ಈ ಪುಟವನ್ನು ಪ್ರಕಟಿಸಲಾಗಿದೆ
  • ಒಂಟಿಯಾಗಿರಬೇಡಿ: ಮನೆಯವರ, ಆತ್ಮೀಯರ ಜೊತೆ ಇರಿ. ನಿಮ್ಮೊಡನೆ ನಿಮ್ಮ ಇಷ್ಟದೈವ ಇದೆ. ಆ ದೇವರ ಶ್ರೀರಕ್ಷೆ ನಿಮಗಿದೆ ಎಂದು ಭಾವಿಸಿ.
  • ಏನಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ: ಎಂದಿನ ನಿತ್ಯ ಚಟುವಟಿಕೆಗಳ ಜೊತೆಗೆ ಮನಸ್ಸಿಗೆ ಹಿತ-ಆನಂದ ಕೊಡಬಲ್ಲ ನಿಮಗಿಷ್ಟವಾದ ಸಂಗೀತ ಕೇಳಿ, ಪುಸ್ತಕ ಓದಿ, ಮನೆಯಲ್ಲಿರುವ ನಿಮ್ಮ ಕುಟುಂಬ-ಪ್ರವಾಸದ ಅಲ್ಬಂ ನೋಡಿ, ಮನೆಯವರೊಂದಿಗೆ ಮಕ್ಕಳೊಂದಿಗೆ ಆಟವಾಡಿ, ವಾಕಿಂಗ್ ಹೋಗಿ ಬನ್ನಿ, ಪಾರ್ಕ್ ಅಥವಾ ದೇವಸ್ಥಾನದ ಆವರಣದಲ್ಲಿ ಕುಳಿತುಕೊಳ್ಳಿ, ಅಲ್ಲಿನ ವಾತಾವರಣ ಚೇತೋಹಾರಿಯಾಗಿರುತ್ತದೆ.
  • ನಿರಾಶೆಯನ್ನು, ನಕಾರಾತ್ಮಕ ಆಲೋಚನೆಯನ್ನು ಕಿತ್ತೊಗೆಯಿರಿ: ಒಳ್ಳೆಯದಾಗುತ್ತದೆ. ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಬದಲಾವಣೆ ಸಾಧ್ಯವಿದೆ, ಜಯ ಸಿಗುತ್ತದೆ. ಜನ ನಿಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಸ್ವಲ್ಪ ಕಾಯಬೇಕಷ್ಟೆ ಎಂದುಕೊಳ್ಳಿ. 'ಲೋಕದೊಳಗೆ ಹುಟ್ಟಿದ ಬಳಿಕ ಸ್ಥಿತಿ ನಿಂದೆಗಳು ಬಂದಡೆ ಮನದಲ್ಲಿ ಭಯ ನಿರಾಶೆ ತಾಳದೆ ಸಮಾಧಾನಿಯಾಗಿರಬೇಕು' ಎಂಬ ಅಕ್ಕ ಮಹಾದೇವಿಯ ವಚನವನ್ನು ನೆನೆಯಿರಿ.
  • ನಿಮ್ಮ ಇಷ್ಟದೇವರನ್ನು ನೆನೆಯಿರಿ: ಮನಸ್ಸಿನಲ್ಲೇ ಪೂಜೆ, ಪ್ರಾರ್ಥನೆ ಮಾಡಿ, ಕೈಹಿಡಿದು ನಡೆಸೆನ್ನನು ಎಂದು ಕೇಳಿಕೊಳ್ಳಿ. "ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವವನು ಇದಕೆ ಸಂಶಯವಿಲ್ಲ" ಎಂಬ ಕನಕದಾಸರ ಕೀರ್ತನೆಯನ್ನು ಹಾಡಿಕೊಳ್ಳಿ.
  • ಇತರರ ಅನುಚಿತ ವರ್ತನೆ-ಮಾತುಗಳು ನಿಮ್ಮನ್ನು ಘಾಸಿಗೊಳಿಸಿದ್ದರೆ, ನಿಮಗೆ ಅಪಮಾನ ಮಾಡಿದ್ದರೆ, ಅವರನ್ನು ಕ್ಷಮಿಸಿಬಿಡಿ, ಅವರು ಮಾಡಿದ ಕರ್ಮ, ಅವರೇ ಅದರ ಫಲವನ್ನು ಅನುಭವಿಸುತ್ತಾರೆ ಬಿಡಿ.

ಖಿನ್ನತೆ: ಬನ್ನಿ ನಿವಾರಿಸೋಣ / 35