ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ

"ಏಳಿ ಇಬ್ಬರು ನಮ್ಮನೆಗೇ ಬಂದ್ಬಿಡಿ. ಅಲ್ಲೇ ಮಲಕ್ಕೊಳ್ಳಿ."

ಆ ಮಾತಿಗೆ ಉತ್ತರ ಹೇಳುವುದರ ಬದಲು ಬನಶಂಕರಿ ಗಾಬರಿಯಿಂದಲೇ ಕೇಳಿದಳು.: 

" ಎಲ್ಲಕ್ಕ ನಿಮ್ಮವರು ಕಾಣ್ಸೋಲ್ಲ!" ಸುಂದರಮ್ಮ ಆ ವಾತಾವರಣದಲ್ಲೂ ವಿಚಿತ್ರವೆನಿಸುವ ಹಾಗೆ ಹಿತವಾಗಿ ನಕ್ಕಳು. " ಅವರು ಮನೆಗೆ ಬಂದಿದ್ರೆ ತಾನೆ?" ಎಂದಳು. ಸುಂದರಮ್ಮನ ಎದೆಗಾರಿಕೆಯನ್ನು ಕಂಡು ಅಜ್ಜಿ ಮೊಮ್ಮಗಳ ಹೃದಯಗಳು ಅರಳಿದುವು. ಆ ರಾತ್ರೆ ಏನೋ ಅಮ್ಮಿ ಅಜ್ಜಿಯೊಡನೆ ಸುಂದರಮ್ಮನ ಮನೆಯಲ್ಲಿ ನಿದ್ದೆಹೋದಳು. ಆದರೆ ರಾತ್ರೆಗಳು ಆ ಬಳಿಕ ಕೂಡಾ ಎಷ್ಟೋ ಇದ್ದುವಲ್ಲ? ಹಗಲು ರಾತ್ರೆಗಳೆರಡನ್ನೂ ಎಚ್ಚರದಿಂದ ಕಳೆಯಬೇಕಾದ ಪರಿಸ್ಥಿತಿ."ಬಾಗಿಲು"ಬಡಿದವನು ಅನಂತರ ಬಂದವನು ಒಬ್ಬ ಕುಡುಕ ಮಹಾನುಭಾವ. "ಆ ಸ್ವಾಮಿ ಆಗ್ಬೌದು.....ನಾನು ಆಗಾಕಿಲ್ವೊ ?" ಎಂದು ಆತ ಕಿರಿಚುತ್ತಿದ್ದ. ಆದರೆ ಈ ಸಲ ರಾಮಶಾಸ್ತ್ರಿ ಮನೆಯಲ್ಲಿದ್ದ. "ನಿನ್ನನ್ನು ಚೆನ್ನಾಗಿ ಥಳಿಸ್ತೀನಿ, ಆಗ್ಬೌದೊ?" ಎಂದು ಆತ ಕುಡುಕನನ್ನು ಕೇಳಿದ. "ಓ ಆಗ್ಬೌದು. ಥಳಿಸಿ ಬುದ್ದಿ!" ಕುಡುಕನಿಗೆ ಅಮಲೇರಿತ್ತು. ರಾಮಶಾಸ್ತ್ರಿ ಒಂದು ಸೌದೆ ಕೋಲು ತಂದು ಆ ವ್ಯಕ್ತಿಗೆ ಬಲವಾಗಿ ಬಾರಿಸಿದ. ಜುಟ್ಟು ಹಿಡಿದು ದರದರನೆ ಎಳೆದುಕೊಂಡು ಬೀದಿಯುದ್ದಕ್ಕೂ ಹೋದ. " ಚೆನ್ನಾಗಿ ಒಡೀರಿ ಬುದ್ದಿ, ನೀವಾಗ್ಲೆ ಅವಳ್ವತೇಲಿ ಮನಿಕೊಂಡು ಎದ್ದಿಟ್ರಿಂತ ನಾನ್ಬಂದೆ....ನಿಮ್ಮೆಲ್ಲ ಇನ್ನೂ ಆಗೇ ಇಲ್ವೇನೋ?" " ಥೂ! ಯಾವನೊ ನೀನು ಮುಠಾಳ? " ಎಂದು ಗದರಿಸುತ್ತ ರಾಮಶಾಸ್ತ್ರಿ, ದೂರ ಬೀದಿಯಬದಿಯಲ್ಲಿ ಆತನನು ಕೆಡವಿದ, ತುಳಿದ. ಅದಾದ ಸ್ವಲ್ಪ ದಿನಗಳಲ್ಲೆ ಒಂದು ಸಂಜೆ ರಾಮಶಾಸ್ತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಯಾರೋ ಪುಂಡರು ಅವನ ಮೇಲೆ ಬಿದ್ದರು. ಯಾರು ಎಂಬುದು ತಿಳಿಯದ ಹಾಗೆ ಹಿಂಬದಿಯಿಂದ ಬಂದು ಹೊಡೆದು ಓಡಿಹೋದರು. ತಲೆಗೂ ಕಾಲಿಗೂ ಒಂದಿಷ್ಟ ಗಾಯವಾಯಿತ್ತು.ರಕ್ತ ಸೋರಿತ್ತು ಸ್ವಲ್ಪ. ಅದು ಯಾಕೆ ಎಂಬುದು ರಾಮಶಾಸ್ತ್ರಿಗೆ ತಿಳಿದಿತ್ತು, ಸುಂದರಮ್ಮನಿಗೂ ತಿಳಿದಿತ್ತು. ಬನಶಂಕರಿಗೂ ಅದು ತಿಳಿಯುವುದು ಕಷ್ಟವಾಗಿರಲಿಲ್ಲ, ಮಠದ ಸ್ವಾಮಿಯಿಂದ ಹಿಡಿದು ಕುಡಿದ ಲಫಂಗನ ವರೆಗೆ, ಎಷ್ಟೊಂದು ಜನ ವಿರೋಧಿಗಳಿರಲಿಲ್ಲ ರಾಮಶಾಸ್ತ್ರಿಗೆ! ಬನಶಂಕರಿಯ ನಿಮಿತ್ತದಿಂದ ಎಷ್ಟೊಂದು ಜನ ಹೊಸ ವಿರೋಧಿಗಳನ್ನು ಆತ ಗಳಿಸಿಕೊಂಡಿರಲಿಲ್ಲ! ಹಾಗೆಂದು ರಾಮಶಾಸ್ತ್ರಿಯಾಗಲಿ ಸುಂದರಮ್ಮನಾಗಲಿ ಬನಶಂಕರಿಯ ಕೈ ಬಿಡುವುದು ಸಾಧ್ಯವಿತ್ತೆ? ತನಗೆ ಏನಾದರೂ ಸರಿಯೆ, ಆದರೆ ತನ್ನಿಂದಾಗಿ ಬೇರೆಯವರಿಗೆ ಹೀಗಾಯತಲ್ಲಾ,ಎಂದು ಆಕೆ ಸಂಕಟಪಟ್ಟಳು. ರಾಮಶಾಸ್ತ್ರಿಗಾದ ಗಾಯಗಳು ಗುಣವಾದುವು.