ಈ ಪುಟವನ್ನು ಪ್ರಕಟಿಸಲಾಗಿದೆ

ಬಹುಶ್ರುತ ವಿದ್ವಾಂಸ

ಅಮೃತ ಸೋಮೇಶ್ವರ

ಸುಮಾರು ಮೂರುವರೆ ದಶಕದ ಹಿಂದಿನ ಮಾತು. ಮಂಗಳೂರಿನ ಕರಂಗಲಪಾಡಿ ಯಲ್ಲಿ ಗುರು ಶ್ರೀ ಸೇಡಿಯಾಪು ಕೃಷ್ಣಭಟ್ಟರ ಮನೆಯಲ್ಲಿ ಮೊದಲ ಬಾರಿಗೆ ನಾನು ದಿವಂಗತ ಕುಕ್ಕಿಲ ಕೃಷ್ಣಭಟ್ಟರನ್ನು ಕಂಡದ್ದು. ವಿಶಿಷ್ಟ ವ್ಯಕ್ತಿತ್ವದ ಈ ಇಬ್ಬರು ಕೃಷ್ಣ ಭಟ್ಟರುಗಳೂ ಭಾವನೆಂಟರು, ವಿದ್ವದ್ ವಿನೋದಿಗಳು, ಸಂಸ್ಕೃತಿ ಸಂಪನ್ನರು.
ಕುಕ್ಕಿಲ ಕೃಷ್ಣ ಭಟ್ಟರನ್ನು ಕಂಡ ಮೊದಲಲ್ಲೆ ಅವರ ವ್ಯಕ್ತಿತ್ವದಲ್ಲಿ ನನಗೆ ಆಕರ್ಷಣೆ ಯುಂಟಾಯಿತು. ಮಧ್ಯಗಾತ್ರದ ನಸು ಸ್ಥೂಲ ದೇಹಯಷ್ಟಿ, ಗೌರವರ್ಣದ ವಿಶಾಲ ಮುಖ, ಸಮೃದ್ಧನಗೆ, 'ಟಾಠಡಾಢಣ' ಧೋರಣೆಯ ಖಚಿತವಾದ ಗಟ್ಟಿದನಿ.
ಶುಭ್ರ ಖಾದಿಯ ಕಚ್ಚೆ ಪಂಚೆ, ಜುಬ್ಬಾ, ಗಾಂಧಿ ಟೊಪ್ಪಿ ಅವರಿಗೆ ತುಂಬಾ ಒಪ್ಪುತ್ತಿತ್ತು.
ಡಾ| ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಪುಸ್ತಕ ಆ ದಿನಗಳಲ್ಲಿ ಯಕ್ಷಗಾನ ಪ್ರಪಂಚದಲ್ಲಿ ಕೋಲಾಹಲವನ್ನು ಉಂಟುಮಾಡಿತ್ತು. ಪ್ರಸಿದ್ಧ ಯಕ್ಷಗಾನ ಕವಿ ಪಾರ್ತಿಸುಬ್ಬನ ಸಮಸ್ಯೆ ಬಿಸಿಯೇರಿತ್ತು. ಪತ್ರಿಕೆಗಳಲ್ಲಿ ಡಾ| ಕಾರಂತರ ಅಭಿಪ್ರಾಯದ ಪರವಾಗಿ ಹಾಗೂ ವಿರೋಧವಾಗಿ ಕೆಲವು ಲೇಖನಗಳು ಬಂದಿದ್ದವು. ಈ ಚರ್ಚೆಯಲ್ಲಿ ನಾನೂ ಉತ್ಸಾಹದಿಂದ ತುಸು ಪಾಲುಗೊಂಡಿದ್ದೆ. ಸೇಡಿಯಾಪು ಅವರ ಮನೆಯಲ್ಲಿ ಈ ಕುರಿತಾದ ಪ್ರಸ್ತಾಪ ಆಗಾಗ ಬರುತ್ತಿತ್ತು. ಸೇಡಿಯಾಪು ಅವರು ಕುಕ್ಕಿಲರನ್ನೂ ನನ್ನನ್ನೂ ಪರಸ್ಪರ ಪರಿಚಯಿಸಿ 'ನೀವಿಬ್ಬರೂ ಪರಸ್ಪರ ಸಹಕರಿಸಿ ಈ ವಿಚಾರದಲ್ಲಿ ಸ್ವಲ್ಪ ಸರಿಯಾದ ಶೋಧನೆ ನಡೆಸಿರಿ'- ಎಂದು ಆದೇಶವಿತ್ತರು.
ಕುಕ್ಕಿಲರ ಪರಿಚಯ ನಿಕಟವಾಗುತ್ತ ಹೋದಂತೆ ಅವರ ಅಗಾಧ ಪಾಂಡಿತ್ಯ, ತೀವ್ರ ಜ್ಞಾನದಾಹ, ದಣಿವಿಲ್ಲದ ದುಡಿಮೆಗಳನ್ನು ಕಂಡು ಅಚ್ಚರಿಗೊಂಡೆ. ನಾವು ಪಾರ್ತಿಸುಬ್ಬನ ವಿಚಾರವಾಗಿ ಕ್ಷೇತ್ರ ಕಾರ್ಯವನ್ನು ಆರಂಭಿಸಿದೆವು. ಆಗಲೇ ತಕ್ಕಷ್ಟು ವಿಷಯಗಳನ್ನು ಕುಕ್ಕಿಲರು ಸ್ವಪ್ರಯತ್ನದಿಂದ ಸಂಗ್ರಹಿಸಿದ್ದರು. ನಾವು ಜೊತೆಯಾಗಿ ಕುಂಬಳೆ ಕಾಸರಗೋಡು, ಕೂಡ್ಲು ಇತ್ಯಾದಿ ಪ್ರದೇಶಗಳನ್ನು ಸಂಚರಿಸಿ ವಯೋವೃದ್ಧ ಯಕ್ಷಗಾನ ಕಲಾವಿದರು, ಅನುಭವೀ ಹಿರಿಯರು ಮೊದಲಾದವರನ್ನು ಸಂದರ್ಶಿಸಿ ಅವರಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದವು, ಯಕ್ಷಗಾನದ ಕೆಲವು ಹಳೆಯ ತಾಡವಾಲೆಗಳು ಹಾಗೂ ಕಾಗದದ ಪ್ರತಿಗಳು ನಮಗೆ ಲಭ್ಯವಾದವು. ಹಲವರು ಮಹನೀಯರ ಹೇಳಿಕೆಗಳು ಹಾಗೂ ಕೃತಿಗಳ ಆಧಾರದಿಂದ, ಪಾರ್ತಿಸುಬ್ಬನು ಕುಂಬಳೆ ಕಣ್ವ ಪುರದವನೆಂಬುದರಲ್ಲಿ ನಮಗೇನೂ ಸಂಶಯ ಕಾಣಲಿಲ್ಲ.
ಮೈಸೂರಿನ ಪ್ರಾಚ್ಯಗ್ರಂಥಾಲಯದಲ್ಲಿ (ಒರಿಯೆಂಟಲ್ ಲೈಬ್ರೆರಿ) ಸಾಕಷ್ಟು ಯಕ್ಷಗಾನದ ಓಲೆಗ್ರಂಥಗಳು ಇವೆಯೆಂದು ತಿಳಿದು ಮೈಸೂರಲ್ಲಿ ಹತ್ತೆಂಟು ದಿನ ತನ್ನ ಜೊತೆಯಲ್ಲಿರುವಂತೆ ಕುಕ್ಕಿಲರು ಬಯಸಿದಂತೆ, ನಾನು ಅವರೊಂದಿಗೆ ತೆರಳಿದೆ.