ಈ ಪುಟವನ್ನು ಪ್ರಕಟಿಸಲಾಗಿದೆ

ಅನಂತರ ಮೂರ್ತಿ ಮನೆಗೆ ಬಂದಾಗ,ಕೊರಳು ಕೊಂಕಿಸಿ ತುಂಗಮ್ಮ

ಕೇಳಿದಳು.

"ಅಂತೂ ನೀವೇ ಸೋತಿರಿ ಕೊನೇಲಿ."

"ಅದೇನು?"

"ಅದೇನು-ಅಂದ್ರೆ? ಹಿಂದೆ ಬೆಟ್ಟದಷ್ಟು ದಕ್ಷಿಣೇನೋ ಮತ್ತೇನೋ

ಕೇಳದ್ರಂತಲ್ಲಾ ನಿಮ್ಮನೆಯವರು?"

"ಓ ಅದಾ ! ಬುದ್ಧಿ ಇಲ್ಲ ಅವರಿಗೆ"

"ಈಗ ನೀವೇನೂ ಕೇಳಲ್ವೆ ?"

ಮೂರ್ತಿ, ಬೀದಿಯಿಂದ ಮನೆಯ ಒಳ ಭಾಗವನ್ನು ಮರೆಮಾಡಿದ್ದ

ಬಾಗಿಲ ಕಡೆಗೆ ನೋಡಿದ.

"ಕೇಳ್ತೀನಿ. ಕೊಡ್ತಿ ತಾನೆ?"

ಆ ಸ್ವರದ ಉದ್ವೇಗವನ್ನು ತುಂಗಮ್ಮಗಮನಿಸಲಿಲ್ಲ.

"ನೀವೇನು ಕೇಳ್ತೀರಿ ಅನ್ನೋದು ನಂಗೊತ್ತು"

"ಏನು ಹೇಳು ?"

"ಅದೇ ಮಾಮೂಲಿಂದು."

ಮಾಮೂಲಿನದನ್ನು ಮೂರ್ತಿ ಪಡೆದುಕೊಂಡ.

"ಇಷ್ಟೇ ಅಲ್ಲ ತುಂಗಾ.."

ಹುಡುಗಿಗೆ ಭಯವಾಯಿತು. ಆಕೆ ದೂರ ಸರಿದಳು.

ನಾರಾಯಣ ಮೂರ್ತಿಯೂ ಸುಮ್ಮನಾದ.

ಟೈಂ-ಪೀಸು ಮಾತ್ರ ಟಕಿ ಟಕಿ ಟಕಿ ಎಂದು ಹೊತ್ತಿನ ಮೇಲೆ

ಸುತ್ತಿಗೆಯ ಹೊಡೆತ ಕೊಡುತಿತ್ತು.

"ನನ್ನ ಮೇಲೆ ನಂಬಿಕೆ ಇಲ್ವಾ ತುಂಗಾ?"

"ಯಾಕೆ ಹಾಗಂತೀರಿ?"

"ಮತ್ತೆ ?"

ಮತ್ತೆ ಭಯವಾಯಿತು ತುಂಗಮ್ಮನಿಗೆ ಉತ್ತರ ಹೊಳೆಯಲಿಲ್ಲ.

"ನಾಳೆ ನಾನು ರಜಾ ತಗೋತೀನಿ ತುಂಗ. ಆಫೀಸಿಗೆ

ಹೋಗಲ್ಲ"