ಈ ಪುಟವನ್ನು ಪ್ರಕಟಿಸಲಾಗಿದೆ

೧೦೬ / ಕುಕ್ಕಿಲ ಸಂಪುಟ

ಪರಿಚಯವಿತ್ತೆಂಬುದು ಅವನ ಚಂದ್ರಪ್ರಭ ಪುರಾಣವನ್ನೋದಿದರೆ ತಿಳಿದುಬಾರದಿರದು. ಅವನು ಸಂಗೀತದಲ್ಲಿ, ಶ್ರೀ ಕಾರಂತರು ಹೇಳುವಂತೆ, ಬರಿಯ 'ಪುಸ್ತಕ ಪಂಡಿತ'ನಲ್ಲ ಗಾನಕ್ಕೆ ಮನಸೋಲುವವನೂ, ಮೆಚ್ಚಿ ವಿಮರ್ಶಿಸಬಲ್ಲವನೂ ಆಗಿದ್ದನು; ಶಾಸ್ತ್ರೀಯ ವಾಗಿ ಸಂಗೀತವನ್ನು ಅಭ್ಯಾಸಮಾಡದೆ ಹಾಡುವವರಲ್ಲಿ ಅವನಿಗೆ ತಿರಸ್ಕಾರವಿಲ್ಲದುದು ಮಾತ್ರವಲ್ಲ, ಸಹಾನುಭೂತಿಯೇ ಇತ್ತು ಎಂಬ ವಿಷಯಗಳನ್ನು ಅವನ ಮಾತುಗಳಲ್ಲಿ ಕಾಣಬಹುದು. ಅದಕ್ಕಾಗಿ ಇಲ್ಲಿ ಅವನ ಚಂದ್ರಪ್ರಭ ಪುರಾಣದ ೧೫ನೆಯ ಆಶ್ವಾಸದಿಂದ ಕೆಲವು ಪದ್ಯಗಳನ್ನು ಉದಾಹರಿಸುತ್ತೇನೆ.

ಸಂಗೀತದ ದಸೆಯರಿಯದ
ವಂಗಂ ಪುಗಲೊಡನೆ ಪಾಡುವಾಡುವ ಚಿತ್ತಂ |
ಸಂಗಳಿಪುದೆನಿಪ ನೃತ್ಯಗೃ-
ಹಂಗಳ್ ಸುತ್ತಿರಿದು ನೆರೆಯೆ ಮೆರೆಯುತ್ತಿರ್ಕುಂ ǁ

ವಿತರಚ್ಛಾಯಾದಿ ಕರಾ
ಹತಿಯೊಳ್ ಗೀತಾನುಗತಿಯೊಳವಧಾನ ಸಮ |
ನ್ವಿತರತ್ತ ಮತ್ತೆ ತಾಳದೋ
ಳತಿ ಧೃಢರೆನೆ ಪಾಡಿ ಗಾಯಕರ್ ಮೆಚ್ಚಿಸುವರ್ ǁ

ಆದಂ ಗೀತದ ಬಣ್ಣಂ
ನಾದದೊಳಕ್ಕರಮುಮೆಯ್ದೆ ಶಬ್ದದೊಳರೆಯ |
ಲ್ಕಾದಪುದೆನೆ ಬಾಜಿಸುವ‌ರ್
ವಾದಕರುಂ ಪಿಕ್ಕೆ ಗೀತ ಸಮಯಮದಿಂಪಂ ǁ

ಅವನಿಗೆ 'ದೇಸಿ'ಯಲ್ಲಿ ತಾತ್ಸಾರವಿತ್ತೆಂದು ಹೇಳುವುದಂತೂ ದೊಡ್ಡ ತಪ್ಪು ಅದೇ ೧೫ನೇ ಆಶ್ವಾಸದಲ್ಲಿ, ತೀರ್ಥಂಕರ ಸನ್ನಿಧಿಯಲ್ಲಿ ದೇಸಿಯನ್ನೇ ಅವನು ಹಾಡಿಸಿದ್ದಾನೆ! “ತೀರ್ಥೇಶ್ವರನಂ ಕೇವಳಂ ತಾಳಲಯಾಶ್ರಯಮುಂ ದೇಶೀಯಮುಮಪ್ಪ ಸಂಗೀತ ಪ್ರಸಂಗದಿನೊಲಗಿಸುವಲ್ಲಿ' ಎಂದಿದೆ! ಅದೇ ಆಶ್ವಾಸದ. ಇನ್ನೊಂದೆಡೆಯಲ್ಲಿ ತತ್ತದಂಗಂಗಳಪ್ಪ ರಾಗಾಂಗ ಭಾಷಾಂಗಂ ಉಪಾಂಗಂ ಕ್ರಿಯಾಂಗಂ ಎಂಬ ದೇಶೀ ರಾಗಂಗಳೊಳಂ... ಮಾತೃಕಾದಿ ದೇಶೀ, ಪ್ರಬಂಧಂಗಳೊಳಂ, ಧ್ರುವಾದಿ ದೇಶೀ ಗೀತಂಗಳೊಳಂ, ವಶ್ಯಕಂಠರುಮಪ್ಪ ಉತ್ತಮೋತ್ತಮ ಗಾಯಕರ್...' ಇತ್ಯಾದಿಯಾಗಿ ಇದೆ. ಹೀಗೆ ಪ್ರಕಟವಾಗಿದೆ ಅವನ ದೇಶೀ ಪಕ್ಷಪಾತ, ನಮ್ಮ ಪುರಾತನ ಗ್ರಂಥಕಾರರ ಅಭಿಪ್ರಾಯವನ್ನು ಸರಿಯಾಗಿ ತಿಳಿಯುವ ಪ್ರಯತ್ನ ತಿಳಿಯುವ ಪ್ರಯತ್ನ ಮಾಡದೆ, ನಮ್ಮ ಲೇಖಕ ಪ್ರಕಾಂಡರೆನಿಸಿಕೊಳ್ಳುವವರೂ ಮಾಡುವ ದೂಷಣಗಳಿಗಾಗಿ ವ್ಯಸನಪಟ್ಟಷ್ಟು ಕಡಮೆ.


೧. ವಾಸ್ತವವಾಗಿ, ನಮ್ಮ ಪುರಾತನ ಕವಿಗಳಿಗೆ 'ದೇಸಿ'ಯಲ್ಲಿ ತಿರಸ್ಕಾರವಿರಲಿಲ್ಲ. ತನ್ನದು 'ಪೊಸದೇಸಿ' ಎಂದು ಹೊಗಳಿಕೊಂಡವರೇ ಹೆಚ್ಚು ಮಂದಿ, ಕಾವ್ಯದ ಘನತೆಯನ್ನು ಹೇಳಿಕೊಳ್ಳುವಾಗ, 'ಗೊರವರ ಡುಂಡುಚಿಯೇ? ಬೀದಿವರೆಯೆ? ಬೀರನ ಕತೆಯೇ?” ಎಂಬ ಮಾತುಗಳನ್ನು ಆಡಿದವರು ಒಬ್ಬಿಬ್ಬರು; 'ಒನಕೆವಾಡು' ಗಳನ್ನೂ ಬರೆದು ತಮ್ಮ ಮಹಾಕಾವ್ಯಗಳಲ್ಲಿ ಸೇರಿಸಿದವರು ಹಲವರು. ನಮ್ಮ ಸಂಗೀತ ಶಾಸ್ತ್ರಕಾರರಂತೂ, ಕ್ರಮವಾಗಿ ಹಳೆಯ 'ಮಾರ್ಗ'ವನ್ನು ಬಿಡುತ್ತಾ, 'ದೇಶಿ'ಯನ್ನೇ ಪುರಸ್ಕರಿಸಿದರೆಂಬುದು ವಿಚಾರವಂತರ ಗಮನಕ್ಕೆ ಯೋಗ್ಯವಾಗಿದೆ.