ಈ ಪುಟವನ್ನು ಪರಿಶೀಲಿಸಲಾಗಿದೆ

ಸುನಂದಾ, ಸರಸ್ವತಿಯ ಉಡುಗೆಗಳಿದ್ದ ಪೆಟ್ಟಿಗೆಯ ಕಡೆಗೆ ಸಾಗಿದಂತೆ ವಿಜಯಾ ಮಗುವನ್ನೆತ್ತಿಕೊಂಡಳು.

      "ಎಲ್ಲಿ ಉಮ್ಮ ಕೊಡೂ", ಎಂದಳು.
      ಮಗು ಪ್ರೀತಿಯಿಂದ ಚಿಕ್ಕಮ್ಮನಿಗೆ ಉಮ್ಮ ಕೊಟ್ಟಿತು.
      "ಉಮ್ಮ ಕೊಡುವವರು ಬರೋತನಕ ಇನ್ನೆರಡು ನಿಮಿಷ ಕಾಯೋಕೆ ಆಗಲ್ವೇನೋ", ಎಂದು ಸುನಂದಾ ನಕ್ಕಳು..
      ಅಷ್ಟರಲ್ಲೆ ಜಟಕಾ ಮನೆಯ ಎದುರು ಬಂದು ನಿಂತ ಸದ್ದಾಯಿತು.
      "ಗಾಡಿ ಬಂತು ಕಣ್ರೀ". ಸುನಂದೆಯ ತಾಯಿ ಕರೆದು ಹೇಳಿದರು.
      "ವಿಜಯಾ, ಬಿಂದಿಗೆ ಬಿಸಿನೀರು ತಗೋ", ಎಂದು ಅವರೇ ನಿರ್ದೇಶನವನ್ನಿತ್ತರು.


      ಆರಾಮ ಕುರ್ಚಿ ಬೇಡವೆಂದು ಜಮಖಾನದ ಮೇಲೆಯೇ ದಿಂಬಿಗೊರಗಿ ಕುಳಿತ ಅಳಿಯ ದೇವರನ್ನೊಮ್ಮೆ ಬಾಗಿಲ ಬಳಿ ನಿಂತು ನೋಡಿ ಸುನಂದಾ ಅಡುಗೆಮನೆಯಲ್ಲಿ ಅವಿತಿದ್ದ ವಿಜಯಳೆಡೆಗೆ ಬಂದಳು.
      ಬರುತ್ತ,"ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು". ಎಂದು ಗುಣಗುಣಿಸಿ ನಕ್ಕಳು.
      ಆಕೆಯ ತಾಯಿಗೆ ಹಾಡಿನ್ ಆ ಸಾಲು ಮೋಜೆನಿಸಿತು.
      "ರಾತ್ರಿ ಎಲ್ಲಿಂದ್ಬಂತೆ? ಬೆಳಗಾಗಿತ್ತೋಂತ ಹೇಳು," ಎಂದು ತಮ್ಮ ಹಾಸ್ಯೋಕ್ತಿಗೆ ಅವರು ಹಿರಿಯ ಮಗಳನ್ನು ನೋಡಿದರು,
      "ಕೊನೇಲಿ ರಾಯರಿಗೇನಾಗುತ್ತೆ ಗೊತ್ತೆ ಅಮ್ಮ?" ಎಂದಳು ಸುನಂದಾ. ತುಂಟ ನಗೆ ಧ್ವಜ ನೆಟ್ಟಿತ್ತು ಆಕೆಯ ಮುಖದ ಮೇಲೆ.