ಜೈಮಿನಿ ಭಾರತ ಎರಡನೆಯ ಸಂಧಿ
ಸಂಪಾದಿಸಿಪದ್ಯ : ಸೂಚನೆ
ಸಂಪಾದಿಸಿರಾಜೇಂಧ್ರ ಧರ್ಮತನಯಂ ಬಾದರಾಯಣನ|
ವಾಜಿಮೇಧಾಧ್ವರ ವಿಧಾನಮಂ ಕೇಳ್ದು ಪಂ |
ಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು ||
ರಾಜೇಂದ್ರ ಧರ್ಮತನಯಂ =ರಾಜೇಂದ್ರನಾದ ಧರ್ಮರಾಯನು, ಬಾದರಾಯಣನ ವಾಜಿಮೇಧಾಧ್ವರ ವಿಧಾನಮಂ ಕೇಳ್ದು = ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಪಂಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು. ಪಂಕಜ ಪತ್ರೇಕ್ಷಣ =ಕಮಲದ ಎಸಳಿನಂತೆ ವಿಶಾಲ ಕಣ್ಣುಳ್ಳ ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
(ಪದ್ಯ - ಸೂಚನಾ ಪದ್ಯ) |
ಪದ್ಯ :೧.
ಸಂಪಾದಿಸಿವನರುಹ ಭವಾಂಡಗೊಳಗೈವತ್ತು ಕೋಟಿ ಯೋ |
ಜನದ ವಿಸ್ತೀರ್ಣದಿಳೆಯಂ ಸಪ್ತಶರನಿಧಿಗ |
ಳನುವೇಷ್ಟಿಸಿರಲದರ ಮಧ್ಯದೊಳಗಿಹುದು ಜಂಬೂ ದ್ವೀಪಮದರ ನಡುವೆ ||
ಅನವರತ ಸರಸ ಗೋಷ್ಠಿಗೆ ನೆರೆದ ನಿರ್ಜರಾಂ |
ಗನೆಯರಂಗಚ್ಚವಿಯ ಹಬ್ಬುಗೆಯೊ ಕಾರಮಿಂ |
ಚಿನ ಮಹಾ ರಾಶಿಯೋ ಪೇಳೆನಲ್ ಮೆರವ ಕನಕಾಚಲಂ ಕಣ್ಗೆಸೆದುದು ||1||
ವನರುಹ ಭವಾಂಡಗೊಳಗೈವತ್ತು - ವನರುಹ ಭವ ಅಂಡದೊಳಗೆ ಐವತ್ತುಕೋಟಿ; ವನರುಹ=ಕಮಲ, ಭವ= ಹುಟ್ಟಿದವನು ಅಂಡದ=ಮೊಟ್ಟೆ ಒಳಗೆ; (ಬ್ರಹ್ಮಾಂಡದೊಳಗೆ ಐವತ್ತುಕೋಟಿ ಯೋಜನದ); ವಿಸ್ತೀರ್ಣದ ಇಳೆಯಂ =ಭೂಮಿಯನ್ನು; ಸಪ್ತಶರನಿಧಿಗಳನುವೇಷ್ಟಿಸಿರಲದರ = ಸಪ್ತ= ಏಳು ಶರನಿಧಿಗೆಳ್ =ಸಮುದ್ರಗಳು ಸುವೇಷ್ಟಿಸಲ್ = ಸುತ್ತಯವರಿದಿದಿದ್ದು, ಅದರ , ಮಧ್ಯದೊಳಗಿಹುದು- ಮಧ್ಯದೊಳಗೆ ಇಹುದು = ಮಧ್ಯದಲ್ಲಿ ಇದೆ; ಜಂಬೂ ದ್ವೀಪಂ =ಜಂಬೂದ್ವೀಪವು; ಅದರ ನಡುವೆ ಅನವರತ = ಯಾವಾಗಲೂ, ಸರಸ ಗೋಷ್ಠಿಗೆ ನೆರೆದ =ಸಂತೋಷ ಕೂಟಕ್ಕೆ ಸೇರಿದ, ನಿರ್ಜರಾಂಗನೆಯರಂಗಚ್ಚವಿಯ - ನಿರ್ಜರ ಅಂಗನೆಯರ =ದೇವತಾ ಸ್ತ್ರೀಯರ, ಅಂಗ ಛವಿಯ = ದೇಹಕಾಂತಿಯ, ಹಬ್ಬುಗೆಯೊಕಾರಮಿಂಚಿನ - ಹಬ್ಬುಗೆಯೊಕಾರ ಮಿಂಚಿನ = ಬಹುಸಂಖ್ಯೆಯ ಒಟ್ಟಾದ ಮಿಂಚಿನಂತೆ, ಮಹಾ ರಾಶಿಯೋ = ದೊಡ್ಡ ಸಮೂಹ ರಾಶಿಯೋ, ಪೇಳೆನಲ್= ಎನ್ನುವಂತೆ, ಮೆರವ = ಪ್ರಕಾಸಿಸುವ, ಕನಕಾಚಲಂ ಕಣ್ಗೆಸೆದುದು ಕನಕಾಚಲವು ಕಣ್ಣಿಗೆ ಕಾಣಿಸಿತು.
(ಪದ್ಯ -೧) |
ಪದ್ಯ ೨
ಸಂಪಾದಿಸಿಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು |
ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |
ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ ||
ಭೂಕಾಂತ ಜನಮೇಜಯಂ ಮಹಾಭಾರತ ಕ |
ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |
ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು ||2||
ಆ ಕನಕಗಿರಿಯ ತೆಂಕಣ = ದಕ್ಷಿಣ, ದೆಸೆಯೊಳಿರ್ಪುದು-ದೆಸಯಲಿ ಇರ್ಪುದು =ದಿಕ್ಕಿನಲ್ಲಿ ಇರುವುದು, ಸುಧಾಕರಕುಲದ = ಚಂದ್ರವಂಶದ ನೃಪರ ಸಾಮ್ರಾಜ್ಯ, ಪಟ್ಟಾಭಿಷೇಕ ವಿಸ್ತರದಿಂ ಜಸಂಬಡೆದ- ಜಸಂ ಪಡೆದ = ಯಶಸ್ಸುಪಡೆದ, ಹಸ್ತಿನಾಪುರಮಲ್ಲಿಗರಸೆನಿಸುವ ಭೂಕಾಂತ ಜನಮೇಜಯಂ - ಹಸ್ತಿನಾಪುರಂ ಅಲ್ಲಿಗೆ ಅರಸ ಎನಿಸುವ ಭೂಕಾಂತ ಜನಮೇಜಯಂ = ಹಸ್ತಿನಾಪುರವು; ಅಲ್ಲಿಗೆ ಅರಸನಾದ ಭೂಕಾಂತ (ಭೂಮಿಗೊಡೆಯ), ಜನಮೇಜಯಂ ಮಹಾಭಾರತ ಕಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು - ಜನಮೇಜಯಂ ಮಹಾಭಾರತ ಕಥಾ ಕೌತುಕದೊಳು ಅಶ್ವಮೇಧಿಕವನು ಒಲವಿನಿಂದ ಏಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನು (ಕೇಳಿದನು) ಈ ತೆರದೊಳು = ಭೂಕಾಂತನಾದ ಜನಮೇಜಯನು ಮಹಾಭಾರತ ಕಥೆಬಗೆಗೆ ಕುತೂಹಲದಿಂದ ಅಶ್ವಮೇಧ ನಡೆದ ವಿಚಾರವನ್ನು ತಿಳಿಯಲು ಆಸೆಪಟ್ಟು ಪ್ರೀತಿಯಿಂ ಜೈಮಿನಿ ಮುನೀಂಧ್ರನನ್ನು ಈ ರೀತಿಯಲ್ಲಿ ಕೇಳಿದನು.
(ಪದ್ಯ - ) |
ಪದ್ಯ ೩
ಸಂಪಾದಿಸಿಪಿಂತೆ ಕೌರವಜಯಂ ತಮಗೆ ಕೈಸಾರ್ದ ಸಮ |
ನಂತರದೊಳಾದ ಸಾಮ್ರಾಜ್ಯದೊಳ್ ಪಾಂಡವರ |
ದೆಂತಿಳೆಯನೋವಿದರದೇಗೆಯ್ದರೆಂದು ಜನಮೇಜಯ ಮಹೀಪಾಲನು ||
ಸಂತಸಂದಳೆದು ಜೈಮಿನಿ ಮುನಿಪನಂ ಕೇಳ್ದೊ |
ಡಿಂತವಂ ಪೇಳ್ದನಾ ಭೂಪಂಗೆ ಸಕಲ ಜನ |
ಸಂತತಿಗೆ ಕರ್ಣಾವತಂಸಮೆನೆ ರಂಜಿಸುವ ಮಧುರತರ ಭಾರತ ಸತ್ಕಥೆಯನು ||3||
ಪಿಂತೆ =ಹಿಂದೆ ಕೌರವಜಯಂ =ಕೌರವರನ್ನು ಜಯಿಸಿದ್ದು, ತಮಗೆ ಕೈಸಾರ್ದ=ಕೈಗೂಡಿತು, ಸಮನಂತರದೊಳಾದ- ಸಮನಂರದೊಳ್ = ಆನಂರದೊಳ್ ಆದ ಸಾಮ್ರಾಜ್ಯದೊಳ್ ಪಾಂಡವರದೆಂತಿಳೆಯನೋವಿದರದೇಗೆಯ್ದರೆಂದು = ಪಾಂಡವರು ಅದು ಎಂತು =ಹೇಗೆ ಇಳೆಯನು ಓವಿದರು = ಆಳಿದರು ಅದು ಏಗೈದರು = ಏನು ಮಾಡಿದರು ಎಂದು, ಜನಮೇಜಯ ಮಹೀಪಾಲನು ಸಂತಸಂದಳೆದು - ಸಂತಸಂ ತಳೆದು ಜೈಮಿನಿ ಮುನಿಪನಂ ಕೇಳ್ದೊಡಿಂತವಂ - ಕೇಳ್ದೊಡೆ= ಕೇಳಿದೊಡನೆ, ಇಂತು ಅವಂ =ಈರೀತಿ ಅವನು, ಪೇಳ್ದನಾ -ಪೇಳ್ದನು ಭೂಪಂಗೆ = ಆ ರಾಜನಿಗೆ ಹೇಳಿದನು, ಸಕಲ ಜನ ಸಂತತಿಗೆ =ಸಕಲಜನರಿಗೂ ಕರ್ಣಾವತಂಸಮೆನೆ ಕರ್ಣಾ ವಸಂತ =ಕಿವಿಗೆ ವಸಂತ ಋತುವಿನಂತೆ ಆನಂದಕೊಡುವ, ರಂಜಿಸುವ ಮಧುರತರ = ಮಧರವಾದ ಸತ್ಕಥೆಯನು =ಸತ್ ಉತ್ತಮ ಭಾರತದ ಕಥೆಯನು=ಕಥೆಯನ್ನು (ಹೇಳಿದನು).
(ಪದ್ಯ -೩ ) |
ಪದ್ಯ ೪
ಸಂಪಾದಿಸಿಕೇಳಲೈ ನೃಪಾಲ ಪಾಂಡವರಕಥೆಯಿದು ಪುಣ್ಯ|
ದೇಳಿಗೆಯಲಾ ಸುಯೋಧನ ಮೇಧಿನೀಶನಂ|
ಕಾಳಗದೊಳುರೆ ಗೆಲ್ದ ಬಳಿಕ ವರ ಹಸ್ತಿನಾಪುರದ ನಿಜಸಾಮ್ರಾಜ್ಯದ||
ಬಾಳಿಕೆಯನನುಜರಿಂದೊಡಗೂಡಿ ಧರ್ಮಜಂ|
ತಾಳಿದಂಭರತನಳ ನಹುಷಾದಿ ರಾಯರಂ|
ಪೇಳುವಡವರ್ಗಿನಿತುಗುಣಮಿಲ್ಲಮೆಂದು ಭೂಮಂಡಲಂಕೊಂಡಾಡಲು||೪||
ಕೇಳು ಎಲೈ ನೃಪಾಲ ಪಾಂಡವರ ಕಥೆಯಿದು ಪುಣ್ಯದ ಏಳಿಗೆಯಲಾ ಸುಯೋಧನ ಮೇದಿನೀಶನಂ = ಮೇದಿನಿ ಭೂಮಿಯ ಈಶನಂ,ಒಡೆಯನನ್ನು; ಕಾಳಗದೊಳುರೆ = ಕಾಳಗದೊಳು = ಯುದ್ಧದಲ್ಲಿ ಉರೆ = ಚೆನ್ನಾಗಿ, ಪೂರ್ಣವಾಗಿ ಗೆಲ್ದ =ಗೆದ್ದ ಬಳಿಕ, ವರ = ಶ್ರೇಷ್ಠ ಹಸ್ತಿನಾಪುರದ ನಿಜ ಸಾಮ್ರಾಜ್ಯದ = ತನ್ನ ಸಾಮ್ರಾಜ್ಯದ ಬಾಳಿಕೆಯನನುಜರಿಂದೊಡಗೂಡಿ - ಬಾಳಿಕೆಯನು ಅನುಜರಿಂದ ಒಡಗೂಡಿ = ಆಳ್ವಿಕೆಯನ್ನು ಸಹೋದರರೊಂದಿಗೆ, ಧರ್ಮಜಂತಾಳಿದಂಭರತನಳ ನಹುಷಾದಿ ರಾಯರಂ -ಧರ್ಮಜಂ ಅಂತು ಆಳಿದಂ = ಧರ್ಮರಾಯನು ಆ ರೀತಿಯಲ್ಲಿ ಆಳಿದನು, (ಹೇಗೆಂದರೆ) ಪೇಳುವಡವರ್ಗಿನಿತುಗುಣಮಿಲ್ಲಮೆಂದು ಭೂಮಂಡಲಂಕೊಂಡಾಡಲು - ಪೇಳುವಡೆ ಅವರ್ಗೆ ಇನಿತು ಗುಣಮಿಲ್ಲಮೆಂದು ಭೂಮಂಡಲಂ ಕೊಂಡಾಡಲು = (ನಿಜ) ಹೇಳುವುದಾದರೆ ಭರತ ನಳ ನಹುಷಾದಿ ರಾಯರಿಗೆ ಇಷ್ಟು (ಧರ್ಮರಾಯನಷ್ಟು) ಗುಣವಿಲ್ಲವೆಂದು ಭೂಮಂಡಲದ ಜನರೆಲ್ಲಾ ಹೊಗಳುತ್ತಿದ್ದರು.
(ಪದ್ಯ -೪ ) |
ಪದ್ಯ - ೫
ಸಂಪಾದಿಸಿಬಳಿಕ ನೃಪವರ ಯುಧಿಷ್ಠಿರನಾಳ್ವ ದೇಶದೋಳ್|
ಕಳವು ಕೊಲೆ ಪಾದರಂ ಪುಸಿ ನುಸುಳು ವೈರವ |
ಟ್ಟುಳಿ ತೋಹು ಬೆದರು ಬೆಜ್ಜರ ಕಷ್ಟನಿಷ್ಠುರಂ ಗಜರು ಗಾವಳಿ ವಿವಾದ ||
ಮುಳಿಸು ಪೊಲೆಗಲಸು ಮೊರೆ ಸೆರೆ ಕೃತಕ ಕಾರ್ಪಣ್ಯ |
ಮಳಿವು ಪಳಿವನ್ಯಾಯ ಮರೆ ಮೋಸವಾಸಿ ತ |
ಲ್ಲಳ ತಳೆ ವಿಯೋಗಮಲಸಿಕೆ ಕರ್ಕಶಂಗಳಿವು ಮೊಳೆದೋರವೇವೇಳ್ವೆನು ||5||
ಬಳಿಕ ನೃಪವರ ಯುಧಿಷ್ಠಿರನು ಆಳ್ವ = ಆಳುವ, ದೇಶದೋಳ್ =ದೇಶದಲ್ಲಿ ಕಳವು, ಕೊಲೆ, ಪಾದರಂ =ವ್ಯಬಿಚಾರ, ಪುಸಿ =ಸುಳ್ಳು, ನುಸುಳು = ಅಡಗುವಿಕೆ, ವೈರವಟ್ಟುಳಿ- ವೈರ ಅಟ್ಟುಳಿ = ಆರ್ಭಟ, ತೋಹು = ತೊಂದರೆ, ಬೆದರು ಹೆದರಿಕೆ, ಬೆಜ್ಜರ = ಹೆದರಿಸುವುದು, ಕಷ್ಟನಿಷ್ಠುರಂ = ಕಷ್ಟ ಮತ್ತು ಕಠಿಣ ಮಾತು, ಗಜರು =ಗದರಿಸುವುದು, ಗಾವಳಿ = ಹಾವಳಿ, ವಿವಾದ = ಜಗಳ, ಮುಳಿಸು = ಸಿಟ್ಟು, ಪೊಲೆಗಲಸು= ಕೆಟ್ಟ-ಅಲಸು ಬೇಸರ, ಮೊರೆ = ಆರ್ತನಾದ, ಸೆರೆ = ನಿರ್ಬಂಧದಲ್ಲಡುವುದು, ಕೃತಕ = ಕೃತ್ರಿಮ, ಕಾರ್ಪಣ್ಯ = ಜಿಪುಣುತನ, ಮಳಿವು = ದರ್ಮರಣ, ಪಳಿವನ್ಯಾಯ - ಪಳಿವು ಅನ್ಯಾಯ = ಅಪನಿಂದೆ ಅನ್ಯಾಯ, ಮರೆ ಮೋಸವಾಸಿ = ಸತ್ಯವನ್ನು ಮರೆಮಾಚಿ ಮೋಸಮಾಡುವುದು, ತಲ್ಲಳ = ತಲ್ಲಣ (ಸಂಕಟ), ತಳೆ = ಮೂರ್ಛೆ, ವಿಯೋಗಮಲಸಿಕೆ - ವಿಯೋಗ, ಅಲಸಿಕೆ = ಸೋಮಾರಿತನ, ಕರ್ಕಶಂಗಳಿವು - ಕರ್ಕಶಗಳು =ಕಾಠಿಣ್ಯತೆ ಇವು ಮೊಳೆದೋರವೇವೇಳ್ವೆನು-ಮೊಳೆದೋರದು ಏವೇಳ್ವೆನು = ಕಾಣಿಸದು ಏನೆಂದು ಹೇಳಲಿ.
(ಪದ್ಯ -೫ ) |
ಪದ್ಯ - ೬
ಸಂಪಾದಿಸಿನೀತಿ ಚತುರತೆ ಕೀರ್ತಿ ಕಲ್ಯಾಣ ಭೋಗ ಸಂ |
ಪ್ರೀತಿ ಪರಹಿತ ವಿನಯ ಶುಭ ವಿಭವ ವಿಜಯ ವಿ |
ಖ್ಯಾತಿ ಕಲೆ ಸೌಭಾಗ್ಯಮಾರೋಗ್ಯ ಸೌಖ್ಯ ಮುನ್ನತ ಸತ್ಯ ನಿತ್ಯಭಕ್ತಿ ||
ಜಾತಿ ಧರ್ಮಾಚಾರ ನಿಷ್ಠೆ ದೈವಜ್ಞತೆ ವಿ |
ಭೂತಿ ಶಮೆ ದಮೆ ದಾನ ದಾಕ್ಷಿಣ್ಯಮೆಂಬಿವು ಮ |
ಹಾತಿಶಯಮೆನೆ ಪೆರ್ಚಿದುವು ಯುಧಿಷ್ಠಿರನರೇಶ್ವರನಾಳ್ವ ಭೂತಳದೊಳು||6||
ನೀತಿ ಚತುರತೆ ಕೀರ್ತಿ ಕಲ್ಯಾಣ ಭೋಗ =ಸುಖ, ಸಂಪ್ರೀತಿ ಪರಹಿತ ವಿನಯ ಶುಭ ವಿಭವ ವಿಜಯ ವಿಖ್ಯಾತಿ ಕಲೆ ಸೌಭಾಗ್ಯಮಾರೋಗ್ಯ-ಸೌಭಾಗ್ಯಂ ಆರೋಗ್ಯ ಸೌಖ್ಯ ಮುನ್ನತ ಸತ್ಯ ನಿತ್ಯಭಕ್ತಿ ಜಾತಿ ಧರ್ಮಾಚಾರ ನಿಷ್ಠೆ ದೈವಜ್ಞತೆ ವಿಭೂತಿ ಶಮೆ ದಮೆ ದಾನ ದಾಕ್ಷಿಣ್ಯಮೆಂಬಿವು- ದಾಕ್ಷಿಣ್ಯ ಎಂ ಇವು, ಮಹಾತಿಶಯಮೆನೆ - ಮಹಾ ಅತಿಶಯಂ ಎನೆ ಪೆರ್ಚಿದುವು = ಹೆಚ್ಚಿದವು ಯುಧಿಷ್ಠಿರನರೇಶ್ವರನಾಳ್ವ ಭೂತಳದೊಳು-ಯುಧಷ್ಠಿರನು ಆಳ್ವ = ಯುಧಷ್ಠಿರನು ಆಳುವ ದೇಶದಲ್ಲಿ (ಹೆಚ್ಚಿದವು).
|
ಪದ್ಯ - ೭
ಸಂಪಾದಿಸಿಕುಟಿಲ ಚಂಚಲ ಕಠಿನ ಕೃಶ ಮಾಂದ್ಯಮೆಂಬಿವು |
ತ್ಕಟ ಯೌವನಶ್ರೀವಿಲಾಸಿನಿಯರಳ ಕಾಳಿ |
ಚಟುಲ ಸುಕಟಾಕ್ಷ ವಕ್ಷೋಜಾತ ಮಧ್ಯ ಗತಿಗಳ ವಿಸ್ತರ(ವಿಲಾಸ)ದೊಳಲ್ಲದೆ ||
ಘಟಿಸದು ಮದಾವಸ್ಥೆ ನಿಗಳಬಂಧನದ ಸಂ |
ಕಟ ಹರಿದ್ವೇಷ ಮತಿಹೀನತೆಗಳೆಂಭಿವಿಭ |
ಘಟೆಯೊಳಲ್ಲದೆ ಸಲ್ಲದೆಲ್ಲಿಯುಂ ಧರ್ಮತನಯಂ ಪಾಲಿಸುವ ನೆಲದೊಳು ||7||
ಕುಟಿಲ ಚಂಚಲ ಕಠಿನ ಕೃಶ ಮಾಂದ್ಯಮೆಂಬಿವುತ್ಕಟ- ಮಾಂದ್ಯ ಎಂಬ ಇವು, ಯೌವನಶ್ರೀವಿಲಾಸಿನಿಯರಳಕಾಳಿ- ಯೌವನಶ್ರೀ (ಯುವತಿಯರ) +ವಿಲಾಸಿನಿಯರ+ ಅಳಕಾಳಿ (ಮುಂಗುರುಳು)
ಚಟುಲ ಸುಕಟಾಕ್ಷ ವಕ್ಷೋಜಾತ(=ಸ್ಥನಗಳು), ಮಧ್ಯ(=ಸೊಂಟ), ಗತಿಗಳ (=ಯುವತಿಯರ ನೆಡಿಗೆ) ವಿಸ್ತರದೊಳಲ್ಲದೆ-ವಿಸ್ತರದೊಳು (=ವಿಚಾರದಲ್ಲಿ/ವಿಲಾಸದೊಳು ಅಲಂಕಾರದಲ್ಲಿ ಅಲ್ಲದೆ ಬೇರೆ ಕಡೆ ಇಲ್ಲ.) ಅಲ್ಲದೆ (ಬೇರೆಕಡೆ) ಘಟಿಸದು (ಕಾಣಿಸದು); ಮದಾವಸ್ಥೆ (=ಮದ ಏರುವುದು) ನಿಗಳಬಂಧನದ (ಸರಪಳಿ ಬಂಧನದ) ಸಂಕಟ ಹರಿದ್ವೇಷ (ಸಿಂಹದ ದ್ವೇಷ) ಮತಿಹೀನತೆಗಳೆಂಭಿವಿಭಘಟೆಯೊಳಲ್ಲದೆ - ಮತಿಹೀನತೆಗಳು (ಮಂದಬುದ್ಧಿ)-ಇಭಘಟೆಯೊಳಲ್ಲದೆ (ಆನೆಯಲ್ಲಿ ಅಲ್ಲದೆ - ಬೇರೆಕಡೆ ಕಾಣದು), ಸಲ್ಲದೆಲ್ಲಿಯಂ - ಸಲ್ಲದು ಎಲ್ಲಿಯುಂ (ಬೇರೆಕಡೆ ಕಾಣದು) ಧರ್ಮತನಯಂ (ಧರ್ಮರಾಜನು) ಪಾಲಿಸುವ ನೆಲದೊಳು(=ರಾಜ್ಯದಲ್ಲಿ) ಪದ್ಯ - ಸೂಚನಾ ಪದ್ಯ)ಧರ್ಮರಾಜನು) ಪಾಲಿಸುವ ನೆಲದೊಳು(=ರಾಜ್ಯದಲ್ಲಿ)
(ಪದ್ಯ - ೭) |
ಪದ್ಯ - ೮
ಸಂಪಾದಿಸಿಗಾರುಡದೊಳಹಿತತ್ವಮಾರಣ್ಯದೊಳ್ ದಾನ |
ವಾರಣಂ ಚಾರುಪ್ರವಾಳಮಣಿ ರುಚಿಯೊಳ್ ಸ |
ದಾರುಣಂ ಸರಸಿಭೂಲ್ ಕಲಹಂಸಮಯಮುತ್ಪಲಾಕ್ಷಿಯರ ಕಂಧರದೊಳು |
ಹಾರವಲಯಂ ಭೂರುಹದೊಳನೇಕಾಗ್ರತೆ ನ |
ವಾರಾಮದೊಳ್ ಮಹಾಶೋಕಂ ವಸಂತದೊಳ್ |
ಮಾರಹಿತಮುಂಟಲ್ಲದಿಲ್ಲಮಿವು ಮತ್ತೆಲ್ಲಿಯಂ ಧರ್ಮಜನ ನೆಲದೊಳು ||8||
[ಪ್ರತಿಯೊಂದಕ್ಕೂ ಧರ್ಮಜನ ನೆಲದೊಳು = ರಾಜ್ಯದಲ್ಲಿ ಎಂದು ಸೇರಿಸಿಕೊಳ್ಳಬೇಕು] ಗಾರುಡದೊಳಹಿತತ್ವಮಾರಣ್ಯದೊಳ್ -ಗಾರುಡದೋಳ್ ಅಹಿತತ್ವಂ (+ಆರಣ್ಯದೊಳ್) (ಗಾರುಡ ವಿದ್ಯೆಯಲ್ಲಿ (ಅಹಿ=ಸರ್ಪ)ಸರ್ಪದ ವಿಷಯ ಹೇಳುವಾಗ ಮಾತ್ರಾ ಅಹಿತತ್ವವಿದೆ, ಎಂದರೆ 'ಅಹಿತತ್ವ' (ಅಹಿತ=ಹಿತವಲ್ಲದ್ದು) 'ಹಿತವಲ್ಲ' ಎಂಬ ಪದ ಪ್ರಯೋಗವೇ ಇಲ್ಲ; ಆರಣ್ಯದಲ್ಲಿ ಆನೆಯ ವಿಷಯದಲ್ಲಿ ಮಾತ್ರಾ (ದಾನ = ಆನೆಯ ಮದೋದಕ) 'ದಾನವಾರಣಂ' -ದಾನವಿಲ್ಲ ಎಂಬ ಪದ ಬರುವುದು; ಹವಳದ ಮಣಿಯ ವಿಷಯದಲ್ಲಿ ಮಾತ್ರಾ 'ಸದಾರುಣಂ' (ಸದಾ = ಯಾವಾಗಲೂ ಅರುಣ=ಕೆಂಪು ರಕ್ತ )ಸದಾಕೆಂಪು ಎನ್ನುವರು, ಹವಳದಲ್ಲಿ ಮಾತ್ರಾ ಹೇಳಲಾಗುವುದು; ಕಲಹಂಸಮಯ - ಜಗಳದ ಸಮಯ (ಕಲಹಂ+ಸಮಯ) ಎನ್ನುವ ಪದ ಸರೋವರದಲ್ಲಿ ಹಂಸಗಳ ಸಮೂಹಕ್ಕೆ (ಶಬ್ದಮಾದುವ ಕಲ+ಹಂಸಮಯ)ಮಾತ್ರಾ ಉಪಯೋಗಿಸಲಾಗುವುದು; ಹೆಣ್ಣು ಮಕ್ಕಳ ಕುತ್ತಿಗೆಯಲ್ಲಿರುವ ಹಾರಕ್ಕೆ ಮಾತ್ರಾ 'ಹಾರವಲಯ' ಎನ್ನುವರು, ಹಾ! ಎಂಬ ದುಃಖದ ರವ/ಶಬ್ದ, ಇನ್ನೆಲ್ಲಿಯೂ ಇಲ್ಲ. ಮರದಲ್ಲಿ ಮಾತ್ರಾ ಅನೇಕ ರೆಂಬೆಗಳು ಎನ್ನುವಾಗ ಅನೇಕಾಗ್ರತೆ = ಅಸ್ಥಿರ ಚಿತ್ತತೆ ಎಂಬ ಪದ ಬರುವುದು, ಇನ್ನೆಲ್ಲಿಯೂ ಇಲ್ಲ. ಉದ್ಯಾನ ವನದಲ್ಲಿ ಮಹಾ ಅಶೋಕಂ -ದೊಡ್ಡ ಅಶೋಕಮರ ಇದೆ ಎನ್ನುವಾಗ ಮಾತ್ರಾ 'ಮಹಾಶೋಕಂ', ಪದ ಹೇಳುವರು, ಮತ್ತೆಲ್ಲಿಯೂ ಮಹಾಶೋಕ=ದುಃಖ ಎಂಬ ಪದ ಇಲ್ಲ. ವಸಂತಮಾಸದಲ್ಲಿ ಮಾತ್ರಾ 'ಮಾರಹಿತಂ'(ಮನ್ಮಥನಿಗೆ ಹಿತ) ಎಂಬ ಪದ ಉಪಯೋಗ, ಧರ್ಮಜನ ನೆಲದೊಳು - ವಸಂತದಲ್ಲಿ ಪದ, ಮಾ=ಸಂಪತ್ತು(ಲಕ್ಷ್ಮಿ) ರಹಿತಂ=ಇಲ್ಲದಿರುವುದು ಎಂಬ ಅರ್ಥದ ಪದ ಪ್ರಯೋಗವಿಲ್ಲ .
(ಪದ್ಯ - ೮) |
ಪದ್ಯ - ೯
ಸಂಪಾದಿಸಿಕೊಡೆಯೆಂಬರಾತಪತ್ರವನುದರದೇಶಮಂ |
ಪೊಡೆಯೆಂಬರೊಲಿದು ಮಂಥನವ ನೆಸಗೆಂಬುದಂ |
ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು ||
ಮಡಿಯೆಂಬರಂಬರದ ಧೌತಮಂ ಕಬರಿಯಂ |
ಮುಡಿಯೆಂಬರೆಡೆವಿಡದೆ ಮುಸುಕಿರ್ದ ಮೇಘವರಂ |
ಜಡಿಯೆಂಬರುರುಶಿಲೆಯನರೆಯೆಂಬರಲ್ಲದಿವ ನುಡಿಯರವನಾಳ್ವಿಳೆಯೊಳು ||9||
ಅವನ (ಧರ್ಮಜನ) ರಾಜ್ಯದಲ್ಲಿ ಕೊಡೆಯೆಂಬರು ಆತಪತ್ರವನು =ಛತ್ರಿಯನ್ನು, ಉದರದೇಶಮಂ= ಹೊಟ್ಟೆಯನ್ನ ಮಾತ್ರಾ ಪೊಡೆಯೆಂಬರು(ಪೊಡೆ=ಹೊಡೆ=ಹೊಟ್ಟೆ) ಒಲಿದು=ಪ್ರೀತಿಯಿಂದ ಮಂಥನವನೆಸಗೆಂಬುದಂ - (ಮೊಸರು ಕಡೆಯುವುದು) ಮಂಥನವನು + ಎಸಗು =ಮಾಡು + ಎಂಬುದನ್ನು ಕಡೆ ಎನ್ನುವರು, (ಕಡಿ = ಕತ್ತರಿಸು ಎಂಬ ಬೈಗುಳ -ಎನ್ನರು) ಆರಡಿಯನು = ಜೇನು ಹುಳವನ್ನು 'ಅಳಿ' (ಅಳಿ = ಸಾಯಿ ಎನ್ನರು) ಉದಕ (ನೀರು) ಪ್ರವಾಹಮಂ 'ತೊರೆ'(ಹಳ್ಳ)ಯೆಂಬರು, ತೊರೆ =ಬಿಟ್ಟುಹೋಗು ಎನ್ನುವ ಮಾತಿಲ್ಲ. ಅಂಬರದ ಧೌತಮಂ = ತೊಳೆದ ಬಟ್ಟೆಯನ್ನು 'ಮಡಿ'ಯೆಂಬರು; ಮಡಿ= ಸಾಯಿ ಎನ್ನು ಅರ್ಥದಲ್ಲಿ ಹೇಳರು; ಕಬರಿಯಂ (ಕೂದಲ ತುರುಬನ್ನು ) ಮುಡಿಯೆಂಬರು, ಎರೆಡೆವಿಡದೆ=ಎಡಬಿಡದೆ ಮುಸುಕಿರ್ದ=ಮುಸುಕಿದ, ಮೇಘವರಂ= ಮೋಡವನ್ನು ಜಡಿಯೆಂಬರು 'ಜಡಿ' ಎನ್ನುವರು; ಉರುಶಿಲೆಯನು = ದೊಡ್ಡಕಲ್ಲನ್ನು 'ಅರೆ' ಎಂಬರು ಅಲ್ಲದೆ; ಮೇಲೆ ಹೇಳಿದ ಸಂದರ್ಭದಲ್ಲಿ ಅಲ್ಲದೆ ಇವ = ಇವನ್ನು(ಈ ಪದಗಳನ್ನು) ನುಡಿಯರು = ಹೇಳರು ಇವನ +ಆಳ್ವಿಳೆಯೊಳು.
(ಪದ್ಯ ೯) |
ಪದ್ಯ - ೧೦
ಸಂಪಾದಿಸಿಎಲ್ಲರುಂ ಭೋಗಿಗಳ್ ಪಾತಾಳಗತರೆನಿಸ |
ರೆಲ್ಲರುಂ ವಿದ್ಯಾಧರರ್ ನಭೋಜನರೆನಿಸ |
ರೆಲ್ಲರುಂ ದಾಕ್ಷಿಣ್ಯವರ್ತಿಗಳ್ ತಿಳಿಯೆ ಲಂಕಾನಿವಾಸಿಗಳೇನಿಸರು ||
ಎಲ್ಲರುಂ ಸುಮನೋರತರ್ ಮಧುವ್ರತರೆನಿಸ |
ರೆಲ್ಲರುಂ ಗುಣಯುತರ್ ಕಠಿನರೆನಿಸರ್ ಮನುಜ |
ರೆಲ್ಲರುಂ ಕಾಂತಾರಮಿತಭಾಗ್ಯಸಂಪದರ್ ಕುಜನರೆನಿಸರವನಿಳೆಯೊಳು ||10||
(ಅವನಿಳೆಯೊಳು -ಅವನ ಇಳೆಯೊಳ್ ಧರ್ಮಜನ ರಾಜ್ಯದಲ್ಲಿ), ಎಲ್ಲರುಂ ಭೋಗಿಗಳ್ ಪಾತಾಳಗತರೆನಿಸರು (+ಎಲ್ಲರುಂ) - ಎಲ್ಲರೂ ಸುಖಿಗಳು, (ಬೋಗಿ= ಸರ್ಪ)ಪಾತಾಳಗತಿಗಳು ಎನಿಸರು - ಆದರೆ ಪಾತಾಳದ ಸರ್ಪಲೋಕದಲ್ಲಿರುವ ಸರ್ಪಗಳಲ್ಲ; ಎಲ್ಲರುಂ ವಿದ್ಯಾಧರರ್ -ಎಲ್ಲರೂ ವಿದ್ಯಾಧರರು= ವಿದ್ಯಾವಂತರು; ಆದರೆ ದೇವತೆಗಳ ಸಮಾನರಾದ ವಿದ್ಯಾಧರರಂತೆ ನಭೋ + ಜನರು ಎನಿಸರು = ಆಕಾಶ(ನಭ=ಆಕಾಶ)ವಾಶಿಗಳಲ್ಲ; ಎಲ್ಲರುಂ ದಾಕ್ಷಿಣ್ಯವರ್ತಿಗಳ್ ತಿಳಿಯೆ ಲಂಕಾನಿವಾಸಿಗಳೇನಿಸರು ಎಲ್ಲರೂ ದಾಕ್ಷಿಣ್ಯಸ್ವಭಾವದವರು, ಆದರೆ ದಕ್ಷಿಣ ದೇಶದ ಲಂಕಾವಾಸಿಗಳಲ್ಲ. ಎಲ್ಲರುಂ ಸುಮನೋರತರ್ ಮಧುವ್ರತರೆನಿಸ ಎಲ್ಲರೂ ಸುಮನ ರತರು(ಸುಮನ=ಹೂವು) =ಹೂವನ್ನು ಉಪಯೋಗಿಸುವವರು, ಆದರೆ ಮಧುವ್ರತರಲ್ಲ ಮಧುವನ್ನು ಸೇವಿಸುವವರಲ್ಲ ಅಥವಾ ಮಧುವನ್ನು ಸೇವಿಸುವ ದುಂಬಿಗಳಲ್ಲ; ರೆಲ್ಲರುಂ ಗುಣಯುತರ್ ಕಠಿನರೆನಿಸರ್ ಮನುಜ -ಎಲ್ಲರೂ ಗುಣವಂತರು, ಆದರೆ (ಗುಣ+ಅಯುತರ್?) ಕಠಿಣ ಗುಣದವರಲ್ಲ / ಗುಣವಿಹೀನರಲ್ಲ; ರೆಲ್ಲರುಂ ಕಾಂತಾರಮಿತಭಾಗ್ಯಸಂಪದರ್ = ಎಲ್ಲರೂ ಕಾಂತಾರ = ಕಾಡು, ಮಿತ ಭಾಗ್ಯ ಸಂಪದರು - ಕಾಡಿನಲ್ಲಿ ಮಿತವಾಗಿ ಸುಖಪಡುವವರು, ಆದರೆ ಕುಜನರೆನಿಸರವನಿಳೆಯೊಳು -ಕುಜನರು ಎನಿಸರು ಅವನ ಇಳೆಯೊಳು - (ಕುಜನ = ಕಿರಾತ ಅರಣ್ಯವಾಸಿ) ಅರಣ್ಯವಾಸಿಗಳಾದ ಕಿರಾತರು ಎನಿಸರು=ಅಲ್ಲ : ಅವನ ಇಳೆಯೊಳು (ರಾಜ್ಯದಲ್ಲಿ).
(ಪದ್ಯ - ೧೦) |
ಪದ್ಯ - ೧೧
ಸಂಪಾದಿಸಿವಸುಗಳಿಂದುಪಭೋಗ್ಯಮಾಗದೊಡೆ ಸೌರಭ್ಯ |
ರಸದಿಂದಮಾರೋಗ್ಯಮೆನಿಸದೊಡೆ ಸಂತತಂ |
ವಿಶದ ಸುಮನೋಯೋಗ್ಯಮಲ್ಲದೊಡೆ ಹರಿವೈಭವ(ಸು)ಶ್ಲಾಘ್ಯಮಲ್ಲದಿರಲು ||
ಲಸದಪ್ಸರೋದ್ಯಾನ ಸೌಭಾಗ್ಯಮೊಂದಿರದೊ |
ಡೆಸೆವ ರಾಜೇಂದ್ರಂಗೆ ಸೊಗಸುವೀಡಾಗಿ ರಂ |
ಜಿಸದೊಡೆ ಹಸ್ತಿನಾವತಿಯನಮರಾವತಿಗೆ ಸರಿಯೆಂಬರೇ ಪ್ರೌಢರು ||11||
ಧರ್ಮಜನ ರಾಜ್ಯದಲ್ಲಿ ; ವಸುಗಳಿಂದುಪಭೋಗ್ಯಮಾಗದೊಡೆ - ವಸುಗಳಿಂದ ಉಪಭೋಗ್ಯಂ ಆಗದಿರ್ದೊಡೆ = ವಸುಗಳಿಂದ (ವಸು = ವಸು ದೇವತೆಗಳು,ಧನ) ಉಪಭೋಗ್ಯ = ಅನುಭವಿಸುವುದು, ಆಗದೊಡೆ= ಆಗಿರದಿದ್ದರೆ; (ಅನುಭವಿಸಲು ಬೇಕಾದಷ್ಟು ಧನ ಸಂಪತ್ತು ಇಲ್ಲದಿದ್ದರೆ), ಸೌರಭ್ಯ ರಸದಿಂದಮಾರೋಗ್ಯಮೆನಿಸದೊಡೆ - ಸೌರಭ್ಯ = ಹಸು = ಕಾಮಧೇನು ರಸದಿಂದೆ = ಹಾಲಿನಿಂದ (ಮತ್ತು ರಸ = ಶೃಂಗಾರಾದಿಗಳು) ಆರೋಗ್ಯವು ಎನಿಸದೊಡೆ= ಆರೋಗ್ಯ ಇಲ್ಲದಿರುತ್ತಿದ್ದರೆ; ಸಂತತಂ ವಿಶದ ಸುಮನೋಯೋಗ್ಯಮಲ್ಲದೊಡೆ - ಸಂತತಂ = ಸದಾ, ಹರಿವೈಭವ(ಸು)ಶ್ಲಾಘ್ಯಂ =ಸ್ತೋತ್ರ, ಇಲ್ಲದಿರಲು = ಇಲ್ಲದಿರುತ್ತಿದ್ದರೆ (ಯಾವಾಗಲೂ ಇರುವುದು ಎಂದು ಭಾವ); ಲಸದಪ್ಸರೋದ್ಯಾನ ಸೌಭಾಗ್ಯಮೊಂದಿರದೊಡೆಸೆವ ರಾಜೇಂದ್ರಂಗೆ ಸೊಗಸುವೀಡಾಗಿ ರಂಜಿಸದೊಡೆ - ಲಸತ್ = ಪ್ರಕಾಶಿಸುತ್ತರುವ ಅಪ್ಸರ =ಸರೋವರ, ಉದ್ಯಾನ ಸೌಭಾಗ್ಯಂ = ಭಾಗ್ಯವು ಒಂದಿರದೊಡೆ = ಹೊಂದಿರದಿರುತ್ತಿದ್ದರೆ ಅಥವಾ ಒಂದಲ್ಲದೆ ಅನೇಕ ಇರದಿದ್ದರೆ, ಹಸ್ತಿನಾವತಿಯನಮರಾವತಿಗೆ ಸರಿಯೆಂಬರೇ ಪ್ರೌಢರು - ಪ್ರೌಢರು = ತಿಳಿದವರು ಹಸ್ತಿನಾವತಿಯನು ಹಸ್ತನಾವತಿ ರಾಜ್ಯವನ್ನು ಅಮರಾವತಿಗೆ ಸರಿ = ಸಮಾನವಾಗಿದೆ ಎಂಬರೇ = ಎಂದು ಹೇಳುವರೇ? ಹಸ್ತಿನಾವತಿ ಎಲ್ಲಾ ವಿಧದಲ್ಲೂ ಇಂದ್ರನ ಅಮರಾವತಿಗೆ ಸಮಾನವಾಗಿತ್ತು. (ಉತ್ಪ್ರೇಕ್ಷಾಲಂಕಾರ)
(ಪದ್ಯ - ೧೧) |
ಪದ್ಯ ೧೨
ಸಂಪಾದಿಸಿನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ |
ನಾಗೇಂದ್ರನಂ ಬುದ್ಧಿಸಿತ್ತು ಪುರಮರ್ದ |
ನಾಗೇಂದ್ರನಂ ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ ||
ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ |
ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಥ |
ನಾಗೇಂದ್ರಧರನ ಜಾತೆಯ ನಿಲವುಗೆಡಿಸಿ ನೆರೆ ರಾಜಿಸಿತು ಮೂಜಗದೊಳು ||12||
ಬಳಿಕ ಧರ್ಮಜನ ಕೀರ್ತಿ, ನಾಗೇಂದ್ರನಂ = ಆದಿಶೇಷನ್ನು, ಬಿಡದೆ ತಲೆವಾಗಿಸಿತ್ತಮರ -ತಲೆವಾಗಿಸಿತ್ತು + (ಅಮರ) =ಆದಿಶೇಷನನ್ನೂ ತಲೆಬಾಗಿಸಿತ್ತು; ಅಮರ = ದೇವಲೋಕ ನಾಗೇಂದ್ರನಂ (ನಾಗ = ಆನೆ) ಬುದ್ಧಿಸಿತ್ತು= ದೇವಲೋಕದ ಐರಾವತವನ್ನೂ ಮಂಕಾಗಿಸಿತು; ಪುರಮರ್ದ = ನಾಗೇಂದ್ರನಂ = ತ್ರಿಪುರರನ್ನು ಕೊಂದ ಈಶ್ವರನನ್ನೂ ನಿಂದು(ಸ್ತಬ್ಧವಾಗುವಂತೆ) ಬೆರಗಾಗಿಸಿತ್ತು+ (ಅಮಲ ಧರ್ಮಜನ ಕೀರ್ತಿ); ಬಳಿಕ ನಾಗೇಂದ್ರಶಯನಾಲಯವ - ನಾಗೇಂದ್ರ + ಶಯನ + ಆಲಯವ = ವಾಸುಕಿಯ ಹಾಸಿಗೆ ಇರುವ ಕ್ಷೀರಸಮುದ್ರವನ್ನು, ಜಡಧಿಯೆನಿಸಿ -ಜಡಧಿ ಎನಿಸಿ ಪ್ರಯೋಜನವಿಲ್ಲದ್ದು ಎನ್ನಿಸಿ, ನುತ ನಾಗೇಂದ್ರವರದಾಯುಧವ ನುತ-ಸ್ತುತಿಸಿದ ನಾಗೇಂದ್ರ =ಗಜೇಂದ್ರ,-ಗಜೇಂದ್ರನನ್ನು ರಕ್ಷಿಸಿದ ಆಯುಧವ ಚಕ್ರವನ್ನು ಪೊಳ್ಳುಗಳೆದು = ಶಕ್ತಿಹೀನವೆಂದು, ಮಥನಾಗೇಂದ್ರಧರನ ಜಾತೆಯ ನಿಲವುಗೆಡಿಸಿ - ಮಥ = (ಸಮುದ್ರವನ್ನು)ಕಡೆಯಲು ಉಪಯೋಗಿಸಿದ ಮಂದರಪರ್ವತವನ್ನು ಧರ= ಹೊತ್ತ ವಿಷ್ಣುವಿನಿಂದ ಜಾತೆ = ಹುಟ್ಟಿದ ಗಂಗೆಯು ಶ್ರೇಷ್ಟವೆಂಬ ನಿಲುವುಗೆಡಿಸಿ = ನಿಲುವು = ಅಭಿಪ್ರಾಯವನ್ನು ಕೆಡಿಸಿ= ಸುಳ್ಳೆಂಬಂತೆ ಮಾಡಿ, (ಧರ್ಮಜನ ಕೀರ್ತಿ) ನೆರೆ =ಬಹಳವಾಗಿ, ರಾಜಿಸಿತು =ಶೋಭಿಸಿತು, ಮೂಜಗದೊಳು = ಮೂರೂ ಲೋಕದಲ್ಲಿ (ಸ್ವರ್ಗ ಮರ್ತ್ಯ ಪಾತಾಳ).
|
ಪದ್ಯ ೧೩
ಸಂಪಾದಿಸಿಹರಿಯಂತೆ ಬಲಯುತಂ ಶಿವನಂತೆ ರಾಜಶೇ |
ಖರನಬ್ಜಭವನಂತೆ ಚತುರಾನನಂ ಸರಿ |
ದ್ವರನಂತೆ ರತ್ನಾಕರಂ ದಿವಾಕರನಂತೆ ನಿರ್ದೋಷನಿಂದ್ರನಂತೆ ||
ಪರಿಚಿತಸುರಭಿರಮ್ಯನಮೃತಾರ್ಚಿಯಂತೆ ವಿ |
ಸ್ತರಿತಕುವಲಯನೆಂದು ಧರ್ಮಜನ ಧರೆ ಪೊಗಳು |
ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸನೊಂದುದಿವಸಂ ಬಂದನು ||13||
ಬಳಿಕ ಧರ್ಮಜನಿಗೆ ತ್ರಿಮೂರ್ತಿಗಳ ಹೋಲಿಕೆಯದೆ ಹೇಗೆಂದರೆ: ಹರಿಯಂತೆ = ವಿಷ್ಣುವಿನಂತೆ, ಬಲಯುತಂ= ಶಕ್ತಿಶಾಲಿ (ಶಕ್ತಿಶಾಲಿಯಾದ್ದರಿಂದ ಹರಿಗೆ ಹೋಲಿಕೆ); ಶಿವನಂತೆ ರಾಜಶೇಖರನಬ್ಜಭವನಂತೆ ರಾಜರಲ್ಲಿ ಶ್ರೇಷ್ಟನಾದುದರಿಂದ ರಾಜಶೇಖರ ಶಿವನಿಗೆ ಹೋಲಿಕೆ (ರಾಜಶೇಖರ = ಚಂದ್ರನನ್ನು ಧರಿಸಿದವ; ಉಡುರಾಜ = ತಾರೆಗಳಿಗೆ ರಾಜ)); ಧರ್ಮಜನು ಚತುರಾನನಾದ ನಾಲ್ಕು ಮುಖದ ಬ್ರಹ್ಮನನ್ನೂ ಹೋಲುವನು- ಚತುರ+ಆನನ =ಜಾಣನ ಮುಖ - ಲಕ್ಷಣವಿದ್ದು ಚತುರಾನನಾಗಿದ್ದಾನೆ; ಸರಿದ್ವರನಂತೆ =ಸಮುದ್ರನಂತೆ ರತ್ನಾಕರಂ=ರತ್ನಗಳನ್ನು ಹೊಂದಿದವನು; ದಿವಾಕರನಂತೆ ನಿರ್ದೋಷನಿಂದ್ರನಂತೆ ನಿರ್ದೋಷನು +(ಇಂದ್ರನಂತೆ)- ನಿರ್ದೋಷನು =ದಿವಾಕರನಂತೆ -ಸೂರ್ಯನಂತೆ ನಿರ್ದೋಷನು; ಇಂದ್ರನಂತೆ ಪರಿಚಿತಸುರಭಿರಮ್ಯನಮೃತಾರ್ಚಿಯಂತೆ; ಇಂದ್ರನಂತೆ ಪರಿಚಿತ ಸುರಭಿ ಮನ್ಯನು,ಇಂದ್ರನಿಗೆ ಕಾಮಧೇನು ಸುರಭಿ ಹಸುಗಳು ಇರುವಂತೆ ಅನೇಕ ಗೋವುಗಳನ್ನುಳ್ಳವನು; ಅಮೃತಾರ್ಚಿಯಂತೆ ಅಮೃತಾರ್ಚಿ==ಚಂದ್ರನಂತೆ ; (ಮಖ ಕಾಂತಿ) ವಿಸ್ತರಿತಕುವಲಯನೆಂದು - ವಿಸ್ತರಿತ ಕುವಲಯ =ನೈದಿಲೆ, (ಕಮಲ),ಪೂರ್ಣಚಂದ್ರನಂತೆ (ಶಾಂತ ಕಾಂತಿಯುಕ್ತ) ಅಗಲವಾದ ಮುಖವುಳ್ಳವನು. (ಹೀಗೆ) ಧರ್ಮಜನ ಧರೆ ಪೊಗಳುತಿರೆ=ಹೋಗಳುತ್ತಿರುವಾಗ ಹಸ್ತಿನಾವತಿಗೆ ವೇದವ್ಯಾಸನು, ನೊಂದುದಿವಸಂ ಒಂದು ದಿವಸ ಬಂದನು; ಬಂದನು.
|
ಪದ್ಯ ೧೪
ಸಂಪಾದಿಸಿಬರಲಾ ನೃಪಾಲಕಂ ಸೋದರರ್ವೆರಸಿ ಮುನಿ |
ವರನ ಪದಕೆರಗಿದೊಡೆ ಮಣಿದೆತ್ತಿ ಬೋಳೈಸಿ |
ಪರಸಿ ಮಂತ್ರಾಕ್ಷತೆಯನಿತ್ತು ಸತ್ಕಾರಮಂ ಕೊಂಡು ಕುಳ್ಳಿರ್ದ ಬಳಿಕ ||
ಅರಸನನುತಾಪದಿಂ ತಲೆವಾಗಿ ಮಾತಾಡ |
ದಿರುತಿರ್ದನನಿಲ ಸಂಚಾರಮೊಂದಿನಿತಿಲ್ಲ |
ದುರಿವ ಕಡುವೇಸಗೆಯ ಬಿಸಿಲಿಂದ ಬಸವಳಿದ ಕೋಮಲರಸಾಲದಂತೆ ||14||
ಬರಲಾ- ಬರಲು+ ಆ ನೃಪಾಲಕಂ =ರಾಜನು, ಸೋದರರ್ವೆರಸಿ- ಸೋದರ್ ವೆರಸಿ = ತಮ್ಮಂದಿರೊಡನೆ, ಮುನಿವರನ ಪದಕೆರಗಿದೊಡೆ = ಮನಿ ಶ್ರೇಷ್ಟನ ಪಾದಗಳಿಗೆ ನಮಸ್ಕರಿದಾಗ, ಮಣಿದೆತ್ತಿ ಮಣಿದಿ ಎತ್ತಿ= ಬಗ್ಗಿ ಎತ್ತಿ, ಬೋಳೈಸಿ = ತಲೆಸವರಿ, ಪರಸಿ =ಹರಸಿ, ಮಂತ್ರಾಕ್ಷತೆಯನಿತ್ತು =ಮಂತ್ರಾಕ್ಷತೆಯನ್ನು, ಇತ್ತು = ಕೊಟ್ಟು, ಸತ್ಕಾರಮಂ ಕೊಂಡು =ಸತ್ಕಾರವನ್ನು ಪಡೆದು, ಕುಳ್ಳಿರ್ದ=ಕುಳಿತ ಬಳಿಕ; ಅರಸನನುತಾಪದಿಂ ತಲೆವಾಗಿ ಮಾತಾಡದಿರುತಿರ್ದನನಿಲ - ಅರಸನು ಅನುತಾಪದಿಂ= ದುಃಖದಿಂದ ತಲೆವಾಗಿ = ತಲೆಬಗ್ಗಿಸಿಕೊಂಡು ತಲೆಬಗ್ಗಿಸಿಕೊಂಡು, ಮಾತಾಡದೆ ಇರುತಿರ್ದನು= ಇದ್ದನು ಅನಿಲ ಸಂಚಾರಂ = ಗಾಳಿಯ ಸಂಚಾರವು, ಒಂದು ಇನಿತು ಇಲ್ಲದೆ = ಸ್ವಲ್ಪವೂ ಇಲ್ಲದೆ, ಉರಿವ ಕಡುವೇಸಗೆಯ - ಕಡು ವೇಸಗೆಯ = ತೀವ್ರ ಬಿಸಿಲಿಂದ ಬಸವಳಿದ = ಬಾಡಿದ, ಕೋಮಲರಸಾಲದಂತೆ -ಕೋಮಲ ರಸಾಲದಂತೆ - ರಸಾಲದ ಹಾಗೆ ರಸಾಲ = ಮಾವಿನ ಮರ / ಎಳೆಯ ಮಾವಿನ ಮರದಂತೆ (ಮಾತಾಡದೆ ಇರುತಿರ್ದನು= ಇದ್ದನು).
(ಪದ್ಯ - ೧೪) |
ಪದ್ಯ - ೧೫
ಸಂಪಾದಿಸಿಕಂಡನರಸನ ಭಾವಮಂ ಬಳಿಕ ನಗುತೆ ಬೆಸ |
ಗೊಂಡನಿಂತೆಂದಾ ಮುನೀಂದ್ರನೆಲೆ ನೃಪತಿ ಭೂ |
ಮಂಡಲದ ಸಕಲ ಸಾಮ್ರಾಜ್ಯಮಂ ಪಾಲಿಸುವ ನಿನ್ನ ಸಂತಸದೇಳ್ಗೆಗೆ ||
ಖಂಡನದ ಮಾಳ್ಪುದಾನನದಿರವು ಸಾಕು ಮನ |
ದಂಡಲೆಯ ತೊರೆಯೆನಲ್ ಜೀಯ ಸಂತಾಪದಿಂ |
ಬೆಂಡಾದುದೆನ್ನೊಡಲ್ ಸೈರಿಸಲರಿಯೆನೆಂದೊಡಾ ತಪೋನಿಧಿ ನುಡಿದನು ||15||
ಕಂಡನರಸನ -ಕಂಡನು ಅರಸನ ಭಾವಮಂ = ಚಿಂತೆಯ ಭವನೆಯನ್ನು ಕಂಡನು. ಬಳಿಕ ನಗುತೆ ಬೆಸ ಗೊಂಡನಿಂತೆಂದಾ - ಬಳಿಕ ನಗುತ್ತಾ ಬೆಸ ಗೊಂಡನು ಕೇಳಿದನು,ಇಂತೆಂದು = ಹೀಗೆ, ಆ ಮುನೀಂದ್ರನೆಲೆ ನೃಪತಿ - ಆ ಮುನೀಂದ್ರನು \, ಎಲೆ ನೃಪತಿ =ರಾಜನೇ, ಭೂ ಮಂಡಲದ ಸಕಲ ಸಾಮ್ರಾಜ್ಯಮಂ = ಸಾಮ್ರಾಜ್ಯವನ್ನು ಪಾಲಿಸುವ ನಿನ್ನ ಸಂತಸದೇಳ್ಗೆಗೆ = ಸಂತಸದ ಏಳ್ಗೆಗೆ = ಏಳಿಗೆಗೆ, ಖಂಡನದ = ವಿರುದ್ಧದ, ಮಾಳ್ಪುದಾನನದಿರವು - ಮಾಳ್ಪುದು ಆನನದ ಇರುವು = ಆನನದ ಇರುವು ಮುಖದ ಲಕ್ಷಣ, ವಿರುದ್ಧವಾಗಿದೆ, ಸಾಕು ಮನದಂಡಲೆಯ ತೊರೆಯೆನಲ್ - ಸಾಕು ಮನದ ಅಂಡಲೆಯ = ಚಿಂತೆಯನ್ನು ತೊರೆ ಎನಲ್ =ಬಿಡು ಎನ್ನಲು, ಜೀಯ ಸಂತಾಪದಿಂ ಬೆಂಡಾದುದೆನ್ನೊಡಲ್ ಸೈರಿಸಲರಿಯೆನೆಂದೊಡಾ ಜೀಯ = ಹಿರಿಯನಾದ ಮುನಿಯೇ, ಸಂತಾಪದಿಂದ (ತೀವ್ರ ದುಃಖದಿಂದ) ಬೆಂಡಾದುದು ಎನ್ನ ಒಡಲ್, ಸೈರಿಸಲು ಅರಿಯೆನು, ಎಂದೊಡೆ = ಎನ್ನಲಾಗಿ, ಆ ತಪೋನಿಧಿ ನುಡಿದನು.
(ಪದ್ಯ - ೧೫) |
ಪದ್ಯ - ೧೬
ಸಂಪಾದಿಸಿಕೆತ್ತ ಬಲ್ಗತ್ತಲೆಗೆ ತರಣಿ ಮುಂಗಾಣದಿರೆ |
ಪೊತ್ತುವೆಳಗಂ ಬೇರೆ ತೋರ್ಪರಾರ್ ಬಿಡದೆ ಘ |
ರ್ಮೋತ್ತರಕೆ ಮಾರುತಂ ಬೆಮರ್ದೊಡಾರ್ ಬೀಸುವರ್ ಬಳಿಕಾಲವಟ್ಟದಿಂದೆ ||
ಕೃತ್ರಿಮದ ವಿಷದ ಸೋಂಕಿಗೆ ಗರುಡನಳವಳಿಯೆ |
ಮತ್ತೆ ರಕ್ಷೆಗೆ ಮಂತ್ರಿಸುವರಾರು ಭೂಪ ನೀ |
ನೊತ್ತುವನುತಾಪಕೆಡೆಗೊಟ್ಟೊಡಾರ್ ಬಿಡಿಸುವರ್ ಪೇಳೆಂದನಾ ಮುನಿಪನು ||16||
ಕೆತ್ತ = ಆವರಿಸಿರುವ, ಬಲ್ಗತ್ತಲೆಗೆ ಬಲ್ ಕತ್ತಲಿಗೆ =ಕಗ್ಗತ್ತಲೆಗೆ,ತರಣಿ = ಸೂರ್ಯನು, ಮುಂಗಾಣದಿರೆ = ದಿಕ್ಕುತೋರದೆ ಹೆದರಿದರೆ, ಪೊತ್ತುವೆಳಗಂ - ಪೊತ್ತು ವೆಳಗಂ = ಬೆಳಕನ್ನು ಹೊತ್ತ,(ಸಮಯ) ಹಿಡಿದು, ಬೇರೆ =ಬೇರಯವರು ಯಾರು, ತೋರ್ಪರಾರ್ =ತೋರಿಸುವರು? ಬಿಡದೆ +ಒಂದೇಸಮನೆ (ಎಡಬಿಡದೆ), ಘರ್ಮೋತ್ತರಕೆ = ಬೇಸಿಗೆಗೆ (ಘರಮಿ =ಬಿಸಿ) ಮಾರುತಂ ಗಾಳಿಯೇ ಬೆಮರ್ದೊಡಾರ್ - ಬೆಮರ್ದೊಡೆ ಆರ್ ಬೀಸುವರ್ = ಬೆವರಿದರೆ ಯಾರು ತಂಗಾಳಿ ಬೀಸುವರು ಬಳಿಕಾಲವಟ್ಟದಿಂದೆ - ಬಳಿಕ ಆಲವಟ್ಟದಿಂದೆ ಬೀಸಣಿಕೆಯಿಂದ?, ಕೃತ್ರಿಮದ ವಿಷದ ಸೋಂಕಿಗೆ ಗರುಡನಳವಳಿಯೆ - ಗರುಡನು ಅಳವಳಿಯೆ, ಮತ್ತೆ ರಕ್ಷೆಗೆ ಮಂತ್ರಿಸುವರಾರು - ಕೃತಕ ವಿಷದ ತಗುಲಿದರೆ ಗರುಡನು ಮೂರ್ಛೆಹೋದರೆ, ವಿಷದಿಂದ ಉಳಿಸಲು ಮಂತ್ರಿಸುವವರು ಯಾರು? ಭೂಪ ನೀನೊತ್ತುವನುತಾಪಕೆಡೆಗೊಟ್ಟೊಡಾರ್ ಬಿಡಿಸುವರ್ ಭೂಪ = ರಾಜನೇ, ನೀನು ಒತ್ತುವ ಅನುತಾಪಕ್ಕೆ =ವ್ಯಥೆಗೆ, ಎಡೆ ಕೊಟ್ಟೊಡೆ = ಆವಕಾಶ ಕೊಟ್ಟರೆ, ಆರ್ ಬಿಡಿಸುವರ್ = ಯಾರು ಅದನ್ನು ತಪ್ಪಿಸುವರು? ಪೇಳೆಂದನಾ ಮುನಿಪನು - ಪೇಳು = ಹೇಳು ಎಂದನು ಆ ಮುನಿಪನು.
|
ಪದ್ಯ - ೧೭
ಸಂಪಾದಿಸಿಎನಲಾ ಮನೀಂದ್ರನಂ ನೋಡಿ ಬಿಸುಸುಯ್ಯುತೊ |
ಯ್ಯನೆ ಮಹೀಪಾಲನಿಂತೆಂದನೆಂತೆನ್ನ ಮನ |
ದನುತಾಪಮಂ ಬಿಡುವೆನಕಟ ಶಿಶುತನದಿಂದೆ ಸಲಹಿದ ಪಿತಾಮಹಂಗೆ ||
ನೆನದೆವನುಚಿತವನಗ್ರಜನೆಂದರಿಯದೆ ಕ |
ರ್ಣನನಿರಿದೆವಾಚಾರ್ಯವಧೆಗೆಳಸಿದೆವು ಸುಯೋ |
ಧನ ಶಲ್ಯ ಮುಖ್ಯ ಬಾಂಧವರನೀಡಾಡಿದೆವು ಬದುಕಲೇಕಿನ್ನಿಳೆಯೊಳು ||17||
ಎನಲು ಆ ಮನೀಂದ್ರನಂ ನೋಡಿ ಬಿಸುಸುಯ್ಯುತ =ನಿಟ್ಟುಸಿರುಬಿಡುತ್ತಾ, ಒಯ್ಯನೆ = ಮೆಲ್ಲಗೆ ಮಹೀಪಾಲನು = ಧರ್ಮರಾಯನು ಇಂತು = ಹೀಗೆ ಎಂದನು, 'ಎಂತು = ಹೇಗೆ ತೆನ್ನ ಮನದ ಅನುತಾಪಮಂ ದುಃಖವನ್ನು /ಸಂಕಟವನ್ನು, ಬಿಡುವೆನು? ಅಕಟ ಶಿಶುತನದಿಂದೆ = ಬಾಲ್ಯದಿಂದ, ಸಲಹಿದ ಪಿತಾಮಹಂಗೆ ನೆನದೆವು ಅನುಚಿತವನು = ಕೇಡನ್ನು, ಅಗ್ರಜನು = ಅಣ್ಣ ಎಂದು ಅರಿಯದೆ ಕರ್ಣನನು ಇರಿದೆವು =ಕೊಂದೆವು, ಆಚಾರ್ಯವಧೆಗೆ ಎಳಸಿದೆವು = ಮನಸ್ಸು ಮಾಡಿದೆವು, ಸುಯೋಧನ ಶಲ್ಯ (ಸೋದರಮಾವ) ಮುಖ್ಯ ಬಾಂಧವರನು ಈಡಾಡಿದೆವು = ಕೊಂದು ಕೆಡವಿದೆವು; ಬದುಕಲೇಕೆ - ಬದುಕಲು ಏಕೆ ಇನ್ನು ಇಳೆಯೊಳು=ಭೂಮಿಯಲ್ಲಿ - ಇನ್ನೂ ಭೂಮಿಯ ಮೇಲೆ ಏಕೆ ಬದುಕಿರಬೇಕು?
(ಪದ್ಯ - ೧೭) |
ಪದ್ಯ - ೧೮
ಸಂಪಾದಿಸಿಶಿಷ್ಯರಿಮದಭಿವರ್ಧಿಸದ ಗುರುವಿನಂತೆ ವೈ
ದುಷ್ಯದಿಂ ಪೂಜ್ಯನಾಗದ ವಿಪ್ರನಂತೆ ಸುಹ |
ವಿಷ್ಯದಿಂ ಸೇವ್ಯನಾಗದ ವಹ್ನಿಯಂತೆ ಸಲಿಲಾಶಯವನಾಶ್ರೈಸದ ||
ಕೃಷ್ಯದಂತಖಿಳ ಬಾಂಧವರೊಡನೆ ಬದುಕದ ಮ |
ನುಷ್ಯ ಸಂಸಾರದಿಂದೇನದರಿನಿಂ ನಿಜಾ |
ಯುಷ್ಯಮುಳ್ಳನ್ನ ಪರಿಯಂತ ವನವಾಸವಂ ಮಾಡುವುದೆ ಲೇಸೆಂದನು ||18||
ಶಿಷ್ಯರಿಂದ ಅಭಿವರ್ಧಿಸದ = ಅಭಿವೃದ್ಧಿಹೋದದ ಗುರುವಿನಂತೆ, ವೈದುಷ್ಯದಿಂ (ವಿದುಷ) = ಪಾಂದಿತ್ಯದಿಂದ ಪೂಜ್ಯನಾಗದ ವಿಪ್ರನಂತೆ = ಬ್ರಾಹ್ಮಣನಂತೆ, ಸುಹವಿಷ್ಯದಿಂ = ಸು+ಹವಿಷ್ಯ= ಒಳ್ಳೆಯ ಹವಿಸ್ಸಿನಿಂದ, ಸೇವ್ಯನಾಗದ = ಸೇವಿಸಲ್ಪಡದಿರುವ, ವಹ್ನಿಯಂತೆ = ಅಗ್ನಿಯಂತೆ, ಸಲಿಲಾಶಯವನಾಶ್ರೈಸದ - ಸಲಿಲ ಆಶಯವನು ಆಶ್ರಯಿಸದ =ನೀರುಳ್ಳ ಸರೋವರವನ್ನು ಸೇರದ, ಕೃಷ್ಯದಂತಖಿಳ ಕೃಷ್ಣದಂತೆ ಅಖಿಳ = ಕೃಷ್ಣಮೃಗದಂತೆ, ಎಲ್ಲಾ ಬಾಂಧವರೊಡನೆ ಬದುಕದ ಮನುಷ್ಯಸಂಸಾರದಿಂದ ಏನದರಿನಿಂ =ಏನು ಅದರಿನಿಂ = ಆದರಿಂದ ಏನು ಪ್ರಯೋಜನ?, ನಿಜಾಯುಷ್ಯಮುಳ್ಳನ್ನ - ನಿಜ ಆಯುಷ್ಯ ಉಳ್ಳನ್ನ ಪರಿಯಂತ = ತನ್ನಾಯುಷ್ಯ ಇರುವ ಪರಿಯಂತ ವನವಾಸವಂ ಮಾಡುವುದೆ ಲೇಸೆಂದನು = -ಲೇಸು ಎಂದನು = ಒಳ್ಳೆಯದು ಎಂದನು.
(ಪದ್ಯ- ೧೮) |
ಪದ್ಯ - ೧೯
ಸಂಪಾದಿಸಿಕಾಯದುಪಬೋಗ ಸಿರಿಯಂಬಯಸಿ ಸುಗತಿಯಂ |
ಕಾಯದುರುತರ ವೈರದಿಂದಖಿಳಬಾಂಧವ ನಿ |
ಕಾಯದುಪಹತಿಯನೆಸಗಿದ ಪಾತಕದ್ರುಮಂ ತನಗೆ ವಿಷಮಾಗಿ ಮುಂದೆ ||
ಕಾಯದುಳಿಯದು ಮಹಿಯನಿನ್ನಾಳ್ದೊಡಂ ಜಸಂ |
ಕಾಯದುರೆ ಮಾಣದದರಿಂದರಸುತನವೆ ಸಾ |
ಕಾ ಯದುಕುಲೇಂದ್ರನಂ ಭಜಿಸುವೆಂ ಚಿತ್ತಶುದ್ಧಿಯೊಳರಣ್ಯದೊಳೆಂದನು ||19||
ಕಾಯದ = ದೇಹದ ಉಪಬೋಗ = ಸುಖದ ಸಿರಿಯಂ =ಸಂಪತ್ತನ್ನು ಬಯಸಿ, ಸುಗತಿಯಂ =ಸದ್ಗತಿಯನ್ನು ಕಾಯದೆ = ಕಾಪಾಡದೆ, ಉರುತರ = ಅತಿಯಾದ, ವೈರದಿಂದ ಅಖಿಳ ಬಾಂಧವ - ವೈರದಿಂದ ಅಖಿಳ = ಎಲ್ಲಾ ಬಾಂಧವ ನಿಕಾಯದ = ಸಮೂಹದ ಉಪಹತಿಯನು = ಹಿಂಸೆಯನ್ನು ಎಸಗಿದ = ಮಾಡಿದ, ಪಾತಕದ್ರುಮಂ = ಪಾಪವೃಕ್ಷವು, ತನಗೆ ವಿಷಮಾಗಿ ಮುಂದೆ ಕಾಯದೆ = (ಪರಲೋಕದಲ್ಲಿ) ಫಲಿಸದೆ ಉಳಿಯದು; ಮಹಿಯನು = ಭೂಮಿಯನ್ನು ಇನ್ನು ಆಳ್ದೊಡಂ = ಆಳಿದರೆ, ಜಸಂ = ಕೀರ್ತಿಯು ಕಾಯದು =ನಿಲ್ಲದು/ ಬರದು, ಉರೆ = ಹೆಚ್ಚು ಮಾಣದು =ಆಗದು, ಅದರಿಂದ ಅರಸುತನವೆ ಸಾಕು; ಆ ಯದುಕುಲೇಂದ್ರನಂ = ಯದುಕುಲದ ಮುಖ್ಯನಾದ ಕೃಷ್ಣನನ್ನು, ಭಜಿಸುವೆಂ ಚಿತ್ತಶುದ್ಧಿಯೊಳ್ = ಮನಶುದ್ಧಿಯಿಂದ ಅರಣ್ಯದೊಳ್ =ಅರಣ್ಯದಲ್ಲಿ ಎಂದನು.
(ಪದ್ಯ- ೧೯) |
ಪದ್ಯ - ೨೦
ಸಂಪಾದಿಸಿಆಗಳರಸನ ಮಾತಿನಾಸರಂ ಕೇಳ್ದು ತಲೆ |
ದೂಗಿ ಮುನಿಪುಂಗವಂ ನುಡಿದನೆಲೆ ಭೂಪ ನಿಗ |
ಮಾಗಮ ಪುರಾಣ ಶಾಸ್ತ್ರಂಗಳ ವಿಚಾರಮಂ ನೀನರಯದಪ್ರೌಢನೆ ||
ಈಗಳನುತಾಪಮೇತಕೆ ನಿಖಿಳ ಸಾಮ್ರಾಜ್ಯ |
ಮಾಗಲಿಳೆಯಂ ಧರ್ಮದಿಂ ಪಾಲಿಸದೆ ಬನಕೆ |
ಪೋಗಲಾವುದು ಸಿದ್ಧಿ ನಿನಗಪ್ಪುದುಸುರೆನೆ ಧರಾನಾಥನಿಂತೆಂದನು ||20||
ಆಗಳರಸನ ಮಾತಿನಾಸರಂ ಕೇಳ್ದು - ಆಗಳ್ ಅರಸನ ಮಾತಿನ ಆಸರಂ = ಆಶೆಯನ್ನು, ಕೇಳ್ದು ತಲೆದೂಗಿ ಮುನಿಪುಂಗವಂ ನುಡಿದನೆಲೆ ಭೂಪ -ನುಡಿದನು ಎಲೆ ಭೂಪ =ರಾಜನೇ, (ನೀನು) ನಿಗಮಾಗಮ - ನಿಗಮ ಆಗಮ ಪುರಾಣ ಶಾಸ್ತ್ರಂಗಳ ವಿಚಾರಮಂ ನೀನರಯದಪ್ರೌಢನೆ - ನೀನು ಅರಿಯದ ಅಪ್ರೌಢನೇ = ದಡ್ಡನೇ? ಈಗಳನುತಾಪಮೇತಕೆ - ಈಗಳ್ ಅನತಾಪಂ (ದುಃಖ) ಏತಕೆ? ನಿಖಿಳ = ಎಲ್ಲಾ /ಇಡೀ ಸಾಮ್ರಾಜ್ಯಮಾಗಲಿಳೆಯಂ ಸಾಮ್ರಾಜ್ಯ ಆಗಲು ಇಳೆಯಂ =ಭೂಮಿಯನ್ನು ಧರ್ಮದಿಂ ಪಾಲಿಸದೆ ಬನಕೆ ಪೋಗಲಾವುದು = ಪೋಗಲು ಆವುದು = ಹೋಗಲು ಯಾವುದು ಸಿದ್ಧಿ ನಿನಗಪ್ಪುದುಸುರೆನೆ - ನಿನಗೆ ಅಪ್ಪುದು =ಆಗುವುದು ಎನೆ =ಎನಲು, ಧರಾನಾಥನಿಂತೆಂದನು - ಧರಾನಾಥನು ಇಂತು ಎಂದನ = ರಾಜನು ಹೀಗೆ ಹೇಳಿದನು.
ತಾತ್ಪರ್ಯ:ಆಗ ಅರಸನ ಮಾತಿನ ಆಶೆಯನ್ನು, ಕೇಳಿ ತಲೆದೂಗಿ ಮುನಿಪುಂಗವನು ನುಡಿದನು, ಎಲೆ ರಾಜನೇ, ನಿಗಮ ಆಗಮ ಪುರಾಣ ಶಾಸ್ತ್ರಗಳ ವಿಚಾರವನ್ನು ನೀನು ಅರಿಯದ ದಡ್ಡನೇ? (ದಡ್ಡನಲ್ಲ ತಿಳಿದವನು). ಈಗ ಅನತಾಪ (ದುಃಖ) ಏತಕ್ಕೆ? ನಿನ್ನದು ಇಡೀ ಸಾಮ್ರಾಜ್ಯವಾಗಿರಲು ಭೂಮಿಯನ್ನು ಧರ್ಮದಿಂದ ಪಾಲಿಸದೆ ವನಕ್ಕೆ ಹೋದರೆ ನಿನಗೆ ಯಾವ ಸಿದ್ಧಿ ಆಗುವುದು? ಎನಲು, ರಾಜನು ಹೀಗೆ ಹೇಳಿದನು. (ಪದ್ಯ- ೨೦) |
ಪದ್ಯ - ೨೧
ಸಂಪಾದಿಸಿ
ಜೀಯ ಚಿತ್ತೈಸಾದೊಡಿನ್ನಖಿಳ ಸಾಮ್ರಾಜ್ಯ |
ಮಾಯಿತೆಂಬತ್ಸವಂ ತನಗಿಲ್ಲ ಕರ್ಣ ಗಾಂ |
ಗೇಯ ಗುರು ಶಲ್ಯ ಕೌರವರನುಳಿದೀ ಸಕಲಮೇದಿನೀಮಂಡಲವನು ||
ವಾಯುಜನೊಳಿರಿಸಿ ನಾಂ ಗೋತ್ರ ವಧೆಗೆಯ್ಸಿದೀ |
ಕಾಯಮಂ ವನವಾಸಕೈದಿಸುವೆನೆನೆ ಬಾದ |
ರಾಯಣಂ ಗಹಗಹಿಸಿ ನಗುತೆ ನುಡಿ ನುಡಿ ಮತ್ತೆ ನುಡಿಯೆನುತ್ತಿಂತೆಂದನು ||21||
ಜೀಯ ಚಿತ್ತೈಸಾದೊಡಿನ್ನಖಿಳ ಸಾಮ್ರಾಜ್ಯ ಮಾಯಿತೆಂಬತ್ಸವಂ ತನಗಿಲ್ಲ - ಜೀಯ = ಒಡೆಯನೇ (ಮುನಿಯೇ) ಕರ್ಣ ಗಾಂಗೇಯ ಗುರು ಶಲ್ಯ ಕೌರವರನುಳಿದೀ - ಕೌರವರನು ಉಳಿದ -ಇಲ್ಲದ, ಈ ಸಕಲ ಮೇದಿನೀಮಂಡಲವನು= ಭೂಮಂಡಲವನ್ನು ವಾಯುಜನೊಳಿರಿಸಿ - ವಾಯುಜನೊಳು = ಭೀಮನಲ್ಲಿ ಇರಿಸಿ ನಾಂ =ನಾನು ಗೋತ್ರವಧೆಗೆಯ್ಸಿದೀ ಕಾಯಮಂ - ಗೋತ್ರವಧೆ ಗೈಸಿದ ಈ ಕಾಯಮಂ = ಸಗೋತ್ರರನ್ನು ಕೊಲ್ಲಿಸಿದ ಈ ಶರೀರವನ್ನು, ವನವಾಸಕೈದಿಸುವೆನೆನೆ ವನವಾಸಕ್ಕೆ ಐದಿಸುವೆನು = ಕಳಿಸುವೆನು ಎನೆ = ಎನ್ನಲಾಗಿ, ಬಾದರಾಯಣಂ = ಗಹಗಹಿಸಿ ನಗುತೆ =ನಗುತ್ತಾ ನುಡಿ ನುಡಿ ಮತ್ತೆ ನುಡಿ ಯೆನುತ =ಎನ್ನುತ್ತ ಇಂತೆಂದನು = ಹೀಗೆ ಹೇಳಿದನು.
ತಾತ್ಪರ್ಯ:ಒಡೆಯನೇ ( ಹಿರಿನಾದ ಮುನಿಯೇ) ಕರ್ಣ ಗಾಂಗೇಯ ಗುರು ಶಲ್ಯ ಕೌರವರು ಇಲ್ಲದ, ಈ ಸಕಲ ಭೂಮಂಡಲವನ್ನು ಭೀಮನಲ್ಲಿ ಇರಿಸಿ ನಾನು ಸಗೋತ್ರರನ್ನು ಕೊಲ್ಲಿಸಿದ ಈ ಶರೀರವನ್ನು, ವನವಾಸಕ್ಕೆ ಕಳಿಸುವೆನು ಎನ್ನಲಾಗಿ, ಬಾದರಾಯಣನು ಗಹಗಹಿಸಿ ನಗುತ್ತಾ 'ನುಡಿ ನುಡಿ ಮತ್ತೆ ನುಡಿ' ಎನ್ನುತ್ತ ಹೀಗೆ ಹೇಳಿದನು. (ಪದ್ಯ- ೨೧) |
ಪದ್ಯ - ೨೨
ಸಂಪಾದಿಸಿ
ಕ್ಷಾತ್ರಧರ್ಮವನೀಕ್ಷಿಸಲ್ ನಿನಗೆ ಪಾತಕಂ |
ಗೋತ್ರವಧೆಯಿಂದೆ ಬಪ್ಪುದೆ ಮಹಾದೇವ ನೀಂ |
ಧಾತ್ರಿಯಂ ಪಾಲಿಸದಿರಲ್ಕೆ ನಿರ್ದೋಷಿಯೇ ನಾವರಿಯೆವೀಗ ನಿನ್ನ ||
ಗಾತ್ರಮಂ ವನವಾಸಕೈದಿಸುವ ಮತಮಾವ |
ಸೂತ್ರದೊಳ್ ಕಾಣಿಸಿತೊ ಲೇಸು ಲೇಸಾರಣ್ಯ |
ಯಾತ್ರೆಯಂ ಮಾಡು ನೀಂ ಮಾರುತಿಗೆ ಪಟ್ಟಮಂ ಕಟ್ಟುವೆವು ನಾವೆಂದನು ||22||
ಮುನಿಯು, ಕ್ಷಾತ್ರಧರ್ಮವನೀಕ್ಷಿಸಲ್ - ಕ್ಷಾತ್ರ =ಕ್ಷತ್ರಿಯ ಧರ್ಮವನು ಈಕ್ಷಿಸಲು =ಶಾಸ್ತ್ರದಲ್ಲಿ ನೋಡಿದರೆ ನಿನಗೆ ಪಾತಕಂ =ಪಾಪವು ಗೋತ್ರವಧೆಯಿಂದೆ ಬಪ್ಪುದೆ ಬರುವುದೇ? ಮಹಾದೇವ = ಶಿವನೇ ನೀಂ = ನೀನು ಧಾತ್ರಿಯಂ = ಭೂಮಿಯನ್ನು ಪಾಲಿಸದಿರಲ್ಕೆ- ಪಾಲಿಸದೆ ಇರಲ್ಕೆ = ಇರಲು ನಿರ್ದೋಷಿಯೇ = (ವ್ಯಂಗದಲ್ಲಿ) ನಿರ್ದೋಷಿಯಲ್ಲವೇ? ನಾವರಿಯೆವೀಗ - ನಾವು ಅರಿಯೆವು ಈಗ, ನಿನ್ನ ಗಾತ್ರಮಂ = ದೇಹವನ್ನು ವನವಾಸಕೈದಿಸುವ ವನವಾಸಕ್ಕೆ ಐದಿಸುವ = ಕಳಿಸುವ ಮತಮಾವ - ಮತಂ =ಅಭಿಪ್ರಾಯವು ಆವ =ಯಾವ ಸೂತ್ರದೊಳ್ ಅಶ್ವಲಾಯನ ಮೊದಲಾದ ಯಾವ ಸೂತ್ರದಲ್ಲಿ (ಶಾಸ್ತ್ರದ ಗ್ರಂಥ) ಕಾಣಿಸಿತೊ ! ಲೇಸು ಲೇಸಾರಣ್ಯ -ಲೇಸು ಲೇಸು ==ಒಳ್ಳೆಯದು ಓಳ್ಳಯದು! ಯಾತ್ರೆಯಂ (ಅರಣ್ಯ ಯಾತ್ರೆಯನ್ನು ಮಾಡು) ಮಾಡು ನೀಂ = ನೀನು, ಮಾರುತಿಗೆ ಪಟ್ಟಮಂ ಕಟ್ಟುವೆವು ನಾವೆಂದನು = ನಾವು ಮಾರುತಿಗೆ =ಭೀಮನಿಗೆ ಪಟ್ಟವನ್ನು ಕಟ್ಟುತ್ತೇವೆ ಎಂದನು.
ತಾತ್ಪರ್ಯ:ಮುನಿಯು, ಕ್ಷತ್ರಿಯ ಧರ್ಮವನ್ನು ಯಾವುದೋ ಶಾಸ್ತ್ರದಲ್ಲಿ ನೋಡಿದರೆ ಅದರ ಪ್ರಕಾರ ನಿನಗೆ ಪಾಪವು ಗೋತ್ರವಧೆಯಿಂದೆ ಬರುವುದೇ? ಶಿವನೇ ನೀನು ಭೂಮಿಯನ್ನು ಪಾಲಿಸದೆ ಇರಲು (ವ್ಯಂಗದಲ್ಲಿ) ನಿರ್ದೋಷಿಯಲ್ಲವೇ? ನಾವು ಅರಿಯೆವು. ಈಗ ನಿನ್ನ ದೇಹವನ್ನು ವನವಾಸಕ್ಕೆ ಕಳಿಸುವ ಅಭಿಪ್ರಾಯವು ಅಶ್ವಲಾಯನ ಮೊದಲಾದ ಯಾವ ಸೂತ್ರದಲ್ಲಿ (ಶಾಸ್ತ್ರದ ಗ್ರಂಥ) ಕಾಣಿಸಿತೊ ! ಒಳ್ಳೆಯದು ಓಳ್ಳಯದು! ನೀನು ಅರಣ್ಯ ಯಾತ್ರೆಯನ್ನು ಮಾಡು, ನಾವು ಭೀಮನಿಗೆ ಪಟ್ಟವನ್ನು ಕಟ್ಟುತ್ತೇವೆ ಎಂದನು. (ಪದ್ಯ- ೨೨) |
ಪದ್ಯ - ೨೩
ಸಂಪಾದಿಸಿ
ಧರ್ಮಸುತ ಮರುಳೆ ನೀನಿಂತಾಡುತಿರ್ದೊಡೆ ಬು |
ಧರ್ಮೆಚ್ಚುವರೆ ಸಾಕದಂತಿರಲಿ ಸೋಮಕುಲ |
ಜರ್ಮಹಾಕ್ರತುಗಳಂ ಮಾಡಿದಲ್ಲದೆ ಸಲ್ಲರದರಿಂದೆ ನಿನಗಿಳೆಯೊಳು ||
ನಿರ್ಮಲಸುಕೀರ್ತಿಯಪ್ಪಂತೆ ಯಜ್ಞಾದಿ ಸ |
ತ್ಕರ್ಮಂಗಳಂ ನೆಗಳ್ಚಲ್ ಗೋತ್ರವಧೆಗಳಂ |
ನಿರ್ಮಿಸಿದಘಂ ಪೋಗಿ ಶುಚಿಯಾಗಿ ಬಾಳ್ದಪೆಯೆನಲ್ ಭೂಪನಿಂತೆಂದನು
ಧರ್ಮಸುತ=ಧರ್ಮಜನೇ (ನಿನಗೆ) ಮರುಳೆ ನೀನಿಂತಾಡುತಿರ್ದೊಡೆ ಬುಧರ್ಮೆಚ್ಚುವರೆ - ನೀನು ಇಂತು = ಹೀಗೆ ಆಡುತಿರ್ದೊರೆ = ಹೇಳುತ್ತಿದ್ದರೆ ಬುಧರ್ = ಪಂಡಿತರು ಮೆಚ್ಚುವರೆ? ಸಾಕದಂತಿರಲಿ - ಸಾಕು ಅದು ಅಂತಿರಲಿ (ಆ ವಿಷಯ ಹಾಗಿರಲಿ), ಸೋಮಕುಲಜರ್ಮಹಾಕ್ರತುಗಳಂ - ಸೋಮಕುಲಜರ್ = ಚಂದ್ರವಂಶದವರು ಮಹಾಕ್ರತುಗಳಂ = ಮಹಾಯಜ್ಞಗಳನ್ನು ಮಾಡಿದಲ್ಲದೆ =ಮಾಡದಿದ್ದರೆ ಸಲ್ಲರದರಿಂದೆ - ಸಲ್ಲರು ಅದರಿಂದೆ, ನಿನಗಿಳೆಯೊಳು ನಿನಗೆ ಇಳೆಯೊಳು = ಭೂಮಿಯಲ್ಲಿ ನಿರ್ಮಲಸುಕೀರ್ತಿಯಪ್ಪಂತೆ ನಿರ್ಲ ಸುಕೀರ್ತಿ ಅಪ್ಪಂತೆ = ಆಗುವಂತೆ ಯಜ್ಞಾದಿ ಸತ್ಕರ್ಮಂಗಳಂ = ಸತ್ಕರ್ಮಂಗಳನ್ನು ನೆಗಳ್ಚಲ್ = ಮಾಡಿದರೆ ಗೋತ್ರವಧೆಗಳಂ ನಿರ್ಮಿಸಿದಘಂ ಪೋಗಿ = ಗೋತ್ರವಧೆಗಳನ್ನು ನಿರ್ಮಿಸಿದ = ಉಂಟುಮಾಡಿದ ಅಘಂ = ಪಾಪವು ಪೋಗಿ = ಹೋಗಿ ಶುಚಿಯಾಗಿ ಬಾಳ್ದಪೆಯೆನಲ್ = ಬಾಳುವೆ ಎನಲು ಭೂಪನಿಂತೆಂದನು - ಭೂಪನು = ರಾಜನು ಇಂತು = ಹೀಗೆ ಎಂದನು = ಹೇಳಿದನು.
ತಾತ್ಪರ್ಯ:ಮುನಿವರ್ಯನು ಹೇಳುತ್ತಾನೆ, ಧರ್ಮಜನೇ (ನಿನಗೆ) ಮರುಳೆ? ನೀನು ಹೀಗೆ ಹೇಳುತ್ತಿದ್ದರೆ ಪಂಡಿತರು ಮೆಚ್ಚುವರೆ? ಸಾಕು ಆ ವಿಷಯ ಹಾಗಿರಲಿ- ಬೇಡ, ಚಂದ್ರವಂಶದವರು ಮಹಾಯಜ್ಞಗಳನ್ನು ಮಾಡದಿದ್ದರೆ ಕೀರ್ತಿಗೆ ಅರ್ಹರಲ್ಲ; ಅದರಿಂದ, ಭೂಮಿಯಲ್ಲಿ ನಿರ್ಮಲವಾದ ಸುಕೀರ್ತಿ ಆಗುವಂತೆ ಯಜ್ಞಾದಿ ಸತ್ಕರ್ಮಗಳನ್ನು ಮಾಡಿದರೆ ಗೋತ್ರವಧೆಗಳನ್ನು ಉಂಟುಮಾಡಿದ ಪಾಪವು ಹೋಗಿ ಶುಚಿಯಾಗಿ ಬಾಳುವೆ, ಎನಲು, ರಾಜನು ಹೀಗೆ ಹೇಳಿದನು. (ಪದ್ಯ- ೨೩) |
ಪದ್ಯ - ೨೪
ಸಂಪಾದಿಸಿ
ಆದೊಡೆ ತವಾನುಗ್ರಹಪ್ರಭಾವದೊಳಿನ್ನು |
ಮೇದಿನಿಯ ನಾನೆ ಪಾಲಿಸುವೆನೀ ಗೋತ್ರಹ |
ತ್ಯಾ ದೋಷಮೇತರಿಂ ಪೋಪುದಾ ತೆರನಂ ತಿಳಿಪಿ ರಾಜಕುಲದ ನೃಪರ |
ಸಾಧು ಚಾರಿತ್ರಮೆನ್ನಿಂದೆ ಸೊಗಡಾಗದಂ |
ತಾದರಿಸಿ ನೀವೆ ಕಾರುಣ್ಯದಿಂ ಮಾಳ್ಪುದು ಶು |
ಭೋದಯವನೆನಗೆಂದು ಕೈಮುಗಿಯೆ ಧರ್ಮಜಂಗಾ ಮುನಿಪನಿಂತೆಂದನು||
ಆದೊಡೆ = ಹಾಗಿದ್ದರೆ ತವಾನುಗ್ರಹಪ್ರಭಾವದೊಳಿನ್ನು - ತವ =ನಿನ್ನ / ನಿಮ್ಮ ಅನುಗ್ರಹ ಪ್ರಭಾವದೊಳ್ = ಪ್ರಭಾವದಿಂದ ಇನ್ನು = ಮೇದಿನಿಯ ನಾನೆ ಪಾಲಿಸುವೆನೀ - ಪಾಲಿಸುವೆನು ಈ ಗೋತ್ರಹತ್ಯಾ ದೋಷಮೇತರಿಂ -ದೋಷಂ ಏತರಿಂದ = ದೋಷವು ಯಾವುದರಿಂದ ಪೋಪುದಾ = ಹೋಗುವುದು, ತೆರನಂ = ಆ ಬಗೆಯನ್ನು ತಿಳಿಪಿ = ತಿಳಿಸಿ ರಾಜಕುಲದ ನೃಪರ ಸಾಧು ಚಾರಿತ್ರಮೆನ್ನಿಂದೆ -ಚಾರಿತ್ರಂ = ನಡತೆಯು ಎನ್ನಿಂದೆ = ನನ್ನಿಂದ ಸೊಗಡಾಗದಂತಾದರಿಸಿ ಸೊಗಡಾಗದಂತೆ (ಸೊಗಡು =ಕೆಟ್ಟ ವಾಸನೆ)ಕೆಡದಂತೆ ನೀವೆ ಕಾರುಣ್ಯದಿಂ =ಕರಣೆಯಿಂದ, ಮಾಳ್ಪುದು = ಮಾಡುವುದು ಶುಭೋದಯವನೆನಗೆಂದು - ಶುಭೋದಯವನು = ಒಳಿತನ್ನು ಎನಗೆ = ನನಗೆ ಎಂದು ಕೈಮುಗಿಯೆ =ಕೈಮುಗಿಯಲು, ಧರ್ಮಜಂಗಾ ಮುನಿಪನಿಂತೆಂದನು ಧರ್ಮಜನಿಗೆ ಮುನಿಪನಿಂತೆಂದನು - ಆ ಮುನಿಪನು = ಮುನಿವರ್ಯನು ಇಂತು = ಹೀಗೆ ಹೇಳಿದನು.
ತಾತ್ಪರ್ಯ: (ಪದ್ಯ- ೨೪) |
ಪದ್ಯ - ೨೫
ಸಂಪಾದಿಸಿ
ಎಣಿಕೆ ಬೇಡಲೆ ಮಗನೆ ರಾಘವಂ ಪಿಂತೆ ರಾ |
ವಣನಂ ಮಥಿಸಿ ವಾಜೀಮೇಧದೊಳ್ ಪಾರ್ವರಂ |
ತಣಿಪಿದಂ ನೀನುಮಂತಾ ಮಹಾಧ್ವರವೆನೆಸಗಲ್ ನಿನಗೆ ಮೂಜಗದೊಳು ||
ಎಣೆಯಿಲ್ಲೆನಲ್ಕೆಂತು ಮಾಳ್ವೆ ನಾನಾವ ಲ |
ಕ್ಷಣದ ಹಯಮದಕೆ ಋತ್ವಿಜರೆನಿಬರೆಸಿಸು ದ |
ಕ್ಷಿಣೆಗಳದರಂದಮಂ ವಿಸ್ತರಿಸವೇಳ್ವುದೆನೆ ಶುಕತಾತನಿಂತೆಂದನು ||25||
ಎಣಿಕೆ = ಚಿಂತೆ ಬೇಡಲೆ - ಬೇಡ ಎಲೆ ಮಗನೆ ರಾಘವಂ = ರಾಘವನು (ರಾಮ) ಪಿಂತೆ = ಹಿಂದೆ ರಾವಣನಂ = ರಾವಣನನ್ನು ಮಥಿಸಿ =ಸಂಹರಿಸಿ, ವಾಜೀಮೇಧದೊಳ್ =ಅಶ್ವಮೇಧಯಜ್ಞ ಮಾಡಿ, ಪಾರ್ವರಂ ತಣಿಪಿದಂ = ಬ್ರಾಹ್ಮಣರನ್ನು ತೃಪ್ತಿ ಪಡಿಸಿದನು. ನೀನುಮಂತಾ -ನೀನುಂ ಅಂತೆ = ಅದೇರೀತಿ ಆ ಮಹಾಧ್ವರವೆನೆಸಗಲ್ - ಮಹಾ ಅಧ್ವರವೆನು = ಯಜ್ಞವನ್ನು ಎಸಗಲ್ = ಮಾಡಿದರೆ ನಿನಗೆ ಮೂಜಗದೊಳು = ಮೂರು ಲೋಕಗಳಲ್ಲಿ ಎಣೆಯಿಲ್ಲೆನಲ್ಕೆಂತು ಮಾಳ್ವೆ - ಎಣೆಯಿಲ್ಲ = ನಿನಗೆ ಸರಿಸಮಾನರಿಲ್ಲ; ಎನಲ್ಕೆ = ಹೇಳಲು, ಎಂತು = ಹೇಗೆ ಮಾಳ್ವೆನಾನಾವ -ಮಾಳ್ವೆನು = ಮಾಡುವೆನು - ನಾನು, ಆವ =ಯಾವ ಲಕ್ಷಣದ ಹಯಂ = ಕುದುರೆ ಅದಕೆ = ಅದಕ್ಕೆ(ಬೇಕು) ಋತ್ವಿಜರೆನಿಬರೆಸನಿಸು - ಋತ್ವಿಜರು ಎನಿಬರು = ಎಷ್ಟು ಜನ, ಎನಿಸು = ಎಷ್ಟು, ದಕ್ಷಿಣೆಗಳದರಂದಮಂ- ದಕ್ಷಿಣೆಗಳು ಅದರ = ಯಜ್ಞದ (ಮಾಡುವ) ಅಂದಮಂ = ಕ್ರಮವನ್ನು ವಿಸ್ತರಿಸವೇಳ್ವುದೆನೆ - ವಿಸ್ತರಿಸಿ ಪೇಳ್ವುದು = ಹೇಳಬೇಕು ಎನೆ = ಎನ್ನಲಾಗಿ, ಶುಕತಾತನು = ಶುಕನ ತಂದೆ ವ್ಯಾಸನು, ಇಂತು ಎಂದನು.
ತಾತ್ಪರ್ಯ:ಚಿಂತೆ ಬೇಡ ಎಲೆ ಮಗನೆ (ವ್ಯಾಸರಿಗೆ ಧರ್ಮರಾಜ ಮೊಮ್ಮಗನಾಗಬೇಕು) ರಾಘವನು (ರಾಮ) ಹಿಂದೆ ಬ್ರಾಹ್ಮಣನಾದ ರಾವಣನನ್ನು ಸಂಹರಿಸಿ, ಅಶ್ವಮೇಧಯಜ್ಞ ಮಾಡಿ, ಬ್ರಾಹ್ಮಣರನ್ನು ತೃಪ್ತಿ ಪಡಿಸಿದನು (ಬ್ರಹ್ಮಹತ್ಯಾ ದೋಷದ ಪಾಪವನ್ನು ಕಳೆದುಕೊಂಡನು). ನೀನು ಅದೇರೀತಿ ಆ ಮಹಾ ಯಜ್ಞವನ್ನು ಮಾಡಿದರೆ ನಿನಗೆ ಮೂರು ಲೋಕಗಳಲ್ಲಿ ನಿನಗೆ ಸರಿಸಮಾನರಿಲ್ಲ, ಎಂದು ಹೇಳಲು, ಧರ್ಮಜನು, ಆ ಯಜ್ಞವನ್ನು ನಾನು ಹೇಗೆ ಮಾಡಬೇಕು, ಯಾವ ಲಕ್ಷಣದ ಕುದುರೆ ಅದಕ್ಕೆ(ಬೇಕು), ಋತ್ವಿಜರು ಎಷ್ಟು ಜನ, ದಕ್ಷಿಣೆಗಳು ಎಷ್ಟು, ಆ ಯಜ್ಞಮಾಡುವ ಕ್ರಮವನ್ನು ವಿಸ್ತರಿಸಿ ಹೇಳಬೇಕು ಎನ್ನಲಾಗಿ, ಶುಕನ ತಂದೆಯಾದ ವ್ಯಾಸನು, ಹೀಗೆ ಹೇಳಿದನು. (ಪದ್ಯ- ೨೫) |
ಪದ್ಯ - ೨೬
ಸಂಪಾದಿಸಿ
ಸ್ವಚ್ಛತರ ಧವಲಾಂಗದತಿ ಮನೋಹರ ಪೀತ |
ಪುಚ್ಚದ ಸುಗಮನದೊಂದೇ ಕಿವಿಯೊಳೆಸೆವ ನೀ |
ಲಚ್ಛವಿಯ ಕೋಮಲ ತುರಂಗಮಂ ಸಾಧಿಸಿ ಮಹಾಕ್ರತುವನಾಚರಿಪೊಡೆ ||
ಇಚ್ಛೆಗೈದುರೆ ಸಕಲ ಮೇದಿನೀ ತಳವನೇ |
ಕಚ್ಛತ್ರದಿಂ ಪಾಲಿಸುವ ನರೇಶ್ವರನವಂ |
ಗಚ್ಛಿದ್ರಮಾಗಿ ನಡೆವುದು ಭೂಪಕುಲದೀಪ ಕೇಳದರ ಮಾಳ್ಕೆಗಳನು ||26||
ಸ್ವಚ್ಛತರ = ಪರಿಶುದ್ಧ ಧವಲಾಂಗದತಿ - ಧವಲಾಂಗದ =ಬಿಳಿಬಣ್ಣದ, ಮನೋಹರ ಪೀತ ಪುಚ್ಚದ =ಸುಂದರ ಹಳದಿ ಬಾಲದ, ಸುಗಮನದ ಸು+ಗಮನದ =ಒಳ್ಳೆ ನಡಿಗೆಯುಳ್ಳ, ಒಂದೇ ಕಿವಿಯೊಳೆಸೆವ = ಒಂದೇ ಕಿವಿ ಇರುವ, ನೀಲಚ್ಛವಿಯ = ನೀಲ ಪ್ರಕಾಶದ, ಕೋಮಲ ತುರಂಗಮಂ =ಕುದುರೆಯನ್ನು ಸಾಧಿಸಿ = ಸಂಪಾದಿಸಿ, ಮಹಾಕ್ರತುವನಾಚರಿಪೊಡೆ - ಮಹಾಕೃತುವನು ಆಚರಸುವೊಡೆ,=ಮಹಾ ಯಜ್ಞವನ್ನು ಆಚರಿಸಿದರೆ ಇಚ್ಛೆಗೈದುರೆ = ಮನಸ್ಸಿಟ್ಟು, ಉರೆ = ಹೆಚ್ಚಿನ / ವಿಶಾಲ ಸಕಲ ಮೇದಿನೀತಳವನು = ಭೂಮಿಯನ್ನೇ ಏಕಚ್ಛತ್ರದಿಂ = ಒಂದೇ ಅಡಳಿತದಿಂದ (ಏಕಚಕ್ರಾಧಿಪತ್ಯ) ಪಾಲಿಸುವ ನರೇಶ್ವರನವಂಗಚ್ಛಿದ್ರಮಾಗಿ - ನರೇಶ್ವರನು, ಅವಂಗೆ ಅಚ್ಚಿದ್ರಮಾಗಿ =ಅವನಿಗೆ ವಿಘ್ನವಿಲ್ಲದೆ ಯಜ್ಞವು ನಡೆವುದು ಭೂಪಕುಲದೀಪ =ರಾಜರಿಗೆ ದೀಪದಂತಿರುವ ಧರ್ಮಜನೇ ಕೇಳದರ ಮಾಳ್ಕೆಗಳನು ಕೇಳು ಅದರ ಮಾಳ್ಕೆಗಳನು =ಅದರ ಆ ಯಜ್ಞದ ಕ್ರಮವನ್ನು ಕೇಳು.
ತಾತ್ಪರ್ಯ:ಪರಿಶುದ್ಧವಾದ ಬಿಳಿಬಣ್ಣದ, ಮನೋಹರ ಸುಂದರ ಹಳದಿ ಬಾಲದ, ಒಳ್ಳೆ ನಡಿಗೆಯುಳ್ಳ, ಒಂದೇ ಕಿವಿ ಇರುವ, ನೀಲ ಪ್ರಕಾಶದ, ಕೋಮಲ ಕುದುರೆಯನ್ನು ಸಂಪಾದಿಸಿ, ಮನಸ್ಸಿಟ್ಟು ಮಹಾ ಯಜ್ಞವನ್ನು ಆಚರಿಸಿದರೆ, ಅವನು ವಿಸ್ತಾರದ ಸಕಲ ಭೂಮಿಯನ್ನೇ ಒಂದೇ ಅಡಳಿತದಿಂದ (ಏಕಚಕ್ರಾಧಿಪತ್ಯದಿಂದ) ಪಾಲಿಸುವ ನರೇಶ್ವರನು, ಅವನಿಗೆ ವಿಘ್ನವಿಲ್ಲದೆ ಯಜ್ಞವು ನಡೆವುದು. ರಾಜರಿಗೆಲ್ಲಾ ದೀಪದಂತಿರುವ ಧರ್ಮಜನೇ ಆ ಯಜ್ಞದ ಕ್ರಮವನ್ನು ಕೇಳು. (ಪದ್ಯ- ೨೬) |
ಪದ್ಯ - ೨೭
ಸಂಪಾದಿಸಿ
ಸತ್ಯಶೌಚಾಚಾರ ಕುಲ ವೇದಶಾಸ್ತ್ರ ಪಾಂ |
ಡಿತ್ಯದ ಸುವಿಪ್ರರಿಪ್ಪತ್ತು ಸಾವಿರಕೆ ನೈ |
ಪಥ್ಯ ವಸ್ತ್ರಾದಿ ಪೂಜೆಗಳಿಂದೆ ಸತ್ಕರಿಸಿ ಬೇರೆಬೇರೆವರವರ್ಗೆ ||
ಪ್ರತ್ಯೇಕವೊಂದೊಂದು ಬಳ್ಳ ಮುಕ್ತಾಫಲವ |
ನತ್ಯಧಿಕ ಹಯಗಜ ರಥಂಗಳೊಂದೊಂದನೌ |
ಚಿತ್ಯ ಸಾಲಂಕಾರಗೋಸಹಸ್ರವನೊಂದು ಭಾರ ಪೊನ್ನಂ ಕೊಡುವುದು ||27||
ಸತ್ಯ ಶೌಚ ಆಚಾರ ಕುಲ ವೇದಶಾಸ್ತ್ರ ಪಾಂಡಿತ್ಯದ ಸುವಿಪ್ರರು ಇಪ್ಪತ್ತು ಸಾವಿರಕೆ = ಇಪ್ಪತ್ತು ಸಾವಿರ ಬ್ರಾಹ್ಮಣರಿಗೆ ನೈಪಥ್ಯ = ದೀಕ್ಷೆಗೆಸಂಬಂಧಿಸಿ ವಸ್ತ್ರಾದಿ ಪೂಜೆಗಳಿಂದೆ ಸತ್ಕರಿಸಿ, ಬೇರೆಬೇರೆ ಅವರವರ್ಗೆ =ಪ್ರತಿಯೊಬ್ಬರಿಗೂ, ಪ್ರತ್ಯೇಕವೊಂದೊಂದು ಬಳ್ಳ ಮುಕ್ತಾಫಲವ - ಪ್ರತ್ಯೇಕ ಒಂದೊಂದು ಬಳ್ಳ (ಸೇರು) ಮುಕ್ತಾಫಲವ = ಮುತ್ತುಗಳನ್ನು,ಅತ್ಯಧಿಕ = ಹೆಚ್ಚು ಹಯಗಜ (ಕುದುರೆ ಆನೆ) ರಥಂಗಳು ಒಂದೊಂದು; ಔಚಿತ್ಯ ಸಾಲಂಕಾರಗೋಸಹಸ್ರವನೊಂದು -ಸಾಲಂಕಾರ ಅಲಂಕರಿಸಿದ ಗೋಸಹಸ್ರವನು = ಅಲಂಕರಿಸಿದ ಸಹಸ್ರ ಗೋವುಗಳನ್ನು, ಒಂದು ಭಾರ (ಮಣ) ಪೊನ್ನಂ =ಚಿನ್ನವನ್ನು ಕೊಡುವುದು.
ತಾತ್ಪರ್ಯ:ಸತ್ಯ ಶೌಚ ಆಚಾರ ಕುಲ ವೇದಶಾಸ್ತ್ರ ಪಾಂಡಿತ್ಯದ ಇಪ್ಪತ್ತು ಸಾವಿರ ಒಳ್ಳೆಯ ಬ್ರಾಹ್ಮಣರನ್ನು ದೀಕ್ಷೆಗೆಸಂಬಂಧಿಸಿ ವಸ್ತ್ರಾದಿ ಪೂಜೆಗಳಿಂದೆ ಸತ್ಕರಿಸಿ, ಪ್ರತಿಯೊಬ್ಬರಿಗೂ, ಪ್ರತ್ಯೇಕವಾಗಿ ಒಂದೊಂದು ಬಳ್ಳ (ಸೇರು) ಮುತ್ತುಗಳನ್ನು,ಅಧಿಕವಾಗಿ ಕುದುರೆ ಆನೆ ಒಂದೊಂದು ರಥ; ಯೋಗ್ಯವಾಗಿ ಅಲಂಕರಿಸಿದ ಸಹಸ್ರ ಗೋವುಗಳನ್ನು, ಒಂದು ಭಾರ (ಮಣ) ಚಿನ್ನವನ್ನು ಕೊಡುವುದು. (ಪದ್ಯ- ೨೭) |
ಪದ್ಯ - ೨೮
ಸಂಪಾದಿಸಿ
ಸನ್ನುತ ಕುಲಾಚಾರ ಗುಣ ವೇದಶಾಸ್ತ್ರ ಸಂ |
ಪನ್ನ ಭೂಸುರರನಿಬರೀ ತೆರೆದ ಸೌಖ್ಯತರ |
ಮನ್ನಣೆಗಳಂ ಪಡೆದು ಸಭೆಯಾಗಿ ಕುಳ್ಳೀರ್ದನುಜ್ಞೆಯಂ ಕೊಟ್ಟ ಬಳಿಕ ||
ಇನ್ನು ಮೇದಿನಿಯೊಳಾರಾದೊಡಂ ಮಿಡುಕುಳ್ಳೊ |
ಡುನ್ನತ ಪರಾಕ್ರಮಿ ತಡೆಯಲಿ ವಾಜಿಯನೆಂದು |
ತನ್ನ ಬಿರುದಂ ಬರೆದು ಪೊಂಬಟ್ಟಮಂ ಕಟ್ಟಿ ಬಿಡುವುದಾ ಹಯದ ಫಣೆಗೆ ||28||
ಪನ್ನ ಭೂಸುರರನಿಬರೀ - ಭೂಸುರರು = ಬ್ರಾಹ್ಮಣರು, ಅನಿಬರು = ಅ ಇಪ್ಪತ್ತ ಸಾವಿರ ಜನರೂ, ಈ ತೆರೆದ ಸೌಖ್ಯತರ = ಸುಖ ಸಂಪತ್ತಿನ, ಮನ್ನಣೆಗಳಂ = ಮರ್ಯಾದೆಯನ್ನು ಪಡೆದು ಸಭೆಯಾಗಿ ಕುಳ್ಳೀರ್ದನುಜ್ಞೆಯಂ = ಸಭೆ ಸೇರಿ ಅನುಜ್ಞೆಯಂ = ಅಪ್ಪಣೆಯನ್ನು ಕೊಟ್ಟ ಬಳಿಕ 'ಇನ್ನು ಮೇದಿನಿಯೊಳಾರಾದೊಡಂ - ಮೇದಿನಿಯೊಳು ಆರಾದೊಡಂ = ಈ ಭೂಮಿಯ ಮೇಲೆ ಯಾರಾದರೂ ಮಿಡುಕುಳ್ಳೊಡುನ್ನತ - ಮಿಡುಕು=ಪೌರುಷ ಉಳ್ಳೊಡೆ = ಇದ್ದರೆ, ಉನ್ನತ ಪರಾಕ್ರಮಿ ತಡೆಯಲಿ ವಾಜಿಯನೆಂದು -ವಾಜಿಯನು =ಕುದುರೆಯನ್ನು', ಎಂದು ತನ್ನ ಬಿರುದಂ =ಬಿರುದನ್ನು ಬರೆದು ಪೊಂಬಟ್ಟಮಂ = ಹೊನ್ನಿನ ಪಟ್ಟಿಯನ್ನು ಕಟ್ಟಿ ಬಿಡುವುದು(+ ಆ) ಬಿಡುವುದು, ಆ ಹಯದ ಫಣೆಗೆ = ಹಣೆಗೆ.
(ಪದ್ಯ- ೨೮) |
ಪದ್ಯ - ೨೯
ಸಂಪಾದಿಸಿ
ಆ ಕುದುರೆ ಬಿಟ್ಟೂಂದು ವರ್ಷ ಪರ್ಯಂತ ತಾ |
ನೇ ಕಂಡಕಡೆಗೆ ತೆರಳಲ್ಕದರ ಸಂಗಡಂ |
ಭೂಕಾಂತಸೂನುಗಳ್ ಪಲಬರಡಿಗಡಿಗೆ ಮಣಿಕನಕ ರಾಶಿಗಳ ಸುರಿದು||
ಲೋಕಮಂ ತಣಿಸುತೈತರಲಖಿಳ ದೆಸೆಯೊಳದ |
ನಾಕೆವಾಳರ್ ತಡೆಯ ಬಿಡಿಸಬೇಕನಿಬರಿಂ |
ನೂಕದೊಡೆ ಕರ್ತೃ ತಾನಾದೊಡಂ ಪೋಗಿ ನಡೆಸುವುದು ಬಳಿಕಾಹಯವನು ||29||
ಆ ಕುದುರೆ ಬಿಟ್ಟೂಂದು- ಬಿಟ್ಟ ಒಂದು ವರ್ಷ ಪರ್ಯಂತ ತಾನೇ ಕಂಡಕಡೆಗೆ ತೆರಳಲ್ಕದರ - ತೆರಳ್ಕೆ = ಹೋಗಲು ಅದರ ಸಂಗಡಂ, ಭೂಕಾಂತಸೂನುಗಳ್ = ರಾಜಪುತ್ರರು ಪಲಬರಡಿಗಡಿಗೆ ಪಲಬರು ಅಡಿಗಡಿಗೆ = ಹಲವರು ಅಲ್ಲಲ್ಲಿ ಮಣಿಕನಕ ರಾಶಿಗಳ-ನ್ನು ಸುರಿದು ಲೋಕಮಂ ತಣಿಸುತೈತರಲಖಿಳ - ಲೋಕಮಂ = ಜನರನ್ನು ತಣಿಸುತ = ತೃಪ್ತಿ ಪಡಿಸುತ್ತಾ ಐತರಲ್ = ಬರಲು, ದೆಸೆಯೊಳದನಾಕೆವಾಳರ್ ತಡೆಯ - ದೆಸೆಯೊಳ್ ಅದ ಆಕೆವಾಳರ್ =ಶೂರರು, (ಕುದುರೆಯನ್ನು) ಬಿಡಿಸಬೇಕನಿಬರಿಂ - ಬಿಡಿಸಬೇಕು ಅನಿಬರಂ = ಎಲ್ಲರಿಂದಲೂ ನೂಕದೊಡೆ = ಆಗದಿದ್ದರೆ, ಕರ್ತೃ = ಯಜ್ಞದೀಕ್ಷೆಯಲ್ಲಿರುವ ರಾಜನು, ತಾನಾದೊಡಂ = ತಾನೇ ಪೋಗಿ = ಹೋಗಿ (ಬಿಡಿಸಿ) ಮುಂದೆ ನಡೆಸುವುದು ಬಳಿಕಾಹಯವನು - ಬಳಿಕ ಆ ಹಯವನು = ಕುದುರೆಯನ್ನು.
ತಾತ್ಪರ್ಯ:ಆ ಕುದುರೆ ಬಿಟ್ಟ ಒಂದು ವರ್ಷ ಪರ್ಯಂತ ತಾನೇ ಕಂಡಕಡೆಗೆ ತೆರಳ್ಕೆ ಹೋಗಲು ಅದರ ಸಂಗಡ,ರಾಜಪುತ್ರರು ಹಲವರು ಅಲ್ಲಲ್ಲಿ ಮಣಿಕನಕ ರಾಶಿಗಳ-ನ್ನು ಸುರಿದು ಜನರನ್ನು ತೃಪ್ತಿ ಪಡಿಸುತ್ತಾ ಬರಲು, ಶೂರರು, ಕುದುರೆಯನ್ನು ಶೂರರು ತಡೆದರೆ ಎಲ್ಲರಿಂದಲೂ ಬಿಡಿಸಬೇಕು; ಆಗದಿದ್ದರೆ, ಕರ್ತೃವಾದ ಯಜ್ಞದೀಕ್ಷೆಯಲ್ಲಿರುವ ರಾಜನು, ತಾನೇ ಬಳಿಕ ಹೋಗಿ ಆ ಕುದುರೆಯನ್ನು ಬಿಡಿಸಿ ಮುಂದೆ ನಡೆಸುವುದು. (ಪದ್ಯ - ೨೯) |
ಪದ್ಯ - ೩೦
ಸಂಪಾದಿಸಿ
ಇಂತಾಹಯಂ ತಆನೆ ಮೇದಿನಿಯೊಳೊಂದು ವರು |
ಷಂ ತಿರುಗಿ ತನ್ನಿಳೆಗೆ ಬಂದು ನಿಲುವಲ್ಲಿಪರಿ |
ಯಂತಮಸಿಪತ್ರವೆಂಬುರುತರವ್ರತವನಾಚರಿಸುತಿರ್ದಾ ಮಖವನು ||
ಮುಂತೆ ವೇದೋಕ್ತಿದಿಂ ಮಾಳ್ಪುದಿದರಂದಮಿದು |
ಕುಂತೀಕುಮಾರ ನೀನಾರ್ಪಡುಜ್ಜುಗಿಸೆನಲ್ |
ಚಿಂತಿಸುತೆ ನುಡಿದನೊಯ್ಯನೆ ಧರಿತ್ರೇತಳಾಧಿಪನಾ ತಪೋಧನನೊಳು ||30||
ಇಂತು = ಹೀಗೆ ಆ ಹಯಂ ತಾನೆ ಮೇದಿನಿಯೊಳ್ ಒಂದು ವರುಷಂ ತಿರುಗಿ ತನ್ನ-ಇಳೆಗೆ =ಮೊದಲಿದ್ದ ಸ್ಥಳಕ್ಕೆ, ಹಸ್ತನಾವತಿಗೆ ಬಂದು ನಿಲುವಲ್ಲಿ ಪರಿಯಂತಂ = ತನಕ ಅಸಿಪತ್ರವೆಂಬ ಉರುತರ = ಕಠಿಣವಾದ ವ್ರತವನು ಆಚರಿಸುತಿರ್ದು ಆ ಮಖವನು = ಯಜ್ಞನವನ್ನು ಮುಂತೆ = ಮುಂದೆ ವೇದೋಕ್ತದಿಂ = ವೇದದಲ್ಲಿ ಹೇಳಿದಂತೆ ಮಾಳ್ಪುದು ಅದರಂದಂ ಇದು ಕುಂತೀಕುಮಾರ ನೀನು ಆರ್ಪಡೆ = ನೀನು ಒಪ್ಪಿದರೆ / ನಿನಗೆ ಸಾಧ್ಯವಾಗುವುದಾದರೆ ಉಜ್ಜುಗಿಸೆನಲ್ = ಈ ಕಾರ್ಯ ಮಾಡು(ಎನ್ನಲು) ;(ಧರ್ಮಜನು) ಚಿಂತಿಸುತೆ ನುಡಿದನು ಒಯ್ಯನೆ = ಮೆಲ್ಲಗೆ ಧರಿತ್ರೀತಳ ಆಧಿಪನಾ =ಭೂಮಿಯೊಡೆಯನು ತಪೋಧನನೊಳು = ತಪಸ್ವಿ ಮುನಿಗೆ.
ತಾತ್ಪರ್ಯ:ಹೀಗೆ ಆ ಹಯವು ತಾನೆ ಮೇದಿನಿಯೊಳು ಒಂದು ವರುಷ ತಿರುಗಿ ಮೊದಲಿದ್ದ ಸ್ಥಳಕ್ಕೆ, ಹಸ್ತನಾವತಿಗೆ ಬಂದು ತಲುಪುವ ತನಕ ಅಸಿಪತ್ರವೆಂಬ ಕಠಿಣವಾದ ವ್ರತವನು ಆಚರಿಸುತಿದ್ದು ಆ ಯಜ್ಞನವನ್ನು ಮುಂದೆ ವೇದದಲ್ಲಿ ಹೇಳಿದಂತೆ ಮಾಡುವುದು. ಇದು ಕ್ರಮ; ಧರ್ಮಜನೇ ನೀನು ಒಪ್ಪಿಗೆಯಾದರೆ, ನಿನಗೆ ಸಾಧ್ಯವಾಗುವುದಾದರೆ ಈ ಕಾರ್ಯ ಮಾಡಲು ತೊಡಗು, ಎನ್ನಲು; ಧರ್ಮಜನು ಚಿಂತಿಸುತ್ತಾ ತಪಸ್ವಿ ಮುನಿಗೆ ಮೆಲ್ಲಗೆ ನುಡಿದನು. (ಪದ್ಯ - ೩೦) |
ಪದ್ಯ - ೩೧
ಸಂಪಾದಿಸಿ
ದ್ರವ್ಯಮೆನಗಿಲ್ಲ ಮೇದಿನಿಯೊಳರಸುವೊಡೆ ಕೌ |
ರವ್ಯರಿಂದಿಳೆನೊಂದುದಿ ನಿತುಲಕ್ಷಣಮುಳ್ಳ |
ದಿವ್ಯ ಹಯಮಿಲ್ಲ ಸೋದರರಾಹವದೊಳಲಸಿದರ್ ಸಹಾಯಂಗಳಿಲ್ಲ ||
ಸವ್ಯಸಾಚಿಯ ಮಿತ್ರನಿಲ್ಲಿಲ್ಲ ತನಗಧ್ವ |
ರ್ವಯಸನಮೆಂತೊಡರ್ಪುದು ಪೇಳಿಮೆನಲು ವೇ |
ದವ್ಯಾಸ ಮುನಿವರಂ ಕರುಣದಿಂದಾ ಯುದಿಷ್ಠಿರನೃಪನೊಳಿಂತೆಂದನು||31||
ದ್ರವ್ಯಮು ಎನಗಿಲ್ಲ =ಅಗತ್ಯ ಹಣ ನನ್ನಲ್ಲಿಲ್ಲ, ಮೇದಿನಿಯೊಳ್ ಅರಸುವೊಡೆ = ದೇಶದಲ್ಲಿ (ಹಣ) ಎತ್ತಲು ಕೌರವ್ಯರಿಂದ ಇಳೆ =ರಾಜ್ಯದ ಜನ ನೊಂದುದು = (ತೆರಿಗೆ ಕೊಟ್ಟು) ನೊಂದಿದ್ದಾರೆ, ಇನಿತು = ಇಷ್ಟೊಂದು ಲಕ್ಷಣಮ್ ಉಳ್ಳ ದಿವ್ಯ ಹಯಮಿಲ್ಲ, ಸೋದರರು ಆಹವದೊಳು = ಯುದ್ಧದಲ್ಲಿ ಅಲಸಿದರ್ = (ಈಗಾಗಲೆ) ಆಯಾಸಪಟ್ಟು ಬಳಲಿದ್ದಾರೆ, ಸಹಾಯಂಗಳಿಲ್ಲ ಸವ್ಯಸಾಚಿಯ ಮಿತ್ರನು (ಕೃಷ್ಣನು) ಇಲ್ಲಿಲ್ಲ, ತನಗೆ ಅಧ್ವರ = ಯಜ್ಞ ವ್ಯಸನಮ್ = ಚಿಂತೆಯು ಎಂತು = ಹೇಗೆ ಒಡರ್ಪುದು = ಕೂಡಿಬರುವುದು ಪೇಳಿ = ಹೇಳಿ? ಎನಲು, ವೇದವ್ಯಾಸ ಮುನಿವರಂ ಕರುಣದಿಂದ ಆ ಯುದಿಷ್ಠಿರ ನೃಪನೊಳು ಇಂತೆಂದನು = ಹಿಗೆ ಹೇಳಿದನು
ತಾತ್ಪರ್ಯ:ಅಗತ್ಯ ಹಣ ನನ್ನಲ್ಲಿಲ್ಲ, ದೇಶದಲ್ಲಿ (ಹಣ) ಎತ್ತಲು ಕೌರವರಾಡಳಿತದಲ್ಲಿ ರಾಜ್ಯದ ಜನ ತೆರಿಗೆ ಕೊಟ್ಟು ನೊಂದಿದ್ದಾರೆ, ಇಷ್ಟೊಂದು ಲಕ್ಷಣ ಉಳ್ಳ ದಿವ್ಯವಾದ ಹಯವಿಲ್ಲ, ದಂಡಯಾತ್ರೆ ಹೋಗಲು ಸೋದರರು ಯುದ್ಧದಲ್ಲಿ ಈಗಾಗಲೆ ಆಯಾಸಪಟ್ಟು ಬಳಲಿದ್ದಾರೆ, ಸಹಾಯಗಳಿಲ್ಲ ಸವ್ಯಸಾಚಿಯ ಮಿತ್ರ ಕೃಷ್ಣನು ಇಲ್ಲಿಲ್ಲ, ತನಗೆ ಯಜ್ಞದ ಚಿಂತೆಯು (ಕಾರ್ಯವು) ಹೇಗೆ ಕೂಡಿಬರುವುದು ಹೇಳಿ? ಎನಲು, ವೇದವ್ಯಾಸ ಮುನಿವರನು ಕರುಣದಿಂದ ಆ ಯುದಿಷ್ಠಿರ ನೃಪನಿಗೆ ಹೀಗೆ ಹೇಳಿದನು. (ಪದ್ಯ - ೩೧) |
ಪದ್ಯ - ೩೨
ಸಂಪಾದಿಸಿ
ರಾಯ ನೀನಿದಕೆ ಚಿಂತಿಸಬೇಡ ಧನಮಂ ಸ |
ಹಾಯಮಂ ತುರಗಮಂ ತೋರುವೆಂ ಮರುತನೆಂ |
ಬಾಯುಗದ ನೃಪನಶ್ವಮೇಧಮಂ ಮಾಡಿ ಬಹು ಕನಕಮಂ ಭೂಸುರರ್ಗೆ ||
ಈಯಲವರೊಯ್ಯುತೆಡೆಯೊಳಗಲಸಿ ಬಿಟ್ಟರ |
ಪ್ರೀಯದಿಂದಾ ವಸ್ತುವಿದೆ ಹಿಮಾಲಯದೊಳದ |
ಕಾಯಸಂ ಪಿರಿದಿಲ್ಲ ತಂದು ನೀನುಪಯೋಗಿಸೆನಲರಸನಿಂತೆಂದನು ||32||
ರಾಯ = ಧರ್ಮರಾಯ, ನೀನಿದಕೆ ಚಿಂತಿಸಬೇಡ ಧನಮಂ ಸಹಾಯಮಂ ತುರಗಮಂ ತೋರುವೆಂ = ತೋರಿಸುವೆನು; ಮರುತನೆಂಬಾಯುಗದ = ಮರುತನೆಂಬ ಆ ಯುಗದ = ಪೂರ್ವ ಯುಗದ ನೃಪನು ಅಶ್ವಮೇಧಮಂ ಮಾಡಿ ಬಹು ಕನಕಮಂ ಭೂಸುರರ್ಗೆ = ಬ್ರಾಹ್ಮಣರಿಗೆ ಈಯಲು = ಕೊಡಲು ಅವರು ಒಯ್ಯುತ = ತೆಗೆದು ಕೊಂಡು ಹೋಗುವಾಗ, ಎಡೆಯೊಳಗೆ ಅಲಸಿ = ದಾರಿಯಲ್ಲಿ ಆಯಾಸದಿಂದ ಹೊರಲಾರದೆ, ಬಿಟ್ಟರು ಅಪ್ರೀಯದಿಂದಾ =ಮೋಹವಿಲ್ಲದೆ, ವಸ್ತುವಿದೆ ಹಿಮಾಲಯದೊಳದಕಾಯಸಂ ಪಿರಿದಿಲ್ಲ ತಂದು ನೀನುಪಯೋಗಿಸೆನಲರಸನಿಂತೆಂದನು - ವಸ್ತುವಿದೆ, ಹಿಮಾಲಯದೊಳ್ ಅದಕೆ ಆಯಸಂ= ಆಯಾಸ ಪಿರಿದಿಲ್ಲ =ಹಚ್ಚಿಲ್ಲ,= ಹಿಮಾಲಯದಲ್ಲಿ ನಿನಗೆ ಬೇಕಾದ ವಸ್ತುವಿಗಳಿವೆ. ತರಲು ಆಯಾಸ ಹಚ್ಚಿಲ್ಲ ತಂದು ನೀನುಪಯೋಗಿಸು ಎನಲು ಅರಸನು ಇಂತೆಂದನು .
ತಾತ್ಪರ್ಯ:ಧರ್ಮರಾಯ, ನೀನಿದಕ್ಕೆ ಚಿಂತಿಸಬೇಡ ಧನವನ್ನು ಸಹಾಯವನ್ನು ಅಶ್ವವನ್ನು ತೋರಿಸುವೆನು; ಮರುತನೆಂಬ ಪೂರ್ವ ಯುಗದ ನೃಪನು ಅಶ್ವಮೇಧವನ್ನು ಮಾಡಿ ಬಹು ಕನಕವನ್ನು ಬ್ರಾಹ್ಮಣರಿಗೆ ಕೊಡಲು ಅವರು ತೆಗೆದು ಕೊಂಡು ಹೋಗುವಾಗ, ದಾರಿಯಲ್ಲಿ ಆಯಾಸದಿಂದ ಹೊರಲಾರದೆ,ಅದರಮೇಲೆ ಮೋಹವಿಲ್ಲದೆ ಬಿಟ್ಟರು, ಹಿಮಾಲಯದಲ್ಲಿ ನಿನಗೆ ಬೇಕಾದ ವಸ್ತುಗಳಿವೆ. ತರಲು ಆಯಾಸ ಹಚ್ಚಿಲ್ಲ; ತಂದು ನೀನುಪಯೋಗಿಸು, ಎನಲು ಅರಸನು ಇಂತೆಂದನು. (ಪದ್ಯ - ೩೨) |
ಪದ್ಯ - ೩೩
ಸಂಪಾದಿಸಿ
ಅಕಟ ಜಡಮತಿಗೆ ಮರುಳುಮ್ಮತವನಿಕ್ಕಿದೊಡೆ |
ಸುಕಲೆಯಪ್ಪುದೆ ಜೀಯ ಗೋತ್ರ ಸಂಹರಣ ಪಾ |
ತಕವನೊರಸುವ ಮಖವನಾ ವಿಪ್ರರೊಡವೆಯಿಂ ಮಾಡಲೆನಗಿಹ ಪರದೊಳು||
ಪ್ರಕಟಮೆನಿಪುವೆ ಕೀರ್ತಿ ಸದ್ಗತಿಗಳೆನೆ ಮಗನೆ |
ಸಕಲ ಭೂಮಂಡಲಂ ದ್ವಿಜರದಲ್ಲವೆ ರಾಜ |
ನಿಕರವಂ ತರಿದೀಯನೇ ಪರಶುರಾಮನೀ ಧರೆಯನವನೀಸುರರ್ಗೆ ||33||
ಅಕಟ ಅಯ್ಯೋ! ಜಡಮತಿಗೆ = ದಡ್ಡನಿಗೆ ಮರುಳುಮ್ಮತವನಿಕ್ಕಿದೊಡೆ - ಮರುಳು ಉಮ್ಮತವನು ಇಕ್ಕಿದೊಡೆ = ಮರುಳು =ತಲೆಕೆಡಿಸುವ ಉಮ್ಮತವನು ಉಮ್ಮತ್ತ ಬೀಜವನ್ನು ಇಕ್ಕಿದೊಡೆ = ತಿನ್ನಿಸಿದರೆ, ಸುಕಲೆಯು = ಸುಜ್ಞಾನವು ಅಪ್ಪುದೆ =ಬರುವುದೇ? ಜೀಯ ಗೋತ್ರ ಸಂಹರಣ ಗೋತ್ರವಧೆಯ ಪಾತಕವನು ಒರಸುವ = ಕಳೆವ ಮಖವನು ಯಜ್ಞವನ್ನು, ಆ ವಿಪ್ರರ ಒಡವೆಯಿಂ = ಧನದಿಂದ ಮಾಡಲು ಎನಗೆ ಇಹಪರದೊಳು = ಈಲೋಕ ಪರ ಲೋಕಗಳಲ್ಲಿ, ಪ್ರಕಟಮೆನಿಪುವೆ ಪ್ರಸಿದ್ಧವಾಗುವುವೆ - ಕೀರ್ತಿ ಸದ್ಗತಿಗಳೆನೆ - ಸದ್ಗತಿಗಳು ಎನೆ = ಎನ್ನಲು, ಮಗನೆ (ಧರ್ಮಜನೆ) ಸಕಲ ಭೂಮಂಡಲಂ ದ್ವಿಜರದಲ್ಲವೆ = ಬ್ರಾಹ್ಂಣರದು ಅಲ್ಲವೆ? ರಾಜ ನಿಕರವಂ = ರಾಜ ಸಮೂಹವನ್ನು ತರಿದೀಯನೇ = ತರಿದು =ಕೊಂದು, ಈಯನೆ = ಕೊಟ್ಟಿಲ್ಲವೇ ಪರಶುರಾಮನು, ಈ ಧರೆಯನು = ಭೂಮಿಯನ್ನು ಅವನೀಸುರರ್ಗೆ ಬ್ರಾಹ್ಂಣರಿಗೆ?
(ಪದ್ಯ - ೩೩) |
ಪದ್ಯ - ೩೪
ಸಂಪಾದಿಸಿ
ಬಾಹುಬಲಮುಳ್ಳ ನೃಪರೊಡೆಯರೀ ಧರೆಗೆ ಸಂ |
ದೇಹಮಿಲ್ಲದರಿಂ ಸಲ್ಲದು ಬಗೆವೊ |
ಡಾ ಹಿಮಾಲಯದೊಳಿಹ ವಸ್ತು ನಿನ್ನದು ಯೌವನಾಶ್ವನೆಂಬವನೀಶನು ||
ಮೋಹದಿಂ ಭದ್ರಾವತೀ ನಗರದೊಳ್ ದಶಾ |
ಕ್ಷೌಹಿಣೀ ಸೇನೆಯಿಂ ಪಾಲಿಸುವನಿಂತಹ ಮ |
ಹಾ ಹಯೋತ್ತಮಮೊಂದನದು ನಿನಗೆ ಬಾರದಿರ್ಪುದೆಶೌರ್ಯಮುಂಟಾದೊಡೆ ||34||
ವ್ಯಾಸಮುನಿ ಹೇಳಿದನು,ಬಾಹುಬಲಂ ಉಳ್ಳ ನೃಪರೊಡೆಯರು ಈ ಧರೆಗೆ ಸಂದೇಹಮಿಲ್ಲ = ಬಾಹುಬಲವು ಉಳ್ಳ ನೃಪರು ಒಡೆಯರು ಈ ಧರೆಗೆ =ಭೂಮಿಗೆ, (ಅದರಲ್ಲಿ) ಸಂದೇಹಮಿಲ್ಲ. ಇದರಿಂ = ಆದ್ದರಿಂದ ಸಲ್ಲದು = ಸಂದೇಹ ಬೇಡ, ಬಗೆವೊಡೆ = ವಿಚಾರ ಮಾಡಿದರೆ ಆ ಹಿಮಾಲಯದೊಳು ಇಹ =ಇರುವ ವಸ್ತು ನಿನ್ನದು. ಯೌವನಾಶ್ವನೆಂಬ ಅವನೀಶನು =ರಾಜನು, ಮೋಹದಿಂ = ಪ್ರೀತಿಯಿಂದ ಭದ್ರಾವತೀ ನಗರದೊಳ್ ದಶ ಅಕ್ಷೌಹಿಣೀ ಸೇನೆಯಿಂ = ಹತ್ತು ಅಕ್ಕ್ಷೋಹಿಣಿ ಸೇನೆಯನ್ನಿಟ್ಟುಕೊಂಡು ರಾಜ್ಯವನ್ನು ಪಾಲಿಸುವನು. ಇಂತಹ = ವಿಶೇಷ ಲಕ್ಷಣದ ಮಹಾ ಹಯೋತ್ತಮ ಒಂದನು = ಒಂದು ಮಹಾ ಉತ್ತಮ ಹಯವನ್ನು ಹೊಂದಿದ್ದಾನೆ; ಅದು ನಿನಗೆ ಬಾರದಿರ್ಪುದೆ ಶೌರ್ಯಂ ಉಂಟಾದೊಡೆ =ಶೌರ್ಯವನ್ನು ಉಪಯೋಗಿಸಿದರೆ ಅದು ನಿನಗೆ ಬಾರದಿರ್ಪುದೆ? ಸಿಗದಿರುವುದೇ?.
(ಪದ್ಯ - ೩೪) |
ಪದ್ಯ - ೩೫
ಸಂಪಾದಿಸಿ
ಈ ಘಟೋತ್ಕಚನ ತನುಸಂಭವಂ ಬಡವನೇ |
ಮೇಘನಾದಂ ಕರ್ಣಸೂನು ವೃಷಕೇತು ತಾಂ |
ಮೋಘವಿಕ್ರಮನೆ ನಿನ್ನನುಜರೇಂ ಕಿರುಕುಳರೆ ಹರಿ ನೆನಸಿದೊಡೆ ಬಾರನೆ ||
ನೀ ಘನವಿದೆನ್ನದಿರು ಕೈಕೊಳಧ್ವರವ ತಾ |
ನೇ ಘಟಿಪುದಿನ್ನು ಸಂಶಯವೇಕೆ ಕರೆಸು ವಿ |
ಪ್ರೌಘವನೆನಲ್ ನೃಪಂ ನಗುತೆ ಕಲಿಭೀಮನಂ ನೋಡಲವನಿಂತೆಂದನು ||35||
ಈ ಘಟೋತ್ಕಚನ ತನುಸಂಭವಂ =ಮಗನು ಬಡವನೇ = ಸಾಮರ್ಥ್ಯವಿಲ್ಲದವನೇ ಮೇಘನಾದಂ ? (ಉತ್ತಮ ಸಾಮರ್ಥ್ಯದವನೇ ಸರಿ); ಕರ್ಣಸೂನು ವೃಷಕೇತು ತಾಂ = ತಾನು ಮೋಘ = ಇಲ್ಲದ ಕಳೆದ ವಿಕ್ರಮನೆ? ನಿನ್ನನುಜರೇಂ = ನಿನ್ನಅನುಜರೆಂ ಕಿರುಕುಳರೆ =ಚಿಕ್ಕ ಕುಳಗಳೇ - ಸಾಮಾನ್ಯ ವ್ಯಕ್ತಿಗಳೇ? ಹರಿ =ಕೃಷ್ಣ ನೆನಸಿದೊಡೆ ಬಾರನೆ = ಬರದೇ ಇರುವನೇ? ನೀ ಘನವಿದೆನ್ನದಿರು - ನೀ ==ನೀನು ಘನ = ಕಷ್ಟದ್ದು ಇದು ಎನ್ನದಿರು, ಕೈಕೊಳಧ್ವರವ ಕೈಕೊಳು = ಮಾಡು, ಅಧ್ವರವ = ಯಜ್ಞವ ತಾನೇ ಘಟಿಪುದಿನ್ನು ಘಟಿಸುವುದು = ನಡೆಯುವುದು ಸಂಶಯವೇಕೆ ಕರೆಸು ವಿಪ್ರೌಘವನೆನಲ್ = ಬ್ರಾಹ್ಮಣರ ಸಮೂಹವನ್ನು, ನೃಪಂ =ರಾಜನು ನಗುತೆ ಕಲಿಭೀಮನಂ ನೋಡಲವನಿಂತೆಂದನು - ನೋಡಲು ಅವನು ಇಂತು = ಹೀಗೆ ಎಂದನು = ಹೇಳಿದನು.
(ಪದ್ಯ - ೩೫) |
ಪದ್ಯ - ೩೬
ಸಂಪಾದಿಸಿ
ಜೀಯ ಸಂದೇಹಮೇಕುಜ್ಜುಗಿಸು ಧನಮಂ ಸ|
ಹಾಯಮಂ ತುರಗಮಂ ತೋರಿದಂ ನಿನಗೆ ನಿ|
ರ್ದಾಯದಿಂದೀ ಬಾದರಾಯಣಂ ನಾಂ ಪೋಗಿ ಭದ್ರಾವತೀ ನಗರಿಗೆ ||
ಆ ಯೌವನಾಶ್ವನಂ ಗೆಲ್ದವನ ಸೇನಾನಿ |
ಕಾಯಮಂ ತರಿದಾ ಸುವಾಜಿಯಂ ತಂದು ಮಖ |
ಕೀಯದೊಡೆ ಪರಲೋಕಬಾಹಿರಂ ತಾನಪ್ಪೆನೆಂದು ಮಾರುತಿ ನುಡಿದನು ||36||
ಜೀಯ = ಸ್ವಾಮಿಯೇ, ಸಂದೇಹಮೇಕೆ ಉಜ್ಜುಗಿಸು = ಯಜ್ಞದ ಉದ್ಯೋಗದಲ್ಲಿ ತೊಡಗು, ಧನಮಂ ಸಹಾಯಮಂ ತುರಗಮಂ ತೋರಿದಂ ನಿನಗೆ ನಿರ್ದಾಯದಿಂದೀ =ದಯೆಯಿಂದ, ಬಾದರಾಯಣಂ. ನಾಂ = ನಾನು ಪೋಗಿ =ಹೋಗಿ ಭದ್ರಾವತೀ ನಗರಿಗೆ ಆ ಯೌವನಾಶ್ವನಂ ಗೆಲ್ದವನ - ಗೆಲ್ದು = ಗೆದ್ದು ಅವನ ಸೇನಾನಿಕಾಯಮಂ ಸೇನೆಯ ದೊಡ್ಡ ಪಡೆಯನ್ನು, ತರಿದಾ - ತರಿದು = ಸೋಲಿಸಿ ಆ ಸುವಾಜಿಯಂ = ಉತ್ತಮ ಅಶ್ವವನ್ನು ತಂದು ಮಖ ಕೀಯದೊಡೆ -ಮಖಕೆ ಈಯದೊಡೆ,=ಯಜ್ಞಕ್ಕೆ ತಂದುಕೊಡದಿದ್ದರೆ, ಪರಲೋಕಬಾಹಿರಂ = ಪರಲೋಕವಾದ ಸ್ವರ್ಗಕ್ಕೆ ಹೋಗಲು ಅನರ್ಹನು, ತಾನಪ್ಪೆನೆಂದು - ತಾನು ಅಪ್ಪೆನು = ಆಗುವೆನು ಎಂದು ಮಾರುತಿ = ಭೀಮನು ನುಡಿದನು.
(ಪದ್ಯ - ೩೬) |
ಪದ್ಯ - ೩೭
ಸಂಪಾದಿಸಿ
ಯಜ್ಞಕ್ಕೆ ತುರುಗಮಂ ತಹೆನೆಂದು ಭೀಮಂ ಪ್ರ |
ತಿಜ್ಞೆಯಂ ಮಾಡುತಿರಲಾ ಕ್ಷಣದೊಳಾಹವಕ |
ಭೀಜ್ಞನೆನಿಸುವ ಕರ್ಣಸುತ ವೃಷಧ್ವಜನೆದ್ದು ನಗುತೆ ಕೈಮುಗಿದು ನಿಂತು ||
ವಿಜ್ಞಾಪನಂಗೆಯ್ದನೆಲೆ ತಾತ ಕೊಡು ತನಗ |
ನುಜ್ಞೆಯಂ ಪವಮಾನತನುಜನಾಡಿದ ನುಡಿಗ |
ವಜ್ಞೆಬಂದೊಡೆ ರವಿಕುಮಾರಂಗೆ ಜನಿಸಿದನೆ ನೋಡೆನ್ನಧಟನೆಂದನು ||37||
ಯಜ್ಞಕ್ಕೆ ತುರುಗಮಂ ತಹೆನೆಂದು =ತರುವೆನು ಎಂದು ಭೀಮಂ ಪ್ರತಿಜ್ಞೆಯಂ ಮಾಡುತಿರಲಾ - ಮಾಡುತಿರಲು ಆ ಕ್ಷಣದೊಳು ಆಹವಕಭೀಜ್ಞನೆನಿಸುವ - ಆಹವಕೆ = ಯುದ್ಧಕ್ಕೆ ಅಭಿಜ್ಞನೆನಿಸುವ = ತಿಳಿದವನು ಎನಿಸುವ, ಕರ್ಣಸುತ ವೃಷಧ್ವಜನು ಎದ್ದು ನಗುತೆ ಕೈಮುಗಿದು ನಿಂತು ವಿಜ್ಞಾಪನಂಗೆಯ್ದನೆಲೆ ->ವಿಜ್ಞಾಪನಂ =ಬಿನ್ನಹವನ್ನು ಗೈದನು = ಮಾಡಿದನು, ಎಲೆ ತಾತ ಕೊಡು ತನಗನುಜ್ಞೆಯಂ ->ಕೊಡು ತನಗೆ ಅನುಜ್ಞೆಯಂ = ಆಜ್ಞೆಯನ್ನು, ಪವಮಾನತನುಜನಾಡಿದ ->ಪವಮಾನ ತನುಜ = ಭೀಮನ ನುಡಿಗವಜ್ಞೆಬಂದೊಡೆ ನುಡಿಗೆ ಅವಜ್ಞೆ =ಅಪವಾದ ಬಂದೊಡೆ ರವಿಕುಮಾರಂಗೆ ಜನಿಸಿದನೆ ರವಿಕುಮಾರಂಗೆ = ಸೂರ್ಯಪುತ್ರ ಕರ್ಣನಿಗೆ ಜನಿಸಿದನೆ = ಹುಟ್ಟಿದವನೆ? ನೋಡೆನ್ನಧಟನೆಂದನು -> ನೋಡು ಎನ್ನ ಅಧಟನು = ಶೌರ್ಯವನ್ನು ಎಂದನು.
(ಪದ್ಯ - ೩೭) |
ಪದ್ಯ - ೩೮
ಸಂಪಾದಿಸಿ
ವ್ಯಗ್ರದಿಂ ಬಾಲನಾಡಿದ ನುಡಿಗೆ ಭೂಪತಿ ಸ |
ಮಗ್ರಸಂತೋಷದಿಂ ತೆಗೆದಪ್ಪಿಕೊಂಡು ನಿ |
ನ್ನುಗ್ರ ಪ್ರತಾಪಮಂ ಬಲ್ಲೆನಾಂ ಮಗನೆ ಕೇಳಂದು ನೆಲದಾಸೆಯಿಂದೆ ||
ಅಗ್ರಜನನಿರಿದುದಲ್ಲದೆ ಪಸುಳೆ ನಿನ್ನನೀ |
ವಿಗ್ರಹಕೆ ಕಳುಹಿ ಸ್ಟೆರಿಸುವೆನೆಂತಕಟ ವಾ |
ಜಿಗ್ರಹಣಕಾರ್ಯಮಂತಿರಲೆಂದೊಡವನೀಶ್ವರಂಗಾತನಿಂತೆಂದನು ||38||
ವ್ಯಗ್ರದಿಂ = ಪೌರುಷದಿಂದ ಬಾಲನಾಡಿದ - ಬಾಲನು ಆಡಿದ ನುಡಿಗೆ =ಮಾತಿಗೆ ಭೂಪತಿ ಸಮಗ್ರ ಸಂತೋಷದಿಂ = ಬಹಳ ಸಂತೋಷದಿಂದ ತೆಗೆದಪ್ಪಿಕೊಂಡು - ತೆಗೆದು ಅಪ್ಪಿಕೊಂಡು, ನಿನ್ನುಗ್ರ - ನಿನ್ನ ಉಗ್ರ ಪ್ರತಾಪಮಂ ಬಲ್ಲೆನಾಂ - ನಾಂ = ನಾನು ಬಲ್ಲೆನು ಮಗನೆ, ಕೇಳಂದು ಕೇಳು ಅಂದು ನೆಲದಾಸೆಯಿಂದೆ -> ನೆಲದ ಆಸೆಯಿಂದ ಅಗ್ರಜನನಿರಿದುದಲ್ಲದೆ - ಅಗ್ರಜನನು = ಅಣ್ಣನನ್ನು ಇರಿದುದಲ್ಲದೆ ಇರಿದುದು = ಕೊಂದುದು ಅಲ್ಲದೆ ಪಸುಳೆ = ಮಗುವೇ ನಿನ್ನನೀ - ನಿನ್ನನು ಈ ವಿಗ್ರಹಕೆ = ಯುದ್ಧಕ್ಕೆ ಕಳುಹಿ ಸ್ಟೆರಿಸುವೆನೆಂತಕಟ ಅಕಟ ಕಳುಹಿ ಸೈರಿಸುವೆನು = ಸಹಿಸಿಕೊಳ್ ಎಂತು =ಹೇಗೆ? ವಾಜಿಗ್ರಹಣಕಾರ್ಯಮಂತಿರಲೆಂದೊಡವನೀಶ್ವರಂಗಾತನಿಂತೆಂದನು -> ವಾಜೀಗ್ರಹಣ ಕಾರ್ಯ = ಕುದುರೆಯನ್ನು ಹಿಡಿದು ತರುವ ಕಾರ್ಯಂ,ಅಂತಿರಲಿ ಎಂದೊಡೆ ಅವನೀಶ್ವರಂಗೆ = ರಾಜನಿಗೆ ಆತನು ಇಂತೆಂದನು =ಹೀಗೆ ಹೇಳಿದನು.
(ಪದ್ಯ - ೩೮) |
ಪದ್ಯ - ೩೯
ಸಂಪಾದಿಸಿ
ತಾತ ಕೇಳ್ ಸಹಜಾತರಾದ ನಿಮ್ಮೈವರೊಳ್ |
ತಾ ತಳ್ತಿರದೆ ವಿರೋಧಿಸಿದನೆಮ್ಮಯ್ಯನಂ |
ತಾತನಪರಾಧಮಂ ಪರಿಹರಿಸದಿರ್ದೊಡಾನಿರ್ದು ಫಲವೇನು, ಬಳಿಕ ||
ಆ ತುರಂಗಮಕೆ ಪೋಪನಿಲಜನ ಕೂಡೆ ನಡೆ |
ದಾತುರದೊಳೆಯ್ತರ್ಪ ರಿಪುಚಾತುರಂಗಕಿದಿ |
ರಾತು ರಣದೊಳ್ ಗೆಲ್ವೆನಹಿತರಂ ತನಗೆ ಬೆಸೆಸೆಂದನಾ ಕರ್ಣಸೂಮ ||39||
ತಾತ = ತಂದೆ (ಚಿಕ್ಕಪ್ಪ) ಕೇಳ್ ಸಹಜಾತರಾದ ನಿಮ್ಮೈವರೊಳ್ -> ನಿಮ್ಮ ಐವರೊಳ್,ತಾ = ತಾನು (ಕರ್ಣನು) ತಳ್ತಿರದೆ -> ತಳ್ತು = ಸೇರಿ ಇರದೆ ವಿರೋಧಿಸಿದನೆಮ್ಮಯ್ಯನಂ -> ವಿರೋಧಿಸಿದನು ಎಮ್ಮ = ನನ್ನ ಅಯ್ಯನು = ತಂದೆಯು, ತಾತನ =ನನ್ನ ತಂದೆಯ -> ಅಪರಾಧಮಂ ಪರಿಹರಿಸದೆ ಇರ್ದೊಡೆ ಆನಿರ್ದು ಫಲವೇನು? ಬಳಿಕ ಆ ತುರಂಗಮಕೆ = ಕುದುರೆಗೆ ಪೋಪ = ಹೋಗುವ ನಿಲಜನ = ಭೀಮನ ಕೂಡೆ ನಡೆದಾತುರದೊಳೆಯ್ತರ್ಪ -> ನಡೆದು ರಿಪುಚಾತುರಂಗಕೆ = ಶತ್ರುಚತುರಂಗ ಸೇನೆಯನ್ನು ಇದಿರಾತು = ಎದುರಿಸಿ ರಣದೊಳ್ =ಯುದ್ಧದಲ್ಲಿ ಗೆಲ್ವೆನು ಗೆಲ್ಲುವೆನು ಅಹಿತರಂ = (ಹಿತರಲ್ಲದವರು) ಶತ್ರುಗಳನ್ನು, ತನಗೆ ಬೆಸೆಸೆಂದನಾ -> ಬೆಸಸು =ಹೇಳು ಅಪ್ಪಣೆ ಕೊಡು ಎಂದನು ಆ ಕರ್ಣಸೂಮ.
(ಪದ್ಯ - ೩೯) |
ಪದ್ಯ - ೪೦
ಸಂಪಾದಿಸಿ
ಅಪ್ರತಿ ಪರಾಕ್ರಮಿ ವೃಕೋದರಂ ಮಾಡಿದ ಘ |
ನ ಪ್ರತಿಜ್ಞೆಯನಿನಜತನಯನಾಡಿದ ಗಭೀ |
ರಪ್ರತಾಪವನಾಗಲಾ ಘಟೋತ್ಕಚನ ಸುತ ಮೇಘನಾದಂ ಕೇಳಿದು ||
ಕ್ಷಿಪ್ರದಿಂದೆದ್ದು ಬಂದವನಿಪಾಲಕನ ಚರ |
ಣಪ್ರದೇಶಕೆ ತನ್ನ ಹೊಳೆಹೊಳೆವ ಲಲಿತ ರತ್ನ |
ಪ್ರಭಾಶೋಭೀತ ಕಿರೀಟಮಂ ಚಾಚುತೊಯ್ಯನೆ ಬಿನ್ನಪಂ ಗೆಯ್ದನು ||40||
ಅಪ್ರತಿ =ಎದುರಿಲ್ಲದ ಪರಾಕ್ರಮಿ ವೃಕೋದರಂ ಮಾಡಿದ ಘನ = ದೊಡ್ಡ ಪ್ರತಿಜ್ಞೆಯನಿನಜತನಯನಾಡಿದ -> ಪ್ರತಿಜ್ಞೆ ಇನಜತನಯನು =ಕರ್ಣನ ಮಗ ಆಡಿದ ಗಭೀರಪ್ರತಾಪವನಾಗಲಾ -> ಗಭೀರ =ಗಂಭೀರ ಪ್ರತಾಪವನು ಆಗಲು = ಆಗ ಆ ಘಟೋತ್ಕಚನ ಸುತ ಮೇಘನಾದಂ ಕೇಳಿದು = ಕೇಳಿಕೊಡು ಕ್ಷಿಪ್ರದಿಂದೆದ್ದು = ಕೂಡಲೆ ಎದ್ದು, ಬಂದು ಅವನಿಪಾಲಕನ ಚರಣಪ್ರದೇಶಕೆ ಅವನಿಪಾಲನ = ರಾಜನ ಚರಣಪ್ರದೇಶಕೆ = ಕಾಲಿಗೆ ತನ್ನ ಹೊಳೆಹೊಳೆವ ಲಲಿತ ರತ್ನಪ್ರಭಾಶೋಭೀತ = ರತ್ನಗಳಿಂದ ಹೊಳೆಯುತ್ತಿರುವ, ಕಿರೀಟಮಂ ಚಾಚುತ ಒಯ್ಯನೆ = ಮೆಲ್ಲಗೆ ಬಿನ್ನಪಂ =ವಿಜ್ಞಾಪನೆಯನ್ನು ಗೆಯ್ದನು = ಮಾಡಿದನು.
(ಪದ್ಯ - ೪೦) |
ಪದ್ಯ - ೪೧
ಸಂಪಾದಿಸಿ
ಭದ್ರಾವತಿಗೆ ನಡೆದು ಯೌವನಾಶ್ವನ ಬಲ ಸ |
ಮುದ್ರಮಂ ಕಲಕದಿರ್ಪನೆ ಕೆರಳ್ದೊಡೆ ಕಾಲ |
ರುದ್ರನಲ್ಲಾ ವೃಕೋದರನೀ ವೃಷಧ್ವಜನೊಳಿದಿರಾಂಪೊಡಾಹವದೊಳು ||
ಅದ್ರಿಮಥನಂಗರಿದು ಸಾಕದಂತಿರಲಿ ವೈ |
ರಿದ್ರುಮಂಗಳನೆ ಖಂಡಿಸುವೆನೆಂಬಾಳುತನ |
ದುದ್ರೇಕಮೆನಗಿಲ್ಲ ನಿನ್ನವರ್ಗಶ್ವಮಂ ಪಿಡಿದೊಪ್ಪಿಸುವೆನೆಂವನು ||41||
(ಭೀಮನು) ಭದ್ರಾವತಿಗೆ ನಡೆದು ಯೌವನಾಶ್ವನ ಬಲ =ಸೈನ್ಯ ಸಮುದ್ರಮಂ ಕಲಕದಿರ್ಪನೆ = ಚದುರಿಸದಿರುವನೇ, ಕೆರಳ್ದೊಡೆ = ಸಿಟ್ಟಾದರೆ ಕಾಲರುದ್ರನಲ್ಲಾ ವೃಕೋದರನೀ = ವೃಕೋದರನು ಕಾಲರುದ್ರ ನಿಗೆ ಸಮ,ವೃಷಧ್ವಜನೊಳಿದಿರಾಂಪೊಡಾಹವದೊಳು -> ವೃಷಧ್ವಜನೊಳು ಇದಿರಾಂಪೊಡೆ = ಎದರಿಸುವುದಾದರೆ ಹವದೊಳು = ಯುದ್ಧದಲ್ಲಿ ಅದ್ರಿಮಥನಂಗೆ = ಸಮುದ್ರ ಕಡೆದ ಇಂದ್ರನಿಗೆ ಅರಿದು =ಅಸಾಧ್ಯ, ಸಾಕದಂತಿರಲಿ -> ಸಾಕು ಅದು ಅಂತು ಇರಲಿ = ಅದು ಹಾಗಿರಲಿ, ವೈರಿ ದ್ರುಮಂಗಳನೆ = ವೈರಿ ಮರಗಳನ್ನು ಖಂಡಿಸುವೆನೆಂಬಾಳುತನದ -> ಖಂಡಿಸುವೆನು = ಕಡಿದುಹಾಕುವೆನು ಎಂಬ ಆಳುತನದ = ಪೌರುಷ, ಉದ್ರೇಕಮ್ = ಹುಮ್ಮಸ್ಸು ಎನಗಿಲ್ಲ = ತನಗಿಲ್ಲ, (ಆದರೂ) ನಿನ್ನವರ್ಗಶ್ವಮಂನಿನ್ನವರ್ಗೆ = ನಿನ್ನವರಿಗೆ (ಭೀಮಾದಿಗಳಿಗೆ) ಅಶ್ವಮಂ = ಕುದುರೆಯನ್ನು ಪಿಡಿದೊಪ್ಪಿಸುವೆನೆಂವನು -> ಪಿಡಿದು =ಹಿಡಿದು ಒಪ್ಪಸುವೆನು ಎಂದು ಮೇಘನಾದನು ಹೇಳಿದನು.
(ಪದ್ಯ - ೪೧) |
ಪದ್ಯ - ೪೨
ಸಂಪಾದಿಸಿ
ಕರ್ಣತನುಸಂಭವಂ ಬಂದೊಡೇನೀ ಮೇಘ |
ವರ್ಣನೈತಂದೊಡೇನಾಂ ಪೋದೊಡೇನೀ ಸು |
ಪರ್ಣವಾಹನನ ಬಲ್ಪುಂಟಾದೊಡಪ್ಪುದಿವರಿರ್ವರಂ ಕೂಡಿಕೊಂಡು ||
ಅರ್ಣವೋಪಮ ಯೌವನಾಶ್ವ ಚತುರಂಗಮಂ |
ನಿರ್ಣಾಮವೆನಿಸಿ ವಾಜಿಗ್ರಹಣಕಾರ್ಯಮಂ |
ನಿರ್ಣಯಿಸಿ ಕೊಡುವೆನಿತ್ತಪುದೆನೆಗೆ ವೀಳೆಯವನೆಂದನಿಲಜಂ ನುಡಿದನು ||42||
ಕರ್ಣತನುಸಂಭವಂ =ಕರ್ಣನಮಗ ಬಂದೊಡೇನೀ ->ಬಂದೊಡೆ ಏನು ಈ = ಬಂದರೇನು? -> ಈ ಮೇಘವರ್ಣನೈತಂದೊಡೇನಾಂ -> ಈ ಮೇಘವರ್ಣನು ಐತಂದೊಡೇನು ಆ = ಮೇಘನಾದನು ಬಂದರೇನು ಆಂ = ನಾನು ಪೋದೊಡೇನೀ ಪೋದೊಡೆ, ಏನು ಹೋದರೆ ಏನು? ಸುಪರ್ಣವಾಹನನ = ಗರುಡವಾನ ಕೃಷ್ನನ ಬಲ್ಪುಂಟಾದೊಡಪ್ಪುದಿವರಿರ್ವರಂ -> ಬಲ್ಪು = ಬಲವು (ಸಹಾಯ) ಉಂಟಾದೊಡೆ ಅಪ್ಪುದು = (ಕೆಲಸ) ಆಗುವುದು ಇವರ ಈರ್ವರಂ = ಇಬ್ಬರನ್ನು ಕೂಡಿಕೊಂಡು ಅರ್ಣವೋಪಮ ಅರ್ಣವ ಉಪಮ = ಸಮುದ್ರಕ್ಕೆ ಸಮನಾದ, ಯೌವನಾಶ್ವ ಚತುರಂಗಮಂ = ಚತುರಂಗ ಸೈನ್ಯವನ್ನು ನಿರ್ಣಾಮವೆನಿಸಿ = ನಿರ್ನಾಮಮಾಡಿ ವಾಜಿಗ್ರಹಣಕಾರ್ಯಮಂ -> ವಾಜಿ ಗ್ರಹಣ ಕಾರ್ಯಮಂ = ಕುದುರೆಯನ್ನು ಹಿಡಿದುತರುವ ಕೆಲಸವನ್ನು ನಿರ್ಣಯಿಸಿ = ನಿಶ್ಚಯಗೊಳಿಸಿ - ತೀರ್ಮಾನಮಾಡಿ ಕೊಡುವೆನಿತ್ತಪುದೆನೆಗೆ -> ಕೊಡುವೆನು ಇತ್ತಪುದು = ಕೊಡುವುದು ವೀಳೆಯವನೆಂದು = ವೀಲೆಯದ ಎಲೆಯ ಮೇಲೆ ಅಡಿಕೆಯನ್ನು ಇಟ್ಟು ತಾಂಬೂಲವನ್ನು (ಹೀಗೆ ಅಪ್ಪಣೆ ಕೊಡುವುದು ಸಂಪ್ರದಾಯ) ಕೊಡುವುದು ಆಜ್ಞೆಯನ್ನು ಎಂದು ಅನಿಲಜಂ = ಭೀಮನು ನುಡಿದನು.
(ಪದ್ಯ - ೪೨) |
ಪದ್ಯ - ೪೩
ಸಂಪಾದಿಸಿ
ಇಂದು ಕುಲತಿಲಕ ಜನಮೇಜಯನರೇಂದ್ರ ಕೇ |
ಳಂದವರ್ ಮೂವರುಂ ತುರಗಮಂ ಕೊಂಡು ಬಹೆ |
ವೆಂದು ಬೆಸನಂ ಬೇಡಿ ನಿಂದಿರಲ್ ಬಾದರಾಯಣನ ಮೊಗಮಂ ನೋಡುತೆ||
ಇಂದಿವರನಾಂ ಕಳುಪಲಸುರವೈರಿಗೆ ಬೇಸ |
ರೊಂದಿನಿಸು ತೋರದಿರ್ಪುದೆ ಜೀಯ ತನಗಿದಕೆ |
ಮುಂದುಗಾಣಿಸದು ಕರುಣಿಪುದೆನೆ ಯುಧಿಷ್ಠಿರಂಗಾ ತಪೋನಿಧಿ ನುಡಿದನು ||43||
ಇಂದು ಕುಲತಿಲಕ ಜನಮೇಜಯ ನರೇಂದ್ರ = ಚಂದ್ರವಂಶದ ತಿಲಕದಮತೆ ಪ್ರಕಾಸಿಸುವ ಜನಮೇಜಯ ರಾಜನೇ ಕೇಳು, ಕೇಳಂದವರ್ -> ಅಂದು ಅವರ್ ಮೂವರುಂ ತುರಗಮಂ ಕೊಂಡುಬಹೆವೆಂದು =ತರುವೆವೆಂದು, ಬೆಸನಂ = (ಹೇಳಿಕೆ) ಅಪ್ಪಣೆಯನ್ನು ಕೇಳಿ ಬೇಡಿ ನಿಂದಿರಲ್ ಬಾದರಾಯಣನ ಮೊಗಮಂ = ಮುಖವನ್ನು ನೋಡುತೆ ಇಂದಿವರನಾಂ -> ಇಂದು ಇವರನು ಆಂ = ನಾನು ಕಳುಪಲಸುರವೈರಿಗೆ -> ಕಳುಪಲು = ಕಳಿಸಿದರೆ, ಅಸುರವೈರಿಗೆ =ಕೃಷ್ಣನಿಗೆ ಬೇಸರೊಂದಿನಿಸು = ಬೇಸರ ಒಂದು ಇನಿಸು =ಒಂದು ಸ್ವಲ್ಪ ಬೇಸರ ತೋರದಿರ್ಪುದೆ = ಆಗದಿರುವುದೇ? (ತನ್ನ ಆಬಿಪ್ರಾಯ ಕೇಳಲಿಲ್ಲ ಎಂದು); ಜೀಯ ತನಗಿದಕೆ -> ತನಗೆ ಇದಕೆ ಮುಂದುಗಾಣಿಸದು -> ಮಂದು ಕಾಣಿಸದು = ಮುಂದೆಏನುಮಾಡುವುದೆಂದು ತಿಳಿಯದು, ಕರುಣಿಪುದೆನೆ -> ಕರುಣಿಸುವುದು ಎನೆ = ಕರುಣೆಯಿಂದ ದಾರಿ ತೋರಿ ಎನ್ನಲು, ಯುಧಿಷ್ಠಿರಂಗಾ -> ಯುಧಿಷ್ಠಿರಂಗೆ ಆ ತಪೋನಿಧಿ ನುಡಿದನು.
(ಪದ್ಯ - ೪೩) |
ಪದ್ಯ - ೪೪
ಸಂಪಾದಿಸಿ
ಭೂಪ ಕೇಳ್ ನೀಂ ಮುರುಳೆ ಹರಿ ನಿನ್ನೆಡೆಯೊಳಲಸ ||
ಲಾಪನೇ ಬೆಸನ ಬೇಡುವ ವೃಕೋದರನಪ್ರ |
ತಾಪನೇ ವೃಷಕೇತು ಮೇಘವರ್ಣಕರನೊಡಗೊಂಡು ಕುದುರೆಗೆ ನಡೆಯಲಿ||
ಈ ಪವನ ತನಯನಂ ಕಳೂಹೆಂದು ನಯದೊಳಾ
ತಾಪಸೋತ್ತಮನೊಡಂಬಡಿಸೆ ನುಡಿದಾಜ್ಞಾನು |
ರೂಪದಿಂದರಸನಿತ್ತಂ ಭೀಮ ಹೈಡಿಂಬಿ ಕರ್ಣಜರ್ಗನುಮತಿಯನು ||44||
ಭೂಪ ಕೇಳ್ =ರಾಜನೇ ಕೇಳು, ನೀಂ ನೀನು, ಮುರುಳೆ ಹರಿ ನಿನ್ನೆಡೆಯೊಳಲಸಲಾಪನೇ -> ನಿನ್ನ ಎಡೆಯೊಳು ಅಲಸಲು =ಆಲಸ್ಯ ಪಡಲು ಆಪನೇ? = ಕೃಷ್ಣನು ನಿನ್ನ ಬಗೆಗೆ ಬೇಸರ ಪಡುವನೇ? ಬೆಸನ = (ಬೆಸಸು= ಹೇಳು, ಹೇಳಿಕೆ)ಅಪ್ಪಣೆ ಬೇಡುವ ವೃಕೋದರನು ಅಪ್ರತಾಪನೇ = ಶೂರನಲ್ಲದವನೇ? ವೃಷಕೇತು ಮೇಘವರ್ಣಕರನೊಡಗೊಂಡು -> ವೃಷಕೇತು ಮೇಘವರ್ಣಕರನು = ಮೇಘನಾದ ಒಡಗೊಂಡು = ಒಡಗೂಡಿ ಕುದುರೆಗೆ = ಕುದುರೆ ತರಲು ನಡೆಯಲಿ ಈ ಪವನ ತನಯನಂ ಕಳೂಹೆಂದು -> ಕಳುಹು ಎಂದು ನಯದೊಳಾ ನಯದೊಳು = (ಅನುನಯ) ಪ್ರೀತಿಯಿಂದ ಆ ತಾಪಸೋತ್ತಮನೊಡಂಬಡಿಸೆ -> ತಾಪಸೋತ್ತಮನು ಒಡಂಬಡಿಸೆ = ಧರ್ಮಜನನ್ನು ಒಪ್ಪಿಸಲು ನುಡಿದಾಜ್ಞಾನುರೂಪದಿಂದರಸನಿತ್ತಂ ->ನುಡಿದ ಆಜ್ಞಾ ಅನುರೂಪದಿಂದ ಅರಸನು ಇತ್ತಂ = ಕೊಟ್ಟನು ಭೀಮ ಹೈಡಿಂಬಿ (ಮೇಘನಾದ) ಕರ್ಣಜರ್ಗೆ (ವೃಷಕೇತು) ಅನುಮತಿಯನು.
(ಪದ್ಯ - ೪೪) |
ಪದ್ಯ - ೪೫
ಸಂಪಾದಿಸಿ
ಬಳಕ ನೃಪನಂ ಪರಸಿ ಬೀಳ್ಕೊಂಡು ಮುನಿವರಂ |
ತಳರ್ದನಾಶ್ರಮಕಿತ್ತಲಂಜುತೆ ಯುಧಿಷ್ಠಿರಂ |
ನಳಿನಾಕ್ಷನಿಲ್ಲದದ್ವರಕುಪಕ್ರಮಿಸೆ ನಡೆಯದು ಕಿರೀಟಯನೀಗಳೆ ||
ಕಳುಹಿ ಕರೆಸುವೆನೆಂಬೆಣಿಕೆಯೊಳಿರನ್ನೆಗಂ |
ತೊಳಲುತರಸುವ ಬಳ್ಳಿ ಕಾಲ್ದೊಡಕಿದಂತರಸು |
ಗಳ ಶಿರೋಮಣೀಗೆ ಸಂಭ್ರಮದೊಳೈತಂದು ಬಿನ್ನೈಸಿದಂ ಚರನೊರ್ವನು ||45|||
ಬಳಿಕ ನೃಪನಂ ಪರಸಿ = ಹರಸಿ ಬೀಳ್ಕೊಂಡು ಮುನಿವರಂ ತಳರ್ದನಾಶ್ರಮಕಿತ್ತಲಂಜುತೆ -ತಳರ್ದನು =ಹೋದನು ಆಶ್ರಮಕೆ; ಇತ್ತಲು ಈಕಡೆ = ಅಂಜುತೆ ಯುಧಿಷ್ಠಿರಂ, ನಳಿನಾಕ್ಷನಿಲ್ಲದದ್ವರಕುಪಕ್ರಮಿಸೆ-> ನಳಿನಾಕ್ಷನು = ಕೃಷ್ಣನು ಇಲ್ಲದೆ ಅಧ್ವರಕೆ = ಯಜ್ಞಕ್ಕೆ ಉಪಕ್ರಮಿಸೆ = ಆರಂಭಿಸಿದರೆ ನಡೆಯದು; ಕಿರೀಟಯನೀಗಳೆ -> ಕಿರೀಟಿಯನು = ಅರ್ಜುನನ್ನು ಈಗಳೆ ಕಳುಹಿ ಕರೆಸುವೆನೆಂಬೆಣಿಕೆಯೊಳಿರನ್ನೆಗಂ ->ಕರೆಸುವೆನು, ಎಂಬ ಎಣಿಕೆಯೊಳಿರೆ ಎಣಿಕೆಯೊಳು ಇರೆ= ಯೋಚನೆಯಲ್ಲಿ ಇರಲು, ಅನ್ನೆಗಂ = ಅದುವರೆಗೆ ತೊಳಲುತರಸುವ-> ತೊಳಲುತ = ಶ್ರಮದಿಂದ ಅರಸುವ = ಹುಡುಕುವ ಬಳ್ಳಿ ಕಾಲ್ದೊಡಕಿದಂತರಸುಗಳ->ಕಾಲ್ = ಕಾಲಿಗೆ ತೊಡಕಿದಂತೆ = ಸಿಕ್ಕದಂತೆ, ಅರಸುಗಳ ಶಿರೋಮಣಿಗೆ = ಅರಸುಗಳಲ್ಲಿ ಶ್ರೇಷ್ಸನಾದ ಧರ್ಮಜನಿಗೆ ಸಂಭ್ರಮದೊಳು = ಸಂತಸದಿಂದ ಐತಂದು = ಬಂದು ಬಿನ್ನೈಸಿದಂ = ಹೇಳಿದನು, ಚರನೊರ್ವನು-> ಚರನು = ದೂತನು ಓರ್ವನು = ಒಬ್ಬ;
(ಪದ್ಯ - ೪೫) |
ಪದ್ಯ - ೪೬
ಸಂಪಾದಿಸಿ
ಅವಧಾನ ಜೀಯ ನಮ್ಮೀಪೊಳಲ ಪೊರೆಗೆ ಯಾ ||
ದವರೆರೆಯನಿದೆ ಬಂದನೆನೆ ಘಳಿಲನೆದ್ದು ನಿಂ |
ದವನ ನುಡಿಗುಚಿತಮಂ ಕುಡುತೆ ಭಕ್ತಾವಳಿಯ ಬಗೆಯನೊಡರಿಸುವೆಡೆಯೊಳು||
ತವಕಮೆನಿತೋ ಮುರಾರಿಗೆ ಮಹಾದೇವ ತ್ರೈ |
ಭೂವನದೊಳ್ ತಾನೇ ಕೃತಾರ್ಥನಲ್ಲಾ ಕೌತು |
ಕವನಿಂದು ಕಂಡೆನೆನುತರಸನರಮನೆಯಿಂದೆ ಪೊರೆಮಟ್ಟು ನಡೆತಂದನು ||46||
ಅವಧಾನ ( ಗೌರವ ಸಂಬೋದನೆ - ಕೇಳಿಸಿಕೊಳ್ಳಿ) ಜೀಯ =ದೊರೆಗಳೇ ನಮ್ಮೀಪೊಳಲ => ನಮ್ಮ ಈ ಪೋಳಲ = ನಗರದ ಪೊರೆಗೆ = ಹೊರಗೆ ಯಾದವರೆರೆಯನಿದೆ ->ಯಾದವರ ಎರೆಯನು = ಒಡೆಯನು, ಇದೆ ಬಂದನೆನೆ-> ಬಂದನು ಎನೆ, ಘಳಿಲನೆದ್ದು -> ಘಳಲನೆ = ತಕ್ಷಣ ಎದ್ದು ನಿಂದವನ -> ನಿಂದು ಅವನ ನುಡಿಗುಚಿತಮಂ ನುಡಿಗೆ ಉಚಿತವನು ಕುಡುತೆ = ಕೊಟ್ಟು; ಭಕ್ತಾವಳೀಯ ಭಕ್ತಾವಳಿಯ = ಭಕ್ತರ ಸಮೂಹದ ಬಗೆಯನೊಡರಿಸುವೆಡೆಯೊಳು-> ಬಗೆಯನು = ಕೋರಿಕೆಯನ್ನು ಒಡರಿಸುವ = ಈಡೇರಿಸುವ, ಎಡೆಯೊಳು = ಮಾರ್ಗದಲ್ಲಿ ತವಕಮೆನಿತೋ ತವಕಮು = ಆಸೆಯು ಎನಿತೊ = ಎಷ್ಟೊಂದು (ಇದೆ) ಮುರಾರಿಗೆ ಮಹಾದೇವ! ತ್ರೈಭೂವನದೊಳ್ = ಮೂರು ಲೋಕದಲ್ಲಿ ತಾನೇ ಕೃತಾರ್ಥನಲ್ಲಾ = ತನೇ ಕೃತಾರ್ಥನಲ್ಲವೇ! ಕೌತುಕವನಿಂದು = ಆಶ್ಚರ್ಯವನ್ನು ಇಂದು ಕಂಡೆನೆನುತರಸನರಮನೆಯಿಂದೆ ->ಇಂದು ಕಂಡೆನು ಎನುತ ಅರಸನು ಅರಮನೆಯಿಂದೆ ಪೊರೆಮಟ್ಟು ನಡೆತಂದನು = ಬಂದನು..
(ಪದ್ಯ ೪೬) |
ಪದ್ಯ - ೪೭
ಸಂಪಾದಿಸಿ
ಮಿತ್ರೋದಯಾತ್ಪರದೊಳೈತಂದು ಹಯಮೇಧ |
ಸತ್ರ ಸಾಧನಕೆ ವೇದವ್ಯಾಸಮುನಿ ಧರ್ಮ |
ಪುತ್ರನಂ ಬೋಧಿಸಿ ಮರಳ್ದನಾ ರಾತ್ರಿಯೊಳ್ ಬಂದನೊಲಿದಿಭನಗರಿಗೆ ||
ಪತ್ರೀಂದ್ರವಾಹನಂ ಬಳಿಕೈದೆ ಪಾಂಡವ ಧ |
ರಿತ್ರೀರಮಣರಿದಿರ್ಗೊಂಡರುಗ್ಗಡಣೆಯ ವಿ |
ಚಿತ್ರ ಪಾಠಕರ ವಾದ್ಯಧ್ವನಿಯ ಸಾಲಕೈದೀವಿಗೆಯ ಸಂಭ್ರಮದೊಳು ||47||
ಮಿತ್ರೋದಯಾತ್ಪರದೊಳೈತಂದು-> ಮಿತ್ರ = ಸೂರ್ಯ ಉದಯಾತ್ಪರದೊಳ್ = ಉದಯದ ನಂತರ ಐತಂದು ಬಂದು, ಹಯಮೇಧ ಸತ್ರ ಸಾಧನಕೆ = ಅಶ್ವಮೇಧ ಯಜ್ಞದ ಕಾರ್ಯ ಮಾಡಲು, ವೇದವ್ಯಾಸಮುನಿ ಧರ್ಮಪುತ್ರನಂ = ಧರ್ಮಜನಿಗೆ ಬೋಧಿಸಿ, ಮರಳ್ದನಾ-> ಮರಳ್ದನು ಆ =ಮರಳಿಹೊದನು ಆ ರಾತ್ರಿಯೊಳ್ ಬಂದನೊಲಿದಿಭನಗರಿಗೆ ಪತ್ರೀಂದ್ರವಾಹನಂ->ಬಂದನು ಒಲಿದು ಇಭನಗರಿಗೆ = ಹಸ್ತಿನಾವತಿಗೆ, ಪತ್ರೀಂದ್ರವಾಹನಂ-> ಪತ್ರಿ = ಪಕ್ಷಿ ಇಂದ್ರ = ಸ್ವಾಮಿಯಾದ ಗರುಡ ವಾಹನಂ = ಕೃಷ್ಣನು, ಬಳಿಕೈದೆ ಪಾಂಡವ ಧರಿತ್ರೀರಮಣರಿದಿರ್ಗೊಂಡರುಗ್ಗಡಣೆಯ->ಬಳಿಕ ಐದೆ = ಬರಲು ಪಾಂಡವ ಧರಿತ್ರೀರಮಣರ್ =ಪಾಂಡವ ರಾಜ ಕುಮಾರರು ಇದಿರ್ಗೊಂಡುರು = ಕೃಷ್ಣನನ್ನು ಎದಿರುಕೊಂಡರು = ಗೌರವಯುತವಾಗಿ ಬರಮಾಡಿಕೊಂಡರು, (ಎದುರು ಹೋಗಿ ಅರ್ಘ್ಯ ಪಾದ್ಯಗಳನ್ನು ಕಳಶ ಕನ್ನಡಿ, ಬಯಾರಿಕೆಗೆ ಪಾನೀಯ, ನರಳಿಗೆ ಛತ್ರಿ, ಸೆಖೆಗೆ ಚಾಮರದ ಗಾಳಿ, ಓಲಗ,ಅರಳು,ಪುಷ್ಪ ಮಳೆಗರೆಯುವುದು, ಇತ್ಯಾದಿ ಕ್ರಮವಿದೆ) ಉಗ್ಗಡಣೆಯ = ಉತ್ಸವ ರೀತಿಯಲ್ಲಿ, ವಿಚಿತ್ರ ಪಾಠಕರ, ವಾದ್ಯಧ್ವನಿಯ, ಸಾಲಕೈದೀವಿಗೆಯ ಸಂಭ್ರಮದೊಳು (ಬರಮಾಡಿಕೊಂಡರು).
(ಪದ್ಯ ೪೭) |
ಪದ್ಯ - ೪೮
ಸಂಪಾದಿಸಿ
ಮಿರುಪ ಮಣಿಮಕುಟದೋರಣಿಸಿದಳಕಾವಳಿಯ |
ಪೆರೆನೊಸಲ ಕತ್ತುರಿಯ ಸುಲಲಿತಭ್ರೂಲತೆಯ |
ತುರುಗೆವೆಯ ನಿಟ್ಟೆಸಳುಗಂಗಳ ಸುನಾಸಿಕದ ಪೊಳೆವಲ್ಲ ನಸುದೋರುವ ||
ಕಿರುನಗೆಯ ಕದಪುಗಳೆ ಕುಂಡಲದ ಚೆಲ್ವಿನಿಂ |
ಮೆರೆವ ಸದ್ವದನನಂ ಮೋಹನ ಸದನನಂ |
ನೆರೆಸೊಬಗ ಮದನನಂ ಪಡೆದ ನಿಜರೂಪನಂ ಕಂಡನವನೀಪಾಲನು ||48||
(ಕಂಡನು ಅವನೀಪಾಲನು-> ಧರ್ಮರಾಯನು) ಮಿರುಪ = ಹೊಳೆಯುತ್ತಿರುವ, ಮಣಿಮಕುಟದ =ಕಿರೀಟದ ಓರಣಿಸಿದ = ಸಾಲಾಗಿ ಇರುವ ಅಳಕಾವಳಿಯ =ಮಂಗುರುಗಳ ಪೆರೆನೊಸಲ =ವಿಶಾಲವಾದ ಹಣೆಯ, ಕತ್ತುರಿಯ = ಕಸ್ತೂರಿ (ಪೂಸಿದ) ಸುಲಲಿತ ಭ್ರೂಲತೆಯ =ಸುಂದರ ಬಳ್ಳಿಯ ಹುಬ್ಬಿನ, ತುರುಗೆವೆಯ = ಜುಟ್ಟಿನ, ನಿಟ್ಟೆಸಳುಗಂಗಳ = ವಿಶಾಲ ಎಸಳು ಕಣ್ಣುಗಳ, ಸುನಾಸಿಕದ ಸುಂದರವಾದ ಮೂಗಿನ, ಪೊಳೆವಲ್ಲ = ಹೊಳೆಯುತ್ತಿರುವ ಬಿಳಿಹಲ್ಲಿನ, ನಸುದೋರುವ =ಸ್ವಲ್ಪ ಕಾಣುವ, ಕಿರುನಗೆಯ ಕದಪುಗಳೆ = ಕೆನ್ನಗಳ, ಕುಂಡಲದ ಕಿವಿಲ್ಲಿರು ಸುಂದರ ಕರ್ಣಕುಂಡಲದ ಚೆಲ್ವಿನಿಂ ಈ ಬಗೆಯ ಚಲುವಿನಿಂದ ಮೆರೆವ = ಪ್ರಕಾಶಿಸುವ, ಸದ್ವದನನಂ = ಸುಂದರ ಮುಖದವನನ್ನು, ಮೋಹನ ಸದನನಂ = (ಮೋಹದ ಮನೆ) ಸುಂದರ ರೂಪನನ್ನು, ನೆರೆಸೊಬಗ ಮದನನಂ =ಬಹಳ ಸೊಬಗಿನ ಮನ್ಮಥನನ್ನು ಪಡೆದ ನಿಜರೂಪನಂ =ಸತ್ ಸವರೂಪನನ್ನು, ಅವನೀ ಪಾಲನಾದ ಧರ್ಮರಾಯನು ಕಂಡನು .
(ಪದ್ಯ ೪೮) |
ಪದ್ಯ - ೪೯
ಸಂಪಾದಿಸಿ
ಭೂರಮಣ ಕೇಳ್ ಮುರಧ್ವಂಸಿ ನರಲೀಲಾವ |
ತಾರಮಂ ತಾಳ್ದು ಹೊಂದೇರನಿಳಿದೈತಂದು |
ಚಾರುಹಾಸದೊಳಾ ಯುಧಿಷ್ಠಿರನ ಕಾಲ್ಗೆರಗಲಾ ನೃಪಂ ಕೂಡೆ ತೊಲಗಿ ||
ವಾರಿಜಾಂಬಕನ ಪದಪಲ್ಲವಕೆ ಮಣಿಯು ತಿರ |
ಲಾ ರಾಯನಂ ತೆಗೆದು ತಳ್ಕೈಸಲರಸನಸು |
ರಾರಿಯಂ ಪ್ರೇಮದಿಂ ಬಿಗಿಯಪ್ಪಿದಂ ಮತ್ತೆ ಮುನಿಜನಂ ಬೆರಗಾಗಲು ||49||
ಭೂರಮಣ =ಭೂಮಿಗೆ ಪತಿ ಕೇಳ್ = ರಾಜ ಜನಮೇಜಯ ರಾಜನೇ ಕೇಳು, ಮುರಧ್ವಂಸಿ = ಕೃಷ್ಣನು ನರಲೀಲಾವತಾರಮಂ ತಾಳ್ದು =ಮನುಷ್ಯಲೀಲೆಯ ಅವತಾರ ತಾಳಿ ಹೊಂದೇರನಿಳಿದೈತಂದು -> ಹೊನ್ನಿನ ತೇರನು ಇಳಿತಂದು = ಇಳಿದು ಬಂದು ಚಾರುಹಾಸದೊಳಾ -> ಚಾರು=ಸುಂದರ ಹಾಸ=ನಗು = ನಗುಮುಖದಲ್ಲಿ ಯುಧಿಷ್ಠಿರನ ಕಾಲ್ಗೆರಗಲಾ -> ಕಾಲ್ಗೆ ಎರಗಲು ಆ = ಕಾಲಿಗೆ ನಮಸ್ಕರಿಸಲು, ಆ ನೃಪಂ =ರಾಜ ಯುಧಿಷ್ಟಿರನು, ಕೂಡೆ ತೊಲಗಿ = ಕೂಡಲೆ ಸರಿದು (ಹಿರಿಯವನಾದರೂ ಸಂಕೋಚದಿಂದ), ವಾರಿಜಾಂಬಕನ ಪದಪಲ್ಲವಕೆ ಮಣಿಯು -> ವಾರಿಜಾಂಬಕನ = ಕಮಲದಳದಂತೆ ವಿಶಾಲ ಕಣ್ಣಿನ ಕೃಷ್ಣನ ಪದಪಲ್ಲವಕೆ = (ಪಲ್ಲವ=ಚಿಗುರುಎಲೆ) ಪಾದಕ್ಕೆ ಮಣಿಯುತಿರಲಾ = ನಮಸ್ಕರಿಸುತ್ತಿರಲು, ಆ ರಾಯನಂ = ರಾಜನನ್ನು ತೆಗೆದು ತಳ್ಕೈಸಲರಸನಸುರಾರಿಯಂ -> ತಳ್ಕೈಸಲು ಅರಸನಂ =ಧರ್ಮಜನನ್ನು, ಅಸುರಾರಿಯಂ = ಅರಸನನ್ನು ಎತ್ತಿ ಉಪಚರಿಸಲು, ಅರಸನು ಕೃಷ್ಣನನ್ನು,ಪ್ರೇಮದಿಂ =ಪ್ರೀತಿಯಿಂದ ಬಿಗಿಯಪ್ಪಿದಂ ಮತ್ತೆ =ಇರುಗಿ /ಬದಲಾಗಿ ಬಿಗಿಯಾಗಿ ಅಪ್ಪಿಕೊಂಡನು;ಇದನ್ನು ನೋಡಿ ಮುನಿಜನಂ = ಮುನಿಗಳೂ ಜನರೂ ಬೆರಗಾಗಲು = ಬೆರಗಾದರು. ಕೃಷ್ಣನ್ನು ಕಾಣಬೇಕೇಂದು ತವಕಿಸುತ್ತರವ ಸಮಯಕ್ಕೆ ಸರಿಯಾಗಿ ಅವನೇ ಇವನ ಅರಮನೆ ಬಾಗಿಲಿಗೆ ಬಂದುದು ಧರ್ಮಜನಿಗೆ ಹರ್ಷಾತಿರೇಕಕ್ಕೆ ಕಾರಣವಾಯಿತು)
(ಪದ್ಯ ೪೯) |
ಪದ್ಯ - ೫೦
ಸಂಪಾದಿಸಿ
ಮುರಹರಂ ಬಳಿಕ ವಂದಿಸುವ ಭಿಮಾದಿ ಭೂ ||
ವರ ಸಹೋದರರನಾಲಿಂಗಿಸುತೆ ಹರುಷದಿಂ |
ದರಮನೆಗೆ ನಡೆದು ಬರೆ ಪಾಂಚಾಲಿ ಸರಸಿರುಹನಯನ ಫಣಿರಾಜಶಯನ||
ಶರಣಜನದುರಿತಾಪಹರಣ ದೈತೇಯಸಂ |
ಹರಣ ಗೋವರ್ಧನೋದ್ಧರಣ ಪೀತಾಂಬರಾ |
ವರಣ ವರಕೌಸ್ತುಭಾಭರಣ ಸಲಹೆಂದು ಹರಿಚರಣಕೆರಗಿದಳು ಬಂದು ||50||
ಮುರಹರಂ ಬಳಿಕ ವಂದಿಸುವ ಭಿಮಾದಿ-> ಭೀಮ ಆದಿ =ಮೊದಲಾದ ಭೂವರ = ರಾಜನ ಸಹೋದರರನಾಲಿಂಗಿಸುತೆ->ಸಹೋದರರನು ಆಲಿಂಗಿಸುತೆ ಹರುಷದಿಂದ ಅರಮನೆಗೆ ನಡೆದು ಬರೆ ಪಾಂಚಾಲಿ ಬಂದು, ಸರಸಿರುಹನಯನ = ಕಮಲನಯನ, ಫಣಿರಾಜಶಯನ = ಶೇಷಶಯನ, ಶರಣಜನದುರಿತಾಪಹರಣ-> ಶರಣಜನ = ಶರಣುಬಂದವರ ದುರಿತ = ಕಷ್ಟವನ್ನು ಅಪಹರಣ = ಪರಿಹರಿಸುವವನು, ದೈತೇಯಸಂಹರಣ = ದೈತ್ಯರು = ರಾಕ್ಷಸರನ್ನು ಸಂಹರಣ =ನಾಶಮಾಡುವವನು, ಗೋವರ್ಧನೋದ್ಧರಣ -> ಗೋವರ್ಧನ ಉದ್ಧರಣ = ಎತ್ತಿದವನು, ಪೀತಾಂಬರಾವರಣ = (ಪೀತ=ಹಳದಿ ಅಂಬರ=ಬಟ್ಟೆ) ಪೀತಾಂಬರ ಧರಿಸಿದವನು, ವರಕೌಸ್ತುಭಾಭರಣ = (ವರ=ಶ್ರೇಷ್ಠ)ಕೌಂಸ್ತುಭಮಣಿ ಧರಿಸಿದವನು, ಸಲಹೆಂದು-> ಸಲಹು ಎಂದು ಹರಿಚರಣಕೆರಗಿದಳು = ಹರಿಯ ಚರಣಕೆ=ಪಾದಕ್ಕೆ ಎರಗಿದಳು= ನಮಸ್ಕರಿಸಿದಳು. (ಬಂದು).
(ಪದ್ಯ ೫೦) |
ಪದ್ಯ - ೫೦
ಸಂಪಾದಿಸಿ
ದ್ರುಪದತನುಜಾತೆಯಂ ಪಿಡಿದೆತ್ತಿ ಕರುಣದಿಂ |
ದುಪಚರಿಸಿ ಮನೆಗೆ ಬೀಳೊಟ್ಟು ಸಂದಣಿಸಿ ನೆರೆ |
ದಪರಿಮಿತ ಪೌರಜನದೊಳವರವರ ತಾರತಮ್ಯಗಳನರಿತು ||
ಕೃಪೆಯಿಂದೆ ಕಳುಹಿ ಬೇಹವರೊಡನೆ ಬಳಿಕಸುರ |
ರಿಪು ನೃಪಗೆ ಕೈಗೊಟ್ಟು ನಡೆಯಲಾಸ್ತಾನಮಂ |
ಟಪಕೆ ಬಂದಲ್ಲಿ ಕುಳ್ಳೀರ್ದನುತ್ಸವಮಾದುದಂದಿನಿರುಳೋಲಗದೊಳು||51||
ದ್ರುಪದತನುಜಾತೆಯಂ-> ದ್ರುಪದ ತನುಜಾತೆಯಂ = ದ್ರುಪದನ ಮಗಳನ್ನು ಪಿಡಿದೆತ್ತಿ = ಹಿಡಿದು ಎತ್ತಿ, ಕರುಣದಿಂದ ಉಪಚರಿಸಿ ಮನೆಗೆ ಬೀಳೊಟ್ಟು ಸಂದಣಿಸಿ = ಗುಂಪಾಗಿ ನೆರೆದ ಪರಿಮಿತ ಪೌರಜನದೊಳು ಅವರವರ ತಾರತಮ್ಯಗಳನು ಅರಿತು ಕೃಪೆಯಿಂದೆ ಕಳುಹಿ = ಕಳುಹಿಸಿ, ಬಳಿಕ ಅಸುರರಿಪು ಬೇಹವರೊಡನೆ = ಕಾವಲು ಭಟರೊಡನೆ ಅಸುರರಿಪು = ಕೃಷ್ಣ ನೃಪಗೆ ರಾಜನಿಗೆ ಕೈಗೊಟ್ಟು = ಕೈಹಿಡಿದುಕೊಂಡು, ನಡೆಯಲಾಸ್ತಾನಮಂಟಪಕೆ-> ನಡೆಯಲು ಆಸ್ಥಾನ ಮಂಟಪಕ್ಕೆ ಬಂದು ಅಲ್ಲಿ ಕುಳ್ಳೀರ್ದನು ಕುಳಿತನು. ಉತ್ಸವಮಾದುದು ಅಂದಿನ ಇರುಳು ಓಲಗದೊಳು -> ಅಂದಿನ ಇರುಳು ಓಲಗ ರಾತ್ರಿಯ ರಾಜಸಭೆ ಉತ್ಸವಮಾದುದು = ಸಂಬ್ರಮದಿಂದ ಕೂಡಿತ್ತು.
(ಪದ್ಯ ೫೧) |
ಪದ್ಯ - ೫೨
ಸಂಪಾದಿಸಿ
ಶಕ್ರನಾಸ್ಥಾನಮಂ ವಿವಿಧ ವೈಭವದಿಂದ |
ತಿಕ್ರಮಿಸುವರಸನೋಲಗಮಂ ನಿರೀಕ್ಷಿಸುತು |
ಪಕ್ರಮಿಸುವೆಳೆನಗೆಯೊಳಸುರಾರಿ ನುಡಿದನೆಲೆ ನೃಪತಿ ಭೂಮಂಡಲದೊಳು||
ವಕ್ರಿಸುವರಿಲ್ಲ ನಿನ್ನೀಸಿರಿಗೆ ರಾಜಧ |
ರ್ಮಕ್ರಿಯೆಗೆ ನಳ ಪುರೂರವ ಹರಿಶ್ಚಂದ್ರಾದಿ |
ಚಕ್ರವರ್ತಿಗಳೈದೆ ಸೋಲ್ವರಿನಿತರೊಳನ್ನು ಕೃತಕೃತ್ಯರಾವೆಂದನು ||52||
ಶಕ್ರನಾಸ್ಥಾನಮಂ->ಶಕ್ರನ = ಇಂದ್ರನ ಆಸ್ಥಾನಮಂ ವಿವಿಧ ವೈಭವದಿಂದ ಅತಿಕ್ರಮಿಸುವ = ಮೀರಿಸುವ ಅರಸನ ಓಲಗಮಂ = ರಾಜಸಭೆಯನ್ನು ನಿರೀಕ್ಷಿಸುತುಪಕ್ರಮಿಸುವೆಳೆನಗೆಯೊಳಸುರಾರಿ-> ನಿರೀಕ್ಷಿಸುತ = ನೋಡಿ ಉಪಕ್ರಮಿಸುವ = ಉಕ್ಕಿಬರುವ ಎಳೆನಗೆಯೊಳು ಅಸುರಾರಿ = ಕೃಷ್ಣ ನುಡಿದನು, 'ಎಲೆ ನೃಪತಿ ಭೂಮಂಡಲದೊಳು ವಕ್ರಿಸುವರಿಲ್ಲ = ವಿರೋಧಿಗಳಿಲ್ಲ, ನಿನ್ನೀಸಿರಿಗೆ-> ನಿನ್ನೀಸಿರಿಗೆ-> ನಿನ್ನ ಈ ಸಿರಿಗೆ, ರಾಜಧರ್ಮಕ್ರಿಯೆಗೆ ನಳ ಪುರೂರವ ಹರಿಶ್ಚಂದ್ರಾದಿ ಚಕ್ರವರ್ತಿಗಳು ಐದೆ ಸೋಲ್ವರು ಅನಿತರೊಳು ಇನ್ನು ಕೃತಕೃತ್ಯರಾವೆಂದನು-> ಕೃತಕೃತ್ಯರು = ಕೃತಾರ್ಥರು ಮಾಡಬೇಕಾದ ಕರ್ತವ್ಯವನ್ನು ಮಾಡಿದವರು ಆವು = ನಾವು ಎಂದನು.
(ಪದ್ಯ - ೫೨) |
ಪದ್ಯ - ೫೩
ಸಂಪಾದಿಸಿ
ಎನಲಹುದು ಬಳಿಕೇನು ನಿಮ್ಮಡಿಯ ಸೇವಕರ |
ಘನತೆಯೊಳು ಕೃತಕೃತ್ಯರಹೆರೆಲಾ ನೀವಿದಿರೊ |
ಳನುಮಾನವೇ ಪಾಂಡವಸ್ಥಾಪನಾಚಾರ್ಯನೆಂದು ಧರೆಯುಳ್ಳನ್ನೆಗಂ ||
ಜನಮಾಡದಿರ್ದಪುದೆ ಸಾಕದಂತಿರಲಿ ಮುಂ |
ದೆನಗೆ ಮಾಡುವ ರಾಜಕಾರ್ಯಮಂ ಬೆಸವೇಳ್ವು |
ದೆನುತ ಭೀಮನ ಕಡೆಗೆ ಮೊಗದಿರುಹಿದರಸಂಗೆ ನಳಿನಾಕ್ಷನಿಂತೆಂದನು ||53||
ನಾವು ಕೃತಾರ್ಥರು, ಮಾಡಬೇಕಾದ ಕರ್ತವ್ಯವನ್ನು ಮಾಡಿದವರಾದೆವು', ಎಂದನು) ಎನಲು ಅಹುದು ಬಳಿಕ ಏನು ನಿಮ್ಮಡಿಯ ಸೇವಕರ ಘನತೆಯೊಳು = ನಿಮ್ಮ ಪಾದಗಳ ಸೇವಕರ ಘನತೆ ನಮ್ಮದು. (ನೀವು) ಕೃತಕೃತ್ಯರು ಅಹೆರೆಲಾ = ಆಗಿದ್ದೀರಿ ನೀವಿದಿರೊಳನುಮಾನವೇ-> ನೀವು, ಇದರೊಳು ಅನುಮಾನವೇ? ಪಾಂಡವಸ್ಥಾಪನಾಚಾರ್ಯನೆಂದು ಧರೆಯುಳ್ಳನ್ನೆಗಂಜನಮಾಡದಿರ್ದಪುದೆ-> ಧರೆಯು ಉಳ್ಳ-ಅನ್ನೆಗಂ = ಇರುವವರೆಗೂ ಜನಂ ಆಡದಿರ್ದಪುದೆ = ಹೇಳದೇ ಇರುವರೇ? ಸಾಕದಂತಿರಲಿ -> ಸಾಕು ಅದಂತಿರಲಿ ಮುಂದೆನಗೆ = ಮುಂದೆ ಎನಗೆ ಮಾಡುವ ರಾಜಕಾರ್ಯಮಂ ಬೆಸವೇಳ್ವುದೆನುತ-> ಬೆಸವೇಳ್ವುದು = ಅಪ್ಪಣೆ ಕೊಡಿಸಬೇಕು, ಎನುತ ಭೀಮನ ಕಡೆಗೆ ಮೊಗದಿರುಹಿದರಸಂಗೆ-> ಮೊಗದಿರುಗಿದ = ಮುಖ ತಿರುಗಿಸಿದ ಅರಸಂಗೆ ನಳಿನಾಕ್ಷನಿಂತೆಂದನು-> ನಳಿನಾಕ್ಷನು ಇಂತೆಂದನು = ಹೀಗೆ ಹೇಳಿದನು.
(ಪದ್ಯ - ೫೩) |
ಪದ್ಯ - ೫೪
ಸಂಪಾದಿಸಿ
ದಾಯಾದರಿಲ್ಲ ಮಾರ್ಮಲೆವ ಪರಮಂಡಲದ |
ನಾಯಕರ ಸುಳಿವಿಲ್ಲ ನಿನ್ನಾಳ್ಕೆಗೆಲ್ಲಿಯುಮ |
ಪಾಯಮವನಿಯೊಳಿಲ್ಲಮಿನ್ನು ದಿಗ್ವಿಜಯಮಿಲ್ಲವಸರದ ಬೇಂಟೆಯಿಲ್ಲ ||
ವಾಯುನಂದನ ಧನಂಜಯರೊಳೆರವಿಲ್ಲ ಮಾ |
ದ್ರೇಯರೊಳ್ ತಪ್ಪಿಲ್ಲ ಚತುರಂಗಕೆಡರಿಲ್ಲ |
ರಾಯ ನಿನಗೇನು ಮಾಡುವ ರಾಜಕಾರ್ಯಮೆಂದಂ ಮುರದ್ವಂಸಿ ನಗುತ ||54||
ದಾಯಾದರಿಲ್ಲ = ದಾಯಾದಿಗಳಿಲ್ಲ ಮಾರ್ಮಲೆವ = ಎದರುಬೀಳುವ, ಪರಮಂಡಲದ= ಬೇರೆದೇಶದ ನಾಯಕರ ಸುಳಿವಿಲ್ಲ, ನಿನ್ನಾಳ್ಕೆಗೆಲ್ಲಿಯುಮ-> ನಿಮ್ಮ ಆಳ್ಕೆಗೆ ಎಲ್ಲಿಯುಂ ಅಪಾಯಮವನಿಯೊಳಿಲ್ಲಮಿನ್ನು =ಅಪಾಯಂ ಅವನಿಯೊಳಿಲ್ಲ = ಭೂಮಿಲ್ಲಿ ಇಲ್ಲ,, ದಿಗ್ವಿಜಯಮಿಲ್ಲವಸರದ-> ದಿಗ್ವಿಜಯಮಿಲ್ಲ ಅವಸರದ ಬೇಂಟೆಯಿಲ್ಲ ವಾಯುನಂದನ ಧನಂಜಯರೊಳು ಎರವಿಲ್ಲ =ಜಗಳವಿಲ್ಲ, ಮಾದ್ರೇಯರೊಳ್ ತಪ್ಪಿಲ್ಲ ಚತುರಂಗಕೆ ಎಡರಿಲ್ಲ = ತೊಂದರೆಯಿಲ್ಲ, ರಾಯ ನಿನಗೇನು ಮಾಡುವ ರಾಜಕಾರ್ಯಂ ಎಂದಂ ಮುರದ್ವಂಸಿ =ಕೃಷ್ಣ ನಗುತ.
(ಪದ್ಯ - ೫೪) |
ಪದ್ಯ - ೫೫
ಸಂಪಾದಿಸಿಈ ಚರಾಚರ ವಿಚಾರ ವ್ಯಾಪ್ತಿ ನಿಮ್ಮಡಿಗ |
ಗೋಚರವೆ ಶಿವಶಿವಾ ಸಾಕಿದೇತಕೆ ಬರಿದೆ |
ನಾಚಿಸುವಿರೆಂದು ವೇದವ್ಯಾಸಮುನಿವರಂ ಬಂದು ಕಾರುಣ್ಯದಿಂದೆ ||
ಆಚಾರಮಿದು ಭರತಕುಲದವರ್ಗೆನುತೆ ಕಾ |
ಲೋಚಿತವನರಿತು ಹಯಮೇಧವಿಧಿಯಂ ತನಗೆ |
ಸೂಚಿಸೆ ಪತಿಜ್ಞೆಗೈದಂ ಬೀಮನದಕಶ್ವಮಂ ತಂದುಕುಡುವೆನೆಂದು ||55||
ಈ ಚರಾಚರ =ಎಲ್ಲಾ ಈಗಿನ ಚರ ಅಚರ = ಚಲಿಸದಿರುವುದರ ವಿಚಾರ ವ್ಯಾಪ್ತಿ = ವಿಚಾರ, ನಿಮ್ಮಡಿಗಗೋಚರವೆ-> ನಿಮ್ಮ ಅಡಿಗೆ = (ಪಾದಕ್ಕೆ = ಗೌರವ ಪೂರ್ವಕ)ಮನಸ್ಸಿಗೆ,ಅಗೋಚರವೇ = ಕಾಣದಿರುವುದೇ ಶಿವಶಿವಾ! ಸಾಕಿದೇತಕೆ = ಸಾಕು ಇದೇತಕೆ ಬರಿದೆ ನಾಚಿಸುವಿರೆಂದು->ನಾಚುಸುವಿರಿ ಎಂದು, ವೇದವ್ಯಾಸ ಮುನಿವರಂ ಬಂದು ಕಾರುಣ್ಯದಿಂದೆ = ಕರುಣದಿಂದ ಆಚಾರಮಿದು = ಆಚಾರಂ ಇದು (ಇದು ಶೀಷ್ಟಾಚಾರ) ಭರತಕುಲದವರ್ಗೆನುತೆ-> ಭರತಕುಲದವರ್ಗೆ ಎನುತೆ ಕಾಲೋಚಿತವನರಿತು-> ಕಾಲೋಚಿತವನು = ಕಾಲಕ್ಕೆ ಸರಿಯಾಗಿ ಮಾಡಬೇಕಾದ ಕಾರ್ಯ, ಅರಿತು ಹಯಮೇಧವಿಧಿಯಂ-> ಹಯಮೇಧ = ಅಶ್ವಮೇಧ ವಿಧಿಯಂ ತನಗೆ ಸೂಚಿಸೆ = ಸೂಚಿಸಲು, ಪತಿಜ್ಞೆಗೈದಂ-> ಪ್ರತಿಜ್ಞೆ ಗೈದಂ = ಮಾಡಿದನು, ಬೀಮನದಕಶ್ವಮಂ-> ಭೀಮನು ಅಶ್ವವನ್ನು ತಂದುಕುಡುವೆನೆಂದು = ತಂದುಕೊಡುವೆನೆಂದು.
(ಪದ್ಯ - ೫೫) |
ಪದ್ಯ - ೫೬
ಸಂಪಾದಿಸಿತ್ವತ್ಪಾದ ಕಮಲದಾಶ್ರಯದಿಂದೆ ನಾನಾವಿ |
ಪತ್ಪರಂಪರೆಗಳಂ ದಾಂಟಿದೆವು ರಾಜಸಂ |
ಪತ್ಪದವನಧಿಕರಿಸಿದೆವು ಬಳಿಕದರ ಸೌಖ್ಯದಿಂದೆ ನಾವಿರುತಿರ್ದೊಡೆ ||
ಸತ್ಪುರುಷರೈದೆ ಮೆಚ್ಚುವರೆ ಭರತಾನ್ವಯಸ |
ಮುತ್ಪನ್ನರಾಗಿ ಫಲವೇನಾವತೆರದಿಂ ಜ |
ಗತ್ಪಾವನಾಶ್ವಮೇಧವನಾಗಿಸುವೆನಿದಕೆ ನೀವೆಂಬುದೇನೆಂದನು ||56||
ತ್ವತ್ಪಾದಕಮಲದಾಶ್ರಯದಿಂದೆ-> ತತ್ ಪಾದ = ನಿನ್ನ ಪಾದಕಮಲದ (ಗೌರವಪೂರ್ಕ ಪದ) ಆಶ್ರಯದಿಂದ, ನಾನಾವಿಪತ್ಪರಂಪರೆಗಳಂ ದಾಂಟಿದೆವು-> ನಾನಾ ವಿಪತ್ = ಕಷ್ಟ ಪರಂಪರೆಗಳಂ ದಾಟಿದೆವು; ರಾಜಸಂಪತ್ಪದವನಧಿಕರಿಸಿದೆವು-> ರಾಜಸಂಪತ್ ಪದವನು ಅಧಿಕರಿಸಿದೆವು = ಹೊಂದಿದೆವು; ಬಳಿಕದರ-> ಬಳಿಕ ಅದರ ಸೌಖ್ಯದಿಂದೆ ನಾವಿರುತಿರ್ದೊಡೆ = ನಾವು (ಏನೂ ಘನಕಾರ್ಯ ಮಾಡದೆ) ಇರುತ್ತಿದ್ದರೆ ಸತ್ಪುರುಷರೈದೆ-> ಸತ್ಪುರುಷರು ಐದೆ=ಬಂದುನೋಡಲು ಮೆಚ್ಚುವರೆ? ಭರತಾನ್ವಯಸಮುತ್ಪನ್ನರಾಗಿ ಫಲವೇನಾವತೆರದಿಂ-> ಭರತಾನ್ವಯದಲ್ಲಿ =ಭರತ ಕುಲದಲ್ಲಿ ಸಮುತ್ಪನ್ನರಾಗಿ= ಹುಟ್ಟಿ, ಫಲವೇನು ಆವತೆರದಿಂ = ಯಾವ ತರದಲ್ಲಿ, ಜಗತ್ಪಾವನಾಶ್ವಮೇಧವನಾಗಿಸುವೆನಿದಕೆ-> ಜಗತ್ ಪಾವನವಾದ ಅಶ್ವಮೇಧವನು ಆಗಿಸುವೆನು = ನೆರವೇರಿಸುವೆನು (ಅಶ್ವಮೇಧ ಯಜ್ಞವನ್ನು ಮಾಡಿ ಪೂರೈಸವುದು ಹೇಗೆ) ಆಗಿಸುವೆನು = ನೆರವೇರಿಸುವೆನು? ನೀವೆಂಬುದೇನೆಂದನು-> ಇದಕ್ಕೆ ನೀವು ಅಂಬುದು = ಹೇಳುವುದು ಏನು? ಎಂದು ಧರ್ಮಜನ ಕೃಷ್ಣನನ್ನು ಕೇಳಿದನು. (ಅಶ್ವಮೇಧ ಯಜ್ಞವನ್ನು ಮಾಡಲು ತೀರ್ಮಾನಿಸಿದ್ದೇನೆ, ನಿಮ್ಮ ಆಭಿಪ್ರಾಯವೇನು ಎಂದು ಧರ್ಮಜನ ಪ್ರಶ್ನೆ)
(ಪದ್ಯ - ೫೫) |
ಪದ್ಯ - ೫೭
ಸಂಪಾದಿಸಿಮರುಳಹರೆ ಭೂಪಾಲ ಬಾದರಾಯಣನಿಕ್ಕಿ |
ದುರುಲ ಕಣ್ಣಿಗೆ ಸಿಲುಕುವರೆ ಭೀಮನೆಂಬವಂ |(ಉರುಲಗಣ್ಣಿಗೆ)
ದುರುಳನರಿಯಾ ಹಿಂದಣವರಲ್ಲ ಯೌವನಾಶ್ವ ಪ್ರಮುಖರತಿವೀರರು ||
ಅರಳಾದ ಮಲ್ಲಿಗೆಯ ಪೊದರೊಳಗೆ ತಿರುಗಿರೊಡೆ |
ತೆರಳಬಲ್ಲುದೆ ಸಂಪಗೆಯ ಬನಕೆ ಮರಿದುಂಬಿ |
ತರಳತನದಿಂದೆ ಹಯಮೇಧಕುದ್ಯೋಗಿಪರೆ ಹೇಳೆಂದು ಹರಿ ನುಡಿದನು ||57||
ಮರುಳಹರೆ ಭೂಪಾಲ ಬಾದರಾಯಣನಿಕ್ಕಿದುರುಲ ಕಣ್ಣೀಗೆ ಸಿಲುಕುವರೆ-> ಭೂಪಾಲ ಮರುಳು ಅಹರೇ = ರಾಜನೇ ಮರುಳು ಅಹರೇ = ಆಗುವರೇ? ಬಾದರಾಯಣನಿಕ್ಕಿದುರುಲ ಕಣ್ಣಿಗೆ ಸಿಲುಕುವರೆ-> ಬಾದರಾಯಣನು ಇಕ್ಕಿದ = ಇಟ್ಟ ಉರುಲ ಕಣ್ಣಿಗೆ = ಕುಣಿಕೆಗೆ ಅಥವಾ ಬಲೆಗೆ ಸಿಲುಕುವರೆ? ಭೀಮನೆಂಬವಂ ದುರುಳನರಿಯಾ->ಭೀಮನೆಂಬುವಂ = ಈ ಭೀಮನೆಂಬುವವನು ದುರುಳನು ಅರಿಯಾ = ದೌಷ್ಟ್ಯವುಳ್ಳವನು (ಭಿಮನನ್ನು ಆಗಾಗ ಹಾಸ್ಯ ಮಾಡಿ ಕೆರಳಿಸುವನು), ನೀನು ಅರಿಯಾ = ಅರಿಯೆಯಾ? ಹಿಂದಣವರಲ್ಲ =ಜರಾಸಂದ ಮೊದಲಾದ ಹಿಂದಿನವರಂತೆ ಅಲ್ಲ, ಯೌವನಾಶ್ವ ಪ್ರಮುಖರತಿವೀರರು-> ಪ್ರಮುಖರು ಅತಿ ವೀರರು, ಅರಳಾದ ಮಲ್ಲಿಗೆಯ ಪೊದರೊಳಗೆ ತಿರುಗಿರೊಡೆ ತೆರಳಬಲ್ಲುದೆ ಸಂಪಗೆಯ ಬನಕೆ ಮರಿದುಂಬಿ->ಮರಿದುಂಬಿಯು ಅರಳಿದ ಮಲ್ಲಿಗೆಯ ಪೊದರೊಳಗೆ = ಮಟ್ಟಿಯಲ್ಲಿ ಹಾರಡಿದ ಮಾತ್ರಕ್ಕೆ, ಸಂಪಿಗೆಯ ಬನಕ್ಕೆ ಕಾಡಿಗೆ (ಅದರ ಹೂವಿಗೆ) ತರಳತನದಿಂದೆ =ಹುಡುಗಾಟಿಕೆಯಿಂದ ತೆರಳಬಲ್ಲದೆ? ಹಯಮೇಧಕುದ್ಯೋಗಿಪರೆ->ಹಯಮೇಧಕೆ ಉದ್ಯೋಗಿಪರೆ = ಅಶ್ವಮೇಧ ಯಜ್ಞಕ್ಕೆ ತೊಡಗುವರೆ?', ಹೇಳೆಂದು ಹರಿ ನುಡಿದನು.
(ಪದ್ಯ - ೫೭) |
ಪದ್ಯ - ೫೮
ಸಂಪಾದಿಸಿಮತಿಯುಳ್ಳೊಡಿವನಸುರಬಲಿಗೊದಗಿಸಿದ ಕೂಳ |
ನತಿಮಹೋದರಕಡಸಿಕೊಂಬನೇ ನೀತಿಗಳ |
ಗತಿಯನರಿದೊಡೆ ನಿಶಾಚರಿಯ ನಿವನಾಳ್ವನೇ ರಾಣಿಯೆಂದರಮನೆಯೊಳು||
ಕ್ಷಿತಿಯೊಳದ್ಭುತರೂಪನೀ ವೃಕೋದರನಿವನ |
ಮತವಿಡಿದು ಹಯಮೇಧಕುದ್ಯೋಗಿಸಿದೊಡೆ ಪೂ |
ರಿತಮಹುದೆ ಮರುಳೆ ಹೇಳೆಂದು ನೃಪನೊಡನೆ ಮುರರಿಪು ಭೀಮನಂ ಜರೆದನು ||58||
ಮತಿಯುಳ್ಳೊಡಿವನಸುರಬಲಿಗೊದಗಿಸಿದ ಕೂಳನತಿಮಹೋದರಕಡಸಿಕೊಂಬನೇ->ಮತಿಯುಳ್ಳೊಡೆ = ಬುದ್ಧಿಇದ್ದರೆ ಇವನು ಅಸುರ ಬಲಿಗೆ ಒದಗಿಸಿದ ಕೂಳನು = ಬಕಾಸುರನಿಗೆ ಬಲಿಯಾಗಿ ಕೊಟ್ಟ ಅನ್ನವನ್ನು, ಅತಿ ಮಹೋದರಕೆ ಅಡಗಿಸಿ ಕೊಂಬನೇ ಅತಿ ದೊಡ್ಡ ಹೊಟ್ಟೆಯಲ್ಲ ತುಂಬಿ ಅಡಗಿಸಿಕೊಳ್ಳುವನೇ?; ನೀತಿಗಳ ಗತಿಯನರಿದೊಡೆ ನಿಶಾಚರಿಯ ನಿವನಾಳ್ವನೇ?-> ನೀತಿಗಳ ಗತಿ = ರೀತಿಯನ್ನು ತಿಳಿಯದ ನಿಶಾಚರಿ = ರಾಕ್ಷಸಿಯನ್ನು ರಾಣಿಯೆಂದರಮನೆಯೊಳು = ರಾಣಿ ಎಂದು ಅರಮನೆಯಲ್ಲಿ ಆಳುವನೇ = ಇಟ್ಟುಕೊಳ್ಳುವನೇ? ಕ್ಷಿತಿಯೊಳದ್ಭುತರೂಪನೀ ವೃಕೋದರನಿವನ ಮತವಿಡಿದು->ಕ್ಷಿತಿಯೊಳು = ಭೂಮಿಯಲ್ಲಿ ಅದ್ಭುತರೂಪನೀ = ಅದ್ಭುತ ರೂಪನು ಈ ವೃಕೋದರನು ಇವನ ಮತವ ಹಿಡಿದು = ಸಲಹೆ ತೆಗೆದುಕೊಂಡು, ಹಯಮೇಧಕುದ್ಯೋಗಿಸಿದೊಡೆ-> ಹಯಮೇಧಕೆ ಉದ್ಯೋಗಿಸಿದುಡೆ = ಅಶ್ವಮೇಧ ಆರಂಭಿಸಿದರೆ, ಪೂರಿತಮಹುದೆ = ಪೂರ್ಣವಾಗುವುದೇ? ಮರುಳೆ ಹೇಳೆಂದು ನೃಪನೊಡನೆ = ಧರ್ಮಜನೊಡನೆ ಮುರರಿಪು = ಕೃಷ್ಣನು ಭೀಮನಂ = ಭೀಮನನ್ನು ಜರೆದನು. (ಇಲ್ಲಿ ಕಟಕಿ ಎಂಬ ಹಾಸ್ಯರಸ ಉಪಯೋಗವಾಗಿದೆ.)
(ಪದ್ಯ - ೫೮) |
ಪದ್ಯ - ೫೯
ಸಂಪಾದಿಸಿಆಹಾ ಮಹಾದೇವ ಚಿತ್ರಮಂ ಕೇಳಿದೆವ |
ಲಾ ಹಲವುಲೋಕಮಂ ಕೊಳ್ಳದೇ ನಿನ್ನುದರ |
ಮಹಾನಿಶಾಚರಿಯರಲ್ಲವೇ ನರಕಾಸುರನ ಮನೆಯ ಬಾಲಿಕೆಯರು ||
ಈ ಹೆದರದೇಕೆ ಕರಡಿಯ ಮಗಳನಾಳ್ದ ನಿನ |(ಈ ಹೆಸರದೇಕೆ)
ಗೋಹೋ ಧರೆಯೊಳದ್ಭುತಾಕಾರರಾರೊ ನಿ |
ನ್ನೂಹೆಗಳ ಬಲ್ಲೆ ನಾನಿತ್ತ ಭಾಷೆಗೆ ತಪ್ಪೆನೆಂದು ಭೀಮಂ ನುಡಿದನು||59||
ಆಹಾ ಮಹಾದೇವ! (ನನಗೆ ದೂರುವನು!) ದೇವರೇ! ಚಿತ್ರಮಂ = ವಿಚಿತ್ರವಾದದ್ದನ್ನು ಕೇಳಿದೆವಲಾ, ಹಲವುಲೋಕಮಂ ಕೊಳ್ಳದೇ ನಿನ್ನುದರ = ನಿನ್ನ ಹೊಟ್ಟೆ (ಏನು ಸಾಮಾನ್ಯವೇ? ಯಶೋದೆಗೆ ಬಾಯಿ ತೆರದಾಗ) ಅನೇಕ ಲೋಕಗಳನ್ನು ಕೊಳ್ಳದೇ ನಿನ್ನ ಉದರ = ಹೊಟ್ಟೆ? ಮಹಾನಿಶಾಚರಿಯರಲ್ಲವೇ ನರಕಾಸುರನ ಮನೆಯ ಬಾಲಿಕೆಯರು = ನರಕಾಸುರನ ಮನೆಯ ಬಾಲಿಕೆಯರನ್ನು ನೀನು ಮದುವೆಯಾದೆಯಲ್ಲಾ ಅವರು ನಿಶಾಚರಿ ರಾಕ್ಷಸರಲ್ಲವೇ? ಈ ಹೆಸರದೇಕೆ = ಜಾಂಬವತಿಗಂಡ ಎಂಬ ಈ ಹೆಸರು ಏಕೆ, ಕರಡಿಯ ಮಗಳನಾಳ್ದ ನಿನಗೋಹೋ = ಕರಡಿಯ ಮಗಳನ್ನು ಕಟ್ಟಿಕೊಂಡವ ನಿನಗೆ -ಓ ಹೋ ಹೋ! (ಪಾಠಬೇಧ:ಈ ಮಾತು ಏಕೆ? ಹೆದರದೆ ಏಕೆ ಕರಡಿಯ ಮಗಳನಾಳ್ದ-> ಮಗಳನು ಆಳ್ದ = ಆಳಿದ, ಮದುವೆಯಾದ ನಿನಗೆ -ಓ ಹೋ ಹೋ (ದೊಡ್ಡವನು ಎಂದು ಅರ್ಥ)! ಧರೆಯೊಳದ್ಭುತಾಕಾರರಾರೊ->ಧರೆಯೊಳದ್ಭುತಾಕಾರರಾರೊ, ಧರೆಯಲಿ = ಭೂಮಿಯಲ್ಲಿ, ಅದ್ಭುತ ಆಕಾರರು ಯಾರೋ (ಅದು ನೀವೇ ಎಂದು ಅರ್ಥ) ನಿನ್ನೂಹೆಗಳ = ನಿನ್ನು ಊಹೆಗಳನ್ನು ಬಲ್ಲೆ = ತಿಳಿದಿದ್ದೇನೆ. ನಾನಿತ್ತ =ನಾನು ಕೊಟ್ಟ ಭಾಷೆಗೆ ತಪ್ಪೆನೆಂದು ಭೀಮಂ ನುಡಿದನು.
(ಪದ್ಯ - ೫೯) |
ಪದ್ಯ - ೬೦
ಸಂಪಾದಿಸಿಭಾಷೆಯಂ ಕೊಟ್ಟು ತಪ್ಪುವನಲ್ಲ ನೀನಾವಿ |
ಶೇಷಮಂ ಕಂಡು ಬಲ್ಲೆವು ಹಿಂದೆ ರಣದೊಳಭಿ |
ಲಾಷೆಯಿಂ ಪೈಶಾಚರಂತೆ ಹೇಸದೆ ರಕ್ತಪಾನಮಂ ಮಾಡಿಯೊಡಲ ||
ಪೋಷಿಸಿದ ಬಂಡತನವಿದು ನಿನ್ನ ಸಾಹಸಕೆ |
ಭೂಷಣವೆ ಹೋಗೆಲವೋ ಬಾಣಸಿಗ ಲೋಕದೊಳ್ |
ದೂಷಣಕೆ ಬೆದರೆ ಯಂದಂ ಮುರಧ್ವಂಸಿ ಮಿಗೆಸರಸದೊಳ್ ಪವನಜನನು ||60||
ಭಾಷೆಯಂ = ಭಾಷೆಯನ್ನು ಕೊಟ್ಟು ತಪ್ಪುವನಲ್ಲ ನೀನಾವಿಶೇಷಮಂ-> ನೀನು ಆ ವಿಶೇಷವನ್ನು ಕಂಡು ಬಲ್ಲೆವು =ಗೊತ್ತು, ಹಿಂದೆ ರಣದೊಳಭಿಲಾಷೆಯಿಂ ಪೈಶಾಚರಂತೆ->ರಣದೊಳ್ = ಯುದ್ಧದಲ್ಲಿ ಅಭಿಲಾಷೆಯಿಂ = (ಪ್ರತಿಜ್ಞೆಯನ್ನು ನೆಪ ಮಾಡಿಕೊಂಡು ಮನುಷ್ಯ ರಕ್ತಕ್ಕೆ) ಆಸೆಪಟ್ಟು ಹೇಸದೆ ರಕ್ತಪಾನಮಂ = ರಕ್ತಪಾನವನ್ನು ಮಾಡಿ, ಮಾಡಿಯೊಡಲಪೋಷಿಸಿದ->(ಮಾಡಿ) ಒಡಲ ಪೋಷಿಸಿದ = ಹೋಟ್ಟೆತಂಬಿಕೊಂಡ, ಬಂಡತನವಿದು ನಿನ್ನ ಸಾಹಸಕೆ ಭೂಷಣವೆ ಹೋಗೆಲವೋ ಬಾಣಸಿಗ = ಅಡುಗೆಭಟ್ಟ ಲೋಕದೊಳ್ = ಸಮಾಜದಲ್ಲಿ ದೂಷಣಕೆ = ನಿಂದೆಗೆ ಬೆದರೆಯಂದಂ = ಹೆದರದೆ ಇರುವ ರೀತಿ (ನಿನ್ನದು) ಎಂದಂ =ಎಂದನು ಮುರಧ್ವಂಸಿ = ಕೃಷ್ಣ, ಮಿಗೆಸರಸದೊಳ್ = ಅತಿಯಾದ ಹಾಸ್ಯದ ಸರಸದಲ್ಲಿ, ಪವನಜನನು = ಭಿಮನನ್ನು ಕುರಿತು.
(ಪದ್ಯ - ೬೦) |
ಪದ್ಯ - ೬೧
ಸಂಪಾದಿಸಿಶಿವಶಿವಾ ದೂಷಣಕೆ ಬೆದರಿ ಮಾಡಿದಿರಿ ಕೈ |
ತವಜಾರವಿದ್ಯೆಗಳ ಹೆಣ್ಣಾಗಿ ಬಾಣಸದ |
ಪವಣರಿದುದಿಲ್ಲಲಾ ಹೇವರಿಸದಸುರೆಯ ಸುವೀಂಟಿದವರಾರೊ ಬಳಿಕ ||
ಅವನಿಪತಿಗಳ ಕೂಡೆ ಗೋವಳರ್ಗಾವ ಮೇ |
ಳವದಿನ್ನು ನುಡಿಯಲಂಜುವೆವೆಮ್ಮ ನಿಜಭಾಷಿ |
ತವನುಳಿಯೆವಶ್ವಮಂ ತಹೆವು ಕ್ರತುವಂ ನಡೆಸಿ ಮೇಣುಳುಹಿ ನೀವೆಂದನು ||61||
ಅದಕ್ಕೆ ಭೀಮನು ಶಿವಶಿವಾ! ದೂಷಣಕೆ ಬೆದರಿ = ನಿಂದೆಗೆ ಹೆದರಿ, ಮಾಡಿದಿರಿ ಕೈತವಜಾರವಿದ್ಯೆಗಳ = ಕೆಟ್ಟ ಹೇಗಸರ ಸಹವಾಸಗಳನ್ನು (ಗೋಪಿಯರ ಜೊತೆ) ಹೆಣ್ಣಾಗಿ ಬಾಣಸದ = ಅಡುಗೆಯ ಪವಣರಿದುದಿಲ್ಲಲಾ->ಪವಣು=ಪ್ರಮಾಣವನ್ನು ಅರಿದುದು ಇಲ್ಲಾ (ಮೋಹಿನಿ ವೇಷ)? ಅರಿಯಲಿಲ್ಲವೇ? ಹೇವರಿಸದಸುರೆಯ-> ಹೇವರಿಸದೆ =ಹೇಸಿಗೆಪಡದೆ ಅಸುರೆಯ = ರಕ್ಕಸಿಯ ಅಸುವ = ಎದೆಹಾಲು ಕುಡಿದು ಪ್ರಾಣವನ್ನು ಈಂಟಿದವರಾರೊ-> ಈಂಟಿದವರು = ಕುಡಿದವರು ಯಾರೋ? ಬಳಿಕ ಅವನಿಪತಿಗಳ = ರಾಜರ ಕೂಡೆ ಗೋವಳರ್ಗಾವ = ದನಕಾಯುವವರಿಗೆ ಮೇಳವದಿನ್ನು ಮೇಳವದು = ಜೊತೆ ಸ್ನೇಹವು, ಇನ್ನು ನುಡಿಯಲಂಜುವೆವೆಮ್ಮ, ಇನ್ನು ಇದಕ್ಕಿಂತ ಹೆಚ್ಚು ನುಡಿಯಲು ಅಂಜುವೆವು; ನಿಜಭಾಷಿತವನುಳಿಯೆವಶ್ವಮಂ = ನಿಜ = ನನ್ನ ಭಾಷಿತವನು = ಮಾತನ್ನು ಉಳಿಯೆ = ಉಳಿಸಿಕೊಳ್ಳಲು ಅಶ್ವಮಂ = ಕುದುರೆಯನ್ನು ತಹೆವು = ತರುತ್ತೇವೆ. ಕ್ರತುವಂ = (ನೀವು) ಯಜ್ಞವನ್ನು ನಡೆಸಿ, ಮೇಣುಳುಹಿ-> ಮೇಣ್ = ಮತ್ತೆ ಉಳುಹಿ = ನಮ್ಮನ್ನು ಕಾಪಾಡಿ ನೀವೆಂದನು->ನೀವು ಎಂದನು.
(ಪದ್ಯ - ೬೦) |
ಪದ್ಯ - ೬೨
ಸಂಪಾದಿಸಿನಕ್ಕನಸುರಾರಿ ಭೀಮನ ಮಾತಿಗೆಲವೊ ಕಲ |
ಹಕ್ಕೆ ಬೇಸರೆಯಲಾತುರಗಮಂ ತಂದುಕುಡು |
ವಕ್ಕರುಳ್ಳೊಡೆ ನಡೆ ವೃಥಾ ಗಳಹಬೇಡ ನಾವೀಗ ಸಾರಿದೆವು ಮುಂದೆ ||
ಕಕ್ಕಸವಹುದು ವೀರರುಂಟಿಳೆಯ ಮೇಲೆ ಕೈ |
ಯಿಕ್ಕಲರಿದೀಮಖವನೈದೆ ನಡೆಸುವುದನ್ವ |
ಯಕ್ಕೆ ತೊಡರಪ್ಪುದು ವಿಚಾರದೊಳ್ ಕೈಕೊಂಬುದೆನೆ ಭೂಪನಿಂತೆಂದನು ||62||
ನಕ್ಕನು ಅಸುರಾರಿ = ಕೃಷ್ಣನು ಭೀಮನ ಮಾತಿಗೆ ನಕ್ಕನು, 'ಎಲವೊ ಕಲಹಕ್ಕೆ ಬೇಸರೆಯಲಾ = ಜಗಳಕ್ಕೆ ಬೇಸರಮಾಡಿಕೊಳ್ಳುವುದಿಲ್ಲವಲ್ಲಾ ನೀನು! ತುರಗಮಂ = ಕುದುರೆಯನ್ನು ತಂದು ಕೊಡುವಕ್ಕರುಳ್ಳೊಡೆ-> ಕೊಡುವ ಅಕ್ಕರೆ ಉಳ್ಳೊಡೆ = ವಿಶ್ವಾಸವಿದ್ದರೆ, ನಡೆ = ಹೋಗಿ ತಂದುಕುಡು ವೃಥಾ=ಸುಮ್ಮನೆ ಗಳಹಬೇಡ=ಮಾತನಾಡಬೇಡ, ನಾವೀಗ ಸಾರಿದೆವು = ನಾನು ಈಗಲೇ ಸಾರಿ ಹೇಳುತ್ತೇನೆ, ಮುಂದೆ ಕಕ್ಕಸವಹುದು= ಮುಂದೆ ಕಷ್ಟವಿದೆ. ವೀರರುಂಟಿಳೆಯ ಮೇಲೆ ಕೈಯಿಕ್ಕಲರಿದೀ-> ಕೈ ಇಕ್ಕಲು ಅರಿದು (ಅಸಾಧ್ಯವು) = (ಈ ಕಾರ್ಯಕ್ಕೆ) ಕೈಹಾಕ ಬಾರದಿತ್ತು! ಈ ಮಖವನೈದೆ = ಈ ಯಜ್ಞವನ್ನು ಐದೆ=ಕೈಗೊಂಡು ನಡೆಸುವುದನ್ವಯಕ್ಕೆ->ನಡೆಸುವುದು ಅನ್ವಯಕ್ಕೆ=ವಂಶಕ್ಕೆ ತೊಡರಪ್ಪುದು-> ತೊಡರು = ಕಷ್ಟ ಅಪ್ಪುದು = ಆಗುವುದು. ವಿಚಾರದೊಳ್ = ವಿಚಾರ ಮಾಡಿ ಕೈಕೊಂಬುದೆನೆ = ಕೈಗೊಳ್ಳುವುದು' ಎಂದನು. ಭೂಪನಿಂತೆಂದನು-> ಅದಕ್ಕೆ ಭೂಪನು=ರಾಜನು ಇಂತು ಎಂದನು = ಹೇಗೆ ಹೇಳಿದನು.
(ಪದ್ಯ - ೬೨) |
ಪದ್ಯ - ೬೩
ಸಂಪಾದಿಸಿದೇವ ನಿಮ್ಮಡಿಯ ಕಾರುಣ್ಯಮೊಂದುಳ್ಳೊಡೆ ಸ |
ದಾ ವಿಜಯರಾವದಾರಿದ್ದೇನ ಮಾಳ್ಪರರಿ |
ದಾವುದೊಲಿದೆನ್ನನುದ್ಧರಿಸವೇಳ್ಕೆಂದು ನೃಪನಚ್ಯುತನ ಪದಕೆರಗಲು ||
ಭೂವರನ ಮಕುಟಮಂ ಪಿಡಿದೆತ್ತಿ ರಾಜವಂ |
ಶಾವಳಿಯೊಳುಂಟೆ ನಿನ್ನಂದದರಸಿನ್ನು ನಿನ |
ಗೀವಾಜಿಮೇಧಮೇನಚ್ಚರಿಯೆ ಕೈಕೊಳಾವಿರ್ದು ನಡೆಸುವೆವೆಂದನು ||63||
ದೇವ ನಿಮ್ಮಡಿಯ ಕಾರುಣ್ಯಮೊಂದು ಉಳ್ಳೊಡೆ ಸದಾ ವಿಜಯರಾವು =ನಾವು ವಿಜಯರು, ಆರಿದ್ದೇನ ಮಾಳ್ಪರು ಇದಾವುದು ಒಲಿದು ಎನ್ನನು ಉದ್ದರಿಸವೇಳ್ಕು ಎಂದು ನೃಪನು ಅಚ್ಯುತನ ಪದಕೆ ಎರಗಲು ಭೂವರನ ಮಕುಟಮಂ ಪಿಡಿದೆತ್ತಿ ರಾಜವಂಶಾವಳಿಯೊಳು ಉಂಟೆ ನಿನ್ನಂದದ ಅರಸು ಇನ್ನು ನಿನಗೆ ಈ ವಾಜಿಮೇಧಂ ಏನಚ್ಚರಿಯೆ ಕೈಕೊಳು ಆವಿರ್ದು=ನಾವಿದ್ದು ನಡೆಸುವೆವು ಎಂದನು.
(ಪದ್ಯ - ೬೩) |
ಪದ್ಯ - ೬೪
ಸಂಪಾದಿಸಿನಳಿನೋದರನ ವಚನಮಂ ಕೇಳ್ದು ಸಂತಸಂ |
ದಳೆದು ನೃಪನಧ್ವರದ ಕಾರ್ಯಮಂ ನಾಡೆ ನೆಲೆ |
ಗೊಳಿಸಿ ಪವನಜ ವೃಕ್ಷಧ್ವಜ ಮೇಘನಾದರಂ ಕುದುರೆ ತಹುದೆಂದು ಬೆಸಸಿ ||
ಬಳಿಕೋಲಗವನಂದು ಬೀಳ್ಕೊಟ್ಟು ಹರಿಸಹಿತ |
ನೀಳಯದೊಳ್ ಷಡ್ರಸಾದಿಗಳನಾರೋಗಿಸಿ ವಿ |
ಮಳ ಹಂಸತೂಲದೊಳ್ ಪವದಿಸಿದನನ್ನೆಗಂ ತೋರಿತಿನಸೂತನೇಳ್ಗೆ ||64||
ನಳಿನೋದರನ =(ಹೊಕ್ಕಳಲ್ಲಿ ಕಮಲವಿರುವವನು) ಕೃಷ್ಣನ, ವಚನಮಂ =ಮಾತನ್ನು ಕೇಳ್ದು = ಕೇಳಿ,ಸಂತಸಂದಳೆದು->ಸಂತಸಂ ತಳೆದು = ಸಂತೋಷಪಟ್ಟು, ನೃಪನಧ್ವರದ ಕಾರ್ಯಮಂ ನಾಡೆ ನೆಲೆಗೊಳಿಸಿ = ಯಜ್ಞದ ಕಾರ್ಯವನ್ನು ನಾಡಿನಲ್ಲಿ ಪ್ರಚಾರಮಾಡಿಸಿ, ಪವನಜ ವೃಕ್ಷಧ್ವಜ ಮೇಘನಾದರಂ ಕುದುರೆ ತಹುದೆಂದು ಬೆಸಸಿ = ಭೀಮ, ವೃಷಕೇತು, ಮೇಘನಾದರಿಗೆ ಕುದುರೆ ತರಲು ಆಜ್ಜ್ಷೆಮಾಡಿ, ಬಳಿಕೋಲಗವನಂದು ಬೀಳ್ಕೊಟ್ಟು =ಬಳಿಕ ರಾಜಸಭೆಯನ್ನು ಮುಗಿಸಿ,, ಹರಿಸಹಿತ ನೀಳಯದೊಳ್ ಷಡ್ರಸಾದಿಗಳನು ಆರೋಗಿಸಿ = ಕೃಷ್ಣನ ಸಹಿತ ಮೃಷ್ಟಾನ್ನ ಭೋಜನ ಮಾಡಿ, ವಿಮಳ ಹಂಸತೂಲದೊಳ್ ಪವದಿಸಿದನನ್ನೆಗಂ-ಪವಡಿಸಿದರ್ ಅನ್ನೆಗಂ = ವಿಮಲ ಹಂಸತೂಲದಹಾಸಿಗೆಯಲ್ಲಿ ಮಲಗಿದರು, ಅನ್ನೆಗಂ = ಅಲ್ಲಿಯವರಗೆ - ಎಂದರೆ ಅರುಣೋದಯದ ವರೆಗೆ, ತೋರಿತಿನಸೂತನೇಳ್ಗೆ ->ತೋರಿತು ಇನಸೂತನ ಏಳ್ಗೆ= ಇನಸೂತನ = ಅರಣನ ಏಳ್ಗೆ=ಉದಯ ತೋರಿತು=ಕಾಣಿಸಿತು -ಅರುಣನುದಯ ಕಾಣಿಸುವವರೆಗೆ.
(ಪದ್ಯ - ೬೪) |
ಪದ್ಯ - ೬೫
ಸಂಪಾದಿಸಿಮೂಡದೆಸೆಯೊಳ್ ಕೆಂಪು ದೊರೆಯೆ ತಾರಗೆ ಪರಿಯೆ |
ಕೂಡೆ ತಂಗಾಳಿ ಮುಂಬರಿಯೆ ಕಮಲಂ ಬಿರಿಯೆ |
ಪಾಡುವೆಳದುಂಬಿಗಳ್ ಮೊರೆಯೆ ಚಕ್ರಂ ನೆರೆಯೆ ನೈದಿಲೆಯ ಸೊಂಪುಮುರಿಯೆ||
ಬೀಡುಗೊಂಡಿರ್ದ ಕತ್ತಲೆಯ ಪಾಳೆಯಮೆತ್ತ |
ಲೋಡಿದುದೊ ನೋಡಿದಪೆನೆಂದು ಪೂರ್ವಾಚಲದ |
ಕೋಡುಗಲ್ಲಂ ಪತ್ತುವಂತೆ ಮೆರೆದಂ ಪ್ರಭೆಯೊಳವ್ಯಕ್ತನಾದಿತ್ಯನು||65|| (ಕೋಡುಗಲ್ಲಂ ಪತ್ತುವೊಲಿರ್ದನಾ ಪ್ರಭೆಯೊಳವ್ಯಕ್ತನಾದಿತ್ಯನು)
ಮೂಡದೆಸೆಯೊಳ್ = ಪೂರ್ವದಿಕ್ಕಿನಲ್ಲಿ, ಕೆಂಪು ದೊರೆಯೆ = ಕೆಂಪು ಆಗಲು, ತಾರಗೆ ಪರಿಯೆ =ನಕ್ಷತ್ರಗಳು ಕಾಣದಂತೆ ಹೋಗಲು, ಕೂಡೆ ತಂಗಾಳಿ ಮುಂಬರಿಯೆ = ಅದೇ ಸಮಯದಲ್ಲಿ ತಂಗಾಳಿ ಬೀಸಲು, ಕಮಲಂ ಬಿರಿಯೆ = ಕಮಲವು ಅರಳಲು, ಪಾಡುವೆಳದುಂಬಿಗಳ್ ಮೊರೆಯೆ = ಹಾಡುವ ಎಳೆತುಂಬಿಗಳು (ಜೇನುಹುಳುಗಳು ಜೇಂಕಾರ ಮಾಡಲು, ಚಕ್ರಂ ನೆರೆಯೆ = ಚಕ್ರವಾಕ ಪಕ್ಷಿಗಳು ಒಟ್ಟಾಗಿ ಗುಂಪುಗೂಡಲು, ನೈದಿಲೆಯ ಸೊಂಪುಮುರಿಯೆ = ರಾತ್ರಿ ಅರಳುವ ನೈದಿಲೆಗಳು ಅಥವಾ ಕುಮುದಗಳು = ಮಚ್ಚಿಕೊಳ್ಳಲು, ಬೀಡುಗೊಂಡಿರ್ದ ಕತ್ತಲೆಯ ಪಾಳೆಯಮೆತ್ತಲೋಡಿದುದೊ->ಪಾಳಯಂ ಎತ್ತಲು ಓಡಿದುದೊ = ಕತ್ತಲೆಯ ಪಾಳೆಯ (ಬೀಡುಬಿಟ್ಟಿದ್ದು) ಎಲ್ಲಿಗೆ ಹೋಯಿತೋ ನೋಡಿದಪೆನೆಂದು = ನೋಡುವೆನೆಂದು, ಪೂರ್ವಾಚಲದ ಕೋಡುಗಲ್ಲಂ ಪತ್ತುವಂತೆ ಮೆರೆದಂ ಪ್ರಭೆಯೊಳವ್ಯಕ್ತನಾದಿತ್ಯನು = ಪೂರ್ವದಿಕ್ಕಿನ ಪರ್ವತದ ಕೋಡುಗಲ್ಲು ಶಿಖರವನ್ನು ಹತ್ತುವಂತೆ,ಸೂರ್ಯನು ಪ್ರಭೆಯಿಂದ ಪ್ರಕಾಶಿಸಿದನು. (ಪತ್ತುವೊಲಿರ್ದನಾ=ಹತ್ತುವಂತೆ ಇದ್ದನು ಆದಿತ್ಯನು )
(ಪದ್ಯ - ೬೫) |
ಪದ್ಯ - ೬೬
ಸಂಪಾದಿಸಿಇಂದು ವೇದವ್ಯಾಸಮುನಿವರಂ ಕೃಪೆಯೊಳೈ |
ತಂದು ಸನ್ನುತವಾಜಿಮೇಧಮಂ ಮಾಡು ನೀ ||
ನೆಂದು ನಿಯಮಿಸಲೇತಕೊಡನೆ ಗರುಡಧ್ವಜಂ ತಾನೆ ಕಾರುಣ್ಯದಿಂದೆ ||
ಬಂದು ಮೈದೋರಲೇಕಿದು ತನ್ನ ಭಾಗ್ಯವಧು !
ವೊಂದುಗೂಡುವ ಕಾಲಮೆಂದು ಹರ್ಷದೊಳರಸ |
ನಂದು ನಿದ್ರಾಲಲನೆಯಂ ಬಿಟ್ಟನುಪ್ಪವಡಿಸಿದನೋಲಗಂಗೊಟ್ಟನು ||66||(ಬಿಟ್ಟ -ಬಿಸುಟನುಪ್ಪಡಿಸಿದನೋಲಂಗಂಗೊಟ್ಟನು)
ಇಂದು = ಆ ದಿನ ವೇದವ್ಯಾಸಮುನಿವರಂ ಕೃಪೆಯೊಳೈ ತಂದು = ವೇದವ್ಯಾಸಮುನಿವರನು ಕೃಪೆಯಿಂದ ಬಂದು, ಸನ್ನುತವಾಜಿಮೇಧಮಂ ಮಾಡು ನೀ ನೆಂದು= ಶ್ರೇಷ್ಠ ಅಶ್ವಮೇಧ ಯಾಗವನ್ನು ನೀನು ಮಾಡು ಎಂದು, ನಿಯಮಿಸಲೇತಕೊಡನೆ = ನೇಮಿಸಲು, ಏತಕೆ ಗರುಡಧ್ವಜಂ ಬಂದು = ಕೃಷ್ಣನು ತಾನೆ ಕಾರುಣ್ಯದಿಂದೆ =ಕರುಣದಿಂದ ಬಂದು, ಮೈದೋರಲೇಕಿದು-> ಮೈದೋರಲು= ಪ್ರತ್ಯಕ್ಷವಾಗಲು ಏಕೆ = ಏಕಾಗಿ, ಇದು ತನ್ನ ಭಾಗ್ಯವಧು ವೊಂದುಗೂಡುವ ಕಾಲಮೆಂದು = ಇದು ತನ್ನ ಭಾಗ್ಯವು ಭಾಗ್ಯವು ಬಂದು ಸೇರುವ ಕಾಲ ಎಂದು, ಹರ್ಷದೊಳರಸನಂದು-> ಹರ್ಷದಲ್ಲಿ ಅರಸನು, ನಿದ್ರಾಲಲನೆಯಂ =ನಿದ್ರಾದೇವಿಯನ್ನು, ಬಿಟ್ಟನುಪ್ಪವಡಿಸಿದನೋಲಗಂಗೊಟ್ಟನು->ಬಿಟ್ಟನು ಉಪ್ಪಡಿಸಿ =ಎಚ್ಚರಿದ್ದು ಓಲಗಂ ಗೊಟ್ಟನು = ರಾತ್ರಿಯಲ್ಲೇ ಸಭೆಯನ್ನು ನೆಡೆಸಿದ್ದನು. (ಬಿಟ್ಟ -ಬಿಸುಟನುಪ್ಪಡಿಸಿದನೋಲಂಗಂಗೊಟ್ಟನು)
(ಪದ್ಯ - ೬೪) |
ಪದ್ಯ - ೬೭
ಸಂಪಾದಿಸಿಆ ವೇಳೆಯೊಳ್ ಪವನಜಂ ಬಂದು ಭೂಪನಡಿ !
ದಾವರೆಯೊಳೆರಗಿ ಪಯಣಕೆ ಬೆಸಂಬಡೆದರಸು |
ಗಾವಲಂ ಫಲುಗುಣನೊಳಿರಿಸಿ ಹೈಡಿಂಬಿಯಂ ಬರಿಸಿ ಕರ್ಣಜನ ಕರೆಸಿ ||
ಆ ವೀರರಿರ್ವರಿಂ ಬೆರಸಿ ರಥಮಂ ತರಿಸಿ |
ದೇವಪುರ ಲಕ್ಷ್ಮೀಶನಂಘ್ರಿಗುಪಚರಿಸಿ ಬಿರು |
ದಾವಳೀಯ ಪಾಠಕರ ಗಡಣದಿಂ ಪೊರಮಟ್ಟನಾ ಹಸ್ತಿನಾವತಿಯನು||67||
ಆ ವೇಳೆಯೊಳ್ =ಅದೇ ಸಮಯದಲ್ಲಿ,ಪವನಜಂ ಬಂದು ಭೂಪನಡಿ ದಾವರೆಯೊಳೆರಗಿ = ಭೀಮನು ಬಂದು ರಾಜನ ಪಾದಕ್ಕೆ ನಮಸ್ಕರಿಸಿ, ಪಯಣಕೆ ಬೆಸಂಬಡೆದರಸು->ಬೆಸಂ ಪಡೆದನು ಅರಸು = ಕುದುರೆ ತರಲು ಸೈನ್ಯದೊಡನೆ ಪ್ರಯಾಣಕ್ಕೆ ಅಪ್ಪಣೆಯನ್ನು ಪಡೆದನು.ಅರಸುಗಾವಲಂ ಅರಸನ ಕಾವಲಿನ ಹೊಣೆಯನ್ನ, ಫಲುಗುಣನೊಳಿರಿಸಿ = ಫಲುಗುಣನೊಳು ಇರಿಸಿ, ಹೈಡಿಂಬಿಯಂ = ಮೇಘನಾದನನ್ನು ಬರಿಸಿ = ಬರುವಮತೆ ಹೇಳಿ, ಕರ್ಣಜನ ಕರೆಸಿ = ಕರ್ಣನಮಗ ವೃಷಕೇತುವನ್ನು ಕರೆಸಿ, ಆ ವೀರರಿರ್ವರಿಂ ಬೆರಸಿ = ಆಇಬ್ಬರು ವೀರರನ್ನು ಸೇರಿಕೊಂಡು, ರಥಮಂ ತರಿಸಿ = ರಥವನ್ನು ತರಿಸಿ,ದೇವಪುರ ಲಕ್ಷ್ಮೀಶನಂಘ್ರಿಗುಪಚರಿಸಿ = ದೇವಪುರದಲ್ಲಿ ನೆಲಸಿರುವ ಲಕ್ಷ್ಮೀಪತಿ ವಿಷ್ಣುವಿನ ಅಂಘ್ರಿಗೆ ಪಾದಗಳಿಗೆ ಉಪಚರಿಸಿ = ನಮಿಸಿ ಬಿರುದಾವಳೀಯ ಪಾಠಕರ ಗಡಣದಿಂ = ಬಿರುದುಗಳನ್ನು ಪಠಿಸುವವರ ಸಮೂಹದೊಡನೆ, ಪೊರಮಟ್ಟನಾ ಹಸ್ತಿನಾವತಿಯನು = ಹಸ್ತಿನಾವತಿಯಿಂದ ಹೊರಹೊರಟನು.
(ಪದ್ಯ - ೬೭) |
- ~~ಓಂ~~
- (XXIX-VI-IIOXvII)
ಹೋಗಿ
ಸಂಪಾದಿಸಿನೋಡಿ
ಸಂಪಾದಿಸಿಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.