• ಮುಪ್ಪಿನ ಷಡಕ್ಷರಿ  : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ

ತಿರುಕನ ಕನಸು ಸಂಪಾದಿಸಿ

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ |
ಪುರದ ರಾಜ ಸತ್ತರವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು || ೧ ||

ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ |
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು || ೨ ||

ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ |
ಭಟ್ಟನಿಗಳ ಕೂಡಿ ನಲ್ಲ
ನಿಷ್ಟ ಸುಖದೊಳಿರಲವನ್ಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ || ೩ ||

ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ |
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ || ೪ ||

ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ |
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ || ೫ ||

ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು |
ಅನಿತರೊಳಗೆ ಮುನಿದ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು ||೬ ||

ಮೆರೆಯುತಿದ್ದ ರಾಜ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಬೇಡುತಿದ್ದ ಹಿಂದಿನಂತೆಯೇ ||೭||[೧]

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ

ಉಲ್ಲೇಖ ಸಂಪಾದಿಸಿ

  1. "ಸುಬೋಧಸಾರ" ಕೃತಿ; ಕವಿ-ಮುಪ್ಪಿನ ಷಡಕ್ಷರಿ