ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ "ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್ ಎದ್ದೇಬಿಟ್ಟ. ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: "ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." "ಅವರು ಆರೋಗ್ಯವಾಗಿದ್ದಾರಾ?" ಮಾಸ್ತರ ವಿಷಯದಲ್ಲಿ ಅತ್ಯಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್ ಚಕಿತನಾದ. "ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇ‍ರ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: "ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ." ..................... ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. ಕ್ರಮಬದ್ಧವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. ....ಸಂಘದ ಮುಂದೆ ಬೇರೆ ಹಲವು ಸಮಸ್ಯೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯಿತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.