ಈ ಪುಟವನ್ನು ಪ್ರಕಟಿಸಲಾಗಿದೆ

ಹೊಟ್ಟೆನೋವು, ತಲೆನೋವು, ಸೊಂಟದಲ್ಲಿ ನೋವು, ಆತಂಕ, ಬೇಸರ, ಸಿಟ್ಟು, ಅನಾಸಕ್ತಿ, ಒಂಟಿತನದ ಜೀವನ, ಮಂಕುತನ, ನಿಷ್ಕ್ರಿಯತೆ ಸಾಮಾನ್ಯ ತೊಂದರೆಗಳು.

2. ಹೆರಿಗೆ ನಂತರದ ಖಿನ್ನತೆ: ಹೆರಿಗೆಯಾಗಿದೆ. ಆರೋಗ್ಯವಂತ ಮಗು ಹುಟ್ಟಿದೆ. ಗಂಡುಮಗು ಆಗಿದೆ. ಆದರೆ ತಾಯಿ ಖಿನ್ನತೆಗೆ ಒಳಗಾಗಬಹುದು, ಇನ್ನು ಹೆರಿಗೆ ಕಷ್ಟವಾಯಿತು, ಮಗು ಆರೋಗ್ಯವಾಗಿಲ್ಲ; ಅಂಗವೈಫಲ್ಯವಿದೆ, ಹೆಣ್ಣು ಮಗು, ಗಂಡ, ಅತ್ತೆಮನೆಯವರು ನೋಡಲು ಬಂದಿಲ್ಲ. ಸಮೀಪವಿದ್ದು ಆರೈಕೆ ಮಾಡುವವರಿಲ್ಲ. ಆಗ ಈ ಖಿನ್ನತೆ ಹೆಚ್ಚುತ್ತದೆ. ಬಾಣಂತಿ ತನ್ನ ಮತ್ತು ಮಗುವಿನ ಬೇಕು ಬೇಡಗಳನ್ನು ಗಮನಿಸದಿರಬಹುದು. ದುಃಖದಿಂದ ಕಣ್ಣೀರು ಹಾಕಬಹುದು. ನಾನೇಕೆ ಗರ್ಭಿಣಿಯಾದೆ? ಏಕೆ ಮಗುವನ್ನು ಹೆತ್ತೆ? ಹೆರಬಾರದಿತ್ತೆನಿಸಬಹುದು. ಈ ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಅಲ್ಪಮಟ್ಟದಿಂದ ತೀವ್ರಮಟ್ಟದವರೆಗೆ ಇರಬಹುದು.

3. ಋತುಬಂಧದ ಖಿನ್ನತೆ: ಸಾಕಷ್ಟು ಮಹಿಳೆಯರು ಋತುಬಂಧ ವಾಗುವ ಸುತ್ತಮುತ್ತಲಿನ ಅವಧಿಯಲ್ಲಿ ಹಲವಾರು ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗುತ್ತಾರೆ. ಈಸ್ಟೋಜನ್ ಪೊಜೆಸ್ಟರೋನ್ ಸ್ಥಗಿತಗೊಳ್ಳುವುದರ ಜೊತೆಗೆ ಅನೇಕ ಮನೋಸಾಮಾಜಿಕ ಅಂಶಗಳು ಖಿನ್ನತೆಗೆ ಕಾರಣ ವಾಗುತ್ತವೆ. ವಯಸ್ಸಾಯಿತು ಮೊದಲಿನ ದೈಹಿಕ ಸೌಂದರ್ಯವಿಲ್ಲ, ಆಕರ್ಷಣೆಯಿಲ್ಲ, ಸ್ತನಗಳು ಜೋಲು ಬಿದ್ದಿವೆ. ಲೈಂಗಿಕ ಆಸಕ್ತಿ ಕಡಿಮೆ ಯಾಗಿದೆ. ಸಂಭೋಗ ಕಷ್ಟವಾಗುತ್ತಿದೆ. (ಯೋನಿ ರಸ ಉತ್ಪತ್ತಿಯಾಗದೆ ಯೋನಿ ಒಣಗಿದಂತಿದ್ದು ಸಂಭೋಗ ನೋವುಂಟು ಮಾಡುತ್ತದೆ.) ಆದರೆ ಗಂಡನ ಲೈಂಗಿಕ ಆಸಕ್ತಿ ಮೊದಲಿನಂತೆ ಇದೆ. ಹೀಗಾಗಿ ಆತ ತನ್ನಲ್ಲಿ ಆಕರ್ಷಣೆಯನ್ನು ಕಳೆದುಕೊಳ್ಳಬಹುದು. ಅಥವಾ ಆತನಿಗೆ ಹೆಂಡತಿಯಾಗಿ ಲೈಂಗಿಕ ಸುಖವನ್ನು ನೀಡುವುದರಲ್ಲಿ ನಾನು ವಿಫಲಳಾಗುತ್ತಿದ್ದೇನೆ. ಬೆಳೆದ ಮಕ್ಕಳು ತನ್ನಿಂದ ದೂರವಾಗುತ್ತಿದ್ದಾರೆ. ತಮ್ಮದೇ ಆದ ಪ್ರಪಂಚದಲ್ಲಿದ್ದು ತನ್ನನ್ನು ಮರೆಯುತ್ತಿದ್ದಾರೆ. ಗಂಡು ಮಕ್ಕಳಿಗೆ ತಾನು ಬೇಡವಾಗುತ್ತಿದ್ದೇನೆ.


ಖಿನ್ನತೆ: ಬನ್ನಿ ನಿವಾರಿಸೋಣ / 17