ಜೈಮಿನಿ ಭಾರತ/ಮುವತ್ತೆರಡನೆಯ ಸಂಧಿ

ಮುವತ್ತೆರಡನೆಯ ಸಂಧಿ

ಸಂಪಾದಿಸಿ

ಪದ್ಯ:-:ಸೂಚನೆ :

ಸಂಪಾದಿಸಿ

ಸೂಚನೆ: ವರ ಚಂದ್ರಹಾಸನಂ ಪ್ರೀತಿಯಿಂದೊಡಗೊಂಡು |
ಶರಧಿಯ ಮಧ್ಯದೊಳ್ ಬಕಾದಾಲ್ಭ್ಯನಂ ಕಂಡು |
ಮರಳಿ ಕೃಷ್ಣಾರ್ಜುನರ್ ಸಿಂಧುದೇಶದ ಮೇಲೆ ಗಜನಗರಿಗೈತಂದರು ||

ಪದವಿಭಾಗ-ಅರ್ಥ:
ಸೂಚನೆ:ವರ ಚಂದ್ರಹಾಸನಂ ಪ್ರೀತಿಯಿಂದ ಒಡಗೊಂಡು ಶರಧಿಯ ಮಧ್ಯದೊಳ್ ಬಕಾದಾಲ್ಭ್ಯನಂ ಕಂಡು ಮರಳಿ ಕೃಷ್ಣಾರ್ಜುನರ್ ಸಿಂಧುದೇಶದ ಮೇಲೆ ಗಜನಗರಿಗೆ ಐತಂದರು==[ಶ್ರೇಷ್ಠನಾದ ಚಂದ್ರಹಾಸನನ್ನು ಪ್ರೀತಿಯಿಂದ ತಮ್ಮೊಡನೆ ಸೇರಿಸಿಕೊಂಡು ಸಮುದ್ರದ ಮಧ್ಯದಲ್ಲಿ ಇದ್ದ ಬಕಾದಾಲ್ಭ್ಯನೆಂಬ ಮುನಿಯನ್ನು ಕಂಡು ಹಿಂತಿರುಗಿ ಕೃಷ್ಣಾರ್ಜುನರು ಸಿಂಧೂದೇಶದ ಮೂಲಕ ಹಸ್ತಿನಾವತಿಗೆ ಬಂದರು].
  • ತಾತ್ಪರ್ಯ:ಶ್ರೇಷ್ಠನಾದ ಚಂದ್ರಹಾಸನನ್ನು ಪ್ರೀತಿಯಿಂದ ತಮ್ಮೊಡನೆ ಸೇರಿಸಿಕೊಂಡು ಸಮುದ್ರದ ಮಧ್ಯದಲ್ಲಿ ಇದ್ದ ಬಕಾದಾಲ್ಭ್ಯನೆಂಬ ಮುನಿಯನ್ನು ಕಂಡು ಹಿಂತಿರುಗಿ ಕೃಷ್ಣಾರ್ಜುನರು ಸಿಂಧೂದೇಶದ ಮೂಲಕ ಹಸ್ತಿನಾವತಿಗೆ ಬಂದರು.
  • (ಪದ್ಯ-ಸೂಚನೆ)

ಪದ್ಯ:-::

ಸಂಪಾದಿಸಿ

ಕೇಳ್ದೆಲಾ ನರನಾಥ ಪಾರ್ಥಂಗೆ ನಾರದಂ |
ಪೇಳ್ದ ವೃತ್ತಾಂತಮಂ ಬಳಿಕ ಸಂತೋಷಮಂ |
ತಾಳ್ದು ಕುಂತೀಸುತಂ ಚಂದ್ರಹಾಸ ಪುರಾಭಿಮುಖಮಾಗಿ ನಡೆಯುತಿರಲು ||
ಆಳ್ದೋರಿ ತಮತಮಗೆ ಭೂಪಾರೈದೆ ಕೆಂ |
ದೂಳ್ದೇವಲೋಕಮಂ ಕಿತ್ತೆತ್ತಿಕೊಂಡೊಯ್ದು |
ದಾಳ್ದುದಿನ್ನೇನಂಬುಧಿಯೊಳವನಿತಳಮೆಂಬ ತೆರನಾಗಿ ಪದಹತಿಯೊಳು ||1||

ಪದವಿಭಾಗ-ಅರ್ಥ:
ಕೇಳ್ದೆಲಾ ನರನಾಥ ಪಾರ್ಥಂಗೆ ನಾರದಂ ಪೇಳ್ದ ವೃತ್ತಾಂತಮಂ ಬಳಿಕ ಸಂತೋಷಮಂ ತಾಳ್ದು ಕುಂತೀಸುತಂ ಚಂದ್ರಹಾಸ ಪುರಾಭಿಮುಖಮಾಗಿ ನಡೆಯುತಿರಲು=[ಜೈಮಿನಿಯು ಹೇಳಿದನು, ನರನಾಥ ಜನಮೇಜಯನೇ, ಪಾರ್ಥನಿಗೆ ನಾರದನು ಹೇಳಿದ ವೃತ್ತಾಂತವನ್ನು ಕೇಳಿದೆಯಲ್ಲವೇ?; ನಾರದನು ಹೋದ ನಂತರ ಕುಂತೀಸುತ ಅರ್ಜುನನು ಸಂತೋಷಪಟ್ಟು, ಚಂದ್ರಹಾಸ ಪುರಕ್ಕೆ ಅಭಿಮುಖವಾಗಿ ನಡೆದರು. ಆಗ ];; ಆಳ್ದೋರಿ (ಆಳ್ ತೋರಿ:ಪೌರುಷ ತೋರಿ) ತಮತಮಗೆ ಭೂಪಾರು ಐದೆ ಕೆಂದೂಳ್ ದೇವಲೋಕಮಂ ಕಿತ್ತು ಎತ್ತಿಕೊಂಡು ಒಯ್ದುದು ಆಳ್ದುದು (ಆಳ್ದುದು: ಮುಳುಗಿಸಿತು) ಇನ್ನೇನು ಅಂಬುಧಿಯೊಳು ಅವನಿತಳಮೆಂಬ (ಭೂಮಿ) ತೆರನಾಗಿ ಪದಹತಿಯೊಳು(ನಡಿಗೆ)=[ಆಳ್ದೋರಿ (ಆಳ್ ತೋರಿ:) ರಾಜರು ತಮ್ಮ ತಮ್ಮಲ್ಲಿ ತಾವು ಪೌರುಷ ತೋರಿದ್ದನ್ನು ಹೇಳುತ್ತಾ ಬರುತ್ತಿರಲು ಆ ದೊಡ್ಡ ಸೈನ್ಯದ ನಡಿಗೆಯಿಂದ ಎದ್ದ ಕೆಂದೂಳು ದೇವಲೋಕವನ್ನು ಕಿತ್ತು ಎತ್ತಿಕೊಂಡು ಭೂಮಿಯನ್ನು ಸಮುದ್ರದಲ್ಲಿ ಒಯ್ದು ಇನ್ನೇನು ಮುಳುಗಿಸಿತು ಎಂಬ ತೆರನಾಗಿ ಕಾಣುತ್ತಿತ್ತು].
  • ತಾತ್ಪರ್ಯ:ಜೈಮಿನಿಯು ಹೇಳಿದನು, ನರನಾಥ ಜನಮೇಜಯನೇ, ಪಾರ್ಥನಿಗೆ ನಾರದನು ಹೇಳಿದ ವೃತ್ತಾಂತವನ್ನು ಕೇಳಿದೆಯಲ್ಲವೇ?; ನಾರದನು ಹೋದ ನಂತರ ಕುಂತೀಸುತ ಅರ್ಜುನನು ಸಂತೋಷಪಟ್ಟು, ಚಂದ್ರಹಾಸ ಪುರಕ್ಕೆ ಅಭಿಮುಖವಾಗಿ ನಡೆದರು. ಆಗ ರಾಜರು ತಮ್ಮ ತಮ್ಮಲ್ಲಿ ತಾವು ಪೌರುಷ ತೋರಿದ್ದನ್ನು ಹೇಳುತ್ತಾ ಬರುತ್ತಿರಲು ಆ ದೊಡ್ಡ ಸೈನ್ಯದ ನಡಿಗೆಯಿಂದ ಎದ್ದ ಕೆಂದೂಳು ದೇವಲೋಕವನ್ನು ಕಿತ್ತು ಎತ್ತಿಕೊಂಡು ಭೂಮಿಯನ್ನು ಸಮುದ್ರದಲ್ಲಿ ಒಯ್ದು ಇನ್ನೇನು ಮುಳುಗಿಸಿತು ಎಂಬ ತೆರನಾಗಿ ಕಾಣುತ್ತಿತ್ತು.
  • (ಪದ್ಯ-೧)

ಪದ್ಯ:-::

ಸಂಪಾದಿಸಿ

ಬರುತಿರ್ದುದರ್ಜುನನ ಸೈನಿಕಂ ಕುಂತಳ ನ |
ಗರಿಗಾಗಿ ಜನಮೇಜಯಕ್ಷಿತಿಪ ಕೇಳಿತ್ತ |
ನರನ ವಾಜಿಗಳೂರ ಪೊರವಳಯಮುಪ ವನದ ನಡುವೆ ತಮ್ಮಿಚ್ಛೆಯಿಂದೆ ||
ತಿರುಗುತಿರೆ ಕಂಡವರ್ ಕೌತುಕಮಿದೆಂದು ಬಂ |
ದೊರೆಯೆ ಪದ್ಮಾಕ್ಷ ಮರಧ್ವಜರ್ ಪಿಡಿದವರ |
ಶಿರದ ಪಟ್ಟದ ಲಿಪಿಯನೋದಿ ವಿಸ್ಮಿತರಾಗಿ ತಂದೆಗೊಪ್ಪಿಸಿ ನುಡಿದರು ||2||

ಪದವಿಭಾಗ-ಅರ್ಥ:
ಬರುತಿರ್ದುದು ಅರ್ಜುನನ ಸೈನಿಕಂ ಕುಂತಳ ನಗರಿಗಾಗಿ ಜನಮೇಜಯ ಕ್ಷಿತಿಪ ಕೇಳಿತ್ತ ನರನ ವಾಜಿಗಳೂರ ಪೊರವಳಯ ಮುಪವನದ ನಡುವೆ ತಮ್ಮಿಚ್ಛೆಯಿಂದೆ=[ಅರ್ಜುನನ ಸೈನ್ಯ ಸಮೂಹ ಕುಂತಳ ನಗರದಕಡೆಗೆ ಬರುತ್ತಿತ್ತು. ಜನಮೇಜಯ ರಾಜನೇ ಕೇಳು,ಇತ್ತ ಅರ್ಜುನನ ಕುದುರೆಎಗಳು ಊರ ಹೊರವಲಯದಲ್ಲಿದ್ದ ಉಪವನದ ನಡುವೆ ತಮ್ಮಿಚ್ಛೆಯಂತೆ ];; ತಿರುಗುತಿರೆ ಕಂಡವರ್ ಕೌತುಕಂ ಇದೆಂದು ಬಂದು ಒರೆಯೆ (ಹೇಳಲು) ಪದ್ಮಾಕ್ಷ ಮರಧ್ವಜರ್ ಪಿಡಿದು ಅವರ ಶಿರದ ಪಟ್ಟದ ಲಿಪಿಯನೋದಿ ವಿಸ್ಮಿತರಾಗಿ ತಂದೆಗೊಪ್ಪಿಸಿ ನುಡಿದರು=[ತಿರುಗುತ್ತಿತ್ತು. ಅದನ್ನು ಕಂಡ ಜನರು, ಇದು ಆಶ್ಚರ್ಯ ಎಂದು, ಅಲ್ಲಿಂದ ಬಂದು ಪದ್ಮಾಕ್ಷ ಮತ್ತು ಮರಧ್ವಜರಿಗೆ ಹೇಳಲು, ಅವರು ಅದನ್ನು ಹಿಡಿದು, ಅವರ ತಲೆಯ ಪಟ್ಟದ ಲಿಪಿಯನ್ನು ಓದಿ ವಿಸ್ಮಿಯದಿಂದ ತಂದೆಗೆ ತಂದು ಒಪ್ಪಿಸಿ ಹೇಳಿದರು].
  • ತಾತ್ಪರ್ಯ:ಅರ್ಜುನನ ಸೈನ್ಯ ಸಮೂಹ ಕುಂತಳ ನಗರದಕಡೆಗೆ ಬರುತ್ತಿತ್ತು. ಜನಮೇಜಯ ರಾಜನೇ ಕೇಳು,ಇತ್ತ ಅರ್ಜುನನ ಕುದುರೆಎಗಳು ಊರ ಹೊರವಲಯದಲ್ಲಿದ್ದ ಉಪವನದ ನಡುವೆ ತಮ್ಮಿಚ್ಛೆಯಂತೆ ತಿರುಗುತ್ತಿತ್ತು. ಅದನ್ನು ಕಂಡ ಜನರು, ಇದು ಆಶ್ಚರ್ಯ ಎಂದು, ಅಲ್ಲಿಂದ ಬಂದು ಪದ್ಮಾಕ್ಷ ಮತ್ತು ಮರಧ್ವಜರಿಗೆ ಹೇಳಲು, ಅವರು ಅದನ್ನು ಹಿಡಿದು, ಅವರ ತಲೆಯ ಪಟ್ಟದ ಲಿಪಿಯನ್ನು ಓದಿ ವಿಸ್ಮಿಯದಿಂದ ತಂದೆಗೆ ತಂದು ಒಪ್ಪಿಸಿ ಹೇಳಿದರು].
  • (ಪದ್ಯ-೨)XXV-XII

ಪದ್ಯ:-::

ಸಂಪಾದಿಸಿ

ಜೀಯ ಬಿನ್ನಪವನವಧರಿಸಿಳೆಯ ಮೇಲೆ ಕೌಂ |
ತೇಯನ ಮಹಾಧ್ವರದ ವಾಜಿಗಳ್ ತಿರುಗಿ ತರು |
ವಾಯೊಳಿಲ್ಲಿಗೆ ಬಂದೊಡಾವು ಕಟ್ಟಿದೆವಿನ್ನು ಬಿಡಿಸಿಕೊಂಬತಿಬಲರನು ||
ಸಾಯಕದ ಮೊನೆಯೊಳೈಸಲೆ ಕಾಣಬೇಕೆನಲ್ |
ಪ್ರೀಯದಿಂ ತನಯರಂ ತೆಗೆದಪ್ಪಿ ತಾನಭಿ |
ಪ್ರಾಯಮಂ ತಿಳಿದು ಹರ್ಷಿತನಾಗಿ ಚಂದ್ರಹಾಸಂ ನಯದೊಳಿಂತೆಂದನು ||3||

ಪದವಿಭಾಗ-ಅರ್ಥ:
ಜೀಯ ಬಿನ್ನಪವನು (ವಿನಯದ ಹೇಳಿಕೆ/ಕೋರಿಕೆ) ಅವಧರಿಸು ಇಳೆಯ ಮೇಲೆ ಕೌಂತೇಯನ ((ಕುಖತಿಯಮಗ) ಮಹಾಧ್ವರದ ವಾಜಿಗಳ್ ತಿರುಗಿ ತರುವಾಯೊಳು ಇಲ್ಲಿಗೆ ಬಂದೊಡೆ ಆವು (ನಾವು) ಕಟ್ಟಿದೆವು ಇನ್ನು ಬಿಡಿಸಿಕೊಂಬ ಅತಿಬಲರನು=[ಜೀಯ, ತಂದೆ, ಒಡೆಯನೇ, ಬಿನ್ನಹವನ್ನು ಕೇಳು, ಈ ಭೂಮಂಡಲದಲ್ಲಿ ಯುಧಿಷ್ಠಿನ ಅಶ್ವಮೇಧದ ಕುದುರೆಗಳು ಸಂಚರಿಸುತ್ತಾ ಕೊನೆಗೆ ಇಲ್ಲಿಗೆ ಬಂದವು. ಆಗ ನಾವು ಅವನ್ನು ಕಟ್ಟಿದೆವು; ಇನ್ನು ಬಿಡಿಸಿಕೊಳ್ಳಬಲ್ಲ ಅತಿಬಲಶಾಲಿಗಳನ್ನು ];; ಸಾಯಕದ ಮೊನೆಯೊಳು ಐಸಲೆ (ಅಷ್ಟೇ) ಕಾಣಬೇಕು ಎನಲ್ ಪ್ರೀಯದಿಂ ತನಯರಂ ತೆಗೆದಪ್ಪಿ, ತಾನು ಅಭಿಪ್ರಾಯಮಂ ತಿಳಿದು ಹರ್ಷಿತನಾಗಿ ಚಂದ್ರಹಾಸಂ ನಯದೊಳು ಇಂತೆಂದನು.=[ಬಾಣದ ಮೊನೆಯಲ್ಲಿ ಕಾಣಬೇಕಷ್ಟೇ! ಎನ್ನಲು ಪ್ರೀತಿಯಿಂದ ಮಕ್ಕಳನ್ನು ಕರೆದು ಅಪ್ಪಿಕೊಂಡು ಅವನು ಕೃಷ್ನನು ಬರುವುದನ್ನು ಊಹಿಸಿ ತಿಳಿದು, ಹರ್ಷಪಟ್ಟು, ಚಂದ್ರಹಾಸನು ನಯವಾಗಿ ಹೀಗೆ ಹೇಳಿದನು].
  • ತಾತ್ಪರ್ಯ:ಜೀಯ, ತಂದೆಯೇ, ಒಡೆಯನೇ, ಬಿನ್ನಹವನ್ನು ಕೇಳು, ಈ ಭೂಮಂಡಲದಲ್ಲಿ ಯುಧಿಷ್ಠಿನ ಅಶ್ವಮೇಧದ ಕುದುರೆಗಳು ಸಂಚರಿಸುತ್ತಾ ಕೊನೆಗೆ ಇಲ್ಲಿಗೆ ಬಂದವು. ಆಗ ನಾವು ಅವನ್ನು ಕಟ್ಟಿದೆವು; ಇನ್ನು ಬಿಡಿಸಿಕೊಳ್ಳಬಲ್ಲ ಅತಿಬಲಶಾಲಿಗಳನ್ನು ಬಾಣದ ಮೊನೆಯಲ್ಲಿ ಕಾಣಬೇಕಷ್ಟೇ! ಎನ್ನಲು ಪ್ರೀತಿಯಿಂದ ಮಕ್ಕಳನ್ನು ಕರೆದು ಅಪ್ಪಿಕೊಂಡು ಅವನು ಕೃಷ್ನನು ಬರುವುದನ್ನು ಊಹಿಸಿ ತಿಳಿದು, ಹರ್ಷಪಟ್ಟು, ಚಂದ್ರಹಾಸನು ನಯವಾಗಿ ಹೀಗೆ ಹೇಳಿದನು.
  • (ಪದ್ಯ-೩)

ಪದ್ಯ:-::

ಸಂಪಾದಿಸಿ

ಮಕ್ಕಳಿರ ಕೇಳಿ ತಾನಾಬಾಲ್ಯದಿಂದೆ ಬಿಡ |
ದಕ್ಕರಿಂ ಚಿತ್ತದೊಳ್ ಧ್ಯಾನಿಸುವ ದೇವನಿನಿ |
ತಕ್ಕೆ ಮೈದೋರುವಂ ಪಾರ್ಥನ ಸಹಾಯಕೈತಂದು (ನಿX)ನಮಗರಿವೆನಿದನು ||
ಸಿಕ್ಕಿದೊಡೆ ಕೃಷ್ಣದರ್ಶನದ ಪುಣ್ಯವೆ ಸಾಕು |
ಮಿಕ್ಕ ಸುಕೃತದ ಗಸಣಿಯೇಕಿನ್ನು ಧರ್ಮಾಧ್ವ |
ರಕ್ಕೆ ತಿರುಗುವ ಕುದುರೆಗಳನಿಲ್ಲಿ ಕಟ್ಟಿದೊಡೆ ಪುರುಷಾರ್ಥಮೇನೆಂದನು ||4||

ಪದವಿಭಾಗ-ಅರ್ಥ:
ಮಕ್ಕಳಿರ ಕೇಳಿ ತಾನು ಆ ಬಾಲ್ಯದಿಂದೆ ಬಿಡದೆ ಅಕ್ಕರಿಂ ಚಿತ್ತದೊಳ್ ಧ್ಯಾನಿಸುವ ದೇವನು ಇನಿತಕ್ಕೆ (ಇಷ್ಟು ದಿನಕ್ಕೆ) ಮೈದೋರುವಂ ಪಾರ್ಥನ ಸಹಾಯಕೆ ಐತಂದು (ನಿ)ನಮಗೆ ಅರಿವೆನು ಇದನು=[ಮಕ್ಕಳಿರ ಕೇಳಿ ತಾನು (ಚಂದ್ರಹಾಸನು) ಆ ಹಿಂದಿನ ಬಾಲ್ಯದಿಂದಲೂ ಬಿಡದೆ ಒಂದೇಸಮನೆ ಪ್ರೀತಿಯಿಮದ ಅಂತರಂಗದಲ್ಲಿ ಧ್ಯಾನಿಸುವ ದೇವನು ಪಾರ್ಥನ ಸಹಾಯಕ್ಕಾಗಿ ಬಂದು, ನಮಗೆ ಇಷ್ಟು ದಿನಕ್ಕೆ ಇಲ್ಲಿ ಪ್ರತ್ಕ್ಷನಾಗುವನು. ಇದನ್ನು ತಿಳಿದಿರುವೆನು];; ಸಿಕ್ಕಿದೊಡೆ ಕೃಷ್ಣದರ್ಶನದ ಪುಣ್ಯವೆ ಸಾಕು, ಮಿಕ್ಕ ಸುಕೃತದ ಗಸಣಿಯೇಕೆ ಇನ್ನು ಧರ್ಮಾಧ್ವರಕ್ಕೆ ತಿರುಗುವ ಕುದುರೆಗಳನು ಇಲ್ಲಿ ಕಟ್ಟಿದೊಡೆ ಪುರುಷಾರ್ಥಂ ಏನು ಎಂದನು.=[ಅವನು ಸಿಕ್ಕಿದರೆ, ಕೃಷ್ಣದರ್ಶನದ ಪುಣ್ಯವೆ ಸಾಕು, ಉಳಿದ ಸುಕೃತದ ತೊಂದರೆಯೇಕೆ? ಇನ್ನು ಧರ್ಮದ ಯಜ್ಞಕ್ಕೆ ತಿರುಗುವ ಆ ಕುದುರೆಗಳನ್ನು ಇಲ್ಲಿ ಕಟ್ಟಿದರೆ ಪುರುಷಾರ್ಥವೇನು? ಎಂದನು.].
  • ತಾತ್ಪರ್ಯ:ಮಕ್ಕಳಿರ ಕೇಳಿ ತಾನು (ಚಂದ್ರಹಾಸನು) ಆ ಹಿಂದಿನ ಬಾಲ್ಯದಿಂದಲೂ ಬಿಡದೆ ಒಂದೇಸಮನೆ ಪ್ರೀತಿಯಿಮದ ಅಂತರಂಗದಲ್ಲಿ ಧ್ಯಾನಿಸುವ ದೇವನು ಪಾರ್ಥನ ಸಹಾಯಕ್ಕಾಗಿ ಬಂದು, ನಮಗೆ ಇಷ್ಟು ದಿನಕ್ಕೆ ಇಲ್ಲಿ ಪ್ರತ್ಕ್ಷನಾಗುವನು. ಇದನ್ನು ತಿಳಿದಿರುವೆನು. ಅವನು ಸಿಕ್ಕಿದರೆ, ಕೃಷ್ಣದರ್ಶನದ ಪುಣ್ಯವೆ ಸಾಕು, ಉಳಿದ ಸುಕೃತದ ತೊಂದರೆಯೇಕೆ? ಇನ್ನು ಧರ್ಮದ ಯಜ್ಞಕ್ಕೆ ತಿರುಗುವ ಆ ಕುದುರೆಗಳನ್ನು ಇಲ್ಲಿ ಕಟ್ಟಿದರೆ ಪುರುಷಾರ್ಥವೇನು? ಎಂದನು.
  • (ಪದ್ಯ-೪)

ಪದ್ಯ:-::

ಸಂಪಾದಿಸಿ

ಧರಣಿಯೊಳ್ ಪ್ರತ್ಯಕ್ಷಧರ್ಮದಾಕೃತಿ ಯುಧಿ |
ಷ್ಠಿರಭೂಪನಾತನ ಹಯಂಗಳಂ ತಡೆದಪರೆ |
ಪಿರಿದಾಯಸದೊಳವರ್ ಪಾಲಿಸಿದರಿನ್ನೆಗಂ ದಶಮಾಸದಿಂದೆ ಮೇಲೆ ||
ಅರೆದಿಂಗಳಾದುದಿನ್ನಿಹುದು ಪಕ್ಷತ್ರಯಂ |
ಬರಿಸಕಲ್ಲಿಂದ ಮುಂದಿಲ್ಲಿ ಸಿಕ್ಕೊರ್ದೊಡ |
ಧ್ವರಮುಳಿವುದದರಿಂದ ನೀವೆ ರಕ್ಷಿಸಿ ಪಾಂಡವರಿಗೆ ಕೊಟ್ಟಪುದೆಂದನು ||5||

ಪದವಿಭಾಗ-ಅರ್ಥ:
ಧರಣಿಯೊಳ್ ಪ್ರತ್ಯಕ್ಷ ಧರ್ಮದಾಕೃತಿ ಯುಧಿಷ್ಠಿರಭೂಪನು ಆತನ ಹಯಂಗಳಂ ತಡೆದಪರೆ ಪಿರಿದು ಆಯಸದೊಳು ಅವರ್ ಪಾಲಿಸಿದರು ಇನ್ನೆಗಂ (ಇಲ್ಲಿಯವರೆಗೆ) ದಶಮಾಸದಿಂದೆ ಮೇಲೆ=[ಈ ಭೂಮಿಯಲ್ಲಿ ಯುಧಿಷ್ಠಿರ ಭೂಪನು ಪ್ರತ್ಯಕ್ಷ ಧರ್ಮದಾಕೃತಿಯಾಗಿರುವನು. ಆತನ ಕುದುರೆಗಳನ್ನು ತಡೆಯುವರೆ? ಕೂಡದು! ಇಲ್ಲಿಯವರೆಗೆ ಹತ್ತು ತಿಂಗಳ ಮೇಲೆ ಬಹಳ ಶ್ರಮದಿಂದ ಅವರು ಕುದುರೆಯನ್ನ ರಕ್ಷಿಸಿದರು.];; ಅರೆದಿಂಗಳು ಆದುದು ಇನ್ನಿಹುದು ಪಕ್ಷತ್ರಯಂ ಮೂರುಪಕ್ಷಗಳು/ ನಲವತ್ತೈದು ದಿನ) ಬರಿಸಕೆ ಅಲ್ಲಿಂದ ಮುಂದೆ ಇಲ್ಲಿ ಸಿಕ್ಕು ಇರ್ದೊಡೆ ಅಧ್ವರಂ ಉಳಿವುದು ಅದರಿಂದ ನೀವೆ ರಕ್ಷಿಸಿ ಪಾಂಡವರಿಗೆ ಕೊಟ್ಟಪುದು ಎಂದನು=[ನಂತರ ಅರ್ಧ ತಿಂಗಳು ಆಗಿಹೋಯಿತು; ಇನ್ನು ಅಲ್ಲಿಂದ ಮುಂದೆ ವರ್ಷತುಂಬಲು ಉಳಿದಿರುವುದು ನಲವತ್ತೈದು ದಿನ. ಇಲ್ಲಿ ಕುದುರೆಗಳು ಸಿಕ್ಕಿಹಾಕಿಕೊಂಡರೆ, ಯಜ್ಞವು ನಿಲ್ಲವುದು; ಅದರಿಂದ ನೀವೇ ಯಜ್ಞದ ಅಶ್ವಗಳನ್ನು ರಕ್ಷಿಸಿ ಪಾಂಡವರಿಗೆ ಕೊಟ್ಟುಬಿಡುವುದು, ಒಳ್ಳೆಯದು ಎಂದನು].
  • ತಾತ್ಪರ್ಯ:ಈ ಭೂಮಿಯಲ್ಲಿ ಯುಧಿಷ್ಠಿರ ಭೂಪನು ಪ್ರತ್ಯಕ್ಷ ಧರ್ಮದಾಕೃತಿಯಾಗಿರುವನು. ಆತನ ಕುದುರೆಗಳನ್ನು ತಡೆಯುವರೆ? ಕೂಡದು! ಇಲ್ಲಿಯವರೆಗೆ ಹತ್ತು ತಿಂಗಳ ಮೇಲೆ ಬಹಳ ಶ್ರಮದಿಂದ ಅವರು ಕುದುರೆಯನ್ನ ರಕ್ಷಿಸಿದರು. ನಂತರ ಅರ್ಧ ತಿಂಗಳು ಆಗಿಹೋಯಿತು; ಇನ್ನು ಅಲ್ಲಿಂದ ಮುಂದೆ ವರ್ಷತುಂಬಲು ಉಳಿದಿರುವುದು ನಲವತ್ತೈದು ದಿನ. ಇಲ್ಲಿ ಕುದುರೆಗಳು ಸಿಕ್ಕಿಹಾಕಿಕೊಂಡರೆ, ಯಜ್ಞವು ನಿಲ್ಲವುದು; ಅದರಿಂದ ನೀವೇ ಯಜ್ಞದ ಅಶ್ವಗಳನ್ನು ರಕ್ಷಿಸಿ ಪಾಂಡವರಿಗೆ ಕೊಟ್ಟುಬಿಡುವುದು, ಒಳ್ಳೆಯದು ಎಂದನು.
  • (ಪದ್ಯ-೫)

ಪದ್ಯ:-::

ಸಂಪಾದಿಸಿ

ತನ್ನ ಹೇಳಿಕೆಯೊಳಲ್ಲದೆ ಕೃಷ್ಣ ಫಲ್ಗುಣ |
ರ್ಗಿನ್ನು ಸಿಕ್ಕಿದ ಹರಿಗಳಂ ಬಿಡದೆ ಭೂಮಿಯೊಳ್ |
ಸನ್ನದ್ಧರಾಗಿ ಪಾಲಿಸಿ ನೀವು ಯಜ್ಞಕಾಲಕೆ ಧರ್ಮಜಂಗೆ ಕುಡಲು ||
ಉನ್ನತದ ಸುಕೃತಮಾದಪುದು ನಮಗೆಂದು ಸಂ |
ಪನ್ನಮತಿ ಚಂದ್ರಹಾಸಂ ನಿಜ ಕುಮಾರರಂ |
ಮನ್ನಿಸಿ ತುರಂಗ ರಕ್ಷಗೆ ಕಳುಹಿ ಬಲಸಹಿತ ಪೊಳಲ ಪೊರಗಿರುತಿರ್ದನು ||6||

ಪದವಿಭಾಗ-ಅರ್ಥ:
ತನ್ನ ಹೇಳಿಕೆಯೊಳು ಅಲ್ಲದೆ ಕೃಷ್ಣ ಫಲ್ಗುಣರ್ಗೆ ಇನ್ನು ಸಿಕ್ಕಿದ ಹರಿಗಳಂ ಬಿಡದೆ ಭೂಮಿಯೊಳ್ ಸನ್ನದ್ಧರಾಗಿ ಪಾಲಿಸಿ ನೀವು ಯಜ್ಞಕಾಲಕೆ ಧರ್ಮಜಂಗೆ ಕುಡಲು=[ಚಂದ್ರಹಾಸ ಹೇಳಿದ: ತನ್ನ ಮಾತಿನ ಸಲಹೆ ಅಷ್ಟೇ ಅಲ್ಲದೆ, ಕೃಷ್ಣ ಮತ್ತು ಫಲ್ಗುಣರುಗಳಿಗೆ ಈಗಿನ್ನೂ ಸಿಕ್ಕಿದ ಕುದುರೆಗಳನ್ನು (ಎರಡು ಯಜ್ಞದ ಕುದುರೆ ಇದೆ) ಭೂಮಿಯಲ್ಲಿ ಸಂಚರಿಸಲು ಬಿಡದೆ ಯುದ್ಧ ಸನ್ನದ್ಧರಾಗಿ ಅವುಗಳನ್ನು ನೀವು ಯಜ್ಞಕಾಲಕ್ಕೆ ಸರಿಯಾಗಿ ಧರ್ಮಜನಿಗೆ ಕೊಡುವುದಕ್ಕಾಗಿ ರಕ್ಷಿಸಿ.];; ಉನ್ನತದ ಸುಕೃತಮು ಆದಪುದು ನಮಗೆ ಎಂದು ಸಂಪನ್ನಮತಿ ಚಂದ್ರಹಾಸಂ ನಿಜ ಕುಮಾರರಂ ಮನ್ನಿಸಿ ತುರಂಗ ರಕ್ಷಗೆ ಕಳುಹಿ ಬಲಸಹಿತ ಪೊಳಲ ಪೊರಗಿರುತಿರ್ದನು=[ಇದರಿಂದ ನಮಗೆ ಹೆಚ್ಚಿನ ಸುಕೃತವು/ಪುಣ್ಯವು ಆಗುವುದು, ಎಂದು ಸಂಪನ್ನಬುದ್ಧಿಯುಳ್ಳ ಚಂದ್ರಹಾಸನು ತನ್ನ ಕುಮಾರರನ್ನು ಆದರಿಸಿ ಕುದುರೆಗಳ ರಕ್ಷಣೆಗೆ ಕಳುಹಿಸಿ ಸೈನ್ಯಸಹಿತ ನಗರದ ಹೊರಗೆ ಇರುತಿದ್ದನು].
  • ತಾತ್ಪರ್ಯ:ಚಂದ್ರಹಾಸ ಹೇಳಿದ: ತನ್ನ ಮಾತಿನ ಸಲಹೆ ಅಷ್ಟೇ ಅಲ್ಲದೆ, ಕೃಷ್ಣ ಮತ್ತು ಫಲ್ಗುಣರುಗಳಿಗೆ ಈಗಿನ್ನೂ ಸಿಕ್ಕಿದ ಕುದುರೆಗಳನ್ನು (ಎರಡು ಯಜ್ಞದ ಕುದುರೆ ಇದೆ) ಭೂಮಿಯಲ್ಲಿ ಸಂಚರಿಸಲು ಬಿಡದೆ ಯುದ್ಧ ಸನ್ನದ್ಧರಾಗಿ ಅವುಗಳನ್ನು ನೀವು ಯಜ್ಞಕಾಲಕ್ಕೆ ಸರಿಯಾಗಿ ಧರ್ಮಜನಿಗೆ ಕೊಡುವುದಕ್ಕಾಗಿ ರಕ್ಷಿಸಿ. ಇದರಿಂದ ನಮಗೆ ಹೆಚ್ಚಿನ ಸುಕೃತವು/ಪುಣ್ಯವು ಆಗುವುದು, ಎಂದು ಸಂಪನ್ನಬುದ್ಧಿಯುಳ್ಳ ಚಂದ್ರಹಾಸನು ತನ್ನ ಕುಮಾರರನ್ನು ಆದರಿಸಿ ಕುದುರೆಗಳ ರಕ್ಷಣೆಗೆ ಕಳುಹಿಸಿ ಸೈನ್ಯಸಹಿತ ನಗರದ ಹೊರಗೆ ಇರುತಿದ್ದನು.
  • (ಪದ್ಯ-೬)

ಪದ್ಯ:-::

ಸಂಪಾದಿಸಿ

ತುರಗಂಗಳಂ ಬಿಟ್ಟದರ ಕೂಡೆ ಸೇನೆಸಹಿ |
ತಿರದೆ ಪದ್ಮಾಕ್ಷ ಮಕರಧ್ವಜರ್ ಪೋದ ಬಳಿ |
ಕರವಿಂದನಾಭದರ್ಶನಕೆ ಲೋಲುಪನಾಗಿ ಚಂದ್ರಹಾಸಂ ಮುದದೊಳು ||
ಪುರದ ಹೊರವಳಯದೊಳ್ ಸೇನೆಯಂ ಕೂಡಿಕೊಂ |
ಡಿರುತಿರ್ದನನ್ನೆಗಂ ಮೇರೆದಪ್ಪಿದ ಮಹಾ |
ಶರಧಿಯಂತರ್ಜುನನ ಮೋಹರಂ ತಲೆದೋರಿತೆತ್ತಣಾಶ್ಚರ್ಯಮೆನಲು ||7||

ಪದವಿಭಾಗ-ಅರ್ಥ:
ತುರಗಂಗಳಂ ಬಿಟ್ಟು ಅದರ ಕೂಡೆ ಸೇನೆಸಹಿತ ಇರದೆ ಪದ್ಮಾಕ್ಷ ಮಕರಧ್ವಜರ್ ಪೋದ ಬಳಿಕ ಅರವಿಂದನಾಭ ದರ್ಶನಕೆ ಲೋಲುಪನಾಗಿ ಚಂದ್ರಹಾಸಂ ಮುದದೊಳು =[ಯಜ್ಞದ ತುರಗಗಳನ್ನು ಬಿಟ್ಟು, ಅದರ ಜೊತೆ ಸೇನೆಸಹಿತ ನಗರದಲ್ಲಿ ಇರದೆ ಪದ್ಮಾಕ್ಷ ಮಕರಧ್ವಜರು ಹೋದ ಬಳಿಕ ಅಚ್ಯುತನ ದರ್ಶನಕ್ಕೆ ಆಸೆಪಟ್ಟು ಚಂದ್ರಹಾಸ ಆನಂದದಿಂದ ];; ಪುರದ ಹೊರವಳಯದೊಳ್ ಸೇನೆಯಂ ಕೂಡಿಕೊಂಡು ಇರುತಿರ್ದನು ಅನ್ನೆಗಂ ಮೇರೆದಪ್ಪಿದ ಮಹಾಶರಧಿಯಂತೆ ಅರ್ಜುನನ ಮೋಹರಂ ತಲೆದೋರಿತು ಎತ್ತಣ ಆಶ್ಚರ್ಯಂ ಎನಲು=[ಪುರದ ಹೊರಭಾಗದಲ್ಲಿ ಸೇನೆಯನ್ನು ಕೂಡಿಕೊಂಡು ಇರುತ್ತಿದ್ದನು. ಆ ಸಮಯಕ್ಕೆ ಮಿತಿಇಲ್ಲದ ಮಹಾಸಮುದ್ರದಂತೆ ಅರ್ಜುನನ ಸೈನ್ಯವು ಇದೇನು ಆಶ್ಚರ್ಯವು ಎನ್ನುವಂತೆ ಕಾಣಿಸಿಕೊಂಡಿತು].
  • ತಾತ್ಪರ್ಯ:ತುರಗಂಗಳಂ ಬಿಟ್ಟು ಅದರ ಕೂಡೆ ಸೇನೆಸಹಿತ ಇರದೆ ಪದ್ಮಾಕ್ಷ ಮಕರಧ್ವಜರ್ ಪೋದ ಬಳಿಕ ಅರವಿಂದನಾಭ ದರ್ಶನಕೆ ಲೋಲುಪನಾಗಿ ಚಂದ್ರಹಾಸಂ ಮುದದೊಳು =[ಯಜ್ಞದ ತುರಗಗಳನ್ನು ಬಿಟ್ಟು, ಅದರ ಜೊತೆ ಸೇನೆಸಹಿತ ನಗರದಲ್ಲಿ ಇರದೆ ಪದ್ಮಾಕ್ಷ ಮಕರಧ್ವಜರು ಹೋದ ಬಳಿಕ ಅಚ್ಯುತನ ದರ್ಶನಕ್ಕೆ ಆಸೆಪಟ್ಟು ಚಂದ್ರಹಾಸ ಆನಂದದಿಂದ ];; ಪುರದ ಹೊರವಳಯದೊಳ್ ಸೇನೆಯಂ ಕೂಡಿಕೊಂಡು ಇರುತಿರ್ದನು ಅನ್ನೆಗಂ ಮೇರೆದಪ್ಪಿದ ಮಹಾಶರಧಿಯಂತೆ ಅರ್ಜುನನ ಮೋಹರಂ ತಲೆದೋರಿತು ಎತ್ತಣ ಆಶ್ಚರ್ಯಂ ಎನಲು=[ಪುರದ ಹೊರಭಾಗದಲ್ಲಿ ಸೇನೆಯನ್ನು ಕೂಡಿಕೊಂಡು ಇರುತ್ತಿದ್ದನು. ಆ ಸಮಯಕ್ಕೆ ಮಿತಿಇಲ್ಲದ ಮಹಾಸಮುದ್ರದಂತೆ ಅರ್ಜುನನ ಸೈನ್ಯವು ಇದೇನು ಆಶ್ಚರ್ಯವು ಎನ್ನುವಂತೆ ಕಾಣಿಸಿಕೊಂಡಿತು].
  • (ಪದ್ಯ-೭)

ಪದ್ಯ:-::

ಸಂಪಾದಿಸಿ

ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು |
ಸಮರಕಭಿಮುಖನಾಗಿ ತನ್ನ ಮೋಹರಸಹಿತ |
ಸಮ ಚಂದ್ರಹಾಸನೈತರಲಾಗ ಮುರಹರಂ ಸಕಲ ಭೂಪಾಲಕರನು ||
ಕ್ರಮದಿಂದೆ ನಿಲಿಸಿ ಪಾರ್ಥಂಗೆ ಸಾರಥಿಯಾಗಿ |
ಕಮಲ ಸುಗದಾ ಶಂಖ ಚಕ್ರದ ಚತುರ್ಭುಜದ |
ಕಮನೀಯ ರೂಪಮಂ ಕೈಕೊಂಡು ಬಿಟ್ಟನಾತನ ಸಮ್ಮುಖಕೆ ರಥವನು ||8||

ಪದವಿಭಾಗ-ಅರ್ಥ:
ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು ಸಮರಕೆ ಅಭಿಮುಖನಾಗಿ ತನ್ನ ಮೋಹರಸಹಿತ ಸಮ ಚಂದ್ರಹಾಸನು ಐತರಲು ಆಗ ಮುರಹರಂ ಸಕಲ ಭೂಪಾಲಕರನು=[ವ್ಯವಸ್ಥಿತವಾಗಿ ಫಲ್ಗುಣನ ಸೇನೆಯು ಬರುತ್ತಿರುವುದನ್ನು ಕಂಡು ಯುದ್ಧಕ್ಕೆ ಅಭಿಮುಖನಾಗಿ ತನ್ನ ಸೈನ್ಯ ಸಹಿತ ಸಮರ್ಥ ಚಂದ್ರಹಾಸನು ಬರಲು, ಆಗ ಕೃಷ್ಣನು ಸಕಲ ರಾಜರನ್ನೂ];; ಕ್ರಮದಿಂದೆ ನಿಲಿಸಿ ಪಾರ್ಥಂಗೆ ಸಾರಥಿಯಾಗಿ ಕಮಲ ಸುಗದಾ ಶಂಖ ಚಕ್ರದ ಚತುರ್ಭುಜದ ಕಮನೀಯ ರೂಪಮಂ ಕೈಕೊಂಡು ಬಿಟ್ಟನು ಆತನ ಸಮ್ಮುಖಕೆ ರಥವನು=[ಕ್ರಮದಿಂದೆ ನಿಲ್ಲಿಸಿ, ಪಾರ್ಥನಿಗೆ ಸಾರಥಿಯಾಗಿ ಕುಳಿತು, ಕಮಲ, ಸುಗದಾ, ಶಂಖ, ಚಕ್ರಗಳನ್ನು ಹಿಡಿದ ಚತುರ್ಭುಜದ ಮನೋಹರವಾದ ರೂಪವನ್ನು ಧರಿಸಿ, ಚಂದ್ರಹಾಸನ ಎದುರಿಗೆ ರಥವನು ಬಿಟ್ಟನು].
  • ತಾತ್ಪರ್ಯ:ವ್ಯವಸ್ಥಿತವಾಗಿ ಫಲ್ಗುಣನ ಸೇನೆಯು ಬರುತ್ತಿರುವುದನ್ನು ಕಂಡು ಯುದ್ಧಕ್ಕೆ ಅಭಿಮುಖನಾಗಿ ತನ್ನ ಸೈನ್ಯ ಸಹಿತ ಸಮರ್ಥ ಚಂದ್ರಹಾಸನು ಬರಲು, ಆಗ ಕೃಷ್ಣನು ಸಕಲ ರಾಜರನ್ನೂ ಕ್ರಮದಿಂದೆ ನಿಲ್ಲಿಸಿ, ಪಾರ್ಥನಿಗೆ ಸಾರಥಿಯಾಗಿ ಕುಳಿತು, ಕಮಲ, ಸುಗದಾ, ಶಂಖ, ಚಕ್ರಗಳನ್ನು ಹಿಡಿದ ಚತುರ್ಭುಜದ ಮನೋಹರವಾದ ರೂಪವನ್ನು ಧರಿಸಿ, ಚಂದ್ರಹಾಸನ ಎದುರಿಗೆ ರಥವನು ಬಿಟ್ಟನು].
  • (ಪದ್ಯ-೮)

ಪದ್ಯ:-::

ಸಂಪಾದಿಸಿ

ನೋಡಿದೈ ಪಾರ್ಥ ವೈಷ್ಣವ ಶಿರೋಮಣಿಯನೆನೆ |
ಮೂಡಿಮುಳುಗುವ ಮಾಧವ ಧ್ಯಾನಚೇತನದ |
ಸೂಡಿದ ಮುಕುಂದಪಾದಾಬ್ಜ ತುಲಸೀಪೂತಮಸ್ತಕದ ಸತ್ತ್ವಗುಣದ ||
ಬೀಡೆನಿಪ ಕಲಿ ಚಂದ್ರಹಾಸನಂ ಕಂಡು ತಾ |
ಮಾಡಿದಗ್ಗದಪುಣ್ಯದಿಂ ಜನ್ಮಸಫಲವಾ |
ಯ್ತಾಡಲೇನೆಲೆದೇವ ತನ್ನ ಬಿನ್ನಪವನವಧರಿಸೆಂದನಿಂದ್ರಸೂನು ||9||

ಪದವಿಭಾಗ-ಅರ್ಥ:
ನೋಡಿದೈ ಪಾರ್ಥ ವೈಷ್ಣವ ಶಿರೋಮಣಿಯನು ಎನೆ, ಮೂಡಿ ಮುಳುಗುವ ಮಾಧವ ಧ್ಯಾನಚೇತನದ ಸೂಡಿದ ಮುಕುಂದ ಪಾದಾಬ್ಜ ತುಲಸೀಪೂತ ಮಸ್ತಕದ ಸತ್ತ್ವಗುಣದ=[ಕೃಷ್ಣನು ನೋಡಿದೆಯಾ ಪಾರ್ಥ ವೈಷ್ಣವ ಶಿರೋಮಣಿಯನ್ನು! ಎನ್ನಲು, ಮನಸ್ಸಿನಲ್ಲಿ ಅಚ್ಯುತನು ಮೂಡಿ, ಅದರಲ್ಲಿ ಮುಳುಗುವ, ಮಾಧವನ ಧ್ಯಾನಚೇತನನಾದ, ತಲೆಯಲ್ಲಿ ಸೂಡಿಕೊಂಡಿರುವ ಮುಕುಂದನ ಪಾದಾಬ್ಜದಲ್ಲದ್ದ ತುಲಸೀದಳಗಳಿಂದ ತುಂಬಿದ ತಲೆಯ, ಮತ್ತು ಸತ್ತ್ವಗುಣದ];; ಬೀಡು ಎನಿಪ ಕಲಿ ಚಂದ್ರಹಾಸನಂ ಕಂಡು ತಾ ಮಾಡಿದ ಅಗ್ಗದ ಪುಣ್ಯದಿಂ ಜನ್ಮಸಫಲವಾಯ್ತು ಆಡಲು (ಹೇಳಲು) ಏನು ಎಲೆ ದೇವ ತನ್ನ ಬಿನ್ನಪವನು (ಅರಿಕೆ) ಅವಧರಿಸು (ಕೇಳಿಸಿಕೊ) ಎಂದನು ಇಂದ್ರಸೂನು=[ಬೀಡು/ ನೆಲೆ ಎನ್ನುವಂತಿರುವ, ಶೂರ ಚಂದ್ರಹಾಸನನ್ನು ಪಾರ್ಥನು ಕಂಡು ತಾನು ಮಾಡಿದ ಹೆಚ್ಚನ ಪುಣ್ಯದಿಂದ ತನ್ನ ಜನ್ಮಸಫಲವಾಯ್ತು! ಏನು ಹೇಳಲಿ, ಎಲೆ ದೇವ ತನ್ನ ಅರಿಕೆಯನ್ನು ಕೇಳು ಎಂದನು ಪಾರ್ಥ.]
  • ತಾತ್ಪರ್ಯ:ಕೃಷ್ಣನು ನೋಡಿದೆಯಾ ಪಾರ್ಥ ವೈಷ್ಣವ ಶಿರೋಮಣಿಯನ್ನು! ಎನ್ನಲು, (ಚಂದ್ರಹಾಸನ) ಮನಸ್ಸಿನಲ್ಲಿ ಅಚ್ಯುತನು ಮೂಡಿ, ಅದರಲ್ಲಿ ಮುಳುಗುವ, ಮಾಧವನ ಧ್ಯಾನಚೇತನನಾದ, ತಲೆಯಲ್ಲಿ ಸೂಡಿಕೊಂಡಿರುವ ಮುಕುಂದನ ಪಾದಾಬ್ಜದಲ್ಲದ್ದ ತುಲಸೀದಳಗಳಿಂದ ತುಂಬಿದ ತಲೆಯ, ಮತ್ತು ಸತ್ತ್ವಗುಣದ ಬೀಡು/ ನೆಲೆ ಎನ್ನುವಂತಿರುವ, ಶೂರ ಚಂದ್ರಹಾಸನನ್ನು ಪಾರ್ಥನು ಕಂಡು ತಾನು ಮಾಡಿದ ಹೆಚ್ಚನ ಪುಣ್ಯದಿಂದ ತನ್ನ ಜನ್ಮಸಫಲವಾಯ್ತು! ಏನು ಹೇಳಲಿ, ಎಲೆ ದೇವ ತನ್ನ ಅರಿಕೆಯನ್ನು ಕೇಳು ಎಂದನು ಪಾರ್ಥ.
  • (ಪದ್ಯ-೯)

ಪದ್ಯ:-:೧೦:

ಸಂಪಾದಿಸಿ

ಜ್ಞಾನವೃದ್ಧಂ ತಪೋವೃದ್ಧಂ ವಯೋವೃದ್ಧ |
ನೀನರೇಶ್ವರನೀತನೊಳ್ ಕಾದಿ ಜಯಿಸುವ ವಿ |
ಧಾನವೆಂತೆನಗೆ ಬೆಸಸೆಂದರ್ಜುನಂ ಕೇಳ್ದೊಡಸುರಾರಿ ಕರುಣದಿಂದೆ ||
ಧ್ಯಾನಿಸುವನಾ ಬಾಲ್ಯದಿಂದೆನ್ನನೀತಂಗೆ |
ತಾನೊಲಿದೆನೆಂದು ನಿಜರೂಪಮಂ ತೋರಲಾ |
ಭೂನಾಥನಂಬುಜಾಕ್ಷನ ದಿವ್ಯ ಮೂರ್ತಿಯಂ ಕಂಡು ಪುಳಕಿತನಾದನು ||10||

ಪದವಿಭಾಗ-ಅರ್ಥ:
ಜ್ಞಾನವೃದ್ಧಂ ತಪೋವೃದ್ಧಂ ವಯೋವೃದ್ಧನು ಈ ನರೇಶ್ವರನು ಈತನೊಳ್ ಕಾದಿ ಜಯಿಸುವ ವಿಧಾನವು ಎಂತು ಎನಗೆ ಬೆಸಸು ಎಂದು ಅರ್ಜುನಂ ಕೇಳ್ದೊಡೆ ಅಸುರಾರಿ ಕರುಣದಿಂದೆ=['ಈ ನರೇಶ್ವರನು ಜ್ಞಾನವೃದ್ಧನು, ತಪೋವೃದ್ಧನು, ವಯೋವೃದ್ಧನು, ಇವನೊಡನೆ ಯುದ್ಧಮಾಡಿ ಜಯಿಸುವ ಬಗೆ ಹೇಗೆ? ನನಗೆ ಹೇಳು,' ಎಂದು ಅರ್ಜುನನು ಕೇಳಿದಾಗ ಅಚ್ಯುತನು ಕರುಣದಿಂದ ];; ಧ್ಯಾನಿಸುವನು ಆ ಬಾಲ್ಯದಿಂದ ಎನ್ನನು ಈತಂಗೆ ತಾನೊಲಿದೆನು ಎಂದು ನಿಜರೂಪಮಂ ತೋರಲು ಆ ಭೂನಾಥನು ಅಂಬುಜಾಕ್ಷನ ದಿವ್ಯ ಮೂರ್ತಿಯಂ ಕಂಡು ಪುಳಕಿತನಾದನು=[ಇವನು ನನ್ನನ್ನು ಆ ಬಾಲ್ಯದಿಂದ ಧ್ಯಾನಿಸುವನು. ಈತನಿಗೆ ತಾನು ಒಲಿದಿರುವೆನು ಎಂದು ಕೃಷ್ಣನು ತನ್ನ ನಿಜರೂಪವನ್ನು ತೋರಲು, ಆ ರಾಜ ಚಂದ್ರಹಾಸನು, ಅಚ್ಯುತನ ದಿವ್ಯ ಮೂರ್ತಿಯನ್ನು ಕಂಡು ಪುಳಕಿತನಾದನು].
  • ತಾತ್ಪರ್ಯ: 'ಈ ನರೇಶ್ವರನು ಜ್ಞಾನವೃದ್ಧನು, ತಪೋವೃದ್ಧನು, ವಯೋವೃದ್ಧನು, ಇವನೊಡನೆ ಯುದ್ಧಮಾಡಿ ಜಯಿಸುವ ಬಗೆ ಹೇಗೆ? ನನಗೆ ಹೇಳು,' ಎಂದು ಅರ್ಜುನನು ಕೇಳಿದಾಗ ಅಚ್ಯುತನು ಕರುಣದಿಂದ ಇವನು ನನ್ನನ್ನು ಆ ದಿನದ ಬಾಲ್ಯದಿಂದ ಧ್ಯಾನಿಸುತ್ತಿರುವನು. ಈತನಿಗೆ ತಾನು ಒಲಿದಿರುವೆನು ಎಂದು ಕೃಷ್ಣನು ತನ್ನ ನಿಜರೂಪವನ್ನು ತೋರಲು, ಆ ರಾಜ ಚಂದ್ರಹಾಸನು, ಅಚ್ಯುತನ ದಿವ್ಯ ಮೂರ್ತಿಯನ್ನು ಕಂಡು ಪುಳಕಿತನಾದನು.
  • (ಪದ್ಯ-೧೦)

ಪದ್ಯ:-:೧೧:

ಸಂಪಾದಿಸಿ

ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ |
ಪೊಬಟ್ಟೆಯಂ ತಾಳ್ದು ಕೌಸ್ತುಭದ ಶೋಭಾವ |
ಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು ||
ತುಂಬಿದವಯವದ ಲಾವಣ್ಯಲಹರಿಗಳ ವಿಸ |
ಟಂಬರಿವ ಕರುಣ (ವರೆದೆಳೆನಗೆಯ)ರಸವೆಳನಗೆಯ ಸಿರಿಮೊಗದ |
ಶಂಬರಾರಿಯ ಪಿತಂ ಪಾರ್ಥನ ರಥಾಗ್ರದೊಳ್ ಕಣ್ಗೆಸೆದನಾ ನೃಪತಿಯ ||11||

ಪದವಿಭಾಗ-ಅರ್ಥ:
ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ ಪೊಬಟ್ಟೆಯಂ ತಾಳ್ದು ಕೌಸ್ತುಭದ ಶೋಭಾ ಆವಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನು ಆಂತು=[ಶಂಖ ಚಕ್ರ ಅಬ್ಜ/ಕಮಲ, ಕೌಮೋದಕಿ ಎಂಬ ಗದೆ, ಇವುಗಳನ್ನು ಧರಿಸಿ ಚಿನ್ನದ ಬಟ್ಟೆಯನ್ನು ಉಟ್ಟ, ಎದೆಯಮೇಲೆ ಕೌಸ್ತುಭ ಮಣಿಯ ಶೋಭೆಯನ್ನ ಹೊಂದಿ, ಸರ್ವಾಭರಣ ಧರಿಸಿದವನಾಗಿ, ದಿವ್ಯಮಾಲೆಗಳನು ಹೊಂದಿ,];; ತುಂಬಿದ ಅವಯವದ ಲಾವಣ್ಯ ಲಹರಿಗಳ ವಿಸಟಂಬರಿವ (ವಿಸ್ಮೃತಿಗೊಳಿಸುವ) ಕರುಣ (ವರೆದೆಳೆನಗೆಯ)ರಸವೆಳನಗೆಯ ಸಿರಿಮೊಗದ ಶಂಬರಾರಿಯ ಪಿತಂ ಪಾರ್ಥನ ರಥಾಗ್ರದೊಳ್ ಕಣ್ಗೆಸೆದನಾ ನೃಪತಿಯ=[ತುಂಬಿದ ಅವಯವದ ಲಾವಣ್ಯ ಲಹರಿಯನ್ನ ಹೊಂದಿದ, ವಿಸ್ಮೃತಿಗೊಳಿಸುವ ಕರುಣಾಪೂರಿತ ರಸದ ಎಳೆನಗೆಯ ಸಿರಿಮುಖದ ಶಂಬರಾರಿಯಾದ ಪ್ರದ್ಯುಮ್ನನ/ ಮನ್ಮಥನ ತಂದೆಯಾದ ಕೃಷ್ಣನು ಪಾರ್ಥನ ರಥಾಗ್ರದಲ್ಲಿ, ಚಂದ್ರಹಾಸ ನೃಪತಿಯ ಕಣ್ಣಿಗೆ ಪ್ರಕಾಶಮಾನವಾಗಿ ತೋರಿದನು.]
  • ತಾತ್ಪರ್ಯ:ಶಂಖ ಚಕ್ರ ಅಬ್ಜ/ಕಮಲ, ಕೌಮೋದಕಿ ಎಂಬ ಗದೆ, ಇವುಗಳನ್ನು ಧರಿಸಿ ಚಿನ್ನದ ಬಟ್ಟೆಯನ್ನು ಉಟ್ಟ, ಎದೆಯ ಮೇಲೆ ಕೌಸ್ತುಭ ಮಣಿಯ ಶೋಭೆಯನ್ನ ಹೊಂದಿ, ಸರ್ವಾಭರಣ ಧರಿಸಿದವನಾಗಿ, ದಿವ್ಯಮಾಲೆಗಳನು ಹೊಂದಿ, ತುಂಬಿದ ಅವಯವದ ಲಾವಣ್ಯ ಲಹರಿಯನ್ನ ಹೊಂದಿದ, ವಿಸ್ಮೃತಿಗೊಳಿಸುವ ಕರುಣಾಪೂರಿತ ರಸದ ಎಳೆನಗೆಯ ಸಿರಿಮುಖದ ಶಂಬರಾರಿಯಾದ ಪ್ರದ್ಯುಮ್ನನನ/ ಮನ್ಮಥನ ತಂದೆಯಾದ ಕೃಷ್ಣನು ಪಾರ್ಥನ ರಥಾಗ್ರದಲ್ಲಿ, ಚಂದ್ರಹಾಸನೃಪತಿಯ ಕಣ್ಣಿಗೆ ಪ್ರಕಾಶಮಾನವಾಗಿ ತೋರಿದನು.
  • (ಪದ್ಯ-೧೧)

ಪದ್ಯ:-:೧೨:

ಸಂಪಾದಿಸಿ

ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವುದ |
ಕಂಗಳ ಪೊನಲ್ತಡೆಯ ಹರ್ಷದಿಂದೇಳ್ವ ಪುಳ |
ಕಂಗಳನೆಗಳ್ಕೆಯಂ ಭಯಭರಿತಭಕ್ತಿ ಭಾವಿಸೆ ರಥವನಿಳಿದು ಬಂದು ||
ಮಂಗಳ ಪವಿತ್ರ ಕೋಮಲ ಪಾದಪದ್ಮಯು |
ಗ್ಮಂಗಳ ಸಮೀಪದೊಳ್ ಚಂದ್ರಹಾಸಂ ಪ್ರಣಾ |
ಮಂಗಳ ವಿಧಾನಮಂ ಮಾಡುತಿರೆ ಹರಿ ತೆಗೆದು ಬಿಗಿದಪ್ಪಿದಂ ಕೃಪೆಯೊಳು ||12||

ಪದವಿಭಾಗ-ಅರ್ಥ:
ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವ ಉದಕಂಗಳ ಪೊನಲ್ ತಡೆಯ (ನೋಟವನ್ನು ಸಂತಸದ ಕಣ್ಣೀರು ತಡೆಯಿತು) ಹರ್ಷದಿಂದ ಏಳ್ವ ಪುಳಕಂಗಳ ನೆಗಳ್ಕೆಯಂ (ಪುಳಕ ಏಳು,ಉಂಟಾಗು) ಭಯಭರಿತ ಭಕ್ತಿ ಭಾವಿಸೆ ರಥವನು ಇಳಿದು ಬಂದು=[ಕಣ್ಣುಗಳಿಂದ ನೋಡಿದ ನಿರೀಕ್ಷೆಯಂದ ಆದ ಸೌಖ್ಯದಲ್ಲಿ ಸೂಸುತ್ತಿರುವ ಕಣ್ಣುಗಳಿಂದ ಹರಿಯುವ ಆನಂದಭಾಷ್ಪಗಳ ಹೊಳೆಯಿಂದ, ದೃಷ್ಟಿ ಮಂದವಾಗಿರಲು, ಹರ್ಷದಿಂದ ಏಳುವ ಪುಳಕಗಳ /ಮೈನವಿರೇಳುವಿಕೆಗಳು ಉಂಟಾಗಿರುವ , ಭಯಭರಿತ ಭಕ್ತಿಯು ತಂಬಲು ಚಂದ್ರಹಾಸನು ರಥವನ್ನು ಇಳಿದು ಬಂದು ];; ಮಂಗಳ ಪವಿತ್ರ ಕೋಮಲ ಪಾದಪದ್ಮಯುಗ್ಮಂಗಳ ಸಮೀಪದೊಳ್ ಚಂದ್ರಹಾಸಂ ಪ್ರಣಾಮಂಗಳ ವಿಧಾನಮಂ ಮಾಡುತಿರೆ ಹರಿ ತೆಗೆದು ಬಿಗಿದಪ್ಪಿದಂ ಕೃಪೆಯೊಳು=[ಮಂಗಳ ಪವಿತ್ರ ಕೋಮಲವಾದ ಎರಡು ಪಾದಪದ್ಮಗಳನ್ನು ಸಮೀಪದಲ್ಲಿ ಅವನು ಪ್ರಣಾಮಗಳನ್ನು ವಿಧಿಪೂರ್ವಕ ಮಾಡುತ್ತಿರಲು, ಕೃಷ್ಣನು ಹತ್ತಿರಬಂದು ಚಂದ್ರಹಾಸನನ್ನು ಕೃಪೆಯಿಂದ ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡನು.]
  • ತಾತ್ಪರ್ಯ:ಕಣ್ಣುಗಳಿಂದ ನೋಡಿದ ನಿರೀಕ್ಷೆಯಂದ ಆದ ಸೌಖ್ಯದಲ್ಲಿ ಸೂಸುತ್ತಿರುವ ಕಣ್ಣುಗಳಿಂದ ಹರಿಯುವ ಆನಂದಭಾಷ್ಪಗಳ ಹೊಳೆಯಿಂದ, ದೃಷ್ಟಿ ಮಂದವಾಗಿರಲು, ಹರ್ಷದಿಂದ ಏಳುವ ಪುಳಕಗಳ /ಮೈನವಿರೇಳುವಿಕೆಗಳು ಉಂಟಾಗಿರುವ , ಭಯಭರಿತ ಭಕ್ತಿಯು ತಂಬಲು ಚಂದ್ರಹಾಸನು ರಥವನ್ನು ಇಳಿದು ಬಂದು ಮಂಗಳ ಪವಿತ್ರ ಕೋಮಲವಾದ ಎರಡು ಪಾದಪದ್ಮಗಳನ್ನು ಸಮೀಪದಲ್ಲಿ ಅವನು ಪ್ರಣಾಮಗಳನ್ನು ವಿಧಿಪೂರ್ವಕ ಮಾಡುತ್ತಿರಲು, ಕೃಷ್ಣನು ಹತ್ತಿರಬಂದು ಚಂದ್ರಹಾಸನನ್ನು ಕೃಪೆಯಿಂದ ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡನು.
  • (ಪದ್ಯ-೧೨)

ಪದ್ಯ:-:೧೩:

ಸಂಪಾದಿಸಿ

ಅಸುರಾರಿ ಬಳಿಕರ್ಜುನನ ವದನಮಂ ನೋಡಿ |
ನಸುನಗುತ ನುಡಿದನೇತಕೆ ಸಮ್ಮನಿಹೆ ಧರ್ಮಿ |
ಶಶಿಹಾಸನತಿಬಲಂ ಪರಿಣತಂ ಧ್ರುವಸನ್ನಿಭಂ ತನಗೆ ಭಕ್ತನಿವನು ||
ಒಸೆದು ನೀನಾಲಿಂಗಿಸೆನೆ ದೇವ ನಿಮ್ಮಡಿಗ |
ಳುಸಿರಿದುವಲಾ ತನ್ನ ಮಾರ್ಗಗತಿ ಲೇಸನ್ಯ |
ರೆಸಗುವಂದೊಳಾಚರಿಸೆ ಭಯಾವಹಮೆಂದು ಭೀಷ್ಮಸಂಗರದೊಳೆನಗೆ ||13||

ಪದವಿಭಾಗ-ಅರ್ಥ:
ಅಸುರಾರಿ ಬಳಿಕ ಅರ್ಜುನನ ವದನಮಂ ನೋಡಿ ನಸುನಗುತ ನುಡಿದನು ಏತಕೆ ಸಮ್ಮನಿಹೆ ಧರ್ಮಿ ಶಶಿಹಾಸನು ಅತಿಬಲಂ ಪರಿಣತಂ ಧ್ರುವಸನ್ನಿಭಂ ತನಗೆ ಭಕ್ತನಿವನು=[ಕೃಷ್ಣನು ಬಳಿಕ ಅರ್ಜುನನ ಮುಖವನ್ನು ನೋಡಿ ನಸುನಗುತ್ತಾ ಹೇಳಿದನು,'ಏತಕೆ ಸಮ್ಮನಿರುವೆ ಈ ಚಂದ್ರಹಾಸನು, ಧರ್ಮಿಷ್ಠನು ಅತಿಬಲನು, ಪರಿಣತನು, ಧ್ರುವನಿಗೆ ಸಮನು, ತನಗೆ ಭಕ್ತನು ಇವನು];; ಒಸೆದು ನೀನಾಲಿಂಗಿಸು ಎನೆ ದೇವ ನಿಮ್ಮಡಿಗಳು ಉಸಿರಿದುವಲಾ ತನ್ನ ಮಾರ್ಗಗತಿ ಲೇಸು ಅನ್ಯರು ಎಸಗುವಂದೊಳು ಆಚರಿಸೆ ಭಯಾವಹಮೆಂದು ಭೀಷ್ಮಸಂಗರದೊಳು ಎನಗೆ=[ಪ್ರೀತಿಯಿಂದ ನೀನು ಇವನನ್ನು ಆಲಿಂಗಿಸು ಎನ್ನಲು, ಅರ್ಜುನನು, 'ದೇವ ನೀವು, (ನಿಮ್ಮ ಪಾದಗಳು: ಗೌರವಕ್ಕೆ) ಹೇಳಿದಿರುವುದು, ಆ ತನ್ನ ಮಾರ್ಗಕ್ಕೆ ಅತಿ ಉತ್ತಮವಾದದ್ದು, ಸಾಮಾನ್ಯರು ಮಾಡುವಂತೆ ಆಚರಿಸೆ; ಆಚರಿಸಿದರೆ, ಭಯಾವಹ ಎಂದು ಭೀಷ್ಮರೊಡನೆ ಯುದ್ಧದಲ್ಲಿ ನನಗೆ ಹೇಳಿದಿರಿ. (ಗೀತೆ)]
  • ತಾತ್ಪರ್ಯ:ಕೃಷ್ಣನು ಬಳಿಕ ಅರ್ಜುನನ ಮುಖವನ್ನು ನೋಡಿ ನಸುನಗುತ್ತಾ ಹೇಳಿದನು,'ಏತಕೆ ಸಮ್ಮನಿರುವೆ ಈ ಚಂದ್ರಹಾಸನು, ಧರ್ಮಿಷ್ಠನು ಅತಿಬಲನು, ಪರಿಣತನು, ಧ್ರುವನಿಗೆ ಸಮನು, ತನಗೆ ಭಕ್ತನು ಇವನು, ಪ್ರೀತಿಯಿಂದ ನೀನು ಇವನನ್ನು ಆಲಿಂಗಿಸು ಎನ್ನಲು, ಅರ್ಜುನನು, 'ದೇವ ನೀವು, (ನಿಮ್ಮ ಪಾದಗಳು: ಗೌರವಕ್ಕೆ) ಹೇಳಿರುವುದು, ಆ ತನ್ನ ಮಾರ್ಗಕ್ಕೆ ಅತಿ ಉತ್ತಮವಾದದ್ದು, ಆದರೆ ಸಾಮಾನ್ಯರು ಮಾಡುವಂತೆ ಆಚರಿಸೆ; ಆಚರಿಸಿದರೆ, ಭಯಾವಹ ಎಂದು ಭೀಷ್ಮರೊಡನೆ ಯುದ್ಧದಲ್ಲಿ ನನಗೆ ಹೇಳಿದಿರಿ. (ಗೀತೆ: ಸ್ವಧರ್ಮೇ ನಿಧನಂ ಶ್ರೇಯಂ ಪರಧರ್ಮೋ ಭಯಾವಹಃ)
  • (ಪದ್ಯ-೧೨)

ಪದ್ಯ:-:೧೪:

ಸಂಪಾದಿಸಿ

ಅದರಿಂದೆ ಕಾಳೆಗವೆ ತನಗೆ ಕರ್ತವ್ಯಮೀ |
ಪದದೊಳಾಲಿಂಗನಮುಚಿತಮಲ್ಲ ವೃದ್ಧನಹ |
ನದರಿಂದೆ ಬೇಕಾದೊಡೀತಂಗೆ ವಂದಿಸುವೆನೆನೆ ತನ್ನ ಕಿಂಕರರ್ಗೆ ||
ಮುದದೊಳೆರಗಿದೊಡೆ ಮೇಣವರನಪ್ಪಿದೊಡೆ ತ |
ಪ್ಪದು ಮಾನವರ್ಗೆ ಕಾಪಿಲ ಗೋ ಸಹಸ್ರ ದಾ |
ನದ ಪುಣ್ಯಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಹೇಳೆಂದನು ||14||

ಪದವಿಭಾಗ-ಅರ್ಥ:
ಅದರಿಂದೆ ಕಾಳೆಗವೆ ತನಗೆ ಕರ್ತವ್ಯಂ ಈ ಪದದೊಳು ಆಲಿಂಗನಂ ಉಚಿತಂ ಅಲ್ಲ; ವೃದ್ಧನು ಅಹನು ಅದರಿಂದೆ ಬೇಕಾದೊಡೆ ಈತಂಗೆ ವಂದಿಸುವೆನು ಎನೆ ತನ್ನ ಕಿಂಕರರ್ಗೆ=[ಅರ್ಜುನನು ಹೇಳಿದನು, ಆದ್ದರಿಂದ ಕ್ಷತ್ರಿಯನಾದ ತನಗೆ ಕಾಳೆಗವೆ ಕರ್ತವ್ಯವು; ಈ ಪರಿಸ್ಥಿತಿಯಲ್ಲಿ ಆಲಿಂಗನವು ನನಗೆ ಉಚಿತವಲ್ಲ; ಇವನು ವೃದ್ಧನು (ಹಿರಿಯನು) ಆಗಿರುವನು; ಅದರಿಂದ ಬೇಕಾದರೆ ಈತನಿಗೆ ನಮಸ್ಕಾರ ಮಾಡುವೆನು, ಎನ್ನಲು, ಕೃಷ್ಣನು, ತನ್ನ ಭಕ್ತರಿಗೆ ];; ಮುದದೊಳು ಎರಗಿದೊಡೆ ಮೇಣ್ ಅವರನು ಅಪ್ಪಿದೊಡೆ ತಪ್ಪದು ಮಾನವರ್ಗೆ ಕಾಪಿಲ ಗೋಸಹಸ್ರದಾನದ ಪುಣ್ಯಂ ಎನ್ನ ಭಕ್ತರನು ಆದರಿಪುದು ಅಧರ್ಮವೆ ಪಾರ್ಥ ಹೇಳು ಎಂದನು=[ಸಂತಸದಿಂದ/ ಪ್ರೀತಿಯಿಂದ ನಮಸ್ಕರಿಸಿದರೆ ಮತ್ತೆ ಅವರನ್ನು ಅಪ್ಪಿದರೆ, ಮಾನವರಿಗೆ ಕಪಿಲ ಗೋಸಹಸ್ರದಾನದ ಪುಣ್ಯವು ತಪ್ಪದು; ತನ್ನ ಭಕ್ತರನ್ನು ಆದರಿಸುವುದು ಅಧರ್ಮವೆ? ಪಾರ್ಥ ಹೇಳೆಂದನು].
  • ತಾತ್ಪರ್ಯ:ಅರ್ಜುನನು ಹೇಳಿದನು, ಆದ್ದರಿಂದ ಕ್ಷತ್ರಿಯನಾದ ತನಗೆ ಕಾಳೆಗವೆ ಕರ್ತವ್ಯವು; ಈ ಪರಿಸ್ಥಿತಿಯಲ್ಲಿ ಆಲಿಂಗನವು ನನಗೆ ಉಚಿತವಲ್ಲ; ಇವನು ವೃದ್ಧನು (ಹಿರಿಯನು) ಆಗಿರುವನು; ಅದರಿಂದ ಬೇಕಾದರೆ ಈತನಿಗೆ ನಮಸ್ಕಾರ ಮಾಡುವೆನು, ಎನ್ನಲು, ಕೃಷ್ಣನು, ತನ್ನ ಭಕ್ತರಿಗೆ ಸಂತಸದಿಂದ/ ಪ್ರೀತಿಯಿಂದ ನಮಸ್ಕರಿಸಿದರೆ ಮತ್ತೆ ಅವರನ್ನು ಅಪ್ಪಿದರೆ, ಮಾನವರಿಗೆ ಕಪಿಲ ಗೋಸಹಸ್ರದಾನದ ಪುಣ್ಯವು ತಪ್ಪದು; ತನ್ನ ಭಕ್ತರನ್ನು ಆದರಿಸುವುದು ಅಧರ್ಮವೆ? ಪಾರ್ಥ ಹೇಳು ಎಂದನು.
  • (ಪದ್ಯ-೧೪)

ಪದ್ಯ:-:೧೫:

ಸಂಪಾದಿಸಿ

ತನ್ನ ಶರಣರ ಜೀವನವೆ ತನಗೆ ಜೀವನಂ |
ತನ್ನ ಶರಣರ್ ಬೇರೆ ತಿಳಿಯೆ ತಾಂ ಬೇರಲ್ಲ |
ತನ್ನ ಶರಣರ ಹೃದಯಕಮಲದೊಳ್ ಪ್ರತ್ಯಕ್ಷಮಾಗಿ ತಾನಿರುತಿರ್ಪೆನು ||
ನಿನ್ನ ತೆರದಿಂ ಮರುಳರಾರುಂಟು ಲೋಕದೊಳ್ |
ನಿನ್ನ ತೆರದಿಂದೀತನೆನಗೆ ಬೇಕಾದವಂ |
ನಿನ್ನ ತೆರನೇನೆಂದು ಜರೆದು ಕೌಂತೇಯನಂ ಕೇಳ್ದನಸುರಾರಿ ನಗುತೆ ||15||

ಪದವಿಭಾಗ-ಅರ್ಥ:
ತನ್ನ ಶರಣರ ಜೀವನವೆ ತನಗೆ ಜೀವನಂ ತನ್ನ ಶರಣರ್ ಬೇರೆ ತಿಳಿಯೆ ತಾಂ ಬೇರಲ್ಲ ತನ್ನ ಶರಣರ ಹೃದಯಕಮಲದೊಳ್ ಪ್ರತ್ಯಕ್ಷಮಾಗಿ ತಾನು ಇರುತಿರ್ಪೆನು=[ಕೃಷ್ಣನು ಹೇಳಿದ, ತನ್ನ ಶರಣರ ಜೀವನವೆ ತನಗೆ ಜೀವನವು; ತನ್ನ ಶರಣರು ತನ್ನಿಂದ ಬೇರೆ ಎಂದು ತಿಳಿಯೆನು; ತಾನು ಅವರಿಂದ ಬೇರೆ ಅಲ್ಲ; ತನ್ನ ಶರಣರ ಹೃದಯಕಮಲದಲ್ಲಿ ಪ್ರತ್ಯಕ್ಷವಾಗಿ ತಾನು ಇರುತ್ತಿರವೆನು.];; ನಿನ್ನ ತೆರದಿಂ ಮರುಳರು ಆರುಂಟು ಲೋಕದೊಳ್ ನಿನ್ನ ತೆರದಿಂದ ಈತನು ಎನಗೆ ಬೇಕಾದವಂ ನಿನ್ನ ತೆರನು ಏನೆಂದು ಜರೆದು ಕೌಂತೇಯನಂ ಕೇಳ್ದನ ಅಸುರಾರಿ ನಗುತೆ=[ನಿನ್ನ ತರದಲ್ಲಿ ಮರುಳರು ಲೋಕದಲ್ಲಿ ಯಾರು ಇರುವರು? ನಿನ್ನಂತೆಯೇ ಈತನು ನನಗೆ ಬೇಕಾದವನು; ನಿನ್ನ ರೀತಿ ಇದೇನು ಎಂದು ಜರೆದು ಅರ್ಜುನನ್ನು ಕೃಷ್ಣನು ನಗುತ್ತಾ ಕೇಳಿದನು].
  • ತಾತ್ಪರ್ಯ:ಕೃಷ್ಣನು ಹೇಳಿದ, ತನ್ನ ಶರಣರ ಜೀವನವೆ ತನಗೆ ಜೀವನವು; ತನ್ನ ಶರಣರು ತನ್ನಿಂದ ಬೇರೆ ಎಂದು ತಿಳಿಯೆನು; ತಾನು ಅವರಿಂದ ಬೇರೆ ಅಲ್ಲ; ತನ್ನ ಶರಣರ ಹೃದಯಕಮಲದಲ್ಲಿ ಪ್ರತ್ಯಕ್ಷವಾಗಿ ತಾನು ಇರುತ್ತಿರವೆನು. ಲೋಕದಲ್ಲಿ ನಿನ್ನ ತರದಲ್ಲಿ ಮರುಳರು ಯಾರು ಇರುವರು? ನಿನ್ನಂತೆಯೇ ಈತನು ನನಗೆ ಬೇಕಾದವನು; ನಿನ್ನ ರೀತಿ ಇದೇನು ಎಂದು ಜರೆದು ಅರ್ಜುನನ್ನು ಕೃಷ್ಣನು ನಗುತ್ತಾ ಕೇಳಿದನು.
  • (ಪದ್ಯ-೧೫)

ಪದ್ಯ:-:೧೬:

ಸಂಪಾದಿಸಿ

ಭೂಪಾಲ ಕೇಳ್ ಬಳಿಕ ಫಲುಗುಣಂ ಕೃಷ್ಣನ ನಿ |
ರೂಪಮಂ ಕೈಕೊಂಡು ಹರ್ಷದಿಂದಾಗ ನಿ |
ಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂಗೈಯಲು ||
ಆ ಪೊಡವಿಪತಿ ನುಡಿದನೆಲೆ ಪಾರ್ಥ ಕದನ ದಾ |
ಲಾಪಮಂ ನಿನ್ನೊಡನೆ ಮಾಡಿದೊಡೆ ನೃಪಮಖಂ |
ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ತುರುಗ ರಕ್ಷಾರ್ಥಮಾಗಿ ||16||

ಪದವಿಭಾಗ-ಅರ್ಥ:
ಭೂಪಾಲ ಕೇಳ್ ಬಳಿಕ ಫಲುಗುಣಂ ಕೃಷ್ಣನ ನಿರೂಪಮಂ ಕೈಕೊಂಡು ಹರ್ಷದಿಂದಾಗ ನಿಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂ ಗೈಯಲು=[ಜನಮೇಜಯ ಭೂಪಾಲ ಕೇಳು, ಬಳಿಕ ಫಲ್ಗುಣನು ಕೃಷ್ಣನ ಸಲಹೆಯನ್ನು ಒಪ್ಪಿಕೊಂಡು ಹರ್ಷದಿಂದ ಆಗ ಪಾಪರಹಿತನಾಗಿರುವ ಚಂದ್ರಹಾಸನನ್ನು ಬಂದು ಗಾಢಾಲಿಂಗನವನ್ನು ಮಾಡಲು];; ಆ ಪೊಡವಿಪತಿ ನುಡಿದನೂ ಏಲೆ ಪಾರ್ಥ ಕದನದ ಅಲಾಪಮಂ ನಿನ್ನೊಡನೆ ಮಾಡಿದೊಡೆ ನೃಪಮಖಂ ಲೋಪಮಹುದೆಂದು ಕಳುಹಿದೆನೂ ಏನ್ನ ತನುಜರಂ ತುರುಗ ರಕ್ಷಾರ್ಥಮಾಗಿ=[ಆ ರಾಜನು ಹೇಳಿದನು, ಏಲೆ ಪಾರ್ಥ, ಯುದ್ಧದ ಪ್ರಸಕ್ತಿಯನ್ನು ನಿನ್ನೊಡನೆ ಮಾಡಿದರೆ, ಯುಧಿಷ್ಠಿರನ ಯಜ್ಞಕ್ಕೆ ಲೋಪವಾಗುವುದೆಂದು ನನ್ನ ಮಕ್ಕಳನ್ನು ಯಜ್ಞದ ಅಶ್ವ ರಕ್ಷಣೆಗಾಗಿ ಕಳುಹಿದೆನು ಎಂದನು].
  • ತಾತ್ಪರ್ಯ:ಜನಮೇಜಯ ಭೂಪಾಲ ಕೇಳು, ಬಳಿಕ ಫಲ್ಗುಣನು ಕೃಷ್ಣನ ಸಲಹೆಯನ್ನು ಒಪ್ಪಿಕೊಂಡು ಹರ್ಷದಿಂದ ಆಗ ಪಾಪರಹಿತನಾಗಿರುವ ಚಂದ್ರಹಾಸನನ್ನು ಬಂದು ಗಾಢಾಲಿಂಗನವನ್ನು ಮಾಡಲು, ಆ ರಾಜನು, 'ಏಲೆ ಪಾರ್ಥ, ಯುದ್ಧದ ಪ್ರಸಕ್ತಿಯನ್ನು ನಿನ್ನೊಡನೆ ಮಾಡಿದರೆ, ಯುಧಿಷ್ಠಿರನ ಯಜ್ಞಕ್ಕೆ ಲೋಪವಾಗುವುದೆಂದು ನನ್ನ ಮಕ್ಕಳನ್ನು ಯಜ್ಞದ ಅಶ್ವ ರಕ್ಷಣೆಗಾಗಿ ಕಳುಹಿಸಿರುವೆನು,' ಎಂದನು
  • (ಪದ್ಯ-೧೬)

ಪದ್ಯ:-:೧೭:

ಸಂಪಾದಿಸಿ

ಹಲವು ಮಾತುಗಳೇಕೆ ನಮಗೆ ನಿಮಗಾಶ್ರಯಂ |
ಜಲಜಾಕ್ಷನಾಗಿರ್ದ ಬಳಿಕಾವಧರ್ಮಕೌ |
ಶಲಮಕಟ ಸಾಕಿನ್ನು ಪಾರ್ಥ ನಿನ್ನಶ್ವಂಗಳಂ ತರಿಸಿ ಕಡುವೆವೆನುತೆ ||
ಬಲಸಹಿತ ಕುದುರೆಕಾವಲ್ಗೆ ಪೋಗಿಹ ಸುತರ |
ಬಳಿಗೆ ಚರರಂ ಕಳುಹಿ ಕರೆಸಲವರೈತಂದು |
ಫಲುಗುಣನ ವಾಜಿಗಳನೊಪ್ಪಿಸಿ ಮುರಾರಿಯಂ ಕಂಡರತಿಭಕ್ತಿಯಿಂದೆ ||17||

ಪದವಿಭಾಗ-ಅರ್ಥ:
ಹಲವು ಮಾತುಗಳು ಏಕೆ ನಮಗೆ ನಿಮಗೆ ಆಶ್ರಯಂ ಜಲಜಾಕ್ಷನು ಆಗಿರ್ದ ಬಳಿಕ ಆವ ಧರ್ಮಕೌಶಲಂ ಅಕಟ ಸಾಕಿನ್ನು ಪಾರ್ಥ ನಿನ್ನ ಅಶ್ವಂಗಳಂ ತರಿಸಿ ಕಡುವೆವವು ಎನುತೆ=[ಹಲವು ಮಾತುಗಳು ಏಕೆ ನಮಗೆ ನಿಮಗೆ ಜಲಜಾಕ್ಷನು ಆಶ್ರಯನು ಆಗಿದ್ದ ಬಳಿಕ ಯಾವ ಧರ್ಮಕೌಶಲವು ಬೇಕು? ಅಕಟ! ಸಾಕು ಇನ್ನು, ಪಾರ್ಥ, ನಿನ್ನ ಅಶ್ವಗಳನ್ನು ತರಿಸಿ ಕೊಡುವೆವು ಎನ್ನುತ್ತಾ];; ಬಲಸಹಿತ ಕುದುರೆಕಾವಲ್ಗೆ ಪೋಗಿಹ ಸುತರ ಬಳಿಗೆ ಚರರಂ ಕಳುಹಿ ಕರೆಸಲು ಅವರ ಐತಂದು ಫಲುಗುಣನ ವಾಜಿಗಳನು ಒಪ್ಪಿಸಿ ಮುರಾರಿಯಂ ಕಂಡರು ಅತಿಭಕ್ತಿಯಿಂದೆ=[ಸೇನೆಸಹಿತ ಕುದುರೆಕಾವಲಿಗೆ ಹೋಗಿರುವ ಮಕ್ಕಳ ಬಳಿಗೆ ಚರರನ್ನು ಕಳುಹಿಸಿ ಕರೆಸಲು, ಅವರ ಬಂದು ಫಲಗುಣನ ಕುದುರೆಗಳನ್ನು ಒಪ್ಪಿಸಿ ಮುರಾರಿಯನ್ನು ಅತಿಭಕ್ತಿಯಿಂದೆ ಕಂಡರು].
  • ತಾತ್ಪರ್ಯ:ಚಂದ್ರಹಾಸನು ಹೇಳಿದನು: ಹಲವು ಮಾತುಗಳು ಏಕೆ ನಮಗೆ ನಿಮಗೆ ಜಲಜಾಕ್ಷನು ಆಶ್ರಯನು ಆಗಿದ್ದ ಬಳಿಕ ಯಾವ ಧರ್ಮಕೌಶಲವು ಬೇಕು? ಅಕಟ! ಸಾಕು ಇನ್ನು, ಪಾರ್ಥ, ನಿನ್ನ ಅಶ್ವಗಳನ್ನು ತರಿಸಿ ಕೊಡುವೆವು ಎನ್ನುತ್ತಾ, ಸೇನೆಸಹಿತ ಕುದುರೆಕಾವಲಿಗೆ ಹೋಗಿರುವ ಮಕ್ಕಳ ಬಳಿಗೆ ಚರರನ್ನು ಕಳುಹಿಸಿ ಕರೆಸಲು, ಅವರ ಬಂದು ಫಲಗುಣನ ಕುದುರೆಗಳನ್ನು ಒಪ್ಪಿಸಿ ಮುರಾರಿಯನ್ನು ಅತಿಭಕ್ತಿಯಿಂದೆ ಕಂಡರು.
  • (ಪದ್ಯ-೧೭)

ಪದ್ಯ:-:೧೮:

ಸಂಪಾದಿಸಿ

ನರನೊಡನೆ ಸಖ್ಯಮಾದುದು ಬಳಿಕ ಬಂದ ನೃಪ |
ವರರೆಲ್ಲರಂ ಪ್ರಿಯದೊಳಾದರಿಸಿದಂ ಕೂಡೆ |
ಹರಿಯನತಿಭಕ್ತಿಯಿಂದೈದಿ ಕೊಂಡಾಡಿದಂ ನಿರುಪಮ ಸ್ತುತಿಗಳಿಂದೆ ||
ಪರಿಪರಿಯ ಗುಡಿ ತೋರಣಾವಳಿಯ ರಚನೆ ಮಿಗೆ |
ಪುರಕೆ ಬಿಜಯಂಗೈಸಿ ತಂದನುತ್ಸವದಿಂದೆ |
ಸಿರಿಯನುರೆ ವಿಸ್ತರಿಸಿ ಭೂಪುರಂದರನಂತೆ ಚಂದ್ರಹಾಸಂಮೆರೆದನು ||18||

ಪದವಿಭಾಗ-ಅರ್ಥ:
ನರನೊಡನೆ ಸಖ್ಯಮಾದುದು ಬಳಿಕ ಬಂದ ನೃಪವರರೆಲ್ಲರಂ ಪ್ರಿಯದೊಳಾದರಿಸಿದಂ ಕೂಡೆ ಹರಿಯನತಿಭಕ್ತಿಯಿಂದೈದಿ ಕೊಂಡಾಡಿದಂ ನಿರುಪಮ ಸ್ತುತಿಗಳಿಂದೆ=[ಚಂದ್ರಹಾಸನಿಗೆ ಅರ್ಜುನನೊಡನೆ ಸ್ನೇಹವಾಯಿತು. ಬಳಿಕ ಬಂದ ನೃಪವರರೆಲ್ಲರನ್ನೂ ಪ್ರೀತಿಯಿಂದ ಆದರಿಸಿದನು; ನಂತರ ಹರಿಯನ್ನು ಅತಿಭಕ್ತಿಯಿಂದ ಅವನ ಬಳಿ ಬಂದು ವಿಶೇಷವಾದ ಸ್ತುತಿಗಳಿಂದೆ ಕೊಂಡಾಡಿದನು.];; ಪರಿಪರಿಯ ಗುಡಿ ತೋರಣಾವಳಿಯ ರಚನೆ ಮಿಗೆ ಪುರಕೆ ಬಿಜಯಂಗೈಸಿ ತಂದನುತ್ಸವದಿಂದೆ ಸಿರಿಯನುರೆ ವಿಸ್ತರಿಸಿ ಭೂಪುರಂದರನಂತೆ ಚಂದ್ರಹಾಸಂಮೆರೆದನು=[ನಾನಾ ಬಗೆಯ ಗುಡಿ ತೋರಣಗಳ ಬಹಳಬಗೆಯ ರಚನೆ ಹೆಚ್ಚಾಗಿ ಇರಲು, ನಗರಕ್ಕೆ ಬಹಳ ಉತ್ಸವದಿಂದ ಕರೆತಂದನು. ಆಗ ತನ್ನ ಸಂಪತ್ತನ್ನು ಬಹಳ ವಿಸ್ತಾರವಾಗಿ ಪ್ರದರ್ಶಸಿ ಭೂಮಿಯ ಇಂದ್ರನಂತೆ ಚಂದ್ರಹಾಸನು ಶೋಭಿಸಿದನು].
  • ತಾತ್ಪರ್ಯ:ಚಂದ್ರಹಾಸನಿಗೆ ಅರ್ಜುನನೊಡನೆ ಸ್ನೇಹವಾಯಿತು. ಬಳಿಕ ಬಂದ ನೃಪವರರೆಲ್ಲರನ್ನೂ ಪ್ರೀತಿಯಿಂದ ಆದರಿಸಿದನು; ನಂತರ ಹರಿಯನ್ನು ಅತಿಭಕ್ತಿಯಿಂದ ಅವನ ಬಳಿ ಬಂದು ವಿಶೇಷವಾದ ಸ್ತುತಿಗಳಿಂದೆ ಕೊಂಡಾಡಿದನು. ನಾನಾ ಬಗೆಯ ಗುಡಿ ತೋರಣಗಳ ಬಹಳಬಗೆಯ ರಚನೆ ಹೆಚ್ಚಾಗಿ ಇರಲು, ನಗರಕ್ಕೆ ಬಹಳ ಉತ್ಸವದಿಂದ ಕರೆತಂದನು. ಆಗ ತನ್ನ ಸಂಪತ್ತನ್ನು ಬಹಳ ವಿಸ್ತಾರವಾಗಿ ಪ್ರದರ್ಶಸಿ ಭೂಮಿಯ ಇಂದ್ರನಂತೆ ಚಂದ್ರಹಾಸನು ಶೋಭಿಸಿದನು].
  • (ಪದ್ಯ-೧೮)

ಪದ್ಯ:-:೧೯:

ಸಂಪಾದಿಸಿ

ಇಂದುಹಾಸಾಶ್ರಯದೊಳಿರ್ದಖಿಲ ಪುರಜನಂ |
ಕಂದರ್ಪ ತಾತನಂ ಕಂಡು ಕೃತಕೃತ್ಯಮಾ |
ಯ್ತಿಂದಿರಾ ವಲ್ಲಭನ ಸಂದರ್ನಕೆ ದುಷ್ಟಬುದ್ಧಿ ನಿಜ ಸೂನುಸಹಿತ ||
ಬಂದು ನಿರ್ಧೂತ ಕಿಲ್ಬಿಷನಾದನಾಗಳೈ |
ತಂದು ಗಾಲವನಸುರಮರ್ದನನ ಪಾದಾರ |
ವಿಂದಮಂ ವಿವಿಧಾಗಮೋಕ್ತದಿಂ ಪೂಜಿಸಿದನತಿ ಭಕ್ತಿಭಾವದಿಂದೆ ||19||

ಪದವಿಭಾಗ-ಅರ್ಥ:
ಇಂದುಹಾಸ ಆಶ್ರಯದೊಳು ಇರ್ದಖಿಲ ಪುರಜನಂ ಕಂದರ್ಪ ತಾತನಂ ಕಂಡು ಕೃತಕೃತ್ಯಮಾಯ್ತ ಇಂದಿರಾ ವಲ್ಲಭನ ಸಂದರ್ನಕೆ ದುಷ್ಟಬುದ್ಧಿ ನಿಜ ಸೂನುಸಹಿತ=[ಚಂದ್ರಹಾಸನ ಆಶ್ರಯದಲ್ಲಿ ಇದ್ದ ಅಖಿಲ ಪುರಜನರೂ, ಕೃಷ್ಣನನ್ನು ಕಂಡು ಕೃತಕೃತ್ಯರಾರು. ಇಂದಿರಾ ವಲ್ಲಭನಾದ ಹರಿಯ ಸಂದರ್ನಕ್ಕೆ ದುಷ್ಟಬುದ್ಧಿ ತನ್ನ ಮಗನ ಸಹಿತ]; ಬಂದು ನಿರ್ಧೂತ ಕಿಲ್ಬಿಷನಾದನು ಆಗಳು ಐತಂದು ಗಾಲವನು ಅಸುರಮರ್ದನನ ಪಾದಾರವಿಂದಮಂ ವಿವಿಧ ಆಗಮೋಕ್ತದಿಂ ಪೂಜಿಸಿದನು ಅತಿ ಭಕ್ತಿಭಾವದಿಂದೆ=[ಬಂದು ದರ್ಶನಮಾಡಿ ಪಾಪರಹಿತನಾದನು. ಆಗ ಗಾಲವನು ಬಂದು ಅಸುರಮರ್ದನಾದ ಕೃಷ್ಣನ ಪಾದಾರವಿಂದವನ್ನು ವಿವಿಧ ಆಗಮೋಕ್ತ ಮಂತ್ರದಿಂದ ಅತಿ ಭಕ್ತಿಭಾವದಿಂದ ಪೂಜಿಸಿದನು].
  • ತಾತ್ಪರ್ಯ:ಚಂದ್ರಹಾಸನ ಆಶ್ರಯದಲ್ಲಿ ಇದ್ದ ಅಖಿಲ ಪುರಜನರೂ, ಕೃಷ್ಣನನ್ನು ಕಂಡು ಕೃತಕೃತ್ಯರಾರು. ಇಂದಿರಾ ವಲ್ಲಭನಾದ ಹರಿಯ ಸಂದರ್ನಕ್ಕೆ ದುಷ್ಟಬುದ್ಧಿ ತನ್ನ ಮಗನ ಸಹಿತ ಬಂದು ದರ್ಶನಮಾಡಿ ಪಾಪರಹಿತನಾದನು. ಆಗ ಗಾಲವನು ಬಂದು ಅಸುರಮರ್ದನಾದ ಕೃಷ್ಣನ ಪಾದಾರವಿಂದವನ್ನು ವಿವಿಧ ಆಗಮೋಕ್ತ ಮಂತ್ರದಿಂದ ಅತಿ ಭಕ್ತಿಭಾವದಿಂದ ಪೂಜಿಸಿದನು.
  • ಟಿಪ್ಪಣಿ:(ಹಿಂದಿನ ಸಂಧಿಯಲ್ಲಿ ಚಂದ್ರಹಾಸನಿಗೆ ಮುನ್ನೂರು ವರ್ಷವಾಗಿದೆಯೆಂದು ನಾರದರು ಅರ್ಜುನನಿಗೆ ಹೇಳಿದರು. ದುಷ್ಟಬುದ್ಧಿ ಅವನ ಮಗ, ಪುರೋಹಿತ ಗಾಲವ ಅವರೆಲ್ಲಾ ಮುನ್ನೂರು ವರ್ಷ ಹಿಂದೆ ಇದ್ದವರು. ಚಂದ್ರಹಾಸ ಮಾತ್ರಾ ದೀರ್ಘಾಯುವಾಗಿ ಬದುಕಿದ್ದನು. ಆದರೆ ಕವಿಯು ಅದನ್ನು ಮರೆತು, ಚಂದ್ರಹಾಸನಿಗಿಂತಲೂ ಬಹಳ ಹಿರಿಯವರಾದ ಪುರೋಹಿತ ಗಾಲವ, ದುಷ್ಟಬುದ್ಧಿ, ಮದನರನ್ನು ಕೃಷ್ಣನ ಎದುರು ತಂದಿದ್ದಾನೆ, ಆದರೆ ವಿಷಯೆ,ಮತ್ತು ಚಂಪಕಮಾಲಿನಿಯರ ವಿಚಾರ ಇಲ್ಲ.. ಚಂದ್ರಹಾಸನ ಮಕ್ಕಳಿಗೆ ಎಷ್ಟು ವರ್ಷವಾಗಿರಬಹುದು, ಅವರ ಪತ್ನಿ ಮಕ್ಕಳವಿಚಾರವಿಲ್ಲ.ಹಾಗಾಗಿ ಗಮಕವಾಚನ ವ್ಯಾಖ್ಯಾನ ಮಾಡುವಾಗ ಈ ಪದ್ಯ ಅಥವಾ ನಾರದರು ಹೇಳಿದ ಹಿಂದಿನ ಸಂಧಿಯ ೭೭ನೇ ಪದ್ಯವನ್ನು ಬಿಡಬೇಕು ಇಲ್ಲವೇ ಚಂದ್ರಹಾಸನಿಗೆ ೬೦ ವರ್ಷವಂದು ಬದಲಾಯಿಸಿಕೊಳ್ಳಬೇಕು.ಸಂ: ಚಂ)
  • (ಪದ್ಯ-೧೯)XXVI

ಪದ್ಯ:-:೨೦:

ಸಂಪಾದಿಸಿ

ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ |
ಪೀತಾಂಬರನ ಚರಣ ಸರಸಿರುಹಕರ್ಪಿಸಿದ |
ನಾತಂ ಧನಂಜಯನ ಸಮ್ಮತದೊಳೊಸೆದು ವಿಷಯಾ ಕುಮಾರಂಗೆ ಕೊಟ್ಟು ||
ಖ್ಯಾತಮಾದಕಿಳ ವಸ್ತುಗಳೊಡನೆ ಗಜಪುರಕೆ |
ದೂತರಂ ಕಳುಹಿ ಸತ್ಕೃತನಾಗಿ ಭೂಪತಿ |
ವ್ರಾತ ಸಹಿತಲ್ಲಿ ಮೂರಿರುಳಿರ್ದು ಪೊರಮಟ್ಟನೈದೆ ಕುದುರೆಗಳ ಕೂಡೆ ||20||

ಪದವಿಭಾಗ-ಅರ್ಥ:
ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ ಪೀತಾಂಬರನ ಚರಣ ಸರಸಿರುಹಕೆ ಅರ್ಪಿಸಿದನು ಆತಂ ಧನಂಜಯನ ಸಮ್ಮತದೊಳು ಒಸೆದು ವಿಷಯಾ ಕುಮಾರಂಗೆ ಕೊಟ್ಟು=[ಪ್ರೀತಿಯಿಂದ ಚಂದ್ರಹಾಸನು ತನ್ನ ರಾಜ್ಯವನ್ನು ಪೀತಾಂಬರನ/ ಕೃಷ್ಣನ ಪಾದಪದ್ಮಕ್ಕೆ ಅರ್ಪಿಸಿದನು. ಆತನು ಧನಂಜಯನ ಸಮ್ಮತದಂತೆ ಪ್ರೀತಿಯಿಂದ ವಿಷೆಯೆಯ ಮಗನಿಗೆಗೆ ಕೊಟ್ಟುನು.];; ಖ್ಯಾತಮಾದ ಅಕಿಳ ವಸ್ತುಗಳೊಡನೆ ಗಜಪುರಕೆ ದೂತರಂ ಕಳುಹಿ ಸತ್ಕೃತನಾಗಿ ಭೂಪತಿ ವ್ರಾತ ಸಹಿತಲ್ಲಿ ಮೂರು ಇರುಳಿರ್ದು ಪೊರಮಟ್ಟನು ಐದೆ ಕುದುರೆಗಳ ಕೂಡೆ=[ಉತ್ತಮವಾದ ಎಲ್ಲಾ ವಸ್ತುಗಳೊಡನೆ ಹಸ್ತನಾಪುರಕ್ಕೆ ದೂತರನ್ನು ಕಳುಹಿಸಿ, ಸತ್ಕಾರ ಪಡೆದು, ಭೂಪತಿ ಚಂದ್ರಹಾಸನು ಜನಸಮೂಹದ ಸಹಿತ ಅಲ್ಲಿ ಮೂರು ರಾತ್ರಿ ಇದ್ದು, ಯಜ್ಞಕುದುರೆಗಳು ಬರಲು ಕುದುರೆಗಳ ಕೂಡೆ ಹೊರಟನು.]
  • ತಾತ್ಪರ್ಯ:ಪ್ರೀತಿಯಿಂದ ಚಂದ್ರಹಾಸನು ತನ್ನ ರಾಜ್ಯವನ್ನು ಪೀತಾಂಬರನ/ ಕೃಷ್ಣನ ಪಾದಪದ್ಮಕ್ಕೆ ಅರ್ಪಿಸಿದನು. ಆತನು ಧನಂಜಯನ ಸಮ್ಮತದಂತೆ ಪ್ರೀತಿಯಿಂದ ವಿಷೆಯೆಯ ಮಗನಿಗೆಗೆ ಕೊಟ್ಟುನು. ಉತ್ತಮವಾದ ಎಲ್ಲಾ ವಸ್ತುಗಳೊಡನೆ ಹಸ್ತನಾಪುರಕ್ಕೆ ದೂತರನ್ನು ಕಳುಹಿಸಿ, ಸತ್ಕಾರ ಪಡೆದು, ಭೂಪತಿ ಚಂದ್ರಹಾಸನು ಜನಸಮೂಹದ ಸಹಿತ ಅಲ್ಲಿ ಮೂರು ರಾತ್ರಿ ಇದ್ದು, ಯಜ್ಞಕುದುರೆಗಳು ಬರಲು ಕುದುರೆಗಳ ಕೂಡೆ ಹೊರಟನು.
  • (ಪದ್ಯ-೨೦)

ಪದ್ಯ:-:೨೧:

ಸಂಪಾದಿಸಿ

ಮುಪ್ಪಾದೆನೆಲೆಮಗನೆ ಕೃಷ್ಣದರ್ಶನದಿಂದೆ |
ತಪ್ಪದೆನಗಿನ್ನು ಮೋಕ್ಷದ ಲಾಭಮಸುರಾರಿ |
ಗೊಪ್ಪಿಸುವೆ ನೀತನುವನಿವರಧ್ವರಂ ಮುಗಿದ ಬಳಿಕ ವನಕಾಂ ಪೋಪೆನು ||
ಬಪ್ಪುದಿಲ್ಲದರಿಂದೆ ನಗರಕರಸಾಗಿ ಸುಖ |
ಮಿಪ್ಪುದೆಂದಿರಿಸಿ ನಿಜ ತನಯರಂ ಶರಧಿಗೆಣೆ |
ಯಪ್ಪ ವಾಹಿನಿಯೊಡನೆ ಪೊರಮಟ್ಟನಾ ಚಂದ್ರಹಾಸನರ್ಜುನನ ಕೂಡೆ ||21||***

ಪದವಿಭಾಗ-ಅರ್ಥ:
ಮುಪ್ಪಾದೆನು ಎಲೆ ಮಗನೆ ಕೃಷ್ಣದರ್ಶನದಿಂದೆ ತಪ್ಪದು ಎನಗಿನ್ನು ಮೋಕ್ಷದ ಲಾಭಮ್ ಅಸುರಾರಿಗೆ ಒಪ್ಪಿಸುವೆನು ಈ ತನುವನು ಇವರ ಅಧ್ವರಂ ಮುಗಿದ ಬಳಿಕ ವನಕೆ ಆಂ ಪೋಪೆನು=[ಚಂದ್ರಹಾಸನು ಮಗನಿಗೆ ಹೇಳಿದನು, 'ಮುಪ್ಪಾದೆನು ಎಲೆ ಮಗನೆ, ಕೃಷ್ಣದರ್ಶನದಿಂದ ನನಗೆ ಇನ್ನು ಮೋಕ್ಷ ಲಭಿಸುವುದು ತಪ್ಪದು; ಅಸುರಾರಿ ಕೃಷ್ಣನಿಗೆ ಈ ದೇಹವನ್ನು ಒಪ್ಪಿಸುವೆನು; ಇವರ ಯಜ್ಞವು ಮುಗಿದ ಬಳಿಕ ನಾನು ವನಕ್ಕೆ ಹೋಗುವೆನು];; ಬಪ್ಪುದಿಲ್ಲ ಅದರಿಂದೆ ನಗರಕೆ ಅರಸಾಗಿ ಸುಖಮಿಪ್ಪುದು ಎಂದು ಇರಿಸಿ ನಿಜ ತನಯರಂ ಶರಧಿಗೆ ಎಣೆಯಪ್ಪ ವಾಹಿನಿಯೊಡನೆ ಪೊರಮಟ್ಟನು ಆ ಚಂದ್ರಹಾಸನು ಅರ್ಜುನನ ಕೂಡೆ=[ನಾನು ಹಿಂತಿರುಗಿ ಬರುವುದಿಲ್ಲ; ಅದರಿಂದ ನಗರಕ್ಕೆ ಅರಸನಾಗಿ ಸುಖವಾಗಿ ಇರುವುದು, ಎಂದು ತನ್ನ ಮಕ್ಕಳನ್ನು ಅಲ್ಲಿ ರಾಜನಾಗಿ ಇರಿಸಿ, ಸಮುದ್ರಕ್ಕೆ ಸಮನಾದ ದೊಡ್ಡ ಸೈನ್ಯದೊಡನೆ ಆ ಚಂದ್ರಹಾಸನು ಅರ್ಜುನನ ಕೂಡೆ ಹೊರಟನು.]
  • ತಾತ್ಪರ್ಯ:ಚಂದ್ರಹಾಸನು ಮಗನಿಗೆ ಹೇಳಿದನು, 'ಮುಪ್ಪಾದೆನು ಎಲೆ ಮಗನೆ, ಕೃಷ್ಣದರ್ಶನದಿಂದ ನನಗೆ ಇನ್ನು ಮೋಕ್ಷ ಲಭಿಸುವುದು ತಪ್ಪುವುದಿಲ್ಲ; ಅಸುರಾರಿ ಕೃಷ್ಣನಿಗೆ ಈ ದೇಹವನ್ನು ಒಪ್ಪಿಸುವೆನು; ಇವರ ಯಜ್ಞವು ಮುಗಿದ ಬಳಿಕ ನಾನು ವನಕ್ಕೆ ಹೋಗುವೆನು ನಾನು ಹಿಂತಿರುಗಿ ಬರುವುದಿಲ್ಲ; ಅದರಿಂದ ನಗರಕ್ಕೆ ಅರಸನಾಗಿ ಸುಖವಾಗಿ ಇರುವುದು, ಎಂದು ತನ್ನ ಮಕ್ಕಳನ್ನು ಅಲ್ಲಿ ರಾಜನಾಗಿ ಇರಿಸಿ, ಸಮುದ್ರಕ್ಕೆ ಸಮನಾದ ದೊಡ್ಡ ಸೈನ್ಯದೊಡನೆ ಆ ಚಂದ್ರಹಾಸನು ಅರ್ಜುನನ ಕೂಡೆ ಹೊರಟನು.]
  • (ಪದ್ಯ-೨೧)

ಪದ್ಯ:-:೨೨:

ಸಂಪಾದಿಸಿ

ಪುತ್ರಸಂಪದಮಾಯುರಾರೋಗ್ಯಮರಿವು ಶತ |
ಪತ್ರನಾಭನ ಭಕ್ತಿ ದೃಢವಾಗಲೀತನ ಚ |
ರಿತ್ರಮಂ ಕೇಳ್ದವರ್ಗೆಂದು ಹರಿ ವರವನಿತ್ತಾತನಂ ಕೂಡಿಕೊಂಡು ||
ಸುತ್ರಾಮ ಸುತನ ಕುದುರೆಗಳೊಡನೆ ತೆರಳ್ದಂ |
ಧರಿತ್ರಿಯೊಳ್ ದೇಶದೇಶದೊಳಿರ್ದ ಭುಜಬಲ |
ಕ್ಷತ್ರಿಯೋತ್ತಮರಂಜಿ ತುರಗಂಗಳಂ ತಡೆಯದಭಿನಮಿಸಿ ಬಿಡುತಿರ್ದರು ||22||

ಪದವಿಭಾಗ-ಅರ್ಥ:
ಪುತ್ರಸಂಪದಂ ಆಯುರಾರೋಗ್ಯಂ ಅರಿವು ಶತಪತ್ರನಾಭನ ಭಕ್ತಿ ದೃಢವಾಗಲಿ ಈತನ ಚರಿತ್ರಮಂ ಕೇಳ್ದವರ್ಗೆಂದು ಹರಿ ವರವನಿತ್ತು ಆತನಂ ಕೂಡಿಕೊಂಡು=[ಕೃಷ್ಣನು, ಚಂದ್ರಹಾಸನ ಚರಿತ್ರೆಯನ್ನು ಕೇಳಿದವರಿಗೆ, ಪುತ್ರಸಂಪದವೂ, ಆಯುಷ್ಯ,ಆರೋಗ್ಯ, ಜ್ಞಾನ, ಹರಿಭಕ್ತಿ, ಧೃಢವಾಗಲಿ, ಎಂದು ವರವನ್ನು ಕೊಟ್ಟು, ಆತನನನ್ನು ಕೂಡಿಕೊಂಡು ];; ಸುತ್ರಾಮ ಸುತನ ಕುದುರೆಗಳೊಡನೆ ತೆರಳ್ದಂ ಧರಿತ್ರಿಯೊಳ್ ದೇಶದೇಶದೊಳಿರ್ದ ಭುಜಬಲ ಕ್ಷತ್ರಿಯೋತ್ತಮರು ಅಂಜಿ ತುರಗಂಗಳಂ ತಡೆಯದೆ ಅಭಿನಮಿಸಿ ಬಿಡುತಿರ್ದರು=[ಅರ್ಜುನನ ಕುದುರೆಗಳೊಡನೆ ಹೊರಟನು. ಭೂಮಿಯಲ್ಲಿ ದೇಶದೇಶಗಳಲ್ಲದ್ದ ಭುಜಬಲ ಕ್ಷತ್ರಿಯ ಶ್ರೇಷ್ಠರು, ಇವರಿಗೆ ಅಂಜಿ ತುರಗಗಳನ್ನು ತಡೆಯದೆ ನಮಸ್ಕಾರ ಮಾಡಿ ಬಿಡುತಿದ್ದರು].
  • ತಾತ್ಪರ್ಯ:ಕೃಷ್ಣನು, ಚಂದ್ರಹಾಸನ ಚರಿತ್ರೆಯನ್ನು ಕೇಳಿದವರಿಗೆ, ಪುತ್ರಸಂಪದವೂ, ಆಯುಷ್ಯ,ಆರೋಗ್ಯ, ಜ್ಞಾನ, ಹರಿಭಕ್ತಿ, ಧೃಢವಾಗಲಿ, ಎಂದು ವರವನ್ನು ಕೊಟ್ಟು, ಆತನನನ್ನು ಕೂಡಿಕೊಂಡು ಅರ್ಜುನನ ಕುದುರೆಗಳೊಡನೆ ಹೊರಟನು. ಭೂಮಿಯಲ್ಲಿ ದೇಶದೇಶಗಳಲ್ಲದ್ದ ಭುಜಬಲ ಕ್ಷತ್ರಿಯ ಶ್ರೇಷ್ಠರು, ಇವರಿಗೆ ಅಂಜಿ ತುರಗಗಳನ್ನು ತಡೆಯದೆ ನಮಸ್ಕಾರ ಮಾಡಿ ಬಿಡುತಿದ್ದರು].
  • (ಪದ್ಯ-೨೨)

ಪದ್ಯ:-:೨೩:

ಸಂಪಾದಿಸಿ

ರಾಯ ಕೇಳಾಶ್ಚರ್ಯಮಂ ಬಳಿಕವಾಜಿಗಳ್ |
ವಾಯುವೇಗದೊಳೈದಿ ಬಡಗಣ ಪಯೋನಿಧಿಯ |
ತೋಯಮಂ ಪೊಕ್ಕು ನಡೆದುವು ಕೂಡೆ ಸಾಗರದ ವಾರಿಯೊಳ್ ಕಾಲಿಡುವೊಡೆ ||
ದಾಯಮಂ ಕಾಣದೆ ಧನಂಜಯಾದಿಗಳದಕು |
ಪಾಯಮಿನ್ನೇನೆಂದು ಬೆಸಗೊಂಡೊಡಂಬುಜ ದ |
ಳಾಯತಾಕ್ಷಂ ಪೇಳ್ದನಿಂತೆಂದು ನೆರೆದಿರ್ದ ಸಲಕ ಭೂಪಾಲಕರ್ಗೆ ||23||

ಪದವಿಭಾಗ-ಅರ್ಥ:
ರಾಯ ಕೇಳು ಆಶ್ಚರ್ಯಮಂ ಬಳಿಕ ವಾಜಿಗಳ್ ವಾಯುವೇಗದೊಳು ಐದಿ ಬಡಗಣ ಪಯೋನಿಧಿಯ ತೋಯಮಂ ಪೊಕ್ಕು ನಡೆದುವು ಕೂಡೆ ಸಾಗರದ ವಾರಿಯೊಳ್ ಕಾಲಿಡುವೊಡೆ=[ಜನಮೇಜಯರಾಯ ಕೇಳು ಆಶ್ಚರ್ಯವನ್ನು, ಬಳಿಕ ಕುದುರೆಗಳು ವಾಯುವೇಗದಲ್ಲಿ ಹೊರಟು, ಪಶ್ಚಿಮದ ಸಮುದ್ರದ ನೀರನ್ನು ಹೊಕ್ಕು ನಡೆದುವು. ಆಗ ಸಾಗರದಲ್ಲಿ ಹೋಗಲು ನೀರಿನಲ್ಲಿ ನೆದಡೆಯುವುದಕ್ಕೆ];; ದಾಯಮಂ ಕಾಣದೆ ಧನಂಜಯಾದಿಗಳು ಅದಕೆ ಉಪಾಯಂ ಇನ್ನೇನು ಎಂದು ಬೆಸಗೊಂಡೊಡೆ ಅಂಬುಜ ದಳಾಯತಾಕ್ಷಂ ಪೇಳ್ದನು ಇಂತೆಂದು ನೆರೆದಿರ್ದ ಸಲಕ ಭೂಪಾಲಕರ್ಗೆ=[ದಾರಿಯನ್ನು ಕಾಣದೆ ಧನಂಜಯ ಮೊದಲಾವರು ಅದಕ್ಕೆ ಉಪಾಯವು ಇನ್ನೇನು ಎಂದು ಕೃಷ್ಣನನ್ನು ಕೇಳಿದರು. ಆಗ ಅಂಬುಜದಳಾಯತಾಕ್ಷನಾದ ಕೃಷ್ಣನು ಅಲ್ಲಿ ನೆರೆದಿದ್ದ ಸಲಕ ಭೂಪಾಲಕರಿಗೆ ಹೀಗೆ ಹೇಳಿದನು.]
  • ತಾತ್ಪರ್ಯ:ಜನಮೇಜಯರಾಯ ಕೇಳು ಆಶ್ಚರ್ಯವನ್ನು, ಬಳಿಕ ಕುದುರೆಗಳು ವಾಯುವೇಗದಲ್ಲಿ ಹೊರಟು, ಪಶ್ಚಿಮದ ಸಮುದ್ರದ ನೀರನ್ನು ಹೊಕ್ಕು ನಡೆದುವು. ಆಗ ಸಾಗರದಲ್ಲಿ ಹೋಗಲು ನೀರಿನಲ್ಲಿ ನೆದಡೆಯುವುದಕ್ಕೆ ದಾರಿಯನ್ನು ಕಾಣದೆ ಧನಂಜಯ ಮೊದಲಾವರು ಅದಕ್ಕೆ ಉಪಾಯವು ಇನ್ನೇನು ಎಂದು ಕೃಷ್ಣನನ್ನು ಕೇಳಿದರು. ಆಗ ಅಂಬುಜದಳಾಯತಾಕ್ಷನಾದ ಕೃಷ್ಣನು ಅಲ್ಲಿ ನೆರೆದಿದ್ದ ಸಲಕ ಭೂಪಾಲಕರಿಗೆ ಹೀಗೆ ಹೇಳಿದನು.
  • (ಪದ್ಯ-೨೩)

ಪದ್ಯ:-:೨೪:

ಸಂಪಾದಿಸಿ

ಶುಭ್ರವಾಹನ ಮಯೂರಧ್ವಜ ಪ್ರಧ್ಯುಮ್ನ |
ಬಭ್ರುವಾಹನ ಹಂಸಕೇತು ನೃಪರಿವರೈವ |
ರಭ್ರವಾಹನನಂತೆ ಸರ್ವತ್ರ ಗಮನದ ವರೂಥದ ಮಹಾವೀರರು ||
ವಿಭ್ರಾಜಿಸುವ ಸಮುದ್ರದ ಮೇಲೆ ನಡೆವ ಸುಗ |
ತಿ ಭ್ರಷ್ಟರಲ್ಲೆಂದು ರುಕ್ಮೀಣೀಮುಖಪಂಕ |
ಜ ಭ್ರಮರನಾಪಂಚರಥಿಕರಂ ಕೂಡಿಕೊಂಡಂಬುನಿಧಿಯಂಪೊಕ್ಕನು ||24||

ಪದವಿಭಾಗ-ಅರ್ಥ:
ಶುಭ್ರವಾಹನ ಮಯೂರಧ್ವಜ ಪ್ರಧ್ಯುಮ್ನ ಬಭ್ರುವಾಹನ ಹಂಸಕೇತು ನೃಪರಿವರು ಐವರು ಅಭ್ರವಾಹನನಂತೆ ಸರ್ವತ್ರ ಗಮನದ ವರೂಥದ ಮಹಾವೀರರು=[ಶುಭ್ರವಾಹನ, ಮಯೂರಧ್ವಜ, ಪ್ರಧ್ಯುಮ್ನ, ಬಭ್ರುವಾಹನ, ಹಂಸಕೇತು, ಈ ರಾಜರು ಐದು ಜನರು ಅರ್ಜುನನಂತೆ ಸರ್ವತ್ರ ಗಮನವುಳ್ಳ ರಥಿಕ ಮಹಾವೀರರು ];; ವಿಭ್ರಾಜಿಸುವ ಸಮುದ್ರದ ಮೇಲೆ ನಡೆವ ಸುಗತಿ ಭ್ರಷ್ಟರಲ್ಲೆಂದು ರುಕ್ಮೀಣೀಮುಖಪಂಕಜ ಭ್ರಮರನು ಆಪಂಚ ರಥಿಕರಂ ಕೂಡಿಕೊಂಡು ಅಂಬುನಿಧಿಯಂ ಪೊಕ್ಕನು=[ಶೋಭಿಸುವ ಸಮುದ್ರದ ಮೇಲೆ ನಡೆಯುವ ಗಮನಕ್ಕೆ ಅಸಾಧ್ಯರಲ್ಲ- ನೆಡೆಯಲು ಸಾಧ್ಯರು ಎಂದು, ರುಕ್ಮೀಣೀಮುಖಕಮಲದ ದುಂಬಿಯಂತಿರುವ ಕೃಷ್ಣನು ಆ ಐದು ರಥಿಕರನ್ನು ಕೂಡಿಕೊಂಡು ಸಮುದ್ರವನ್ನು ಹೊಕ್ಕನು.].
  • ತಾತ್ಪರ್ಯ:ಶುಭ್ರವಾಹನ (ಅರ್ಜುನ), ಮಯೂರಧ್ವಜ, ಪ್ರಧ್ಯುಮ್ನ, ಬಭ್ರುವಾಹನ, ಹಂಸಕೇತು, ಈ ರಾಜರು ಐದು ಜನರು ಅರ್ಜುನನಂತೆ ಸರ್ವತ್ರ ಗಮನವುಳ್ಳ ರಥಿಕ ಮಹಾವೀರರು. ಶೋಭಿಸುವ ಸಮುದ್ರದ ಮೇಲೆ ನಡೆಯುವ ಗಮನಕ್ಕೆ ಅಸಾಧ್ಯರಲ್ಲ- ನೆಡೆಯಲು ಸಾಧ್ಯರು ಎಂದು, ರುಕ್ಮೀಣೀಮುಖಕಮಲದ ದುಂಬಿಯಂತಿರುವ ಕೃಷ್ಣನು ಆ ಐದು ರಥಿಕರನ್ನು ಕೂಡಿಕೊಂಡು ಸಮುದ್ರವನ್ನು ಹೊಕ್ಕನು.
  • (ಪದ್ಯ-೨೪)

ಪದ್ಯ:-:೨೫:

ಸಂಪಾದಿಸಿ

ಸಾಗರದ ನಡುವೆ ಕುರ್ವಕೆ ವರ ಹಯಂಗಳತಿ |
ವೇಗದಿಂದೈದಲದರೊಡನೆ ಪಾರ್ಥಾದಿಗಳ್ |
ಪೋಗಿ ಬಕದಾಲ್ಭ್ಯ ಋಷಿಯಂ ಕಂಡರಲ್ಲಿ ಕಣ್ಣೆವೆಗಳಂ ಮುಚ್ಚಿಕೊಂಡು ||
ಯೋಗದಿಂದಿರುತಿರ್ದನಧ್ರುವದ ಕಾಯಮಂ |
ಸಾಗಿಸಲದೇಕೆಂದು ಕೊಳೆತೊಣಗಿ ಛಿದ್ರಂಗ |
ಳಾದ ಸೆಲದಿಗಳಿಕ್ಕಿದಾಲದೆಲೆಯಂ ತನ್ನ ತಲೆಮರೆಗೆ ಕುಯ್ಯೊಳಾಂತು |25||

ಪದವಿಭಾಗ-ಅರ್ಥ:
ಸಾಗರದ ನಡುವೆ ಕುರ್ವಕೆ (ಕುರ್ವ:ಭೀಕರತೆ;ಬರಹ ನಿ.; ಕುರುವ: ದ್ವೀಪ, ಬೆಟ್ಟ *ಶಿ.ಕಾರಂತರ ನಿಘಂಟು)) ವರ ಹಯಂಗಳು ಅತಿ ವೇಗದಿಂದ ಐದಲು ಅದರೊಡನೆ ಪಾರ್ಥಾದಿಗಳ್ ಪೋಗಿ ಬಕದಾಲ್ಭ್ಯ ಋಷಿಯಂ ಕಂಡರಲ್ಲಿ==[ಆ ಸಮುದ್ರದ ನಡುವಿನ ಭಿಕರತೆಯಲ್ಲಿ ಒಂದು ದ್ವೀಪಕ್ಕೆ ಶ್ರೇಷ್ಠ ಯಜ್ಞದ ಕುದುರೆಗಳು ಅತಿ ವೇಗದಿಂದ ಹೋಗಲು, ಅದರೊಡನೆ ಪಾರ್ಥಾದಿಗಳು ಹೋಗಿ ಅಲ್ಲಿ ಬಕದಾಲ್ಭ್ಯ ಋಷಿಯನ್ನು ಕಂಡರು.];; ಕಣ್ಣೆವೆಗಳಂ ಮುಚ್ಚಿಕೊಂಡು ಯೋಗದಿಂದ ಇರುತಿರ್ದನು ಅಧ್ರುವದ (ಅನಿತ್ಯ) ಕಾಯಮಂ ಸಾಗಿಸಲು ಅದೇಕೆ ಎಂದು ಕೊಳೆತು ಒಣಗಿ ಛಿದ್ರಂಗಳಾದ ಸೆಲದ ಇಗಳು (ಶಾಖ? ಇಂಗಳ;ಅಂಗಾರ, ಕೆಂಡ, ಒಂದು ಮರ:ಕಾರಂತ ನಿಘಂಟು) ಇಕ್ಕಿದ ಆಲದ ಎಲೆಯಂ ತನ್ನ ತಲೆಮರೆಗೆ ಕುಯ್ಯೊಳು ಆಂತು=[ಆ ಋಷಿಯು ಕಣ್ಣೆವೆಗಳನ್ನು ಮುಚ್ಚಿಕೊಂಡು ಯೋಗದಿಂದ ಇರುತಿದ್ದನು. ಅವನು ಅನಿತ್ಯವಾದ ತನ್ನ ದೇಹವನ್ನು ಅದೇಕೆ ಕಾಪಾಡುವದು ಎಂದು, ಕೊಳೆತು ಒಣಗಿ ತೂತುಗಳು ಬಿದ್ದ ಸೆಲದ ಬಿಸಿಲಿಗೆ ಒಣಗಿದ ಆಲದ ಎಲೆಯನ್ನು ತನ್ನ ತಲೆಮರೆಗೆ ಕುಯ್ಯಲ್ಲಿ ಹಿಡಿದಿದ್ದನು.]
  • ತಾತ್ಪರ್ಯ:ಆ ಸಮುದ್ರದ ನಡುವಿನ ಭಿಕರತೆಯಲ್ಲಿ ಒಂದು ದ್ವೀಪಕ್ಕೆ ಶ್ರೇಷ್ಠ ಯಜ್ಞದ ಕುದುರೆಗಳು ಅತಿ ವೇಗದಿಂದ ಹೋಗಲು, ಅದರೊಡನೆ ಪಾರ್ಥಾದಿಗಳು ಹೋಗಿ ಅಲ್ಲಿ ಬಕದಾಲ್ಭ್ಯ ಋಷಿಯನ್ನು ಕಂಡರು. ಆ ಋಷಿಯು ಕಣ್ಣೆವೆಗಳನ್ನು ಮುಚ್ಚಿಕೊಂಡು ಯೋಗದಿಂದ ಇರುತಿದ್ದನು. ಅವನು ಅನಿತ್ಯವಾದ ತನ್ನ ದೇಹವನ್ನು ಅದೇಕೆ ಕಾಪಾಡುವದು ಎಂದು, ಕೊಳೆತು ಒಣಗಿ ತೂತುಗಳು ಬಿದ್ದ ಸೆಲದ ಬಿಸಿಲಿಗೆ ಒಣಗಿದ ಆಲದ ಎಲೆಯನ್ನು ತನ್ನ ತಲೆಮರೆಗೆ ಕುಯ್ಯಲ್ಲಿ ಹಿಡಿದಿದ್ದನು.
  • (ಪದ್ಯ-೨೫)

ಪದ್ಯ:-:೨೬:

ಸಂಪಾದಿಸಿ

ಸ್ಯಂದನಂಗಳನಿಳಿದು ವಿನಯದಿಮದೆಚ್ಚರಿಸಿ |
ವಂದಿಸಿದೊಡರ್ಜುನಾದಿಗಳನಾ ಮುನಿವರಂ |
ಕಂದೆರೆದು ಕಂಡು ಪುರುಷೋತ್ತಮಂ ಕ್ಷಣಿಕರಿವರೈವರಂ ಕೂಡಿಕೊಂಡು ||
ಬಂದನೀ ಮಂಡಲದೊಳಿರವಿಲ್ಲ ತನಗಿನ್ನು |
ಮುಂದೆ ಸುಖಮಾಗದಲ್ಪಾಯುಷದೊಳೇಗೈವೆ |
ನೆಂದು ಬಕದಾಲ್ಭ್ಯ ಋಷಿ ನುಡಿಯೆ ವಿಸ್ಮಿತನಾಗಿ ಫಲುಗುಣಂ ಬೆಸಗೊಂಡನು ||26||

ಪದವಿಭಾಗ-ಅರ್ಥ:
ಸ್ಯಂದನಂಗಳನು ಇಳಿದು ವಿನಯದಿಂದ ಎಚ್ಚರಿಸಿ ವಂದಿಸಿದೊಡೆ ಅರ್ಜುನಾದಿಗಳನು ಆ ಮುನಿವರಂ ಕಂದೆರೆದು ಕಂಡು ಪುರುಷೋತ್ತಮಂ ಕ್ಷಣಿಕರು ಇವರೈವರಂ ಕೂಡಿಕೊಂಡು ಬಂದನು=[ಅವರು ರಥಗಳನ್ನು ಇಳಿದು ವಿನಯದಿಂದ ಆ ಮುನಿಯನ್ನು ಎಚ್ಚರಿಸಿ ನಮಸ್ಕರಿಸಿದಾಗ, ಅರ್ಜುನಾದಿಗಳನ್ನು ಆ ಮುನಿವರನು ಕಣ್ಣುತೆರದು ನೋಡಿ, 'ಈ ಪುರುಷೋತ್ತಮನು ಕ್ಷಣಕಾಲ ಜೀವಿಸುವ ಇವರು ಐದು ಜನರನ್ನು ಜೊತೆಗೂಡಿಕೊಂಡು ಬಂದಿದ್ದಾನೆ'];; ಈ ಮಂಡಲದೊಳು ಇರವಿಲ್ಲ ತನಗಿನ್ನು ಮುಂದೆ ಸುಖಮಾಗದು ಅಲ್ಪಾಯುಷದೊಳು ಏಗೈವೆ ನೆಂದು ಬಕದಾಲ್ಭ್ಯ ಋಷಿ ನುಡಿಯೆ, ವಿಸ್ಮಿತನಾಗಿ ಫಲುಗುಣಂ ಬೆಸಗೊಂಡನು=[ಇನ್ನು ಈ ಪ್ರದೇಶದಲ್ಲಿಯೂ ಇರವಂತಿಲ್ಲ (ಏಕಾಂತಕ್ಕೆ ಭಂಗವಾಗುವುದು); ತನಗೆ ಇನ್ನು ಮುಂದೆ ಸುಖವಾಗದು, ತನಗಿರುವ ಅಲ್ಪಾಯುಷದಲ್ಲಿ ಏನುಮಾಡುವೆನು' ಎಂದು ಬಕದಾಲ್ಭ್ಯ ಋಷಿ ಹೇಳಲು, ಫಲ್ಗುಣನು ವಿಸ್ಮಯದಿಂದ ಹಿಗೆ ಕೇಳಿದನು.]
  • ತಾತ್ಪರ್ಯ:ಅವರು ರಥಗಳನ್ನು ಇಳಿದು ವಿನಯದಿಂದ ಆ ಮುನಿಯನ್ನು ಎಚ್ಚರಿಸಿ ನಮಸ್ಕರಿಸಿದಾಗ, ಅರ್ಜುನಾದಿಗಳನ್ನು ಆ ಮುನಿವರನು ಕಣ್ಣುತೆರದು ನೋಡಿ, 'ಈ ಪುರುಷೋತ್ತಮನು ಕ್ಷಣಕಾಲ ಜೀವಿಸುವ ಇವರು ಐದು ಜನರನ್ನು ಜೊತೆಗೂಡಿಕೊಂಡು ಬಂದಿದ್ದಾನೆ. ಇನ್ನು ಈ ಪ್ರದೇಶದಲ್ಲಿಯೂ ಇರವಂತಿಲ್ಲ (ಏಕಾಂತಕ್ಕೆ ಭಂಗವಾಗುವುದು); ತನಗೆ ಇನ್ನು ಮುಂದೆ ಸುಖವಾಗದು, ತನಗಿರುವ ಅಲ್ಪಾಯುಷದಲ್ಲಿ ಏನುಮಾಡುವೆನು' ಎಂದು ಬಕದಾಲ್ಭ್ಯ ಋಷಿ ಹೇಳಲು, ಫಲ್ಗುಣನು ವಿಸ್ಮಯದಿಂದ ಹಿಗೆ ಕೇಳಿದನು.]
  • (ಪದ್ಯ-೨೬)

ಪದ್ಯ:-:೨೭:

ಸಂಪಾದಿಸಿ

ಮೊಳಕಾಲ್ಗಳೆಡೆಯೊಳುದ್ಭವಿಸಿರ್ದ ಕಿಂಶುಕಂ |
ಗಳ ಮೇಲೆ ಗೂಡಿಕ್ಕಿ ಬಾಳ್ದಪುವು ಪಕ್ಷಿಗಳ |
ಬಳಗಂಗಳೊರಸಿಕೊಂಬುವು ತೀಟೆಗಳನಂಗದೋಳ್ ಬಂದು ಮೃಗತತಿಗಳು ||
ಬಳೆದಿಹವು ಸುತ್ತಲುಂ ಪುತ್ತುಗಳ್ ನಿಮ್ಮತೋ |
ಳ್ಗಳ ಬಳಿಯೊಳಾಡುವುವು ಸರ್ಪಂಗಳಿರಲೊಂದು |
ನಿಳಯಮಂ ಮಾಡದೇತಕೆ ಕಯ್ಯೊಳೀಪತ್ರವೆಂದು ಪಾರ್ಥಂ ಕೇಳ್ದನು ||27||

ಪದವಿಭಾಗ-ಅರ್ಥ:
ಮೊಳಕಾಲ್ಗಳ ಎಡೆಯೊಳು ಉದ್ಭವಿಸಿರ್ದ ಕಿಂಶುಕಂಗಳ (ಕಿಂಶುಕ:ಮರ; ಮತ್ತುಗದ ಮರ) ಮೇಲೆ ಗೂಡಿಕ್ಕಿ ಬಾಳ್ದಪುವು ಪಕ್ಷಿಗಳ ಬಳಗಂಗಳೊಳು ಅರಸಿಕೊಂಬುವು ತೀಟೆಗಳನು ಅಂಗದೋಳ್ ಬಂದು ಮೃಗತತಿಗಳು==[ಮೊಳಕಾಲುಗಳ ಹತ್ತಿರ ಮರಗಳು ಹುಟ್ಟಿವೆ; ಅದರ ಮೇಲೆ ಪಕ್ಷಿಗಳ ಬಳಗಗಳು ಗೂಡ ಕಟ್ಟಿ ಬಾಳುತ್ತಿವೆ; ಪ್ರಾಣಿಗಳು ತಮ್ಮ ಮೈತುರಿಕೆಯನ್ನು ನಿಮ್ಮ ದೇಹದ ಅಂಗದಲ್ಲಿ ಬಂದು ಒರಸಿಕೊಳ್ಳತ್ತಿವೆ.];; ಬಳೆದಿಹವು ಸುತ್ತಲುಂ ಪುತ್ತುಗಳ್ ನಿಮ್ಮ ತೋಳ್ಗಳ ಬಳಿಯೊಳು ಆಡುವುವು ಸರ್ಪಂಗಳು ಇರಲೊಂದು ನಿಳಯಮಂ ಮಾಡದೆ ಏತಕೆ ಕಯ್ಯೊಳು ಈ ಪತ್ರವು ಎಂದು ಪಾರ್ಥಂ ಕೇಳ್ದನು==[ ಸುತ್ತಲೂ ಹುತ್ತುಗಳು ಬೆಳೆದಿರುವುವು; ನಿಮ್ಮ ತೋಳುಗಳ ಬಳಿಯಲ್ಲಿ ಸರ್ಪಗಳು ಆಡುವುವು; ಇರಲು ಒಂದು ಮನೆಯನ್ನು ಮಾಡಿಕೊಳ್ಳದೆ ಏತಕ್ಕೆ ಕಯ್ಯಲ್ಲಿ ಈ ವಟಪತ್ರವನ್ನು ಹಿಡಿದಿರುವಿರಿ ಎಂದು ಪಾರ್ಥನು ಕೇಳಿದನು].
  • ತಾತ್ಪರ್ಯ:ಪಾರ್ಥನು ಮುನಿಗಳನ್ನು ಕುರಿತು,'ಮೊಳಕಾಲುಗಳ ಹತ್ತಿರ ಮರಗಳು ಹುಟ್ಟಿವೆ; ಅದರ ಮೇಲೆ ಪಕ್ಷಿಗಳ ಬಳಗಗಳು ಗೂಡ ಕಟ್ಟಿ ಬಾಳುತ್ತಿವೆ; ಪ್ರಾಣಿಗಳು ತಮ್ಮ ಮೈತುರಿಕೆಯನ್ನು ನಿಮ್ಮ ದೇಹದ ಅಂಗದಲ್ಲಿ ಬಂದು ಒರಸಿಕೊಳ್ಳತ್ತಿವೆ. ಸುತ್ತಲೂ ಹುತ್ತುಗಳು ಬೆಳೆದಿರುವುವು; ನಿಮ್ಮ ತೋಳುಗಳ ಬಳಿಯಲ್ಲಿ ಸರ್ಪಗಳು ಆಡುವುವು; ಇರಲು ಒಂದು ಮನೆಯನ್ನು ಮಾಡಿಕೊಳ್ಳದೆ ಏತಕ್ಕೆ ಕಯ್ಯಲ್ಲಿ ಈ ವಟಪತ್ರವನ್ನು ಹಿಡಿದಿರುವಿರಿ ಎಂದು ಪಾರ್ಥನು ಕೇಳಿದನು.
  • (ಪದ್ಯ-೨೭)

ಪದ್ಯ:-:೨೮:

ಸಂಪಾದಿಸಿ

ಮುನಿ ಕಿರೀಟಯ ನುಡಿಗೆ ನಸುನಗುತೆ ದುಃಖ ಭಾ |
ಜನವಲಾ ಸ್ತ್ರೀಪರಿಗ್ರಹಮದಂ ಪೋಷಿಸುವ |
ಮನುಜನೆಣೆಸುವನೆ ಕೃತ್ಯಾಕೃತ್ಯಮಂ ಬಳಿಕ ಮೋಕ್ಷಮೆತ್ತಣದವಂಗೆ ||
ಕನಸಿನ ಸುಖಕ್ಕೆಳಸಿ ಬಿದ್ದಪನಧೋಗತಿಗೆ |
ಜನನ ಮರಣಂಗಳ ಬಳಲ್ಕೆ ಬೆಂಬಿಡದಿಹುದು |
ವನಿತೆಯರ ತೊಡಕಿಂದೆ ಕೆಡುತಿಹುದು ಲೋಕಮದನೇವಣ್ಣಿಸುವೆನೆಂದನು ||28||

ಪದವಿಭಾಗ-ಅರ್ಥ:
ಮುನಿ ಕಿರೀಟಯ ನುಡಿಗೆ ನಸುನಗುತೆ ದುಃಖ ಭಾಜನವಲಾ ಸ್ತ್ರೀಪರಿಗ್ರಹಂ ಅದಂ ಪೋಷಿಸುವ ಮನುಜನು ಎಣೆಸುವನೆ ಕೃತ್ಯಾಕೃತ್ಯಮಂ (ಮಾಡಬೇಕಾದ್ದು ಮಾಡಬಾರದ್ದು) ಬಳಿಕ ಮೋಕ್ಷಮ್ ಎತ್ತಣದು ಅವಂಗೆ==[ಮುನಿಯು ಅರ್ಜುನನ ಮಾತಿಗೆ ನಸುನಗುತ್ತಾ, '(ಮನೆ ಮಾಡಿದರೆ ಅದರ ವ್ಯವಸ್ಥೆಗೆ ಮದುವೆ ಮಾಡಿಕೊಳ್ಳಬೇಕು, ಅದರಿಂದ), ಹೆಣ್ಣನ್ನು ಸ್ವೀಕರಿಸುವುದು ದುಃಖಕ್ಕೆ ಕಾರಣವಲ್ಲವೇ! ಅದನ್ನು/ ಸಂಸಾರವನ್ನು ಪೋಷಿಸುವ ಮನುಜನು ಕೃತ್ಯಾಕೃತ್ಯವನ್ನು ಲೆಕ್ಕಿಸುವನೆ! ಬಳಿಕ ಮೋಕ್ಷವು ಅವನಿಗೆ ಎಲ್ಲಿ ಲಭಿಸುವುದು!];; ಕನಸಿನ ಸುಖಕ್ಕೆ ಎಳಸಿ ಬಿದ್ದಪನು ಅಧೋಗತಿಗೆ ಜನನ ಮರಣಂಗಳ ಬಳಲ್ಕೆ ಬೆಂಬಿಡದೆ ಇಹುದು ವನಿತೆಯರ ತೊಡಕಿಂದೆ ಕೆಡುತಿಹುದು ಲೋಕಂ ಅದನು ಏವಣ್ಣಿಸುವೆನು ಎಂದನು=[ಅಲ್ಪವಾದ ಕನಸಿನ ಸುಖಕ್ಕೆ ಆಸೆಪಟ್ಟು ಅಧೋಗತಿಗೆ ಬೀಳುವನು. ಜನನ ಮರಣಗಳ ಬಳಲಿಕೆ ಬೆನ್ನುಬಿಡದೆ ಇರುವುದು. ವನಿತೆಯರ ಸಮಸ್ಯೆಯಿಂದ ಲೋಕವು ಕೆಡುತ್ತಿರುವುದು. ಅದನ್ನು ಏನೆಂದು ವರ್ಣಿಸಲಿ,ಎಂದನು].
  • ತಾತ್ಪರ್ಯ:ಮುನಿಯು ಅರ್ಜುನನ ಮಾತಿಗೆ ನಸುನಗುತ್ತಾ, '(ಮನೆ ಮಾಡಿದರೆ ಅದರ ವ್ಯವಸ್ಥೆಗೆ ಮದುವೆ ಮಾಡಿಕೊಳ್ಳಬೇಕು, ಅದರಿಂದ), ಹೆಣ್ಣನ್ನು ಸ್ವೀಕರಿಸುವುದು ದುಃಖಕ್ಕೆ ಕಾರಣವಲ್ಲವೇ! ಅದನ್ನು/ ಸಂಸಾರವನ್ನು ಪೋಷಿಸುವ ಮನುಜನು ಕೃತ್ಯಾಕೃತ್ಯವನ್ನು ಲೆಕ್ಕಿಸುವನೆ! ಬಳಿಕ ಮೋಕ್ಷವು ಅವನಿಗೆ ಎಲ್ಲಿ ಲಭಿಸುವುದು! ಅಲ್ಪವಾದ ಕನಸಿನ ಸುಖಕ್ಕೆ ಆಸೆಪಟ್ಟು ಅಧೋಗತಿಗೆ ಬೀಳುವನು. ಜನನ ಮರಣಗಳ ಬಳಲಿಕೆ ಬೆನ್ನುಬಿಡದೆ ಇರುವುದು. ವನಿತೆಯರ ಸಮಸ್ಯೆಯಿಂದ ಲೋಕವು ಕೆಡುತ್ತಿರುವುದು. ಅದನ್ನು ಏನೆಂದು ವರ್ಣಿಸಲಿ,ಎಂದನು.
  • (ಪದ್ಯ-೨೮)

ಪದ್ಯ:-:೨೯:

ಸಂಪಾದಿಸಿ

ಮಡದಿ ಮಗ ಮೊಮ್ಮಂದಿರಂ ಸಾಗಿಸುವೆನೆಂತೊ |
ಪೊಡವಿ ಬೆಳಸಾಳ್ಕೆ ಸಿರಿ ಕೀಲಾರಮನೆಗಳಿಸಿ |
ದೊಡವೆಗಳ ನಾರೈವೆನೆಂತೊ ವೇದಾದಿ ಶಾಸ್ತ್ರಂಗಳಂ ಪಠನದಿಂದೆ ||
ಕಡೆಗಾಣಿಸುವೆನೆಂತೊ ತಾನೆಂದು ಬಾಳುವೆಗೆ |
ಬಿಡದೆ ಚಿಂತಿಸಿ ತಪಕೊಳಗಾಗಿ ಧರ್ಮದೊಳ್ |
ನಡೆಯದಾಶಾಪಾಶದಿಂದೆ ಸಂಸಾರದೊಳ್ ಕೆಡುತಿಹುದು ಜಗವೆಂದನು ||29||

ಪದವಿಭಾಗ-ಅರ್ಥ:
ಮಡದಿ ಮಗ ಮೊಮ್ಮಂದಿರಂ ಸಾಗಿಸುವೆನೆಂತೊ ಪೊಡವಿ ಬೆಳಸು ಆಳ್ಕೆ (ಆಡಳಿತ/ ಮೇಲುನಿಗ)) ಸಿರಿ ಕೀಲಾರ (ಹೈನುಶಾಲೆ,ಕೊಟ್ಟಿಗೆ) ಮನೆ, ಗಳಿಸಿದ ಒಡವೆಗಳನು ಆರೈವೆನೆಂತೊ,==[ಬಕದಾಲ್ಬ್ಯನು, 'ಮಡದಿ ಮಗ ಮೊಮ್ಮಕ್ಕಳ ಸಂಸಾರವನ್ನು ಹೇಗೆ ಸಾಗಿಸುವೆನೋ! ಭೂಮಿ, ಬೆಳೆ, ಮೇಲುನಿಗ, ಸಿರಿ, ಕೊಟ್ಟಿಗೆ, ಮನೆ, ಗಳಿಸಿದ ಒಡವೆಗಳನ್ನು ಹೇಗೆ ಕಾಪಡುವುದೊ!,];; ವೇದಾದಿ ಶಾಸ್ತ್ರಂಗಳಂ ಪಠನದಿಂದೆ ಕಡೆಗಾಣಿಸುವೆನು ಎಂತೊ, ತಾನೆಂದು ಬಾಳುವೆಗೆ ಬಿಡದೆ ಚಿಂತಿಸಿ ತಪಕೊಳಗಾಗಿ ಧರ್ಮದೊಳ್ ನಡೆಯದೆ ಆಶಾಪಾಶದಿಂದೆ ಸಂಸಾರದೊಳ್ ಕೆಡುತಿಹುದು ಜಗವೆಂದನು==[ವೇದಾದಿ ಶಾಸ್ತ್ರಗಳ ಪಠಣಗಳನ್ನು ಮಾಡಿ ಮುಗಿಸುವುದು ಎಂತೊ!, ಹೀಗೆ ತಾನು ಎಂದು ಯೋಚಿಸಿ, ಸಂಸಾರ ಬಾಳಿನ ಬಗೆಗೆ ಬಿಡದೆ ಚಿಂತನೆಮಾಡಿ, ಕೊನೆಗೆ ತಪಸ್ಸಿಗೆ ಒಳಗಾಗಿರುವೆನು. ಧರ್ಮದಲ್ಲಿ ನಡೆಯದೆ ಆಶಾಪಾಶದಿಂದ ಈ ಸಂಸಾರ ಭೊಗದಲ್ಲಿ ಜಗತ್ತು ಕೆಡುತ್ತಿರುವುದು,' ಎಂದನು ].
  • ತಾತ್ಪರ್ಯ:ಬಕದಾಲ್ಬ್ಯನು, 'ಮಡದಿ ಮಗ ಮೊಮ್ಮಕ್ಕಳ ಸಂಸಾರವನ್ನು ಹೇಗೆ ಸಾಗಿಸುವೆನೋ! ಭೂಮಿ, ಬೆಳೆ, ಮೇಲುನಿಗ, ಸಿರಿ, ಕೊಟ್ಟಿಗೆ, ಮನೆ, ಗಳಿಸಿದ ಒಡವೆಗಳನ್ನು ಹೇಗೆ ಕಾಪಡುವುದೊ!, ವೇದಾದಿ ಶಾಸ್ತ್ರಗಳ ಪಠಣಗಳನ್ನು ಮಾಡಿ ಮುಗಿಸುವುದು ಎಂತೊ!, ಹೀಗೆ ತಾನು ಎಂದು ಯೋಚಿಸಿ, ಸಂಸಾರ ಬಾಳಿನ ಬಗೆಗೆ ಬಿಡದೆ ಚಿಂತನೆಮಾಡಿ, ಕೊನೆಗೆ ತಪಸ್ಸಿಗೆ ಒಳಗಾಗಿರುವೆನು. ಧರ್ಮದಲ್ಲಿ ನಡೆಯದೆ ಆಶಾಪಾಶದಿಂದ ಈ ಸಂಸಾರ ಭೊಗದಲ್ಲಿ ಜಗತ್ತು ಕೆಡುತ್ತಿರುವುದು,' ಎಂದನು.
  • (ಪದ್ಯ-೨೯)

ಪದ್ಯ:-:೩೦:

ಸಂಪಾದಿಸಿ

ಅಂತಾಗಿ ದಾರಸಂಗ್ರಹ ಪರ್ಣಶಾಲೆಗಳ |
ನಿಂತೊಲ್ಲದಚಿರ ಕಾಲದೊಳಳಿವಕಾಯಮಿದ |
ಕೆಂತಿರ್ದೊಡೇನೆಂದು ತಲೆಗೆ ತರಗೆಲೆವಿಡಿದು ತಾಂ ಪೊತ್ತುಗಳವೆನೆನಲು ||
ಕುಂತೀಸುತಂ ಮತ್ತೆ ಕೇಳ್ದನಲ್ಪಾಯುಷ್ಯ |
ಮಂ ತಳೆವುದೀಮಹಾತ್ಮರಿಗೇಕೆ ಶಿವಶಿವಾ |
ಪಿಂತೇ ಸುದಿನಮಾದುದೆಂದಿನಿಂದೀಪತ್ರವಿಹುದು ಮಸ್ತಕದೊಳೆಂದು ||30||

ಪದವಿಭಾಗ-ಅರ್ಥ:
ಅಂತಾಗಿ ದಾರಸಂಗ್ರಹ ಪರ್ಣಶಾಲೆಗಳನು ಇಂತು ಒಲ್ಲದ ಚಿರಕಾಲದೊಳು ಅಳಿವ ಕಾಯಂ ಇದಕೆ ಎಂತಿರ್ದೊಡೆ ಏನೆಂದು ತಲೆಗೆ ತರಗೆಲೆ ವಿಡಿದು ತಾಂ ಪೊತ್ತುಗಳವೆನು ಎನಲು==[ಬಕದಾಲ್ಬ್ಯನು,'ಆದ್ದರಿಂದ ಪತ್ನಿ ವಸ್ತುಗಳ ಸಂಗ್ರಹ, ಪರ್ಣಶಾಲೆಗಳನ್ನು ಹೀಗೆ ಬೇಡವೆಂದು, ಚಿರಕಾಲದಲ್ಲಿ ನಾಶವಾಗುವ ಈ ದೇಹಕ್ಕೆ ಎನಾದರೇನು ಎಂದು ತಲೆಗೆ ನೆರಳಿಗಾಗಿ ತರಗೆಲೆಹಿಡಿದುಕೊಂಡು ತಾನು ಹೊತ್ತನ್ನು ಕಳೆಯುವೆನು,' ಎನ್ನಲು, ];; ಕುಂತೀಸುತಂ ಮತ್ತೆ ಕೇಳ್ದನು ಅಲ್ಪಾಯುಷ್ಯಮಂ ತಳೆವುದು ಈ ಮಹಾತ್ಮರಿಗೆ ಏಕೆ ಶಿವಶಿವಾ, ಪಿಂತ ಏಸುದಿನಂ ಆದುದು ಎಂದಿನಿಂದ ಈಪತ್ರವಿಹುದು ಮಸ್ತಕದೊಳೆಂದು=[ಕುಂತೀಸುತ ಅರ್ಜುನನು ಮತ್ತೆ ಕೇಳಿದನು, ಅಲ್ಪಾಯುಷ್ಯವನ್ನು ಪಡೆದಿರುವುದು ಈ ಮಹಾತ್ಮರಿಗೆ ಏಕೆ ಶಿವಶಿವಾ! ಹಿಂದೆ ಎಷ್ಟು ದಿನ (ಆಯಿತು)ಕಳೆದಿರಿ? ಎಂದಿನಿಂದ ಈ ಪತ್ರವು ನಿಮ್ಮ ತಲೆಯಮೇಲೆ ಇರುವುದು?,' ಎಂದನು].
  • ತಾತ್ಪರ್ಯ:ಬಕದಾಲ್ಬ್ಯನು,'ಆದ್ದರಿಂದ ಪತ್ನಿ ವಸ್ತುಗಳ ಸಂಗ್ರಹ, ಪರ್ಣಶಾಲೆಗಳನ್ನು ಹೀಗೆ ಬೇಡವೆಂದು, ಚಿರಕಾಲದಲ್ಲಿ ನಾಶವಾಗುವ ಈ ದೇಹಕ್ಕೆ ಎನಾದರೇನು ಎಂದು ತಲೆಗೆ ನೆರಳಿಗಾಗಿ ತರಗೆಲೆಹಿಡಿದುಕೊಂಡು ತಾನು ಹೊತ್ತನ್ನು ಕಳೆಯುವೆನು,' ಎನ್ನಲು, ಕುಂತೀಸುತ ಅರ್ಜುನನು ಮತ್ತೆ ಕೇಳಿದನು, ಅಲ್ಪಾಯುಷ್ಯವನ್ನು ಪಡೆದಿರುವುದು ಈ ಮಹಾತ್ಮರಿಗೆ ಏಕೆ ಶಿವಶಿವಾ! ಹಿಂದೆ ಎಷ್ಟು ದಿನ (ಆಯಿತು)ಕಳೆದಿರಿ? ಎಂದಿನಿಂದ ಈ ಪತ್ರವು ನಿಮ್ಮ ತಲೆಯಮೇಲೆ ಇರುವುದು?,' ಎಂದನು.
  • (ಪದ್ಯ-೩೦)

ಪದ್ಯ:-:೩೧:

ಸಂಪಾದಿಸಿ

ಅತ್ಯಲ್ಪರಾಗಿ ಮಾರ್ಕಂಡೇಯ ರೋಮಶರ್ |
ಪ್ರತ್ಯೇಕರಳಿದರಿವರೆನಿಬರೆಂದರಿಯೆ ನಾಂ |
ಸತ್ಯಲೋಕವನಾಳ್ದರಿಪ್ಪತ್ತು ಕಮಲಸಂಭವರಿನಿತರೊಳ್ ಮಡಿದರು ||
ಕ್ಷಿತ್ಯಾದಿಗಳ್ ^* ಜಲಮಯಂಗಳಪ್ಪಂದು ಆಧಿ |
ಪತ್ಯದ ಚತುರ್ವದನರವಸಾನವಾದಂದ*$ |
ನಿತ್ಯಮಾಗಿಹವು ಪದವಿಗಳೆಂದು ತಾನಿಲ್ಲಿ ಬಯಲೊಳಿದ್ದಪೆನೆಂದನು ||31||

  • (^ಸೃಷ್ಟಿಗಳ್ವಾರಿಮಯ ಮಹ|ವಾಧಿಪತ್ಯದ)
  • ($ವಾದಂದು(ವಾಯ್ತಿಂತ)
ಪದವಿಭಾಗ-ಅರ್ಥ:
ಅತ್ಯಲ್ಪರಾಗಿ ಮಾರ್ಕಂಡೇಯ ರೋಮಶರ್ ಪ್ರತ್ಯೇಕರು ಅಳಿದರು ಇವರು ಅನಿಬರೆಂದು ಅರಿಯೆ ನಾಂ ಸತ್ಯಲೋಕವನು ಆಳ್ದರು ಇಪ್ಪತ್ತು ಕಮಲಸಂಭವರು ಇನಿತರೊಳ್ ಮಡಿದರು,==[ಚಿರಂಜೀವಿಗಳು ಎನಿಸಿಕೊಂಡ ಮಾರ್ಕಂಡೇಯ ರೋಮಶರು ಇತರರು ಅತ್ಯಲ್ಪಕಾಲ ಇದ್ದು ಮೃತರಾದರು. ರೋಮಶಾದಿಗಳು ಎಷ್ಟು ಜನ ಆದರೆಂದು ಅರಿಯೆನು; ನಾನು ಸತ್ಯಲೋಕವನ್ನು ಆಳಿದ ಇಪ್ಪತ್ತು ಕಮಲಸಂಭವರು/ ಬ್ರಹ್ಮರು ಇಷ್ಟರೊಳಗೆ ಮಡಿದರು];; ಕ್ಷಿತ್ಯಾದಿಗಳ್ (ಕ್ಷತಿ: ಭೂಮಿ) ಜಲಮಯಂಗಳು ಅಪ್ಪಂದು ಆಧಿಪತ್ಯದ ಚತುರ್ವದನರು ಅವಸಾನವಾದ ಅಂದು, ಅನಿತ್ಯಮಾಗಿಹವು ಪದವಿಗಳು ಎಂದು ತಾನಿಲ್ಲಿ ಬಯಲೊಳು ಇದ್ದಪೆನು ಎಂದನು==[ಭೂಮಿಗಳು ಹುಟ್ಟಿ ಜಲಮಯ ಪ್ರಳಯಗಳು ಆಗುವಾಗ ಆಧಿಪತ್ಯ ಮಾಡುವ ಚತುರ್ವದನ ಬ್ರಹ್ಮರು ನಾಶವಾದ ಆ ಕಾಲವನ್ನು ನೋಡಿದಾಗ, ದೊಡ್ಡ ಪದವಿಗಳು ಸಹ ಅನಿತ್ಯಮಾಗಿರುವುವು, ಎಂದು ತಿಳಿದುಕೊಂಡು ತಾನು ಇಲ್ಲಿ ಬಯಲಲ್ಲಿ ಇರುವೆನು,' ಎಂದನು].
  • ತಾತ್ಪರ್ಯ:ಯುಗ ಯುಗಗಳಲ್ಲಿ ಮತ್ತೆ ಮತ್ತೆ ಬರುವ ಚಿರಂಜೀವಿಗಳು ಎನಿಸಿಕೊಂಡ ಮಾರ್ಕಂಡೇಯ ರೋಮಶರು ಇತರರು ಅತ್ಯಲ್ಪಕಾಲ ಇದ್ದು ಮೃತರಾದರು. ರೋಮಶಾದಿಗಳು ಎಷ್ಟು ಜನ ಆದರೆಂದು ಅರಿಯೆನು; ನಾನು ಸತ್ಯಲೋಕವನ್ನು ಆಳಿದ ಇಪ್ಪತ್ತು ಕಮಲಸಂಭವರು/ ಬ್ರಹ್ಮರು, ನಾನು ಜೀವಿಸಿರವ ಇಷ್ಟರೊಳಗೆ ಮಡಿದರು. ಭೂಮಿಗಳು ಹುಟ್ಟಿ ಜಲಮಯ ಪ್ರಳಯಗಳು ಆಗುವಾಗ ಆಧಿಪತ್ಯ ಮಾಡುವ ಚತುರ್ವದನ ಬ್ರಹ್ಮರು ನಾಶವಾದ ಆ ಕಾಲವನ್ನು ನೋಡಿದಾಗ, ದೊಡ್ಡ ಪದವಿಗಳು ಸಹ ಅನಿತ್ಯಮಾಗಿರುವುವು, ಎಂದು ತಿಳಿದುಕೊಂಡು ತಾನು ಇಲ್ಲಿ ಬಯಲಲ್ಲಿ ಇರುವೆನು,' ಎಂದನು.
  • (ಪದ್ಯ-೩೧)

ಪದ್ಯ:-:೩೨:

ಸಂಪಾದಿಸಿ

ಬಾರಿಬಾರಿಗೆ ಜಲಪ್ರಳಯಂಗಳಾಗಲ್ಕೆ |
ಭೂರಿಶಾಖೆಗಳಿಂದೆ ತಳಿತೆಸೆವುದೊಂದು ವಟ |
ಭೂರುಹವದರದೊಂದೆಲೆಯಮೇಲೆ ತನ್ನ ಮೃದು ಪದಕಮಲದುಂಗುಟವನು ||
ಚಾರುತರ ಕರ ತಾಮರಸದಿಂದೆ ಪಿಡಿದು ವದ |
ನಾರವಿಂದದೊಳಿಟ್ಟು ನಗುತಳುತೆ ಲೀಲೆಯಿಂ |
ದೋರಂತೆ ಮಲಗಿಕೊಂಡಿಹನೋರ್ವಬಾಲಕಂ ತಾನಾತನಂ ಕಂಡೆನು ||32||

ಪದವಿಭಾಗ-ಅರ್ಥ:
ಬಾರಿಬಾರಿಗೆ ಜಲಪ್ರಳಯಂಗಳು ಆಗಲ್ಕೆ ಭೂರಿಶಾಖೆಗಳಿಂದೆ ತಳಿತು ಎಸೆವುದು ಒಂದು ವಟ ಭೂರುಹವು (ಆಲದಮರ) ಅದರದೊಂದು ಎಲೆಯ ಮೇಲೆ ತನ್ನ ಮೃದು ಪದಕಮಲದ ಉಂಗುಟವನು ಚಾರುತರ ಕರತಾಮರಸದಿಂದೆ (ಕರ:ಕೈ;ತಾಮರಸ: ಕಮಲ) ಪಿಡಿದು==[ಮುನಿಯು, 'ಅನೇಕ ಬಾರಿ ಜಲಪ್ರಳಯವಾಗಿದ್ದು, ಬಾರಿ ಬಾರಿಗೆ ಜಲಪ್ರಳಯಗಳು ಆದಾಗಲೂ ಒಂದು ಆಲದಮರವು ಅನೇಕ ಶಾಖೆ/ರೆಂಬೆಗಳಿಂದ ಚಿಗುರಿಕೊಂಡು ಶೋಭಿಸುವುದು. ಅದರ ಒಂದು ಎಲೆಯ ಮೇಲೆ ತನ್ನ ಮೃದುವಾದ ಕಮಲದಂತಿರುವ ಪಾದದ ಉಂಗುಟವನ್ನು ಸುಂದರ ಕಮಲದಂತಿರುವ ಕೈಯಿಂದ ಹಿಡಿದು];; ವದನಾರವಿಂದದೊಳು (ವದನ:ಮುಖ ಅರವಿಂದ:ಕಮಲ) ಇಟ್ಟು ನಗುತ ಅಳುತೆ ಲೀಲೆಯಿಂದ ಓರಂತೆ (ಅಂಗಾತ?) ಮಲಗಿಕೊಂಡು ಇಹನು ಓರ್ವ ಬಾಲಕಂ ತಾನು ಆತನಂ ಕಂಡೆನು==[ಕಮಲದಂತಿರುವ ಮುಖದಲ್ಲಿ/ ಬಾಯಲಗಲ್ಲಿ ಇಟ್ಟು ನಗುತ್ತಾ, ಅಳುತ್ತಾ ಲೀಲೆಯಿಂದ ಅಂಗಾತ ಮಲಗಿಕೊಂಡು ಒಬ್ಬ ಬಾಕನು ಇರುವನು; ತಾನು ಆತನನ್ನು ಕಂಡೆನು, ಎಂದನು].
  • ತಾತ್ಪರ್ಯ:ಮುನಿಯು, 'ಅನೇಕ ಬಾರಿ ಜಲಪ್ರಳಯವಾಗಿದ್ದು, ಬಾರಿ ಬಾರಿಗೆ ಜಲಪ್ರಳಯಗಳು ಆದಾಗಲೂ ಒಂದು ಆಲದಮರವು ಅನೇಕ ಶಾಖೆ/ರೆಂಬೆಗಳಿಂದ ಚಿಗುರಿಕೊಂಡು ಶೋಭಿಸುವುದು. ಅದರ ಒಂದು ಎಲೆಯ ಮೇಲೆ ತನ್ನ ಮೃದುವಾದ ಕಮಲದಂತಿರುವ ಪಾದದ ಉಂಗುಟವನ್ನು ಸುಂದರ ಕಮಲದಂತಿರುವ ಕೈಯಿಂದ ಹಿಡಿದು ಕಮಲದಂತಿರುವ ಮುಖದಲ್ಲಿ/ ಬಾಯಲಗಲ್ಲಿ ಇಟ್ಟು ನಗುತ್ತಾ, ಅಳುತ್ತಾ ಲೀಲೆಯಿಂದ ಅಂಗಾತ ಮಲಗಿಕೊಂಡು ಒಬ್ಬ ಬಾಕನು ಇರುವನು; ತಾನು ಆತನನ್ನು ಕಂಡೆನು', ಎಂದನು.
  • (ಪದ್ಯ-೩೨)

ಪದ್ಯ:-:೩೩:

ಸಂಪಾದಿಸಿ

ಅಂದು ಸಲಿಲದೊಳಾಳ್ದ ತನಗಾಲದೆಲೆಯಮೇ |
ಲೊಂದೊಂದುಬಾರಿ ಬಾಲಕನಾಗಿ ಮೈದೋರಿ |
ನಿಂದು ಮಾತಾಡಿಸದೆ ನೋಡದೆ ವಿಚಾರಿಸದೆ ದೂರದೂರದೊಳಿರ್ಪನು ||
ಇಂದು ನಿಮ್ಮೈವರಂ ಕೂಡಿಕೊಂಡಿಲ್ಲಿಗೈ |
ತಂದು ಕರುಣಿಸಿದನೀಹರಿ ಕೃಷ್ಣರೂಪದಿಂ |
ಸಂದುದಿನ್ನೀತನೆ ಸದಾಶ್ರಯಂ ಮರೆವುಗುವೊಡೆನಗೆಂದು ಮುನಿ ನುಡಿದನು ||33||

ಪದವಿಭಾಗ-ಅರ್ಥ:
ಅಂದು ಸಲಿಲದೊಳು ಆಳ್ದ ತನಗೆ ಆಲದೆಲೆಯ ಮೇಲೆ ಒಂದೊಂದು ಬಾರಿ ಬಾಲಕನಾಗಿ ಮೈದೋರಿ ನಿಂದು ಮಾತಾಡಿಸದೆ ನೋಡದೆ ವಿಚಾರಿಸದೆ ದೂರದೂರದೊಳು ಇರ್ಪನು==[ಅಂದು ಜಲಪ್ರಳಯ ಕಾಲದಲ್ಲಿ ನೀರಿನಲ್ಲಿ ಬದುಕಿದ್ದ (?) ತನಗೆ ಆಲದೆಲೆಯ ಮೇಲೆ ಒಂದೊಂದು ಬಾರಿ ಬಾಲಕನಾಗಿ ಕಾಣಿಸಿಕೊಂಡವನು ನಿಂತು ಮಾತಾಡಿಸದೆ, ನೋಡದೆ, ವಿಚಾರಿಸದೆ, ದೂರದೂರದಲ್ಲಿ ಇದ್ದನು.];; ಇಂದು ನಿಮ್ಮ ಐವರಂ ಕೂಡಿಕೊಂಡು ಇಲ್ಲಿಗ ಐತಂದು ಕರುಣಿಸಿದನು ಈ ಹರಿ ಕೃಷ್ಣರೂಪದಿಂ ಸಂದುದು ಇನ್ನು ಈತನೆ ಸದಾಶ್ರಯಂ ಮರೆವುಗುವೊಡೆ ಎನಗೆಂದು ಮುನಿ ನುಡಿದನು==[ಇಂದು ನಿಮ್ಮ ಐದುಜನರನ್ನು ಕೂಡಿಕೊಂಡು, ಈ ಹರಿ ಕೃಷ್ಣರೂಪದಿಂದ ಇಲ್ಲಿಗೆ ಬಂದು ಕರುಣಿಸಿದನು. ನನ್ನ ಬಯಕೆ ಸಂದಿತು/ ಈಡೇರಿತು. ಇನ್ನು ಈತನೆ ನನಗೆ ಮರೆಹೊಗಲು ಸದಾಶ್ರಯನು, ಎಂದು ಮುನಿ ಹೇಳಿದನು].
  • ತಾತ್ಪರ್ಯ:ಅಂದು ಜಲಪ್ರಳಯ ಕಾಲದಲ್ಲಿ ನೀರಿನಲ್ಲಿ ಬದುಕಿದ್ದ (?) ತನಗೆ ಆಲದೆಲೆಯ ಮೇಲೆ ಒಂದೊಂದು ಬಾರಿ ಬಾಲಕನಾಗಿ ಕಾಣಿಸಿಕೊಂಡವನು ನಿಂತು ಮಾತಾಡಿಸದೆ, ನೋಡದೆ, ವಿಚಾರಿಸದೆ, ದೂರದೂರದಲ್ಲಿ ಇದ್ದನು. ಇಂದು ನಿಮ್ಮ ಐದುಜನರನ್ನು ಕೂಡಿಕೊಂಡು, ಈ ಹರಿ ಕೃಷ್ಣರೂಪದಿಂದ ಇಲ್ಲಿಗೆ ಬಂದು ಕರುಣಿಸಿದನು. ನನ್ನ ಬಯಕೆ ಸಂದಿತು/ ಈಡೇರಿತು. ಇನ್ನು ಈತನೆ ನನಗೆ ಮರೆಹೊಗಲು ಸದಾಶ್ರಯನು, ಎಂದು ಮುನಿ ಹೇಳಿದನು.
  • (ಪದ್ಯ-೩೩)XXVII

ಪದ್ಯ:-:೩೪:

ಸಂಪಾದಿಸಿ

ಬಕದಾಲ್ಭ್ಯಮುನಿ ಬಳಿಕ ಕೃಷ್ಣನಂ ನೋಡಿ ಬಾ |
ಲಕನಾದ ರೂಪಮಂ ವಟಪತ್ರಶಯನದೊಳ್ |
ಸಕಲ ಜಗಮಳಿವಂದು ತನಗೆ ಕಾಣಿಸಿದೆಯಲ್ಲದೆ ರಮಾರಮಣನಾಗಿ ||
ಪ್ರಕಟಿತದ ಧರ್ಮ ಸಂತತಿಗಳಂ ಪಾಲಿಸುವ |
ಸುಕುಮಾರ ಮೂರ್ತಿಯಂ ಕೃಪೆಯಿಂದೆ ನಿನ್ನ ಸೇ |
ವಕ ಜನಕೆ ತೋರುವಂತೆನಗೆ ತೋರಿದುದಿಲ್ಲ ತಾನಿನ್ನು ಬಿಡೆನೆಂದನು ||34||

ಪದವಿಭಾಗ-ಅರ್ಥ:
ಬಕದಾಲ್ಭ್ಯಮುನಿ ಬಳಿಕ ಕೃಷ್ಣನಂ ನೋಡಿ ಬಾಲಕನಾದ ರೂಪಮಂ ವಟಪತ್ರಶಯನದೊಳ್ ಸಕಲ ಜಗಂ ಅಳಿವಂದು ತನಗೆ ಕಾಣಿಸಿದೆಯಲ್ಲದೆ ರಮಾರಮಣನಾಗಿ==[ಬಕದಾಲ್ಭ್ಯಮುನಿಯು ಬಳಿಕ ಕೃಷ್ಣನನ್ನು ನೋಡಿ ಬಾಲಕನಾಗಿ ಇದ್ದಾಗಿನ ರೂಪವನ್ನು ವಟಪತ್ರಶಯನದಲ್ಲಿ/ ಎಲೆಯಮೇಲೆ ಮಲಗಿ ಸಕಲ ಜಗತ್ತೂ ನಾಶವಾದಾಗ ತನಗೆ ಕಾಣಿಸಿದೆ ಅಲ್ಲದೆ ಲಕ್ಷ್ಮಿಯ ಪತಿಯಾಗಿ];; ಪ್ರಕಟಿತದ ಧರ್ಮ ಸಂತತಿಗಳಂ ಪಾಲಿಸುವ ಸುಕುಮಾರ ಮೂರ್ತಿಯಂ ಕೃಪೆಯಿಂದೆ ನಿನ್ನ ಸೇವಕ ಜನಕೆ ತೋರುವಂತೆ ಎನಗೆ ತೋರಿದುದಿಲ್ಲ ತಾನು ಇನ್ನು ಬಿಡೆನೆಂದನು==[ಭೂಮಿಯ ಮೇಲಿನ ಧರ್ಮ ಸಂತತಿಗಳನ್ನು ಕಾಪಾಡುವ ಸುಕುಮಾರ ಮೂರ್ತಿಯನ್ನು ಕೃಪೆಯಿಂದೆ ನಿನ್ನ ಸೇವಕ ಜನರಿಗೆ/ ಭಕ್ತರಿಗೆ ತೋರುವಂತೆ ತನಗೆ ತೋರಿರಲಿಲ್ಲ. ತಾನು ಇನ್ನು ಕೃಷ್ಣನುನ್ನು ಬಿಡುವುದಿಲ್ಲ ಎಂದನು].
  • ತಾತ್ಪರ್ಯ:ಬಕದಾಲ್ಭ್ಯಮುನಿಯು ಬಳಿಕ ಕೃಷ್ಣನನ್ನು ನೋಡಿ ಬಾಲಕನಾಗಿ ಇದ್ದಾಗಿನ ರೂಪವನ್ನು ವಟಪತ್ರಶಯನದಲ್ಲಿ/ ಎಲೆಯಮೇಲೆ ಮಲಗಿ ಸಕಲ ಜಗತ್ತೂ ನಾಶವಾದಾಗ ತನಗೆ ಕಾಣಿಸಿದೆ ಅಲ್ಲದೆ ಲಕ್ಷ್ಮಿಯ ಪತಿಯಾಗಿ ಭೂಮಿಯ ಮೇಲಿನ ಧರ್ಮ ಸಂತತಿಗಳನ್ನು ಕಾಪಾಡುವ ಸುಕುಮಾರ ಮೂರ್ತಿಯನ್ನು ಕೃಪೆಯಿಂದೆ ನಿನ್ನ ಸೇವಕ ಜನರಿಗೆ/ ಭಕ್ತರಿಗೆ ತೋರುವಂತೆ ತನಗೆ ತೋರಿರಲಿಲ್ಲ. ತಾನು ಇನ್ನು ಕೃಷ್ಣನುನ್ನು ಬಿಡುವುದಿಲ್ಲ ಎಂದನು.
  • (ಪದ್ಯ-೩೪)

ಪದ್ಯ:-:೩೫:

ಸಂಪಾದಿಸಿ

ಜನಪ ಕೇಳಿಂತೆಂದು ಹರ್ಷದಿಂ ಬಕದಾಲ್ಭ್ಯ |
ಮುನಿ ಬಂದು ಕೃಷ್ಣನಂ ತಕ್ಕೈಸಿ ಮತ್ತೆ ಪಾ |
ರ್ಥನ ಕೂಡೆ ಪೇಳ್ದಂ ಸದಾವಾಸಕೀಹರಿಯ ದೇಹವಿದು ಗೇಹಮೆನಗೆ ||
ಅನುಕೂಲೆಯಾದ ಸತಿ ಮುಕ್ತಿಯಲ್ಲದೆ ಬೇರೆ |
ಮನೆಯಿಲ್ಲ ಮಡದಿಯಿಲ್ಲದಕಾಗಿ ತಾನೀಸು |
ದಿನಮಿಲ್ಲಿ ತಲೆಗೆ ತರಗೆಲೆವಿಡಿದುಕೊಂಡಿರ್ದೆನೆನಲರ್ಜುನಂ ನುಡಿದನು ||35||

ಪದವಿಭಾಗ-ಅರ್ಥ:
ಜನಪ ಕೇಳಿಂತೆಂದು ಹರ್ಷದಿಂ ಬಕದಾಲ್ಭ್ಯ ಮುನಿ ಬಂದು ಕೃಷ್ಣನಂ ತಕ್ಕೈಸಿ ಮತ್ತೆ ಪಾರ್ಥನ ಕೂಡೆ ಪೇಳ್ದಂ ಸದಾ ವಾಸಕೆ ಈ ಹರಿಯ ದೇಹವು ಇದು ಗೇಹಂ (ಮನೆ) ಎನಗೆ==[ಜನಪ ಜನಮೇಜಯನೇ ಕೇಳು, ಹೀಗೆ ಹೇಳಿ ಹರ್ಷದಿಂದ ಬಕದಾಲ್ಭ್ಯ ಮುನಿಯು ಬಂದು ಕೃಷ್ಣನನ್ನು ಉಪಚರಿಸಿ, ಮತ್ತೆ ಪಾರ್ಥನನೊಡನೆ ಹೇಳಿದನು,'ಸದಾ ವಾಸಕ್ಕೆ ನನಗೆ ಈ ಹರಿಯ ದೇಹವು ಇದು ಮನೆ];; ಅನುಕೂಲೆಯಾದ ಸತಿ ಮುಕ್ತಿಯಲ್ಲದೆ ಬೇರೆ ಮನೆಯಿಲ್ಲ ಮಡದಿಯಿಲ್ಲದಕಾಗಿ ತಾನು ಈಸು ದಿನಂ ಇಲ್ಲಿ ತಲೆಗೆ ತರಗೆಲೆವಿಡಿದುಕೊಂಡು ಇರ್ದೆನು ಎನಲು ಅರ್ಜುನಂ ನುಡಿದನು==[ಅನುಕೂಲೆಯಾದ ಸತಿಯು ಮುಕ್ತಿಯು ಅದಲ್ಲದೆ ಬೇರೆ ಸತಿಯಿಲ್ಲ. ಮನೆಯಿಲ್ಲ, ಮಡದಿಯಿಲ್ಲ, ಆದ ಕಾರಣ ತಾನು ಇಷ್ಟು ದಿನ ಇಲ್ಲಿ ತಲೆಗೆ ತರಗೆಲೆಯನ್ನು ಹಿಡಿದುಕೊಂಡು ಇದ್ದೆನು,' ಎನ್ನಲು ಅರ್ಜುನಂ ಹೇಳಿದನು ].
  • ತಾತ್ಪರ್ಯ:ಜನಪ ಜನಮೇಜಯನೇ ಕೇಳು, ಹೀಗೆ ಹೇಳಿ ಹರ್ಷದಿಂದ ಬಕದಾಲ್ಭ್ಯ ಮುನಿಯು ಬಂದು ಕೃಷ್ಣನನ್ನು ಉಪಚರಿಸಿ, ಮತ್ತೆ ಪಾರ್ಥನನೊಡನೆ ಹೇಳಿದನು,'ಸದಾ ವಾಸಕ್ಕೆ ನನಗೆ ಈ ಹರಿಯ ದೇಹವು, ಇದೇ ಮನೆ; ಅನುಕೂಲೆಯಾದ ಸತಿಯು ಮುಕ್ತಿಯು ಅದಲ್ಲದೆ ಬೇರೆ ಸತಿಯಿಲ್ಲ. ಮನೆಯಿಲ್ಲ, ಮಡದಿಯಿಲ್ಲ, ಆದ ಕಾರಣ ತಾನು ಇಷ್ಟು ದಿನ ಇಲ್ಲಿ ತಲೆಗೆ ತರಗೆಲೆಯನ್ನು ಹಿಡಿದುಕೊಂಡು ಇದ್ದೆನು,' ಎನ್ನಲು ಅರ್ಜುನಂ ಹೇಳಿದನು.
  • (ಪದ್ಯ-೩೫)

ಪದ್ಯ:-:೩೬:

ಸಂಪಾದಿಸಿ

ಇಪ್ಪತ್ತು ಕಮಲಜರ ಬಾಳ್ಕೆಯಂ ಕಂಡ ನಿಮ |
ಗೊಪ್ಪದೆ ಗುರುತ್ವಂ ಮಹಾಪುರುಷರೀಸುದಿನ |
ಮಿಪ್ಪುದಚ್ಚರಿಯಲಾ ಶಿವಶೀವಾ ನೀವೆ ನಮ್ಮೆಲ್ಲರ್ಗೆ ಪೂಜ್ಯರೆಂದು ||
ತಪ್ಪನೀಕ್ಷಿಸಲಾಗದರಸನ ಮಖಂ ಸಫಲ |
ಮಪ್ಪುದಿನ್ನೆಂದು ನರನಭಿನಂದಿಸಲ್ಕೆ ನಮ |
ಗರ್ಪಿಸದಿರೊಂದು ಗರ್ವದ ಭಾವಮಂ ಕೃಷ್ಣನಿರಲೆಂದು ಮುನಿನುಡಿದನು ||36||

ಪದವಿಭಾಗ-ಅರ್ಥ:
ಇಪ್ಪತ್ತು ಕಮಲಜರ ಬಾಳ್ಕೆಯಂ ಕಂಡ ನಿಮಗೆ ಒಪ್ಪದೆ ಗುರುತ್ವಂ ಮಹಾಪುರುಷರು ಈಸುದಿನಂ ಇಪ್ಪುದು ಅಚ್ಚರಿಯಲಾ ಶಿವಶೀವಾ ನೀವೆ ನಮ್ಮೆಲ್ಲರ್ಗೆ ಪೂಜ್ಯರೆಂದು==[ಇಪ್ಪತ್ತು ಬ್ರಹ್ಮರ ಬಾಳು-ಬದುಕನ್ನು ಕಂಡ ನಿಮಗೆ ಗುರುತ್ವವವು ನಿಜವಾಗಿ (ಒಪ್ಪದೆ) ಒಪ್ಪುವುದು; ನೀವು ಮಹಾಪುರುಷರು ಇಷ್ಟುದಿನಗಳವರೆಗೂ ಬದುಕಿರುವುದು ಅಚ್ಚರಿಯಲ್ಲವೇ! ಶಿವಶೀವಾ! ನೀವು ನಮ್ಮೆಲ್ಲರಿಗೂ ಪೂಜ್ಯರು ಎಂದು ];; ತಪ್ಪನು ಈಕ್ಷಿಸಲಾಗದು ಅರಸನ ಮಖಂ ಸಫಲ ಮಪ್ಪುದು ಇನ್ನು ಎಂದು ನರನು ಅಭಿನಂದಿಸಲ್ಕೆ ನಮಗೆ ಅರ್ಪಿಸದಿರು ಒಂದು ಗರ್ವದ ಭಾವಮಂ ಕೃಷ್ಣನಿರಲೆಂದು ಮುನಿನುಡಿದನು==[ತಪ್ಪನ್ನು ಎಣಿಸಬೇಡಿ, ನೀವು ಬಂದರೆ ಧರ್ಮರಾಜ ಅರಸನ ಯಜ್ಞವು ಸಫಲವಾಗುವುದು ಇನ್ನು,' ಎಂದುಅರ್ಜುನನು ಅಭಿನಂದಿಸಲು, ಮುನಿಯು, 'ಕೃಷ್ಣನು ಇರಲು, ನಮಗೆ ಒಂದು ಗರ್ವದ ಭಾವನೆಯನ್ನು ಉಂಟುಮಾಡುವ ಸ್ಥಾನ ಬೇಡ ಎಂದು,ಮುನಿಯು ಹೇಳಿದನು].
  • ತಾತ್ಪರ್ಯ:ಅರ್ಜುನ ಹೇಳಿದ: ಇಪ್ಪತ್ತು ಬ್ರಹ್ಮರ ಬಾಳು-ಬದುಕನ್ನು ಕಂಡ ನಿಮಗೆ ಗುರುತ್ವವವು ನಿಜವಾಗಿ (ಒಪ್ಪದೆ) ಒಪ್ಪುವುದು; ನೀವು ಮಹಾಪುರುಷರು ಇಷ್ಟುದಿನಗಳವರೆಗೂ ಬದುಕಿರುವುದು ಅಚ್ಚರಿಯಲ್ಲವೇ! ಶಿವಶೀವಾ! ನೀವು ನಮ್ಮೆಲ್ಲರಿಗೂ ಪೂಜ್ಯರು ಎಂದು ತಪ್ಪನ್ನು ಎಣಿಸಬೇಡಿ, ನೀವು ಬಂದರೆ ಧರ್ಮರಾಜ ಅರಸನ ಯಜ್ಞವು ಸಫಲವಾಗುವುದು ಇನ್ನು,' ಎಂದು ಅರ್ಜುನನು ಅಭಿನಂದಿಸಲು, ಮುನಿಯು, 'ಕೃಷ್ಣನು ಇರಲು, ನಮಗೆ ಒಂದು ಗರ್ವದ ಭಾವನೆಯನ್ನು ಉಂಟುಮಾಡುವ ಸ್ಥಾನ ಬೇಡ ಎಂದು,ಮುನಿಯು ಹೇಳಿದನು.
  • (ಪದ್ಯ-೩೬)

ಪದ್ಯ:-:೩೬:

ಸಂಪಾದಿಸಿ

ಸರ್ವವೇದವ ಮೂಲನೀ ಕೃಷ್ಣನಾವಂಗೆ |
ಗರ್ವಮಿನ್ನೆಲೆ ಪಾರ್ಥ ಕೇಳಾದೊಡೀ ಕಡಲ |
ಕುರ್ವದೊಳ್ ಗಾನಿರುತಿರಲ್ಮಹಾ ಕಲ್ಪದೊಳ್ ಪದ್ಮಾಭಿಧಾನದಿಂದೆ ||
ಉರ್ವನಾಲ್ವತ್ತನೆಯ ವಾರುಷಿಕನಾಗಿಹ ಚ |
ತುರ್ವದನನಿಲ್ಲಿಗೆ ಮರಾಳವಾಹನದೊಳ |
ಕ್ಕರ್ವೆರಸಿ ಬಂದೆನ್ನ ಮುಂದೆ ನಿಂದಾಗಳಧ್ಯಕ್ಷತೆಯೊಳಿಂತೆಂದನು ||37||

ಪದವಿಭಾಗ-ಅರ್ಥ:
ಸರ್ವವೇದವ ಮೂಲನು ಈ ಕೃಷ್ಣನು ಆವಂಗೆ (ಅವಂಗೆ?)ಗರ್ವಮಿನ್ನೆಲೆ ಪಾರ್ಥ ಕೇಳು ಆದೊಡೀ ಕಡಲ ಕುರ್ವದೊಳಗೆ ಆನಿರುತಿರಲು ಮಹಾ ಕಲ್ಪದೊಳ್ ಪದ್ಮ ಅಭಿಧಾನದಿಂದೆ==[ ಈ ಕೃಷ್ಣನು ಸರ್ವವೇದವ ಮೂಲನು. ಎಲೆ ಪಾರ್ಥ ಯಾವನಿಗೆ ಗರ್ವವು ಇಲ್ಲ! ಹಾಗಿದ್ದರೆ ಕೇಳು, 'ಈ ಕಡಲ ದ್ವೀಪದಲ್ಲಿ ನಾನು ಇರುತ್ತರಲು, ಮಹಾ ಕಲ್ಪದಲ್ಲಿ ಪದ್ಮ ಅಭಿಧಾನದಿಂದೆ ];; ಉರ್ವ ನಾಲ್ವತ್ತನೆಯ ವಾರುಷಿಕನು ಆಗಿಹ ಚತುರ್ವದನನು ಇಲ್ಲಿಗೆ ಮರಾಳವಾಹನದೊಳು ಅಕ್ಕರ್ ವೆರಸಿ ಬಂದು ಎನ್ನ ಮುಂದೆ ನಿಂದು ಆಗಳು ಅಧ್ಯಕ್ಷತೆಯೊಳು ಇಂತೆಂದನು==[ಭೂಲೋಕದ ನಾಲ್ವತ್ತನೆಯ ವಾರುಷಿಕ ಸಂಖ್ಯೆಯವನು ಆಗಿರುವ ಚತುರ್ಮುಖಬ್ರಹ್ಮನು ಇಲ್ಲಿಗೆ ಹಂಸವಾಹನದಲ್ಲಿ ಪ್ರೀತಿಯಿಂದ ಬಂದು ನನ್ನ ಮುಂದೆ ನಿಂತು, ಆಗ ಅಧ್ಯಕ್ಷತೆಯೊಳು/ಯಜಮಾನಿಕೆಯಿಂದ ಹೀಗೆ ಹೇಳಿದನು.].
  • ತಾತ್ಪರ್ಯ:ಈ ಕೃಷ್ಣನು ಸರ್ವವೇದವ ಮೂಲನು. ಎಲೆ ಪಾರ್ಥ ಯಾವನಿಗೆ ಗರ್ವವು ಇಲ್ಲ! ಹಾಗಿದ್ದರೆ ಕೇಳು, 'ಈ ಕಡಲ ದ್ವೀಪದಲ್ಲಿ ನಾನು ಇರುತ್ತಿರಲು, ಮಹಾ ಕಲ್ಪದಲ್ಲಿ ಪದ್ಮ ಅಭಿಧಾನದಿಂದೆ ಭೂಲೋಕದ ನಾಲ್ವತ್ತನೆಯ ವಾರುಷಿಕ ಸಂಖ್ಯೆಯವನು ಆಗಿರುವ ಚತುರ್ಮುಖಬ್ರಹ್ಮನು ಇಲ್ಲಿಗೆ ಹಂಸವಾಹನದಲ್ಲಿ ಪ್ರೀತಿಯಿಂದ ಬಂದು ನನ್ನ ಮುಂದೆ ನಿಂತು, ಆಗ ಅಧ್ಯಕ್ಷತೆಯೊಳು/ಯಜಮಾನಿಕೆಯಿಂದ ಹೀಗೆ ಹೇಳಿದನು.
  • (ಪದ್ಯ-೩೬)

ಪದ್ಯ:-:೩೮:

ಸಂಪಾದಿಸಿ

ಎಲೆವಿಪ್ರ ನೀನಾರದೇತಕೀ ಪರ್ಣಮಂ |
ತಲೆಗೆ ಪಿಡಿದಿಹೆ ಘೋರತಪಮೇಕದಂ ಬಯಕೆ |
ಸಲೆ ಮೆಚ್ಚಿ ಬಂದೆನಾ ಕಮಲಜನುಸಿರ್ದೊಡಿತ್ತಪೆನೀಗ ವರವನೆನಲು ||
ತೊಲಗತ್ತ ಸಾರ್‍ನಿನ್ನತೆರೆದ ನಾಲ್ಮೊಗದರಂ |
ಪಲಬರಂ ಕಂಡರಿವೆನೆನಗೀವುದಂ ಮತ್ತೆ |
ಕೆಲಬರ್ಗೆಕೊಟ್ಟು ಕಳೆ ಪೋಗೆಂದು ನಾನೆಂದೆನಾ ಪದ್ಮಸಂಭವನೊಳು ||38|||

ಪದವಿಭಾಗ-ಅರ್ಥ:
ಎಲೆ ವಿಪ್ರ ನೀನು ಆರು ಅದು ಏತಕೆ ಈ ಪರ್ಣಮಂ ತಲೆಗೆ ಪಿಡಿದಿಹೆ ಘೋರ ತಪಮೇಕೆ ಅದಂ ಬಯಕೆ ಸಲೆ ಮೆಚ್ಚಿ ಬಂದೆ ನಾ ಕಮಲಜನು ಉಸಿರ್ದೊಡೆಇತ್ತಪೆನು ಈಗ ವರವನು ಎನಲು==[ಆ ಬ್ರಹ್ಮನು,'ಎಲೆ ವಿಪ್ರನೇ ನೀನು ಯಾರು? ಅದು ಏತಕ್ಕಾಗಿ ಈ ಎಲೆಯನ್ನು ತಲೆಗೆ ಹಿಡಿದಿರುವೆ? ಘೋರ ತಪಸ್ಸನ್ನು ಏಕೆ ಮಾಡುತ್ತಿರುವೆ? ಅದನ್ನು/ ತಪಸ್ಸನ್ನು ಮೆಚ್ಚಿ ನಾನು ಮೆಚ್ಚಿ ಬಂದೆ. ನಿನ್ನ ದೊಡ್ಡ ಬಯಕೆ ಏನು? ನಾನು ಕಮಲಜನು/ಬ್ರಹ್ಮನು. ಹೇಳಿದರೆ ಈಗ ವರವನ್ನು ಕೊಡುವೆನು,' ಎನ್ನಲು];; ತೊಲಗತ್ತ ಸಾರ್‍ ನಿನ್ನ ತೆರೆದ ನಾಲ್ಮೊಗದರಂ ಪಲಬರಂ ಕಂಡು ಅರಿವೆನು ಎನಗೆ ಈವುದಂ ಮತ್ತೆ ಕೆಲಬರ್ಗೆ ಕೊಟ್ಟು ಕಳೆ ಪೋಗೆಂದು ನಾನು ಎನೆಂದೆನು ಆ ಪದ್ಮಸಂಭವನೊಳು==[ಮುನಿ ಬ್ರಹ್ಮನಿಗೆ ಹೇಳಿದ: ಇಲ್ಲಿಂದ ಸಾರಿಹೋಗು, ತೊಲಗು. ನಿನ್ನ ತೆರೆದ ನಾಲ್ಮೊಗದ ಬ್ರಹ್ಮರನ್ನು ಅನೇಕರನ್ನು ಕಂಡು ಗೊತ್ತಿದೆ. ನನಗೆ ಕೊಡುವುದನ್ನು ಮತ್ತೆ ಬಢರೆಕೆಲವರಿಗೆ ಕೊಟ್ಟು ಕಳೆದುಕೊ, ಹೋಗು ಎಂದು ಆ ಪದ್ಮಸಂಭವನಿಗೆ ನಾನು ಹೇಲಿದೆನು].
  • ತಾತ್ಪರ್ಯ:ಮುನಿಗೆ ಆ ಬ್ರಹ್ಮನು,'ಎಲೆ ವಿಪ್ರನೇ ನೀನು ಯಾರು? ಅದು ಏತಕ್ಕಾಗಿ ಈ ಎಲೆಯನ್ನು ತಲೆಗೆ ಹಿಡಿದಿರುವೆ? ಘೋರ ತಪಸ್ಸನ್ನು ಏಕೆ ಮಾಡುತ್ತಿರುವೆ? ಅದನ್ನು/ ತಪಸ್ಸನ್ನು ಮೆಚ್ಚಿ ನಾನು ಮೆಚ್ಚಿ ಬಂದೆ. ನಿನ್ನ ದೊಡ್ಡ ಬಯಕೆ ಏನು? ನಾನು ಕಮಲಜನು/ಬ್ರಹ್ಮನು. ಹೇಳಿದರೆ ಈಗ ವರವನ್ನು ಕೊಡುವೆನು,' ಎನ್ನಲು, ಮುನಿ ಬ್ರಹ್ಮನಿಗೆ ಹೇಳಿದ: ಇಲ್ಲಿಂದ ಸಾರಿಹೋಗು, ತೊಲಗು. ನಿನ್ನ ತೆರೆದ ನಾಲ್ಮೊಗದ ಬ್ರಹ್ಮರನ್ನು ಅನೇಕರನ್ನು ಕಂಡು ಗೊತ್ತಿದೆ. ನನಗೆ ಕೊಡುವುದನ್ನು ಮತ್ತೆ ಬೇರೆ ಕೆಲವರಿಗೆ ಕೊಟ್ಟು ಕಳೆದುಕೊ, ಹೋಗು ಎಂದು ಆ ಪದ್ಮಸಂಭವನಿಗೆ ನಾನು ಹೇಳಿದೆನು].
  • (ಪದ್ಯ-೩೮)

ಪದ್ಯ:-:೩೯:

ಸಂಪಾದಿಸಿ

ಆನೆಂದುದಂ ಕೇಳ್ದು ಗರ್ವದಿಂದಾ ಪದ್ಮ |
ಸೂನು ತೋರಿಸು ತನ್ನ ತೆರೆದ ನಾಲ್ಮೊಗದರಂ |
ನೀನೆಂದು ಪೇಳ್ವೆನ್ನಗಂ ಬಂದುದೊಂದು ಸುಳಿಗಾಳಿ ಧರೆ ನಡುಗುವಂತೆ ||
ನಾನಾದ್ರುಮಂಗಳಂಕಿತ್ತೆತ್ತಿ ಮಿಗೆ ಮೀರ್ದು |
ಬಾನೆಡೆಗೆ ನಮ್ಮಿರ್ವರಂ ಕೊಂಡಡರ್ದುದದ |
ನೇನೆಂಬೆನದ್ಭುತವೆನಲೆ ಪಾರ್ಥ ತೊಳಲಿನಿಂದಾಗಳಸಿತಜಾಂಡ ಶತಕೋಟಿಗಳನು ||39||

ಪದವಿಭಾಗ-ಅರ್ಥ:
ಆನು ಎಂದುದಂ ಕೇಳ್ದು ಗರ್ವದಿಂದ ಆ ಪದ್ಮಸೂನು ತೋರಿಸು ತನ್ನ ತೆರೆದ ನಾಲ್ಮೊಗದರಂ ನೀನೆಂದು ಪೇಳ್ವ ಅನ್ನಗಂ ಬಂದುದು ಒಂದು ಸುಳಿಗಾಳಿ ಧರೆ ನಡುಗುವಂತೆ==[ನಾನು ಹೇಳಿದುದನ್ನು ಕೇಳಿ ಗರ್ವದಿಂದ ಆ ಪದ್ಮಜ, ಬ್ರಹ್ಮನು, ತೋರಿಸು ತನ್ನ ತೆರೆದ ನಾಲ್ಕು ಮಖದ ಬ್ರಹ್ಮರನ್ನು ನೀನು ಎಂದು ಹೇಳಿದ; ತಕ್ಷಣ ಒಂದು ಸುಂಟರಗಾಳಿ ಭೂಮಿ ನಡುಗುವಂತೆ ಬಂದಿತು.];; ನಾನಾದ್ರುಮಂಗಳಂ ಕಿತ್ತೆತ್ತಿ ಮಿಗೆ ಮೀರ್ದು ಬಾನೆಡೆಗೆ ನಮ್ಮ ಈರ್ವರಂ ಕೊಂಡು ಅಡರ್ದುದು ಅದನು ಏನೆಂಬೆನು ಅದ್ಭುತವೆನು ಎಲೆ ಪಾರ್ಥ ತೊಳಲಿನಿಂದ ಆಗಳ್ ಅಸಿತಜಾಂಡ ಶತಕೋಟಿಗಳನು==[ಅದು ನಾನಾಮರಗಳನ್ನು ಕಿತ್ತು ಎತ್ತಿ ಇನ್ನೂ ಮೀರಿ ಆಕಾಶದ ಕಡೆಗೆ ನಮ್ಮ ಇಬ್ಬರನ್ನೂ ಎತ್ತಿಕೊಂಡು ಮೇಲೆಹಾರಿತು ಅದನ್ನು ಏನು ಹೇಳಲಿ, ಅದ್ಭುತವೆನು, ಎಲೆ ಪಾರ್ಥ ಆಕಾಶದಲ್ಲಿ ತೊಳಲಿ/ ಸುತ್ತಿಸಿ, ಆಗ ಶತಕೋಟಿಗಳನು ಅಜಾಂಡಗಳನ್ನು ತೋರಿಸಿತು.]
  • ತಾತ್ಪರ್ಯ:ಆನು ಎಂದುದಂ ಕೇಳ್ದು ಗರ್ವದಿಂದ ಆ ಪದ್ಮಸೂನು ತೋರಿಸು ತನ್ನ ತೆರೆದ ನಾಲ್ಮೊಗದರಂ ನೀನೆಂದು ಪೇಳ್ವ ಅನ್ನಗಂ ಬಂದುದು ಒಂದು ಸುಳಿಗಾಳಿ ಧರೆ ನಡುಗುವಂತೆ==[ನಾನು ಹೇಳಿದುದನ್ನು ಕೇಳಿ ಗರ್ವದಿಂದ ಆ ಪದ್ಮಜ, ಬ್ರಹ್ಮನು, ತೋರಿಸು ತನ್ನ ತೆರೆದ ನಾಲ್ಕು ಮಖದ ಬ್ರಹ್ಮರನ್ನು ನೀನು ಎಂದು ಹೇಳಿದ; ತಕ್ಷಣ ಒಂದು ಸುಂಟರಗಾಳಿ ಭೂಮಿ ನಡುಗುವಂತೆ ಬಂದಿತು. ಅದು ನಾನಾಮರಗಳನ್ನು ಕಿತ್ತು ಎತ್ತಿ ಇನ್ನೂ ಮೀರಿ ಆಕಾಶದ ಕಡೆಗೆ ನಮ್ಮ ಇಬ್ಬರನ್ನೂ ಎತ್ತಿಕೊಂಡು ಮೇಲೆಹಾರಿತು ಅದನ್ನು ಏನು ಹೇಳಲಿ, ಅದ್ಭುತವೆನು, ಎಲೆ ಪಾರ್ಥ ಆಕಾಶದಲ್ಲಿ ತೊಳಲಿ/ ಸುತ್ತಿಸಿ, ಆಗ ಶತಕೋಟಿಗಳನು ಅಜಾಂಡಗಳನ್ನು ತೋರಿಸಿತು.
  • (ಪದ್ಯ-೩೯)

ಪದ್ಯ:-:೪೦:

ಸಂಪಾದಿಸಿ

ತೀವಿದೌದುಂಬರ ದ್ರುಮದ ಫಲವಂತೆ ರಾ |
ಜೀವನಾಭನ ಮೆಯ್ಯೊಳಿಡಿದಿಹವಜಾಂಡಂಗ |
ಳಾ ವಾಯುವಶದಿಂದೆ ತೊಳಲಿದೆವು ಪೊಕ್ಕೆ ವೊಂದರೊಳಷ್ಟಮುಖ (ವದನದ)ವಿರಿಂಚಿ ||
ಜೀವಜಾಲದ ಸೃಷ್ಟಿಗೊಡೆಯನಾಗಿರ್ದವನು |
ನಾವಿರ್ವರುಂ ಬರಲ್ ಕಂಡು ವಿಸ್ಮಿತನಾಗಿ |
ನೀವದಾರೆತ್ತಣಿಂದೈದಿದಿರಿ ನಿಮ್ಮ ಪೆಸರೇನೆಂದು ಬೆಸಗೊಂಡನು ||40||

ಪದವಿಭಾಗ-ಅರ್ಥ:
ತೀವಿದ ಔದುಂಬರ ದ್ರುಮದ ಫಲವಂತೆ ರಾಜೀವನಾಭನ ಮೆಯ್ಯೊಳಿಡಿದಿಹವು ಅಜಾಂಡಂಗಳು ಆ ವಾಯುವಶದಿಂದೆ ತೊಳಲಿದೆವು ಪೊಕ್ಕೆ ವೊಂದರಳು ಅಳಷ್ಟಮುಖ (ವದನದ)ವಿರಿಂಚಿ==[ಔದುಂಬರ ಮರದಲ್ಲಿ ತುಂಬಿರುವ ಫಲವಂತೆ ಕಮಲನಾಭ ವಿಷ್ಣುವಿನ ಮೆಯ್ಯಲ್ಲಿ ಬ್ರಹ್ಮಾಂಡಂಗಳು ತುಂಬಿರುವುವು. ಆ ವಾಯುವಿನಲ್ಲಿ ಸಿಕ್ಕಿ ತೊಳಲಿದೆವು. ನಂತರ ಒಂದು ಬ್ರಹ್ಮಾಂಡದಲ್ಲಿ ಹೊಕ್ಕೆವು; ಅಲ್ಲಿ ಅಷ್ಟಮುಖದ ಬ್ರಹ್ಮನು ];; ಜೀವಜಾಲದ ಸೃಷ್ಟಿಗೊಡೆಯನು ಆಗಿರ್ದವನು ನಾವಿರ್ವರುಂ ಬರಲ್ ಕಂಡು ವಿಸ್ಮಿತನಾಗಿ ನೀವದು ಆರು ಎತ್ತಣಿಂದ ಐದಿದಿರಿ ನಿಮ್ಮ ಪೆಸರೇನೆಂದು ಬೆಸಗೊಂಡನು==[ಜೀವಜಾಲದ ಸೃಷ್ಟಿಗೆ ಒಡೆಯನು ಆಗಿದ್ದನು. ನಾವಿ ಇಬ್ಬರೂ ಬರಲು ಕಂಡು ವಿಸ್ಮಯದಿಂದ, ನೀವು ಅದು ಯಾರು? ಎಲ್ಲಿಂದ ಐಂದಿರಿ? ನಿಮ್ಮ ಹೆಸರೇನು ಎಂದು ಕೇಳಿದನು].
  • ತಾತ್ಪರ್ಯ:ಔದುಂಬರ ಮರದಲ್ಲಿ ತುಂಬಿರುವ ಫಲವಂತೆ ಕಮಲನಾಭ ವಿಷ್ಣುವಿನ ಮೆಯ್ಯಲ್ಲಿ ಬ್ರಹ್ಮಾಂಡಂಗಳು ತುಂಬಿರುವುವು. ಆ ವಾಯುವಿನಲ್ಲಿ ಸಿಕ್ಕಿ ತೊಳಲಿದೆವು. ನಂತರ ಒಂದು ಬ್ರಹ್ಮಾಂಡದಲ್ಲಿ ಹೊಕ್ಕೆವು; ಅಲ್ಲಿ ಅಷ್ಟಮುಖದ ಬ್ರಹ್ಮನು ಜೀವಜಾಲದ ಸೃಷ್ಟಿಗೆ ಒಡೆಯನು ಆಗಿದ್ದನು. ನಾವಿ ಇಬ್ಬರೂ ಬರಲು ಕಂಡು ವಿಸ್ಮಯದಿಂದ, ನೀವು ಅದು ಯಾರು? ಎಲ್ಲಿಂದ ಐಂದಿರಿ? ನಿಮ್ಮ ಹೆಸರೇನು ಎಂದು ಕೇಳಿದನು.
  • (ಪದ್ಯ-೪೦)

ಪದ್ಯ:-:೪೧:

ಸಂಪಾದಿಸಿ

ಚತುರಾಸ್ಯನಾಂ ಸತ್ಯಲೋಕದಿಂ ಬಂದೆನೀ |
ವ್ರತಿ ಶಿಷ್ಯನೆನಗೆಬಕದಾಲ್ಭ್ಯನೆಂಬವನೆಂದು |
ಶತಪತ್ರಜಂ ಪೇಳ್ದೊಡಪಹಾಸಮಂ ಮಾಡುತಷ್ಪವದನದವಿರಿಂಚಿ ||
ಅತಿಗರ್ವಭಾವದಿಂ ನೀನಜಂ ಶಿಷ್ಯನಿವ |
ನತುಳರೈ ಗುರುಶಿಷ್ಯರಿರ್ವರುಂ ನಿಮ್ಮ ಸಂ |
ಸ್ಕೃತಿಗೆ ಶೌಚದ ಸಲಿಲದೂಲಳಿಗದ ವಟುಗಳೀಹರೆಮ್ಮೊಳ್ ಕೆಲಬರೆಂದನು ||41||

ಪದವಿಭಾಗ-ಅರ್ಥ:
ಚತುರಾಸ್ಯನು ಆ ಸತ್ಯಲೋಕದಿಂ ಬಂದೆನು ಈ ವ್ರತಿ ಶಿಷ್ಯನು ಎನಗೆ ಬಕದಾಲ್ಭ್ಯನೆಂಬವನು ಎಂದು ಶತಪತ್ರಜಂ (ಕಮಲ+ಜ) ಪೇಳ್ದೊಡೆ ಉಪಹಾಸಮಂ ಮಾಡುತ ಅಷ್ಪವದನದ ವಿರಿಂಚಿ==[ಚತುರ್ಮುಖನು ಆ ಸತ್ಯಲೋಕದಿಂದ ಬಂದೆನು, ಈ ವ್ರತಿಯು ನನಗೆ ಶಿಷ್ಯನು, ಬಕದಾಲ್ಭ್ಯನೆಂಬವನು, ಎಂದು ಬ್ರಹ್ಮನು ಹೇಳಿದಾಗ, ಎಂಟು ಮುಖದ ಬ್ರಹ್ಮನು ಉಪಹಾಸವನ್ನು ಮಾಡತ್ತಾ ];;ಅತಿಗರ್ವಭಾವದಿಂ ನೀನು ಅಜಂ ಶಿಷ್ಯನು ಇವನು ಅತುಳರೈ ಗುರುಶಿಷ್ಯರು ಇರ್ವರುಂ ನಿಮ್ಮ ಸಂಸ್ಕೃತಿಗೆ ಶೌಚದ ಸಲಿಲದ ಊಳಿಗದ ವಟುಗಳು ಇಹರೆಉ ಎಮ್ಮೊಳ್ ಕೆಲಬರು ಎಂದನು==[ಅತಿ ಗರ್ವಭಾವದಿಂದ ನೀನು ಅಜನು! ಶಿಷ್ಯನು ಇವನು! ಇಬ್ಬರೂ ಅಸಮಾನ್ಯ ಗುರುಶಿಷ್ಯರು; ನಿಮ್ಮ ಸಂಸ್ಕೃತಿಗೆ ಸಮನಾದ ಶೌಚದ ನೀರಿನ ಕೆಲಸಮಾಡುವ ವಟುಗಳು (ಝಾಡಮಾಲಿಗಳು) ನಮ್ಮಲ್ಲಿ ಕೆಲವರು ಇರುವರು, ಎಂದನು].
  • ತಾತ್ಪರ್ಯ:ಚತುರ್ಮುಖನು ಆ ಸತ್ಯಲೋಕದಿಂದ ಬಂದೆನು, ಈ ವ್ರತಿಯು ನನಗೆ ಶಿಷ್ಯನು, ಬಕದಾಲ್ಭ್ಯನೆಂಬವನು, ಎಂದು ಬ್ರಹ್ಮನು ಹೇಳಿದಾಗ, ಎಂಟು ಮುಖದ ಬ್ರಹ್ಮನು ಉಪಹಾಸವನ್ನು ಮಾಡತ್ತಾ ಅತಿ ಗರ್ವಭಾವದಿಂದ ನೀನು ಅಜನು! ಶಿಷ್ಯನು ಇವನು! ಇಬ್ಬರೂ ಅಸಮಾನ್ಯ ಗುರುಶಿಷ್ಯರು; ನಿಮ್ಮ ಸಂಸ್ಕೃತಿಗೆ ಸಮನಾದ ಶೌಚದ ನೀರಿನ ಕೆಲಸಮಾಡುವ ವಟುಗಳು (ಝಾಡಮಾಲಿಗಳು) ನಮ್ಮಲ್ಲಿ ಕೆಲವರು ಇರುವರು, ಎಂದನು.
  • (ಪದ್ಯ-೪೧)

ಪದ್ಯ:-:೪೨:

ಸಂಪಾದಿಸಿ

ಇನಿತು ಗರ್ವದೊಳಷ್ಟವದನದ ವಿರಿಂಚಿ ನುಡಿ |
ವನಿತರೊಳ್ ಪೊರೆಯೊಳಿಹ ನಾವು ಸಹಿತಾತನಂ |
ಘನ ರಭಸದಿಂದೆ ಸುಳಿಗಾಳಿ ಕೊಂದೊಯ್ದುದಾಗಸಕತಿಕಠೋರದಿಂದೆ ||
ಅನಿಲವಶದೊಳ್ ಪೋಗಿ ಮೂವರುಂ ಮತ್ತೊಂದು |
ವನಜಭವಲೋಕಮಂ ಕಂಡೆವಲ್ಲಿಯ ಪುಣ್ಯ |
ಜನರೆಮ್ಮನೆತ್ತಣ ವಿಕಾರಿಗಳ್ ನೀವೆಂದು ನಗುತೆ ಕೊಂಡಾಡಿಸಿದರು* ||42||

  • (ನಗುತರೋಡಾದಿಸಿದರು?)
ಪದವಿಭಾಗ-ಅರ್ಥ:
ಇನಿತು ಗರ್ವದೊಳು ಅಷ್ಟವದನದ ವಿರಿಂಚಿ ನುಡಿವ ಅನಿತರೊಳ್ ಪೊರೆಯೊಳಿಹ ನಾವು ಸಹಿತ ಆತನಂ ಘನ ರಭಸದಿಂದೆ ಸುಳಿಗಾಳಿ ಕೊಂದೊಯ್ದುದು ಆಗಸಕೆ ಅತಿಕಠೋರದಿಂದೆ==[ಇಷ್ಟು ಗರ್ವದಿಂದ ಎಂಟುಮುಖದ ಬ್ರಹ್ಮ ಹೇಳುವ ಅಷ್ಟರಲ್ಲಿ ಪಕ್ಕದಲ್ಲಿದ್ದ ನಾವು ಸಹಿತ ಆತನೂ ಕೂಡಿಕೊಂಡು, ಮಹಾರಭಸದಿಂದ ಸುಳಿಗಾಳಿ ನಮ್ಮನ್ನು ಆಕಾಶಕ್ಕೆ ಬಹಳ ರಭಸದಿಂದ ವೇಗವಾಗಿ ಎತ್ತಿಕೊಂಡು ಹೋಯಿತು.];; ಅನಿಲವಶದೊಳ್ ಪೋಗಿ ಮೂವರುಂ ಮತ್ತೊಂದು ವನಜಭವ ಲೋಕಮಂ ಕಂಡೆವು ಅಲ್ಲಿಯ ಪುಣ್ಯ ಜನರೆಮ್ಮನು ಎತ್ತಣ ವಿಕಾರಿಗಳ್ ನೀವೆಂದು ನಗುತೆ ಕೊಂಡಾಡಿಸಿದರು==[ಹೀಗೆ ಗಾಳಿಯ ಹಿಡಿತದಲ್ಲಿ ಹೋಗಿ ಮೂವರೂ ಮತ್ತೊಂದು ಬ್ರಹ್ಮನ ಲೋಕವನ್ನು ಕಂಡೆವು. ಅಲ್ಲಿಯ ಪುಣ್ಯ ಜನರು ನಮ್ಮನ್ನು ವಿಕಾರಿಗಳೇ ಎಲ್ಲಿಂದ ಬಂದಿರಿ ನೀವೆಉ ಎಂದು ನಗುತ್ತಾ ಹಾಸ್ಯಮಾಡಿದರು].
  • ತಾತ್ಪರ್ಯ:ಇಷ್ಟು ಗರ್ವದಿಂದ ಎಂಟುಮುಖದ ಬ್ರಹ್ಮ ಹೇಳುವ ಅಷ್ಟರಲ್ಲಿ ಪಕ್ಕದಲ್ಲಿದ್ದ ನಾವು ಸಹಿತ ಆತನೂ ಕೂಡಿಕೊಂಡು, ಮಹಾರಭಸದಿಂದ ಸುಳಿಗಾಳಿ ನಮ್ಮನ್ನು ಆಕಾಶಕ್ಕೆ ಬಹಳ ರಭಸದಿಂದ ವೇಗವಾಗಿ ಎತ್ತಿಕೊಂಡು ಹೋಯಿತು. ಹೀಗೆ ಗಾಳಿಯ ಹಿಡಿತದಲ್ಲಿ ಹೋಗಿ ಮೂವರೂ ಮತ್ತೊಂದು ಬ್ರಹ್ಮನ ಲೋಕವನ್ನು ಕಂಡೆವು. ಅಲ್ಲಿಯ ಪುಣ್ಯ ಜನರು ನಮ್ಮನ್ನು ವಿಕಾರಿಗಳೇ ಎಲ್ಲಿಂದ ಬಂದಿರಿ ನೀವೆಉ ಎಂದು ನಗುತ್ತಾ ಹಾಸ್ಯಮಾಡಿದರು.
  • (ಪದ್ಯ-೪೨)

ಪದ್ಯ:-:೪೩:

ಸಂಪಾದಿಸಿ

ಅಲ್ಲೆ ಷೋಡಶಮುಖದ ಬೊಮ್ಮನಂ ಕಂಡವನ |
ಮೆಲ್ಲಡಿಗೆ ನಮಿಸೆ ಗರ್ವದೊಳವಂ ನುಡಿಸದಿರೆ |
ತಲ್ಲಣೀಸಿ ನಾವಂಜಲವನ ಪೊರೆಯವರೆಮ್ಮ ನಾರೆಂದು ಬೆಸಗೊಳಲ್ಕೆ ||
ಬಲ್ಲೊಡಷ್ಟಾನನ ಚತುರ್ವದನ ಬಕದಾಲ್ಭ್ಯ |
ರಿಲ್ಲಿಗರಿಯದೆ ಬಂದೆವೆಂದು ನಾವುಸಿರಲ್ಕೆ |
ಮಲ್ಲಿಗೆಯಲರ್ಗೆದರಿದಂತಟ್ಟಹಾಸದಿಂ ನಗುತಿರ್ದನಾ ವಿರಿಂಚಿ ||43||

ಪದವಿಭಾಗ-ಅರ್ಥ:
ಅಲ್ಲೆ ಷೋಡಶಮುಖದ ಬೊಮ್ಮನಂ ಕಂಡು ಅವನ ಮೆಲ್ಲಡಿಗೆ ನಮಿಸೆ ಗರ್ವದೊಳವಂ ನುಡಿಸದಿರೆ ತಲ್ಲಣೀಸಿ ನಾವಂಜಲು ಅವನ ಪೊರೆಯವರು ಎಮ್ಮನು ಆರೆಂದು ಬೆಸಗೊಳಲ್ಕೆ==[ಅಲ್ಲಿ ಷೋಡಶಮುಖದ/ ಹದಿನಾರುಮುಖದ ಬ್ರಹ್ಮನನ್ನು ಕಂಡು ಅವನ ಪಾದಕ್ಕೆ ನಮಿಸಲು, ಅವನು ಗರ್ವದಿಂದ ಮಾತನಾಡಿಸದೆ ಇರಲು ನಡುಗಿ ಭಯಪಡಲು, ಅವನ ಪಕ್ಕದವರು ನಮ್ಮನ್ನು ಯಾರೆಂದು ಕೇಳಲಾಗಿ ];; ಬಲ್ಲೊಡೆ (ತಿಳಿಯ ಬಲ್ಲೊಡೆ) ಅಷ್ಟಾನನ ಚತುರ್ವದನ ಬಕದಾಲ್ಭ್ಯರು ಇಲ್ಲಿಗೆ ಅರಿಯದೆ ಬಂದೆವೆಂದು ನಾವು ಉಸಿರಲ್ಕೆ ಮಲ್ಲಿಗೆಯ ಅಲರ್ ಕೆದರಿದಂತೆ ಅಟ್ಟಹಾಸದಿಂ ನಗುತಿರ್ದನು ಆ ವಿರಿಂಚಿ==[ ತಿಳಿಸುವುದು ಏನೆಂದರೆ, ನಾವು ಅಷ್ಟಾನನ ಚತುರ್ವದನ ಬಕದಾಲ್ಭ್ಯರು ಇಲ್ಲಿಗೆ ತಿಳಿಯದೆ ಬಂದೆವು, ಎಂದು ನಾವು ಹೇಳಲು, ಮಲ್ಲಿಗೆಯ ಹೂವು ಚೆಲ್ಲಿದಂತೆ ಅಟ್ಟಹಾಸದಿಂದ ನಗುತಿದ್ದನು ಆ ಬ್ರಹ್ಮ. ].
  • ತಾತ್ಪರ್ಯ:ಅಲ್ಲಿ ಷೋಡಶಮುಖದ/ ಹದಿನಾರುಮುಖದ ಬ್ರಹ್ಮನನ್ನು ಕಂಡು ಅವನ ಪಾದಕ್ಕೆ ನಮಿಸಲು, ಅವನು ಗರ್ವದಿಂದ ಮಾತನಾಡಿಸದೆ ಇರಲು ನಡುಗಿ ಭಯಪಡಲು, ಅವನ ಪಕ್ಕದವರು ನಮ್ಮನ್ನು ಯಾರೆಂದು ಕೇಳಲಾಗಿ ತಿಳಿಸುವುದು ಏನೆಂದರೆ, ನಾವು ಅಷ್ಟಾನನ ಚತುರ್ವದನ ಬಕದಾಲ್ಭ್ಯರು ಇಲ್ಲಿಗೆ ತಿಳಿಯದೆ ಬಂದೆವು, ಎಂದು ನಾವು ಹೇಳಲು, ಮಲ್ಲಿಗೆಯ ಹೂವು ಚೆಲ್ಲಿದಂತೆ ಅಟ್ಟಹಾಸದಿಂದ ನಗುತಿದ್ದನು ಆ ಬ್ರಹ್ಮ.
  • (ಪದ್ಯ-೪೩)

ಪದ್ಯ:-:೪೪:

ಸಂಪಾದಿಸಿ

ಈ ವಿರಿಂಚಿಗಳನೀಕ್ಷಿಸಿ ತನ್ನ ಮಹಿಮೆಯನ |
ದೇವಣ್ಣಿಸುವೆನೆಂದು ಕೆಲದವರೊಳಾಡುವ ಕ |
ಲಾವಕ್ತ್ರನಂ ಮತ್ತೆ ಸುಳಿಗಾಳಿ ಕೊಂಡಡರ್ದುದು ನಭಸ್ಥಳಕೆ ಬಳಿಕ ||
ಮೂವತ್ತೆರಡು ಮೊಗದಕಮಲಜನ ಲೋಕಮಂ |
ನಾವು ತಲೆಕೆಳಗಾಗಿ ನಾಲ್ವರುಂ ಪುಗಲೆಮ್ಮ |
ನಾ ವಿಧಾತ್ರಂ ಕಂಡು ಕರುಣದಿಂ ಕೇಳ್ದೊಡಾವಿನಿತೆಲ್ಲಮಂ ಪೇಳ್ದೆವು ||44||

ಪದವಿಭಾಗ-ಅರ್ಥ:
ಈ ವಿರಿಂಚಿಗಳನು ಈಕ್ಷಿಸಿ ತನ್ನ ಮಹಿಮೆಯನು ಅದೇ ವಣ್ಣಿಸುವೆನು ಎಂದು ಕೆಲದವರೊಳು ಆಡುವ ಕಲಾವಕ್ತ್ರನಂ ಮತ್ತೆ ಸುಳಿಗಾಳಿ ಕೊಂಡು ಅಡರ್ದುದು ನಭಸ್ಥಳಕೆ ಬಳಿಕ==[ಈ ಬ್ರಹ್ಮರನ್ನು ನೋಡಿ ಅವನು ತನ್ನ ಮಹಿಮೆಯನ್ನು ಅದೇನು ಬಣ್ಣಿಸುವೆನು ಎಂದು ಪಕ್ಕದಲ್ಲಿರುವವರ ಹತ್ತಿರ ಹೇಳುವ ಬ್ರಹ್ಮನನ್ನು ಮತ್ತೆ ಸುಳಿಗಾಳಿ ಎತ್ತಿಕೊಂಡು ಆಕಾಶಕ್ಕೆ ಅಡರಿತು. ಬಳಿಕ ];; ಮೂವತ್ತೆರಡು ಮೊಗದ ಕಮಲಜನ ಲೋಕಮಂ ನಾವು ತಲೆಕೆಳಗಾಗಿ ನಾಲ್ವರುಂ ಪುಗಲು ಎಮ್ಮನು ಆ ವಿಧಾತ್ರಂ ಕಂಡು ಕರುಣದಿಂ ಕೇಳ್ದೊಡೆ ಆವು ಇನಿತು ಎಲ್ಲಮಂ ಪೇಳ್ದೆವು==[ಮೂವತ್ತೆರಡು ಮುಖದ ಬ್ರಹ್ಮನ ಲೋಕವನ್ನು ನಾವು ತಲೆಕೆಳಗಾಗಿ ನಾಲ್ವರೂ ಹೊಗಲು ನಮ್ಮನ್ನು ಆ ವಿಧಾತನು ಕಂಡು ಕರುಣದಿಂದ ಕೇಳಿದಾಗ ನಾವು ಈ ಎಲ್ಲವನ್ನೂ ಹೇಳಿದೆವು. ].
  • ತಾತ್ಪರ್ಯ:ಈ ಬ್ರಹ್ಮರನ್ನು ನೋಡಿ ಅವನು ತನ್ನ ಮಹಿಮೆಯನ್ನು ಅದೇನು ಬಣ್ಣಿಸುವೆನು ಎಂದು ಪಕ್ಕದಲ್ಲಿರುವವರ ಹತ್ತಿರ ಹೇಳುವ ಬ್ರಹ್ಮನನ್ನು ಮತ್ತೆ ಸುಳಿಗಾಳಿ ಎತ್ತಿಕೊಂಡು ಆಕಾಶಕ್ಕೆ ಅಡರಿತು. ಬಳಿಕ ಮೂವತ್ತೆರಡು ಮುಖದ ಬ್ರಹ್ಮನ ಲೋಕವನ್ನು ನಾವು ತಲೆಕೆಳಗಾಗಿ ನಾಲ್ವರೂ ಹೊಗಲು ನಮ್ಮನ್ನು ಆ ವಿಧಾತನು ಕಂಡು ಕರುಣದಿಂದ ಕೇಳಿದಾಗ ನಾವು ಈ ಎಲ್ಲವನ್ನೂ ಹೇಳಿದೆವು.
  • (ಪದ್ಯ-೪೪)

ಪದ್ಯ:-:೪೬:

ಸಂಪಾದಿಸಿ

ಏತಕೈತಂದಿರಿಲ್ಲಿಗೆ ರವಿಯ ಮುಂದೆ ಖ |
ದ್ಯೋತಂಗಳೆಸೆದಪುವೆ ತನಗೆ ಸರಿಯಾರೆಂಬ|
ಮಾತು ಮುಗಿಯದ ಮುನ್ನ ಕೊಂಡೆದ್ದುದಾವರ್ತ ಮಾರುತಂ ನಾವು ಬಳಿಕ ||
ಆತನಂ ಕೂಡಿಕೊಂಡರುವತ್ತುನಾಲ್ಕು ಮುಖ |
ದಾತನಂ ಕಂಡೆವಾತನ ಗರ್ವದಿಂದೆ ಮುಂ |
ದೀತೆರದೊಳಿಮ್ಮಡಿಸಿದಾಸ್ಯದ ವಿರಿಂಚಿಗಳ ಲೋಕಂಗಳಂ ಕಂಡೆವು ||45||

ಪದವಿಭಾಗ-ಅರ್ಥ:
ಏತಕೆ ಐತಂದಿರಿ ಇಲ್ಲಿಗೆ ರವಿಯ ಮುಂದೆ ಖದ್ಯೋತಂಗಳು ಎಸೆದಪುವೆ ತನಗೆ ಸರಿಯಾರು ಎಂಬ ಮಾತು ಮುಗಿಯದ ಮುನ್ನ ಕೊಂಡೆದ್ದುದು ಆವರ್ತ ಮಾರುತಂ ನಾವು ಬಳಿಕ==[ಅವನು, ಏತಕ್ಕೆ ಬಂದಿರಿ ಇಲ್ಲಿಗೆ, ರವಿಯ ಮುಂದೆ ಮಿಣುಕು ಹುಳುಗಳು ಶೋಭಿಸುವುವೆ, ತನಗೆ ಸರಿ ಯಾರು ಎಂಬ ಮಾತು ಮುಗಿಯುವುಕ್ಕೆ ಮೊದಲೇ,ಸುಂಟರಗಾಳಿಯು ಎಲ್ಲರನ್ನೂ ಎತ್ತಿಕೊಂಡು ಹೋಯಿತು. ನಾವು ಬಳಿಕ];; ಆತನಂ ಕೂಡಿಕೊಂಡು ಅರುವತ್ತುನಾಲ್ಕು ಮುಖದಾತನಂ ಕಂಡೆವವು ಆತನ ಗರ್ವದಿಂದೆ ಮುಂದೆ ಈ ತೆರದೊಳು ಇಮ್ಮಡಿಸಿದ ಆಸ್ಯದ ವಿರಿಂಚಿಗಳ ಲೋಕಂಗಳಂ ಕಂಡೆವು=[ಆತನನ್ನೂ ಸೇರಿಕೊಂಡು ಅರುವತ್ತುನಾಲ್ಕು ಮುಖದವನನ್ನು ಕಂಡೆವು; ಆತನೂ ಗರ್ವದಿಂದ ವರ್ತಿಸಲು, ಮುಂದೆ ಗಾಳಿಯಲ್ಲಿ ತೇಲಿ ಈ ಬಗೆಯಲ್ಲಿ ಇಮ್ಮಡಿಸಿದ ಮುಖದ ಬ್ರಹ್ಮಗಳ ಲೋಕಗಳನ್ನು ಕಂಡೆವು].
  • ತಾತ್ಪರ್ಯ:ಅವನು, ಏತಕ್ಕೆ ಬಂದಿರಿ ಇಲ್ಲಿಗೆ, ರವಿಯ ಮುಂದೆ ಮಿಣುಕು ಹುಳುಗಳು ಶೋಭಿಸುವುವೆ, ತನಗೆ ಸರಿ ಯಾರು ಎಂಬ ಮಾತು ಮುಗಿಯುವುಕ್ಕೆ ಮೊದಲೇ,ಸುಂಟರಗಾಳಿಯು ಎಲ್ಲರನ್ನೂ ಎತ್ತಿಕೊಂಡು ಹೋಯಿತು. ನಾವು ಬಳಿಕ ಆತನನ್ನೂ ಸೇರಿಕೊಂಡು ಅರುವತ್ತುನಾಲ್ಕು ಮುಖದವನನ್ನು ಕಂಡೆವು; ಆತನೂ ಗರ್ವದಿಂದ ವರ್ತಿಸಲು, ಮುಂದೆ ಗಾಳಿಯಲ್ಲಿ ತೇಲಿ ಈ ಬಗೆಯಲ್ಲಿ ಇಮ್ಮಡಿಸಿದ ಮುಖದ ಬ್ರಹ್ಮಗಳ ಲೋಕಗಳನ್ನು ಕಂಡೆವು.
  • (ಪದ್ಯ-೪೫)

ಪದ್ಯ:-:೪೬:

ಸಂಪಾದಿಸಿ

ತೊಳಲಿದೆವು ಪಾರ್ಥ ಕೇಳಿಂತು ನಾವೆಲ್ಲರುಂ |
ಬಳಿಕ ಸಾವಿರ ಮೊಗದೊಳೆಸೆವ ಪರಮೇಷ್ಠಿಯಂ |
ಬಳಸಿದ ಸಮಸ್ತ ಸುರಮುನಿಗಳ ಪೊಗಳ್ವ ಸನಕಾದಿಗಳ ಗಡಣದೊಡನೆ ||
ನಳಿನಸಖ ಶತಕೋಟಿ ತೇಜದಿಂ ತೊಳತೊಳಗಿ |
ಬೆಳಗುತಿರಲಾವಿನಿಬರುಂ ಪೋಗಿ ಕಾಣಲ್ಕೆ |
ಬಳಲಿದಿರಿದೇಕೆ ಬಂದಿರಿ ನಿಮ್ಮಕರುಣದಿಂದಿಹೆನೆಂದು ಸೈತಿಟ್ಟನು ||46||

ಪದವಿಭಾಗ-ಅರ್ಥ:
ತೊಳಲಿದೆವು ಪಾರ್ಥ ಕೇಳಿಂತು ನಾವೂ ಏಲ್ಲರುಂ ಬಳಿಕ ಸಾವಿರ ಮೊಗದೊಳೂ ಎಸೆವ ಪರಮೇಷ್ಠಿಯಂ ಬಳಸಿದ ಸಮಸ್ತ ಸುರಮುನಿಗಳ ಪೊಗಳ್ವ ಸನಕಾದಿಗಳ ಗಡಣದೊಡನೆ==[ ಪಾರ್ಥನೇ ಕೇಳು, ನಾವೆಲ್ಲರೂ ಹೀಗೆ ಅಲೆದೆವು, ಬಳಿಕ, ಸಮಸ್ತ ಸುರಮುನಿಗಳು ಸುತ್ತುವರಿದು ಹೊಗಳುವ ಸನಕಾದಿಗಳ ಸಮೂಹದೊಡನೆ ಸಾವಿರ ಮುಖದಲ್ಲಿ ಶೋಭಿಸುವ ಪರಮೇಷ್ಠಿಯನ್ನು ಕಂಡೆವು;];; ನಳಿನಸಖ ಶತಕೋಟಿ ತೇಜದಿಂ ತೊಳತೊಳಗಿ ಬೆಳಗುತಿರಲು ಅವು ಅನಿಬರುಂ ಪೋಗಿ ಕಾಣಲ್ಕೆ ಬಳಲಿದಿರಿ ಇದೇಕೆ ಬಂದಿರಿ ನಿಮ್ಮಕರುಣದಿಂದ ಇಹೆನೆಂದು ಸೈತಿಟ್ಟನು==[ಅವನು ಸೂರ್ಯನ ಶತಕೋಟಿ ತೇಜಸ್ಸಿನಿಂದ ತೊಳತೊಳಗಿ ಬೆಳಗುತ್ತಿರಲು ನಾವು ಎಲ್ಲರೂ ಹೋಗಿ ಅವನನ್ನು ಕಾಣಲು, ಬಹಳ ಆಯಾಸ ಪಟ್ಟಿರಿ ಇದೇಕೆ ಬಂದಿರಿ? ನಿಮ್ಮ ಕರುಣದಿಂದ ನಾನು ಇರುವೆನೆಂದು ಸಮಾಧಾನ ಪಡಿಸಿದನು].
  • ತಾತ್ಪರ್ಯ:ಪಾರ್ಥನೇ ಕೇಳು, ನಾವೆಲ್ಲರೂ ಹೀಗೆ ಅಲೆದೆವು, ಬಳಿಕ, ಸಮಸ್ತ ಸುರಮುನಿಗಳು ಸುತ್ತುವರಿದು ಹೊಗಳುವ ಸನಕಾದಿಗಳ ಸಮೂಹದೊಡನೆ ಸಾವಿರ ಮುಖದಲ್ಲಿ ಶೋಭಿಸುವ ಪರಮೇಷ್ಠಿಯನ್ನು ಕಂಡೆವು; ಅವನು ಸೂರ್ಯನ ಶತಕೋಟಿ ತೇಜಸ್ಸಿನಿಂದ ತೊಳತೊಳಗಿ ಬೆಳಗುತ್ತಿರಲು ನಾವು ಎಲ್ಲರೂ ಹೋಗಿ ಅವನನ್ನು ಕಾಣಲು, ಬಹಳ ಆಯಾಸ ಪಟ್ಟಿರಿ ಇದೇಕೆ ಬಂದಿರಿ? ನಿಮ್ಮ ಕರುಣದಿಂದ ನಾನು ಇರುವೆನೆಂದು ಸಮಾಧಾನ ಪಡಿಸಿದನು.
  • (ಪದ್ಯ-೪೬)

ಪದ್ಯ:-:೪೭:

ಸಂಪಾದಿಸಿ

ನಿಮ್ಮ ದೆಸೆಯಿಂದೈಸಲೇತನಗೆ ಸಂತತಂ |
ಸುಮ್ಮಾನಮಹುದೆಂದು ಮಿಗೆ ಸುಪ್ರಸನ್ನತೆಯೊ |
ಳೆಮ್ಮನೆಲ್ಲರನಾದರಿಸಿ ನಿಗರ್ವಿಕೆಯಿಂ ಸಹಸ್ರ ವದನಂ ಕಳುಹಲು ||
ಹೆಮ್ಮೆಗಳ ನುಳಿದು ವಿಸ್ಮಿತರಾದರವರನ್ನೆ |
ಗಂ ಮೊದಲದೆಂತಿರುತಿರ್ದರಂತೆ ಕನಸೆನಲ್ ತೋರ್ಪ |
ತಮ್ಮ ಲೋಕಂಗಳಿಗೆ ಬಂದಿರ್ದರಾನೆಂದಿನವೊಲಿರ್ದೆ ನೀಕಡಲೊಳು ||47||

ಪದವಿಭಾಗ-ಅರ್ಥ:
ನಿಮ್ಮ ದೆಸೆಯಿಂದ ಐಸಲೇ ತನಗೆ ಸಂತತಂ ಸುಮ್ಮಾನಮಹುದು ಎಂದು ಮಿಗೆ ಸುಪ್ರಸನ್ನತೆಯೊಳು ಎಮ್ಮನೆಲ್ಲರನು ಆದರಿಸಿ ನಿಗರ್ವಿಕೆಯಿಂ ಸಹಸ್ರ ವದನಂ ಕಳುಹಲು==[ಬಕದಾಲ್ಬ್ಯ ಮತ್ತು ಬ್ರಹ್ಮರನ್ನು ಕಂಡು, ಪರಮೇಷ್ಠಿಯು, ನಿಮ್ಮದೆಸೆಯಿಂದ ಅಲ್ಲವೇ ತನಗೆ ಸತತವೂ ಸಂತೋಷವಾಗುವುದು, ಎಂದು ಬಹಳ ಸುಪ್ರಸನ್ನತೆಯಿಂದ ನಮ್ಮೆಲ್ಲರನ್ನೂ ಆದರಿಸಿ ಗರ್ವವಿಲ್ಲದೆ ವಿನಯದಿಂದ ಸಹಸ್ರ ವದನನು ಕಳುಹಿಸಲು];; ಹೆಮ್ಮೆಗಳನು ಉಳಿದು (ಬಿಟ್ಟು) ವಿಸ್ಮಿತರಾದರು ಅವರು ಅನ್ನೆಗಂ ಮೊದಲು ಅದೆಂತು ಇರುತಿರ್ದರು ಅಂತೆ, ಕನಸೆನಲ್ ತೋರ್ಪ ತಮ್ಮ ಲೋಕಂಗಳಿಗೆ ಬಂದಿರ್ದರಾಉ ಆನು ಎಂದಿನವೊಲ್ ಇರ್ದೆನು ಈಕಡಲೊಳು==[ನಾವು ಅಹಂಕಾರವನ್ನು ಬಿಟ್ಟು ಪರಮೇಷ್ಠಿಯ ವಿನಯಕ್ಕೆ ವಿಸ್ಮಯಪಟ್ಟರು. ಅವರು ಅಂದಿನಿಂದ ಅಹಂಕಾರಕ್ಕೆ ಮೊದಲು ಅದು ಹೇಗೆ ಇರುತ್ತಿದ್ದರೊ ಹಾಗೆಯೇ ಇರುವವರಾದರು. ಇದು ಕನಸಿನಂತೆ ತೋರಯವ ತಮ್ಮ ಲೋಕಗಳಿಗೆ ಬಂದು ಇದ್ದರು. ನಾನು ಎಂದಿನಂತೆ ಈ ಕಡಲ ಮಧ್ಯದಲ್ಲಿ ಇದ್ದೆನು.]
  • ತಾತ್ಪರ್ಯ:ಬಕದಾಲ್ಬ್ಯ ಮತ್ತು ಬ್ರಹ್ಮರನ್ನು ಕಂಡು, ಪರಮೇಷ್ಠಿಯು, ನಿಮ್ಮ ದೆಸೆಯಿಂದ ಅಲ್ಲವೇ ತನಗೆ ಸತತವೂ ಸಂತೋಷವಾಗುವುದು, ಎಂದು ಬಹಳ ಸುಪ್ರಸನ್ನತೆಯಿಂದ ನಮ್ಮೆಲ್ಲರನ್ನೂ ಆದರಿಸಿ ಗರ್ವವಿಲ್ಲದೆ ವಿನಯದಿಂದ ಸಹಸ್ರ ವದನನು ಕಳುಹಿಸಲು ನಾವು ಅಹಂಕಾರವನ್ನು ಬಿಟ್ಟು, ಪರಮೇಷ್ಠಿಯ ವಿನಯಕ್ಕೆ ವಿಸ್ಮಯಪಟ್ಟರು. ಅವರು ಅಂದಿನಿಂದ ಅಹಂಕಾರಕ್ಕೆ ಮೊದಲು ಅದು ಹೇಗೆ ಇರುತ್ತಿದ್ದರೊ ಹಾಗೆಯೇ ಇರುವವರಾದರು. ಇದು ಕನಸಿನಂತೆ ತೋರಯವ ತಮ್ಮ ಲೋಕಗಳಿಗೆ ಬಂದು ಇದ್ದರು. ನಾನು ಎಂದಿನಂತೆ ಈ ಕಡಲ ಮಧ್ಯದಲ್ಲಿ ಇದ್ದೆನು.
  • (ಪದ್ಯ-೪೭)

ಪದ್ಯ:-:೪೮:

ಸಂಪಾದಿಸಿ

ಅದರಿಂದೆ ಕೋವಿದರ್ ಗರ್ವಮಂ ಮಾಡಲಾ |
ಗದು ಪಾರ್ಥ ತಾನಂದು ಸಂಧಿಸಿದ ಸಾಸಿರಮೊ |
ಗದ ಪುರುಷನೀತನಲ್ಲವೆ ಕೃಷ್ಣರೂಪದಿಂ ಕಾಣಿಸುವನೀ ಜಗದೊಳು ||
ಉದದಿ ಮಧ್ಯದೊಳಿನ್ನೆಗಂ ಭಜಿಸುತಿರ್ದೊಡಾ |
ದುದು ಸಫಲಮೆಂದು ಬಕದಾಲ್ಬ್ಯಮುನಿ ನುಡಿಯಲ್ಕೆ |
ಮುದದಿಂದೆ ಕೇಳ್ದು ವಿಸ್ಮಿತರಾಗಿ ಸಂಭಾವಿಸಿದರರ್ಜುನಾದಿ ನೃಪರು ||48||

ಪದವಿಭಾಗ-ಅರ್ಥ:
ಅದರಿಂದೆ ಕೋವಿದರ್ ಗರ್ವಮಂ ಮಾಡಲಾಗದು ಪಾರ್ಥ ತಾನಂದು ಸಂಧಿಸಿದ ಸಾಸಿರಮೊಗದ ಪುರುಷನು ಈತನಲ್ಲವೆ ಕೃಷ್ಣರೂಪದಿಂ ಕಾಣಿಸುವನು ಈ ಜಗದೊಳು==[ಆದ್ದರಿಂದ ತಿಳಿದವರು ಗರ್ವವನ್ನು ಮಾಡಬಾರದು; ಪಾರ್ಥ, ತಾನು ಅಂದು ಸಂಧಿಸಿದ ಸಾವಿರಮುಖದ ಪುರುಷನು ಈತನೇ ಅಲ್ಲವೆ, ಕೃಷ್ಣರೂಪದಿಂದ ಈ ಜಗತ್ತಿನಲ್ಲಿ ಕಾಣಿಸುತ್ತಿರುವನು.];; ಉದದಿ ಮಧ್ಯದೊಳು ಇನ್ನೆಗಂ ಭಜಿಸುತಿರ್ದೊಡೆ ಆದುದು ಸಫಲಮೆಂದು ಬಕದಾಲ್ಬ್ಯಮುನಿ ನುಡಿಯಲ್ಕೆ ಮುದದಿಂದೆ ಕೇಳ್ದು ವಿಸ್ಮಿತರಾಗಿ ಸಂಭಾವಿಸಿದರು ಅರ್ಜುನಾದಿ ನೃಪರು==[ಸಮುದ್ರದ ಮಧ್ಯದಲ್ಲಿ ಇಷ್ಟುಕಾಲ ಭಜಿಸುತ್ತಿದ್ದುದು ಸಫಲವಾಯಿತು, ಎಂದು ಬಕದಾಲ್ಬ್ಯಮುನಿ ನುಡಿಯಲು ಸಂತಸದಿಂದ ಕೇಳಿ ಆಶ್ಚರ್ಯಪಟ್ಟು ಮುನಿಯನ್ನು ಅರ್ಜುನಾದಿ ನೃಪರು ಗೌರವಿಸಸಿದರು].
  • ತಾತ್ಪರ್ಯ:ಆದ್ದರಿಂದ ತಿಳಿದವರು ಗರ್ವವನ್ನು ಮಾಡಬಾರದು; ಪಾರ್ಥ, ತಾನು ಅಂದು ಸಂಧಿಸಿದ ಸಾವಿರಮುಖದ ಪುರುಷನು ಈತನೇ ಅಲ್ಲವೆ, ಕೃಷ್ಣರೂಪದಿಂದ ಈ ಜಗತ್ತಿನಲ್ಲಿ ಕಾಣಿಸುತ್ತಿರುವನು. ಸಮುದ್ರದ ಮಧ್ಯದಲ್ಲಿ ಇಷ್ಟುಕಾಲ ಭಜಿಸುತ್ತಿದ್ದುದು ಸಫಲವಾಯಿತು, ಎಂದು ಬಕದಾಲ್ಬ್ಯಮುನಿ ನುಡಿಯಲು ಸಂತಸದಿಂದ ಕೇಳಿ ಆಶ್ಚರ್ಯಪಟ್ಟು ಮುನಿಯನ್ನು ಅರ್ಜುನಾದಿ ನೃಪರು ಗೌರವಿಸಸಿದರು.
  • (ಪದ್ಯ-೪೮)

ಪದ್ಯ:-:೪೯:

ಸಂಪಾದಿಸಿ

ಶ್ರೀಕಮಲಲೋಚನಂ ಬಕದಾಲ್ಭ್ಯನಂ ಬಳಿಕ |
ಭೂಕಾಂತನಧ್ವರಕೆ ನೀವು ಬಿಜಯಂಗೈಯ |
ಬೇಕೆಂದೊಡಂಬಡಿಸಿ ವಾಜಿಸಹಿತಂಬುಧಿಯ ತಡಿಗೆ ಬಂದಾಋಷಿಯನು ||
ಲೋಕಮರಿಯಲ್ಕೆ ಶಿಬಿಕಾರೋಹಣಂಗೈಸ |
ಲಾಕುದುರೆಗಳ್ ತಿರುಗಿ ಸಿಂಧುದೇಶಕೆ ಬರಲ |
ನೇಕ ಪೃಥ್ವೀಪಾಲರೊಡನೆ ಕೃಷ್ಣಾರ್ಜುನರ್ ನಡೆತಂದರುತ್ಸವದೊಳು ||49||

ಪದವಿಭಾಗ-ಅರ್ಥ:
ಶ್ರೀಕಮಲಲೋಚನಂ ಬಕದಾಲ್ಭ್ಯನಂ ಬಳಿಕ ಭೂಕಾಂತನ ಅಟಧ್ವರಕೆ ನೀವು ಬಿಜಯಂಗೈಯ ಬೇಕೆಂದು ಒಡಂಬಡಿಸಿ ವಾಜಿಸಹಿತ ಅಂಬುಧಿಯ ತಡಿಗೆ ಬಂದು ಆ ಋಷಿಯನು==[ಶ್ರೀಕೃಷ್ನನು ಬಕದಾಲ್ಭ್ಯನನ್ನು ಬಳಿಕ ಧರ್ಮರಾಜನ ಯಜ್ಞಕ್ಕೆ ನೀವು ಬರಬೇಕೆಂದು ಒಪ್ಪಸಿ ಕುದುರೆಸಹಿತ ಸಮುದ್ರದ ತೀರಕ್ಕೆ ಬಂದು ಆ ಋಷಿಯನ್ನು];; ಲೋಕಂ ಅರಿಯಲ್ಕೆ ಶಿಬಿಕೆ (ಪಲ್ಲಕ್ಕಿ) ಆರೋಹಣಂಗೈಸಲು ಆ ಕುದುರೆಗಳ್ ತಿರುಗಿ ಸಿಂಧುದೇಶಕೆ ಬರಲು ಅನೇಕ ಪೃಥ್ವೀಪಾಳರೊಡನೆ ಕೃಷ್ಣಾರ್ಜುನರ್ ನಡೆತಂದರು ಉತ್ಸವದೊಳು==[ಜನರಿಗೆ ಮಹಾತ್ಮನೆಂದು ತಿಳಿಯಲು ಪಲ್ಲಕ್ಕಿಯಲ್ಲಿ ಹತ್ತಿಸಿದರು. ಆ ಕುದುರೆಗಳ್ ತಿರುಗಿ ಸಿಂಧೂದೇಶಕ್ಕೆ ಬರಲು ಅನೇಕ ರಾಜರೊಡನೆ ಕೃಷ್ಣಾರ್ಜುನರು ಸಂತೋಷದಿಂದ ಬಂದರು].
  • ತಾತ್ಪರ್ಯ:ಶ್ರೀಕೃಷ್ನನು ಬಕದಾಲ್ಭ್ಯನನ್ನು ಬಳಿಕ ಧರ್ಮರಾಜನ ಯಜ್ಞಕ್ಕೆ ನೀವು ಬರಬೇಕೆಂದು ಒಪ್ಪಸಿ ಕುದುರೆಸಹಿತ ಸಮುದ್ರದ ತೀರಕ್ಕೆ ಬಂದು ಆ ಋಷಿಯನ್ನು, ಜನರಿಗೆ ಮಹಾತ್ಮನೆಂದು ತಿಳಿಯಲು ಪಲ್ಲಕ್ಕಿಯಲ್ಲಿ ಹತ್ತಿಸಿದರು. ಆ ಕುದುರೆಗಳ್ ತಿರುಗಿ ಸಿಂಧೂದೇಶಕ್ಕೆ ಬರಲು ಅನೇಕ ರಾಜರೊಡನೆ ಕೃಷ್ಣಾರ್ಜುನರು ಸಂತೋಷದಿಂದ ಬಂದರು].
  • (ಪದ್ಯ-೪೯)

ಪದ್ಯ:-:೫೦:

ಸಂಪಾದಿಸಿ

ಪೃಥಿವೀಂದ್ರ ಕೇಳ್ ಸಿಂಧುದೇಶದೊಳೆಸೆವ ಜಯ |
ದ್ರಥನ ಪಟ್ಟಣಕೆ ನಡೆತಂದರರ್ಜುನ ದೈತ್ಯ |
ಮಥನರೀ ವಾರ್ತೆಯಂ ಕೇಳ್ದನತಿಬಾಲನಾಗಿಹ ದುಶ್ಯಳೆಯ ತನುಜನು ||
ವ್ಯಥಿಸಿ ಮೈಮರೆದನೋಲಗದ ಮಂತ್ರಿಗಳೆಣಿಕೆ |
ಶಿಥಿಲವಾದುದು ಪುರಂ ತಲ್ಲಣಿಸುತಿರ್ದುದೀ|
ಕಥನಮಂ ದೃತರಾಷ್ಟ್ರಸುತೆಗರಿಪಲಿದಿರಾಗಿ ಪೊರೆಮಟ್ಟಳೂರೆ ಬೆದರ್ದು ||50||

ಪದವಿಭಾಗ-ಅರ್ಥ:
ಪೃಥಿವೀಂದ್ರ ಕೇಳ್ ಸಿಂಧುದೇಶದೊಳು ಎಸೆವ ಜಯದ್ರಥನ ಪಟ್ಟಣಕೆ ನಡೆತಂದರು ಅರ್ಜುನ ದೈತ್ಯಮಥನರು ಈ ವಾರ್ತೆಯಂ ಕೇಳ್ದನು ಅತಿಬಾಲನಾಗಿಹ ದುಶ್ಯಳೆಯ ತನುಜನು==[ಪೃಥಿವೀಂದ್ರ ಜನಮೇಜಯನೆ ಕೇಳು, ಸಿಂಧುದೇಶದಲ್ಲಿ ಶೋಭಿಸುವ ಜಯದ್ರಥನ ಪಟ್ಟಣಕ್ಕೆ ಅರ್ಜುನಮತ್ತು ಕೃಷ್ಣರು ಬಂದರು. ಈ ವಾರ್ತೆಯನ್ನು ಚಿಕ್ಕ ಬಾಲನಾಗಿರುವ ದುಶ್ಯಳೆಯ ಮಗನು ಕೇಳಿದನು. ];; ವ್ಯಥಿಸಿ ಮೈಮರೆದನು ಓಲಗದ ಮಂತ್ರಿಗಳ ಎಣಿಕೆ ಶಿಥಿಲವಾದುದು ಪುರಂ ತಲ್ಲಣಿಸುತ ಇರ್ದುದು ಅದು ಈ ಕಥನಮಂ ದೃತರಾಷ್ಟ್ರಸುತೆಗೆ ಅರಿಪಲು ಇದಿರಾಗಿ ಪೊರೆಮಟ್ಟಳು ಉರೆ ಬೆದರ್ದು==[ ಅವನು ಹೆದರಿ ದುಃಖಿತನಾಗಿ ಎಚ್ಚರತಪ್ಪಿ ಮೃತನಾದನು. ರಾಜಸಭೆಯ ಮಂತ್ರಿಗಳ ಯೋಜನೆಗಳು ತಪ್ಪಿ ದುರ್ಬಲವಾಯಿತು. ನಗರವೇ ಭಯದಿಂದ ನಡುಗುತ್ತಿತ್ತು. ಈ ವಿಚಾರವನ್ನು ದೃತರಾಷ್ಟ್ರನ ಮಗಳು ದುಶ್ಶಲೆಗೆ ಹೇಳಲು, ಅವಳು ಹೆದರಿ ಕೃಷ್ಣಾರ್ಜುನರಿಗೆ ಇದಿರಾಗಿ ಹೊರಟಳು.]
  • ತಾತ್ಪರ್ಯ:ಪೃಥಿವೀಂದ್ರ ಜನಮೇಜಯನೆ ಕೇಳು, ಸಿಂಧುದೇಶದಲ್ಲಿ ಶೋಭಿಸುವ ಜಯದ್ರಥನ ಪಟ್ಟಣಕ್ಕೆ ಅರ್ಜುನಮತ್ತು ಕೃಷ್ಣರು ಬಂದರು. ಈ ವಾರ್ತೆಯನ್ನು ಚಿಕ್ಕ ಬಾಲನಾಗಿರುವ ದುಶ್ಯಳೆಯ ಮಗನು ಕೇಳಿದನು. ಅವನು ಹೆದರಿ ದುಃಖಿತನಾಗಿ ಎಚ್ಚರತಪ್ಪಿ ಮೃತನಾದನು. ರಾಜಸಭೆಯ ಮಂತ್ರಿಗಳ ಯೋಜನೆಗಳು ತಪ್ಪಿ ದುರ್ಬಲವಾಯಿತು. ನಗರವೇ ಭಯದಿಂದ ನಡುಗುತ್ತಿತ್ತು. ಈ ವಿಚಾರವನ್ನು ದೃತರಾಷ್ಟ್ರನ ಮಗಳು ದುಶ್ಶಲೆಗೆ ಹೇಳಲು, ಅವಳು ಹೆದರಿ ಕೃಷ್ಣಾರ್ಜುನರಿಗೆ ಇದಿರಾಗಿ ಹೊರಟಳು.
  • (ಪದ್ಯ-೫೦)

ಪದ್ಯ:-:೫೧:

ಸಂಪಾದಿಸಿ

ಎಲ್ಲಿ ಬಹನರ್ಜುನನ ರಥದಮೇಲಸುರಹರ |
ನಲ್ಲಿಗೈತಂದು ಚೀರಿದಳೆಲೆ ಜಗನ್ನಾಥ |
ಮಲ್ಲ ಮರ್ದನ ಮಾನಿನಿಯ ಮೊರೆಯಲಾಲಿಸಂದೀ ಸವ್ಯಸಾಚಿ ತನ್ನ ||
ವಲ್ಲಭನ ಪಗೆಯೆಂದು ಕೊಂದನಿಹುದೊಂದು ಶಿಶು |
ತಲ್ಲಣೀಸುತಿದೆ ಕಾಯಬೇಕೆನೆ ಧನಂಜಯಂ |
ನಿಲ್ಲದೆ ವರೂಥದಿಂದಿಳಿದು ಬಂದಾಕೆಗಭಿನಮಿಸಿ ಬಳಿಕಿಂತೆಂದನು ||51||

ಪದವಿಭಾಗ-ಅರ್ಥ:
ಎಲ್ಲಿ ಬಹನು ಅರ್ಜುನನ ರಥದ ಮೇಲೆ ಅಸುರಹರನು ಅಲ್ಲಿಗೆ ಐತಂದು ಚೀರಿದಳು ಎಲೆ ಜಗನ್ನಾಥ ಮಲ್ಲಮರ್ದನ ಮಾನಿನಿಯ ಮೊರೆಯಲಾಲಿಸು ಅಂದು ಈ ಸವ್ಯಸಾಚಿ ತನ್ನ==[ಎಲ್ಲಿ ಅರ್ಜುನನ ರಥದ ಮೇಲೆ ಕೃಷ್ಣನು ಬರುವನೋ ಅಲ್ಲಿಗೆ ಬಂದು, ಗೋಳಿಟ್ಟಳು ಜಯದ್ರಥನ ಪತ್ನಿ ದುಶ್ಶಲೆ, ಎಲೆ ಜಗನ್ನಾಥ ಮಲ್ಲಮರ್ದನನೇ ಈ ಹೆಣ್ಣಿನ ಮೊರೆಯನ್ನು ಕೇಳು! ಅಂದು ಈ ಸವ್ಯಸಾಚಿ ಅರ್ಜುನನು ತನ್ನ];; ವಲ್ಲಭನ ಪಗೆಯೆಂದು ಕೊಂದನು ಇಹುದೊಂದು ಶಿಶು ತಲ್ಲಣೀಸುತಿದೆ ಕಾಯಬೇಕು ಎನೆ ಧನಂಜಯಂ ನಿಲ್ಲದೆ ವರೂಥದಿಂದಿಳಿದು ಬಂದು ಆಕೆಗೆ ಅಭಿನಮಿಸಿ ಬಳಿಕ ಇಂತೆಂದನು==[ವಲ್ಲಭನಾದ ಸೈಂಧವನನ್ನು ಶತ್ರುವೆಂದು ಕೊಂದನು. ಈಗ ಇಲ್ಲಿಗೆ ಬಂದಿರುವಿರಿ. ನನಗೆ ಇರುವುದೊಂದು ಶಿಶು/ ಚಿಕ್ಕಮಗನು. ಅವನು ಹೆದರಿ ಭಯದಿಂದ ತಲ್ಲಣೀಸುತ್ತಿದ್ದಾನೆ. ಅವನನ್ನು ಕಾಯಬೇಕು, ಎಂದಳು. ಹೀಗೆ ಹೇಳಲು, ಧನಂಜಯನು ರಥದಲ್ಲಿ ಸುಮ್ಮನೆ ನಿಲ್ಲದೆ, ರಥದಿಂದ ಇಳಿದುಬಂದು ಆಕೆಗೆ ನಮಿಸಿದನು. ಬಳಿಕ ಹೀಗೆ ಹೇಳಿದನು].
  • ತಾತ್ಪರ್ಯ:ಎಲ್ಲಿ ಅರ್ಜುನನ ರಥದ ಮೇಲೆ ಕೃಷ್ಣನು ಬರುವನೋ ಅಲ್ಲಿಗೆ ಬಂದು, ಜಯದ್ರಥನ ಪತ್ನಿ ದುಶ್ಶಲೆ ಗೋಳಿಟ್ಟಳು, ಎಲೆ ಜಗನ್ನಾಥ ಮಲ್ಲಮರ್ದನನೇ ಈ ಹೆಣ್ಣಿನ ಮೊರೆಯನ್ನು ಕೇಳು! ಅಂದು ಈ ಸವ್ಯಸಾಚಿ ಅರ್ಜುನನು ತನ್ನ ಗಂಡನಾದ ಸೈಂಧವನನ್ನು ಶತ್ರುವೆಂದು ಕೊಂದನು. ಈಗ ಇಲ್ಲಿಗೆ ಬಂದಿರುವಿರಿ. ನನಗೆ ಇರುವುದೊಂದು ಶಿಶು/ ಚಿಕ್ಕಮೊಮ್ಮಗನು. ಅವನು ಹೆದರಿ ಭಯದಿಂದ ತಲ್ಲಣೀಸುತ್ತಿದ್ದಾನೆ. ಅವನನ್ನು ಕಾಯಬೇಕು, ಎಂದಳು. ಹೀಗೆ ಹೇಳಲು, ಧನಂಜಯನು ರಥದಲ್ಲಿ ಸುಮ್ಮನೆ ನಿಲ್ಲದೆ, ರಥದಿಂದ ಇಳಿದುಬಂದು ಆಕೆಗೆ ನಮಿಸಿದನು. ಬಳಿಕ ಹೀಗೆ ಹೇಳಿದನು.
  • (ಪದ್ಯ-೫೧)

ಪದ್ಯ:-:೫೨:

ಸಂಪಾದಿಸಿ

ತಾಯೆ ಪಗೆಗೊಂಡು ನಾನಿನಗಂದು ಮಾಡಿದ |
ನ್ಯಾಯವಂ ಸೈರಿಪುದು ನಿನ್ನ ತನುಜಾತನಂ |
ನೋಯಿಸುವನಲ್ಲ ರಾಜ್ಯ ವನಗಣಿತಾಶ್ವ ಮದಕರಿಗಳಂ ಕೊಟ್ಟು ನಿನಗೆ ||
ರಾಯನ ಮಹಾಧ್ವರಕೆ ಕೊಡಿಕೊಂಡೊಯ್ಯನೆನ |
ಲಾಯತಾಬಂಕಿ ಮತ್ತೆ ಶೋಕವಿಮ್ಮಡಿಸೆ ನಾ |
ರಾಯಣನ ಪದ ಕಮಲದೊಳ್ ಪೊರಳಿ ಕಡಲಿಡುವ ಕಂಬನಿಯೊಳಿಂತೆಂದಳು ||52||

ಪದವಿಭಾಗ-ಅರ್ಥ:
ತಾಯೆ ಪಗೆಗೊಂಡು ನಾನು ನಿನಗಂದು ಮಾಡಿದ ಅನ್ಯಾಯವಂ ಸೈರಿಪುದು; ನಿನ್ನ ತನುಜಾತನಂ ನೋಯಿಸುವನಲ್ಲ; ರಾಜ್ಯವನು ಅಗಣಿತ ಅಶ್ವ ಮದಕರಿಗಳಂ ಕೊಟ್ಟು ನಿನಗೆ==[ತಾಯೆ, ಶತ್ರುವಾಗಿ ನಾನು ನಿನಗೆ ಹಿಂದೆ ಮಾಡಿದ ಅನ್ಯಾಯವನ್ನು ಸೈಹಿಸಿಕೊಳ್ಳಬೇಕು. ನಿನ್ನ ತಮಗನನ್ನು ನಾನು ನೋಯಿಸುವುದಿಲ್ಲ; ಈ ರಾಜ್ಯವನ್ನೂ ಅಗಣಿತ ಅಶ್ವ ಮದದ ಆನೆಗಳನ್ನೂ ಕೊಟ್ಟು ನಿನಗೆ];; ರಾಯನ ಮಹಾಧ್ವರಕೆ ಕೊಡಿಕೊಂಡು ಒಯ್ಯನು, ಎನಲು ಆಯತಾಬಂಕಿ ಮತ್ತೆ ಶೋಕ ವಿಮ್ಮಡಿಸೆ ನಾರಾಯಣನ ಪದ ಕಮಲದೊಳ್ ಪೊರಳಿ ಕಡಲಿಡುವ ಕಂಬನಿಯೊಳು ಇಂತೆಂದಳು=[ಧರ್ಮರಾಯನ ಮಹಾಯಜ್ಞಕ್ಕೆ ನಿನ್ನನ್ನು ಜೊತೆಕೊಂಡು ಕರೆದೊಯ್ಯುವೆನು ಎನ್ನಲು, ಆಯತಾಬಂಕಿ ಮತ್ತೆ ಶೋಕ ಹೆಚ್ಚಲು ಕೃಷ್ಣನ ಪದಕಮಲದಲ್ಲಿ ಹೊರಳಿ ಕಂಬನಿ ಸುರಿಯುತ್ತಿರಲು ಹೀಗೆ ಹೇಳಿದಳು.].
  • ತಾತ್ಪರ್ಯ:ತಾಯೆ, ಶತ್ರುವಾಗಿ ನಾನು ನಿನಗೆ ಹಿಂದೆ ಮಾಡಿದ ಅನ್ಯಾಯವನ್ನು ಸೈಹಿಸಿಕೊಳ್ಳಬೇಕು. ನಿನ್ನ ಮೊಮ್ಮಗನನ್ನು ನಾನು ನೋಯಿಸುವುದಿಲ್ಲ; ಈ ರಾಜ್ಯವನ್ನೂ ಅಗಣಿತ ಅಶ್ವ ಮದದ ಆನೆಗಳನ್ನೂ ಕೊಟ್ಟು ನಿನಗೆ ಧರ್ಮರಾಯನ ಮಹಾಯಜ್ಞಕ್ಕೆ ನಿನ್ನನ್ನು ಜೊತೆಕೊಂಡು ಕರೆದೊಯ್ಯುವೆನು ಎನ್ನಲು, ಆಯತಾಬಂಕಿ ಮತ್ತೆ ಶೋಕ ಹೆಚ್ಚಲು ಕೃಷ್ಣನ ಪದಕಮಲದಲ್ಲಿ ಹೊರಳಿ ಕಂಬನಿ ಸುರಿಯುತ್ತಿರಲು ಹೀಗೆ ಹೇಳಿದಳು.
  • (ಪದ್ಯ-೫೨)XXVIII

ಪದ್ಯ:-:೫೩:

ಸಂಪಾದಿಸಿ

ಪ್ರಾಣಿಗಳ ಹೃದಯದೊಳ್ ದೇವ ನೀನಿರ್ಪುದಂ |
ಮಾಣಿಸುವೆ ನತರ ದುಃಖಾಕುಲವನೆಂಬುದಂ |
ಕಾಣಿಸಿದೆ ದ್ರೌಪದಿಯ ಮಾನವಂ ಕಾಯ್ದಂದು ಶೋಕಾಗ್ನಿ ಸುಡುವುದೆಂದು||
ಮೇಣಿದಂ ಬಿನ್ನೈಸಲೇಕಿನ್ನು ಸಲೆ ಸುಖ |
ಶ್ರೇಣಿಯಂ ನೆನೆದ ಮಾತ್ರದೊಳೀವೆ ನಿನ್ನ ಕ |
ಲ್ಯಾಣ ಮೂರ್ತಿಯ ದರ್ಶನದೊಳಾಂ ಕೃತಾರ್ಥೆಯಲ್ಲವೆ ಸಲಹಬೇಕೆಂದಳು ||53||

ಪದವಿಭಾಗ-ಅರ್ಥ:
ಪ್ರಾಣಿಗಳ ಹೃದಯದೊಳ್ ದೇವ ನೀನಿರ್ಪುದಂ ಮಾಣಿಸುವೆ (ಮಾಣಿಸು:ನಿಲ್ಲುವಂತೆ ಮಾಡು, ನೀಗು,-ಜಿ.ವೆಂ.ಸು.)ನತರ (ಆನತ, ನತರು:ಭಾಗಿ ನಮಿಸುವವರು) ದುಃಖಾಕುಲವನು ಎಂಬುದಂ ಕಾಣಿಸಿದೆ ದ್ರೌಪದಿಯ ಮಾನವಂ ಕಾಯ್ದಂದು ಶೋಕಾಗ್ನಿ ಸುಡುವುದೆಂದು==[ದೇವನೇ, ಪ್ರಾಣಿಗಳ ಹೃದಯದಲ್ಲಿ ನೀನು ಇರುವೆ. ಶರಣಾಗತರ ದುಃಖ ಸಂಕುಲವನ್ನು ನೀಗಿಸುವೆ ಎಂಬುದನ್ನು ದ್ರೌಪದಿಯ ಮಾನವನ್ನು ಕಾಪಾಡಿದ ಆ ದಿನ ಶೋಕದ ಅಗ್ನಿ ಮುಂದೆ ಸುಡುವುದೆಂದು ತೋರಿಸಿದೆ];; ಮೇಣಿದಂ ಬಿನ್ನೈಸಲು ಏಕಿನ್ನು ಸಲೆ ಸುಖ ಶ್ರೇಣಿಯಂ ನೆನೆದ ಮಾತ್ರದೊಳು ಈವೆ ನಿನ್ನ ಕಲ್ಯಾಣ ಮೂರ್ತಿಯ ದರ್ಶನದೊಳು ಆಂ ಕೃತಾರ್ಥೆಯಲ್ಲವೆ ಸಲಹಬೇಕೆಂದಳು==[ಮತ್ತೆ ಇದನ್ನು ಹೇಳುವುದು ಏಕೆ? ಇನ್ನು, ಹೆಚ್ಚಿನ ಸುಖದ ಸಾಲನ್ನೇ ನಿನ್ನನ್ನು ನೆನೆದ ಮಾತ್ರದಲ್ಲಿ ಕೊಡುವೆ; ನಿನ್ನ ಕಲ್ಯಾಣ ಮೂರ್ತಿಯ ದರ್ಶನದಿಂದ ನಾನು ಕೃತಾರ್ಥೆಯಾದೆನು, ಅಲ್ಲವೇ ಕಾಪಾಡಬೇಕು ಎಂದಳು ದುಶ್ಶಲೆ].
  • ತಾತ್ಪರ್ಯ:ದೇವನೇ, ಪ್ರಾಣಿಗಳ ಹೃದಯದಲ್ಲಿ ನೀನು ಇರುವೆ. ಶರಣಾಗತರ ದುಃಖ ಸಂಕುಲವನ್ನು ನೀಗಿಸುವೆ ಎಂಬುದನ್ನು ದ್ರೌಪದಿಯ ಮಾನವನ್ನು ಕಾಪಾಡಿದ ಆ ದಿನ ಶೋಕದ ಅಗ್ನಿ ಮುಂದೆ ಸುಡುವುದೆಂದು ತೋರಿಸಿದೆ, ಮತ್ತೆ ಇದನ್ನು ಹೇಳುವುದು ಏಕೆ? ಇನ್ನು, ಹೆಚ್ಚಿನ ಸುಖದ ಸಾಲನ್ನೇ ನಿನ್ನನ್ನು ನೆನೆದ ಮಾತ್ರದಲ್ಲಿ ಕೊಡುವೆ; ನಿನ್ನ ಕಲ್ಯಾಣ ಮೂರ್ತಿಯ ದರ್ಶನದಿಂದ ನಾನು ಕೃತಾರ್ಥೆಯಾದೆನು, ಅಲ್ಲವೇ, ಕಾಪಾಡಬೇಕು ಎಂದಳು ದುಶ್ಶಲೆ.]
  • (ಪದ್ಯ-೫೩)

ಪದ್ಯ:-:೫೪:

ಸಂಪಾದಿಸಿ

೫೩:[ಸಂಪಾದಿಸಿ]
ದೇವ ತನಗೊಡಹುಟ್ಟಿದವಳೆಂದು ನರನೆನ್ನ |
ನಾವ ತೆರದಿಂ ಕರೆವನಧ್ವರಕೆ ಬರಲಪ್ಪು|
ದೇ ವಿಧವೆ ಹಯ ಹಸ್ತಿಗಳ ನಿತ್ತೊಡಾಳ್ವರಾರ್ ಪತಿಪುತ್ರರಿಲ್ಲ ತನಗೆ ||
ಕಾವುದತಿಬಾಲನಾಗಿಹ ಶಿಶುವನೆಂದು ನಾ |
ನಾ ವಿಧದ ಶೋಕದಿನಳಲ್ವ ದುಶ್ಯಳೆಯಂ ಕೃ |
ಪಾವನ(ಧಿ) ಪಿಡಿದೆತ್ತಿ ಸಂತವಿಸಿ ನಗರಮಂ ಪೊಕ್ಕಂ ಕಿರೀಟಿ ಸಹಿತ ||54||

ಪದವಿಭಾಗ-ಅರ್ಥ:
೫೩:[ಸಂಪಾದಿಸಿ]

ದೇವ ತನಗೆ ಒಡಹುಟ್ಟಿದವಳೆಂದು ನರನು ಎನ್ನನು ಆವ ತೆರದಿಂ ಕರೆವನು ಅಧ್ವರಕೆ ಬರಲಪ್ಪುದೇ ವಿಧವೆ, ಹಯ ಹಸ್ತಿಗಳ ನಿತ್ತೊಡೆ ಆಳ್ವರಾರ್ ಪತಿ ಪುತ್ರರಿಲ್ಲ ತನಗೆ==[ದುಶ್ಶಲೆ ಹೇಳಿದಳು, ದೇವ, ತನಗೆ ಒಡಹುಟ್ಟಿದವಳು ಎಂದು ಅರ್ಜುನನು ನನ್ನನು ಯಾವ ರೀತಿಯಲ್ಲಿ ಯಜ್ಞಕ್ಕ ಕರೆಯುವನು? ನಾನು ವಿಧವೆ ಬರಬಹುದೇ?, ಕುದುರೆ ಆನೆಗಳನ್ನು ಕೊಟ್ಟರೆ,ಅವನ್ನು ಕಾಪಾಡವವರು ಯಾರು? ತನಗೆ ಪತಿಯಿಲ್ಲ, ಬೆಳೆದ ಪುತ್ರರಿಲ್ಲ];; ಕಾವುದು ಅತಿಬಾಲನು ಆಗಿಹ ಶಿಶುವನೆಂದು ನಾನಾ ವಿಧದ ಶೋಕದಿ ನಳಲ್ವ ದುಶ್ಯಳೆಯಂ ಕೃಪಾವನಧಿ ಪಿಡಿದೆತ್ತಿ ಸಂತವಿಸಿ ನಗರಮಂ ಪೊಕ್ಕಂ ಕಿರೀಟಿ ಸಹಿತ==[ಕಾಪಾಡಬೇಕು ಅತಿ ಚಿಕ್ಕ ಬಾಲಕನು ಆಗಿರುವ ಶಿಶುವನ್ನು ಎಂದು ನಾನಾ ವಿಧದ ಶೋಕದಿಂದ ಅಳುತ್ತಿರುವ ದುಶ್ಯಳೆಯನ್ನು ಕೃಪಾಸಮುದ್ರನಾದ ಕೃಷ್ಣನು ಹಿಡಿದು ಎತ್ತಿ ಸಂತಯಿಸಿ ಅರ್ಜುನನ ಸಹಿತ ನಗರವನ್ನು ಪೊಕ್ಕನು].

  • ತಾತ್ಪರ್ಯ:ದುಶ್ಶಲೆ ಹೇಳಿದಳು, ದೇವ, ತನಗೆ ಒಡಹುಟ್ಟಿದವಳು ಎಂದು ಅರ್ಜುನನು ನನ್ನನು ಯಾವ ರೀತಿಯಲ್ಲಿ ಯಜ್ಞಕ್ಕ ಕರೆಯುವನು? ನಾನು ವಿಧವೆ ಬರಬಹುದೇ?, ಕುದುರೆ ಆನೆಗಳನ್ನು ಕೊಟ್ಟರೆ,ಅವನ್ನು ಕಾಪಾಡವವರು ಯಾರು? ತನಗೆ ಪತಿಯಿಲ್ಲ, ಬೆಳೆದ ಪುತ್ರರಿಲ್ಲ (ಇದ್ದವರಿಬ್ಬರೂ ಸತ್ತಿರುವರು, ಹಿಂದೆ ಒಬ್ಬ, ಈಗ ಹೆದರಿ ಒಬ್ಬ ಪ್ರಾಣಬಿಟ್ಟನು) ಕಾಪಾಡಬೇಕು. ಅತಿ ಚಿಕ್ಕ ಬಾಲಕನು ಆಗಿರುವ ಶಿಶುವನ್ನು ಎಂದು ನಾನಾ ವಿಧದ ಶೋಕದಿಂದ ಅಳುತ್ತಿರುವ ದುಶ್ಯಳೆಯನ್ನು ಕೃಪಾಸಮುದ್ರನಾದ ಕೃಷ್ಣನು ಹಿಡಿದು ಎತ್ತಿ ಸಂತಯಿಸಿ ಅರ್ಜುನನ ಸಹಿತ ನಗರವನ್ನು ಹೊಕ್ಕನು.
  • (ಪದ್ಯ-೫೪)

ಪದ್ಯ:-:೫೫:

ಸಂಪಾದಿಸಿ

೫೩:[ಸಂಪಾದಿಸಿ]
ಬಳಿಕ ದುಶ್ಯಳೆ ಕಾಣಿಸಿದೊಡಾ ಕುಮಾರಂಗೆ |
ನಳಿನಾಕ್ಷನಭಯಮಂ ಕೊಟ್ಟು ಸಂತೈಸಿ ಕರ |
ತಳದಿಂದೆ ಮೈದಡವಿದಂ ಕೂಡೆ ಕಂಡುದು ಸಮಸ್ತಜನಮಘರಿಪುವನು ||
ಪೊಳಲೊಳ್ ನೆಗಳ್ದುವುತ್ಸವದಗುಡಿ ತೋರಣಂ |
ಮೊಳಗಿದುವು ವಿವಿಧ ವಾದ್ಯಧ್ವನಿಗಳಾಗ ಮಂ |
ಗಳ ನೃತ್ತ ಗೀತಂಗಳೆಸಗಿದುವು ಹರಿ ಪಾರ್ಥರಲ್ಲಿ ಸತ್ಕೃತರಾದರು ||55||

ಪದವಿಭಾಗ-ಅರ್ಥ:
ಬಳಿಕ ದುಶ್ಯಳೆ ಕಾಣಿಸಿದೊಡಾ ಕುಮಾರಂಗೆ ನಳಿನಾಕ್ಷನು ಅಭಯಮಂ ಕೊಟ್ಟು ಸಂತೈಸಿ ಕರತಳದಿಂದೆ ಮೈದಡವಿದಂ ಕೂಡೆ ಕಂಡುದು ಸಮಸ್ತಜನಮ್ ಅಘರಿಪುವನು==[ಬಳಿಕ ದುಶ್ಯಳೆಯು ತನ್ನ ಮಗನನ್ನು ನಳಿನಾಕ್ಷ ಕೃಷ್ನನಿಗೆ ತೊರಿಸಿದಳು. ಅವನು ಆ ಬಾಲಕನಿಗೆ ಹದರಬೇಡವೆಂದು ಅಭಯವನ್ನು ಕೊಟ್ಟು ಸಮಾಧಾನ ಪಡಿಸಿ, ತನ್ನ ಕೈಯಿಂದ ಅವನ ಮೈಯನ್ನು ತಡವಿದನು. ಕೂಡೆ/ ನಂತರ ಸಕಲ ನಗರದ ಜನರು,ಪಾಪನಾಶಕನಾದ ಕೃಷ್ಣನನ್ನು ದರ್ಶನಮಾಡಿದರು.];; ಪೊಳಲೊಳ್ ನೆಗಳ್ದುವು ಉತ್ಸವದ ಗುಡಿ ತೋರಣಂ ಮೊಳಗಿದುವು ವಿವಿಧ ವಾದ್ಯಧ್ವನಿಗಳಾಗ ಮಂಗಳ ನೃತ್ತ ಗೀತಂಗಳು ಎಸಗಿದುವು ಹರಿ ಪಾರ್ಥರಲ್ಲಿ ಸತ್ಕೃತರಾದರು==[ಆಮೇಲೆ ನಗರದಲ್ಲಿ ಉತ್ಸವವು ನಡೆಯಿತು. ಅಲ್ಲಿ ಗುಡಿ ತೋರಣಗಳನ್ನು ಕಟ್ಟಿದರು. ಮೊಳಗಿದುವು ವಿವಿಧ ವಾದ್ಯಧ್ವನಿ ಮೊಳಗಿತು. ಮಂಗಳವಾದ ನೃತ್ತ ಗೀತಂಗಳ ಕಾರ್ಯಕ್ರಮಗಳು ನಡೆದವು. ಅಲ್ಲಿ ಕೃಷ್ಣ ಮತ್ತು ಪಾರ್ಥರನ್ನು ಬಹಳ ಸತ್ಕರಿಸಿದರು.]
  • ತಾತ್ಪರ್ಯ: ಬಳಿಕ ದುಶ್ಯಳೆಯು ತನ್ನ ಮೊಮ್ಮಗನನ್ನು ನಳಿನಾಕ್ಷ ಕೃಷ್ಣನಿಗೆ ತೊರಿಸಿದಳು. ಅವನು ಆ ಬಾಲಕನಿಗೆ ಹದರಬೇಡವೆಂದು ಅಭಯವನ್ನು ಕೊಟ್ಟು ಸಮಾಧಾನ ಪಡಿಸಿ, ತನ್ನ ಕೈಯಿಂದ ಅವನ ಮೈಯನ್ನು ತಡವಿದನು. ಕೂಡೆ/ ನಂತರ ಸಕಲ ನಗರದ ಜನರು,ಪಾಪನಾಶಕನಾದ ಕೃಷ್ಣನನ್ನು ದರ್ಶನಮಾಡಿದರು.ಆಮೇಲೆ ನಗರದಲ್ಲಿ ಉತ್ಸವವು ನಡೆಯಿತು. ಅಲ್ಲಿ ಗುಡಿ ತೋರಣಗಳನ್ನು ಕಟ್ಟಿದರು. ಮೊಳಗಿದುವು ವಿವಿಧ ವಾದ್ಯಧ್ವನಿ ಮೊಳಗಿತು. ಮಂಗಳವಾದ ನೃತ್ತ ಗೀತಂಗಳ ಕಾರ್ಯಕ್ರಮಗಳು ನಡೆದವು. ಅಲ್ಲಿ ಕೃಷ್ಣ ಮತ್ತು ಪಾರ್ಥರನ್ನು ಬಹಳ ಸತ್ಕರಿಸಿದರು.]
  • (ಪದ್ಯ-೫೫)

ಪದ್ಯ:-:೫೬:

ಸಂಪಾದಿಸಿ

ಮರುಗಿ ಕಂಬನಿದುಂಬಿ ಮಾಡಿದ ವಿಘಾತಿಯಂ |
ಮರೆದು ಸುತನಂ ಕೂಡಿಕೊಂಡು ನೃಪನಧ್ವರಕೆ |
ಪೊರಮಟ್ಟು ಬಂದು ಕಾಂಬುದು ಕುಂತಿದೇವಿ ಪಾಂಚಾಲತನುಜೆಯರನೆಂದು||
ನೆರೆ ನರಂ ಸಂತೈಸೆ ಬಳಿಕ ದುಶ್ಯಳೆ ಶೌರಿ |
ಗೆರಗಿ ಭಕ್ತರ ಬೆಳವಿಗೆಗಳ ನೊಸೆದಾವಾವ |
ತೆರದಿಂದೆ ಮಾಡುವಂತೆನ್ನುದ್ಧರಿಸೆಂದು ನಿರ್ಗಮನಕನುವಾದಳು ||56||

ಪದವಿಭಾಗ-ಅರ್ಥ:
ಮರುಗಿ ಕಂಬನಿದುಂಬಿ ಮಾಡಿದ ವಿಘಾತಿಯಂ ಮರೆದು ಸುತನಂ ಕೂಡಿಕೊಂಡು ನೃಪನ ಅಧ್ವರಕೆ ಪೊರಮಟ್ಟು ಬಂದು ಕಾಂಬುದು ಕುಂತಿದೇವಿ ಪಾಂಚಾಲತನುಜೆಯರನು ಎಂದು==[ದುಶ್ಶಲೆಯನ್ನು ನೋಡಿ, ದುಃಖದಿಂದ ಕಂಬನಿದುಂಬಿ ಅರ್ಜುನನು, ದುಶ್ಶಲೆಯೇ ಹಿಂದೆ ಮಾಡಿದ ಪತಿ ಸೈಂಧವನ ವಧೆಯನ್ನು ಮರೆತು ಮಗನನ್ನು ಕೂಡಿಕೊಂಡು ಧರ್ಮಜನ ಅಶ್ವಮೇಧ ಯಜ್ಞಕ್ಕೆ ಹೊರಟುಬಂದು ಕುಂತಿದೇವಿ ಪಾಂಚಾಲತನುಜೆಯಾದ ದ್ರೌಪದಿಯರನ್ನು ಕಾಣುವುದು ಎಂದು ಹೇಳಿ];; ನೆರೆ ನರಂ ಸಂತೈಸೆ ಬಳಿಕ ದುಶ್ಯಳೆ ಶೌರಿ ಗೆರಗಿ ಭಕ್ತರ ಬೆಳವಿಗೆಗಳನು ಒಸೆದ ಆವಾವ ತೆರದಿಂದೆ ಮಾಡುವಂತೆ ಎನ್ನುದ್ಧರಿಸೆಂದು ನಿರ್ಗಮನಕೆ ಅನುವಾದಳು==[ಬಹಳವಾಗಿ ಅವನು ಅವಳನ್ನು ಸಂತೈಸಿದನು. ಬಳಿಕ ದುಶ್ಯಳೆ ಕೃಷ್ಣನಿಗೆ ನಮಿಸಿ, 'ಭಕ್ತರ ಯಾವ ಯಾವ ರೀತಿ ಏಳಿಗೆಗಳನ್ನು ಯಾವ ಯಾವ ರೀತಿ ಮಾಡಬೇಕೋ ಅದೇ ರೀತಿಯಲ್ಲಿ ತನಗೆ ಮಾಡುವಂತೆ, ತನ್ನುನ್ನು ಉದ್ಧರಿಸು ಎಂದು ಬೇಡಿಕೊಂಡು, ಹಸ್ತಿನಾವತತಿಗೆ ಹೊರಡಲು ಅನುವಾದಳು].
  • ತಾತ್ಪರ್ಯ:ದುಶ್ಶಲೆಯನ್ನು ನೋಡಿ, ದುಃಖದಿಂದ ಕಂಬನಿದುಂಬಿ ಅರ್ಜುನನು, ದುಶ್ಶಲೆಯೇ ಹಿಂದೆ ಮಾಡಿದ ಪತಿ ಸೈಂಧವನ ವಧೆಯನ್ನು ಮರೆತು ಮೊಮ್ಮಗನನ್ನು ಕೂಡಿಕೊಂಡು ಧರ್ಮಜನ ಅಶ್ವಮೇಧ ಯಜ್ಞಕ್ಕೆ ಹೊರಟುಬಂದು ಕುಂತಿದೇವಿ ಪಾಂಚಾಲತನುಜೆಯಾದ ದ್ರೌಪದಿಯರನ್ನು ಕಾಣುವುದು ಎಂದು ಹೇಳಿ ಬಹಳವಾಗಿ ಅವನು ಅವಳನ್ನು ಸಂತೈಸಿದನು. ಬಳಿಕ ದುಶ್ಯಳೆ ಕೃಷ್ಣನಿಗೆ ನಮಿಸಿ, 'ಭಕ್ತರ ಯಾವ ಯಾವ ರೀತಿ ಏಳಿಗೆಗಳನ್ನು ಯಾವ ಯಾವ ರೀತಿ ಮಾಡಬೇಕೋ ಅದೇ ರೀತಿಯಲ್ಲಿ ತನಗೆ ಮಾಡುವಂತೆ, ತನ್ನುನ್ನು ಉದ್ಧರಿಸು ಎಂದು ಅವನನ್ನು ಬೇಡಿಕೊಂಡು, ಹಸ್ತಿನಾವತಿಗೆ ಹೊರಡಲು ಅನುವಾದಳು.
  • (ಪದ್ಯ-೫೬)

ಪದ್ಯ:-:೫೭:

ಸಂಪಾದಿಸಿ

ಅಲ್ಲಿಯ ಸುವಸ್ತುಸಹಿತಾಕೆಯಂ ಕೂಡಿಕೊಂ |
ಡೆಲ್ಲಾಮಹೀಶ್ವರರ್ವೆರಸಿ ಗಜಪುರಕಾಗಿ |
ನಿಲ್ಲದೈತಂದು ಯೋಜನಮಾತ್ರದೊಳ್ ನಿಂದು ವತ್ಸರಂ ತುಂಬಿತೆಂದು ||
ಉಲ್ಲಾಸದಿಂ ಕಿರೀಟಿಗೆ ನಿರೂಪಿಸಿ ತಾನೆ |
ಸಲ್ಲಲಿತಹರಿಗಳಂ ಪಿಡಿದು ಕಟ್ಟಿದನಿಳಾ |
ವಲ್ಲಭರ ಮುಂದೆ ಕಾರುಣ್ಯದಿಂ ದೇವನಗರೀಶ ಲಕ್ಷ್ಮೀಕಾಂತನು ||57||

ಪದವಿಭಾಗ-ಅರ್ಥ:
ಅಲ್ಲಿಯ ಸುವಸ್ತು ಸಹಿತ ಆಕೆಯಂ ಕೂಡಿಕೊಂಡು ಎಲ್ಲಾ ಮಹೀಶ್ವರರ್ ವೆರಸಿ ಗಜಪುರಕಾಗಿ ನಿಲ್ಲದೆ ಐತಂದು ಯೋಜನ ಮಾತ್ರದೊಳ್ ನಿಂದು ವತ್ಸರಂ ತುಂಬಿತೆಂದು==[ಸಿಂಧೂರಾಜ್ಯದ ಉತ್ತಮ ವಸ್ತುಗಳ ಸಹಿತ ದುಶ್ಶಲೆಯನ್ನೂ ಜೊತೆಗೂಡಿಕೊಂಡು, ಎಲ್ಲಾ ರಾಜರನ್ನೂ ಸೇರಿಸಿಕೊಂಡು,ಮಧ್ಯೆ ಎಲ್ಲಿಯೂ ನಿಲ್ಲದೆ ಹಸ್ತಿನಾವತಿ ನಗರಕ್ಕೆ ಬಂದು, ನಗರದ ಯೋಜನ ದೂರದಲ್ಲಿ ನಿಂತು, ಒಂದು ವರ್ಷ ಸಮಯ ತುಂಬಿತೆಂದು ತಿಳಿದ ಕೂಡಲೆ];; ಉಲ್ಲಾಸದಿಂ ಕಿರೀಟಿಗೆ ನಿರೂಪಿಸಿ ತಾನೆ ಸಲ್ಲಲಿತ ಹರಿಗಳಂ ಪಿಡಿದು ಕಟ್ಟಿದನು ಇಳಾವಲ್ಲಭರ ಮುಂದೆ ಕಾರುಣ್ಯದಿಂ ದೇವನಗರೀಶ ಲಕ್ಷ್ಮೀಕಾಂತನು==[ಸಂತೋಷದಿಂದ ಅರ್ಜುನನಿಗೆ ಹೇಳಿ ಕೃಷ್ಣನು ತಾನೆ, ಸುಂದರವಾದ ತಮ್ಮ ಮತ್ತು ಮಯೂರಧ್ವಜನ ಯಜ್ಞ ಕುದುರೆಗಳನ್ನು ಹಿಡಿದು ಯಜ್ಞ ಮಂಟಪದಲ್ಲಿ ಕಟ್ಟಿದನು. ಹೀಗೆ ಇಳಾವಲ್ಲಭರಾದ ರಾಜರ ಮುಂದೆ ಕರುಣದಿಂದ ದೇವನಗರೀಶ ಲಕ್ಷ್ಮೀಕಾಂತನು ಭಕ್ತನಾದ ಧರ್ಮಜನ ಸೇವೆಯನ್ನು ಮಾಡಿದನು.]
  • ತಾತ್ಪರ್ಯ:ಸಿಂಧೂರಾಜ್ಯದ ಉತ್ತಮ ವಸ್ತುಗಳ ಸಹಿತ ದುಶ್ಶಲೆಯನ್ನೂ ಜೊತೆಗೂಡಿಕೊಂಡು, ಎಲ್ಲಾ ರಾಜರನ್ನೂ ಸೇರಿಸಿಕೊಂಡು,ಮಧ್ಯೆ ಎಲ್ಲಿಯೂ ನಿಲ್ಲದೆ ಹಸ್ತಿನಾವತಿ ನಗರಕ್ಕೆ ಬಂದು, ನಗರದ ಯೋಜನ ದೂರದಲ್ಲಿ ನಿಂತು, ಒಂದು ವರ್ಷ ಸಮಯ ತುಂಬಿತೆಂದು ತಿಳಿದ ಕೂಡಲೆ ಸಂತೋಷದಿಂದ ಅರ್ಜುನನಿಗೆ ಹೇಳಿ ಕೃಷ್ಣನು ತಾನೆ, ಸುಂದರವಾದ ತಮ್ಮ ಮತ್ತು ಮಯೂರಧ್ವಜನ ಎರಡು ಯಜ್ಞ ಕುದುರೆಗಳನ್ನು ಹಿಡಿದು ಯಜ್ಞ ಮಂಟಪದಲ್ಲಿ ಕಟ್ಟಿದನು. ಹೀಗೆ ಇಳಾವಲ್ಲಭರಾದ ರಾಜರ ಮುಂದೆ ಕರುಣದಿಂದ ದೇವನಗರೀಶ ಲಕ್ಷ್ಮೀಕಾಂತನು ಭಕ್ತನಾದ ಧರ್ಮಜನ ಸೇವೆಯನ್ನು ಮಾಡಿದನು.
  • (ಪದ್ಯ-೫೭)XXIX
  • []
  • []
  • ಒಟ್ಟು ಪದ್ಯ : ೧೮೦೭.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.