ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ ವಿಧದ ಹಿಂಸೆಗೆ ವಿರೋಧಿಗಳು. ಈ ಶಿಕ್ಷಣ ದುರ್ಬಲರ ಮೇಲೆ ಕೈ ಮಾಡೋದಕ್ಕಲ್ಲ, ಇದು ಆತ್ಮರಕ್ಷಣೆಗೆ–ನ್ಯಾಯ ಸಾಧನೆಗೆ!"


ಜಮೀನ್ದಾರ ನಂಬಿಯಾರರು ಸರಕಾರಕ್ಕೆ ದೂರಿನ ಮೇಲೆ ದೂರು ಬರೆದೇ ಬರೆದರು:

"ಇಲ್ಲಿ ಕ್ರಾಂತಿಕಾರಿಗಳು ಜಮೆಯಾಗಿದ್ದಾರೆ. ಸರಕಾರದ ಭೂಮಿ ವಶಪಡಿಸಿಕೊಂಡಿದ್ದಾರೆ. ಸೈನ್ಯ ಕಟ್ಟಿದ್ದಾರೆ. ಪ್ರತಿಸರಕಾರ ಸ್ಥಾಪಿಸಿದ್ದಾರೆ. ಗೃಹಸ್ಥರು, ಹೆಂಗಸರು-ಮಕ್ಕಳು, ಇಲ್ಲಿ ಬದುಕೋದೇ ಕಷ್ಟವಾಗಿದೆ. ಇದರಿಂದ ಬ್ರಿಟಿಷ್ ಸಾಮಾಜ್ಯಕ್ಕೆ ಗಂಡಾಂತರ ಖಂಡಿತ. ಇಷ್ಟು ಬರೆದು ನನ್ನ ಕರ್ತವ್ಯ ನಾನು ಮಾಡುತ್ತಿದ್ದೇನೆ. ನೆನಪಿಡಿ!" ೧೫ ನಂಬಿಯಾರರೀಗ ಹಲ್ಲು ಮುರಿದ ಸಿಂಹ. ಮನೆಯೇ ಅವರಿಗೆ ಪಂಜರ. ನಂಬೂದಿರಿ, ಹುಡುಗರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆಂದು, ನೀಲೇಶ್ವರದಲ್ಲೇ ಮನೆ ಮಾಡಲು ನಿರ್ಧರಿಸಿದರು. ನಂಬಿಯಾರರು ಅದನ್ನು ಕೇಳಿ, "ಹುಡುಗರ ವಿದ್ಯಾಭ್ಯಾಸ ಬರೇ ನೆಪ. ಹೆದರ್‍ಕೊಂಡು ಓಡಿಹೋಗ್ತಿದ್ದಾನೆ ಥೂ!" ಎಂದರು. ಆದರೆ, "ನಾವೂ ಯಾಕೆ ನೀಲೇಶ್ವರಕ್ಕೆ ಹೋಗಬಾರದು?" ಎಂದು ತಮ್ಮ ಎರಡನೆಯ ಹೆಂಡತಿ ಹೇಳಿದಾಗ, 'ಯಾಕಾಗಬಾರದು? ಎಂದು ನಂಬಿಯಾರರೂ ಯೋಚಿಸಿದರು. ಮರುಕ್ಷಣವೇ ಆ ಯೋಚನೆಯನ್ನು ಬಿಟ್ಟು, "ನಾನು ಹೇಡಿಯಲ್ಲ! ಒಂದೋ ಈ ಮೃಗಗಳನ್ನು ಹಾದಿಗೆ ತರ್‍ತೇನೆ, ಇಲ್ಲವೆ ಇಲ್ಲೇ ಸಾಯ್ತೇನೆ!" ಎಂದು ಗುಡುಗಿದರು. ಅವರು ಬೇಟೆಯಾಡದೆಯೂ ಬಹಳ ದಿನಗಳಾಗಿದ್ದುವು, ನೂರಾರು ಜನ ರೈತರ ನೆರವಿನಿಂದ ತಾವು ಹುಲಿ ಷಿಕಾರಿ ಮಾಡುತ್ತಿದ್ದ ಗತವೈಭವದ ನೆನಪಾಗಿ ನಂಬಿಯಾರರಿಗೆ ಬಲು ಸಂಕಟವಾಯಿತು. ತಮ್ಮ ಜೋಡುನಳಿಗೆಯ ಬಂದೂಕವನ್ನೆತ್ತಿ, ಪ್ರೀತಿಯಿಂದ ಮುಟ್ಟಿ, ಅದನ್ನು ಸಜ್ಜುಗೊಳಿಸುವುದರಲ್ಲೇ ಬಹಳ ಹೊತ್ತು ಕಳೆದರು. ಹೆಣ್ಣಿನ ಷಿಕಾರಿಯೂ ಈಗಿರಲಿಲ್ಲ, ಮನೆ ಹೆಂಗಸರಲ್ಲದೆ ತಾವಿಟ್ಟುಕೊಂಡಿದ್ದ ಇಬ್ಬರಲ್ಲೇ ಅವರೀಗ ತೃಪ್ತಿ ಹೊಂದಬೇಕಾಗಿತ್ತು, ಆ ಕೃಷ್ಣನ್ ನಾಯರ್... ಪೈರು ಕಸಿದುಕೊಂಡಮೇಲೆ ಆತ ಮತ್ತೊಮ್ಮೆ ಸಾಲ ಕೇಳಲು ಬರಲಾರನೆಂದು ಕನಸಿನಲ್ಲಾದರೂ ಎಣಿಸುವುದು ಸಾಧ್ಯವಿತ್ತೆ? ಆ ಚಿರುಕಂಡ... ಎಂಟು ವರ್ಷಗಳ ಹಿಂದೆ ಅವನಪ್ಪನಿಂದ ಅವರು ಹೊಲ ವಷಪಡಿಸಿಕಂಡಿದ್ದರು.