ಈ ಪುಟವನ್ನು ಪರಿಶೀಲಿಸಲಾಗಿದೆ

ಯೋಚನೆ ಅವಳ ತಲೆ ತಿನ್ನುತ್ತಿತು. ಆಗ ಆಕೆ ಅಧೀರಳಾಗುತ್ತಿದ್ದಳು. ಬೆವರುತ್ತಿತ್ತು ಮೈ. ಆ ಒಂದು ದಿನವೆಲ್ಲ ಸುಂದರಮ್ಮ ಅಮ್ಮಿಯ ಮನೆಗೆ ಬರಲೇ ಇಲ್ಲ. " "ಬನೂ ಬಂದ್ಬಿಟ್ಟು ಹೋಗೆ," ಎಂಬ ಪರಿಚಯ ಧ್ವನಿಯೂ ಅಮ್ಮಿಗೆ ಕೇಳಿಸಲಿಲ್ಲ.

ಮರುದಿನ ಸುಂದರಮ್ಮ ಸಿಹಿತಿಂಡಿಗಳ ದೊಡ್ಡ ಪೊಟ್ಟಣವನ್ನೆತ್ತಿಕೊಂಡು ಬಂದಳು.

ಒಳ್ಳೆಯ ಸುದ್ದಿ ಮತ್ತು ಸಿಹಿ ತಿಂಡಿ...ಬದುಕಿನಲ್ಲಿ ಅವೆರಡಕ್ಕೂ ಸಂಬಂಧವಿತ್ತು.... ಬನ ಶಂಕರಿಯ ಜೀವನದಲ್ಲಿ ಅಂತಹ ಪ್ರಕರಣ ಆಗಿರಲೇ ಇಲ್ಲ, ಆದರೆ ಈಗ–ಈಗ? ಸಿಹಿತಿಂಡಿ ಬಂದಿತ್ತು-ಶುಭವಾರ್ತೆ ಇಲ್ಲದೆಯೇ ಬಂದಿತು. ಸುಂದರಮ್ಮ ಹೇಳಿದುದಿಷ್ಟೆ; "ಒಬ್ಬಿಬ್ಬರಿಗೆ ಹೇಳಿದಾರಂತೆ ಕಣೇ...ಆದರೆ ಅದು ಸುಲಭದ ವಿಷಯವಲ್ಲ ನೋಡು .ಇನ್ನೂ ಪ್ರಯತ್ನ ಮಾಡಿ ನೋಡೋಣಾಂತಂದ್ರು...." ....ಅದೇನೂ ಸುಲಭದ ವಿಷಯವಾಗಿರಲಿಲ್ಲ.....ನಿಜ....ಆ ಕಾರಣಕ್ಕಾಗಿಯೇ ನಿರಾಶೆಯನ್ನುಂಟುಮಾಡುವ ಉತ್ತರ ಬಂದಿತ್ತು...ಆ ಉತ್ತರದಿಂದ ತನ್ನ ಆತ್ಮೀಯ ಗೆಳತಿಗೆ ನೋವಾಗಬಾರದೆಂದು ಸುಂದರಮ್ಮ ಇನ್ನೂ ನಡೆಯಬೇಕಾಗಿರುವ ಪ್ರಯತ್ನದ ಮಾತನಾಡಿದ್ದಳು. ಅಲ್ಲದೆ ತನ್ನ ಅಪೇಕ್ಷೆ ಅಷ್ಟು ಬೇಗನೆ ವಿಫಲವಾಯಿತೆಂದು ಒಪ್ಪಿಕೊಳ್ಳುವುದಕ್ಕೂ ಸುಂದರಮ್ಮ ಸಿದ್ಧಳಿರಲಿಲ್ಲ. ಬನಶಂಕರಿ ತಲೆಬಾಗಿಸಿ ಕುಳಿತಳು. "ದೇವರಿದಾನೆ, ನೋಡೋಣ," ಎಂದಳು ಸುಂದರಮ್ಮ. ಅದು ಆಕೆಯ ಕೊನೆಯ ರಕ್ಷಣೆಯ ಅಸ್ತ್ರ, ಎಲ್ಲರೂ ಆಡುವ ಕೊನೆಯ ಮಾತು. ಬೇರೆ ಉಪಾಯವಿಲ್ಲದೆ ಸುಂದರಮ್ಮ ಅದೇ ಮಾತನ್ನಾಡಿದಳು. ರಾಮಶಾಸ್ತ್ರಿ ಪ್ರಯತ್ನಗಳನ್ನೇನೊ ಮಾಡುತ್ತಲಿದ್ದ. ಸಮಿಾಪವೆ ಇದ್ದ ಹೊಲಗದ್ದೆಗಳಿಂದ ಆತನಿಗೆ ಒಂದಿಷ್ಟು ಉತ್ಪತ್ತಿಯಾಗುತ್ತಿತ್ತು. ದಕ್ಷಿಣೆ, ಪೌರೋಹಿತ್ಯಗಳೆಂದು ಒಂದಿಷ್ಟು ಮೇಲುಸಂಪಾದನೆಯಾಗುತ್ತಿತು, ಆದರೆ ಕಂಡುದನ್ನು ಕಂಡಂತೆ ಹೇಳುವ ವಕ್ರನಾಲಗೆಯಿಂದಾಗಿ ಆತನಿಗೆ ವೈರಿಗಳ ಸಂಪಾದನೆಯೂ ಆಗದೆ ಇರುತ್ತಿರಲಿಲ್ಲ. ಹೀಗಾಗಿ ಬಾಳೆಮಣ್ಣೂರಿನಲ್ಲಿ ರಾಮಶಾಸ್ತ್ರಿ ಬನಶಂಕರಿಯ ಮಾತೆತ್ತುವುದು ಸಾಧ್ಯವೇ ಇರಲಿಲ್ಲ.

  ಬೇರೆ ಊರುಗಳಲ್ಲಿ ಆತ ಮಾತೆತ್ತಿದನೆಂಬ ಸುದ್ದಿ ಮಾತ್ರ ಬಾಳೆಮಣ್ಣೂರಿಗೆ ಬಂತು. ಆ ಸುದ್ದಿಗೆ ರೆಕ್ಕೆ ಪಕ್ಕಗಳು ಹುಟ್ಟಿದುವು :ಊಹಾಪೋಹಗಳಾದುವು.
 " ಎಲಾ ಶಾಸ್ತ್ರಿ!" ಎಂದು ಕೆಲವರು ಬೆರಳನ್ನು ಮೂಗಿನ ಮೇಲೆ ಇಟ್ಟರು. 
" ಶಾಸ್ತ್ರಿ ಆ ವಿಧವೆಗೆ ಏನೋ ಮಾಡಿದಾನೆ. ಅದಕ್ಕೆ ಈ ಪೇಚಾಟ! " ಎಂದರು

ಹೆಚ್ಚು ಧೈರ್ಯವಿದ್ದವರು. ರಾಮಶಾಸ್ತ್ರಿಯ ದಿಟ್ಟತನವನ್ನು ಕಂಡು ಅಸೂಯಾಪರರಾದವರು ನಾಲಗೆಗೆ ಲಂಗು ಲಗಾಮಿಲ್ಲದೆ ಮಾತನಾಡಿದರು. ಹೆಂಗಸರು ಸುಂದರಮ್ಮನನ್ನು ಗೋಳು ಹುಯ್ದರು, ಇದೆಲ್ಲ ಪರಿಣಾಮವಾಗಿ, ವೈದಿಕಕ್ಕೆಂದು ರಾಮಶಾಸ್ತ್ರಿಗೆ ಬರುತ್ತಿದ್ದ ಆಹ್ವಾನಗಳು ಕಡಿಮೆಯಾದುವು.