ಈ ಪುಟವನ್ನು ಪರಿಶೀಲಿಸಲಾಗಿದೆ

ಮೈಲಿಗೆಯ ವ್ಯತ್ಯಾಸವೇ ಇಲ್ಲದವನೆಂದು ಅತ್ತೆ ಮಾವ ತನ್ನನ್ನು ಟೀಕಿಸಬಹುದೆಂಬ ಭಯ. ಬದಲು ಕಾಫಿ ಮೊದಲಾಗಲಿ--ಎಂದರೆ ಕೈ ಹಿಡಿದವಳ ಮುಖವನ್ನಾದರೂ ಈಗಲೇ ಕಾಣಬಹುದೆಂಬ ಆಸೆ. ನಿಂತೇ ಇದ್ದಳು ಆಕೆ. ತಾನು ಏನಾದರೂ ಉತ್ತರ ಕೊಡಬೇಕು..

     ಆತನ ತೊಳಲಾಟವನ್ನು ಗಮನಿಸಿದ ಸುನಂದಾ ಅಂದಳು :
     "ತಿಂಡಿ ಸ್ನಾನವಾದ ಮೇಲೆ ತಗೊಳುವಿರಂತೆ; ಕಾಫಿ ಮೊದಲೇ ಆಗಲಿ-- ಆಗದೆ?"
     "ನಿಮ್ಮಿಷ್ಟ" ಎಂದ ವೆಂಕಟರಾಮಯ್ಯ. ಸಮಸ್ಯೆಯನ್ನು ಬಗೆಹರಿಸಿಕೊಟ್ಟುದಕ್ಕೆ ಮನಸಿನಲ್ಲೆ ಸುನಂದೆಗೆ ಧನ್ಯವಾದವನ್ನರ್ಪಿಸುತ್ತ.
     " ನೀವು ಆ ಕೊಠಡಿಗೆ ಹೋಗಿ ಕಾಫಿ ತರ್ತೀನಿ."
     ಕೊಠಡಿಗೆ ಹೋಗಬೇಕೆಂಬ ಸೂಚನೆ ಯೋಗ್ಯವಾಗಿತ್ತು. ಬಯಲಿನಂತಹ ನಡುಮನೆಗಿಂತ, ಕೊಠಡಿಯ ಏಕಾಂತವೇ ಪ್ರಿಯಕರ. ಆದರೆ 'ಕಾಫಿ ತರ್ತೀನಿ' ಎನ್ನುವ ಮಾತಿಗೆ ಏನರ್ಥ? 'ಕಾಫಿ ಕಳಿಸ್ತೀನಿ' ಎನ್ನಬಾರದಾಗಿತ್ತೆ?
     ವೆಂಕಟರಾಮಯ್ಯನಿಗೆ ಈಗ ರೇಗಿತು. ಮೆಲ್ಲನೆದ್ದು ಆತ ಕೊಠಡಿಯ ಕಡೆಗೆ ನಡೆದ ಅಲ್ಲೊಂದು ಕಿಟಕಿಯಿತ್ತು. ತನಗೆ ಪರಿಚಿತವಾದ ಪ್ರಿಯವಾದ ಕೊಠಡಿ-ಕಿಟಕಿ. ಇಂದಿನ ಸಿಡುಕನ್ನು ಕರಗಿಸುತ್ತಿದ್ದ ಹಿಂದಿನ ನೆನಪನ್ನು ಸವಿಯುತ್ತ, ಬೀದಿಯನ್ನು ದಿಟ್ಟಿಸುತ್ತ, ಆತ ನಿಂತ.
     ಅದು ಬಲು ದೀರ್ಘವೆಂದು ಕಂಡ ಒಂದೆರಡು ನಿಮಿಷ..
     ಬಳೆಗಳ ಸದ್ದಾಯಿತು, ತನ್ನಾಕೆಯೇ ಇರಬಹುದೆಂಬ ಆಸೆ, ಇರಲಾರಳೆಂಬ ಬೀತಿಯೊಡನೆ ಸೆಣೆಸಾಡಿತು.
     ಮತ್ತೆ ಬಳೆಗಳ ಸದ್ದು. ವೆಂಕಟರಾಮಯ್ಯ ತಿರುಗಿ ನೋಡಲೇ ಇಲ್ಲ.
     "ಕಾಫಿ ಆರ್ಹೋಗುತ್ತೆ."
     ಸರಕ್ಕನೆ ತಿರುಗಿದ ಮನೆಯಳಿಯ, ಕಾಫಿಲೋಟದೊಡನೆ ಬಂದಿದ್ದ ತನ್ನಾಕೆಯನ್ನು ದಿಟ್ಟಿಸಿದ. ಅಂತೂ ಬಂದಳು ಪುಣ್ಯವಂತೆ!
     "ವಿಜಯಾ!"
     ಅರೆಬಿರಿದ ಮುಗುಳುನಗೆ, ಚಂಚಲವಾದ ನೋಟ.... ಮರುಕ್ಷಣ ದೃಷ್ಟಿಯನ್ನು ನೆಲದೆಡೆಗೆ ಎಳೆಯುತ್ತಿದ್ದ ಲಜ್ಜೆ....