ಈ ಪುಟವನ್ನು ಪ್ರಕಟಿಸಲಾಗಿದೆ
“ಎಕ್ಕಲಗಾಣ”-? / ೧೦೭

“ಒತ್ತುವ ಪಂಚಮನುರಕ್ಕಣಂ ಮೇಳತೆಯಿಲ್ಲ” ಎಂಬ ವಾಕ್ಯವು ಕಿವಿಗೆ ಬೀಳು ವಾಗಲೇ ಅದರಲ್ಲೇನಾದರೂ ಪಾಠದೋಷವಿರಬಹುದೋ ಎಂಬ ಶಂಕೆ ಬರುತ್ತದೆ. 'ಪಂಚಮನುರ' ಎಂಬ ಅರಿಸಮಾಸವೇ ಈ ಶಂಕೆಯನ್ನು ನಮಗೆ ಹುಟ್ಟಿಸುವುದಾಗಿದೆ. ಆದರೆ ಅಚ್ಚಾದ 'ಚಂದ್ರಪ್ರಭ ಪುರಾಣ'ದಲ್ಲಿ ಅದು ಹಾಗೆಯೇ ಇದೆ. ಅಗ್ಗಳನಂತಹ ವಿದ್ವತ್ಕವಿ ಇಂತಹ ಪ್ರಯೋಗವನ್ನು ಮಾಡಿರಲಿಕ್ಕಿಲ್ಲವೆಂಬ ಬಗೆಯಿಂದ, ಅದರ ಪಾಠ ಶೋಧನೆಗೆ ಹೊರಟ ನಾನು 'ಮೈಸೂರು ಗವರ್ನಮೆಂಟ್ ಓರಿಯಂಟಲ್ ಲೈಬ್ರೆರಿ ಯಲ್ಲಿರುವ ಚಂದ್ರಪ್ರಭ ಪುರಾಣದ (A-41) ಹಸ್ತಪ್ರತಿಯನ್ನು ಪರಿಶೀಲಿಸಿದಾಗ ಅದರಲ್ಲಿ ಒತ್ತುವ ಪಂಚದ ನುಣರಕ್ಕಣಂ ಮೇಳತೆಯಿಲ್ಲ" ಎಂದಿರುವುದು ಕಂಡು ಬಂತು. ಈ ಪಾಠದಿಂದ ವಾಕ್ಕಾಭಿಪ್ರಾಯದ ಮೇಲೆ ಏನಾದರೂ ಬೆಳಕು ಬೀಳುವುದೋ ನೋಡೋಣ.

ಪಂಚದ ನುಬ್ಬರ ಎಂಬ ಮಾತಿನಿಂದ ಪಂಚ ಎಂದರೆ ಒಂದು ನಾದ ಸಾಮಗ್ರಿ ವಾದ್ಯ ವಿಶೇಷ - ಎಂಬರ್ಥವು ಅನುಮಾನಿತವಾಗುತ್ತದೆ. ಈ ಹೆಸರಿನ ವಾದ್ಯವಿದೆಯೆ? ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ ಈ ಹೆಸರು ನನಗೆ ಕಂಡುಬರಲಿಲ್ಲ. ಪಂಚ ಎಂಬುದು ವಾದ್ಯದ ಹೆಸರಾದರೆ, ಅದು ಹಾಡುಗಾರರಿಗೆ ಸರ್ವ ಸಾಧಾರಣವಾಗಿ ಸಹಾಯಕವಾದ ಒಂದು ವಾದ್ಯವಾಗಿರಬೇಕು ಎಂಬುದು ಮೇಲಿನ ಸಂದರ್ಭದಿಂದ ಸ್ಪಷ್ಟ. ಇಂದು ನಾವು ಸಂಗೀತ ಕಚೇರಿಗಳಲ್ಲಿ - ದಕ್ಷಿಣದವರು ಪಿಟೀಲನ್ನೂ ಉತ್ತರದವರು ಸಾರಂಗಿಯನ್ನೂ ಹಾಡಿಗೆ ಸಹಾಯವಾಗಿ ಪ್ರಯೋಗಿಸುವುದನ್ನು ಕಾಣುತ್ತೇವೆ. ಆದರೆ ನಮ್ಮ ಹಳೆಯ ಸಂಗೀತ ಶಾಸ್ತ್ರಗಳಲ್ಲಿ ಏನು ಹೇಳಿದೆ?

ಸಂಗೀತ ಸಾರಾಮೃತ (ಪುಟ ೧೨೪-೧೨೮)ದಲ್ಲಿ ಹೀಗಿದೆ :-
ವಂಶ ವೀಣಾ ಶರೀರಾಣಿ ತ್ರಯೋsಮೀ ಸ್ವರಹೇತವಃ |
ಲಲಿತೋ ಮಧುರಃ ಸ್ನಿಗ್ಧ: ತೇಷು ವಂಶೋ ಪ್ರಶಸ್ಯತೇ ǁ
ವಂಶವೀಣಾ ಶರೀರಾಣಾಂ ಏಕೀಭಾವೇನ ಯೋ ಧ್ವನಿಃ |
ತತ್ರ ರಕ್ತಿ ವಿಶೇಷಸ್ಯ ಪ್ರಮಾಣಂ ವಿಬುಧಾ ವಿದುಃ ǁ
***
ವೈಣವಃ ಖಾದಿರೋ ದಾಂತಃ ಚಾಂದನೋ ರಕ್ತ ಚಾಂದನಃ |
ಆಯಸಃ ಕಾಂಸ್ಯಜೋ ರೌಪ್ಯ: ವಂಶಃ ಸ್ಯಾತ್ ಕಾಂಚನೋಥ್ವಾ ǁ

ಇದರ ತಾತ್ಪರ್ಯ ಹೀಗೆ : ವಂಶ, ವೀಣೆ, ಶರೀರ (ಕಂಠ) ಎಂಬ ಈ ಮೂರು ಸ್ವರಸಾಧನಗಳು. ಅವುಗಳೊಳಗೆ ವಂಶವು ಶ್ರೇಷ್ಠ; ಏಕೆಂದರೆ ಅದು ಲಲಿತವೂ, ಮಧುರವೂ, ಸ್ನಿಗ್ಧವೂ ಆಗಿದೆ. ವಂಶ, ವೀಣೆ, ಶರೀರ- ಇವುಗಳ ಏಕೀಭಾವದಿಂದ ಹುಟ್ಟುವ ಧ್ವನಿಯಲ್ಲಿ ರಂಜಕತ್ವವು ಅತ್ಯಧಿಕವಾಗಿದೆಯೆಂಬುದು ವಿದ್ವತ್ಸಮ್ಮತ.”

ವಂಶವೆಂದರೆ 'ಬಿದಿರು' ಎಂಬುದೇ ಮೂಲಾರ್ಥ. ಆದರೆ ವಂಶವಾದವು ಬಿದಿರಿನದೇ ಆಗಬೇಕೆಂದಿಲ್ಲ. ಅದು “ಬಿದಿರಿನದು, ಖದಿರ, ಶ್ರೀಗಂಧ, ರಕ್ತಚಂದನ ಇತ್ಯಾದಿ ಗಟ್ಟಿ ಮರಗಳದು; ಆನೆಯ ದಂತದ್ದು, ಕಬ್ಬಿಣ, ಕಂಚು, ಬೆಳ್ಳಿ, ಬಂಗಾರ- ಇಂತಹ ಲೋಹಗಳದೂ ಆಗಿರಬಹುದು.” ಪೂರ್ವ ಕಾಲದಲ್ಲಿ ನಮ್ಮ ಹಾಡುಗಾರರು 'ಪಕ್ಕವಾದ್ಯ'ವಾಗಿ ವಂಶವನ್ನೂ, ವೀಣೆ ಯನ್ನೂ ಬಳಸುತ್ತಿದ್ದರೆಂಬುದು ಮೇಲಿನ ವಿವರಣೆಯಿಂದ ಸ್ಪಷ್ಟವಾಗುತ್ತದೆ.