ಈ ಪುಟವನ್ನು ಪರಿಶೀಲಿಸಲಾಗಿದೆ

೨೭ ಘಂಟೆಗಳಲ್ಲಿ

೨೧

ಸುಳ್ಳೇನೂ ಹೇಳಿಲ್ಲ; ಆದಷ್ಟೂ ನಿಜವನ್ನೇ ಹೇಳಿದ್ದೇನೆ. ಆದ್ದರಿಂದ ಈ ವ್ಯವಹಾರದಲ್ಲಿ ಯಾವ ಪಾಪಾನೂ ನನ್ನ ತಲೆಗೆ ಗಂಟು ಬೀಳೋದಿಲ್ಲ." ಎಂಬ ಸಮಾಧಾನವುಂಟಾಯಿತು.

ಲಕ್ಕೋಟೆಯು ದೇವರತ್ನದೆಂದು ದೃಢಪಟ್ಟಮೇಲೆ, ಅದರಲ್ಲೇನಿದೆಯೆಂಬುದನ್ನೊಡೆದು ನೋಡಲು ತನಗೆ ಹಕ್ಕಿಲ್ಲವೇ ಎಂದು ಶಶಿಯು ಮನಸ್ಸಿನಲ್ಲೇ ಭಾವಿಸಿ ಕುತೂಹಲದಿಂದ ಲಕೊಟೆಯ ತೊಡೆದಳು. ಗಿರೀಶನು ಇನ್ನು ತಾನು ನೋಡುತ್ತಿರುವುದು ಕ್ಷೇಮವಲ್ಲವೆಂದು ಬಗೆದು ಕೈಗೆ ಸಿಕ್ಕಿದ ಪತ್ರಿಕೆಯೊಂದರ ಹಾಳೆಗಳನ್ನು ತಿರುವಿಹಾಕುತ್ತ, ಚಿತ್ರಗಳನ್ನು ನೋಡಲಾರಂಭಿಸಿದ. ಲಕೋಟೆಯಲ್ಲಿ ನೋಟುಗಳಿದ್ದುದರ ಅರ್ಥ ಶಶಿಗೆ ಹೊಳೆಯದಿರಲು, ಕಾಗದದ ಮಡಿಕೆ ಬಿಚ್ಚಿ ಅದರ ಒಕ್ಕಣೆಯನ್ನು ಓದಿದಳು. ಓದುತ್ತಿದ್ದ ಹಾಗೆಯೇ ತುಟಿಗಳು ಒಂದು ಕ್ಷಣ ಕಂಪಿಸಿದವು. ಆದರೆ ಮರುಕ್ಷಣವೇ ಅವುಗಳ ಕಂಪನ ನಿಂತಿತು. ಮುಖವು ವಿವರ್ಣವಾಯಿತು ದಂಗು ಬಡಿದವಳಂತೆ ಹಾಗೆಯೇ ತಲೆದಿಂಬುಗಳಿಗೆ ಒರಗಿಕೊಂಡು ಕುಳಿತಳು.

ರೈಲು ಆದೋನಿ ಸ್ಟೇಷನ್ನಿಗೆ ಹೋಗಿ ನಿಂತಾಗ ಶಶಿಯು ಎಚ್ಚೆತ್ತಳು. ಗಾಡಿಯು ಅಲ್ಲಿ ನಿಂತಿದ್ದ ೨೦ ನಿಮಿಷಗಳ ಕಾಲವೂ ಅವಳು ಪ್ಲಾಟ್‌ಫಾರಮ್ಮಿನ ಕಡೆಯಿಂದ ತನ್ನ 'ಕಂಪಾರ್ಟ್‌ಮೆಂಟ'ನ ಕಡೆಗೆ ಕೇಳಿ ಬರುತ್ತಿದ್ದ ಪ್ರತಿ ಹೆಜ್ಜೆಯ ಶಬ್ಬವನ್ನೂ ಆಲಿಸಿ ಕೇಳುತ್ತಿದ್ದಳು. ಆ ಹೆಜ್ಜೆಯ ಸಪ್ಪಳವು ತೀರ ಸಮೀಪದಲ್ಲಿ ಕೇಳಿ ಬಂದಾಗ ಅತ್ತ ತಿರುಗಿ ನೋಡುವ ಅಪೇಕ್ಷೆಯುಂಟಾದರೂ, ಬಿಗುಮಾನದಿಂದ ಆ ಅಪೇಕ್ಷೆಯನ್ನು ಅಡಗಿಸಿಕೊಳ್ಳುತ್ತಿದ್ದಳು. ಆದರೆ ಸಮೀಪಿಸುತ್ತಿದ್ದ ಹೆಜ್ಜೆಗಳು ಹಾದು ಮುಂದೆ ಹೋದೊಡನೆಯೇ ಅವಳ ಆಶೆಯು ನಿರಾಶೆಯಾಗುತ್ತಿತ್ತು. ಕೊನೆಗೆ ರೈಲೂ ಕದಲಿತು. ದೇವರತ್ನನು ಬರಲಿಲ್ಲ. ಇನ್ನವನು ಹಿಂದಿರುಗುವ ಆಶೆದೂರವಾಯಿತು. ನಡು ನೀರಿನಲ್ಲಿ ಕೈ ಬಿಟ್ಟದ್ದೂ ಅಲ್ಲದೆ, ತಾನು ಅವನ ವಶಕ್ಕೊಪ್ಪಿಸಿದ