ಈ ಪುಟವನ್ನು ಪರಿಶೀಲಿಸಲಾಗಿದೆ

ಆದರೆ ಬನಶಂಕರಿಯ ಹೃದಯದ ಹುಣ್ಣಿನ ಮೇಲೆ ಕಾದ ಕಬ್ಬಿಣದಿಂದ ಎಳೆಯಲಾಗಿದ್ದ ಬರೆಗಳು ಹಸುರಾಗಿಯೇ ಉಳಿದಿದ್ದುವು.

ಅಂತಹ ಸನ್ನಿವೇಶದಲ್ಲಿ ಅಜ್ಜಿ ಕಾಹಿಲೆ ಬಿದ್ದಳು. ಹೊರಹೋಗುವುದಂತಿರಲಿ, ಮಲಗಿದ್ಫಲಿಂದ ಆಕೆ ಏಳುವುದೇ ದುಸ್ತರವಾಯಿತು. ಅಮ್ಮಿ ದೇವಸಾನಕ್ಕೆ ಹೋಗಿ ಸೇವೆ ಮಾಡಲಿಲ್ಲ, ಪ್ರಸಾದ ತರಲಿಲ್ಲ.

ಜೀವನಹಳ್ಳಿಯಲ್ಲಿ ಆಕೆಯದಾದ ಸ್ವಲ್ಪ ಹಣವಿತ್ತು, ಸುಂದರಮ್ಮನಿಗೆ ಹೇಳಿದ್ದರೆ, ಗಂಡನನ್ನು ಕಳುಹಿಸಿ ಅದನ್ನು ತರಿಸಿ ಕೊಡುತ್ತಿದ್ದಳೋ ಏನೋ. ಆದರೆ ಪುಂಡರು ರಾಮಶಾಸ್ತ್ರಿಯ ಮೇಲೆ ಕೈಮಾಡಿದ ಅನಂತರ ಅಂತಹ ಕೆಲಸವನ್ನೆಲ್ಲ ಆತನಿಗೆ ವಹಿಸಿಕೊಡಲು ಅಮ್ಮಿ ಅಪೇಕ್ಷಿಸಲಿಲ್ಲ.

ಸುಂದರಮ್ಮ ಅಕ್ಕಿ ಬೇಳೆ ಸಾಲ ಕೊಟ್ಟಳು. ಮನೆಯಲ್ಲಿ ಅಜ್ಜಿ ಕೂಡಿಹಾಕಿದ್ದ ಹಲ ಕೆಲವು ರೂಪಾಯಿಗಳೂ ಕರಗಿಹೋದುವು.

ಹೀಗೆ ಅಜ್ಜಿ ಮಲಗಿದಾಗೊಮ್ಮೆ, ಮಠದ ಸ್ವಾಮಿಗಳಿಂದ ಆಕೆಗೆ ಕರೆ ಬಂತು. “ಏನಪ್ಪ? ಈ ಮುದುಕಿಯಿಂದ ಆಗಬೇಕಾದ ಸೇವೆ ಇನ್ನೂ ಮುಗಿದಿಲ್ಲೋ?" ಎಂದು ಅಜ್ಜಿ ಕಹಿ ಮನಸ್ಸಿನಿಂದ ಅಂದಳು. ಮಠದ ದೂತನೆಂದ:

“ಯಾರಿಗೆ ಗೊತ್ತು ಸುಬ್ಬಕ್ಕ ? ಕಾಹಿಲೆ ಬಿದ್ದಿದ್ದೀಂತ ಸನ್ನಿಧಿಗೆ ನೀನು ಅರಿಕೆ ಮಾಡೋದಾದರೂ ಬೇಡ್ವೇನು? ನಿನ್ನ ಸಂಕಟ ಅವರಿಗಾದರೂ ಹ್ಯಾಗೆ ವೇದ್ಯವಾಗ್ವೇಕು ಹೇಳು."

ಮಾತು ಬೇಗನೆ ಮುಗಿಯಲೆಂದು ಬನಶಂಕರಿ, " ಈಗೇನಾಗ್ವೇಕು ? " ಎಂದು ಕೇಳಿದಳು

ಆ ದೂತ ಹುಬ್ಬು ಕುಣಿಸುತ್ತ, ಅಸಹ್ಯವಾಗಿ ನಗುತ್ತ, ಹಸಿದವನು ಒಂದೇ ಸಲ ಕಬಳಿಸ ಬಯಸುವನಂತೆ ಅಮ್ಮಿಯನ್ನು ನೋಡಿದ.

"ಹೆ-ಹೆ- ಆಂಥಾದೇನೂ ಇಲ್ಲ... ಅಜ್ಜಿಗೆ ಕಾಯಿಲೆ ಅನ್ನೋ ವಿಷಯ ಸ್ವಾಮಿಗ್ಳಿಗೆ ನೀನು ಬಂದು ಅರಿಕೆ ಮಾಡೋದು ಮೇಲೂಂತ... ಅಲ್ವೆ? ಯೋಚಿಸ್ತೋಡು."

"ಆಗಲಿ ಹೋಗಿ ನೀವಿನ್ನು," ಎಂದಳು ಅಜ್ಜಿ. ಆತನೇನೊ ಹೊರಟು ಹೋದ. ಅಮ್ಮಿ ಮರೆತರೆ, ಮತ್ತೆ ಬಂದು ನೆನಪು ಹುಟ್ಟಿಸುವ ಆಶ್ವಾಸನೆಯನ್ನಿತ್ತು ಹೋದ.

ಆದರೆ ಅಮ್ಮಿ ಅಲ್ಲಿಗೆ ಹೋಗಬಯಸಲಿಲ್ಲ. "ಬೇಡ" ವೆಂದು ಬಾಯಿ ಬಿಟ್ಟು ಹೇಳದಿದ್ದರೂ, " ಹೋಗು" ಎಂದು ಅಸ್ಪಷ್ಟವಾಗಿಯೂ ತೊದಲು ಮಾತು ಆ ನಾಲಗೆಯಿಂದ ಹೊರಬೀಳಲಿಲ್ಲ.

ಮಠದ ದೂತ ಮತ್ತೊಮ್ಮೆ ಬರುವ ವೇಳೆಗೆ ಅಜ್ಜಿಯ ದೇಹಸ್ಥಿತಿ ಉಲ್ಬಣವಾಗಿತ್ತು.