ಈ ಪುಟವನ್ನು ಪ್ರಕಟಿಸಲಾಗಿದೆ
೩೨
ಬಿ. ಎಸ್. ವೆಂಕಟರಾಮ್

“ನಾನು ಸಾಯೋಕೆ ಸಿದ್ಧವಾಗಿದ್ದೇನೆ ; ಆದ್ರಿಂದ ನನ್ನ ವಿಚಾರ ಏನೂ ಯೋಚೆ ಮಾಡೋಕೆ ನಾನು ಹೋಗಿಲ್ಲ.”

“ಸಾಯ್ಲೇಬೇಕೊಂತನ್ನೊ ಆಸೆ ಇದ್ರೆ ಬೊಂಬಾಯಿಯಲ್ಲಿ ನಾನು ಹೋಗ್ತೇನೆ. ಆಮೇಲೆ ನೀನು ಇನ್ಯಾವುದಾದ್ರೂ ರೈಲು ಹತ್ತಿ ಧಾರಾಳವಾಗಿ ಹಾರಿಕೊಂಡು ಪ್ರಾಣ ಬಿಡು. ಆದರೆ ಇನ್ಯಾರಾದರೂ ನನ್ಹಾಗೇ ಒಬ್ಬ ಬಡಪಾಯಿ ಅಲ್ಲಿದ್ದು ನಿನ್ನಿಂದ ಅವನೂ ಸಾಯ ಬೇಕಾದರೆ ದೇವರೇ ಅವನ್ನ ಕಾವಾಡಬೇಕು.- ನೀನು ಸ್ವಸ್ಥವಾಗಿ ಸಮುದ್ರದಲ್ಲಿ ಮುಳುಗಿ ಸಾಯೋ ಯೋಚನೆ ಏಕೆ ಮಾಡಬಾರ್ದು? ಅದರಿಂದ ಯಾರಿಗೂ ತೊಂದ್ರೆ ಇರೊಲ್ಲ, ನಿನ್ನ ಹೆಣ ಒಂದುದಿನ ತೇಲ್ತಾ ಬಂದು ಎಲ್ಲಾದರೂ ತೀರದಲ್ಲಿ ಒಂದುಕಡೆ ಬಿದ್ದಿರುತ್ತೆ. ಯಾರಿಗೂ ನಿನ್ನ ಗುರ್ತಿರೊಲ್ಲ. ಯಾವುದೋ ಬೇವಾರಸು ಹೆಣಾಂತ ಪೋಲೀಸಿನವರು ಮುನಿಸಿಪಾಲಿಟೇ ವಶಕ್ಕೊಪ್ಪಿಸಿಬಿಡ್ತಾರೆ....... ಏಕೆ ಹಾಗೆ ಮಾಡಬಾರದು ???”

ಶಶಿಯ ಕಣ್ಣುಗಳಲ್ಲಿ ಪಳ್ಳನೆ ನೀರುಕ್ಕಿಬಂತು. “ಯಾಕಿಷ್ಟು ಚಾಕುವಿನಿಂದ ಇರಿದಹಾಗೆ ಮಾತಾಡ್ತೀರಿ ? ನನ್ನ ಪಾಡು ನನ್ನದು. ನಾನು ಹೇಗಾದರೂ ಸಾಯ್ತೇನೆ, ನಿಮಗೇನು ಅದನ್ನ ಕಟ್ಟಕೊಂಡು ?” ಎಂದಳು.

“ಸಾಯೋದೇನೂ ಮಹಾ ಹೆಚ್ಚುಗಾರಿಕೆಯಲ್ಲ; ಅಪ್ಪಿ ತಪ್ಪಿ ನಾವೇನೋ ಮನುಷ್ಯರಾಗಿ ಹುಟ್ಟಿದ್ದೀವಿ. ಹುಟ್ಟಿದಮೇಲೆ ಸಾಯೋದು ಖಂಡಿತ. ಹಾಗೇ ನಾವು ಆಗಾಗ ತಪ್ಪುಗಳನ್ನು ಮಾಡೋದೂ ಇನ್ನಷ್ಟು ಖಂಡಿತ. ಆದರೆ ಒಂದು ಸಲ ತಪ್ಪಿದಾಕ್ಷಣಕ್ಕೆ ಪ್ರಪಂಚಾನೆ ಮುಳುಗಿಹೋಯ್ತೂಂತ ಹೋಗಿ ಪ್ರಾಣಾ ಕಳಕೊಳ್ಳೋದರಲ್ಲೇನೂ ಅರ್ಥವಿಲ್ಲ. ಎಡವಿ ಗಾಯವಾದರೆ, ವಿಧಿವಶಾತ್ ಆದ ಆ ಗಾಯಾನ ವಾಸಿ ಮಾಡಿಕೊಂಡು ಮತ್ತೆ ಎಡವದಹಾಗೆ ನಡೆಯೋದೇ ಬುದ್ಧಿ