ಜೈಮಿನಿ ಭಾರತ/ಇಪ್ಪತ್ತಾರನೆಯ ಸಂಧಿ

ಇಪ್ಪತ್ತಾರನೆಯ ಸಂಧಿ

ಸಂಪಾದಿಸಿ

ಪದ್ಯ:-:ಸೂಚನೆ:

ಸಂಪಾದಿಸಿ

ಸೂಚನೆ: ದ್ವಿಜನಾಗಿಬಂದು ಬೇಡಲ್ ಮಯೂರಧ್ವಜಂ |
ನಿಜ ಶರೀರದೊಳರ್ಧಮಂ ಕೊಯ್ದು ಕೊಟ್ಟು ಪಂ |
ಕಜ ಪತ್ರ ನೇತ್ರನಂ ಮೆಚ್ಚಿಸಿ ಹಯದ್ವಯಮನಿತ್ತು ಮಖಮಂಮಾಣ್ದನು ||

ಪದವಿಭಾಗ-ಅರ್ಥ:
ಸೂಚನೆ : ದ್ವಿಜನಾಗಿ ಬಂದು ಬೇಡಲ್ ಮಯೂರಧ್ವಜಂ ನಿಜ ಶರೀರದೊಳ್ ಅರ್ಧಮಂ ಕೊಯ್ದು ಕೊಟ್ಟು ಪಂಕಜ ಪತ್ರ ನೇತ್ರನಂ ಮೆಚ್ಚಿಸಿ ಹಯದ್ವಯಮನು ಇತ್ತು ಮಖಮಂ ಮಾಣ್ದನು=[ಕೃಷ್ಣನು ಬ್ರಾಹ್ಮಣ ರೂಪದಲ್ಲಿ ಬಂದು ಬೇಡಲು ಮಯೂರಧ್ವಜನು ತನ್ನ ಶರೀರದಲ್ಲಿ ಅರ್ಧವನ್ನು ಕೊಯ್ದು ಕೊಟ್ಟು ಪಂಕಜಪತ್ರ ನೇತ್ರನಾದ ಕೃಷ್ಣನನ್ನು ಮೆಚ್ಚಿಸಿ ಎರಡೂ ಕುದುರೆಗಳನ್ನು ಕೃಷ್ಣ ಪಾರ್ಥರಿಗೆ ಕೊಟ್ಟು ಯಜ್ನವನ್ನು ಮುಕ್ತಾಯ ಮಾಡಿದನು. (ಯಜ್ಞವನ್ನು ಅಲ್ಲಿಗೆ ನಿಲ್ಲಿಸಿದನು ]
  • ತಾತ್ಪರ್ಯ:ಕೃಷ್ಣನು ಬ್ರಾಹ್ಮಣ ರೂಪದಲ್ಲಿ ಬಂದು ಬೇಡಲು ಮಯೂರಧ್ವಜನು ತನ್ನ ಶರೀರದಲ್ಲಿ ಅರ್ಧವನ್ನು ಕೊಯ್ದು ಕೊಟ್ಟು ಪಂಕಜಪತ್ರ ನೇತ್ರನಾದ ಕೃಷ್ಣನನ್ನು ಮೆಚ್ಚಿಸಿ ಎರಡೂ ಕುದುರೆಗಳನ್ನು ಕೃಷ್ಣ ಪಾರ್ಥರಿಗೆ ಕೊಟ್ಟು ಯಜ್ನವನ್ನು ಮುಕ್ತಾಯ ಮಾಡಿದನು. (ಯಜ್ಞವನ್ನು ಅಲ್ಲಿಗೆ ನಿಲ್ಲಿಸಿದನು).
  • (ಪದ್ಯ-ಸೂಚನೆ) XXIV-II

ಪದ್ಯ:-::

ಸಂಪಾದಿಸಿ

ಭೂರಮಣ ಕೇಳ್ ಕೃಷ್ಣಕಾಂಕ್ಷಿಯಾಗಿರ್ದಂ ಮ |
ಯೂರಧ್ವಜ ಕ್ಷಿತೀಶ್ವರನಿತ್ತಲತ್ತ ರಣ |
ಧಾರಿಣಿಯೊಳಸುರಾರಿಗೆಚ್ಚರಿಕೆ ತಲೆದೋರಿತರ್ಜುನಂಗರಿವಾದುದು ||
ವೀರಭಟರೆಲ್ಲರ್ಗೆ ಮೂರ್ಛೆ ತಿಳಿದುದು ಬಳಿಕ |
ವಾರಿಜಾಕ್ಷಂ ಸಕಲ ಸೇನೆಯಂ ಸಂತೈಸಿ |
ಚೋರಬುದ್ಧಿಯೊಳೊಂದುಪಾಯಮಂ ಕಂಡಾ ಧನಂಜಯಂಗಿಂತೆಂದನು ||1||

ಪದವಿಭಾಗ-ಅರ್ಥ:
ಭೂರಮಣ ಕೇಳ್ ಕೃಷ್ಣ ಕಾಂಕ್ಷಿಯಾಗಿರ್ದಂ (ಕಾಂಕ್ಷಿ-ಆಸೆ) ಮಯೂರಧ್ವಜ ಕ್ಷಿತೀಶ್ವರನು ಇತ್ತಲು; ಅತ್ತ ರಣಧಾರಿಣಿಯೊಳು(ಧಾರಿಣಿ-ಭೂಮಿ) ಅಸುರಾರಿಗೆ ಎಚ್ಚರಿಕೆ ತಲೆದೋರಿತು ಅರ್ಜುನಂಗೆ ಅರಿವಾದುದು=[ಭೂರಮಣ ಜನಮೇಜಯನೇ ಕೇಳು, ಮಯೂರಧ್ವಜ ರಾಜನು ಇತ್ತಲು ಕೃಷ್ಣನನ್ನು ನೋಡಲು ಆಸೆ ಹೊಂದದ್ದನು; ಅತ್ತ ರಣಭೂಮಿಯಲ್ಲಿ ಕೃಷ್ಣನಿಗೆ ಮೈಮರೆವಿನಿಂದ ಎಚ್ಚರ ವಾಯಿತು; ಅರ್ಜುನನಿಗೂ ಅರಿವು ಬಂತು;];; ವೀರಭಟರೆಲ್ಲರ್ಗೆ ಮೂರ್ಛೆ ತಿಳಿದುದು ಬಳಿಕ ವಾರಿಜಾಕ್ಷಂ ಸಕಲ ಸೇನೆಯಂ ಸಂತೈಸಿ ಚೋರಬುದ್ಧಿಯೊಳು ಒಂದುಪಾಯಮಂ ಕಂಡು ಆ ಧನಂಜಯಂಗೆ ಇಂತೆಂದನು=[ವೀರಭಟರೆಲ್ಲರೂ ಮೂರ್ಛೆ ತಿಳಿದು ಎದ್ದರು; ಬಳಿಕ ಕೃಷ್ಣನು ಸಕಲ ಸೇನೆಯನ್ನೂ ಸಂತೈಸಿ, ಚೋರಬುದ್ಧಿಯಲ್ಲಿ/ ಹುಸಿನಾಟಕವಾಡುವ ಒಂದು ಉಪಾಯವನ್ನು ಕಂಡುಕೊಂಡನು. ನಂತರ ಆ ಧನಂಜಯನಿಗೆ ಹೀಗೆಂದನು].
  • ತಾತ್ಪರ್ಯ:ಭೂರಮಣ ಜನಮೇಜಯನೇ ಕೇಳು, ಮಯೂರಧ್ವಜ ರಾಜನು ಇತ್ತಲು ಕೃಷ್ಣನನ್ನು ನೋಡಲು ಆಸೆ ಹೊಂದದ್ದನು; ಅತ್ತ ರಣಭೂಮಿಯಲ್ಲಿ ಕೃಷ್ಣನಿಗೆ ಮೈಮರೆವಿನಿಂದ ಎಚ್ಚರವಾಯಿತು; ಅರ್ಜುನನಿಗೂ ಅರಿವು ಬಂತು; ವೀರಭಟರೆಲ್ಲರೂ ಮೂರ್ಛೆ ತಿಳಿದು ಎದ್ದರು; ಬಳಿಕ ಕೃಷ್ಣನು ಸಕಲ ಸೇನೆಯನ್ನೂ ಸಂತೈಸಿ, ಚೋರಬುದ್ಧಿಯಲ್ಲಿ/ ಹುಸಿನಾಟಕವಾಡುವ ಒಂದು ಉಪಾಯವನ್ನು ಕಂಡುಕೊಂಡನು. ನಂತರ ಆ ಧನಂಜಯನಿಗೆ ಹೀಗೆಂದನು.
  • (ಪದ್ಯ-೧)

ಪದ್ಯ:-::

ಸಂಪಾದಿಸಿ

ನೋಡಿದೈ ಕುಂತೀಕುಮಾರ ತಾಮ್ರಧ್ವಜಂ |
ಮಾಡಿದ ವಿಘಾತಿಯಂ ನಮ್ಮೆಲ್ಲರಂ ಧುರದೊ |
ಳೀಡಿರಿದುರುಳ್ಚಿ ಹಯಪುಂ ಕೊಂಡು ರತ್ನಪುರಿಗೈದಿದಂ ಪಿತನ ಬಳಿಗೆ ||
ಆಡಲೇನಹುದಿನ್ನು ಸೇನೆ ಮೆಲ್ಲನೆ ಪಿಂತೆ |
ಬೀಡಾಗಿ ನಡೆತರಲಿ ಮುಂದೆ ಪೋದಪೆನೆನ್ನ |
ಕೂಡೆ ಬಾ ನಿನಗೊಂದುಪಾಯಮಂ ತೋರಿಸುವೆನೆಂದನಸುರಾರಿ ನಗುತೆ ||2||

ಪದವಿಭಾಗ-ಅರ್ಥ:
ನೋಡಿದೈ ಕುಂತೀಕುಮಾರ ತಾಮ್ರಧ್ವಜಂ ಮಾಡಿದ ವಿಘಾತಿಯಮ್ ನಮ್ಮೆಲ್ಲರಂ ಧುರದೊಳು ಈಡಿರಿದು(ಈಡು + ಇರಿದು (ಗುರಿ,ಒತ್ತೆ ಮಾಡಿ+ಹೊಡಿ) ಉರುಳ್ಚಿ ಹಯಪುಂ ಕೊಂಡು ರತ್ನಪುರಿಗೆ ಐದಿದಂ ಪಿತನ ಬಳಿಗೆ=[ಕುಂತೀಕುಮಾರ ಅರ್ಜುನಾ! ನೋಡಿದೆಯಾ ತಾಮ್ರಧ್ವಜನು ಮಾಡಿದ ಅನಾಹುತವನ್ನು! ನಮ್ಮೆಲ್ಲರನ್ನೂ ಯುದ್ಧದಲ್ಲಿ ಒತ್ತೆಮಾಡಿ ಹೊಡೆದು ಕೆಡವಿ, ಕುದುರೆಯನ್ನು ತೆಗೆದುಕೊಂಡು ರತ್ನಪುರಿಗೆ ತಂದೆಯಬಳಿಗೆ ಹೋದನು.];; ಆಡಲೇನಹುದಿನ್ನು ಸೇನೆ ಮೆಲ್ಲನೆ ಪಿಂತೆ ಬೀಡಾಗಿ ನಡೆತರಲಿ ಮುಂದೆ ಪೋದಪೆನು ಎನ್ನ ಕೂಡೆ ಬಾ ನಿನಗೊಂದು ಉಪಾಯಮಂ ತೋರಿಸುವೆನು ಎಂದನು ಅಸುರಾರಿ ನಗುತೆ=[ಇನ್ನು ಮಾತನಾಡಿ ಏನು ಪ್ರಯೋಜನ? ನಮ್ಮ ಸೇನೆ ಬೀಡು ಬಿಟ್ಟಂತೆ ಮೆಲ್ಲನೆ ಹಿಂದೆ ನಡೆದುಬರಲಿ, ಮುಂದೆ ನಾನು ಪೋಗುವೆನು, ನನ್ನ ಜೊತೆ ಬಾ, ನಿನಗೊಂದು ಉಪಾಯವನ್ನು ತೋರಿಸುವೆನು,' ಎಂದು ಕೃಷ್ಣನು ನಗುತ್ತಾ ಹೇಳಿದನು.]
  • ತಾತ್ಪರ್ಯ:ಕುಂತೀಕುಮಾರ ಅರ್ಜುನಾ! ನೋಡಿದೆಯಾ ತಾಮ್ರಧ್ವಜನು ಮಾಡಿದ ಅನಾಹುತವನ್ನು! ನಮ್ಮೆಲ್ಲರನ್ನೂ ಯುದ್ಧದಲ್ಲಿ ಒತ್ತೆಮಾಡಿ ಹೊಡೆದು ಕೆಡವಿ, ಕುದುರೆಯನ್ನು ತೆಗೆದುಕೊಂಡು ರತ್ನಪುರಿಗೆ ತಂದೆಯಬಳಿಗೆ ಹೋದನು. ಇನ್ನು ಮಾತನಾಡಿ ಏನು ಪ್ರಯೋಜನ? ನಮ್ಮ ಸೇನೆ ಬೀಡು ಬಿಟ್ಟಂತೆ ಮೆಲ್ಲನೆ ಹಿಂದೆ ನಡೆದುಬರಲಿ, ಮುಂದೆ ನಾನು ಪೋಗುವೆನು, ನನ್ನ ಜೊತೆ ಬಾ, ನಿನಗೊಂದು ಉಪಾಯವನ್ನು ತೋರಿಸುವೆನು,' ಎಂದು ಕೃಷ್ಣನು ನಗುತ್ತಾ ಹೇಳಿದನು.]
  • (ಪದ್ಯ-೨)

ಪದ್ಯ:-::

ಸಂಪಾದಿಸಿ

ಆ ಹರಿಯ ನುಡಿಗೇಳ್ದು ಫಲುಗುಣಂ ಸೇನಾಸ |
ಮೂಹಮಂ ಪಿಂದುಳುಪಿ ರತ್ನನಗರಿಗೆ ಪಕ್ಷಿ ||
ವಾಹನನಕೂಡೆ ನಡೆತಂದನವರಿರ್ವರುಂ ಮಾತಾಡಿಕೊಂಡು ಬಳಿಕ ||
ರೂಹು ಗಾಣಿಸದಂತೆ ವಿಪ್ರವೇಷವನಾಂತು |
ದೇಹಿಕರ ತೆರದಿಂದೆ ವೃದ್ಧನಾದಂ ಶೌರಿ |
ಮೋಹದಿಂ ತನಗೆ ಕೈಗುಡುವ ಬಾಲಕ ಶಿಷ್ಯನಾದನಮರೇಂದ್ರಸೂನು ||3||

ಪದವಿಭಾಗ-ಅರ್ಥ:
ಆ ಹರಿಯ ನುಡಿಗೇಳ್ದು ಫಲುಗುಣಂ ಸೇನಾಸಮೂಹಮಂ ಪಿಂದುಳುಪಿ ರತ್ನನಗರಿಗೆ ಪಕ್ಷಿ ವಾಹನನಕೂಡೆ ನಡೆತಂದನು ಅವರಿರ್ವರುಂ ಮಾತಾಡಿಕೊಂಡು ಬಳಿಕ=[ಕೃಷ್ಣನ ಆ ಮಾತುಗಳನ್ನು ಫಲ್ಗುಣನು ಕೇಳಿ ಸೇನಾಸಮೂಹವನ್ನು ಹಿಂದೆಬಿಟ್ಟು, ರತ್ನನಗರಿಗೆ ಕೃಷ್ಣಮ ಜೊತೆ ನಡೆದುಬಂದನು. ಅವರಿಬ್ಬರೂ ಮಾತಾಡಿಕೊಂಡು, ನಂತರ];; ರೂಹು ಗಾಣಿಸದಂತೆ ವಿಪ್ರವೇಷವನು ಆಂತು ದೇಹಿಕರ (ದೇಹಿಕ- ಬೇಡುವವ} ತೆರದಿಂದೆ ವೃದ್ಧನಾದಂ ಶೌರಿ ಮೋಹದಿಂ(ಮಾಯೆಯಿಂದ, ಮೋಹ: ಮಾಯೆ, ಸ್ನೇಹ, ಪ್ರೀತಿ ) ತನಗೆ ಕೈಗುಡುವ ಬಾಲಕ ಶಿಷ್ಯನಾದನು ಅಮರೇಂದ್ರಸೂನು=[ಗುರುತು ಕಾಣದಂತೆ ಬ್ರಾಹ್ಮಣರವೇಶವನ್ನು ತಳೆದರು. ಸಾಮಾನ್ಯ ದೀನರಂತೆ, ಮಾಯೆಯಿಂದ ಕೃಷ್ಣನು ವೃದ್ಧ ಬ್ರಾಹ್ಮಣನಾದನು, ತನಗೆ ಕೈಹಿಡಿದು ನಡೆಸುವ ಬಾಲಕ ಶಿಷ್ಯನಾದನು ಅರ್ಜುನ.]
  • ತಾತ್ಪರ್ಯ:ಕೃಷ್ಣನ ಆ ಮಾತುಗಳನ್ನು ಫಲ್ಗುಣನು ಕೇಳಿ ಸೇನಾಸಮೂಹವನ್ನು ಹಿಂದೆಬಿಟ್ಟು, ರತ್ನನಗರಿಗೆ ಕೃಷ್ಣಮ ಜೊತೆ ನಡೆದುಬಂದನು. ಅವರಿಬ್ಬರೂ ಮಾತಾಡಿಕೊಂಡು, ನಂತರ ಗುರುತು ಕಾಣದಂತೆ ಬ್ರಾಹ್ಮಣ ವೇಷವನ್ನು ತಳೆದರು. ಮಾಯೆಯಿಂದ ಕೃಷ್ಣನು ಸಾಮಾನ್ಯ ದೀನರಂತೆ ವೃದ್ಧ ಬ್ರಾಹ್ಮಣನಾದನು, ತನಗೆ ಕೈಹಿಡಿದು ನಡೆಸುವ ಬಾಲಕ ಶಿಷ್ಯನಾದನು ಅರ್ಜುನ.(ಮೋಹದಿಂ:ಪ್ರೀತಿಯಿಂದ ತನಗೆ ಸಹಾಯ ಮಾಡುವ ಕೈಹಿಡಿದು ನಡೆಸುವ ಬಾಲಕ ಶಿಷ್ಯನಾದನು ಅರ್ಜುನ.)
  • (ಪದ್ಯ-೩)

ಪದ್ಯ:-::

ಸಂಪಾದಿಸಿ

ಬಟ್ಟೆ ವಿಡಿದವರಿರ್ವರುಂ ಮಯೂರಧ್ವಜನ |
ಪಟ್ಟಣಕೆ ನಡೆತಂದರನ್ನೆಗಂ ದೆಸೆದೆಸೆಯೊ |
ಳಿಟ್ಟಣಿಸಿ ಲೋಕಮಂ ಕಂಗೆಡಿಸುವಂಧಕಾರಂಗಳಂ ನಿಲಲೀಯದೆ |
ಅಟ್ಟಿ ಹರಿಹರಿದುರೆ ಬಳಲ್ದು ಕಾಹುರದೆ ಕಂ |
ಗೆಟ್ಟು ಕಳೆಗುಂದಿ ಮೆಲ್ಲನೆ ನಭೋಮಾರ್ಗಮಂ |
ಬಿಟ್ಟು ಪಶ್ಚಿಮಗಿರಿಯ ತಪ್ಪಲಂ ಸಾರ್ದನೆನೆ ರವಿ ಪಡುಗಡೆಯೊಳೆಸೆದನು ||4||

ಪದವಿಭಾಗ-ಅರ್ಥ:
ಬಟ್ಟೆ (ದಾರಿ) ವಿಡಿದು ಇವರು ಇರ್ವರುಂ ಮಯೂರಧ್ವಜನ ಪಟ್ಟಣಕೆ ನಡೆತಂದರು=[ದಾರಿ ಹಿಡಿದು ಇವರು ಇಬ್ಬರೂ ಮಯೂರಧ್ವಜನ ಪಟ್ಟಣಕೆ ನಡೆದು ಬಂದರು.];; ಅನ್ನೆಗಂ ದೆಸೆದೆಸೆಯೊಳು ಇಟ್ಟಣಿಸಿ ಲೋಕಮಂ ಕಂಗೆಡಿಸುವ ಅಂಧಕಾರಂಗಳಂ ನಿಲಲು ಈಯದೆ ಅಟ್ಟಿ ಹರಿಹರಿದುರೆ ಬಳಲ್ದು ಕಾಹುರದೆ (ತತ್ತರಿಸಿ) ಕಂಗೆಟ್ಟು ಕಳೆಗುಂದಿ=[ಅಷ್ಟುಹೊತ್ತಿಗೆ ದಿಕ್ಕು ದಿಕ್ಕುಗಳಲ್ಲಿ, ದಟ್ಟವಾಗಿ ಲೋಕವನ್ನು ಕಂಗೆಡಿಸುವ ಕತ್ತಲೆಯು ನಿಲ್ಲಲು ಅವಕಾಶ ಕೊಡದೆ ಓಡಿಸಿ ಎಲ್ಲಾಕಡೆ ಬಹಳ ಬೆಳಕು ಹರಿದು ಹರಿದು ಬಳಲಿ/ಆಯಾಸಪಟ್ಟು, ತತ್ತರಿಸಿ ಕಂಗೆಟ್ಟು ಕಳೆಗುಂದಿ];; ಮೆಲ್ಲನೆ ನಭೋಮಾರ್ಗಮಂ ಬಿಟ್ಟು ಪಶ್ಚಿಮಗಿರಿಯ ತಪ್ಪಲಂ ಸಾರ್ದನೆನೆ ರವಿ ಪಡುಗಡೆಯೊಳೆಸೆದನು=[ಮೆಲ್ಲನೆ ಆಕಾಶಮಾರ್ಗವನ್ನು ಬಿಟ್ಟು ಪಶ್ಚಿಮಗಿರಿಯ ತಪ್ಪಲನ್ನು ಸೇರಿದನೋ ಎನ್ನುವಂತೆ ಸೂರ್ಯನು ಪಶ್ಚಿಮದಲ್ಲಿ ಪ್ರಕಾಶಿಸಿದನು.]
  • ತಾತ್ಪರ್ಯ:ದಾರಿ ಹಿಡಿದು ಇವರು ಇಬ್ಬರೂ ಮಯೂರಧ್ವಜನ ಪಟ್ಟಣಕೆ ನಡೆದು ಬಂದರು. ಅಷ್ಟುಹೊತ್ತಿಗೆ (ಸಂಜೆಯಾಯಿತು; ಅದು ಹೇಗಿತ್ತೆಂದರೆ:) ದಿಕ್ಕು ದಿಕ್ಕುಗಳಲ್ಲಿ, ದಟ್ಟವಾಗಿ ಲೋಕವನ್ನು ಕಂಗೆಡಿಸುವ ಕತ್ತಲೆಯು ನಿಲ್ಲಲು ಅವಕಾಶ ಕೊಡದೆ ಓಡಿಸಿ ಎಲ್ಲಾಕಡೆ ಬಹಳ ಬೆಳಕು ಹರಿದು ಹರಿದು ಬಳಲಿ/ಆಯಾಸಪಟ್ಟು, ತತ್ತರಿಸಿ ಕಂಗೆಟ್ಟು ಕಳೆಗುಂದಿ, ಮೆಲ್ಲನೆ ಆಕಾಶಮಾರ್ಗವನ್ನು ಬಿಟ್ಟು ಪಶ್ಚಿಮಗಿರಿಯ ತಪ್ಪಲನ್ನು ಸೇರಿದನೋ ಎನ್ನುವಂತೆ ಸೂರ್ಯನು ಪಶ್ಚಿಮದಲ್ಲಿ ಪ್ರಕಾಶಿಸಿದನು.
  • (ಪದ್ಯ-೪)

ಪದ್ಯ:-::

ಸಂಪಾದಿಸಿ

ಮೆಲ್ಲಮೆಲ್ಲನೆ ತರಣಿ ಮುಳುಗಿದಂ ಪಡುಗಡಲೊ |
ಳಲ್ಲಿಗಲ್ಲಿಗೆ ಮೂಡಿದುವು ಸಂಜೆದಾರಗೆ |
ಳೆಲ್ಲಿಲ್ಲಿಯುಂ ತಮಂ ತುಂಬಿದುದು ತುಂಬಿಗಳೊಡನೆ ಮುಗಿದುವಂಬುಜಾಳಿ ||
ನಲ್ಲನಲ್ಲರ ನೇಹ ಗಲಹದೊಳ್ ಮುನಿದು ತರಿ |
ಗೊಲ್ಲದೊಲ್ಲದ ಕಾಂತೆಯರ ಮನಂ ತರಹರಿಸಿ |
ನಿಲ್ಲನಿಲ್ಲದವೊಲಂಗಜ ನುರುಬತೊಡಗಿದಂ ಮರುಗಿದುವು ಕೋಕೆಂಗಳು ||5||

ಪದವಿಭಾಗ-ಅರ್ಥ:
ಮೆಲ್ಲಮೆಲ್ಲನೆ ತರಣಿ ಮುಳುಗಿದಂ ಪಡುಗಡಲೊಳು ಅಲ್ಲಿಗೆ ಅಲ್ಲಿಗೆ ಮೂಡಿದುವು ಸಂಜೆದಾರಗೆಳು=[ಮೆಲ್ಲಮೆಲ್ಲನೆ ಸೂರ್ಯನು ಮುಳುಗಿದನು ಪಶ್ಚಿಮ ಸಮುದ್ರದಲ್ಲಿ. ಆಕಾಶದಲ್ಲಿ ಅಲ್ಲಿ ಅಲ್ಲಿ ಸಂಜೆಯ ತಾರಕೆಗಳು (ತಾರೆ) ಮೂಡಿದುವು];; ಎಲ್ಲಿಲ್ಲಿಯುಂ ತಮಂ ತುಂಬಿದುದು ತುಂಬಿಗಳು ಒಡನೆ ಮುಗಿದುವು ಅಂಬುಜ ಆಳಿ (ಕಮಲ ಸಮೂಹ)=[ಎಲ್ಲೆಡೆಯಲ್ಲಿಯೂ ಕತ್ತಲೆ ಆವರಿಸಿತು. ತುಂಬಿಗಳೊಡನೆ ಮುಚ್ಚಿಕೊಂಡವು ಕಮಲಗಳು];; ನಲ್ಲನಲ್ಲರ ನೇಹಗಲಹದೊಳ್ (ನೇಹ +ಕಲಹದೊಳು) ಮುನಿದು ರತಿಗೆ ಒಲ್ಲದ ಒಲ್ಲದ ಕಾಂತೆಯರ ಮನಂ ತರಹರಿಸಿ ನಿಲ್ಲನಿಲ್ಲದವೊಲು ಅಂಗಜನು ಉರುಬತೊಡಗಿದಂ=[ತಮ್ಮ ತಮ್ಮ,ನಲ್ಲರು ಮತ್ತು ನಲ್ಲರ ಪ್ರೇಮ ಕಲಹದಲ್ಲಿ (ನೇಹ +ಕಲಹದೊಳು) ಸಿಟ್ಟಿನಿಂದ ರತಿಕ್ರೀಡೆಗೆ ಒಲ್ಲದ ಒಲ್ಲದ ಕಾಂತೆಯರ ಮನಸ್ಸು ಕತ್ತಲಾದಂತೆ ಕಾಮಬಾದೆಯಿಂದ ಕಳವಳಗೊಂಡು, ನಿಂತಲ್ಲಿ ನಿಲ್ಲದಂತೆ ಮನ್ಮಥನು ಕಾಡತೊಡಗಿದನು.];; = ಮರುಗಿದುವು ಕೋಕೆಂಗಳು =[ಬಿಸಿಲನ್ನು ಬಯಸುವ ಕೋಗಿಲೆಗಳು ಕತ್ತಲಾದುದಕ್ಕೆ ಮರುಗಿದುವು.]
  • ತಾತ್ಪರ್ಯ:ಮೆಲ್ಲಮೆಲ್ಲನೆ ಸೂರ್ಯನು ಪಶ್ಚಿಮ ಸಮುದ್ರದಲ್ಲಿ ಮುಳುಗಿದನು. ಆಕಾಶದಲ್ಲಿ ಅಲ್ಲಿ ಅಲ್ಲಿ ಸಂಜೆಯ ತಾರಕೆಗಳು (ತಾರೆ) ಮೂಡಿದುವು. ಎಲ್ಲೆಡೆಯಲ್ಲಿಯೂ ಕತ್ತಲೆ ಆವರಿಸಿತು. ತುಂಬಿಗಳೊಡನೆ ಮುಚ್ಚಿಕೊಂಡವು ಕಮಲಗಳು. ತಮ್ಮ ತಮ್ಮ,ನಲ್ಲರು ಮತ್ತು ನಲ್ಲರ ಪ್ರೇಮ ಕಲಹದಲ್ಲಿ (ನೇಹ +ಕಲಹದೊಳು) ಸಿಟ್ಟಿನಿಂದ ರತಿಕ್ರೀಡೆಗೆ ಒಲ್ಲದ ಒಲ್ಲದ ಕಾಂತೆಯರ ಮನಸ್ಸು ಕತ್ತಲಾದಂತೆ ಕಾಮಬಾದೆಯಿಂದ ಕಳವಳಗೊಂಡು, ನಿಂತಲ್ಲಿ ನಿಲ್ಲದಂತೆ ಮನ್ಮಥನು ಕಾಡತೊಡಗಿದನು. ಬಿಸಿಲನ್ನು ಬಯಸುವ ಕೋಗಿಲೆಗಳು ಕತ್ತಲಾದುದಕ್ಕೆ ಮರುಗಿದುವು.
  • (ಪದ್ಯ-೫)

ಪದ್ಯ:-::

ಸಂಪಾದಿಸಿ

ಹೊತ್ತು ಹೊತ್ತಿಗೆ ಮತ್ತೆ ಮತ್ತೆ ಬಲವತ್ತರದೊ |
ಳೊತ್ತಿಡಿದು ಸುತ್ತಲೆತ್ತೆತ್ತಲುಂ ಕೆತ್ತವೋಲ್ |
ಮುತ್ತಿ ಮುಸುಕಿತ್ತು ಕಗ್ಗತ್ತಲೆ ಧರಿತ್ರಿಯಂ ಮುಳ್ಳಮೊನೆ ಕೊಳ್ಳದಂತೆ ||
ಚಿತ್ತಜಂ ಕತ್ತಿಯಂ ಕಿತ್ತುಕೊಂಡೆತ್ತಿ ಹೊ ||
ಯ್ಯತ್ತೆ ಬರಲುತ್ತುಂಗ ವೃತ್ತ ಕುಚೆಯರ್ ತಮಗೆ |
ತೆತ್ತಿರ್ದ ತೆತ್ತಿಗರನೊತ್ತಿಗರ ಸುತ್ತಿರ್ದರಾಗಳನುರಾಗದಿಂದೆ ||6|||

ಪದವಿಭಾಗ-ಅರ್ಥ:
ಹೊತ್ತು ಹೊತ್ತಿಗೆ ಮತ್ತೆ ಮತ್ತೆ ಬಲವತ್ತರದೊಳು ಒತ್ತಿಡಿದು ಸುತ್ತಲು ಎತ್ತೆತ್ತಲುಂ ಕೆತ್ತವೋಲ್ ಮುತ್ತಿ ಮುಸುಕಿತ್ತು ಕಗ್ಗತ್ತಲೆ ಧರಿತ್ರಿಯಂ ಮುಳ್ಳಮೊನೆ ಕೊಳ್ಳದಂತೆ=[ಹೊತ್ತು ಹೊತ್ತು ಹೆಚ್ಚಿದಂತೆ, ಮತ್ತೆ ಮತ್ತೆ ಇನ್ನೂ ಹೆಚ್ಚಾಗಿ ಬಲವಾಗಿ ಒತ್ತಿ ಹಿಡಿದಹಾಗೆ, ಸುತ್ತಲೂ ಎತ್ತೆತ್ತಲೂ ಸೇರಿಕೊಂಡಂತೆ, ಈ ಭೂಮಿಯಲ್ಲಿ ಮುಳ್ಳಮೊನೆ ಇಡಲೂ ತಾಣವಿಲ್ಲದಂತೆ ಎಲ್ಲವನ್ನೂ ಮುತ್ತಿ ಮುಸುಕಿತ್ತು ಕಗ್ಗತ್ತಲೆ. ];; ಚಿತ್ತಜಂ ಕತ್ತಿಯಂ (ಕತ್ತಿ: ಪರಾಗತಂತು ೨ ಹೂವಿನ ಹುಡಿ:ಬರಹ ನಿಘಂಟು;ಕಬ್ಬು-ಪರಿಷತ್ ನಿಘಂಟು.)ಕಿತ್ತುಕೊಂಡು ಎತ್ತಿ ಹೊಯ್ಯತ್ತೆ ಬರಲು ಉತ್ತುಂಗ ವೃತ್ತ ಕುಚೆಯರ್ ತಮಗೆ ತೆತ್ತಿರ್ದ ತೆತ್ತಿಗರನು ಒತ್ತಿಗರ ಸುತ್ತಿರ್ದರು ಆಗಳು ಅನುರಾಗದಿಂದೆ=[ಆಗ ಪ್ರೇಮ ದೇವ ಮನ್ಮಥನು ಪರಾಗತಂತು, ಹೂವಿನ ಹುಡಿಯನ್ನು ಕಿತ್ತುಕೊಂಡು ಎತ್ತಿ ಹೊಯ್ಯತ್ತಾ ಬರಲು, ದೊಡ್ಡ ವೃತ್ತದ ಕುಚೆಯತರುಣಿಯರು, ತಮಗೆ ಅರ್ಪಿಸಿಕೊಂಡ ಪ್ರೇಮಿಗಳನ್ನು ಆಗ ಅನುರಾಗದಿಂದ ಒತ್ತಿಗೆ/ಒತ್ತಿಕೊಂಡುಹತ್ತಿರ ಇದ್ದವರನ್ನು (ಬಾಹುಗಳಿಂದ) ಸುತ್ತಿಬಳಸಿಕೊಂಡಿದ್ದರು]. (ಮನ್ಮಥನ ಕತ್ತಿ: ಕಬ್ಬು ಅಥವಾ ಹೂವಿನ ಮಕರಂದ)
  • ತಾತ್ಪರ್ಯ:ಹೊತ್ತು ಹೊತ್ತು ಹೆಚ್ಚಿದಂತೆ, ಮತ್ತೆ ಮತ್ತೆ ಇನ್ನೂ ಹೆಚ್ಚಾಗಿ, ಬಲವಾಗಿ ಒತ್ತಿ ಹಿಡಿದಹಾಗೆ, ಸುತ್ತಲೂ ಎತ್ತೆತ್ತಲೂ ಸೇರಿಕೊಂಡಂತೆ, ಈ ಭೂಮಿಯಲ್ಲಿ ಮುಳ್ಳಮೊನೆ ಇಡಲೂ ತಾಣವಿಲ್ಲದಂತೆ ಎಲ್ಲವನ್ನೂ ಮುತ್ತಿ ಮುಸುಕಿತ್ತು ಕಗ್ಗತ್ತಲೆ. ಆಗ ಪ್ರೇಮದೇವ ಮನ್ಮಥನು ಪರಾಗತಂತು, ಹೂವಿನ ಹುಡಿಯನ್ನು ಕಿತ್ತುಕೊಂಡು ಎತ್ತಿ ಹೊಯ್ಯತ್ತಾ ಬರಲು, ದೊಡ್ಡ ವೃತ್ತದ ಕುಚೆಯತರುಣಿಯರು, ತಮಗೆ ಅರ್ಪಿಸಿಕೊಂಡ ಪ್ರೇಮಿಗಳನ್ನು ಆಗ ಅನುರಾಗದಿಂದ ಒತ್ತಿಗೆ/ಒತ್ತಿಕೊಂಡುಹತ್ತಿರ ಇದ್ದವರನ್ನು (ಬಾಹುಗಳಿಂದ) ಸುತ್ತಿಬಳಸಿಕೊಂಡಿದ್ದರು]. (ಮನ್ಮಥನ ಕತ್ತಿ: ಕಬ್ಬು ಅಥವಾ ಹೂವಿನ ಮಕರಂದ)
  • (ಪದ್ಯ-೬)

ಪದ್ಯ:-::

ಸಂಪಾದಿಸಿ

ಆ ರಜನಿಯೊಳ್ ಬಳಿಕ ರತ್ನಪುರಮಂ ಪೊಕ್ಕು |
ನೀರಜದಳೇಕ್ಷಣಂ ಕೇರಿಕೇರಿಗಳೊಳ್ ಸ |
ಮೀರಜನ ತಮ್ಮನಂ ಕೂಡಿಕೊಂಡೈತರುತೆ ಕಂಡನತಿ ನಿದ್ರೆಯಿಂದೆ ||
ಊರ ಜನಮೆಲ್ಲಮಂ ಮರೆದೊರಗಲಲ್ಲಲ್ಲಿ |
ಮಾರಜ ಭ್ರಮೆಯಿಂದೆ ಪೊರಮಟ್ಟು ಸಂಚರಿಪ |
ಚಾರು ಜಲರುಹ ವದನೆಯರ ಬೇಟದಾಟದ ಹಲವು ಬಗೆಯ ಚೇಷ್ಟೆಗಳನು ||7||

ಪದವಿಭಾಗ-ಅರ್ಥ:
ಆ ರಜನಿಯೊಳ್ ಬಳಿಕ ರತ್ನಪುರಮಂ ಪೊಕ್ಕು ನೀರಜ ದಳ ಈಕ್ಷಣಂ (ಕೃಷ್ಣ) ಕೇರಿಕೇರಿಗಳೊಳ್ ಸಮೀರಜನ (ಭೀಮ) ತಮ್ಮನಂ ( ಕೂಡಿಕೊಂಡು ಐತರುತೆ=[ಬಳಿಕ, ಆ ರಾತ್ರಿಯಲ್ಲಿ ಕಮಲದಳದ ಕಣ್ಣಿನ ಕೃಷ್ಣನು,ರತ್ನಪುರವನ್ನು ಹೊಕ್ಕು ಕೇರಿಕೇರಿಗಳಲ್ಲಿ ಅರ್ಜುನನ್ನು ಕೂಡಿಕೊಂಡು ಬರುತ್ತಿರಲು,];; ಕಂಡನು ಅತಿ ನಿದ್ರೆಯಿಂದೆ ಊರ ಜನಮೆಲ್ಲಮಂ ಮರೆದು ಒರಗಲು ಅಲ್ಲಲ್ಲಿ ಮಾರಜ ಭ್ರಮೆಯಿಂದೆ ಪೊರಮಟ್ಟು ಸಂಚರಿಪ ಚಾರು ಜಲರುಹ ವದನೆಯರ ಬೇಟದಾಟದ ಹಲವು ಬಗೆಯ ಚೇಷ್ಟೆಗಳನು=[ಬಹಳ ನಿದ್ರೆಯಿಂದ ಊರ ಜನರಲ್ಲರೂ ನಿದ್ರೆಯಲ್ಲಿ ಮಲಗಿರಲು, ಅಲ್ಲಿ ಕೆಲವುಕಡೆ, ಮನ್ಮಥನಿಂದ ಉಂಟಾದ ಭಾವನೆಯಿಂದ, ಹೊರಬಂದು ಸಂಚರಿಸು ಸುಂದರ ಕಮಲ ಮುಖಿಯರ ಕಾಮದಾಟದ ಹಲವು ಬಗೆಯ ಚೇಷ್ಟೆಗಳನ್ನು ಕಂಡನು].
  • ತಾತ್ಪರ್ಯ:ಬಳಿಕ, ಆ ರಾತ್ರಿಯಲ್ಲಿ ಕಮಲದಳದ ಕಣ್ಣಿನ ಕೃಷ್ಣನು,ರತ್ನಪುರವನ್ನು ಹೊಕ್ಕು ಕೇರಿಕೇರಿಗಳಲ್ಲಿ ಅರ್ಜುನನ್ನು ಕೂಡಿಕೊಂಡು ಬರುತ್ತಿರಲು, ಬಹಳ ನಿದ್ರೆಯಿಂದ ಊರ ಜನರಲ್ಲರೂ ನಿದ್ರೆಯಲ್ಲಿ ಮಲಗಿರಲು, ಅಲ್ಲಿ ಕೆಲವುಕಡೆ, ಮನ್ಮಥನಿಂದ ಉಂಟಾದ ಭಾವನೆಯಿಂದ, ಹೊರಬಂದು ಸಂಚರಿಸು ಸುಂದರ ಕಮಲ ಮುಖಿಯರ ಕಾಮದಾಟದ ಹಲವು ಬಗೆಯ ಚೇಷ್ಟೆಗಳನ್ನು ಕಂಡನು.
  • (ಪದ್ಯ-೭)

ಪದ್ಯ:-::

ಸಂಪಾದಿಸಿ

ಆಭರಣಮಲುಗಿದೊಡೆ ಕಣ್ಗದಿರ್ ಸೂಸಿದೊಡೆ |
ಶೋಬಿಸುವ ತನುಗಂಧ ಮುಣ್ಮಿದೊಡೆ ಜನರ ನಿ |
ದ್ರಾಭಂಗಮಾಗಿ ಕಂಡಪರೆಂಬ ಭೀತಿಯಿಂದೈತರ್ಪ ಕಾಮಿನಿಯನು ||
ಸಾಭಿಲಾಷೆಯೊಳೊರ್ವ ವಿಟನಿದಿರ್ವಂದು ಮ |
ತ್ತೇಭ ಗಾಮಿನಿ ಭೃಂಗ ನೀಲ ಕುಂತಲೆ ಪನ್ನ |
ಗಾಭ ಸುಂದರವೇಣಿ ಬೆದರಬೇಡೆನುತ ತಕ್ಕೈಸಿದನದೇಂ ಪ್ರೌಢನೋ ||8||

ಪದವಿಭಾಗ-ಅರ್ಥ:
ಆಭರಣಂ ಅಲುಗಿದೊಡೆ ಕಣ್ಗದಿರ್ ಸೂಸಿದೊಡೆ ಶೋಬಿಸುವ ತನುಗಂಧ ಮುಣ್ಮಿದೊಡೆ ಜನರ ನಿದ್ರಾಭಂಗಮಾಗಿ ಕಂಡಪರೆಂಬ ಭೀತಿಯಿಂದೈತರ್ಪ ಕಾಮಿನಿಯನು=[ಆಭರಣವು ಅಲುಗಿದರೆ, ಕಣ್ಣಿನ ಕದಿರು/ನೋಟದ ಕಿರಣ ಹೊರಬಿದ್ದರೆ, ಶೋಬಿಸುವ ದೇಹದಗಂಧ ಹರಡಿದರೆ, ಜನರ ನಿದ್ದೆಯ ಭಂಗವಾಗಿ ತನ್ನನ್ನು ಕಂಡಬಿಡುವರೆಂಬ ಭೀತಿಯಿಂದ ಬರುತ್ತಿರುವ ಕಾಮಿನಿಯನ್ನು/ಹೆಣ್ಣನ್ನು ];; ಸಾಭಿಲಾಷೆಯೊಳು ಓರ್ವ ವಿಟನು ಇದಿರ್ವಂದು ಮತ್ತೇಭಗಾಮಿನಿ ಭೃಂಗ ನೀಲ ಕುಂತಲೆ ಪನ್ನಗಾಭ ಸುಂದರವೇಣಿ ಬೆದರಬೇಡ ಎನುತ ತಕ್ಕೈಸಿದನು ಅದೇಂ ಪ್ರೌಢನೋ=[ಬಹಳ ಅಸೆಪಟ್ಟು ಒಬ್ಬ ವಿಟನು ಎದುರುಬಂದು, ಮದಗಜದಂತೆ ನಡೆಯುವವಳೇ, ದುಂಬಿಯಂತೆಕಪ್ಪಕೂದಲಿನವಳೇ, ಹಾವಿನಂತೆ ಸುಂದರಜಡೆಯವಳೇ, ಹೆದರಬೇಡ ಎನುತ್ತಾ ಹೆಣ್ಣನ್ನು ಸಮಾಧಾನ ಪಡಿಸಿದವನು ಏನು ಜಾಣನೊ!].
  • ತಾತ್ಪರ್ಯ:ಆಭರಣವು ಅಲುಗಿದರೆ, ಕಣ್ಣಿನ ಕದಿರು/ನೋಟದ ಕಿರಣ ಹೊರಬಿದ್ದರೆ, ಶೋಬಿಸುವ ದೇಹದಗಂಧ ಹರಡಿದರೆ, ಜನರ ನಿದ್ದೆಯ ಭಂಗವಾಗಿ ತನ್ನನ್ನು ಕಂಡಬಿಡುವರೆಂಬ ಭೀತಿಯಿಂದ ಬರುತ್ತಿರುವ ಕಾಮಿನಿಯನ್ನು/ಹೆಣ್ಣನ್ನು ಬಹಳ ಅಸೆಪಟ್ಟು ಒಬ್ಬ ವಿಟನು ಎದುರುಬಂದು, ಮದಗಜದಂತೆ ನಡೆಯುವವಳೇ, ದುಂಬಿಯಂತೆಕಪ್ಪಕೂದಲಿನವಳೇ, ಹಾವಿನಂತೆ ಸುಂದರಜಡೆಯವಳೇ, ಹೆದರಬೇಡ ಎನುತ್ತಾ ಹೆಣ್ಣನ್ನು ಸಮಾಧಾನ ಪಡಿಸಿದವನು ಏನು ಜಾಣನೊ!
  • (ಪದ್ಯ-೮)

ಪದ್ಯ:-::

ಸಂಪಾದಿಸಿ

ತೋರ ಮುತ್ತಿನ ಹಾರಮಂ ತೊಟ್ಟು ಚಂದ್ರಮುಖಿ |
ಕಾರ ಕತ್ತಲೆಯೊಳಡಿಯಿಡಲಂಜಿ ಪಣಿಗೆ ಕ |
ಸ್ತೂರಿಯಂ ಕಣ್ಗೆ ಕಾಡಿಗೆಯಂ ಕೊರಲ್ಗೆ ಹರಿ ನೀಲಮಣಿ ಭೂಷಣವನು ||
ಸೇರಿಸಲ್ಕದು ನೈಜಮಾಗೆ ಬೆರಗಾಗಿ ಬಳಿ |
ಕೋರೆದುರುಬಂ ತಗೆದು ಜಡೆಕಟ್ಟಿ ಪೊರಮಟ್ಟು |
ಕೇರಿಗೊಂಡೈದಿದಳ್ ಸಂಕೇತ ಭವನದೊಳ್ ಕಾದಿರ್ದ ಕಾಂತನೆಡೆಗೆ ||9||

ಪದವಿಭಾಗ-ಅರ್ಥ:
ತೋರ ಮುತ್ತಿನ ಹಾರಮಂ ತೊಟ್ಟು ಚಂದ್ರಮುಖಿ ಕಾರ ಕತ್ತಲೆಯೊಳು ಅಡಿಯಿಡಲು (ಅಡಿ- ಪಾದ,ಹೆಜ್ಜೆ ಇಡಲು) ಅಂಜಿ ಪಣಿಗೆ ಕಸ್ತೂರಿಯಂ ಕಣ್ಗೆ ಕಾಡಿಗೆಯಂ ಕೊರಲ್ಗೆ ಹರಿ ನೀಲಮಣಿ ಭೂಷಣವನು (ಆಭರಣ)=[ದಪ್ಪ ಮುತ್ತಿನ ಹಾರವನ್ನು ತೊಟ್ಟು ಚಂದ್ರಮುಖಿಯಾದ ಹೆಣ್ಣು, ಕಗ್ಗತ್ತಲೆಯಲ್ಲಿ ನೆಡಯಲು ಹೆದರಿ, ಹಣಿಗೆ ಕಸ್ತೂರಿಯನಗನೂ, ಕಣ್ಣಿಗೆ ಕಾಡಿಗೆಯನ್ನೂ ಕೊರಳಿಗೆ ಹರಿನೀಲಮಣಿ/ ಇಂದ್ರನೀಲಮಣಿ ಹಾರದ ಆಭರಣವನ್ನೂ,];; ಸೇರಿಸಲ್ಕೆ ಅದು ನೈಜಮಾಗೆ ಬೆರಗಾಗಿ ಬಳಿಕ ಓರೆದುರುಬಂ (ಓರೆ ತುರುಬು) ತಗೆದು ಜಡೆಕಟ್ಟಿ ಪೊರಮಟ್ಟು ಕೇರಿಗೊಂಡೈದಿದಳ್ ಸಂಕೇತ ಭವನದೊಳ್ ಕಾದಿರ್ದ ಕಾಂತನೆಡೆಗೆ=[ತನ್ನ ಅಲಂಕಾರಕ್ಕೆ ಸೇರಿಸಲು, ಅದು ಸಹಜವಾಗಿ ಹೊಂದಿಕೆಯಾಗಲು, ತನ್ನ ರೋಪಕ್ಕೆ ತಾನೇ ಬೆರಗಾಗಿ, ಬಳಿಕ ತನ್ನ ಸದಾಹಾಕುವ ಓರೆ ತುರುಬು ತಗೆದು, ಜಡೆಕಟ್ಟಿಕೊಂಡಳು, ಇನ್ನು ಗುರುತು ಸಿಗದೆಂದು, ಹೊರಹೊರಟು, ಮೊದಲೇ ಗೊತ್ತುಮಾಡಿಕೊಂಡಿದ್ದ ಸಂಕೇತ ಭವನಕ್ಕೆ, ಅಲ್ಲಿ ಕಾದಿದ್ದ ಕಾಂತನಬಳಿಗೆ ದಾರಿಯನ್ನು ಹಿಡಿದು ಕಗ್ಗತ್ತಲೆಯಲ್ಲಿ, ಭಯವನ್ನು ಮರೆತು ನಡೆದಳು].
  • ತಾತ್ಪರ್ಯ:ದಪ್ಪ ಮುತ್ತಿನ ಹಾರವನ್ನು ತೊಟ್ಟು ಚಂದ್ರಮುಖಿಯಾದ ಹೆಣ್ಣು, ಕಗ್ಗತ್ತಲೆಯಲ್ಲಿ ನೆಡಯಲು ಹೆದರಿ, ಆದರೂ ಹಣಿಗೆ ಕಸ್ತೂರಿಯನ್ನೂ, ಕಣ್ಣಿಗೆ ಕಾಡಿಗೆಯನ್ನೂ ಕೊರಳಿಗೆ ಹರಿನೀಲಮಣಿ/ ಇಂದ್ರನೀಲಮಣಿ ಹಾರದ ಆಭರಣವನ್ನೂ, ತನ್ನ ಅಲಂಕಾರಕ್ಕೆ ಸೇರಿಸಲು, ಅದು ಸಹಜವಾಗಿ ಹೊಂದಿಕೆಯಾಗಲು, ತನ್ನ ರೋಪಕ್ಕೆ ತಾನೇ ಬೆರಗಾಗಿ, ಬಳಿಕ ತನ್ನ ಸದಾಹಾಕುವ ಓರೆ ತುರುಬು ತಗೆದು, ಜಡೆಕಟ್ಟಿಕೊಂಡಳು, ಇನ್ನು ಗುರುತು ಸಿಗದೆಂದು, ಹೊರಹೊರಟು, ಮೊದಲೇ ಗೊತ್ತುಮಾಡಿಕೊಂಡಿದ್ದ ಸಂಕೇತ ಭವನಕ್ಕೆ, ಕಗ್ಗತ್ತಲೆಯಲ್ಲಿ, ಭಯವನ್ನು ಮರೆತು, ದಾರಿಯನ್ನು ಹಿಡಿದು ಅಲ್ಲಿ ಕಾದಿದ್ದ ಕಾಂತನಬಳಿಗೆ ನಡೆದಳು].
  • (ಪದ್ಯ-೯)

ಪದ್ಯ:-:೧೦:

ಸಂಪಾದಿಸಿ

ಸಂಚುವ ಸತೀಜನದೊಳಂಗಭವ ಕೇಳೀ ಪ್ರ |
ಪಂಚ ವರನೊಳ್ ಸಮನಿಸಿದ ಬಳಿಕ ಮನದೊ |
ಳಂಚುವ ಬೆದರ್ಕೆಯಂ ಬಿಟ್ಟು ನಿಜ ಭವನಮಂ ಪೊರಮಟ್ಟು ಕತ್ತಲೆಯೊಳು ||
ಮಿಂಚುವ ವಿಭೂಷಣಕೆ ಮುಸುಕಿಟ್ಟು ಸುಳಿವರ್ಗೆ |
ಹೊಂಚುವ ಚಮತ್ಕೃತೆಯ ನಳವಡಿಸಿ ನೆನಹಿಂಗೆ |
ಮುಂಚುವ ಪದನ್ಯಾಸಮಂ ಕಲಿತು ನಡೆವ ಜಾರೆಯರ ಚದುರೆಸೆದಿರ್ದುದು ||10||

ಪದವಿಭಾಗ-ಅರ್ಥ:
ಸಂಚುವ ಸತೀಜನದೊಳು ಅಂಗಭವ(ಮನ್ಮಥ, ಕಾಮ, ಕಾಮಾಸಕ್ತ, ವಿಷಯಲೋಲುಪ; ) ಕೇಳೀ ಪ್ರಪಂಚ ವರನೊಳ್ ಸಮನಿಸಿದ ಬಳಿಕ ಮನದೊಳು ಅಂಚುವ (ಇಣುಕುವ, ತೊರುವ) ಬೆದರ್ಕೆಯಂ ಬಿಟ್ಟು ನಿಜ ಭವನಮಂ ಪೊರಮಟ್ಟು ಕತ್ತಲೆಯೊಳು=[ಮೋಸಮಾಡಲು ಸಂಚುಮಾಡುವ ಸತೀಜನರು ರತೀಕ್ರೀಡೆಯನ್ನು/ಸಂಭೋಗವನ್ನು ಗಂಡನಲ್ಲಿ ನಡೆಸಿದ ಬಳಿಕ (ಅವನ ನಿದ್ದೆ ನೋಡಿ) ಮನಸ್ಸಿನಲ್ಲಿ ತೋರುವ ಹೆದರಿಕೆಯನ್ನು ಬಿಟ್ಟು ತನ್ನ ಮನೆಯಿಂದ ಹೊರಟು ಕತ್ತಲೆಯಲ್ಲಿ];; ಮಿಂಚುವ ವಿಭೂಷಣಕೆ ಮುಸುಕಿಟ್ಟು ಸುಳಿವರ್ಗೆ ಹೊಂಚುವ ಚಮತ್ಕೃತೆಯನಳವಡಿಸಿ ನೆನಹಿಂಗೆ ಮುಂಚುವ ಪದನ್ಯಾಸಮಂ ಕಲಿತು ನಡೆವ ಜಾರೆಯರ ಚದುರೆಸೆದಿರ್ದುದು=[ತಾನು ಧರಿಸಿದ ಹೊಳೆಯುವ ಆಭರಣಕ್ಕೆ ಮುಸುಕುಉ ಹಾಕಿಕೊಂಡು, ಆಗ ಸುಳಿವ ಇತರರಿಗೆ ಹೊಂಚುಹಾಕಿ ತಪ್ಪಿಸುವ ಚಮತ್ಕಾರ ಅಳವಡಿಸಿ ದಾರಿಯ ನೆನಪಿನಲ್ಲಿ ಮುಂದೆಹೋಗುವ ನೆಡಿಗೆಯನ್ನು ಕಲಿತು ನಡೆಯುವ ಜಾರೆಯರ, ಜಾಣತನವು ಆಗ ಕಾಣುತ್ತಿತ್ತು.]
  • ತಾತ್ಪರ್ಯ:ಮೋಸಮಾಡಲು ಸಂಚುಮಾಡುವ ಸತೀಜನರು, ರತೀಕ್ರೀಡೆಯನ್ನು/ಸಂಭೋಗವನ್ನು ಗಂಡನಲ್ಲಿ ನಡೆಸಿದ ಬಳಿಕ (ಅವನ ನಿದ್ದೆ ನೋಡಿ) ಮನಸ್ಸಿನಲ್ಲಿ ತೋರುವ ಹೆದರಿಕೆಯನ್ನು ಬಿಟ್ಟು ತನ್ನ ಮನೆಯಿಂದ ಹೊರಟು ಕತ್ತಲೆಯಲ್ಲಿ ತಾನು ಧರಿಸಿದ ಹೊಳೆಯುವ ಆಭರಣಕ್ಕೆ ಮುಸುಕು ಹಾಕಿಕೊಂಡು, ಆಗ ಸುಳಿವ ಇತರರಿಗೆ ಹೊಂಚುಹಾಕಿ ತಪ್ಪಿಸುವ ಚಮತ್ಕಾರ ಅಳವಡಿಸಿ ದಾರಿಯ ನೆನಪಿನಲ್ಲಿ ಮುಂದೆಹೋಗುವ ನೆಡಿಗೆಯನ್ನು ಕಲಿತು ನಡೆಯುವ ಜಾರೆಯರ, ಜಾಣತನವು ಆಗ ಕೃಷ್ಣ ಮತ್ತು ಅರ್ಜುನರಿಗೆ ಕಾಣುತ್ತಿತ್ತು.
  • (ಪದ್ಯ-೧೦)

ಪದ್ಯ:-:೧೧:

ಸಂಪಾದಿಸಿ

ಕಿಕ್ಕಿರಿದಡರ್ದುರವ ನಿಂಬುಗೊಂಡುರೆ ಬಳೆದ |
ಕಕ್ಕಸದ ಬಟ್ಟಬಲ್ಮೊಲೆಗಳೋಪನ ಕೈಗೆ |
ವೆಕ್ಕಸಂ ನೋಳ್ಪರ್ಗೆ ಕಣ್ಗೆಸುರ್ ಮು(ಪು)ದುಗಿದೊಡೆ ಮದನಂಗೆ ಮಾನಹಾನಿ ||
ಸೊಕ್ಕು ಲೇಸಾಗದೆಂದೊಪ್ಪಿಡಿಯೊಳೊದಗಿ ನೋ |
ಟಕ್ಕೆ ಕಾಣಿಸದೆ ಕಾಮನ ರೂಪನಳವಡಿಸಿ |
ತಕ್ಕ ಬಡತನದೊಳಿರ್ದುದು ಸಣ್ಣ ಸೆಳೆನಡು ನಿಶೆಯೊಳೈದಿ ಬಹ ಜಾರೆಯ ||11||

ಪದವಿಭಾಗ-ಅರ್ಥ:
ಕಿಕ್ಕಿರಿದು ಅಡರ್ದ ಉರವನು ಇಂಬುಗೊಂಡು ಉರೆ ಬಳೆದ ಕಕ್ಕಸದ (ಕರ್ಕಶ, ಕಠಿಣ) ಬಟ್ಟಬಲ್ಮೊಲೆಗಳ ಓಪನ (ಪ್ರಿಯ?) ಕೈಗೆ ವೆಕ್ಕಸಂ ( ಬಿರುಸು; ಆಶ್ಚರ್ಯ) ನೋಳ್ಪರ್ಗೆ ಕಣ್ಗೆಸುರ್ ಪುದುಗಿದೊಡೆ ಮದನಂಗೆ ಮಾನಹಾನಿ=[ಹತ್ತಿರ ಹತ್ತಿರ ಒತ್ತಾಗಿ ಸೇರಿದ ಎದೆಯನ್ನು, ವ್ಯಾಪಿಸಿಕೊಂಡು, ಬಹಳ ಬೆಳೆದ ಗಟ್ಟಿಯಾದ ಗುಂಡಾದ ದೊಡ್ಡ ಮೊಲೆಗಳ ಪ್ರಿಯನ ಕೈಗೆ ಬಿರುಸಾಗಿರುವುದು, ನೋಡುವವರಿಗೆ ಕಣ್ಣಿಗೆ ಕುಸರು-ಚುಚ್ಚುವದು, ಮುದುಡಿಕೊಂಡರೆ ಕಾಮದೇವನಿಗೆ ಮಾನಹಾನಿ- ಕಾಮೊತ್ತೇಜನವಾಗದು];; ಸೊಕ್ಕು ಲೇಸಾಗದೆಂದು ಒಪ್ಪಿಡಿಯೊಳು ಒದಗಿ ನೋಟಕ್ಕೆ ಕಾಣಿಸದೆ ಕಾಮನ ರೂಪನು ಅಳವಡಿಸಿ ತಕ್ಕ ಬಡತನದೊಳು ಇರ್ದುದು ಸಣ್ಣ ಸೆಳೆನಡು ನಿಶೆಯೊಳು ಐದಿ ಬಹ ಜಾರೆಯ=[ರಾತ್ರಿಯಲ್ಲಿ ಬರುತ್ತಿರುವ ಜಾರಿಣಿಯ ಸಣ್ಣ ಬಡವಾದ ನಡು/ಸೊಂಟವು ನೋಡುವವರಿಗೆ ಸೊಕ್ಕು/ಉದ್ರೇಕ ಉಂಟಾಗದೆಂದು ಮುಷ್ಟಿಯಲ್ಲಿ ಒದಗುವಷ್ಟೇ ಇದ್ದು ನೋಡಲು ಕಾಣಿಸದೆ, ಕಾಮನ ಅನಂಗ ರೂಪವನ್ನು ಪಡೆದುಕೊಂಡು ಸಾಕಷ್ಟು ಯೋಗ್ಯ ಬಡತನದಲ್ಲಿ ಇರುವುದು.].
  • ತಾತ್ಪರ್ಯ:ಹತ್ತಿರ ಹತ್ತಿರ ಒತ್ತಾಗಿ ಸೇರಿದ ಎದೆಯನ್ನು, ವ್ಯಾಪಿಸಿಕೊಂಡು, ಬಹಳ ಬೆಳೆದ ಗಟ್ಟಿಯಾದ ಗುಂಡಾದ ದೊಡ್ಡ ಮೊಲೆಗಳ ಪ್ರಿಯನ ಕೈಗೆ ಬಿರುಸಾಗಿರುವುದು, ನೋಡುವವರಿಗೆ ಕಣ್ಣಿಗೆ ಕುಸರು-ಚುಚ್ಚುವದು, ಮುದುಡಿಕೊಂಡರೆ ಕಾಮದೇವನಿಗೆ ಮಾನಹಾನಿ- ಕಾಮೊತ್ತೇಜನವಾಗದು ರಾತ್ರಿಯಲ್ಲಿ ಬರುತ್ತಿರುವ ಜಾರಿಣಿಯ ಸಣ್ಣ ಬಡವಾದ ನಡು/ಸೊಂಟವು ನೋಡುವವರಿಗೆ ಸೊಕ್ಕು/ಉದ್ರೇಕ ಉಂಟಾಗದೆಂದು ಮುಷ್ಟಿಯಲ್ಲಿ ಒದಗುವಷ್ಟೇ ಇದ್ದು ನೋಡಲು ಕಾಣಿಸದೆ, ಕಾಮನ ಅನಂಗ ರೂಪವನ್ನು ಪಡೆದುಕೊಂಡು ಸಾಕಷ್ಟು ಯೋಗ್ಯ ಬಡತನದಲ್ಲಿ ಇರುವುದು.(ನಡು/ಸೊಂಟ ಬಡವಾಗಿದ್ದರೆ ಕಾಮದೇವನಿಗೆ ಸಹಕರಿಸಿ,ಕಾಮೋತ್ತೇಜನ ಕೊಡುವುದು ಎಂಬ ಭಾವ.(?))
  • (ಪದ್ಯ-೧೧)XXV

ಪದ್ಯ:-:೧೨:

ಸಂಪಾದಿಸಿ

ನಿಟಿಲಮಂ ನೇವರಿಸುತಂಗುಲಿಯ ತುದಿಯಿಂದೆ |
ತುಟಿವಿಡದು ನೋಡುತ್ತೆ ಮಣಿಮಣಿದು ವೃತ್ತಕುಚ |
ತಟಮಂ ನೀರಿಕ್ಷಿಸುತೆ ಕರ್ಣಪತ್ರವನಮರ್ಚುತ ಹಾರಮಂ ಸರಯುತೆ ||
ಕಟಿಗೆ ನಿರಿಯಂ ಸೇರಿಸುತೆ ನಿಮಿರ್ದ ಕ್ಷತಕೆ |
ವಿಟನನುರೆ ಬೈಯುತ್ತ ತಿರುಗಿ ನಿಜಮಂದಿರಕೆ |
ಕುಟಿಲ ಕುಂತಳದ ಜಾರೆಯರೈದಿ ಬರುತಿರ್ದರಲ್ಲಲ್ಲಿ ಕತ್ತಲೆಯೊಳು ||12||

ಪದವಿಭಾಗ-ಅರ್ಥ:
ನಿಟಿಲಮಂ (ಹಣೆ) ನೇವರಿಸುತ ಅಂಗುಲಿಯ ತುದಿಯಿಂದೆ ತುಟಿವಿಡದು ನೋಡುತ್ತೆ ಮಣಿಮಣಿದು ವೃತ್ತಕುಚ ತಟಮಂ ನೀರಿಕ್ಷಿಸುತೆ ಕರ್ಣಪತ್ರವನು ಅಮರ್ಚುತ ಹಾರಮಂ ಸರಯುತೆ=[ಹಣೆಯನ್ನು ಸವರಿ ಬೆವರು ಒರೆಸಿ, ಕುಂಕುಮವನ್ನು ಸರಿಪಡಿಸಿಕೊಳ್ಳುತ್ತಾ, ಬೆರಳಿನ ತುದಿಯನ್ನು ತುಟಿಯಮೇಲಿಟ್ಟು ಅತ್ತಿತ್ತ ನೋಡುತ್ತ, ಬಗ್ಗಿ ಬಗ್ಗಿ ತನ್ನದುಂಡು ಮೊಲೆಯ ತಳವನ್ನು (ಗಾಯವನ್ನು)ನೋಡಿಕೊಳ್ಳುತ್ತಾ, ಕಿವಿಯ ಓಲೆಯನ್ನು ಸವರಿ ಸರಿಪಡಿಸುತ್ತಾ, ಕರಿಮಣಿ ಹಾರವನ್ನು ಸರಿಪಡಿಸಿಕೊಳ್ಳುತ್ತಾ,];; ಕಟಿಗೆ ನಿರಿಯಂ ಸೇರಿಸುತೆ ನಿಮಿರ್ದ ಕ್ಷತಕೆ ವಿಟನನು ಉರೆ ಬೈಯುತ್ತ ತಿರುಗಿ ನಿಜಮಂದಿರಕೆ ಕುಟಿಲ ಕುಂತಳದ ಜಾರೆಯರು ಐದಿ ಬರುತಿರ್ದರು ಅಲ್ಲಲ್ಲಿ ಕತ್ತಲೆಯೊಳು=[ಸೊಂಟದ ನಿರಿಗೆಯನ್ನು ಸರಿಯಾಗಿ ಸೇರಿಸುತ್ತಾ, ಉಗುರು ಗಾಯಕ್ಕೆ ವಿಟನನ್ನು ಬಹಳ ಬೈಯುತ್ತ, ಹಿಂತಿರುಗಿ ತನ್ನ ಮನೆಗೆ ಗುಂಗುರುಕೂದಲಿನ ಜಾರೆಯರು ಅಲ್ಲಲ್ಲಿ ಕತ್ತಲೆಯಲ್ಲಿ ಹೋಗಿ ಬರುತಿದ್ದರು].
  • ತಾತ್ಪರ್ಯ: ಆ ರಾತ್ರಿ ಕೃಷ್ಣ ಮತ್ತು ಅರ್ಜುನರು ರತ್ನಪುರಿಯ ದಾರಿಯಲ್ಲಿ ಬರುವಾಗ, ಹಣೆಯನ್ನು ಸವರಿ ಬೆವರು ಒರೆಸಿ, ಕುಂಕುಮವನ್ನು ಸರಿಪಡಿಸಿಕೊಳ್ಳುತ್ತಾ, ಬೆರಳಿನ ತುದಿಯನ್ನು ತುಟಿಯಮೇಲಿಟ್ಟು ಅತ್ತಿತ್ತ ನೋಡುತ್ತ, ಬಗ್ಗಿ ಬಗ್ಗಿ ತನ್ನದುಂಡು ಮೊಲೆಯ ತಳವನ್ನು (ಗಾಯವನ್ನು)ನೋಡಿಕೊಳ್ಳುತ್ತಾ, ಕಿವಿಯ ಓಲೆಯನ್ನು ಸವರಿ ಸರಿಪಡಿಸುತ್ತಾ, ಕರಿಮಣಿ ಹಾರವನ್ನು ಸರಿಪಡಿಸಿಕೊಳ್ಳುತ್ತಾ,ಸೊಂಟದ ನಿರಿಗೆಯನ್ನು ಸರಿಯಾಗಿ ಸೇರಿಸುತ್ತಾ, ಉಗುರು ಗಾಯಕ್ಕೆ ವಿಟನನ್ನು ಬಹಳ ಬೈಯುತ್ತ, ಹಿಂತಿರುಗಿ ತನ್ನ ಮನೆಗೆ ಗುಂಗುರುಕೂದಲಿನ ಜಾರೆಯರು ಅಲ್ಲಲ್ಲಿ ಕತ್ತಲೆಯಲ್ಲಿ ಹೋಗಿ ಬರುತಿದ್ದರು.
  • (ಪದ್ಯ-೧೨)

ಪದ್ಯ:-:೧೩:

ಸಂಪಾದಿಸಿ

ಕತ್ತಲೆಯೊಳಸುರಾರಿ ಫಲ್ಗುಣರ್ ಜಾರೆಯರ |
ವೃತ್ತಾಂತಮಂ ನೋಡುತೈತರಲ್ಕನಿತರೊಳ್ |
ಪೊತ್ತದಿಹ ಜಕ್ಕವಕ್ಕಿಗಳ ವಿರಹದ (ವೆಂಕಿವೊಗೆ)ಬೆಂಕೊವೊಗೆ ಪೊಗೆದು ಮೇದಿನಿಯೋಳು ||
ಸುತ್ತಿ ಸುತ್ತಲುಮಂಧಕಾರಮಾಗಿರುತಿರಲ್ |
ಚಿತ್ತಜಂ ತಂಬೆಲರೊಳೂದಿದೊಡೆ ಪಜ್ಜಳಿಸಿ |
ಮತ್ತುರಿವ ಕಿಚ್ಚಿನೇಳಿಗೆಯಂತೆ ಮೂಡಿದಂ ಚಂದ್ರನಿಂದ್ರನ ದೆಸೆಯೊಳು||13||

ಪದವಿಭಾಗ-ಅರ್ಥ:
ಕತ್ತಲೆಯೊಳು ಅಸುರಾರಿ ಫಲ್ಗುಣರ್ ಜಾರೆಯರ ವೃತ್ತಾಂತಮಂ ನೋಡುತ ಐತರಲ್ಕೆ ಅನಿತರೊಳ್ ಪೊತ್ತದಿಹ ಜಕ್ಕವಕ್ಕಿಗಳ ವಿರಹದ (ವೆಂಕಿವೊಗೆ)ಬೆಂಕೊವೊಗೆ ಪೊಗೆದು ಮೇದಿನಿಯೋಳು=[ಕತ್ತಲೆಯಲ್ಲಿ ಕೃಷ್ಣ ಫಲ್ಗುಣರು ಜಾರೆಯರ ನೆಡವಳಿಕೆಯನ್ನು ನೋಡುತ್ತ ಐರಲು, ಅಷ್ಟರಲ್ಲಿ ಹೊತ್ತಿಉರಿಯದಿರುವ ಚಕ್ರವಾಕ ಪಕ್ಷಿಗಳ ವಿರಹದ ಬೆಂಕಿಯಹೊಗೆ ಹೊತ್ತಿಕೊಂಡು ಭೂಮಿಯಲ್ಲಿ];;ಸುತ್ತಿ ಸುತ್ತಲುಮ್ ಅಂಧಕಾರಂ ಆಗಿರುತಿರಲ್ ಚಿತ್ತಜಂ ತಂಬೆಲರೊಳು ಊದಿದೊಡೆ ಪಜ್ಜಳಿಸಿ ಮತ್ತಿರಿವ ಕಿಚ್ಚಿನ ಏಳಿಗೆಯಂತೆ ಮೂಡಿದಂ ಚಂದ್ರನು ಇಂದ್ರನ ದೆಸೆಯೊಳು=[ಸುತ್ತ ಸುತ್ತಲೂ ಕತ್ತಲೆಯಾಗಿರಲು, ಮನ್ಮಥನು, ತಂಪಾದಗಾಳಿಯನ್ನು ಊದಿದಾಗ ಆ ವಿರಹಾಗ್ನಿ ಪ್ರಜ್ವಲಿಸಿ ಮತ್ತೆ ಉರಿಯುವ ಬೆಂಕಿಯ ಹೆಚ್ಚುವಂತೆ ಚಂದ್ರನು ಪೂರ್ವದಲ್ಲಿ ಮೂಡಿದನು.]
  • ತಾತ್ಪರ್ಯ:ಕತ್ತಲೆಯಲ್ಲಿ ಕೃಷ್ಣ ಫಲ್ಗುಣರು ಜಾರೆಯರ ನೆಡವಳಿಕೆಯನ್ನು ನೋಡುತ್ತ ಐರಲು, ಅಷ್ಟರಲ್ಲಿ ಹೊತ್ತಿಉರಿಯದಿರುವ ಚಕ್ರವಾಕ ಪಕ್ಷಿಗಳ ವಿರಹದ ಬೆಂಕಿಯಹೊಗೆ ಹೊತ್ತಿಕೊಂಡು ಭೂಮಿಯಲ್ಲಿ ಸುತ್ತ ಸುತ್ತಲೂ ಕತ್ತಲೆಯಾಗಿರಲು, ಮನ್ಮಥನು, ತಂಪಾದಗಾಳಿಯನ್ನು ಊದಿದಾಗ ಆ ವಿರಹಾಗ್ನಿ ಪ್ರಜ್ವಲಿಸಿ ಮತ್ತೆ ಉರಿಯುವ ಬೆಂಕಿಯ ಹೆಚ್ಚುವಂತೆ ಚಂದ್ರನು ಪೂರ್ವದಲ್ಲಿ ಮೂಡಿದನು.
  • (ಪದ್ಯ-೧೩)

ಪದ್ಯ:-:೧೪:

ಸಂಪಾದಿಸಿ

ಮರುಗಿದುವು ಕೋಕ ಕೋಕನದಂಗಳಾಗ ಬಾ |
ಯ್ದೆರೆದುವು ಚಕೋರ ಕೋರಕ ಕುಮುದ ರಾಜಿಗಳ್ |
ತುರುಗಿದ ತಮಿಸ್ರಮಾಲೋಕಸ್ಥಿತಿಗೆ ತೊಲಗಿದುದು ದೆಸೆದೆಸೆಯೊಳು ||
ಮೊರೆದುದು ಸಮುದ್ರಮುದ್ರವದ ಪೆರ್ಚುಗೆಯಿಂದ |
ಮೊರೆತುದುಡುಕಾಂತ ಕಾಂತ ಪ್ರತತಿ ಕುಸಮ ಶರ |
ನುರುಬಿದನಗಲ್ದರಂ ಚಾಪ ಚಾಪಲಹಸ್ತನಾಗಿ ಚಂದ್ರೋದಯದೊಳು ||14||

ಪದವಿಭಾಗ-ಅರ್ಥ:
ಮರುಗಿದುವು ಕೋಕ ಕೋಕನದಂಗಳು (ನೈದಿಲೆ,ಕಮಲಗಳು) ಆಗ ಬಾಯ್ದೆರೆದುವು(ಅರಳಿದವು) ಚಕೋರ ಕೋರಕ (ಮೊಗ್ಗು) ಕುಮುದ ರಾಜಿಗಳ್ ತುರುಗಿದ ತಮಿಸ್ರಮು (ಕತ್ತಲೆ) ಆಲೋಕಸ್ಥಿತಿಗೆ ತೊಲಗಿದುದು(ತಮಿಸ್ರ ತೊಲಗಿದುದು- ಆಲೋಕ (ಬೆಳಕಿನ ಸ್ಥಿತಿಗೆ) ದೆಸೆದೆಸೆಯೊಳು=[ಚಕ್ರವಾಕ ಪಕ್ಷಿಗಳು ವಿರಹದಿಂದ ಮರುಗಿದುವು; ನೈದಿಲೆಗಳು ಅರಳಿದವು; ಆಗ ಚಕೋರ ಪಕ್ಷಿಗಳು ಚಂದ್ರನ ಕಿರಣಕ್ಕೆ ಬಾಯ್ದೆರೆದುವು; ಅಸಂಖ್ಯ ಮೊಗ್ಗುಗಳು,ಕುಮುದ ಹೂವುಗಳು ಅರಳಿದವು; ತುಂಬಿದ ಕತ್ತಲೆಯು ತೊಲಗಿ ದಿಕ್ಕುದಿಕ್ಕುಗಳಲ್ಲಿ ಬೆಳಕು ತೋರಿತು.];; ಮೊರೆದುದು ಸಮುದ್ರಂ ಉದ್ರವದ (ಉಬ್ಬರ) ಪೆರ್ಚುಗೆಯಿಂದ ಮೊರೆತುದು ಉಡುಕಾಂತ(ಚಂದ್ರ) ಕಾಂತ ಪ್ರತತಿ(ಸಮೂಹ) ಕುಸಮಶರನು (ಕಾಮನು) ಉರುಬಿದನು ಅಗಲ್ದರಂ ಚಾಪ ಚಾಪಲಹಸ್ತನಾಗಿ ಚಂದ್ರೋದಯದೊಳು=[ಚಂದ್ರನ ಕಾಂತಿಯ ಬಹಳ ಪ್ರಕಾಶದಿಂದ ಸಮುದ್ರವು ಉಬ್ಬರದ ಹೆಚ್ಚುವಿಕೆಯಿಂದ ಆರ್ಭಟಿಸಿ ಮೊರೆಯಿತು; ಚಂದ್ರೋದಯದಲ್ಲಿ ಕಾಮನು ತನ್ನ ಬಿಲ್ಲನ್ನು ಹಿಡಿದು ಚಪಲತೆಯಿಂದ ವಿರಹಿಗಳನ್ನು ಆಕ್ರಮಿಸಿದನು].
  • ತಾತ್ಪರ್ಯ:ಚಕ್ರವಾಕ ಪಕ್ಷಿಗಳು ವಿರಹದಿಂದ ಮರುಗಿದುವು; ನೈದಿಲೆಗಳು ಅರಳಿದವು; ಆಗ ಚಕೋರ ಪಕ್ಷಿಗಳು ಚಂದ್ರನ ಕಿರಣಕ್ಕೆ ಬಾಯ್ದೆರೆದುವು; ಅಸಂಖ್ಯ ಮೊಗ್ಗುಗಳು,ಕುಮುದ ಹೂವುಗಳು ಅರಳಿದವು; ತುಂಬಿದ ಕತ್ತಲೆಯು ತೊಲಗಿ ದಿಕ್ಕುದಿಕ್ಕುಗಳಲ್ಲಿ ಬೆಳಕು ತೋರಿತು. ಚಂದ್ರನ ಕಾಂತಿಯ ಬಹಳ ಪ್ರಕಾಶದಿಂದ ಸಮುದ್ರವು ಉಬ್ಬರದ ಹೆಚ್ಚುವಿಕೆಯಿಂದ ಆರ್ಭಟಿಸಿ ಮೊರೆಯಿತು; ಚಂದ್ರೋದಯದಲ್ಲಿ ಕಾಮನು ತನ್ನ ಬಿಲ್ಲನ್ನು ಹಿಡಿದು ಚಪಲತೆಯಿಂದ ವಿರಹಿಗಳನ್ನು ಆಕ್ರಮಿಸಿದನು. (ಚಕ್ರವಾಕ ಪಕ್ಷಿಗಳು ಬೆಳುದಿಂಗಳನ್ನು ಕುಡಿಯುತ್ತವೆ ಎಂಬ ಕವಿಕಲ್ಪನೆ ಇದೆ)
  • (ಪದ್ಯ-೧೪)

ಪದ್ಯ:-:೧೫:

ಸಂಪಾದಿಸಿ

ಪ್ರಾಚೀನಿತಂಬಿನಿಯ ಮುಖ ಬಿಂಬದೆಳೆನಗೆಯ |
ರೋಚಿಗಳೊ ಪೆರ್ಚುಗೆಯೊಳುಬ್ಬೆದ್ದ ಪಾಲ್ಗಡಲ |
ವೀಚಿಗಳೊ ಮನ್ಮಥನ ಕೀರ್ತಿಯ ಮರೀಚಿಗಳೊ ನಿಜಕಾಂತನಂ ಕಾಣುತೆ ||
ನಾಚಿ ಬೆಳ್ಪೇರಿದಳೋ ರಾತ್ರಿವಧು ಚೆಲ್ಲಿದನೊ |
ಭೂಚಕ್ರಕಂಗಜಂ ಬೇಳುವೆಯ ಬೂದಿಯಂ |
ವಾಚಿಸುವೊಡರಿದೆನೆಲ್ಪಸರಿಸಿತು ಚಂದ್ರಕಿರಣಂಗಳೆಲ್ಲಾದೆಸೆಯೊಳು ||15||

ಪದವಿಭಾಗ-ಅರ್ಥ:
ಪ್ರಾಚೀ(ಪೂರ್ವದಿಕ್ಕು) ನಿತಂಬಿನಿಯ ಮುಖ ಬಿಂಬದ ಎಳೆನಗೆಯ ರೋಚಿಗಳೊ ಪೆರ್ಚುಗೆಯೊಳು ಉಬ್ಬೆದ್ದ ಪಾಲ್ಗಡಲ ವೀಚಿಗಳೊ ಮನ್ಮಥನ ಕೀರ್ತಿಯ ಮರೀಚಿಗಳೊ ನಿಜಕಾಂತನಂ ಕಾಣುತೆ=[ಪೂರ್ವದಿಕ್ಕೆಂಬ ವನಿತೆಯ ದುಂಡುಮುಖ ಬಿಂಬದ ಮುಗುಳುನಗೆಯ ಕಾಂತಿಗಳೊ, ಹೆಚ್ಚಾಗುವುದರಿಂದ ಉಬ್ಬಿ ಉಕ್ಕಿದ ಕ್ಷೀರಸಮುದ್ರವೊ, ಅಥವಾ ಅದರ ಅಲೆಗಳೊ, ಕಾಮನ ಕೀರ್ತಿಯ ಮರೀಚಿಕೆಗಳೊ (ಬೆಳುದಿಂಗಳ ಬಿಸಿಲುಕುದುರೆಯಂತೆ) ನಿಜಕಾಂತನಾದ ಚಂದ್ರನನ್ನು ಕಾಣುತ್ತಲೆ];; ನಾಚಿ ಬೆಳ್ಪೇರಿದಳೋ ರಾತ್ರಿವಧು ಚೆಲ್ಲಿದನೊ ಭೂಚಕ್ರಕೆ ಅಂಗಜಂ ಬೇಳುವೆಯ ಬೂದಿಯಂ ವಾಚಿಸುವೊಡೆ ಅರಿದೆನೆಲ್ ಪಸರಿಸಿತು ಚಂದ್ರಕಿರಣಂಗಳು ಎಲ್ಲಾದೆಸೆಯೊಳು=[ನಾಚಿಕೆಗೊಂಡು ಬಿಳಿಚಿಕೊಂಡಳೊ ರಾತ್ರಿವಧು; ಅಥವಾ ಮನ್ಮಥನು ಭೂಮಂಡಲಕ್ಕೆ ವಶೀಕರಣ ಮಾಡುವ ಮಂಕುಬೂದಿಯನ್ನು ಚೆಲ್ಲಿದನೊ, ಹೇಳಲು ಅರಿದು/ ಅಸಾಧ್ಯವಾಗಿದೆ ಎನ್ನುವಂತೆ ಚಂದ್ರವಕಿರಣಗಳು ಎಲ್ಲಾ ದಿಕ್ಕಿನಲ್ಲಿ ಹರಡಿತು].
  • ತಾತ್ಪರ್ಯ:(ಹರಡಿದ ಬೆಳುದಿಂಗಳು ಹೇಗಿತ್ತೆಂದರೆ):ಪೂರ್ವದಿಕ್ಕೆಂಬ ವನಿತೆಯ ದುಂಡುಮುಖ ಬಿಂಬದ ಮುಗುಳುನಗೆಯ ಕಾಂತಿಗಳೊ, ಹೆಚ್ಚಾಗುವುದರಿಂದ ಉಬ್ಬಿ ಉಕ್ಕಿದ ಕ್ಷೀರಸಮುದ್ರವೊ, ಅಥವಾ ಅದರ ಅಲೆಗಳೊ, ಕಾಮನ ಕೀರ್ತಿಯ ಮರೀಚಿಕೆಗಳೊ (ಬೆಳುದಿಂಗಳ ಬಿಸಿಲುಕುದುರೆಯಂತೆ) ನಿಜಕಾಂತನಾದ ಚಂದ್ರನನ್ನು ಕಾಣುತ್ತಲೆ ನಾಚಿಕೆಗೊಂಡು ಬಿಳಿಚಿಕೊಂಡಳೊ ರಾತ್ರಿವಧು; ಅಥವಾ ಮನ್ಮಥನು ಭೂಮಂಡಲಕ್ಕೆ ವಶೀಕರಣ ಮಾಡುವ ಮಂಕುಬೂದಿಯನ್ನು ಚೆಲ್ಲಿದನೊ, ಹೇಳಲು ಅರಿದು/ ಅಸಾಧ್ಯವಾಗಿದೆ ಎನ್ನುವಂತೆ ಚಂದ್ರವಕಿರಣಗಳು ಎಲ್ಲಾ ದಿಕ್ಕಿನಲ್ಲಿ ಹರಡಿತು.
  • (ಪದ್ಯ-೧೫)

ಪದ್ಯ:-:೧೬:

ಸಂಪಾದಿಸಿ

ತವೆ ಶಾಂತನಮೃತ ರೂಪಂ ಶೈತ್ಯ ವರ್ಧನಂ |
ಭೂವನ ಪ್ರಕಾಶಂ ಜನಾವಲೋಕ ಪ್ರಿಯಂ |
ಧವಳ ತನು ವೃತ್ತಂ ನಿರಂತರಂ ವಿಷ್ಣುಪದ ಸೇವಕಂ ಕೃಷ್ಣಾಂಕನು ||
ದಿವಿಜ ತೋಷಕನಾದರಾಜನಭ್ಯುದಯದೊಳ್ |
ಕುವಲಯ ಶ್ರೀ ವಿರಾಜಿತಮಪ್ಪುದೇಂ ಕೌತು |
ಕಮೆ ಜಾರಚೋರರ್ಕಳಡಗದಿರ್ದಪರೆ ಪೇಳೆನಲಿಂದು ಮರೆದನಂದು ||16||

ಪದವಿಭಾಗ-ಅರ್ಥ:
(ಚಂದ್ರನೆಂಬ ರಾಜನ ವರ್ಣನೆ):ತವೆ ಶಾಂತನಮೃತ ರೂಪಂ ಶೈತ್ಯ ವರ್ಧನಂ ಭೂವನ ಪ್ರಕಾಶಂ ಜನಾವಲೋಕ ಪ್ರಿಯಂ ಧವಳ ತನು ವೃತ್ತಂ ನಿರಂತರಂ ವಿಷ್ಣುಪದ ಸೇವಕಂ ಕೃಷ್ಣಾಂಕನು=[ಬಹಳ ಶಾಂತನು, ಅಮೃತ ರೂಪನು, ಶೈತ್ಯ-ವರ್ಧನನು/ ತಂಪುಹೆಚ್ಚಿಸುವವನು, ಭೂಮಿ ವನಗಳನ್ನು ಪ್ರಕಾಶಗೊಳಿಸುವವನು, ಜನರು ನೋಡಲು ಪ್ರಿಯನಾವನು, ದುಂಡಾದ ಬಿಳಿಯ ದೇದವನು, ನಿರಂತರವಾಗಿ ವಿಷ್ಣುವಿನ ಪಾದಸೇವಕನು, ದೇಹದಲ್ಲಿ ಕೃಷ್ಣಮೃಗವನ್ನು ಹೊಂದಿದವನು,];;ದಿವಿಜ ತೋಷಕನಾದ ರಾಜನ ಅಭ್ಯುದಯದೊಳ್ ಕುವಲಯ ಶ್ರೀ ವಿರಾಜಿತಂ ಅಪ್ಪುದೇಂ ಕೌತುಕಮೆ ಜಾರಚೋರರ್ಕಳು ಅಡಗದೆ ಇರ್ದಪರೆ ಪೇಳೆನಲು ಇಂದು ಮರೆದನು ಅಂದು=[ದೇವತೆಗಳಿಗೆ ಸಂತೋಷಕರನು, ಈ ರಾಜನ ಅಭ್ಯುದಯದಲ್ಲಿ ಭೂಮಿಯು ಸಂಪತ್ತಿನಿಂದ ಪ್ರಕಾಶಿಸುವುದು ಆಶ್ಚರ್ಯವೇ? ಜಾರರು ಕಳ್ಳರು ಈ ಚಂದ್ರನ ಬೆಳಕಿನಲ್ಲಿ ಹೆದರಿ ಅಡಗದೆ ಇರುವರೆ ಹೇಳು, ಎನ್ನುವಂತೆ ಚಂದ್ರನು ಅಂದು ಮರೆದನು].
  • ತಾತ್ಪರ್ಯ:(ಚಂದ್ರನೆಂಬ ರಾಜನ ವರ್ಣನೆ):ಚಂದ್ರನು ಬಹಳ ಶಾಂತನು, ಅಮೃತ ರೂಪನು, ಶೈತ್ಯ-ವರ್ಧನನು/ ತಂಪುಹೆಚ್ಚಿಸುವವನು, ಭೂಮಿ ವನಗಳನ್ನು ಪ್ರಕಾಶಗೊಳಿಸುವವನು, ಜನರು ನೋಡಲು ಪ್ರಿಯನಾವನು, ದುಂಡಾದ ಬಿಳಿಯ ದೇದವನು, ನಿರಂತರವಾಗಿ ವಿಷ್ಣುವಿನ ಪಾದಸೇವಕನು, ದೇಹದಲ್ಲಿ ಕೃಷ್ಣಮೃಗವನ್ನು ಹೊಂದಿದವನು, ದೇವತೆಗಳಿಗೆ ಸಂತೋಷಕರನು, ಈ ರಾಜನ ಅಭ್ಯುದಯದಲ್ಲಿ ಭೂಮಿಯು ಸಂಪತ್ತಿನಿಂದ ಪ್ರಕಾಶಿಸುವುದು ಆಶ್ಚರ್ಯವೇ? ಜಾರರು ಕಳ್ಳರು ಈ ಚಂದ್ರನ ಬೆಳಕಿನಲ್ಲಿ ಹೆದರಿ ಅಡಗದೆ ಇರುವರೆ ಹೇಳು, ಎನ್ನುವಂತೆ ಚಂದ್ರನು ಅಂದು ಮರೆದನು.
  • (ಪದ್ಯ-೧೬)

ಪದ್ಯ:-:೧೭:

ಸಂಪಾದಿಸಿ

ಚಂದ್ರನುದೆಯಂಗೆಯ್ಯೆ ದೆಸೆದೆಸಗಳೆಲ್ಲಮುಂ |
ಚಂದ್ರಿಕೆಗಳಿಂದೆ ಬೆಳಬೆಳಗಿ ಬೆಳ್ಳಿವೊಲಾಗೆ |
ಚಂದ್ರಕಾಂತಂಗಳಿಂದೊಲ್ದು ನಿರ್ಮಿಸಿದ ನವ ಸೌಧಸೌಧಾಗ್ರಂಗಳು ||
ಚಂದ್ರಶಾಲೆಗಳೊಳಗೆ ರತಿ ಕಲಾ ಪ್ರೌಢಿಯಿಂ |
ಚಂದ್ರವದನೆಯರಂತರಂಗದೊಳ್ ಪುದಿದ ಕೆ |
ಚ್ಚಂ ದ್ರವಿಸುವಂತೆ ರಂಜಿಸಿ ರಮಿಸುತಿಹ ಪುರುಷರಾಪುರದೊಳೆಸಿರ್ದರು ||17||

ಪದವಿಭಾಗ-ಅರ್ಥ:
ಚಂದ್ರನು ಉದೆಯಂಗೆಯ್ಯೆ ದೆಸೆದೆಸಗಳು ಎಲ್ಲಮುಂ ಚಂದ್ರಿಕೆಗಳಿಂದೆ ಬೆಳಬೆಳಗಿ ಬೆಳ್ಳಿವೊಲು ಆಗೆ ಚಂದ್ರಕಾಂತಂಗಳಿಂದ ಒಲ್ದು (ಒಲಿದು ಪ್ರೀತಿಯಿಂದ) ನಿರ್ಮಿಸಿದ ನವ ಸೌಧ ಸೌಧಾಗ್ರಂಗಳು=[ಚಂದ್ರನು ಉದೆಯವಾಗಲು, ದಿಕ್ಕುದಿಕ್ಕುಗಳು ಎಲ್ಲವೂ ಬೆಳದಿಂಗಳು ಬೆಳ್ಳಗೆ ಬೆಳಗಿ ಬೆಳ್ಳಿಯಂತೆ ಆಗಲು, ಚಂದ್ರಕಾಂತ ಶಿಲೆಳಿಂದ ಪ್ರೀತಿಯಿಂದ ನಿರ್ಮಿಸಿದ ಹೊಸ ಕಟ್ಟಡಗಳು ಅದರ ಉಪ್ಪರಿಗೆಗಳು ಮತ್ತು];; ಚಂದ್ರಶಾಲೆಗಳೊಳಗೆ ರತಿ ಕಲಾ ಪ್ರೌಢಿಯಿಂ ಚಂದ್ರವದನೆಯರ ಅಂತರಂಗದೊಳ್ ಪುದಿದ(ಹೊದ್ದಿದ,ಹೊಕ್ಕಿದ್ದ) ಕೆಚ್ಚಂ (ಸೊಕ್ಕು,ಉದ್ರೇಕ) ದ್ರವಿಸುವಂತೆ ರಂಜಿಸಿ ರಮಿಸುತಿಹ ಪುರುಷರು ಆಪುರದೊಳು ಎಸೆದಿರ್ದರು =[ಚಂದ್ರಶಾಲೆಗಳೊಳಗೆ ರತಿಕಲಾ ವಿದ್ಯಾನಿಪುಣರಾದ ಚಂದ್ರವದನೆಯರ ಮನಸ್ಸಿನಲ್ಲಿ ಹೊಕ್ಕಿದ್ದ ಕಾಮೋದ್ರೇಕವು ದ್ರವಿಸುವಂತೆ ಸಂತೋಷಪಡಿಸಿ ರಮಿಸುತ್ತಿರುವ ಪುರುಷರು ಆ ಪುರದಲ್ಲಿ ಇದ್ದರು].
  • ತಾತ್ಪರ್ಯ:ಚಂದ್ರನು ಉದೆಯವಾಗಲು, ದಿಕ್ಕುದಿಕ್ಕುಗಳು ಎಲ್ಲವೂ ಬೆಳದಿಂಗಳು ಬೆಳ್ಳಗೆ ಬೆಳಗಿ ಬೆಳ್ಳಿಯಂತೆ ಆಗಲು, ಚಂದ್ರಕಾಂತ ಶಿಲೆಳಿಂದ ಪ್ರೀತಿಯಿಂದ ನಿರ್ಮಿಸಿದ ಹೊಸ ಕಟ್ಟಡಗಳು ಅದರ ಉಪ್ಪರಿಗೆಗಳು ಮತ್ತು ಚಂದ್ರಶಾಲೆಗಳೊಳಗೆ ರತಿಕಲಾ ವಿದ್ಯಾನಿಪುಣರಾದ ಚಂದ್ರವದನೆಯರ ಮನಸ್ಸಿನಲ್ಲಿ ಹೊಕ್ಕಿದ್ದ ಕಾಮೋದ್ರೇಕವು ದ್ರವಿಸುವಂತೆ ಸಂತೋಷಪಡಿಸಿ ರಮಿಸುತ್ತಿರುವ ಪುರುಷರು ಆ ಪುರದಲ್ಲಿ ಇದ್ದರು].
  • (ಪದ್ಯ-೧೭)

ಪದ್ಯ:-:೧೭:

ಸಂಪಾದಿಸಿ

ಕುಚಮಂಡಲದ ಮೇಲೆ ಚಾರು ನಯನದ ನಡುವೆ |
ಕಚದೆಡೆಯೊಳಿಹ ಕೃಷ್ಣ ವೈಭವಂ ತನ್ನ ಬಗೆ |
ಗುಚಿತಮಪ್ಪುದು ನಿನ್ನೆದೆಯೊಳಿರ್ಪ ಕೃಷ್ಣಭಾವಂ ತನಗೆ ವಿರಹಿತವನು ||
ರಚಿಸದಿರದೆಂದೊರ್ವನಿನಿಯಳಂ ತಿಳಿಸಲ್ಕೆ |
ವಿಚಲಮಪ್ಪುದೆ ಕೃಷ್ಣಹೃದಯಮೆಂದವಳೊದರೆ |
ವಚನದೋಷಕೆ ಬೇಡಿಕೊಂಬವೊಲ್ ಕಾಲ್ಗೆರಗಿ ಸಂತೈಸಿದಂ ಪ್ರಿಯೆಯನು ||18||

ಪದವಿಭಾಗ-ಅರ್ಥ:
ಕುಚಮಂಡಲದ ಮೇಲೆ ಚಾರು ನಯನದ ನಡುವೆ ಕಚದೆಡೆಯೊಳು ಇಹ ಕೃಷ್ಣ ವೈಭವಂ ತನ್ನ ಬಗೆಗೆ ಉಚಿತಮಪ್ಪುದು ನಿನ್ನೆ ಎದೆಯೊಳಿರ್ಪ ಕೃಷ್ಣಭಾವಂ ತನಗೆ ವಿರಹಿತವನು=[ದುಂಡಾದ ಕುಚದ ಮೇಲೆ ಅಂದವಾದ ಕಣ್ಣಿನ ಮದ್ಯ ವಿರಳರೊಮದೊಡನೆ ಇರುವ ಕೃಷ್ಣವೈಭವವು/ಮೊಲೆತೊಟ್ಟುಇರುವುದು ನಿನಗೆ ಉಚಿತವೇ ಸರಿ (ಸಾಮಾನ್ಯ), ಆದರೆ ನಿನ್ನೆ ಎದೆಯಲ್ಲಿರುವ ಆ ಕೃಷ್ಣಭಾವವು (ಕಪ್ಪು ಮೊಲೆತೊಟ್ಟು) ತನಗೆ ವಿರಹಸಂಕಟವನ್ನು ];; ರಚಿಸದೆ ಇರದು ಎಂದು ಓರ್ವನು ಇನಿಯಳಂ ತಿಳಿಸಲ್ಕೆ ವಿಚಲಮಪ್ಪುದೆ ಕೃಷ್ಣಹೃದಯಂ ಎಂದವಳು ಒದರೆ ವಚನದೋಷಕೆ ಬೇಡಿಕೊಂಬವೊಲ್ ಕಾಲ್ಗೆ ಎರಗಿ ಸಂತೈಸಿದಂ ಪ್ರಿಯೆಯನು=[ಉಂಟುಮಾಡದೆ ಇರುವುದಿಲ್ಲ / ಉಂಟುಮಾಡವುದು, ಎಂದು ಒಬ್ಬನು ತನ್ನ ಪ್ರಿಯಳಿಗೆ ತಿಳಿಸಲು, ಕೃಷ್ಣಹೃದಯವು ಅಥವಾ ಕೃಷ್ಣಭಾವವು ನಿನ್ನ ಮನಸ್ಸುಕೆಡಿಸುವದೇ? ಎಂದು ಅವಳು ಗದರಿಸಿದಳು (ಅವಳು ಕೃಷ್ಣನಭಕ್ತೆ, ಕೃಷ್ಣಭಾವ ಎಂಬುದನ್ನು ಭಗವಂತ ಕೃಷ್ಣನಲ್ಲಿ ಮನಸ್ಸಿರುವುದು ಎಂಬ ಅರ್ಥದಲ್ಲಿ ಪ್ರಿಯನಿಗೆ ಅದರಿಂದ ತೊಂದರೆಯೇ ಎಂದು ಗದರಿದಳು). ಆಗ ಅವನು ಪ್ರಿಯಳ ಕಾಲಿಗೆ ಬಿದ್ದು ನಿನ್ನ ಸ್ವಾಮಿಯ ಹೆಸರು ತಪ್ಪಾಗಿ ಪ್ರಯೋಗಿಸಿದ್ದಕ್ಕೆ ಕ್ಷಮಿಸು ಎಂದು ಅವಳನ್ನು ಸಂತೈಸಿದನು. (ಎಲ್ಲಾ ಕಡೆಯೂ ಕೃಷ್ಣಭಕ್ತರಿದ್ದರು ಎಂದು ಭಾವ)]
  • ತಾತ್ಪರ್ಯ:ದುಂಡಾದ ಕುಚದ ಮೇಲೆ ಅಂದವಾದ ಕಣ್ಣಿನ ಮದ್ಯ ವಿರಳರೊಮದೊಡನೆ ಇರುವ ಕೃಷ್ಣವೈಭವವು/ಮೊಲೆತೊಟ್ಟುಇರುವುದು ನಿನಗೆ ಉಚಿತವೇ ಸರಿ, ಆದರೆ ನಿನ್ನೆ ಎದೆಯಲ್ಲಿರುವ ಆ ಕೃಷ್ಣಭಾವವು (ಕಪ್ಪು ಮೊಲೆತೊಟ್ಟು) ತನಗೆ ವಿರಹಸಂಕಟವನ್ನು ಉಂಟುಮಾಡವುದು, ಎಂದು ಒಬ್ಬನು ತನ್ನ ಪ್ರಿಯಳಿಗೆ ತಿಳಿಸಲು, ಕೃಷ್ಣಹೃದಯವು ಅಥವಾ ಕೃಷ್ಣಭಾವವು ನಿನ್ನ ಮನಸ್ಸುಕೆಡಿಸುವದೇ? ಎಂದು ಅವಳು ಗದರಿಸಿದಳು (ಅವಳು ಕೃಷ್ಣನಭಕ್ತೆ, ಕೃಷ್ಣಭಾವ ಎಂಬುದನ್ನು ಭಗವಂತ ಕೃಷ್ಣನಲ್ಲಿ ಮನಸ್ಸಿರುವುದು ಎಂಬ ಅರ್ಥದಲ್ಲಿ ಪ್ರಿಯನಿಗೆ ಅದರಿಂದ ತೊಂದರೆಯೇ ಎಂದು ಗದರಿದಳು). ಆಗ ಅವನು ಪ್ರಿಯಳ ಕಾಲಿಗೆ ಬಿದ್ದು ನಿನ್ನ ಸ್ವಾಮಿಯ ಹೆಸರು ತಪ್ಪಾಗಿ ಪ್ರಯೋಗಿಸಿದ್ದಕ್ಕೆ ಕ್ಷಮಿಸು ಎಂದು ಅವಳನ್ನು ಸಂತೈಸಿದನು. (ಎಲ್ಲಾ ಕಡೆಯೂ ಕೃಷ್ಣಭಕ್ತರಿದ್ದರು ಎಂದು ಭಾವ)]
  • (ಪದ್ಯ-೧೮)

ಪದ್ಯ:-:೧೯:

ಸಂಪಾದಿಸಿ

ಅಚ್ಚಬೆಳ್ದಿಂಗಳೊಳ್ ಮತ್ತೋರ್ವನಿನಿಯಳಂ |
ನಿಚ್ಚಟದೊಳುಳಿವಂತೆ ನೀವಿಯಂ ಬರೆ ಸೆಳೆದು |
ಹೆಚ್ಚಳಿಸಿ ಪ್ರಿಯೆ ನಿನ್ನ ಸರ್ವಾಂಗಮಂ ನೋಡಿ ಕೃಷ್ಣಾವಲೋಕನವನು ||
ಮೆಚ್ಚಿ ತಣಿಯದವೊಲಿರ್ದಪುವೆನ್ನ ಕಂಗಳೆಂ |
ದುಚ್ಚರಿಸಲೆಲೆ ಮರುಳೆ ತಪ್ಪನಾಡಿದೆ ದೃಷ್ಟಿ |
ಗೊಚ್ಚತಂಗೊಂಡು ರಂಜಿಪ ಕೃಷ್ಣರೂಪಮಿರಲನ್ಯಮಿನ್ನೇಕೆಂದಳು ||19||

ಪದವಿಭಾಗ-ಅರ್ಥ:
ಅಚ್ಚ ಬೆಳ್ದಿಂಗಳೊಳ್ ಮತ್ತೋರ್ವನು ಇನಿಯಳಂ ನಿಚ್ಚಟದೊಳು ಉಳಿವಂತೆ ನೀವಿಯಂ (ಸೀರೆಯನ್ನು ಉಡುವಾಗ ನಿರಿಗೆಗಳನ್ನು ಸಿಕ್ಕಿಸಲು ಹಾಕುವ ಗಂಟು) ಬರೆಸೆಳೆದು ಹೆಚ್ಚಳಿಸಿ=[ಶುದ್ಧ ಬೆಳ್ದಿಂಗಳಲ್ಲಿ ಮತ್ತೊಬ್ಬನು ತನ್ನ ಪ್ರಿಯೆಯನ್ನು ಅಲುಗಾಡದೆ ನಿಲ್ಲಲ್ಲು ಹೇಳಿ ಸೀರೆಯನ್ನು ಉಡುವಾಗ ನಿರಿಗೆಗಳನ್ನು ಸಿಕ್ಕಿಸಲು ಹಾಕುವ ಗಂಟುನ್ನು ಬರೆಸೆಳೆದು ಹಿಗ್ಗಿ ಹೀಗೆಂದನು,];; ಪ್ರಿಯೆ ನಿನ್ನ ಸರ್ವಾಂಗಮಂ ನೋಡಿ ಕೃಷ್ಣಾವಲೋಕನವನು ಮೆಚ್ಚಿ ತಣಿಯದವೊಲ್ ಇರ್ದಪುವು ಎನ್ನ ಕಂಗಳು ಎಂದು ಉಚ್ಚರಿಸಲು,=['ಪ್ರಿಯೆ ನಿನ್ನ ಇಡೀದೇಹವನ್ನು ನೋಡಿ ಕೃಷ್ಣಾವಲೋಕನವನ್ನು (ಕಪ್ಪುಭಾಗದ ನೋಟವನ್ನು) ಮೆಚ್ಚಿ ತೃಪ್ತಿಯಾಗುವುದೇ ಇರುಪುವು ನನ್ನ ಕಂಣ್ಣುಗಳು ಎಂದು ಹೇಳಲು,];; ಎಲೆ ಮರುಳೆ ತಪ್ಪನಾಡಿದೆ ದೃಷ್ಟಿಗೆ ಒಚ್ಚತಂಗೊಂಡು ರಂಜಿಪ ಕೃಷ್ಣರೂಪಮಿರಲು ಅನ್ಯಂ ಇನ್ನೇಕೆ ಏಂದಳು=[ಅವಳು ಸಿಟ್ಟಿನಿಂದ,ಎಲೆ ಮರುಳೆ ತಪ್ಪು ಮಾತನ್ನು ಆಡಿದೆ, ದೃಷ್ಟಿಗೆ ಹಿತವಾಗಿ ರಂಜಿಸುವುದು ಭಗವಾನ್ ಕೃಷ್ಣರೂಪವೇ ಇರಲು ಬೇರೆ ಇನ್ನೇಕೆ ಬೇಕು ಏಂದಳು]. ('ಕೃಷ್ಣ' ಪದವನ್ನು ಅನ್ಯಥಾ ಸಾಮಾನ್ಯ ವಸ್ತುವಿಗೆ ಉಪಯೋಗಿಸುತ್ತಿರಲಿಲ್ಲವೆಂದು ಭಾವ)
  • ತಾತ್ಪರ್ಯ:ಶುದ್ಧ ಬೆಳ್ದಿಂಗಳಲ್ಲಿ ಮತ್ತೊಬ್ಬನು ತನ್ನ ಪ್ರಿಯೆಯನ್ನು ಅಲುಗಾಡದೆ ನಿಲ್ಲಲ್ಲು ಹೇಳಿ ಸೀರೆಯನ್ನು ಉಡುವಾಗ ನಿರಿಗೆಗಳನ್ನು ಸಿಕ್ಕಿಸಲು ಹಾಕುವ ಗಂಟುನ್ನು ಬರೆಸೆಳೆದು ಹಿಗ್ಗಿ ಹೀಗೆಂದನು, 'ಪ್ರಿಯೆ ನಿನ್ನ ಇಡೀದೇಹವನ್ನು ನೋಡಿ ಕೃಷ್ಣಾವಲೋಕನವನ್ನು (ಕಪ್ಪುಭಾಗದ ನೋಟವನ್ನು) ಮೆಚ್ಚಿ ತೃಪ್ತಿಯಾಗುವುದೇ ಇರುಪುವು ನನ್ನ ಕಂಣ್ಣುಗಳು, ಎಂದು ಹೇಳಲು, ಅವಳು ಸಿಟ್ಟಿನಿಂದ, ಎಲೆ ಮರುಳೆ ತಪ್ಪು ಮಾತನ್ನು ಆಡಿದೆ, ದೃಷ್ಟಿಗೆ ಹಿತವಾಗಿ ರಂಜಿಸುವುದು ಭಗವಾನ್ ಕೃಷ್ಣರೂಪವೇ ಇರಲು, ಬೇರೆ ಇನ್ನೇಕೆ ಬೇಕು ಏಂದಳು]. ('ಕೃಷ್ಣ' ಪದವನ್ನು ಅನ್ಯಥಾ ಸಾಮಾನ್ಯ ವಸ್ತುವಿಗೆ ಉಪಯೋಗಿಸುತ್ತಿರಲಿಲ್ಲವೆಂದು ಭಾವ)
  • (ಪದ್ಯ-೧೯)

ಪದ್ಯ:-:೧೯:

ಸಂಪಾದಿಸಿ

ಅಂಗಜ ಶ್ರಮದಿಂದೆ ಬೆಮರ್ದ ಕಾಮಿನಿ ತನ್ನ |
ತುಂಗಕುಚ ತಟದ ಕಸ್ತೂರಿಯೊಳ್ ಪುದಿದಿನಿಯ |
ನಂಗಮಂ ಕಂಡಿದೇತಕೆ ಕೃಷ್ಣರೂಪಾದೆ ನೀನೆಂದು ಬೆಸಗೊಳಲ್ಕೆ ||
ಅಂಗನೆ ತಿಳಿಯದಾದೆ ಪೊತ್ತಿರ್ದನಂದು ಕೃ |
ಷ್ಣಂ ಗಿರಿಯೆನೊಂದ ನೆರಡದ್ರಿಗಳ ನೀಗಳಾಂ |
ಹಿಂಗದಾಂತಿಹೆ ನೆನಗೆ ಕೃಷ್ಣಭಾವಂ ಬರ್ಪುದಚ್ಚರಿಯೆ ಪೇಳೆಂದನು ||20|

ಪದವಿಭಾಗ-ಅರ್ಥ:
ಅಂಗಜ ಶ್ರಮದಿಂದೆ ಬೆಮರ್ದ ಕಾಮಿನಿ ತನ್ನ ತುಂಗಕುಚ ತಟದ ಕಸ್ತೂರಿಯೊಳ್ ಪುದಿದಿನಿಯ ನಂಗಮಂ ಕಂಡಿದೇತಕೆ ಕೃಷ್ಣರೂಪಾದೆ ನೀನೆಂದು ಬೆಸಗೊಳಲ್ಕೆ=[ರತಿಕ್ರೀಡೆಯ ಆಯಾಸದಿಂದ ಬೆವರಿದ ಪ್ರೇಯಸಿಯು ತನ್ನ ಎತ್ತರದ ಕುಚದ ತಳದಲ್ಲಿರುವ ಪರಿಮಳದ ಕಸ್ತೂರಿಯಲ್ಲಿ ಪುದಿದ/ಹುದುಗಿದ ಪ್ರಿಯಕರನ (ಗುಪ್ತಾಂಗ)ಅಂಗವನ್ನು ಕಂಡು, 'ಇದೇತಕ್ಕೆ, ಕೃಷ್ಣರೂಪು/ಕಪ್ಪುಬಣ್ಣದವನು ಆಗಿರುದೆ ನೀನು,' ಎಂದು ಕೇಳಲು];; ಅಂಗನೆ ತಿಳಿಯದಾದೆ ಪೊತ್ತಿರ್ದನು ಅಂದು ಕೃಷ್ಣಂ ಗಿರಿಯೆನು ಒಂದನು, ಎರಡು ಅದ್ರಿಗಳನು(ಬೆಟ್ಟಗಳನ್ನು) ಈಗಳು ಆಂ ಹಿಂಗೆ ಅದು(ಕಪ್ಪು ಬಣ್ಣ) ಆಂತಿಹೆ (ಪಡೆದಿರುವೆನು) ನೆನಗೆ ಕೃಷ್ಣಭಾವಂ ಬರ್ಪುದು ಅಚ್ಚರಿಯೆ ಪೇಳೆಂದನು=[ಪ್ರಿಯಳೇ ತಿಳಿಯದಾದೆಯಾ! ಗೊತ್ತಿಲ್ಲವೇ? ಅಂದು ಕೃಷ್ಣನು ಒಂದು ಬೆಟ್ಟವನ್ನು ಹೊತ್ತಿದ್ದನು, ಈಗ ನಾನು ಎರಡು ಬೆಟ್ಟಗಳನ್ನು ಹೀಗೆ ಹೊತ್ತಿರುವೆನು; ನೆನಗೆ ಕೃಷ್ಣಭಾವವು ಬರುವುದು ಆಶ್ಚರ್ಯವೇ ಹೇಳು ಎಂದನು.]
  • ತಾತ್ಪರ್ಯ:ರತಿಕ್ರೀಡೆಯ ಆಯಾಸದಿಂದ ಬೆವರಿದ ತನ್ನ ಪ್ರೇಯಸಿಯು ಎತ್ತರದ ಕುಚದ ತಳದಲ್ಲಿರುವ ಪರಿಮಳದ ಕಸ್ತೂರಿಯಲ್ಲಿ ಪುದಿದ/ಹುದುಗಿದ ಪ್ರಿಯಕರನ (ಗುಪ್ತಾಂಗ)ಅಂಗವನ್ನು ಕಂಡು, 'ಇದೇತಕ್ಕೆ, ಕೃಷ್ಣರೂಪು/ಕಪ್ಪುಬಣ್ಣದವನು ಆಗಿರುದೆ ನೀನು,' ಎಂದು ಹಾಸ್ಯವಾಗಿ ಕೇಳಲು, ಪ್ರಿಯಳೇ ತಿಳಿಯದಾದೆಯಾ! ಗೊತ್ತಿಲ್ಲವೇ? ಅಂದು ಕೃಷ್ಣನು ಒಂದು ಬೆಟ್ಟವನ್ನು ಹೊತ್ತಿದ್ದನು, ಈಗ ನಾನು ಎರಡು ಬೆಟ್ಟಗಳನ್ನು (ತುಂಗ ಕುಚಗಳು) ಹೀಗೆ ಹೊತ್ತಿರುವೆನು; ನೆನಗೆ ಕೃಷ್ಣಭಾವವು ಬರುವುದು ಆಶ್ಚರ್ಯವೇ ಹೇಳು ಎಂದನು. (ಶೃಂಗಾರದಲ್ಲಿ ಹಾಸ್ಯರಸ)
  • (ಪದ್ಯ-೧೯)

ಪದ್ಯ:-:೨೧:

ಸಂಪಾದಿಸಿ

ಕತ್ತಲೆಯನಡಸಿ ಪಿಡಿದವರುಂಟೆ ತಾರೆಗಳ |
ಮೊತ್ತಮಂ ಪೊಯ್ದು ಕೆಡಪಿದರುಂಟೆ ಬೆಟ್ಟಗಳ |
ನೊತ್ತಿ ಕರದಿಂದೆ ಕದುಬಿದರುಂಟೆ ಗಗನಮಂ ತಕ್ಕೆಗೊಂದಿಸಿದರುಂಟೆ ||
ವೃತ್ತದಿಂದೆಸೆವ ಶಶಿಯಂ ಚುಂಬಿಸಿದರುಂಟೆ |
ಚಿತ್ತಜಾಹವದ ಭಟರಂಗವಣಿ ಪೊಸತೆಂದು |
ಹತ್ತಿರಿಹ ಪಂಜರದ ರಾಜಕೀರಂ ಪೇಳ್ದುದೊರ್ವ ನಾಯಕಿಯ ಕೂಡೆ ||21||

ಪದವಿಭಾಗ-ಅರ್ಥ:
ಕತ್ತಲೆಯನು ಅಡಸಿ ಪಿಡಿದವರುಂಟೆ? ತಾರೆಗಳ ಮೊತ್ತಮಂ ಪೊಯ್ದು ಕೆಡಪಿದರುಂಟೆ? ಬೆಟ್ಟಗಳ ನೊತ್ತಿ ಕರದಿಂದೆ ಕದುಬಿದರುಂಟೆ? ಗಗನಮಂ ತಕ್ಕೆಗೊಂದಿಸಿದರುಂಟೆ ?=[{ಕತ್ತಲೆಯನ್ನು ಒಟ್ಟುಗೂಡಿಸಿ ಹಿಡಿದವರು ಇದ್ದಾರೆಯೇ? ತಾರೆಗಳ/ನಕ್ಷತಗಳ ಗುಂಪನ್ನು ಹೊಡೆದು ಕೆಡವಿದರು ಇದ್ದಾರೆಯೇ? ಬೆಟ್ಟಗಳನ್ನು ಒತ್ತಿ ಕೈಯಿಂದ ಅಮುಕಿದವರು ಇದ್ದಾರೆಯೇ? ಆಕಾಶವನ್ನು ಅಪ್ಪಿ ಹಿಡಿದವರು ಇದ್ದಾರೆಯೇ?];; ವೃತ್ತದಿಂದೆಸೆವ ಶಶಿಯಂ ಚುಂಬಿಸಿದರುಂಟೆ? ಚಿತ್ತಜ ಆಹವದ ಭಟರ ಅಂಗವಣಿ ಪೊಸತು ಎಂದು ಹತ್ತಿರಿಹ ಪಂಜರದ ರಾಜಕೀರಂ ಪೇಳ್ದುದು ಓರ್ವ ನಾಯಕಿಯ ಕೂಡೆ=[ದುಡಾಗಿರುವ ಚಂದ್ರನನ್ನು ಚುಂಬಿಸಿದವರು ಇದ್ದಾರೆಯೇ? ಮನ್ಮಥನ ಯುದ್ಧದಲ್ಲಿ ವೀರರ ಧೈರ್ಯಸಾಹಸ ಹೊಸತು ಎಂದು ಹತ್ತಿರ ಇದ್ದ ಪಂಜರದ ರಾಜಗಿಣಿ ಒಬ್ಬ ನಾಯಕಿಗೆ ಹೇಳಿತು.].
  • ತಾತ್ಪರ್ಯ:ಕತ್ತಲೆಯನ್ನು ಒಟ್ಟುಗೂಡಿಸಿ ಹಿಡಿದವರು ಇದ್ದಾರೆಯೇ? ತಾರೆಗಳ/ನಕ್ಷತಗಳ ಗುಂಪನ್ನು ಹೊಡೆದು ಕೆಡವಿದರು ಇದ್ದಾರೆಯೇ? ಬೆಟ್ಟಗಳನ್ನು ಒತ್ತಿ ಕೈಯಿಂದ ಅಮುಕಿದವರು ಇದ್ದಾರೆಯೇ? ಆಕಾಶವನ್ನು ಅಪ್ಪಿ ಹಿಡಿದವರು ಇದ್ದಾರೆಯೇ? ದುಡಾಗಿರುವ ಚಂದ್ರನನ್ನು ಚುಂಬಿಸಿದವರು ಇದ್ದಾರೆಯೇ? ಮನ್ಮಥನ ಯುದ್ಧದಲ್ಲಿ ವೀರರ ಧೈರ್ಯಸಾಹಸ ಹೊಸತು (ಇದನ್ನೆಲ್ಲಾ ಮಾಡಬಲ್ಲರು) ಎಂದು ಹತ್ತಿರ ಇದ್ದ ಪಂಜರದ ರಾಜಗಿಣಿ ಒಬ್ಬ ನಾಯಕಿಗೆ ಹೇಳಿತು.
  • (ಪ್ರಿಯಕರ ಮತ್ತು ಪ್ರೇಯಸಿಯರು ರತಿಕ್ರೀಡೆಯಲ್ಲಿ, ಪ್ರಿಯಕರನು ಪ್ರೇಯಸಿಯ ಕೂದಲೆಂಬ ಕತ್ತಲೆಯನ್ನು ಹಿಡಿದು, ಮಲ್ಲಿಗೆ ಮೊಗ್ಗಿನದಂಡೆಯೆಂಬ ತಾರೆಗಳ ಮೊತ್ತವನ್ನು ಹೊಡೆದ ಚೆಲ್ಲಾಡಿ, ಸ್ತನಗಳೆಂಬ ಬೆಟ್ಟಗಳನ್ನು ಕೈಯಿಂದ ಅಮುಕಿ ತಗ್ಗಿಸಿ, ಸಣ್ಣ ನಡುವೆಂಬ ಆಕಾಶವನ್ನು ತೆಕ್ಕೆಯಲ್ಲಿ ಬಳಸಿ, ಗುಂಡಾಗಿ ಪ್ರಕಾಶಿಸುವ ಮುಖವೆಂಬ ಚಂದ್ರನನ್ನು ಚುಂಬನ ಮಾಡಿ ಹೊಸ ರೀತಿಯ ಮದನ ಯುದ್ಧವನ್ನು ಮಾಡಿದರು ಎಂಬ ಭಾವವು)


  • (ಪದ್ಯ-೨೧)

ಪದ್ಯ:-:೨೨:

ಸಂಪಾದಿಸಿ

ಹರಶರ ಪ್ರಥಮಾವತಾರಲೋಚನೆ ಮಹೇ |
ಶ್ವರ ಚಾಪ ತುಂಗ ವಕ್ಷೋಜಾತೆ ಹಿಮಕರಾ |
ಭರಣ ಮೌರ್ವೀವೇಣಿ ತಾನಿರ್ದುಮನ್ಯಳಂ ಮದನ ಬಾಣಾಕ್ಷಿಯೆಂದು ||
ಸ್ಮರಕಾರ್ಮುಕ ಭ್ರೂಲತಾಶೋಭೀಯೆಂದು ಶಂ |
ಬರಮಥನ ಶಿಂಜಿನೀ ಲೋಲಕುಂತಳೆಯೆಂದು |
ಕರೆದೆ ಗಡ ನೀನೆಂದು ಸವತಿಮತ್ಸರಕೋರ್ವಳೋಪನಂ ಕೋಪಿಸಿದಳು ||22||

ಪದವಿಭಾಗ-ಅರ್ಥ:
ಹರಶರ ಪ್ರಥಮ ಅವತಾರ ಲೋಚನೆ =ಶಿವನ ಬಾಣವಾಗಿದ್ದವನು ವಿಷ್ಣು, ಅವನ ಅವತಾರ ಮೀನು/ಮತ್ಸ್ಯ ಲೋಚನ -ಕಣ್ಣು ಉಳ್ಳವಳು;; ಮಹೇಶ್ವರ ಚಾಪ ತುಂಗ ವಕ್ಷೋಜಾತೆ=ಶಿವನ ಬಿಲ್ಲು ಮೇರು ಪರ್ವತದಂತೆ ಎತ್ತರದ ಎದೆಯಲ್ಲಿ ಸ್ತನವುಳ್ಳವಳು;; ಹಿಮಕರ ಆಭರಣ ಮೌರ್ವೀವೇಣಿ=ಹಿಮಕರನಾದ ಶಿವನ ಆಭರಣವಾದ ಸರ್ಪದ/ಬಿಲ್ಲಿಹೆದೆಯಂತಿರುವ ಜಡೆಯವಳು- (ತಾನಿರ್ದುಂ, ತಾನು ಇದ್ದು ಅನ್ಯಳಂ ಬೇರೆಯವಳನ್ನು,) ಮದನ ಬಾಣಾಕ್ಷಿಯೆಂದು= ಮನ್ಮಥನ ಬಾಣ ಎಂದರೆ ಕಮಲದ ಕಣ್ಣುಳ್ಳವಳು;; ಸ್ಮರಕಾರ್ಮುಕ ಭ್ರೂಲತಾಶೋಭೀಯೆಂದು= ಸ್ಮರ/ಮನ್ಮಥನ ಬಿಲ್ಲಿನಂತೆ ಭ್ರೂ/ಹುಬ್ಬುನಿಂದ ಶೋಭಿಸಿ ಇರುವವಳು;; ಶಂಬರಮಥನ ಶಿಂಜಿನೀ ಲೋಲಕುಂತಳೆಯೆಂದು=ಶಂಬರಾಸುರನನ್ನು ಕೊಂದ ಮನ್ಮಥನ ಬಿಲ್ಲಿನ ದಾರವಾದ ದುಂಬಿಗಳಂತೆ ಇರುವ ಕೂದಲಿನವಳು;; (ಎಂದು) ಕರೆದೆ ಗಡ ನೀನೆಂದು ಸವತಿಮತ್ಸರಕೆ ಓರ್ವಳು ಓಪನಂ (ಪ್ರಿಯನನ್ನು) ಕೋಪಿಸಿದಳು= ನಾನು ಇರುವಾಗ ನೀನು ಸವತಿಯನ್ನು ಈ ರೀತಿ ಬಣ್ಣಿಸಿ ಕರೆದೆ ಗಡ! ಕರೆದೆಯಲ್ಲಾ ಎಂದು ಸವತಿಮತ್ಸರದಿಂದ ಒಬ್ಬಳು ಪ್ರಿಯನ ಮೇಲೆ ಕೋಪಿಸಿದಳು.
  • ತಾತ್ಪರ್ಯ:ಮೀನು/ಮತ್ಸ್ಯ ಲೋಚನ -ಕಣ್ಣು ಉಳ್ಳವಳು;ಶಿವನ ಬಿಲ್ಲಾದ ಮೇರು ಪರ್ವತದಂತೆ ಎತ್ತರದ ಎದೆಯಲ್ಲಿ ಸ್ತನವುಳ್ಳವಳು;ಹಿಮಕರನಾದ ಶಿವನ ಆಭರಣವಾದ ಸರ್ಪದ/ಬಿಲ್ಲಿಹೆದೆಯಂತಿರುವ ಜಡೆಯವಳು;ಮನ್ಮಥನ ಬಾಣ ಎಂದರೆ ಕಮಲದ ಕಣ್ಣುಳ್ಳವಳು; ಮನ್ಮಥನ ಬಿಲ್ಲಿನಂತೆ ಹುಬ್ಬುನಿಂದ ಶೋಭಿಸಿರುವವಳು; ಮನ್ಮಥನ ಬಿಲ್ಲಿನ ದಾರವಾದ ದುಂಬಿಗಳಂತೆ ಇರುವ ಕೂದಲಿನವಳು; ನಾನು ಇರುವಾಗ ನೀನು ಸವತಿಯನ್ನು ಈ ರೀತಿ ಬಣ್ಣಿಸಿ ಕರೆದೆ ಗಡ! ಕರೆದೆಯಲ್ಲಾ ಎಂದು ಸವತಿಮತ್ಸರದಿಂದ ಒಬ್ಬಳು ಪ್ರಿಯನ ಮೇಲೆ ಕೋಪಿಸಿದಳು.
  • (ಪದ್ಯ-೨೨)XXVI

ಪದ್ಯ:-:೨೩:

ಸಂಪಾದಿಸಿ

ಅವವಂ ಕೆಳೆಯೆಂದುರಿಯನಪ್ಪಿ ಬಾಳ್ದವಂ |
ಪಾವಗಿದು ಬದುಕಿದಪ ನಾವವಂ ಮೃಡ ನಯನ |
ಪಾವಕಜ್ವಾಲೆಯಿಂದುರೆ ಬೆಂದು ಜೀವಿಸುವನಾವವಂ ತ್ರಿಭುವನದೊಳು |
ಈ ವಾಯುವೀಚಂದ್ರ ನೀ ಪುಷ್ಟಬಾಣ ನೀ |
ಮೂವರುಂ ವಿರಹಿಗಳ ಕೊಲೆಗುಳಿದರಕಟ ತಾ |
ನೇಗೈವೆನೆಂದೋಪನಗಲ್ದ ಕಾಮಿನಿಯೊರ್ವಳಾಗ ಚಿಂತಿಸುತಿರ್ದಳು ||23||

ಪದವಿಭಾಗ-ಅರ್ಥ:
ಅವವಂ ಕೆಳೆಯೆಂದು ಉರಿಯನು ಅಪ್ಪಿ ಬಾಳ್ದವಂ, ಪಾವ ಅಗಿದು ಬದುಕಿದಪನು ಆವವಂ ಮೃಡ ನಯನ ಪಾವಕಜ್ವಾಲೆಯಿಂದ ಉರೆ ಬೆಂದು ಜೀವಿಸುವನು ಆವವಂ ತ್ರಿಭುವನದೊಳು=[ಯಾವನು ಗೆಳೆಯನೆಂದು ಬೆಂಕಿ/ಅಗ್ನಿಯನ್ನು ಅಪ್ಪಿ ಬದುಕಿರುವನು?, ಹಾವು ಕಚ್ಚಿ ಬದುಕಿರುವವನು ಯಾವನು?, ಶಿವನ ಹಣೆಗಣ್ಣ ಬೆಂಕಿಯ ಜ್ವಾಲೆಯಿಂದ ಅತಿಯಾಗಿ ಬೆಂದು ಜೀವಿಸುವವನು ಯಾವನು ಈ ಮೂರುಲೋಕದಲ್ಲಿ?];; ಈ ವಾಯುವು ಈ ಚಂದ್ರನು ಈ ಪುಷ್ಟಬಾಣನು ಈ ಮೂವರುಂ, =[ಈ ತಂಗಾಳಿಯು(ಬೆಂಕಿಗೆಳಯ-ಅಪ್ಪಿದವನು), ಈ ಚಂದ್ರನು (ಹಾವು/ ರಾಹು ಕಚ್ಚಿ ಬದುಕಿದವ), ಈ ಪುಷ್ಟಬಾಣನು (ಮನ್ಮಥನು ಶಿವನುರಿಗಣ್ನಲ್ಲಿ ಸುಟ್ಟು ಬೆಂದವನು), ಈ ಮೂವರೂ,];; ವಿರಹಿಗಳ ಕೊಲೆಗ ಉಳಿದರು ಅಕಟ ತಾನು ಏಗೈವೆನು ಎಂದು ಓಪನ ಅಗಲ್ದ ಕಾಮಿನಿಯೊರ್ವಳು ಆಗ ಚಿಂತಿಸುತಿರ್ದಳು=[ಪ್ರಿಯರನ್ನು ಅಗಲಿದ ವಿರಹಿಗಳ ಕೊಲೆಮಾಡಲು ಉಳಿದಿರುವರು ಅಕಟ! (ಈ ಮೂವರಿಂದ ವಿರಹ ಸಂಕಟ ಹೆಚ್ಚುವುದು,ವಿರಹದಿಂದ ಸಾಯುವಷ್ಟು ಸಂಕಟವಾಗಿದೆ) ), ತಾನು ಏನು ಮಾಡಲಿ ಎಂದು, ಪ್ರಿಯಕರನನ್ನು ಅಗಲಿದ ಕಾಮಿನಿ/ಹೆಣ್ಣು ಒಬ್ಬಳು ಆ ರಾತ್ರಿ ಚಿಂತಿಸುತ್ತಿದ್ದಳು.].
  • ತಾತ್ಪರ್ಯ: ಯಾವನು ಗೆಳೆಯನೆಂದು ಬೆಂಕಿ/ಅಗ್ನಿಯನ್ನು ಅಪ್ಪಿ ಬದುಕಿರುವನು?, ಹಾವು ಕಚ್ಚಿ ಬದುಕಿರುವವನು ಯಾವನು?, ಶಿವನ ಹಣೆಗಣ್ಣ ಬೆಂಕಿಯ ಜ್ವಾಲೆಯಿಂದ ಅತಿಯಾಗಿ ಬೆಂದು ಜೀವಿಸುವವನು ಯಾವನು ಈ ಮೂರುಲೋಕದಲ್ಲಿ? ಈ ತಂಗಾಳಿಯು(ಬೆಂಕಿಯ ಗೆಳಯ-ಅಪ್ಪಿದವನು), ಈ ಚಂದ್ರನು (ಹಾವು/ ರಾಹು ಕಚ್ಚಿ ಬದುಕಿದವ), ಈ ಪುಷ್ಟಬಾಣನು (ಮನ್ಮಥನು ಶಿವನ ಉರಿಗಣ್ಣಲ್ಲಿ ಸುಟ್ಟು ಬೆಂದವನು), ಈ ಮೂವರೂ, ಪ್ರಿಯರನ್ನು ಅಗಲಿದ ವಿರಹಿಗಳನ್ನು ಕೊಲೆಮಾಡಲು ಉಳಿದಿರುವರು ಅಕಟ! (ಈ ಮೂವರಿಂದ ವಿರಹ ಸಂಕಟ ಹೆಚ್ಚುವುದು,ವಿರಹದಿಂದ ಸಾಯುವಷ್ಟು ಸಂಕಟವಾಗಿದೆ), ತಾನು ಏನು ಮಾಡಲಿ ಎಂದು, ಪ್ರಿಯಕರನನ್ನು ಅಗಲಿದ ಕಾಮಿನಿ/ಹೆಣ್ಣು ಒಬ್ಬಳು ಆ ರಾತ್ರಿ ಚಿಂತಿಸುತ್ತಿದ್ದಳು.
  • (ಪದ್ಯ-೨೩)

ಪದ್ಯ:-:೨೪:

ಸಂಪಾದಿಸಿ

ವಂಚನೆಯೊಳಿಂತಿರುಳ್ ಪುರಜನದ ನಾನಾ ಪ್ರ |
ಪಂಚೆಲ್ಲಮಂ ನೋಡುತಸುರಾರಿ ಫಲ್ಗುಣರ್ |
ಸಂಚರಿಸುತಿರ್ದರಾ ಪಟ್ಟಣದೊಳನ್ನೆಗಂ ಕಾಂತರಾಲಿಗಂನದೊಳು ||
ಹೊಂಚಿರ್ದ ಕಾಮಿನಿಯರೆದೆಗೆ ಧಿಗಿಲೆನಲ್ ಕೂಗ |
ಲುಂಚದೊಳ್ ಕೋಳಿಗಳ್ ಕೂಟ ವೆಣೆವಕ್ಕಿಗಳ್ |
ಮುಂಚಿದುವು ತಾವರೆಗೆ ತುಂಬಿವಿಂಡೆರಗಿದುದು ಕೊರಗಿದುವು ನೈದಿಲೆಗಳು ||24||

ಪದವಿಭಾಗ-ಅರ್ಥ:
ವಂಚನೆಯೊಳು ಇಂತು ಇರುಳ್ ಪುರಜನದ ನಾನಾ ಪ್ರಪಂಚೆಲ್ಲಮಂ ನೋಡುತ ಅಸುರಾರಿ ಫಲ್ಗುಣರ್ ಸಂಚರಿಸುತಿರ್ದರು ಆ ಪಟ್ಟಣದೊಳು ಅನ್ನೆಗಂ ಕಾಂತರ ಆಲಿಗಂನದೊಳು=[ಕೃಷ್ಣ ಫಲ್ಗುಣರು ವೇಷಮರೆಸಿಕೊಂಡು, ಹೀಗೆ ರಾತ್ರಿಯಲ್ಲಿ ಪುರಜನರ ನಾನಾ ಚಟುವಟಿಕೆಗಳನ್ನು ನೋಡುತ್ತಾ ಸಂಚರಿಸುತ್ತಿದ್ದರು. ಆ ಪಟ್ಟಣದೊಳು ಅದುವರೆಗೆ ಪ್ರಿಯರ ಆಲಿಗಂನದಲ್ಲಿ];; ಹೊಂಚಿರ್ದ ಕಾಮಿನಿಯರ ಎದೆಗೆ ಧಿಗಿಲೆನಲ್ ಕೂಗಲು ಉಂಚದೊಳ್ (ಎತ್ತರದ ದನಿ) ಕೋಳಿಗಳ್ ಕೂಟ ವೆಣೆವಕ್ಕಿಗಳ್ ಮುಂಚಿದುವು ತಾವರೆಗೆ ತುಂಬಿವಿಂಡು ಎರಗಿದುದು ಕೊರಗಿದುವು ನೈದಿಲೆಗಳು=[ಅಡಗಿದ್ದ ಹೆಂಗಸರ ಎದೆಗೆ ಭಯವಾಗುವಂತೆ ಎತ್ತರದ ದನಿಯಲ್ಲಿ ಕೋಳಿಗಳು ಕೂಗಲು, ಚಕ್ರವಾಕಹಕ್ಕಿಗಳು ಕೂಟಕ್ಕೆ ತೊಡಗಿದುವು, ತಾವರೆಗೆ ತುಂಬಿಗಳ ಹಿಂಡು ಎರಗಿದವು, ನೈದಿಲೆಗಳು ಬಾಡಿದುವು].
  • ತಾತ್ಪರ್ಯ:ಕೃಷ್ಣ ಫಲ್ಗುಣರು ವೇಷಮರೆಸಿಕೊಂಡು, ಹೀಗೆ ರಾತ್ರಿಯಲ್ಲಿ ಪುರಜನರ ನಾನಾ ಚಟುವಟಿಕೆಗಳನ್ನು ನೋಡುತ್ತಾ ಸಂಚರಿಸುತ್ತಿದ್ದರು. ಆ ಪಟ್ಟಣದೊಳು ಅದುವರೆಗೆ ಪ್ರಿಯರ ಆಲಿಗಂನದಲ್ಲಿ ಅಡಗಿದ್ದ ಹೆಂಗಸರ ಎದೆಗೆ ಭಯವಾಗುವಂತೆ ಎತ್ತರದ ದನಿಯಲ್ಲಿ ಕೋಳಿಗಳು ಕೂಗಲು, ಚಕ್ರವಾಕಹಕ್ಕಿಗಳು ಕೂಟಕ್ಕೆ ತೊಡಗಿದುವು, ತಾವರೆಗೆ ತುಂಬಿಗಳ ಹಿಂಡು ಎರಗಿದವು, ನೈದಿಲೆಗಳು ಬಾಡಿದುವು, ಬೆಳಗಾಯಿತು.]
  • (ಪದ್ಯ-೨೪)

ಪದ್ಯ:-:೨೫:

ಸಂಪಾದಿಸಿ

ಬಳಿಕ ದಿನದಿನಕೊಂದು ಪರಿಯಾಗಿ ದೋಷಮಂ |
ತಳೆದು ಸಲೆ ಪೆಚ್ಚಿದ ಕರಂಗಳಿಂ ಸಿರಿಯಿರ್ದ |
ನಿಳಯಂಗಳಂ ಬಾಧಿಸುವ ರಾಜನೈಶ್ವರ್ಯಮಿರ್ದಪುದೆ ಪೇಳೆನಲ್ಕೆ ||
ತೊಲಗಿದುವು ಬೆಳುದಿಂಗಳಾದಿತ್ಯನೊಳ್ ನೆರೆಯ |
ಲೆಳಸಿ ಕುಂಕುಮದಿಂದೆ ಪೂರ್ವದಿಗ್ವನಿತೆ ಮಂ |
ಗಳ ಮಜ್ಜನಂಗೈದಳೆಂಬಂತೆ ರಂಜಿಸಿತು ಮೂಡದೆಸೆ ಕೆಂಪಡರ್ಮ ||25||

ಪದವಿಭಾಗ-ಅರ್ಥ:
ಬಳಿಕ ದಿನದಿನಕೆ ಒಂದು ಪರಿಯಾಗಿ ದೋಷಮಂ ತಳೆದು ಸಲೆ ಪೆಚ್ಚಿದ ಕರಂಗಳಿಂ ಸಿರಿಯಿರ್ದ ನಿಳಯಂಗಳಂ ಬಾಧಿಸುವ ರಾಜನ ಐಶ್ವರ್ಯಂ ಇರ್ದಪುದೆ ಪೇಳು ಎನಲ್ಕೆ=[ಬಳಿಕ ದಿನ ದಿನಕ್ಕೆ ಒಂದೊಂದು ರೀತಿ ದೋಷವನ್ನು ಹೊಂದಿ ಹೆಚ್ಚನ ಕಿರಣವೆಂಬ/ಕರಗಳಿಂರ ಸಂಪತ್ತಿದ್ದ ನಿಲಯಗಳನ್ನುಅಂದರೆ ಕಮಲಗಳನ್ನು, ತೊಂದೆರೆಕೊಡುವ ರಾಜನ ಐಶ್ವರ್ಯವು ಇರುವುದೇ, ಹೇಳು ಎನ್ನುವಂತೆ];;,ತೊಲಗಿದುವು ಬೆಳುದಿಂಗಳು ಆದಿತ್ಯನೊಳ್ ನೆರೆಯಲೆಳಸಿ ಕುಂಕುಮದಿಂದೆ ಪೂರ್ವದಿಗ್ವನಿತೆ ಮಂಗಳ ಮಜ್ಜನಂ ಗೈದಳು ಎಂಬಂತೆ ರಂಜಿಸಿತು ಮೂಡದೆಸೆ ಕೆಂಪಡರ್ಮ=[ಬೆಳುದಿಂಗಳು ಹೋಯಿತು (ಚಂದ್ರನೆಂಬ ರಾಜನ ಬೆಳದಿಂಗಳೆಂಬ ಐಶ್ವರ್ಯ ಹೋಯಿತು, ಅವನು ಉದಯವಾಗಿ ಕಮಲಗಳಿಗೆ ತೊಂದರೆ ಕೊಟ್ಟುಅವು ಮುಚ್ಚುವಂತೆ ಮಾಡುತ್ತಿದ್ದ); ಸೂರ್ಯ/ಆದಿತ್ಯನ ಜೊತೆ ನೆರೆಯಲು ಸೇರಲು ಬಯಸಿ ಕುಂಕುಮದಿಂದ ಪೂರ್ವದಿಗ್ವನಿತೆ/ ಪೂರ್ವದಿಕ್ಕೆಂಬ ಹೆಣ್ಣು (ಅರಿಶಿನ ಕುಂಕುಮದ ನೀರಿನಿಂದ)ಮಂಗಳಸ್ನಾನ ಮಾಡಿದಂತೆ ಪೂರ್ವದಿಕ್ಕು ಕೆಂಪುಬಣ್ಣಹೊಂದಿ ರಂಜಿಸಿತು/ಶೋಭಿಸಿತು].
  • ತಾತ್ಪರ್ಯ:ಬಳಿಕ ದಿನ ದಿನಕ್ಕೆ ಒಂದೊಂದು ರೀತಿ ದೋಷವನ್ನು ಹೊಂದಿ ಹೆಚ್ಚನ ಕಿರಣವೆಂಬ/ಕರಗಳಿಂರ ಸಂಪತ್ತಿದ್ದ ನಿಲಯಗಳನ್ನುಅಂದರೆ ಕಮಲಗಳನ್ನು, ತೊಂದೆರೆಕೊಡುವ ರಾಜನ ಐಶ್ವರ್ಯವು ಇರುವುದೇ, ಹೇಳು ಎನ್ನುವಂತೆ, ಬೆಳುದಿಂಗಳು ಹೋಯಿತು (ಚಂದ್ರನೆಂಬ ರಾಜನ ಬೆಳದಿಂಗಳೆಂಬ ಐಶ್ವರ್ಯ ಹೋಯಿತು, ಅವನು ಉದಯವಾಗಿ ಕಮಲಗಳಿಗೆ ತೊಂದರೆ ಕೊಟ್ಟುಅವು ಮುಚ್ಚುವಂತೆ ಮಾಡುತ್ತಿದ್ದ); ಸೂರ್ಯ/ಆದಿತ್ಯನ ಜೊತೆ ನೆರೆಯಲು ಸೇರಲು ಬಯಸಿ ಕುಂಕುಮದಿಂದ ಪೂರ್ವದಿಗ್ವನಿತೆ/ ಪೂರ್ವದಿಕ್ಕೆಂಬ ಹೆಣ್ಣು (ಅರಿಶಿನ ಕುಂಕುಮದ ನೀರಿನಿಂದ)ಮಂಗಳಸ್ನಾನ ಮಾಡಿದಂತೆ ಪೂರ್ವದಿಕ್ಕು ಕೆಂಪುಬಣ್ಣಹೊಂದಿ ರಂಜಿಸಿತು/ಶೋಭಿಸಿತು.
  • (ಪದ್ಯ-೨೫)

ಪದ್ಯ:-:೨೬:

ಸಂಪಾದಿಸಿ

ಗಾಲಿಯೊಂದೇ ರಥಕೆ ಜೋಡಾಗಿ ಪೂಡುವೊಡೆ |
ಸಾಲದೇಳೇ ಹಯಂ ನಡೆಸುವೊಡೆ ಸಾರಥಿಗೆ |
ಕಾಲಿಲ್ಲ ಲೋಕ ಯಾತ್ರೆಯನೊಲ್ಲೆನೆಂದೊಡಾಗದೆ ತನಗೆ ತಿರುಗಲೇಕೆ ||
ಕಾಲಗತಿಯಂ ಮೀರಬಾರದಿಂತೆಂಬುದಂ |
ಮೂಲೋಕಕೆಚ್ಚರಿಸುವಂತೆ ಪೂರ್ವಾಚಲದ |
ಮೇಲೆ ಮೂಡಿದನೆಂದಿನವೊಲಬ್ಜಬಾಂಧವಂ ನಯನಾಂಧಮಂದಡಗಲು ||26||

ಪದವಿಭಾಗ-ಅರ್ಥ:
ಗಾಲಿಯೊಂದೇ ರಥಕೆ ಜೋಡಾಗಿ ಪೂಡುವೊಡೆ ಸಾಲದೆ ಏಳೇ ಹಯಂ ನಡೆಸುವೊಡೆ ಸಾರಥಿಗೆ ಕಾಲಿಲ್ಲ ಲೋಕ ಯಾತ್ರೆಯನೊಲ್ಲೆನು ಎಂದೊಡೆ ಆಗದೆ ತನಗೆ ತಿರುಗಲೇಕೆ=[ಸೂರ್ಯನ ರಥಕ್ಕೆ ಒಂದೇ ಗಾಲಿ,ಕುದುರೆಗಳನ್ನು ಜೋಡು ಜೋಡಾಗಿ ಹೂಡುವುದು ಒಂದು ಕಡಿಮೆ, ಏಳೇ ಕುದುರೆ; ರಥ ನಡೆಸುವ ಸಾರಥಿ ಅರಣನಿಗೆ ಕಾಲಗಳಿಲ್ಲ; ಜಗತ್ತನ್ನು ಸುತ್ತುವ ಲೋಕ ಯಾತ್ರೆಯನ್ನು ಮಾಡುವುದಿಲ್ಲ ಎಂದರೆ ಆಗದೆ? ತೊಂದರೆಯೇನು? ಸೂರ್ಯನು ತಾನು ದಿನವೂ ತಿರುಗುವುದೇಕೆ?];; ಕಾಲಗತಿಯಂ ಮೀರಬಾರದು ಇಂತೆಂಬುದಂ ಮೂಲೋಕಕೆ ಎಚ್ಚರಿಸುವಂತೆ ಪೂರ್ವಾಚಲದ (ಪೂರ್ವದ ಬೆಟ್ಟ)ಮೇಲೆ ಮೂಡಿದನು ಎಂದಿನವೊಲು ಅಬ್ಜಬಾಂಧವಂ ನಯನಾಂಧಮಂ ಅಂದು ಅಡಗಲು=[ಕಾರಣ, ಕಾಲಗತಿಯನ್ನು/ ನಿಯಮವನ್ನು ಮೀರಬಾರದು, ಹೀಗೆಂಬುದನ್ನು ಮೂರು ಲೋಕಕ್ಕೆ ಎಚ್ಚರಿಸುವಂತೆ, ಸೂರ್ಯನು ದಿನದಂತೆ ಕಣ್ಣನ ಕತ್ತಲೆ ಅಡಗುವಂತೆ ಅಂದು ಪೂರ್ವಾಚಲದ ಮೇಲೆ ಉದಯಿಸಿದನು].
  • ತಾತ್ಪರ್ಯ:ಸೂರ್ಯನ ರಥಕ್ಕೆ ಒಂದೇ ಗಾಲಿ,ಕುದುರೆಗಳನ್ನು ಜೋಡು ಜೋಡಾಗಿ ಹೂಡುವುದಕ್ಕೆ ಒಂದು ಕಡಿಮೆ, ಏಳೇ ಕುದುರೆ; ರಥ ನಡೆಸುವ ಸಾರಥಿ ಅರಣನಿಗೆ ಕಾಲಗಳಿಲ್ಲ; ಜಗತ್ತನ್ನು ಸುತ್ತುವ ಲೋಕ ಯಾತ್ರೆಯನ್ನು ಮಾಡುವುದಿಲ್ಲ ಎಂದರೆ ಆಗದೆ? ತೊಂದರೆಯೇನು? ಸೂರ್ಯನು ತಾನು ದಿನವೂ ತಿರುಗುವುದೇಕೆ? ಕಾರಣ, ಕಾಲಗತಿಯನ್ನು/ ನಿಯಮವನ್ನು ಮೀರಬಾರದು, ಹೀಗೆಂಬುದನ್ನು ಮೂರು ಲೋಕಕ್ಕೆ ಎಚ್ಚರಿಸುವಂತೆ, ಸೂರ್ಯನು ದಿನದಂತೆ ಕಣ್ಣಿನ ಕತ್ತಲೆ ಅಡಗುವಂತೆ ಅಂದು ಪೂರ್ವಾಚಲದ ಮೇಲೆ ಉದಯಿಸಿದನು.
  • (ಪದ್ಯ-೨೬)

ಪದ್ಯ:-:೨೭:

ಸಂಪಾದಿಸಿ

ಜನನಾಥ ಕೇಳ್ ಮಯೂರಧ್ವಜ ಮಹೀಶ್ವರಂ |
ದಿನನಾಥನುದಯದೊಳ್ ವಿಮಲ ಸಂಧ್ಯಾವಿಧಿಯ |
ನನುಕರಿಸಿ ಕೃಷ್ಣನಿದ್ದೆಡೆಗೆ ತಾಂ ಪೋಗಿ ಕಂಡೆಪೆನೆಂಬ ಕಾರಿಯವನು ||
ಮನದೊಳಗೆ ನಿಶ್ಚಯಿಸಿ ಪೋರಮಡುವನಾಗಿ ನಿಜ |
ತನುಜನಂ ಕರೆಸಿ ಮಂತ್ರಿಗಳೆಲ್ಲರುಂ ಬರಿಸಿ |
ವಿನುತ ಭೂಸುರ ನೃಪಾಲಸ್ತೋಮದೊಡಗೂಡಿ ಕುಳ್ಳಿರ್ದನೋಲಗದೊಳು ||27||

ಪದವಿಭಾಗ-ಅರ್ಥ:
ಜನನಾಥ ಕೇಳ್ ಮಯೂರಧ್ವಜ ಮಹೀಶ್ವರಂ ದಿನನಾಥನ ಉದಯದೊಳ್ ವಿಮಲ ಸಂಧ್ಯಾವಿಧಿಯನು ಅನುಕರಿಸಿ ಕೃಷ್ಣನು ಇದ್ದೆಡೆಗೆ ತಾಂ ಪೋಗಿ ಕಂಡೆಪೆನು ಎಂಬ ಕಾರಿಯವನು ಮನದೊಳಗೆ ನಿಶ್ಚಯಿಸಿ=[ಜನನಾಥ ಜನಮೇಜಯನೇ ಕೇಳು, ಮಯೂರಧ್ವಜ ರಾಜನು ಸೂರ್ಯನ ಉದಯ ಕಾಲದಲ್ಲಿ ಪವಿತ್ರ ಸಂಧ್ಯಾವಿಧಿಯನ್ನು ಪೂರೈಸಿ, ಕೃಷ್ಣನು ಇದ್ದ ಕಡೆಗೆ ತಾನು ಹೋಗಿ ಕಾಣುವೆನು ಎಂಬ ಕಾರ್ಯವನ್ನು ಮನಸ್ಸಿನಲ್ಲಿ ನಿಶ್ಚಯಿಸಿ];; ಪೋರಮಡುವನಾಗಿ ನಿಜ ತನುಜನಂ ಕರೆಸಿ ಮಂತ್ರಿಗಳೆಲ್ಲರುಂ ಬರಿಸಿ ವಿನುತ ಭೂಸುರ ನೃಪಾಲಸ್ತೋಮದ ಒಡಗೂಡಿ ಕುಳ್ಳಿರ್ದನು ಓಲಗದೊಳು=[ಹೊರಡುವುದಕ್ಕಾಗಿ, ತನ್ನ ಮಗನನ್ನು ಕರೆಸಿ ಮಂತ್ರಿಗಳೆಲ್ಲರನ್ನೂ ಬರಮಾಡಿಕೊಂಡು, ಪೂಜ್ಯರಾದ ಬ್ರಾಹ್ಮಣರು, ರಾಜರ ಸಮೂಹದ ಜೊತೆಯಲ್ಲಿ ರಾಜ ಸಭೆಯಲ್ಲಿ ಕುಕುಳಿತಿದ್ದನು].
  • ತಾತ್ಪರ್ಯ:ಜನನಾಥ ಜನಮೇಜಯನೇ ಕೇಳು, ಮಯೂರಧ್ವಜ ರಾಜನು ಸೂರ್ಯನ ಉದಯ ಕಾಲದಲ್ಲಿ ಪವಿತ್ರ ಸಂಧ್ಯಾವಿಧಿಯನ್ನು ಪೂರೈಸಿ, ಕೃಷ್ಣನು ಇದ್ದ ಕಡೆಗೆ ತಾನು ಹೋಗಿ ಕಾಣುವೆನು ಎಂಬ ಕಾರ್ಯವನ್ನು ಮನಸ್ಸಿನಲ್ಲಿ ನಿಶ್ಚಯಿಸಿ ಹೊರಡುವುದಕ್ಕಾಗಿ, ತನ್ನ ಮಗನನ್ನು ಕರೆಸಿ ಮಂತ್ರಿಗಳೆಲ್ಲರನ್ನೂ ಬರಮಾಡಿಕೊಂಡು, ಪೂಜ್ಯರಾದ ಬ್ರಾಹ್ಮಣರು, ರಾಜರ ಸಮೂಹದ ಜೊತೆಯಲ್ಲಿ ರಾಜ ಸಭೆಯಲ್ಲಿ ಕುಕುಳಿತಿದ್ದನು.
  • (ಪದ್ಯ-೨೭)

ಪದ್ಯ:-:೨೮:

ಸಂಪಾದಿಸಿ

ಅನ್ನೆಗಂ ವೃದ್ಧ ವಿಪ್ರಾಕಾರಮಂ ತಳೆದ |
ಪನ್ನಗಾರಿಧ್ವಜಂ ನಿಜ ಶಿಷ್ಯ ಪಾರ್ಥನಂ |
ತನ್ನೊಡನೆ ಕೂಡಿಕೊಂಡೊಯ್ಯನೊಯ್ಯನೆ ಹಯದ್ವಯದಿಂದೆ ಪತ್ನಿಸಹಿತ ||
ರನ್ನದೊಡವುಗಳ ಕತ್ತುರಿಯ ತಿಲಕದ ನೊಸಲ|
ಮನ್ನೆಯರ ಗಡಣದಿಂ ದ್ವಿಜನಿಕರದಿಂದೆ ಸಂ |
ಪನ್ನ ದೀಕ್ಷೆಯೊಳೆಸೆವ ಭೂಪನೆಡೆಗೆಯ್ದಿ ಕೇಳ್ ಸ್ವಸ್ತ್ಯಸ್ತು ನಿನಗೆಂದನು ||28||

ಪದವಿಭಾಗ-ಅರ್ಥ:
ಅನ್ನೆಗಂ ವೃದ್ಧ ವಿಪ್ರಾಕಾರಮಂ ತಳೆದ ಪನ್ನಗಾರಿಧ್ವಜಂ (ಪನ್ನಗ/ಸರ್ಪ ಅರಿ/ಶತ್ರು-ಗರಡ ಧ್ವಜ) ನಿಜ ಶಿಷ್ಯ ಪಾರ್ಥನಂ ತನ್ನೊಡನೆ ಕೂಡಿಕೊಂಡು=[ಅಷ್ಟು ಹೊತ್ತಿಗೆ, ವೃದ್ಧ ಬ್ರಾಹ್ಮಣನ ವೇಷ ತಳೆದ ಕೃಷ್ಣನು ತನ್ನ ಶಿಷ್ಯ ಪಾರ್ಥನನ್ನು ತನ್ನೊಡನೆ ಕೂಡಿಕೊಂಡು];; ಒಯ್ಯನೆ ಒಯ್ಯನೆ ಹಯದ್ವಯದಿಂದೆ ಪತ್ನಿಸಹಿತ ರನ್ನದ ಒಡವುಗಳ ಕತ್ತುರಿಯ ತಿಲಕದ ನೊಸಲ ಮನ್ನೆಯರ ಗಡಣದಿಂ ದ್ವಿಜನಿಕರದಿಂದೆ ಸಂಪನ್ನ ದೀಕ್ಷೆಯೊಳೆಸೆವ ಭೂಪನೆಡೆಗೆ ಐಯ್ದಿ ಕೇಳ್ 'ಸ್ವಸ್ತ್ಯಸ್ತು ನಿನಗೆ' ಎಂದನು=[ಮೆಲ್ಲ ಮೆಲ್ಲಗೆ ಎರಡು ಕುದುರೆಯನ್ನು ಇಟ್ಟುಕೊಂಡು, ಪತ್ನಿಸಹಿತ ರತ್ನದ ಒಡವೆಗಳನ್ನೂ, ಕತ್ತುರಿಯ ಹಣೆಯಲ್ಲಿತಿ ಲಕವನ್ನೂ ಧರಿಸಿರುವ ಮುತ್ತೈದೆಯರ ಸಮೂಹದಿಂದಲೂ ಬ್ರಾಹ್ಮಣರ ಸಮೂಹದಿಂದಲೂ ಸಂಪನ್ನ ದೀಕ್ಷೆಯಲ್ಲಿ ಶೋಭಿಸುತ್ತಾ ಕುಳಿತ ರಾಜನ ಬಳಿಗೆ ಬಂದು ಕೇಳು,'ಸ್ವಸ್ತ್ಯಸ್ತು ನಿನಗೆ' ಎಂದನು].
  • ತಾತ್ಪರ್ಯ:ಅಷ್ಟು ಹೊತ್ತಿಗೆ, ವೃದ್ಧ ಬ್ರಾಹ್ಮಣನ ವೇಷ ತಳೆದ ಕೃಷ್ಣನು ತನ್ನ ಶಿಷ್ಯ ಪಾರ್ಥನನ್ನು ತನ್ನೊಡನೆ ಕೂಡಿಕೊಂಡು ಮೆಲ್ಲ ಮೆಲ್ಲಗೆ, ಎರಡು ಕುದುರೆಯನ್ನು ಇಟ್ಟುಕೊಂಡು, ಪತ್ನಿಸಹಿತ ರತ್ನದ ಒಡವೆಗಳನ್ನೂ, ಕತ್ತುರಿಯ ತಿಲಕವನ್ನು ಹಣೆಯಲ್ಲಿ ಧರಿಸಿರುವ ಮುತ್ತೈದೆಯರ ಸಮೂಹದಿಂದಲೂ ಬ್ರಾಹ್ಮಣರ ಸಮೂಹದಿಂದಲೂ ಸಂಪನ್ನ ದೀಕ್ಷೆಯಲ್ಲಿ ಶೋಭಿಸುತ್ತಾ ಕುಳಿತ ರಾಜನ ಬಳಿಗೆ ಬಂದು, ಕೇಳು,'ಸ್ವಸ್ತ್ಯಸ್ತು ನಿನಗೆ' ಎಂದನು.
  • (ಪದ್ಯ-೨೮)

ಪದ್ಯ:-:೨೯:

ಸಂಪಾದಿಸಿ

ಮತ್ತೆಲೆ ಮಹೀಪಾಲ ಶಾರ್ದೂಲ ನಿನಗಾಗ |
ಲುತ್ತರೋತ್ತರಮೆಂದು ತನಗೆ ನೀಂ ಬೇಡಿದುದ |
ನಿತ್ತಪೆ ಮಹಾದಾನಿಯೆಂದು ಶಿಷ್ಯಂವೆರಸಿ ಬಂದೆ ನಾನೀಗ ನಿನ್ನ |
ಉತ್ತಮಾಧ್ವರಶಾಲೆಗೆಂಬ ದ್ವಿಜನಂ ಕಂಡು |
ಚಿತ್ತದೊಳ್ ಬೆದರಿ ನೃಪನಿರದೆದ್ದು ಪದಕೆರಗಿ |
ದತ್ತಾಘ್ರ್ಯ ಪಾದ್ಯಾಸನಂಗಳಿಂದುಪಚರಿಸಿ ಕುಳ್ಳಿರಿಸುತಿಂತೆಂದನು ||29||

ಪದವಿಭಾಗ-ಅರ್ಥ:
ಮತ್ತೆ ಎಲೆ ಮಹೀಪಾಲ ಶಾರ್ದೂಲ ನಿನಗೆ ಆಗಲಿ ಉತ್ತರೋತ್ತರಂ ಎಂದು, ತನಗೆ ನೀಂ ಬೇಡಿದುದನು ಇತ್ತಪೆ ಮಹಾದಾನಿಯೆಂದು ಶಿಷ್ಯಂವೆರಸಿ ಬಂದೆ ನಾನೀಗ ನಿನ್ನ ಉತ್ತಮ ಅಧ್ವರಶಾಲೆಗೆ=[ನಂತರ, ಎಲೆ ಮಹೀಪಾಲ ಶಾರ್ದೂಲ, ನಿನಗೆ ಉತ್ತರೋತ್ತರ (ಶುಭ)ವಾಗಲಿ ಎಂದು ಆಶೀರ್ವದಿಸಿದನು, ತನಗೆ ನೀನು ಬೇಡಿದುದನ್ನು ಕೊಡುವೆ, ಮಹಾದಾನಿಯೆಂದು ಶಿಷ್ಯನನ್ನು ಕೂಡಿಕೊಂಡು ನಾನೀಗ ನಿನ್ನ ಉತ್ತಮ ಅಧ್ವರಶಾಲೆಗೆ ಬಂದೆ, ಎಂದನು];; ಎಂಬ ದ್ವಿಜನಂ ಕಂಡು ಚಿತ್ತದೊಳ್ ಬೆದರಿ ನೃಪನು ಇರದೆ ಎದ್ದು ಪದಕೆರಗಿ ದತ್ತ (ಕೊಟ್ಟು) ಅಘ್ರ್ಯಪಾದ್ಯ ಆಸನಂಗಳಿಂದ ಉಪಚರಿಸಿ ಕುಳ್ಳಿರಿಸುತ ಇಂತೆಂದನು=[ಹೀಗೆ ಹೇಳಿದ ಬ್ರಾಹ್ಮಣನನ್ನು ಕಂಡು ಮನಸ್ಸಿನಲ್ಲಿ ಭಯಪಟ್ಟು, ರಾಜನು ಸಿಂಹಾಸನದಿಂದ ಎದ್ದು ಅವನ ಪಾದಕ್ಕೆ ನಮಿಸಿ,ಅಘ್ರ್ಯಪಾದ್ಯ ಆಸನಗಳನ್ನು ಕೊಟ್ಟು ಉಪಚರಿಸಿ ಅವನನ್ನು ಕುಳ್ಳಿರಿಸುತ್ತಾ ಹೀಗೆ ಹೇಳಿದನು.]
  • ತಾತ್ಪರ್ಯ:ಕೃಷ್ಣನು ನಂತರ, ಎಲೆ ಮಹೀಪಾಲ ಶಾರ್ದೂಲ, ನಿನಗೆ ಉತ್ತರೋತ್ತರ (ಶುಭ)ವಾಗಲಿ ಎಂದು ಆಶೀರ್ವದಿಸಿದನು, ತನಗೆ ನೀನು ಬೇಡಿದುದನ್ನು ಕೊಡುವೆ, ಮಹಾದಾನಿಯೆಂದು ಶಿಷ್ಯನನ್ನು ಕೂಡಿಕೊಂಡು ನಾನೀಗ ನಿನ್ನ ಉತ್ತಮ ಅಧ್ವರಶಾಲೆಗೆ ಬಂದೆ, ಎಂದನು. ಹೀಗೆ ಹೇಳಿದ ಬ್ರಾಹ್ಮಣನನ್ನು ಕಂಡು ಮನಸ್ಸಿನಲ್ಲಿ ಭಯಪಟ್ಟು, ರಾಜನು ಸಿಂಹಾಸನದಿಂದ ಎದ್ದು ಅವನ ಪಾದಕ್ಕೆ ನಮಿಸಿ,ಅಘ್ರ್ಯಪಾದ್ಯ ಆಸನಗಳನ್ನು ಕೊಟ್ಟು ಉಪಚರಿಸಿ ಅವನನ್ನು ಕುಳ್ಳಿರಿಸುತ್ತಾ ಹೀಗೆ ಹೇಳಿದನು. (ನಮಸ್ಕರಿಸುವ ಮೊದಲೇ ಆಶೀರ್ವಾದ ಮಾಡಿದರೆ ಅದು ಶುಭವಲ್ಲ; ಅದಕ್ಕೇ ರಾಜನಿಗೆ ಭಯ)
  • (ಪದ್ಯ-೨೯)

ಪದ್ಯ:-:೩೦:

ಸಂಪಾದಿಸಿ

ಎಂದು ಪರಿಯಂತಂ ದ್ವಿಜರ್ಗವಜ್ಞೆಯನೆಸಗ |
ರಂದು ಪರಿಯಂತ ಮೈಸಲೆ ನರರ ಬಾಳ್ಕೆ ನೀಂ |
ಬಂದು ಪರಸಿದೊಡಾದುದಿಂದುತ್ತರೋತ್ತರಂ ತನಗೆ ನಿಶ್ಚಯಮಿಳೆಯೊಳು ||
ಸಂಧಿಸಿದ ಜನದ ವಂದನೆಗೆ ಮೊದಲೇ ಸ್ವಸ್ತಿ |
ಯೆಂದೊಡಾ ಭೂಸುರಂ ಪ್ರಿಯದೊಳಾ ಪ್ರಾಣಿಯಂ |
ಕೂಂದನಲ್ಲದೆ ಬೇರೆ ಶಾಪಮೇತಕೆ ವಿಪ್ರ ಪೇಳೆಂದೊಡಿಂತೆಂದನು ||30||

ಪದವಿಭಾಗ-ಅರ್ಥ:
ಎಂದು ಪರಿಯಂತಂ ದ್ವಿಜರ್ಗೆ ಅವಜ್ಞೆಯನು/ಅಲಕ್ಷ್ಯವನ್ನು ಎಸಗರು ಅಂದು ಪರಿಯಂತಂ ಐಸಲೆ ನರರ ಬಾಳ್ಕೆ=[ಎಷ್ಟು ಕಾಲದವರೆಗೆ ದ್ವಿಜರಿಗೆ ಅಲಕ್ಷ್ಯವನ್ನು ಮಾಡುವುದಿಲ್ಲವೋ ಅಲ್ಲಿಯವರೆಗೆ ಅಷ್ಟೇ ಜನರ ಬಾಳುವೆ.];; ನೀಂ ಬಂದು ಪರಸಿದೊಡೆ ಆದುದು ಇಂದು ಉತ್ತರೋತ್ತರಂ ತನಗೆ ನಿಶ್ಚಯಂ=[ನೀನು ಬಂದು ಹರಸಿದಾಗ, ಇಂದು ಉತ್ತರೋತ್ತರ ಶುಭವು ತನಗೆ ನಿಶ್ಚಯವಾಗಿಯೂ ಆಯಿತು.];; ಇಳೆಯೊಳು ಸಂಧಿಸಿದ ಜನದ ವಂದನೆಗೆ ಮೊದಲೇ ಸ್ವಸ್ತಿಯೆಂದೊಡ ಆ ಭೂಸುರಂ ಪ್ರಿಯದೊಳು ಆ ಪ್ರಾಣಿಯಂ ಕೂಂದನು ಅಲ್ಲದೆ ಬೇರೆ ಶಾಪಂ ಏತಕೆ ವಿಪ್ರ ಪೇಳು ಎಂದೊಡೆ ಇಂತು ಎಂದನು=[ಆದರೆ ಈ ಭೂಮಿಯಲ್ಲಿ ಎದುರು ಬಂದ ಜನದ ವಂದನೆಗಿಂತ ಮೊದಲೇ ಸ್ವಸ್ತಿಯೆಂದು ಆಶೀರ್ವದಿಸಿದರೆ, ಆ ಬ್ರಾಹ್ಮಣನು ಪ್ರೀತಿಯಿಂದ ಆ ಮನುಷ್ಯ/ಪ್ರಾಣಿಯನ್ನು ಕೂಂದಂತೆಯೇ ಆಗುವುದು. ಅದಲ್ಲದೆ ಬೇರೆ ಶಾಪವು ಏಕೆಬೇಕು, ವಿಪ್ರ ಹೇಳು ಎಂದಾಗ, ವಿಪ್ರವೇಶದ ಕೃಷ್ಣನು ಹೀಗೆ ಹೇಳಿದನು.].
  • ತಾತ್ಪರ್ಯ:ಎಷ್ಟು ಕಾಲದವರೆಗೆ ದ್ವಿಜರಿಗೆ ಅಲಕ್ಷ್ಯವನ್ನು ಮಾಡುವುದಿಲ್ಲವೋ ಅಲ್ಲಿಯವರೆಗೆ ಅಷ್ಟೇ ಜನರ ಬಾಳುವೆ. ನೀನು ಬಂದು ಹರಸಿದಾಗ, ಇಂದು ಉತ್ತರೋತ್ತರ ಶುಭವು ತನಗೆ ನಿಶ್ಚಯವಾಗಿಯೂ ಆಯಿತು. ಆದರೆ ಈ ಭೂಮಿಯಲ್ಲಿ ಎದುರು ಬಂದ ಜನದ ವಂದನೆಗಿಂತ ಮೊದಲೇ ಸ್ವಸ್ತಿಯೆಂದು ಆಶೀರ್ವದಿಸಿದರೆ, ಆ ಬ್ರಾಹ್ಮಣನು ಪ್ರೀತಿಯಿಂದ ಆ ಮನುಷ್ಯ/ಪ್ರಾಣಿಯನ್ನು ಕೂಂದಂತೆಯೇ ಆಗುವುದು. ಅದಲ್ಲದೆ ಬೇರೆ ಶಾಪವು ಏಕೆಬೇಕು, ವಿಪ್ರ ಹೇಳು ಎಂದಾಗ, ವಿಪ್ರವೇಶದ ಕೃಷ್ಣನು ಹೀಗೆ ಹೇಳಿದನು.
  • (ಪದ್ಯ-೩೦)

ಪದ್ಯ:-:೩೧:

ಸಂಪಾದಿಸಿ

ಪರಸಲಾಗದು ನಮಸ್ಕಾರಕ್ಕೆ ಮುನ್ನ ಭೂ |
ಸುರರನ್ಯರಂ ತನ್ನ ಸಂಕಟ ನಿಮಿತ್ತದಿಂ |
ದರಸಂಗೆ ಬಿನ್ನಪಂಗೈವನಾಶೀರ್ವಾದಮಂ ಮೊದಲೆಮಾಡದಿಹನೆ ||
ಧರಣಿಪತಿ ವಂದ್ಯನಲ್ಲವೆ ದೋಷಮೇನಿದಕೆ |
ಪಿರಿದಾರ್ತನಾಗಿ ನಿನ್ನೆಡೆಗೆ ನಾಂ ಬಂದೆನ |
ಧ್ವರಶಾಲೆಗೆಂದು ಕಪಟದ್ವಿಜಂ ನುಡಿಯಲ್ಕೆ ನರನಾತನಿಂತೆಂದನು ||31||

ಪದವಿಭಾಗ-ಅರ್ಥ:
ಪರಸಲಾಗದು ನಮಸ್ಕಾರಕ್ಕೆ ಮುನ್ನ ಭೂಸುರರು ಅನ್ಯರಂ ತನ್ನ ಸಂಕಟ ನಿಮಿತ್ತದಿಂದ ಅರಸಂಗೆ ಬಿನ್ನಪಂಗೈವನು ಆಶೀರ್ವಾದಮಂ ಮೊದಲೆಮಾಡದೆ ಇಹನೆ=[ನಮಸ್ಕಾರಕ್ಕೆ ಮುಂಚೆಯೇ ದ್ವಿಜರು ಅನ್ಯರನ್ನು ಹರಸಬಾರದು; ತನ್ನ ಸಂಕಟದ ಕಾರಣದಿಂದ ಅರಸನಿಗೆ ಬಿನ್ನಹ (ಅರಿಕೆ) ಮಾಡುವವನು, ಆಶೀರ್ವಾದವನ್ನು ಮೊದಲೆಮಾಡದೆ ಇರುವನೇ?];; ಧರಣಿಪತಿ ವಂದ್ಯನಲ್ಲವೆ ದೋಷಮೇನು ಇದಕೆ ಪಿರಿದು ಆರ್ತನಾಗಿ ನಿನ್ನೆಡೆಗೆ ನಾಂ ಬಂದೆನು ಅಧ್ವರಶಾಲೆಗೆಂದು ಕಪಟದ್ವಿಜಂ ನುಡಿಯಲ್ಕೆ ನರನಾಥನು ಇಂತೆಂದನು=[ರಾಜನು ನಮಸ್ಕಾರಕ್ಕೆ ಯೋಗ್ಯನಲ್ಲವೆ? ಇದರಿಂದ ದೋಷವೇನು? ಬಹಳ ಆರ್ತನಾಗಿ ನಿನ್ನ ಹತ್ತಿರ ನಾನು ಅಧ್ವರಶಾಲೆಗೆ ಬಂದೆನು,' ಎಂದು ಕಪಟದ್ವಿಜನು ಹೇಳಲು ರಾಜನು ಹೀಗೆ ಹೇಳಿದನು].
  • ತಾತ್ಪರ್ಯ:ನಿಜ! ನಮಸ್ಕಾರಕ್ಕೆ ಮುಂಚೆಯೇ ದ್ವಿಜರು ಅನ್ಯರನ್ನು ಹರಸಬಾರದು; ತನ್ನ ಸಂಕಟದ ಕಾರಣದಿಂದ ಅರಸನಿಗೆ ಬಿನ್ನಹ (ಅರಿಕೆ) ಮಾಡುವವನು, ಆಶೀರ್ವಾದವನ್ನು ಮೊದಲೇ ಮಾಡದೆ ಇರುವನೇ? ರಾಜನು ನಮಸ್ಕಾರಕ್ಕೆ ಯೋಗ್ಯನಲ್ಲವೆ? ಇದರಿಂದ ದೋಷವೇನು? ಬಹಳ ಆರ್ತನಾಗಿ ನಿನ್ನ ಹತ್ತಿರ ನಾನು ಅಧ್ವರಶಾಲೆಗೆ ಬಂದೆನು,' ಎಂದು ಕಪಟದ್ವಿಜನು ಹೇಳಲು ರಾಜನು ಹೀಗೆ ಹೇಳಿದನು.
  • (ಪದ್ಯ-೩೦)

ಪದ್ಯ:-:೩೨:

ಸಂಪಾದಿಸಿ

ದ್ವಿಜತಿಲಕ ನೀನನುಗ್ರಹಿಸೆನಗೆ ಧನ್ಯ ನಾಂ |
ನಿಜ ಶಿಷ್ಯನಂ ಕೂಡಿಕೊಂಡು ಮಖ ಮಂಟಪಕೆ |
ಬಿಜಯಮಾಡಿದ ಕಜ್ಜಮಾವುದೇತರೊಳಾಸೆ ನಿನಗಾರ್ತಮೇನಿದರೊಳು ||
ತ್ಯಜಿಸಬೇಡೊಂದುಮಂ ಪೇಳ್ದೊಡಾನೀವೆ ನಾ |
ರಜಮಿಲ್ಲದೆಲ್ಲಮಂ ವಾಚಿಸೆಂದಾಶಿಖಿ |
ಧ್ವಜನಾಡಲಾ ವಿಪ್ರನಿಂತೆಂದು ತನ್ನ ವೃತ್ತಾಂತಮಂ ವಿವರಿಸಿದನು ||32||

ಪದವಿಭಾಗ-ಅರ್ಥ:
ದ್ವಿಜತಿಲಕ ನೀನು ಅನುಗ್ರಹಿಸು ಎನಗೆ ಧನ್ಯ ನಾಂ ನಿಜ ಶಿಷ್ಯನಂ ಕೂಡಿಕೊಂಡು ಮಖ ಮಂಟಪಕೆ ಬಿಜಯಮಾಡಿದ ಕಜ್ಜಮಾವುದು=[ಬ್ರಾಹ್ಮಣೋತ್ತಮನೇ, ನೀನು ನನಗೆ ಅನುಗ್ರಹಿಸು; ನಾನು ಧನ್ಯ; ನಿನ್ನ ಶಿಷ್ಯನನ್ನು ಕೂಡಿಕೊಂಡು ಯಜ್ಞಮಂಟಪಕ್ಕೆ ಬಂದ ಕಾರ್ಯ ಯಾವುದು?];; ಏತರೊಳು ಆಸೆ ನಿನಗೆ ಆರ್ತಂ(ಬೇಡಿಕೆ ಏನು), ಏನಿದರೊಳು ತ್ಯಜಿಸಬೇಡ ಒಂದುಮಂ, ಪೇಳ್ದೊಡೆ ಆನು ಈವೆನು, ಆರಜಂ (ರಜ-ಮೋಸ ವಂಚನೆ, ಆರಜ-ಹೆಚ್ಚಿನದು?) ಇಲ್ಲದೆ ಎಲ್ಲಮಂ ವಾಚಿಸೆಂದು,=[ನಿನಗೆ ಯಾವುದಲ್ಲಿ ಆಸೆ ಬೇಡಿಕೆ ಏನು?? , ಯಾವದನ್ನೂ ಬಿಡಬೇಡ, ಹೇಳಿದರೆ ನಾನು ಕೊಡುವೆನು, ವಂಚನೆ ಇಲ್ಲದೆ ಎಲ್ಲವನ್ನೂ ಹೇಳು, ಎಂದು,];; ಆ ಶಿಖಿಧ್ವಜನು ಆಡಲು ಆ ವಿಪ್ರನು ಇಂತೆಂದು ತನ್ನ ವೃತ್ತಾಂತಮಂ ವಿವರಿಸಿದನು=[ಆ ಮಯೂರಧ್ವಜನು ನುಡಿಯಲು, ಆ ವಿಪ್ರನು ಹೀಗೆಂದು ತನ್ನ ವೃತ್ತಾಂತವನ್ನು ವಿವರಿಸಿದನು].
  • ತಾತ್ಪರ್ಯ:ಬ್ರಾಹ್ಮಣೋತ್ತಮನೇ, ನೀನು ನನಗೆ ಅನುಗ್ರಹಿಸು; ನಾನು ಧನ್ಯ; ನಿನ್ನ ಶಿಷ್ಯನನ್ನು ಕೂಡಿಕೊಂಡು ಯಜ್ಞಮಂಟಪಕ್ಕೆ ಬಂದ ಕಾರ್ಯ ಯಾವುದು? ನಿನಗೆ ಯಾವುದಲ್ಲಿ ಆಸೆ ಬೇಡಿಕೆ ಏನು? ಯಾವದನ್ನೂ ಬಿಡಬೇಡ, ಹೇಳಿದರೆ ನಾನು ಕೊಡುವೆನು, ವಂಚನೆ ಇಲ್ಲದೆ ಎಲ್ಲವನ್ನೂ ಹೇಳು, ಎಂದು,ಆ ಮಯೂರಧ್ವಜನು ನುಡಿಯಲು, ಆ ವಿಪ್ರನು ಹೀಗೆಂದು ತನ್ನ ವೃತ್ತಾಂತವನ್ನು ವಿವರಿಸಿದನು.
  • (ಪದ್ಯ-೩೨)

ಪದ್ಯ:-:೩೩:

ಸಂಪಾದಿಸಿ

ಉರ್ವೀಂದ್ರ ಕೇಳಾದೊಡಾಂ ಧರ್ಮಪುರದೊಳ್ ಪೆ |
ಸರ್ವಡೆದಿಹೆಂ ಕೃಷ್ಣಶರ್ಮನೆಂದೆನಗೆ ಸುತ |
ನೊರ್ವನುಂಟಾತನ ವಿವಾಹಕ್ಕೆ ತವ ಪುರೋಹಿತ ಸತ್ಯಶೀಲನಲ್ಲಿ ||
ಒರ್ವಕನ್ನಿಕೆ ಮದುವೆಗಿಹಳೆಂದೊಡಲ್ಲಿಗ |
ಕ್ಕರ್ವೆರಸಿ ಮಗನನೊಡಗೊಂಡು ಬರುತಿರ್ದೆಂ ಪೊ |
ದರ್ವಡೆದಡವಿಯ ಪಥದೊಳ್ ಪಿಡಿದುದೊಂದು ಕೇಸರಿ ತನ್ನ ನಂದನನು ||33||

ಪದವಿಭಾಗ-ಅರ್ಥ:
ಉರ್ವೀಂದ್ರ ಕೇಳು ಆದೊಡೆ (ಹಾಗಿದ್ದರೆ) ಆಂ ಧರ್ಮಪುರದೊಳ್ ಪೆಸರ್ವಡೆದಿಹೆಂ ಕೃಷ್ಣಶರ್ಮನೆಂದು=[ಹಾಗಿದ್ದರೆ ರಾಜನೇ ಕೇಳು, ನಾನು ಧರ್ಮಪುರದಲ್ಲಿ ಕೃಷ್ಣಶರ್ಮನೆಂದು ಹೆಸರು ಪಡೆದಿರುವೆನು.];; ಎನಗೆ ಸುತನು ಓರ್ವನುಂಟು ಆತನ ವಿವಾಹಕ್ಕೆ ನಿನ್ನ (ರಾಜ್ಯದಲ್ಲಿರುವ) ಪುರೋಹಿತ ಸತ್ಯಶೀಲನಲ್ಲಿ ಒರ್ವ ಕನ್ನಿಕೆ ಮದುವೆಗೆ ಇಹಳು ಎಂದೊಡೆ ಅಲ್ಲಿಗೆ ಅಕ್ಕರ್ (ಪ್ರೀತಿ)ವೆರಸಿ (ಹೊಂದಿ) ( ಮಗನನು ಒಡಗೊಂಡು ಬರುತಿರ್ದೆಂ=[ನನಗೆ ಒಬ್ಬ ಮಗನಿದ್ದಾನೆ, ಆತನ ವಿವಾಹಕ್ಕೆ ನಿನ್ನ (ರಾಜ್ಯದಲ್ಲಿರುವ)) ಪುರೋಹಿತ ಸತ್ಯಶೀಲನಲ್ಲಿ ಒರ್ವ ಕನ್ನಿಕೆ ಮದುವೆಗೆ ಇರುವಳು ಎಂದು ಹೇಳಿದಾಗ ಅಲ್ಲಿಗೆ ಪ್ರೀತಿಯಿಂದ ಮಗನನ್ನು ಒಡಗೊಂಡು ಬರುತ್ತಿದ್ದೆನು. ];; ಪೊದರ್ವಡೆದ ಅಡವಿಯ ಪಥದೊಳ್ ಪಿಡಿದುದು ಒಂದು ಕೇಸರಿ ತನ್ನ ನಂದನನು=[ಪೊದೆಗಳಿಂದ ಕೂಡಿದ ಅಡವಿಯ ದಾರಿಯಲ್ಲಿ ಒಂದು ಕೇಸರಿ ತನ್ನ ಮಗನನ್ನು ಹಿಡಿಯಿತು.]
  • ತಾತ್ಪರ್ಯ:ಹಾಗಿದ್ದರೆ ರಾಜನೇ ಕೇಳು, ನಾನು ಧರ್ಮಪುರದಲ್ಲಿ ಕೃಷ್ಣಶರ್ಮನೆಂದು ಹೆಸರು ಪಡೆದಿರುವೆನು. ನನಗೆ ಒಬ್ಬ ಮಗನಿದ್ದಾನೆ, ಆತನ ವಿವಾಹಕ್ಕೆ ನಿನ್ನ (ರಾಜ್ಯದಲ್ಲಿರುವ) ಪುರೋಹಿತ ಸತ್ಯಶೀಲನಲ್ಲಿ ಒರ್ವ ಕನ್ನಿಕೆ ಮದುವೆಗೆ ಇರುವಳು ಎಂದು ಹೇಳಿದಾಗ ಅಲ್ಲಿಗೆ ಪ್ರೀತಿಯಿಂದ ಮಗನನ್ನು ಒಡಗೊಂಡು ಬರುತ್ತಿದ್ದೆನು. ಪೊದೆಗಳಿಂದ ಕೂಡಿದ ಅಡವಿಯ ದಾರಿಯಲ್ಲಿ ಒಂದು ಕೇಸರಿ ತನ್ನ ಮಗನನ್ನು ಹಿಡಿಯಿತು.
  • (ಪದ್ಯ-೩೩)

ಪದ್ಯ:-:೩೪:

ಸಂಪಾದಿಸಿ

ಆ ಸಿಂಗಮತಿ ಬರದೊಳೆರಗಲಾ ಭೀತಿಗೆ ನೃ |
ಕೇಸರಿ ಸ್ಮರಣೆಯಂ ಬಿಡದೆ ನಾನಕಟ ಹಾ |
ಹಾಸೂನು ಹಾಯೆಂದು ಹಂಂಬಲಿಸಲದು ತನ್ನ ಘೋರ ನಖ ದಂಪ್ಟ್ರದಿಂದೆ ||
ಗಾಸಿಮಾಡದೆ ಪುತ್ರನಂ ಪಿಡಿದುಕೊಂಡಟ್ಟ |
ಹಾಸದಿಂ ಮಾನವರ ತೆರದಿಂದೆ ನುಡಿದುದೆಲೆ |
ಭೂಸುರೋತ್ತಮ ತನ್ನ ಮಾತನಾಲಿಸು ಬರಿದೆ ಹಲುಬಲೇನಪ್ಪುದೆಂದು ||34||

ಪದವಿಭಾಗ-ಅರ್ಥ:
ಆ ಸಿಂಗಂ ಅತಿ ಬರದೊಳು ಎರಗಲು ಆ ಭೀತಿಗೆ ನೃಕೇಸರಿ ಸ್ಮರಣೆಯಂ ಬಿಡದೆ ನಾನು ಅಕಟ ಹಾ ಹಾ ಸೂನು ಹಾಯೆಂದು ಹಂಂಬಲಿಸಲು=[ಆ ಸಿಂಹವು ಅತಿ ವೇಗವಾಗಿ ಎರಗಲು ಅದರ ಭೀತಿಗೆ ನಾನು ನರಸಿಂಹ ಸ್ಮರಣೆಯನ್ನು ಬಿಡದೆಮಾಡಿ, ನಾನು ಅಕಟ ಹಾ ಹಾ ಮಗನೇ ಹಾಯೆಂದು ದುಃಖಿಸಲು ];; ಅದು ತನ್ನ ಘೋರ ನಖ ದಂಪ್ಟ್ರದಿಂದೆ ಗಾಸಿಮಾಡದೆ ಪುತ್ರನಂ ಪಿಡಿದುಕೊಂಡು ಅಟ್ಟಹಾಸದಿಂ ಮಾನವರ ತೆರದಿಂದೆ ನುಡಿದುದು=[ಅದು ತನ್ನ ಘೋರ ಉಗುರು ಹಲ್ಲುಗಳಿಂದ ಗಾಯಮಾಡದೆ ಪುತ್ರನನ್ನು ಹಿಡಿದುಕೊಂಡು ಅಟ್ಟಹಾಸದಿಂದ ಮಾನವರ ರೀತಿಯಲ್ಲಿ ಹೇಳಿತು;];; ಎಲೆ ಭೂಸುರೋತ್ತಮ ತನ್ನ ಮಾತನು ಆಲಿಸು ಬರಿದೆ ಹಲುಬಲು ಏನಪ್ಪುದು ಎಂದು=[ಎಲೆ ಬ್ರಾಹ್ಮಣನೇ ತನ್ನ ಮಾತನು ಮನಸ್ಸಿಟ್ಟುಕೇಳು, ಬರಿದೆ ಹಲುಬಿದರೆ ಏನು ಆಗುವುದು ಎಂದಿತು.]
  • ತಾತ್ಪರ್ಯ:ಆ ಸಿಂಹವು ಅತಿ ವೇಗವಾಗಿ ಎರಗಲು ಅದರ ಭೀತಿಗೆ ನಾನು ನರಸಿಂಹ ಸ್ಮರಣೆಯನ್ನು ಬಿಡದೆಮಾಡಿ, ನಾನು ಅಕಟ ಹಾ ಹಾ ಮಗನೇ ಹಾಯೆಂದು ದುಃಖಿಸಲು, ಅದು ತನ್ನ ಘೋರ ಉಗುರು ಹಲ್ಲುಗಳಿಂದ ಗಾಯಮಾಡದೆ ಪುತ್ರನನ್ನು ಹಿಡಿದುಕೊಂಡು ಅಟ್ಟಹಾಸದಿಂದ ಮಾನವರ ರೀತಿಯಲ್ಲಿ ಹೇಳಿತು; ಎಲೆ ಬ್ರಾಹ್ಮಣನೇ ತನ್ನ ಮಾತನು ಮನಸ್ಸಿಟ್ಟುಕೇಳು, ಬರಿದೆ ಹಲುಬಿದರೆ ಏನು ಆಗುವುದು ಎಂದಿತು.
  • (ಪದ್ಯ-೩೪)

ಪದ್ಯ:-:೩೫:

ಸಂಪಾದಿಸಿ

ಮಕ್ಕಳಿಲ್ಲದವರ್ಗೆ ಲೋಕಮಿಲ್ಲೆಂಬುದೇ |
ನಕ್ಕಜವೆ ನಿಖಿಳ ನಿಗಮಾರ್ಥಮಿದು ತನಗೀಗ |
ಸಿಕ್ಕಿದನಲಾ ನಿನ್ನ ತನುಸಂಭವಂ ಬಿಡಿಸಿಕೊಳಲಾರ್ಪಲಾರು ಬರಿದೆ ||
ಕಕ್ಕುಲಿತೆ ಬೇಡ ನಡೆ ಶಿಷ್ಯನಂ ಕರೆದುಕೊಂಡು |
ಮಿಕ್ಕಸುತರುಳ್ಳೊಡಾರೈವುದೆನೆ ಮಗನ ಮೇ |
ಲಕ್ಕರಾವರಿಸಿ ಕಡುಶೋಕದಿಂದುಗ್ರಕೇಸರಿಗೆ ತಾನಿಂತೆಂದೆನು ||35||

ಪದವಿಭಾಗ-ಅರ್ಥ:
ಮಕ್ಕಳಿಲ್ಲದವರ್ಗೆ ಲೋಕಮು ಇಲ್ಲೆಂಬುದೇನು ಅಕ್ಕಜವೆ ನಿಖಿಳ ನಿಗಮಾರ್ಥಂ ಇದು ತನಗೀಗ ಸಿಕ್ಕಿದನಲಾ ನಿನ್ನ ತನುಸಂಭವಂ ಬಿಡಿಸಿಕೊಳಲು ಆರ್ಪಲು ಆರು=[ಮಕ್ಕಳಿಲ್ಲದವರಿಗೆ ಉತ್ತಮ ಲೋಕವು ಇಲ್ಲ ಎಂನ್ನುವುದು ಏನು ಆಶ್ಚರ್ಯವೇ?,ಎಲ್ಲಾ ವೇದದಅರ್ಥವೂ ಇದನ್ನು ಹೇಳುವುದು. 'ತನಗೆ ಈಗ ಸಿಕ್ಕಿರುವನಲ್ಲಾ ನಿನ್ನ ಮಗ, ಅವನನ್ನು ಬಿಡಿಸಿಕೊಳ್ಳಲು ಶಕ್ತರು ಯಾರು?];; ಬರಿದೆ ಕಕ್ಕುಲಿತೆ ಬೇಡ ನಡೆ ಶಿಷ್ಯನಂ ಕರೆದುಕೊಂಡು ಮಿಕ್ಕಸುತರು ಉಳ್ಳೊಡೆ ಆರೈವುದು ಎನೆ ಮಗನ ಮೇಲಕ್ಕರ ಆವರಿಸಿ ಕಡುಶೋಕದಿಂದ ಉಗ್ರಕೇಸರಿಗೆ ತಾನು ಇಂತೆಂದೆನು=[ಸುಮ್ಮನೆ ಆಸೆ ಪಡಬೇಡ, ಶಿಷ್ಯನನ್ನು ಕರೆದುಕೊಂಡು ನಡೆ, ಉಳಿದ ಮಕ್ಕಳು ಇದ್ದರೆ ಅವರನ್ನು ಕಾಪಾಡಿಕೊ, ಎನ್ನಲು, ಮಗನ ಮೇಲೆ ಪ್ರೀತಿ ಆವರಿಸಿ ಬಹಳ ದುಃಖದಿಂದ ಉಗ್ರವಾದ ಸಿಂಹಕ್ಕೆ ತಾನು ಹೀಗೆ ಹೇಳಿದೆನು.]
  • ತಾತ್ಪರ್ಯ:ಮಕ್ಕಳಿಲ್ಲದವರಿಗೆ ಉತ್ತಮ ಲೋಕವು ಇಲ್ಲ ಎಂನ್ನುವುದು ಏನು ಆಶ್ಚರ್ಯವೇ?,ಎಲ್ಲಾ ವೇದದಅರ್ಥವೂ ಇದನ್ನು ಹೇಳುವುದು. 'ತನಗೆ ಈಗ ಸಿಕ್ಕಿರುವನಲ್ಲಾ ನಿನ್ನ ಮಗ, ಅವನನ್ನು ಬಿಡಿಸಿಕೊಳ್ಳಲು ಶಕ್ತರು ಯಾರು?ಸುಮ್ಮನೆ ಆಸೆ ಪಡಬೇಡ, ಶಿಷ್ಯನನ್ನು ಕರೆದುಕೊಂಡು ನಡೆ, ಉಳಿದ ಮಕ್ಕಳು ಇದ್ದರೆ ಅವರನ್ನು ಕಾಪಾಡಿಕೊ, ಎನ್ನಲು, ಮಗನ ಮೇಲೆ ಪ್ರೀತಿ ಆವರಿಸಿ ಬಹಳ ದುಃಖದಿಂದ ಉಗ್ರವಾದ ಸಿಂಹಕ್ಕೆ ತಾನು ಹೀಗೆ ಹೇಳಿದೆನು.
  • (ಪದ್ಯ-೩)

ಪದ್ಯ:-:೩೬:

ಸಂಪಾದಿಸಿ

ಅತಿ ವೃದ್ಧನಲ್ಪದಿನಮಿರ್ಪವಂ ಪುತ್ರವ |
ರ್ಜಿತನಿನ್ನು ತಾನಿರ್ದು ಮಾಳ್ಪುದೇನೆನ್ನನಾ |
ಹುತುಗೊಂಡು ತನಗೆ ಗತಿಗುಡುವ ಸುತನಂ ಬಿಡುವುದೆಂದು ನಾಂಬೇಡಿಕೊಳಲು ||
ಮೃತಿಯ ಬಯಸುವ ದುಃಖಿಗಾವ ಕಂಟಕಮಿಲ್ಲ |
ಹತವಹುದು ಸುಖದಿಂದೆ ಬಾಳ್ವಂಗೆ ಕಾಲಕ |
ಲ್ಪಿತದಿಂದೆ ದೊರಕಿದವನಿವಂ ನಿನ್ನನೊಲ್ಲೆನಾಂ ಪೋಗೆಂದು ಹರಿ ನುಡಿದುದು ||೩೬||

ಪದವಿಭಾಗ-ಅರ್ಥ:
ಅತಿ ವೃದ್ಧನು ಅಲ್ಪದಿನಂ ಇರ್ಪವಂ ಪುತ್ರವರ್ಜಿತನು ಇನ್ನು ತಾನಿರ್ದು ಮಾಳ್ಪುದೇನು ಎನ್ನನು ಆಹುತುಗೊಂಡು ತನಗೆ ಗತಿಗುಡುವ ಸುತನಂ ಬಿಡುವುದೆಂದು ನಾಂ ಬೇಡಿಕೊಳಲು=[ತಾನು, ಅತಿ ವೃದ್ಧನು ಸ್ವಲ್ಪದಿನ ಬದುಕಿರುವವನು; ಪುತ್ರನಿಲ್ಲದವನು, ಇನ್ನು ತಾನು ಬದುಕಿ ಮಾಡುವುದೇನು, ನನ್ನನ್ನು ಆಹುತಿ ತೆಗೆದುಕೊಂಡು, ತನಗೆ ಪರಗತಿ ಕೊಡುವ ಮಗನನ್ನು ಬಿಡಬೇಕೆಂದು ನಾನು ಬೇಡಿಕೊಳ್ಳಲು];; ಮೃತಿಯ ಬಯಸುವ ದುಃಖಿಗಾವ ಕಂಟಕಮಿಲ್ಲ ಹತವಹುದು ಸುಖದಿಂದೆ ಬಾಳ್ವಂಗೆ ಕಾಲಕಲ್ಪಿತದಿಂದೆ ದೊರಕಿದ ಇವನಿವಂ ನಿನ್ನನು ಒಲ್ಲೆ ನಾಂ ಪೋಗು ಎಂದು ಹರಿ (ಸಿಂಹ) ನುಡಿದುದು=[ಸಿಂಹವು ಹೀಗೆ ಹೇಳಿತು,'ಸಾವನ್ನು ಬಯಸುವ ದುಃಖಿಗೆ ಯಾವ ಕಂಟಕವೂ ಇಲ್ಲ, ಹತವಹುದು ಸುಖದಿಂದ ಬಾಳುವವನಿಗೆ ಕೇಡಾಗುವುದು; ಕಾಲಸಂಯೋಗದಿಂದ ಇವನು ದೊರಕಿರುವನು; ನಿನ್ನನ್ನು ನಾನು ಒಲ್ಲೆನು ಹೋಗು.' (ಎಂದು ಸಿಂಹ ಹೇಳಿತು] ಎಂದನು ವಿಪ್ರವೇಷದ ಕೃಷ್ಣ.
  • ತಾತ್ಪರ್ಯ:ತಾನು, ಅತಿ ವೃದ್ಧನು ಸ್ವಲ್ಪದಿನ ಬದುಕಿರುವವನು; ಪುತ್ರನಿಲ್ಲದವನು, ಇನ್ನು ತಾನು ಬದುಕಿ ಮಾಡುವುದೇನು, ನನ್ನನ್ನು ಆಹುತಿ ತೆಗೆದುಕೊಂಡು, ತನಗೆ ಪರಗತಿ ಕೊಡುವ ಮಗನನ್ನು ಬಿಡಬೇಕೆಂದು ನಾನು ಬೇಡಿಕೊಳ್ಳಲು, ಸಿಂಹವು ಹೀಗೆ ಹೇಳಿತು,'ಸಾವನ್ನು ಬಯಸುವ ದುಃಖಿಗೆ ಯಾವ ಕಂಟಕವೂ ಇಲ್ಲ, ಹತವಹುದು ಸುಖದಿಂದ ಬಾಳುವವನಿಗೆ ಕೇಡಾಗುವುದು; ಕಾಲಸಂಯೋಗದಿಂದ ಇವನು ದೊರಕಿರುವನು; ನಿನ್ನನ್ನು ನಾನು ಒಲ್ಲೆನು ಹೋಗು.' (ಎಂದು ಸಿಂಹ ಹೇಳಿತು] ಎಂದನು ವಿಪ್ರವೇಷದ ಕೃಷ್ಣ.
  • (ಪದ್ಯ-೩೬)

ಪದ್ಯ:-:೩೭:

ಸಂಪಾದಿಸಿ

ಆ ನುಡಿಗೆ ನಡುಗಿ ತನಯನ ಮೇಲಣಾಸೆಯಿಂ |
ದಾನೆಂದೆನಾ ಸಿಂಹಕೆಲೆ ಮೃಗಾಧಿಪ ತನ್ನ |
ಸೂನುವಂ ಕಾವರಿಲ್ಲವೆ ಧರೆಯೊಳುಗ್ರತಪ ದಾನ ಧರ್ಮಗಳಿಂದೆ ||
ಏನುಪಾಯಂ ಗೆಯ್ವೆನೆಂದು ಮರುಗಲ್ಕೆ ಪಂ |
ಚಾನನಂ ಬಳಿಕ ತನಗೊಂದಾಸೆಯೆಂ ಕೊಟ್ಟು |
ಭೂನಾಥ ನಿನ್ನೆಡೆಗೆ ಕಳುಹಿದೊಡೆ ಬಂದೆನೆನಲವನೀಸನಿಂತೆಂದನು ||೩೭||

ಪದವಿಭಾಗ-ಅರ್ಥ:
ಆ ನುಡಿಗೆ ನಡುಗಿ ತನಯನ ಮೇಲಣ ಆಸೆಯಿಂದ ಆನೆಂದೆನು ಆ ಸಿಂಹಕೆಲೆ ಮೃಗಾಧಿಪ ತನ್ನ ಸೂನುವಂ ಕಾವರಿಲ್ಲವೆ ಧರೆಯೊಳು ಉಗ್ರತಪ ದಾನ ಧರ್ಮಗಳಿಂದೆ=[ಆ ಸಿಂಹದ ಮಾತಿಗೆ ನಡುಗಿ ಮಗನ ಮೇಲಿನ ಆಸೆಯಿಂದ ಆ ಸಿಂಹಕೆ ನಾನು ಹೇಳಿದೆನು,'ಎಲೆ ಮೃಗರಾಜ ಈ ಭೂಮಿಯಲ್ಲಿ, ಉಗ್ರತಪ ದಾನ ಧರ್ಮಗಳಿಂದ ತನ್ನ ಮಗನನ್ನು ಕಾಯುವವರಿಲ್ಲವೆ?];; ಏನು ಉಪಾಯಂ ಗೆಯ್ವೆನೆಂದು ಮರುಗಲ್ಕೆ ಪಂಚಾನನಂ ಬಳಿಕ ತನಗೊಂದು ಆಸೆಯೆಂ ಕೊಟ್ಟು ಭೂನಾಥ ನಿನ್ನೆಡೆಗೆ ಕಳುಹಿದೊಡೆ ಬಂದೆನೆನಲು ಅವನೀಶನು ಇಂತೆಂದನು=[ಏನು ಉಪಾಯವನ್ನು ಮಾಡಲಿ ಎಂದು ದುಃಖಿಸಲು, ಆ ಸಿಂಹವು ಬಳಿಕ ತನಗೊಂದು ಆಸೆಯ ಮಾರ್ಗ ತೋರಿಸಿ, ಭೂನಾಥನೇ, ನಿನ್ನ ಬಳಿಗೆ ಕಳುಹಿಸಿದ್ದರಿಂದ ಬಂದೆನು,' ಎನಲು ರಾಜನನು ಹೀಗೆ ಹೇಳಿದನು.]
  • ತಾತ್ಪರ್ಯ:ಆ ಸಿಂಹದ ಮಾತಿಗೆ ನಡುಗಿ ಮಗನ ಮೇಲಿನ ಆಸೆಯಿಂದ ಆ ಸಿಂಹಕೆ ನಾನು ಹೇಳಿದೆನು,'ಎಲೆ ಮೃಗರಾಜ ಈ ಭೂಮಿಯಲ್ಲಿ, ಉಗ್ರತಪ ದಾನ ಧರ್ಮಗಳಿಂದ ತನ್ನ ಮಗನನ್ನು ಕಾಯುವವರಿಲ್ಲವೆ? ಏನು ಉಪಾಯವನ್ನು ಮಾಡಲಿ ಎಂದು ದುಃಖಿಸಲು, ಆ ಸಿಂಹವು ಬಳಿಕ ತನಗೊಂದು ಆಸೆಯ ಮಾರ್ಗ ತೋರಿಸಿ, ಭೂನಾಥನೇ, ನಿನ್ನ ಬಳಿಗೆ ಕಳುಹಿಸಿದ್ದರಿಂದ ಬಂದೆನು,' ಎನಲು ರಾಜನನು ಹೀಗೆ ಹೇಳಿದನು.]
  • (ಪದ್ಯ-೩೭)

ಪದ್ಯ:-:೩೮:

ಸಂಪಾದಿಸಿ

ವಿಪ್ರೇಂದ್ರ ಕೇಳೆನ್ನ ರಾಷ್ಟ್ರದೊಳ್ ನಾರಸಿಂ ||
ಹ ಪ್ರವರ್ತನಮಲ್ಲದೆಲ್ಲಿಯುಂ ಕ್ಷುದ್ದರಸಿಂ |
ಹ ಪ್ರಸಂಗವನರಿಯೆನಿನ್ನೆಗೆಂ ನಿನ್ನ ಸುತನಂ ಪೆಡಿದ ಸಿಂಹಮುಂಟೆ ||
ಅಪ್ರಸಿದ್ಧ ಪ್ರೋಕ್ತಮಿದು ಸಿಂಹಕೆನ್ನಿಂದ |
ಹ ಪ್ರಯೋಜನಮದೇಂ ಮಾಜದಂಜದೆನಗೆ |
ಕ್ಷಿಪ್ರದಿಂ ಪೇಳೆಂದು ಭೂವರಂ ಬೆಸಗೊಂಡೊಡಾ ಪಾರ್ವನಿಂತೆಂದನು ||38||

ಪದವಿಭಾಗ-ಅರ್ಥ:
ವಿಪ್ರೇಂದ್ರ ಕೇಳೆನ್ನ ರಾಷ್ಟ್ರದೊಳ್ ನಾರಸಿಂಹ ಪ್ರವರ್ತನಂ ಅಲ್ಲದೆ ಎಲ್ಲಿಯುಂ ಕ್ಷುದ್ದ್ರಸಿಂಹ ಪ್ರಸಂಗವ ನರಿಯೆನಿನ್ನೆಗೆಂ ನಿನ್ನ ಸುತನಂ ಪೆಡಿದ ಸಿಂಹಮುಂಟೆ=[ಬ್ರಾಹ್ಮಣೋತ್ತಮನೇ ಕೇಳು, ನನ್ನ ರಾಷ್ಟ್ರದಲ್ಲಿ ನರಸಿಂಹಸ್ವಾಮಿಯ ಪೂಜೆಯಲ್ಲದೆ ಎಲ್ಲಿಯೂ ಸಾಮಾನ್ಯ ಸಿಂಹವಿರುವ ವಿಷಯ ಇದುವರೆಗೂ ತಿಳಿದಿಲ್ಲ. ನಿನ್ನ ಮಗನನ್ನು ಹಿಡಿದ ಸಿಂಹವು ಉಂಟೆ?];; ಅಪ್ರಸಿದ್ಧ ಪ್ರೋಕ್ತಮಿದು ಸಿಂಹಕೆ ಎನ್ನಿಂದ ಅಹ ಪ್ರಯೋಜನಮು ಅದೇಂ ಮಾಜದೆ ಅಂಜದೆ ಎನಗೆ ಕ್ಷಿಪ್ರದಿಂ ಪೇಳೆಂದು ಭೂವರಂ ಬೆಸಗೊಂಡೊಡೆ ಆ ಪಾರ್ವನು ಇಂತೆಂದನು=[ಎಲ್ಲಿಯೂ ಕೇಳಿರದ ಮಾತು ಇದು, ಸಿಂಹಕ್ಕೆ ನನ್ನಿಂದ ಆಗುವ ಪ್ರಯೋಜನಂ ಅದೇಂ ಮಾಜದೆ ಅಂಜದೆ ನನಗೆ ಬೇಗ ಹೇಳು,' ಎಂದು ರಾಜನು ಹೇಳೀದಾಗ ಆ ವಿಪ್ರನು ಹೀಗೆ ಹೇಳಿದನು.]
  • ತಾತ್ಪರ್ಯ:ಬ್ರಾಹ್ಮಣೋತ್ತಮನೇ ಕೇಳು, ನನ್ನ ರಾಷ್ಟ್ರದಲ್ಲಿ ನರಸಿಂಹಸ್ವಾಮಿಯ ಪೂಜೆಯಲ್ಲದೆ ಎಲ್ಲಿಯೂ ಸಾಮಾನ್ಯ ಸಿಂಹವಿರುವ ವಿಷಯ ಇದುವರೆಗೂ ತಿಳಿದಿಲ್ಲ. ನಿನ್ನ ಮಗನನ್ನು ಹಿಡಿದ ಸಿಂಹವು ಉಂಟೆ? ಎಲ್ಲಿಯೂ ಕೇಳಿರದ ಮಾತು ಇದು, ಸಿಂಹಕ್ಕೆ ನನ್ನಿಂದ ಆಗುವ ಪ್ರಯೋಜನಂ ಅದೇಂ ಮಾಜದೆ ಅಂಜದೆ ನನಗೆ ಬೇಗ ಹೇಳು,' ಎಂದು ರಾಜನು ಹೇಳೀದಾಗ ಆ ವಿಪ್ರನು ಹೀಗೆ ಹೇಳಿದನು.]
  • (ಪದ್ಯ-೩೮)

ಪದ್ಯ:-:೩೯:

ಸಂಪಾದಿಸಿ

ಎನ್ನೊಳಾ ಸಿಂಹವಾಡಿದ ನುಡಿಯ ನೀಗಳಾಂ |
ನಿನ್ನೊಳೆಂಬುದು ನೀತಿಯಾದಪುದೆ ಸುತಹೀನ |
ಮಿನ್ನೇಸು ದಾರುಣವೊ ಪೇಳಬೇಕಾಗಿಹುದು ನೃಪ ಕೇಳದರ ಮಾತನು ||
ಮುನ್ನ ಮುದಿಗೂಡು ತಪದಿಂದೊಣಗಿತಿದನೊಲ್ಲೆ |
ನುನ್ನಿಸದಿರಾರ್ಪೊಡೀವುದು ದಿವ್ಯ ದುಗ್ಧ ಸಂ |
ಪನ್ನ ಫಲಪುಷ್ಪಮಾಗಿಹ ಮಯೂರಧ್ವಜನ ಮೈಯೊಳರ್ಧವನೆಂದುದು ||39||

ಪದವಿಭಾಗ-ಅರ್ಥ:
ಎನ್ನೊಳಾ ಸಿಂಹವಾಡಿದ ನುಡಿಯ ನೀಗಳಾಂ ನಿನ್ನೊಳೆಂಬುದು ನೀತಿಯಾದಪುದೆ ಸುತಹೀನಮಿನ್ನೇಸು ದಾರುಣವೊ ಪೇಳಬೇಕಾಗಿಹುದು ನೃಪ ಕೇಳದರ ಮಾತನು=[ನನ್ನೊಡನೆ ಆ ಸಿಂಹವಾಡಿದ ಮಾತನ್ನು ಈಗ ನಾನು ನಿನ್ನೊಡನೆ ಹೇಳುವುದು ನೀತಿಯಾಗುವುದೆ? ಮಗನಿಲ್ಲದಿರುವುದು ಇನ್ನಷ್ಟು ದಾರುಣವೊ! ಹೇಳಲೇ ಬೇಕಾಗಿರುವುದು, ನೃಪ ಕೇಳು ಅದರ ಮಾತನ್ನು; ];; ಮುನ್ನೆ ಮುದಿಗೂಡು ತಪದಿಂದ ಒಣಗಿತು ಇದನು ಒಲ್ಲೆನು ಉನ್ನಿಸ ದಿರು(ಉನ್ನಿಸು-ಕಡೆಗಣಿಸು; ಡಿ.ಎನ್.ಶಂ.ಭಟ್ಟ) ಆರ್ಪೊಡೆ ಈವುದು (ಕೊಡುವುದು) ದಿವ್ಯ ದುಗ್ಧ (ಹಾಲು, ಕೊಬ್ಬು) ಸಂಪನ್ನ ಫಲಪುಷ್ಪಮಾಗಿಹ ಮಯೂರಧ್ವಜನ ಮೈಯೊಳರ್ಧವನೆಂದುದು=[ಮೊದಲೇ ನಿನ್ನ ದೇಹ ಮುದಿಗೂಡು! ಮತ್ತೆ ತಪಸ್ಸಿನಿಂದ ಒಣಗಿತು; ಆದ್ದರಿಂದ ಅದನ್ನು ಒಲ್ಲೆನು; ನನ್ನು ಮಾತನ್ನು ಕಡೆಗಣಿಸದೆ, ಸಾದ್ಯವಾದರೆ, ಕೊಡು ದಿವ್ಯವಾದ ದುಗ್ಧ ಸಂಪನ್ನವಾದ ಫಲಪುಷ್ಪವಾಗಿರುವ ಮಯೂರಧ್ವಜನ ಮೈಯಲ್ಲಿ ಅರ್ಧವನ್ನು,'ಎಂದು ಹೇಳಿತು.]
  • ತಾತ್ಪರ್ಯ:ನನ್ನೊಡನೆ ಆ ಸಿಂಹವಾಡಿದ ಮಾತನ್ನು ಈಗ ನಾನು ನಿನ್ನೊಡನೆ ಹೇಳುವುದು ನೀತಿಯಾಗುವುದೆ? ಮಗನಿಲ್ಲದಿರುವುದು ಇನ್ನಷ್ಟು ದಾರುಣವೊ! ಹೇಳಲೇ ಬೇಕಾಗಿರುವುದು, ನೃಪ ಕೇಳು ಅದರ ಮಾತನ್ನು; ಮೊದಲೇ ನಿನ್ನ ದೇಹ ಮುದಿಗೂಡು! ಮತ್ತೆ ತಪಸ್ಸಿನಿಂದ ಒಣಗಿತು; ಆದ್ದರಿಂದ ಅದನ್ನು ಒಲ್ಲೆನು; ನನ್ನು ಮಾತನ್ನು ಕಡೆಗಣಿಸದೆ, ಸಾದ್ಯವಾದರೆ ಕೊಡು, ದಿವ್ಯವಾದ ದುಗ್ಧ ಸಂಪನ್ನವಾದ ಫಲಪುಷ್ಪವಾಗಿರುವ ಮಯೂರಧ್ವಜನ ಮೈಯಲ್ಲಿ ಅರ್ಧವನ್ನು,'ಎಂದು ಹೇಳಿತು.
  • (ಪದ್ಯ-೩೯)

ಪದ್ಯ:-:೪೦:

ಸಂಪಾದಿಸಿ

ಆ ಮಗನ ಮೇಲೆ ನಿನಗಾಸೆಯುಳ್ಳೊಡೆ ಬಿಡುವೆ |
ನಾ ಮಯೂರಧ್ವಜನ ದೇಹಾರ್ಧಮಂ ಕೊಂಡು |
ಬಾ ಮಹಿಪಾಲನಲ್ಲಿಗೆ ಪೋಗು ಕೊಲ್ಲೆನಾನನ್ನೆಗಂ ನಡೆಯೆನಲ್ಕೆ |
ಭೂಮೀಶನಿತ್ತಪನೆ ತನ್ನ ತನುಭಾಗಮಂ |
ಭ್ರಾಮಕಮಿದೆಂದು ಜರೆದಾಂ ತಿರಸ್ಕರಿಸೆ ಮ |
ತ್ತೀಮಾತನಾಡಿದುದು ತನ್ನೊಳಾಕೇಸರಿ ನರೇಂದ್ರ ಕೇಳ್ ಕೌತುಕನು ||40||

ಪದವಿಭಾಗ-ಅರ್ಥ:
ಆ ಮಗನ ಮೇಲೆ ನಿನಗೆ ಆಸೆಯುಳ್ಳೊಡೆ ಬಿಡುವೆ ನಾ ಮಯೂರಧ್ವಜನ ದೇಹಾರ್ಧಮಂ ಕೊಂಡು ಬಾ ಮಹಿಪಾಲನಲ್ಲಿಗೆ ಪೋಗು ಕೊಲ್ಲೆನು ನಾನು ಅನ್ನೆಗಂ ನಡೆಯೆನಲ್ಕೆ=[ಆ ಮಗನ ಮೇಲೆ ನಿನಗೆ ಆಸೆಯಿದ್ದರೆ ನಾನು ಬಿಡುವೆ; ನೀನು ಮಯೂರಧ್ವಜನ ದೇಹದ ಅರ್ಧವನ್ನು ತೆಗೆದುಕೊಂಡು ಬಾ; ಮಹಿಪಾಲನು ಇರುವಲ್ಲಿಗೆ ಹೋಗು; ನಾನು ಅಲ್ಲಿಯವರೆಗೆ ಕೊಲ್ಲುವುದಿಲ್ಲ, ನಡೆ ಎನ್ನಲು,];; ಭೂಮೀಶನು ಇತ್ತಪನೆ ತನ್ನ ತನುಭಾಗಮಂ ಭ್ರಾಮಕಮು ಇದೆಂದು ಜರೆದು ಆ ತಿರಸ್ಕರಿಸೆ, ಮತ್ತೆ ಈ ಮಾತನಾಡಿದುದು ತನ್ನೊಳು ಆ ಕೇಸರಿ ನರೇಂದ್ರ ಕೇಳ್ ಕೌತುಕನು=[ರಾಜನುನು ತನ್ನದೇಹದ ಭಾಗವನ್ನು ಕೊಡುವನೇ? ಇದು ಭ್ರಮೆ ಎಂದು ಜರೆದು ನಾನು ತಿರಸ್ಕರಿಸಲು, ಮತ್ತೆ ಆ ಕೇಸರಿ ಈ ಮಾತನ್ನು ತನಗೆ ಹೇಳಿತು. ನರೇಂದ್ರ ಕೇಳು ಆಶ್ಚರ್ಯವನ್ನು ಎಂದನು ವಿಪ್ರ].
  • ತಾತ್ಪರ್ಯ:(ಸಿಂಹ ವಿಪ್ರನಿಗೆ ಹೇಳಿತು), ಆ ಮಗನ ಮೇಲೆ ನಿನಗೆ ಆಸೆಯಿದ್ದರೆ ನಾನು ಬಿಡುವೆ; ನೀನು ಮಯೂರಧ್ವಜನ ದೇಹದ ಅರ್ಧವನ್ನು ತೆಗೆದುಕೊಂಡು ಬಾ; ಮಹಿಪಾಲನು ಇರುವಲ್ಲಿಗೆ ಹೋಗು; ನಾನು ಅಲ್ಲಿಯವರೆಗೆ ಕೊಲ್ಲುವುದಿಲ್ಲ, ನಡೆ ಎನ್ನಲು, ರಾಜನುನು ತನ್ನದೇಹದ ಭಾಗವನ್ನು ಕೊಡುವನೇ? ಇದು ಭ್ರಮೆ ಎಂದು ಜರೆದು ನಾನು ತಿರಸ್ಕರಿಸಲು, ಮತ್ತೆ ಆ ಕೇಸರಿ ಈ ಮಾತನ್ನು ತನಗೆ ಹೇಳಿತು. ನರೇಂದ್ರ ಕೇಳು ಆಶ್ಚರ್ಯವನ್ನು ಎಂದನು ವಿಪ್ರ.
  • (ಪದ್ಯ-೪೦)

ಪದ್ಯ:-:೪೧:

ಸಂಪಾದಿಸಿ

ಎಲೆ ಮರುಳೆ ವಿಪ್ರಪರಪುರುಷಾರ್ಥಕೆಳಸುವಂ |
ನೆಲದ ಮೇಲಣ ಬಾಳ್ಕೆಯಂ ನಿಜ ಶರೀರಮಂ |
ನೆಲೆಯೆಂದು ನೋಡುವನೆ ಕವಚಮಂ ಕರ್ಣಂ ದಧೀಚಿ ತನ್ನಸ್ತಿಗಳನು ||
ಒಲಿದಿತ್ತು ಕೀರ್ತಿಯಂ ತಳೆದುದಿಲ್ಲವೆ ನಿನ್ನ |
ಕುಲಮುಳಿಯಬೇಕೆಂದು ಪೋಗಿ ನೀಂ ಬೇಡಿದೋಡೆ |
ಸಲೆ ಕರುಣದಿಂದಾನೃಪಂ ಕಾಯಮಂ ಕೊಯ್ದು ಕುಡದಿರಂ ಪೋಗೆಂದುದು ||41||

ಪದವಿಭಾಗ-ಅರ್ಥ:
ಎಲೆ ಮರುಳೆ ವಿಪ್ರ ಪರಪುರುಷಾರ್ಥಕೆ ಎಳಸುವಂ ನೆಲದ ಮೇಲಣ ಬಾಳ್ಕೆಯಂ ನಿಜ ಶರೀರಮಂ ನೆಲೆಯೆಂದು ನೋಡುವನೆ ಕವಚಮಂ ಕರ್ಣಂ ದಧೀಚಿ ತನ್ನಸ್ತಿಗಳನು=[ಎಲೆ ಮರುಳೆ! ವಿಪ್ರನೇ, ಪರಲೋಕದ ಉತ್ತಮ ಪುರುಷಾರ್ಥಕ್ಕಾಗಿ ಧರ್ಮವನ್ನು ಬಯಸುವವನು ಭೂಮಿಯ ಮೇಲಿನ ಬಾಳನ್ನೂ, ತನ್ನ ಶರೀರವನ್ನೂ ಶಾಸ್ವತವೆಂದು ನೋಡುವರನೆ? ಕವಚವನ್ನು ಕರ್ಣನೂ, ದಧೀಚಿಯು ತನ್ನ ಅಸ್ತಿಗಳನ್ನೂ(ಎಲುಬನ್ನೂ ವಜ್ರಾಯುಧಕ್ಕಾಗಿ) ];; ಒಲಿದಿತ್ತು ಕೀರ್ತಿಯಂ ತಳೆದುದಿಲ್ಲವೆ ನಿನ್ನ ಕುಲಮ್ ಉಳಿಯಬೇಕೆಂದು ಪೋಗಿ ನೀಂ ಬೇಡಿದೋಡೆ ಸಲೆ ಕರುಣದಿಂದ ಆ ನೃಪಂ ಕಾಯಮಂ ಕೊಯ್ದು ಕುಡದಿರಂ ಪೋಗೆಂದುದು=[ಪ್ರೀತಿಯಿಂದ ಕೊಟ್ಟು ಕೀರ್ತಿಯನ್ನು ಗಳಿಸಿಲ್ಲವೇ? ನಿನ್ನ ಕುಲವು ಉಳಿಯಬೇಕೆಂದು ಹೋಗಿ ನೀನು ಬೇಡಿದರೆ ಬಹಳ ಕರುಣದಿಂದ ಆ ರಾಜನು ದೇಹವನ್ನು ಕೊಯಿದು ಕೊಡದೆ ಇರುವುದಿಲ್ಲ, ಹೋಗು,'ಎಂದಿತು ಸಿಂಹ.]
  • ತಾತ್ಪರ್ಯ:ಎಲೆ ಮರುಳೆ! ವಿಪ್ರನೇ, ಪರಲೋಕದ ಉತ್ತಮ ಪುರುಷಾರ್ಥಕ್ಕಾಗಿ ಧರ್ಮವನ್ನು ಬಯಸುವವನು ಭೂಮಿಯ ಮೇಲಿನ ಬಾಳನ್ನೂ, ತನ್ನ ಶರೀರವನ್ನೂ ಶಾಸ್ವತವೆಂದು ನೋಡುವನೆ? ಕವಚವನ್ನು ಕರ್ಣನೂ, ದಧೀಚಿಯು ತನ್ನ ಅಸ್ತಿಗಳನ್ನೂ(ಎಲುಬನ್ನೂ ವಜ್ರಾಯುಧಕ್ಕಾಗಿ) ಪ್ರೀತಿಯಿಂದ ಕೊಟ್ಟು ಕೀರ್ತಿಯನ್ನು ಗಳಿಸಿಲ್ಲವೇ? ನಿನ್ನ ಕುಲವು ಉಳಿಯಬೇಕೆಂದು ಹೋಗಿ ನೀನು ಬೇಡಿದರೆ ಬಹಳ ಕರುಣದಿಂದ ಆ ರಾಜನು ದೇಹವನ್ನು ಕೊಯಿದು ಕೊಡದೆ ಇರುವುದಿಲ್ಲ, ಹೋಗು,'ಎಂದಿತು ಸಿಂಹ.]
  • (ಪದ್ಯ-೪೧)

ಪದ್ಯ:-:೪೨:

ಸಂಪಾದಿಸಿ

ಸುತ್ಯಾಗಿ ಶುಚಿ ಶೂರನುಪಕಾರಿ ಕಮಲಾಕ್ಷ |
ಭೃತ್ಯನನಸೂಯಂ ಕೃಪಾವನಧಿ ಭುವನ ಜನ |
ನುತ್ಯಂ ಮಯೂರಧ್ವಜಂ ತನ್ನ ಜೀವನವ ನಾದೊಡಂ ಬೇಡಿದರ್ಗೆ |
ಅತ್ಯಂತ ಹರ್ಷದಿಂದಿತ್ತು ಸತ್ಕೀರ್ತಿಯನ |
ನಿತ್ಯ ಸಂಸಾರದೊಳ್ ಪಡೆದಲ್ಲದಿರ್ದಪನೆ |
ಸತ್ಯಮಿದು ಪೋಗೆಂದು ಸಿಂಹಮೆನ್ನಂ ಕಳುಹಿದೊಡೆ ನಿನ್ನೆಡೆಗೆ ಬಂದೆನು ||42||

ಪದವಿಭಾಗ-ಅರ್ಥ:
ಸುತ್ಯಾಗಿ ಶುಚಿ ಶೂರನು ಉಪಕಾರಿ ಕಮಲಾಕ್ಷ ಭೃತ್ಯನು ಅನಸೂಯಂ ಕೃಪಾವನಧಿ (ವನಧಿ- ಸಮುದ್ರ) ಭುವನ ಜನನುತ್ಯಂ ಮಯೂರಧ್ವಜಂ ತನ್ನ ಜೀವನವ ನಾದೊಡಂ ಬೇಡಿದರ್ಗೆ=[ಮಯೂರಧ್ವಜನು ಉತ್ತಮತ್ಯಾಗಿ, ಶುಚಿರ್ಭೂತನು, ಶೂರನು, ಉಪಕಾರಿ, ವಿಷ್ಣುಭಕ್ತನು, ಅಸೂಯೆ ಇಲ್ಲದವನು, ಕೃಪೆಯ ಸಾಗರನು, ಭೂಮಿಯ ಜನರಿಂದ ಹೊಗಳಲ್ಪಡುವವನು. ಹೀಗಿರುವ ಮಯೂರಧ್ವಜನು ತನ್ನ ಜೀವನವನ್ನು/ ಜೀವವನ್ನಾದರೂ ಬೇಡಿದರೆ, ಬೇಡಿದವರಿಗೆ ];; ಅತ್ಯಂತ ಹರ್ಷದಿಂದ ಇತ್ತು ಸತ್ಕೀರ್ತಿಯನು ಅನಿತ್ಯ ಸಂಸಾರದೊಳ್ ಪಡೆದಲ್ಲದೆ ಇರ್ದಪನೆ ಸತ್ಯಮಿದು ಪೋಗೆಂದು ಸಿಂಹಮ್ ಎನ್ನಂ ಕಳುಹಿದೊಡೆ ನಿನ್ನೆಡೆಗೆ ಬಂದೆನು=[ಅತ್ಯಂತ ಹರ್ಷದಿಂದ ಕೊಟ್ಟು ಸತ್ಕೀರ್ತಿಯನ್ನು, ಈ ಅನಿತ್ಯ ಸಂಸಾರದಲ್ಲಿ ಪಡೆಯದೆ ಇರವನೆ? ಈ ಮಾತು ಸತ್ಯ, ಹೋಗು ಎಂದು ಸಿಂಹವು ನನ್ನನ್ನು ಕಳುಹಿಸಿದ್ದರಿಂದ ನಿನ್ನ ಬಳಿಗೆ ಬಂದೆನು,'ಎಂದನು ವಿಪ್ರ.]
  • ತಾತ್ಪರ್ಯ:ಮಯೂರಧ್ವಜನು ಉತ್ತಮತ್ಯಾಗಿ, ಶುಚಿರ್ಭೂತನು, ಶೂರನು, ಉಪಕಾರಿ, ವಿಷ್ಣುಭಕ್ತನು, ಅಸೂಯೆ ಇಲ್ಲದವನು, ಕೃಪೆಯ ಸಾಗರನು, ಭೂಮಿಯ ಜನರಿಂದ ಹೊಗಳಲ್ಪಡುವವನು. ಹೀಗಿರುವ ಮಯೂರಧ್ವಜನು ತನ್ನ ಜೀವನವನ್ನು/ ಜೀವವನ್ನಾದರೂ ಬೇಡಿದರೆ, ಬೇಡಿದವರಿಗೆ ಅತ್ಯಂತ ಹರ್ಷದಿಂದ ಕೊಟ್ಟು ಸತ್ಕೀರ್ತಿಯನ್ನು ಈ ಅನಿತ್ಯ ಸಂಸಾರದಲ್ಲಿ ಪಡೆಯದೆ ಇರವನೆ? ಈ ಮಾತು ಸತ್ಯ, ಹೋಗು ಎಂದು ಸಿಂಹವು ನನ್ನನ್ನು ಕಳುಹಿಸಿದ್ದರಿಂದ ನಿನ್ನ ಬಳಿಗೆ ಬಂದೆನು,'ಎಂದನು ವಿಪ್ರ.
  • (ಪದ್ಯ-೪೨)

ಪದ್ಯ:-:೪೩:

ಸಂಪಾದಿಸಿ

ರಾಯನಾಂ ಮೂಢನಲ್ಲವೆ ಸಕಲ ವೈಭವ |
ಶ್ರೀಯುಕ್ತ ಮಾಗಿರ್ದ ನಿನ್ನ ಘನ ಸೌಂದರ್ಯ |
ಕಾಯಮಂ ಕೊಟ್ಟು ತನ್ನಾತ್ಮಜಂ ಬದುಕಬೇಕೆಂದು ಸಿಂಹದ ಮಾತಿಗೆ ||
ವಾಯದಿಂ ಬಂದೆನಿಲ್ಲಿಗೆ ಸಾಕದಂತಿರಲ |
ಪಾಯಕೊಳಗಾಗಿರ್ದ ತನ್ನ ಸುತನುಳಿವುದಕು |
ಪಾಯಮಂ ಕಾಣೆನೆಂದಾ ಕಪಟ ಭೂಸುರಂ ಸುಯ್ದು ಮತ್ತಿಂತೆಂದನು ||43||

ಪದವಿಭಾಗ-ಅರ್ಥ:
ರಾಯ ನಾಂ ಮೂಢನಲ್ಲವೆ ಸಕಲ ವೈಭವ ಶ್ರೀಯುಕ್ತ ಮಾಗಿರ್ದ ನಿನ್ನ ಘನ ಸೌಂದರ್ಯ ಕಾಯಮಂ ಕೊಟ್ಟು ತನ್ನಾತ್ಮಜಂ ಬದುಕಬೇಕೆಂದು ಸಿಂಹದ ಮಾತಿಗೆ ವಾಯದಿಂ* ಬಂದೆನು ಇಲ್ಲಿಗೆ=[ರಾಜನೇ, ನಾನು ಮೂಢನಲ್ಲವೆ? ಸಕಲ ವೈಭವ ಶ್ರೀಯುಕ್ತವಾಗಿರುವ ನಿನ್ನ ಘನ ಸೌಂದರ್ಯದ ದೇಹವನ್ನು ಕೊಟ್ಟು ತನ್ನ ಮಗನನ್ನು ಬದುಕಿಸಿಕೊ ಎಂಬ ಸಿಂಹದ ಮಾತಿಗೆ ಹಂಬಲದಿಂದ ಇಲ್ಲಿಗೆ ಬಂದೆನು.];; ಸಾಕು ಅದಂತಿರಲಿ ಅಪಾಯಕೊಳಗಾಗಿರ್ದ ತನ್ನ ಸುತನು ಉಳಿವುದಕೆ ಉಪಾಯಮಂ ಕಾಣೆನೆಂದು ಆ ಕಪಟ ಭೂಸುರಂ ಸುಯ್ದು ಮತ್ತೆ ಇಂತೆಂದನು=[ಸಾಕು ಅದು ಹಾಗಿರಲಿ ಅಪಾಯಕ್ಕೆ ಒಳಗಾಗಿರುವ ತನ್ನ ಮಗನು ಉಳಿಯುವುದಕ್ಕೆ ಬೇರೆ ಉಪಾಯವನ್ನು ಕಾಣೆನು,' ಎಂದು ಆ ಕಪಟ ವಿಪ್ರನು ಬಿಸುಸುಯ್ದು ಮತ್ತೆ ಹೀಗೆ ಹೇಳಿದನು.]
  • (ವಾಯದಿಂ-ವಾಯ: ಕುದಿ ಹೆಸರುಪದ(ದೇ): ೧ ಕುದಿಯುವಿಕೆ, ಕುದಿತ ೨ ಸಂಕಟ, ಸಂತಾಪ ೩ ಹಂಬಲ, ತವಕ::ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು)
  • ತಾತ್ಪರ್ಯ:ರಾಜನೇ, ನಾನು ಮೂಢನಲ್ಲವೆ? ಸಕಲ ವೈಭವ ಶ್ರೀಯುಕ್ತವಾಗಿರುವ ನಿನ್ನ ಘನ ಸೌಂದರ್ಯದ ದೇಹವನ್ನು ಕೊಟ್ಟು ತನ್ನ ಮಗನನ್ನು ಬದುಕಿಸಿಕೊ ಎಂಬ ಸಿಂಹದ ಮಾತಿಗೆ ಹಂಬಲದಿಂದ ಇಲ್ಲಿಗೆ ಬಂದೆನು. ಸಾಕು ಅದು ಹಾಗಿರಲಿ ಅಪಾಯಕ್ಕೆ ಒಳಗಾಗಿರುವ ತನ್ನ ಮಗನು ಉಳಿಯುವುದಕ್ಕೆ ಬೇರೆ ಉಪಾಯವನ್ನು ಕಾಣೆನು,' ಎಂದು ಆ ಕಪಟ ವಿಪ್ರನು ಬಿಸುಸುಯ್ದು ಮತ್ತೆ ಹೀಗೆ ಹೇಳಿದನು.
  • (ಪದ್ಯ-೪೩)

ಪದ್ಯ:-:೪೪:

ಸಂಪಾದಿಸಿ

ಭೂಸುರಂ ಬ್ರಹ್ಮಚರ್ಯೆಯೊಳಿರ್ದ ಪುತ್ರಂ ಗ |
ತಾಸುವಾದೊಡೆ ರಾಮಚಂದ್ರಂಗೆ ಮೊರೆಯಿಟ್ಟೊ |
ಡಾ ಸುತನ ಜೀವಮಂ ಬರಿಸನೇ ಪೌರುಷದೊಳಾ ರಾಘವೇಶ್ವರಂಗೆ ||
ಪಾಸಟಿಯಲಾ ನೀನುಮದರಿನೆನ್ನಾತ್ಮಜಂ |
ಕೇಸರಿಯ ಬಾಯ ತುತ್ತಾದನೀ ದುಃಖದಾ |
ಯಾಸಮಂ ನಿನಗೊರೆದೆನಿನ್ನುಳುಹು ಮಾಣಿಂದು ಕಪಟದ್ವಿಜಂ ನುಡಿದನು ||44||

ಪದವಿಭಾಗ-ಅರ್ಥ:
ಭೂಸುರಂ ಬ್ರಹ್ಮಚರ್ಯೆಯೊಳಿರ್ದ ಪುತ್ರಂ ಗತಾಸುವಾದೊಡೆ ರಾಮಚಂದ್ರಂಗೆ ಮೊರೆಯಿಟ್ಟೊಡಾ ಸುತನ ಜೀವಮಂ ಬರಿಸನೇ ಪೌರುಷದೊಳಾ ರಾಘವೇಶ್ವರಂಗೆ=[ವಿಪ್ರನೊಬ್ಬನು ಬ್ರಹ್ಮಚರ್ಯೆಯಲ್ಲಿ ಇದ್ದ ಮಗನು ಮರಣಹೊಂದಿದಾಗ ರಾಮಚಂದ್ರನಿಗೆ ಮೊರೆಯಿಟ್ಟಾಗ, ತನ್ನ ಪೌರುಷದಿಂದ ಆ ಮಗನ ಜೀವವನ್ನು ಮತ್ತೆ ಬರಿಸಲಿಲ್ಲವೇ? ರಾಘವೇಶ್ವರನಿಗೆ];; ಪಾಸಟಿಯಲಾ ನೀನುಂ ಅದರಿನಿಂ ಎನ್ನಾತ್ಮಜಂ ಕೇಸರಿಯ ಬಾಯ ತುತ್ತಾದನು ಈ ದುಃಖದ ಆಯಾಸಮಂ ನಿನಗೆ ಒರೆದೆನು ಇನ್ನು ಉಳುಹು ಮಾಣ್ ಎಂದು ಕಪಟದ್ವಿಜಂ ನುಡಿದನು=[ಸರಿಸಮಾನನು ನೀನು, ನನ್ನ ಮಗನು ಸಿಂಹದ ಬಾಯಿಗೆ ತುತ್ತಾದನು; ಅದರಿಂದ ಈ ದುಃಖದ ಸಂಕಟವನ್ನು ನಿನಗೆ ಹೇಳಿದೆನು. ಇನ್ನು ಅವನನ್ನು ಉಳಿಸು ಅಥವಾ ಬಿಡು,' ಎಂದು ಕಪಟವಿಪ್ರನು ಹೇಳಿದನು].
  • ತಾತ್ಪರ್ಯ:ವಿಪ್ರನೊಬ್ಬನು, ಬ್ರಹ್ಮಚರ್ಯೆಯಲ್ಲಿ ಇದ್ದ ಮಗನು ಮರಣಹೊಂದಿದಾಗ ರಾಮಚಂದ್ರನಿಗೆ ಮೊರೆಯಿಟ್ಟಾಗ, ತನ್ನ ಪೌರುಷದಿಂದ ಆ ಮಗನ ಜೀವವನ್ನು ಮತ್ತೆ ಬರಿಸಲಿಲ್ಲವೇ? ರಾಘವೇಶ್ವರನಿಗೆ ಸರಿಸಮಾನನು ನೀನು, ನನ್ನ ಮಗನು ಸಿಂಹದ ಬಾಯಿಗೆ ತುತ್ತಾದನು; ಅದರಿಂದ ಈ ದುಃಖದ ಸಂಕಟವನ್ನು ನಿನಗೆ ಹೇಳಿದೆನು. ಇನ್ನು ಅವನನ್ನು ಉಳಿಸು ಅಥವಾ ಬಿಡು,' ಎಂದು ಕಪಟವಿಪ್ರನು ಹೇಳಿದನು].
  • (ಪದ್ಯ-೪೪)

ಪದ್ಯ:-:೪೫:

ಸಂಪಾದಿಸಿ

ಕೇಳ್ದನವನೀರ್ವರಂ ಪ್ರಚ್ಛನ್ನ ಭೂಸುರಂ |
ಪೇಳ್ದ ವೃತ್ತಾಂತಮಂ ಕೀರ್ತಿ ನಿಲ್ವುದು ನರರ |
ಬಾಳ್ದಿಟಮಿದಲ್ಲೆಂದು ನಿಶ್ಚೈಸಿ ವಿಪ್ರನಂ ಕರೆದು ನಿನಗೀ ತನುವನು ||
ಸೀಳ್ದು ಕೊಟ್ಟಪೆನೆಂದಭಯವಿತ್ತು ಬಳಿಕ ತಾ |
ನಾಳ್ದಿಳೆಯ ನಾತ್ಮಜಂಗಪ್ಪೈಸಿ ಹರ್ಷಮಂ |
ತಾಳ್ದನಿಬರೆಲ್ಲರಂ ಮಂಪಟದೊಳಿಹುದೆಂದು ಕುಳ್ಳಿರಿಸಿ ಪೊರಮಟ್ಟನು ||45||

ಪದವಿಭಾಗ-ಅರ್ಥ:
ಕೇಳ್ದನು ಅವನು ಈರ್ವರಂ ಪ್ರಚ್ಛನ್ನ ಭೂಸುರಂ ಪೇಳ್ದ ವೃತ್ತಾಂತಮಂ ಕೀರ್ತಿ ನಿಲ್ವುದು ನರರ ಬಾಳ್ ದಿಟಂ ಇದಲ್ಲೆಂದು ನಿಶ್ಚೈಸಿ ವಿಪ್ರನಂ ಕರೆದು ನಿನಗೀ ತನುವನು ಸೀಳ್ದು ಕೊಟ್ಟಪೆನೆಂದು ಅಭಯವಿತ್ತು=[ಅವನು/ರಾಜನು ಆ ಇಬ್ಬರು ಮಾರುವೇಷದಲ್ಲಿ ಬಂದಿದ್ದು, ವಿಪ್ರನು ಹೇಳಿದ ವೃತ್ತಾಂತವನ್ನು ಕೇಳಿದನು. ಕೀರ್ತಿ ನಿಲ್ಲುವುದು; ಮನಷ್ಯರ ಬಾಳು ನಿಜವಲ್ಲ ಎಂದು ನಿಶ್ಚೈಸಿ ವಿಪ್ರನನ್ನು ಕರೆದು ನಿನಗೆ ಈ ದೇಹವನ್ನು ಸೀಳಿ ಕೊಡುವೆನು ಎಂದು ಅಭಯವನ್ನು ಕೊಟ್ಟು,];; ಬಳಿಕ ತಾನು ಆಳ್ದ ಇಳೆಯನು ಆತ್ಮಜಂಗೆ ಅಪ್ಪೈಸಿ (ಒಪ್ಪಿಸಿ) ಹರ್ಷಮಂ ತಾಳ್ದು ಅನಿಬರು ಎಲ್ಲರಂ ಮಂಪಟದೊಳು ಇಹುದೆಂದು ಕುಳ್ಳಿರಿಸಿ ಪೊರಮಟ್ಟನು=[ಬಳಿಕ ತಾನು ಆಳುತ್ತಿರುವ ರಾಜ್ಯವನ್ನು ಮಗನಿಗೆ ಒಪ್ಪಿಸಿ, ಸಂತೋಷಹೊಂದಿ ಪರಿವಾರದ ಎಲ್ಲರನ್ನೂ ಮಂಪಟದಲ್ಲಿ ಇರಬೇಕೆಂದು ಕುಳ್ಳಿರಿಸಿ ಹೊರಹೊರಟನು.]
  • ತಾತ್ಪರ್ಯ:ಅವನು/ರಾಜನು ಇಬ್ಬರು ಮಾರುವೇಷದಲ್ಲಿ ಬಂದಿದ್ದು, ವಿಪ್ರನು ಹೇಳಿದ ವೃತ್ತಾಂತವನ್ನು ಕೇಳಿದನು. ಕೀರ್ತಿ ನಿಲ್ಲುವುದು; ಮನಷ್ಯರ ಬಾಳು ನಿಜವಲ್ಲ ಎಂದು ನಿಶ್ಚೈಸಿ ವಿಪ್ರನನ್ನು ಕರೆದು ನಿನಗೆ ಈ ದೇಹವನ್ನು ಸೀಳಿ ಕೊಡುವೆನು ಎಂದು ಅಭಯವನ್ನು ಕೊಟ್ಟು, ಬಳಿಕ ತಾನು ಆಳುತ್ತಿರುವ ರಾಜ್ಯವನ್ನು ಮಗನಿಗೆ ಒಪ್ಪಿಸಿ, ಸಂತೋಷಹೊಂದಿ ಪರಿವಾರದ ಎಲ್ಲರನ್ನೂ ಮಂಪಟದಲ್ಲಿ ಇರಬೇಕೆಂದು ಕುಳ್ಳಿರಿಸಿ ಹೊರಹೊರಟನು.
  • (ಪದ್ಯ-೪೫)

ಪದ್ಯ:-:೪೬:

ಸಂಪಾದಿಸಿ

ತರಿಸಿ ಗಂಗಾತೋಯಮಂ ಮಜ್ಜನಂಗೈದು |
ಪರಮ ಸಾಲಿಗ್ರಾಮ ತೀರ್ಥಮಂ ಕೈಕೊಂಡು |
ತರುಣ ತುಳಸೀದಳದ ಮಾಲೆಯಂ ಕಂಧರದೊಳಾಂತು ಮಂಟಪಕೆ ಬಂದು ||
ನೆರೆದ ಭೂಸುರ ಸಭೆಗೆ ಸಾಷ್ಟಾಂಗದಿಂದೆರಗಿ |
ಕರಯುಗಳಮಂ ಮುಗಿದು ನಿಂದು ಬಿನ್ನೈಸಿದಂ |
ಧರಣೀಶ್ವರಾಗ್ರಣಿ ಮಯೂರಧ್ವಜಂ ಜನಾಧೀಶ ಕೇಳ್ ಕೌತುಕವನು ||46||

ಪದವಿಭಾಗ-ಅರ್ಥ:
ತರಿಸಿ ಗಂಗಾತೋಯಮಂ ಮಜ್ಜನಂಗೈದು ಪರಮ ಸಾಲಿಗ್ರಾಮ ತೀರ್ಥಮಂ ಕೈಕೊಂಡು ತರುಣ ತುಳಸೀದಳದ ಮಾಲೆಯಂ ಕಂಧರದೊಳು ಆಂತು ಮಂಟಪಕೆ ಬಂದು=[ಮಯೂರಧ್ವಜನು ಗಂಗೋದಕವನ್ನು ತರಿಸಿ ಅದರಲ್ಲಿ ಸ್ನಾನಮಾಡಿ ಶ್ರೇಷ್ಠ ಸಾಲಿಗ್ರಾಮ ತೀರ್ಥವನ್ನು ಸ್ವಿಕರಿಸಿ, ಎಳೆಹಸಿರು ತುಳಸೀದಳದ ಮಾಲೆಯನ್ನು ಕುತ್ತಿಗೆಯಲ್ಲಿ ಧರಿಸಿ, ಮಂಟಪಕೆ ಬಂದನು.];; ನೆರೆದ ಭೂಸುರ ಸಭೆಗೆ ಸಾಷ್ಟಾಂಗದಿಂದ ಎರಗಿ ಕರಯುಗಳಮಂ ಮುಗಿದು ನಿಂದು ಬಿನ್ನೈಸಿದಂ ಧರಣೀಶ್ವರಾಗ್ರಣಿ ಮಯೂರಧ್ವಜಂ ಜನಾಧೀಶ ಕೇಳ್ ಕೌತುಕವನು=[ಅಲ್ಲಿ ನೆರೆದ ಬ್ರಾಹ್ಮಣರ ಸಭೆಗೆ ಸಾಷ್ಟಾಂಗ ಪೂರ್ವಕ ನಮಸ್ಕರಿಸಿ, ಕೈಗಳನ್ನು ಮುಗಿದು ನಿಂತುಕೊಂಡು ಧರಣೀಶ್ವರರಲ್ಲಿ ಪ್ರಮುಖನಾದ ಮಯೂರಧ್ವಜನು ವಿಜ್ಞಾಪನೆ ಮಾಡಿದನು; ಜನಮೇಜಯ ರಾಜನೇ ಈ ಆಶ್ಚರ್ಯವನ್ನು ಕೇಳು].
  • ತಾತ್ಪರ್ಯ:ಮಯೂರಧ್ವಜನು ಗಂಗೋದಕವನ್ನು ತರಿಸಿ ಅದರಲ್ಲಿ ಸ್ನಾನಮಾಡಿ ಶ್ರೇಷ್ಠ ಸಾಲಿಗ್ರಾಮ ತೀರ್ಥವನ್ನು ಸ್ವಿಕರಿಸಿ, ಎಳೆಹಸಿರು ತುಳಸೀದಳದ ಮಾಲೆಯನ್ನು ಕುತ್ತಿಗೆಯಲ್ಲಿ ಧರಿಸಿ, ಮಂಟಪಕೆ ಬಂದನು. ಅಲ್ಲಿ ನೆರೆದ ಬ್ರಾಹ್ಮಣರ ಸಭೆಗೆ ಸಾಷ್ಟಾಂಗ ಪೂರ್ವಕ ನಮಸ್ಕರಿಸಿ, ಕೈಗಳನ್ನು ಮುಗಿದು ನಿಂತುಕೊಂಡು ಧರಣೀಶ್ವರರಲ್ಲಿ ಪ್ರಮುಖನಾದ ಮಯೂರಧ್ವಜನು ವಿಜ್ಞಾಪನೆ ಮಾಡಿದನು; ಜನಮೇಜಯ ರಾಜನೇ ಈ ಆಶ್ಚರ್ಯವನ್ನು ಕೇಳು.
  • (ಪದ್ಯ-೪೬)

ಪದ್ಯ:-:೪೭:

ಸಂಪಾದಿಸಿ

ಈ ಮಹಾಸ್ಥಾನದೊಳ್ ನೆರೆದಖಿಳ ಭೂಸುರ |
ಸ್ತೋಮಂ ನಿರೀಕ್ಷಿಸುವುದಂದು ಬಲಿಯಧ್ವರಕೆ |
ವಾಮನಂ ಬಂದಂತೆ ತನ್ನ ಮುಖಕೀ ದ್ವಿಜಂ ತಾನೆ ಬಿಜಯಂಗೈದನು ||
ಶ್ರೀಮಾಧವಸ್ವರೂಪದೊಳೀಗರಿದು ತ |
ನ್ನೀ ಮೆಯ್ಯೊಳರ್ಧಮಂ ಕೊಯ್ದು ಕೊಟ್ಟಪೆ ನತಿ |
ಪ್ರೇಮದಿಂದೀತಂಗೆ ಬದುಕಲೀತನ ಸುತಂ ಪೊಸತಾಗಲಿಳೆಗೆಂದನು ||47||

ಪದವಿಭಾಗ-ಅರ್ಥ:
ಈ ಮಹಾಸ್ಥಾನದೊಳ್ ನೆರೆದ ಅಖಿಳ ಭೂಸುರಸ್ತೋಮಂ ನಿರೀಕ್ಷಿಸುವುದು ಅಂದು ಬಲಿಯ ಅಧ್ವರಕೆ ವಾಮನಂ ಬಂದಂತೆ ತನ್ನ ಮುಖಕೀ ದ್ವಿಜಂ ತಾನೆ ಬಿಜಯಂಗೈದನು ಶ್ರೀಮಾಧವ ಸ್ವರೂಪದೊಳು=[ಈ ಮಹಾಸ್ಥಾನದಲ್ಲಿ/ಸಭೆಯಲ್ಲಿ, ಸೇರಿದ ಎಲ್ಲಾ ಬ್ರಾಹ್ಮಣ ಸಮೂಹ ನೋಡಬೇಕು, ಹಿಂದೆ ಕಥಯುಗದಲ್ಲಿ, ಬಲಿಯ ಯಜ್ಞಕ್ಕೆ ವಾಮನನು ಬಂದಂತೆ ತನ್ನ ಯಜ್ಞಕ್ಕೆ ಈ ವಿಪ್ರನು ತಾನೆ ವಿಷ್ನು ರೂಪದಲ್ಲಿ ಬಂದನು,];;ಈಗ ಅರಿದು ತನ್ನ ಈ ಮೆಯ್ಯೊಳು ಅರ್ಧಮಂ ಕೊಯ್ದು ಕೊಟ್ಟಪೆನು ಅತಿ ಪ್ರೇಮದಿಂದ ಈತಂಗೆ, ಬದುಕಲಿ ಈತನ ಸುತಂ ಪೊಸತಾಗಲಿ ಇಳೆಗೆ ಎಂದನು=[ ತನ್ನ ಈ ಮೆಯ್ಯಲ್ಲಿ ಅರ್ಧವನ್ನು ಅತಿ ಪ್ರೇಮದಿಂದ ಈತನಿಗೆ ಈಗ ಅರಿದು ಕೊಯ್ದು ಕೊಡುವೆನು, ಬದುಕಲಿ ಈತನ ಮಗನು; ಭೂಮಿಗೆ ಇದು ಹೊಸತಾಗಿ ತೋರಲಿ ಎಂದನು ].
  • ತಾತ್ಪರ್ಯ:ಈ ಮಹಾಸ್ಥಾನದಲ್ಲಿ/ಸಭೆಯಲ್ಲಿ, ಸೇರಿದ ಎಲ್ಲಾ ಬ್ರಾಹ್ಮಣ ಸಮೂಹ ನೋಡಬೇಕು, ಹಿಂದೆ ಕಥಯುಗದಲ್ಲಿ, ಬಲಿಯ ಯಜ್ಞಕ್ಕೆ ವಾಮನನು ಬಂದಂತೆ ತನ್ನ ಯಜ್ಞಕ್ಕೆ ಈ ವಿಪ್ರನು ತಾನೆ ವಿಷ್ನು ರೂಪದಲ್ಲಿ ಬಂದನು, ತನ್ನ ಈ ಮೆಯ್ಯಲ್ಲಿ ಅರ್ಧವನ್ನು ಅತಿ ಪ್ರೇಮದಿಂದ ಈತನಿಗೆ ಈಗ ಅರಿದು ಕೊಯ್ದು ಕೊಡುವೆನು, ಬದುಕಲಿ ಈತನ ಮಗನು; ಭೂಮಿಗೆ ಇದು ಹೊಸ ಬಗೆಯಾಗಿ ತೋರಲಿ ಎಂದನು.
  • (ಪದ್ಯ-೪೭)XXVIII

ಪದ್ಯ:-:೪೮:

ಸಂಪಾದಿಸಿ

ಭೂನಾಥನೆಂದಮಾತಂ ಕೇಳ್ದು ಸಕಲ ಪ್ರ |
ಧಾನಿಗಳುಮರಸನ ಪುರೋಹಿತರುಮಾದ್ವಿಜರು |
ಮೇನಿ(ಣಿ)ದೆತ್ತಣ ಕೃತ್ಯಮೀ ವಿಪ್ರನಂತಕೋಪಮನೆಂದು ಭೀತಿಯಿಂದೆ ||
ದಾನಮೆಂದೊಡೆ ರಾಜ್ಯ ಲಕ್ಷಿ ಧನ ಕನಕ ಮಣಿ ||
ಧೇನುಗಳ ನೀವರೀ ಕಾಯಮಂ ಕೊಯ್ದು ಕುಡು |
ವೀ ನಿಮಿತ್ತವ ನರಿಯೆವೆಂದೆಲ್ಲರುಂ ಕಂಪಿಸಲ್ ನೃಪತಿಯಿಂತೆಂದನು ||48||

ಪದವಿಭಾಗ-ಅರ್ಥ:
ಭೂನಾಥನು ಎಂದ ಮಾತಂ ಕೇಳ್ದು ಸಕಲ ಪ್ರಧಾನಿಗಳುಂ ಅರಸನ ಪುರೋಹಿತರುಂ ಆ ದ್ವಿಜರುಂ ಏನು ಇದೆತ್ತಣ ಕೃತ್ಯಂ ಈ ವಿಪ್ರನು ಅಂತಕೋಪಮನು ಎಂದು ಭೀತಿಯಿಂದೆ=[ರಾಜನು ಹೇಳಿದ ಮಾತನ್ನು ಕೇಳಿ, ಸಕಲ ಪ್ರಧಾನಿಗಳು, ಅರಸನ ಪುರೋಹಿತರು, ಆ ಬ್ರಾಹ್ಮಣರು, ಏನು ಇದೆಲ್ಲಿಯ ಕಾರ್ಯ! ಈ ವಿಪ್ರನು ಯಮನ ಸಮಾನನು, ಎಂದು ಭೀತಿಯಿಂದ ಇದ್ದರು.];; ದಾನಮೆಂದೊಡೆ ರಾಜ್ಯ ಲಕ್ಷಿ ಧನ ಕನಕ ಮಣಿ ಧೇನುಗಳನು ಈವರೀ ಕಾಯಮಂ ಕೊಯ್ದು ಕುಡುವೀ ನಿಮಿತ್ತವನು ಅರಿಯೆವೆಂದು ಎಲ್ಲರುಂ ಕಂಪಿಸಲ್ ನೃಪತಿ ಇಂತು ಎಂದನು=[ದಾನವೆಂದರೆ ರಾಜ್ಯಲಕ್ಷಿ, ಧನ ಕನಕ, ಮಣಿ ಧೇನುಗಳನ್ನು ಕೊಡುವರು, ದೇಹವನ್ನು ಕೊಯ್ದು ಕೊಡುವ ನಿಯಮವನ್ನು ತಿಳಿಯೆವು,ಎಂದರು. ಎಲ್ಲರೂ ಭಯದಿಂದ ನಡುಗಲು ರಾಜನು ಹೀಗೆ ಹೇಳಿದನು].
  • ತಾತ್ಪರ್ಯ:ರಾಜನು ಹೇಳಿದ ಮಾತನ್ನು ಕೇಳಿ, ಸಕಲ ಪ್ರಧಾನಿಗಳು, ಅರಸನ ಪುರೋಹಿತರು, ಆ ಬ್ರಾಹ್ಮಣರು, ಏನು ಇದೆಲ್ಲಿಯ ಕಾರ್ಯ! ಈ ವಿಪ್ರನು ಯಮನ ಸಮಾನನು, ಎಂದು ಭೀತಿಯಿಂದ ಇದ್ದರು. ದಾನವೆಂದರೆ ರಾಜ್ಯಲಕ್ಷಿ, ಧನ ಕನಕ, ಮಣಿ ಧೇನುಗಳನ್ನು ಕೊಡುವರು, ದೇಹವನ್ನು ಕೊಯ್ದು ಕೊಡುವ ನಿಯಮವನ್ನು ತಿಳಿಯೆವು,ಎಂದರು. ಎಲ್ಲರೂ ಭಯದಿಂದ ನಡುಗಲು, ರಾಜನು ಹೀಗೆ ಹೇಳಿದನು.
  • (ಪದ್ಯ-೪೮)

ಪದ್ಯ:-:೪೯:

ಸಂಪಾದಿಸಿ

ಯಾಚಿಸಿದನಂಗಮಂ ಸುತನನುಳುಹೆಂದೆನಗೆ |
ಸೂಚಿಸಿದನೀದ್ವಿಜಂ ತಾಂ ಕೊಡುವೆನೆಂದೊಡನೆ |
ವಾಚಿಸಿದೆನಿಂತಿದಕೆ ತಪ್ಪಿದೊಡೆಲೋಕದೊಳ್ ತನ್ನಂ ಸಮಸ್ತ ಜನರು ||
ನಾಚಿಸದೆ ಮಾಣ್ಣಪರೆ ಪುಸಿದೊಡಂತಕನವರ್ |
ಪಾಚಿಸರೆ ನರಕದೊಳ್ ಮೈಯನರಿದೀಯಲಾ |
ಳೋಚಿಸಲದೇಕಿನ್ನು ತೊಲಗಿ ನೀವೆಂದು ನೃಪನನಿಬರಂ ಸೈತಿಟ್ಟನು ||49||

ಪದವಿಭಾಗ-ಅರ್ಥ:
ಯಾಚಿಸಿದನು ಅಂಗಮಂ ಸುತನನು ಉಳುಹೆಂದು ಎನಗೆ ಸೂಚಿಸಿದನು ಈ ದ್ವಿಜಂ, ತಾಂ ಕೊಡುವೆನು ಎಂದೊಡನೆ ವಾಚಿಸಿದೆನು=[ಮಯೂರಧ್ವಜನು ಹೇಳಿದನು, 'ವಿಪ್ರನು, ನನ್ನ ಅರ್ಧ ದೇಹವನ್ನು ಬೇಡಿದನು; ಈ ದ್ವಿಜನು ತನ್ನ ಮಗನನ್ನು ಉಳಿಸೆಂದು ನನಗೆ ಸೂಚಿಸಿದನು, ನಾನು ಒಡನೆ ಕೊಡುವೆನು ಎಂದು ವಚನಕೊಟ್ಟೆನು.];; ಇಂತಿದಕೆ ತಪ್ಪಿದೊಡೆ ಲೋಕದೊಳ್ ತನ್ನಂ ಸಮಸ್ತ ಜನರು ನಾಚಿಸದೆ ಮಾಣ್ಣಪರೆ ಪುಸಿದೊಡೆ ಅಂತಕನವರ್ ಪಾಚಿಸರೆ (ಪಾಚಿಸು- ಬೇಯಿಸು) ನರಕದೊಳ್=[ಹೀಗಿರುವಾಗ ಇದಕ್ಕೆ ತಪ್ಪಿದರೆ ಲೋಕದಲ್ಲಿ ತನ್ನನ್ನು ಸಮಸ್ತ ಜನರೂ ನಾಚುವಂತೆ ಮಾಡದೆ ಬಿಡುವರೆ? ಸುಳ್ಳು ಹೇಳಿದರೆ ಯಮಲೋಕದವರು ನರಕದಲ್ಲಿ ಬೆಂಕಿಯಲ್ಲಿ ಬೇಯಿಸದೆ ಬಿಡುವರೆ?];; ಮೈಯನು ಅರಿದೀಯಲು ಆಳೋಚಿಸಲು ಅದೇಕೆ ಇನ್ನು ತೊಲಗಿ ನೀವೆಂದು ನೃಪನನು ಅಬರಂ ಸೈತಿಟ್ಟನು=[ನನ್ನ ಮೈಯನ್ನು ಕತ್ತರಿಸಿಕೊಡಲು ಚಿಂತೆಪಡುವುದೇಕೆ? ಇನ್ನು ನೀವೆಲ್ಲರೂ ಹೊರಟುಹೋಗಿ,' ಎಂದು ರಾಜನು ಅವರೆಲ್ಲರನ್ನೂ ಸಂತೈಸಿದನು.]
  • ತಾತ್ಪರ್ಯ:ಮಯೂರಧ್ವಜನು ಹೇಳಿದನು, 'ವಿಪ್ರನು, ನನ್ನ ಅರ್ಧ ದೇಹವನ್ನು ಬೇಡಿದನು; ಈ ದ್ವಿಜನು ತನ್ನ ಮಗನನ್ನು ಉಳಿಸೆಂದು ನನಗೆ ಸೂಚಿಸಿದನು, ನಾನು ಒಡನೆ ಕೊಡುವೆನು ಎಂದು ವಚನಕೊಟ್ಟೆನು. ಹೀಗಿರುವಾಗ ಇದಕ್ಕೆ ತಪ್ಪಿದರೆ ಲೋಕದಲ್ಲಿ ತನ್ನನ್ನು ಸಮಸ್ತ ಜನರೂ ನಾಚುವಂತೆ ಮಾಡದೆ ಬಿಡುವರೆ? ಸುಳ್ಳು ಹೇಳಿದರೆ ಯಮಲೋಕದವರು ನರಕದಲ್ಲಿ ಬೆಂಕಿಯಲ್ಲಿ ಬೇಯಿಸದೆ ಬಿಡುವರೆ? ನನ್ನ ಮೈಯನ್ನು ಕತ್ತರಿಸಿಕೊಡಲು ಚಿಂತೆಪಡುವುದೇಕೆ? ಇನ್ನು ನೀವೆಲ್ಲರೂ ಹೊರಟುಹೋಗಿ,' ಎಂದು ರಾಜನು ಅವರೆಲ್ಲರನ್ನೂ ಸಂತೈಸಿದನು.
  • (ಪದ್ಯ-೪೯)

ಪದ್ಯ:-:೫೦:

ಸಂಪಾದಿಸಿ

ಆ ಮಯೂರಧ್ವಜಂ ಬಳಿಕಲ್ಲಿ ವಿಪ್ರರಂ |
ಹೇಮ ಮಣಿ ಗಜ ತುರಗ ವಸ್ತ್ರಭೂಷಣ ಧೇನು |
ಭೂಮಿ ದಾನಂಗಳಿಂ ತಣಿಸಿ ನೆಡಿಸಿದನೆರಡು ಕಂಬಮಂ ನಡುವೆ ತನ್ನ ||
ಕೋಮಲ ಶರೀರಮಂ ಪುಗಿಸಿ ಕಾಂಚನಮಯ ಸು |
ದಾಮದಿಂ ತೋಳ್ತೊಡೆಗಳಂ ಬಿಗಿಸಿಕೊಂಡು ನಿಂ |
ದಾ ಮಹೀಸುರನ ಪದಕಮಲಂಗಳಂ ತೊಳೆದು ಸಾದರದೊಳಿಂತೆಂದನು ||50||

ಪದವಿಭಾಗ-ಅರ್ಥ:
ಆ ಮಯೂರಧ್ವಜಂ ಬಳಿಕ ಅಲ್ಲಿ ವಿಪ್ರರಂ ಹೇಮ ಮಣಿ ಗಜ ತುರಗ ವಸ್ತ್ರಭೂಷಣ ಧೇನು ಭೂಮಿ ದಾನಂಗಳಿಂ ತಣಿಸಿ ನೆಡಿಸಿದನ ಎರಡು ಕಂಬಮಂ ನಡುವೆ ತನ್ನ ಕೋಮಲ ಶರೀರಮಂ ಪುಗಿಸಿ=[ಆ ಮಯೂರಧ್ವಜನು ಬಳಿಕ ಅಲ್ಲಿ ವಿಪ್ರರನ್ನು ಚಿನ್ನ, ಮಣಿ, ಗಜ, ತುರಗ, ವಸ್ತ್ರಭೂಷಣ, ಧೇನು/ಗೋವು, ಭೂಮಿ ದಾನಗಳಿಂದ ತೃಪ್ತಿಪಡಿಸಿ, ಎರಡು ಕಂಬಗಳನ್ನು ನೆಡಿಸಿದನು;**-> ಅವುಗಳ ನಡುವೆ ತನ್ನ ಕೋಮಲ ಶರೀರವನ್ನು ಹೊಗಿಸಿ];; ಕಾಂಚನಮಯ ಸುದಾಮದಿಂ(ದಾಮ-ಹಗ್ಗ. ನಡುಪಟ್ಟಿ.:ಪರಿಷತ್ ನಿಘಂಟು) ತೋಳ್ ತೊಡೆಗಳಂ ಬಿಗಿಸಿಕೊಂಡು ನಿಂದಾ ಮಹೀಸುರನ ಪದಕಮಲಂಗಳಂ ತೊಳೆದು ಸಾದರದೊಳಿಂತೆಂದನು=[ಚಿನ್ನದ ಸರಪಳಿಗಳಿಂದ ತೋಳು ತೊಡೆಗಳನ್ನು ಬಿಗಿಸಿಕೊಂಡು ನಿಂತು (**<-ಆ ಬ್ರಾಹ್ಮಣನ ಪಾದಕಮಲಗಳನ್ನು ತೊಳೆದು) ಆದರದಿಂದ ಹೀಗೆ ಹೇಳಿದನು.]
  • ತಾತ್ಪರ್ಯ:ಆ ಮಯೂರಧ್ವಜನು ಬಳಿಕ ಅಲ್ಲಿ ವಿಪ್ರರನ್ನು ಚಿನ್ನ, ಮಣಿ, ಗಜ, ತುರಗ, ವಸ್ತ್ರಭೂಷಣ, ಧೇನು/ಗೋವು, ಭೂಮಿ ದಾನಗಳಿಂದ ತೃಪ್ತಿಪಡಿಸಿ, , ಎರಡು ಕಂಬಗಳನ್ನು ನೆಡಿಸಿದನು;ಆ ಬ್ರಾಹ್ಮಣನ ಪಾದಕಮಲಗಳನ್ನು ತೊಳೆದು, ಕಂಬಗಳ ನಡುವೆ ತನ್ನ ಕೋಮಲ ಶರೀರವನ್ನು ಹೊಗಿಸಿ ಚಿನ್ನದ ಸರಪಳಿಗಳಿಂದ ತೋಳು ತೊಡೆಗಳನ್ನು ಬಿಗಿಸಿಕೊಂಡು ನಿಂತು, ಆದರದಿಂದ ಹೀಗೆ ಹೇಳಿದನು.]
  • (ಪದ್ಯ-೫೦)

ಪದ್ಯ:-:೫೧:

ಸಂಪಾದಿಸಿ

ಭೂಸುರೋತ್ತಮ ನಿನಗೆ ತಾ ಕುಡವ ದೇಹಾರ್ಧ |
ದೀಸುದಾನದೊಳಖಿಳ ಯಜ್ಞನಾಯಕನಾದ |
ವಾಸುದೇವಂ ಪ್ರೀತನಾಗಲಸ್ಮತ್ಕುಲೋದ್ಭವರಾದ ಜೀವಿಗಳೊಳು ||
ಲೇಸಿಂದೆ ಪಾರ್ವಂಗೆ ತನು ಧನವ ನೀವೆಡೆಯೋ |
ಳೋಸರಿಸದಿರಲಿ ಬುದ್ಧಿಗಳೆಂದು ನೃಪತಿ ಕ |
ಟ್ಟಾಸುರದ ಕೊಯ್ಗಾರರಂ ಕರೆಸಿ ತೆಗೆಸಿದಂ ಮಸೆದ ಕೊಯ್ಗುತ್ತಿಗಳನು ||51||

ಪದವಿಭಾಗ-ಅರ್ಥ:
ಭೂಸುರೋತ್ತಮ ನಿನಗೆ ತಾ ಕುಡವ ದೇಹಾರ್ಧದಿ ಈ ಸುದಾನದೊಳು ಅಖಿಳ ಯಜ್ಞನಾಯಕನಾದ ವಾಸುದೇವಂ ಪ್ರೀತನಾಗಲು ಅಸ್ಮತ್ ಕುಲೋದ್ಭವರಾದ ಜೀವಿಗಳೊಳು=['ಬ್ರಾಹ್ಮಣೋತ್ತಮನೇ, ನಿನಗೆ ತಾನು ಕೊಡುವ ದೇಹದ ಅರ್ಧದಿಂದ ಈ ಉತ್ತಮದಾನದಲ್ಲಿ ಎಲ್ಲಾ ಯಜ್ಞನಾಯಕನಾದ ವಾಸುದೇವನು/ ವಿಷ್ಣುವು ಪ್ರೀತನಾಗಲು/ಲಿ.; ನಮ್ಮ ಕುಲದಲ್ಲಿ ಹುಟ್ಟಿದವರಾದ ಜೀವಿಗಳು/ವಂಶಜರು];; ಲೇಸಿಂದೆ ಪಾರ್ವಂಗೆ ತನು ಧನವನು ಈವೆಡೆಯೋಳು ಓಸರಿಸದಿರಲಿ ಬುದ್ಧಿಗಳೆಂದು ನೃಪತಿ ಕಟ್ಟಾಸುರದ ಕೊಯ್ಗಾರರಂ ಕರೆಸಿ ತೆಗೆಸಿದಂ ಮಸೆದ ಕೊಯ್ಗುತ್ತಿಗಳನು (ಕೊಯ್ಯುವ ಕತ್ತಿಗಳನ್ನು / ಕರಗಸಗಳನ್ನು?=[ಉತ್ತಮ ರೀತಿಯಲ್ಲಿ ಬ್ರಾಹ್ಮಣರಿಗೆ ತನು/ದೈಹಿಕಸೇವೆಯನ್ನು ಧನವನ್ನು ಕೊಡುವ ವಿಚಾರದಲ್ಲಿ ಅವರ ಬುದ್ಧಿಗಳು ಹಿಂಜರಿಯದಿರಲಿ,' ಎಂದು ಹೇಳಿ ಮಯೂರಧ್ವಜ ರಾಜನು ಕಠಿಣ ಸ್ವಭಾವದ ಕೊಯ್ಗಾರರನ್ನು/ ಕೊಯ್ಯುವವರನ್ನು ಕರೆಸಿ, ಮಸೆದ ಕೊಯ್ಗುತ್ತಿಗಳನು ತೆಗೆಸಿಟ್ಟನು].
  • ತಾತ್ಪರ್ಯ: 'ಬ್ರಾಹ್ಮಣೋತ್ತಮನೇ, ನಿನಗೆ ತಾನು ಕೊಡುವ ಈ ದೇಹದ ಅರ್ಧದಿಂದ ಈ ಉತ್ತಮವಾದ ದಾನದಲ್ಲಿ ಎಲ್ಲಾ ಯಜ್ಞನಾಯಕನಾದ ವಾಸುದೇವನು/ ವಿಷ್ಣುವು ಪ್ರೀತನಾಗಲಿ. ನಮ್ಮ ಕುಲದಲ್ಲಿ ಹುಟ್ಟಿದವರಾದ ಜೀವಿಗಳು/ವಂಶಜರು ಉತ್ತಮ ರೀತಿಯಲ್ಲಿ ಬ್ರಾಹ್ಮಣರಿಗೆ ತನು/ದೈಹಿಕಸೇವೆಯನ್ನು ಧನವನ್ನು ಕೊಡುವ ವಿಚಾರದಲ್ಲಿ ಅವರ ಬುದ್ಧಿಗಳು ಹಿಂಜರಿಯದಿರಲಿ,' ಎಂದು ಹೇಳಿ ಮಯೂರಧ್ವಜ ರಾಜನು ಕಠಿಣ ಸ್ವಭಾವದ ಕೊಯ್ಗಾರರನ್ನು/ ಕೊಯ್ಯುವವರನ್ನು ಕರೆಸಿ, ಮಸೆದ ಕೊಯ್ಗುತ್ತಿಗಳನು ತೆಗೆಸಿಟ್ಟನು].
  • (ಪದ್ಯ-೫೧)

ಪದ್ಯ:-:೫೨:

ಸಂಪಾದಿಸಿ

ಕುಡುವನಿರೆ ತನಗೆ ಬೇಕಾದುದಂ ಬೇಡುವಂ |
ಬಿಡುವನೇ ಬೇಡುವಂ ಬರೆ ತನ್ನೊಳಿರ್ದುದಂ |
ತಡೆದೆಪನೆ ಕುಡುವವಂ ಕುಡುವ ಬೇಡುವರೊಳಗೆ ಕುಡೆನೆಂಬ ಬೇಡೆನೆಂಬ ||
ಎಡೆತಡೆಗಳಿಲ್ಲೆಂಬ ನಾಳ್ನುಡಿಯ ನೀಪಾರ್ವ |
ಪೊಡವೀಶರೊಳ್‍ ಕಂಡೆವೆಂದು ನಡನಡುಗಿ ಮೊರೆ |
ಯಿಡುತಿರ್ದುದವನ ರಾಷ್ಟ್ರದ ಜನಂ ಬೆದರಿ ಕುರರೀಗಣಂಗಳ ತೆರೆದೊಳು ||52||

ಪದವಿಭಾಗ-ಅರ್ಥ:
ಕುಡುವನು ಇರೆ ತನಗೆ ಬೇಕಾದುದಂ ಬೇಡುವಂ ಬಿಡುವನೇ ಬೇಡುವಂ ಬರೆ ತನ್ನೊಳು ಇರ್ದುದಂ ತಡೆದೆಪನೆ ಕುಡುವವಂ ಕುಡುವ ಬೇಡುವರೊಳಗೆ ಕುಡೆನೆಂಬ ಬೇಡೆನೆಂಬ=[ಕೊಡುವವನು ಇರಲು, ತನಗೆ ಬೇಕಾದುದನ್ನು ಬೇಡುವನು ಬಿಡುವನೇ? ಬೇಡುವವನು ಬರಲು ತನ್ನೊಲ್ಲಿ ಇದ್ದುದನ್ನು ಕೊಡದೆ ತಡೆಯುವನೆ? ಕೊಡುವವನು ಕೊಡುವ, ಬೇಡುವವರೊಳಗೆ ಕೊಡೆನೆಂಬ, ಬೇಡವೆಂಬ];; ಎಡೆತಡೆಗಳು ಇಲ್ಲೆಂಬ ನಾಳ್ನುಡಿಯನು ಈ ಪಾರ್ವ ಪೊಡವೀಶರೊಳ್‍ ಕಂಡೆವೆಂದು ನಡನಡುಗಿ ಮೊರೆಯಿಡುತಿರ್ದುದು ಅವನ ರಾಷ್ಟ್ರದ ಜನಂ ಬೆದರಿ ಕುರರೀಗಣಂಗಳ ತೆರೆದೊಳು=[ಎಡೆತಡೆಗಳು ಇಲ್ಲವೆಂಬ ನಾಣ್ಣುಡಿಯನು ಈ ಬ್ರಾಹ್ಮಣ ಭೂಮೀಶನಲ್ಲಿ/ರಾಜನಲ್ಲಿ ಕಂಡೆವು ಎಂದು ಅವನ ರಾಷ್ಟ್ರದ ಜನರು ಬೆದರಿದ ಕುರಗಳ ಹಿಂಡಿನ ತೆರೆದಲ್ಲಿ ನಡನಡುಗಿ ಭಯದಿಂದ ಗೋಳಾಡುತ್ತಿದ್ದರು].
  • ತಾತ್ಪರ್ಯ:ಕೊಡುವವನು ಇರಲು, ತನಗೆ ಬೇಕಾದುದನ್ನು ಬೇಡುವನು ಬಿಡುವನೇ? ಬೇಡುವವನು ಬರಲು ತನ್ನೊಲ್ಲಿ ಇದ್ದುದನ್ನು ಕೊಡದೆ ತಡೆಯುವನೆ? ಕೊಡುವವನು ಕೊಡುವ, ಬೇಡುವವರೊಳಗೆ ಕೊಡೆನೆಂಬ, ಬೇಡವೆಂಬಎಡೆತಡೆಗಳು ಇಲ್ಲವೆಂಬ ನಾಣ್ಣುಡಿಯನು ಈ ಬ್ರಾಹ್ಮಣ ಭೂಮೀಶನಲ್ಲಿ/ರಾಜನಲ್ಲಿ ಕಂಡೆವು ಎಂದು ಅವನ ರಾಷ್ಟ್ರದ ಜನರು ಬೆದರಿದ ಕುರಗಳ ಹಿಂಡಿನ ತೆರೆದಲ್ಲಿ ನಡನಡುಗಿ ಭಯದಿಂದ ಗೋಳಾಡುತ್ತಿದ್ದರು.
  • (ಹೆಸರುಪದ:ಕುರರ್(ಸಂ) ೧ ಕುರಿ ೨ ಮೇಕೆ :ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು/ಬರಹ ನಿಘಂಟು)
  • (ಪದ್ಯ-೫೨)

ಪದ್ಯ:-:೫೩:

ಸಂಪಾದಿಸಿ

ಪೂರ್ವಮಂ ನೆನೆದು ಕಂಬನಿಗಳಿಂ ಧ್ವನಿಗಳಿಂ |
ಚೀರ್ವರಂ ಪ್ರಜೆಗಳಂ ಪಾಲಿಸದೆ ಲಾಲಿಸದೆ
ಜಾರ್ವ ಪರಿಯೆಂತೆಂದಳಲ್ವರಂ ನಿಲ್ವರಂ ಬೆರಗಾಗಿ ಬೆರಗುಗೊಂಡು ||
ಸಾರ್ವಭೌಮಕ ನಿನ್ನ ರಕ್ಷೆಯಂ ಶಿಕ್ಷೆಯಂ |
ಮೀರ್ವರಲ್ಲೆಮ್ಮ ನೀಂ ಬಿಡುವರೇ ಕುಡುವರೇ |
ಪಾರ್ವಂಗಸುವನೆಂದು ಬಯ್ವರಂ ಸುಯ್ವರಂ ನೋಡಿ ನೃಪನಿಂತೆಂದನು ||53||

ಪದವಿಭಾಗ-ಅರ್ಥ:
ಪೂರ್ವಮಂ ನೆನೆದು ಕಂಬನಿಗಳಿಂ ಧ್ವನಿಗಳಿಂ ಚೀರ್ವರಂ ಪ್ರಜೆಗಳಂ ಪಾಲಿಸದೆ ಲಾಲಿಸದೆ ಜಾರ್ವ ಪರಿಯೆಂತೆಂದು ಅಳಲ್ವರಂ ನಿಲ್ವರಂ ಬೆರಗಾಗಿ ಬೆರಗುಗೊಂಡು=[ರಾಜನ ಹಿಂದಿನ ಆಳ್ವಿಕೆಯನ್ನು ನೆನೆದು ಕಂಬನಿಸುರಿಸುತ್ತಾ, ದೊಡ್ಡದಾಗಿ ಗೋಳಿಡುವವರನ್ನು, ಪ್ರಜೆಗಳನ್ನು ಪಾಲಿಸದೆ ಉಪಚರಿಸದೆ, ತಪ್ಪಿಸಿಕೊಳ್ಳುವ ರಿತಿ ಇದೇನು? ಎಂದು ಅಳುತ್ತಿರುವವರನ್ನು, ಇದನ್ನು ನೋಡಿ ಆಶ್ಚರ್ಯಗೊಂಡು ಬೆರಗಾಗಿ ನಿಂತಿರುವವರನ್ನು,];;ಸಾರ್ವಭೌಮಕ ನಿನ್ನ ರಕ್ಷೆಯಂ ಶಿಕ್ಷೆಯಂ ಮೀರ್ವರಲ್ಲ ಎಮ್ಮ ನೀಂ ಬಿಡುವರೇ ಕುಡುವರೇ ಪಾರ್ವಂಗೆ ಅಸುವನು ಎಂದು ಬಯ್ವರಂ ಸುಯ್ವರಂ ನೋಡಿ ನೃಪನು ಇಂತೆಂದನು=[ಸಾರ್ವಭೌನೇ, ನಿನ್ನ ರಕ್ಷೆಯನ್ನೂ, ಶಿಕ್ಷೆಯನ್ನೂ ಮೀರುವವರಲ್ಲ, ನಮ್ಮನ್ನು ನೀನು ಬಿಡಬಹುದೆ? ವಿಪ್ರನಿಗೆ ಪ್ರಾಣವನ್ನು ಕೊಡುವರೇ? ಎಂದು ಬಯ್ಯುವವರನ್ನು, ದುಃಖದಿಂದ ಬಿಸುಸುಯ್ವರನ್ನು ನೋಡಿ ರಾಜನು ಹೀಗೆ ಹೇಳಿದನು ].
  • ತಾತ್ಪರ್ಯ:ರಾಜನ ಹಿಂದಿನ ಆಳ್ವಿಕೆಯನ್ನು ನೆನೆದು ಕಂಬನಿಸುರಿಸುತ್ತಾ, ದೊಡ್ಡದಾಗಿ ಗೋಳಿಡುವವರನ್ನು, ಪ್ರಜೆಗಳನ್ನು ಪಾಲಿಸದೆ ಉಪಚರಿಸದೆ, ತಪ್ಪಿಸಿಕೊಳ್ಳುವ ರಿತಿ ಇದೇನು? ಎಂದು ಅಳುತ್ತಿರುವವರನ್ನು, ಇದನ್ನು ನೋಡಿ ಆಶ್ಚರ್ಯಗೊಂಡು ಬೆರಗಾಗಿ ನಿಂತಿರುವವರನ್ನು,ಸಾರ್ವಭೌನೇ, ನಿನ್ನ ರಕ್ಷೆಯನ್ನೂ, ಶಿಕ್ಷೆಯನ್ನೂ ಮೀರುವವರಲ್ಲ, ನಮ್ಮನ್ನು ನೀನು ಬಿಡಬಹುದೆ? ವಿಪ್ರನಿಗೆ ಪ್ರಾಣವನ್ನು ಕೊಡುವರೇ? ಎಂದು ಬಯ್ಯುವವರನ್ನು, ದುಃಖದಿಂದ ಬಿಸುಸುಯ್ವರನ್ನು ನೋಡಿ ರಾಜನು ಹೀಗೆ ಹೇಳಿದನು.
  • (ಪದ್ಯ-೫೩)

ಪದ್ಯ:-:೫೪:

ಸಂಪಾದಿಸಿ

ಪ್ರಜೆಗಳಿರ ನೀವಿದಕೆ ದುಃಖಿಪರೆ ಧನ್ಯನಾಂ |
ನಿಜಶರೀರದೊಳರ್ಧಮಂ ಕೊಯ್ದು ಕುಡುವೆ ನೀ |
ದ್ವಿಜನಹಸ್ತದೊಳಿವಂ ನೃಹರಿಯೆಂದೀತನಡವಿಯ ಸಿಂಹಕೀಯಲಿದನು ||
ಗಜಬಜವಿದೇತಕೆ ಪರೋಪಕೃತಿಗಲ್ಲದ ಮ |
ನುಜನ ಬಾಳ್ ಸಣಬುರಿದ ಬೂದಿಯಂತಪ್ಪುದಾ |
ರಜಮಿಲ್ಲದೀಕ್ಷಿಪುದು ಕೌತುಕವನೆಂದೊದಂಬಡಿಸಿದಂ ನರನಾಥನು ||54||

ಪದವಿಭಾಗ-ಅರ್ಥ:
ಪ್ರಜೆಗಳಿರ ನೀವು ಇದಕೆ ದುಃಖಿಪರೆ ಧನ್ಯ ನಾಂ ನಿಜಶರೀರದೊಳು ಅರ್ಧಮಂ ಕೊಯ್ದು ಕುಡುವೆನು ಈ ದ್ವಿಜನ ಹಸ್ತದೊಳು ಇವಂ ನೃಹರಿಯೆಂದು=[ಪ್ರಜೆಗಳೇ, ನೀವು ಇದಕ್ಕೆ - ಈ ದೇಹ ದಾನಕ್ಕೆ ದುಃಖಿಸಬಹುದೆ/ ದುಃಖಿಸಬಾರದು; ಈ ದಾನದಿಂದ ನಾನು ಧನ್ಯ! ನನ್ನ ಶರೀರದಲ್ಲಿ ಅರ್ಧವನ್ನು ಕೊಯ್ದು ಕೊಡುವೆನು.ಈ ದ್ವಿಜನ ಕೈಯಲ್ಲಿ,ಇವನು ನೃಸಿಂಹನೆಂದು ಭಾವಿಸಿ,];; ಇವಂ ನೃಹರಿಯೆಂದು ಈತನು ಅಡವಿಯ ಸಿಂಹಕೆ ಈಯಲಿ ಇದನು=[ಈತನು ಅಡವಿಯ ಸಿಂಹಕ್ಕೆ ಇದನ್ನು ಕೊಡಲಿ.];; ಗಜಬಜವು ಇದು ಏತಕೆ ಪರೋಪಕೃತಿಗೆ ಅಲ್ಲದ ಮನುಜನ ಬಾಳ್ ಸಣಬುರಿದ ಬೂದಿಯಂತೆ ಅಪ್ಪುದು=[ಗಲಾಟೆ ಗಾಬರಿ ಗಲಿಬಿಲಿ ಇದೆಲ್ಲಾ ಏಕೆ? ಪರೋಪಕಾರ್ಯಕ್ಕೆ ಆಗದ ಮನುಷ್ಯನ ಬಾಳು, ಸಣಬು ಉರಿದ ಬೂದಿಯ ಹಾಗೆ ಆಗುವುದು.];; ಆರಜಮಿಲ್ಲದೆ ಈಕ್ಷಿಪುದು ಕೌತುಕವನು ಎಂದು ಒದಂಬಡಿಸಿದಂ ನರನಾಥನು=[ದುಃಖಪಡದೆ ಈ ಆಶ್ಚರ್ಯವನ್ನುನೋಡುವುದು, ಎಂದು ರಾಜನು ಜನರನ್ನು ಸಮಾಧಾನ ಪಡಿಸಿದನು.]
  • ತಾತ್ಪರ್ಯ:ಪ್ರಜೆಗಳೇ, ನೀವು ಇದಕ್ಕೆ - ಈ ದೇಹ ದಾನಕ್ಕೆ ದುಃಖಿಸಬಹುದೆ/ ದುಃಖಿಸಬಾರದು; ಈ ದಾನದಿಂದ ನಾನು ಧನ್ಯ! ನನ್ನ ಶರೀರದಲ್ಲಿ ಅರ್ಧವನ್ನು ಕೊಯ್ದು ಕೊಡುವೆನು.ಈ ದ್ವಿಜನ ಕೈಯಲ್ಲಿ,ಇವನು ನೃಸಿಂಹನೆಂದು ಭಾವಿಸಿ, ಈತನು ಅಡವಿಯ ಸಿಂಹಕ್ಕೆ ಇದನ್ನು ಕೊಡಲಿ. ಗಲಾಟೆ ಗಾಬರಿ ಗಲಿಬಿಲಿ ಇದೆಲ್ಲಾ ಏಕೆ? ಪರೋಪಕಾರ್ಯಕ್ಕೆ ಆಗದ ಮನುಷ್ಯನ ಬಾಳು, ಸಣಬು ಉರಿದ ಬೂದಿಯ ಹಾಗೆ ಆಗುವುದು.ದುಃಖಪಡದೆ ಈ ಆಶ್ಚರ್ಯವನ್ನು ನೋಡುವುದು, ಎಂದು ರಾಜನು ಜನರನ್ನು ಸಮಾಧಾನ ಪಡಿಸಿದನು.].
  • (ಆರಜಂ- ಆ+ ರಜಂ :ಅತಿ ದಃಖ,ರಜಸ್: ಸಂಸ್ಕೃತ:ಸಂ,೧೧. ರಜಸ್:ದಃಖ; ನಿಘಂಟು ಎಸ್.ವಿ.ಆಪ್ಟೆ ವಿದ್ಯಾರ್ಥಿಗಳ ನಿಘಂಟು-ಭಾರತ ಸರ್ಕಾರದ ಪ್ರಕಟಣೆ)
  • (ಪದ್ಯ-೫೪)

ಪದ್ಯ:-:೫೫:

ಸಂಪಾದಿಸಿ

ಮತ್ತೆ ಮನುಜೇಂದ್ರನಾವಿಪ್ರನಂ ಕರೆದು ನಿನ |
ಗಿತ್ತೆ ನೀ ದೇಹಾರ್ಧಮಂ ಪರಿಗ್ರಹಿಸೆಂದು |
ಚಿತ್ತದೊಳ್‍ಮಿಗೆ ಹರ್ಷಮಂ ತಾಳ್ದು ಪೊರೆಯೊಳಿಹಸೂದಕರ್ಮಜ್ಞರೊಡನೆ ||
ಪೊತ್ತುಕಳೆಯದೆ ತನ್ನ ತನುವ ನೆರಡಾಗಿ ಮಸೆ |
ವೆತ್ತೆಕರಪತ್ರದಿಂ ಸೀಳ್ವುದೆಂದಾಜ್ಞಾಪಿ |
ಸುತ್ತಿರೆ ಶಿಖೀಧ್ವಜನ ಸತಿ ಕುಮುದ್ವತಿ ನುಡಿದಳತಿವಿನಯದಿಂದೆ ಪತಿಗೆ ||55||

ಪದವಿಭಾಗ-ಅರ್ಥ:
ಮತ್ತೆ ಮನುಜೇಂದ್ರನು ಆವಿಪ್ರನಂ ಕರೆದು ನಿನಗೆ ಇತ್ತೆನು ಈ ದೇಹಾರ್ಧಮಂ ಪರಿಗ್ರಹಿಸೆಂದು ಚಿತ್ತದೊಳ್‍ ಮಿಗೆ ಹರ್ಷಮಂ ತಾಳ್ದು=[ಮತ್ತೆ ರಾಜನು ಆ ವಿಪ್ರನನ್ನು ಕರೆದು ನಿನಗೆ ಕೊಟ್ಟೆನು ಈ ದೇಹಾರ್ಧವನ್ನು; ಪರಿಗ್ರಹಿಸು/ಸ್ವೀಕರಿಸು, ಎಂದು ಹೇಳಿದನು. ಮನಸ್ಸಿನಲ್ಲಿ ಬಹಳ ಹರ್ಷವನ್ನು ಹೊಂದಿದ್ದನು.];; ಪೊರೆಯೊಳು ಇಹ ಸೂದಕರ್ಮಜ್ಞರೊಡನೆ ಪೊತ್ತುಕಳೆಯದೆ ತನ್ನ ತನುವನು ಎರಡಾಗಿ ಮಸೆವೆತ್ತೆ ಕರಪತ್ರದಿಂ ಸೀಳ್ವುದು ಎಂದು ಆಜ್ಞಾಪಿಸುತ್ತಿರೆ=[ಹತ್ತಿರದಲ್ಲಿ ಇದ್ದ ಮಾಂಸಕತ್ತರಿಸಿ ಅಡಿಗೆಮಾಡವ ಕೆಲಸದವರೊಡನೆ ಹೊತ್ತುಕಳೆಯದೆ ತನ್ನದೇಹವನ್ನು ಎರಡಾಗಿ ಹರಿತವಾದ ಕರಪತ್ರದಿಂದ (ಕತ್ತಿ/ಕರಗಸ) ಸೀಳುವುದು ಎಂದು ಆಜ್ಞಾಪಿಸುತ್ತಿರಲು,];; ಶಿಖಿಧ್ವಜನ ಸತಿ ಕುಮುದ್ವತಿ ನುಡಿದಳು ಅತಿವಿನಯದಿಂದೆ ಪತಿಗೆ=[ಮಯೂರಧ್ವಜನ ಪತ್ನಿ ಕುಮುದ್ವತಿ ಅತಿವಿನಯದಿಂದ ಪತಿಗೆ ಹೇಳಿದಳು.]
  • ತಾತ್ಪರ್ಯ:ಆನಂತರ ರಾಜನು ಆ ವಿಪ್ರನನ್ನು ಕರೆದು ನಿನಗೆ ಕೊಟ್ಟೆನು ಈ ದೇಹಾರ್ಧವನ್ನು; ಪರಿಗ್ರಹಿಸು/ಸ್ವೀಕರಿಸು, ಎಂದು ಹೇಳಿದನು. ಮನಸ್ಸಿನಲ್ಲಿ ಬಹಳ ಹರ್ಷವನ್ನು ಹೊಂದಿದ್ದನು. ಹತ್ತಿರದಲ್ಲಿ ಇದ್ದ ಮಾಂಸಕತ್ತರಿಸಿ ಅಡಿಗೆಮಾಡವ ಕೆಲಸದವರೊಡನೆ ಹೊತ್ತುಕಳೆಯದೆ ತನ್ನದೇಹವನ್ನು ಎರಡಾಗಿ ಹರಿತವಾದ ಕರಪತ್ರದಿಂದ (ಕತ್ತಿ/ಕರಗಸ) ಸೀಳುವುದು ಎಂದು ಆಜ್ಞಾಪಿಸುತ್ತಿರಲು, ಮಯೂರಧ್ವಜನ ಪತ್ನಿ ಕುಮುದ್ವತಿ ಅತಿವಿನಯದಿಂದ ಪತಿಗೆ ಹೇಳಿದಳು.
  • (ಪದ್ಯ-೫೫)

ಪದ್ಯ:-:೫೬:

ಸಂಪಾದಿಸಿ

ನೀಂ ತಿಳಿದುದಿಲ್ಲರಸ ವಿಪ್ರೇಂದ್ರನರಿಯಂ ವ |
ನಾಂತರದೊಳಾ ಸಿಂಹಮೆಂದನುಡಿ ಶಾಸ್ತ್ರಸಿ |
ದ್ಧಾಂತಮಂಗನೆ ಪುರುಷನರ್ಧಾಂಗಮೆಂಬುದಕ್ಕೆ ನಿನ್ನ ವಾಮಾಂಗಿಯಾದ ||
ಕಾಂತೆಯಂ ಬೇಡಿದೊಡೆ ಕೊಯ್ದು ಕಾಯವನೀವ |
ಭ್ರಾಂತಿಯೇತಕೆ ನನ್ನನಸುವೆರಸಿ ಕೊಟ್ಟು ಕಳೆ |
ತಾಂ ತಳೆವ ನೈದೆತನದಿಂದೆ ಸದ್ಗತಿಯನೆಂದಾ ಕುಮುದ್ವತಿ ನುಡಿದಳು||56||

ಪದವಿಭಾಗ-ಅರ್ಥ:
ನೀಂ ತಿಳಿದುದಿಲ್ಲ ಅರಸ ವಿಪ್ರೇಂದ್ರನು ಅರಿಯಂ ವನಾಂತರದೊಳು ಆ ಸಿಂಹಮೆಂದ ನುಡಿ ಶಾಸ್ತ್ರಸಿದ್ಧಾಂತಮ್ ಅಂಗನೆ ಪುರುಷನ ಅರ್ಧಾಂಗಮೆಂಬುದಕ್ಕೆ ನಿನ್ನ ವಾಮಾಂಗಿಯಾದ ಕಾಂತೆಯಂ ಬೇಡಿದೊಡೆ=[ಅರಸನೇ, ವನಾಂತರದಲ್ಲಿ ಆ ಸಿಂಹಹೇಳಿದ ಮಾತಿನ ಶಾಸ್ತ್ರಸಿದ್ಧಾಂತವನ್ನು, ನೀನು ತಿಳಿದುಕೊಳ್ಳಲಿಲ್ಲ, ಬ್ರಾಹ್ಮಣನೂ ತಿಳಿಯನು; ಪತ್ನಿಯು ಪುರುಷನ ಅರ್ಧಾಂಗವು ಎಂಬುದಕ್ಕೆ ನಿನ್ನ ವಾಮಾಂಗಿಯಾದ/ ಎಡಭಾಗವಾದ ನಿನ್ನ ಪತ್ನಿಯನ್ನು ಬೇಡಿದರೆ,];; ಕೊಯ್ದು ಕಾಯವನು ಈವ ಭ್ರಾಂತಿಯೇತಕೆ ನನ್ನನು ಅಸುವೆರಸಿ (ಅಸು:ಪ್ರಾಣ, ವೆರಸಿ:ಸೇರಿ) ಕೊಟ್ಟು ಕಳೆ ತಾಂ ತಳೆವನು ಐದೆತನದಿಂದೆ ಸದ್ಗತಿಯನು ಎಂದು ಆ ಕುಮುದ್ವತಿ ನುಡಿದಳು=[ನೀನು ನಿನ್ನ ಕಾಯ/ದೇಹವನ್ನು ಕೊಯ್ದು ಕೊಡುವ ಭ್ರಾಂತಿಯೇತಕ್ಕೆ? ನನ್ನನು ಪ್ರಾಣಸಮೇತ ಕೊಟ್ಟು ವಚನವನ್ನು ಕಳೆದುಕೊ. ತಾನು ಮುತ್ತೈದೆತನದಿಂದ ಸದ್ಗತಿಯನ್ನು ತಳೆವನು/ಪಡೆವೆನು, ಎಂದು ಆ ಕುಮುದ್ವತಿ ಹೇಳಿದಳು].
  • ತಾತ್ಪರ್ಯ:ಅರಸನೇ, ವನಾಂತರದಲ್ಲಿ ಆ ಸಿಂಹಹೇಳಿದ ಮಾತಿನ ಶಾಸ್ತ್ರಸಿದ್ಧಾಂತವನ್ನು, ನೀನು ತಿಳಿದುಕೊಳ್ಳಲಿಲ್ಲ, ಬ್ರಾಹ್ಮಣನೂ ತಿಳಿಯನು; ಪತ್ನಿಯು ಪುರುಷನ ಅರ್ಧಾಂಗವು ಎಂದು ನಿನ್ನ ವಾಮಾಂಗಿಯಾದ/ ಎಡಭಾಗವಾದ ನಿನ್ನ ಪತ್ನಿಯನ್ನು ಬೇಡಿದರೆ, ನೀನು ನಿನ್ನ ಕಾಯ/ದೇಹವನ್ನು ಕೊಯ್ದು ಕೊಡುವ ಭ್ರಾಂತಿಯೇತಕ್ಕೆ? ನನ್ನನು ಪ್ರಾಣಸಮೇತ ಕೊಟ್ಟು ವಚನವನ್ನು ಕಳೆದುಕೊ. ತಾನು ಮುತ್ತೈದೆತನದಿಂದ ಸದ್ಗತಿಯನ್ನು ತಳೆವನು/ಪಡೆವೆನು, ಎಂದು ಆ ಕುಮುದ್ವತಿ ಹೇಳಿದಳು.
  • (ಪದ್ಯ-೫೬)

ಪದ್ಯ:-:೫೭:

ಸಂಪಾದಿಸಿ

ಸಮ್ಮತಮಿದಹುದೆಂದರೆಲ್ಲರುಂ ಭೂವರಂ |
ಸುಮ್ಮನಿರೆ ಕಂಡನೀ ತೆರನಂ ದ್ವಿಜತ್ವಮಂ |
ನೆಮ್ಮಿದ ಮುಕುಂದನೆಲೆ ರಾಯ ನಿನ್ನರಸಿ ನುಡಿದುತ್ತರವನೊಪ್ಪಬಹುದು ||
ಸುಮ್ಮಾನದಿಂ ಜನೇಶ್ವರನ ದಕ್ಷಿಣಭಾಗ |
ಮಮ್ಮೆಲ್ವೆನೆಂದಾ ಒಕ್ಕಣಿಸಿತಲ್ಲದೆ ಸಿಂಹ |
ವೆಮ್ಮೊಡನೆ ವಾಮಾಂಗ ಮೆಂದಾಡಿತಿಲ್ಲೆನಲ್ ನೃಪನ ಸುತನಿಂತೆಂದನು ||57||

ಪದವಿಭಾಗ-ಅರ್ಥ:
ಸಮ್ಮತಂ ಇದು ಅಹುದೆಂದರು ಎಲ್ಲರುಂ ಭೂವರಂ ಸುಮ್ಮನಿರೆ ಕಂಡನು ಈ ತೆರನಂ ದ್ವಿಜತ್ವಮಂ ನೆಮ್ಮಿದ ಮುಕುಂದನು=[ನಿನ್ನ ಪತ್ನಿಯ ಮಾತು ಶಾಸ್ತ್ರ ಸಮ್ಮತವಾಗಿದೆ. ಇದು ಸರಿಯಾದುದು ಎಂದರು ಎಲ್ಲರೂ; ರಾಜನು ಸುಮ್ಮನಿರಲು, ವಿಪ್ರವೇಷದ ಮುಕುಂದನು ಈ ಬಗೆಯ ಉಪಾಯವನ್ನು ಕಂಡನು];; ಎಲೆ ರಾಯ ನಿನ್ನ ಅರಸಿ ನುಡಿದ ಉತ್ತರವನು ಒಪ್ಪಬಹುದು ಸುಮ್ಮಾನದಿಂ ಜನೇಶ್ವರನ ದಕ್ಷಿಣಭಾಗಮಂ ಮೆಲ್ವೆನೆಂದು (ಮೆಲ್ಲು- ತಿನ್ನು) ಆ ಒಕ್ಕಣಿಸಿತು ಅಲ್ಲದೆ ಸಿಂಹವು ಎಮ್ಮೊಡನೆ ವಾಮಾಂಗ ಮೆಂದು ಆಡಿತಿಲ್ಲ ಎನಲ್ ನೃಪನ ಸುತನು ಇಂತೆಂದನು=[ಆಗ ಎಲೆ ರಾಜನೇ ನಿನ್ನ ಪತ್ನಿ ಹೇಳಿದ ಉತ್ತರವನ್ನು ಸಂತೋಷವಾಗಿ ಒಪ್ಪಬಹುದು; ಆದರೆ ರಾಜನ ದಕ್ಷಿಣಭಾಗವನ್ನು/ಬಲಭಾಗವನ್ನು ಮೆಲ್ಲುವೆನು ಎಂದು ಅದು ಸ್ಪಷ್ಟವಾಗಿ ಹೇಳಿತು; ಅಲ್ಲದೆ ಸಿಂಹವು ನಮ್ಮೊಡನೆ ವಾಮಾಂಗ/ಎಡಭಾಗ ಎಂದು ಹೇಳಲಿಲ್ಲ, ಎನ್ನಲು, ರಾಜನ ಮಗನು ಹೀಗೆ ಹೇಳಿದನು.].
  • ತಾತ್ಪರ್ಯ:ನಿನ್ನ ಪತ್ನಿಯ ಮಾತು ಶಾಸ್ತ್ರ ಸಮ್ಮತವಾಗಿದೆ. ಇದು ಸರಿಯಾದುದು ಎಂದರು ಎಲ್ಲರೂ; ರಾಜನು ಸುಮ್ಮನಿರಲು, ವಿಪ್ರವೇಷದ ಮುಕುಂದನು ಈ ಬಗೆಯ ಉಪಾಯವನ್ನು ಕಂಡನು ಆಗ ಎಲೆ ರಾಜನೇ ನಿನ್ನ ಪತ್ನಿ ಹೇಳಿದ ಉತ್ತರವನ್ನು ಸಂತೋಷವಾಗಿ ಒಪ್ಪಬಹುದು; ಆದರೆ ರಾಜನ ದಕ್ಷಿಣಭಾಗವನ್ನು/ಬಲಭಾಗವನ್ನು ಮೆಲ್ಲುವೆನು ಎಂದು ಅದು ಸ್ಪಷ್ಟವಾಗಿ ಹೇಳಿತು; ಅಲ್ಲದೆ ಸಿಂಹವು ನಮ್ಮೊಡನೆ ವಾಮಾಂಗ/ಎಡಭಾಗ ಎಂದು ಹೇಳಲಿಲ್ಲ, ಎನ್ನಲು, ರಾಜನ ಮಗನು ಹೀಗೆ ಹೇಳಿದನು.
  • (ಪದ್ಯ-೫೭)

ಪದ್ಯ:-:೫೮:

ಸಂಪಾದಿಸಿ

ಕರುಣಿಸೆಲೆ ವಿಪ್ರ ನಿನ್ನಂ ಬೇಡಿಕೊಂಬೆ ನಾಂ |
ತರುಣಂ ಸುಪುಷ್ಟ ವಪು ತುಷ್ಟಿ ಮೃಗಪತಿಗಾಗ |
ದಿರದು ತಾತನ ಋಣತ್ರಯಕೆ ಹರಿವಹುದು ರಾಘವ ಭೀಷ್ಮರಂತೆ ಕೀರ್ತಿ ||
ಸ್ಥಿರವಹುದು ಪಿತನ ಭಾಷೆಗೆ ನಿಲಲ್ ಜನಕನವ |
ತರಿಪನಾತ್ಮಜನಾಗಿ ತಂದೆಮಕ್ಕಳಿವರೊಳ |
ಗೆರವಿಲ್ಲ ತನ್ನಂಗಮಂ ತೆಗೆದುಕೊಳ್ಳೆಂದು ತಾಮ್ರಧ್ವಜಂ ನುಡಿದನು ||58||

ಪದವಿಭಾಗ-ಅರ್ಥ:
ಕರುಣಿಸು ಎಲೆ ವಿಪ್ರ ನಿನ್ನಂ ಬೇಡಿಕೊಂಬೆ ನಾಂ ತರುಣಂ ಸುಪುಷ್ಟವಪು ತುಷ್ಟಿ ಮೃಗಪತಿಗೆ ಆಗದಿರದು ತಾತನ ಋಣತ್ರಯಕೆ ಹರಿವಹುದು ರಾಘವ ಭೀಷ್ಮರಂತೆ ಕೀರ್ತಿ ಸ್ಥಿರವಹುದು ಪಿತನ ಭಾಷೆಗೆ ನಿಲಲ್=[ಕರುಣಿಸು ಎಲೆ ವಿಪ್ರನೇ ನಿನ್ನನ್ನು ಬೇಡಿಕೊಳ್ಳುವೆನು, ನಾನು ತರುಣನು ಉತ್ತಮ ಪುಷ್ಟಿಯ ದೇಹದವನು, ನನ್ನನ್ನು ಕೊಟ್ಟರೆ, ಮೃಗಪತಿ ಸಿಂಹಕ್ಕೆ ಸಂತುಷ್ಟಿ ಆಗದೆ ಇರುವುದಿಲ್ಲ. ತಾತನ ಋಣತ್ರಯಕೆ, ದೇವ ಋಣ,ಋಷಿ ಋಣ, ಪಿತೃಋಣಗಳಿಂದ ಬಿಡುಗಡೆಯಾಗುವುದು. ರಾಘವ ಭೀಷ್ಮರಂತೆ ಪಿತನ ಭಾಷೆಗೆ ನಾನುಒಪ್ಪಸಿಕೊಂಡೆರೆ, ತಂದೆಯಭಾಷೆ ಉಳಿಸಿದ ಕೀರ್ತಿ ಸ್ಥಿರವಾಗಿರುದು];; ಜನಕನು ಅವತರಿಪನು ಆತ್ಮಜನಾಗಿ ತಂದೆಮಕ್ಕಳಿವರೊಳಗೆ ಎರವಿಲ್ಲ ತನ್ನಂಗಮಂ ತೆಗೆದುಕೊಳ್ಳೆಂದು ತಾಮ್ರಧ್ವಜಂ ನುಡಿದನು=[ ತಂದೆಯು ಮಗನಾಗಿ ಅವತರಿಸುವನು, ಆತ್ಮಜನಾಗಿ ತಂದೆ ಮತ್ತು ಮಕ್ಕಳು ಇವರೊಳಗೆ ಬೇಧವಿಲ್ಲ; ತನ್ನ ದೇಹವನ್ನು ತೆಗೆದುಕೊಳ್ಳೆಂದು ತಾಮ್ರಧ್ವಜನು ಹೇಳಿದನು].
  • ತಾತ್ಪರ್ಯ:ಕರುಣಿಸು ಎಲೆ ವಿಪ್ರನೇ ನಿನ್ನನ್ನು ಬೇಡಿಕೊಳ್ಳುವೆನು, ನಾನು ತರುಣನು ಉತ್ತಮ ಪುಷ್ಟಿಯ ದೇಹದವನು, ನನ್ನನ್ನು ಕೊಟ್ಟರೆ, ಮೃಗಪತಿ ಸಿಂಹಕ್ಕೆ ಸಂತುಷ್ಟಿ ಆಗದೆ ಇರುವುದಿಲ್ಲ. ತಾತನ ಋಣತ್ರಯಕೆ, ದೇವ ಋಣ,ಋಷಿ ಋಣ, ಪಿತೃಋಣಗಳಿಂದ ಬಿಡುಗಡೆಯಾಗುವುದು. ರಾಘವ ಭೀಷ್ಮರಂತೆ ಪಿತನ ಭಾಷೆಗೆ ನಾನುಒಪ್ಪಸಿಕೊಂಡೆರೆ, ತಂದೆಯಭಾಷೆ ಉಳಿಸಿದ ಕೀರ್ತಿ ಸ್ಥಿರವಾಗಿರುದು ತಂದೆಯು ಮಗನಾಗಿ ಅವತರಿಸುವನು, ಆತ್ಮಜನಾಗಿ ತಂದೆ ಮತ್ತು ಮಕ್ಕಳು ಇವರೊಳಗೆ ಬೇಧವಿಲ್ಲ; ತನ್ನ ದೇಹವನ್ನು ತೆಗೆದುಕೊಳ್ಳೆಂದು ತಾಮ್ರಧ್ವಜನು ಹೇಳಿದನು.
  • (ಪದ್ಯ-೫೮)

ಪದ್ಯ:-:೫೯:

ಸಂಪಾದಿಸಿ

ಭೂಪಾಲ ಕೇಳವನ ಮಾತಿಗೆ ಮಹೀಸುರಂ |
ಕಾಪಟ್ಯಮಿಲ್ಲೆಲೆ ಕುಮಾರ ನೀನೆಂದ ನುಡಿ |
ಪಾಫಿ ಕೇಸರಿ ತನ್ನೊಳವನಿಪನ ಸತಿಯೆಂದು ಪೇಳ್ದುದಿಲ್ಲ ||
ಆಪೊಡೆ ಮಯೂರಧ್ವಜನ ಧಕ್ಷಿಣಾಂಗಮಂ |
ತಾ ಪುತ್ರನಂ ಬಿಡುವೆನೆಂದೊಡಿಲ್ಲಿಗೆ ಬಂದೆ |
ನೀಪರಿಯೊಳಳುಕುವರೆ ಕುಡಬೇಡ ಪೋಪೆನೆನೆ ನರನಾಥನಿತೆಂದನು ||59||

ಪದವಿಭಾಗ-ಅರ್ಥ:
ಭೂಪಾಲ ಕೇಳವನ ಮಾತಿಗೆ ಮಹೀಸುರಂ ಕಾಪಟ್ಯಂ ಇಲ್ಲೆಲೆ ಕುಮಾರ ನೀನೆಂದ ನುಡಿ ಪಾಫಿ ಕೇಸರಿ ತನ್ನೊಳು ವನಿಪನ ಸತಿಯೆಂದು ಪೇಳ್ದುದಿಲ್ಲ=[ಜನಮೇಜಯ ಭೂಪಾಲನೆ ಕೇಳು, ತಾಮ್ರಧ್ವಜನ ಮಾತಿಗೆ ವಿಪ್ರನು, ಕಪಟವಿಲ್ಲ ಎಲೆ ಕುಮಾರ, ನೀನು ಹೇಳಿದ ಮಾತು ಸರಿ, ಆದರೆ ಪಾಫಿ ಕೇಸರಿ ತನ್ನ ಹತ್ತಿರ ರಾಜನ ಸತಿಯೆಂದು ಹೇಳಿಲ್ಲ, (ಮಗನೆಂದೂ ಹೇಳಿಲ್ಲ)];; ಆಪೊಡೆ ಮಯೂರಧ್ವಜನ ಧಕ್ಷಿಣಾಂಗಮಂ ತಾ ಪುತ್ರನಂ ಬಿಡುವೆನೆಂದೊಡೆ ಇಲ್ಲಿಗೆ ಬಂದೆನು ಈಪರಿಯೊಳು ಅಳುಕುವರೆ ಕುಡಬೇಡ ಪೋಪೆನು ಎನೆ ನರನಾಥನು ಇಂತೆಂದನು=[ತರುಲು ಸಾದ್ಯವಿದ್ದರೆ ಮಯೂರಧ್ವಜನ ಧಕ್ಷಿಣಾಂಗವನ್ನು/ ಬಲಭಾಗವನ್ನು ತಂದುಕೊಡು, ಪುತ್ರನನ್ನು ಬಿಡುವೆನು ಎಂದಾಗ, ಇಲ್ಲಿಗೆ ಬಂದೆನು. ಈಪರಿಯಲ್ಲಿ ಕೊಡಲು ಹಿಂದೇಟುಹಾಕುವುದಾದರೆ ಕೊಡಬೇಡ; ನಾನು ಹೋಗುವೆನು,ಎನ್ನಲು, ರಾಜನು ಹೀಗೆ ಹೇಳಿದನು].
  • ತಾತ್ಪರ್ಯ:ಜನಮೇಜಯ ಭೂಪಾಲನೆ ಕೇಳು, ತಾಮ್ರಧ್ವಜನ ಮಾತಿಗೆ ವಿಪ್ರನು, ಕಪಟವಿಲ್ಲ ಎಲೆ ಕುಮಾರ, ನೀನು ಹೇಳಿದ ಮಾತು ಸರಿ, ಆದರೆ ಪಾಫಿ ಕೇಸರಿ ತನ್ನ ಹತ್ತಿರ ರಾಜನ ಸತಿಯೆಂದು ಹೇಳಿಲ್ಲ, (ಮಗನೆಂದೂ ಹೇಳಿಲ್ಲ). ತರುಲು ಸಾದ್ಯವಿದ್ದರೆ ಮಯೂರಧ್ವಜನ ಧಕ್ಷಿಣಾಂಗವನ್ನು/ ಬಲಭಾಗವನ್ನು ತಂದುಕೊಡು, ಪುತ್ರನನ್ನು ಬಿಡುವೆನು ಎಂದಾಗ, ಇಲ್ಲಿಗೆ ಬಂದೆನು. ಈಪರಿಯಲ್ಲಿ ಕೊಡಲು ಹಿಂದೇಟುಹಾಕುವುದಾದರೆ ಕೊಡಬೇಡ; ನಾನು ಹೋಗುವೆನು,ಎನ್ನಲು, ರಾಜನು ಹೀಗೆ ಹೇಳಿದನು.
  • (ಪದ್ಯ-೫೯)

ಪದ್ಯ:-:೬೦:

ಸಂಪಾದಿಸಿ

ರಾಣಿಯಂಕುಡುವುದಿಲ್ಲಾತ್ಯಜನ ನೀವುದಿ |
ಲ್ಲೂಣಿಯಂ ತನ್ನ ಭಾಷೆಗೆ ಬಾರಂದತಬ್ಜ |
ಪಾಣಿ ಮೆಚ್ಚುವವೊಲರ್ಧ ದೇಹಮಂ ಕೊಯ್ದು ಕೊಟ್ಟಪೆನೀಗ ಸೈರಿಸೆನುತ ||
ಸಾಣೆವಿಡಿದಿರ್ದ ಕರಪತ್ರಮಂ ಕುಡಿಸಿದಂ |
ಪ್ರಾಣನಾಥೆಯ ಕೈಯೊಳೆನ್ನುತ್ತಮಾಂಗಮಂ |
ಕೇಣಮಿಲ್ಲದೆ ತುನುಜನಂ ಕೂಡಿಕೊಂಡು ನೀ ಸೀಳೆಂದು ನೇಮಿಸಿದನು ||60||

ಪದವಿಭಾಗ-ಅರ್ಥ:
ರಾಣಿಯಂ ಕುಡುವುದಿಲ್ಲ ಆತ್ಯಜನನು ಈವುದಿಲ್ಲ ಊಣಿಯಂ (ಭಂಗ,ಲೋಪ) ತನ್ನ ಭಾಷೆಗೆ ಬಾರಂದತೆ ಅಬ್ಜಪಾಣಿ ಮೆಚ್ಚುವವೊಲು ಅರ್ಧ ದೇಹಮಂ ಕೊಯ್ದು ಕೊಟ್ಟಪೆನು ಈಗ ಸೈರಿಸೆನುತ=[ರಾಣಿಯನ್ನು ಕೊಡುವುದಿಲ್ಲ; ಮಗನನ್ನು ಕೊಡುವುದಿಲ್ಲ; ತನ್ನ ಭಾಷೆಗೆ ಲೋಪ ಬಾರಂದತೆ ವಿಷ್ಣುವು ಮೆಚ್ಚುವಂತೆ, ಅರ್ಧ ದೇಹವನ್ನು ಈಗ ಕೊಯ್ದು ಕೊಡುವೆನು; ಸಹಿಸು,ಎನ್ನುತ್ತಾ,];; ಸಾಣೆವಿಡಿದಿರ್ದ ಕರಪತ್ರಮಂ ಕುಡಿಸಿದಂ ಪ್ರಾಣನಾಥೆಯ ಕೈಯೊಳು ಎನ್ನ ಉತ್ತಮಾಂಗಮಂ ಕೇಣಮಿಲ್ಲದೆ ತುನುಜನಂ ಕೂಡಿಕೊಂಡು ನೀ ಸೀಳೆಂದು ನೇಮಿಸಿದನು=[ ಸಾಣೆಹಿಡಿದಿದ್ದ ಕರಪತ್ರವನ್ನು ಪ್ರಾಣನಾಥೆ /ಪತ್ನಿಯ ಕೈಯಲ್ಲಿ ಕೊಡಿಸಿದನು. ತನ್ನ ತ್ತಮಾಂಗಮಂ/ತಲೆಯನ್ನು ಸಂಕೋಚವಿಲ್ಲದೆ ಮಗನನ್ನು ಕೂಡಿಕೊಂಡು ನೀನ ಸೀಳು ಎಂದು ಆಜ್ಞೆಮಾಡಿದನು].
  • ತಾತ್ಪರ್ಯ:ರಾಣಿಯನ್ನು ಕೊಡುವುದಿಲ್ಲ; ಮಗನನ್ನೂ ಕೊಡುವುದಿಲ್ಲ; ತನ್ನ ಭಾಷೆಗೆ ಲೋಪ ಬಾರಂದತೆ ವಿಷ್ಣುವು ಮೆಚ್ಚುವಂತೆ, ಅರ್ಧ ದೇಹವನ್ನು ಈಗ ಕೊಯ್ದು ಕೊಡುವೆನು; ಸಹಿಸು,ಎನ್ನುತ್ತಾ, ಸಾಣೆಹಿಡಿದಿದ್ದ ಕರಪತ್ರವನ್ನು/ಅರಿಗತ್ತಿಯನ್ನು ಪ್ರಾಣನಾಥೆ /ಪತ್ನಿಯ ಕೈಯಲ್ಲಿ ಕೊಡಿಸಿದನು. ತನ್ನ ತ್ತಮಾಂಗಮಂ/ತಲೆಯನ್ನು ಸಂಕೋಚವಿಲ್ಲದೆ ಮಗನನ್ನು ಕೂಡಿಕೊಂಡು ನೀನ ಸೀಳು ಎಂದು ಆಜ್ಞೆಮಾಡಿದನು.
  • (ಪದ್ಯ-೬೦)XXIX

ಪದ್ಯ:-:೬೧:

ಸಂಪಾದಿಸಿ

ಬಾಲಲೀಲೆಗಳಿಂದೆ ನಂದನಂ ತರುಣಿರತಿ !
ಕಾಲದೊಳ್ ನಖದಿಂದ ಸೀಳಲ್ಕೆನೋವುದೆ ವಿ |
ಶಾಲಾಕ್ಷಿ ತನಗಿದು ವಿನೋದ ಮಸಿಪತ್ರದಿಂ ಸೂನು ಸಹಿತೀಗ ನೀನು ||
ಆಲಸ್ಯಮಂ ಮಾಡದರಿವುದೀ ಮಸ್ತಕದ |
ಮೇಲಣಿಂದಿಳಿಯೆ ಮುಂತಾಗಿ ತನ್ನಂಗಮಂ |
ಪಾಲೆರಡು ಸಮಮಾಗೆ ಗರುಡ ಹನುಮಂತರ್ಗೆ ಚಕ್ರಿ ಪಣ್ವಂಚಿದಂತೆ||61||

ಪದವಿಭಾಗ-ಅರ್ಥ:
ಮಯೂರಧ್ವಜನು, ಬಾಲಲೀಲೆಗಳಿಂದೆ ನಂದನಂ ತರುಣಿರತಿಕಾಲದೊಳ್ ನಖದಿಂದ ಸೀಳಲ್ಕೆ ನೋವುದೆ ವಿಶಾಲಾಕ್ಷಿ ತನಗಿದು ವಿನೋದಂ=[ಮಯೂರಧ್ವಜನು ಪತ್ನಿಗೆ,'ಬಾಲಲೀಲೆಗಳಲ್ಲಿ ಮಗನು ಉಗುರಿನಿಂದ ಗೀರಿದರೆ, ತರುಣಿಯೊಡನೆ ರತಿಕಾಲದಲ್ಲಿ ಉಗುರಿನಿಂದ ಸೀಳಲು, ನೋಯುವುದೆ? ಇಲ್ಲ; ವಿಶಾಲಾಕ್ಷಿಯೇ! ತನಗೆ ಇದು ಅದೇ ರೀತಿ ವಿನೋದವು.];; ಅಸಿಪತ್ರದಿಂ ಸೂನು ಸಹಿತ ಈಗ ನೀನು ಆಲಸ್ಯಮಂ ಮಾಡದೆ ಅರಿವುದ ಈ ಮಸ್ತಕದ ಮೇಲಣಿಂದ ಇಳಿಯೆ ಮುಂತಾಗಿ ತನ್ನ ಅಂಗಮಂ ಪಾಲು ಎರಡು ಸಮಮಾಗೆ ಗರುಡ ಹನುಮಂತರ್ಗೆ ಚಕ್ರಿ ಪಣ್ವ ಅಂಚಿದಂತೆ=[ಅರಿಗತ್ತಿಯಿಂದ ಮಗನ ಸಹಿತ ಈಗ ನೀನು ತಡಮಾಡದೆ ಈ ತಲೆಯ ಮೇಲಿನಿಂದ ಭೂಮಿಯ ವರೆಗೂ, ತನ್ನ ದೇಹವನ್ನು ಎರಡು ಪಾಲು ಸಮವಾಗುವಂತೆ, ಗರುಡ ಹನುಮಂತರಿಗೆ ಕೃಷ್ಣನು/ ವಿಷ್ಣುವು ಹಣ್ಣನ್ನು ಹಂಚಿದಂತೆ ಅರಿವುದು/ ಕತ್ತರಿಸಬೇಕು,' ಎಂದನು].
  • ತಾತ್ಪರ್ಯ:ಮಯೂರಧ್ವಜನು ಪತ್ನಿಗೆ,'ಬಾಲಲೀಲೆಗಳಲ್ಲಿ ಮಗನು ಉಗುರಿನಿಂದ ಗೀರಿದರೆ, ತರುಣಿಯೊಡನೆ ರತಿಕಾಲದಲ್ಲಿ ಉಗುರಿನಿಂದ ಸೀಳಲು, ನೋಯುವುದೆ? ಇಲ್ಲ; ವಿಶಾಲಾಕ್ಷಿಯೇ! ತನಗೆ ಇದು ಅದೇ ರೀತಿ ವಿನೋದವು. ಅರಿಗತ್ತಿಯಿಂದ ಮಗನ ಸಹಿತ ಈಗ ನೀನು ತಡಮಾಡದೆ ಈ ತಲೆಯ ಮೇಲಿನಿಂದ ಭೂಮಿಯ ವರೆಗೂ, ತನ್ನ ದೇಹವನ್ನು ಎರಡು ಪಾಲು ಸಮವಾಗುವಂತೆ, ಗರುಡ ಹನುಮಂತರಿಗೆ ಕೃಷ್ಣನು/ ವಿಷ್ಣುವು ಹಣ್ಣನ್ನು ಹಂಚಿದಂತೆ ಅರಿವುದು/ ಕತ್ತರಿಸಬೇಕು,' ಎಂದನು.
  • (ಪದ್ಯ-೬೧)

ಪದ್ಯ:-:೬೨:

ಸಂಪಾದಿಸಿ

ಆ ಮಹೀಪಾಲನೀತೆರದೊಳ್ ಕುಮದ್ವತಿಗೆ |
ನೇಮಿಸೆ ಕುಮಾರನಂ ಕೂಂಡಿಕೊಂಡವಳತಿ |
ಪ್ರೇಮದಿಂ ಕರಪತ್ರಮಂ ಕೊಂಡು ಮುನ್ನ ದೈತ್ಯನನಿಂತು ಸೀಳ್ದನೆಂದು ||
ಆ ಮಹಾಸಭೆ ನಾರಸಿಂಹನಂ ನೆನೆವಂತೆ |
ರಾಮರಾಮೆಂದು ಜಪಿಸುತ ಕೊಯ್ದಳವನಿಪ |
ಶಿರೋಮಣಿಯ ಮಸ್ತಕವನೆರಡಾಗಿ ಸರಸದಿಂದೋರೆಪೋರೆಗಳೀಲ್ಲದೆ ||62||

ಪದವಿಭಾಗ-ಅರ್ಥ:
ಆ ಮಹೀಪಾಲನು ಈ ತೆರದೊಳ್ ಕುಮದ್ವತಿಗೆ ನೇಮಿಸೆ ಕುಮಾರನಂ ಕೂಂಡಿಕೊಂಡವಳು ಅತಿ ಪ್ರೇಮದಿಂ ಕರಪತ್ರಮಂ ಕೊಂಡು ಮುನ್ನ ದೈತ್ಯನನಿಂತು ಸೀಳ್ದನೆಂದು=[ಆ ರಾಜನು ಈ ರೀತಿಯಲ್ಲಿ ಪತ್ನಿ ಕುಮದ್ವತಿಗೆ ಆಜ್ಞಾಪಿಸಲು, ಮಗನ ಜೊತೆಸೇರಿ ಅತಿ ಪ್ರೇಮದಿಂದ ಕರಪತ್ರನ್ನು ತೆಗೆದುಕೊಂಡು ಹಿಂದೆ ಹಿರಣ್ಯಕಶಿಪು ದೈತ್ಯನನ್ನು ಸೀಳಿದನೆಂದು];; ಆ ಮಹಾಸಭೆ ನಾರಸಿಂಹನಂ ನೆನೆವಂತೆ ರಾಮರಾಮೆಂದು ಜಪಿಸುತ ಕೊಯ್ದಳು ಅವನಿಪ ಶಿರೋಮಣಿಯ ಮಸ್ತಕವನು ಎರಡಾಗಿ ಸರಸದಿಂದ ಓರೆಪೋರೆಗಳೀಲ್ಲದೆ=[ಆ ಮಹಾಸಭೆಯು ನರಸಿಂಹನನ್ನು ನೆನೆಯುತ್ತಾ ರಾಮರಾಮಯೆಂದು ಜಪಿಸುತ್ತ ರಾಜನ ಶಿರೋಮಣಿಯಾದ ತಲೆಯನ್ನು ಎರಡಾಗಿ ಸರಸದಿಂದ ಸರಿಸಮವಾಗಿ ಓರೆಪೋರೆಗಳಿಲ್ಲದೆ ಕೊಯ್ದಳು].
  • ತಾತ್ಪರ್ಯ:ಆ ರಾಜನು ಈ ರೀತಿಯಲ್ಲಿ ಪತ್ನಿ ಕುಮದ್ವತಿಗೆ ಆಜ್ಞಾಪಿಸಲು, ಮಗನ ಜೊತೆಸೇರಿ ಅತಿ ಪ್ರೇಮದಿಂದ ಕರಪತ್ರನ್ನು ತೆಗೆದುಕೊಂಡು ಹಿಂದೆ ಹಿರಣ್ಯಕಶಿಪು ದೈತ್ಯನನ್ನು ಸೀಳಿದನೆಂದು ಆ ಮಹಾಸಭೆಯು ನರಸಿಂಹನನ್ನು ನೆನೆಯುತ್ತಾ ರಾಮರಾಮಯೆಂದು ಜಪಿಸುತ್ತ ರಾಜನ ಶಿರೋಮಣಿಯಾದ ತಲೆಯನ್ನು ಎರಡಾಗಿ ಸರಸದಿಂದ ಸರಿಸಮವಾಗಿ ಓರೆಪೋರೆಗಳಿಲ್ಲದೆ ಕೊಯ್ದಳು].
  • (ಪದ್ಯ: ೬೨)

ಪದ್ಯ:-:೬೩:

ಸಂಪಾದಿಸಿ

ಸ್ತಂಭಧ್ವಯದ ನಡುವೆ ನಿಂದ ನೃಪನಂ ತನ್ನ |
ಸಂಭವನುಮರಸಿಯಂ ಪಿಡಿದೊಬ್ಬರೊಂದುಕಡೆ |
ಯಿಂ ಭಾಳಮಧ್ಯಮಂ ತೀಕ್ಷ್ಣ ಕರಪತ್ರದಿಂ ಘರಘರನೆ ಸೀಳುತಿರಲು ||
ಜಂಭರಿಪುನಂದನ ಮುರಾರಿಗಳ್ ಬೆರಗಾದ |
ರಂಬೋಧಿ ಘೋಷದಿಂದೆದ್ದು ಹಾಹಾಕಾರ |
ದಿಂ ಭಯಂಗೊಂಡೊರಲುತಿರ್ದುದಾಸ್ಥಾನಮೆಲೆ ಭೂಪ ಕೇಳ್ ಕೌತುಕವನನು ||63||

ಪದವಿಭಾಗ-ಅರ್ಥ:
ಸ್ತಂಭಧ್ವಯದ ನಡುವೆ ನಿಂದ ನೃಪನಂ ತನ್ನ ಸಂಭವನುಂ ಅರಸಿಯಂ ಪಿಡಿದು ಒಬ್ಬರೊಂದು ಕಡೆಯಿಂ ಭಾಳಮಧ್ಯಮಂ ತೀಕ್ಷ್ಣ ಕರಪತ್ರದಿಂ ಘರಘರನೆ ಸೀಳುತಿರಲು=[ಎರಡು ಕಂಬಗಳ ನಡುವೆ ನಿಂತಿದ್ದ ರಾಜನನ್ನು ತನ್ನ ಮಗನೂ ಪತ್ನಿಯೂ ಹಿಡಿದು ಒಬ್ಬಬ್ಬರೊಂದೊಂದು ಕಡೆಯಿಂದ, ಹಣೆಯ ನಡುವೆ ಹರಿತ ಕರಪತ್ರದಿಂದ/ ಗರಗಸದಿಂದ ಘರಘರನೆ ಸೀಳುತ್ತಿರಲು,];; ಜಂಭರಿಪುನಂದನ ಮುರಾರಿಗಳ್ ಬೆರಗಾದರು ಅಂಬೋಧಿ ಘೋಷದಿಂದ ಎದ್ದು ಹಾಹಾಕಾರದಿಂ ಭಯಂಗೊಂಡು ಒರಲುತಿರ್ದುದು ಆಸ್ಥಾನಮ್ ಎಲೆ ಭೂಪ ಕೇಳ್ ಕೌತುಕವನನು=[ಇಂದ್ರನಮಗ ಅರ್ಜುನ ಮತ್ತು ಕೃಷ್ನರು ಬೆರಗಾದರು! ಆಗ ಆಸ್ಥಾನದ ಜನರು, ಭಯಂಗೊಂಡು ಎದ್ದು ಸಮುದ್ರದ ಘೋಷದಿಂದ ಹಾಹಾಕಾರದಿಂದ ಗೋಳೀಡುತ್ತಿತ್ತು, ಎಲೆ ಭೂಪನೇ ಕೇಳು ಆಶ್ಚರ್ಯವನು., ಎಂದನು ಜೈಮಿನಿ.]
  • ತಾತ್ಪರ್ಯ:ಎರಡು ಕಂಬಗಳ ನಡುವೆ ನಿಂತಿದ್ದ ರಾಜನನ್ನು ತನ್ನ ಮಗನೂ ಪತ್ನಿಯೂ ಹಿಡಿದು ಒಬ್ಬಬ್ಬರೊಂದೊಂದು ಕಡೆಯಿಂದ, ಹಣೆಯ ನಡುವೆ ಹರಿತ ಕರಪತ್ರದಿಂದ/ ಗರಗಸದಿಂದ ಘರಘರನೆ ಸೀಳುತ್ತಿರಲು, ಇಂದ್ರನಮಗ ಅರ್ಜುನ ಮತ್ತು ಕೃಷ್ನರು ಬೆರಗಾದರು! ಆಗ ಆಸ್ಥಾನದ ಜನರು, ಭಯಂಗೊಂಡು ಎದ್ದು ಸಮುದ್ರದ ಘೋಷದಿಂದ ಹಾಹಾಕಾರದಿಂದ ಗೋಳೀಡುತ್ತಿತ್ತು, ಎಲೆ ಭೂಪನೇ ಕೇಳು ಆಶ್ಚರ್ಯವನು., ಎಂದನು ಜೈಮಿನಿ.
  • (ಪದ್ಯ: ೬೩)

ಪದ್ಯ:-:೬೪:

ಸಂಪಾದಿಸಿ

ಪೆಂಡತಿಯೊಳಾತ್ಮ ಜನೊಳರಸನೊಳ್ ಮಿಗೆ ನೋಡಿ |
ಕಂಡುದಿಲ್ಲೊಂದಿನಿಸು ಖಯಖೋಡಿಯಂ ಬಳಿಕ |
ಪುಂಡರೀಕಾಂಬಕಂ ನೃಪನ ವಾಮಾಕ್ಷಿಯೊಳ್ ಕಂಬಿನಿಗಳೊಸರುತಿರಲು ||
ಆಂಡಲೆಯೊಳಳುತಳುತ ಕುಡುವವನ ದಾನಮಂ |
ಕೊಂಡಪರೆ ಬುಧರಕಟ ಲೋಕದೊಳ್ ಬೇಡುವಂ |
ಭಂಡನೆನುತೊಡೆಮುರಿದು ತಿರುಗಿದಂ ತನಯನಂ ತಿನಲಿ ಹರಿ ಬನದೊಳೆನುತೆ ||64||

ಪದವಿಭಾಗ-ಅರ್ಥ:
ಪೆಂಡತಿಯೊಳು ಆತ್ಮಜನೊಳು ಅರಸನೊಳ್ ಮಿಗೆ ನೋಡಿ ಕಂಡುದು ಇಲ್ಲ ಒಂದು ಇನಿಸು ಖಯಖೋಡಿಯಂ ಬಳಿಕ ಪುಂಡರೀಕಾಂಬಕಂ ನೃಪನ ವಾಮಾಕ್ಷಿಯೊಳ್ ಕಂಬಿನಿಗಳು ಒಸರುತಿರಲು=[ಪೆಂಡತಿಯಲ್ಲಿಯಾಗಲಿ, ಮಗನಲ್ಲಿಯಾಗಲಿ, ಅರಸನಲ್ಲಾಗಲಿ ವಿಶೇಷವಾಗಿ ಒಂದು ಸ್ವಲ್ಪವಾದರೂ ಸಿಟ್ಟು ಸೆಡವು ನೋಡಲು ಕಂಡದ್ದು ಇಲ್ಲ! ಬಳಿಕ ಪುಂಡರೀಕಾಕ್ಷನು ರಾಜನ ಎಡಗಣ್ಣಿನಲ್ಲಿ ಕಂಬಿನಿಗಳು ಸುರಿಯುತ್ತಿದುದನ್ನು ನೋಡಿ,];; ಆಂಡಲೆಯೊಳು (ಅಂಡಲೆ: ಪೀಡನೆ, ಉಪದ್ರವ: ಸಿರಿಗನ್ನಡ ಅರ್ಥಕೋಶ-ಶಿವರಾಮ ಕಾರಂತ) ಅಳುತಳುತ ಕುಡುವವನ ದಾನಮಂ ಕೊಂಡಪರೆ ಬುಧರು ಅಕಟ ಲೋಕದೊಳ್ ಬೇಡುವಂ ಭಂಡನು ಎನುತ ಒಡೆಮುರಿದು ತಿರುಗಿದಂ ತನಯನಂ ತಿನಲಿ ಹರಿ ಬನದೊಳು ಎನುತೆ=[ನೋವಿನಿಂದ ಸಂಕಟಪಡುತ್ತಾ ಅಳುತ್ತಾ ಅಳುತ್ತಾ ಕೊಡುವವನ ದಾನವನ್ನು ಸ್ವೀಕರಿಸುವರೇ ವಿಪ್ರರು ಅಕಟ! ಇಲ್ಲ! ಇಲ್ಲ! ಲೋಕದಲ್ಲಿ ಬೇಡುವವನು ಭಂಡನು ಎಂದು, ಮಗನನ್ನು ಕಾಡಿನಲ್ಲಿ ಸಿಂಹ ತಿನ್ನಲಿ ಎನುತ್ತಾ ತಿರಸ್ಕರಿಸಿ ತಿರುಗಿ ಹೊರಟನು].
  • ತಾತ್ಪರ್ಯ:ಹಾಗೆ ದೇಹವನ್ನು ಸೀಳುವಾಗ, ಪೆಂಡತಿಯಲ್ಲಿಯಾಗಲಿ, ಮಗನಲ್ಲಿಯಾಗಲಿ, ಅರಸನಲ್ಲಾಗಲಿ ವಿಶೇಷವಾಗಿ ಒಂದು ಸ್ವಲ್ಪವಾದರೂ ಸಿಟ್ಟು ಸೆಡವು ನೋಡಲು ಕಂಡದ್ದು ಇಲ್ಲ! ಬಳಿಕ ಪುಂಡರೀಕಾಕ್ಷನು ರಾಜನ ಎಡಗಣ್ಣಿನಲ್ಲಿ ಕಂಬಿನಿಗಳು ಸುರಿಯುತ್ತಿದುದನ್ನು ನೋಡಿ, ನೋವಿನಿಂದ ಸಂಕಟಪಡುತ್ತಾ ಅಳುತ್ತಾ ಅಳುತ್ತಾ ಕೊಡುವವನ ದಾನವನ್ನು ಸ್ವೀಕರಿಸುವರೇ ವಿಪ್ರರು ಅಕಟ! ಇಲ್ಲ! ಇಲ್ಲ! ಲೋಕದಲ್ಲಿ ಬೇಡುವವನು ಭಂಡನು ಎಂದು, ಮಗನನ್ನು ಕಾಡಿನಲ್ಲಿ ಸಿಂಹ ತಿನ್ನಲಿ ಎನುತ್ತಾ ತಿರಸ್ಕರಿಸಿ ತಿರುಗಿ ಹೊರಟನು.
  • (ಪದ್ಯ: ೬೪)

ಪದ್ಯ:-:೬೫:

ಸಂಪಾದಿಸಿ

ಬೆರಗಾದಳಾ ಕುದುದ್ವತಿ ನುಡಿದಳರಸಂಗೆ |
ಬರಿದೆ ಕೊಯ್ಸಿದೆ ನಿನ್ನ ಮಸ್ತಕವ ನೆಡಗಣ್ಣೊ |
ಳೊರೆವ ಕಂಬನಿಗಳಂ ಕಂಡಾ ದ್ವಿಜೋತ್ತಮಂ ನೀನಳುತ ಕುಡುವೆಯೆಂದು ||
ಪೊರಮಟ್ಟು ಪೋದನೊಲ್ಲದೆ ವಿಫಲಮಾದುದ |
ಕ್ಕರೊಳಿತ್ತ ದಾನಮಿದಕೆಂತೆನೆಲ್ ಭೂವರಂ |
ಮರುಗಿ ಕರೆಸಾತನಂ ತಿಳಿಪುವೆಂ ಪೋಳ್ಗಳೆರಡಂ ಕೂಡಿ ಪಿಡಿಯೆಂದನು ||65||

ಪದವಿಭಾಗ-ಅರ್ಥ:
ಬೆರಗಾದಳು ಆ ಕುದುದ್ವತಿ ನುಡಿದಳು ಅರಸಂಗೆ ಬರಿದೆ ಕೊಯ್ಸಿದೆ ನಿನ್ನ ಮಸ್ತಕವನು ಎಡಗಣ್ಣೊಳು ಒರೆವ ಕಂಬನಿಗಳಂ ಕಂಡು ಆ ದ್ವಿಜೋತ್ತಮಂ ನೀನು ಅಳುತ ಕುಡುವೆಯೆಂದು

ಪೊರಮಟ್ಟು ಪೋದನು ಒಲ್ಲದೆ,=[ರಾಜನ ಪತ್ನಿ ಆ ಕುದುದ್ವತಿ ಬೆರಗಾದಳು, ಅರಸನಿಗೆ ಹೇಳಿದಳು; ನಿನ್ನ ತಲೆಯನ್ನು ಸುಮ್ಮನೆ ಕೊಯ್ಸಿದೆ; ನಿನ್ನ ಎಡಗಣ್ಣಲ್ಲಿ ಒಸರಿದ ಕಂಬನಿಗಳನ್ನು ಕಂಡು ಆ ವಿಪ್ರನು, ನೀನು ಅಳುತ್ತಾ ಕೊಡುವೆಯೆಂದು, ದೇಹಾರ್ಧವನ್ನು ಸ್ವೀಕರಿಸದೆ ಹೊರಟು ಹೋದನು.];; ವಿಫಲಮಾದುದು ಅಕ್ಕರೊಳು ಇತ್ತ ದಾನಂ ಇದಕೆ ಎಂತು ಎನೆಲ್ ಭೂವರಂ ಮರುಗಿ ಕರೆಸು ಆತನಂ ತಿಳಿಪುವೆಂ ಪೋಳ್ಗಳ ಎರಡಂ ಕೂಡಿ ಪಿಡಿಯೆಂದನು=[ಪ್ರೀತಿಯಿಂದ ಕೊಟ್ಟ ಇತ್ತ ದಾನವು ವಿಫಲವಾಯಿತು; ಇದಕ್ಕೆ ಪರಿಹಾರವೇನು ಎನ್ನಲು, ರಾಜನು ದುಃಖಿಸಿ, ಆತನನ್ನು ಕರೆಸು, ಅವನಿಗೆ ಕಾರಣ ತಿಳಿಸುವೆನು; ಪೋಳ್ಗಳ ಎರಡು ಹೋಳನ್ನೂ ಕೂಡಿಸಿ ಹಿಡಿದುಕೊ, ಎಂದನು].

  • ತಾತ್ಪರ್ಯ:ರಾಜನ ಪತ್ನಿ ಆ ಕುದುದ್ವತಿ ಬೆರಗಾದಳು, ಅರಸನಿಗೆ ಹೇಳಿದಳು; ನಿನ್ನ ತಲೆಯನ್ನು ಸುಮ್ಮನೆ ಕೊಯ್ಸಿದೆ; ನಿನ್ನ ಎಡಗಣ್ಣಲ್ಲಿ ಒಸರಿದ ಕಂಬನಿಗಳನ್ನು ಕಂಡು ಆ ವಿಪ್ರನು, ನೀನು ಅಳುತ್ತಾ ಕೊಡುವೆಯೆಂದು, ದೇಹಾರ್ಧವನ್ನು ಸ್ವೀಕರಿಸದೆ ಹೊರಟು ಹೋದನು. ಪ್ರೀತಿಯಿಂದ ಕೊಟ್ಟ ಇತ್ತ ದಾನವು ವಿಫಲವಾಯಿತು; ಇದಕ್ಕೆ ಪರಿಹಾರವೇನು ಎನ್ನಲು, ರಾಜನು ದುಃಖಿಸಿ, ಆತನನ್ನು ಕರೆಸು, ಅವನಿಗೆ ಕಾರಣ ತಿಳಿಸುವೆನು; ಪೋಳ್ಗಳ ಎರಡು ಹೋಳನ್ನೂ ಕೂಡಿಸಿ ಹಿಡಿದುಕೊ, ಎಂದನು.
  • (ಪದ್ಯ: ೬೫)

ಪದ್ಯ:-:೬೬:

ಸಂಪಾದಿಸಿ

ಬಳಿಕಾ ಕುಮುದ್ವತಿ ನರೇಂದ್ರಮಸ್ತಕದ ಪೋ|
ಳ್ಗಳನೊಂದುಗೂಡಿ ಪಿಡಿದಾಗನಿಜ ತನಯನಂ |
ಕಳುಹಲವನಾಪಾರ್ವನಂ ತಡೆದೊಡಂಬಡಿಸಿ ವಿನಿಯದಿಂ ಕರೆತರಲ್ಕೆ ||
ತಿಳಿಪಿದಂ ಭೂಪನೆಲೆ ವಿಪ್ರ ಕರಪತ್ರಹತಿ |
ಗಳುಕಿತಿಲ್ಲುಪಕಾರಕಾಯ್ತು ದಕ್ಷಿಣಭಾಗ |
ಮುಳಿದುದು ನಿರರ್ಥಕಂ ವಾಮಾಂಗಮೆಂದೊಸರೆತೆಡಗಣ್ಣ ಜಲಮೆಂದನು ||66||

ಪದವಿಭಾಗ-ಅರ್ಥ:
ಬಳಿಕ ಆ ಕುಮುದ್ವತಿ ನರೇಂದ್ರಮಸ್ತಕದ ಪೋಳ್ಗಳನು ಒಂದುಗೂಡಿ ಪಿಡಿದು ಆಗ ನಿಜ ತನಯನಂ ಕಳುಹಲು ಅವನು ಆ ಪಾರ್ವನಂ ತಡೆದು ಒಡಂಬಡಿಸಿ ವಿನಿಯದಿಂ ಕರೆತರಲ್ಕೆ=[ಬಳಿಕ ಆ ಕುಮುದ್ವತಿ ರಾಜನ ತಲೆಯ ಹೋಳುಗಳನ್ನುನ ಒಂದುಗೂಡಿಸಿ ಹಿಡಿದು, ಆಗ ತನ್ನ ಮಗನನ್ನು ಕಳುಹಿಸಲು, ಅವನು ಆ ವಿಪ್ರನನ್ನು ತಡೆದು ಒಪ್ಪಿಸಿ ವಿನಿಯದಿಂದ ಕರೆತರಲು,];; ತಿಳಿಪಿದಂ ಭೂಪನು ಎಲೆ ವಿಪ್ರ ಕರಪತ್ರಹತಿಗೆ ಅಳುಕಿತಿಲ್ಲ ಉಪಕಾರಕಾಯ್ತು ದಕ್ಷಿಣಭಾಗಂ ಉಳಿದುದು ನಿರರ್ಥಕಂ ವಾಮಾಂಗಂ ಎಂದು ಒಸರಿತು ಎಡಗಣ್ಣ ಜಲಂ ಎಂದನು=[ತಿಳಿಪಿದಂ ರಾಜನು. ಎಲೆ ವಿಪ್ರ, ಕರಪತ್ರದ ಪಟ್ಟಿಗೆ ತಾನು ದುಃಖಿಸಲಿಲ್ಲ; ದೇಹದ ಬಲ ಭಾಗವು ಉಪಕಾರಕ್ಕೆ ಉಪಯೋಗವಾಯಿತು, ಆದರೆ ಎಡಭಾಗವು ನಿರರ್ಥಕವಾಗಿ ಉಳಿಯಿತಲ್ಲಾ ಎಂದು ಎಡಗಣ್ಣಲ್ಲಿ ಜಲವು ಒಸರಿತು ಎಂದನು].
  • ತಾತ್ಪರ್ಯ:ಬಳಿಕ ಆ ಕುಮುದ್ವತಿ ರಾಜನ ತಲೆಯ ಹೋಳುಗಳನ್ನುನ ಒಂದುಗೂಡಿಸಿ ಹಿಡಿದು, ಆಗ ತನ್ನ ಮಗನನ್ನು ಕಳುಹಿಸಲು, ಅವನು ಆ ವಿಪ್ರನನ್ನು ತಡೆದು ಒಪ್ಪಿಸಿ ವಿನಿಯದಿಂದ ಕರೆತರಲು, ತಿಳಿಪಿದಂ ರಾಜನು. ಎಲೆ ವಿಪ್ರ, ಕರಪತ್ರದ ಪಟ್ಟಿಗೆ ತಾನು ದುಃಖಿಸಲಿಲ್ಲ; ದೇಹದ ಬಲ ಭಾಗವು ಉಪಕಾರಕ್ಕೆ ಉಪಯೋಗವಾಯಿತು, ಆದರೆ ಎಡಭಾಗವು ನಿರರ್ಥಕವಾಗಿ ಉಳಿಯಿತಲ್ಲಾ ಎಂದು ಎಡಗಣ್ಣಲ್ಲಿ ಜಲವು ಒಸರಿತು ಎಂದನು.
  • (ಪದ್ಯ: ೬೬)

ಪದ್ಯ:-:೬೭:

ಸಂಪಾದಿಸಿ

ಮೆಚ್ಚಿದಂ ನೃಪನೆಂದ ಮಾತಿಗೆ ಮುರಧ್ವಂಸಿ |
ಹೆಚ್ಚಿರ್ದ ರಾಯನ ಕಳೀಬರದ ಪೋಳ್ಗಳಂ |
ಬೆಚ್ಚು ಕಾರುಣ್ಯದಿಮ್ ಮೈದಡವಿ ತಕ್ಕೈಸಿ ನಿನ್ನಂ ಪರೀಕ್ಷಿಸಿದೆನು ||
ನಿಚ್ಚಟದ ಭಕ್ತಿಯಂ ಕಂಡೆನಿವನರ್ಜುನಂ |
ಮುಚ್ಚುಮರೆಯೇಕಿನ್ನು ತಾನೀಗ ಕೃಷ್ಣನೆಂ |
ದೆಚ್ಚರಿಸಿ ನಿಗಮದರಿಕೆಯ ತನ್ನ ಸಾಕಾರ ಮೂರ್ತಿಯಂ ತೋರಿಸಿದನು ||67||

ಪದವಿಭಾಗ-ಅರ್ಥ:
ಮೆಚ್ಚಿದಂ ನೃಪನೆಂದ ಮಾತಿಗೆ ಮುರಧ್ವಂಸಿ ಹೆಚ್ಚಿರ್ದ ರಾಯನ ಕಳೀಬರದ ಪೋಳ್ಗಳಂ (ಬ-ಆದೇಶ) ಹೆಚ್ಚು ಕಾರುಣ್ಯದಿಂ ಮೈದಡವಿ ತಕ್ಕೈಸಿ ನಿನ್ನಂ ಪರೀಕ್ಷಿಸಿದೆನು=[ ನೃಪನು ಹೇಳಿದ ಮಾತಿಗೆ ಮುರಧ್ವಂಸಿ ಮೆಚ್ಚಿದನು; ಹೆಚ್ಚಿಭಾಗ ಮಾಡಿದ್ದ, ರಾಜನ ದೇಹದ ಹೋಳುಗಳನ್ನು ಬಹಳ ಕರುಣೆಯಿಂದ ರಾಜನ ಮೈಯನ್ನು ಸವರಿ ಉಪಚರಿಸಿ, ನಿನ್ನನ್ನು ಪರೀಕ್ಷಿಸಿದೆನು, ]; ನಿಚ್ಚಟದ ಭಕ್ತಿಯಂ ಕಂಡೆನು ಅವನು ಅರ್ಜುನಂ ಮುಚ್ಚುಮರೆಯೇಕೆ ಇನ್ನು ತಾನೀಗ ಕೃಷ್ಣನು ಎಂದು ಎಚ್ಚರಿಸಿ ನಿಗಮದ ಅರಿಕೆಯ ತನ್ನ ಸಾಕಾರ ಮೂರ್ತಿಯಂ ತೋರಿಸಿದನು=[ನಿಶ್ಚಲವಾದ ಭಕ್ತಿಯನ್ನು ಕಂಡೆನು; ಅವನು ಅರ್ಜುನನು; ಮುಚ್ಚುಮರೆಯೇಕೆ? ಇನ್ನು ತಾನು ಕೃಷ್ಣನು, ಎಂದು ತಿಳಿಸಿ, ವೇದಗಳ ಜ್ಞಾನದಲ್ಲಿ ಕಾಣುವ ತನ್ನ ಸಾಕಾರ ಸ್ವರೂಪವನ್ನು ತೋರಿಸಿದನು].
  • ತಾತ್ಪರ್ಯ:ನೃಪನು ಹೇಳಿದ ಮಾತಿಗೆ ಮುರಧ್ವಂಸಿ/ಕೃಷ್ಣನು ಮೆಚ್ಚಿದನು; ಹೆಚ್ಚಿಭಾಗ ಮಾಡಿದ್ದ, ರಾಜನ ದೇಹದ ಹೋಳುಗಳನ್ನು ಬಹಳ ಕರುಣೆಯಿಂದ ರಾಜನ ಮೈಯನ್ನು ಸವರಿ ಉಪಚರಿಸಿ, ನಿನ್ನನ್ನು ಪರೀಕ್ಷಿಸಿದೆನು, ನಿಶ್ಚಲವಾದ ಭಕ್ತಿಯನ್ನು ಕಂಡೆನು; ಅವನು ಅರ್ಜುನನು; ಮುಚ್ಚುಮರೆಯೇಕೆ? ಇನ್ನು ತಾನು ಕೃಷ್ಣನು, ಎಂದು ತಿಳಿಸಿ, ವೇದಗಳ ಜ್ಞಾನದಲ್ಲಿ ಕಾಣುವ ತನ್ನ ಸಾಕಾರ ಸ್ವರೂಪವನ್ನು ತೋರಿಸಿದನು].
  • (ಪದ್ಯ: ೬೭)

ಪದ್ಯ:-:೬೮:

ಸಂಪಾದಿಸಿ

ವರ ಸುಪ್ರಸನ್ನ ವದನದ ಕಮಲ ನೇತ್ರದ ಮ |
ಕರ ಕುಂಡಲದ ಲಲಿತ ನಾಸಿಕದ ಪಣೆಯ ಕ |
ತ್ತುರಿಯ ತಿಲಕದ ಮುರಿದ ಪುರ್ಬುಗಳ ಸುಳಿಗುರುಳ ಮಣಿಮಕುಟದೆಳದೊಳಸಿಯ (ತುಳಸಿ)||
ಕೊರಲ ವನಮಾಲೆಗಳ ಕೌಸ್ತುಭ ಶ್ರೀವತ್ಸ |
ದುರದ ಚಂದನದ ನಳಿತೋಳ್ಗಳ ಘನಾಂಗಸೌಂ |
ದರಿಯದವಯವದ ಸರ್ವಾಭರಣ ಭೂಷಿತದ ಹರಿ ನೃಪನ ಮುಂದೆಸೆದನು ||68|

ಪದವಿಭಾಗ-ಅರ್ಥ:
ವರ ಸುಪ್ರಸನ್ನ ವದನದ ಕಮಲನೇತ್ರದ ಮಕರಕುಂಡಲದ ಲಲಿತ ನಾಸಿಕದ ಪಣೆಯ ಕತ್ತುರಿಯ ತಿಲಕದ ಮುರಿದ ಪುರ್ಬುಗಳ ಸುಳಿಗುರುಳ ಮಣಿಮಕುಟದೆಳದೊಳಸಿಯ (ತುಳಸಿಕೊರಲ ವನಮಾಲೆಗಳ=[ಶ್ರೇಷ್ಠ ಸುಪ್ರಸನ್ನ ಮುಖದ, ಕಮಲದಳದೋತೆ ವಿಶಾಲ ಕಣ್ಣುಗಳ, ಕಿವಿಯಲ್ಲಿ ಮಕರಕುಂಡಲ ಧರಿಸಿದ, ತೆಳುವಾದ ಮೂಗುಳ್ಳ, ಪಣೆಯಲ್ಲಿ ಕತ್ತುರಿಯ ತಿಲಕ ಧರಿಸಿದ, ಬಾಗಿದ ಹುಬ್ಬುಗಳ, ಸುರುಳಿಯ ಮುಂಗುರುಳ, ಮಣಿಮಕುಟ ಧರಿಸಿದ ಎಳೆತುಳಸಿಯ ಕೊರಳ ವನಮಾಲೆಗಳ,];; ಕೌಸ್ತುಭ ಶ್ರೀವತ್ಸದುರದ ಚಂದನದ ನಳಿತೋಳ್ಗಳ ಘನಾಂಗಸೌಂದರಿಯದವಯವದ ಸರ್ವಾಭರಣ ಭೂಷಿತದ ಹರಿ ನೃಪನ ಮುಂದೆಸೆದನು=[ಹೊಟ್ಟೆಯ ಮೇಲೆ ಕೌಸ್ತುಭಮಣಿಯನ್ನೂ ಶ್ರೀವತ್ಸದ ಗುರುತನ್ನೂ ಹೊಂದಿದ, ಚಂದನ ಬಳಿದ ನಳಿತೋಳುಗಳ, ಘನವಾದ ಅಂಗಸೌಂದರ್ಯವುಳ್ಳ ಅವಯವದ ಸರ್ವಾಭರಣ ಭೂಷಿತನಾದ ಹರಿ/ವಿಷ್ಣು ನೃಪ ಮಯೂರಧ್ಜನ ಮುಂದೆ ತೋರಿಕೊಂಡನು].
  • ತಾತ್ಪರ್ಯ:ಶ್ರೇಷ್ಠ ಸುಪ್ರಸನ್ನ ಮುಖದ, ಕಮಲದಳದೋತೆ ವಿಶಾಲ ಕಣ್ಣುಗಳ, ಕಿವಿಯಲ್ಲಿ ಮಕರಕುಂಡಲ ಧರಿಸಿದ, ತೆಳುವಾದ ಮೂಗುಳ್ಳ, ಪಣೆಯಲ್ಲಿ ಕತ್ತುರಿಯ ತಿಲಕ ಧರಿಸಿದ, ಬಾಗಿದ ಹುಬ್ಬುಗಳ, ಸುರುಳಿಯ ಮುಂಗುರುಳ, ಮಣಿಮಕುಟ ಧರಿಸಿದ ಎಳೆತುಳಸಿಯ ಕೊರಳ ವನಮಾಲೆಗಳ,ಹೊಟ್ಟೆಯ ಮೇಲೆ ಕೌಸ್ತುಭಮಣಿಯ ಹಾರವನ್ನೂ, ಶ್ರೀವತ್ಸದ ಗುರುತನ್ನೂ ಹೊಂದಿದ, ಚಂದನ ಬಳಿದ ನಳಿತೋಳುಗಳ, ಘನವಾದ ಅಂಗಸೌಂದರ್ಯವುಳ್ಳ ಅವಯವದ ಸರ್ವಾಭರಣ ಭೂಷಿತನಾದ ಹರಿ/ವಿಷ್ಣು ನೃಪ ಮಯೂರಧ್ಜಜನ ಮುಂದೆ ಪ್ರತ್ಯಕ್ಷನಾದನು.
  • (ಪದ್ಯ: ೬೮)

ಪದ್ಯ:-:೬೯:

ಸಂಪಾದಿಸಿ

ಹೇಮಾಂಬರದ ಲಿಲಿತ ಕಾಂತಿ ಹೊಳೆಹೊಳೆವ ಸೌ |
ದಾಮಿನಿವೊಲಿರೆ ಪೊರೆದ ಕರುಣರಸ ಮೊಸರ್ವ ಧಾ |
ರಾಮಯದ ಮಳೆವೊಳಿರೆ ನುಡಿದ ಗಂಭೀರವಾಕ್ಯಂ ಕೂಡೆ ಮೊಳಗುವೊಲಿರೆ ||
ಕೋಮಲ ಶ್ಯಾಮ ಲಾವಣ್ಯತನು ಮುಂಗಾರ |
ಜೀಮೂತದೊಡ್ಡಿನವೊಲಿರೆ ಪಿರಿದು ನಲಿಯದಿಹ |
ನೇ ಮಯೂರಧ್ವಜಂ ಪೇಳೆನಲ್ ಕೃಷ್ಣನಂ ಕಂಡು ಪುಳಕಿತನಾದನು ||69||

ಪದವಿಭಾಗ-ಅರ್ಥ:
ಹೇಮಾಂಬರದ (ಹೇಮ-ಚಿನ್ನ, ಚಿನ್ನದ ಬಂಣ್ಣದ) ಲಿಲಿತ ಕಾಂತಿ ಹೊಳೆಹೊಳೆವ ಸೌದಾಮಿನಿವೊಲು ಇರೆ ಪೊರೆದ ಕರುಣರಸ ಮೊಸರ್ವ ಧಾರಾಮಯದ ಮಳೆವೊಳು ಇರೆ ನುಡಿದ ಗಂಭೀರವಾಕ್ಯಂ ಕೂಡೆ ಮೊಳಗುವೊಲಿರೆ=[ಪೀತಾಂಬರವನ್ನು ಉಟ್ಟಿರುವ, ಲಿಲಿತ ಕಾಂತಿಯ ಹೊಳೆಹೊಳೆವಮಿಂಚಿನಂತೆ ಇರುವ, ಕಾಪಾಡಿದ ಕರುಣರಸವು ಹೊಮ್ಮುತ್ತಿರುವ, ಕರುಣರಸದ ಧಾರೆಯ ಮಳೆಯಂತೆ ಇರಲು, ಹರಿಯು ಹೇಳಿದ ಗಂಭೀರವಾಕ್ಯಗಳು ಇದರಕೂಡೆ ಮೊಳಗುವಂತೆ ಇತ್ತು. ]; ಕೋಮಲ ಶ್ಯಾಮ ಲಾವಣ್ಯತನು ಮುಂಗಾರ ಜೀಮೂತದೊಡ್ಡಿನವೊಲು ಇರೆ ಪಿರಿದು ನಲಿಯದಿಹನೇ ಮಯೂರಧ್ವಜಂ ಪೇಳೆನಲ್ ಕೃಷ್ಣನಂ ಕಂಡು ಪುಳಕಿತನಾದನು=[ಕೋಮಲ ಶ್ಯಾಮ ಲಾವಣ್ಯವಾದ ದೇಹದ, ಮುಂಗಾರುಸಮಯದ ಮೋಡಗಳ ಸಮೂಹದಂತೆ ಹರಿ ರಾಜನ ಎದುರು ಇರಲು, ಮಯೂರಧ್ವಜನು ಹಿರಿದಾಗಿ ಹಿಗ್ಗದೆ ಇರುವನೇ! ಹೇಳು ಎನ್ನುವಂತೆ ತನ್ನ ಎದುರಿನಲ್ಲಿ ಕೃಷ್ಣನನ್ನು ಕಂಡು ರಾಜನು ರೋಮಾಂಚನಗೊಂಡನು].
  • ತಾತ್ಪರ್ಯ:ಪೀತಾಂಬರವನ್ನು ಉಟ್ಟಿರುವ, ಲಿಲಿತ ಕಾಂತಿಯ ಹೊಳೆವಮಿಂಚಿನಂತೆ ಇರುವ, ಕಾಪಾಡಿದ ಕರುಣರಸವು ಹೊಮ್ಮುತ್ತಿರುವ, ಕರುಣರಸದ ಧಾರೆಯ ಮಳೆಯಂತೆ ಇರಲು, ಹರಿಯು ಹೇಳಿದ ಗಂಭೀರವಾಕ್ಯಗಳು ಇದರಕೂಡೆ ಮೊಳಗುವಂತೆ ಇತ್ತು. ಕೋಮಲ ಶ್ಯಾಮ ಲಾವಣ್ಯವಾದ ಮುಂಗಾರುಸಮಯದ ಮೋಡಗಳ ಸಮೂಹದಂತಿರುವ ದೇಹದ, ಹರಿ ರಾಜನ ಎದುರು ಇರಲು, ಮಯೂರಧ್ವಜನು ಹಿರಿದಾಗಿ ಹಿಗ್ಗದೆ ಇರುವನೇ! ಹೇಳು ಎನ್ನುವಂತೆ ತನ್ನ ಎದುರಿನಲ್ಲಿ ಕೃಷ್ಣನನ್ನು ಕಂಡು ರಾಜನು ರೋಮಾಂಚನಗೊಂಡನು].
  • (ಪದ್ಯ: ೬೯)

ಪದ್ಯ:-:೭೦:

ಸಂಪಾದಿಸಿ

ಜಯಜಯ ಜಗನ್ನಾಥ ವರ ಸುಪರ್ಣ ವರೂಥ |
ಜಯಜಯ ರಮಾಕಾಂತ ಶಮಿತ ದುರಿತಧ್ವಾಂತ |
ಜಯಜಯ ಸುರಾಧೀಶ ನಿಗಮನಿರ್ಮಲಕೋಶ ಕೋಟಿಸೂರ್ಯಪ್ರಕಾಶ ||
ಜಯ ಜಯ ಕ್ರತುಪಾಲತರುಣ ತುಲಸೀಮಾಲ|
ಜಯಜಯ ಕ್ಷ್ಮಾಪೇಂದ್ರ ಸಕಲ ಸಾಂದ್ರ |
ಜಯತುಜಯ ಯದುರಾಜ ಭಕ್ತಸುಮನೋಭೂಜ ಜಯತುಜಯ ಯೆನುತಿರ್ದನು ||70||

ಪದವಿಭಾಗ-ಅರ್ಥ:
ಜಯಜಯ ಜಗನ್ನಾಥ ವರ ಸುಪರ್ಣ ವರೂಥ ಜಯಜಯ ರಮಾಕಾಂತ ಶಮಿತ ದುರಿತಧ್ವಾಂತ ಜಯಜಯ ಸುರಾಧೀಶ ನಿಗಮನಿರ್ಮಲಕೋಶ ಕೋಟಿಸೂರ್ಯಪ್ರಕಾಶ=[ಜಯಜಯ ಜಗನ್ನಾಥ ಶ್ರೇಷ್ಠ ಗರುಡ ರಥದವನು, ಜಯಜಯ ಲಕ್ಷ್ಮೀಕಾಂತ, ದುರಿತದ ಕತ್ತಲೆಯನ್ನು ಶಮಿತ/ಶಾಂತಗೊಳಿಸಿದವನೇ! ಜಯಜಯ ಸುರರಿಗೆ ಅಧೀಶನೇ, ನಿರ್ಮಲವಾದ ನಿಗಮದ ಕೋಶನೇ, ಕೋಟಿಸೂರ್ಯ ಪ್ರಕಾಶೇ ];; ಜಯ ಜಯ ಕ್ರತು (ಕ್ರತು-ಯಜ್ಞ) ಪಾಲತರುಣ ತುಲಸೀಮಾಲ| ಜಯಜಯ ಕ್ಷ್ಮಾಪೇಂದ್ರ (ಕ್ಷ್ಮಾಪ -ರಾಜ ಇಂದ್ರ-ಒಡೆಯ)ಸಕಲ ಸಾಂದ್ರ ಜಯತುಜಯ ಯದುರಾಜ ಭಕ್ತಸುಮನೋಭೂಜ ಜಯತುಜಯ ಯೆನುತಿರ್ದನು=[ಜಯ ಜಯ ಕ್ರತುಪಾಲತರುಣ/ ಯಜ್ಞ ರಕ್ಷಕನೇ! ತುಲಸೀಮಾಲೆಯಳ್ಳವನೇ,| ಜಯಜಯ ರಾಜರಿಗೆ ರಾಜನೇ, ಸಕಲ ಸಾಂದ್ರ ಜಯತುಜಯ ಯದುರಾಜ ಭಕ್ತನಿಗೆ ಒಳ್ಳೆಯಮಸ್ಸನು ಕೊಡುವವನೇ, ಜಯತುಜಯ ಯೆನ್ನುತ್ತಿದ್ದನು ಮಯೂರಧ್ವಜ.].
  • ತಾತ್ಪರ್ಯ:
  • (ಪದ್ಯ: ೭೦)

ಪದ್ಯ:-:೭೧:

ಸಂಪಾದಿಸಿ

ನೋಡಿದಂ ಕಣ್ತಣೆಯೆ ಬಳಿಕಿಳೆಗೆ ತನುವ ನೀ |
ಡಾಡಿ ದಂಡಪ್ರಣಾಮಂಗೈದು ಭೂವರಂ |
ಮಾಡಿದಂ ನಿಗಮಾರ್ಥದನುಪಮ ಸ್ತುತಿಗಳಂ ಮುರಹರನ ಮುಂದೆ ನಿಂದು ||
ಕೂಡೆ ತಾಮ್ರಧ್ವಜ ಕುಮುದ್ವತಿಗಳೆರಗಿದರ್ |
ಮೂಡಿದಾನಂದದಿಂ ತಮತಮಗೆ ಕೈಮುಗಿದು |
ಬೇಡಿಕೊಳುತಿರ್ದುದು ಮಹಾಸಭೆ ಮುಕುಂದನಂ ಜಯಜಯ ನಿನಾದದಿಂದೆ ||71||

ಪದವಿಭಾಗ-ಅರ್ಥ:
ನೋಡಿದಂ ಕಣ್ತಣೆಯೆ ಬಳಿಕಿಳೆಗೆ ತನುವ ನೀಡಾಡಿ ದಂಡಪ್ರಣಾಮಂ ಗೈದು ಭೂವರಂ ಮಾಡಿದಂ ನಿಗಮಾರ್ಥದ ಅನುಪಮ ಸ್ತುತಿಗಳಂ ಮುರಹರನ ಮುಂದೆ ನಿಂದು=[ಮಯೂರಧ್ವಜನು ಕಣ್ಣು ತಣಿಯುವಷ್ಟು ನೋಡಿದನು. ಬಳಿಕ ಆ ರಾಜನು ನೆಲದಮೇಲೆ ತನ್ನ ಮೈಯ್ಯನ್ನು ಚಾಚಿ ಈಡಾಡಿ ಉದ್ದಕ್ಕೆ ಅಡ್ಡಬಿದ್ದು ನಮಿಸಿದನು. ನಂತರ ಮುರಹರನ ಮುಂದೆ ನಿಂತು ವೇದ ಮಂತ್ರಗಳ ಅನುಪಮ ಸ್ತುತಿಗಳನ್ನು ಮಾಡಿದನು. ];; ಕೂಡೆ ತಾಮ್ರಧ್ವಜ ಕುಮುದ್ವತಿಗಳು ಎರಗಿದರ್ ಮೂಡಿದ ಆನಂದದಿಂ ತಮತಮಗೆ ಕೈಮುಗಿದು ಬೇಡಿಕೊಳುತಿರ್ದುದು ಮಹಾಸಭೆ ಮುಕುಂದನಂ ಜಯಜಯ ನಿನಾದದಿಂದೆ=[ಅವನ ಜೊತೆ ಕೂಡಲೆ, ತಾಮ್ರಧ್ವಜ ಕುಮುದ್ವತಿಗಳು ನಮಸ್ಕಾರ ಮಾಡಿದರು. ತಾವು ತಾವೇ ತಮ್ಮಲ್ಲಿ ಉಂಟಾದ ಆನಂದದಿಂದ ಕೈಮುಗಿದು ನಿಂತರು. ಮಹಾಸಭೆಯ ಜನರು ಮುಕುಂದನನ್ನು ಜಯಜಯ ಘೋಷದಿಂದ ಕೂಗಿ, ತಮ್ಮ ತಮ್ಮಅಪೇಕ್ಷೆಯನ್ನು ಬೇಡಿಕೊಳ್ಳುತ್ತಿದ್ದರು.]
  • ತಾತ್ಪರ್ಯ:ಮಯೂರಧ್ವಜನು ಕಣ್ಣು ತಣಿಯುವಷ್ಟು ನೋಡಿದನು. ಬಳಿಕ ಆ ರಾಜನು ನೆಲದಮೇಲೆ ತನ್ನ ಮೈಯ್ಯನ್ನು ಚಾಚಿ ಈಡಾಡಿ ಉದ್ದಕ್ಕೆ ಅಡ್ಡಬಿದ್ದು ನಮಿಸಿದನು. ನಂತರ ಮುರಹರನ ಮುಂದೆ ನಿಂತು ವೇದ ಮಂತ್ರಗಳ ಅನುಪಮ ಸ್ತುತಿಗಳನ್ನು ಮಾಡಿದನು. ಅವನ ಜೊತೆ ಕೂಡಲೆ, ತಾಮ್ರಧ್ವಜ ಕುಮುದ್ವತಿಗಳು ನಮಸ್ಕಾರ ಮಾಡಿದರು. ತಾವು ತಾವೇ ತಮ್ಮಲ್ಲಿ ಉಂಟಾದ ಆನಂದದಿಂದ ಕೈಮುಗಿದು ನಿಂತರು. ಮಹಾಸಭೆಯ ಜನರು ಮುಕುಂದನನ್ನು ಜಯಜಯ ಘೋಷದಿಂದ ಕೂಗಿ, ತಮ್ಮ ತಮ್ಮ ಅಪೇಕ್ಷೆಯನ್ನು ಬೇಡಿಕೊಳ್ಳುತ್ತಿದ್ದರು.
  • (ಪದ್ಯ: ೭೧)

ಪದ್ಯ:-:೭೨:

ಸಂಪಾದಿಸಿ

ಪನ್ನಗಾರಿಧ್ವಜಂ ಬಳಿಕಾ ನೃಪಾಲನಂ |
ಮನ್ನಿಸಿ ಕೃತಾರ್ಥನಹೆ ನೀನರ್ಧ ದೇಹಮಂ |
ನನ್ನಿಯಿಂದೀಯೆ ಮೆಚ್ಚಿದೆನೀಗ ನಿನಗೆ ಸಂಗ್ರಾಮದೊಳ್ ತಾಮ್ರಕೇತು ||
ನಿನ್ನೆ ಪಡೆಯೆಲ್ಲಮುಮನೀಸವ್ಯಸಾಚಿಯುಮು |
ನೆನ್ನುವಂ ಮೂರ್ಛೆಗಾಣಿಸಿಕೆಡಹಿ ಬಂದುದಕೆ |
ಮುನ್ನೆ ಹರ್ಷಿತನಾದೆನಿನ್ನು ಸತಿಸುತರೊಡನೆ ಮಾಡು ಯಜ್ಞವನೆಂದನು ||72||

ಪದವಿಭಾಗ-ಅರ್ಥ:
ಪನ್ನಗಾರಿಧ್ವಜಂ ಬಳಿಕಾ ನೃಪಾಲನಂ ಮನ್ನಿಸಿ ಕೃತಾರ್ಥನು ಅಹೆ ನೀನು ಅರ್ಧ ದೇಹಮಂ ನನ್ನಿಯಿಂದ ಈಯೆ ಮೆಚ್ಚಿದೆನು ಈಗ ನಿನಗೆ ಸಂಗ್ರಾಮದೊಳ್ ತಾಮ್ರಕೇತು=[ಸರ್ಪಗಳವೈರಿಗರುಡನ ಧ್ವಜವುಳ್ಳ ಕೃಷ್ಣನು, ಬಳಿಕ ಆ ರಾಜನನ್ನು ಆದರದಿಂದ ಸಮಾಧಾನ ಪಡಿಸಿ, ನೀನು ಅರ್ಧ ದೇಹವನ್ನು ಸತ್ಯ ಮತ್ತು ಧರ್ಮಕ್ಕಾಗಿ ಕೊಟ್ಟು ಕೃತಾರ್ಥನು ಆಗಿರುವೆ. ಮೆಚ್ಚಿದೆನು; ಈಗ ನಿನಗೆ ಯುದ್ಧದಲ್ಲಿ ಜಯವಾಗಿದೆ. ತಾಮ್ರಕೇತು];; ನಿನ್ನೆ ಪಡೆಯೆಲ್ಲಮುಮಂ ಈ ಸವ್ಯಸಾಚಿಯುಮುಂ ಎನ್ನುವಂ ಮೂರ್ಛೆಗಾಣಿಸಿ ಕೆಡಹಿ ಬಂದುದಕೆ ಮುನ್ನೆ ಹರ್ಷಿತನು ಆದೆನು ಇನ್ನು ಸತಿಸುತರೊಡನೆ ಮಾಡು ಯಜ್ಞವನೆಂದನು=[ತಾಮ್ರಕೇತು ನಿನ್ನೆ ನಮ್ಮು ಎಲ್ಲಾ ಸೈನ್ಯವನ್ನೂ, ಈ ಸವ್ಯಸಾಚಿಯನ್ನೂ, ನನ್ನನ್ನೂ ಮೂರ್ಛೆಗೊಳಿಸಿ, ಕೆಡವಿ ಬಂದುದಕ್ಕೆ ಮೊದಲೆ ಹರ್ಷಪಟ್ಟೆನು. ಇನ್ನು ನೀನು ಸತಿಸುತರನ್ನು ಕೂಡಿಕೊಂಡು ಯಜ್ಞವನ್ನು ಮಾಡು ಎಂದನು].
  • ತಾತ್ಪರ್ಯ:ಸರ್ಪಗಳ ವೈರಿ ಗರುಡನ ಧ್ವಜವುಳ್ಳ ಕೃಷ್ಣನು, ಬಳಿಕ ಆ ರಾಜನನ್ನು ಆದರದಿಂದ ಸಮಾಧಾನ ಪಡಿಸಿ, ನೀನು ಅರ್ಧ ದೇಹವನ್ನು ಸತ್ಯ ಮತ್ತು ಧರ್ಮಕ್ಕಾಗಿ ಕೊಟ್ಟು ಕೃತಾರ್ಥನಾಗಿರುವೆ. ಮೆಚ್ಚಿದೆನು; ಈಗ ನಿನಗೆ ಯುದ್ಧದಲ್ಲಿ ಜಯವಾಗಿದೆ. ತಾಮ್ರಕೇತು ನಿನ್ನೆ ನಮ್ಮ ಎಲ್ಲಾ ಸೈನ್ಯವನ್ನೂ, ಈ ಸವ್ಯಸಾಚಿಯನ್ನೂ, ನನ್ನನ್ನೂ ಮೂರ್ಛೆಗೊಳಿಸಿ, ಕೆಡವಿ ಬಂದುದಕ್ಕೆ ಮೊದಲೆ ಹರ್ಷಪಟ್ಟೆನು. ಇನ್ನು ನೀನು ಸತಿಸುತರನ್ನು ಕೂಡಿಕೊಂಡು ಯಜ್ಞವನ್ನು ಮಾಡು ಎಂದನು.
  • (ಪದ್ಯ: ೭೨)

ಪದ್ಯ:-:೭೩:

ಸಂಪಾದಿಸಿ

ಧರ್ಮಜನ ತುರಗಮಿದೆ ನಿನ್ನ ಹಯಮಿದೆ ನೀನೆ |
ನಿರ್ಮಲಾಧ್ವರಮೆರಡುಮಂ ಸಮಯಮಾಗಲ್ಕೆ |
ಕರ್ಮಕಧಿಪತಿಯಾಗಿ ಮಾಳ್ಪುದೆಂದಚ್ಯುತಂ ನುಡಿದೊಡೆ ಮಯೂರಕೇತು ||
ಚರ್ಮಶೃಂಗಮನಾಂತು ಮಖದೀಕ್ಷೆಯಂ ಕೊಂಬ |
ದುರ್ಮತಿಗಳುಂಟೆ ನಿನ್ನಂ ಕಂಡ ಬಳಿಕದರ |
ಮರ್ಮಮಂ ಬಲ್ಲೆನಾನೆಲೆ ದೇವ ತನ್ನ ಬಿನ್ನಪವನವಧರಿಸೆಂದನು ||73||

ಪದವಿಭಾಗ-ಅರ್ಥ:
ಧರ್ಮಜನ ತುರಗಮಿದೆ ನಿನ್ನ ಹಯಮಿದೆ ನೀನೆ ನಿರ್ಮಲ ಅಧ್ವರಮ್ ಎರಡುಮಂ ಸಮಯಂ ಆಗಲ್ಕೆ ಕರ್ಮಕಧಿಪತಿಯಾಗಿ ಮಾಳ್ಪುದೆಂದು ಅಚ್ಯುತಂ ನುಡಿದೊಡೆ=[ಧರ್ಮರಾಜಜನ ಕುದುರೆ ಇದೆ, ನಿನ್ನ ಕುದುರೆಯೂ ಇದೆ. ನೀನೆ ಪವಿತ್ರ ಯಜ್ಞ ಎರಡನ್ನೂ, ಅನುಕೂಲ ಸಮಯ/ಕಾಲ ಬರಲು ಕರ್ಮದ ಅಧಿಪತಿಯಾಗಿ ಮಾಡುವುದೆಂದು ಅಚ್ಯುತನು ಹೇಳಿದಾಗ];; ಮಯೂರಕೇತು ಚರ್ಮಶೃಂಗಮನು ಆಂತು (ಪಡೆದು ಅವಲಂಬಿಸಿ) ಮಖದೀಕ್ಷೆಯಂ ಕೊಂಬ ದುರ್ಮತಿಗಳುಂಟೆ ನಿನ್ನಂ ಕಂಡ ಬಳಿಕ ಅದರ ಮರ್ಮಮಂ ಬಲ್ಲೆನು ಆನು ಎಲೆ ದೇವ ತನ್ನ ಬಿನ್ನಪವನು ಅವಧರಿಸೆಂದನು=[ಮಯೂರಕೇತುವು, 'ನಿನ್ನನ್ನು ಕಂಡ ಬಳಿಕ ಚರ್ಮ-ಮಾಂಸ ಭರಿತವಾದ ಪ್ರಾಣಿಯನ್ನು ಅವಲಂಬಿಸಿ ಯಜ್ಞದೀಕ್ಷೆಯನ್ನು ಕೈಗೊಳ್ಳುವ ತಿಳುವಳಿಕೆ ಇಲ್ಲದವರು ಇರಬಹುದೆ? ಅದರ ಧರ್ಮ ರಹಸ್ಯವನ್ನು ನಾನು ತಿಳಿದಿರುವೆನು. ಎಲೆ ದೇವ ತನ್ನ ಮಾತನ್ನು ಕೇಳಬೇಕು ಎಂದನು.]
  • ತಾತ್ಪರ್ಯ:(ಕೃಷ್ಣನು ಹೇಳಿದನು,) ಧರ್ಮರಾಜಜನ ಕುದುರೆ ಇದೆ, ನಿನ್ನ ಕುದುರೆಯೂ ಇದೆ. ನೀನೆ ಪವಿತ್ರ ಯಜ್ಞ ಎರಡನ್ನೂ, ಅನುಕೂಲ ಸಮಯ/ಕಾಲ ಬರಲು ಕರ್ಮದ ಅಧಿಪತಿಯಾಗಿ ಮಾಡುವುದೆಂದು ಅಚ್ಯುತನು ಹೇಳಿದಾಗ, ಮಯೂರಕೇತುವು, 'ನಿನ್ನನ್ನು ಕಂಡ ಬಳಿಕ ಚರ್ಮ-ಮಾಂಸ ಭರಿತವಾದ ಪ್ರಾಣಿಯನ್ನು ಅವಲಂಬಿಸಿ ಯಜ್ಞದೀಕ್ಷೆಯನ್ನು ಕೈಗೊಳ್ಳುವ ಅಲ್ಪಬುದ್ಧಿಯವರು ಇರಬಹುದೆ? ಯಜ್ಞದ ಧರ್ಮ ರಹಸ್ಯವನ್ನು ನಾನು ತಿಳಿದಿರುವೆನು. ಎಲೆ ದೇವ ತನ್ನ ಮಾತನ್ನು ಕೇಳಬೇಕು ಎಂದನು.]
  • (ಪದ್ಯ: ೭೩)

ಪದ್ಯ:-:೭೪:

ಸಂಪಾದಿಸಿ

ವಿಶ್ವೇಶ ನಿನ್ನ ಶಾಶ್ವತ ಮೂರ್ತಿಯಂ ತಳೆವ |
ವಿಶ್ವಾಸದಿಂದೆ ನಿನಗೊಪ್ಪಿಸಿದೆನೀಗಳೀ |
ನಶ್ವರ ಶರೀರಮಂ ಸಾಕದಂತಿರಲಿನ್ನು ತಾಂ ಕರ್ಮಕರ್ತೃವಾಗಿ ||
ಅಶ್ವಮೇಧಂಗಳಂ ಮಾಡಿದೊಡೆ ನಗವೆ ನಿ |
ನ್ನ ಶ್ವಾಸದಿಂದೊಗೆದ ಮಂತ್ರಾಳಿಗಳ್ ಮಾತ |
ರಿಶ್ವ ಮಿತ್ರಜ್ವಾಲೆ ಪೊರೆಯೊಳಿರೆ ಭೇಷಜವ ನರಸುವರೆ ಹಿಮಕೆಂದನು ||74||

ಪದವಿಭಾಗ-ಅರ್ಥ:
ವಿಶ್ವೇಶ ನಿನ್ನ ಶಾಶ್ವತ ಮೂರ್ತಿಯಂ ತಳೆವ ವಿಶ್ವಾಸದಿಂದೆ ನಿನಗೆ ಒಪ್ಪಿಸಿದೆನು ಈಗಳು ಈ ನಶ್ವರ ಶರೀರಮಂ ಸಾಕು ಅದಂತಿರಲಿ ಇನ್ನು ತಾಂ ಕರ್ಮಕರ್ತೃವಾಗಿ=[ವಿಶ್ವಕ್ಕೆ ಒಡೆಯನೇ, ನಿನ್ನ ಶಾಶ್ವತ ಮೂರ್ತಿಯನ್ನು ಹೊಂದುವ ವಿಶ್ವಾಸದಿಂದೆ ಈಗಾಗಲೆ ಈ ನನ್ನ ನಶ್ವರ ಶರೀರವನ್ನು ನಿನಗೆ ಒಪ್ಪಿಸಿದೆನು. ಸಾಕು ಅದು ಹಾಗಿರಲಿ, ಇನ್ನು ತಾನು ಯಜ್ಞದ ಕರ್ಮಕರ್ತೃವಾಗಿ];; ಅಶ್ವಮೇಧಂಗಳಂ ಮಾಡಿದೊಡೆ ಎನಗೆ ಅವೆ ನಿನ್ನಶ್ವಾಸದಿಂದ ಒಗೆದ ಮಂತ್ರಾಳಿಗಳ್ ಮಾತರಿಶ್ವ ಮಿತ್ರಜ್ವಾಲೆ ಪೊರೆಯೊಳಿರೆ ಭೇಷಜವನು ಅರಸುವರೆ ಹಿಮಕೆಂದನು=[ಅಶ್ವಮೇಧಗಳನ್ನು ಮಾಡಿದರೆ ನಗವುದಿಲ್ಲವೆ ನಿನ್ನ ಉಸುರಿನಿಂದ ಹುಟ್ಟಿದ ವೇದಮಂತ್ರಗಳು/ಮಂತ್ರಾಧಿದೇವತೆಗಳು. ಮಾತರಿಶ್ವನಾದ ವಾಯುವಿನ ಮಿತ್ರನಾದ ಜ್ವಾಲೆ/ಅಗ್ನಿಯ ರೂಪನಾದ ನೀನು ಹತ್ತಿರದಲ್ಲಿ/ಪಕ್ಕದಲ್ಲಿ ಇರಲು, ಹಿಮ/ಚಳಿಗೆ ಔಷಧವನ್ನು/ ಪರಿಹಾರವನ್ನು ಹುಡುಕುವರೆ? ಅಗತ್ಯವಿಲ್ಲ, ಎಂದನು. ಪುಣ್ಯ ಸ್ವರೂಪನೂ, ವೇದ ಸ್ವರೂಪನೂ ಆದ ನೀನು ಪಕ್ಕದಲ್ಲಿ ಇರಲು ಪುಣ್ಯ ಸಂಪಾದನೆಗಾಗಿ ಅಶ್ವಮೇಧದ ಅಗತ್ಯ ನನಗೆ ಇಲ್ಲ, ಎಂಸನು ಮಯೂರಧ್ವಜ.
  • ತಾತ್ಪರ್ಯ:ವಿಶ್ವಕ್ಕೆ ಒಡೆಯನೇ, ನಿನ್ನ ಶಾಶ್ವತ ಮೂರ್ತಿಯನ್ನು ಹೊಂದುವ ವಿಶ್ವಾಸದಿಂದೆ ಈಗಾಗಲೆ ಈ ನನ್ನ ನಶ್ವರ ಶರೀರವನ್ನು ನಿನಗೆ ಒಪ್ಪಿಸಿದೆನು. ಸಾಕು ಅದು ಹಾಗಿರಲಿ, ಇನ್ನು ತಾನು ಯಜ್ಞದ ಕರ್ಮಕರ್ತೃವಾಗಿ ಅಶ್ವಮೇಧಗಳನ್ನು ಮಾಡಿದರೆ ನಗವುದಿಲ್ಲವೆ ನಿನ್ನ ಉಸುರಿನಿಂದ ಹುಟ್ಟಿದ ವೇದಮಂತ್ರಗಳು/ಮಂತ್ರಾಧಿದೇವತೆಗಳು. ಮಾತರಿಶ್ವನಾದ ವಾಯುವಿನ ಮಿತ್ರನಾದ ಜ್ವಾಲೆ/ಅಗ್ನಿಯ ರೂಪನಾದ ನೀನು ಹತ್ತಿರದಲ್ಲಿ/ಪಕ್ಕದಲ್ಲಿ ಇರಲು, ಹಿಮ/ಚಳಿಗೆ ಔಷಧವನ್ನು/ ಪರಿಹಾರವನ್ನು ಹುಡುಕುವರೆ? ಅಗತ್ಯವಿಲ್ಲ, ಎಂದನು. ಪುಣ್ಯ ಸ್ವರೂಪನೂ, ವೇದ ಸ್ವರೂಪನೂ ಆದ ನೀನು ಪಕ್ಕದಲ್ಲಿ ಇರಲು ಪುಣ್ಯ ಸಂಪಾದನೆಗಾಗಿ ಅಶ್ವಮೇಧದ ಅಗತ್ಯ ನನಗೆ ಇಲ್ಲ, ಎಂದನು ಮಯೂರಧ್ವಜ.
  • (ಪದ್ಯ: ೭೪)

ಪದ್ಯ:-:೭೫:

ಸಂಪಾದಿಸಿ

ದೇವ ಚಿತ್ತೈಸೆನ್ನ ನಂದನಂ ನಿನ್ನೆ ಸಮ |
ರಾವನಿಯೊಳೊಳಗಾದ ನಿಮ್ಮಿರ್ವರಂ ಬಿಟ್ಟ |
ಭಾವದಿಂ ಬಂದನಿಲ್ಲಿಗೆ ತನ್ನ ಪುಣ್ಯದಿಂ ತನಗನುಗ್ರಹಿಸಲೆಂದು ||
ನೀವೆ ಬಿಜಯಂಗೈದಿರದರಿಂದೆ ಸಲೆ ಧನ್ಯ |
ರಾವು ನರ ನಾರಾಯಣರ್ಕಳಂ ಕಂಡೆವಿ |
ನ್ನಾವ ಕಲ್ಪಿತವೆನಗೆ ಧರ್ಮಜನೆ ಮಾಡಿ ಬದುಕಲಿ ಮಖಂಗಳನೆಂದನು ||75||

ಪದವಿಭಾಗ-ಅರ್ಥ:
ದೇವ ಚಿತ್ತೈಸು ಎನ್ನ ನಂದನಂ ನಿನ್ನೆ ಸಮರ ಆವನಿಯೊಳು ಒಳಗಾದ ನಿಮ್ಮ ಇರ್ವರಂ ಬಿಟ್ಟ ಭಾವದಿಂ ಬಂದನು ಇಲ್ಲಿಗೆ ತನ್ನ ಪುಣ್ಯದಿಂ ತನಗೆ ಅನುಗ್ರಹಿಸಲೆಂದು=[ದೇವನೇ ಕೇಳು,'ನನ್ನ ಮಗನು ನಿನ್ನೆ ಸಮರ ಭೂಮಿಯಲ್ಲಿ ಎದುರಿಸಿದ ನಿಮ್ಮ ಇಬ್ಬರನ್ನೂ (ದೈವವನ್ನು) ತ್ಯಾಗಮಾಡಿದ ಭಾವದಿಂದ ಬಂದನು. ಆದರೆ ತನ್ನ ಪುಣ್ಯದಿಂದ ಇಲ್ಲಿಗೆ ತನಗೆ ಅನುಗ್ರಹಿಸಲೆಂದು];; ನೀವೆ ಬಿಜಯಂಗೈದಿರಿ ಅದರಿಂದೆ ಸಲೆ ಧನ್ಯರು ಆವು (ನಾವು) ನರ ನಾರಾಯಣರ್ಕಳಂ ಕಂಡೆವು ಇನ್ನಾವ ಕಲ್ಪಿತವು ಎನಗೆ ಧರ್ಮಜನೆ ಮಾಡಿ ಬದುಕಲಿ ಮಖಂಗಳನು ಎಂದನು=[ನೀವೇ ದಯಮಾಡಿಸಿದಿರಿ. ಅದರಿಂದ ನಾವು ವಿಶೇಷವಾಗಿ ಧನ್ಯರು. ನರ ನಾರಾಯಣರನ್ನು ಕಂಡೆವು! ಇನ್ನಾವ ನನಗೆ ಕಲ್ಪಿತ (ಕೃತಕ) ಕರ್ತವ್ಯವಿದೆ? ಧರ್ಮಜನೆ ಯಜ್ಞಗಳನ್ನು ಮಾಡಿ ಬದುಕಲಿ', ಎಂದನು ].
  • ತಾತ್ಪರ್ಯ:ದೇವನೇ ಕೇಳು,'ನನ್ನ ಮಗನು ನಿನ್ನೆ ಸಮರ ಭೂಮಿಯಲ್ಲಿ ಎದುರಿಸಿದ ನಿಮ್ಮ ಇಬ್ಬರನ್ನೂ (ದೈವವನ್ನು) ತ್ಯಾಗಮಾಡಿದ ಭಾವದಿಂದ ಬಂದನು. ಆದರೆ ತನ್ನ ಪುಣ್ಯದಿಂದ ಇಲ್ಲಿಗೆ ತನಗೆ ಅನುಗ್ರಹಿಸಲೆಂದುನೀವೇ ದಯಮಾಡಿಸಿದಿರಿ. ಅದರಿಂದ ನಾವು ವಿಶೇಷವಾಗಿ ಧನ್ಯರು. ನರ ನಾರಾಯಣರನ್ನು ಕಂಡೆವು! ಇನ್ನಾವ ನನಗೆ ಕಲ್ಪಿತ (ಕೃತಕ) ಕರ್ತವ್ಯವಿದೆ? ಧರ್ಮಜನೆ ಯಜ್ಞಗಳನ್ನು ಮಾಡಿ ಬದುಕಲಿ', ಎಂದನು.
  • (ಪದ್ಯ: ೭೫)

ಪದ್ಯ:-:೭೬:

ಸಂಪಾದಿಸಿ

ಸುರನದಿಯ ತೋಯಮಿರೆ ನೀರಡಿಸಿ ಹಿಮಜಲಕೆ |
ಪರಿವಂತೆ ನಿನ್ನ ದರ್ಶನಮಿರ್ದು ಮೀ ಮಹಾ |
ಧ್ವರಕೆಳಸುವವನಲ್ಲ ತನ್ನುಮಂ ತನ್ನ ಸತಿಸುತರುಮಂ ತನ್ನೊಳಿರ್ದ ||
ತುರಗಂಗಳಂ ತನ್ನ ಯಜ್ಞಮಂ ಯಜ್ಞೋಪ |
ಕರಣಂಗಳಂ ತನ್ನ ರಾಜ್ಯಮಂ ತನ್ನ ಮಂ |
ದಿರದ ಸರ್ವಸ್ವಮಂ ನಿನ್ನ ಪದಕರ್ಪಿಸಿದೆನೆಂದವಂ ಕೈಮುಗಿದನು ||76||

ಪದವಿಭಾಗ-ಅರ್ಥ:
ಸುರನದಿಯ ತೋಯಮ್ ಇರೆ ನೀರಡಿಸಿ ಹಿಮಜಲಕೆ ಪರಿವಂತೆ ನಿನ್ನ ದರ್ಶನಮಿರ್ದುಂ ಈ ಮಹಾ ಅಧ್ವರಕೆ ಎಳಸುವವನಲ್ಲ=[ಗಂಗಾನದಿಯ ನೀರು ಇರಲು ಬಾಯಾರಿಕೆಗೆ ಹಿಮವನ್ನು ಕರಗಿಸಿದ ನೀರಿಗೆ ಹೋಗುವಂತೆ, ನಿನ್ನ ದರ್ಶನವು ಇದ್ದರೂ ಈ ಮಹಾ ಯಜ್ಞಕ್ಕೆ ಅಪೇಕ್ಷಿಸುವವನಲ್ಲ];; ತನ್ನುಮಂ ತನ್ನ ಸತಿಸುತರುಮಂ ತನ್ನೊಳಿರ್ದ ತುರಗಂಗಳಂ ತನ್ನ ಯಜ್ಞಮಂ ಯಜ್ಞೋಪ ಕರಣಂಗಳಂ ತನ್ನ ರಾಜ್ಯಮಂ ತನ್ನ ಮಂದಿರದ ಸರ್ವಸ್ವಮಂ ನಿನ್ನ ಪದಕರ್ಪಿಸಿದೆನು ಎಂದು ಅವಂ ಕೈಮುಗಿದನು=[ತನ್ನನ್ನೂ ತನ್ನ ಪತ್ನಿ ಮತ್ತು ಮಗನನ್ನೂ ತನ್ನಲ್ಲಿದ್ದ ಯಜ್ಞದ ಕುದುರೆಗಳನ್ನೂ, ತನ್ನ ಯಜ್ಞಕಾರ್ಯವನ್ನೂ ಯಜ್ಞದ ಉಪಕರಣಗಳನ್ನೂ, ತನ್ನ ರಾಜ್ಯವನ್ನೂ, ತನ್ನ ಅರಮನೆಯ ಸರ್ವಸ್ವವನ್ನೂ, ನಿನ್ನ ಪಾದಕ್ಕೆ ಅರ್ಪಿಸಿದೆನು,' ಎಂದು ಮಯೂರವರ್ಮನು ಕೈಮುಗಿದನು].
  • ತಾತ್ಪರ್ಯ:ಗಂಗಾನದಿಯ ನೀರು ಹತ್ತಿರಇರಲು ಬಾಯಾರಿಕೆಗೆ ಹಿಮವನ್ನು ಕರಗಿಸಿದ ನೀರಿಗೆ ಹೋಗುವಂತೆ, ನಿನ್ನ ದರ್ಶನವು ಇದ್ದರೂ ಈ ಮಹಾ ಯಜ್ಞಕ್ಕೆ ಅಪೇಕ್ಷಿಸುವವನಲ್ಲ. ತನ್ನನ್ನೂ ತನ್ನ ಪತ್ನಿ ಮತ್ತು ಮಗನನ್ನೂ ತನ್ನಲ್ಲಿದ್ದ ಯಜ್ಞದ ಕುದುರೆಗಳನ್ನೂ, ತನ್ನ ಯಜ್ಞಕಾರ್ಯವನ್ನೂ ಯಜ್ಞದ ಉಪಕರಣಗಳನ್ನೂ, ತನ್ನ ರಾಜ್ಯವನ್ನೂ, ತನ್ನ ಅರಮನೆಯ ಸರ್ವಸ್ವವನ್ನೂ, ನಿನ್ನ ಪಾದಕ್ಕೆ ಅರ್ಪಿಸಿದೆನು,' ಎಂದು ಮಯೂರವರ್ಮನು ಕೈಮುಗಿದನು.
  • (ಪದ್ಯ: ೭೬)

ಪದ್ಯ:-:೭೬:

ಸಂಪಾದಿಸಿ

ಇಂತೆಂದು ಭೂವರಂ ನುಡಿಯೆ ಹರ್ಷಿತನಾಗಿ |
ಕುಂತೀಸುತಂಗವನ ಭಕ್ತಿಯಂ ತೋರಿಸುತ |
ನಂತರದೊಳಾ ನೃಪನ ನಗರದೊಳ್ ಮೂರು ದಿನಮಿರ್ದು ನಿಜಸೇನೆ ಬರಲು ||
ದಂತಿಪುರಕಲ್ಲಿಯ ಸಮಸ್ತವಸ್ತುಗಳೈದು |
ವಂತೆ ನೇಮಿಸಿ ಮಯೂರಧ್ವಜಂ ಸಹಿತ ನಡೆ |
ದಂ ತುರಗಮೆರಡುಮಂ ಬಿಡಿಸಿ ಮುಂದಕೆ ದೇವಪುರದ ಲಕ್ಷ್ಮೀಕಾಂತನು ||77||

ಪದವಿಭಾಗ-ಅರ್ಥ:
ಇಂತೆಂದು ಭೂವರಂ ನುಡಿಯೆ ಹರ್ಷಿತನಾಗಿ ಕುಂತೀಸುತಂಗೆ ಅವನ ಭಕ್ತಿಯಂ ತೋರಿಸುತ ನಂತರದೊಳು ಆ ನೃಪನ ನಗರದೊಳ್ ಮೂರು ದಿನಮಿರ್ದು ನಿಜಸೇನೆ ಬರಲು=[ಈ ರೀತಿಯಲ್ಲಿ ಮಯೂರಧ್ವಜ ರಾಜನು ಹೇಳಲು, ಹರ್ಷಪಟ್ಟು ಕುಂತೀಸುತ ಅರ್ಜುನನಿಗೆ ಅವನ ಭಕ್ತಿಯಪರಿಯನ್ನು ತೋರಿಸುತ್ತಾ, ನಂತರದಲ್ಲಿ ಆ ರಾಜನ ನಗರದಲ್ಲಿ ಮೂರು ದಿನವಿದ್ದು, ಹಿಂದೆ ಬಿಟ್ಟಿದ್ದ ತಮ್ಮ ಸೇನೆ ಬರಲು];; ದಂತಿಪುರಕೆ ಅಲ್ಲಿಯ ಸಮಸ್ತವಸ್ತುಗಳು ಐದುವಂತೆ ನೇಮಿಸಿ ಮಯೂರಧ್ವಜಂ ಸಹಿತ ನಡೆದಂ ತುರಗಂ ಎರಡುಮಂ ಬಿಡಿಸಿ ಮುಂದಕೆ ದೇವಪುರದ ಲಕ್ಷ್ಮೀಕಾಂತನು=[ಹಸ್ತಿನಾಪುರಕ್ಕೆ ಅಲ್ಲಿಯ ಸಮಸ್ತವಸ್ತುಗಳೂ ತಲುಪುವಂತೆ ಆಜ್ಞಾಪಿಸಿ, ಮಯೂರಧ್ವಜನ ಸಹಿತ ಎರಡು ಯಜ್ಞಾಶ್ವಗಳನ್ನು ಬಿಡಿಸಿಕೊಂಡು ಮುಂದಕ್ಕೆ ದೇವಪುರದ ಲಕ್ಷ್ಮೀಕಾಂತನಾದ ಕೃಷ್ನನು ನಡೆದನು.]
  • ತಾತ್ಪರ್ಯ:ಈ ರೀತಿಯಲ್ಲಿ ಮಯೂರಧ್ವಜ ರಾಜನು ಹೇಳಲು, ಹರ್ಷಪಟ್ಟು ಕುಂತೀಸುತ ಅರ್ಜುನನಿಗೆ ಅವನ ಭಕ್ತಿಯಪರಿಯನ್ನು ತೋರಿಸುತ್ತಾ, ನಂತರದಲ್ಲಿ ಆ ರಾಜನ ನಗರದಲ್ಲಿ ಮೂರು ದಿನವಿದ್ದು, ಹಿಂದೆ ಬಿಟ್ಟಿದ್ದ ತಮ್ಮ ಸೇನೆ ಬರಲು ಹಸ್ತಿನಾಪುರಕ್ಕೆ ಅಲ್ಲಿಯ ಸಮಸ್ತವಸ್ತುಗಳೂ ತಲುಪುವಂತೆ ಆಜ್ಞಾಪಿಸಿ, ಮಯೂರಧ್ವಜನ ಸಹಿತ ಎರಡು ಯಜ್ಞಾಶ್ವಗಳನ್ನು ಬಿಡಿಸಿಕೊಂಡು ಮುಂದಕ್ಕೆ ದೇವಪುರದ ಲಕ್ಷ್ಮೀಕಾಂತನಾದ ಕೃಷ್ನನು ನಡೆದನು.
  • (ಪದ್ಯ: ೭೬)
  • []
  • []
  • ಸಂಧಿ ೨೬ಕ್ಕೆ ಪದ್ಯಗಳು:೧೪೪೯.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.