ಈ ಪುಟವನ್ನು ಪ್ರಕಟಿಸಲಾಗಿದೆ
ಶಾಪಪ್ರದಾನ
೧೧೧

ವಿಜಾಪುರದವರು ನಮ್ಮ ಮಿತ್ರರೆನಿಸಿಕೊಳ್ಳುತ್ತಿದ್ದರೂ, ಅವರು ಅಹ್ಮದನಗರದವರೊಡನೆ ಒಕ್ಕಟ್ಟು ಬೆಳೆಸಿ, ಕಾರ್ಯಸಾಧನ ನಡೆಸುತ್ತಿರುವರೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿರುತ್ತದೆ. ಆ ಸುದ್ದಿಗೆ ಇದೊಂದು ಪ್ರತ್ಯಕ್ಷ ಸಾಕ್ಷಿಯಾಗಿರುವಂತೆ ನನಗೆ ತೋರುವದು. ಹೀಗೆ ಹೆಂಗಸರನ್ನು ಕಳಿಸುವ ನೆವದಿಂದ ಇಲ್ಲಿಯ ಸರದಾರರು ಅಲ್ಲಿಗೆ ಹೋಗಿ, ಅಲ್ಲಿಯ ಸರದಾರರು ಇಲ್ಲಿಗೆ ಬಂದು ಗುಪ್ತ ಸುದ್ದಿಯನ್ನು ತಿಳಿಸುತ್ತಿರುವರು ಇವರಲ್ಲಿ ಕಾಗದಪತ್ರಗಳೇನಾದರೂ ಇರುತ್ತವೆಯೋ ಹ್ಯಾಗೆಯೆಂಬದನ್ನು ಪರೀಕ್ಷಿಸಿ, ಆಮೇಲೆ ಬಿಟ್ಟುಬಿಡೋಣ. ಇಂಥ ಜನರನ್ನು ಇಟ್ಟುಕೊಂಡು ನಾವು ಮಾಡುವದೇನು ?” ಅನ್ನಲು, ತನ್ನನ್ನು ಉದ್ದೇಶಿಸಿ ನುಡಿದ ಈ ಮಾತುಗಳನ್ನು ಕೇಳಿ ರಣಮಸ್ತಖಾನನ ಕಣ್ಣುಗಳು ಕೆಂಡದಂತಾದವು. ಅಷ್ಟರಲ್ಲಿ ಎಲ್ಲ ಜನರನ್ನು ಒಳಗೆ ಕರಕೊಂಡು ಬಂದರು. ಅವರಲ್ಲಿ ಸ್ತ್ರೀಯರೂ ಇದ್ದರು.

ರಾಮರಾಜನು ರಣಮಸ್ತಖಾನನಿಗೆ ಮತ್ತೊಮ್ಮೆ- “ತಾವು ಇಲ್ಲಿ ಕುಳಿತು ಕೊಳ್ಳಿರಿ. ಎಲ್ಲ ವಿಚಾರವು ತಮ್ಮ ಸಮಕ್ಷಮ ಆಗುವದು” ಎಂದು ಹೇಳಿ, ತನ್ನ ಬಲಗಡೆ ಇದ್ದ ಸ್ಥಳದಲ್ಲಿ ಕುಳಿತುಕೊಳ್ಳಲಿಕ್ಕೆ ಕೈಯಿಂದ ತೋರಿಸಿದನು. ಆದರೆ ರಣಮಸ್ತಖಾನನಿಗೆ ಅದೂ ಒಂದು ಅಪಮಾನದ ಸಂಗತಿಯಾಗಿಯೇ ತೋರಿತು. ತಮ್ಮ ಸ್ತ್ರೀಯರನ್ನು ದರ್ಬಾರದಲ್ಲಿ ಕರತರಬೇಡಿರೆಂದು ತಾನು ಹೇಳಿದ್ದನ್ನು ನಿರಾಕರಿಸಿದ್ದಕ್ಕಾಗಿ ರಣಮಸ್ತಖಾನನಿಗೆ ಪರಮಾವಧಿ ಸಂತಾಪವಾಯಿತು. ಆತನಲ್ಲಿ ಸಾಮರ್ಥ್ಯವಿದ್ದರೆ, ರಾಮರಾಜನನ್ನು ಅದೇ ಕ್ಷಣದಲ್ಲಿ ನಿಲ್ಲಿಸಿ ಸುಡಿಸಲಿಕ್ಕೆ ಅಪ್ಪಣೆ ಕೊಡುತ್ತಿದ್ದನು; ಆದರೆ ಸದ್ಯಕ್ಕೆ ಆತನು ತನ್ನ ತುಟಿಗಳನ್ನು ತಾನೇ ಕಡಕೊಳ್ಳುತ್ತ ಸುಮ್ಮನೆ ನಿಂತುಕೊಳ್ಳಬೇಕಾಯಿತು. ಆಮೇಲೆ ರಾಮರಾಜನು ರಣಮಸ್ತಖಾನನ ಕಡೆಗೆ ವಿಶೇಷ ಲಕ್ಷಗೊಡಲಿಲ್ಲ. ಆತನು ತನ್ನ ಜನರನ್ನು ಕುರಿತು- “ಈ ಹಿಡಿದು ತಂದ ಜನರ ಮುಖ್ಯರು ಯಾರು ?” ಎಂದು ಕೇಳಿದನು. ಆಗ ಪಾಳಯಗಾರರಲ್ಲಿ ಮುಖ್ಯನಾದವನು ಮುಂದಕ್ಕೆ ಬಂದು ಮಹಾರಾಜ. ಇವರ ಮುಖ್ಯಸ್ಥನಿದ್ದವನು ಹೊಡೆದಾಟದಲ್ಲಿ ಮರಣ ಹೊಂದಿದನು. ಇವರಿಗೆ ನಾವು ಮೊದಲು ಒಳ್ಳೆಯ ಮಾತಿನಿಂದ ಹೇಳಿದೆವು; ನೀವು ನಮ್ಮ ಸಂಗಡ ಏನೂ ಮಾತಾಡಬೇಡಿರಿ ; ಬಡಿದಾಟ-ಹೊಡದಾಟ ಮಾಡಬೇಡಿರಿ; ನಮ್ಮ ಮಹಾರಾಜರ ಬಳಿಗೆ ಕರಕೊಂಡು ಹೋಗುವೆವು ; ಹೇಳಿಕೊಳ್ಳುವದನ್ನು ನೀವು ಇಲ್ಲಿ ಹೇಳಿಕೊಳ್ಳಿರಿ ; ಎಂದು ಪರಿಪರಿಯಾಗಿ ಹೇಳಿದೆವು ; ಆದರೆ ನಮ್ಮ ಮಾತನ್ನು ಅವರು ಕೇಳಲಿಲ್ಲ. ಒಮ್ಮೆಲೆ ಕತ್ತಿಗಳನ್ನು ಹಿರಿದು ನಮ್ಮಮೈಮೇಲೆ ಬಂದರು.