ಈ ಪುಟವನ್ನು ಪ್ರಕಟಿಸಲಾಗಿದೆ

ಸರಸಮ್ಮನ ಆಫೀಸು ಕೊಠಡಿಯ ಪಕ್ಕದ ಕೋಣೆ ಸಾಮಾನ್ಯವಾಗಿ ಖಾಲಿಯಾಗಿಯೆ ಇರುತಿತ್ತು.ಅಲ್ಲಿ ಯಾರೂ ವಾಸಿಸುತ್ತಿರಲಿಲ್ಲ.ಆದರೆ ನೇಯ್ದ ಚಾಪೆ-ಬಟ್ಟೆಗಳನ್ನು,ಹುರಿಹಾಕಿದ ಹಗ್ಗಗಳನ್ನು,ಸಂಗೀತ ತರಗತಿಯ ಒಂದು ಹಾರ್ಮೋನಿಯಂ ಪೆಟ್ಟಗೆ ಮತ್ತು ತಂಬೂರಿಯನ್ನು ಅಲ್ಲಿಡುತಿದ್ದರು ಸಾಕಷ್ಟು ವಿಶಾಲವಾಗಿಯೆ ಇತ್ತು ಜಾಗ.ಆಫೀಸು ಕೊಠಡಿಯಲ್ಲಿ ಇದ್ದಂತೆ ಇಲ್ಲಿಯೂ ಅಂಥದೇ ಒಂದು ಕಿಟಕಿಯಿತ್ತು ಆ ಕಿಟಕಿಯಾಚೆ ಬಲಕ್ಕೆ ಕಾಣಿಸುತಿದ್ದುದು ವಿಸ್ತಾರವಾದ ಬಯಲು,ಜವುಗು ಪ್ರದೇಶ.

ಕಿಟಕಿಯಬಳಿ ನಿಂತು ತುಂಗಮ್ಮ ನಿರ್ವಿಕಾರ ಚಿತ್ತಳಾಗಿ ದೂರ ಬಲುದೂರಕ್ಕೆ ದೃಷ್ಟಿಹರಿಸಿದಾಗ ಜಲಜ ಕೇಳಿದಳು:

"ಜಾಗ ನೋಡೋಕೆ ಚೆನ್ನಾಗಿದೆ ಅಲ್ವಾ?"

"ಹೂಂ ಜಲಜ."

"ಆದರೆ ಜವುಗು.ಈಗೇನೋ ಪರ್ವಾಗಿಲ್ಲ.ಮಳೆ ಬಂದಾಗ ನೋಡ್ಬೇಕು.ದೊಡ್ಡ ಸಮುದ್ರವೇ!"

ತುಂಗಮ್ಮನಂತೆಯೇ ಜಲಜೆಯೂ ಸಮುದ್ರವನ್ನೆಂದೂ ನೋಡಿರಲಿಲ್ಲ.ಆದರೂ ಅದೊಂದು ವಿಶಾಲವಾದ ಜಲಾಶಯವೆಂದು ಆಕೆ ಕಲ್ಪಿಸಿಕೊಂಡಿದ್ದಳು.

ಆಕೆಯೆಂದಳು:

"ಒಮ್ಮೆ ಏನಾಯ್ತೂಂತ!"

"ಹುಂ?"

"ಹೋದವರ್ಷ ಒಂದುರಾತ್ರೆ ಪೋಲೀಸ್ನೋರು ಒಬ್ಬ ಹುಡುಗೀನ ಕರಕೊಂಡು ಬಂದ್ರು.ನಡುರಾತ್ರೀಲಿ ಆಕೆ ಬೀದಿ ಅಲೀತಿದ್ಲಂತೆ.