ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೪೭

ಧಾಮ?.... ತನ್ನ ವಿದ್ಯಾಭ್ಯಾಸವನ್ನು ಕುರಿತು ಜಲಜ ಪ್ರಶ್ನಿಸುತಿದ್ದಾಳೆ....

“ಓದು ನಾಲ್ಕು ವರ್ಷದ ಹಿಂದೆಯೇ ನಿಲ್ಲಿಸಿದೆ ಜಲಜ.”

“ಯಾವ ಕ್ಲಾಸ್ನಲ್ಲಿ ?”

"ಫೋರ್, ಫಾರಂನಲ್ಲಿ. ಆ ವರ್ಷ ನಮ್ಮಕ್ಕನ ಮದುವೆಯಾಯ್ತು, ಆ ಮೇಲೆ ಸ್ಕೂಲು ಬಿಟ್ಟಿದ್ದೆ.”

ಅವರಕ್ಕ-ಅಕ್ಕನ ಮದುವೆ. ..ತುಂಗಮ್ಮನಿಗಿಂತ ದೊಡ್ಡವಳಾದ, ಆದರೆ ತುಂಗಮ್ಮನ ಹಾಗೆಯೇ ಇರುವ ಇನ್ನೊಂದು ಜೀವವನ್ನು ಕಲ್ಪಿಸಿಕೊ೦ಡಳು ಜಲಜ. ಮದುವೆಯಾದ ಅಕ್ಕ.... ಮಕ್ಕಳೂ ಇರಬಹುದು ಆ ದಂಪತಿಗಳಿಗೆ. ಆದರೆ ಈ ತುಂಗಮ್ಮ ಇಲ್ಲಿ.....

ಅಕ್ಕನ ಮಾತು ಬಂತೆಂದು ತುಂಗಮ್ಮನ ಮುಖ ಕಪ್ಪಗಾಯಿತು. ಜಲಜಳೂ ಅದನ್ನು ಗಮನಿಸಿದಳು. ಕಹಿ ವಾತಾವರಣಕ್ಕೆ ತಾನು ಕಾರಣಳಾಗಬಾರದೆಂಬ ಅಸ್ಪಷ್ಟ ಯೋಚನೆಯೊಂದು ಅವಳನ್ನು ಕಾಡಿತು. ಉದ್ದೇಶಪೂರ್ವಕವಾಗಿಯೇ ಆಕೆ ಸ್ವವಿಚಾರವೆತ್ತಿದಳು.

“ನಾನು ಎಷ್ಟು ಓದಿರಬಹುದು ಹೇಳಿ ?”

“ನೀವು ?”

“ಹೂಂ. ಹೇಳಿ ನೋಡೋಣ.”

ತುಂಗಮ್ಮ ಎದ್ದು ಕುಳಿತಳು ಆ ಪ್ರಶ್ನೆಗೆ ಸಮರ್ಪಕ ಉತ್ತರಕೊಡಲಾರದೆ ಸೋಲನ್ನೊಪ್ಪಿ ಕೊಳ್ಳಲು ಆಕೆ ಸಿದ್ಧಳಿರಲಿಲ್ಲ. ಆ ಹುಡುಗಿ ಜಲಜ ...ಸೊಬಗಿನ ಆ ಮುಗ್ಧ ರೂಪ....ಎಷ್ಟು ಓದಿರಬಹುದು ಆಕೆ ?ಆ ಸ್ಪಷ್ಟ ಪಡೋಚ್ಚಾರ, ಸಂಸ್ಕಾರದ ನಡೆ-ವಿನಯ....

ಕಾಲೇಜಿಗೆ ಹೋಗಿದೀರಿ ಅಲ್ವೆ?”

ಅಳುಕುತ್ತ ಹಾಗೆ ಅಂದಳು ತುಂಗಮ್ಮ, ಅದಕ್ಕೆ ಉತ್ತರರೂಪವಾಗಿ ದೊರೆತುದು ಹೃದಯ ಅರಳಿಸುವ, ನಾಭಿಯಿಂದಲೆ ಹೊರಟ, ನಗು.

ಜಲಜ ಕಾಲೇಜಿಗೆ ಹೋಗಿರಲಾರಳೆಂಬುದು ಸ್ಪಷ್ಟವಾಯಿತು. ಆದರೆ, ತನ್ನ ತಪ್ಪು ಉತ್ತರ ಕೇಳಿ ಅಷ್ಟೊಂದು ನಗಬೇಕೆ?

"ಪ್ರೈಮರಿ ಸ್ಕೂಲು ಮಡ್ಡಮ್ಮ ಕಣ್ರೇ ನಾನು....ಹೊ....ಹ್ಹೋ!"