ಈ ಪುಟವನ್ನು ಪರಿಶೀಲಿಸಲಾಗಿದೆ

xii

ಮುನ್ನುಡಿ

ಒಂದು ಛಂದೋಗತಿಯಲ್ಲಿ ಹರಿಯುವ ಪದಪುಂಜಗಳಿಂದ ಒಂದು ಬಗೆಯಲ್ಲಿ ಸಂಯೋಜಿತವಾದ ಜೀವನ ಚಿತ್ರಗಳನ್ನೂ ರೂಪಕಗಳನ್ನೂ ವ್ಯಕ್ತಗೊಳಿಸುತ್ತಾ ಭಾವ ಪ್ರಪಂಚಗಳನ್ನು ನಿರ್ಮಿಸುವುದು ಕಾವ್ಯ ಕಾಲಕಾಲಕ್ಕೆ ಈ ಛಂದೋಗತಿ, ಈ ಜೀವನಚಿತ್ರ ಸಂಯೋಜನೆಯ ಕ್ರಮ ಬದಲಾಯಿಸುತ್ತ ಹೋಗುವುದು ಅತ್ಯಂತ ಅವಶ್ಯಕ. ಬರದುದನ್ನು ಅಳಿಸಿ ಅದರ ಮೇಲೆ ಇನ್ನೊಮ್ಮೆ ಬರದರ ಹೇಗೆ ಬರವಣಿಗೆ ಅಸ್ಪಷ್ಟವಾಗುವುದೋ ಹಾಗೇ ಮುದಿಯಾದ ಸಂಪ್ರದಾಯದ ಮಾರ್ಗವನ್ನನುಸರಿಸಿ ಬರದರ ಭಾವಗಳು ಮಸುಕು ಮಸುಕಾಗುತ್ತವೆ. ಕ್ರಾಂತಿಕಾರಿಯಾದ ಕವಿ ಆ ಹಾಳೆಯನ್ನು ಮಗುಚಿ ಇನ್ನೊಂದು ಹಾಳೆಯ ಮೇಲೆ ಬರೆಯಬೇಕಾಗುತ್ತದೆ. ಕಾವ್ಯವಾರ್ಗಗಳು ಹುಟ್ಟಿ ಸಾಯುತ್ತಿರುವುದರಿ೦ದಲೇ ಕಾವ್ಯ ಚಿರಂಜೀವಿಯಾಗಿರುವುದು. ಹೀಗೆ ತನ್ನ ಆಂತರಿಕ ಧರ್ಮದಿಂದಲೇ ಕಾವ್ಯ ಕ್ರಾಂತಿಪಥವನ್ನು ತುಳಿಯುತ್ತಿರುತ್ತದೆ.

ಅಲ್ಲದೆ ಕಾಲದೇಶ ವರ್ತಮಾನ ಗಳಿಗನುಸಾರವಾಗಿ ಜೀವನ ಬದಲಾಯಿಸುವಂತೆ ಜೀವನಕ್ಕೆ ಆದರ್ಶವನ್ನು ಹಿಡಿಯುವ ಕಾವ್ಯವೂ ಬದಲಾಯಿಸಬೇಕಾಗುತ್ತದೆ. ಒಂದೊಂದು ಕಾಲದಲ್ಲಿ ಒಂದೊಂದು ಬಗೆಯಾಗಿ ಮನುಷ್ಯ ಚಿಂತಿಸುತ್ತಾನೆ, ಭಾವಿಸುತ್ತಾನೆ. ಜೀವನದ ಹೊರ ವ್ಯಯ ವ್ಯತ್ಯಸ್ತವಾಗುತ್ತಿರುತ್ತದೆ. ಗತಜೀವನದ ಒಳಹೊರಗನ್ನು ವ್ಯಕ್ತಗೊಳಿಸಲು ಶಕ್ತವಾದ ಒಂದು ಕಾವ್ಯಮಾರ್ಗ ಆಧುನಿಕ ಜೀವನದ ರೂಪಾಂತರಗಳನ್ನು ಚಿತ್ರಿಸಲು ಅಸಮರ್ಥವಾಗುತ್ತದೆ. ಒಂದೊಂದು ಕಾಲಕ್ಕೂ ಒಂದೊಂದು ವೈಶಿಷ್ಟ್ಯವಿದೆ. ಆ ವೈಶಿಷ್ಟ್ಯಕ್ಕೆ ತಕ್ಕ ಶೈಲಿಯನ್ನು ಕ್ರಾಂತಿಕಾರಿ ಕವಿ ರಚಿಸುತ್ತಾನೆ. ಆ ಶೈಲಿಯಲ್ಲಿ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿಕೊಂಡು ಆ ಕಾಲದ ಒಬ್ಬೊಬ್ಬ ಕವಿಯೂ ತನ್ನ ತನ್ನ ವೈಶಿಷ್ಟ್ಯವನ್ನು ವ್ಯಕ್ತಪಡಿಸುತ್ತಾನೆ. ಹೀಗೆ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿಕೊಳ್ಳಲು ಸಾಧ್ಯವಿರುವವರೆಗೂ ಈ ಹೊಸ ಸಂಪ್ರದಾಯ ನಿಲ್ಲುತ್ತದೆ. ಕಾಲ ಬದಲಾಯಿಸಿದಾಗ ಹೊಸತಾದ ಭಾವಗಳನ್ನು, ಚಿಂತನೆಗಳನ್ನು ರೂಪಿಸಲು ಮಹತ್ವದ ಬದಲಾವಣೆಯನ್ನೇ ಕಾವ್ಯಮಾರ್ಗದಲ್ಲಿ ಮಾಡಬೇಕಾಗುತ್ತದೆ. ಹೀಗೆ ಕಾಲಕಾಲಕ್ಕೆ ಪುನಃ ಮುನರ್ಜಾಯಮಾನವಾಗಿ ಕಾವ್ಯ ನವೋನವವಾಗುತ್ತದೆ.

ಮೊದಲಿನ ಮಹಾಯುದ್ಧವಾದ ಮೇಲೆ ಕನ್ನಡ ಸಾಹಿತ್ಯದಲ್ಲಿ ಒಂದು