ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಕುಕ್ಕಿಲ ಕೃಷ್ಣ ಭಟ್ಟರು

ಪಾದೇಕಲ್ಲು ವಿಷ್ಣು ಭಟ್ಟ

ದಿವಂಗತ ಕುಕ್ಕಿಲ ಕೃಷ್ಣ ಭಟ್ಟರ ಲೇಖನಗಳನ್ನೂ ಗ್ರಂಥಗಳನ್ನೂ ನಾನು ಎಂ. ಎ. ತರಗತಿಯಲ್ಲಿರುವಾಗಲೂ ಅನಂತರ ಅಧ್ಯಾಪಕನಾಗಿ ಛಂದಸ್ಸು ಮೊದಲಾದ ಶಾಸ್ತ್ರೀಯ ವಿಷಯಗಳನ್ನು ಬಿ. ಎ. ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಬೋಧಿಸುವಾಗಲೂ ಓದಿದ್ದೆ ಮತ್ತು ಪುನಃ ಪುನಃ ಪರಿಶೀಲಿಸಿದ್ದೆ. ನನ್ನ ಗುರುಗಳಾದ ಶ್ರೀ ಅಮೃತ ಸೋಮೇಶ್ವರ ಅವರಿಗೆ ದಿ| ಕೃಷ್ಣ ಭಟ್ಟರ ನಿಕಟ ಸಂಪರ್ಕವಿದ್ದುದರಿಂದ ಅವರ ಮೂಲಕವೂ ಕೃಷ್ಣ ಭಟ್ಟರ ಬಗ್ಗೆ ತಿಳಿದಿದ್ದೆ. ಅವರನ್ನು ನಾನು ಮೊದಲು ನೋಡಿದುದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದಿವಂಗತ ಮಾಂಬಾಡಿ ನಾರಾಯಣ ಭಾಗವತರಿಗೆ ಸಂಮಾನ ನಡೆದ ಸಂದರ್ಭದಲ್ಲಿ. ಅವರ ಲೇಖನಗಳಂತೆಯೇ ಅಂದಿನ ಅವರ ಭಾಷಣವು ಸಹ ಗಹನವೂ ಪ್ರೌಢವೂ ಆಗಿತ್ತು.
೧೯೮೧ರಲ್ಲಿ ದಿವಂಗತ ಮಾಂಬಾಡಿ ನಾರಾಯಣ ಭಾಗವತರಿಗೆ ಸಂಮಾನವೊಂದನ್ನು ನಡೆಸಿ 'ರಂಗವೈಖರಿ' ಎಂಬ ಹೆಸರಿನ ಅಭಿನಂದನ ಗ್ರಂಥವೊಂದನ್ನು ಸಮರ್ಪಿಸಲು ನಮ್ಮೂರು ಕರೋಪಾಡಿಯಲ್ಲಿ ನಿಶ್ಚಯಿಸಿದ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಸಂಶೋಧಕರಲ್ಲಿ ಗಣ್ಯರಾದ ಕುಕ್ಕಿಲ ಕೃಷ್ಣ ಭಟ್ಟರಲ್ಲಿ ಲೇಖನವೊಂದನ್ನು ಬರೆದು ಕೊಡಲು ವಿನಂತಿಸಿಕೊಂಡೆವು. ತನಗೆ ಕೈಬೆರಳೊಂದು ನೋವಾಗಿದ್ದು ಬರವಣಿಗೆ ಕಷ್ಟ ವಾಗಿರುವುದರಿಂದ ಹೇಳಿದುದನ್ನು ಬರೆದುಕೊಳ್ಳಲು ಲಿಪಿಕಾರನೊಬ್ಬನಿದ್ದರೆ ಲೇಖನ ಕೊಡುವುದಾಗಿ ಅವರು ಹೇಳಿ ಕಳುಹಿಸಿದರು. ಅವರಿಗೆ ಲೇಖನದ ಲಿಪಿಕಾರನಾಗಿ ನಾನು ಹೋದೆ. ದಿವಂಗತ ಕುಕ್ಕಿಲ ಕೃಷ್ಣ ಭಟ್ಟರ ನಿಕಟ ಪರಿಚಯ ನನಗಾದುದು ಹೀಗೆ. 'ರಂಗವೈಖರಿ'ಗಾಗಿ 'ಆಂಧ್ರ ಯಕ್ಷಗಾನ'ದ ಬಗೆಗೆ ಅವರೊಂದು ಲೇಖನ ಬರೆಯಿಸುವುದ ರೊಂದಿಗೆ ಅವರು ಮಾತಾಡಿದ ವಿಷಯಗಳು ನೂರಾರು. ಯಕ್ಷಗಾನ ಪ್ರಸಂಗ ಸಂಗ್ರಹದ ಬಗ್ಗೆ ಅವರ ಶ್ರಮ, ಪಾರ್ತಿಸುಬ್ಬನ ಸಂಶೋಧನೆಯ ವಿವಿಧ ಹಂತಗಳು ಮತ್ತು ಸಮಸ್ಯೆಗಳು, ಪಾರ್ತಿಸುಬ್ಬನ ಹೆಸರಿನಲ್ಲಿ ನಡೆದ ವಿವಿಧ ಚರ್ಚೆಗಳು, ವಿವಿಧ ಯಕ್ಷಗಾನ ಕವಿಗಳು, ಕನ್ನಡ ಛಂದಃಶಾಸ್ತ್ರ ವಿಚಾರ, ನಾಟ್ಯಶಾಸ್ತ್ರ ವಿಚಾರ, ತಮಿಳು ಛಂದೋವಿಚಾರ, ಕಥಕಳಿ (ಕಥಕ್ಕಳಿ ಎಂದು ಬರೆಯುವುದು ತಪ್ಪೆಂದೂ ಅದು ಕಥಕ್ + ಕಳಿ ಅಲ್ಲ; ಕಥ+ಕಳಿ ಎಂದೂ ಹೇಳಿದವರು ಅವರು)- ಮೊದಲಾದ ಅನೇಕ ವಿಷಯಗಳ ಬಗ್ಗೆ ಅವರು ವಿವರಿಸಿ ಹೇಳಿದರು. ಎಡೆಯೆಡೆಯಲ್ಲಿ ಒಂದೊಂದು ಪ್ರಶ್ನೆಯನ್ನಿಟ್ಟು ಅವರು ಹೇಳಿದುದನ್ನು ಕೇಳುವುದಷ್ಟೇ ನನ್ನ ಕೆಲಸವಾಗಿತ್ತು.
'ರಂಗವೈಖರಿ'ಗಾಗಿ ಅವರು ಬರೆಯಿಸಿದ ಲೇಖನವನ್ನು ಬೇರೆ ಬೇರೆ ದಿನಗಳಲ್ಲಿ ಅವರ ಮನೆಗೆ ಹೋಗಿ ಬರೆದುಕೊಂಡೆ. ಈ ವಿಷಯದಲ್ಲಿ ಹೇಳಬೇಕಾದ ಅಂಶಗಳು ಬಹಳವಿದ್ದರೂ ಲಿಪಿಕಾರನೊಬ್ಬನಿಗೆ ತೊಂದರೆ ಕೊಡಬೇಕಾಗುತ್ತದೆಂಬ ದೃಷ್ಟಿಯಿಂದ ಲೇಖನವನ್ನು ಸಂಕ್ಷಿಪ್ತಗೊಳಿಸುವುದಾಗಿಯೂ ಹೇಳಿದರು. ಆ ಲೇಖನವು ಅವರ ಇತರ ಎಷ್ಟೋ ಲೇಖನಗಳಿಗಿಂತ ಗಾತ್ರದಲ್ಲಿ ಸಂಕ್ಷಿಪ್ತವಾಗಿರುವುದನ್ನು ನೋಡಬಹುದು.