ಗದಾಪರ್ವ: ೦೪. ನಾಲ್ಕನೆಯ ಸಂಧಿ

<ಕುಮಾರವ್ಯಾಸ ಭಾರತ

ಗದಾ ಪರ್ವ-ನಾಲ್ಕನೆಯ ಸಂಧಿ ಸಂಪಾದಿಸಿ

ಸೂ. ರಾಯಧರ್ಮಜ ಯಮಳ ಫಲುಗುಣ
ವಾಯುಸುತರರಸಿದರು ಕೌರವ
ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ|| [೧]

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ ೧

ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರಭೂಪತಿಯ
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ನುಳಿದನೇ ಹದನಾವುದೆಂದರು ಭಟರು ಸಂಜಯನ ೨

ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರ ತ್ರಿಗರ್ತರನು ಸೌಬಲ ಸುಶರ‍್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ ೩

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಕ್ಷಣ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ ೪

ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ ೫

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ ೬

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ ೭

ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರಿಪರಿಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು ೮

ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ ೯

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ ೧೦

ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ಧರದ ದಂಡಿಗೆ ಬಂದವರಮನೆಗೆ ೧೧

ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಕ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಶಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ ೧೨

ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ
ವರದುಕೂಲದ ಪಟ್ಟಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು ೧೩

ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಲೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ ೧೪

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ ೧೫

ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳಿ
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಘದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ ೧೬

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ ೧೭

ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ ೧೮

ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರಪರಿಜನದ ೧೯
ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ ೨೦

ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ೨೧

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ ೨೨

ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ ೨೩

ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ ೨೪

ಜಲಧಿಯಲಿ ಫಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡಿಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ ೨೫

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದಾರಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ ೨೬

ಬೀಳುಕೊಂಡೆನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಭೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ ೨೭

ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ ೨೮

ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ವರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸುನು ಮೇಲಣ ಹದನ ಹೇಳೆಂದ ೨೯

ಅರಸ ಕೇಳ್ ಕೃಪ ಗುರುಜ ಕೃತವ
ರ‍್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ ೩೦

ಬದುಕಿ ಬಂದಿರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ ೩೧

ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ‍್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ ೩೨

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರ ಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ ೩೩

ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ ೩೪

ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ ೩೫

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ ೩೬

ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯ್ತೇಸ ಪತಿಕರಿಸಿದೆನು ಕರ್ಣನನಂದು ನೀನರಿಯೆ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ ೩೭

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ‍್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ ೩೮

ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರೆತೆಯಿಲ್ಲೆಂದ ೩೯

ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹನಿಸ್ತನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರ ವಿದೆಂದನಶ್ವತ್ಥಾಮನವನಿಪನ ೪೦

ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ ೪೧

ಅರಸ ಕೇಳೈ ದೈವಯೋಗವ
ಪರಿಹರಿಸಲಾರಳವು ಪವನಜ
ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ
ಬರುತ ನೀರಡಿಸಿದರು ಕಂಡರು
ಸರಸಿಯನು ನೀರ್ಗುಡಿಯಲೈತಂ
ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ ೪೨

ಚರಣ ವಚನವ ತೊಳೆದು ನಿರ‍್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು ೪೩

ಆಯಿತಿದು ನೃಪರಾಜಕಾರ‍್ಯದ
ದಾಯಕಿದು ಧುರಪಥವಲಾ ಕುರು
ರಾಯಗುಪ್ತನಿವಾಸವರ್ಥಪ್ರದವಲಾ ನಮಗೆ
ಕಾಯಿದಿರು ಕಂಡೌ ಸರೋಜದ
ತಾಯಿ ಸರಸಿಯೆನುತ್ತ ಹೋದರು
ವಾಯುತನುಜನ ಬೇಂಟೆಕಾರರು ನಗುತ ಪಾಳೆಯಕೆ ೪೪

ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ ೪೫

ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವೃಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ ೪೬

ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೂಡರಸಿದರು ಚಾರರು ಕಳನ ಚೌಕದಲಿ ೪೭

ಹರಿಹರಿದು ಕೂಡರಸಿ ದೂತರು
ಮರಳಿ ಬಂದರು ದುಗುಡಭರದಲಿ
ಬೆರಳ ಮೂಗಿನಲಿದ್ದುದವನಿಪಸಹಿತ ಪರಿವಾರ
ಇರುಳು ಬೇಗೆಯ ಚಕ್ರವಾಕಕೆ
ತರಣಿ ತಲೆದೋರಿದವೊಲಟವೀ
ಚರರಿಗರಸಗೆ ಭಾವಭಾವ ವ್ಯಕ್ತವಾಯ್ತೆಂದ ೪೮

ತಂದ ಮಾಂಸದ ಕಂಬಿಗಳನು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ ೪೯

ರಣಮುಖದೊಳೇಕಾದಶಾಕ್ಷೋ
ಹಿಣಿಯ ಗೆಲಿದುದು ವಿಫಲವಾದುದು
ಜುಣುಗಿದರಿನೃಪನಾವ ಜವನಿಕೆ ಮರೆಯೊಳಡಗಿದನೊ
ತೃಣವನದೊಳಿರುಬಿನಲಿ ಮೆಳೆಸಂ
ದಣಿಗಳಲಿ ಮರಗಾಡಿನಲಿ ಮೃಗ
ಗಣದ ನೆಲೆಯಲಿ ಕಾಣಿರಲೆ ನೀವೆಂದನಾ ಭೀಮ ೫೦

ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ ೫೧

ಜೀಯ ಕುರುಪತಿ ಗುಪ್ತದಲಿ ದ್ವೈ
ಪಾಯನನ ಸರಸಿಯಲಿ ಸಮರವಿ
ಧಾಯಕದ ವಾರ್ತೆಯನು ತನ್ನವರೊಡನೆ ತೀರದಲಿ
ಬಾಯಿಗೇಳಿಸುತಿರ್ದ ನಾವ್ ತ
ತ್ತೋಯಪಾನಕೆ ತಿರುಗಿ ಕಂಡೆವು
ರಾಯನಂಘ್ರಿಗಳಾಣೆಯೆಂದರು ಶಬರರನಿಲಜಗೆ ೫೨

ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಳ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಾಯನರಮನೆಗೆ ೫೩

ಗುಡಿಯ ಕಟ್ಟಿಸು ಜೀಯ ಚರರಿಗೆ
ಕೊಡು ಪಸಾಯವನರಿನೃಪನ ತಲೆ
ವಿಡಿದರಾ ದ್ವೈಪಾಯನ ಸರೋವರದ ಮಧ್ಯದಲಿ
ಅಡಗಿದನು ತಡಿವಿಡಿದು ನಿಂದವ
ರೊಡನೆ ಮಾತಾಡಿದನು ಗಡ ನಿ
ಮ್ಮಡಿಯೆ ಬಲ್ಲಿರಿ ರಾಜಕಾರ‍್ಯವನೆಂದನಾ ಭೀಮ ೫೪

ಕರೆ ಮುಕುಂದನನರ್ಜುನನ ಸಂ
ವರಣೆ ಬರಲಿ ಶಿಖಂಡಿ ಪಾಂಚಾ
ಲರಿಗೆ ನೇಮಿಸು ಕರಸು ಧೃಷ್ಟದ್ಯುಮ್ನ ಸೃಂಜಯರ
ಕರಿ ತುರಗ ರಥವಿಶ್ರಮವನಿಂ
ದಿರುಳಿನಲಿ ನೂಕುವುದು ಹೊರವಡಿ
ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ ೫೫

ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ
ಇವರು ಕೆಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿಸರ‍್ವಗತನಹುದೆಂದನಾ ದ್ರೌಣಿ ೫೬

ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ ೫೭

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹೆನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ ೫೮

ಉರವಣಿಸಿತರಿಸೇನೆ ಮುತ್ತಿತು
ಸರಸಿಯನು ವೇಢೆಯಲಿ ಗಿಡುಮೆಳೆ
ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ
ನರರ ಗರ್ಜನೆ ವಾದ್ಯರವ ಕರಿ
ತುರಗ ರಥ ನಿರ್ಘೋಷ ಪರ‍್ವತ (೫೯
ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ ೬೦

ನೋಡಿ ಸಂಪಾದಿಸಿ

ಸಂಧಿಗಳು ಸಂಪಾದಿಸಿ

೧೦ ೧೧ ೧೨ ೧೩

ಪರ್ವಗಳು ಸಂಪಾದಿಸಿ

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.