲಿಯೊಟ್‌, ಡಾ.ಫ್ಲೀಟ್, ಡಾ.ರೈಸ್ ಇವರಂಥ ಯುರೋಪಿಯ ಬಂಧುಗಳು ಮಾತ್ರ ಸಾವಿರಾರು ಲಿಪಿಗಳನ್ನು ಶ್ರಮಪಟ್ಟು ಉದ್ಧರಿಸಿದ್ದಾರೆ. ತೀರಿತು! ಮಿಕ್ಕವುಗಳೆಲ್ಲ ಹಾಗೇ ಮಣ್ಣು ಮುಕ್ಕುತ್ತ ಬಿದ್ದುಕೊಂಡಿವೆ. ಅವುಗಳ ದುರವಸ್ಥೆಯನ್ನು ಕಂಡು ಯಾವ ಇತಿಹಾಸಾಭಿಮಾನಿಯ ಕಣ್ಣುಗಳು ಅಶ್ರುಗಳಿಂದ ತುಂಬಿ ತುಳುಕದೆ ಇರಲಾರವು! ಹೀಗೆ ಇನ್ನಷ್ಟು ಮಣ್ಣಿನಲ್ಲಿ ಹುಗಿದು ಹೋಗಿರುವುವೋ ದೇವರೇ ಬಲ್ಲ! ಅನೇಕ ಶಿಲಾಲಿಪಿಗಳು ತಿಪ್ಪೆಯಲ್ಲಿ ಹೊರಳಾಡುವುದನ್ನೂ, ಬಾವಿಗಳಿಗೆ ಪಾವಟಿಗೆಗಳಾಗಿ ಬಿದ್ದಿರುವುದನ್ನೂ, ಗುಡಿ ಗುಂಡಾರಗಳಿಗೆ ತೊಲೆ ಬಂತೆಗಳಾಗಿರುವುದನ್ನೂ ಪ್ರಸ್ತುತ ಲೇಖಕನು ಕಣ್ಣಾರೆ ಕಂಡಿದ್ದಾನೆ! ಆದರೆ ಏನು ! ಅವುಗಳನ್ನುದ್ಧರಿಸುವ ಕಾರ್ಯವು ಒಬ್ಬಿಬ್ಬರಿಂದ ಸುಲಭ ಸಾಧ್ಯವೋ ? ಮೈಸೂರ ಸರಕಾರದವರಂತೆ ನಮ್ಮ ಸರಕಾರದವರ ಮನಸ್ಸಿನಲ್ಲಿ ಬಂದಾಗಲೇ ಆ ಕೆಲಸವು ಸುಲಭ ಸಾಧ್ಯವು, ಆದರೆ ಅಂಥಕಾಲವು ಬರುವವರೆಗೆ ನಾವು ಸುಮ್ಮನಿರಬೇಕೋ ? ಇಲ್ಲ, ನಾವು ಸಂಘ ಶಕ್ತಿಯಿಂದ ಆದಷ್ಟು ಮಟ್ಟಿಗೆ ಅವುಗಳನ್ನು ಕಾಲನ ಬಾಯಿಯಿಂದಲಾದರೂ ಉಳಿಸಿಕೊಂಡು ಮುದ್ರಿಸಿ ಇಡಬೇಕು. ಸುಲಭ ಸಾಧನಗಳುಳ್ಳ ಮಹಾರಾಷ್ಟಬಂಧುಗಳಿಗೆ ತಮ್ಮ ಇತಿಹಾಸವನ್ನು ಸಂಶೋಧಿಸಲಿಕ್ಕೆ ಪ್ರಸಿದ್ದ ಶೋಧಕರಾದ ಶ್ರೀ ರಾಜವಾಡೆಯಂಥ ನೂರಾರು ಜನರು ಬೇಕಾಗಿರುವರು. ಇನ್ನು ನಮ್ಮ ಇತಿಹಾಸಕ್ಕೆ ಎಷ್ಟು ರಾಜವಾಡೆಗಳು ಬೇಕಾಗುವರೆಂಬುದನ್ನು ನೀವೇ ಕಲ್ಪಿಸಿರಿ. ಅಂಥ ಜನರು ಹುಟ್ಟಿದ ದಿವಸವೇ ಕರ್ನಾಟಕಕ್ಕೆ ಮಂಗಲದಿವಸವು, ಅವರು ಯಾವಾಗ ಹುಟ್ಟುವರೋ ಹುಟ್ಟಲಿ! ಸದ್ಯಕ್ಕಂತೂ ನಾವು ಈ ಶಿಲಾಲಿಸಿಗಳನ್ನು ಮೆಟ್ಟ ತುಳಿಯುತ್ತಿದ್ದೇವೆ. ಯಾವ ಶಿಲಾಲಿಪಿಗಳನ್ನು ರಾಜರು ಮಹಾರಾಜರು ಪವಿತ್ರ ವಸ್ತುಗಳೆಂದು ಸಂರಕ್ಷಿಸುತ್ತಿದ್ದರೋ ಅವುಗಳಿಗೆ ಹಾದಿಹೋಕರು ಸಹ ವ್ಯಸನ ಪಡುವ ದುಸ್ಥಿತಿಯು ಬಂದೊದಗಿದೆ. ಕರ್ನಾಟಕ ಇತಿಹಾಸಕ್ಕೆ ಮುಖ್ಯ ಸಾಧನವಾದ ಇವುಗಳನ್ನು ಉದ್ದರಿಸುವುದೇ ಕನ್ನಡಿಗರ ಮೊದಲನೆಯ ಕಾರ್ಯವು.

ರ್ನಾಟಕ ಇತಿಹಾಸದ ಎರಡನೆಯ ಸಾಧನವಾವುವೆಂದರೆ ತಾಮ್ರಪಟ
೩೬
ಕರ್ನಾಟಕ ಗತವೈಭವ

ಗಳು, ಇವೂ ಶಿಲಾಲಿಪಿಯಷ್ಟೇ ಮಹತ್ವದವಾಗಿರುತ್ತವೆ, ದಪ್ಪ ತಾಮ್ರದ ತಗಡುಗಳ ಮೇಲೆ ಸುವಾಚ್ಯವಾದ ಅಕ್ಷರಗಳು ಕೆತ್ತಲ್ಪಟ್ಟು, ನಾಲ್ಕಾರು ತಗಡುಗಳಲ್ಲಿ ರಂಧ್ರ ಕೊರೆದು ತಾಮ್ರದ ಬಳೆಯು ಪೋಣಿಸಲ್ಪಟ್ಟಿರುತ್ತದೆ. ಈ ತಾಮ್ರಪಟಗಳೆಲ್ಲವೂ ಭೂದಾನದ ಸನದುಗಳೇ ಸರಿ. ಇಂಥ ನೂರಾರು ತಾಮ್ರಪಟಗಳು ಈಗ ದೊರೆತಿರುತ್ತವೆ. ಹುಡುಕಿದರೆ, ಇನ್ನೂ ನೂರಾರು ದೊರೆಯಬಹುದು. ಈಗ ಅವು ಬ್ರಾಹ್ಮಣರ ಮನೆಯಲ್ಲಿ ನೆಲಮನೆಯಲ್ಲಿಯಾಗಲಿ ದೇವರ ಜಗಲಿಗಳ ಮೇಲಾಗಲಿ ಬಿದ್ದಿರುತ್ತವೆ. ಅನೇಕ ಮಠಗಳಲ್ಲಿ ಅವನ್ನು ಜನರು ಪೂಜೆ ಮಾಡುತ್ತಾರೆ. ಇಂಥ ತಾಮ್ರಶಾಸನಗಳನ್ನು ಇತಿಹಾಸ ಸಂಶೋಧಕರು ಹುಡುಕಿ ತೆಗೆಯಬೇಕು.
ರ್ನಾಟಕ ಇತಿಹಾಸವನ್ನು ಸಾರುವ ಮೂರನೆಯ ಸಾಧನವಾವುವೆಂದರೆವೀರಗಲ್ಲು'ಗಳೂ ಮಹಾಸತಿಕಲ್ಲು' ಗಳೂ, ವೀರಗಲ್ಲುಗಳೆಂದರೆ ವೀರರು ಮಡಿದ ಸ್ಥಳದಲ್ಲಿ ಅವರ ಸ್ಮಾರಕಕ್ಕೆಂದು ನಡಿಸಿದ ಕಲ್ಲುಗಳು. ಇವುಗಳ ಮೇಲೆ ಆಯಾ ವೀರರ ಮೂರ್ತಿಗಳು ಕಟ್ಟದಿದ್ದು, ದೇವದೂತರು ಅವರನ್ನು ವಿಮಾನಗಳಲ್ಲಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಚಿತ್ರ ತೋರಿಸಿರುತ್ತದೆ. ಕೆಲವು ವೀರಗಲ್ಲು ಗಳ ಮೇಲೆ ನಡುನಡುವೆ ಅಕ್ಷರಗಳಿರುತ್ತವೆ. ಮಹಾಸತಿಗಲ್ಲುಗಳೆಂದರೆ ಪತಿ ವ್ರತೆಯರು ವೀರರಾದ ತಮ್ಮ ಪತಿಗಳೊಡನ ಸಹಗಮನಮಾಡಿದ ಸ್ಥಳದಲ್ಲಿ ಅವರ ಸ್ಮಾರಕಾರ್ಥವಾಗಿ ನಿಲ್ಲಿಸಿದ ಕಲ್ಲುಗಳು, ಇವಕ್ಕೆ ಹಳ್ಳಿವಾಡ ಜನರು 'ನಾಸ್ತಿಕಲ್ಲು' ಎಂದೆನ್ನುತ್ತಾರೆ. ಇಂಥ ಕಲ್ಲುಗಳಲ್ಲಿ ಕೆಲವುಗಳ ಮೇಲೆ ಒಂದು ಕೈಯಾಕಾರದ ಗುರುತು ಮಾತ್ರ ಇರುತ್ತದೆ. ಈ ವೀರಗಲ್ಲು ಮಹಾಸತಿಗಲ್ಲು ಗಳಿಂದಲೂ ಕೆಲವು ಮಟ್ಟಿಗೆ ಇತಿಹಾಸಕ್ಕೆ ಸಹಾಯವಾಗುವುದು.
ನಾಲ್ಕನೆಯ ಸಾಧನವಾವುವೆಂದರೆ ನಾಣ್ಯಗಳು, ಈ ನಾಣ್ಯಗಳಿಂದ ಆಯಾಕಾಲದ ಅರಸರ ಹೆಸರು ಇತ್ಯಾದಿಗಳು ವ್ಯಕ್ತವಾಗುತ್ತವೆ.

ದನೆಯ ಮಹತ್ವದ ಸಾಧನವೆಂದರೆ ಪೂರ್ವಕಾಲದ ಕಟ್ಟಡಗಳು, ದಕ್ಷಿಣ ಹಿಂದುಸ್ಥಾನದಲ್ಲಿರುವಂಥ ಭವ್ಯವಾದ ಗುಡಿಗಳು ಇಡೀ ಹಿಂದುಸ್ಥಾನದಲ್ಲಿಯೇ ಇಲ್ಲ. ಇದಕ್ಕೆ ಕಾರಣವೇನಂದರೆ- ನಮ್ಮ ದೇಶದಲ್ಲಿ ಶಿಲ್ಪಕಲೆಯು ಅತ್ಯಂತ ಪರಿಣತಾವಸ್ಥೆಯನ್ನು ಪಡೆದಷ್ಟು ಅದು ಮತ್ತಾವ ದೇಶದಲ್ಲಿಯೂ ಪಡೆದಿರಲಿಲ್ಲ.
೫ನೆಯ ಪ್ರಕರಣ - ಸಾಧನ-ಸಾಮಗ್ರಿ
೨೭

ಇದರ ಸತ್ಯತೆಯು, ನಮ್ಮಲ್ಲಿಯ ಮನೋಹರವಾದ ಅಸಂಖ್ಯ ದೇವಾಲಯಗಳನ್ನು ನೋಡಿದರೆ ಗೊತ್ತಾಗುವುದು, ಡಾ. ಫರ್ಗ್ಯುಸನ್ನರೆಂಬವರು ಈ ದೇಶವನ್ನೆಲ್ಲಾ ಸಂಚಾರಮಾಡಿ, ಈ ಕಟ್ಟಡಗಳ ಆಮೂಲಾಗ್ರವಾದ ಇತಿಹಾಸವನ್ನು ಬರೆದಿಟ್ಟದ್ದಾರೆ. ಇತ್ತಿತ್ತ ಬೆಂಗಳೂರಿನಲ್ಲಿಯೂ ಈ ಶಿಲ್ಪ ಕಲೆಯ ವಿಷಯವಾಗಿ 'ದಿ ಇಂಡಿಯನ್ ಆರ್ಕಿಟೆಕ್ಟರ್‌' (The Indian Architecture' ಎಂಬ ಮಾಸ ಪತ್ರಿಕೆಯು ಹೊರಡುತ್ತದೆ. ಈ ಕಟ್ಟಡಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ಗುಡಿಯು ಸುಮಾರು ಇಂಥ ಅರಸನ ಆಳಿಕೆಯಲ್ಲಿಯೇ ಹುಟ್ಟಿತೆಂದು ನಿರ್ಧರಿಸಲಿಕ್ಕೆ ಬರುತ್ತದೆಂದು ಡಾ. ಫರ್ಗೂಸನ್ ಇವರು ಹೇಳುತ್ತಾರೆ. ಇದಲ್ಲದೆ, ಆ ಗುಡಿಗಳ ಮೇಲೆ ಕೊರೆದಿರುವ ಚಿತ್ರಗಳಿಂದ ಆ ಕಾಲದ ಜನರ ಕಲಾಕೌಶಲ್ಯ, ಉಡಿಗೆ ತೊಡಿಗೆ, ಸಮಾಜ ಸ್ಥಿತಿ, ಆಯುಧ, ವಾಹನ ಇವೇ ಮೊದಲಾದುವುಗಳು ತಿಳಿದುಬರುತ್ತವೆ. ಕರ್ನಾಟಕದ ಅರಸರನ್ನು ಒಂದು ವೇಳೆ ಮರೆಯಬಹುದು; ಕರ್ನಾಟಕ ವಿದ್ವನ್ಮಣಿಗಳು ಒಂದು ವೇಳೆ ನಮ್ಮ ಸ್ಮೃತಿಪಥದಿಂದ ದೂರವಾದಾರು; ಕರ್ನಾಟಕ ವಾಙ್ಮಯವು ಒಂದುವೇಳೆ ಹುಳು ತಿಂದು ಹಾಳಾಗಿ ಹೋದೀತು! ಆದರೆ ಗುಡ್ಡ ಬೆಟ್ಟಗಳ ಬಂಡೆಗಳಲ್ಲಿ ಕೊರೆಯಲ್ಪಟ್ಟ ಅಖಂಡವಾದ ಕೃತಿಮಗವಿಗಳೂ, ಅಲೌಕಿಕವಾದ ಕಲಾಕೌಶಲ್ಯದಿಂದ ಯುಕ್ತವಾದ ದೇವಾಲಯಗಳೂ ಮಾತ್ರ ನಮ್ಮ ಪ್ರಾಚೀನಕಾಲದ ವೈಭವವನ್ನೂ ಜಾಣ್ಮೆಯನ್ನೂ ಸಂಪತಿಯನ್ನೂ, ಜಗತ್ತಿಗೆಲ್ಲ ಪ್ರದರ್ಶಿಸುತ್ತ ಮಳೆಗಾಳಿಗಳ ಆಘಾತಗಳಿಗೆ ಮೈಗೊಟ್ಟು ಯುಗಾಂತ್ಯದವರೆಗೆ ನಿಲ್ಲುವದರಲ್ಲೇನೂ ಸಂದೇಹವಿಲ್ಲ.

ರನೆಯ ಸಾಧನವಾವುವೆಂದರೆ - ವಾಙ್ಮಯವು. ತಾಳೆಯೋಲೆಗಳನ್ನೇ ಆಗಿನ ಕಾಲಕ್ಕೆ ಬರಹಕ್ಕೆ ಬಳಸುತ್ತಿದ್ದುದರಿಂದ, ನಮ್ಮ ವಾಙ್ಮಯವೆಲ್ಲವೂ ತಾಳೆಯೋಲೆಗಳಲ್ಲಿ ಅಡಕವಾಗಿದೆ. ಆದರೆ ಆ ತಾಳೆಯೋಲೆಗಳು ಈಗ ದುರ್ಲಭವಾಗಿವೆ. ತಮ್ಮ ವಾಙ್ಮಯವನ್ನು ಸಮೃದ್ಧಿ ಪಡಿಸಬೇಕೆಂದು ಕುತೂಹಲವಳ್ಳನರಾಧ ಪಕ್ಷಕ್ಕೆ ಕನ್ನಡಿಗರು ಮೊದಲು ಆ ಹಳೆಯ ತಾಳೆಯೋಲೆಗಳನ್ನು ಗೆದ್ದಲು ಹುಳುಗಳ ಬಾಯಿಯಿಂದ ಬದುಕಿಸಬೇಕು, ಹಿಂದಿನಕಾಲದ ವಾಙ್ಮಯ ಸಂಪತ್ತೆಲ್ಲವೂ ಸುದೈವದಿಂದ ನಮ್ಮ ಕೈ ಸೇರಿದರೆ, ಅದರ ಆಧಾರದಿಂದ ಈಗಿನವರೆಗೆ ನಡೆದುಬಂದ ಕನ್ನಡ ಭಾಷೆಯ ಇತಿಹಾಸವನ್ನೂ ಅದರ ಬೆಳವಣಿಕೆಯನ್ನೂ
೩೮
ಕರ್ನಾಟಕ ಗತವೈಭವ

ಗೊತ್ತುಹಿಡಿಯಬಹುದು, ಅಲ್ಲದೆ, ಅದು ರಾಜಕೀಯ ಇತಿಹಾಸ ಸಂಶೋಧನಕ್ಕೂ ನೆರವಾಗುವುದು. 'ಕವಿರಾಜಮಾರ್ಗ' 'ರಾಜಶೇಖರ' 'ಚೆನ್ನಬಸವ ಪುರಾಣ' ಮುಂತಾದ ಗ್ರಂಥಗಳನ್ನು ಇತಿಹಾಸ ದೃಷ್ಟಿಯಿಂದ ಓದಲಿಕ್ಕೆ ಕನ್ನಡಿಗರು ಮೊದಲು ಮಾಡಬೇಕು, ಆದರೆ ಆ ದೃಷ್ಟಿಯಿಂದ ಕನ್ನಡ ವಾಙ್ಮಯವನ್ನು ವ್ಯಾಸಂಗ ಮಾಡುವ ಇತಿಹಾಸ ಭಕ್ತರು ನಮ್ಮಲ್ಲಿ ಎಷ್ಟು ಜನರಿದ್ದಾರೆ? ನಮ್ಮ ಪರಮಮಿತ್ರರಾದ ರಾ|| ರಾಜಪುರೋಹಿತರವರು ಪಂಢರಪುರದ ಇತಿಹಾಸವನ್ನು ಈ ಕನ್ನಡ ವಾಙ್ಮಯದ ಆಧಾರದಿಂದಲೇ ತೆಗೆದಿರುವರು. ಬಿಲ್ಲಣನ 'ವಿಕ್ರಮಾ೦ಕದೇವ ಚರಿತ' ವೆಂಬ ಸಂಸ್ಕೃತ ಕಾವ್ಯವು ಕರ್ನಾಟಕ ಚಕ್ರವರ್ತಿಯಾದ ಚಾಲುಕ್ಯ ವಿಕ್ರಮನ ಜೀವನ ಚರಿತ್ರವೇ ಆಗಿರುವುದು. ಸಾರಾಂಶ:- ನಮ್ಮ ವಾಙ್ಮಯವು ಇತಿಹಾಸದ ಒಂದು ದೊಡ್ಡ ಬೊಕ್ಕಸವೇ ಆಗಿದೆ. ಆ ಬೊಕ್ಕಸದ ಮುದ್ರೆಯನ್ನು ತೆಗೆದು ಅದರೊಳಗಿರುವ ವಸ್ತುಗಳನ್ನು ಪರೀಕ್ಷಿಸದಿದ್ದರೆ ಅದಾರ ತಪ್ಪು!
ಳನೆಯ ಮಹತ್ವದ ಸಾಧನವಾವುವೆಂದರೆ - ಪರದೇಶೀಯ ಪ್ರವಾಸಿಕರು ಬರೆದಿಟ್ಟ ಬರಹಗಳು, ಟಾಲೇಮಿ, ಹುಯೆನ್ಸಾಂಗ, ಫಾಹೈನ್, ಅಲಬುರ್ನಿ, ಇಬ್ನಬತೂತ, ಮಾರ್ಕೊಪೋಲೋ, ಅಬ್ದುಲರಜಾಕ, ಮುಂತಾದವರ ಉಲ್ಲೇಖಗಳಿಂದ ನಮ್ಮ ಇತಿಹಾಸ ಜ್ಞಾನಕ್ಕೆ ಹೆಚ್ಚು ಬೆಳಕು ದೊರೆಯುವುದು. ಚೀನ ದೇಶದ ಪ್ರವಾಸಿಯಾದ ಹುಯೆನ್ಸಾಂಗನು ಬರೆದ ಬಾದಾಮಿಯ ೨ನೆಯ ಪುಲಕೇಶಿಯ ವರ್ಣನೆಯನ್ನೂ ಅಬ್ದುಲರಜಕರು ಬರೆದ ವಿಜಯನಗರದ ವರ್ಣನೆಯನ್ನೂ ಓದಿದರೆ, ನಾವು ಈ ಪುಸ್ತಕದಲ್ಲಿ ಅಡಿಗಡಿಗೆ ಹೇಳಿರುವ ನಮ್ಮ ವೈಭವದಲ್ಲಿ ಅತಿಶಯೋಕ್ತಿಯಿಲ್ಲೆ೦ಬುದೂ ನಮ್ಮ ಅಭಿಮಾನವು ಪಕ್ಷಪಾತ ಮೂಲಕ ವಾದುದಲ್ಲವೆಂಬುದೂ ಮನದಟ್ಟಾಗುವುದು.

ಡೆಯದಾದರೂ ಕಡಿಮೆಯಲ್ಲದ ಎಂಟನೆಯ ಸಾಧನವಾವುವೆಂದರೆ - ಪರಂಪರಾಗತವಾದ ಕಥೆಗಳು, ಸ್ಥಳಮಾಹಾತ್ಮ್ಯಗಳು, ಆಚಾರಗಳು ಮತ್ತು ಧಾರ್ಮಿಕ ವಿಚಾರಗಳು, ಇವುಗಳ ಮಹತ್ವವು ಅಷ್ಟಿಷ್ಟೆಂದು ಹೇಳಲಿಕ್ಕಾಗದು. ಪ್ರತಿಯೊಂದು ಪ್ರಸಿದ್ಧವಾದ ಸ್ಥಳಕ್ಕೆ 'ಸ್ಥಳ-ಪುರಾಣ' ವೊಂದು ಇದ್ದೇ ಇರುತ್ತದೆ. ಅದನ್ನು ಇತಿಹಾಸ ದೃಷ್ಟಿಯಿಂದ ಶೋಧಿಸಿದರೆ ಆ ಊರಿನ ಉತ್ಪತ್ತಿ, ಅದರ ಹಳೆಯ ಹೆಸರು ಮುಂತಾದವುಗಳು ಗೊತ್ತಾಗುವುವು, ಕಥೆಗಳನ್ನೂ ಆಚಾರ
೫ನೆಯ ಪ್ರಕರಣ - ಸಾಧನ-ಸಾಮಗ್ರಿ
೩೯

ವಿಚಾರಗಳನ್ನೂ ಪರೀಕ್ಷಿಸಿ, ಅವುಗಳಲ್ಲಿರುವ ಹೊಟ್ಟನ್ನು ಹಾರಹೊಡೆದರೆ, ಒಳಗೆ ಒಂದೆರಡು ಗಟ್ಟಿ ಕಾಳುಗಳು ಹೊರಟೇ ಹೊರಡುವುವು.

ಸಾರಾಂಶ:- ಈ ಸಾಧನ ಸಾಮಗ್ರಿಯನ್ನು ಕೂಡಿಹಾಕುವುದೇ ಇತಿಹಾಸ ಸಂಶೋಧಕರ ಮೊದಲನೆಯ ಕೆಲಸವು. ಈ ಸಾಧನ ಸಾಮಗ್ರಿಯನ್ನಲ್ಲ ಕಲೆ ಹಾಕಿ ಕಡೆದರೆ ಬೆಣ್ಣೆ ಹೊರಡದೇ ಇರುವುದೇ ? ಆದರೆ ಮನೆಯ ಕೆಲಸವನ್ನು ಬದಿಗಿರಿಸಿ, ಇದನ್ನು ಕಣ್ಣೆರೆದು ನೋಡುವರಾರು ! ಇದು ರುಕ್ಷವಾದ ವಿಷಯವೆಂದು ಕಲಿತವರೂ ಇದನ್ನು ಹಳಿಯುತ್ತಾರೆ; ಏಕೆಂದರೆ, ಇದರಿಂದ ಹಣ ಪ್ರಾಪ್ತಿಯಿಲ್ಲ, ಗೌರವ ಪ್ರಾಪ್ತಿಯಿಲ್ಲ, ಅಧಿಕಾರ ಪ್ರಾಪ್ತಿಯಿಲ್ಲ. ಮೇಲಾಗಿ ಶಾಲೆಯಲ್ಲಿ ಈಗ ಕಲಿಯುವ ವಿದ್ಯೆಯು ಇಲ್ಲಿ ಬಹಳಮಟ್ಟಿಗೆ ಉಪಯೋಗವಾಗುವುದಿಲ್ಲ. ಇಷ್ಟೇ ಅಲ್ಲ; ಈಗ ನನಗೆ ಶಾಲೆಯಲ್ಲಿ ಸಿಕ್ಕುವ ವಿದ್ಯೆಯಿಂದ ಸಂಶೋಧನಕ್ಕೆ ದಾರಿಯಾವುದೆಂಬುದೂ ತಿಳಿಯುವುದಿಲ್ಲ. ಈ ಬಗೆಯಾಗಿ ಈ ವಿಷಯವು ರುಕ್ಷವಾಗಿರುವುದಲ್ಲದೆ ಕಠಿಣವೂ ಆಗಿದೆ. ಅನೇಕ ಸಾಮಗ್ರಿಗಳನ್ನು ಓದಿ, ಅಣಿಮಾಡಿಟ್ಟು ಕೊಂಡರೂ ಒಮ್ಮೊಮ್ಮೆ ಇತಿಹಾಸದ ಒಂದು ಕಣವು ಕೂಡ ಕಾಣದೆ ಹೋಗಬಹುದು! ಹೀಗೆ ಎಲ್ಲೆಡೆಯಲ್ಲಿಯೂ ನಿರಾಶೆಯೇ ಬಲಿತುಕೊಂಡಿರುವ ಇಂತಹ ಸ್ಥಿತಿಯಲ್ಲಿ ಕೇವಲ ಸ್ವದೇಶಭಕ್ತಿಯಿಂದ ಪ್ರೇರಿತರಾಗಿ, ಯಾವುದೊಂದು ಮೂರ್ತ ಪರಿಣಾಮವನ್ನು ಪಡೆಯುವವೆಂಬ ಆಶೆ ಹಿಡಿಯದೆ, ದುಡಿಯುವಂತವರೇ ಮೊದಲು ಮುಂದಾಳುಗಳಾಗಿ ಇತಿಹಾಸ ಮಂದಿರಕ್ಕೆ ತಳಹದಿಯನ್ನು ಹಾಕಲಿಕ್ಕೆ ಬೇಕು. ಅದರ ಮೇಲೆ ಕಟ್ಟಡವನ್ನೇರಿಸುವ ಕಾರ್ಯವನ್ನು ಮುಂದೆ ಯಾರಾದರೂ ಕೈಕೊಳ್ಳಬಹುದು. ಈ ತಳಹದಿಯನ್ನು ಹಾಕುವ ಕಾರ್ಯದ ಮಹತ್ವವು ಎಂದರೆ ಸಂಶೋಧನ ಕಾರ್ಯದ ಮಹತ್ವವು ಸಾಮಾನ್ಯ ಜನರಿಗೆ ಬೇಗನೆ ತಿಳಿಯುವುದಿಲ್ಲ ವಾದುದರಿಂದ, ಬಲ್ಲವರು ಅದನ್ನು ತಿಳಿಯ ಹೇಳಿ ಕಾರ್ಯಕ್ಕೆ ಪ್ರಾರಂಭಿಸಬೇಕು. ಈಗಿನ ಸಂಶೋಧಕರ ಅದೃಶ್ಯವಾದ ಅಸ್ತಿವಾರದ ಮೇಲೆಯೇ, ಮುಂದೆ ಭವ್ಯ ವಾಗಿ ಕಾಣಿಸುವ ಸುಂದರವಾದ ಮಂದಿರವು ಕಾಣತಕ್ಕುದಿರುತ್ತದೆ, ಸೇತು ಬಂಧನದ ಕಾರ್ಯವೇನು ಚಿಕ್ಕದೋ? ಆದರೆ ರಾಮಭಕ್ತಿಯಿಂದ ಪ್ರೇರಿತವಾದ ಅಳಿಲುಗಳು ಒಂದೊಂದೇ ಮಳಲ ಕಣವನ್ನು ತಂದುಹಾಕಿ ಆ ಪ್ರಚಂಡ ಕಾರ್ಯಕ್ಕೆ ನೆರವಾಗಲಿಲ್ಲವೆ? ಆ 'ಅಳಿಲು ಭಕ್ತಿ'ಯನ್ನು ನೆನಪಿಗೆ ತಂದು
೪೦
ಕರ್ನಾಟಕ ಗತವೈಭವ

ಕೊಂಡು, ಸಾವಿರಾರು ಇತಿಹಾಸ-ಸಂಶೋಧಕರು ನಿರಪೇಕ್ಷ ಬುದ್ಧಿಯಿಂದಲೂ ಯಾವುದೊಂದು ಮೂರ್ತ ಪರಿಣಾಮವನ್ನು ತಾವೇ ನೋಡಬೇಕೆಂದು ಅಪೇಕ್ಷಿಸದೆಯೂ ಹೆಣಗಿದರೆ ಮಾತ್ರ ಭೂತಕಾಲ ಮತ್ತು ವರ್ತಮಾನಕಾಲ ಇವುಗಳ ನಡುವಿನ ಈ ಸೇತುಬಂಧನವು ಸಿದ್ಧವಾಗಿ ಅದರ ಮೇಲಿಂದ ಭವಿಷ್ಯ ಕಾಲಕ್ಕೆ ಹೋಗುವುದಕ್ಕೂ ನಮಗೆ ಮಾರ್ಗವಾಗುವುದು.
ಸಾರಾಂಶ:- ಇತಿಹಾಸ-ಸಂಶೋಧನ ಕಾರ್ಯವು ಅವಸರದಿಂದಾಗತಕ್ಕ ಕಾರ್ಯವಲ್ಲ. ಇದು ಸಾವಧಾನದಿಂದಲೂ, ಪ್ರಯತ್ನ ಸಾತತ್ಯದಿಂದಲೂ, ಕ್ರಮದಿಂದಲೂ ಸಾಧ್ಯವಾಗತಕ್ಕ ಕಾರ್ಯವು. ಹಿಂದೆ ಹೇಳಿದಂತೆ, ಇಲ್ಲಿ ಅಧಿಕಾರ ಲೋಲುಪರಿಗೆ ಆಸ್ಪದವಿಲ್ಲ, ಹಣದಾಶೆಯವರಿಗೆ ಆಸರವಿಲ್ಲ, ಕೀರ್ತಿಕಾಂಕ್ಷಿಗಳಿಗೆ ಇಂಬಿಲ್ಲ; ಇಂಥವರು ಇತ್ತ ಇಣಿಕಿ ಸಹ ನೋಡಕೂಡದು. ಯಾರಿಗೆ ಕರುಳು ಕರಗಿಸಿದರೂ, ನೆತ್ತರೊಣಗಿದರೂ, ಮೈ ಮುರಿದರೂ ಹಿಂಜರಿಯದೆ ದುಡಿಯುವಷ್ಟು ಅಪಾರವಾದ ಉತ್ಸಾಹ ಶಕ್ತಿಯಿರುವುದೋ, ಯಾರು ರಾಷ್ಟ್ರದ ಸೇವೆ ಮಾಡುವವೆಂಬುದೊಂದೇ ಸಂತೋಷದಿಂದ ಕೈಹಾಕುವರೋ ಅವರು ಮಾತ್ರ ಈ ಕ್ಷೇತ್ರದಲ್ಲಿ ಕಾಲಿಡಲು ಅರ್ಹರು. ರಾಷ್ಟ್ರದಲ್ಲಿ ಈಗ ನವಜೀವನವು ಸಂಚರಿಸುತ್ತಿರುವುದರಿಂದ, ಇಂಥ ಸ್ವಾರ್ಥ ತ್ಯಾಗಿಗಳ ಸಂಖ್ಯೆಯು ಕರ್ನಾಟಕದೊಳಗೆ ನೂರ್ಮಡಿಯಾಗಿ ಬೇಗನೆ ಬೆಳೆಯಲೆಂದು ಹರಕೆಯಿಟ್ಟು ಮುಂದೆ ಸಾಗುವೆವು.