ಈ ಪುಟವನ್ನು ಪ್ರಕಟಿಸಲಾಗಿದೆ
ಬಹುಶ್ರುತ ವಿದ್ವಾಂಸ / ೩೭೫

ಆ ಬಳಿಕ ಇನ್ನೂ ಕೆಲವು ಕೃತಿಗಳನ್ನು ನಾವಿಬ್ಬರೂ ಪರಿಶೀಲಿಸಿ, ಕಡೆಂಗೋಡ್ಲು ಶಂಕರ ಭಟ್ಟರ 'ರಾಷ್ಟ್ರಮತ'ದಲ್ಲಿ ಲೇಖನಮಾಲೆಯಾಗಿ ಯಕ್ಷಗಾನ ಕೃತಿ ಪರಿಚಯವನ್ನು ನೀಡುತ್ತ ಬಂದೆವು. ಸುಮಾರು ೩೦-೪೦ ಕೃತಿಗಳ ಪರಿಚಯ ಪ್ರಕಟವಾಗಿರಬೇಕು.
ಇಷ್ಟರಲ್ಲಿ ಕುಕ್ಕಿಲರು ಮೈಸೂರಲ್ಲಿ ನೆಲಸಲು ಹೊರಟುದರಿಂದ ಈ ಕೆಲಸ ಮುಂದೆ ಸಾಗದಾಯಿತು. ಅವರ ಒಲವು ಸಂಗೀತ ಸಂಶೋಧನೆಯತ್ತ ಹೊರಳಿತ್ತು. ಯಾವುದಾದ ರೊಂದು ವಿಚಾರ ಹೊಳೆದರೆ ಪಟ್ಟು ಹಿಡಿದು ಆ ಬಗ್ಗೆ ಚಿಂತಿಸುವುದು ಹಾಗೂ ಕಾರ್ಯತತ್ಪರರಾಗುವುದು ಅವರ ರೂಢಿ.
ಸಂಗೀತ ಶಾಸ್ತ್ರ ವಿಚಾರದಲ್ಲಿ ಮುಖ್ಯವಾಗಿ ಕರ್ನಾಟಕೀ ಪದ್ಧತಿಯಲ್ಲಿ- ತಲಸ್ಪರ್ಶಿ ಯಾದ ಅಧ್ಯಯನವನ್ನು ಅವರು ಕೈಗೊಂಡಿದ್ದರು. ಅವರಲ್ಲಿ ಅಪೂರ್ವ ಸಂಗೀತ ಸಂಬಂಧವಾದ ಗ್ರಂಥಗಳಿದ್ದವು. ಅವರ ಹಾಡುಗಾರಿಕೆ ಅಷ್ಟೊಂದು ಆಪ್ಯಾಯಮಾನ ವಾಗಿರದಿದ್ದರೂ ಶಾಸ್ತ್ರ ಭಾಗದಲ್ಲಿ ನಿಖರವಾದ ಜ್ಞಾನ ಅವರಿಗಿತ್ತು. ಯಕ್ಷಗಾನ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತಗಳಿಗೆ ಇರತಕ್ಕ ಸಂಬಂಧ-ಸಾದೃಶ್ಯ-ವ್ಯತ್ಯಾಸಗಳನ್ನು ಖಚಿತ ವಾಗಿ ಹೇಳಬಲ್ಲವರಾಗಿದ್ದರು. ಯಕ್ಷಗಾನದ ಹಳೆಯ ಮಟ್ಟುಗಳ ಪರಿಜ್ಞಾನ ಅವರಿಗಿತ್ತು. ಮದ್ದಳೆವಾದನವನ್ನು ಚೆನ್ನಾಗಿ ಬಲ್ಲವರಾಗಿದ್ದರಲ್ಲದೆ ಅದನ್ನು ಇತರರಿಗೆ ಹೇಳಿಯೂ ಕೊಟ್ಟಿದ್ದರು.
ಕಾವ್ಯ ಮೀಮಾಂಸೆ, ಛಂದಶ್ಯಾಸ್ತ್ರ ಇತ್ಯಾದಿಗಳಲ್ಲೂ ಅವರು ಪರಿಣತರಿದ್ದರು. ಅವರ ಪರಿಣತಿಯ ಸಂಪೂರ್ಣ ಲಾಭ ಕನ್ನಡಿಗರಿಗೆ ದೊರಕದೆ ಹೋದರೂ ಸುದೈವದಿಂದ ಕೆಲವಾದರೂ ಉತ್ತಮ ಗ್ರಂಥಗಳು ಹಾಗೂ ಲೇಖನಗಳು ಲಭ್ಯವಾಗಿವೆ. ತಮಿಳು, ತೆಲುಗು, ಮಲೆಯಾಳಂ ಇತ್ಯಾದಿ ಇತರ ದ್ರಾವಿಡ ಭಾಷೆಗಳ ಆಳವಾದ ಜ್ಞಾನ ಅವರಿಗೆ ಇದ್ದುದರಿಂದ ತುಲನಾತ್ಮಕ ಅಧ್ಯಯನಕ್ಕೆ ಆ ತಿಳುವಳಿಕೆ ತುಂಬಾ ಅನುಕೂಲವಾಗಿತ್ತು. ತೆಲುಗಿನ ಯಕ್ಷಗಾನದ ಕುರಿತು, ಅದಕ್ಕೂ ಕನ್ನಡದ ಯಕ್ಷಗಾನಕ್ಕೂ ಇರುವ ಸಂಬಂಧದ ಕುರಿತು ಅನೇಕ ಅಮೂಲ್ಯ ಅಭಿಪ್ರಾಯಗಳನ್ನು ಅವರು ಪ್ರಕಟಿಸಿದ್ದಾರೆ.
ಜ್ಞಾನಸಂಗ್ರಹಕ್ಕಾಗಿ ಇವರ ಹಾಗೆ ಕಷ್ಟನಷ್ಟಪಡುವ ವೀರ ನಿಷ್ಠೆಯ ವಿದ್ವಾಂಸರನ್ನು ನಾನು ಕಂಡದ್ದು ಕಡಿಮೆ. ಅವರೊಂದಿಗೆ ಮಾತುಕತೆಯಾಡುವುದೇ ಒಂದು ಅಪೂರ್ವ ಅನುಭವವಾಗಿತ್ತು. ಸತ್ಯ ಶೋಧನೆಗಾಗಿ ಎಂಥವರನ್ನೂ ಎದುರುಹಾಕಿಕೊಳ್ಳಲು ಹಿಂಜರಿಯದ ಚಲ ಅವರದಾಗಿತ್ತು. ವಿಚಾರ ವಿಮರ್ಶೆಯಿಲ್ಲದೆ ಯಾರ ಅಭಿಪ್ರಾಯ, ಸಿದ್ಧಾಂತಗಳನ್ನೂ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಅಸಮಂಜಸವಾದ ವಿತಂಡ ವಾದ ಗಳನ್ನು ಕಂಡಾಗ ಅವರು ಕೆಂಡವಾಗುತ್ತಿದ್ದರು. ಆದರೆ ಅವರ ಅಂತರಂಗ ಆರ್ದ್ರ ವಾದು ದಾಗಿತ್ತು, ಅವರು ತುಂಬ ಸ್ನೇಹಪರರೂ ಸರಸಿಯೂ ಆಗಿದ್ದರು.
ಕುಕ್ಕಿಲರಲ್ಲಿ ಕಾಡುಹರಟೆ ಕಡಿಮೆ. ಏನಾದರೊಂದು ಗಮನೀಯ ವಿಚಾರದ ಸುತ್ತು ಅವರ ಮಾತುಕತೆ ಬೆಳೆಯುತ್ತಿತ್ತು. ಅವರು ಲಿಖಿತ ಸಾಹಿತ್ಯದ ಬರವಣಿಗೆಗೆ ಎಳಸಿದ್ದು ಕಡಿಮೆ. ಅವರಿಗೆ ಅಂಥ ಸಾಹಿತ್ಯದಲ್ಲಿ ಒಲವು ಹೆಚ್ಚಿರಲಿಲ್ಲ. ಆದರೆ ಮನಸ್ಸು ಮಾಡಿದ್ದರೆ ಅವರು ಸರಸವಾದ ಬರವಣಿಗೆ ಬರೆಯಲೂ ಶಕ್ತರಾಗಿದ್ದರು ಎಂಬುದಕ್ಕೆ, ಅವರ ಹಿರಿಯ ಬಂಧುಗಳಾಗಿದ್ದ ಬಡೆಕ್ಕಿಲ ವೆಂಕಟರಮಣ ಭಟ್ಟರ ಬಗೆಗೆ ಅವರು ಬರೆದೊಂದು ವ್ಯಕ್ತಿಚಿತ್ರ ಸಾಕ್ಷಿಯಾಗಿದೆ.*


(*ಈ ಲೇಖನವು ಬಡೆಕ್ಕಿಲ ವೆಂಕಟರಮಣ ಭಟ್ಟರ ಗೌರವ ಗ್ರಂಥವಾದ 'ಕಾಣಿಕೆ' ಎಂಬುದರಲ್ಲಿದೆ.)