ಜೈಮಿನಿ ಭಾರತ ಹನ್ನೆರಡನೆಯ ಸಂಧಿ


ಜೈಮಿನಿ ಭಾರತ - ಹನ್ನೆರಡನೆಯ ಸಂಧಿ

ಸಂಪಾದಿಸಿ

ಪದ್ಯ :-:ಸೂಚನೆ:

ಸಂಪಾದಿಸಿ

ಅಪರಮಿತಸೈನ್ಯ ಸನ್ನಾಹದಿಂದರ್ಜುನನ | ಚಪಲಹಯಮಂ ಮರಾಳಧ್ವಜಂ ಪಿಡಿಯಲ್ಕೆ | ತಪನಸುತನಂದನ ಸುದನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಪರಮಿತಸೈನ್ಯ ಸನ್ನಾಹದಿಂದ ಅರ್ಜುನನ ಚಪಲ ಹಯಮಂ ಮರಾಳಧ್ವಜಂ ಪಿಡಿಯಲ್ಕೆ ತಪನಸುತನಂದನ (ಸೂರ್ಯನ ಮಗನ ಮಗ) ಸುದನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು=[ಬಹಳ ದೊಡ್ಡ ಸೈನ್ಯ ಸನ್ನಾಹದಿಂದ ಅರ್ಜುನನ ಸಂಚರಿಸುವ ಯಜ್ಞದ ಕುದುರೆಯನ್ನು ಹಂಸಧ್ವಜನು ಹಿಡಿಯಲು ವೃಷಕೇತು ಮತ್ತು ಸುದನ್ವರಿಗೆ ಯುದ್ಧವು ವಿಶೇಷ ರೀತಿಯಲ್ಲಿ ಆರಂಭವಾಯಿತು].
  • ತಾತ್ಪರ್ಯ: ಬಹಳ ದೊಡ್ಡ ಸೈನ್ಯ ಸನ್ನಾಹದಿಂದ ಅರ್ಜುನನ ಸಂಚರಿಸುವ ಯಜ್ಞದ ಕುದುರೆಯನ್ನು ಹಂಸಧ್ವಜನು ಹಿಡಿಯಲು, ವೃಷಕೇತು ಮತ್ತು ಸುದನ್ವರಿಗೆ ಯುದ್ಧವು ವಿಶೇಷ ರೀತಿಯಲ್ಲಿ ಆರಂಭವಾಯಿತು.
  • (ಪದ್ಯ- ಸೂಚನೆ)IXXX-VIII-IIIXX

ಪದ್ಯ :-:೧:

ಸಂಪಾದಿಸಿ

ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ | ರನ್ನ ಜನಮೇಜಯ ಸುಧ್ವನ್ವಂ ಕಟಾಹದುರಿ | ಯಂ ನಾರಸಿಂಹ ಜಪದಿಂ ಜಯಿಸೆ ಲಿಖತನೆಸಗಿದ ವೈಷ್ಣವದ್ರೊಹಕೆ ||
ತನ್ನರಿವನುರೆ ಜರೆದುಕೊಂಡಸುದೊರೆವೆನೆಂದು | ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ | ವನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇನ್ನು ಮೇಲಣ ಕಥೆಯನು ಆಲಿಸು ಎಲೆ ಭರತಕುಲ ರನ್ನ ಜನಮೇಜಯ=[ಇನ್ನು ಮೇಲಿನ ಕಥೆಯನ್ನು ಕೇಳು ಎಲೈ ಭರತಕುಲ ರತ್ನನಾದ ಜನಮೇಜಯನೇ,]; ಸುಧ್ವನ್ವಂ ಕಟಾಹದ ಉರಿಯಂ ನಾರಸಿಂಹ ಜಪದಿಂ ಜಯಿಸೆ=[ಸುಧ್ವನ್ವನು ಎಣ್ಣೆಕೊಪ್ಪರಿಗೆಯಿಂದ ಬೆಂಕಿಯಉರಿಯನ್ನು ಹರಿಯ ಜಪದಿಂ ಜಯಿಸಲು]; ಲಿಖತನು ಎಸಗಿದ ವೈಷ್ಣವದ್ರೊಹಕೆ ತನ್ನ ಅರಿವನು ಉರೆ ಜರೆದುಕೊಂಡು ಅಸು ತೊರೆವೆನೆಂದು=[ಲಿಖತನು ತಾನು ಮಾಡಿದ ವೈಷ್ಣವದ್ರೊಹಕ್ಕೆ ತನ್ನ ತಿಳುವಳಿಕೆಯನ್ನು ಬಹಳವಾಗಿ ಜರೆದುಕೊಂಡುಜೀವವನ್ನು ತೊರೆವೆನೆಂದು]; ನನ್ನಿಯಿಂದಾ ತೈಲದೊಳ್ ಬೀಳಲು ಅವರ್ಗಳಂ ವನ್ನಿಸಿ ನೃಪಂ ತೆಗೆಸಲಾ ಪುರೋಹಿತನು ಅವನಿಪತಿಗೆ ಬಳಿಕಿಂತೆಂದನು=[ಸತ್ಯನಡೆತೆಗಾಗಿ ಆ ಎಣ್ಣೆಯಲ್ಲಿ ಬೀಳಲು ಅವರನ್ನು ಮನ್ನಿಸಿ ರಾಜನು ಎಣ್ಣೆಯಿಂದ ಅವರನ್ನು ತೆಗೆಸಲು ಆ ಪುರೋಹಿತನು ರಾಜನಿಗೆ ಬಳಿಕ ಹೀಗೆ ಹೇಳಿದನು.]
  • ತಾತ್ಪರ್ಯ:ಇನ್ನು ಮೇಲಿನ ಕಥೆಯನ್ನು ಕೇಳು ಎಲೈ ಭರತಕುಲ ರತ್ನನಾದ ಜನಮೇಜಯನೇ, ಲಿಖತನು ತಾನು ಮಾಡಿದ ವೈಷ್ಣವದ್ರೊಹಕ್ಕೆ ತನ್ನ ತಿಳುವಳಿಕೆಯನ್ನು ಬಹಳವಾಗಿ ಜರೆದುಕೊಂಡು ಜೀವವನ್ನು ತೊರೆವೆನೆಂದು, ಸತ್ಯನಡೆತೆಗಾಗಿ ಆ ಎಣ್ಣೆಯಲ್ಲಿ ಬೀಳಲು ಅವರನ್ನು ಮನ್ನಿಸಿ ರಾಜನು ಎಣ್ಣೆಯಿಂದ ಅವರನ್ನು ತೆಗೆಸಲು ಆ ಪುರೋಹಿತನು ರಾಜನಿಗೆ ಬಳಿಕ ಹೀಗೆ ಹೇಳಿದನು.
  • (ಪದ್ಯ- ೧)

ಪದ್ಯ :-:೨:

ಸಂಪಾದಿಸಿ

ಭೂನಾಥ ಕೇಳ್ನಿನ್ನಸುತನ ದೆಸೆಯಿಂದೆ ನ | ಮ್ಮೀನೆಲಂ ಪ್ರಜೆ ನಾಡು ಬೀಡೂರು ಪರಿವಾರ | ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮಲತೆಗಳೆಲ್ಲ ||
ಈ ನಿರುದ್ದಕೆ ಧನ್ಯವಾದುವೇಂ ಕೃತಿಯೊನೀಂ | ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲ | ಜ್ಞಾನ ದ್ವಿಜಾಧಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂನಾಥ ಕೇಳ್ ನಿನ್ನ ಸುತನ ದೆಸೆಯಿಂದೆ ನಮ್ಮ ಈ ನೆಲಂ ಪ್ರಜೆ ನಾಡು ಬೀಡೂರು ಪರಿವಾರಮಂ ಆನೆ ಕುದುರೆಗಳು ಇರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮಲತೆಗಳೆಲ್ಲ ಈ ನಿರುದ್ಧಕೆ(ಸಂದರ್ಭ) ಧನ್ಯವಾದುವು=[ರಾಜಾ ಹಂಸಧ್ವಜನೇ ಕೇಳು ನಿನ್ನ ಮಗನ ದೆಸೆಯಿಂದೆ ನಮ್ಮ ಈ ನೆಲವೂ, ಪ್ರಜೆಗಳೂ, ನಾಡು ಬೀಡು ಊರು, ಪರಿವಾರವು, ಆನೆ ಕುದುರೆಗಳು ಇಲ್ಲಿ ಇದ್ದ ಪಶು ಪಕ್ಷಿ ಮೃಗ ಕೀಟ ತರು ಪೊದೆ ಲತೆಗಳೆಲ್ಲವೂ ಈ ಸಂದರ್ಬದಲ್ಲಿ ನಡೆದ ಘಟನೆಯಿಂದ ಧನ್ಯವಾದುವು! ಏಂ ಕೃತಿಯೊ ಎನೆ ಈ ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲಜ್ಞಾನ ದ್ವಿಜಾಧಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು=[ ಏನು ಕರ್ಮವೋ ಎನ್ನುವಂತೆ, ಈ ಸೂರ್ಯಪ್ರಕಾಶಕ್ಕೆ ಕಣ್ಣು ತೆರೆಯದ ಗೂಗೆಯಂತೆ/ಅರ್ಥಮಾಡಿಕೊಳ್ಳದ ಈ ದ್ರೋಹಕ್ಕೆ ತಾನು ಅಜ್ಞಾನ ದ್ವಿಜಾಧಮನು (ಅಧಮ ಬ್ರಾಹ್ಮಣನು) ಆದೆನು, ಎಂದು ಲಿಖಿತನು ನುಡಿದನು].
  • ತಾತ್ಪರ್ಯ:ರಾಜಾ ಹಂಸಧ್ವಜನೇ ಕೇಳು ನಿನ್ನ ಮಗನ ದೆಸೆಯಿಂದೆ ನಮ್ಮ ಈ ನೆಲವೂ, ಪ್ರಜೆಗಳೂ, ನಾಡು ಬೀಡು ಊರು, ಪರಿವಾರವು, ಆನೆ ಕುದುರೆಗಳು ಇಲ್ಲಿ ಇದ್ದ ಪಶು ಪಕ್ಷಿ ಮೃಗ ಕೀಟ ತರು ಪೊದೆ ಲತೆಗಳೆಲ್ಲವೂ ಈ ಸಂದರ್ಬದಲ್ಲಿ ನಡೆದ ಘಟನೆಯಿಂದ ಧನ್ಯವಾದುವು! ಏನು ಕರ್ಮವೋ ಎನ್ನುವಂತೆ, ಈ ಸೂರ್ಯಪ್ರಕಾಶಕ್ಕೆ ಕಣ್ಣು ತೆರೆಯದ ಗೂಗೆಯಂತೆ, ಅರ್ಥಮಾಡಿಕೊಳ್ಳದ ಈ ದ್ರೋಹಕ್ಕೆ ತಾನು ಅಜ್ಞಾನ ದ್ವಿಜಾಧಮನು (ಅಧಮ ಬ್ರಾಹ್ಮಣನು) ಆದೆನು, ಎಂದು ಲಿಖಿತನು ನುಡಿದನು].
  • (ಪದ್ಯ- ೨)

ಪದ್ಯ :-:೩:

ಸಂಪಾದಿಸಿ

ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ | ನೆಲೆ ಮಹೀಪಾಲ ಹರಿಶರಣರ್ಗೆಡರ್ಗಳೆ | ತ್ತೊಳವು(ಎತ್ತಣದು?) ಬೆಳಂದಿಂಗಳ್ಗೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ ||
ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ | ನ್ನುಳಿದ ಮಾತುಗಳೇಕೆ ಸಾಕೀ ಸುಧನ್ವನಂ | ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಆತನಂ ಸುಮ್ಮನಿರಿಸಿ ನುಡಿದಂ ಶಂಖನು ಎಲೆ ಮಹೀಪಾಲ ಹರಿಶರಣರ್ಗೆ ಎಡರ್ಗಳು ಎತ್ತೊಳವು (ಎತ್ತಣದು?)=[ಬಳಿಕ ಲಿಖಿತನನ್ನು ಸುಮ್ಮನಿರಿಸಿ ಶಂಖನು ಹೇಳಿದನು, 'ಎಲೈ ರಾಜನೇ ಹರಿಭಕ್ತರಿಗೆ ಕಷ್ಟಗಳು ಯಾವಲೆಕ್ಕ! ಕಷ್ಟಗಳನ್ನು ಲೆಕ್ಕಿಸುವುದಿಲ್ಲ.]; ಬೆಳಂದಿಂಗಳ್ಗೆ ಬೆಮರುಂಟೆ ಬೇಸಗೆಯೊಳು(ಮನಸ್ಸಿನ ತಾಪ) ಇವನ ನಿಜಮಂ ಕಾಣದೆ ಬಳಸಿದೆವು ಮೂರ್ಖತೆಯನು ಅರಿದು ಮರುಳಾದೆವು=[ಬೆಳಂದಿಂಗಳಿಗೆ ಬೆವರು ಬರುವುದೇ? ಹರಿಭಕ್ತರು ಕಷ್ಟಕ್ಕೆ ಬೆದರರು; ಮನಸ್ಸಿನ ತಾಪದಲ್ಲಿ/ ಸಿಟ್ಟಿನಲ್ಲಿ ಇವನ ನಿಜ ಹರಿಭಕ್ತಿಯನ್ನು ಕಾಣದೆ ತೊಂದರೆಕೊಟ್ಟೆವು, ಮೂರ್ಖತನವನ್ನು ಸರಿ ಎಂದು ತಿಳಿದು ಮರುಳಾದೆವು.]; ಇನ್ನುಳಿದ ಮಾತುಗಳು ಏಕೆ ಸಾಕ ಈ ಸುಧನ್ವನಂ ಕಳುಹು ಕಾಳಗಕೆನಲ್ ಭೂಪನು ಅವನಂ ತೆಗೆದು ಬಿಗಿಯಪ್ಪಿದಂ ಮುದದೊಳು=[ಬೇರೆ ಮಾತುಗಳು ಏಕೆ ಬೇಕು? ಸಾಕು. ಈ ಸುಧನ್ವನನ್ನು ಅನುಮತಿಕೊಟ್ಟು ಯುದ್ಧಕ್ಕೆ ಕಳುಹಿಸಿಕೊಡು.' ಎನ್ನಲು, ರಾಜನು ಶಂಖನನ್ನು ಕ್ಷಮಿಸಿ ಕರೆದು ಸಂತೋಷದಿಂದ ಅಪ್ಪಿಕೊಂಡನು.]
  • ತಾತ್ಪರ್ಯ:ಬಳಿಕ ಲಿಖಿತನನ್ನು ಸುಮ್ಮನಿರಿಸಿ ಶಂಖನು ಹೇಳಿದನು, 'ಎಲೈ ರಾಜನೇ ಹರಿಭಕ್ತರಿಗೆ ಕಷ್ಟಗಳು ಯಾವಲೆಕ್ಕ! ಕಷ್ಟಗಳನ್ನು ಲೆಕ್ಕಿಸುವುದಿಲ್ಲ.ಬೆಳಂದಿಂಗಳಿಗೆ ಬೆವರು ಬರುವುದೇ? ಹರಿಭಕ್ತರು ಕಷ್ಟಕ್ಕೆ ಬೆದರರು; ಮನಸ್ಸಿನ ತಾಪದಲ್ಲಿ/ ಸಿಟ್ಟಿನಲ್ಲಿ ಸುಧನ್ವನ ಹರಿಭಕ್ತಿಯನ್ನು ಕಾಣದೆ ತೊಂದರೆ ಕೊಟ್ಟೆವು, ಮೂರ್ಖತನವನ್ನು ಸರಿ ಎಂದು ತಿಳಿದು ಮರುಳಾದೆವು. ಬೇರೆ ಮಾತುಗಳು ಏಕೆ ಬೇಕು? ಸಾಕು. ಈ ಸುಧನ್ವನನ್ನು ಅನುಮತಿಕೊಟ್ಟು ಯುದ್ಧಕ್ಕೆ ಕಳುಹಿಸಿಕೊಡು.' ಎನ್ನಲು, ರಾಜನು ಶಂಖನನ್ನು ಕ್ಷಮಿಸಿ ಕರೆದು ಸಂತೋಷದಿಂದ ಅಪ್ಪಿಕೊಂಡನು.]
  • (ಪದ್ಯ- ೩)

ಪದ್ಯ :-:೪:

ಸಂಪಾದಿಸಿ

ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ | ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ | ಪೊಂದೇರನಳವಡಿಸಿ ತುರಂಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ ||
ಗೊಂದಣದ ಝಲ್ಲೆಗಳ ಕನಕಮಾಲೆಗಳ ಸ್ರ | ಕ್ಚಂದನ ವಿಭೂಷಣಾವಳಿಗಳಂ ಸಿಂಗರಿಸಿ | ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತಕುಸುಮಧನ್ವನು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಂದೆಯ ಚರಣಕೆ ಎರಗಿ ಶಂಖಲಿಖಿತರ ಪದಕೆ ವಂದಿಸಿ ಪರಕೆಗೊಂಡು ಸಾರಥಿಯನ ಆದರಿಸಿ=[ಸುಧ್ನ್ವನು, ತಂದೆಯ ಪಾದಕ್ಕೆ ನಮಸ್ಕರಿಸಿ, ಶಂಖಲಿಖಿತರ ಕಾಲುಗಳಿಗೆ ವಂದಿಸಿ ಅವರಿಂದ ಹರಕೆಪಡೆದು, ಸಾರಥಿಯನ್ನು ಉಪಚರಿಸಿ,]; ಪೊಂದೇರನು ಅಳವಡಿಸಿ ತುರಂಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ ಗೊಂದಣದ ಝಲ್ಲೆಗಳ ಕನಕಮಾಲೆಗಳ ಸ್ರಕ್ಚಂದನ ವಿಭೂಷಣಾವಳಿಗಳಂ ಸಿಂಗರಿಸಿ=[ಹೊನ್ನಿನ ರಥವನ್ನು ಸಿದ್ಧಮಾಡಿ, ಕುದುರೆಗಳನ್ನು ಹೂಡಿ, ಧ್ವಜವನ್ನು ಹಾರಿಸಿ ಸಿದ್ಧತೆಯನ್ನು ಪರೀಕ್ಷಿಸಿಮಾಡಿ ರಥವನ್ನು ಝಲ್ಲೆಗಳು ಚಿನ್ನದಮಾಲೆಗಳು ಚಂದನದ ಅಲಂಕಾರ ಮತ್ತು ವಡವೆ ಮೊದಲಾದವುಗಳಿಂದ ಸಿಂಗರಿಸಿ]; ಬಂದು ಅಡರ್ದಂ ಜಯರವದೊಳು ಆ ಸುಧನ್ವಂ ತಿರಸ್ಕೃತ ಕುಸುಮಧನ್ವನು(ಸುಧನ್ವ)=[ಬಂದು ವಿಜಯ ರವದಲ್ಲಿ ಆ ಸುಧನ್ವನು ಹತ್ತಿಕುಳಿತನು. ಮೊದಲು ತಿರಸ್ಕರಿಸಲ್ಪಟ್ಟ ಸುಧನ್ವನು.]
  • ತಾತ್ಪರ್ಯ: ಸುಧನ್ವನು, ತಂದೆಯ ಪಾದಕ್ಕೆ ನಮಸ್ಕರಿಸಿ, ಶಂಖಲಿಖಿತರ ಕಾಲುಗಳಿಗೆ ವಂದಿಸಿ ಅವರಿಂದ ಹರಕೆಪಡೆದು, ಸಾರಥಿಯನ್ನು ಉಪಚರಿಸಿ,ಹೊನ್ನಿನ ರಥವನ್ನು ಸಿದ್ಧಮಾಡಿ, ಕುದುರೆಗಳನ್ನು ಹೂಡಿ, ಧ್ವಜವನ್ನು ಹಾರಿಸಿ ಸಿದ್ಧತೆಯನ್ನು ಪರೀಕ್ಷೆಮಾಡಿ ರಥವನ್ನು ಝಲ್ಲೆಗಳು ಚಿನ್ನದಮಾಲೆಗಳು ಚಂದನದ ಅಲಂಕಾರ ಮತ್ತು ವಡವೆ ಮೊದಲಾದವುಗಳಿಂದ ಸಿಂಗರಿಸಿ, ಬಂದು ವಿಜಯ ರಥದಲ್ಲಿ ಆ ಸುಧನ್ವನು ಹತ್ತಿಕುಳಿತನು. ಮೊದಲು ತಿರಸ್ಕರಿಸಲ್ಪಟ್ಟ ಈ ಸುಧನ್ವನು. (ಸುಧನ್ವನಿಗೂ ಕುಸುಮಧ್ವಜನೆಂಬ ಹೆಸರಿದೆ)
  • (ಪದ್ಯ- ೪)

ಪದ್ಯ :-:೫:

ಸಂಪಾದಿಸಿ

ಕೇಳ್ಗುಣಮಣಿಯೆ ಧರೆಣಿಪಾಗ್ರಣಿಯೆ ತನ್ನ ಮಗ | ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ |ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು |
ತೋಳ್ಗುಟ್ಟುತಾರ್ದು ಸುಮ್ಮಾನದಿಂ ಪಟುಭಟರ್ ಕೋಳ್ಗೊಂಡು ಕುದಿಯುತಿರ್ದರು ಸಾರ್ಯೋಜನದೊ | ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೇಳ್ ಗುಣಮಣಿಯೆ ಧರೆಣಿಪಾಗ್ರಣಿಯೆ ತನ್ನ ಮಗನ ಏಳ್ಗೆಯಂ ಕಂಡು ಉಬ್ಬಿದಂ ಮರಾಳಧ್ವಜಂ=[ಗುಣವಂತ ರಾಜ ಜನಮೇಜಯನೇ ಕೇಳು, ತನ್ನ ಮಗನ ಏಳಿಗೆಯನ್ನು ಕಂಡು ಹಂಸಧ್ವಜನು ಉಬ್ಬಿಹೋದನು.];[ಸೂಳ್ಗೈದುವು (ಶಬ್ಧಮಾಡು)) ಆಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು, ತೋಳ್ಗುಟ್ಟುತ ಆರ್ದು ಸುಮ್ಮಾನದಿಂ ಪಟುಭಟರ್ ಕೋಳ್ಗೊಂಡು(ಕೋಲ್/ಬಿಲ್ಲು+ ಕೊಂಡು) ಕುದಿಯುತಿರ್ದರು ಸಾರ್ಧಯೋಜನದೊಳು=[ಆಗ ತಂಮಟೆ, ಭೇರಿ, ನಿಸ್ಸಾಳ, ಕಹಳೆ ಮೊದಲಾದ ವಾದ್ಯಗಳು ಮೊಳಗಿದವು. ತೋಳುಗಳನ್ನು ತಟ್ಟುತ್ತಾ ಆರ್ಭಟಿಸಿ, ಹುಮ್ಮಸ್ಸಿನಿಂದ ಪಟುಭಟರು(ಯೋಧರು) ಬಿಲ್ಲು ಹೂಡಿಕೊಂಡು)ಅರ್ಧಯೋಜನ ವಿಸ್ತಾರದಲ್ಲಿ ಯುದ್ಧೋತ್ಸಾಹದಿಂದ್ದರು.]; ಗಜ ತುರಂಗ ರಥವಿಟ್ಟಣಿಸಿ ನಡೆದುದು ಉತ್ಸಾಹದಿಂ ನರನ ಮೇಲೆ=[ಗಜ/ಆನೆ ತುರಗ ರಥಗಳು ಒತ್ತೊತ್ತಾಗಿ ಉತ್ಸಾಹದಿಂದ ಅರ್ಜುನನ ಮೇಲೆ ಯುದ್ಧಕ್ಕೆ ಹೊರಟಿತು.]
  • ತಾತ್ಪರ್ಯ: ಗುಣವಂತನಾದ ರಾಜ ಜನಮೇಜಯನೇ ಕೇಳು, ತನ್ನ ಮಗನ ಏಳಿಗೆಯನ್ನು ಕಂಡು ಹಂಸಧ್ವಜನು ಉಬ್ಬಿಹೋದನು.ಆಗ ತಂಮಟೆ, ಭೇರಿ, ನಿಸ್ಸಾಳ, ಕಹಳೆ ಮೊದಲಾದ ವಾದ್ಯಗಳು ಮೊಳಗಿದವು. ತೋಳುಗಳನ್ನು ತಟ್ಟುತ್ತಾ ಆರ್ಭಟಿಸಿ, ಹುಮ್ಮಸ್ಸಿನಿಂದ ಪಟುಭಟರು(ಯೋಧರು) ಬಿಲ್ಲು ಹೂಡಿಕೊಂಡು)ಅರ್ಧಯೋಜನ ವಿಸ್ತಾರದಲ್ಲಿ ಯುದ್ಧೋತ್ಸಾಹದಿಂದ್ದರು. ಗಜ/ಆನೆ ತುರಗ ರಥಗಳು ಒತ್ತೊತ್ತಾಗಿ ಉತ್ಸಾಹದಿಂದ ಅರ್ಜುನನ ಮೇಲೆ ಯುದ್ಧಕ್ಕೆ ಹೊರಟಿತು.
  • (ಪದ್ಯ- ೫)

ಪದ್ಯ :-:೬:

ಸಂಪಾದಿಸಿ

ಬೆರಬೆರಸುತೊತ್ತಿಡಿದು ಮುಂದೆ ಭರದಿಂದೆ ನಡೆ | ವರಸರಸುಗಳ ಕಂಠಮಾಲೆಗಳ ತೋರಮು | ತ್ತೊರಸೊರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ ||
ಪೊರೆದ ಸಂಧ್ಯಾರುಣದ ಗಗನಮಂಡಲದೊಳಂ | ಕುರಿಸಿದುಡುಗುಣದಂತೆ ರಂಜಿಸಿತು ದೆಸೆದೆಸೆಗೆ | ಪರಿಮಳದೆಲರ್ ಪರಿದುದಗರುಚಂದನ ಯಕ್ಷ ಕರ್ದಮದ ಮೊಗವಾಸದ ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬೆರಬೆರಸುತ ಒತ್ತಿಡಿದು ಮುಂದೆ ಭರದಿಂದೆ ನಡೆವ ಅರಸರಸುಗಳ ಕಂಠಮಾಲೆಗಳ ತೋರ ಮುತ್ತು ಒರಸೊರಸು=[ಒಬ್ಬರಿಗೊಬ್ಬರುಸೇರತ್ತಾ ಬೆರಬೆರಯುತ್ತಾ ಒಬ್ಬರಿಗೊಬ್ಬರುಒತ್ತಿಕೊಂಡು, ಮುಂದೆ ವೇಗವಾಗಿ ನಡೆವ ಅರಸು ಅರಸುಗಳ ಕಂಠಮಾಲೆಗಳ ದೊಡ್ಡ ಮುತ್ತು ಪರಸ್ಪರ ಒರಸುತ್ತಾ]; ಮಿಗೆ ಪರಿದವರ ಸೂಸುದಂಬುಲದ ಚೆನ್ನ ನೆಲದ ಮೇಲೆ ಒಕ್ಕಿರೆ (ಬಿದ್ದ) ಪೊರೆದ (ಅದಕ್ಕೆ ಪೋಷಣವಾಗಿ) ಸಂಧ್ಯಾರುಣದ ಗಗನಮಂಡಲದೊಳ್ ಅಂಕುರಿಸಿದ ಉಡುಗುಣ (ನಕ್ಷತ್ರ)ದಂತೆ ರಂಜಿಸಿತು=[ಮತ್ತೆ ಮುಂದೆ ಹೋದವರು ಉಗುಳಿದ ತಾಂಬೂಲದ, ಕೆಂಪು ನೆಲದ ಮೇಲೆ ಬಿದ್ದಿರುವ ಅದಕ್ಕೆ ಪೋಷಣವಾಗಿ ಸಂಧ್ಯಾರುಣದ ಕೆಂಪು ಬಿಸಿಲು, ಗಗನಮಂಡಲದಲ್ಲಿ ಮೂಡಿದ ನಕ್ಷತ್ರಗಳಂತೆ ಪ್ರಕಾಶಿಸಿತು;]; ದೆಸೆದೆಸೆಗೆ ಪರಿಮಳದ ಎಲರ್(ಅಲರ್) ಪರಿದುದು ಅಗರು ಚಂದನ ಯಕ್ಷ ಕರ್ದಮದ ಮೊಗವಾಸದ (ಮುಖವಾಸದ = ಬಾಯಿಯ )=[ ದಿಕ್ಕು ದಿಕ್ಕಿಗೆ ತಾಂಬೂಲ ಅಗಿಯುವಾಗ ಅವರ ಬಾಯಿಯಿಂದ ಅಗರು ಚಂದನ ಯಕ್ಷ ಕರ್ಪುರದ ಪರಿಮಳದ ಗಾಳಿ ಎಲ್ಲಡೆ ಹರಡಿತು.].
  • ತಾತ್ಪರ್ಯ: ಒಬ್ಬರಿಗೊಬ್ಬರು ಸೇರತ್ತಾ ಬೆರಬೆರಯುತ್ತಾ ಒಬ್ಬರಿಗೊಬ್ಬರು ಒತ್ತಿಕೊಂಡು, ಮುಂದೆ ವೇಗವಾಗಿ ನಡೆವ ಅರಸು ಅರಸುಗಳ ಕಂಠಮಾಲೆಗಳ ದೊಡ್ಡ ಮುತ್ತು ಪರಸ್ಪರ ಒರಸುತ್ತಾ, ಮತ್ತೆ ಮುಂದೆ ಹೋದವರು ಉಗುಳಿದ ತಾಂಬೂಲದ, ಕೆಂಪು ನೆಲದ ಮೇಲೆ ಬಿದ್ದಿರುವ ಅದಕ್ಕೆ ಪೋಷಣವಾಗಿ ಸಂಧ್ಯಾರುಣದ ಕೆಂಪು ಬಿಸಿಲು,ಗಗನಮಂಡಲದಲ್ಲಿ ಮೂಡಿದ ನಕ್ಷತ್ರಗಳಂತೆ ಪ್ರಕಾಶಿಸಿತು; ದಿಕ್ಕು ದಿಕ್ಕಿಗೆ ತಾಂಬೂಲ ಅಗಿಯುವಾಗ ಅವರ ಬಾಯಿಯಿಂದ ಅಗರು ಚಂದನ ಯಕ್ಷ ಕರ್ಪುರದ ಪರಿಮಳದ ಗಾಳಿ ಎಲ್ಲಡೆ ಹರಡಿತು.
  • (ಪದ್ಯ- ೬)

ಪದ್ಯ :-:೭:

ಸಂಪಾದಿಸಿ

ಪಡೆಯೊಳನ್ನೋನ್ಯ ಸಂಘರ್ಷಣದೊಳೊಗುವ ಪೊಂ |ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ |ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ ||
ಪೊಡವಿಯಿಂದಿರದೇಳ್ವ ರುಣರಜಂಗಳೊ ತಿಳಿದು | ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಂ | ಪಿಡಿದ ದಿವಿಭಾಗಮಂ ಜನವನೆಚ್ಚರಿಪಂತೆ ಕೆಂಧೂಳಿ ಮಸಗಿತಾಗ ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಡೆಯೊಳು ಅನ್ನೋನ್ಯ ಸಂಘರ್ಷಣದೊಳು ಒಗುವ(ಉದುರುವ) ಪೊಂದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿವಡೆದ ಕುಂಕುಮ ಸುಗಂಧ ಅನುಲೇಪನದ ಚೂರ್ಣಂಗಳೋ=[ಸೈನ್ಯದಲ್ಲಿ ಪರಸ್ಪರ ಸಂಘರ್ಷಣದಿಂದ ಉದುರುವ ಚಿನ್ನದ ಒಡವೆಗಳ ಪುಡಿಯೋ! ಮೈಗಳನ್ನು ಸೋಕಿ ಪುಡಿಯಾದ ಕುಂಕುಮ ಸುಗಂಧ ಅನುಲೇಪನದ ಚೂರುಗಳೋ!]; ಪದಘಾತಿಗೆ ಪೊಡವಿಯಿಂದ ಇರದೆ ಏಳ್ವ ಅರುಣರಜಂಗಳೊ ತಿಳಿದುನುಡಿಯಲು ಅರಿದು ಎಂಬಿನಂ=[ಸೈನಿಕರ ಪದಘಾತಿಗೆ ಭೂಮಿಯಿಂದ ಮೇಲೆ ಏಳುತ್ತಿರುವ ಕೆಂಪು ಧೂಳೋ! ಸರಿಯಾಗಿ ತಿಳಿದು ಹೇಳಲು ಅಸಾಧ್ಯ ಎಂಬಂತೆ]; ಮೇರುವಿನ ಬಣ್ಣಮಂಪಿಡಿದ ದಿವಿಭಾಗಮಂ ಜನವನೆಚ್ಚರಿಪಂತೆ ಕೆಂಧೂಳಿ ಮಸಗಿತಾಗ=[ಹೊನ್ನಿನ ಬೆಟ್ಟ ಮೇರುವಿನ ಬಣ್ಣವನ್ನು ಹೊಂದಿದ ಆಕಾಶವನ್ನು ಕೆಂಪು ಧೋಳು ಜನರನ್ನು ಎಚ್ಚರಿವಂತೆ ಆಸಮಯದಲ್ಲಿ ಮುಸುಗಿತ್ತು.].
  • ತಾತ್ಪರ್ಯ: ಸೈನ್ಯದಲ್ಲಿ ಪರಸ್ಪರ ಸಂಘರ್ಷಣದಿಂದ ಉದುರುವ ಚಿನ್ನದ ಒಡವೆಗಳ ಪುಡಿಯೋ! ಮೈಗಳನ್ನು ಸೋಕಿ ಪುಡಿಯಾದ ಕುಂಕುಮ ಸುಗಂಧ ಅನುಲೇಪನದ ಚೂರುಗಳೋ! ಸೈನಿಕರ ಪದಘಾತಿಗೆ ಭೂಮಿಯಿಂದ ಮೇಲೆ ಏಳುತ್ತಿರುವ ಕೆಂಪು ಧೂಳೋ! ಸರಿಯಾಗಿ ತಿಳಿದು ಹೇಳಲು ಅಸಾಧ್ಯ ಎಂಬಂತೆ; ಹೊನ್ನಿನ ಬೆಟ್ಟ ಮೇರುವಿನ ಬಣ್ಣವನ್ನು ಹೊಂದಿದ ಆಕಾಶವನ್ನು ಕೆಂಪು ಧೋಳು ಜನರನ್ನು ಎಚ್ಚರಿವಂತೆ ಆಸಮಯದಲ್ಲಿ ಮುಸುಗಿತ್ತು.
  • (ಪದ್ಯ- ೭)

ಪದ್ಯ :-:೮:

ಸಂಪಾದಿಸಿ

ಮೊಗಗೈಗಳಿಂ ತಮ್ಮೊಡಲ ನೀರನಾನೆಗಳ್ | ತೆಗೆದು ಚೆಲ್ಲಲ್ ಪೊನಲ್ವರಿದ ಮಡುಗಳ ಕೆಸರೊ | ಳೊಗೆದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದು ||
ಮಿಗೆ ಸುಳಿವ ಚಾಮರಂಗಳ ರಾಜಹಂಸಾವ | ಳಿಗಳ ಸಂಚಾರಮಂ ಕೆಳಗೊಂಡ ಬೆಳುದಾವ | ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ತಿಡಿದ ಸತ್ತಿಗೆಯ ಸಾಲ್ಗಳು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊಗಗೈಗಳಿಂ (ಮೊಗ-ಮುಖದ- ಕೈಗಳಿಂ-ಸೊಂಡಿಲಿನಿಂದ)-) ತಮ್ಮೊಡಲ ನೀರನು ಅನೆಗಳ್ ತೆಗೆದು ಚೆಲ್ಲಲ್ ಪೊನಲ್ವರಿದ (ಹೊನಲು +ಹರಿದ) ಮಡುಗಳ ಕೆಸರೊಳು=[ಸೊಂಡಿಲಿನಿಂದ ತಮ್ಮ ದೇಹದ ನೀರನ್ನು ಎಂದರೆ ಮದೋದಕವನ್ನು ಅನೆಗಳು ತೆಗೆದು ಚೆಲ್ಲಲು ಹೊಳೆಯಾಗಿ ಹರಿದ ಮಡುಗಳ ಕೆಸರಲ್ಲಿ];ಒಗೆದ ರಾಜರ ಚಿನ್ನದ ಆಭರಣದ ಕಿರಣ ತರುಣ ಆತಪದೊಳು(ಬಿಸಿಲು) ಅಲರ್ದು ಮಿಗೆ ಸುಳಿವ ಚಾಮರಂಗಳ ರಾಜಹಂಸಾವಳಿಗಳ ಸಂಚಾರಮಂ ಕೆಳಗೊಂಡ ಬೆಳುದಾವರೆಗಳ ಹಂತಿಗಳಂತೆ=[ಒಗೆದ ನೃಪಮಂಡಲದ ಕನಕಾಭರಣ ಎಳೆಯ ಕಿರಣವುಳ್ಳ ಬಿಸಿಲಿನಲ್ಲಿ ಆರಳಿದ್ದು ಮತ್ತೆ ಅಲ್ಲಿ ಸುಳಿವ ಚಾಮರಗಳೆಂಬ ರಾಜಹಂಸಾವಳಿಗಳ ಸಂಚಾರವನ್ನು ಕಾಂತಿಹೊಂದಿದ ಬಿಳಿತಾವರೆಗಳ ಸಾಲಿನಂತೆ ]; ಪಡೆಯೊಳು ಎಸೆದುವು ತಳ್ತು(ಅರಳಿ) ಇಡಿದ(ಒತ್ತಾಗಿ) ಸತ್ತಿಗೆಯ(ಛತ್ರಿ) ಸಾಲ್ಗಳು=[ಸೈನ್ಯದಲ್ಲಿ ಛತ್ರಿಯ ಸಾಲುಗಳು ಛತ್ರಿಗಳು ಅರಳಿ ಒತ್ತಾಗಿ ಶೋಬಿಸಿದವು]
  • ತಾತ್ಪರ್ಯ:ಸೊಂಡಿಲಿನಿಂದ ತಮ್ಮ ದೇಹದ ನೀರನ್ನು ಎಂದರೆ ಮದೋದಕವನ್ನು ಅನೆಗಳು ತೆಗೆದು ಚೆಲ್ಲಲು ಹೊಳೆಯಾಗಿ ಹರಿದ ಮಡುಗಳ ಕೆಸರಲ್ಲಿ ಒಗೆದ ರಾಜರ ಚಿನ್ನದ ಆಭರಣಗಳು ಎಳೆಯ ಕಿರಣವುಳ್ಳ ಬಿಸಿಲಿನಲ್ಲಿ ಆರಳಿದ್ದವು, ಮತ್ತೆ ಅಲ್ಲಿ ಸುಳಿವ ಚಾಮರಗಳೆಂಬ ರಾಜಹಂಸಾವಳಿಗಳ ಸಂಚಾರವು ಕಾಂತಿಹೊಂದಿದ ಬಿಳಿತಾವರೆಗಳ ಸಾಲಿನಂತೆ ಕಾಣುತ್ತಿತ್ತು. ಸೈನ್ಯದಲ್ಲಿ ಛತ್ರಿಯ ಸಾಲುಗಳು ಅರಳಿ ಒತ್ತಾಗಿ ಶೋಬಿಸಿದವು
  • (ಪದ್ಯ- ೮)XXX

ಪದ್ಯ :-:೯:

ಸಂಪಾದಿಸಿ

ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ | ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ | ಸುಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋ ಮಂಡಲಂ ಮೀರಿದ ||
ಬಿಂಕದಿಂದಿರಿವ ಕಲಿತನಕೆ ರಣಮಂಡಲಂ | ಸಂಕೋಚಮೆನೆ ಬಂದು ಪಿಡಿದು ಪಾರ್ಥನ ತುರುಗ | ಮಂ ಕಟ್ಟಿ ಬಳಸಿ ಪದ್ಮವ್ಯೂಹಮಾಗಿ ನಿಮದಾರ್ದುದಾ ಸೇನೆ ನಲಿದು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುಂಕೊಂಬ(ಮುಂದೆ ಕೊಂಬ) ಮಂದಿ(ಪದಾತಿಜನ) ಕುದುರೆಗೆ(ಕುದುರೆಸೈನ್ಯ) ಧರಾಮಂಡಲಂ ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ=[ಮುಂದೆ ನುಗ್ಗುವ ಪದಾತಿಭಟರಿಗೂ, ಕುದುರೆಸೈನ್ಯಕ್ಕೂ, ಭೂಮಿಯು, ಒಟ್ಟುಸೇರಿದ ವಾದ್ಯಧ್ವನಿಗೆ ದಿಕ್ಕುಗಳಲ್ಲವೂ, (ಆವರಿಸಿತ್ತು)]; ಸುಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋ ಮಂಡಲಂ ಮೀರಿದ ಬಿಂಕದಿಂದಿರಿವ ಕಲಿತನಕೆ ರಣಮಂಡಲಂ ಸಂಕೋಚಮೆನೆ=[ಲೆಕ್ಕಮಾಡಲು ಆಗದಷ್ಟು ಛತ್ರಿ, ಚೌರಿ ಪತಾಕೆಗಳಿಗೆ ಆಕಾಶ ಮಂಡಲವನ್ನೂ ಮೀರಿ ಹೆಮ್ಮೆಯಿಂದಿ ಇರಿಯುವ ಶೌರ್ಯಕ್ಕೆ ಯುದ್ಧಭೂಮಿಯು ಸಾಲದೆಂಬಂತೆ]; ಬಂದು ಪಿಡಿದು ಪಾರ್ಥನ ತುರುಗಮಂ ಕಟ್ಟಿ ಬಳಸಿ ಪದ್ಮವ್ಯೂಹಮಾಗಿ ನಿಮದಾರ್ದುದಾ ಸೇನೆ ನಲಿದು=[ಪಾರ್ಥನ ತುರುಗವನ್ನು ಬಂದು ಹಿಡಿದು ಕಟ್ಟಿ ಅದನ್ನು ಸುತ್ತುವರೆದು,ಪದ್ಮವ್ಯೂಹರಚನೆಯಲ್ಲಿ ಆ ಸುಧನ್ವನ ಸೇನೆ ಸಂತೋಶದಿಂದ ಇತ್ತು].
  • ತಾತ್ಪರ್ಯ:ಸುಧನ್ವನ ಸೈನ್ಯವು, ಮುಂದೆ ನುಗ್ಗುವ ಪದಾತಿಭಟರಿಗೂ, ಕುದುರೆಸೈನ್ಯಕ್ಕೂ, ಭೂಮಿಯು ಸಾಲದೆಂಬಂತೆ ಆವರಿಸಿತ್ತು, ಒಟ್ಟುಸೇರಿದ ವಾದ್ಯಧ್ವನಿಗೆ ದಿಕ್ಕುಗಳೆಲ್ಲ ತುಂಬಿಹೋದವು; ಲೆಕ್ಕಮಾಡಲು ಆಗದಷ್ಟು ಛತ್ರಿ, ಚೌರಿ /ಚಾಮರ ಪತಾಕೆಗಳಿಗೆ ಆಕಾಶ ಮಂಡಲವನ್ನೂ ಮೀರಿತ್ತು; ಹೆಮ್ಮೆಯಿಂದಿ ಇರಿಯುವ ಶೌರ್ಯಕ್ಕೆ ಯುದ್ಧಭೂಮಿಯು ಸಾಲದೆಂಬಂತೆ ಆಯಿತು; ಪಾರ್ಥನ ತುರುಗವನ್ನು ಬಂದು ಹಿಡಿದು ಕಟ್ಟಿ ಅದನ್ನು ಸುತ್ತುವರೆದು,ಪದ್ಮವ್ಯೂಹರಚನೆಯಲ್ಲಿ ಆ ಸುಧನ್ವನ ಸೇನೆ ಸಂತೋಶದಿಂದ ಇತ್ತು].
  • (ಪದ್ಯ- ೯)

ಪದ್ಯ :-:೧೦:

ಸಂಪಾದಿಸಿ

ಸುತ್ತ ಪದ್ಮವ್ಯೂಹಮಂ ರಚಿಸಿನಡುವೆ ನರ | ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ | ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತ ರಸನಾಜ್ಞೆಯಿಂದೆ ||
ಇತ್ತ ಪಾರ್ಥಂಗೆ ಚರರೈತಂದು ನುಡಿದರೀ | ವೃತ್ತಾಂತಮಂ ಬಳಿಕ ಪ್ರದ್ಯುಮ್ಯನಂ ಕರೆದು | ಮತ್ತೆ ಬಂದುದು ವಿಘ್ನಮಿದುಕಿನ್ನುಪಾಯಮೇನೆಂದೊಡವನಿಂತೆಂದನು||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುತ್ತ ಪದ್ಮವ್ಯೂಹಮಂ ರಚಿಸಿ ನಡುವೆ ನರನ ಉತ್ತಮ ತುರಂಗಮಂ ಕಟ್ಟಿ ಕಾಳಗಕೆ ಭಟರೊತ್ತಾಗಿ ನಿಂದರು ಅರಿವೀರರಂ ಬರಹೇಳು ಎನುತ್ತ ಅರಸನ ಆಜ್ಞೆಯಿಂದೆ=[ಅರಸ ಹಂಸಧ್ವಜನ ಆಜ್ಞೆಯಿಂದ ಕುದುರೆಯ ಸುತ್ತ ಪದ್ಮವ್ಯೂಹವನ್ನು ರಚಿಸಿ ನಡುವೆ ಪಾರ್ಥನ ಯಜ್ಞದ ಕುದುರೆಯನ್ನು ಕಟ್ಟಿ ಕಾಳಗಕ್ಕೆ ಭಟರು ಒಟ್ಟಾಗಿ, ಶತ್ರುಗಳಕಡೆಯ ವೀರರನ್ನು ಯುದ್ಧಕ್ಕೆಬರಲು ಹೇಳು ಎನುತ್ತಾ ನಿಂತರು,]; ಇತ್ತ ಪಾರ್ಥಂಗೆ ಚರರು ಐತಂದು ನುಡಿದರು ಈ ನೃತ್ತಾಂತಮಂ=[ಇತ್ತ ಪಾರ್ಥನಿಗೆಗೆ ಚಾರರು ಬಂದು ಈ ವೃತ್ತಾಂತವನ್ನು ಹೇಳಿದರು.]; ಬಳಿಕ ಪ್ರದ್ಯುಮ್ಯನಂ ಕರೆದು ಮತ್ತೆ ಬಂದುದು ವಿಘ್ನಮು ಇದುಕೆ ಇನ್ನು ಉಪಾಯಮು ಏನೆಂದಡೆ ಅವನು ಇಂತೆಂದನು=[ಬಳಿಕ ಅರ್ಜುನನು ಪ್ರದ್ಯುಮ್ಯನನ್ನು ಕರೆದು ಮತ್ತೆ ಕುದುರೆಯನ್ನು ತಡೆದು ಯಜ್ಞಕ್ಕೆ ವಿಘ್ನವು ಬಂದಿತು, ಇದಕ್ಕೆ ಇನ್ನು ಕುದುರೆ ಬಿಡಿಸಲು ಮುಂದಿನ ಕಾರ್ಯ ಯಾವುದು? ಎಂದಾಗ, ಅವನು ಹೀಗೆ ಹೇಳಿದನು].
  • ತಾತ್ಪರ್ಯ: ಅರಸ ಹಂಸಧ್ವಜನ ಆಜ್ಞೆಯಿಂದ ಕುದುರೆಯ ಸುತ್ತ ಪದ್ಮವ್ಯೂಹವನ್ನು ರಚಿಸಿ ನಡುವೆ ಪಾರ್ಥನ ಯಜ್ಞದ ಕುದುರೆಯನ್ನು ಕಟ್ಟಿ ಕಾಳಗಕ್ಕೆ ಭಟರು ಒಟ್ಟಾಗಿ, ಶತ್ರುಗಳ ಕಡೆಯ ವೀರರನ್ನು ಯುದ್ಧಕ್ಕೆಬರಲು ಹೇಳು ಎನುತ್ತಾ ನಿಂತರು. ಇತ್ತ ಪಾರ್ಥನಿಗೆ ಚಾರರು ಬಂದು ಈ ವೃತ್ತಾಂತವನ್ನು ಹೇಳಿದರು. ಬಳಿಕ ಅರ್ಜುನನು ಪ್ರದ್ಯುಮ್ಯನನ್ನು ಕರೆದು ಮತ್ತೆ ಕುದುರೆಯನ್ನು ತಡೆದು ಯಜ್ಞಕ್ಕೆ ವಿಘ್ನವು ಬಂದಿತು, ಇನ್ನು ಕುದುರೆ ಬಿಡಿಸಲು ಮುಂದಿನ ಕಾರ್ಯ ಯಾವುದು? ಎಂದಾಗ, ಅವನು ಹೀಗೆ ಹೇಳಿದನು.
  • (ಪದ್ಯ- ೧೦)

ಪದ್ಯ :-:೧೧:

ಸಂಪಾದಿಸಿ

ನಿನ್ನಂ ಕಳುಹುವಂದು ಹಯದ ಮೇಲಾರೈಕೆ | ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ | ಮನ್ನಿಸುವ ಕಾಲಮಲ್ಲವೆ ತನಗೆ ನೀನಿದಕ್ಕೆಣಿಕೆಗೊಳಬಹುದೆ ಬರಿದೆ ||
ತನ್ಮ ಭೂಜಬಲದಿಂದೆ ಬಿಡಿಸಿ ತಂದಪೆನಶ್ವ | ಮುನ್ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು | ಪನ್ಮಗಾರಿಧ್ವಜನ ತನಯನೈದಿದನಹಿತ ಮೋಹರಕೆ ಸೇನೆಸಹಿತ ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿನ್ನಂ ಕಳುಹುವಂದು ಹಯದ ಮೇಲೆ ಆರೈಕೆಗೆ ಎನ್ನನು ಅಟ್ಟಿದನಲಾ ಪಿತನು=[ನಿನ್ನನ್ನು ಕಾವಲಿಗೆ ಕಳುಹಿಸುವಾಗ, ತಂದೆ ಕೃಷ್ಣನು ಕುದುರೆಯ ಮೇಲು-ಕಾವಲಿಗೆ ನನ್ನನ್ನು ಕಳಹಿಸಿದನು]; ಆತನ ಆಜ್ಞೆಯಂ ಮನ್ನಿಸುವ ಕಾಲಮ್ ಅಲ್ಲವೆ ತನಗೆ ನೀನು ಇದಕ್ಕೆ ಎಣಿಕೆಗೊಳಬಹುದೆ ಬರಿದೆ=[ಆತನ ಆಜ್ಞೆಯನ್ನು ತನಗೆ ಗೌರವಿಸುವ ಕಾಲವು ಇದಲ್ಲವೆ? ನೀನ ಇದಕ್ಕೆ ಬರಿದೆ ಸಂಕೋಚಪಡಬಹುದೆ?]; ತನ್ನ ಭೂಜಬಲದಿಂದೆ ಬಿಡಿಸಿ ತಂದಪೆನು ಅಶ್ವಮಂ, ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು ಪನ್ಮಗಾರಿಧ್ವಜನ (ಗರಡಧ್ವಜನ) ತನಯನು ಐದಿದನು ಅಹಿತ(ಶತ್ರುಗಳ) ಮೋಹರಕೆ ಸೇನೆಸಹಿತ=[ತನ್ನ ಭೂಜಬಲದಿಂದೆ ಬಿಡಿಸಿ ಅಶ್ವವನ್ನು ತರುವೆನು ನೋಡು ಸಾಕು! ಎನ್ನುತ್ತಾ ಪಾರ್ಥನನ್ನು ಬೀಳ್ಕೊಂಡು ಕೃಷ್ನನ ಮಗನು ಸೇನೆಸಹಿತ ಶತ್ರುಗಳ ಸೈನ್ಯವನ್ನು ಎದುರಿಸಲು ಬಂದನು.].
  • ತಾತ್ಪರ್ಯ: ಅರ್ಜುನಾ, ನಿನ್ನನ್ನು ಕಾವಲಿಗೆ ಕಳುಹಿಸುವಾಗ, ನನ್ನ ತಂದೆ ಕೃಷ್ಣನು ಕುದುರೆಯ ಮೇಲು-ಕಾವಲಿಗೆ ನನ್ನನ್ನು ಕಳಹಿಸಿದನು. ಆತನ ಆಜ್ಞೆಯನ್ನು ತನಗೆ ಗೌರವಿಸುವ ಕಾಲವು ಇದಲ್ಲವೆ? ನೀನ ಇದಕ್ಕೆ ಬರಿದೆ ಸಂಕೋಚಪಡಬಹುದೆ? ತನ್ನ ಭೂಜಬಲದಿಂದೆ ಬಿಡಿಸಿ ಅಶ್ವವನ್ನು ತರುವೆನು ನೋಡು ಸಾಕು! ಎನ್ನುತ್ತಾ ಪಾರ್ಥನನ್ನು ಬೀಳ್ಕೊಂಡು ಕೃಷ್ನನ ಮಗನು ಸೇನೆಸಹಿತ ಶತ್ರುಗಳ ಸೈನ್ಯವನ್ನು ಎದುರಿಸಲು ಬಂದನು.
  • (ಪದ್ಯ- ೧೧)

ಪದ್ಯ :-:೧೨:

ಸಂಪಾದಿಸಿ

ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ | ಶಠ ನಿಶಠರನಿರುದ್ಧ ಗದ ಮುಖ್ಯರಾದ ಪಟು | ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ ||
ದಿಟಮಿಂದಜಾಂಡಘಟಮೊಡೆಯದಿರದೆಂಬಿನಂ | ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ | ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳೆ ಬಹುಳರವಮಳ್ಳಿರಿದುದು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಲಟಕಟಿಸುತು ಆಗ(ಆತುರಪಡು-ಅಬ್ಬರಿಸು) ಸಾತ್ಯಕಿ, ಸಾಂಬ. ಕೃತವರ್ಮ, ಶಠ ನಿಶಠರು, ಅನಿರುದ್ಧ ಗದ ಮುಖ್ಯರಾದ ಪಟುಭಟರು ಅಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ=[ಆಗ ಸಾತ್ಯಕಿ, ಸಾಂಬ. ಕೃತವರ್ಮ, ಶಠ ನಿಶಠರು, ಅನಿರುದ್ಧ ಗದ ಮುಖ್ಯರಾದ ವೀರಭಟರು ಎಲ್ಲಾ ಯಾದವ ಚತುರ್ಬಲವೂ ಒಟ್ಟಾಗಿ ಸಮರಸನ್ನಾಹದಿಂದ ಆತುರಪಡುತ್ತಾ-ಅಬ್ಬರಿಸಿತು]; ದಿಟಂ ಇದು ಅಜಾಂಡಘಟಮ್ ಒಡೆಯದಿರದು ಎಂಬಿನಂ ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳೆ ಬಹುಳ ರವಂ ಅಳ್ಳಿರಿದುದು(ಅಳ್ಳಿರಿ=ಗರ್ಜಿಸು)=[ಇದು ನಿಜವಾಗಿಯೂ ಬ್ರಹ್ಮಾಂಡವನ್ನು ಒಡೆಯದೆ ಇರದು ಎಂಬಂತೆ, ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳೆ ಮೊದಲಾದ ಬಹಳ ಬಗೆಯ ರಣವಾದ್ಯದ ಶಬ್ಧಗಳು ಗರ್ಜಿಸಿದವು.]
  • ತಾತ್ಪರ್ಯ:ಆಗ ಸಾತ್ಯಕಿ, ಸಾಂಬ. ಕೃತವರ್ಮ, ಶಠ ನಿಶಠರು, ಅನಿರುದ್ಧ ಗದ ಮುಖ್ಯರಾದ ವೀರಭಟರು ಎಲ್ಲಾ ಯಾದವ ಚತುರ್ಬಲವೂ ಒಟ್ಟಾಗಿ ಸಮರಸನ್ನಾಹದಿಂದ ಆತುರಪಡುತ್ತಾ-ಅಬ್ಬರಿಸಿತು; ಇದು ನಿಜವಾಗಿಯೂ ಬ್ರಹ್ಮಾಂಡವನ್ನು ಒಡೆಯದೆ ಇರದು ಎಂಬಂತೆ, ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳೆ ಮೊದಲಾದ ಬಹಳ ಬಗೆಯ ರಣವಾದ್ಯದ ಶಬ್ಧಗಳು ಗರ್ಜಿಸಿದವು.
  • (ಪದ್ಯ- ೧೨)

ಪದ್ಯ :-:೧೩:

ಸಂಪಾದಿಸಿ

ಮೊಗಸಿತರಿಬಲವನನುಸಾಲ್ವಕನ ಸೇನೆಯೂ | ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ | ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು ||
ಯುಗದಂತ್ಯದಭ್ರದಂತೆದ್ದುದುರವಣಿಸಿ ಸಂ | ಯುಗಕೆ ನೀಲಧ್ವಜದ ಸೈನಿಕಂ ಬಳಿಕ ಕರ | ಯುಗಳಂ ಮುಗಿದು ಕಿರೀಟಿಗೆ ವಿನಯದಿಂದೆ ಬಿನ್ನೈಸಿದಂ ಕರ್ಣಸೂನು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೊಗಸಿತು (ಎದುರಿಸಿತು) ಅರಿಬಲವನು ಅನುಸಾಲ್ವಕನ ಸೇನೆಯು ಒಮ್ಮೊಗದೊಳು ಒರೆಯುಗಿದ (ಪೊರೆಬಿಟ್ಟ) ಫಣಿಕುಲದಂತೆ ರಣದವಕ(ರಣ+ತವಕ) ಮೊಗದು ಒದಗಿತು ಅಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಂ ಒಂದೆಸೆಯೊಳು=[ಅನುಸಾಲ್ವನ ಸೇನೆಯು ಶತ್ರುಸೈನ್ಯವನ್ನು ಒಂದು ದಿಕ್ಕಿನಲ್ಲಿ ಒಟ್ಟಾಗಿ ಪೊರೆಬಿಟ್ಟ ಸರ್ಪಗಳಂತೆ ಯುದ್ಧದ ಉತ್ಸಾಹದಿಂದ ಸಮುದ್ರದ ತೆರೆಯಂತೆ ಮೊಗೆಮೊಗೆದು ನುಗ್ಗಿತು. ಹೀಗೆ ಯೌವನಾಶ್ವನ ಸೈನ್ಯವು ಒಂದು ದಿಕ್ಕಿನಲ್ಲಿ ಶತ್ರುಸೈನ್ಯವನ್ನು- ]; ಯುಗದ ಅಂತ್ಯದ ಅಭ್ರದಂತೆ ಎದ್ದು ಉದುರವಣಿಸಿ (ಪರಾಕ್ರಮದಿಂದ) ಸಂಯುಗಕೆ ನೀಲಧ್ವಜದ ಸೈನಿಕಂ=[ ನೀಲಧ್ವಜನ ಸೈನಿಕರು ಯುಗದ ಅಂತ್ಯದಲ್ಲಿ ಸೇರುವ ಮೋಡದಂತೆ ಎದ್ದು ಪರಾಕ್ರಮದಿಂದೆ ಎದುರಿಸಿದರು ]; ಬಳಿಕ ಕರಯುಗಳಂ ಮುಗಿದು ಕಿರೀಟಿಗೆ ವಿನಯದಿಂದೆ ಬಿನ್ನೈಸಿದಂ ಕರ್ಣಸೂನು=[ಬಳಿಕ ಅರ್ಜುನನಿಗೆ ಎರಡೂ ಕೈಗಳನ್ನು ಮುಗಿದು,ವೃಷಕೇತುವು ವಿನಯದಿಂದೆ ವಿಜ್ಞಾಪನೆ ಮಾಡಿದನು.]
  • ತಾತ್ಪರ್ಯ: ಅನುಸಾಲ್ವನ ಸೇನೆಯು ಶತ್ರುಸೈನ್ಯವನ್ನು ಒಂದು ದಿಕ್ಕಿನಲ್ಲಿ ಒಟ್ಟಾಗಿ ಪೊರೆಬಿಟ್ಟ ಸರ್ಪಗಳಂತೆ ಯುದ್ಧದ ಉತ್ಸಾಹದಿಂದ ಸಮುದ್ರದ ತೆರೆಯಂತೆ ಮೊಗೆಮೊಗೆದು ನುಗ್ಗಿತು. ಹೀಗೆ ಯೌವನಾಶ್ವನ ಸೈನ್ಯವು ಒಂದು ದಿಕ್ಕಿನಲ್ಲಿ, ಯುಗದ ಅಂತ್ಯದಲ್ಲಿ ಸೇರುವ ಮೋಡದಂತೆ ಎದ್ದು ಪರಾಕ್ರಮದಿಂದ ಬಂದ ನೀಲಧ್ವಜನ ಸೈನಿಕರನ್ನು ಎದುರಿಸಿದರು; ಬಳಿಕ ಕರಯುಗಳಂ ಮುಗಿದು ಕಿರೀಟಿಗೆ ವಿನಯದಿಂದೆ ಬಿನ್ನೈಸಿದಂ ಕರ್ಣಸೂನು=[ಬಳಿಕ ಅರ್ಜುನನಿಗೆ ಎರಡೂ ಕೈಗಳನ್ನು ಮುಗಿದು,ವೃಷಕೇತುವು ವಿನಯದಿಂದೆ ವಿಜ್ಞಾಪನೆ ಮಾಡಿದನು.
  • (ಪದ್ಯ- ೧೩)

ಪದ್ಯ :-:೧೪:

ಸಂಪಾದಿಸಿ

ತಾತ ಚಿತ್ತೈಸು ಗೋಷ್ಪದಜಲಕೆ ಹರಿಗೋಲ | ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ | ರೀತಗಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು ||
ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ | ಜಾತನ ಕುಮಾರಕನೆ ನೋಡು ಸಾಕೆನುತ ವೃಷ | ಕೇತು ಪಾರ್ಥನ ಬೆಸಂಬಡೆದು ರಥವೇರಿದಂ ಮೀರಿದ ಪರಾಕ್ರಮದೊಳು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾತ ಚಿತ್ತೈಸು ಗೋಷ್ಪದಜಲಕೆ (ಗೋವಿನ ಹೆಜ್ಜೆಯತಗ್ಗಿನಲ್ಲಿರುವ ಜಲ) ಹರಿಗೋಲು ಅದು ಏತಕೆ,=[ತಾತ(ಚಕ್ಕಪ್ಪಾ) ಕೇಳು, ಗೋವಿನ ಹೆಜ್ಜೆಯತಗ್ಗಿನಲ್ಲಿರುವ ನೀರನ್ನು ದಾಟಲು ದೋಣಿ ಏಕೆ ಬೇಕು?(ಈಶತ್ರುವನ್ನು ಗೆಲ್ಲಲು ನನ್ನಂಥ ಸಾಮಾನ್ಯ ಸಾಕು]; ವೃಥಾ ಕುದುರೆ ಮಂದಿಯಂ ನೋಯಿಸದಿರು ಈತಗಳನು ಎಲ್ಲರಂ ತೆಗೆಸು ಎನಗೆ ಸೆಲವು ಇಂದಿನ ಆಹವಂ ಪರಬಲವನು=[ಸುಮ್ಮನೆ ಕುದುರೆಸೈನ್ಯ; ಪದಾತಿ ಸೈನ್ಯವನ್ನು ನೋಯಿಸದಿರು, ಇವರೆಲ್ಲರನ್ನೂ ಹಿಂದಕ್ಕೆ ಕರೆಸು; ನನಗೆ ಅಪ್ಪಣೆಕೊಡು; ಇಂದಿನ ಯುದ್ಧದಲ್ಲಿ ಶತ್ರು ಸೈನ್ಯವನ್ನು ಹೊಡೆದು ಸೋಲಿಸಿ, ಕುದುರೆಯನ್ನು ತರದಿದ್ದರೆ,ಆ ನಂತರ ತಾನು ಕರ್ಣನ ಕುಮಾರನೆನಿಸಿಕೊಳ್ಳಬಲ್ಲೆನೇ? ಪರೀಕ್ಷಿಸಿ ನೋಡು ಚಿಕ್ಕವನೆಂಬ ಭಾವನೆ ಸಾಕು ಎನ್ನುತ್ತಾ, ವೃಷಕೇತು ಯುದ್ಧಕ್ಕೆ ಪಾರ್ಥನ ಅಪ್ಪಣೆ ಪಡೆದು ಬಹಳ ಪರಾಕ್ರಮದಿಂದ ರಥವೇರಿದನು.];
  • ತಾತ್ಪರ್ಯ: ತಾತ(ಚಕ್ಕಪ್ಪಾ) ಕೇಳು, ಗೋವಿನ ಹೆಜ್ಜೆಯತಗ್ಗಿನಲ್ಲಿರುವ ನೀರನ್ನು ದಾಟಲು ದೋಣಿ ಏಕೆ ಬೇಕು?ಈ ಶತ್ರುವನ್ನು ಗೆಲ್ಲಲು ನನ್ನಂಥ ಸಾಮಾನ್ಯ ಸಾಕು; ಸುಮ್ಮನೆ ಕುದುರೆಸೈನ್ಯ; ಪದಾತಿ ಸೈನ್ಯವನ್ನು ನೋಯಿಸದಿರು, ಇವರೆಲ್ಲರನ್ನೂ ಹಿಂದಕ್ಕೆ ಕರೆಸು; ನನಗೆ ಸೆಲವು ಇಂದಿನಯುದ್ಧದಲ್ಲಿ ಶತ್ರು ಸೈನ್ಯವನ್ನು ಹೊಡೆದು ಸೋಲಿಸಿ, ಕುದುರೆಯನ್ನು ತರದಿದ್ದರೆ,ಆ ನಂತರ ತಾನು ಕರ್ಣನ ಕುಮಾರನೆನಿಸಿಕೊಳ್ಳಬಲ್ಲೆನೇ? ಪರೀಕ್ಷಿಸಿ ನೋಡು ಚಿಕ್ಕವನೆಂಬ ಭಾವನೆ ಸಾಕು ಎನ್ನುತ್ತಾ, ವೃಷಕೇತು ಯುದ್ಧಕ್ಕೆ ಪಾರ್ಥನ ಅಪ್ಪಣೆ ಪಡೆದು ಬಹಳ ಪರಾಕ್ರಮದಿಂದ ರಥವೇರಿದನು.
  • (ಪದ್ಯ- ೧೪)

ಪದ್ಯ :-:೧೫:

ಸಂಪಾದಿಸಿ

ತಾರಕಾಸುರನ ಪೆರ್ಬಡೆಗೆ ಮೈದೋರುವ ಕು | ಮಾರನಂ ತಾನಭ್ರ ಮಾರ್ಗದೋಳ್ ಸುಳಿವ ಮುಂ | ಗಾರಮಿಂಚಂ ತನ್ನ ಹೊಂದೇರುಗಿರಿಗೆಂಗುವಶನಿಯಂ ತನ್ನ ಘಾತಿ ||
ಪೇರಡವಿಗೈದುವ ದವಾಗ್ನಿಯಂ ತನ್ನ ಪ್ರ | ಚಾರಂ ನೆಗಳ್ದ ನಡುವಗಲ ರವಿಯಂ ತನ್ನ | ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಾನು,ತಾರಕಾಸುರನ ಪೆರ್ಬಡೆಗೆ ಮೈದೋರುವ ಕುಮಾರನಂತೆ ಆನು ಅಭ್ರ (ಆಕಾಶ)ಮಾರ್ಗದೋಳ್ ಸುಳಿವ ಮುಂಗಾರಮಿಂಚಂ ತನ್ನ ಹೊಂದೇರು(ಹೊನ್ನು+ತೇರು/ರಥ) ಗಿರಿಗೆ ಎರಗುವ ಅಶನಿಯಂತೆ=[ತಾನು,ತಾರಕಾಸುರನ ದೊಡ್ಡ ಸೈನ್ಯಕ್ಕೆ ಎದುರುನಿಂತ ಕುಮಾರನಂತೆ, ನಾನು ಆಕಾಶದಲ್ಲಿ ಸುಳಿಯುವ ಮುಂಗಾರು ಮಿಂಚಿನಂತೆ ತನ್ನ ರಥವೆಂಬ ಬೆಟ್ಟಕ್ಕೆ ಎರಗುವ ಸಿಡಿಲಿನಂತೆ]; ಎನ್ನ ಘಾತಿಪ ಏರುಅಡವಿಗೆ(ದೊಡ್ಡ ಕಾಡು) ಐದುವ ದವಾಗ್ನಿಯಂತೆ ಎನ್ನ ಪ್ರಚಾರಂ ನೆಗಳ್ದ ನಡುವಗಲ ರವಿಯಂ ತನ್ನ ವೀರಪ್ರತಾಪಂ ತಿರಸ್ಕರಿಸೆ=[ತನ್ನ ಹೊಡೆತವು ಕಾಡಿಗೆ ಹತ್ತಿದ ದಾವಾಗ್ನಿಯಂತೆ, ತನ್ನ ಹೆಚ್ಚುಗಾಇಕೆಯನ್ನು ತೋರಿಸುವ ಮಧ್ಯಾಹ್ನದ ಸೋರ್ಯನ ವೀರಪ್ರತಾಪವನ್ನು ತಿರಸ್ಕರಿಸುವಂತೆ]; ವೃಷಕೇತು ರಿಪುಸೈನ್ಯಮಂ ಪೊಕ್ಕನು[ವೃಷಕೇತುವು ಶತ್ರು ಸೈನ್ಯವನ್ನು ಹೊಕ್ಕನು].
  • ತಾತ್ಪರ್ಯ: ತಾನು,ತಾರಕಾಸುರನ ದೊಡ್ಡ ಸೈನ್ಯಕ್ಕೆ ಎದುರುನಿಂತ ಕುಮಾರನಂತೆ, ನಾನು ಆಕಾಶದಲ್ಲಿ ಸುಳಿಯುವ ಮುಂಗಾರು ಮಿಂಚಿನಂತೆ ತನ್ನ ರಥವೆಂಬ ಬೆಟ್ಟಕ್ಕೆ ಎರಗುವ ಸಿಡಿಲಿನಂತೆ ತನ್ನ ಹೊಡೆತವು ಕಾಡಿಗೆ ಹತ್ತಿದ ದಾವಾಗ್ನಿಯಂತೆ, ತನ್ನ ಹೆಚ್ಚುಗಾರಿಕೆಯನ್ನು ತೋರಿಸುವ ಮಧ್ಯಾಹ್ನದ ಸೋರ್ಯನ ವೀರಪ್ರತಾಪವನ್ನು ಮೀರಿಸುವಂತೆ ವೃಷಕೇತುವು ಶತ್ರು ಸೈನ್ಯವನ್ನು ಹೊಕ್ಕನು.
  • (ಪದ್ಯ- ೧೫)XXXI

ಪದ್ಯ :-:೧೬:

ಸಂಪಾದಿಸಿ

ದೂರದೊಳ್ಕಂಡಂ ಸುಧನ್ವನಾತನ ಬರವ | ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು | ದಾರವೃಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು
ವೀರನಹನೆನುತ ಬಂದಿದಿರಾಗಿ ನಿಂದು ಪರಿ | ವಾರಮಂ ತೆಗೆಸಿ ಬಿಲ್ಧಿರುವನೊದರಿಸುತೆ ಕೈ | ವಾರಿಸುತೆ ನಸುನಗುತೆ ಬಾಣಮಂ ತೂಗುತಿನಸುತಜನಂ ಬೆಸಗೊಂಡನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೂರದೊಳ್ ಕಂಡಂ ಸುಧನ್ವನು ಆತನ ಬರವನು ಆರು ಇವಂ ಪಾರ್ಥನು ಆದೊಡೆ ಕಪಿಧ್ವಜಮ್ ಇಹುದು=[ಸುಧನ್ವನು ದೂರದಲ್ಲಿ ವೃಷಕೇತುವು ಆತನ ಬರವುದನ್ನು ಕಂಡನು; ಇವನು ಯಾರು? ಪಾರ್ಥನು ಆಗಿದ್ದರೆ ಕಪಿಧ್ವಜವು ಇರುವುದು]; ಉದಾರ ವೃಷಭ ಅಂಕಿತದ ಕೇತುದಂಡದ ಸುಭಟನು ಆವನೋ ಪಾಂಡವರೊಳು ವೀರನು ಅಹನು ಎನುತ=[ಉತ್ತಮದ ವೃಷಭದಗುರುತಿನ ಧ್ವಜದಂಡವುಳ್ಳ ಯೋದನು ಪಾಂಡವರಲ್ಲಿ ಯಾವನೋ ವೀರನು ಇರುವನು ಎನ್ನುತ್ತಾ]; ಬಂದು ಅವನನ್ನು ಎದುರಿಸಿ ನಿಂತು ಪರಿವಾರಮಂ ತೆಗೆಸಿ ಬಿಲ್ಧಿರುವನು ಒದರಿಸುತೆ ಕೈವಾರಿಸುತೆ ನಸುನಗುತೆ ಬಾಣಮಂ ತೂಗುತ ಇನಸುತಜನಂ ಬೆಸಗೊಂಡನು=[ಬಂದು ಇದಿರಾಗಿ ನಿಂತು ಸೈನಿಕರನ್ನು ಸರಿಸಿಸ ಹೆದ್ದೆಯನ್ನು ಝೇಂಕರಿಸುತ್ತಾ ಕೈತಟ್ಟಿ ನಸುನಗುತ್ತಾ ಬಾಣವನ್ನು ತೂಗುತ್ತಾ ವೃಕೇತುವನ್ನು ಕೇಳಿದನು].
  • ತಾತ್ಪರ್ಯ: ಸುಧನ್ವನು ದೂರದಲ್ಲಿ ವೃಷಕೇತುವು ಆತನ ಬರವುದನ್ನು ಕಂಡನು; ಇವನು ಯಾರು? ಪಾರ್ಥನು ಆಗಿದ್ದರೆ ಕಪಿಧ್ವಜವು ಇರುವುದು; ಉತ್ತಮವಾದ ವೃಷಭದಗುರುತಿನ ಧ್ವಜದಂಡವುಳ್ಳ ಯೋದನು ಪಾಂಡವರಲ್ಲಿ ಯಾವನೋ ವೀರನು ಇರುವನು ಎನ್ನುತ್ತಾ, ಬಂದು ಇದಿರಾಗಿ ನಿಂತು ಸೈನಿಕರನ್ನು ಸರಿಸಿಸ ಹೆದ್ದೆಯನ್ನು ಝೇಂಕರಿಸುತ್ತಾ ಕೈತಟ್ಟಿ ನಸುನಗುತ್ತಾ ಬಾಣವನ್ನು ತೂಗುತ್ತಾ ವೃಕೇತುವನ್ನು ಕೇಳಿದನು].
  • (ಪದ್ಯ- ೧೬)

ಪದ್ಯ :-:೧೭:

ಸಂಪಾದಿಸಿ

ಎಲವೊ ನೀನಾರ್ ನಿನ್ನ ಪೆಸರದೇನಾವರ್ಷಿ | ಕುಲದವಂ ನಿನ್ನ ಪಿತನಾವಾತನೆಂಬುದಂ | ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು ||
ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ | ತಿಲಕನಿಂದಾಯ್ತೆಮ್ಮ ವಂಶಮೆನೆ ಕರ್ಣಜಂ | ಬಳಿಕ ನಸುನಗೆಯೊಳೆಡಗೈಯ್ಯ ಕೋದಂಡಮಂ ತಿರುಗಿಸುತ್ತಿಂತೆಂದನು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲವೊ ನೀನ ಆರ್ ನಿನ್ನ ಪೆಸರು ಅದೇನು ಆವರ್ಷಿಕುಲದವಂ ನಿನ್ನ ಪಿತನಾವಾತನು ಎಂಬುದಂ ತಿಳಿಪು ಎನಗೆ=[ಎಲವೊ ವೀರ! ನೀನು ಯಾರು? ನಿನ್ನ ಹೆಸರು ಅದು ಏನು? ಯಾವ ಋಷಿ ಕುಲದವನು? ನಿನ್ನ ತಂದೆಯು ಯಾರು ಎಂಬುದನ್ನು ನನಗೆ ತಿಳಿಸು]; ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ ತಿಲಕನಿಂದ ಆಯ್ತ ಎಮ್ಮ ವಂಶಮ್ ಎನೆ=[ತಾನು ಈಗ ಇರುವ ವೀರಹಂಸಧ್ವಜ ರಾಜನ ಮಗ, ತನ್ನನ್ನು ಈ ಭೂಮಿಯಲ್ಲಿ ಸುಧನ್ವನೆಂದು ಕರೆಯುಬರು, ಮಧುಚ್ಛಂದಮುನಿ ಶ್ರೇಷ್ಠನಿಂದ ನಿಂದ ನಮ್ಮ ವಂಶವಾಯಿತು ಎನ್ನಲು,]; ಕರ್ಣಜಂ ಬಳಿಕ ನಸುನಗೆಯೊಳ್ ಎಡಗೈಯ್ಯ ಕೋದಂಡಮಂ ತಿರುಗಿಸುತ್ತ ಇಂತೆಂದನು=[ಕರ್ಣಜ ವೃಷಕೇತುವು, ಬಳಿಕ ನಸುನಗೆಯಿಂದ ಎಡಗೈಯ್ಯಲ್ಲಿರವ ಬಿಲ್ಲನ್ನು ತಿರುಗಿಸುತ್ತ ಹೀಗೆ ಹೇಳಿದನು.]
  • ತಾತ್ಪರ್ಯ:ಎಲವೊ ವೀರ! ನೀನು ಯಾರು? ನಿನ್ನ ಹೆಸರು ಅದು ಏನು? ಯಾವ ಋಷಿ ಕುಲದವನು? ನಿನ್ನ ತಂದೆಯು ಯಾರು ಎಂಬುದನ್ನು ನನಗೆ ತಿಳಿಸು; ತಾನು ಈಗ ಇರುವ ವೀರಹಂಸಧ್ವಜ ರಾಜನ ಮಗ, ತನ್ನನ್ನು ಈ ಭೂಮಿಯಲ್ಲಿ ಸುಧನ್ವನೆಂದು ಕರೆಯುಬರು, ಮಧುಚ್ಛಂದಮುನಿ ಶ್ರೇಷ್ಠನಿಂದ ನಿಂದ ನಮ್ಮ ವಂಶವಾಯಿತು ಎನ್ನಲು,ಕರ್ಣಜ ವೃಷಕೇತುವು, ಬಳಿಕ ನಸುನಗೆಯಿಂದ ಎಡಗೈಯ್ಯಲ್ಲಿರವ ಬಿಲ್ಲನ್ನು ತಿರುಗಿಸುತ್ತ ಹೀಗೆ ಹೇಳಿದನು.
  • (ಪದ್ಯ- ೧೬)

ಪದ್ಯ :-:೧೮:

ಸಂಪಾದಿಸಿ

ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ | ರೂಢಿಸಿದ ವಂಶವಿಸ್ತಾರಮಂ ಪೌರುಷದ | ಮೋಡಿಯಿಂದರಿಯಬಾರದೆ ಸಮರಸಾಧನವಿದರೊಳಹುದೆ ನಿನಗಾದೊಡೆ ||
ಮೂಢ ಕೇಳ್ ಕಶ್ಯಪನ ಕುಲವೆಮ್ಮದೆಂಬರಾ | ರೂಢನಾಗಿಹ ದಿನಮಣಿಯ ತನಯನಾಹವ | ಪ್ರೌಢಕರ್ಣನ ಸುತಂ ಪೆಸರನಗೆ ವೃಷಕೇತುವೆಂದೊಡನಿಂತೆಂದನು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗೂಢಮಾಗಿರ್ದ ಅಲರ ಪರಿಮಳಂ ಪ್ರಕಟಿಸದೆ ರೂಢಿಸಿದ ವಂಶವಿಸ್ತಾರಮಂ ಪೌರುಷದ ಮೋಡಿಯಿಂದ ಅರಿಯಬಾರದೆ ಸಮರಸಾಧನವು ಇದರೊಳು ಅಹುದೆ ನಿನಗೆ=[ಗೂಢವಾಗಿರುವ ಹೂವು ಪೆರಮಳವನ್ನು ಪ್ರಕಟಿಸದೆ ಇರುವುದೇ? ಕಾಣುವ ವಂಶವಿವರವನ್ನು ಪೌರುಷದ ಚಮತ್ಕಾರವನ್ನು ನೋಡಿ ತಿಳಿಯಬಾರದೆ? ಇದನ್ನು ಇಳಿಯುವುದರಿಂದ ಯುದ್ಧಕ್ಕೆ ಉನುಕೂಲವೇನಾದರೂ ನಿನಗೆ ಇದೆಯೇ?]; ಆದೊಡೆ ಮೂಢ ಕೇಳ್ ಕಶ್ಯಪನ ಕುಲವ ಎಮ್ಮದು ಅಂಬರ ಆರೂಢನಾಗಿಹ ದಿನಮಣಿಯ ತನಯನು ಆಹವ ಪ್ರೌಢಕರ್ಣನ ಸುತಂ ಪೆಸರು ಎನಗೆ ವೃಷಕೇತುವೆಂದ ಒಡೆನೆ ಇಂತೆಂದನು=[ಆದರೂ ಮೂಢನೇ! ಕೇಳು ಕಶ್ಯಪನ ಕುಲವು ನಮ್ಮದು, ಆಕಾಶದಲ್ಲಿ ಆರೂಢನಾಗಿರವ ಸೂರ್ಯನ ಮಗ ಯುದ್ಧವಿಶಾರದ ಕರ್ಣನ ಮಗನು ನಾನು, ಹೆಸರು ನನಗೆ ವೃಷಕೇತುವೆಂದು ಎಂದು ಹೇಳಲು ಸುಧನ್ವ ಒಡೆನೆ ಹೀಗೆಂದನು].
  • ತಾತ್ಪರ್ಯ: 'ಗೂಢವಾಗಿರುವ ಹೂವು ಪರಿಮಳವನ್ನು ಪ್ರಕಟಿಸದೆ ಇರುವುದೇ? ಕಾಣುವ ವಂಶವಿವರವನ್ನು ಪೌರುಷದ ಚಮತ್ಕಾರವನ್ನು ನೋಡಿ ತಿಳಿಯಬಾರದೆ? ಇದನ್ನು ತಿಳಿಯುವುದರಿಂದ ಯುದ್ಧಕ್ಕೆ ಅನುಕೂಲವೇನಾದರೂ ನಿನಗೆ ಇದೆಯೇ? ಆದರೂ ಮೂಢನೇ! ಕೇಳು ಕಶ್ಯಪನ ಕುಲವು ನಮ್ಮದು, ಆಕಾಶದಲ್ಲಿ ಆರೂಢನಾಗಿರವ ಸೂರ್ಯನ ಮಗ ಯುದ್ಧವಿಶಾರದ ಕರ್ಣನ ಮಗನು ನಾನು, ಹೆಸರು ನನಗೆ ವೃಷಕೇತು', ಎಂದು ಹೇಳಲು ಸುಧನ್ವ ಒಡೆನೆ ಹೀಗೆಂದನು].
  • (ಪದ್ಯ- ೧೮)

ಪದ್ಯ :-:೧೯:

ಸಂಪಾದಿಸಿ

ಕರ್ಣಸುತನಾದೊಡೊಳ್ಳಿತು ವೀರನಹುದು ನೀಂ | ನಿರ್ಣಯಿಸಬಲ್ಲೆ ರಣರಂಗವಂ ಮೂಢರಾವ್ | ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ ||
ಸ್ವರ್ಣಪುಂಖದ ಕಣಿಗಳೈದಿದುವು ಮಿಂಚಿನ ಪೊ | ಗರ್ನಭೋಮಂಹಲವನಂಡಲೆಯಲಾಕ್ಷಣಂ | ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕರ್ಣಸುತನು ಆದೊಡೆ ಒಳ್ಳಿತು ವೀರನು ಅಹುದು ನೀಂ ನಿರ್ಣಯಿಸಬಲ್ಲೆ ರಣರಂಗವಂ ಮೂಢರು ಆವ್ ವರ್ಣಕದ ಮಾತುಗಳನು ಅರಿಯೆವೆನುತ ಎಚ್ಚಂ ಸುಧನ್ವನು=[ಕರ್ಣನ ಮಗನಾದರೆ ಒಳ್ಳೆಯದು, ವೀರನೇ ಸರಿ, ನೀನು ರಣರಂಗದಲ್ಲಿ ಹೋರಾಡಬಲ್ಲೆ; ನಾವು ಮೂಢರು ಬಿನ್ನಾಣದ ಮಾತುಗಳನ್ನು ಅರಿಯೆವು ಎನ್ನುತ್ತಾ ಸುಧನ್ವನು ಬಾಣಗಳಿಂದ ಹೊಡೆದನು;]; ಈತನ ಸರಿಸಕೆ ಸ್ವರ್ಣಪುಂಖದ ಕಣಿಗಳು ಐದಿದುವು ಮಿಂಚಿನ ಪೊಗರ್ ನಭೋಮಂಡಲವನು ಅಂಡಲೆಯಲು ಆಕ್ಷಣಂ ದುರ್ನಿರೀಕ್ಷಣಮಾಗಲು=[ಆ ಬಾಣಗಳು ವೃಷಕೇತುವಿನ ಹತ್ತಿರ ಸ್ವರ್ಣರೆಕ್ಕೆಯುಳ್ಳ ಬಾಣಗಳು ಬಂದವು; ಅವು ಮಿಂಚಿನ ಕಾಂತಿಯಿಂದ ನಭೋಮಂಡಲವನ್ನು ತುಂಬಲು ಆಕ್ಷಣದಲ್ಲಿ ನೋಡಲು ಅಸಾಧ್ಯವಾಗಿತ್ತು]; ಎಡೆಯೊಳು ಅವನು ಎಲ್ಲವಂ ತರಿದಿವಂ ಕೋಲ್ ಕರೆದನು=[ವೃಷಕೇತುವು ಅವುಗಳೆಲ್ಲವನ್ನೂ ಅಲ್ಲಿಯೇ ಕತ್ತರಿಸಿ ತಿರುಗಿ ಬಾಣಗಳ ಮಳೆ ಕರೆದನು].
  • ತಾತ್ಪರ್ಯ: ಕರ್ಣನ ಮಗನಾದರೆ ಒಳ್ಳೆಯದು, ವೀರನೇ ಸರಿ, ನೀನು ರಣರಂಗದಲ್ಲಿ ಹೋರಾಡಬಲ್ಲೆ; ನಾವು ಮೂಢರು ಬಿನ್ನಾಣದ ಮಾತುಗಳನ್ನು ಅರಿಯೆವು ಎನ್ನುತ್ತಾ ಸುಧನ್ವನು ಬಾಣಗಳಿಂದ ಹೊಡೆದನು; ಆ ಬಾಣಗಳು ವೃಷಕೇತುವಿನ ಹತ್ತಿರ ಸ್ವರ್ಣರೆಕ್ಕೆಯುಳ್ಳ ಬಾಣಗಳು ಬಂದವು; ಅವು ಮಿಂಚಿನ ಕಾಂತಿಯಿಂದ ನಭೋಮಂಡಲವನ್ನು ತುಂಬಲು ಆಕ್ಷಣದಲ್ಲಿ ನೋಡಲು ಅಸಾಧ್ಯವಾಗಿತ್ತು; ವೃಷಕೇತುವು ಅವುಗಳೆಲ್ಲವನ್ನೂ ಅಲ್ಲಿಯೇ ಕತ್ತರಿಸಿ ತಿರುಗಿ ಬಾಣಗಳ ಮಳೆ ಕರೆದನು.
  • (ಪದ್ಯ- ೧೯)

ಪದ್ಯ :-:೨೦:

ಸಂಪಾದಿಸಿ

ಬರಸಿಡಿಲ ಭರದಿಂದೆ ಮಿಂಚಿನ ಹೊಳಹಿನಿಂದೆ | ಬಿರುವೆಳೆಗಳೊತ್ತಿಂದೆ ಕರ್ಣಜಂ ಕಣೆಗಳಂ | ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ವನಾತನ ಸರಳ್ಗಳನೆಡೆಯೊಳು ||
ತರಿದಂ ವೃಷಧ್ವಜಂ ಬಳಿಕವನ ಕೋಲ್ಗಳಂ | ಬರಿಕೈದನಾ ಮರಾಳಧ್ವಜನ ಸುತನಿಂತು | ತೆರಹುಗುಡದೊರ್ವರೊರ್ವರಮೇಲೆ ಮುಳಿದು ಜರೆದೆಚ್ಚಾಡಿದರ್ ಧುರದೋಳು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬರಸಿಡಿಲ ಭರದಿಂದೆ ಮಿಂಚಿನ ಹೊಳಹಿನಿಂದೆ ಬಿರುವೆಳೆಗಳ ಒತ್ತಿಂದೆ ಕರ್ಣಜಂ ಕಣೆಗಳಂ ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ವನು ಆತನ ಸರಳ್ಗಳನು ಎಡೆಯೊಳು=[ಬರಸಿಡಿಲ ವೆಗದಿಂದ, ಮಿಂಚಿನ ಪ್ರಕಾಶದಿಂದ, ಬಿರುಸಾದ ಮಳೆಯಂತೆ ಒತ್ತಾಗಿ ಕರ್ಣಜನು ಬಾಣಗಳನ್ನು ಬಿಡುತ್ತಿರಲು,ಸುಧನ್ವನು ಆತನ ಬಾಣಗಳನ್ನು ಅಲ್ಲಲ್ಲಿಯೇ ನಡುವೆ ಖಂಡಿಸಿದನು.]; ತರಿದಂ ವೃಷಧ್ವಜಂ ಬಳಿಕವನ ಕೋಲ್ಗಳಂ ಬರಿಕೈದನಾ ಮರಾಳಧ್ವಜನ ಸುತನಿಂತು ತೆರಹುಗುಡದ ಒರ್ವರೊರ್ವರ ಮೇಲೆ ಮುಳಿದು ಜರೆದು ಎಚ್ಚಾಡಿದರ್ ಧುರದೋಳು=[ತರಿದಂ ಬಳಿಕ ವೃಷಧ್ವಜನು ಸುಧನ್ವನ ಬಾಣಗಳನ್ನು ನಾಶಮಾಡಿದನು; ಆ ಹಂಸಧ್ವಜನ ಮಗನು ಬಿಡುವು ಇಲ್ಲದಂತೆ ಒಬ್ಬರೊಬ್ಬರ ಮೇಲೆ ಸಿಟ್ಟಿನಿಂದ ಹೀಯಾಳಿಸುತ್ತಾ ಯುದ್ಧದಲ್ಲಿ ಹೋರಾಡಿದರು. ].
  • ತಾತ್ಪರ್ಯ:ಬರಸಿಡಿಲ ವೇಗದಿಂದ, ಮಿಂಚಿನ ಪ್ರಕಾಶದಿಂದ, ಬಿರುಸಾದ ಮಳೆಯಂತೆ ಒತ್ತಾಗಿ ಕರ್ಣಜನು ಬಾಣಗಳನ್ನು ಬಿಡುತ್ತಿರಲು,ಸುಧನ್ವನು ಆತನ ಬಾಣಗಳನ್ನು ಅಲ್ಲಲ್ಲಿಯೇ ನಡುವೆ ಖಂಡಿಸಿದನು.ತರಿದಂ ಬಳಿಕ ವೃಷಧ್ವಜನು ಸುಧನ್ವನ ಬಾಣಗಳನ್ನು ನಾಶಮಾಡಿದನು; ಆ ಹಂಸಧ್ವಜನ ಮಗನು ಬಿಡುವು ಇಲ್ಲದಂತೆ ಒಬ್ಬರೊಬ್ಬರ ಮೇಲೆ ಸಿಟ್ಟಿನಿಂದ ಹೀಯಾಳಿಸುತ್ತಾ ಯುದ್ಧದಲ್ಲಿ ಹೋರಾಡಿದರು.
  • (ಪದ್ಯ- ೨೦)

ಪದ್ಯ :-:೨೧:

ಸಂಪಾದಿಸಿ

ಕ್ಷೋಣಿಗೆ ಸುಧನ್ವ ನಾನಿರೆ ನೀಂ ಸುಧನ್ವನೇ | ಮಾಣಿಸುವೆನೀ ಪೆಸರನೀಕ್ಷಣದೊಳೆಂದು ಪೆÇಸ | ಸಾಣಿಯಲಗಿನ ಸರಳ್ಗಳನೆಚ್ಚು ಕರ್ಣಜಂ ಪೋರ್ಗಳನವನ ಮೈಯೊಳು ||
ಕಾಣಿಸೆ ಕೆರಳ್ದೆಲವೊ ಮೇದಿನಿಗೆ ರಿಪುಪಂಚ | ಬಾಣ ವೃಷಕೇತು ತಾನಿರಲಾಗಿ ವೃಷಕೇತು | ಮೇಣುಂಟೆ ಹೇಳೆನುತಿವಂ ಕಣೆಗರೆದನವನ ತನುವನುಚ್ಚಳಿಸುವಂತೆ ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕ್ಷೋಣಿ (ಭೂಮಿ)ಗೆ ಸುಧನ್ವ ನಾನಿರೆ ನೀಂ ಸುಧನ್ವನೇ ಮಾಣಿಸುವೆನು ಈ ಪೆಸರನು ಈಕ್ಷಣದೊಳೆಂದು=[ಭೂಮಿಗೆ ಉತ್ತಮ ಬಿಲ್ಲುಗಾರನಾದ ಸುಧನ್ವನಾಗಿ ನಾನು ಇರಲು, ನೀನು ಸುಧನ್ವನೇ ಈ ಹೆಸರನ್ನು ಈಕ್ಷಣದಲ್ಲಿ ತೆಗೆಯುವೆನು ಎಂದು]; ಪೊಸ ಸಾಣಿಯಲಗಿನ ಸರಳ್ಗಳನು ಎಚ್ಚು ಕರ್ಣಜಂ ಪೋರ್ಗಳನವನ ಮೈಯೊಳು ಕಾಣಿಸೆ=[ಹೊಸ ಸಾಣಿಹಿಡಿದ ತುದಿಯ ಬಾಣಗಳನ್ನು ಕರ್ಣಜನು ಹೊಡೆದಾಗ, ಅದು ಅವನ ಮೈಯಲ್ಲಿ ಕಾಣಿಸುವಂತೆ ಹೊಗಲು ]; ಕೆರಳ್ದೆಲವೊ ಮೇದಿನಿಗೆ ರಿಪುಪಂಚ ಬಾಣ ವೃಷಕೇತು ತಾನಿರಲಾಗಿ ವೃಷಕೇತು ಮೇಣುಂಟೆ ಹೇಳು ಎನುತ ಇವಂ ಕಣೆಗರೆದನು ಅವನ ತನುವನು ಉಚ್ಚಳಿಸುವಂತೆ=[ಆಗ ಸುಧನ್ವನು ಸಿಟ್ಟಿನಿಂದ ಭೂಮಿಯಲ್ಲಿ ಪಂಚಬಾಣನಾದ ಮನ್ಮಥನಿಗೆ ಶತ್ರುವಾದ ವೃಷಕೇತು ಶಿವನ ಸಮವಾಗಿ ತಾನು ಇರಲಾಗಿ ವೃಷಕೇತು ಎಂಬ ಮತ್ತೊಬ್ಬನಿರಲು ಸಾಧ್ಯವೇ ಹೇಳು ಎನ್ನುತ್ತಾ ಇವನು ಬಾಣಗಳನ್ನು ಬಿಟ್ಟನು. ಅದು ಅವನ ದೇಹವನ್ನು ಸೀಳುವಂತೆ ಹೊಕ್ಕಿತು.];
  • ತಾತ್ಪರ್ಯ: ಭೂಮಿಗೆ ಉತ್ತಮ ಬಿಲ್ಲುಗಾರನಾದ ಸುಧನ್ವನಾಗಿ ನಾನು ಇರಲು, ನೀನು ಸುಧನ್ವನೇ ಈ ಹೆಸರನ್ನು ಈಕ್ಷಣದಲ್ಲಿ ತೆಗೆಯುವೆನು ಎಂದು ಹೊಸ ಸಾಣಿಹಿಡಿದ ತುದಿಯ ಬಾಣಗಳನ್ನು ಕರ್ಣಜನು ಹೊಡೆದಾಗ, ಅದು ಅವನ ಮೈಯಲ್ಲಿ ಕಾಣಿಸುವಂತೆ ಹೊಗಲು ಆಗ ಸುಧನ್ವನು ಸಿಟ್ಟಿನಿಂದ ಭೂಮಿಯಲ್ಲಿ ಪಂಚಬಾಣನಾದ ಮನ್ಮಥನಿಗೆ ಶತ್ರುವಾದ ವೃಷಕೇತು ಶಿವನ ಸಮವಾಗಿ ತಾನು ಇರಲಾಗಿ ವೃಷಕೇತು ಎಂಬ ಮತ್ತೊಬ್ಬನಿರಲು ಸಾಧ್ಯವೇ ಹೇಳು ಎನ್ನುತ್ತಾ ಇವನು ಬಾಣಗಳನ್ನು ಬಿಟ್ಟನು. ಅದು ಅವನ ದೇಹವನ್ನು ಸೀಳುವಂತೆ ಹೊಕ್ಕಿತು.
  • (ಪದ್ಯ- ೨೧)

ಪದ್ಯ :-:೨೨:

ಸಂಪಾದಿಸಿ

ಭುಗಿಭೂಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಗಳಂ | ತೆಗೆತೆಗೆದು ಕರ್ಣತನಯಂ ಸುಧನ್ವನ ರಥವ | ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳು ||
ಮೊಗಮೊಗಿಸಿ ಮುಂಬರಿವ ಕುದುರೆ ಸಾರಥಿಗಳಂ | ಝಗಝಗಿಪ ಕವಚಮಂ ತನ್ನ ಕಣೆಯಂ ನಡುವೆ | ತೆಗೆತೆಗೆವ ಕೋಲ್ಗಳಂ ತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭುಗಿಭೂಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಗಳಂ ತೆಗೆತೆಗೆದು ಕರ್ಣತನಯಂ ಸುಧನ್ವನ ರಥವ ಬಗೆಬಗೆಯೊಳು ಅಮರ್ದು ಎಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳು=[ಕೋಪವು ಅಗ್ನಿಯಂತೆ ಭುಗಿಭೂಗಿಸಲು ಬತ್ತಳಿಕೆಯಲ್ಲಿದ್ದ ಬಾಣಗಳನ್ನು ಒಂದೇ ಸಮನೆ ತೆಗೆತೆಗೆದು ಕರ್ಣಜನು ಸುಧನ್ವನ ರಥವನ್ನು ನಾನಾಬಗೆಯಲ್ಲಿ ಆಕ್ರಮಿಸಿ, ಅವನ ಪ್ರಕಾಸಿಸುವ ಛತ್ರ ಚಾಮರ ಧ್ವಜ ಸೀಗುರಿ ಪತಾಕೆಗಳು]; ಮತ್ತು ಮೊಗಮೊಗಿಸಿ ಮುಂಬರಿವ ಕುದುರೆ ಸಾರಥಿಗಳಂ ಝಗಝಗಿಪ ಕವಚಮಂ ತನ್ನ ಕಣೆಯಂ ನಡುವೆ ತೆಗೆತೆಗೆವ ಕೋಲ್ಗಳಂ ತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು=[ಮತ್ತು ಮೇಲಿಂದಮೇಲೆ ಮುಂದುವರಿದು ಬರುವ ಕುದುರೆ ಸಾರಥಿಗಳಂ ಹೊಳೆಯುವ ಕವಚ ಇವುಗಳನ್ನು ತನ್ನ ಬಾಣಗಳಿಂದ ಮಧ್ಯದಲ್ಲಿ ತಡೆದುದನ್ನು ಬಾಣಗಳಿಂದ ಕತ್ತರಿಸಿ ಅವನ ಬಿಲ್ಲನ್ನು ಎರಡು ತುಂಡುಮಾಡಿ ಬೊಬ್ಬಿರಿದನು].
  • ತಾತ್ಪರ್ಯ: ಕೋಪವು ಅಗ್ನಿಯಂತೆ ಭುಗಿಭೂಗಿಸಲು ಬತ್ತಳಿಕೆಯಲ್ಲಿದ್ದ ಬಾಣಗಳನ್ನು ಒಂದೇ ಸಮನೆ ತೆಗೆತೆಗೆದು ಕರ್ಣಜನು ಸುಧನ್ವನ ರಥವನ್ನು ನಾನಾಬಗೆಯಲ್ಲಿ ಆಕ್ರಮಿಸಿ, ಅವನ ಪ್ರಕಾಸಿಸುವ ಛತ್ರ ಚಾಮರ ಧ್ವಜ ಸೀಗುರಿ ಪತಾಕೆಗಳು ಮತ್ತು ಮೇಲಿಂದಮೇಲೆ ಮುಂದುವರಿದು ಬರುವ ಕುದುರೆ ಸಾರಥಿಗಳಂ ಹೊಳೆಯುವ ಕವಚ ಇವುಗಳನ್ನು ತನ್ನ ಬಾಣಗಳಿಂದ ಮಧ್ಯದಲ್ಲಿ ತಡೆದುದನ್ನು ಬಾಣಗಳಿಂದ ಕತ್ತರಿಸಿ ಅವನ ಬಿಲ್ಲನ್ನು ಎರಡು ತುಂಡುಮಾಡಿ ಬೊಬ್ಬಿರಿದನು.
  • (ಪದ್ಯ- ೨೨)

ಪದ್ಯ :-:೨೩:

ಸಂಪಾದಿಸಿ

ತಂದರಾಗಲೆ ಸುಧನ್ವಂಗೆ ಮಣಿಮಯದ ಮ | ತ್ತೊಂದು ರಥಮಂ ಬಳಿಕ ಬಿಲ್ವಿಡಿದು ಜೇಗೈದು | ನಿಂದು ನಿಡಗಣೆಗಳಂ ತಗೆದೆಚ್ಚು ಕರ್ಣಜನ ಕೈಮೆಗಿಂಮಿಗಿಲಾಗಲು ||
ಸ್ಯಂದನ ತುರುಂಗ ಸಾರಥಿಗಳಂ ಕವಚಮಂ | ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ | ನಂದು ಕತ್ತರಿಸಿ ವೃಷಕೇತುವಿನ ಕರದ ಕೋದಂಡಮಂ ಖಂಡಿಸಿದನು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತಂದರು ಆಗಲೆ ಸುಧನ್ವಂಗೆ ಮಣಿಮಯದ ಮತ್ತೊಂದು ರಥಮಂ=[ಸುಧನ್ವನಿಗೆ ಆಕೂಡಲೆ ಮಣಿಮಯದ ಮತ್ತೊಂದು ರಥವನ್ನು ತಂದರು.]; ಬಳಿಕ ಬಿಲ್ವಿಡಿದು ಜೇಗೈದು ನಿಂದು ನಿಡಗಣೆಗಳಂ ತಗೆದೆಚ್ಚು ಕರ್ಣಜನ ಕೈಮೆಗಿಂ ಮಿಗಿಲಾಗಲು=[ಬಳಿಕ ಸುಧನ್ವನು ಬಿಲ್ಲನ್ನು ಹಿಡಿದು ಜೇಂಕಾರ ಮಾಡಿ, ನಿಂತು ಉದ್ದಬಾಣಗಳನ್ನು ತಗೆದು ಹೊಡೆಯಲು, ಕರ್ಣಜನ ಕೈಚಳಕಕ್ಕಿಂತ ಹೆಚ್ನಿನದಾಗಲು,]; ರಥ, ಕುದುರೆ ಸಾರಥಿಗಳನ್ನೂ ಕವಚವನ್ನೂ ಧ್ವಜ ಸೀಗುರಿ ಛತ್ರಚಾಮರ ಪತಾಕೆಗಳನ್ನೂನಂದು ಕತ್ತರಿಸಿ ವೃಷಕೇತುವಿನ ಕರದ ಕೋದಂಡಮಂ ಖಂಡಿಸಿದನು=[ಸ್ಯಂದನ ತುರುಂಗ ಸಾರಥಿಗಳಂ ಕವಚಮಂ ಸಿಂಧ ಸೀಗುರಿ ಛತ್ರಚಾಮರ ಪತಾಕಗಳನಂದು ಕತ್ತರಿಸಿ ವೃಷಕೇತುವಿನ ಕೈಯಲ್ಲಿದ್ದ ಬಿಲ್ಲನ್ನೂ ಕತ್ತರಿಸಿದನು.]
  • ತಾತ್ಪರ್ಯ: ಸುಧನ್ವನಿಗೆ ಆ ಕೂಡಲೆ ಮಣಿಮಯದ ಮತ್ತೊಂದು ರಥವನ್ನು ತಂದರು; ಬಳಿಕ ಸುಧನ್ವನು ಬಿಲ್ಲನ್ನು ಹಿಡಿದು ಜೇಂಕಾರ ಮಾಡಿ, ನಿಂತು ಉದ್ದಬಾಣಗಳನ್ನು ತಗೆದು ಹೊಡೆಯಲು, ಕರ್ಣಜನ ಕೈಚಳಕಕ್ಕಿಂತ ಹೆಚ್ನಿನದಾಗಲು, ರಥ, ಕುದುರೆ ಸಾರಥಿಗಳನ್ನೂ ಕವಚವನ್ನೂ ಧ್ವಜ ಸೀಗುರಿ ಛತ್ರಚಾಮರ ಪತಾಕೆಗಳನ್ನೂನಂದು ಕತ್ತರಿಸಿ ವೃಷಕೇತುವಿನ ಕೈಯಲ್ಲಿದ್ದ ಬಿಲ್ಲನ್ನೂ ಕತ್ತರಿಸಿದನು.
  • (ಪದ್ಯ- ೨೩)

ಪದ್ಯ :-:೨೪:

ಸಂಪಾದಿಸಿ

ವಿರಥನಾದೊಡೆ ಕರ್ಣಸೂನು ಕೈಗೆಡದೆ ಸಂ | ಗರದೊಳಸಿ ಮುದ್ಗರ ಮುಸುಂಡಿ ತೋಮರ ಖಡ | ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ ||
ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೊ | ಳುರವಣಿಸಿ ಪೊಯ್ದು ಸುಧನ್ವನಂ ಮತ್ತವನ | ಪೊರೆಯ ಪರಿವಾರಮಂ ನಾನಾಪ್ರಹಾರದಿಂದೈದೆ ಘಾತಿಸುತಿರ್ದನು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿರಥನಾದೊಡೆ ಕರ್ಣಸೂನು ಕೈಗೆಡದೆ ಸಂಗರದೊಳ್ ಅಸಿ ಮುದ್ಗರ ಮುಸುಂಡಿ ತೋಮರ ಖಡ ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ=[ರಥವನ್ನು ಕಳೆದುಕೊಂಡರೂ ಕರ್ಣಜನು ಕೈಸೋಲದೆ ಯುದ್ಧದಲ್ಲಿ ಕತ್ತಿ, ಮುದ್ಗರ, ಮುಸುಂಡಿ, ತೋಮರ, ಉದ್ದಖಡ್ಗ, ಪರಶು(ಕೊಡಲಿ), ಗದೆ, ಚಕ್ರ, ಡೊಂಕಣಿ, ಕುಂತ, ಶೂಲ, ಪಟ್ಟಸ, ಭಿಂಡಿವಾಳ, ಶಕ್ತಿ,]; ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೊಳು ಉರವಣಿಸಿ ಪೊಯ್ದು ಸುಧನ್ವನಂ ಮತ್ತವನ ಪೊರೆಯ ಪರಿವಾರಮಂ ನಾನಾಪ್ರಹಾರದಿಂದ ಐದೆ ಘಾತಿಸುತಿರ್ದನು=[ಸುರಗಿ, ಮೊದಲಾದ ನಾನಾ ವಿದ ಆಯುಧಗಳ ಪ್ರಯೋಗದಲ್ಲಿ ಪರಾಕ್ರಮತೋರಿ ಹೊಡೆದು, ಸುಧನ್ವನನ್ನೂ ಮತ್ತವನ ಹತ್ತಿರದಸೇನೆಯನ್ನೂ ನಾನಾಬಗೆಯ ಪ್ರಹಾರದಿಂದ ಅವರು ಬಮದಾಗ ಗಾಯಮಾಡುತ್ತಿದ್ದನು].
  • ತಾತ್ಪರ್ಯ:ರಥವನ್ನು ಕಳೆದುಕೊಂಡರೂ ಕರ್ಣಜನು ಕೈಸೋಲದೆ ಯುದ್ಧದಲ್ಲಿ ಕತ್ತಿ, ಮುದ್ಗರ, ಮುಸುಂಡಿ, ತೋಮರ, ಉದ್ದಖಡ್ಗ, ಪರಶು(ಕೊಡಲಿ), ಗದೆ, ಚಕ್ರ, ಡೊಂಕಣಿ, ಕುಂತ, ಶೂಲ, ಪಟ್ಟಸ, ಭಿಂಡಿವಾಳ, ಶಕ್ತಿ, ಸುರಗಿ, ಮೊದಲಾದ ನಾನಾ ವಿಧದ ಆಯುಧಗಳ ಪ್ರಯೋಗದಲ್ಲಿ ಪರಾಕ್ರಮತೋರಿ ಹೊಡೆದು, ಸುಧನ್ವನನ್ನೂ ಮತ್ತವನ ಹತ್ತಿರದ ಸೇನೆಯನ್ನೂ ನಾನಾಬಗೆಯ ಪ್ರಹಾರದಿಂದ ಅವರು ಮೇಲೆಬಿದ್ದಾಗ ಗಾಯಮಾಡುತ್ತಿದ್ದನು.
  • (ಪದ್ಯ- ೨೪)

ಪದ್ಯ :-:೨೫:

ಸಂಪಾದಿಸಿ

ಇತ್ತಲಿಂತಿರಲತ್ತವನ ಸಾರಥಿ ಬೇಗ| ಮತ್ತೊಂದು ರಥಮಂತರಲ್ಕದನಡರ್ದು ಮಸೆ| ವೆತ್ತಕೂರ್ಗಣೆಗಳಂ ಕರ್ಣಜಂ ತೆಗೆದೆಚ್ಚೊಡಾ ಸುಧನ್ವನ ಮೈಯೊಳು||
ತೆತ್ತಿಸಿದವಂಬೊಡೊಲೊಳಿಡಿದ ತನಿವೀರರಸ | ಮೊತ್ತರಿಸಿ ಮೇಲುಕ್ಕುವಂದದಿಂ ಬಸಿ |ವ ಬಿಸಿನೆತ್ತರೆಸೆದಿರೆ ಕೆರಳ್ದವನೆಚ್ಚೊಡಾ ಕೊಲ್ಗಳಮತರಿಯುತಿವನೆಚ್ಚನು||೨೫||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇತ್ತಲು ಇಂತಿರಲು ಅತ್ತ ಅವನ ಸಾರಥಿ ಬೇಗ ಮತ್ತೊಂದು ರಥಮಂ ತರಲ್ಕೆ ಅದನಡರ್ದು=[ಈ ಕಡೆ ಹೀಗಿರಲು ಅತ್ತ ವೃಷಕೇತುವಿನ ಸಾರಥಿ ಬೇಗ ಮತ್ತೊಂದು ರಥವನ್ನು ತರಲು, ಅದನು ಅದನ್ನು ಹತ್ತಿ]; ಮಸೆವೆತ್ತ ಕೂರ್ಗಣೆಗಳಂ ಕರ್ಣಜಂ ತೆಗೆದೆಚ್ಚೊಡ ಆ ಸುಧನ್ವನ ಮೈಯೊಳು ತೆತ್ತಿಸಿದವು ಅಂಬು ಒಡೊಲೊಳು ಇಡಿದ ತನಿವೀರರಸಂ ಒತ್ತರಿಸಿ ಮೇಲುಕ್ಕುವ ಅಂದದಿಂ ಬಸಿವ ಬಿಸಿನೆತ್ತರು ಎಸೆದಿರೆ=[ ಮಸೆದು ಚೂಪಾದ ಬಾಣಗಳನ್ನು ಕರ್ಣಜನು ತೆಗೆದು ಹೊಡೆದಾಗ ಆ ಸುಧನ್ವನ ಮೈಯ್ಯಲ್ಲಿ ಚುಚ್ಚಿದವು ಅಂಬುಗಳು; ದೇಹದಲ್ಲಿ ತುಂಬಿದ ತನುವಿನ ವೀರರಸವು ಒತ್ತರಿಸಿ ಮೇಲೆ ಉಕ್ಕುವ ರೀತಿಯಲ್ಲಿ ಹೊರಬರುವ ಬಿಸಿರಕ್ತವು ಕಾಣಲು] ಕೆರಳ್ದು ಅವನೆಚ್ಚೊಡ ಆ ಕೊಲ್ಗಳಂ ತರಿಯುತಿವನೆಚ್ಚನು=[ಸಿಟ್ಟಿನಿಂದ ಅವನು ತಿರುಗಿ ಹೊಡೆಯಲು, ಆ ಬಾಣಗಳನ್ನು ಕತ್ತರಿಸಿ ಪುನಃ ಇವನು ಹೊಡೆಯುತ್ತಿದ್ದನು.].
  • ತಾತ್ಪರ್ಯ:ಈ ಕಡೆ ಹೀಗಿರಲು ಅತ್ತ ವೃಷಕೇತುವಿನ ಸಾರಥಿ ಬೇಗ ಮತ್ತೊಂದು ರಥವನ್ನು ತರಲು, ಅದನು ಅದನ್ನು ಹತ್ತಿ, ಮಸೆದು ಚೂಪಾದ ಬಾಣಗಳನ್ನು ಕರ್ಣಜನು ತೆಗೆದು ಹೊಡೆದಾಗ ಆ ಸುಧನ್ವನ ಮೈಯ್ಯಲ್ಲಿ ಚುಚ್ಚಿದವು ಅಂಬುಗಳು; ದೇಹದಲ್ಲಿ ತುಂಬಿದ ತನುವಿನ ವೀರರಸವು ಒತ್ತರಿಸಿ ಮೇಲೆ ಉಕ್ಕುವ ರೀತಿಯಲ್ಲಿ ಹೊರಬರುವ ಬಿಸಿರಕ್ತವು ಕಾಣಲು,ಸಿಟ್ಟಿನಿಂದ ಅವನು ತಿರುಗಿ ಹೊಡೆಯಲು, ಆ ಬಾಣಗಳನ್ನು ಕತ್ತರಿಸಿ ಪುನಃ ಇವನು ಹೊಡೆಯುತ್ತಿದ್ದನು.
  • (ಪದ್ಯ- ೨೫)

ಪದ್ಯ :-:೨೬:

ಸಂಪಾದಿಸಿ

ನಭಕುಪ್ಪರಿಸಿ ನೆಲಕೆ ಪಾಯ್ದೆಡಬಲಕೆ ಮುರಿದು| ರಭಸದಿಂದಾರ್ದೊರ್ವರೊರ್ವರಂ ಮೀರ್ದೊದಗಿ| ವಿಭವದಿಂದಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ ಸೋಲುಗೆಲವುಗಳಿಲ್ಲದೆ||
ತ್ರಿಭುವನಕೆ ರಣರಂಗದೊಳ್ಸುಭಟ ನರ್ತನವ | ನಭಿನಯಿಸುವಂತೆ ಲಾಘವದೃಷ್ಟಿ ಮುಷ್ಟಿಗಳೊ| ಳುಭಯ ವೀರರ್ಖತಿಯೊಳೆಚ್ಚಾಡಿದರ್ಕರ್ಣನಂದನಸುಧನ್ವರಂದು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಭಕೆ ಉಪ್ಪರಿಸಿ ನೆಲಕೆ ಪಾಯ್ದು ಎಡಬಲಕೆ ಮುರಿದು ರಭಸದಿಂದ ಆರ್ದು ಓರ್ವರೊರ್ವರಂ ಮೀರ್ದು ಒದಗಿ ವಿಭವದಿಂದ ಅಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ (ಹೆಚ್ಚುಕಡಿಮೆ ಇಲ್ಲದೆ) ಸೋಲು ಗೆಲವುಗಳಿಲ್ಲದೆ=[ಆಕಾಶಕ್ಕೆ ನೆಗೆದು, ನೆಲಕ್ಕೆ ಬಂದು, ಎಡಬಲಕ್ಕೆ ತಿರುಗಿ, ರಭಸದಿಂದ ಕೂಗಿ, ಒಬ್ಬರನ್ನೊಬ್ಬರು ಮೀರಿಸಿ, ಸನ್ನದ್ಧರಾಗಿ, ಉತ್ಸಾಹದಿಂದ ಎಲ್ಲಾಬಗೆಯ ಶಸ್ತ್ರಾಸ್ತ್ರದಿದ ಸಮಸಮವಾಗಿ, ಹೆಚ್ಚುಕಡಿಮೆ ಇಲ್ಲದೆ ಸೋಲು ಗೆಲವುಗಳಿಲ್ಲದೆ]; ತ್ರಿಭುವನಕೆ ರಣರಂಗದೊಳ್ ಸುಭಟ ನರ್ತನವನು ಅಭಿನಯಿಸುವಂತೆ ಲಾಘವ ದೃಷ್ಟಿ ಮುಷ್ಟಿಗಳೊಳು ಉಭಯ ವೀರರ್ ಖತಿಯೊಳ್ ಎಚ್ಚಾಡಿದರ್ ಕರ್ಣನಂದನ ಸುಧನ್ವರಂದು=[ಮೂರುಲೋಕದಲ್ಲಿ ರಣರಂಗದ ವೀರ ನರ್ತನವನ್ನು ಅಭಿನಯಿಸುವಂತೆ ಲಾಘವ, ದೃಷ್ಟಿ, ಮುಷ್ಟಿಗಳಲ್ಲಿ ಉಭಯ ವೀರರೂ ಕೋಪದಿಂದ ಕರ್ಣಜ ಸುಧನ್ವರು ಹೋರಾಡಿದರು].
  • ತಾತ್ಪರ್ಯ:ಆಕಾಶಕ್ಕೆ ನೆಗೆದು, ನೆಲಕ್ಕೆ ಬಂದು, ಎಡಬಲಕ್ಕೆ ತಿರುಗಿ, ರಭಸದಿಂದ ಕೂಗಿ, ಒಬ್ಬರನ್ನೊಬ್ಬರು ಮೀರಿಸಿ, ಸನ್ನದ್ಧರಾಗಿ, ಉತ್ಸಾಹದಿಂದ ಎಲ್ಲಾಬಗೆಯ ಶಸ್ತ್ರಾಸ್ತ್ರದಿದ ಸಮಸಮವಾಗಿ, ಹೆಚ್ಚುಕಡಿಮೆ ಇಲ್ಲದೆ ಸೋಲು ಗೆಲವುಗಳಿಲ್ಲದೆ, ಮೂರುಲೋಕದಲ್ಲಿ ರಣರಂಗದ ವೀರ ನರ್ತನವನ್ನು ಅಭಿನಯಿಸುವಂತೆ ಲಾಘವ, ದೃಷ್ಟಿ, ಮುಷ್ಟಿಗಳಲ್ಲಿ ಉಭಯ ವೀರರೂ ಕೋಪದಿಂದ ಕರ್ಣಜ ಸುಧನ್ವರು ಹೋರಾಡಿದರು.
  • (ಪದ್ಯ- ೨೬)

ಪದ್ಯ :-:೨೭:

ಸಂಪಾದಿಸಿ

ಒತ್ತುವರಿಸುವರೆಚ್ಚ ಕಣೆಗಳಂ ಕಣೆಗಳಿಂ | ಕತ್ತರಿಸಿ ಮೆತ್ತುವರೊಡಲೊಳಂಬನಂಬನುರೆ | ಕಿತ್ತು ಬಿಸುಡುವರಸೃಗ್ವಾರಿಯಂ ವಾರಿಯಿಂ ತೊಳೆದೊಡನೆ ಕವಳಗೊಂಡು||
ಮತ್ತೆ ಕೈಗೆಡದೆಚ್ಚು ಬೊಬ್ಬಿಸಿವರೀತೆರದೊ | ಳಿತ್ತಂಡದಗ್ಗಳಿಕೆ ಸಮಮಾಗೆ ಖತಿಯೊಳೊಂ | ಭತ್ತುನಾರಾಚದಿಂದಾ ಸುಧನ್ವಂ ಕರ್ಣತಯನಂ ಘಾತಿಸಿದನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಒತ್ತುವರಿಸುವರು(ಆಕ್ರಮಣ ಮಾಡು) ಎಚ್ಚ ಕಣೆಗಳಂ ಕಣೆಗಳಿಂ ಕತ್ತರಿಸಿ ಮೆತ್ತುವರು ಒಡಲೊಳು ಅಂಬನು, ಅಂಬನು ಉರೆ ಕಿತ್ತು ಬಿಸುಡುವರೂ ಸೃಗ್ವಾರಿಯಂ(ರಕ್ತ) ವಾರಿಯಿಂ ತೊಳೆದೊಡನೆ ಕವಳಗೊಂಡು=[ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುವರು, ಬಿಟ್ಟ ಬಾಣವನ್ನು ಬಾಣಗಳಿಂದ ಕತ್ತರಿಸಿ, ಮತ್ತೆ ದೇಹದಲ್ಲಿ ನಾಟುವಂತೆ ಹೊಡೆಯುವರು, ಅದನ್ನು ಮತ್ತೆ ಕಿತ್ತು ಬಿಸುಡುವರು ರಕ್ತವನ್ನು ನೀರಿನಿಂದ ತೊಳೆದ ಒಡನೆ ಕವಳಗೊಂಡು]; ಮತ್ತೆ ಕೈಗೆಡದೆ ಎಚ್ಚು ಬೊಬ್ಬಿಡುವರೀತೆರದೊಳಿತ್ತಂಡದಗ್ಗಳಿಕೆ ಸಮಮಾಗೆ ಖತಿಯೊಳೊಂಬತ್ತುನಾರಾಚದಿಂದಾ ಸುಧನ್ವಂ ಕರ್ಣತಯನಂ ಘಾತಿಸಿದನು=[ಮತ್ತೆ ಕೈಸೋಲದೆ ಹೊಡೆದು ಬೊಬ್ಬಿಡುವರು ಈ ಬಗೆಯಲ್ಲಿ ಎರಡೂಕಡೆ ಶೌರ್ಯವು ಸಮಸಮವಾಗಲು ಸಿಟ್ಟಿನಿಂದ ಒಂಭತ್ತು ಬಾಣದಿಂದ ಆ ಸುಧನ್ವಂ ಕರ್ಣಜನನ್ನು ಹೊಡೆದನು.]
  • ತಾತ್ಪರ್ಯ:ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುವರು, ಬಿಟ್ಟ ಬಾಣವನ್ನು ಬಾಣಗಳಿಂದ ಕತ್ತರಿಸಿ, ಮತ್ತೆ ದೇಹದಲ್ಲಿ ನಾಟುವಂತೆ ಹೊಡೆಯುವರು, ಅದನ್ನು ಮತ್ತೆ ಕಿತ್ತು ಬಿಸುಡುವರು ರಕ್ತವನ್ನು ನೀರಿನಿಂದ ತೊಳೆದ ಒಡನೆ ಕವಳಗೊಂಡು, ಮತ್ತೆ ಕೈಸೋಲದೆ ಹೊಡೆದು ಬೊಬ್ಬಿಡುವರು ಈ ಬಗೆಯಲ್ಲಿ ಎರಡೂಕಡೆ ಶೌರ್ಯವು ಸಮಸಮವಾಗಲು ಸಿಟ್ಟಿನಿಂದ ಒಂಭತ್ತು ಬಾಣದಿಂದ ಆ ಸುಧನ್ವಂ ಕರ್ಣಜನನ್ನು ಹೊಡೆದನು.]
  • (ಪದ್ಯ- ೨೭)I-IX

ಪದ್ಯ :-:೨೮:

ಸಂಪಾದಿಸಿ

ರಾಯ ಕೇಳಾಗ ಪೂರಾಯ ಗಾಯದೊಳಸ್ರ | ತೋಯದಿಂದವಯವಂ ತೋಯಲಳವಳಿದು ರಾ | ಧೇಯಜಂ ಬಹಳಬಾಧೇಯನಾಗಲ್ಕವನ ಸಾರಥಿ ರಥವ ತಿರುಗಿಸೆ |
ಜೇಯನೇರಿಸಿ ಬಿಲ್ಗಜೇಯ ಹರಿಸೂನು ಸಹ | ಸಾಐತಿಕೆಯಿಂದೆ ನಿಜಸಾಯಕವನುಗಿಯುತಡ | ಹಾಯಿದಂ ಕರೆಕೊಳ್ ಸಹಾಯಿಗಳನೆನುತ ಕಡುಗಲಿ ಸುಧನ್ವನ ಸರಿಸಕೆ ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಯ ಕೇಳಾಗ ಪೂರಾಯ ಗಾಯದೊಳು ಅಸ್ರ (ಆಶ್ರು)ತೋಯದಿಂದ ಅವಯವಂ ತೋಯಲು ಅಳವಳಿದು ರಾಧೇಯಜಂ ಬಹಳ ಬಾಧೇಯನಾಗಲ್ಕೆ=[ರಾಜನೇ ಕೇಳು ಆಗ ದೊಡ್ಡ ಗಾಯದಲ್ಲಿ ಕಣ್ಣೀರಿನಿಂದ(ರಕ್ತ) ಅಂಗವು ತೋಯಲು ಎಚ್ಚರತಪ್ಪಿ ಕರ್ಣಜನು ಬಹಳ ಬಾಧೆಗೆ ಒಳಗಾಗಲು]; ಅವನ ಸಾರಥಿ ರಥವ ತಿರುಗಿಸೆ ಜೇಯನೇರಿಸಿ ಬಿಲ್ಗಜೇಯ ಹರಿಸೂನು ಸಹಸಾಯತಿಕೆಯಿಂದೆ=[ಅವನ ಸಾರಥಿ ರಥವನ್ನು ಹಿಂದಕ್ಕೆ ತಿರುಗಿಸಲು, ಹೆದೆಯನ್ನೇರಿಸಿ ಬಿಲ್ಲಿನಲ್ಲಿ ಅಜೇಯನಾದ ಸುಧನ್ವನು ಸಾಹಸದಿಂದ,]; ನಿಜಸಾಯಕವನು ಉಗಿಯುತ ಅಡಹಾಯಿದಂ ಕರೆಕೊಳ್ ಸಹಾಯಿಗಳನು ಎನುತ ಕಡುಗಲಿ ಸುಧನ್ವನ ಸರಿಸಕೆ=[ ಕರೆದುಕೊ ಸಹಾಯಮಾಡುವವರನ್ನು ಎನ್ನುತ್ತಾ ವೀರ ಸುಧನ್ವನ ಸಮೀಪಕ್ಕೆ ಬಂದು ತನ್ನ ಬಾಣವನ್ನು ತೆಗೆಯುತ್ತಾ ಅಡ್ಡಹಾಕಿದನು,].
  • ತಾತ್ಪರ್ಯ:ರಾಜನೇ ಕೇಳು, ಆಗ ದೊಡ್ಡ ಗಾಯದಲ್ಲಿ ಕಣ್ಣೀರಿನಿಂದ(ರಕ್ತ) ಅಂಗವು ತೋಯಲು ಎಚ್ಚರತಪ್ಪಿ ಕರ್ಣಜನು ಬಹಳ ಬಾಧೆಗೆ ಒಳಗಾಗಲು, ಅವನ ಸಾರಥಿ ರಥವನ್ನು ಹಿಂದಕ್ಕೆ ತಿರುಗಿಸಲು, ಹೆದೆಯನ್ನೇರಿಸಿ ಬಿಲ್ಲಿನಲ್ಲಿ ಅಜೇಯನಾದ ಸುಧನ್ವನು ಸಾಹಸದಿಂದ, ಕರೆದುಕೊ ಸಹಾಯಮಾಡುವವರನ್ನು ಎನ್ನುತ್ತಾ ವೀರ ಸುಧನ್ವನ ಸಮೀಪಕ್ಕೆ ಬಂದು ತನ್ನ ಬಾಣವನ್ನು ತೆಗೆಯುತ್ತಾ ಅಡ್ಡಹಾಕಿದನು,].
  • (ಪದ್ಯ- ೨೮)

ಪದ್ಯ :-:೨೯:

ಸಂಪಾದಿಸಿ

ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ | ಕುರುಪಿಂದೆ ನುಡಿದನವನಿಲ್ಲಿ ನಿನಗಬಲೆಯರ | ಮರೆಯಿಲ್ಲ ನಿನ್ನಿಸುಗೆಗಳುಕು ವರದಾರೆನುತ ಕಲಿಸುಧನ್ವಂ ಕಣೆಗಳ ||
ಬಿರುವಳೆಗೆರಯಲೆಡೆಯೊಳರಿದೆಲವೊ ಸಂಗರದೊ | ಳುರುವ ಜಯವಧು ತನ್ನ ಭುಜದೊಳಿಹಳೆನುತೆ ಕೆಂ | ಗರಿಯ ಬಾಣಂಗಳಂ ಮುಸುಕಿದಂ ಪ್ರದ್ಯುಮ್ನನವನ ರಥದೆಣ್ದೆಸೆಯೊಳು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರಿದನು ಅಚ್ಯುತನ ಸುತನೆಂಬುದಂ ಟೆಕ್ಕೆ(ಧ್ವಜ)ಯದ ಕುರುಪಿಂದೆ ನುಡಿದನು ಅವನು ಇಲ್ಲಿ ನಿನಗೆ ಅಬಲೆಯರ ಮರೆಯಿಲ್ಲ=[ಅಚ್ಯುತನ ಮಗನೆಂಬುದನ್ನು ಧ್ವಜದ ಗುರುತಿನಿಂದ ತಿಳಿದನು, ಸುಧನ್ವನು ಅವನಿಗೆ, ಇಲ್ಲಿ ನಿನಗೆ ಅಬಲೆಯರ ರಕ್ಷಣೆಯಿಲ್ಲ ಎಂದು ನುಡಿದನು]; ನಿನ್ನ ಇಸುಗೆಗೆ ಅಳುಕುವರು ಅದಾರೆನುತ ಕಲಿಸುಧನ್ವಂ ಕಣೆಗಳ ಬಿರುವಳೆ ಗೆರಯಲು ಎಡೆಯೊಳು ಅರಿದು=[ನಿನ್ನ ಬಾಣಕ್ಕೆ ಹೆದರುವವರು (ಅದಾರು) ಯಾರು? ಎನ್ನುತ್ತಾ ವೀರ ಸುಧನ್ವನು ಬಾಣಗಳ ಬಿರುಮಳೆಯನ್ನು ಸುರಿಸಲು, ಅವನ್ನು ಮಧ್ಯದಲ್ಲಿ ಕತ್ತರಿಸಿ,]; ಎಲವೊ ಸಂಗರದೊಳು ಉರುವ ಜಯವಧು ತನ್ನ ಭುಜದೊಳಿಹಳು ಎನುತೆ ಕೆಂಗರಿಯ ಬಾಣಂಗಳಂ ಮುಸುಕಿದಂ ಪ್ರದ್ಯುಮ್ನನು ಅವನ ರಥದ ಎಣ್ದೆಸೆಯೊಳು=[ಎಲವೊ ಯುದ್ಧದಲ್ಲಿ ಮಹಾಜಯಲಕ್ಷ್ಮಿ ತನ್ನ ಭುಜದಲ್ಲಿದ್ದಾಳೆ ಎನ್ನುತ್ತಾ ಕೆಂಪುಗರಿಯ ಬಾಣಗಳಿಂದ ಪ್ರದ್ಯುಮ್ನನು ಅವನ ರಥದ ಎಂಟುದಿಕ್ಕಿನಲ್ಲೂ ಮುಚ್ಚಿದನು.]
  • ತಾತ್ಪರ್ಯ:
  • (ಪದ್ಯ- ೨೯)

ಪದ್ಯ :-:೩೦:

ಸಂಪಾದಿಸಿ

ಅಸಮಸಾಯಕನೆಂದು ಬಣ್ಣಿಪರ್ ನಿನ್ನನಿಂ | ದಸಮಸಾಯಕ ನಾನೊ ನೀನೋ ನೋಡೆನುತ ಪೊಸ | ಮಸೆಯ ವಿಶಿಖಂಗಳಿಂ ಸುರಿದಂ ಸುಧನ್ವನಾತನ ಕಣೆಗಳಂ ಖಂಡಿಸಿ ||
ವಸುಮತಿಗೆ ವೀರ ನೀನಸಮಸಾಯಕನಾದೊ | ಡುಸಿರೆನಗೆ ಸಮಸಾಯಕರದಾರ್ ತ್ರಿಲೋಕದೊಳ್ | ಪ್ರಸಿಯಬೇಡೆಉತ ಕೂರಂಬುಗಳನಂಬರಕೆ ತುಂಬಿದಂ ಶಂಬರಾರಿ ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಸಮ ಸಾಯಕನೆಂದು ಬಣ್ಣಿಪರ್ ನಿನ್ನನಿಂದು ಅಸಮಸಾಯಕ ನಾನೊ ನೀನೋ ನೋಡೆನುತ ಪೊಸಮಸೆಯ ವಿಶಿಖಂಗಳಂ ಸುರಿದಂ ಸುಧನ್ವನಾತನ ಕಣೆಗಳಂ ಖಂಡಿಸಿ=[ಬೆಸಸಂಖ್ಯೆಯ ಐದುಬಾಣದ ಬಿಲ್ಲುಗಾರನೆಂದು ಈಗ ನಿನ್ನನು ಬಣ್ಣಿಸುವರು, ಅಸಮ/ಸರಿಸಾಟಿಇಲ್ಲದ ಬಿಲ್ಲುಗಾರ ನಾನೊ ನೀನೋ ನೋಡು ಎನ್ನುತ್ತಾ ಹೊಸಮಸೆದ ಬಾಣಗಳನ್ನು ಸುರಿದನು; ಸುಧನ್ವನು ಆತನ ಬಾಣಗಳನ್ನು ಕತ್ತರಿಸಿ]; ವಸುಮತಿಗೆ ವೀರ ನೀನು ಅಸಮಸಾಯಕನಾದೊಡೆ ಉಸಿರೆನಗೆ ಸಮಸಾಯಕರು ಅದಾರ್ ತ್ರಿಲೋಕದೊಳ್ ಪುಸಿಯಬೇಡೆನುತ ಕೂರಂಬುಗಳನು ಅಂಬರಕೆ ತುಂಬಿದಂ ಶಂಬರಾರಿ=[ಭೂಮಿಗೆ ನೀನು ಅಸಮಸಾಯಕನು(ವೀರ) ಆದರೆ ನನಗೆ ಹೇಳು ಸಮಸಾಯಕರು(ನನಗೆ ಸಮಾನರು) ಯಾರು ತ್ರಿಲೋಕದಲ್ಲಿ ಸುಳ್ಳು ಹೇಳಬೇಡ ಎನ್ನುತ್ತಾ ಬಾಣಗಳನ್ನು ಆಕಾಶದಲ್ಲಿ ಸುಧನ್ವನು ತುಂಬಿದನು.]
  • ತಾತ್ಪರ್ಯ:ಬೆಸಸಂಖ್ಯೆಯ ಐದುಬಾಣದ ಬಿಲ್ಲುಗಾರನೆಂದು ಈಗ ನಿನ್ನನು ಬಣ್ಣಿಸುವರು, ಅಸಮ/ಸರಿಸಾಟಿಇಲ್ಲದ ಬಿಲ್ಲುಗಾರ ನಾನೊ ನೀನೋ ನೋಡು ಎನ್ನುತ್ತಾ ಹೊಸಮಸೆದ ಬಾಣಗಳನ್ನು ಸುರಿದನು; ಸುಧನ್ವನು ಆತನ ಬಾಣಗಳನ್ನು ಕತ್ತರಿಸಿ; ಭೂಮಿಗೆ ನೀನು ಅಸಮಸಾಯಕನು(ವೀರ) ಆದರೆ ನನಗೆ ಹೇಳು, ಸಮಸಾಯಕರು(ನನಗೆ ಸಮಾನರು) ಯಾರು ತ್ರಿಲೋಕದಲ್ಲಿ ಸುಳ್ಳು ಹೇಳಬೇಡ ಎನ್ನುತ್ತಾ ಬಾಣಗಳನ್ನು ಆಕಾಶದಲ್ಲಿ ಸುಧನ್ವನು ತುಂಬಿದನು.
  • (ಪದ್ಯ- ೩೦)

ಪದ್ಯ :-:೩೧:

ಸಂಪಾದಿಸಿ

ಬರಿಯ ಪೂಗೋಲಿಸುಗೆಯಲ್ಲದಾಹವದೊಳಂ | ಕಿರಿದು ಶರಸಂಧಾನಮುಂಟಲಾ ನಿನಗೆಂದು | ಜರೆದೆಂಟು ಬಾಣದಿಂದೆಚ್ಚಂ ಸುಧನ್ವನಾತನ ಕೋಲ್ಗಳಂ ಸೈರಿಸಿ ||
ಬಿರುಸರಳ ಸಾರದಿಂದವನ ಸರ್ವಾಂಗಮಂ | ತುರುಗಿದಂ ಕವಚ ಸೀಸಕ ಬಾಹುರಕ್ಷೆಗಳ್ | ಬಿರಿವಿನಿಂ ಕೆನ್ನೀರ್ಗಳೊರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬರಿಯ ಪೂಗೋಲ ಇಸುಗೆಯಲ್ಲದೆ ಆಹವದೊಳು ಅಂಕಿರಿದು ಶರಸಂಧಾನಂ ಉಂಟಲಾ ನಿನಗೆಂದು ಜರೆದು ಎಂಟು ಬಾಣದಿಂದ ಎಚ್ಚಂ ಸುಧನ್ವನು=[ಬರಿಯ ಹೂಬಾಣಗಳಲ್ಲದೆ ಯುದ್ಧದಲ್ಲಿ ಲೆಕ್ಕವಿಟ್ಟು ಶರಸಂಧಾನಮಾಡುವ ಅರಿವು ಇದೆಯಲ್ಲಾ ನಿನಗೆ! ಎಂದು ಜರೆದು ಎಂಟು ಬಾಣದಿಂದ ಸುಧನ್ವನು ಹೊಡೆದನು]; ಆತನ ಕೋಲ್ಗಳಂ ಸೈರಿಸಿ ಬಿರುಸರಳ ಸಾರದಿಂದ ಅವನ ಸರ್ವಾಂಗಮಂ ತುರುಗಿದಂ ಕವಚ ಸೀಸಕ ಬಾಹುರಕ್ಷೆಗಳ್ ಬಿರಿವಿನಿಂ ಕೆನ್ನೀರ್ಗಳು ಒರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು=[ಆತನ ಬಾಣಗಳನ್ನು ಸಹಿಸಿಕೊಂಡು, ಪ್ರದ್ಯುಮ್ನನು ಬಿರುಸಾದ ಬಾಣಗಳ ಶಕ್ತಿಯಿಂದ ಸುಧನ್ವನ ದೇಹದ ಸರ್ವಾಂಗವನ್ನೂ ಹೊಡೆದನು- ಅವನ ಕವಚ, ಸೀಸಕ, ಬಾಹುರಕ್ಷೆಗಳು, ಈ ಬಿರುಚಿನ ಹೊಡೆತಕ್ಕೆ ರಕ್ತ ಒಸರಿತು,ನೊಂದು ಕ್ಷಣ ಮೈಮರತನು.].
  • ತಾತ್ಪರ್ಯ: ಬರಿಯ ಹೂಬಾಣಗಳಲ್ಲದೆ ಯುದ್ಧದಲ್ಲಿ ಲೆಕ್ಕವಿಟ್ಟು ಶರಸಂಧಾನಮಾಡುವ ಅರಿವು ಇದೆಯಲ್ಲಾ ನಿನಗೆ! ಎಂದು ಜರೆದು ಎಂಟು ಬಾಣದಿಂದ ಸುಧನ್ವನು ಹೊಡೆದನು; ಆತನ ಬಾಣಗಳನ್ನು ಸಹಿಸಿಕೊಂಡು, ಪ್ರದ್ಯುಮ್ನನು ಬಿರುಸಾದ ಬಾಣಗಳ ಶಕ್ತಿಯಿಂದ ಸುಧನ್ವನ ದೇಹದ ಸರ್ವಾಂಗವನ್ನೂ ಹೊಡೆದನು- ಅವನ ಕವಚ, ಸೀಸಕ, ಬಾಹುರಕ್ಷೆಗಳು, ಈ ಬಿರುಚಿನ ಹೊಡೆತಕ್ಕೆ ರಕ್ತ ಒಸರಿತು,ನೊಂದು ಕ್ಷಣ ಮೈಮರತನು.
  • (ಪದ್ಯ- ೩೦)

ಪದ್ಯ :-:೩೨:

ಸಂಪಾದಿಸಿ

ಕೃಷ್ಣಸುತನೆಂದಿನ್ನೆಗಂ ಸೈರಿಸಿದೊಡೆ ನೀ | ನುಷ್ಣ ಮುಳ್ಳವನಾದೆ ತನ್ನ ಬಾಣಾವಳಿಯ | ತೃಷ್ಣೆಗರುಣಾಂಬುವಂ ನಿನ್ನೊಡರೊಳೂಡಿಸದೆ ಬಿಡುವೆನೇ ಮೇಣಸುವನು ||
ಮುಷ್ಣಮಂ ಮಾಡಿಸದೆ ಮಾಣ್ದಪೆನೆ ಸಾಕಿನ್ನು | ಜಿಷ್ಣುವಂ ಕರೆಸು ತೊಲಗೆ ನುತೊಂದುಸರಳಿಂದ | ವೃಷ್ಣಿಕುಲತಿಲಕವ ಕುಮಾರಕನ ಧನುವನೇಳ್ತುಂಡಾಗಿ ಖಂಡಿಸಿದನು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೃಷ್ಣಸುತನೆಂದು ಇನ್ನೆಗಂ ಸೈರಿಸಿದೊಡೆ ನೀನು ಉಷ್ಣ ಮುಳ್ಳವನಾದೆ ತನ್ನ ಬಾಣಾವಳಿಯ ತೃಷ್ಣೆಗೆ ಅರುಣಾಂಬುವಂ (ಕೆಂಪು ನೀರು-ರಕ್ತ) ನಿನ್ನೊಡಲೊಳು ಊಡಿಸದೆ ಬಿಡುವೆನೇ=[ಕೃಷ್ಣನ ಮಗನೆಂದು ಈವರೆಗೆ ಸೈರಿಸಿಕೊಂಡರೆ, ನೀನು ಕ್ರೂರತನ ಉಳ್ಳವನಾದೆ ತನ್ನ ಬಾಣಗಳ ಬಾಯಾರಿಕೆಗೆ ನಿನ್ನ ದೇಹದ ರಕ್ತವನ್ನು ಉಣ್ಣಿಸದೆ ಬಿಡುವೆನೇ!]; ಮೇಣ್ ಅಸುವನು ಮುಷ್ಣಮಂ ಮಾಡಿಸದೆ ಮಾಣ್ದಪೆನೆ ಸಾಕಿನ್ನು ಜಿಷ್ಣುವಂ ಕರೆಸು ತೊಲಗು ಎನುತೊಂದುಸರಳಿಂದ ವೃಷ್ಣಿಕುಲತಿಲಕವ ಕುಮಾರಕನ ಧನುವನೇಳ್ತುಂಡಾಗಿ ಖಂಡಿಸಿದನು=[ಮತ್ತೂ ಪ್ರಾಣವನ್ನು ಬಿಸಿ ಮಾಡದೇ ಬಿಡುವೆನೇ! ಸಾಕು ಇನ್ನು ನೀನು ಅರ್ಜುನನ್ನು ಕರೆಸು ತೊಲಗು!, ಎನ್ನುತ್ತಾ ಒಂದು ಬಾಣದಿಂದ ಪ್ರದ್ಯುಮ್ನನ ಧನುಸ್ಸನ್ನು ಏಳುತುಂಡಾಗಿ ಕತ್ತರಿದನು.]
  • ತಾತ್ಪರ್ಯ: ಕೃಷ್ಣನ ಮಗನೆಂದು ಈವರೆಗೆ ಸೈರಿಸಿಕೊಂಡರೆ, ನೀನು ಕ್ರೂರತನ ಉಳ್ಳವನಾದೆ ತನ್ನ ಬಾಣಗಳ ಬಾಯಾರಿಕೆಗೆ ನಿನ್ನ ದೇಹದ ರಕ್ತವನ್ನು ಉಣ್ಣಿಸದೆ ಬಿಡುವೆನೇ! ಮತ್ತೂ ಪ್ರಾಣವನ್ನು ಬಿಸಿ ಮಾಡದೇ ಬಿಡುವೆನೇ! ಸಾಕು ಇನ್ನು ನೀನು ಅರ್ಜುನನ್ನು ಕರೆಸು ತೊಲಗು!, ಎನ್ನುತ್ತಾ ಒಂದು ಬಾಣದಿಂದ ಪ್ರದ್ಯುಮ್ನನ ಧನುಸ್ಸನ್ನು ಏಳುತುಂಡಾಗಿ ಕತ್ತರಿದನು.
  • (ಪದ್ಯ- ೩೨)

ಪದ್ಯ :-:೩೩:

ಸಂಪಾದಿಸಿ

ಬಿಲ್ಮುರಿಯೆ ಕಾರ್ಷ್ಣಿ ಕಡುಗೋಪದಿಂದಾಕ್ಷಣಂ | ಪಲ್ಮೊರೆಯುತಸಿಪಲಗೆವಿಡಿದವನ ಮೇಲೆ ನಡೆ | ಯಲ್ಮುಂದಕಡಹಾಯ್ದನರಿಯಲಾ ರಿಪುರೌದ್ರಕರ್ಮ ಕೈತವರ್ಮಕನನು ||
ಬಲ್ಮೆಯುಳ್ಳವನಹೆ ವೃಷಧ್ವಜ ಪ್ರದ್ಯುಮ್ನ | ರೊಲ್ಮಹಾವೀರರಿಲ್ಲವರೊಳ್ ಪೊಣರ್ದೆ ನೀಂ | ನಿಲ್ಮದೀಯಾಸ್ತ್ರವಿಸ್ತಾರಮಂ ನೋಡೆನುತ ತೆಗೆದೆಚ್ಚು ಬೊಬ್ಬಿರಿದನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿಲ್ಮುರಿಯೆ ಕಾರ್ಷ್ಣಿ ಕಡುಗೋಪದಿಂದ ಆಕ್ಷಣಂ ಪಲ್ಮೊರೆಯುತ (ಹಲ್ಲುಕಡಿ) ಅಸಿಪಲಗೆ (ಕತ್ತಿ)ವಿಡಿದು ಅವನ ಮೇಲೆ ನಡೆಯಲ್=[ಬಿಲ್ಲು ಮುರಿಯೆಲು ಪ್ರದ್ಯುಮ್ನನು ಬಹಳ ಕೋಪದಿಂದ ಆಕ್ಷಣವೇ ಹಲ್ಲುಕಡಿಯುತ್ತಾ ಕತ್ತಿ ಹಿಡಿದು ಅವನ ಮೇಲೆ ನುಗ್ಗಿದನು]; ಮಂದಕೆ ಅಡಹಾಯ್ದನು ಅರಿಯಲ ಆ ರಿಪು ರೌದ್ರಕರ್ಮ ಕೈತವರ್ಮಕನನು=[ ಆಗ ವೀರ ಕೈತವರ್ಮಕನು ಅಪಾಯ ಅರಿತು ಆ ಶತ್ರುವಿನ ಮಂದಕ್ಕೆ ಅಡ್ಡಹಾಯ್ದನು];ಬಲ್ಮೆಯುಳ್ಳವನು ಅಹೆ ವೃಷಧ್ವಜ ಪ್ರದ್ಯುಮ್ನರೊಲ್ ಮಹಾವೀರರಿಲ್ಲ ಅವರೊಳ್ ಪೊಣರ್ದೆ=[ನೀನು ಶಕ್ತಿಯುಳ್ಳವನು ಅಹುದು ವೃಷಧ್ವಜನಾದ ಪ್ರದ್ಯುಮ್ನರಂತೆ ಮಹಾವೀರರಿಲ್ಲ; ಅವರೊಡನೆ ಹೋರಾಡಿದೆ.]; ನೀಂ ನಿಲ್ ಮದೀಯ ಅಸ್ತ್ರವಿಸ್ತಾರಮಂ ನೋಡೆನುತ ತೆಗೆದೆಚ್ಚು ಬೊಬ್ಬಿರಿದನು=[ನೀನು ಈಗ ನಿಲ್ಲು; ನನ್ನ ಅಸ್ತ್ರವಿದ್ಯೆಯ ವಿಸ್ತಾರವನ್ನು ನೋಡು ಎನ್ನುತ್ತಾ ಬಾಣ ಹೊಡೆದು ಬೊಬ್ಬಿರಿದನು].
  • ತಾತ್ಪರ್ಯ: ಬಿಲ್ಲು ಮುರಿಯೆಲು ಪ್ರದ್ಯುಮ್ನನು ಬಹಳ ಕೋಪದಿಂದ ಆಕ್ಷಣವೇ ಹಲ್ಲುಕಡಿಯುತ್ತಾ ಕತ್ತಿ ಹಿಡಿದು ಅವನ ಮೇಲೆ ನುಗ್ಗಿದನು; ಆಗ ವೀರ ಕೈತವರ್ಮಕನು ಅಪಾಯ ಅರಿತು ಆ ಶತ್ರುವಿನ ಮಂದಕ್ಕೆ ಹೋಗಿ ಅಡ್ಡಹಾಕಿದನು; ನೀನು ಶಕ್ತಿಯುಳ್ಳವನು ಅಹುದು ವೃಷಧ್ವಜನಾದ ಪ್ರದ್ಯುಮ್ನರಂತೆ ಮಹಾವೀರರಿಲ್ಲ; ಅವರೊಡನೆ ಹೋರಾಡಿದೆ. ನೀನು ಈಗ ನಿಲ್ಲು; ನನ್ನ ಅಸ್ತ್ರವಿದ್ಯೆಯ ವಿಸ್ತಾರವನ್ನು ನೋಡು ಎನ್ನುತ್ತಾ ಬಾಣ ಹೊಡೆದು ಬೊಬ್ಬಿರಿದನು.
  • (ಪದ್ಯ- ೩೩)

ಪದ್ಯ :-:೩೪:

ಸಂಪಾದಿಸಿ

ಲೇಸಾದುದಖಿಳ ಯಾದವರೊಳಗೆ ಕೃತವರ್ಮ | ನೇ ಸಮರ್ಥಂ ಕಾಣಬಹುದು ಕಾಳಗದೊಳೆನು | ತಾ ಸುಧನ್ವಂ ತೆಗೆದಿ(ದೆ)ಸಲ್ಕವನ ಕಣೆಗಳಂ ಕಡಿದಿವಂ ಮಗುಳೆಚ್ಚೊಡೆ ||
ಆ ಸರಳ್ಗಳವನಂ ತಿರಿದು ಹತ್ತಂಬಿನಿಂ | ಗಾಸಿಮಾಡಿದೊಡಿವಂ ಪದಿದೈದು ಮಾರ್ಗಣದೊ | ಳೋಸರಿಸದವನ ಸರ್ವಾಂಗಮಂ ಕೀಲಿಸಿದನರುಣಜಲದೊರತೆ ಮಸಗೆ ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಲೇಸಾದುದು ಅಖಿಳ ಯಾದವರೊಳಗೆ ಕೃತವರ್ಮನೇ ಸಮರ್ಥಂ ಕಾಣಬಹುದು ಕಾಳಗದೊಳು ಎನುತ=[ಒಳ್ಲೆಯದು, ಅಖಿಲ ಯಾದವರಲ್ಲಿ ಕೃತವರ್ಮನೇ ಸಮರ್ಥನೆಂದು ಯುದ್ಧದಲ್ಲಿ ಕಾಣಬಹುದು ಎನ್ನುತ್ತಾ]; ಆ ಸುಧನ್ವಂ ತೆಗೆದಿ(ದೆ)ಸಲ್ (ತಗೆದು+ಎಸೆಲ್ಕೆ) ಅವನ ಕಣೆಗಳಂ ಕಡಿದು ಇವಂ ಮಗುಳು ಎಚ್ಚೊಡೆ ಆ ಸರಳ್ಗಳು ಅವನಂ ತಿರಿದು ಹತ್ತಂಬಿನಿಂ ಗಾಸಿಮಾಡಿದೊಡೆ=[ಆ ಸುಧನ್ವನು ತೆಗೆದು ಬಾಣಬಿಡಲು, ಅವನ ಬಾಣಗಳನ್ನು ಕಡಿದು, ಇವನು ತಿರುಗಿ ಹೊಡೆದಾಗ ಆ ಬಾಣಗಳು ಅವನನ್ನು ಚುಚ್ಚಿ, ಹತ್ತು ಬಾಣಗಳಿಂದ ಹೊಡೆದಾಗ]; ಇವಂ ಪದಿದೈದು ಮಾರ್ಗಣದೊಳು ಓಸರಿಸದೆ(ಗುರಿತಪ್ಪದೆ) ಅವನ ಸರ್ವಾಂಗಮಂ ಕೀಲಿಸಿದನು ಅರುಣಜಲದ ಒರತೆ ಮಸಗೆ=[ಇವನು ಪದಿದೈದು ಬಾಣಗಳಲ್ಲಿ ಗುರಿತಪ್ಪದೆ ಅವನ ಸರ್ವ ಅಂಗವನ್ನೂ ಗಾಯಮಾಡಿದನು,-ಆಗಅವನ ದೇಹದಲ್ಲಿ ರಕ್ತವು ಒಸರಿತು].
  • ತಾತ್ಪರ್ಯ: ಒಳ್ಳೆಯದು, ಅಖಿಲ ಯಾದವರಲ್ಲಿ ಕೃತವರ್ಮನೇ ಸಮರ್ಥನೆಂದು ಯುದ್ಧದಲ್ಲಿ ಕಾಣಬಹುದು ಎನ್ನುತ್ತಾ; ಆ ಸುಧನ್ವನು ತೆಗೆದು ಬಾಣಬಿಡಲು, ಅವನ ಬಾಣಗಳನ್ನು ಕಡಿದು, ಇವನು ತಿರುಗಿ ಹೊಡೆದಾಗ ಆ ಬಾಣಗಳು ಅವನನ್ನು ಚುಚ್ಚಿ, ಹತ್ತು ಬಾಣಗಳಿಂದ ಹೊಡೆದಾಗ; ಇವನು ಪದಿದೈದು ಬಾಣಗಳಲ್ಲಿ ಗುರಿತಪ್ಪದೆ ಅವನ ಸರ್ವ ಅಂಗವನ್ನೂ ಗಾಯಮಾಡಿದನು,-ಆಗ ಅವನ ದೇಹದಲ್ಲಿ ರಕ್ತವು ಒಸರಿತು].
  • (ಪದ್ಯ- ೩೪)II-IX

ಪದ್ಯ :-:೩೫:

ಸಂಪಾದಿಸಿ

ಹಾರ್ದಿಕ್ಯನಿಸುಗೆಯಿಂದುರೆ ನೊಂದು ಕೋಪದಿಂ | ದಾರ್ದಾ ಸುಧನ್ವನಿಪ್ಪತ್ತುನಾಲ್ಕಂಬಿನಿಂ | ತೇರ್ದೆಗೆವ ಕುದುರೆಗಳ ಕಾಲ್ಗಳಂ ಗಾಳಿಗಳ ಕೀಲ್ಗಳಂ ಮೂಡಿಗೆಯನು ||
ಮೀರ್ದಿಸುವ ಚಾಪಮಂ ಸಾರಥೀಯ ಕರಮಂ ಕ್ಷ | ಣಾರ್ಧದೊಳ್ ಕಡಿಯೆ ಕೃತವರ್ಮನಳವಳಿದು ಕೆಲ | ಸಾರ್ದೊಡಾ ಪದದೊಳನುಸಾಲ್ವನಿದಿರಾದನತಿವೇಗದಿಂದವನ ರಥಕೆ ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಹಾರ್ದಿಕ್ಯನ(ಕೃತವರ್ಮ) ಇಸುಗೆಯಿಂದ ಉರೆ ನೊಂದು ಕೋಪದಿಂದ ಆರ್ದು ಸುಧನ್ವನು ಇಪ್ಪತ್ತುನಾಲ್ಕು ಅಂಬಿನಿಂ=[ಕೃತವರ್ಮನ ಬಾಣದಿಂದ ಬಹಳ ನೊಂದು ಕೋಪದಿಂದ ಆರ್ಭಟಿಸಿ ಸುಧನ್ವನು ಇಪ್ಪತ್ತುನಾಲ್ಕು ಬಾಣದಿಂದ]; ತೇರ್ ತೆಗೆವ ಕುದುರೆಗಳ ಕಾಲ್ಗಳಂ ಗಾಲಿಗಳ ಕೀಲ್ಗಳಂ ಮೂಡಿಗೆಯನು ಮೀರ್ದು ಇಸುವ ಚಾಪಮಂ ಸಾರಥೀಯ ಕರಮಂ ಕ್ಷಣಾರ್ಧದೊಳ್ ಕಡಿಯೆ=[ರಥ, ಎಳೆಯುವ ಕುದುರೆಗಳ ಕಾಲುಗಳನ್ನು, ಗಾಲಿಗಳ ಕೀಲುಗಳನ್ನು, ಮೂಡಿಗೆಯೆಂಬ ಅಂಬಿನ ಚೀಲವನ್ನು, ಮತ್ತೂ ಬಿಲ್ಲನ್ನು ಸಾರಥೀಯ ಕೈಯನ್ನು ಕ್ಷಣಾರ್ಧದಲ್ಲಿ ಕತ್ತರಿಸಲು,]; ಕೃತವರ್ಮನು ಅಳವಳಿದು ಕೆಲಸಾರ್ದೊಡೆ ಆ ಪದದೊಳು ಅನುಸಾಲ್ವನಿದಿರಾದನು ಅತಿವೇಗದಿಂದ ಅವನ ರಥಕೆ=[ಕೃತವರ್ಮನು ಬಳಲಿ ಸರಿದು ಹೋದನು. ಆಗ ಆ ಸ್ಥಾನದಲ್ಲಿ ಅನುಸಾಲ್ವನು ಅವನಿಗೆ ಅತಿವೇಗದಿಂದ ಅವನ ರಥಕ್ಕೆ ಎದುರಾದನು].
  • ತಾತ್ಪರ್ಯ:ಕೃತವರ್ಮನ ಬಾಣದಿಂದ ಬಹಳ ನೊಂದು ಕೋಪದಿಂದ ಆರ್ಭಟಿಸಿ ಸುಧನ್ವನು ಇಪ್ಪತ್ತುನಾಲ್ಕು ಬಾಣದಿಂದ ಅವನ ರಥ, ಎಳೆಯುವ ಕುದುರೆಗಳ ಕಾಲುಗಳನ್ನು, ಗಾಲಿಗಳ ಕೀಲುಗಳನ್ನು, ಮೂಡಿಗೆಯೆಂಬ ಅಂಬಿನ ಚೀಲವನ್ನು, ಮತ್ತೂ ಬಿಲ್ಲನ್ನು ಸಾರಥೀಯ ಕೈಯನ್ನು ಕ್ಷಣಾರ್ಧದಲ್ಲಿ ಕತ್ತರಿಸಲು,ಕೃತವರ್ಮನು ಬಳಲಿ ಸರಿದು ಹೋದನು. ಆಗ ಆ ಸ್ಥಾನದಲ್ಲಿ ಅನುಸಾಲ್ವನು ಅವನಿಗೆ ಅತಿವೇಗದಿಂದ ಅವನ ರಥಕ್ಕೆ ಎದುರಾದನು.
  • (ಪದ್ಯ- ೩೫)

ಪದ್ಯ :-:೩೬:

ಸಂಪಾದಿಸಿ

ಸಾಲ್ವಾನುಜಂ ಕಣೌ ತಾನೆನ್ನೊಳಾಹವಕೆ | ಮೇಲ್ವಾಯ್ದೊಡನುಪಮ ಸುರೇಂದ್ರನ ಪರಾಕ್ರಮಕೆ | ಸೋಲ್ವೆನೇ ತನ್ನೊಳ್ ಪೆÇಣರ್ದು ಸಾಯದೆ ಧರ್ಮರಾಜನವರಂ ಕಾಣ್ಬುದು ||
ತೇಲ್ವುದು ರಣಾಗ್ರದಿಂದಲ್ಲದೊಡುಳುಹೆನೆನುತ | ಕೋಲ್ವಳೆಗರೆದನವಂ ಪ್ರಳಯ ಜೀಮೂತಮಂ | ಪೋಲ್ವಿನಂ ಮುಸುಕಿತು ಸುಧನ್ವನ ವರೊಥಮಂ ಬಹಳ ಶರಯೂಥಮಂದು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಾಲ್ವಾನುಜಂ ಕಣೌ ತಾನು ಎನ್ನೊಳು ಆಹವಕೆ ಮೇಲ್ ಹಾಯ್ದೊಡೆ ಅನುಪಮ ಸುರೇಂದ್ರನ ಪರಾಕ್ರಮಕೆ ಸೋಲ್ವೆನೇ=[ತಾನು ಸಾಲ್ವಾನುಜನು ಕಣಯ್ಯಾ, ನನ್ನಲ್ಲಿ ಯುದ್ಧಕ್ಕೆ ಬಂದರೆ ಸಮಾನರಿಲ್ಲದ ಇಂದ್ರನಿಗೂ ಸೊಲುವುದಿಲ್ಲ.]; ತನ್ನೊಳ್ ಪೊಣರ್ದು ಸಾಯದೆ ಧರ್ಮರಾಜನವರಂ ಕಾಣ್ಬುದು ತೇಲ್ವುದು ರಣಾಗ್ರದಿಂದ ಅಲ್ಲದೊಡೆ ಉಳುಹೆನು ಎನುತ=[ತನ್ನಲ್ಲಿ ಹೋರಾಡಿ ಸಾಯದೆ ಧರ್ಮರಾಜನವರನ್ನು ಕಾಣುವುದು ಒಳ್ಳೆಯದು, ಹೊರಡು ರಣರಂಗದಿಂದ, ಇಲ್ಲದಿದ್ದರೆ ಉಳಿಸುವುದಿಲ್ಲ,ಸಾಯಿಸುವೆನು, ಎನ್ನತ್ತಾ]; ಕೋಲ್ವಳೆಗರೆದನು ಅವಂ ಪ್ರಳಯ ಜೀಮೂತಮಂ ಪೋಲ್ವಿನಂ ಮುಸುಕಿತು ಸುಧನ್ವನ ವರೊಥಮಂ ಬಹಳ ಶರಯೂಥಮಂದು(ಯೂಥ-ಸಮೂಹ)=[ಸುಧನ್ವನ ರಥವನ್ನು ಅಂದು ಅವನು ಬಾಣಗಳ ಮಳೆಕರೆದನು, ಅದು ಬಹಳ ಶರಗಳಮಳೆಯಿಂದ ಪ್ರಳಯಕಾಲದ ಮೋಡದನ್ನು ಹೋಲುತ್ತಿತ್ತು,]
  • ತಾತ್ಪರ್ಯ:ತಾನು ಸಾಲ್ವಾನುಜನು ಕಣಯ್ಯಾ, ನನ್ನಲ್ಲಿ ಯುದ್ಧಕ್ಕೆ ಬಂದರೆ ಸಮಾನರಿಲ್ಲದ ಇಂದ್ರನಿಗೂ ಸೊಲುವುದಿಲ್ಲ. ತನ್ನಲ್ಲಿ ಹೋರಾಡಿ ಸಾಯದೆ ಧರ್ಮರಾಜನವರನ್ನು ಕಾಣುವುದು ಒಳ್ಳೆಯದು, ಹೊರಡು ರಣರಂಗದಿಂದ, ಇಲ್ಲದಿದ್ದರೆ ಉಳಿಸುವುದಿಲ್ಲ,ಸಾಯಿಸುವೆನು, ಎನ್ನತ್ತಾ ಸುಧನ್ವನ ರಥವನ್ನು ಅಂದು ಅವನು ಬಾಣಗಳ ಮಳೆಕರೆದನು, ಅದು ಬಹಳ ಶರಗಳಮಳೆಯಿಂದ ಪ್ರಳಯಕಾಲದ ಮೋಡದನ್ನು ಹೋಲುತ್ತಿತ್ತು,]
  • (ಪದ್ಯ- ೩೬)

ಪದ್ಯ :-:೩೮:

ಸಂಪಾದಿಸಿ

ಬಲ್ಲೆನನುಸಾಲ್ವನೆಂದಳವಿಯಂ ಬಿಟ್ಟೊಡಾಂ | ಬಿಲ್ಲಾಳೇ ವೇಳ್ ಧರ್ಮರಾಜನವರಂ ಕಾಣ್ಬ | ನಲ್ಲ ಕಾಣಿಸುವೆನೀಗಳೆ ಧರ್ಮರಾಜನವರಂ ತರಹರಿಸು ನಿನ್ನನು ||
ಎಲ್ಲಿ ತೋರಿಸು ವಜ್ರಿಗಸದಳದ ಬಲ್ಮೆಯಂ | ಕೊಲ್ಲಬೇಕಾದೊಡಿದ್ಧಪೆನೆನುತ ಕೋಲ್ಗಳಂ | ಚೆಲ್ಲಿದಂ ಹಂಸಧ್ವಜನ ಸುತಂ ಕಾಶೀರಾಜನ ಸುತಂ ಗಾಸಿಯಾಗೆ ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಲ್ಲೆನು ಅನುಸಾಲ್ವನೆಂದು ಅಳವಿಯಂ (ಆಳವು-ಶಕ್ತಿ ಶೌರ್ಯ) ಬಿಟ್ಟೊಡೆ ಆಂ ಬಿಲ್ಲಾಳೇ ವೇಳ್=[ನೀನು ಅನುಸಾಲ್ವನೆಂದು ಬಲ್ಲೆನು; ಶಕ್ತಿ ಶೌರ್ಯ ಬಿಟ್ಟರೆ ನಾನು ಬಿಲ್ಲುಗಾರನೇ ಹೇಳು.]; ಧರ್ಮರಾಜನವರಂ ಕಾಣುವುದಿಲ್ಲ; ಧರ್ಮರಾಜನವರಂ ಕಾಣ್ಬನಲ್ಲ ಕಾಣಿಸುವೆನು ಈಗಳೆ ಧರ್ಮರಾಜನವರಂ ತರಹರಿಸು ನಿನ್ನನು ಎಲ್ಲಿ ತೋರಿಸು ವಜ್ರಿಗೆ(ಇಂದ್ರ) ಅಸದಳದ ಬಲ್ಮೆಯಂ=[ಆದರೆ ಈಗಲೆ ನಿನಗೆ ಧರ್ಮರಾಜನಾದ ಯಮನನ್ನು ಕಾಣಿಸುವೆನು, ನಿನ್ನನು ಸಂಭಾಳಿಸಿಕೊ; ಎಲ್ಲಿ ತೋರಿಸು ನಿನ್ನ ಇಂದ್ರ ಸಮಾನ ಶಕ್ತಿಯನ್ನು]; ಕೊಲ್ಲಬೇಕಾದೊಡೆ ಇದ್ಧಪೆನು ಎನುತ ಕೋಲ್ಗಳಂ ಚೆಲ್ಲಿದಂ ಹಂಸಧ್ವಜನ ಸುತಂ ಕಾಶೀರಾಜನ ಸುತಂ ಗಾಸಿಯಾಗೆ=[ನೀನು ಕೊಲ್ಲುವುದಾದರೆ ಇಲ್ಲಿಯೇ ಇದ್ಧೇನೆ, ಎನ್ನುತ್ತಾ ಹಂಸಧ್ವಜನ ಮಗ ಕಾಶೀರಾಜನ ಮಗನ ಮೇಲೆ ಗಾಸಿಯಾಗುವಂತೆ ಬಾಣಗಳನ್ನು ಬಿಟ್ಟನು.].
  • ತಾತ್ಪರ್ಯ:ನೀನು ಅನುಸಾಲ್ವನೆಂದು ಬಲ್ಲೆನು; ಶಕ್ತಿ ಶೌರ್ಯ ಬಿಟ್ಟರೆ ನಾನು ಬಿಲ್ಲುಗಾರನೇ ಹೇಳು. ಆದರೆ ಈಗಲೆ ನಿನಗೆ ಧರ್ಮರಾಜನಾದ ಯಮನನ್ನು ಕಾಣಿಸುವೆನು, ನಿನ್ನನು ಸಂಭಾಳಿಸಿಕೊ; ಎಲ್ಲಿ ತೋರಿಸು ನಿನ್ನ ಇಂದ್ರ ಸಮಾನ ಶಕ್ತಿಯನ್ನು; ನೀನು ಕೊಲ್ಲುವುದಾದರೆ ಇಲ್ಲಿಯೇ ಇದ್ಧೇನೆ, ಎನ್ನುತ್ತಾ ಹಂಸಧ್ವಜನ ಮಗ ಕಾಶೀರಾಜನ ಮಗನ ಮೇಲೆ ಗಾಸಿಯಾಗುವಂತೆ ಬಾಣಗಳನ್ನು ಬಿಟ್ಟನು.].
  • (ಪದ್ಯ- ೩೭)

ಪದ್ಯ :-:೩೮:

ಸಂಪಾದಿಸಿ

ಫಡಫಡೆಲವೆಲವೊ ತೊಲತೊಲಗೆನುತೆರೋಷದಿಂ | ಘುಡಿಘುಡಿಸಿ ಕೌಂಡುವ ಕಾಯದಿಂದನುಸಾಲ್ವ | ನೊಡನೊಡನೆ ಪೊಳೆಪೊಳೆವ ಪೂಸಮಸೆಯ ನಿಡುನಿಡು ಸರಳ್ಗಳಂತೆಗೆದಿಸುತಿರೆ ||
ಎಡೆಯೆಡೆಯೊಳಡಿಗಡಿಗೆ ಹಂಸಧ್ವಜಾತ್ಮಜಂ | ಕಡಿಕಡಿದು ಮೀರಿದ ಪರಾಕ್ರಮದೊಳಸುರನಂ | ಬಿಡಬಿಡವೆ ಘಾತಿಸಿದನಿಪ್ಪತ್ತು ಬಾಣದಿಂ ಬಿಸಿಬಿಸಿಯ ಎತ್ತರೊಸರೆ ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಫಡಫಡ ಎಲವೆಲವೊ ತೊಲತೊಲಗು ಎನುತೆ ರೋಷದಿಂ ಘುಡಿಘುಡಿಸಿ ಕಾರಿಡುವ ಕಾಯದಿಂದ ಅನುಸಾಲ್ವನೊಡನೆ ಒಡನೆ ಪೊಳೆಪೊಳೆವ ಪೂಸಮಸೆಯ ನಿಡುನಿಡು ಸರಳ್ಗಳಂ ತೆಗೆದ ಇಸುತಿರೆ=[ಫಡಫಡ ಎಲವೆಲವೊ ತೊಲತೊಲಗು ಎನ್ನುತ್ತಾ ರೋಷದಿಂದ, ಘುಡಿಘುಡಿಸಿ ಕಪ್ಪಾಗಿರುವ ದೇಹದ ಅನುಸಾಲ್ವನೊಡನೆ ಒಡನೆ ಪೊಳೆಪೊಳೆವ ಮಸೆದಹೊಸ ನಿಡುನಿಡು/ಉದ್ದುದ್ದ ಬಾಣಗಳನ್ನು ತೆಗೆದ ಬಿಡುತ್ತಿರಲು ಮತ್ತೂ]; ಎಡೆಯೆಡೆಯೊಳ್ ಅಡಿಗಡಿಗೆ ಹಂಸಧ್ವಜಾತ್ಮಜಂ ಕಡಿಕಡಿದು ಮೀರಿದ ಪರಾಕ್ರಮದೊಳು ಅಸುರನಂ ಬಿಡಬಿಡವೆ ಘಾತಿಸಿದನು ಇಪ್ಪತ್ತು ಬಾಣದಿಂ ಬಿಸಿಬಿಸಿಯ ಎತ್ತರು ಒಸರೆ=[ಎಲ್ಲಾಕಡೆ ಅಡಿಗಡಿಗೆ ಹಂಸಧ್ವಜನ ಮಗ ಅವನ್ನು ಕಡಿಕಡಿದು ಮೀರಿದ ಪರಾಕ್ರಮದಿಂದ ಅಸುರ (ಅನುಸಾಲ್ವ)ನನ್ನು ಬಿಡಬಿಡದೆಇಪ್ಪತ್ತು ಬಾಣದಿಂದ ಹೊಡೆದನು, ಆಗ ಅವನ ಮೈಯಿಂದ ಬಿಸಿಬಿಸಿಯ ನೆತ್ತರು ಒಸರಿತು.]
  • ತಾತ್ಪರ್ಯ:ಫಡಫಡ ಎಲವೆಲವೊ ತೊಲತೊಲಗು ಎನ್ನುತ್ತಾ ರೋಷದಿಂದ, ಘುಡಿಘುಡಿಸಿ ಕಪ್ಪಾಗಿರುವ ದೇಹದ ಅನುಸಾಲ್ವನೊಡನೆ ಒಡನೆ ಪೊಳೆಪೊಳೆವ ಮಸೆದಹೊಸ ನಿಡುನಿಡು/ಉದ್ದುದ್ದ ಬಾಣಗಳನ್ನು ತೆಗೆದ ಬಿಡುತ್ತಿರಲು ಮತ್ತೂ ಎಲ್ಲಾ ಕಡೆ ಅಡಿಗಡಿಗೆ ಹಂಸಧ್ವಜನ ಮಗ ಅವನ್ನು ಕಡಿಕಡಿದು ಮೀರಿದ ಪರಾಕ್ರಮದಿಂದ ಅಸುರ (ಅನುಸಾಲ್ವ)ನನ್ನು ಬಿಡಬಿಡದೆಇಪ್ಪತ್ತು ಬಾಣದಿಂದ ಹೊಡೆದನು, ಆಗ ಅವನ ಮೈಯಿಂದ ಬಿಸಿಬಿಸಿಯ ನೆತ್ತರು ಒಸರಿತು.
  • (ಪದ್ಯ- ೩೮)

ಪದ್ಯ :-:೩೯:

ಸಂಪಾದಿಸಿ

ಮತ್ತೆ ಕಿಡಿಯಿಡೆಕೋಪಮನುಸಾಲ್ವನಬ್ಧಿಯಂ | ತುತ್ತುಗೊಳ್ವುರಿಗೆ ಸರಿಯಾದೊಂದು ಬಾಣಮಂ | ಕಿತ್ತು ಹೂಡಿದನಿದಂ ತರಹರಿಸಿಕೊಳ್ಳೆನುತ ತೆಗೆದೆಚ್ಚು ಬೊಬ್ಬಿರೆಯಲು ||
ಕತ್ತರಿಸುವೆಡೆಗಣೆಗಳಂ ಮೀರಿ ನಡುವೆದೆಯ | ನುತ್ತರಿಸಿ ಕೋಲತ್ತಡಗಿತವನಿಯೊಳಾಗ | ಪುತ್ತುವುಗುವಹಿಯಂತೆ ಬಳಿಕ ಮೈಮರೆದಂ ಸುಧನ್ವನದನೇ ವೇಳ್ವನು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮತ್ತೆ ಕಿಡಿಯಿಡೆ ಕೋಪಂ ಅನುಸಾಲ್ವನು ಅಬ್ಧಿಯಂ ತುತ್ತುಗೊಳ್ವು ಉರಿಗೆ ಸರಿಯಾದೊಂದು ಬಾಣಮಂ ಕಿತ್ತು ಹೂಡಿದನು=[ಮತ್ತೆ ಕೋಪವು ಉರಿಯಲು ಅನುಸಾಲ್ವನು ಸಮುದ್ರವನ್ನು ನುಂಗುವ ಬೆಂಕಿಗೆ ಸರಿಯಾದ ಒಂದು ಬಾಣವನ್ನು ಬತ್ತಳಿಕೆಯಿಂದ ಕಿತ್ತು ಹೂಡಿದನು]; ಇದಂ ತರಹರಿಸಿಕೊಳ್ಳು ಎನುತ ತೆಗೆದೆಚ್ಚು ಬೊಬ್ಬಿರಿಯಲು ಕತ್ತರಿಸುವಡೆ+ ಕಣೆಗಳಂ ಮೀರಿ ನಡುವೆದೆಯನು ಉತ್ತರಿಸಿ=[ಇದನ್ನು ಸಹಿಸಿಕೊ ಎನ್ನುತ್ತಾ ತೆಗೆದು ಹೊಡೆದು ಬೊಬ್ಬಿರಿಯಲು, ಅದನ್ನು ಮಧ್ಯ ಕತ್ತರಿಸಿದರೆ ಉಳಿದ ಬಾಣಗಳು ಮೀರಿಹೋಗಿ ನಡು ಎದೆಯನು ಬೇಧಿಸಿ]; ಕೋಲು ಅತ್ತ ಅಡಗಿತ ಅವನಿಯೊಳುಆಗ ಪುತ್ತುವುಗುವ ಅಹಿಯಂತೆ ಬಳಿಕ ಮೈಮರೆದಂ ಸುಧನ್ವನು ಅದನೇ ವೇಳ್ವನು=[ಬಾಣವು ಹೊರಟು ಹುತ್ತವನ್ನು ಹೊಗುವ ಹಾವಿನಂತೆ ಆಗ ಭೂಮಿಯಲ್ಲಿ ಅಡಗಿತು; ಬಳಿಕ ಸುಧನ್ವನು ಮೈಮರೆದನು/ ಎಚ್ಚರ ತಪ್ಪಿದನು. ಅದನ್ನು ಏನು ಹೇಳಲಿ.]
  • ತಾತ್ಪರ್ಯ: ಮತ್ತೆ ಕೋಪವು ಉರಿಯಲು ಅನುಸಾಲ್ವನು ಸಮುದ್ರವನ್ನು ನುಂಗುವ ಬೆಂಕಿಗೆ ಸರಿಯಾದ ಒಂದು ಬಾಣವನ್ನು ಬತ್ತಳಿಕೆಯಿಂದ ಕಿತ್ತು ಹೂಡಿದನು; ಇದನ್ನು ಸಹಿಸಿಕೊ ಎನ್ನುತ್ತಾ ತೆಗೆದು ಹೊಡೆದು ಬೊಬ್ಬಿರಿಯಲು, ಅವನು ಅದನ್ನು ಮಧ್ಯ ಕತ್ತರಿಸಿದರೆ ಉಳಿದ ಬಾಣಗಳು ಮೀರಿಹೋಗಿ ನಡು ಎದೆಯನ್ನು ಬೇಧಿಸಿ ಬಾಣವು ಹೊರಟು ಹುತ್ತವನ್ನು ಹೊಗುವ ಹಾವಿನಂತೆ ಆಗ ಭೂಮಿಯಲ್ಲಿ ಅಡಗಿತು; ಬಳಿಕ ಸುಧನ್ವನು ಮೈಮರೆದನು/ ಎಚ್ಚರ ತಪ್ಪಿದನು. ಅದನ್ನು ಏನು ಹೇಳಲಿ.
  • (ಪದ್ಯ- ೩೯)

ಪದ್ಯ :-:೪೦:

ಸಂಪಾದಿಸಿ

ಲೆಲೆ ಕವಿಕವಿಯೆನುತವನ ಬಲಂ ಕಂಡು ಸಂ | ಕಲೆಗಡಿದ ಮುಗಿಲಂತಿವನ ಮೇಲೆ ಕೈದುಗಳ | ಮಳೆಗೆರಯುತಿಟ್ಟಣಿಸಿ ನೂಕಲನುಸಾಲ್ವಂ ಕನಲ್ದು ಜಗದಳಿವಿನಂದು ||
ಸುಳಿವ ಬಿರುಗಾಳಿಯಂ ಸೋಲಿಸುವ ನಿಡುಸರ | ಳ್ಗಳ ಗರಿಯ ಭರದನಿಲಘಾತದಿಂ ಬಯಲಾದು | ದಳವಿಯೆನಲಿಸುಗೆಯಂ ಕೈಕೊಂಡು ಸವರಿದಂ ಬಂದರಿಪುಮೋಹರವನು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲೆಲೆ ಕವಿಕವಿ (ಮುತ್ತಿರಿ)ಯೆನುತ ಅವನ ಬಲಂ ಕಂಡು ಸಂಕಲೆಗಡಿದ ಮುಗಿಲಂತೆ ಇವನ ಮೇಲೆ ಕೈದುಗಳ ಮಳೆಗೆರಯುತ ಇಟ್ಟಣಿಸಿ ನೂಕಲು=[ಇದನ್ನು ಕಂಡು, ಎಲೆಲೆ ಮತ್ತಿರಿ ಎಂದು ಸುಧನ್ವನ ಸೈನ್ಯವು ತಡೆದು ಬಿಟ್ಟ ಮೋಡದಂತೆ ಇವನ ಮೇಲೆ ಆಯುಧಗಳ ಮಳೆಗೆರಯುತ್ತಾ ಒಟ್ಟಾಗಿ ನುಗ್ಗಲು]; ಅನುಸಾಲ್ವಂ ಕನಲ್ದು ಜಗದಳಿವಿನಂದು ಸುಳಿವ ಬಿರುಗಾಳಿಯಂ ಸೋಲಿಸುವ ನಿಡುಸರಳ್ಗಳ ಗರಿಯ ಭರದ ಅನಿಲಘಾತದಿಂ ಬಯಲಾದುದ ಅಳವಿ ಎನಲು=[ಅನುಸಾಲ್ವನು ಸಿಟ್ಟಿನಿಂದ ಭೂಮಿ ಅಳಿಯುವಾಗ ಸುಳಿವ ಬಿರುಗಾಳಿಯಂತೆ ಸೋಲಿಸುವ ಉದ್ದ ಬಾಣಗಳನ್ನು ಗರಿಯ ವೇಗದ ಗಾಳಿಯ ರಭಸಕ್ಕೆ ಶಕ್ತಿಯು ಹೋಯಿತು ಎನ್ನುವಂತೆ]; ಇಸುಗೆಯಂ ಕೈಕೊಂಡು ಸವರಿದಂ ಬಂದ ರಿಪುಮೋಹರವನು=[ಬಾಣ ಪ್ರಯೋಗಮಾಡಿ ಬಂದ ಶತ್ರುಸೈನ್ಯವನ್ನು ಸವರಿದನು ];
  • ತಾತ್ಪರ್ಯ: ಇದನ್ನು ಕಂಡು, ಎಲೆಲೆ ಮುತ್ತಿರಿ ಎಂದು ಸುಧನ್ವನ ಸೈನ್ಯವು ತಡೆದು ಬಿಟ್ಟ ಮೋಡದಂತೆ ಇವನ ಮೇಲೆ ಆಯುಧಗಳ ಮಳೆಗೆರಯುತ್ತಾ ಒಟ್ಟಾಗಿ ನುಗ್ಗಲು, ಅನುಸಾಲ್ವನು ಸಿಟ್ಟಿನಿಂದ ಭೂಮಿ ಅಳಿಯುವಾಗ ಸುಳಿವ ಬಿರುಗಾಳಿಯಂತೆ ಸೋಲಿಸುವ ಉದ್ದ ಬಾಣಗಳನ್ನು ಗರಿಯ ವೇಗದ ಗಾಳಿಯ ರಭಸಕ್ಕೆ ಶಕ್ತಿಯು ಹೋಯಿತು ಎನ್ನುವಂತೆಬಾಣ ಪ್ರಯೋಗಮಾಡಿ ಬಂದ ಶತ್ರುಸೈನ್ಯವನ್ನು ಸವರಿದನು.
  • (ಪದ್ಯ- ೪೦)

ಪದ್ಯ :-:೪೧:

ಸಂಪಾದಿಸಿ

ಕಂದೆರದು ಕಂಡಂ ಸುಧನ್ವಂ ಬಳಿಕ ಖಾತಿ | ಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ | ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವು ಹೋಗೆನುತ ಹೆದೆಗೆ ||
ಒಂದು ಸರಳಂ ಪೂಡಿ ಕಿವಿವರೆಗೆ ತೆಗೆದೊಚ್ಚೊ | ಡಂದು ಸಾಲ್ವಾನುಜನ ಪೇರುರವನುಚ್ಚಳಿಸೆ | ನೊಂದಿಳೆಗುರುಳ್ದನಾದುದು ಮೂರ್ಛೆ ಪೊಕ್ಕನುರವಣಿಸಿ ಪಾರ್ಥನ ಪಡೆಯನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂದೆರದು ಕಂಡಂ ಸುಧನ್ವಂ ಬಳಿಕ ಖಾತಿಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ ನಿಂದಿದಂ ಸೈರಿಸಿದೆಯಾದೊಡೆ ಇನ್ನು ಇಸುವುದಿಲ್ಲ ಆವು=[ ಸುಧನ್ವನು ಕಂಣು ತೆರದು ನೋಡಿದನು; ಬಳಿಕ ಸಿಟ್ಟಿನಿಮದ ಬಿಲ್ಲನ್ನು ತೆಗೆದುಕೊಂಡು ಶೂರನಾಗಿ ನಿಂತು ಇದನ್ನು ಸಹಿಸಿದರೆ ಇನ್ನು ನಾವು ಬಾಣ ಬಿಡುವುದಿಲ್ಲ]; ಹೋಗೆನುತ ಹೆದೆಗೆ ಒಂದು ಸರಳಂ ಪೂಡಿ ಕಿವಿವರೆಗೆ ತೆಗೆದು ಎಚ್ಚೊಡಂದು ಸಾಲ್ವಾನುಜನ ಪೇರುರವನು ಉಚ್ಚಳಿಸೆ=[ಹೋಗು ಎನ್ನುತ್ತಾ ಹೆದೆಗೆ ಒಂದು ಬಾಣವನ್ನು ಹೂಡಿ ಕಿವಿಯವರೆಗೆ ಎಳೆದು ಹೊಡೆದಾಗ ಅದು, ಅನುಸಾಲ್ವನ ದೊಡ್ಡ ಎದೆಯನ್ನು ಸೀಳಲು]; ನೊಂದು ಇಳೆಗೆ ಉರುಳ್ದನು ಆದುದು ಮೂರ್ಛೆ ಪೊಕ್ಕನು ಉರವಣಿಸಿ ಪಾರ್ಥನ ಪಡೆಯನು=[ನೊಂದು ಅವನು ಭೂಮಿಗೆ ಉರುಳಿದನು. ಅವನು ಮೂರ್ಛೆಹೋದನು; ಸುಧನ್ವನು ಪರಾಕ್ರಮದಿಂದ ಪಾರ್ಥನ ಪಡೆಯನ್ನು ಹೊಕ್ಕನು].
  • ತಾತ್ಪರ್ಯ: ಸುಧನ್ವನು ಕಂಣು ತೆರದು ನೋಡಿದನು; ಬಳಿಕ ಸಿಟ್ಟಿನಿಮದ ಬಿಲ್ಲನ್ನು ತೆಗೆದುಕೊಂಡು ಶೂರನಾಗಿ ನಿಂತು ಇದನ್ನು ಸಹಿಸಿದರೆ ಇನ್ನು ನಾವು ಬಾಣ ಬಿಡುವುದಿಲ್ಲ, ಹೋಗು ಎನ್ನುತ್ತಾ ಹೆದೆಗೆ ಒಂದು ಬಾಣವನ್ನು ಹೂಡಿ ಕಿವಿಯವರೆಗೆ ಎಳೆದು ಹೊಡೆದಾಗ ಅದು, ಅನುಸಾಲ್ವನ ದೊಡ್ಡ ಎದೆಯನ್ನು ಸೀಳಲು, ನೊಂದು ಅವನು ಭೂಮಿಗೆ ಉರುಳಿ ಮೂರ್ಛೆಹೋದನು; ಸುಧನ್ವನು ಪರಾಕ್ರಮದಿಂದ ಪಾರ್ಥನ ಪಡೆಯನ್ನು ಹೊಕ್ಕನು].
  • (ಪದ್ಯ- ೪೧)

ಪದ್ಯ :-:೪೨:

ಸಂಪಾದಿಸಿ

ಪೂಣೆಹೊಕ್ಕವನಿಸುವ ಬಾಣಂಗಳರಿಭಟರ | ಗೋಣನರಿದುಚ್ಚಳಿಸೆ ಮಾಣದೆ ಗಗನಕೇಳ್ವ | ಸೋಣೀತದ ಧಾರೆಗಳ್ ಶೋಣಾಭ್ರದಂತಿರಲ್ ಪ್ರಾಣಿಗಳ ದೃಷ್ಟಿಗಳ್ಗೆ ||
ಕಾಣಿಸಿದುವಾಲಿಸೈ ಕ್ಷೋಣಿಪ ಸುಧನ್ವನ | ಕ್ಷೀಣವಿಕ್ರಮಶಿಖಿಯ ಚೂಣಿಯ ಮಹಾಜ್ವಾಲೆ ಕೇಣಿಗೊಂಡರಿಬಲಶ್ರೇಣಿಯೆಂಬೊಂದಡವಿದಾಣಮಂ ಹೊಕ್ಕಂತಿರೆ ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೂಣೆ (ಪೂರ್ಣ)ಹೊಕ್ಕ ಅವನ ಇಸುವ ಬಾಣಂಗಳು ಅರಿಭಟರ ಗೋಣನು ಅರಿದು ಉಚ್ಚಳಿಸೆ ಮಾಣದೆ (ಹಾರಿಸದೆ ಬಿಡದು)=[ಪೂರ್ಣ ಹೊಕ್ಕ ಅವನು ಹೊಡೆದ ಬಾಣಗಳು ಶತ್ರು ಭಟರ ಕುತ್ತಿಗೆಯನ್ನು ಕತ್ತರಿಸಿ, ಹಾರಿಸಲು ಮಾಣದೆ]; ಗಗನಕೆ ಏಳ್ವ ಸೋಣೀತದ ಧಾರೆಗಳ್ ಶೋಣಾಭ್ರದಂತಿರಲ್ ಪ್ರಾಣಿಗಳ ದೃಷ್ಟಿಗಳ್ಗೆ ಕಾಣಿಸಿದುವು=[ಗಗನಕ್ಕೆ ಹಾರುವ ರಕ್ತದ ಧಾರೆಗಳು ಕೆಂಪುಮೋಡದಂತೆ ಇದ್ದುದು ಪ್ರಾಣಿಗಳ ದೃಷ್ಟಿಗಳಿಗೆ ಕಾಣಿಸಿದುವು]; ಆಲಿಸೈ ಕ್ಷೋಣಿಪ(ನೆಲದಮೇಲೆ ಹರಡುವ) ಸುಧನ್ವನ ಅಕ್ಷೀಣವಿಕ್ರಮಶಿಖಿಯ ಚೂಣಿಯ ಮಹಾಜ್ವಾಲೆ ಕೇಣಿಗೊಂಡು ಅರಿಬಲಶ್ರೇಣಿಯೆಂಬ ಒಂದಡವಿ ತಾಣಮಂ ಹೊಕ್ಕಂತಿರೆ=[ಕೇಳೈ, ನೆಲದಮೇಲೆ ಹರಡುವ ಸುಧನ್ವನ ಪರಾಕ್ರಮದ ಜ್ವಾಲೆ, ಮತ್ತು ಸೈನ್ಯದ ಮಹಾಜ್ವಾಲೆ ಸೇರಿ ಸಾಲಾಗಿ ಶತ್ರುಸೇನೆಯೆಂಬ ಒಂದು ಕಾಡನ್ನು ಪ್ರದೇಶವನ್ನು ಹೊಕ್ಕಂತಿತ್ತು.].
  • ತಾತ್ಪರ್ಯ:ಪೂರ್ಣ ಹೊಕ್ಕ ಅವನು ಹೊಡೆದ ಬಾಣಗಳು ಶತ್ರು ಭಟರ ಕುತ್ತಿಗೆಯನ್ನು ಕತ್ತರಿಸಿ, ಹಾರಿಸಲು, ಗಗನಕ್ಕೆ ಹಾರುವ ರಕ್ತದ ಧಾರೆಗಳು ಕೆಂಪುಮೋಡದಂತೆ ಇದ್ದುದು ಪ್ರಾಣಿಗಳ ದೃಷ್ಟಿಗಳಿಗೆ ಕಾಣಿಸಿದುವು; ಕೇಳೈ, ನೆಲದಮೇಲೆ ಹರಡುವ ಸುಧನ್ವನ ಪರಾಕ್ರಮದ ಜ್ವಾಲೆ, ಮತ್ತು ಸೈನ್ಯದ ಮಹಾಜ್ವಾಲೆ ಸೇರಿ ಸಾಲಾಗಿ ಶತ್ರುಸೇನೆಯೆಂಬ ಒಂದು ಕಾಡನ್ನು ಪ್ರದೇಶವನ್ನು ಹೊಕ್ಕಂತಿತ್ತು.
  • (ಪದ್ಯ- ೪೨)

ಪದ್ಯ :-:೪೩:

ಸಂಪಾದಿಸಿ

ಸಂದಣಿಸಿ ದಂತಿಗಳಘಟೆಗಳೊತ್ತರಿಸಲ್ಕೆ | ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ | ಕೊಂದನುರವಣಿಸಿ ಕಾಲಾಳ್ಗಳಂ ಮುಳಿದುಬಳಿಕೊಂದನುಳಿಯದೆ ರಣದೊಳು ||
ಬಂದ ವಾಜಿಗಳ ನಾನಳವಿಯೊಳ್ ಕಾಣೆನೆಂ | ಬಂದವಾಗಲ್ಕೆ ತಡೆಗಡಿದು ಮೆದೆಗೆಡಹಿದಂ | ಮುಂದಿಟ್ಟಣಿಸಿ ಬಿದ್ದುವಾಗ ರಥಿಕವ್ರಾತ ಮುಂದಿಟ್ಟನಿಸುಗೆಯಿಂದೆ ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಂದಣಿಸಿ ದಂತಿಗಳಘಟೆಗಳು ಒತ್ತರಿಸಲ್ಕೆ ಸಂ+ದಣಿಸಿದಂ ಸರಳ ಸಾರದಿಂ ಕೆಡಹಿದಂ ಕೊಂದನು ಉರವಣಿಸಿ ಕಾಲಾಳ್ಗಳಂ=[ಒಟ್ಟಾಗಿ ಆನೆಗಳ ಗುಂಪು ನುಗ್ಗಿಬರಲು ಬಾಣದ ಬಲದಿಂದ ಅವನ್ನು ಬಹಳ ದಣಿಸಿದನು, ಕಡವಿದನು, ಭಟರನ್ನು ಪರಾಕ್ರಮದಿಂದ ಕೊಂದನು.]; ಮುಳಿದು ಬಳಿಕ ಒಂದನು ಉಳಿಯದೆ ರಣದೊಳು ಬಂದ ವಾಜಿಗಳ ನಾನು ಅಳವಿಯೊಳ್ ಕಾಣೆನೆಂಬ ಅಂದವಾಗಲ್ಕೆ=[ಸಿಟ್ಟಿನಿಂದ ಬಳಿಕ ಯುದ್ಧದಲ್ಲಿ ಬಂದ ಕುದುರೆಗಳನ್ನ ಒಂದನ್ನೂ ಉಳಿಸದೆ ಕೊಂದನು. ನಾನು ನನ್ನ ತಿಳುವಳಿಕೆಯಲ್ಲಿ ಕಂಡಿಲ್ಲವೆಂಬ ರೀತಿಯಾಗಿರಲು, ]; ತಡೆಗಡಿದು ಮೆದೆಗೆಡಹಿದಂ ಮುಂದೆ ಇಟ್ಟಣಿಸಿ ಬಿದ್ದುವಾಗ ರಥಿಕವ್ರಾತ ಮುಂದಿಟ್ಟನು ಇಸುಗೆಯಿಂದೆ(ಅಂಬಿನ ಹೊಡೆತ)=[ ಅವನ್ನು ತಡೆದು, ಅಂಬಿನ ಹೊಡೆತದಿಂದ ಕಡಿದು ರಾಶಿಯಾಗಿ ಕೆಡಗಿ ಮುಂದಿಟ್ಟನು, ಆಗ ಮುಂದೆ ಒಟ್ಟಾಗಿ ಬಿದ್ದುವು ರಥಿಕರಗುಂಪು.]
  • ತಾತ್ಪರ್ಯ:ಒಟ್ಟಾಗಿ ಆನೆಗಳ ಗುಂಪು ನುಗ್ಗಿಬರಲು ಬಾಣದ ಬಲದಿಂದ ಅವನ್ನು ಬಹಳ ದಣಿಸಿದನು, ಕಡವಿದನು, ಭಟರನ್ನು ಪರಾಕ್ರಮದಿಂದ ಕೊಂದನು. ಸಿಟ್ಟಿನಿಂದ ಬಳಿಕ ಯುದ್ಧದಲ್ಲಿ ಬಂದ ಕುದುರೆಗಳನ್ನ ಒಂದನ್ನೂ ಉಳಿಸದೆ ಕೊಂದನು. ನಾನು ನನ್ನ ತಿಳುವಳಿಕೆಯಲ್ಲಿ ಕಂಡಿಲ್ಲವೆಂಬ ರೀತಿಯಾಗಿರಲು, ಅವನ್ನು ತಡೆದು, ಅಂಬಿನ ಹೊಡೆತದಿಂದ ಕಡಿದು ರಾಶಿಯಾಗಿ ಕೆಡಗಿ ಮುಂದಿಟ್ಟನು, ಆಗ ಮುಂದೆ ರಥಿಕರಗುಂಪು ಒಟ್ಟಾಗಿ ಬಿದ್ದುವು .
  • (ಪದ್ಯ- ೪೩)

ಪದ್ಯ :-:೪೪:

ಸಂಪಾದಿಸಿ

ಕೆಡೆದೊಡಲ ಸೀಳಿಂದೆ ಕಡಿವಡೆದ ತೋಳಿಂದೆ | ತೊಡೆಮಡದ ತುಂಡಿಂದೆ ನೆಣವಸೆಯ ಜೊಂಡಿಂದೆ | ಬಿಡುಮಿದುಳ ತುಂಡದಿಂ ರುಂಡದಿಂ ಮುಂಡದಿಂ ಖಂಡದಿಂದೆ
ಅಡಗುಗಳ ತಿರುಳಿಂದೆ ನಿಡುನರದ ಕರುಳಿಂದೆ | ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ | ದಿಡಿದಿರ್ದುದಾ ರಣದಲೋರಣದ ಮಾರಣದ ಕಾರಣದ ಪೂರಣದೊಳು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೆಡೆದ ಒಡಲ ಸೀಳಿಂದೆ ಕಡಿವಡೆದ ತೋಳಿಂದೆ ತೊಡೆಮಡದ ತುಂಡಿಂದೆ ನೆಣವಸೆಯ ಜೊಂಡಿಂದೆ ಬಿಡುಮಿದುಳ ತುಂಡದಿಂ ರುಂಡದಿಂ ಮುಂಡದಿಂ ಖಂಡದಿಂದೆ=[ಬಿದ್ದ ಒಡಲ ಸೀಳಿನಿಂದ ಕಡಿದು ಬಿದ್ದ ತೋಳಗಳಿಂದ ತೊಡೆಯಸಾಲು ತುಂಡಿನಿಂದ ನೆಣದ ಪಸೆಯ ಜೊಂಡಿಂದ, ಹೊರಹೊರಟ ಮಿದುಳ ತುಂಡುಗಳಿಂದ, ರುಂಡಗಳಿಂದ ಮುಂಡಗಳಿಂದ ಖಂಡಗಳಿಂದ ]; ಅಡಗುಗಳ ತಿರುಳಿಂದೆ ನಿಡುನರದ ಕರುಳಿಂದೆ ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ ದಿಡಿದಿರ್ದುದಾ ರೆಣದಲೋರಣದ ಮಾರಣದ ಕಾರಣದ ಪೂರಣದೊಳು=[ಹೊಟ್ಟೆಗಳ ತಿರುಳಿಂದ, ಉದ್ದನರದ ಕರುಳಿಂದ, ಹೊಂಡಗಳಲ್ಲಿರುವ ನೆತ್ತರಿಂದ, ಒಂದೇಸಮನೆ ಸತ್ತವರಿಂದ ರಣರಂಗದಲ್ಲಿ ಓರಣವಾಗಿ ಕೊಂದಿರುವ ಕಾರಣದಂದ ಪೂರ್ತಿಯಾಗಿ ತುಂಬಿತ್ತು.].
  • ತಾತ್ಪರ್ಯ: ಆ ರಣರಂಗದಲ್ಲಿ, ಬಿದ್ದ ಒಡಲ ಸೀಳಿನಿಂದ ಕಡಿದು ಬಿದ್ದ ತೋಳಗಳಿಂದ ತೊಡೆಯಸಾಲು ತುಂಡಿನಿಂದ ನೆಣದ ಪಸೆಯ ಜೊಂಡಿಂದ, ಹೊರಹೊರಟ ಮಿದುಳ ತುಂಡುಗಳಿಂದ, ರುಂಡಗಳಿಂದ ಮುಂಡಗಳಿಂದ ಖಂಡಗಳಿಂದ ಹೊಟ್ಟೆಗಳ ತಿರುಳಿಂದ, ಉದ್ದನರದ ಕರುಳಿಂದ, ಹೊಂಡಗಳಲ್ಲಿರುವ ನೆತ್ತರಿಂದ, ಒಂದೇಸಮನೆ ಸತ್ತವರಿಂದ ರಣರಂಗದಲ್ಲಿ ಓರಣವಾಗಿ ಕೊಂದಿರುವ ಕಾರಣದಂದ ಪೂರ್ತಿಯಾಗಿ ತುಂಬಿತ್ತು.
  • (ಪದ್ಯ- ೪೪)III

ಪದ್ಯ :-:೪೪:

ಸಂಪಾದಿಸಿ

ಕಾಕ ಬಕ ಗೃಧ್ರ ಗೋಮಾಯ ಸಂತತಿಗಳಿಂ | ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ | ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು ||
ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ | ದೋಕರಿಸಿದನೊ ಕಾಲನೆಂಬಿನಂ ಕಣ್ಗೆಸೆದು | ದಾಕಳಂ ರೌಕುಳದ ಮಾಂಸ ಕರ್ದಮ ರುಧಿರ ನೆಣವಸೆ ಮಿದುಳ್ಗಳಿಂದೆ ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಕ ಬಕ ಗೃಧ್ರ ಗೋಮಾಯು(ನರಿ) ಸಂತತಿಗಳಿಂ ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ ಭೀಕರದೊಳು ಅಂಜಿಸಿದುವು ಆರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು=[ಕಾಗೆ ಬಕ ಗೃಧ್ರ/ಹದ್ದು ಗೋಮಾಯು(ನರಿ) ಈ ಸಂತತಿಗಳಿಂದ, ಡಾಕಿನಿ ಪಿಶಾಚ ವೇತಾಳ ಭೂತಂಗಳಿಂದ, ಕೂಗಿ ರಿಂಗಣಗುಣಿಯುವ ಶೂರರತಲೆಗಳು ಭೀಕರವಾಗಿದ್ದು ಅಂಜಿಸಿದುವು]; ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ ದೋಕರಿಸಿದನೊ ಕಾಲನೆಂಬಿನಂ ಕಣ್ಗೆಸೆದುದಾಕಳಂ ರೌಕುಳ (ಚೆಲ್ಲಾಪಿಲ್ಲಿ)ದ ಮಾಂಸ ಕರ್ದಮ (ಕೆಸರು ಹೊಂಡ) ರುಧಿರ ನೆಣವಸೆ ಮಿದುಳ್ಗಳಿಂದೆ=[ಲೋಕದ ಎಲ್ಲಾ ಪ್ರಾಣಿಗಳನ್ನೂ ಉಂಡು ಅಜೀರ್ಣದಿಂದ ಓಕರಿಸಿದನೊ ಕಾಲನು ಎಂಬಂತೆ ಆ ರಣರಂಗ ಕಾಣಿಸಿತು; ಚೆಲ್ಲಾಪಿಲ್ಲಿಯಾದ ಮಾಂಸದ ಕೆಸರು ಹೊಂಡ, ರುಧಿರ/ ರಕ್ತದ ನೆಣವ ನೀರು ಮಿದುಳುಗಳಿಂದ ತುಂಬಿತ್ತು.].
  • ತಾತ್ಪರ್ಯ:ಕಾಗೆ ಬಕ ಗೃಧ್ರ/ಹದ್ದು ಗೋಮಾಯು(ನರಿ) ಈ ಸಂತತಿಗಳಿಂದ, ಡಾಕಿನಿ ಪಿಶಾಚ ವೇತಾಳ ಭೂತಂಗಳಿಂದ, ಕೂಗಿ ರಿಂಗಣಗುಣಿಯುವ ಶೂರರತಲೆಗಳು ಭೀಕರವಾಗಿದ್ದು ಅಂಜಿಸಿದುವು; ಲೋಕದ ಎಲ್ಲಾ ಪ್ರಾಣಿಗಳನ್ನೂ ಉಂಡು ಅಜೀರ್ಣದಿಂದ ಓಕರಿಸಿದನೊ ಕಾಲನು ಎಂಬಂತೆ ಆ ರಣರಂಗ ಕಾಣಿಸಿತು; ಹೇಗೆಂದರೆ, ಚೆಲ್ಲಾಪಿಲ್ಲಿಯಾದ ಮಾಂಸದ ಕೆಸರು ಹೊಂಡ, ರುಧಿರ/ ರಕ್ತದ ನೆಣದ ನೀರು ಮಿದುಳುಗಳಿಂದ ತುಂಬಿತ್ತು.
  • (ಪದ್ಯ- ೪೫)

ಪದ್ಯ :-:೪೬:

ಸಂಪಾದಿಸಿ

ನೋಡಿದಂ ಸಾತ್ಯಕಿ ಸುಧನ್ವನಾಟೋಪಮಂ | ಮಾಡಿದಂ ಬದ್ದಭ್ರುಕುಟಿಯಿಂದೆ ಕೋಪಮಂ | ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು ||
ಆಡಿದಂ ನಿಜನಾಮಧೇಯ ಪ್ರತಾಪಮಂ | ವೂಡಿದಂ ತೆಗೆದಂಬನೆಚ್ಚಂ ಯಮೋಪಮಂ | ತೋಡಿದಂ ಮೂವತ್ತು ಬಾಣದಿಂ ತಾಪಮಂಕುರಿಸುವಂತವನೊಡಲೊಳು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನೋಡಿದಂ ಸಾತ್ಯಕಿ ಸುಧನ್ವನ ಆಟೋಪಮಂ ಮಾಡಿದಂ ಬದ್ದಭ್ರುಕುಟಿಯಿಂದೆ ಕೋಪಮಂ=[ನೋಡಿದನು ಸಾತ್ಯಕಿ ಸುಧನ್ವನ ಪರಾಕ್ರಮವನ್ನು, ಹುಬ್ಬು ಗಂಟಿಕ್ಕಿ ಕೋಪವನ್ನು ಮಾಡಿದನು,]; ತೀಡಿದಂ ತಿರುವನು ಏರಿಸಿ ಮಿಡಿದು ಚಾಪಮಂ ತಾಗಿದನು ಅವನ ರಥವನು ಆಡಿದಂ ನಿಜನಾಮಧೇಯ ಪ್ರತಾಪಮಂ=[ಹೆದೆಯನ್ನು ಕೈಯಿಂದ ತೀಡಿ ಏರಿಸಿ ಬಿಲ್ಲನ್ನು ಮಿಡಿದು ಅವನ ರಥವನ್ನು ಎದುರಿಸಿದನು; ತನ್ನ ಹೆಸರು ಪ್ರತಾಪವನ್ನು ಹೇಳಿದನು]; ವೂಡಿದಂ ತೆಗೆದಂಬನು ಎಚ್ಚಂ(ಹೊಡೆದನು) ಯಮ ಉಪಮಂ ತೋಡಿದಂ ಮೂವತ್ತು ಬಾಣದಿಂ ತಾಪಂ ಅಂಕುರಿಸುವಂತೆ ಅವನ ಒಡಲೊಳು=[ ತೆಗೆದು ಅಂಬನ್ನು ಹೂಡಿದನು; ಮೂವತ್ತು ಬಾಣದಿದ ನೋವಾಗುವಂತೆ ಅವನ ದೇಹದಲ್ಲಿ ಯಮನಂತೆ ತೂತು ಮಾಡುವಂತೆ ಹೊಡೆದನು].
  • ತಾತ್ಪರ್ಯ: ಸಾತ್ಯಕಿ ಸುಧನ್ವನ ಪರಾಕ್ರಮವನ್ನು ನೋಡಿದನು, ಹುಬ್ಬು ಗಂಟಿಕ್ಕಿ ಕೋಪವನ್ನು ಮಾಡಿದನು, ಹೆದೆಯನ್ನು ಕೈಯಿಂದ ತೀಡಿ ಏರಿಸಿ ಬಿಲ್ಲನ್ನು ಮಿಡಿದು ಅವನ ರಥವನ್ನು ಎದುರಿಸಿದನು; ತನ್ನ ಹೆಸರು ಪ್ರತಾಪವನ್ನು ಹೇಳಿದನು; ತೆಗೆದು ಅಂಬನ್ನು ಹೂಡಿದನು; ಮೂವತ್ತು ಬಾಣದಿದ ನೋವಾಗುವಂತೆ ಅವನ ದೇಹದಲ್ಲಿ ಯಮನಂತೆ ತೂತು ಮಾಡುವಂತೆ ಹೊಡೆದನು].
  • (ಪದ್ಯ- ೪೬)

ಪದ್ಯ :-:೪೭:

ಸಂಪಾದಿಸಿ

ಗಾಯವಡೆದೆಕ್ಕಲನ ತೆರದಿಂ ಕೆರಳ್ದು ಶೈ | ನೇಯನಂ ಮಗುಳೆ ಮೂವತ್ತೈದು ಕೋಲ್ಗಳಿಂ | ನೋಯಿಸಿದನಾ ಸುಧನ್ವಂ ಬಳಿಕ ಸಾತ್ಯಕಿ ಸಹಸ್ರ ಸಂಖ್ಯಾಕಮಾದ |
ಸಾಯಕದೊಳಾತನ ವರೂಥ ಹಯ ಸಾರಥಿ ಯು | ಗಾಯತ ಧ್ವಜ ಛತ್ರ ಚಮರಮಂ ತರಿದೊಡವ | ನೀ ಯಾದವನ ತೇರನುರೆ ಮುರಿಯಲಿರ್ವರುಂ ವಿರಥರಾದರ್ ಧುರದೊಳು||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಗಾಯವಡೆದು ಎಕ್ಕಲ(ಕಾಡುಹಂದಿ)ನ ತೆರದಿಂ ಕೆರಳ್ದು ಶೈನೇಯನಂ ಮಗುಳೆ ಮೂವತ್ತೈ ಕೋಲ್ಗಳಿಂ ನೋಯಿಸಿದನಾ ಸುಧನ್ವಂ=[ಸುಧನ್ವನು ಗಾಯಗೊಂಡು, ಕಾಡುಹಂದಿಯ ತರದಲ್ಲಿ ಕೆರಳಿ ಶಿನಿಯ ಮಗ ಶೈನೇಯನಾದ ಸಾತ್ಯಕಿಯನ್ನು, ಸುಧನ್ವನು ತಿರುಗಿ ಮೂವತ್ತೈದು ಬಾಣಗಳಿಂದ ಹೊಡೆದು ನೋಯಿಸಿದನು ]; ಬಳಿಕ ಸಾತ್ಯಕಿ ಸಹಸ್ರ ಸಂಖ್ಯಾಕಮಾದ ಸಾಯಕದೊಳು ಆತನ ವರೂಥ ಹಯ ಸಾರಥಿ ಯುಗಾಯತ ಧ್ವಜ ಛತ್ರ ಚಮರಮಂ ತರಿದೊಡೆ=[ಬಳಿಕ ಸಾತ್ಯಕಿ ಸಹಸ್ರ ಸಂಖ್ಯೆಯ ಬಾಣಗಳಿಂದ ಆತನ ರಥ ಕುದುರೆ ಸಾರಥಿ ಯುಗಾಯತ/ ನೊಗ/ಅಚ್ಚು, ಧ್ವಜ, ಛತ್ರ, ಚಾಮರಗಳನ್ನು ಕಡಿದಾಗ]; ಅವನು ಈ ಯಾದವನ ತೇರನುರೆ ಮುರಿಯಲಿರ್ವರುಂ ವಿರಥರಾದರ್ ಧುರದೊಳು=[ಅವನು ಈ ಯಾದವನ ರಥವನ್ನೂ ಕೂಡ ಪುಡಿಮಾಡಲು, ಇಬ್ಬರೂ, ಯುದ್ಧದಲ್ಲಿ ರಥವಲ್ಲದವರಾದರು.]
  • ತಾತ್ಪರ್ಯ: ಸುಧನ್ವನು ಗಾಯಗೊಂಡು, ಕಾಡುಹಂದಿಯ ತರದಲ್ಲಿ ಕೆರಳಿ ಶಿನಿಯ ಮಗ ಶೈನೇಯನಾದ ಸಾತ್ಯಕಿಯನ್ನು, ಸುಧನ್ವನು ತಿರುಗಿ ಮೂವತ್ತೈದು ಬಾಣಗಳಿಂದ ಹೊಡೆದು ನೋಯಿಸಿದನು; ಬಳಿಕ ಸಾತ್ಯಕಿ ಸಹಸ್ರ ಸಂಖ್ಯೆಯ ಬಾಣಗಳಿಂದ ಆತನ ರಥ ಕುದುರೆ ಸಾರಥಿ ಯುಗಾಯತ/ ನೊಗ/ಅಚ್ಚು, ಧ್ವಜ, ಛತ್ರ, ಚಾಮರಗಳನ್ನು ಕಡಿದಾಗ, ಅವನು ಈ ಯಾದವನ ರಥವನ್ನೂ ಕೂಡ ಪುಡಿಮಾಡಲು, ಇಬ್ಬರೂ, ಯುದ್ಧದಲ್ಲಿ ರಥವಲ್ಲದವರಾದರು.
  • (ಪದ್ಯ- ೪೭)

ಪದ್ಯ :-:೪೮:

ಸಂಪಾದಿಸಿ

ನಿಂದು ಕಾದಿದರೊಮ್ಮೆ ಕೈದುಕೈದುಗಳೊಳೈ | ತಂದುಕಾದಿದರೊಮ್ಮೆ ಮತ್ತೆ ಪೆÇಸತೇರ್ಗಳಿಂ | ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು ||
ಕೊಂದು ಕಾದಿದರೊಮ್ಮೆ ಸರಶರದ ಹತಿಗಳಿಂ | ನೊಂದು ಕಾದಿದರೊಮ್ಮೆ ಚಳಿಚಳಿಕೆಯಿಂದ ಸಲೆ | ಸಂದು ಕಾದಿದರೊಮ್ಮೆ ಸಾತ್ಯಕಿಸುಧನ್ವರೋರೋರ್ವರ್ಗೆ ಸರಿಮಿಗಿಲೆನೆ ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿಂದು ಕಾದಿದರೊಮ್ಮೆ ಕೈದುಕೈದುಗಳೊಳು ಐತಂದು ಕಾದಿದರೊಮ್ಮೆ ಮತ್ತೆ ಪೋಸತೇರ್ಗಳಿಂ ಬಂದು ಕಾದಿದರೊಮ್ಮೆ=[ಒಮ್ಮೆ ನಿಂತು ಹೋರಾಡಿದರು, ಆಯುಧಗಳನ್ನು ತಂದು ಹೋರಾಡಿದರು ಮತ್ತೆ ಹೊಸ ರಥಗಳಿಂದ ಬಂದು ಒಮ್ಮೆ ಹೋರಾಡಿದರು]; ಕೂಡೆ ತಮತಮಗೆ ಒದಗಿದ ಎಡಬಲದ ಶತ್ರುಸೈನ್ಯವನ್ನು ಕೊಂದು ಕಾದಿದರೊಮ್ಮೆ ಸರಶರದ ಹತಿಗಳಿಂ ನೊಂದು ಕಾದಿದರೊಮ್ಮೆ=[ಕೂಡೆ ತಮತಗೆ ಬಂದ ಎಡಬಲದ ಶತ್ರುಸೈನ್ಯವನ್ನು ಕೊಂದು ಒಮ್ಮೆ ಹೋರಾಡಿದರು; ಸರಳಿನಶರದ ಆಯುಧಗಳಿಂದ ನೊಂದು ಒಮ್ಮೆ ಹೋರಾಡಿದರು];ಚಳಿಚಳಿಕೆಯಿಂದ ಸಲೆ ಸಂದು ಕಾದಿದರೊಮ್ಮೆ ಸಾತ್ಯಕಿ ಸುಧನ್ವರು ಓರೋರ್ವರ್ಗೆ ಸರಿಮಿಗಿಲೆನೆ=ಪರಸ್ಪರ ಹಿಡಿದು ಒಮ್ಮೆಹೋರಾಡಿದರು ಸಾತ್ಯಕಿ ಸುಧನ್ವರು ಒಬ್ಬರಿಗೊಬ್ಬರ ಸರಿಮಿಗಿಲೆನ್ನುವಂತೆ ಹೋರಾಡಿದರು].
  • ತಾತ್ಪರ್ಯ:ಒಮ್ಮೆ ನಿಂತು ಹೋರಾಡಿದರು, ಆಯುಧಗಳನ್ನು ತಂದು ಹೋರಾಡಿದರು ಮತ್ತೆ ಹೊಸ ರಥಗಳಿಂದ ಬಂದು ಒಮ್ಮೆ ಹೋರಾಡಿದರು; ಕೂಡಲು ತಮತಗೆ ಬಂದ ಎಡಬಲದ ಶತ್ರುಸೈನ್ಯವನ್ನು ಕೊಂದು ಒಮ್ಮೆ ಹೋರಾಡಿದರು; ಸರಳಿನಶರದ ಆಯುಧಗಳಿಂದ ನೊಂದು ಒಮ್ಮೆ ಹೋರಾಡಿದರು; ಪರಸ್ಪರ ಹಿಡಿದು ಒಮ್ಮೆಹೋರಾಡಿದರು ಸಾತ್ಯಕಿ ಸುಧನ್ವರು ಒಬ್ಬರಿಗೊಬ್ಬರ ಸರಿಮಿಗಿಲೆನ್ನುವಂತೆ ಹೋರಾಡಿದರು.
  • (ಪದ್ಯ- ೪೮)

ಪದ್ಯ :-:೪೯:

ಸಂಪಾದಿಸಿ

ಬವರಮಿರ್ವರ್ಗೆ ಸರಿಯಾಗೆ ಕಡುಗೋಪದಿಂ | ದವಗಡಿಸಿದಂ ಸುಧನ್ವಂ ಬಳಿಕ ಸಾತ್ಯಕಿಯ | ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು ||
ಸವರಿ ಸಾರಥಿ ಹಯವರೂಥ ಯುಗಚಕ್ರಮಂ | ಕವಲಂಬುಗಳೊಳೆಚ್ಚು ಕತ್ತಿರಿಸಿ ಕರದ ಚಾ | ಪವನೈದು ಕಡಿಯಾಗಿ ಮಾಡಿ ಪೇರುರಕೆ ಮೊನೆಗಣೆಗಳಂ ಮೋಹಿಸಿದನು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬವರಂ ಇರ್ವರ್ಗೆ ಸರಿಯಾಗೆ ಕಡುಗೋಪದಿಂದ ಅವಗಡಿಸಿದಂ ಸುಧನ್ವಂ=[ಯುದ್ಧವು ಇಬ್ಬರಿಗೂ ಸರಿಯಾಗಲು ಬಹಳಕೋಪದಿಂದ ಸುಧನ್ವನು ಅವಸರಿಸಿ ನುಗ್ಗಿದನು ]; ಬಳಿಕ ಸಾತ್ಯಕಿಯ ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು ಸವರಿ=[ಬಳಿಕ ಸಾತ್ಯಕಿಯ ನಂದಿಕೋಲು, ಕವಚ, ಬಾಣ, ಬತ್ತಳಿಕೆ, ಸಿಂಧ, ಸೀಗುರಿ, ಛತ್ರಚಾಮರಗಳನ್ನು ನಾಶಮಾಡಿ]; ಸಾರಥಿ ಹಯವರೂಥ ಯುಗಚಕ್ರಮಂ ಕವಲಂಬುಗಳೊಳು ಎಚ್ಚು ಕತ್ತಿರಿಸಿ ಕರದ ಚಾಪವನು ಐದು ಕಡಿಯಾಗಿ ಮಾಡಿ ಪೇರುರಕೆ ಮೊನೆಗಣೆಗಳಂ ಮೋಹಿಸಿದನು=[ಸಾರಥಿ ಕುದುರೆ ರಥ, ಚಕ್ರಗಳನ್ನು ಕವಲು ಬಾಣಗಳಿಂದ ಹೊಡೆದು, ಕತ್ತಿರಿಸಿ ಕೈಯಲ್ಲಿದ್ದ ಬಿಲ್ಲನ್ನು ಐದು ತುಂಡಾಗಿ ಮಾಡಿ ಎದೆಗೆ ಚೂಪುಬಾಣಗಳನ್ನು ಹೊಡೆದನು.]
  • ತಾತ್ಪರ್ಯ: ಯುದ್ಧವು ಇಬ್ಬರಿಗೂ ಸರಿಯಾಗಲು ಬಹಳಕೋಪದಿಂದ ಸುಧನ್ವನು ಅವಸರಿಸಿ ನುಗ್ಗಿದನು; ಬಳಿಕ ಸಾತ್ಯಕಿಯ ನಂದಿಕೋಲು, ಕವಚ, ಬಾಣ, ಬತ್ತಳಿಕೆ, ಸಿಂಧ, ಸೀಗುರಿ, ಛತ್ರಚಾಮರಗಳನ್ನು ನಾಶಮಾಡಿ, ಸಾರಥಿ ಕುದುರೆ ರಥ, ಚಕ್ರಗಳನ್ನು ಕವಲು ಬಾಣಗಳಿಂದ ಹೊಡೆದು, ಕತ್ತಿರಿಸಿ ಕೈಯಲ್ಲಿದ್ದ ಬಿಲ್ಲನ್ನು ಐದು ತುಂಡಾಗಿ ಮಾಡಿ ಎದೆಗೆ ಚೂಪುಬಾಣಗಳನ್ನು ಹೊಡೆದನು.
  • (ಪದ್ಯ- ೪೯)

ಪದ್ಯ :-:೫೦:

ಸಂಪಾದಿಸಿ

ಸತ್ಯಕಸುತಂಗೆ ಪರಿಭವಮಾಗೆ ಭುಜಬಲದೊ | ಳತ್ಯಧಿಕಯೌವನಾಶ್ವಾಸಿತಧ್ವಜಗದಾ | ದಿತ್ಯಭವಸೂನು ಶಠ ನಿಶಠ ಕೃತವರ್ಮ ಸಾಂಬಾನುಸಾಲ್ವಪ್ರಮುಖರು ||
ಪ್ರತ್ಯೇಕವೀರರಿವರೆಲ್ಲರುಂ ಪಡೆಸಹಿತ | ಸತ್ಯವಿಕ್ರಮ ಸುಧನ್ವನ ಸಮ್ಮುಖಕೆ ನಡೆವ | ಕೃತ್ಯಮಂ ಕಂಡರ್ಜನಂ ಕೋಪದಿಂದ ಕಾಳಗಕೆ ತಾನನುವಾದನು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸತ್ಯಕಸುತಂಗೆ ಪರಿಭವಮ ಅಗೆ ಭುಜಬಲದೊಳೂ ಆತ್ಯಧಿಕ ಯೌವನಾಶ್ವ ಆಸಿತಧ್ವಜ ಗದ ಅದಿತ್ಯಭವಸೂನು ಶಠ ನಿಶಠ ಕೃತವರ್ಮ ಸಾಂಬ ಆನುಸಾಲ್ವ ಪ್ರಮುಖರು=[ಸತ್ಯಕನ ಮಗ- ಸಾತ್ಯಕಿಗೆ ಸೋಲು ಅಗಲು, ಭುಜಬಲದಲ್ಲಿ ಆತ್ಯಧಿಕರಾದ ಯೌವನಾಶ್ವ, ಆಸಿತಧ್ವಜ/ನೀಲಧ್ವಜ, ಗದ, ವೃಷಕೇತು, ಶಠ, ನಿಶಠ, ಕೃತವರ್ಮ, ಸಾಂಬ, ಆನುಸಾಲ್ವ, ಪ್ರಮುಖರು ]; ವ್ರತ್ಯೇಕ ವೀರರು ಇವರೆಲ್ಲರುಂ ಪಡೆಸಹಿತ ಸತ್ಯವಿಕ್ರಮ ಸುಧನ್ವನ ಸಮ್ಮುಖಕೆ ನಡೆವ ಕೃತ್ಯಮಂ ಕಂಡು ಅರ್ಜನಂ ಕೋಪದಿಂದ ಕಾಳಗಕೆ ತಾನು ಅನುವಾದನು[ಪ್ರತ್ಯೇಕ ವೀರರಾದ ಇವರೆಲ್ಲರೂ ಸೈನ್ಯಸಹಿತ ಸತ್ಯವಿಕ್ರಮ/ ಜಯಶಾಲಿ ಸುಧನ್ವನ ಎದುರಿಗೆ ಹೋಗುತ್ತಿರುವ ಕಾರ್ಯವನ್ನು ಕಂಡು, ಅರ್ಜನನು ಕೋಪದಿಂದ ಯುದ್ಧಕ್ಕೆ ತಾನೇ ಸಿದ್ಧವಾದನು ].
  • ತಾತ್ಪರ್ಯ: ಸತ್ಯಕನ ಮಗ- ಸಾತ್ಯಕಿಗೆ ಸೋಲು ಅಗಲು, ಭುಜಬಲದಲ್ಲಿ ಆತ್ಯಧಿಕರಾದ ಯೌವನಾಶ್ವ, ಆಸಿತಧ್ವಜ/ನೀಲಧ್ವಜ, ಗದ, ವೃಷಕೇತು, ಶಠ, ನಿಶಠ, ಕೃತವರ್ಮ, ಸಾಂಬ, ಆನುಸಾಲ್ವ, ಪ್ರತ್ಯೇಕ ವೀರರಾದ ಇವರೆಲ್ಲರೂ ಸೈನ್ಯಸಹಿತ ಸತ್ಯವಿಕ್ರಮ/ ಜಯಶಾಲಿ ಸುಧನ್ವನ ಎದುರಿಗೆ ಹೋಗುತ್ತಿರುವ ಕಾರ್ಯವನ್ನು ಕಂಡು, ಅರ್ಜನನು ಕೋಪದಿಂದ ಯುದ್ಧಕ್ಕೆ ತಾನೇ ಸಿದ್ಧವಾದನು.
  • (ಪದ್ಯ- ೫೦)

ಪದ್ಯ :-:೫೧:

ಸಂಪಾದಿಸಿ

ಮುಂಜೆರಗನಳವಡಿಸಿ ವೀರಪಳಿಯಂ ಬಿಗಿದು | ರಂಜಿಪ ತನುತ್ರ ಸೀಸಕವನಾಂತಮರಗಣ | ಕಂಜಳಿಯನೆತ್ತಿ ಪಳವಿಗೆಯ ಹನುಮಂಗೆರಗಿ ಬಲವಂದು ಮಣಿರಥವನು ||
ಮಂಜುಳಹಯಂಗಳಂ ಬೋಳೈಸಿ ಮಣಿದು ತೇ | ರಂ ಜಯನಿನಾದದಿಂದೇರಿದಂ ಸಮರಕೆ ಧ | ನಂಜಯಂ ಧ್ಯಾನಿಸುತ ಮನದೊಳಗೆ ದೇವಪುರನಿಲಯ ಲಕ್ಷ್ಮೀಪತಿಯನು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುಂಜೆರಗನು ಅಳವಡಿಸಿ ವೀರಪಳಿಯಂ ಬಿಗಿದು ರಂಜಿಪ ತನುತ್ರ ಸೀಸಕವನಾಂತು ಅಮರಗಣಕೆ ಅಂಜಳಿಯನು ಎತ್ತಿ=[ಎದುರಿನ ಹೊದ್ದ ಸೆರಗನ್ನು ಸರಿಯಾಗಿ ಹಾಕಿಕೊಂಡು, ವೀರನೆಂಬ ಪಟ್ಟಿಯನ್ನು ಬಿಗಿದು, ಹೊಳೆಯುವ ಸೀಸಕವ ಕವಚವನ್ನು ಧರಿಸಿ, ದೇವತೆಗಳಿಗೆ ಆರತಿಯನ್ನು ಎತ್ತಿ ]; ಪಳವಿಗೆ(ಧ್ವಜ)ಯ ಹನುಮಂಗೆ ಎರಗಿ ಬಲವಂದು ಮಣಿರಥವನು ಮಂಜುಳಹಯಂಗಳಂ ಬೋಳೈಸಿ ಮಣಿದು=[ಧ್ವಜದ ಹನುಮನಿಗೆ ನಮಸ್ಕರಿಸಿ, ಬಲವಂದು ಮಣಿರಥವನ್ನು ಸುತ್ತುಹಾಕಿ(ಪ್ರದಕ್ಷಿಣೆ ಮಾಡಿ) ಸುಂದರ ಕುದುರೆಗಳನ್ನು ಉಪಚರಿಸಿ,ಅವಕ್ಕೆ ನಮಸ್ಕರಿಸಿ,]; ತೇರಂ ಜಯನಿನಾದದಿಂದ ಏರಿದಂ ಸಮರಕೆ ಧನಂಜಯಂ ಧ್ಯಾನಿಸುತ ಮನದೊಳಗೆ ದೇವಪುರನಿಲಯ ಲಕ್ಷ್ಮೀಪತಿಯನು=[ರಥವನ್ನು ಜಯಕಾರ ಮಾಡುತ್ತಿರಲು ಏರಿದನು; ಹಾಗೆ ಯುದ್ಧಕ್ಕಾಗಿ ರಥ ಏರುವಾಗ ಧನಂಜಯನು ಮನಸ್ಸಿನೊಳಗೆ ದೇವಪುರನಿಲಯ ಲಕ್ಷ್ಮೀಪತಿಯನ್ನು ಧ್ಯಾನಿಸುತ್ತಿದ್ದನು].
  • ತಾತ್ಪರ್ಯ:ಎದೆಯ ಮೇಲಿನ ಎದುರಿನ ಹೊದ್ದ ಸೆರಗನ್ನು ಸರಿಯಾಗಿ ಹಾಕಿಕೊಂಡು, ವೀರನೆಂಬ ಪಟ್ಟಿಯನ್ನು ಬಿಗಿದು, ಹೊಳೆಯುವ ಸೀಸಕವ ಕವಚವನ್ನು ಧರಿಸಿ, ದೇವತೆಗಳಿಗೆ ಆರತಿಯನ್ನು ಎತ್ತಿ, ಧ್ವಜದ ಹನುಮನಿಗೆ ನಮಸ್ಕರಿಸಿ,ಮಣಿರಥವನ್ನು ಸುತ್ತುಹಾಕಿ(ಪ್ರದಕ್ಷಿಣೆ ಮಾಡಿ), ಸುಂದರ ಕುದುರೆಗಳನ್ನು ಉಪಚರಿಸಿ, ಅವಕ್ಕೆ ನಮಸ್ಕರಿಸಿ,; ರಥವನ್ನು ಜಯಕಾರ ಮಾಡುತ್ತಿರಲು ಏರಿದನು; ಹಾಗೆ ಯುದ್ಧಕ್ಕಾಗಿ ರಥ ಏರುವಾಗ ಧನಂಜಯನು ಮನಸ್ಸಿನೊಳಗೆ ದೇವಪುರನಿಲಯ ಲಕ್ಷ್ಮೀಪತಿಯನ್ನು ಧ್ಯಾನಿಸುತ್ತಿದ್ದನು].
  • (ಪದ್ಯ- ೫೧)೪.
  • []
  • []
  • ಹನ್ನೆರಡನೆಯ ಸಂಧಿಗೆ ಪದ್ಯ:೬೧೭
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.