ಈ ಪುಟವನ್ನು ಪರಿಶೀಲಿಸಲಾಗಿದೆ

ಸುನಂದಾ ಅಂದಳು :

     "ಇನ್ನು ಸ್ವಲ್ಪ ಹೊತ್ತು ಕಣೇ. ನಿನ್ನ ಸಂಕಟ ಪರಿಹಾರಕ್ಕೆ ವೆಂಕಟರಮಣ ಬಂದ್ಬಿಡ್ತಾನೆ."
     ಆದರೆ ತಂಗಿಯ ಕಣ್ಣಂಚಿನಲ್ಲಿ ಕಂಬನಿ ತುಳುಕಿತು. ತೋಳು ಅಸಹನೆಯಿಂದ ಅಕ್ಕನ ಕೊರಳು ಬಿಗಿಯಿತು.
     "ಎಂಥ ಮಾತಾಡ್ತಿ ಅಕ್ಕ?"
     ಎಷ್ತೊಂದು ಪ್ರಯಾಸದಿಂದ ಮನಸ್ಸಿನ ಸುತ್ತಲೂ ಪ್ರಾಕಾರಗಳನ್ನು ಕಟ್ಟಿದ್ದಳೂ ಸುನಂದಾ! ಅಷ್ತು ಮಾಡಿಯೂ ಆ ಯತ್ನ ವ್ಯರ್ಥವಾಯಿತು.
     ಸೋದರಿಯ ಒಲವಿಗೆ ಒಲವೇ ಉತ್ತರ. ಕಂಬನಿಗೆ ಪ್ರತ್ಯುತ್ತರ ಕಂಬನಿ. ಎರಡು ಜೀವಗಳ ಎರಡು ಭಾವಗಳ ಜೋಡಣೆಯನ್ನು ಸಾಧಿಸಿತು ಕ್ಷಣಕಾಲದ ಮೌನ.
     ಆ ಕ್ಷಣವೂ ಯುಗವೆಂದು ತೋರಿದ ಬಳಿಕ ಮಾತು.
     "ಹ್ಯಾಗಕ್ಕ ನಿನ್ನನ್ನು ಬಿಟ್ಟು ಹೋಗ್ಲಿ?"
     "ನನಗೇನಾಗಿದೇಂತ ಹೀಗಾಡ್ತೀಯ ವಿಜಯಾ??
     ಹಿಡಿತದಿಂದ ಅಕ್ಕನನ್ನು ಬಿಟ್ಟುಕೊಟ್ಟು ನಿಟ್ಟುಸಿರು ಬಿಟ್ಟು, ವಿಜಯಾ ಎದ್ದು ಕುಳಿತಳು. ಚದುರಿದ್ದ ತಲೆಗೂದಲನ್ನು ಎರಡು ಅಂಗೈಗಳಿಂದ ಹಿಂದಕ್ಕೆ ತಳ್ಳಿದಳು. ಮನಸ್ಸು ರೋಸಿ ನುಡಿಯಿತು.. ತಾನು ಅಕ್ಕನನ್ನು ಬಿಟ್ಟು ಹೋಗಲೇಬೇಕು ಹಾಗಾದರೆ ಹೋಗದೆ ಬೇರೇ ವಿಧಿಯೇ ಇಲ್ಲ.
     "ವಾರಕ್ಕೊಂದ್ಸಲ ಕಾಗದಾ ಬರೀತಾ ಇರ್ತೀಯಾ ಅಕ್ಕ?--ತಪ್ಪದೇ"
     "ಹೂಂ. ಬರೀತೀನಿ."
     "ಏನೇನಾಯ್ತೂಂತ ನಂಗೆ ತಿಳಿಸ್ಬೇಕು."
     "ಹೂಂ."
     ಪಕ್ಕದ ಹಾಸಿಗೆಯೆಡೆಗೆ ವಿಜಯಾ ದೃಷ್ಟಿ ಬೀರಿದಳು.
     "ಎಲ್ಲಕ್ಕ ಮಗು?"

ಅಕ್ಕನನ್ನು ಬಿಡುವುದು ಹೇಗೆ ಕಷ್ಟವೋ ಹಾಗೆಯೇ ಅಕ್ಕನ ಮಗುವನ್ನು ಬಿಟ್ಟಿರುವುದು ಕೂಡಾ.