Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ಪುಟ

ಪ್ರಸ್ತಾವನೆ.


ಬಂಧವಿಮೋಚನಕ್ಕೆ ಅತ್ಯಂತ ಅವಶ್ಯವಾಗಿರುವ ಮನಶ್ಶುದ್ಡಿಯನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬುದನ್ನೂ, ಮನಸ್ಸಿನ ಧರ್ಮಗಳಾವೆ೦ಬದನ್ನೂ, ಅದರ ಸಂಯಮನದ ಕ್ರಮವನ್ನೂ ತಿಳಿಸುವುದಕ್ಕಾಗಿ ಈ ಚಿಕ್ಕ ಪ್ರಬಂಧವನ್ನು ಉಪನಿಷದಾದಿಗಳ ಆಧಾರದಿಂದ ನಮ್ಮ ಶಾಸ್ತ್ರಿಗಳು ಬಹು ಶ್ರಮಪಟ್ಟು ಬರೆದಿರುತ್ತಾರೆ. ಇಂದ್ರಿಯಗಳ ಬಲಶಾಲಿತ್ವವೂ, ವಿಷಯಗಳ ಪ್ರಭಾವವೂ ಇದರಲ್ಲಿ ಚೆನ್ನಾಗಿ ವರ್ಣಿಸಲ್ಪಟ್ಟಿರುವವು. ಒಟ್ಟಿಗೆ ಈ ಪುಸ್ತಕವನ್ನು ಓದುವುದರಿಂದ ವಾಚಕರಿಗೆ ಹಲವು ಹೊಸವಿಷಯಗಳ ಜ್ಞಾನವು ಆಗಿ, ಅವರ ಆತ್ಮಹಿತದ ಯತ್ನಕ್ಕೆ ಬಹುಮಟ್ಟಿಗೆ ಸಹಾಯವಾಗುವುದೆಂದು ನಾವು ನಂಬುತ್ತೇವೆ.

ಆತ್ಮನ ಬಂಧವಿಮೋಚನವಂತು ಇರಲಿ, ಸದ್ಯದ ಕಠಿಣಕಾಲದಲ್ಲಿ

ಪಾಠಶಾಲೆಯ ಬಂಧವಿಮೋಚನವು ಈ ಮೂರುಪುಸ್ತಕಗಳ ಪ್ರಸಿದ್ದೀಕರಣದಿಂದ ಆದಂತಾಗಿರುವುದು ಬಹು ಸಂತೋಷದ ಸಂಗತಿಯು! ಈ ಸಂತೋಷಕ್ಕೆ ನಮ್ಮ ಶ್ರೀಮಂತ ಯಶವಂತರಾವಜಠಾರ ಬಿ. ಎ., ಎಲ್, ಎಲ್, ಬಿ. ಈ ಮಹನೀಯರ ಉದಾರಾಶ್ರಯವೂ, ನಮ್ಮ ಪ್ರಿಯ ವಿದ್ಯಾರ್ಥಿಗಳಾದ ಚಿ!! ಶಂಕರ ಜೋಶಿ ತಿಳವಳ್ಳಿ, ಹಾಗು ಚಿ!! ರಾಮಭಟ್ಟ ಮುಳಗುಂದ ಮೊದಲಾದ ಎಲ್ಲ ವಿದ್ಯಾರ್ಥಿಗಳ ಪರಿಶ್ರಮವೂ ಕಾರಣವಾಗಿರುವುದರಿಂದ ಇವರೆಲ್ಲರ ವಿಷಯವಾಗಿ ನಾವು ಅತ್ಯಂತ ಕೃತಜ್ಞರಾಗಿರುವೆವು.

ಕಟ್ಟಕಡೆಯಲ್ಲಿ ನಮ್ಮ ಹಾವೇರಿಯ ಪ್ರಮುಖಸಾವುಕಾರ ಕೈ' ವಾ.

ಹಣಮ೦ತನಾಯಕ ಬಾದಾಮಿ ಇವರ ಮನೆತನದ ವಹಿವಾಟದಾರರಾದ ಮ, ರಾ ರಾ, ಜೀವಣ್ಣ ಕುಲಕರ್ಣಿ ಗುತ್ತಲ, ಹಾಗು ಪ್ರಸಿದ್ಧ ವಕೀಲರಾದ ಮ, ರಾ, ರಾ. ಮೋರೋಪಂ ಅಭ್ಯಂಕರ ಈ ಉಭಯ ಉದಾರಸಸಗ್ರುಹಸ್ಟರು ಪದೇಪದೇ ದ್ರವ್ಯಸಹಾಯಮಾಡಿ ಪಾಠಶಾಲೆಯ ಬಂಧವಿಮೋಚನ ಮಾಡಿದ್ದನ್ನು ಕೃತಜ್ಞತಾಪೂರ್ವಕವಾಗಿ ನಾವು ಉಲ್ಲೇಖಿಸದೆ ಇರಲಾರೆವು! ಶ್ರೀಗುರುವು ಇವರೆಲ್ಲರ ಕಲ್ಯಾಣವಮಾಡಲಿ!

ಸುರಸಗ್ರಂಥಮಾಲಾ ಹಾವೇರಿ.

ಕನ್ನಡಿಗರ ಸೇವಕ , ೧೮೪೧ ಚೈತ್ರ ವದ್ಯ ೫ } ನೇ ತಿ. ಕುಲಕರಣಿ (ಗಳಗನಾಥ)

ಬ೦ಧವಿಮೋಚನ

೧ ನೆಯ ಪ್ರಕರಣ – ಮನಸ್ಸು

मनएव मनुष्याणां कारणं बंधमोक्षयोः ।।

बंधाय विषयासक्तं मुक्यै निर्विषय॑स्मृतं ।। १ ||

-ब्रझ, वेदूपनिषत.

ಸೃಷ್ಟಪದಾರ್ಥಗಳಲ್ಲಿ ಮನಸ್ಸೆಂಬ ತತ್ವವು ಮಹತ್ತರವಾದದ್ದು , ಮೇಲಿನ ಉಪ

ನಿಷದ್ವಾಕ್ಯದಂತೆ ಅದು ಬಂಧಮೋಕ್ಷ್ಗಗಳೆರಡಕ್ಕೂ ಕಾರಣವಾಗಿರುವದರಮೇಲಿಂದಾದರೂ ಅದರ ಗೌರವವು ಚೆನ್ನಾಗಿ ವ್ಯಕ್ತವಾಗುತ್ತದೆ. ಮನುಷ್ಯ ಮಾತ್ರರಲ್ಲಿ ಮನಸ್ಸಿನ ವ್ಯಾಪಾರದ ಪ್ರಭಾವವನ್ನರಿಯದವರು ಯಾರಿರುವರು? ಪಂಡಿತರಿಂದ ಪಾಮರರವರೆಗೆ ಎಲ್ಲರೂ ಮನಸ್ಸಿನ ಎಳತಕ್ಕೆ ಒಳಗಾಗಿರುವರು. ಆದರೆ ಜ್ಞಾನಿಗಳು ಮಾತ್ರ ಮನಸ್ಸಿನ ಸ್ವರೂಪವನ್ನು ವಿಚಾರಿಸಿ , ಅದನ್ನು ಸ್ವಾಧೀನಪಡಿಸಿಕೊಂಡಿರುವರು ; ಮತ್ತು ಮನಸ್ಸು ಯಾವ ಸ್ಥಿತಿಯಲ್ಲಿ ಬಂಧಕ್ಕೆ ಕಾರಣವಾಗುವದು, ಯಾವಸ್ಥಿತಿಯಲ್ಲಿ ಮೋಕ್ಷಕ್ಕೆ ಕಾರಣವಾಗುವದು , ಎಂಬದನ್ನು ಕುರಿತು ಸ್ವಾನುಭವದಿಂದ ಹೇಳಿರುವರು. ಈ ಮಾತು ಎಲ್ಲರಿಗೂ ಗೊತ್ತಿರುವುದು ಹಿತಕರವಾಗಿರುವುದರಿಂದ, ಮನಸ್ಸನ್ನು ಕುರಿತು ಕೆಲವು ಸಂಗತಿಗಳನ್ನು ಶಾಸ್ತ್ರ ಸಮ್ಮತವಾಗಿ ಯಥಾಮತಿ ಬರೆಯಲುಪಕ್ರಮಿಸಿರುತ್ತೇವೆ ; ನಮ್ಮ ಬರಹವು ಅನುಭವವನ್ನು ತೀರ ಬಿಟ್ಟಿರಲಾರದೆಂಬುದನ್ನು ವಾಚಕರಿಗೆ ನಾವು ತಿಳಿಸು ವೆವು. ಮನಸ್ಸನ್ನು ಕುರಿತು ಬರೆಯಲಿಕ್ಕೆ ಮನೋಜಯಮಾಡಿದ ಮಹಾತ್ಮರೇ ಮುಖ್ಯಾಧಿಕಾರಿಗಳಾಗಿದ್ದರೂ, ಮನಸ್ಸಿನ ಮಂಗಚೇಷ್ಟೆಗಳನ್ನು ವರ್ಣಿಸಲಿಕ್ಕೆ, ಮನಸ್ಸಿಗಧೀ ನರಾದವರೇ ಅನುಭವದದೃಷ್ಟಿ ಯಿಂ ದ ಯೋಗ್ಯಾಧಿಕಾರಿಗಳಾಗಿರುತ್ತಾರೆ. ತಾತ್ಪರ್ಯ ವಿಷ್ಟೇ, ಮುಖ್ಯವಾಗಿ ನಮ್ಮಲೇಖದಲ್ಲಿ ನಾವು ಜ್ಞಾನಿಗಳ ಮತವನ್ನು ಉಲ್ಲೇಖಿಸುವೆವಲ್ಲದೆ, ಪ್ರಸಂಗವಿಶೇಷದಲ್ಲಿ ಮನಸ್ಸಿನ ಮಂಗಚೇಷ್ಟೆಗಳನ್ನಾದರೂ ಅನುಭವದಿಂದ ಹೇಳುವೆವು.

ದೇಹವೆಂಬುದೊಂದು ರಾಜಧಾನಿಯು; ಜೀವಾತ್ಮನೆಂಬವನೇ ಅಲ್ಲಿಯ ಅರಸನು;

ಮನಸ್ಸು ಆತನ ಮಂತ್ರಿಯು; ಪಂಚಪ್ರಾಣಗಳು ದ್ವಾರಪಾಲಕರು; ಜ್ನಾನೇಂದ್ರಿಯಕರ್ಮಂದ್ರಿಯಗಳೇ ಆತನ ಪರಿಚಾರಕರು. ಇವರೆಲ್ಲರೂಕೂಡಿ ಆ ದೇಹದೊಡೆಯನಾದ ಜೀವಾತ್ಮನಿಗೆ ವಿವಿಧಉಪಭೋಗ್ಯವಿಷಯಗಳನ್ನು ಸಂಪಾದಿಸಿಕೊಡುತ್ತಾರೆ. ಆ ವಿಷಯಗಳ ಉಪಭೋಗದಿಂದ ಜೀವಾತ್ಮನಿಗೆ ಸುಖದುಃಖಗಳಾಗುತ್ತವೆಂಬುದು ಅನುಭವಸಿದ್ದ ಮಾತಾಗಿರುತ್ತದೆ. ಮೂಲತಃ ಜೀವಾತ್ಮನು ಸ್ವತಂತ್ರನು, ಆನಂದಸ್ವರೂಪನು; ಆದರೆ, “ಜಾಲಿಯಬಿತ್ತಿ ಕಾಲಿಗೆಮೂಲ ಮಾಡಿಕೊಂಡಂತೆ" , ಆತನು ಮೇಲೆ ಹೇಳಿದ ತನ್ನ ಪರಿವಾ 

--೨--

ರದ ಆಧೀನನಾಗಿ ಸ್ವಾತಂತ್ರಸುಖವನ್ನು ಮರೆತು ಬಿಟ್ಟಿದ್ದರಿಂದ, ಪಾರತಂತ್ರ್ಯದ ಬಗೆ ಬಗೆಯ ಕಾಲ್ಪನಿಕ ಸುಖದುಃಖಗಳ ಜಗ್ಗಾಟಕ್ಕೆ ಗುರಿಯಾಗಿ ನೆರಳಬೇಕಾಗಿದೆ. ಜೀವಾತ್ಮನ ಪರಿವಾರದಲ್ಲಿ ಅನ್ಯರ ಸ್ವಾತಂತ್ರವನ್ನು ಅಪಹರಿಸುವ ದುಷ್ಟಚಾಳಿಯ ಸಂಬಂಧದಿಂದ ಮನಸ್ಸು ಮಿಗಿಲಾದದ್ದು, ಅದು ತನ್ನ ಕೈಕೆಳಗಿನ ಇಂದ್ರಿಯಾದಿಗಳ ಸ್ವಾತಂತ್ರವನ್ನಷ್ಟೇ ಅಲ್ಲ, ದೇಹದೊಡೆಯನಾದ ಜೀವಾತ್ಮನ ಸ್ವಾತಂತ್ರವನ್ನೇ ಕಸಿದುಕೊಂಡು, ಕರಮರಿತಿಂದು ಹೆಬ್ಬುಲಿಯಾದಂತೆ, ಎಲ್ಲರನ್ನೂ ಮೀರಿನಿಂತು ಅನಿಯಂತ್ರಿತಾಧಿಕಾರದಿಂದ ಜೀವಾತ್ಮನ ಕುಲಗುರುವಾದ ವಿವೇಕನೆಂಬಾತನ ಆಟವನ್ನು ಸಹ ನಡೆಯಗೊಡದೆ, ಅನರ್ಥ ಪರಂಪರೆಯನ್ನುಂಟುಮಾಡುವುದು; ಆದರೆ ಊರುಸುಟ್ಟರೂ ಹನುಮಪ್ಪನು ಹೊರಗೆ” ಎನ್ನುವಂತೆ, ತಾನು ಯಾವದಕ್ಕೂ ಸಿಲುಕದೆಯಿರುವದು ! ಇಂಥ ವೀಕ್ಷಣವಾದ ಮನಸ್ಸಿನ ಸ್ವರೂಪವೇನು ? ಅದರ ಸಾಮರ್ಥ್ಯವೆಷ್ಟು ? ತನ್ನ ಪರಿವಾರದೊಡನೆ ಅದರಬಳಿಕೆಯು ಹ್ಯಾಗಾಗುವದು ? ಮನೋಜಯಮಾಡುವ ಬಗೆಯೇನು ? ಇತ್ಯಾದಿ ವಿಷಯಗಳನ್ನು ಕುರಿತು ಆಲೋಚಿಸುವುದು ಅವಶ್ಯವಾಗಿರುತ್ತದೆ.

ಈ ಪ್ರಕರಣದಲ್ಲಿ ಮನಸ್ಸಿನಸ್ವರೂಪವನ್ನು ಮುಖ್ಯವಾಗಿ ವರ್ಣಿಸಬೇಕಾಗಿದೆ;

ಆದ್ದರಿಂದ ಮನಸ್ಸೆಂದರೇನು ? ಅದರ ಸ್ವಭಾವವೆಂತಹದು ? ಅದರ ಕರ್ತೃತ್ವಶಕ್ತಿ ಎಷ್ಟು ? ಎಂಬುದನ್ನು ಕುರಿತು ಕ್ರಮವಾಗಿ ಆಲೋಚಿಸುವೆವು, "ಮನು-(ಅವಳೊ ಧನೇ)” ಎಂಬ ಧಾತುವಿನಿಂದ ಸಿದ್ಧವಾದ "ಮನಸ್ಸೆಂ"ಬ ಶಬ್ದವು , ತಿಳುಕೊಳ್ಳುವಶಕ್ತಿಯುಳ್ಳದ್ದೊಂದು ವಸ್ತುವೆಂಬ ಅರ್ಥವನ್ನು ಬೋಧಿಸುತ್ತದೆ ; ಆದರೆ ಈ ಮನಸ್ಸೆಂಬ ವಸ್ತುವಿನ ರೂಪವನ್ನು ಮಾತ್ರ ವರ್ಣಿಸುವುದು ಶಕ್ಯವಲ್ಲ ; ಯಾಕಂದರೆ ಮನಸ್ಸಿಗೆ ಸ್ವತಂತ್ರ ಆಕಾರವೇಇಲ್ಲ. ವ್ಯವಹಾರದಲ್ಲಿ ಪ್ರವಾಹಿರೂಪ-ವಾಯುರೂಪ ಪದಾರ್ಥಗಳಿಗೆ ಸ್ವತಂತ್ರವಾದ ಆಕಾರವಿಲ್ಲೆ೦ದು ಹೇಳುದುದುಂಟು ; ಯಾಕಂದರೆ ಅವನ್ನು ಒಳಕೊಳ್ಳುವಪದಾರ್ಥಗಳ ಅವಕಾಶಗಳ ಆಕಾರದಂತೆ ಅವುಗಳ ಆಕಾರವಾಗುತ್ತದೆ; ಆದರೆ ತೇಜೋಮಯವಾದ ಮನಸ್ಸಿನಸ್ವರೂಪವು ಇದಕ್ಕೂ ವಿಲಕ್ಷಣವಾಗಿರುವುದು; ಯಾಕಂದರೆ ಮನಸ್ಸಿನಆಕಾರವು, ಅದಕ್ಕೆ ಗ್ರಾಹ್ಯವಾದ ಪದಾರ್ಥದಂತೆ ಆಗಿಹೋಗುತ್ತದೆ; ಅಂದರೆ ಮನಸ್ಸು ಆಯಾಪದಾರ್ಥರೂಪವಾಗಿ ಹೋಗುತ್ತದೆ. ಈ ಸಂಬಂಧದಿಂದ “ವೇದಾಂತಪರಿಭಾಷೆ”ಎಂಬಗ್ರಂಥದಲ್ಲಿ -" ಯಥಾ ತಡಾಗೋದಕಂ ಛಿದ್ರಾನ್ನಿರ್ಗತ್ಯ, ಕುಲ್ಯಾತ್ಮನಾ ಕೇದಾರಾನೆ: ಪ್ರವಿಶ್ಯ, ತದ್ವದೇವ ಚತುಷ್ಕೋಣಾದ್ಯಾಕಾರ೦ ಭವತಿ | ತದ್ವತ್ತೀಜಮಪ್ಯ೦ತಃಕರಣ೦ ಚಕ್ಷುರಾದಿದ್ವಾರಾ ನಿರ್ಗತ್ಯ ಘಟಾದಿ ವಿಷಯದೇಶಂ ಗತ್ವಾ ತದಾಕಾರತಯಾ ಪರಿಣಮತೇ ಸ ಏವ ಪರಿಣಾಮೋ ವೃತ್ತಿರಿತ್ಯುಚ್ಯತೆ” ಅಂದರೆ, ಒಂದು ಕೆರೆಯನೀರು ತುಂಬಿನಿಂದ ಹೊರಟು ಕಾಲುವೆಯೊಳಗಿಂದ ಹೊಲಕ್ಕೆಹೋಗಿ ,ಅಲ್ಲಿ ನಾಲ್ಕೂ ಮೋಲೆ ಸಮನಾಗಿ ನಿಂತುಕೊಂಡು ಹೊಲದ ಆಕಾರವನ್ನೇ ಹೊಂದುವುದು . ಇದೇ ಮೇರೆಗೆ ತೇಜೋಮಯವಾದ ಮನಸ್ಸಾದರೂ ಕಣ್ಣು ಮುಂತಾದ ದ್ವಾರಗಳಿಂದ ಹೊರ ಬಿದ್ದು ಗ್ರಾಹ್ಯಪದಾರ್ಥಗಳಿಗೆ ಸಂಬಂಧಿಸಿ ತದಾಕಾರವನ್ನೇ ಹೊಂದುತ್ತದೆ. ಇದಕ್ಕೆ

--೩--

ಮನಸ್ಸಿನ ವೃತ್ತಿಯೆಂದು ಹೇಳಿರುತ್ತದೆ ; ಅಂದಬಳಿಕ ಇಂಥ ಮನಸ್ಸಿನ ರೂಪವನ್ನು ಹೀಗೆಯೇ ಎಂದು ಹ್ಯಾಗೆನಿರ್ಧರಿಸಬೇಕು? ಹೀಗೆ ಮನಸ್ಸು ಮಣಸಿದ ಮಣಿಯುವ ಗುಣವುಳ್ಳದ್ದಾದ್ದರಿಂದಲೇ ಅದು ದುಷ್ಯಸಂಗದಿಂದ ಜೀವಾತ್ಮ ನಬಂಧನಕ್ಕೂ , ಸತ್ಯಂಗ ದಿಂದ ಜೀವಾತ್ಮನಮೋಕ್ಷಕ್ಕೂ ಕಾರಣವಾಗುತ್ತದೆಂದು, ಅಂದರೆ ಉಪನಿಷದ್ವಾಕ್ಯದಂತೆ, ಮನಸ್ಸು ಬಂಧ-ಮೋಕ್ಷಗಳೆರಡಕ್ಕೂ ಕಾರಣವಾಗುತ್ತದೆಂದು ಹೇಳಬೇಕಾಗುತ್ತದೆ.

ಇನ್ನು, ಮನಸ್ಸಿನ ಸ್ವಭಾವವನ್ನು ಕುರಿತು ವಿಚಾರಿಸುವಾ. ಇದರ ಸ್ವಭಾ

ವವು-೧ಚಂಚಲ, ಮತ್ತು ೨ ನಿರ್ಲಿಪ್ತ. ಇವುಗಳಲ್ಲಿ ಮನಸ್ಸಿನ ಚಂಚಲಸ್ವಭಾವವು ಬಹುಪ್ರಸಿದ್ದವಾಗಿರುವದು. ಮನಸ್ಸು ಒಂದು ಸ್ಥಳದಲ್ಲಿ ಕ್ಷಣಮಾತ್ರವೂ ನಿಲ್ಲುವದಿಲ್ಲ; ಬಾಲ ಸುಟ್ಟ ಬೆಕ್ಕಿನ ಹಾಗೆ ಸಮಾಧಾನವಿಲ್ಲದೆ ಅತ್ತಿತ್ತ ತಿರುಗಾಡುತ್ತಲೇ ಇರುವದು. ಇದಕ್ಕೆ ಹೊಸಹೊಸ ಪದಾರ್ಥಗಳ ಮೇಲೆ ಪ್ರೀತಿಒಹಳ; ಮತ್ತು ಇದರ ಕಲ್ಪನಾಶಕ್ತಿ ಯಾದರೂ ಅತ್ಯಂತಪ್ರಬಲವಾದದು; ಇದು ಆಶೆಬುರುಕ ಸ್ವಭಾವದ್ದು; ಆದ್ದರಿಂದ ಇದು ಯಾವಾಗಲೂ ಪದಾರ್ಥಗಳನ್ನೇ ಗೋಚರಿಸುತ್ತಲಿರುತ್ತದೆ. ಈ ಕಲ್ಪನಾಶಕ್ತಿ ಆಶೆಬುರುಕ ತನಗಳೇ ಮನಸ್ಸಿನ ಚಂಚಲವೃತಿ ಯ ಉತ್ತೇಜಕಗಳಾಗಿರುವಂತೆ ತೋರುತ್ತದೆ. ಇದಕ್ಕೆ ಪದಾರ್ಥಗಳ ಜ್ಞಾನವು ಇಂದ್ರಿಯಗಳ ದ್ವಾರದಿಂದಲೂ, ಅಭಿರುಚಿಯ ಜ್ಞಾನವು ದೇಹಾ ಭಿಮಾನಿಯಾದ ಜೀವಾತ್ಮನ ದ್ವಾರದಿಂದಲೂ ಆಗುತ್ತವಲ್ಲದೆ, ಇದಕ್ಕೆ ಸ್ವತಂತ್ರವಾಗಿ ಪದಾ ರ್ಥಗಳ ಜ್ಞಾನವು ಅಥವಾ ಅಭಿರುಚಿಯ ಜ್ಞಾನವು ಆಗುವದಿಲ್ಲ. ತನಗೆ ರುಚಿಸುವ ಪದಾ ರ್ಥಗಳನ್ನಷ್ಟು ಅದು ಸಂಗ್ರಹಿಸಿಕೊಂಡು ಉಳಿದವನ್ನು ಉಗುಳಿಬಿಡುತ್ತದೆ. ಮನಸ್ಸನ್ನು ಫೋಟೋಗ್ರಾಫರನೆಂತಲೂ, ಪಂಚಜ್ಞಾನೇಂದ್ರಿಯಗಳನ್ನು ಫೋಟೋ ತೆಗೆಯುವ ಕನ್ನಡಿ ಗಳೆಂತಲೂ ಭಾವಿಸಬಹುದು. ಈ ಮನಸ್ಸೆಂಬ ಫೋಟೋಗ್ರಾಫರನು ಪಂಚಜ್ಞಾನೇಂದ್ರಿ ಯಗಳೆಂಬ ಕನ್ನಡಿಗಳಿಂದ ರೂಪ, ರಸ, ಗಂಧ, ಸ್ಪರ್ಶ, ಶಬ್ದ ಗಳೆಂಬ ವಿಷಯಗಳ ಫೋಟೋ ಗಳನ್ನು ತಕ್ಕೊಂಡು, ಅವನ್ನು ತನ್ನ ಮಿಮಳೆಂಬ ಪೆಟ್ಟಿಗೆಯಲ್ಲಿ ಬಚ್ಚಿಡುತ್ತಾನೆ. ಬೇಕಾ ದಾಗ ಆ ಫೋಟೋಗಳನ್ನು ಹೊರಗೆ ತೆಗೆಯುವನು, ಬೇಡಾದಾಗ ಬಚ್ಚಿಡುವನು. ಮನಸ್ಸು ತನಗೆ, ಅಂದರೆ ದೇಹಾಭಿಮಾನಿಯಾದ ಜೀವಾತ್ಮನಿಗೆ ಬೇಕಾದ ಸಂಗತಿಯನ್ನು ಹತ್ತಿಪ್ಪತ್ತು ವರ್ಷಗಳವರೆಗೆ, ಅಥವಾ ದೇಹವಿರುವವರೆಗೆ ನೆನಪಿನಲ್ಲಿಟ್ಟಿರುತ್ತದೆ. ಹೆಚ್ಚಿಗೆ ಹೇಳುವದೇನು, ಜನ್ಮಾಂತರದಲ್ಲಿಯೂ ಪೂರ್ವಾನುಭೂತ ಸಂಗತಿಗಳು ಮನಸ್ಸಿನ ನೆನಪಿಗೆ ಬರುತ್ತವೆಂದು ಶಾಸ್ತ್ರಕಾರರು ಹೇಳುವರು; ಆದ್ದರಿಂದಲೇ ಕಾಲಿದಾಸನು-- ಮನೋಹಿ ಜನ್ಮಾಂತರಸಂಗತಿಬ್ಬಂ” ಆದರೆ ಮನಸ್ಸು ಜನ್ಮಾಂತರದ ಸಂಗತಿಗಳನ್ನು ತಿಳಿಯುವಂಥಾಗತ ಎಂದು ಹೇಳಿರುವನು. ಆದ್ದರಿಂದ ಮನಸ್ಸಿನ ಸ್ಮರಣಶಕ್ತಿಯು ಬಲಿಷ್ಠವಾದದ್ದು. ಅದರ ಆಶೆಬುರುಕತನಕ್ಕಂತು ನೆಲೆಯಿಲ್ಲ. ಅಂದಬಳಿಕ ಅದು 'ಚಂಚಲವಾಗಿರದೆ ಏನುಮಾಡೀತು?

ಇಷ್ಟಾದರೂ ಮನಸ್ಸು ನಿರ್ಲಿಪ್ತಸ್ವಭಾವದ್ದೆಂದು ಹೇಳುವದು ಬಲು ಆಶ್ಚರ್ಯಕರ

ವಾಗಿ ತೋರುವದು; ಆದರೆ ಇವರಲ್ಲಿ ಆಶ್ಚರ್ಯವೇನೂ ಇಲ್ಲ. ಮನಸ್ಸನ್ನು ದಲಾಲನಿಗೆ ಹೋಲಿಸಬಹುದು. ವ್ಯಾಪಾರದಲ್ಲಿ ಕೊಡಕೊಳ್ಳುವ ಗಿರಾಕಿಗಳಿಗಾಗುವ ಲಾಭಹಾನಿಗಳ

--೪--

ಸುಖದುಃಖಗಳು, ಆ ಕೊಡಕೊಳ್ಳುವ ಗಿರಾಕಿಗಳ ಪ್ರೇರಣೆಯಿಂದ ದಲಾಲಿಯನ್ನು ಮಾಡುವವಲಾಲನಿಗೆ ಹೇಗೆ ಹತ್ತಬೇಕು? ಆತನು ದಲಾಲಿಯು ದೊರೆಯುತ್ತ ಹೋದಂತೆ ಪರಿಪುಷ್ಟವಾಗುತ್ತ ಹೋಗುವನು, ದಲಾಲಿಯು ದೊರೆಯದಾದಂತೆ ನಾಶವಾಗುತ್ತ ಹೋ ಗುವನು; ಅದರಂತೆ ಜೀವಾತ್ಮನ ಬಂಧನವೂ, ಇಂದ್ರಿಯಗಳ ಪಾಟವೂ ಹೆಚ್ಚುತ್ತ ಹೋದಂತೆ, ಮನಸ್ಸಿನ ವಿಷಯಾಸಕ್ತಿಯು ಹೆಚ್ಚುತ್ತಹೋಗುವದು; ಮತ್ತು ಜೀವಾತ್ಮನ ಬಂಧನವೂ, ಇಂದ್ರಿಯಪಾಟವವೂ ಕ್ಷೀಣವಾಗುತ್ತ ಹೋದಂತೆ ಮನಸ್ಸು ಕ್ಷೀಣವಾಗುತ್ತ ಹೊಗುವದು. ಆದ್ದರಿಂದಲೇ ಮನಸ್ಸು ಪಾಪಪುಣ್ಯಗಳಿಗೂ, ಅವುಗಳ ಫಲಕ್ಕೂ ಸಂ ಬಂಧಿಸದೆ, ಅದಕ್ಕೆ ದೇಹಾಭಿಮಾನಿಯಾದ ಜೀವಾತ್ಮನು ಸಂಬಂಧಿಸುತ್ತಾನೆಂದು ಶಾಸ್ತ್ರಾ ಧಾರಗಳಿಂದ ಸಿದ್ಧವಾಗಿರುತ್ತದೆ. ಉದಾಹರಣಾರ್ಥ, ಕಳವು ಮಾಡಲಿಕ್ಕೆ ಪ್ರೇರಿಸುವದು ಮನಸ್ಸು, ಬಂದೀಖಾನೆಬೀಳುವದು ದೇಹವು, ದುಃಖವು ದೇಹಾಭಿಮಾನಿಯಾದ ಜೀವನಿಗೆ! ದೇಹಾಂತರ್ಗತ ಇಂದ್ರಿಯಗಳ ದ್ವಾರಾ ಆಗುವ ದುಃಖವನ್ನು ಇಂದ್ರಿಯಾಭಿಮಾನಿಯಾದ ಜೀವನು ಭೋಗಿಸುವನೆಂದ ಬಳಿಕ, ಶ್ರೇಷ್ಟ ಇಂದ್ರಿಯವೆನಿಸುವ ಮನಸ್ಸಿಗೆ ಸ್ವತಃ ಪಾಪ ಪುಣ್ಯಗಳ ಲೇಪವು ಅಥವಾ ಸುಖದುಃಖಗಳ ಭೋಗವು ಎಲ್ಲಿ ಉಳಿಯುವದು? ಆದ್ದ ರಿಂದ ಮನಸ್ಸನ್ನು ನಿರ್ಲಿಪ್ತವೆಂತಲೇ ಹೇಳಬೇಕಾಗುವದು. ಹೀಗೆಮನವು ಯಾತರಲ್ಲಿಯೂ, ಯಾವಪೆರ್ಟಗೂ ಸಿಗದೆ ಹಾಗೆಯೇ ಉಳಿದುಕೊಳ್ಳುತ್ತಲಿರುವದರಿಂದ, ವ್ಯಾಕರಣ ಕರ್ತೃ ವಾದ ಪಾಣಿನಿ ಮುನಿಯು ಇದಕ್ಕೆ ನಪುಂಸಕವೆಂದು ತನ್ನ ವ್ಯಾಕರಣ ಗ್ರಂಥದಲ್ಲಿ ಬರೆದಿಟ್ಟಿರುವನು.

ಇನ್ನು, ಮನಸ್ಸಿನ ಕರ್ತೃತ್ವ ಶಕ್ತಿಯನ್ನು ಕುರಿತು ವಿಚಾರಿಸುವಾ, ಭಗವದ್ಗೀತೆ

ಯಲ್ಲಿ ಶ್ರೀ ಕೃಷ್ಣನು "ಇಂದ್ರಿಯಾಣಾಂ ಮನಶ್ಚಾಸ್ಮಿ” ಎಂದು ಹೇಳಿರುವದರಿಂದ ಮನಸ್ಸು ಯಾವತ್ತು ಇಂದ್ರಿಯಗಳಲ್ಲಿ ಶ್ರೇಷ್ಠವಾದದ್ದಿರುತ್ತದೆಂಬ ಮಾತು ವ್ಯಕ್ತವಾಗುತ್ತದೆ ಯಾವತ್ತು, ಇಂದ್ರಿಯಗಳ ಮೇಲೆ ಮನಸ್ಸು ಅಧಿಕಾರ ನಡಿಸುವದನ್ನು ವಿಚಾರಿಸಿದರೆ ಇದೇ ಮಾತು ನಮಗೆ ಗೊತಾ ಗುತ್ತದೆ. ಒಂದು ದೊಡ್ಡ ಯಂತ್ರದಲ್ಲಿ ಹಲವು ಸಣ್ಣದೊಡ್ಡ ಚಕ್ರಗಳಿರುತ್ತವಷ್ಟೆ ? ಅವುಗಳಲ್ಲಿ ಮುಖ್ಯವಾದ ದೊಡ್ಡ ಚಕ್ರವು ತಿರುಗಹತ್ತಿದ ಕೂಡಲೆ ಸಣ್ಣ ಚಕ್ರಗಳು ತಿರುಗಹತ್ತಿ, ಅದು ನಿಂತಕೂಡಲೆ ಅವೂ ನಿಲ್ಲುವವು. ಅದ ರಂತೆ, ದೇಹವೆಂಬ ಯಂತ್ರದಲ್ಲಿ ಮನಸ್ಸು ಮುಖ್ಯ ಚಕ್ರದಂತೆ ಇರುವದು, ಇಂದ್ರಿಯ ಗಳು ಸಣ್ಣ ಚಕ್ರಗಳಾಗಿರುವವು. ಮನಸ್ಸಿನ ವ್ಯಾಪಾರವು ನಡೆದ ಕೂಡಲೆ, ಅದಕ್ಕೆ ಆಧೀನವಾಗಿರುವ ಇಂದ್ರಿಯಗಳ ವ್ಯಾಪಾರವು ನಡೆಯಹತ್ತುತ್ತದೆ. ಮನಸ್ಸು ಏಕಾಗ್ರ ವಾಗಿರುವಾಗ ಅಥವಾ ಅದು ಯಾವದೊಂದು ಕೆಲಸದಲ್ಲಿ ತೊಡಗಿರುವಾಗ, ಅದರಿಂದ ಪ್ರೇರಿಸಲ್ಪಡದ ಇಂದ್ರಿಯಗಳು ನಿರ್ವ್ಯಾಪಾರವಾಗಿರುತ್ತವೆ. ಅಂದರೆ, ಕಣ್ಣು ತೆರೆದಿ ದ್ದರೂ ಅದಕ್ಕೆ ಪದಾರ್ಥಗಳು ಕಾಣುವದಿಲ್ಲ. ಕಿವಿಗಳಿಗೆ ಸಪ್ಪಳವೂ ಕೇಳಿಸುವುದಿಲ್ಲ. ಇದೇ ಮಾತು ಎಲ್ಲ ಇಂದ್ರಿಯಗಳಿಗೂ ಹತ್ತುವದು, ನಿದ್ರೆಯಲ್ಲಿ ಮನಸ್ಸು ಯಾವ ಇಂದ್ರಿಯಗಳನ್ನು ಸೇರಿಸದೆಯಿರುವದರಿಂದ, ಆಗ ಎಲ್ಲ ಇಂದ್ರಿಯಗಳ ನಿರ್ವಾಹಾರ

--೫--

ವಾಗಿರುತ್ತವೆ. ಹೀಗೆ ಇಂದ್ರಿಯಗಳನ್ನು, ಆಧೀನದಲ್ಲಿಟ್ಟುಕೊಳ್ಳುವದಂತು ಇರಲಿ, ಹಿಂದೆ ಹೇಳಿದಂತ ಸ್ವಭಾವತಃ ಸ್ವತಂತ್ರನಾದ ಆತನನ್ನು ಮನಸ್ಸು ಆಧೀನದಲ್ಲಿಟ್ಟು ಕೊಂಡಿರುವದು. ಯಾರಾದರೂ ನನಗೆ ಬುದ್ಧಿಯ ಮಾತನ್ನು ಹೇಳುವಾಗ ಅದು ನಮಗೆ ಸೇರದಿದ್ದರೆ ನಾವು ಬುದ್ಧಿ ಹೇಳುವವರಿಗೆ ನಾನು ನನ್ನ ಮನಸ್ಸಿಗೆ ಬಂದ ಹಾಗೆ ಮಾಡುತ್ತೀನೆ, ನೀನು ಹೇಳುವ ಕಾರಣವಿಲ್ಲೆಂದು ಹೇಳುವೆವು . ಇದರಿಂದ ಮನಸ್ಸಿನ ಅಧಿಕಾರ ಶಕ್ತಿಯ ಪ್ರಾಬಲ್ಯವು ಗೊತ್ತಾಗುತ್ತದೆ. ಆತ್ಮನು ಮನಸ್ಸಿನ ಕೈಯಲ್ಲಿ ಸಿಕ್ಕ ನೆಂದರೆ, ಆ ಮರ್ಕಟ ಸ್ವರೂಪದ ಚಂಚಲಮನಸ್ಸು ಆತ್ಮನನ್ನು ಹ್ಯಾಗೆ ಹ್ಯಾಗೆ ಕುಣಿ ಸುವದೆಂಬದನ್ನು ನಾವು ಹೇಳಲಾರೆವು. ಕೇವಲ ಮನಸ್ಸಿನಕೈಯಲ್ಲಿ ಸಿಕ್ಕಿದ್ದ ನಮ್ಮನ್ನು ಮನಸ್ಸು ಹಾಗೆ ಎಳೆದಾಡುವದೆಂಬದರ ಅನುಭವವು ನ ಮ ಗೆ ಇದ್ದೇ ಇರುತ್ತದೆ. ಒಮ್ಮೆ ನಾವು ಉದ್ಯೋಗತತ್ಪರರಾಗುವೆವು, ಒಮ್ಮೆ ಉದಾಸೀನರಾಗುವೆವು; ಒಮ್ಮೆ ಲುಬ್ಬರಾಗುವೆವು, ಒಮ್ಮೆ ಉದಾರರಾಗುವೆವು, ಒಮ್ಮೆ ಸಂಸಾರಾಸಕ್ತಿಗೆ ಸಿಗುವೆವು, ಒಮ್ಮೆ ವೈರಾಗ್ಯವನ್ನು ತಾಳುವೆವು; ಒಮ್ಮೆ ಒಬ್ಬರ ವಿಷಯವಾಗಿ ಸ್ನೇಹ ತಾಳುವೆವು, ಒಮ್ಮೆ ದ್ವೇಷ ತಾಳುವೆವು. ಹೀಗೆ ಹಲವು ಭಾವನೆಗಳಿಂದ, ಹಾಗು ಆಯಾ ಭಾವನೆ ಗನುಸರಿಸಿದ ಕೃತಿಗಳಿಂದ ಆತ್ಮವು ವ್ಯಥೆಗೊಳ್ಳುತ್ತಿರುತ್ತದೆ; ಆದರೂ ಮನಸ್ಸಿನ ಅಧಿ ಕಾರವನ್ನು ಅತಿಕ್ರಮಿಸುವದು ಆತನಿಂದ ಆಗುವದಿಲ್ಲ.

ಮನಸ್ಸಿನ ಈ ಅಧಿಕಾರಶಕ್ತಿಯಂತೆ ಅದರ ವೇಗಶಕ್ತಿಯು ಅತರ್ಕವಾಗಿರುವದು.

ದೇಹವು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗಬೇಕಾದರೆ, ಅದಕ್ಕೆ ಸರಿ ಯಾದ ಮಾರ್ಗವು ಬೇಕಾಗುತ್ತದೆ. ಇದಲ್ಲದೆ ಅಲ್ಲಲ್ಲಿ ಹೊಳೆ ಹಳ್ಳಗಳಿದರೆ ಅವನು ದಾಟುವದಕ್ಕೆ ಪೂಲುಗಳು ಬೇಕಾಗುವವು. ಮಾರ್ಗದಲ್ಲಿ ಗಿಡಗಂಟಿಗಳಿದ್ದರೆ ತಗ್ಗು ದಿನ್ನೆ ಗಳಿದ್ದರೆ ಅಲ್ಲಿ ಇದರ ಗತಿಯು ಕುಂಠಿಸುತ್ತದೆ, ಮತ್ತು ಹುಲಿ, ಕರಡಿ ಮುಂತಾದ ಪ್ರಾಣಿಗಳು ಎದುರಿಗೆ ಬಂದರೆ ಮುಂದೆ ಹೋಗದೆ ಹಿಂದಕ್ಕೆ ತಿರಗುತ್ತದೆ, ಇದಲ್ಲದೆ ಇದು ಹೋಗುವದಕ್ಕೆ ಕಾಲಪಿಲಂಬವಾಗುತ್ತದೆ. ಮತ್ತು ಗಾಡಿ ಕುದುರೆ ಮುಂತಾದ ಸಾಧನ ಗಳು ಬೇಕಾಗುತ್ತವೆ. ನಡುವೆ ಬೇನೆ ಮುಂತಾದ್ದರ ಸಂಭವವಾದರೆ ಅಲ್ಲಿಯೇ ಕೆಲವು ಕಾಲ ನಿಲ್ಲಬೇಕಾಗುವದು; ಮತ್ತು ಯಾರಾದರೂ ಪ್ರತಿಬಂಧಿಸಿದರೆ, ಮುಂದೆ ಹೋಗುವ ಹಾಗಿಲ್ಲ. ಇವೇ ಮುಂತಾದ ಕಾರಣಗಳಿಂದ ಮಾರ್ಗಕ್ರಮಣದಲ್ಲಿ ದೇಹವು ಸ್ವತಂತ್ರ ವಾದದ್ದಲ್ಲೆಂದು ಸಹಜವಾಗಿ ತಿಳಿದುಬರುತ್ತದೆ. ಮನತ್ರ ಮಾತ್ರ ಹಾಗಲ್ಲ, ಮನವು ಅಲ್ಪ ಸಮಯದಲ್ಲಿಯೇ ಬಹಳ ದೂರ ಹೋಗುತ್ತದೆ. ಅದು ಯಾವ ಪ್ರತಿಬಂಧಕ್ಕೂ ಒಳಗಾಗುವದಿಲ್ಲ. ಇದು ತೇಜೋಮಯವಾಗಿರುವದರಿಂದ ಇದರ ಗತಿಯ, ತೇಜಸ್ಸಿನ ಗತಿಯೂ ಒಂದೇ ಪ್ರಕಾರದವಾಗಿರುವವು. ದೀಪವು ಕುಂಬಳಬೀಜದಷ್ಟು ಇದ್ದರೂ ಅದರ ಪ್ರಕಾಶವು ಬಹಳ ಪ್ರದೇಶಗಳನ್ನು ವ್ಯಾಪಿಸುತ್ತದೆಂಬದು ಸರ್ವರಿಗೂ ಅನುಭೂತ ವಾದ ವಿಷಯವೇ ಇರುತ್ತದೆ. ಇದೇ ಮೇರೆಗೆ ಮನವಾದರೂ ತಾನು ಅಲ್ಪವಿದ್ದರೂ ಅದರ ಪ್ರಕಾಶವು ಬಹಳ ಪ್ರದೇಶಗಳನ್ನು ವ್ಯಾಪಿಸುತ್ತದೆ. ಮತ್ತು ಸೂಕ್ಷ್ಮ ರೀತಿಯಾಗಿ

_೬_

ವಿಚಾರಿಸಿ ನೋಡಿದರೆ ಈ ಮನಕ್ಕೆ ಸೂರ್ಯಪ್ರಕಾಶವುಕೂಡಹತ್ತುವದಿಲ್ಲ. ಯಾಕಂದರೆ, ಸೂರ್ಯಪ್ರಕಾಶಕ್ಕೆ ನಿಲುಕದ ಪ್ರದೇಶವನ್ನೂ ಮನವು ವ್ಯಾಪಿಸುವದು. ಸರ್ವ ಜ ರಾದ ನಮ್ಮ ಪ್ರಾಚೀನಋಷಿಗಳ ಯೋಗಸಿದ್ಧಮನಸ್ಸೇ ಇದಕ್ಕೆ ಉದಾಹರಣವೆಂದು ಹೇಳಬಹುದು. ಮನುಷ್ಯನು ಯೋಗೂಸ್ತ್ರವನ್ನು ಚನ್ನಾಗಿ ಅಭ್ಯಾಸ ಮಾಡಿದಕೂಡಲೆ ಯೋಗಜಜ್ಞಾನವೆಂಬದೊಂದು ಜಾ ನವು ಅವನಲ್ಲಿ ಹುಟ್ಟುತ್ತದೆ. ಅದು ವ್ಯವಹಾರ ಜ್ಞಾನಕ್ಕೂ, ಶಾಸ್ತ್ರಜ್ಞಾನಕ್ಕೂ ಭಿನ್ನವಾಗಿರುತ್ತದೆ. ವ್ಯವಹಾರಜ್ಞಾನ ಶಾಸ್ತ್ರಜ್ಞಾನ ಗಳಿಂದ ಪ್ರಾಪ್ತವಾಗದ್ದು, ಈ ಯೋಗಜಜ್ಞಾನದಿಂದ ಪ್ರಾಪ್ತವಾಗುತ್ತದೆ. ಉದಾಹ ರಣಾರ್ಥ ಸೌಭರಿಯೆಂಬಋಷಿಯು ಅಷಾ »ಂಗಯೋಗದಲ್ಲಿ ಪಾರಂಗತನಾಗಿದ್ದದ್ದು , ಪ್ರಸಿ ದ್ದವಾಗಿರುವದು. ಆತನು ತನ್ನ ಆ ಯೋಗಜಜಾ ನದ ಬಲದಿಂದ ವಿಚಾರಿಸಿನೋಡಲು, ಒಂದುಸಾವಿರ ಜನ್ಮಗಳು ಅತಿಕ್ರಮಿಸಿ ಹೋದಮೇಲೆ ತನಗೆ ಮುಕ್ತಿಯಾಗುವದೆಂಬ ಸಂಗತಿಯು ತಿಳಿದುಬಂದಿತು. ಆಗ ಅವನು ಇಷ್ಟೊಂದುಜನ್ಮಗಳನ್ನು ಹೇಗೆ ಕ್ರಮಿ ಸಲಿ, ಜನ್ಮವನ್ನು ತೆಗೆದುಕೊಂಡಮೇಲೆ ಸಹಜವಾಗಿಯೇ ದೇಹಬರುವದು, ದೇಹವನ್ನು ಧರಿಸಿದಮೇಲೆ ಪುಣ್ಯ , ಪಾಪಗಳ ಮಿಶ್ರಣದಿಂದ ಸುಖ, ದುಃಖಗಳೆರಡೂ ಸಂಭವಿಸು ವವು . ಸುಖವನ್ನನುಭವಿಸಬಹುದು ; ಆದರೆ ದುಃಖವನ್ನನುಭವಿಸುವದು ಬಹಳಕಷ್ಟ, ಎಂದು ಆಲೋಚಿಸಿ , ಮುನಿಯು ತನ್ನಯೋಗಾಭ್ಯಾಸದ ಪ್ರಭಾವದಿಂದ ಒಂದುಸಾವಿರ ಸೌಭರಿಖುಷಿಯ ದೇಹಗಳನ್ನು ತೆಗೆದುಕೊಂಡನು. ಹಲವು ವರ್ಷಗಳಮೇಲೆ ಕ್ರಮ ದಿಂದಾಗಲಿ, ಒಂದೇಕಾಲದಲ್ಲಾಗಲಿ ಆ ದೇಹಗಳೆಲ್ಲ ಬಿದ್ದುಹೋದಕೂಡಲೆ ಮುಕ್ತಿಯನ್ನು ಹೊಂದಿದನು . ಆಗ ಆ ಸಮಯದಲ್ಲಿದ್ದ ಮಹಾನುಭಾವರಾದ ಋಷಿಗಳೆಲ್ಲ ಕೂಡಿ ಆತ ನಿಗೆ ಯೋಗವ್ಯಾಘ್ರಾನೆಂಬ ಹೆಸರುಕೊಟ್ಟರು.

ಹೀಗೆ ಮನಸ್ಸು ವೇಗಶಾಲಿಯಾಗಿರುವದಲ್ಲದೆ , ಅದು ಅತ್ಯಂತ ಉದ್ಯೋಗತತ್ಪರ

ವಾಗಿರುವದು . ಈ ಅಭಿಪ್ರಾಯವನ್ನು “ನಹಿ ಕಶ್ಚಿತ್ ಕ್ಷಣಮಪಿ ಜಾತುತಿಷ್ಯತ್ಯಕ ರ್ಮಕೃತ್” "ಅಂದರೆ "ಮನುಷ್ಯನು ಒಂದುಕ್ಷಣವಾದರೂ ಸುಮ್ಮನಿರದೆ ಕೆಲಸಮಾಡುತ್ತಿ ರುವನೆಂ"ದು ಭಗವದ್ಗೀತೆಯು ಹೇಳುತ್ತದೆ. ಇಲ್ಲಿ ಕೆಲಸಮಾಡತಕ್ಕದ್ದೆಂದರೆ ಮನವೇ. ಆತ್ಮನಲ್ಲ. ಒಂದು ಬ್ರಾಹ್ಮಣಸಮಾರಾಧನದಲ್ಲಿ ಅಡಿಗೆಮುಂತಾದ ಕೆಲಸಗಳನ್ನು ಮಾಡತಕ್ಕವರು ಬೇರೆಯಿದ್ದು, ಯಜಮಾನನು ನೋಡುತ್ತ ಸುಮ್ಮನೆಇರುತ್ತಾನೆ; ಆದರೆ ಆ ಪ್ರಸವುಉತ್ತಮರೀತಿಯಾಗಿ ಜರುಗಿದ ಕೀರ್ತಿಯೂ , ಕೆಟ್ಟರೆ ಅಪಕೀರ್ತಿಯೂ ಏನೂ ಕೆಲಸಮಾಡದಿದ್ದ ಯಜಮಾನನಿಗೆ ಬರುತ್ತವೆ. ಯಾಕಂದರೆ ಆ ಯಜಮಾನನು ಆಕೆಲಸವು ತನ್ನದೆಂದು ಭಾವಿಸಿರುತ್ತಾನೆ. ಆದ್ದರಿಂದ ಅದರಿಂದುಂಟಾಗುವ ಕೀರ್ತಿಗೂ, ಅಪಕೀರ್ತಿಗೂ ಅವನು ಪಾತ್ರನಾಗುತ್ತಾನೆ. ಈ ದೃಷ್ಯಾಂತದ ಮೇಲಿಂದ ಮನ ಮುಂತಾದ ಪರಿವಾರವುಮಾಡಿದ ಕೆಲಸದಫಲವು ಆತ್ಮ ನಿಗೆ ಆಗುತ್ತದೆ. ಮಾಡತಕ್ಕದ್ದು ಪರಿವಾರವೇ. ಫಲವು ಯಜಮಾನನಿಗೆ. ಆದ್ದರಿಂದ ಮೇಲಿನ ಭಗವದ್ಗೀತೆಯವಾಕ್ಯವು

ಫಲಾಭಿಪ್ರಾಯದಿಂದ ಜೀವಾತ್ಮವನ್ನುದ್ದೇಶಿಸಿದರೂ ಅದಕ್ಕೆ ಮನವೇಗೋಚರವಾದ್ದೆಂದು

__೭__

ತಿಳಿಯಬೇಕು. ಮುಖ್ಯವಾಗಿ ಕೆಲಸಮಾಡುವದು ಮನವೇ ಇರುವದು . ಈರೀತಿ ಯಾಗಿ ಸುಷುಪ್ತಿಯನ್ನುಬಿಟ್ಟು ಉಳಿದಅವಸ್ಥೆಗಳಲ್ಲಿ ಉದ್ಯೋಗಮಾಡುವದು ಮನಸ್ಸಿನ ಹೊರತು ಯಾವದೂ ಇಲ್ಲ. ಕೆಲಸಮಾಡುವ ವಿಷಯದಲ್ಲಿ ಮನಕ್ಕೆ ಬೇಸರವೇ ಇಲ್ಲ. ಇಪ್ಪತ್ತುನಾಲ್ಕು ತಾಸುಗಳುಳ್ಳ ದಿವಸದಲ್ಲಿ ಒಂದುತಾಸು ಹೊತ್ತು ಸುಷುಪ್ತಿಯಾದರೆ ಬಹಳ. ಒಂದೊಂದುದಿವಸ ಸುಷುಪ್ತಿಯೇ ಬರುವದಿಲ್ಲ. ಬರೇ ಸ್ವಪ್ನ , ಅಥವಾ ಜಾಗ್ರತ್ ಈ ಅವಸ್ಥೆಯಲ್ಲಿಯೇ.ಕಾಲವು ಕ್ರಮಿಸಿಹೋಗುತ್ತದೆ. ಸುಷುಪ್ತಿಯಲ್ಲಿ ಜೀವಾತ್ಮನು ಪರಮಾತ್ಮನಹತ್ತರ ಹೋಗಿರುತ್ತಾನೆ. ಆಗ ಆತನಿಗೂ ಈತನಿಗೂ ಸಂಬಂಧವಾದ್ದರಿಂದ , ಇಂದ್ರಿಯಗಳು ಮತ್ತು ಮನವು ಇವೆರಡೂ ವ್ಯಾಪಾರಶೂನ್ಯಗಳಾ ಗಿರುತ್ತವೆ. ಆಗ ಸುಖ-ದುಃಖಗಳಿಗೆ ಜನಕವಾಗಿರುವ ವಿಷಯಗಳಸಂಬಂಧವೇ ಮನಕ್ಕೆ ಆಗುವದಿಲ್ಲ. ಜೀವನಿಗೆ ಮನಸ್ಸಿನದ್ವಾರದಿಂದಲೇ ಸುಖ-ದುಃಖಗಳ ಜ್ಞಾನವಾಗತ ಕ್ಕದ್ದು. ಅಂಥವನವೇ ವ್ಯಾಪಾರಶೂನ್ಯವಾಗಿರುವಾಗ ಜೀವನಿಗೆ ವ್ಯವಹಾರದ ಸುಖ- ದುಃಖಗಳ ಸಂಬಂಧವೇ ಆಗುವದಿಲ್ಲ. ಇದೊಂದು ಅವಸ್ಥೆಯಹೊರತು ಉಳಿದ ಜಾಗ್ರ ದವಸ್ಥೆ, ಸ್ವಪ್ನಾವಸ್ಥೆಗಳಲ್ಲಿ ಮನಸ್ಸು ಯಾವದೊಂದು ಉದ್ಯೋಗ ಮಾಡುತ್ತಲೇ ಇರುತ್ತದೆ. ಜಾಗೃದವಸ್ಥೆಯಲ್ಲಿ ಅದು ಮುಖ್ಯವಾಗಿ ಇಂದ್ರಿಯಗಳನ್ನು ಕಟ್ಟಿಕೊಂಡು ಕೆಲಸಮಾಡುವದು- ಸ್ವಪ್ನಾವಸ್ಥೆಯಲ್ಲಿ ಮುಖ್ಯವಾಗಿ ತಾನೊಂದೇ ಕೆಲಸಮಾಡು ವದು ; ಅಂದಬಳಿಕ ಇದರ ಉದ್ಯೋಗತತ್ಪರತೆಯು ಎಷ್ಟೆಂಬುದನ್ನು ವಾಚಕರು ತರ್ಕಿಸಬಹುದು.

_____ _____

೨ ನೆಯ ಪ್ರಕರಣ- ಇ೦ದಿ ಯಗಳು.

__________೦ ೦_________

-बलवानिंदियग्रामो विद्वांस मपिकर्षति. [श्रीमद्भागवत

" ಇದಿ, ಪರಮೈಶ್ವರ್ಯೇ ”ಎಂಬ 'ಇದಿ' ಧಾತುವಿನಿಂದ ಸಿದ್ದವಾದ ಇಂದ್ರಿಯ

ಶಬ್ದವು ಇಂದ್ರಿಯಗಳ ಪರಮಸಾಮರ್ಥ್ಯವನ್ನು ತೋರಿಸುತ್ತದೆ. ವಿಚಿತ್ರಸಾಮರ್ಥ್ಯವುಳ್ಳ ಈ ಇಂದ್ರಿಯಗಳು ಮನಸ್ಸಿಗೆ ಸಹಾಯಭೂತಗಳಾಗಿರುತ್ತವೆ. ಮನಸ್ಸಿಗೆ ಇವುಗಳಸಹಾ ಯದ ಹೊರತು ಯಾವ ಪದಾರ್ಥಗಳ ಜ್ಞಾನವೂ ಆಗುವದಿಲ್ಲ. ಮನಸ್ಸೆಂಬದೊಂದು ರಾಜನೆಂದು ಕಲ್ಪಿಸಿ, ಇಂದ್ರಿಯಗಳು ಅವನ ಪರಿಚಾರಕರೆಂದು ಕಲ್ಪಿಸಬಹುದು. ರಾಜನಿಗೆ ಪರಿಚಾರಕರು ಜ್ಞಾನವನ್ನುಂಟುಮಾಡಿದಂತೆ ಇಂದ್ರಿಯಗಳು ಮನಸ್ಸಿಗೆ ಪದಾರ್ಥ ಜ್ಞಾನವನ್ನು ಮಾಡಿಕೊಡುತ್ತವೆ. ಈ ಪದಾರ್ಥಜ್ಞಾನ ಮಾಡಿಕೊಡುವ ಇಂದ್ರಿಯಗಳು ಜ್ಞಾನೇಂದ್ರಿಯಗಳೆಂದು ಹೇಳಲ್ಪಡುವವು. ಇವಲ್ಲದೆ ಕರ್ಮೇಂದ್ರಿಯಗಳು ಬೇರೆ ಇರು ವವು. ಜ್ಞಾನೇಂದ್ರಿಯಗಳು ಮನಸ್ಸಿಗೆ ಜ್ಞಾನವನ್ನು ಸಂಪಾದಿಸಿಕೊಟ್ಟಮೇಲೆ ಮನಸ್ಸು

ಕಾರ್ಯ ಕಾರ್ಯ ವಿವೇಚನವನ್ನು ಮಾಡಿ ಕರ್ತವ್ಯದ ವಿಷಯವಾಗಿ ಆಜ್ಞಾಪಿಸಿದ

___೮___

ಕೂಡಲೆ ಕರ್ಮಭೂಡಲಿಕ್ಕೆ ಮುಂದುವರಿಯುವ ಇಂದ್ರಿಯಗಳು ಕರ್ಮೇಂದ್ರಿಯಗಳು. ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಐದು. ಹೀಗೆ ಒಟ್ಟು ಹತ್ತು ಇಂದ್ರಿಯ ಗಳು ಮನಸ್ಸಿನ ಕಿಂಕರರಾಗಿ ಈ ದೇಹದಲ್ಲಿರುತ್ತವೆ.

ಜ್ಞಾನೇಂದ್ರಿಯಗಳು ನೇತ್ರ, ಶ್ರೋತ್ರ, ಪ್ರಾಣ, ಜಿಹ್ವಾ, ಚರ್ಮವೆಂಬವು.

ಇವುಗಳಲ್ಲಿ ಮಾದಲನೆಯ ನೇತ್ರವೆಂಬ ಇಂದ್ರಿಯವು ರೂಪವೆಂಬ ವಿಷಯವನ್ನು ಹಿಡಿಯು ತ್ತದೆ, ಇದಕ್ಕೆ ಇದೊಂದೇ ಕೆಲಸವು, ಮತ್ತೊಂದು ವಿಷಯದಪರಿಜ್ಞಾನವು ಇದಕ್ಕೆ ಆಗು ವದಿಲ್ಲ, ಮತ್ತು ಈ ಇಂದ್ರಿಯವು ಕಣ್ಣಗುಡ್ಡಿಯಿಂದ ಹೊರಬಿದ್ದು, ತನಗೆ ವಿಷಯವಾದ ರೂಪವಿದ್ದಲ್ಲಿ ಹೋಗಿ ಆ ರೂಪವನ್ನು ಗ್ರಹಿಸುತ್ತದೆ. ಈ ಇಂದ್ರಿಯವು ತೇಜೋಮಯ ವಾದದ್ದ‌‌ರಿಂದ ಇದರ ಗತಿಯು ಬಹು ತೀವ್ರವಿರುತ್ತದೆ. ಆದ್ದರಿಂದ ಕಣ್ದೆರದಕೂಡಲೆ ರೂಪವೇ ಗೋಚರವಾಗುತ್ತದೆ. ಆದರೆ ಇದು ಹೊರಬಿದ್ದು ರೂಪವಿಧ್ದಲ್ಲಿ ಹೋಗಿ ಅದನ್ನುಹಿಡಿದದ್ದು ಸಹಸಾ ಮನಸ್ಸಿನ ಕಲ್ಪನೆಯಲ್ಲಿಯೇ ಬರುವದಿಲ್ಲ. ಈ ನೇತ್ರೇಂ ದ್ರಿಯಕ್ಕೆ “ಗತ್ಯಾಗ್ರಾಹಿ"ಎಂದು ಹೆಸರು ಇರುವದು. ಉಳಿದನಾಲ್ಕು ಜ್ಞಾನೇಂದ್ರಿಯ ಗಳು ತಾವು ಇದ್ದಲ್ಲಿಯೇ ಇದ್ದು, ತಮ್ಮ ಹತ್ತರ ವಿಷಯಗಳುಬಂದಾಗ ಅವನ್ನು ಹಿಡಿ ಯತಕ್ಕವು; ವಿಷಯಗಳಿದ್ದಸ್ಧಾನಕ್ಕೆ ಇವು ಹೋಗುವವಲ್ಲ. ಆದ್ದರಿಂದ ಇವಕ್ಕೆ " ಸ್ಧಿತ್ವಾಗ್ರಾಹಿ"ಗಳೆಂದುಹೆಸರು. ಪೃಥಿವೀ-ಜಲ-ತೇಜ-ವಾಯು-ಆಕಾಶಗಳೆಂದು ಪಂಚ ಭೂತಗಳುಂಟು. ಇವೇ ಪಂಚಭೂತಗಳಿಂದ ಪರಮೇಶ್ವರನು ನಮ್ಮ ದೇಹವನ್ನು ನಿರ್ಮಿ ಸಿದ್ದರಿಂದ, ನಮ್ಮ ದೇಹವು ಪಾಂಚಭೌತಿಕವೆಂದು 'ಹೇಳಲ್ಪಡುವದು. ಈ ಪಂಚಭೂತ ಗಳೊಳಗೆ ಒಂದೊಂದು ಜ್ಞಾನೇಂದ್ರಿಯವು ಒಂದೊಂದು ಭೂತಕ್ಕೆ ಸಂಬಂಧಪಟ್ಟಿರುತ್ತದೆ ಅದು ಹೇಗಂದರೆ-ನೇತ್ರಂದ್ರಿಯವು ತೇಜೋಮಯವಾದದ್ದರಿಂದ ತೇಜವೆಂಬ ಭೂತಕ್ಕೆ ಸಂಬಂಧಿಸುತ್ತದೆ. ಶ್ರೋತ್ರೇಂದ್ರಿಯವು ಆಕಾಶವೆಂಬ ಭೂತಕ್ಕೆ ಸಂಬಂಧಿಸುವದು. ಫ್ಯಾಣವೆಂಬ ಇಂದ್ರಿಯವು, ಪೃಥಿವೀಯೆಂಬ ಭೂತಕ್ಕೆ ಸಂಬಂಧಿಸುವದು, ಚಿಹ್ನೆಯೆಂಬ ಇಂದ್ರಿಯವು ಜಲವೆಂಬಭೂತಕ್ಕೆ ಸಂಬಂಧಿಸುವದು ಚರ್ಮವೆಂಬ ಇಂದ್ರಿಯವು ವಾಯು ಎಂಬಭೂತಕ್ಕೆ ಸಂಬಂಧಿಸುತ್ತದೆ. ಈರೀತಿಯಾಗಿ ಐದೂ ಇಂದ್ರಿಯಗಳು ತಮ್ಮ ತಮ್ಮ ಭೂತಗಳೆನಿಸುವ ಪೃಥಿವೀ ಮುಂತಾದವುಗಳ ಗುಣಗಳನ್ನು, ಅಂದರೆ ರೂಪಮುಂತಾದ ಗುಣಗಳನ್ನು ಗ್ರಹಿಸಿ ಅವುಗಳಜ್ಞಾನವನ್ನು ಮನಸ್ಸಿಗೆ ಮಾಡಿಕೊಡುತ್ತವೆ. ಮನ ಸ್ಸಾದರೂ ಅವುಗಳಲ್ಲಿ ತನಗೆ ಬೇಕಾದದ್ದನ್ನು; ಬೇಡಾದದ್ದನ್ನು ನಿರ್ಣಯಿಸಿಕೊಂಡು, ಸಂಪಾದಿಸುವದಕ್ಕೂ, ಬಿಡುವದಕ್ಕೂ ಆಜ್ಞಾಪಿಸುವದು. ಆಮೇಲೆ ಕರ್ಮೇಂದ್ರಿ `ಯಗಳು, ಅಂದರೆ ವಾಕ್-ಪಾಣೆ-ಪಾದ-ಪಾಯು-ಉಪಸ್ಥ-ಎಂಬವು ಕೆಲಸಮಾಡಹತ್ತು ತ್ತವೆ. ವಾಗಿಂದ್ರಿಯವು ಆಹ್ವಾನ-ನಿಷೇಧಗಳೆಂಬ ಕೆಲಸಗಳನ್ನೂ, ಪಾಣಿ (ಕೈ) ಎಂಬಇಂದ್ರಿಯವು ಹಾನೋಪಾದಾನ, ಭರ್ತೃನ, ತಾಡನ ಮುಂತಾದ ಕೆಲಸಗಳನ್ನೂ, ಪಾದ (ಕಾಲು) ಎಂಬಇಂದ್ರಿಯವು ಗಮನಾಗಮನಗಳೆಂಬ ಕೆಲಸಗಳನ್ನೂ, ಪಾಯು

(ಅಪಾನ) ಎಂಬಇಂದ್ರಿಯವು ಮಲವಿಸರ್ಜನದ ಕೆಲಸವನ್ನೂ, ಉಪಸ್ಥ (ಜನನೇಂದ್ರಿಯ)

-೯-

ಎಂಬ ಇಂದ್ರಿಯವು ಪ್ರಜೋತ್ಪಾದನವೆಂಬ ಕಾರ್ಯವನ್ನೂ ಮಾಡುತ್ತವೆಂಬುವದು ಸರ್ವರಿಗೂ ವಿದಿತವಾದ ವಿಷಯವೇ ಇರುತ್ತದೆ .

ಜ್ಞಾನೇಂದ್ರಿಯಗಳೇ ಆಗಲಿ, ಕರ್ಮೇಂದ್ರಿಯಗಳೇ ಆಗಲಿ, ಪ್ರತಿಯೊಂದು ಇಂದ್ರಿ ಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುವದಕ್ಕೆ ಸಮರ್ಥಗಳಾಗಿದ್ದರೂ ಅವುಗಳ ಕಡೆಗೆ ಮನಸ್ಸಿನ ಒಲವು ಇರಬೇಕಾಗುತ್ತದೆ. ಇವು ಕೆಲಸಮಾಡುವಾಗ ಮನಸ್ಸು ಇವುಗಳಲ್ಲಿ ಕೂಡಿಕೊಳ್ಳದಿದ್ದರೆ ಇವುಗಳಿಂದ ಯಾವಕೆಲಸವೂ ಅಗುವದಿಲ್ಲ. ಮನಸ್ಸು ಬೇರೆ ಎಲ್ಲಿಯಾದರೂ ಹೋಗಿದ್ದರೆ ಕಣ್ಣಿರದಿದ್ದರೂ ರೂಪವೇ ತೋರುವದಿಲ್ಲ, ಇದರಂತೆ ಶಬ್ದವೂ ಕೇಳುವದಿಲ್ಲ, ಗಂಧವೂ ತಿಳಿಯುವದಿಲ್ಲ, ರಸಜ್ಞಾನವೂ ಆಗುವದಿಲ್ಲ, ಸ್ಪರ್ಶವೂ ತಿಳಿಯುವದಿಲ್ಲ. ಈ ಅಭಿಪ್ರಾಯವನ್ನು ಭಗವದ್ಗೀತೆಯಲ್ಲಿ-"ಇಂದ್ರಿಯಾಣಾಂ ಹಿ ಚರತಾಂ ಯನ್ಮನೋನು ವಿಧೀಯತೆ| ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾನವಾಂಭಸಿ||” “ಯಾವಾಗಲೂ, ಇಂದ್ರಿಯಗಳು ವಿಷಯಗಳಲ್ಲಿ ಸಂಚರಿಸತಕ್ಕ ಸ್ವಭಾವವುಳ್ಳವಾಗಿರು ತ್ತವೆ, ಅವುಗಳ ಕರ್ತವ್ಯಕರ್ಮವೇ ಅದಾಗಿರುವದು; ಆದರೆ ಆ ಇಂದ್ರಿಯಗಳ ಸಂಗಡ ಮನಸ್ಸನ್ನುಮಾತ್ರ ಕಳಿಸಿದರೆ ಸಾಕು, ನೀರಲ್ಲಿರುವ ನಾವಿಕೆಯನ್ನು ಅನುಕೂಲಮಾರು ತನು ಹಾರಿಸುವಂತೆ ಅದು ಮನುಷ್ಯನ ಕರ್ತವ್ಯಾಕರ್ತವ್ಯವಿವೇಕವನ್ನು ಅಪಹರಿಸುತ್ತದೆ. ಅಂದರೆ ಮನುಷ್ಯನು ಇಂದ್ರಿಯ ವಶನಾಗಿ ವ್ಯವಹರಿಸಹತ್ತಿದರೆ ಸದ್ವಿಚಾರಭ್ರಷ್ಟನಾಗುವ ನೆಂಬ ತಾತ್ಪರ್ಯವು ಈ ಶ್ಲೋಕದಿಂದ ವ್ಯಕ್ತವಾಗಿರುತ್ತದೆ. ಇಂದ್ರಿಯಗಳು ತಮಗೆ ಸ್ವಾಧೀ ನನಾದ ಮನುಷ್ಯನನ್ನು ಅಡ್ಡ ಹಾದಿಗೆ ಹಚ್ಚದೆ ಎಂದೂ ಬಿಡವು ಎಂಬ ಅಭಿಪ್ರಾಯವನ್ನು ಶ್ರೀಮದ್ಭಾಗವತದ “ಮಾತ್ರಾ ಸ್ವಸ್ರಾ ದುಹಿತ್ರಾವಾ ನೈಕಶಯಾಸನೋ ಭವೇತ್|ಬಲವಾ ನಿಂದ್ರಿಯಗ್ರಾಮೋ ವಿದ್ವಾಂಸಮಪಿಕರ್ಷತಿ |" ಶಾಯಿಯಾಗಲಿ, ಅಕ್ಕತಂಗಿಯರಾಗಲಿ, ಮಗಳೇ ಆಗಲಿ, ಇವರೊಡನೆ ಪುರುಷನು ಒಂದೇ ಹಾಸಿಗೆಯಲ್ಲಿ, ಅಥವಾ ಒಂದೇ ಆಸನದಲ್ಲಿ ಕದಾಚಿತ್ಕಾಲದಲ್ಲಿಯಾದರೂ ಕುಳಿತುಕೊಳ್ಳಬಾರದು ಯಾಕಂದರೆ ಇಂದ್ರಿಯಗಳ ಹಿಂಡು ಬಲಾಢ್ಯವಾಗಿರುವದರಿಂದ ಪಂಡಿತನನ್ನೂ ಕೂಡ ಸ್ವಾಧೀನನ್ನಾಗಿ ಮಾಡಿಕೊಳ್ಳುತ್ತದೆ” ಎಂಬ ಶ್ಲೋಕವು ತೋರಿಸುತ್ತದೆ ಈ ಶ್ಲೋಕದಲ್ಲಿಯ "ವಿದ್ಯಾಸಂ" ಎಂಬ ಶಬ್ದಕ್ಕೆ ಬ್ರಹ್ಮಜ್ಞಾನಿಯೆಂಬ ಅರ್ಥವನ್ನು ಹೇಳಬಾರದು. ಶಾಸ್ತ್ರಕಲಿತವನೂ, ವ್ಯವಹಾರ ಚತುರನೂ ಆದ ಪುರಷನೆಂದು ಹೇಳಬೇಕು. ಯಾಕಂದರೆ, ಮನಸ್ಸು ಮತ್ತು ಇಂದ್ರಿಯ ಇವುಗಳ ಶಕ್ತಿಯನ್ನು ಇಲ್ಲದಂತೆ ಮಾಡಿ, ವಿಷಯಗಳನ್ನು ತುಚೀಕರಿಸಿ ಸದಾನಂದಿಯಾಗಿರುವ ಆ ಮಹಾತ್ಮನನ್ನು ಎಳೆದುಕೊಳ್ಳುವ ಶಕ್ತಿಯು ಇಂದ್ರಿಯಗಳಿಗೆ ಎಲ್ಲಿಂದಬರಬೇಕು? ವೇದದಲ್ಲಿ ಒಂದು ರೂಪಕವನ್ನು ಕಲ್ಪಿಸಿರುತ್ತದೆ. ಅದು ಹೇಗೆಂದರೆ." ಈ ದೇಹದ ಯಜ ಮಾನನಾದ ಜೀವಾತ್ಮನೇ ಒಬ್ಬ ರಥಿಕನಾಗಿರುವನು. ಬುದ್ಧಿಯೆಂಬುವದೇ ಇವನಿಗೆ ಸಾರ ಥ್ಯವನ್ನು ಮಾಡುವದು. ಇವರಿಗೆ ಕುಳಿತುಕೊಳ್ಳಲಿಕ್ಕೆ ರಥಮಾತ್ರ ಬೇಕಾಯಿತಷ್ಟೆ? ಆ ರಥವೆಂದರೆ ದೇಹವು. ರಥಕ್ಕೆ ಹೂಡಿದ ಕುದುರೆಗಳೇ ಇಂದ್ರಿಯಗಳು ಇನ್ನು ಈ ಕುದುರೆ ಗಳನ್ನು ಬಂಧನಮಾಡುವದಕ್ಕೆ ಬೇಕಾದ ಹಗ್ಗವು ಮನಸ್ಸಾಗಿರುವದು." ಇಲ್ಲಿ ಇಂದ್ರಿಯ

--೧೦--

ಗಳಿಗೆ ಅಶ್ವದೃಷ್ಟಾಂತವನ್ನು ಕೊಟ್ಟಿರುವದರಿಂದ, ಅಶ್ವಗಳ ಹಾಗೆ ಇಂದ್ರಿಯಗಳು ವಿಚಿತ್ರ ಗತಿಯುಳ್ಳವೆಂಬ ಅಭಿಪ್ರಾಯವಾಗುತ್ತದೆ. ಇಂಥ ಅಶ್ವಸಮಾನಗಳಾದ ಇಂದ್ರಿಯಗಳು ನಮ್ಮನ್ನು ಎಲ್ಲಿಯಾದರೂ ಒಂದು ಗರ್ತದಲ್ಲಿ ಕೆಡವದ ಹಾಗೆ ಬಿಗಿದು ಹಿಡಿಯುವದಕ್ಕೆ ವಿಚಾರ ಶಕ್ತಿಯುಳ್ಳ ಮನಸ್ಸೇ ರಜ್ಜುವಾಗಿರುವದೆಂಬ ತಾತ್ಪರ್ಯವು, ವಿವೇಕಿಯಾದವನು ವಿಚಾರಯುಕ್ತವಾದ ಮನಸ್ಸಿನ ಸಹಾಯದಿಂದ ಇಂದ್ರಿಯಗಳನ್ನು ವಿಷಯಗಳ ಕಡೆಗೆ ಹೋಗದಂತೆ ಇಟ್ಟುಕೊಂಡರೆ, ಅವನಿಗೆ ಸದ್ಗತಿಯಾಗುತ್ತದೆಂಬ ಭಾವಾರ್ಥವು, ಬೃಹದಾ ರಣ್ಯಕ ಶ್ರುತಿಯಲ್ಲಿ ವ್ಯಕ್ತವಾಗಿರುವದು. ಇಂದ್ರಿಯಗಳಿಗೆ ಗ್ರಹವೆಂತಲೂ, ವಿಷಯಗಳಿಗೆ ಅತಿಗ್ರಹವೆಂತಲೂ, ಅಲ್ಲಿ ಹೆಸರು ಕೊಟ್ಟಿರುವರು. "ಗೃಣ್ಣಂತಿ ಬಧ್ನಂತಿ ಪುರುಷಪಶೂ ನಿತಿ ಗ್ರಹಾಃ ಇಂದ್ರಿಯಾಣಿ” ಅಂದರೆ ಅವಿವೇಕಿಗಳಾದ ಪುರುಷರನ್ನು ಪಶುಗಳನ್ನಂತೆ ಕಟ್ಟಿಹಾಕುತ್ತವೆ, ತಮ್ಮ ಸ್ವಾಧೀನರನ್ನಾಗಿ ಮಾಡಿಕೊಳ್ಳುತ್ತವೆ ಎಂಬರ್ಥವು.ಅತಿಗ್ರಹ ಗಳೆಂದರೆ, ಇದಕ್ಕೂ ಹೆಚ್ಚಿನ ಗ್ರಹಗಳು ವಿಷಯಗಳು. ವಿಷಯಗಳಿದ್ದರೆಯೇ ಇಂದ್ರಿಯ

ಗಳ ಕೆಲಸವು ನಡೆಯುತ್ತದೆ, ಇಲ್ಲದಿದ್ದರೆ ಅವುಗಳಿಂದ ಯಾವಕಾರ್ಯವೂ ಆಗುವದಿಲ್ಲ.

ಈ ದೇಹವು ಭೂತಮಹಾಪಂಚಕದ ಸೂಕ್ಷ್ಮಾಂಶವಾಗಿದ್ದು, ಇದರೊಳಗಿನ ಅತಿ ಸೊಕ್ಷ್ಮಾಂಶಗಳೆಂದರೆ ಇಂದ್ರಿಯಗಳು. ದೇಹದಲ್ಲಿದ್ದ ಪಂಚಭೂತಗಳಿಗೆ ಹೊರಗಿನ ರೂಪ ಮುಂತಾದ್ದರ ಸಂಬಂಧದ ಹೊರತು ಪೋಷಣವಿಲ್ಲ. ಹೇಗೆಂದರೆ ಒಳಗೆ ಪ್ರಾಣ ರೂಪವಾದ ವಾಯುವು ಇರುತ್ತದಷ್ಟೆ? ಇದಕ್ಕೆ ಹೊರಗಿನ ವಾಯುವಿನ ಸಂಬಂಧವಿಲ್ಲ ದಂತಾದರೆ, ಪ್ರಾಣವಾಯುವು ನಿಲ್ಲುವದೇ ಇಲ್ಲ. ಈ ಪ್ರಾಣವಾಯುವು ಯಾವಾಗಲೂ ಒಳಗಿನ ದುರ್ಗಂಧವನ್ನೆಲ್ಲ ಮುಖದ್ವಾರದಿಂದ ಹೊರಗೆ ಹಾಕಿ, ಹೊರಗಿನ ನಿರ್ಮಲವಾದ ವಾಯುವನ್ನು ಒಳಗೆ ಒಯ್ಯುತ್ತಲಿರುತ್ತದೆ. ಇದೊಂದೇ ಈ ವಾಯುವಿನ ಕಾರ್ಯವಿ ರುತ್ತದೆ. ಈ ಒಳಗಿರುವ ವಾಯುವಿನ ಇಂದ್ರಿಯವು ತ್ವಗಿಂದ್ರಿಯವಿರುವದು. ಇದು ಭೂತಸೂಕ್ಷ್ಮವಾದ ದೇಹದ ವಾಯುವಿನ ಸೂಕ್ಷ್ಮಾಂಶವಿರುವದು. ವಾಯುವಿನ ಗುಣವು ಸ್ಪರ್ಶವಿರುವುದರಿಂದ ಇದು ಯಾವಾಗಲೂ, ಸ್ಪರ್ಶವನ್ನೇ ಹಿಡಿಯುತ್ತದೆ; ಮತ್ತು ಇದಕ್ಕೆ ಮುಖ್ಯವಾಗಿ ಹೊರಗಿನ ವಾಯುವಿನ ಸ್ಪರ್ಶವು ಬೇಕಾಗಿರುತ್ತದೆ ಅದಿಲ್ಲದಿದ್ದರೆ ಈ ದೇಹವೇ ನಿಲ್ಲುವದಿಲ್ಲ. ತ್ವಗಿಂದ್ರಿಯವು ಈ ದೇಹದಮೇಲೆ ಮತಾಯಿಸಿದಂಥ ಚರ್ಮ ವನ್ನೆಲ್ಲ ವ್ಯಾಪಿಸಿಕೊಂಡಿರುತ್ತದೆ. ಅದ,ನೇತ್ರ ಮುಂತಾದ ಇಂದ್ರಿಯಗಳಂತೆ ಒಂದೊಂದೇ ಪ್ರದೇಶದಲ್ಲಿಲ್ಲ. ಈ ದೇಹದ ಚರ್ಮಕ್ಕೆ ತುಂಬಾ ಛಿದ್ರಗಳುಂಟು. ಆ ಛಿದ್ರಗಳ ಲ್ಲೆಲ್ಲ ಸಣ್ಣ ಸಣ್ಣ ರೋಮಗಳೂ ದೊಡ್ಡ ದೊಡ್ಡ ರೋಮಗಳೂ ತುಂಬಿರುವವು. ದೇಹ ದಲ್ಲಿರುವ ವ್ಯಾನವೆಂಬ ವಾಯುವು ಒಳಗಿನ ಕಶ್ಮಲವನ್ನೆಲ್ಲ ಬೆವರಿನ ರೂಪದಿಂದ ಹೊರಗೆ ಹಾಕುತ್ತದೆ . ಅದನ್ನೆಲ್ಲ ಹೊರಗಿನ ವಾಯುವು ಆರಿಸಿ ಬಿಡುತ್ತದೆ . ಈ ಕ್ರಿಯೆಯೃ ಯಾವಾಗಲೂ ನಡೆದಿರುತ್ತದೆ. ಹೀಗಾಗದಿದ್ದರೆ, ದೇಹದ ಪೋಷಣವೇ ಆಗಲಾರದು. ಈ ತ್ವಗಿಂದ್ರಿಯದ ಸಂಪೂರ್ಣ ನಾಶವಾದರೆ ಚರ್ಮವೆಲ್ಲ ಒಣಗಿ ರಕ್ತವೇ ಓಡಾಡುವ ವದಿಲ್ಲ. ಇಂಥ ಪ್ರಸಂಗದಲ್ಲಿ ಮನುಷ್ಯನು ಬದುಕುವದೇ ಇಲ್ಲ .



-೧೧-

ಇತರ ಇಂದ್ರಿಯಗಳು ಈ ದೇಹದ ಒಂದೊಂದು ಪ್ರದೇಶದಲ್ಲಿರುವದರಿಂದ, ಇವುಗ ಳೊಳಗೆ ಒಂದೊಂದರ ನಾಶವಾದರೆ ಅಷ್ಟೊಂದು ಹಾನಿಯಾಗುವದಿಲ್ಲ. ಆಯಾ ಇಂದ್ರಿ ಯಗಳಿಂದ ಆಗತಕ್ಕ ವಿಷಯಜ್ಞಾನವು ಮಾತ್ರ ಆಗುವದಿಲ್ಲ . ನೇಂದ್ರಿಯವಿಲ್ಲದಿ ದ್ದರೆ ಅಥವಾ ಶ್ರೋತ್ರೇಂದಿಯವಿಲ್ಲದಿದ್ದರೆ ಆ ದ್ವಾರಗಳಿಂದಾಗುವ ಸತ್ಯಕ್ಕೆ ಹಾನಿಯಾಗಿ, ಮನುಷ್ಯನು ಇಹ-ಪರಗಳೆರಡಕ್ಕೂ ದೂರಾಗುತ್ತಾನೆ . ಇಷ್ಟೊಂದು ಇಂದ್ರಿಯಗಳ ಮಹತ್ವವಿರುತ್ತದೆ. ತೇಜಸ್ಸೆಂಬ ಭೂತದ ಸೂಕ್ಷ್ಮಾಂಶವೆನಿಸುವ ನೇತ್ರಂದ್ರಿಯವು, ಹೊರಗಿನ ಸೂರ್ಯ ಮುಂತಾದ ವಸ್ತುಗಳ ಪ್ರಕಾಶವನ್ನು ಗ್ರಹಿಸಿ ಒಳಗೆ ಒಯ್ಯು ತದೆ. ಈ ಪ್ರಕಾಶವು ಒಳಗೆ ಹೋಗಿ ಅಂತಃಪ್ರಕಾಶದಲ್ಲಿ ಕೂಡಿ ರಕ್ತವಾಹಿನಿಗಳ ಲ್ಲೆಲ್ಲ ಸಂಚರಿಸುತ್ತ, ಅಲ್ಲಿರುವ ಸಣ್ಣ ಸಣ್ಣ ದುಷ್ಟ ಕೃಮಿ-ಕೀಟಾದಿಗಳನ್ನು ನಾಶಗೊ ಳಿಸಿ ಒಂದು ಪ್ರಕಾರದ ಪುಷ್ಟಿಯನ್ನೂ, ಸುಖವನ್ನೂ, ಸಾಮರ್ಥ್ಯವನ್ನೂ ಸಂಪಾದಿಸಿ ಕೊಡುವದಲ್ಲದೆ ಮನುಷ್ಯನನ್ನು ಸತೇಜನನ್ನಾಗಿಯೂ , ಕರ್ತವ್ಯಕ್ಷಮನನ್ನಾಗಿಯೂ ಮಾಡುತ್ತದೆ. ಈ ಹೊರಗಿನಪ್ರಕಾಶವುನಮಗೆ ಸರ್ವಥಾ ತಗಲದಿದ್ದರೆ ನಾವು ಉಳಿ ಯುವ ಸಂಭವವೇ ಇಲ್ಲ. ಕತ್ತಲೆಕೋಣೆಯ ಶಿಕ್ಷೆಯು ಎಷ್ಟು ಕಠಿಣವಾದದ್ದೆಂಬದನ್ನು ನಾವುಬರೆಯುವ ಕಾರಣವಿಲ್ಲ. ಸೂರ್ಯನ ಪ್ರಕಾಶವು ತಾಪಕಾರಕವಾಗಿದ್ದರೂ, ನೇತ್ರ ದ್ವಾರದಿಂದ ಒಳಗೆ ಹೋದರೆ ಸೌಮ್ಯವಾಗುತ್ತದೆ. ಇನ್ನು ಹೊರಗಿನ ಶಬ್ದವು ನಮ್ಮ ಶ್ರವಣೇಂದ್ರಿಯಕ್ಕೆ ಬೀಳದೆ ಹೋದರೆ ನಮಗೆ ವ್ಯವಹಾರಜ್ಞಾನವೇನೂ ಆಗದೆ, ನಾವು ಮೂಕರಾಗಿಹೋಗುತ್ತೇವೆ. ನಾವು ಇದ್ದೂ ಇಲ್ಲದಂತಾಗುತ್ತೇವೆಂಬುವದು ಗೊತ್ತಿದ್ದ ಸಂಗತಿಯಾಗಿರುವದು . ನಮ್ಮ ಘ್ರಾಣೇಂದ್ರಿಯವು ಗಂಧವನ್ನು ಗ್ರಹಿಸದಿದ್ದರೆ ನಮಗೆ ಕೆಟ್ಟದ್ದು, ಕೊಳತದ್ದು, ಹಳಸಿದ್ದು, ಯಾವದೂ ತಿಳಿಯದೆ ಸಿಕ್ಕ ಸಿಕ್ಕ ಪದಾ ರ್ಥಗಳನ್ನು ತಿಂದು ನಮ್ಮ ದೇಹದ ಹಾನಿಯನ್ನು ನಾವೇ ಮಾಡಿಕೊಳ್ಳುವ ಪ್ರಸಂಗವು ಬಂದೀತು. ರಸನೇಂದ್ರಿಯದ ಮಾತೂ ಹಾಗೆಯೇ ಸರಿ. ಇದರಂತೆ ಪಂಚಕರ್ಮೇ೦ ದ್ರಿಯಗಳಲ್ಲಿಯ ಯಾವದೊಂದು ಇಂದ್ರಿಯದ ನಾಶವಾದರೆ, ಆ ಇಂದ್ರಿಯದ ವ್ಯಾಪಾ ರವು ನಿಂತು ಹೋಗಿ ದೇಹಕ್ಕೆ ಅಪಾಯವು ತಟ್ಟುವದು .

೯ ನೇ ಪ್ರಕರಣ - ವಿಷಯಗಳು,

याज्यं सुखं विषयसंगमजन्म पुंसाम् ।

ಅಂದರೆ ವಿಷಯಗಳು ಪ್ರಾಣಿಗಳನ್ನು ಬಂಧಿಸುವ ವಸ್ತುಗಳೆಂದು ಅರ್ಥವಾಗುತ್ತದೆ. ಈ ವಿಷಯಗಳು ಮನಸ್ಸಿನಿಂದೊಡಗೂಡಿದ ಇಂದ್ರಿಯಗಳಿಗೆ ಗೋಚರವಾದರೆ ಸಾಕು, ಪ್ರಾಣಿಗಳನ್ನು ಎಳೆದೇ ಬಿಡುತ್ತವೆ. ಆಗ ಸಹಸಾ ಇವನ್ನು ಉಪಭೋಗಿಸಲೇಬೇಕೆಂಬ ಇಚ್ಛೆಯು ಪ್ರಾಣಿಮಾತ್ರಕ್ಕೆ ಹುಟ್ಟುತ್ತದೆ.

ವಿಷಯಗಳಲ್ಲಿ ದೇವರು ಒಂದು ವಿಲಕ್ಷಣವಾದ ಆಕರ್ಷಣಶಕ್ತಿಯನ್ನಿಟ್ಟಿರುವನು. ಇದರಿಂ

-೧೨-

ದಲೇ ಸಕಲಪ್ರಾಣಿಗಳು ವಿಷಯಕಾರಗಳಲ್ಲಿ ಬಿದ್ದು ಅಲ್ಲಿಯೇ ಹೊರಳಾಡುತ್ತಲಿರುವದು

ಸಕಲರಿಗೂ ದೃಗ್ಗೋಚರವೇ ಇರುವದು. ಎಲ್ಲೆಲ್ಲಿ ನೋಡಿದರೂ ಯಾರನ್ನು ನೋಡಿದರೂ ವಿಷಯೋಪ ಭೋಗದಲ್ಲಿ ತೊಡಗಿದವರೇ ಕಣ್ಣಿಗೆ ಕಾಣುವರಲ್ಲದೆ, ವಿಷಯವರಾಙ್ಮುಖ ರಾದವರ, ತೋರವವೇ ಇಲ್ಲ. ಈ ಸಂಗತಿಯನ್ನರಿತ ವಿದ್ವಜ್ಜನರು “ವೇಧಾ ದ್ವೇಧಾ ಭ್ರಮಂಚಕ್ರೇ ಕಾಂತಾಸು ಕನಕೇ‍ಷ್ಚುಚ|ತಾಸುತೇಷ್ವಪ್ಯನಾಸಕ್ತಃಸಾಕ್ಷಾದ್ಭರ್ಗೋ ನರಾ ಕೃತಿಃ।” ಅಂದರೆ ಸೃಷ್ಟಿಕರ್ತನಾದ ಬ್ರಹ್ಮದೇವನು ಸೃಷ್ಟಿಮಾಡುವಾಗಲೇ ಪುರುಷರ ಉದ್ದೇಶವಾಗಿ ಕಾಂತಾ-ಕನಕ(ಸುವರ್ಣ)ಗಳೆಂಬ ಎರಡು ಸ್ಥಳಗಳಲ್ಲಿ ಮೋಹವನ್ನಿಟ್ಟನು; ಆದರೆ ಅವೆರಡರಲ್ಲಿಯೂ ಆಸಕ್ತಿಯಿಲ್ಲದ ಪುರುಷನು ಮನುಷ್ಯದೇಹವನ್ನು ಧರಿಸಿದ್ದರೂ ಸಾಕ್ಷಾತ್ ಪರಮೇಶ್ವರನೇ ಎಂದು ಹೇಳಬೇಕೆಂದು ಹೇಳಿರುವರು. ಸಾರಾಂಶ, ಜಗತ್ತಿ ನಲ್ಲಿ ವಿಷಯಾಸಕ್ತನಾಗದಿರುವ ಪುರುಷನೇ ದುರ್ಲಭನೆಂಬ ತಾತ್ಪರ್ಯವು.

ಶೈವಸಿದ್ಧಾಂತದವರು "ಪಶು-ಪಾಶ-ಪರಮೇಶ್ವರ'ರೆಂಬ ಈಮೂರೇ ಪದಾರ್ಥಗಳು

ಜಗತ್ತಿನಲ್ಲಿ ಇರುವವು. ಇವುಗಳಹೊರತು ಮತ್ತೊಂದು ಪದಾರ್ಥವೇ ಇಲ್ಲ. ಈ ಮೂರೇ ಪದಾರ್ಥಗಳಿಂದೇ ಜಗತ್ತು ತುಂಬಿರುವದು . ನಮ್ಮನ್ನು ಹಿಡಿದುಕೊಂಡು ದೇವತೆಗಳ ವರೆಗೆ ಇರುವ ಪ್ರಾಣಿಗಳೆಲ್ಲ ಪಶುಗಳೆನಿಸುವವು. ಪಾಶವೆಂದರೆ ಇವರು ಉಪಭೋಗಿ ಸುವ ವಿಷಯಗಳೇ. ಪರಮೇಶ್ವರನೆಂದರೆ ಪಾಶಗಳಲ್ಲಿ ತೊಡಗಿದ ಪಶುಗಳನ್ನುದ್ಧರಿಸುವ ದೇವರು. ಕಣ್ಣಿಯಿಂದ ಕಟ್ಟ ಹಾಕಿದ್ದರಿಂದ ಮಲ-ಮೂತ್ರಗಳನ್ನು ಕಟ್ಟದ ಸ್ಥಳದ ಲ್ಲಿಯೇ ಮಾಡಿಕೊಂಡು, ಹಸಿವಾದರೆ ಅಲ್ಲಿಯೇ ಇದ್ದು ಮೇಯುತ್ತ, ನಿದ್ರೆ ಬಂದರೆ ಅದೇ ಹೊಲಸಿನಲ್ಲಿಯೇ ಮಲಗಿ ನಿದ್ರೆಮಾಡುತ್ತ, ಮೈಯೆಲ್ಲ ಹೊಲಸು ಮಾಡಿಕೊಂಡು, ದುರ್ಗಂಧವನ್ನು ಅನುಭೋಗಿಸುತ್ತ, ಬೇಜಾರಗೊಂಡಿರುವ ದನಗಳನ್ನು ಬೆಳಗಿನ ಝುವ ದಲ್ಲಿ ಪರಮಕಾರುಣಿಕನಾದ ಗೋಪಾಲಕನು ಹೇಗೆ ಕಣ್ಣಿಯನ್ನುಚ್ಚಿಬಿಡುವನೋ, ಹಾಗೆ ಪರಮಕಾರುಣಿಕನಾದ ಪರಮೇಶ್ವರನು, ವಿಷಯಾಸಕ್ತರಾಗಿ ಸಂಸಾರದಲ್ಲಿ ಹೊರ ಳಾಡುತ್ತ ಅನೇಕ ಯಾತನೆಗಳನ್ನು ಅನುಭೋಗಿಸುತ್ತ ಪಾರಗಾಣದೆ ಪ್ರಾಂತ- ಲ್ಲಿವೈರಾಗ್ಯ ಹೊಂದಿತನ್ನನ್ನು ಸ್ಮರಿಸುವ ನಮ್ಮನ್ನು ಸದ್ಗುರುರೂಪವನ್ನು ಧರಿಸಿ ಪ್ರತ್ಯಕ್ಷವಾಗಿ ಬಂದು ವಿವೇಕೋಪದೇಶದಿಂದ ಪಾಶಗಳೆನಿಸುವ ವಿಷಯಗಳಿಂದ ದೂರಮಾಡುವನು. ಆದ್ದರಿಂ ದಲೇ ಪರಮೇಶ್ವರನಿಗೆ("ಪಶುಪತಿ")ಯೆಂಬ ಹೆಸರುಂಟಾಗಿರುವದು. ನಾವೆಲ್ಲ ಪಶುಗಳು, ವಿಷಯಗಳೇ ಪಾಶಗಳು ಅಂದರೆ ಕಣ್ಣಿಗಳು, ನಾವೆಲ್ಲರೂ ವಿಷಯಾಸಕ್ತರಾಗಿರುವದ ರಿಂದ ನಮಗೆ ಪಶು ಎಂಬ ಹೆಸರು ಬಂದಿದೆ. ಈ ಅಭಿಪ್ರಾಯವನ್ನು "ಶಿವಕಲ್ಪವಲ್ಲಿ" ಎಂಬ ಗ್ರಂಥದಲ್ಲಿ “ಶಿಪಿವಿಷ್ಟ” ಎಂಬ ನಾಮದ ಅರ್ಥವನ್ನು ಮಾಡುವಾಗ "ಪಶವಃ ಪರಮಾತ್ಮನಿ ಧೀವಿರಹಾತ್ ದ್ವಿಪದಾಶ್ಚ, ನರಾಶ್ಚ ಸುರಾಃ ಪಶವಃ|ತದನುಗ್ರಹ ಕೃದ್ದ ದಯಂ ಪ್ರವಿಶನ್ ಪ್ರಥಿತೋSಸಿ ವಿಭೋ ಶಿಪಿವಿಷ,ಇತಿ||” ಪರಮಾತ್ಮನ ವಿಷಯವಾದ ಜ್ಞಾನವಿಲ್ಲದ ರಿಂದ ಎರಡು ಕಾಲುಗಳುಳ್ಳ ಮನುಷ್ಯರೂ, ದೇವತೆಗಳೂ ಕೂಡ ಪಶುಗ

ಳೆನಿಸುವರು. ನಾಲ್ಕು ಕಾಲುಗಳುಳ್ಳ ದನ-ಕರಗಳಿಗೂ,ಮನುಷ್ಯರಿಗೂ,ದೇವತೆಗಳಿಗೂ

-೧೩-

ಪರಮಾತ್ಮನ ಜ್ಞಾನವಿಲ್ಲ. ಇಂಥ ಪರಮಾತ್ಮನ ಜ್ಞಾನವಿಲ್ಲದವರನ್ನು ಉದ್ಧರಿಸುವದಕ್ಕಾಗಿ, ಅವರವರ ಹೃದಯವನ್ನು ಪ್ರವೇಶಮಾಡುವದರಿಂದ ಪರಮೇಶ್ವರನೇ ನಿನಗೆ “ಶಿಪಿವಿಷ" ಎಂಬ ನಾಮವು ಬಂದಿರುವದು "ಶಿಸಿ" ಅಂದರೆ "ಪಶು" "ವಿಷ್ಟ" ಅಂದರೇ" ಪ್ರವೇಶಮಾಡಿ ದವನು" ಎಂದು ಭಾಸ್ಕರರಾಯರೆಂಬ ವಿದ್ವಾಂಸರು ಹೇಳಿರುತ್ತಾರೆ. ಈ ಅಭಿಪ್ರಾಯವನ್ನು ಶ್ರೀ ಮಚ್ಚಾರೀರಕಭಾಷ್ಯ ಜಿಜ್ಞಾಸಾಸೂತ್ರದಭಾಷ್ಯದಲ್ಲಿ "ಪಶ್ಚಾದಿಭಿಶ್ಚಾ ವಿಶೇಷಾತ್" ಇಲ್ಲಿಂದ ಉಪಕ್ರಮಿಸಿ "ಅತಶ್ಚ ಪಪ್ವಾದಿಭೀಃ‍ ಸಮಾನಃ ಪುರುಷಾಣಾಂ ಪ್ರಮಾಣಪ್ರಮೇಯ ವ್ಯವಹಾರಃ" ಇಲ್ಲಿಯವರೆಗಿನ ಗ್ರಂಥದಿಂದ ವಿವರಿಸಿರುತ್ತಾರೆ. ಕೈಯಲ್ಲಿ ಕೋಲು ಹಿಡಿದು ಬೆದರಿಸಿದರೆ ಇವನು ನಮ್ಮನ್ನು ಹೊಡೆಯುತ್ತಾನೆಂಬ ಭೀತಿಯಿಂದ ಪಶುಗಳುಓಡಹತ್ತುತ್ತವೆ, ಅದೇ, ಎಳೆಯಹುಲ್ಲನ್ನು ಕೈಯಲ್ಲಿ ಹಿಡಿದು ತೋರಿಸುತ್ತ ಕರೆಯಹತ್ತಿದರೆ ಒಂದೊಂದೇ ಹೆಜ್ಜೆಯನ್ನಿಡುತ್ತ ಪ್ರೀತಿಸುತ್ತಿಬರುತ್ತವೆ. ಇದೇ ಮೇರೆಗೆ ಕೈಯಲ್ಲಿ ಶಸ್ತ್ರವನ್ನು ಹಿಡಿದು ಕಣ್ಣು ಕೆಂಪು ಮಾಡಿಕೊಂಡು ಬೆದರಿಸುತ್ತಿರುವ ಬಲಾಢ್ಯಪುರುಷನನ್ನು ಕಂಡರೆ ತಿಳುವ ಳಿಕೆಯುಳ್ಳವನೆನಿಸುವ ಮನುಷ್ಯನಾದರೂ ಓಡಹತ್ತುತ್ತಾನೆ; ಪ್ರೀತಿಯಿಂದ ಕರೆಯುವ ಸೌಮ್ಯನಾದ ಪುರುಷನ ಹತ್ತರ ಮೆಲ್ಲನೆ ಹೋಗುತ್ತಾನೆ, ಆದ್ದರಿಂದ ಪಶುಗಳು ಹೇಗೆ ದೇಹಾಭಿಮಾನಿಗಳಾಗಿ ವಿಷಯಾಸಕ್ತಗಳೋ, ಇದರಂತೆಯೇ ತಿಳುವಳಿಕೆಯುಳ್ಳ ಮನು ಷ್ಯನಾದರೂ ದೇಹಾಭಿಮಾನಿಯಾಗಿ ವಿಷಯಾಸಕ್ತನಾಗಿಹೋದರೆ, ಇವನನ್ನು ಪಶುವೆಂದು ಯಾಕೆ ಹೇಳಬಾರದು? ಇನ್ನು ದೇವತೆಗಳಿಗೆ ದೇಹಾಭಿಮಾನವೂ, ವಿಷಯಾಸಕ್ತಿಯೂ ಅದೆಯೋ, ಇಲ್ಲವೋ ಎಂಬದನ್ನು ಕುರಿತು ವಿಚಾರಿಸುವಾ; ದೇವತೆಗಳು ದೈತ್ಯರಕೂಡ ಹೋರಾಡಿದ್ದು ಪುರಾಣೇತಿಹಾಸಗಳಲ್ಲಿ ಕಂಡುಬರುತ್ತದೆ. ಈ ದೇವತೆಗಳು ಬ್ರಹ್ಮಜ್ಞಾ ನಿಗಳೇ ಆಗಿದ್ದರೆ, ದೈತ್ಯರಕೂಡ ಯಾತರ ಸಲುವಾಗಿ ಹೋರಾಡುತ್ತಿದ್ದರು? ಇದಕ್ಕೆ ವಿಷಯಾಭಿಲಾಷೆಯೇ ಕಾರಣವೆನಿಸುವದು. ಈ ಭೂಲೋಕದಲ್ಲಿ ಯಾರಾದರೂ ಅತ್ಯುಗ್ರ ತಪಸ್ಸನ್ನು ಮಾಡಹತ್ತಿದರೆ, ದೇವತೆಗಳಿಗೆ ಹೊಟ್ಟೆಕಿಚ್ಚು ಯಾಕೆ ? ಸಗರರಾಯನು ಅಶ್ವಮೇಧಯಾಗವನ್ನು ಮಾಡಿದಾಗ ದೇವೇಂದ್ರನು ಅಶ್ವವನ್ನು ಯಾಕೆ ಕದ್ದೊಯ್ಯ ಬೇಕು? ಈ ವಿಷಯದಲ್ಲಿ ಇಂದ್ರನಿಗೆ ತನ್ನ ಪದಚ್ಯುತಿಯಾಗುವದೆಂಬ ಭೀತಿಯೇ ಕಾರ ಣವಾಗಿರುವದು . ಹೀಗೆ ವಿಷಯಗಳು ಬ್ರಹ್ಮಾದಿ ದೇವತೆಗಳನ್ನೂ ಕೂಡ ಅಮಾರ್ಗಕ್ಕೆ ಹಚ್ಚಿದಮೇಲೆ, ನಮ್ಮಂಥವರ ಪಾಡೇನು ?

ಜೀವಾತ್ಮನಿಂದ ಸಂಯುಕ್ತವಾದ ಮನಸ್ಸು ಇಂದ್ರಿಯಗಳಿಂದ ಕೂಡಿಕೊಳ್ಳು, ತ್ತದೆ. ಮನಸ್ಸಿನಿಂದ ಕೂಡಿಕೊಂಡಿರುವ ಜ್ಞಾನೇಯಂದ್ರಿಯಗಳು ವಿಷಯಗಳ ಮೇಲೆ ಹೋಗುತ್ತವೆ. ಆಗ ವಿಷಯಗಳ ಜ್ಞಾನವಾಗುತ್ತದೆ. ಮನಸ್ಸು ಒಂದು ಕಡೆ ಇಂದ್ರಿ ಯಗಳು ಬೇರೆ ಕಡೆಗೆ ಹೀಗಿದ್ದರೆ ವಿಷಯಗಳ ಜ್ಞಾನವು ಎಲ್ಲಿಂದುಂಟಾಗಬೇಕು? ಈ ವಿಷಯಗಳಲ್ಲಿ ಐದುಭಾಗಗಳನ್ನು ಮಾಡಿರುತ್ತಾರೆ. ಅವು ಯಾವವೆಂದರೆ, ೧ ರೂಪ, ೨ ಶಬ್ದ, ೩ ಗಂಧ ೪ ರಸ, ೫ ಸ್ಪರ್ಶ ಎಂಬವು. ಕಣ್ಣಿಗೆ ತೋರುವದು ರೂಪವು. ಕಿವಿಗೆ ಕೇಳುವದು ಶಬವು, ಘ್ರಾಣೇಂದ್ರಿಯಕ್ಕೆ ಗೋಚರವಾಗುವದು ಗಂಥರು. ರಸ

-೧೪-

ನೇಂದ್ರಿಯಕ್ಕೆ ತಿಳಿಯುವದು ರಸವು. ಚರ್ಮೇಂದ್ರಿಯಕ್ಕೆ ವಿಷಯವಾಗುವದು ಸ್ಪರ್ಶವು. ವಿಷಯಗಳನ್ನು ಉಪಯೋಗಿಸಿಕೊಳ್ಳುವ ಚಾತುರ್ಯವು ಮನುಷ್ಯಪ್ರಾಣಿಗೆ ವಿಶೇಷ ವಾಗಿರುತ್ತದೆ; ಆದ್ದರಿಂದ ಇತರ ಪ್ರಾಣಿಗಳಿಗಿಂತಲೂ ಮನಷ್ಯನನ್ನು ವಿಷಯಗಳು ಬಹು ತೀವ್ರವಾಗಿ ಅಂಟಿಕೊಳ್ಳುತ್ತವೆ. ಮನುಷ್ಯನು ಒಂದು ಸಾರೆ ವಿಷಯಗಳಲ್ಲಿ ಪ್ರವೇಶಮಾಡಿದರೆ ಸಾಕು. ಅವನಿಗೆ ಅವನ್ನು ಒದ್ದುಗೆದು ಹೊರಗೆ ಬರುವದಕ್ಕೆ ಆಗು ವದೇ ಇಲ್ಲ. ವಿಷಯಗಳಲ್ಲಿ ಏನೂ ಸ್ವಾರಸ್ಯವಿಲ್ಲದಿದ್ದರೂ ಚಿಂತೆಯಿಲ್ಲ, ಅವನ್ನು ಬಿಡುವಹಾಗಿಲ್ಲ. ಒಂದು ನಾಯಿಯು ಹಾದಿಹಿಡಿದು ಹೋಗುವಾಗ ಒಂದು ಎಲವು ಕಣ್ಣಿಗೆ ಬಿದರೆ ಅದನ್ನು ಮಾಂಸಭ‍ಮದಿಂದ ಬಾಯಿಯಲ್ಲಿ ಕಟ್ಟಿಕೊಳ್ಳುತ್ತದೆ. ಆ ಮೇಲೆ ಆ ನಾಯಿಗೆ ಆ ಎಲವನ್ನು ಬಿಡುವದಕ್ಕೆ ಆಗುವದಿಲ್ಲ. ಎಲ್ಲಿ ಹೋದರೂ ಆ ಎಲವನ್ನು ಬಾಯಿಯಲ್ಲಿ ಕಚ್ಚೇಇರುತ್ತದೆಂಬದು ಎಲ್ಲರಿಗೂ ಅನುಭವದ ಸಂಗತಿಯೇ ಇರುತ್ತದೆ. ಅದು ಯಾಕೆ ಬಿಡುವದಿಲ್ಲವೆಂದರೆ, ತನ್ನ ಬಾಯಿಯಲ್ಲಿರುವ ಮಧುರವಾದ ಜೊಲ್ಲು ಆ ಏಲವಿನ ಮೇಲೆ ಬಿದ್ದ ಕೂಡಲೆ ಆ ಎಲವು ಒಂದು ಪ್ರಕಾರವಾಗಿ ಅದಕ್ಕೆ ರುಚಿಸುತ್ತದೆ, ಬಾಯಿಯಲ್ಲಿ ಕಚ್ಚಿರುವದರಿಂದ ಯಾವಾಗಲಾ ಜೊಲ್ಲಿನಿಂದ ಅದು ಆರ್ದ್ರವಾಗಿರುತ್ತದೇ. ಅದನ್ನು ಇದು ಮತ್ತು ಮತ್ತು ನೆಕ್ಕುತ್ತಲೇ ಇರುತ್ತದೆ. ಈ ದೃಷ್ಟಾಂತದಿಂದ ಮನುಷ್ಯನು ನೀರಸವಾದ ವಿಷಯಗಳಲ್ಲಿ ತೊಡಗಿಕೊಂಡು ಪರಮಾರ್ಥ ವನ್ನು ಮರೆತುಬಿಡುತ್ತಾನೆ. ಆ ನಾಯಿಯು ಬಾಯಿಯಲ್ಲಿ ಎಲ್ಲವನ್ನು ಕಚ್ಚಿಕೊಂಡು ಆಹಾರ-ವಿಹಾರಗಳನ್ನು ಹ್ಯಾಗೆ ಬಿಡುತ್ತದೆಯೋ, ಹಾಗೆ ಮನುಷ್ಯನು ಪರಮಾರ್ಥವನ್ನು ಮರೆತು ವಿಷಯಭೋಗದಲ್ಲಿ ತೊಡಗುವನು. ಈ ವಿಷಯಗಳು ಯಾವಾಗಲೂ ಹಾನಿ ಕಾರಕಗಳೆಂಬ ಬಗ್ಯೆ ಪೌರಾಣಿಕರು "ಕುರಂಗಮಾತಂಗ ಪತಂಗಭೃಂಗ ವಿಾನಾಹತಾಃ ಪಂಚಭಿರೇವಪಂಚ | ಏಕಃಪ್ರಮಾದೀ ಸಕಥಂ ನ ಹನ್ಯತೇ ಯಃ ಸೇವತೆ ಪಂಚಭಿರೇವ ಪಂಚ |"ಅಂದರೆ “ ಕುರಂಗವೆಂದರೆ ಎರಳೆಯು, ಇದು ಶಬ್ದವೆಂಬ ವಿಷಯವನ್ನು ತನ್ನ ಶ್ರೋತ್ರೇಂದ್ರಿಯದಿಂದ ಅನುಭವಿಸಿ ನಾಶವನ್ನು ಹೊಂದುವದು. ಅದು ಹೇಗೆಂದರೆ- ಒಬ್ಬಚಿಗರಿಬೇಟೆಗಾರನು ಚಿಗರಿಗಳನ್ನು ಹಿಡಿಯುವದರಸಲುವಾಗಿ ತನ್ನ ಬಲೆಯನ್ನು ಸುತ್ತ ಲೂ ಬೀಸಿಕೊಂಡು, ದಿವ್ಯವಾದ ಗಾನವನ್ನು ಮಾಡುತ್ತಕುಳಿತಿರುತ್ತಾನೆ. ಅಷ್ಟರಲ್ಲಿ ಒಂದು ಜಿಂಕೆಯು ಆ ದಿವ್ಯವಾದ ಗಾನದಲ್ಲಿ ಲುಬ್ಬವಾಗಿ ಆ ಬಲೆಯಲ್ಲಿ ಬಿದ್ದು ಸಾಯು ತ್ತದೆ. ಮಾತಂಗವೆಂದರೆ ಆನೆಯು, ಇದು ಸ್ಪರ್ಶವೆಂಬ ವಿಷಯದಿಂದ ಹಾನಿಯನ್ನು ಹೊಂದುವದು. ಅದು ಹೇಗಂದರೆ, ಆನೆಯನ್ನು ಹಿಡಿಯುವದರಸಲುವಾಗಿ ತರುಣವಾದ ಹೆಣ್ಣಾನೆಯನ್ನು ಗಂಡಾನೆಯಹತ್ತರ ಒಯ್ಯುತ್ತಾರೆ. ಆಗ ಆ ಗಂಡಾನೆಯು, ಹಣ್ಣಾನೆಯ ಮೈಮೇಲೆ ತನ್ನ ಸೊಂಡಿಲವನ್ನಾಡಿಸಿ ಆ ಸ್ಪರ್ಶಕ್ಕೆ ಮೋಹಿತವಾಗಿ ಸಿಕ್ಕು ತನ್ನ ಸ್ವಾತಂತ್ರ್ಯ ವನ್ನು ಕಳೆದುಕೊಳ್ಳುತದೆ; ಆದ್ದರಿಂದ ನಾನಾವಿಧವಾದ ಭಂಗವನ್ನು ಹೊಂದುತ್ತದೆ. ಪತಂಗವೆಂದರೆ ದೀಪದಹುಳವು. ಇದು ದೀಪವನ್ನುನೋಡಿ ದಿವ್ಯವಾದ ಫಲವೆಂಬ ಭ್ರಾಂತಿ

ಯಿಂದ ದೀಪದಮೇಲೆ ಬಿದ್ದು ಸತ್ತುಹೋಗುತ್ತದೆ. ಭ೦ಗವೆಂದರೆ ಗುಂಗೀಹುಳವು. ಇದು

-೧೫-

ಪುಷ್ಪಗಂಧಕ್ಕೆ ಮೋಹಿತವಾಗಿ ಸಕಲಪುಷ್ಪಗಳಲ್ಲಿ ಸಂಚರಿಸುತ್ತ ಚಂಪಕ(ಸಂಪಗಿ) ಪುಷ್ಪ ದಲ್ಲಿ ಕೂಡುತ್ತದೆ. ಆಮೇಲೆ ಎದ್ದು ಹಾರಿಹೋಗುವದಕ್ಕೆ ಬಾರದಂತಾಗಿ ಅಲ್ಲಿಯೇ ಸತ್ತುಹೋಗುತ್ತದೆ. ಇನ್ನು ಮೀನವು ಬಲೆಗಾರನ ಉಕ್ಕಿನಗಾಣದ ತುದಿಯ ಗೋದೀ ಹಿಟ್ಟನರಸಕ್ಕೆ ಮೆಚ್ಚಿಕೊಂಡು ಹಿಡಿಯಲು, ಪರಗೀ ಮುಳ್ಳಿನಂತೆ ವಕ್ರವಾಗಿರುವ ಆ ಗಾಣವು ಗಂಟಲಿನಲ್ಲಿ ಸಿಕ್ಕಕೂಡಲೆ ಸತ್ತುಹೋಗುತ್ತದೆ.ಹೀಗೆ ಹೀಗೆ ಇವೆಲ್ಲ ಪ್ರಾಣಿಗಳು ಒಂದೊಂದೇ ಇಂದ್ರಿಯಗಳಿಂದ ಒಂದೊಂದೇ ವಿಷಯಗಳನ್ನನುಭವಿಸಿ ಸತ್ತುಹೋಗು ತ್ತವೆ. ಇದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಇರುವದು. ಹೀಗಿರಲು, ಹೆಜ್ಜೆಹೆಜ್ಜೆಗೆ ತಪ್ಪುಮಾಡುತ್ತಿರುವ ಮನುಷ್ಯನು ತಾನೊಬ್ಬನೇ ಯಾವಾಗಲೂ ಐದೂ ಇಂದ್ರಿಯಗಳಿಂದ ವಿ ಷ ಯ ಗ ಳ ನ್ನು ಒಂದೇಕಾಲಕ್ಕೆ ಸೇವಿಸಿದಮೇಲೆ ಇವನ ಹಾನಿಯಾಗದೆ ಹೇಗೆ ಉಳಿಯುವದು? ಇದರ ಮೇಲಿಂನ ಇಂದ್ರಿಯಗಳ ಸಾಮರ್ಥ್ಯದ ಜ್ಞಾನವಾಗುತ್ತದೆ.

----------------------

೪ ನೆಯ ಪ್ರಕರಣ---ಮನಸ್ಸಿನ ಶುದ್ದೀಕರಣ

ಹೀಗೆ ಇಂದ್ರಿಯಗಳು ಎಷ್ಟೇ ಬಲಿಷ್ಠವಾಗಿರಲಿ, ವಿಷಯಗಳು ಎಷ್ಟೇ ಆಕರ್ಷಕ ವಾಗಿರಲಿ, ಮನಸ್ಸನ್ನಷ್ಟು ನಾವು ತಿದ್ದಿ ಹಾದಿಗೆ ತಂದು ಬಿಟ್ಟರೆ ಅವುಗಳ ಬಾಧೆಯು ಇಲ್ಲದಂತಾಗುವದು. ಆದರೆ ಈಗಿನ ಕಾಲದ ನಾವು ಕೆಲಸಕ್ಕೆ ಬಾರದ ಕಾಡುಕಲ್ಲಿನಂತಿ ರುವ ನಮ್ಮ ಮನಸ್ಸನ್ನು ತಿದ್ದಿ ಹಾದಿಗೆ ತರುವ ಕ್ರಮವು ಹೇಗೆ? ಅದನ್ನು ತಿದ್ದುವದಕ್ಕೆ ಉಪಾಯಗಳು ಯಾವವು? ಮತ್ತು ಆ ಉಪಾಯಗಳು ಸುಲಭಸಾಧ್ಯಗಳೊ, ಕಠಿಣ ಸಾಧ್ಯಗಳೊ, ಅಸಾಧ್ಯಗಳೊ? ಕದಾಚಿತ್ ಅವು ಅಸಾಧ್ಯವಾಗಿದ್ದರೆ, ಅವನ್ನು ಹೇಳಿ ಪ್ರಯೋಜನವೇನು ? ಕೇಳಿ ಫಲವೇನು? ಯಾವ ಉಪಾಯಗಳು ಸುಲಭಸಾಧ್ಯವಾಗಿ ಯೂ, ಅನುಭವಕ್ಕೆ ಬರುವವಾಗಿಯೂ, ಇರುವವೋ, ಅಂಥ ಉಪಾಯಗಳನ್ನು ಮಾತ್ರ ಹೇಳುವದೂ, ಕೇಳುವದೂ ಶ್ರೇಯಸ್ಕರವಾಗಿರುವದು. ಆದ್ದರಿಂದ ಅಂಥ ಉಪಾಯ ಗಳನ್ನೇ ಇಲ್ಲಿ ನಾವು ಹೇಳುವದಕ್ಕೆ ಯತ್ನಿಸುತ್ತೇವೆ. ಮನಸ್ಸನ್ನು ಶುದ್ಧ ಮಾಡಿಕೊಳ್ಳುವ ದಕ್ಕಿಂತ ಮೊದಲು, ಮನಸ್ಸಿನ ಉತ್ಪತ್ತಿಯನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಅದರ ಉತ್ಪತ್ತಿಯು ಯಾವ ಪದಾರ್ಥಗಳಿಂದಾಗುತ್ತದೆಂಬುವದು ತಿಳಿದರೆ, ಆಯಾ ಪದಾರ್ಥ ಗಳ ಸಾಧಕ-ಬಾಧಕತನದ ಮೇಲಿಂದ ಮನಸ್ಸನ್ನು ತಿದ್ದಿಕೊಳ್ಳುವದು ಜಡವಾಗುವದಿಲ್ಲ. ಆದ್ದರಿಂದ ಮನಸ್ಸಿನ ಉತ್ಪತ್ತಿಯು ಯಾತರಿಂದಾಗುತ್ತದೆಂಬದನ್ನು ಮೊದಲು ನಿರ್ಣಯಿಸಿ, ಅನಂತರದಲ್ಲಿ ಮನಸ್ಸಿನ ಶುದ್ದಿಯ ಪ್ರಕಾರವನ್ನು ಹೇಳುವದಕ್ಕೆ ಉಪಕ್ರಮಿಸುತ್ತೇವೆ.

ಮನುಸ್ಸು ಅಣುಮಾತ್ರವಿರುತ್ತದೆಂದು ಶಾಸ್ತ್ರಕಾರರು ಶಾಸ್ತ್ರದಲ್ಲಿ ಹೇಳಿರುತ್ತಾರೆ. ಇದರ ಮೇಲಿಂದ ವಿಚಾರಿಸಿದರೆ, ಅಣುಪ್ರಮಾಣವಾಗಿರುವ ಮನಸ್ಸು ಯಾವ ಕೆಲಸಗ ಳನ್ನು ಮಾಡುವದಕ್ಕೆ ಸಮರ್ಥವಾದೀತು? ಅಶಕ್ತನಾದ ಮನುಷ್ಯನು ಪುಷ್ಟನ ಹಾಗೆ ಕೆಲಸವನ್ನು ಮಾಡಲಾರನೆಂಬುವದು ಸ್ಪಷ್ಟವಿರುತ್ತದೆ. ಆದ್ದರಿಂದ ಅಣುಮಾತ್ರವಾಗಿದ್ದ 

--೧೬--

ಮನಸ್ಸು ಯಾವ ಪದಾರ್ಥಗಳ ಎಷ್ಟೆಷ್ಟು, ಅಂಶಗಳನ್ನು ಕೂಡಿಕೊಂಡು ಪರಿಪೋಷ ವನ್ನು ಹೊಂದಿ ಕೆಲಸಮಾಡಲಿಕ್ಕೆ ಸಮರ್ಥವಾಗುತ್ತದೆಂಬದನ್ನು ಹೇಳಲಿಕ್ಕೆ ಬೇಕಾಗು ತ್ತದೆ. ಈ ಸಂಬಂಧದಿಂದ ಛಾಂದೋಗ್ಯೋಪನಿಷತ್ತಿನಲ್ಲಿ ಹೇಳಿದ್ದೇನಂದರೆ-

" ಅನ್ನಮಶಿತಂ ತ್ರೇಧಾವಿಧೀಯತೇ” ನಾವು ತಿಂದ ಅನ್ನದೊಳಗೆ ಮೂರುಭಾಗ ಗಳಾಗುತ್ತವೆ. ಒಂದು ಸ್ಥೂಲಭಾಗವು ಮಲವಾಗಿ ಹೋಗುತ್ತದೆ. ಮತ್ತೊಂದು ಮಧ್ಯಮಭಾಗವು ಮಾಂಸವಾಗುತ್ತದೆ, ಮೂರನೆಯ ಸೂಕ್ಷ್ಮ ಭಾಗವೇ ಮನಸ್ಸಾಗುತ್ತದೆ. ಇದೇ ಮೇರೆಗೆ ನಾವು ಕುಡಿದ ನೀರೊಳಗಾದರೂ ಮೂರುಭಾಗಗಳಾಗಿ, ಮೊದಲನೆಯ ಸ್ಥೂಲಭಾಗವು ಮೂತ್ರವೂ. ನಡುವಿನ ಮಧ್ಯಮಭಾಗವು ರಕ್ತವೂ, ಮೂರನೆಯ ನ್ಸೂಕ್ಷ್ಮಭಾಗವು ಪ್ರಾಣವೂ ಆಗುತ್ತವೆ. ಇದರಂತೆ ನಾವು ತಿನ್ನುವ ತೇಜಸ್ಸಿನೊಳಗೆ ಮೂರು ಭಾಗಗಳಾಗಿ, ಮೊದಲನೆಯ ಸ್ಥೂಲಭಾಗವು ಎಲವೂ, ಎರಡನೆಯ ಮಧ್ಯಮ ಭಾಗವು ಮಜ್ಜೆ (ಎಲವಿನೊಳಗಿನ ರಸ) ಯೂ, ಮೂರನೆಯ ಸೂಕ್ಷ್ಮ ಭಾಗವು ವಾಣಿಯೂ ಆಗುತ್ತವೆ. ತೇಜಸ್ಸೆಂದರೆ ಘೃತ-ತೈಲ ಮುಂತಾದ ಸ್ನಿಗ್ಧವಸ್ತುವು, ಸೂರ್ಯ- ಚಂದ್ರ-ಅಗ್ನಿ ಮುಂತಾದವಲ್ಲ. ಈ ಸ್ನಿಗ್ಧ ಪದಾರ್ಥಗಳನ್ನು ಯಾವಾಗಲೂ ಉಪ ಯೋಗಿಸುವ ಜನರ ದೇಹದಲ್ಲಿ ಇವು ವಿಲಕ್ಷಣವಾದ ಪ್ರಕಾಶವನ್ನುಂಟುಮಾಡುತ್ತಿರುವದ ರಿಂದ, ಇವಕ್ಕೆ ತೇಜಸ್ಸೆಂಬ ಹೆಸರನ್ನು ನಮ್ಮ ಪ್ರಾಚೀನರು ಇಟ್ಟಿರುತ್ತಾರೆ. ಮತ್ತು "ಜ್ಯೋತಿಶ್ಚರಣಾಭಿಧಾನಾತ್ ” ಎಂಬ ಬ್ರಹ್ಮಸೂತ್ರದ ಭಾಷ್ಯದಲ್ಲಿ "ಮನೋಜ್ಯೋತಿ ರ್ಜುಷತಾಮಾಜ್ಯಂ" ಎಂಬ ವೇದವಾಕ್ಯವನ್ನು ಹಿಡಿದು ಅರ್ಥ ಮಾಡುವಾಗ ತುಪ್ಪ ವನ್ನು ತಿನ್ನುವವರ ಮನಸ್ಸು ಜ್ಯೋತಿರೂಪವಾಗುತ್ತದೆ; ಅಂದರೆ ಜ್ಯೋತಿಸ್ಸಿನಂತೆ ಬಹು ಪದಾರ್ಥಗಳನ್ನು ಪ್ರಕಾಶಿಸುತ್ತದೆ. ಎಂದು ಹೇಳಿರುತ್ತಾರೆ. ಹೀಗಿದ್ದ ಮೂಲಕ ವಾಗಿಯೇ ನಮ್ಮ ಪೂರ್ವಜರು ಹವ್ಯ-ಕವ್ಯ ಮುಂತಾದ ಕರ್ಮಗಳಲ್ಲಿಯೂ, ಹೋಮ ಹವನಾದಿ ಕರ್ಮಗಳಲ್ಲಿಯೂ ಭೋಜನ- ಪ್ರತಿಭೋಜನಗಳಲ್ಲಿಯೂ, ದೇವರದೀಪಗಳ ಲ್ಲಿಯೂ ತುಪ್ಪಕ್ಕೆ ಪ್ರಾಧಾನ್ಯವನ್ನು ಕೊಟ್ಟಿರುವರು. ತುಪ್ಪವಿಲ್ಲದ ಹೊರತು ಬ್ರಾಹ್ಮಣರ ಕ ಮ ೯ ವೇ ಸಾಗುವಂತಿಲ್ಲ. ಈ ಪ್ರಕಾರವಾಗಿ ಅನ್ನದಿಂದ ಮನಸ್ಸೂ , ನೀರಿನಿಂದ ಪ್ರಾಣವೂ, ತೇಜಸ್ಸಿನಿಂದ ವಾಣಿಯೂ ಹುಟ್ಟುತ್ತವೆ. ಒಂದು ದೊಡ್ಡ ಪಾತ್ರೆಯಲ್ಲಿ ಮೊಸರು ಹಾಕಿ ಕಡಗೋಲಿನಿಂದ ಕಡೆಯಹತ್ತಿದರೆ, ಮೇಲಕ್ಕೆ ಬೆಣ್ಣೆಯು ಬರುವದಷ್ಟೆ, ಆ ಬೆಣ್ಣೆಯನ್ನು ಕಾಸಿದರೆ ತುಪ್ಪವಾಗುತ್ತದೆ. ಇದರಲ್ಲಿ ಸ್ಥೂಲಭಾಗವು ಮಜ್ಜಿಗೆ, ಮಧ್ಯಮಭಾಗವು ಬೆಣ್ಣೆಯು, ಸೂಕ್ಷ್ಮ ಭಾಗವೇತುಪ್ಪವು. ಇದರಂತೆ ಮನಸ್ಸು ಮುಂತಾದ್ದ ರಲ್ಲಿಯೂ ಅನ್ನಪಾನಾದಿಗಳ ಮೂರುಭಾಗಗಳ ಸಂಬಂಧದಿಂದ ತಿಳಿದುಕೊಳ್ಳಬೇಕು.

ಮೂಲತಃ ಮನಸ್ಸು ಅಣುಮಾತ್ರವಾಗಿರುತ್ತದೆ. ಹದಿನೈದು ದಿನಗಳವರೆಗೆ ತಿಂದಅನ್ನದಿಂದ ಅದಕ್ಕೆ ಹದಿನೈದು ಅಂಶಗಳು ಕೂಡಿಕೊಳ್ಳುತ್ತವೆ. ಆಗ ಮನಸ್ಸು ಷೋಡಶಕಲಾತ್ಮಕವಾಗಿ ವ್ಯವಹಾರಚತುರವೂ ಕಾರ್ಯಕರಣಸಮರ್ಥವೂ ಆಗುತ್ತದೆ. ನಾವು ಹದಿನೈದು ದಿವಸಗಳವರೆಗೆ ಅನ್ನವನ್ನು ಮುಟ್ಟದೆ ಕೇವಲ ನೀರನ್ನೇ ಕುಡಿದು 

--೧೭--

ಕೊಂಡಿದ್ದರೆ, ಪ್ರಾಣವೇನೂ ಹೋಗುವದಿಲ್ಲ. ಮನಸ್ಸುಮಾತ್ರ ಕ್ಷೀಣವಾಗಿಹೋಗುತ್ತದೆ. ಆಗ ನಾವು ಕಲಿತದ್ದೂ ಕೂಡ ಮರೆತಂತಾಗಿ ಯಾವದೂ ನೆನಪಿಗೆ ಬರುವದಿಲ್ಲ. ಇದು ಅನುಭವದ ಮಾತೇಸರಿ. ನಿರಾಹಾರ ಮಾಡಿದ ಮನುಷ್ಯನಿಗೆ ಯಾವದೂ ಬೇಡಾಗು ತ್ತದೆಂಬುವದು ಸ್ಪಷ್ಟವಿರುವದು. ಬಹುದಿವಸ ನಿರಾಹಾರ ಮಾಡಿದ ಮನುಷ್ಯನು ಮತ್ತೆ ಅನ್ನವನ್ನು ಉಣ ಹತ್ತಿದರೆ ಒಂದೊಂದುದಿವಸದ ಅನ್ನದಿಂದ ಒಂದೊಂದು ಅಂಶದಂತೆ ಹದಿನೈದು ದಿವಸಗಳಲ್ಲಿ ಹದಿನೈದು ಅಂಶಗಳು ಕೂಡಿಕೊಳ್ಳಲಾಗಿ , ಮನಸ್ಸುಪರಿಪೋಷ ವನ್ನು ಹೊಂದಿ ಷೋಡಶಕಲಾತ್ಮಕವಾದ ಕೂಡಲೆ ಮೊದಲಿನಂತೆ ಕಲಿತ ವಿಷಯಗಳೆಲ್ಲ ನೆನಪಿಗೆ ಬರುತ್ತವೆ . ಒಂದು ಬೆಂಕಿಯ ಕಿಡಿಯು ಇರುತ್ತದೆಂದು ತಿಳಿಯೋಣ. ಇದ ರಲ್ಲಿ ದಹನಶಕ್ತಿಯಿದ್ದರೂ ಅಷ್ಟು ವ್ಯಕ್ತವಾಗಿರುವದಿಲ್ಲ. ಅದನ್ನು ಮುಟ್ಟಿದರೆ ಬಹಳ ಸುಡುವದಿಲ್ಲ. ಆದರೆ ಇದಕ್ಕೆ ಒಣತರಗುಗಳನ್ನೂ, ಒಣಹುಲ್ಲನ್ನೂ ಕೂಡಿಸಿ ಗಾಳಿ ಹಾಕಿ ಹೊತ್ತಿಸಿದರೆ ಈ ಸಣ್ಣ ಬೆಂಕಿಯ ಕಿಡಿಯು ಪರಿಪುಷ್ಟವಾಗಿ ಊರಿಗೆ ಊರನ್ನೇ ಸುಡಬಹುದು. ಇದೇ ಮೇರೆಗೆ ಮನಸ್ಸಾದರೂ ಪರಿಪುಷ್ಟವಾಯಿತೆಂದರೆ ಸಕಲವನ್ನೂ ಗ್ರಹಿಸುವ ಸಾಮರ್ಥ್ಯವನ್ನು ಹೊಂದುತ್ತದೆ .

ಈ ಪ್ರಕಾರವಾಗಿ ಮನಸ್ಸು ಅನ್ನಜನ್ಯವೆಂದು ಸಿದ್ದವಾದಬಳಿಕ, ಅದರ ಶುದ್ದಿ

ಯಾದರೂ ಅನ್ನದಿಂದಲೇ ಆಗುತ್ತದೆಂದು ಸಿದ್ದವಾಗುತ್ತದೆ . ಅನ್ನದಲ್ಲಿ ಸಾತ್ವಿಕ,ರಾಜಸ, ತಾಮಸವೆಂದು ಮೂರು ವರ್ಗಗಳಿರುತ್ತವೆ. ಇವುಗಳಲ್ಲಿ ರಾಸಜ-ತಾಮಸಗಳನ್ನು ಬಿಟ್ಟು ಸಾತ್ಬಿಕಾನ್ನವನ್ನೇ ಸ್ವೀಕರಿಸಿ ಮನಸ್ಸಿನ ಪೋಷಣವನ್ನು ಮಾಡಬೇಕು. ಈ ಸಾತ್ವಿಕಾನ್ನದಿಂದ ಸುಶಿಕ್ಷಿತವಾದ ಮನಸ್ಸು ಸಿದ್ದವಾಗುತ್ತದೆ . ಮನಸ್ಸು ಸುಪರಿ ಶುದ್ಧವಾಗಬೇಕಾದರೆ ಯೋಗ್ಯವಾದ ಆಹಾರವನ್ನು ಕೊಡಬೇಕೆಂದು ಛಾಂದೋಗ್ಯದಲ್ಲಿ ಸನತ್ಕುಮಾರ ನಾರದರ ಸಂವಾದದ ಪ್ರಕರಣದಲ್ಲಿ ನಿರೂಪಿಸಲ್ಪಟ್ಟಿದೆ. "ಆಹಾರ ಶುಧ್ಯಾ ಸತ್ವಶುದ್ಧಿಃ ಸತ್ವಶುದ್ದೌ ಧ್ರುವಾಸ್ಮೃತಿಃ ಸ್ಮತಿಲಂಬೇ ಸರ್ವಹೃದಯಗ್ರಂ ಥೀನಾಂ ವಿಪ್ರಮೋಕ್ಷಃ” ಆಹಾರಗಳು ಶುದ್ಧವಾಗೋಣದರಿಂದ ಅಂತಃಕರಣವು ಶುದ್ದ ವಾಗುತ್ತದೆ. ಅಂತಃಕರಣವು ಶುದ್ಧವಾದಮೇಲೆ ನಿಶ್ಚಲವಾದ ಪರಮೇಶ್ವರನ ಸ್ಮರ ಣವು ಹುಟ್ಟುತ್ತದೆ. ಇಂಥ ಸ್ಮರಣದಿಂದ ಮನಸ್ಸಿನ ಗ್ರಂಥಿಗಳು, ಅಂದರೆ ಹೆಂಡಿರು. ಮಕ್ಕಳು ಮುಂತಾದ ವಸ್ತುಗಳಮೇಲಿನ ಸ್ನೇಹದ ಗ್ರಂಥಿಗಳು ದೂರವಾಗುತ್ತವೆ. ಎಂದು ಅಲ್ಲಿ ಹೇಳಿರುತ್ತದೆ.

ಇನ್ನು, ಆಹಾರವೆಂದರೇನು ? ಅನ್ನವೆಂದರೇನು ? ಎಂಬವನ್ನು ವಿಚಾರಿಸುವಾ.

“ಆಹ್ರಿಯಂತಇತ್ಯಾಹಾರಾಃ” ಅಂದರೆ ಪಂಚಜ್ಞಾನೇಂದ್ರಿಯಗಳು ಸೇವಿಸುವ ಶಬ್ದ ಸ್ಪರ್ಶ ಮುಂತಾದ ವಿಷಯಗಳು ಆಹಾರಗಳೆನಿಸುವವು. "ಅದ್ಯತಇತ್ಯನ್ನಂ ” ಅಂದರೆ, ನಾವು ತಿನ್ನುವ ಧಾನ್ಯ.ಫಲ-ಶಾಕ ಮುಂತಾದವುಗಳು ಅನ್ಮಗಳೆನಿಸುವವು .

ಆಹಾರಗಳಲ್ಲಿ ರಾಜಸ.ತಾಮಸಗಳನ್ನು ಬಿಟ್ಟು ಯಾವಾಗಲೂ ಸಾತ್ವಿಕವಾದ

ವನ್ನೇಗಹಿಸುತ ಹೋಗಬೇಕು; ಅಂದರೆ, ಸಾತ್ವಿಕರೂಪವನ್ನೂ, ಸಾತ್ವಿಕರಸವನ್ನೂ,

-೧೮-

ಸಾತ್ವಿಕಗಂಧವನ್ನೂ, ಸಾತ್ವಿಕ ಸ್ಪರ್ಶ ವನ್ನೂ, ಸಾತ್ವಿಕ ಶಬ್ದವನ್ನೂ ಸೇವಿಸುತ್ತಿರಬೇಕು.ಈ ಸಾತ್ವಿಕ ಪದಾರ್ಥಗಳ ಸೇವನದಿಂದ ನಿಶ್ಚಯವಾಗಿ ಸತ್ವಗುಣದ ಪೋಷಣವಾಗಿ,ಅಂತ:ಕರಣವು ಶುದ್ಧವಾಗುತ್ತದೆ ಅಂತ:ಕರಣ ಶುದ್ದಿಯೆಂದರೆ- ರಜಸ್ತಮೋಗುಣಗಳ ಅವನತಿಪೂರ್ವಕವಾಗಿ ಸತ್ವವಿಜೃಂಭಣವು. ಅರ್ಥಾತ್ ಸತ್ವವಿಜೃಂಭಣವಾದರೆ ರಜಸ್ತಮೋಗುಣಗಳ ಅವನತಿಯಾಗುತ್ತದೆ ಸತ್ವವಿಜೃಂಭಣವಾದಾಗ ರಜೋಗುಣವು ಕಾರ್ಯಪ್ರವೃತ್ತಿಯನ್ನೂ, ತಮೋಗುಣವು ಅಜ್ಞಾನವಿಲಾಸವನ್ನೂ ಮಾಡುವದಿಲ್ಲ.ಕೇವಲ ಸತ್ವಕ್ಕೆ ಪ್ರೋತ್ಸಾಹನವಾಗುತ್ತಿರುವದರಿಂದ ಅದರ ಕಾರ್ಯವೆನಿಸುವ ಜ್ಞಾನವೂ, ಸುಖವೂ ತಪ್ಪದ ಆಗುತ್ತವೆ. ಹೀಗಾಗಹತ್ತಿದರೆ ಅಂತಃಕರಣಶುದ್ಧಿಯಾಯಿತೆಂದು ಭಾವಿಸಬೇಕು, ಯಾವಾಗಲೂ ಸಾತ್ವಿಕವಾದ ರೂಪ, ರಸ, ಮುಂತಾದ ಪದಾರ್ಥಗಳ ಸೇವನದಿಂದ ನಮ್ಮ ಅಂತಃಕರಣಕ್ಕೊಂದು ವಿಲಕ್ಷಣವಾದ ಪ್ರಕಾಶ ಸಾಮರ್ಥ್ಯವುಂಟಾಗುತ್ತದೆ ಅದರಿಂದ ಆ ಮನಸ್ಸು ಅತಿಸೂಕ್ಷ್ಮವಾದ ವಸ್ತುವನ್ನೂ, ಅತಿಗಹನವೆನಿಸುವ ವಿಷಯವನ್ನೂ ಸಹ ಹಿಡಿಯುತ್ತದೆ. ಆದ್ದರಿಂದ ಯಾವಜನರು ಕೇವಲ ರಾಜಸತಾಮಸರಾಗಿ ಸತ್ವಹೀನರಾಗಿರುವರೋ ಅಂಥವರ ದರ್ಶನವನ್ನೂ, ಸ್ಪರ್ಶವನ್ನೂ, ಅವರ ಶಬ್ದಶ್ರವಣವನ್ನೂ, ಅವರಗೂಡ ಗ್ವ್ಯವಹಾರವನ್ನೂ, ಹೆಚ್ಚು ಹೇಳುವದೇನು ಅವರ ಮೈಗೆ ತಗಲಿಬಂದ ಗಾಳಿಯನ್ನೂಕೂಡ ಬಿಡಬೇಕು. ಕದಾಚಿತ್ ಅವನ್ನು ಸೇವಿಸ ಹತ್ತಿದರೆ ನಾವು ಎಷ್ಟು ಸಾತ್ವಿಕ ಪದಾರ್ಥಗಳನ್ನು ಉಪಯೋಗಿಸುತ್ತಿದ್ದರೂ, ನಮ್ಮ ಸತ್ವಹಾನಿಯಾಗತಕ್ಕ ಸಂಭವವಿರುತ್ತದೆ. ಇನ್ನು ರಾಜಸ-ತಾಮಸ ಜನರಗೂಡ ಸರ್ವಥಾ ವ್ಯವಹಾರವನ್ನು ಬಿಡುವದು ನಮ್ಮ ಪ್ರಾಪಂಚಿಕರಿಗೆ ಶಕ್ಯವಲ್ಲ, ಯಾವಜನರು ಸರ್ವಸಂಗ ಪರಿತ್ಯಾಗಮಾಡಿ ಅರಣ್ಯವನ್ನು ಸೇರಿಕೊಂಡು ತಪೋನಿಷ್ಠರಾಗಿರುವರೋ, ಅಂಥವರು ಈ ಕೆಲಸವನ್ನು ಮಾಡಬಹುದು. ಅದರೆ ನಾವು ನಮ್ಮ ಸತ್ವವೃತ್ತಿಯನ್ನು ಕಾಯ್ದು ಕೊಂಡು ಕಾರ್ಯಪರತ್ವದಿಂದ ರಾಜಸ-ತಾಮಸರಗೂಡ ವ್ಯವಹಾರವನ್ನಿಡಬೇಕು; ಆದರೆ ಅವರೂ ಕೂಡ ನಮ್ಮ ಪ್ರಜ್ವಲಸತ್ವವನ್ನು ನೋಡಿ ನಮ್ಮ ಗೂಡ ಸಾತ್ವಿಕ ವ್ಯವಹಾರ ವಿಡುವಂತೆ ನಾವು ನಡೆದುಕೊಳ್ಳಬೇಕು. ಇದರಿಂದ ಅವರಿಗೂ ಸಾತ್ವಿಕವ್ಯವಹಾರದ ಚಟ ಯುಬಿದ್ದು, ಕ್ರಮದಿಂದ ಅವರ ವೃತ್ತಿಯೂ ತಿದ್ದುವದು. ಇನ್ನು ಪಂಚೇಂದ್ರಿಯಗಳ ಆಹಾರಗಳ ದಿಗ್ದರ್ಶನವನ್ನು ಸಾಮಾನ್ಯವಾಗಿ ಮಾಡುವಾ:-

೧ ನೇತ್ರೇಂದ್ರಿಯ ವಿಷಯಗಳಾದ ರೂಪಗಳು- ಗೋಮುಂತಾದ ಪ್ರಾಣಿಗಳ

ರೂಪವೂ, ಸತ್ಪುರುಷರರೂಪವೂ, ದೇವರಪ್ರತಿಮೆಗಳರೂಪವೂ, ಇವೇ ಮುಂತಾದ ಭಕ್ತಿ ಜನಕ ರೂಪಗಳು ಸಾತ್ವಿಕರೂಪಗಳು. ಕಾಮಜನಕವಾದ ಸ್ತ್ರೀ ಮುಂತಾದವಸ್ತುಗಳ ರೂಪಗಳು ರಾಜಸಗಳು. ಅಜ್ಞಾನಜನಕಪಾದಮದ್ಯ ಮುಂತಾದ ವಸ್ತುಗಳರೂಪಗಳು ತಾಮಸಗಳು

೨ ರಸನೇಂದ್ರಿಯದ ವಿಷಯಗಳಾದ ರಸಗಳು- ಸಾತ್ವಿಕ ಪದಾರ್ಥಗಳಲ್ಲಿಯ

ರಸಗಳು ಸಾತ್ವಿಕರಸಗಳು, ವೃಂತಾಕ-ಪಲಾಂಡು೦ಶುನ ಮುಂತಾದ ವಸ್ತುಗಳಲ್ಲಿಯ ರಸವು ರಾಜಸಗಳು. ಮದ್ಯ ಮುಂತಾದ ಮಾದಕವಸ್ತುಗಳಲ್ಲಿಯ ರಸಗಳು ತಾಮಸಗಳು. 

-೧೯-

೩ ರಸನೇಂದ್ರಿಯದ ವಿಷಯಗಳಾದ ಗಂಧಗಳು- ದೇವರಲ್ಲಿ ಅರ್ಪಿಸಿ ಪ್ರಸಾದ

ರೂಪವಾಗಿ ತಕ್ಕೊಂಡ ಪುಷ್ಪ ಮುಂತಾದ ಪದಾರ್ಥಗಳಲ್ಲಿಯ ಸುಗಂಧವು ಸಾತ್ವಿಕವು. ಸ್ತ್ರೀಯರು ತಲೆಯಲ್ಲಿ ಮುಡಿದ ಪುಷ್ಪಗಂಧವು ರಾಜಸವು. ಮದಜನಕವಾದ ಮದ್ಯ ಮುಂತಾದ ವಸ್ತುಗಳ ಗಂಧವು ತಾಮಸವು.

೪ ಸ್ಪರ್ಶೇಂದ್ರಿಯದ ವಿಷಯಗಳಾದ ಸ್ಪರ್ಶಗಳು.ಗೋ ಮುಂತಾದ ಸಾತ್ವಿಕ.

ವಸ್ತುಗಳ ಸ್ಪರ್ಶವು ಸಾತ್ವಿಕವು, ಸ್ತ್ರೀ ಮುಂತಾದ ವಸ್ತುಗಳ ಸ್ಪರ್ಶವು ರಾಜಸವು, ಮದ್ಯ ಮುಂತಾದ ಮಾದಕವಸ್ತುಗಳ ಸ್ಪರ್ಶವು ತಾಮಸವು.

೫ ಶೋತ್ರೇಂದ್ರಿಯದ ವಿಷಯಗಳಾದ ಶ್ರವಣಗಳು- ಶ್ರುತಿ-ಸ್ಮೃತಿ-ಪುರಾಣ

ಇತಿಹಾಸಗಳೂ, ಸತ್ಪುರುಷರ ಚರಿತ್ರೆಗಳೂ, ಸತ್ಪುರುಷರ ಬೋಧಪ್ರದ ಉಪದೇಶ ವಾಕ್ಯಗಳೂ, ಸಾತ್ವಿಕಗಳು. ಕೇವಲ ಕಾಮಜನಕವಾದ ಸ್ತ್ರೀ-ಪ್ರರುಷರ ಸಂಸರ್ಗದ ಪ್ರಸಂಗಗಳ ವರ್ಣನಗಳು ರಾಜಸಗಳು. ಮದಜನಕ ವಸ್ತುಗಳ ವರ್ಣನಗಳು ತಾಮಸಗಳು.

ಇವನ್ನೆಲ್ಲ ವಿಚಾರಿಸಿಕೊಂಡು ಸೂಕ್ಷ್ಮರೀತಿಯಾಗಿ ನಮ್ಮಲ್ಲಿ ಸತ್ವಾಭಿವೃದ್ಧಯಾಗು

ವಂತೆ ಯತ ಮಾಡತಕ್ಕದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಇನ್ನು ಅನ್ನಗಳ ಸಂಬಂಧ ದಿಂದ ವಿಚಾರಮಾಡೋಣ.

ನಾವು ತಿನ್ನುವ ಅನ್ನದಲ್ಲಿ ಸಾತ್ವಿಕ, ರಾಜಸ, ತಾಮಸಗಳೆಂದು ಮೂರುವರ್ಗ

ಗಳನ್ನು ಮಾಡಿರುವೆವಷ್ಟೇ! ಇವೇ ಸಾತ್ವಿಕಗಳೆಂದು ಶಾಸ್ತ್ರಕಾರರುನಿರ್ಣಯಿಸಿದ ಪದಾರ್ಥಗಳಲ್ಲಿ ೧ ಧಾನ್ಯ, ೨ ಫಲ, ೩ ಶಾಕ, ೪ ಸ್ನೇಹ, ಇತರಪದಾರ್ಥಗಳು ಎಂದು ಐದು ಭಾಗಗಳನ್ನು ಮಾಡಿ, ಇವುಗಳ ಪಟ್ಟಿಯನ್ನು ಮುಂದೆ ಕೊಟ್ಟಿರುತ್ತದೆ. ಇವುಗಳನ್ನು ಪಯೋಗಿಸುತ್ತ ವಿಷಯಗಳ ಶುದ್ದಿಯನ್ನಿಟ್ಟುಕೊಳ್ಳಬೇಕು. ಇನ್ನೂ ಹೆಚ್ಚಿನ ಪದಾರ್ಥಗಳನ್ನು ಸಾತ್ವಿಕನಸುಗಳಲ್ಲಿ ಗ್ರಂಥಕಾರರು ಹಿಡಿದಿರುತ್ತಾರೆ; ಆದರೆ ಆ ಪದಾರ್ಥಗಳು ಅಪ್ರಸಿದ ವಿರುವದರಿಂದ ನಾವು ಹೇಳಲಿಲ್ಲ. ನಾವು ಹೇಳಿದ ಪದಾರ್ಥಗಳಿಗಿಂತ ಹೆಚ್ಚು ಪದಾರ್ಥಗಳನ್ನು ಶಾಸ್ತ್ರಾಧಾರದಿಂದಲೂ, ಸತ್ಪುರುಷರ ಮುಖದಿಂದಲೂ ತಿಳಿದು ಸಾತ್ವಿ ಕವೆಂದು ನಿಶ್ಚಯವಾದಲ್ಲಿ ಉಪಯೋಗಿಸಿಕೊಳ್ಳಬಹುದು . ತಿನ್ನುವಪದಾಥರ್ಗಳಲ್ಲಿ ಯಾವದೇ ಪದಾರ್ಥವನ್ನಾಗಲಿ ಒಂದೆರಡುದಿವಸ ಉಪಯೋಗಿಸಿದರೆ ಅದರ ಗುಣ- ದೋಷಜ್ಞಾನವಾಗುವದಿಲ್ಲ. ನಾವು ಸಾತಿ ಕನಸುಗಳನ್ನು ಪ್ರಯೋಗಿಸಿ ಮಾಡಿಕೊಂಡ ಸತ್ವಾಭಿವೃದಿಯ ಬೆಳಕು ನಮ್ಮ ಆತ್ಮರೂಪರಾದ ಮುಂದಿನ ಸಂತತಿಯವರ ಮೇಲೆ ಬಹಳ ಬೀಳುತ್ತದೆ. ಆದ್ದರಿಂದ ಅವರು ನಮಗಿಂತಲೂ ಸಾತ್ವಿಕರಾಗಿ ತೇಜಸ್ವಿಗಳೂ, ಕಾರ್ಯ ಕ್ಷಮರೂ ಆಗುತ್ತಾರೆ. ಹೇಗೆ ಹೇಗೆ ನಮ್ಮ ಸಂತತಿಯವರು ಸತ್ವಾಭಿವೃದಿಯನ್ನು ಹೊಂದಿ ಕಾರ್ಯಕ್ಷಮರಾಗುತ್ತ ಹೋಗುವರೋ ? ಹಾಗೆ ಹಾಗೆ ನಮಗೆ ಇಹ-ಪರಗಳೆ ರಡೂ ಸಾಧಿಸುತ್ತ ಹೋಗುತ ವೆಂಬುವದೇ ಶಾಸ್ತ್ರೀಯಸಿದಾ೦ತವೂ, ಸತ್ಪುರುಷರ

ಬೋಧದಫಲಿತವೂ, ವೇದ-ಶಾಸ್ತ್ರಾಧ್ಯಯನದ ಪ್ರಯೋಜನವೂ, ಪುರಾಣೇತಿಹಾಸಗಳ 

-೩೦-

ಶ್ರವಣದಸಾರವೂ ಆಗಿರುತ್ತದೆ. ಇನ್ನು ಕೆಳಗೆ ಕೊಟ್ಟಿರುವ ಸಾಕಾಹಾರಗಳ ಪಟಿಯನ್ನು ವಾಚಕರು ಅವಲೋಕಿಸಿ, ಅವನ್ನು ಗ್ರಹಿಸುತ್ತ ಚಿತ್ತಶುದ್ಧಿಯನ್ನು ಪಡೆಯತಕ್ಕದ್ದು.

ಸಾತ್ವಿಕಾಹಾರಗಳ ಪಟ್ಟಿಯು-

೧ ಧಾನ್ಯಗಳು- ೧ ನೆಲ್ಲಕ್ಕಿ, ೨ ಜವೆಗೋದಿ, ೩ ಗೋದಿ, ೪ ಎಳ್ಳು, ೫ ಉದ್ದು,

೬ ಸಾವಿ. ೭ ನವಣಿ, ೮ ಹೆಸರು, ೯ ಸಾಸಿವಿ, ೧೦ ಕಡಲಿ (ವಿಕಲ್ಪ), ೧೧ ಜೋಳ(ವಿಕಲ್ಪ),೧೨ ಅವರಿ, ೧೩ ಬಟ್ಟಗಡಲೆ, ೧೪ ಬುಯಿಮೂಗು ಇತ್ಯಾದಿ.

೨ ಫಲಗಳು-೧ ಬಾಳೇಹಣ್ಣು,೨ ಮಾವಿನಹಣ್ಣು, ೩ ಹಲಸು, ೪ ಬೋರೆಹಣ್ಣು ,

೫ ನೇರಲಹಣ್ಣು, ೬ ಖರ್ಜೂರ, ೭ ಹುಣಸೇಹಣ್ಣು. ೮ ದ್ರಾಕ್ಷಿ, ೯ ದಾಳಿಂಬ, ೧೦ ಅಕ್ರೋಡದಹಣ್ಣು , ೧೧ ಕರಬೂಜಿಹಣ್ಣು, ೧೨ ತೆಂಗಿನಕಾಯಿ, ೧೩ ಲಿಂಬಿಯಹಣ್ಣು(ವಿಕಲ್ಪ)

೩ ಶಾಕಗಳು- ೧ಚವಳಿ, ೨ ಸೂರಣಗಡ್ಡಿ, ೩ ಸವತೀಕಾಯಿ, ೪ ಹೀರೇಕಾಯಿ,೫ ಕೊತ್ತುಂಬರಿ, ೬ ಪಡವಲಕಾಯಿ, ೭ ನೆಲ್ಲೀಕಾಯಿ, ೮ ಹಸಿಶುಂಠಿ, ೯ ಒಣಶುಂಠಿ ೧೦ ಮೂಲಂಗಿ, ೧೧ ಮೆಣಸಿನಕಾಯಿ, ೧೨ ಗೆಣಸು.

೪ ಸ್ನೇಹಗಳು-೧ ಆಕಳಹಾಲು, ೨ ಆಕಳಮೊಸರು, ೩ ಆಕಳತುಪ್ಪ, ೪ ಆಕಳ

ಮಜ್ಜಿಗಿ, ೫ ಎಮ್ಮೆಯತುಪ್ಪ, ೬ ಬೆಣ್ಣೆ ತೆಗೆಯದೆಯಿದ್ದ ಎಮ್ಮೆಯ ಮಜ್ಜಿಗೆ, ೭ ಸಕ್ಕರೆ ಕೂಡಿದ ಎಮ್ಮೆಯಹಾಲು ಇತ್ಯಾದಿ.

೫ ಇತರಪದಾರ್ಥಗಳು- ೧ ಕಬ್ಬು, ೨ ಸಕ್ಕರಿ, ೩ ಬೆಲ್ಲ, ೪ ಕಪ್ಪುರ, ೫ ಸಿಂಧು

ಲವಣ, ೬ ಸಮುದ್ರದ ಉಪ್ಪು, ೭ ಅಡಕಿ, ೮ ವೀಳೆಯದೆಲೆ, ೯ ಮೆಣಸು, ೧೦ ಜೇನು ತುಪ್ಪ ಇತ್ಯಾದಿ

ಒಟ್ಟಿಗೆ ಹೇಳತಕ್ಕದ್ದೇನಂದರೆ, ಮನಸ್ಸಿಗೂ-ಇಂದ್ರಿಯಗ

ಳಿಗೂ-ವಿಷಯಗಳಿಗೂ ಪರಸ್ಪರ ಅಪರಿತ್ಯಾಜ್ಯ ಸಂಬಂಧವಿರುವದರಿಂದ ಇವುಗಳವ್ಯವಹಾ ರವು ನಿತ್ಯವಿರುತ್ತದೆ; ಆದ್ದರಿಂದ ನಾವು ವಿಚಾರಪೂರ್ವಕವಾಗಿ ಮನಸ್ಸಿಗೆ ವಿಷಯಗಳ ಸಂಬಂಧವನ್ನು ಮಾಡಿಸತಕ್ಕದ್ದು. ವಿಷಯಗಳ ಪರಿಶೀಲನವೇ ಮನಸ್ಸಿನ ಶುದ್ಧಾಶುದ್ಧ ತೆಗಳಿಗೆ ಕಾರಣವಾಗಿರುವದರಿಂದ, ವಿಷಯಗಳಲ್ಲಿಯ ಗುಣ-ದೋಷಗಳ ಪರಿಜ್ಞಾನವನ್ನು ಮನಸ್ಸಿಗೆ ಅವಶ್ಯವಾಗಿ ಮಾಡಿಕೊಡತಕ್ಕದ್ದು. ಒಂದುಸಾರೆ ಮನಸ್ಸು “ಇವು ದುಷ್ಟ ಪದಾರ್ಥಗಳೆಂದು" ನಿಶ್ಚಯಿಸಿ, ಅವುಗಳಮೇಲೆ ಓಕರಿಸಿದರೆ ಸಾಕು. ಅಂಥ ದುಷ್ಟ ಪದಾರ್ಥಗಳ ಸಂಬಂಧಕ್ಕೆ ಅದು ಒಳಗಾಗುವದಿಲ್ಲ.

------------------

೫ ನೆಯ ಪ್ರಕರಣ-ಬಂಧವಿಮಾಚನ.

" यस्य देवे पराभाक्त यथादेवे तथागुरौ ।

तस्यैते कथिता ह्यथ:प्रकाशते महात्मनः ॥१||

ಹಿಂದಿನ ನಾಲ್ಕು ಪ್ರಕರಣಗಳಲ್ಲಿ, ಮನಸ್ಸು ಅತಿ ಚಂಚಲವಾಗಿದ್ದು ನಿಂತಲ್ಲಿನಿಲ್ಲದೆ

ಯಾವಾಗಲೂ ಕರ್ತವ್ಯಶಾಲಿಯಾಗಿರುವದರಿಂದ, ಅದು, ಇಂದ್ರಿಯಗಳೊಡನೆ ಹೇಯವಾ

 --೨೧--

ಗಿರುವ ವಿಷಯಗಳಮೇಲೆ ಧಾವಿಸುವದು. ಈ ವಿಷಯಗಳು ಆಕರ್ಷಕವಾಗಿರುವದರಿಂದ ಮನಸ್ಸನ್ನು ಕೂಡಲೆ ಕಟ್ಟಿಬಿಡುತ್ತವೆ. ಆಗ ಮನಸ್ಸು ವಿಷಯಪರವಶವಾಗಿ ಮನುಷ್ಯ ನನ್ನು ಸಂಸಾರದಲ್ಲಿ ಕೆಡವುತ್ತದೆ. ತಾನೂ ಈ ಜಡವಿಷಯಗಳ ಸಂಸರ್ಗದಿಂದ ಮಲಿನ ವಾಗಿ ಹೋಗುತ್ತದೆ. ಮನಸ್ಸಿಗೆ ವಿಷಯಗಳ ಸಂಬಂಧದ ಚಟವನು ಸಹಸಾ ಬಿಡಿಸುವದು ಯಾರಿಂದಲೂ ಆಗುವದಿಲ್ಲ. ಆದರೆ ವಿಷಯಗಳನ್ನು ಸಾತ್ವಿಕ, ರಾಜಸ, ತಾಮಸಗಳೆಂದು ಮೂರು ವರ್ಣಗಳಾಗಿ ವಿಂಗಡಿಸಿ ಇವುಗಳಲ್ಲಿ ಆ ಮನಸ್ಸಿಗೆ ಕೇವಲ ಸಾತ್ವಿಕವಿಷಯಗಳನ್ನೇ ಕೊಡುವದರಿಂದ ಮನಸ್ಸಿನ ಶುದ್ಧಿಯೆಂದರೆ ನಿರ್ಮಲತೆಯಾಗು ತ್ತದೆ. ಇದು ನಿರ್ಮಲವಾಗುವದರಿಂದ ಇದರಲ್ಲಿ ಹೆಚ್ಚಿನ ಸ್ಪುರಣಶಕ್ತಿಯು ಉತ್ಪನ್ನವಾ ಗುತ್ತದೆಂಬ ಸಂಗತಿಯನ್ನು ನಿರೂಪಿಸಿದೆವು. ಈ ಪ್ರಕಾರವಾಗಿ ಸುಪರಿಶುದ್ಧಗಳಾದ ಆಹಾರಗಳಿಂದ ಮನಸ್ಸು ನಿರ್ಮಲವಾದಮೇಲೆ ನಾವು ಮಾಡತಕ್ಕ ಕರ್ತವ್ಯವೇನು ?ಎಂಬ ಬಗ್ಗೆ ಈಗ ವಿಚಾರಮಾಡತಕ್ಕದ್ದು. ಈ ರೀತಿ ಮನಸ್ಸಿಗೆ ನೈರ್ಮಲ್ಯಬಂದರೂ ಅದರ ಚಂಚಲಸ್ವಭಾವವು ಹೋಗದಿದ್ದರೆ ಅದನ್ನು ಬಿಗಿದುಹಿಡಿಯುವದು ಹೇಗೆ ? ಅದು 'ನಮ್ಮ ಬಿಗಿಯಲ್ಲಿ ಸಿಗದಿದ್ದರೆ ನಾವು ಹೇಗೆ ಕರ್ತವ್ಯನಿಷ್ಠರಾಗುವೆವು ? ನಾವು ಕರ್ತವ್ಯನಿಷ್ಠರಾ ಗದಿದ್ದರೆ ನಮ್ಮ ಮೇಲೆ ಸದ್ಗುರುವಿನ ಅಂತಃಕರಣವಾಗುವದು ಹೇಗೆ ? ಸದ್ಗುರುವಿನ ಅಂತಃಕರಣದ ಹೊರತು ಯಾರಿಗೂ ಮುಕ್ತಿ ಇಲ್ಲವೆಂಬುದು ಸಿದ್ಧವಾದದ್ದೇ ಇರುತ್ತದೆ. ಹೀಗೆ ಮನಸ್ಸು ಚಾಂಚಲ್ಯಮಾತ್ರದಿಂದ ಫಲಕ್ಕೆ ದೂರಾಗುವ ಕಲ್ಪಕ್ಕೆ ಅದರ ಚಾಂಚಲ್ಯ ವನ್ನು ಪರಿಹರಿಸತಕ್ಕದ್ದು ಮೊದಲನೆಯ ಕರ್ತವ್ಯವಿರುತ್ತದೆ; ಆದ್ದರಿಂದ ಅದರ ಚಾಂಚ ಲ್ಯವನ್ನು ತೆಗೆದುಹಾಕುವ ವಿಷಯವನ್ನು ಕುರಿತು ವಿಚಾರಿಸುವಾ-

ಈ ಮನಸ್ಸಿನಚಾಂಚಲ್ಯವನ್ನು ತೆಗೆದುಹಾಕುವಉಪಾಯಗಳೆಂದರೆ ೧.ಸಂಕಲ್ಪವು,</p. ೨.ಯೋಗವು. ಇವೆರಡೂ ಕೂಡಿ ಮನಸ್ಸಿನ ಚಾಂಚಲ್ಯವನ್ನು ಪರಿಹರಿಸುತ್ತವೆ. ಮನ ಸ್ಸು, ಒಂದು ಕೆಲಸವನ್ನು ಮಾಡಲಿಕ್ಕೆ ಉಪಕ್ರಮಿಸಿತು, ಅದನ್ನು ಬಿಟ್ಟಿತು; ಮತ್ತೊಂದ ಕ್ಕೆ ಆರಂಭಿಸಿತು; ಅದನ್ನೂ ಬಿಟ್ಟಿತು. ಹೀಗೆ ಒಂದೂ ಕೆಲಸವನ್ನು ನಿರ್ಧಾರದಿಂದ ಮಾ. ಡದಿರುವದೇ ಮನಸ್ಸಿನ ಚಾಂಚಲ್ಯವು. ಉಪಕ್ರಮಿಸಿದ ಕಾರ್ಯವನ್ನು ತಪ್ಪದೆ ಮುಗಿ ಸುವ ಚಟಯನ್ನು ಕಲಿಸುವದೇ ಚಾಂಚಲ್ಯನಿವಾರಣೋಪಾಯವು. ಒಂದು ತಾಸಿನೊಳಗೆ ನೂರಾರು ಕಡೆಗೆ ಓಡಾಡುವ ಚಟಯು ಬಿದ್ದದ ರಿಂದ ಸಹಸಾ ಒಂದೇ ಕಾರ್ಯದಲ್ಲಿ ಮನಸ್ಸು ವ್ಯಾವ್ರತವಾಗಲಾರದೆಂಬುವದು ದೊಡ್ಡಮಾತ್ತಲ್ಲ; ಆದರೆ ತಿರುಗಿ-ಮುರುಗಿ ಅದೇಕೆಲಸಕ್ಕೆ ಹಚ್ಚೋಣ, ಅದನ್ನುಬಿಟ್ಟುಹಾರಿದರೆ ಮತ್ತು ಅದಕ್ಕೆ ತಂದುಹಚ್ಚೋಣ, ಹೀಗೆ ಸ್ವೀಕೃತ ಕಾರ್ಯದಕಡೆಗೆ ಮನಸ್ಸನ್ನು ನಿರ್ಧಾರದಿಂದ ಹಚ್ಚುವದಕ್ಕೆ ಸಂಕಲ್ಪವೆಂತಲೂ, ಅ ಭ್ಯಾ ಸ ವೆ ೦ ತ ಲೂ ಪರ್ಯಾಯಶಬ್ದಗಳನ್ನು ಉಪಯೋಗಿ ಸಬಹುದು. ಇನ್ನು "ಯೋಗಃ ಕರ್ಮಸು ಕೌಶಲಂ" ಎಂದರೆ ಕೌಶಲ್ಯದಿಂದ ಕರ್ಮ ಮಾಡುವದೇ ಯೋಗವೆಂದು ಹೇಳಿರುವದರಿಂದ, ಅತ್ಯಂತ ಕರ್ಮಾಸಕ್ತನು . ಸ್ವೀಕೃತಕಾ ರ್ಯದಲ್ಲಿ ತನ್ನನ್ನೇ ಮರೆತು ಬಿಡುವನಾದ್ದರಿಂದ, ನಿಜವಾದ ವೈರಾಗ್ಯವು ಆತನಲ್ಲಿಯೇ ಉತ್ಪನ್ನವಾಗುವಸಂಭವವಿರುತ್ತದೆ. 

--೨೨--

ಸಂಕಲ್ಪದಲ್ಲಿ ವಿಚಿತ್ರವಾದ ಶಕ್ತಿಯಿರುತ್ತದೆಂಬದು ಸಹಜವಾಗಿ ನಮಗೇ ತಿಳಿ, ಯುವಂತಿದೆ. ಉದಾಹರಣ, ಏಕಾದಶೀತಿಥಿಯಲ್ಲಿ ಇಡೀದಿವಸ ಬಾಯೊಳಗೆ ನೀರು ಹಾಕಲಿಕ್ಕಿಲ್ಲೆಂದು ಒಮ್ಮೆ ನಿಶ್ಚಯಿಸಿದರೆ,ಸಾಕು. ಅಂದಿನ ದಿವಸ ಆಹಾರದಮೆಲೆ ಅಫೇ ಕ್ಷೆಯೇ ಆಗುವದಿಲ್ಲ. ಇದು ಸರ್ವಾನುಭವಸಿದ್ಧವಾದದ್ದೇ ಇರುತ್ತದೆ. ಈ ವಿಷಯ ವಾಗಿ ಭಗವದ್ಗೀತೆಯಲ್ಲಿ "ಚಂಚಲುಹಿ ಮನಃ" ಎಂಬ ಶ್ಲೋಕದಿಂದ ಅರ್ಜುನನು ಭಗ ವಂತನಿಗೆ "ಶ್ರೀಕೃಷ್ಣಾ, ಮನಸ್ಸು ಚಂಚಲವಾಗಿ ಬಲಾಢ್ಯವಾಗಿರುವದರಿಂದ ಇದನ್ನು ನಿಗ್ರಹಿಸುವದೂ, ಗಾಳಿಯಮಟ್ಟೀಕಟ್ಟುವದೂ ಒಂದೇಇರುವವೆಂ"ದು ಪ್ರಶ್ನೆಮಾಡಲು, ಶ್ರೀಕೃಷ್ಣ ನು ಅರ್ಜುನನಿಗೆ--"ಅಭ್ಯಾಸೇನಚ ಕೌಂತೇಯ" ಎಂಬ ಶ್ಲೋಕದಿಂದ ಎಲೈ ಕೌಂತೇಯನೇ, ಇದಕ್ಕೆ ಇಷ್ಟೊಂದು ಯಾಕೆ ಯೋಚನೆ? ಮನಸ್ಸಿಗೆ ಅಭ್ಯಾಸ, ಮತ್ತು ವೈರಾಗ್ಯಗಳನ್ನು ಯೋಜಿಸಿದರೆ ಸಾಕು. ತಾನಾಗಿಯೇ ಆ ಮನಸ್ಸಿನ ನಿಗ್ರಹವಾಗು ವದೆಂದು ಹೇಳಿರುವನು. ಸಂಕಲ್ಪಾಭ್ಯಾಸಶಬ್ದಗಳೂ, ಯೋಗ-ವೈರಾಗ್ಯಶಬ್ದಗಳೂ ಒಂದೇ ಅರ್ಥದವಿರುವವೆಂದು ತಿಳಿಯಬೇಕು. ಹಿಂದಕ್ಕೆ ದುರ್ಮರಣವನ್ನು ಹೊಂದಿದ ತನ್ನ ಪಿತಾಮಹರಾದ ಅರವತ್ತುಸಾವಿರ ಸಗರರನ್ನುದ್ಧರಿಸುವದಕ್ಕೆ ಅವರ ವಂಶದ ಭಗೀರಥರಾಜನು ಮನಸ್ಸಿಗೆ ಸಂಕಲ್ಪಶಕ್ತಿಯನ್ನುಯೋಜಿಸಿ ಕಾರ್ಯದಲ್ಲಿ ತೊಡಗಿದಾಗ ಅವರನ್ನುದ್ಧರಿಸಿ ತಾನೂ ವಾರಾದನು. ಆತನ ಕಾರ್ಯಪ್ರಭಾವದಿಂದ ನಮಗೂಕೂಡ ಗಂಗಾಸ್ನಾನದ ಲಾಭವಾಗಹತ್ತಿದೆ. ಈ ಭಗೀರಥನ ಹಿಂದಿನವರ ಮನಸ್ಸಿನಲ್ಲಿ ಅವ ರನ್ನು ಉದ್ಧರಿಸಬೇಕೆಂಬ ಕಲ್ಪನೆಯಿದ್ದರೂ, ಅದಕ್ಕೆ ಸಂಕಲ್ಪವು ಕೂಡದ್ದರಿಂದ ಅವ ರಿಂದ ಕಾರ್ಯವಾಗಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಎಷ್ಟೋ ಕಲ್ಪನೆಗಳು ಉದಯಿ ಸುತ್ತವೆ; ಆದರೆ ಅವೆಲ್ಲ ಕಾರ್ಯಸಾಧಕವಾಗುವದಿಲ್ಲ. ಇನ್ನು ಇವುಗಳಲ್ಲಿ, ಯಾವ ಕಲ್ಪನೆಗೆ ಸಂಕಲ್ಪವು ಕೂಡಿಕೊಳ್ಳುವದೋ? ಅದೇ ಕಲ್ಪನೆಯು ಕಾರ್ಯವನ್ನು ಸಾಧಿ ಸಿಕೊಡುತ್ತವೆ. ಈಮಾತು ಸರ್ವರಿಗೂ ಗೊತ್ತಿರುತ್ತದೆ. ದೇವರು, ಯಾವಾಗಲೋ ಏನೋ? ಹಿಂದಕ್ಕೆ ಒಂದುಸಾರೆ ಸೂರ್ಯ-ಚಂದ್ರರಿಗೆ, ಗ್ರಹ-ನಕ್ಷತ್ರಗಳಿಗೆ ಅಪ್ಪಣೆ ಯನ್ನುಮಾಡಿ, ಗತಿಯನ್ನು ಕೊಟ್ಟಿರುವನು. ಆಗಿನಿಂದ ಅವರೆಲ್ಲ ಕಾಲಕಾಲಕ್ಕೆ ತಪ್ಪದೆ ತಮ್ಮ ತಮ್ಮ ಕೆಲಸವನ್ನು ಮಾಡುತ್ತಿರುವದರಿಂದ, ನಮಗೆಲ್ಲ ಬೇಗು ಬೆಳಗುಗಳೂ, ಮಳೆ-ಬೆಳೆಗಳೂ ಆಗುತ್ತವೆ. ಆ ಪರಮೇಶ್ವರನ ಅಪ್ಪಣೆಗನುಸರಿಸಿ ತಪ್ಪದೆ ಕೆಲಸಮಾ ಡುವಮಾತ್ರದಿಂದಲೇ ಆ ಸೂರ್ಯ,ಚಂದ್ರ ಮುಂತಾದವರು ನಮಗೆಲ್ಲ ವಂದ್ಯರಾಗಿರು ವರು. ನಾವಾದರೂ ಅವರಂತೆ ಪರಮೇಶ್ವರನ ಆಜ್ಞೆಯೆನಿಸಿಕೊಳ್ಳುವ ಶ್ರುತಿ-ಸ್ಕೃತಿ ಮುಂತಾದ್ದರಲ್ಲಿ ಹೇಳಿದಕರ್ಮವನ್ನು ಮಾಡಹತ್ತಿದರೆ, ಜಗತ್ತಿನಲ್ಲಿ ಪೂಜ್ಯರಾಗುವದು ಆಶ್ಚರ್ಯವೇನು? ಈಗಿನಕಾಲದಲ್ಲಿಯೂ, ಶಿವಾಜಿ ಮುಂತಾದವರು ರಾಷ್ಟ್ರಕಾರ್ಯದಲ್ಲಿ ತೊಡಗಿಕೊಂಡು ತಮ್ಮ ಹಿತಾಹಿತಗಳನ್ನೂ ಕೂಡ ನೋಡದೆ ಕಾರ್ಯಮಾಡಿದ್ದರಿಂದ ಇತಿಹಾಸಪ ಸಿದ್ಧರಾಗಿರುವರು. ಕರ್ತವ್ಯಶಾಲಿಯಾದ ಮನುಷ್ಯನು ಸಾಮಾನ್ಯನಲ್ಲ. ಮನಸ್ಮೃತಿಯಲ್ಲಿ "ಕರ್ತೃಷುಬ್ರಹ್ಮನೇದಿನ:" ಎಂಬ ವಾಕ್ಯದಲ್ಲಿ ಕರ್ತವ್ಯಶಾಲಿಯ

--೨೩--

ನಂಬರು ಬ್ರಹ್ಮಜ್ಞಾನಿಯ ಹತ್ತರ ಬಿದ್ದಿರುವದು. ಇದರ ಮೇಲಿಂದ ವಿಚಾರಿಸಿದ ಕರ್ತವ್ಯಶಾಲಿಗಳು ಎಷ್ಟೊಂದು ಪುಣ್ಯವಂತರು! ಒಂದು ರಾಷ್ಟ್ರದಲ್ಲಿ ಒಬ್ಬಿಬ್ಬರು

ಕರ್ತವ್ಯಶಾಲಿಗಳಾದರೆ,ಆ ರಾಷ್ಟ್ರವೇ ಸ್ವತಂತ್ರವಾಗಿ ತೇಜಸ್ವಿಯಾಗುವದೆಂಬ ಸಂಗತಿಯು ಇತಿಹಾಸಗಳ ಮೇಲಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಮುಂದೆ ಬ್ರಹ್ಮ ಜ್ಞಾನಿಯಾದಮೇಲೆ ಕರ್ತವ್ಯವಿಲ್ಲ. ಅಂಥ ಕರ್ತವ್ಯಶೂನ್ಯರಾಗಿಯೂ, ಮುಕಿ ಯೋಗ್ಯ ರಾಗಿಯೂ, ಇರುವ ಬ್ರಹ್ಮಜ್ಞಾನಿಗಳಿಂದ ರಾಷ್ಟ್ರದ ಹಿತವೇನು? ಯದ್ಯಪಿ ಸಾಮಾನ್ಯ ವಾಗಿ ಈ ಮಾಹಾತ್ಮರಿಂದ ರಾಷ್ಟ್ರಹಿತವಿಲ್ಲದಿದ್ದರೂ ಯಾವ ಜನರು ಉಜ್ವಲವೃತ್ತಿಯಿಂದ ರಾಷ್ಟ್ರಹಿತಕಾರ್ಯವನ್ನು ಮಾಡಿ ಕೃತಕೃತ್ಯರಾಗುವರೋ, ಅವರಿಗೆ ಮುಕ್ತಿಮಾರ್ಗ ವನ್ನು ತೋರಿಸುವ ಕೆಲಸವು ಅವರದೇ ಇರುವದು. ಅವರು ಯಾವಾಗಲೂ, ಇಂಥ ಕರ್ತವ್ಯನಿಷ್ಠರನ್ನೇ ಹುಡುಕ್ತಲಿರುತ್ತಾರೆ. ಆದ್ದರಿಂದ ರಾಷ್ಟ್ರಕ್ಕೆ ಉಭಯಪಕ್ಷದವರದೂ ಅವಶ್ಯಕತೆಯಿರುವದು. ಇನ್ನು ಈ ಎ ರ ಡೂ ಪ ಕ್ಷ ಗ ಳ ಲ್ಲಿ ಸೇರದೆ "ಜಾಯಸ್ವ ಮಿಯಸ್ವ" ಹುಟ್ಟು , ಸಾಯು ಎಂಬ ತೃತೀಯಪಂಥದವರಾದ ನಮ್ಮಂಥವರಿಂದ ಮಾತ್ರ ರಾಷ್ಟ್ರಕ್ಕೆ ಏನೂ ಹಿತವಾಗಲಾರದೆಂದು ಕೈ ಎತ್ತಿಹೇಳಬಹುದು. ರಾಷ್ಟ್ರಹಿತ ವಾಗುವದಿಲ್ಲ ಇಷ್ಟೇ ಅಲ್ಲ, ಕೇವಲ ಭಾರಭೂತರಾದ ನಮ್ಮಿಂದ ರಾಷ್ಟ್ರಕ್ಷೋಭವೇ ಆಗುವದು. ಯಾಕಂದರೆ ನಾವು ಏನೂ ಕೆಲಸ ಮಾಡದಿದ್ದರೂ, ಕೆಲಸಮಾಡುವವ ರನ್ನು ಕಂಡು ಸುಮ್ಮನೆ ಕೂಡ್ರುವದಿಲ್ಲ. ಜನರಲ್ಲಿ ನಮ್ಮದೊಂದು ಒಣಪ್ರತಿಷ್ಠೆಯನ್ನು ಬೆಳಸುವದಕ್ಕಾಗಿ ಕೆಲಸ ಮಾಡುವವರಿಗೆ ಕಾಡುತ್ತೇವೆ. ನಮ್ಮಂಥವರು ಸಾವಿರಮಂದಿ ಕಾಡಿದರೂ ಅವರು ಸ್ವೀಕೃತಕಾರ್ಯವನ್ನು ಬಿಡುವದಿಲ್ಲೆಂಬದು ಒಂದು ಕಡೆಗೆ ಇರಲಿ. ಸಾರಾಂಶ, ನಾವು ಅಂಥ ಮಹನೀಯರಿಗೆ ತೊಂದರೆಯನ್ನು ಕೊಟ್ಟು ರಾಷ್ಟ್ರಕ್ಷೋಭ ವನ್ನುಂಟುಮಾಡುವದರಿಂದ ನಾವು ಅನುಪಯುಕ್ತರೇ ಆಗುವೆವು. ನಾವಾದರೂ ಹೀಗಾಗದೆ ಮಹನೀಯರನ್ನು ಕಂಡು ಅವರ ಸದ್ಗುಣಗಳನ್ನು ನಮ್ಮಲ್ಲಿ ಸಂಪಾದಿಸಿಕೊಂಡು ಅವರಂತೆ ಲೋಕಹಿತಕಾರ್ಯವನ್ನು ಮಾಡಹತ್ತಿದರೆ ನಮ್ಮದೂ ಉದ್ದಾರವಾಗುತ್ತದೆ. ಹಾರಮುಂತಾದ್ದರಿಂದ ಮನಸ್ಸು ಸುಪರಿಶುದ್ಧವಾದ ಮೇಲೆ, ನಮಗೆ ಸತ್ಸಮಾಗಮವಾಗ ತಕ್ಕದ್ದು. ಅಲ್ಲಿಂದ ಸಜ್ಜನರು ನಮಗೆ ಜ್ಞಾನೋಪದೇಶವನ್ನು ಮಾಡತಕ್ಕದ್ದು. ಅನಂತರದಲ್ಲಿ ಬಂಧವಿಮೋಚನವಾಗುವದು ಹೀಗೆ ಕ್ರಮವಿರುತ್ತದೆ. ಆದರೆ ಮನಸ್ಸು ಸು. ಪರಿಶುದ್ಧವಾದ ಮೇಲೆ ಸತ್ಸಮಾಗಮವು ಹೇಗೆ ಆಗುತ್ತದೆಂಬುದನ್ನು ಕುರಿತು ವಿಚಾರಿ ಸುವಾ-ಒಕ್ಕಲಿಗನು ಬೀಜಬಿತ್ತುವದಕ್ಕೆ ಹದನಾದ ಭೂಮಿಯನ್ನು ಹುಡುಕುವಂತೆ ಬ್ರಹ್ಮಜ್ಞಾನಿಗಳಾದ ಸತ್ಪುರುಷರು ಯಾವಾಗಲೂ, ಸುಪರಿಶುದ್ಧ ವನಸ್ಸುಳ್ಳವರನ್ನೇ ಉಪದೇಶಿಸುವ ಸಲುವಾಗಿ ಹುಡುಕತ್ತಲಿರುತ್ತಾರೆ. ಇದಕ್ಕಾಗಿಯೇ ಅವರ ಸ್ಥಿತಿಯೂ ಸಂಚಾರವೂ ಇರುವವು. ಏಕನಿಷ್ಠೆಯಿಂದ ಕರ್ತವ್ಯವನ್ನು ಮಾಡಿ ಮನಃಶ್ಶುದ್ಧಿಯನ್ನು ಹೊಂದಿದ ಮನುಷ್ಯನಾದರೂ ಕೃತಕಾರ್ಯನಾಗಿ ಅಂಥವರ ದರ್ಶನವನ್ನೇ ಅಪೇಕ್ಷಿಸುತ್ತಿರು ತಾನೆ; ಇಷ್ಟರಲ್ಲಿ ದೈವಯೋಗದಿಂದ ಅಂಥಮಹನೀಯರ ಉಜ್ವಲಸ್ವರೂಪದ ದರ್ಶನವಾದ ಕೊಡಲೆ, ಆವನಲ್ಲಿಯೊಂದು ವಿಲಕ್ಷಣವಾದಭಕ್ತಿಯೇ ಹುಟ್ಟುತ್ತದೆ. ಅಂಥ ಭಕ್ತಿಯ ಬೆಳಕು ಮನಸ್ಸಿನಲ್ಲಿ ಬಿದ ಕೂಡಲೆ ಅವನು ಗಾಢಾಂಧಕಾರದಲ್ಲಿ ದೀಪದಲಾಭವಾದಂತ ಪರಮಹರ್ಷ ವನ್ನು ಹೊಂದಿ ಉನ್ಮತ್ತನಂತೆ ಕುಣಿಯುತ ಸತ್ಪುರುಷನ ಚರಣಗಳಲ್ಲಿ ಮಣಿಯುತ್ತ ತನ್ನನ್ನು ಕೃತಕೃತ್ಯನನ್ನಾಗಿ ಭಾವಿಸುತ್ತಾನೆ. ಆಮೇಲೆ ಅವನು, ತನ್ನನ್ನೂ ತನ್ನ ಕಾರ್ಯವನ್ನೂ, ಮರೆತು, ಆ ಸತ್ಪುರುಷರ ಸೇವಾಕಾರ್ಯದಲ್ಲಿಯೇ ತೊಡಗುತ್ತಾನೆ. ಸೇವಾಧುರಂಧರ ನೆನಿಸಿಕೊಂಡು ಸದ್ಗುರುವಿನ ಕೃಪಾಪಾತ್ರನಾಗುವದೇ ಆತನ ಕರ್ತವ್ಯವಾಗುವದು. ಇದೇ ಜನದ ಸಾಫಲ್ಯವು, ಇದೇ ಅನೇಕಜನ್ಮಗಳಿಂದ ಮಾಡುತ್ತಬಂದ ಪುಣ್ಯಕರ್ಮಗಳ ಪರಿ ಪಾಕವು, ಇದೇ ಗುರು-ಹಿರಿಯರ ಆಶೀರ್ವಾದಗಳ ಫಲವು, ಇದೇ ದೇವತಾರಾಧನದ ಮಹಿಮೆಯು! ಇಷ್ಟೊಂದು ಕೃಪಾಪಾತ್ರರಾದ ನಮ್ಮನ್ನು ಬಂಧಮುಕ್ತರನ್ನಾಗಿ ಮಾಡು 'ವದು ಬ್ರಹ್ಮನಿಷ ಗುರುಗಳಿಗೆ ಆಯಾಸವಲ್ಲ. ನಾವು ಅವರ ಸೇವಾಕಾರ್ಯವನ್ನು ಮಾಡುವಾಗ ಅವರ ಸದೂತಿಯನ್ನೂ ನಿರುಪಾಧಿಕವಾದ ಚಿತ್ತವೃತ್ತಿಯನ್ನೂ, ಸತ್ಯ ಪ್ರಯತ್ನ ಮುಂತಾದ ಸದ್ಗುಣಗಳನ್ನೂ, ನೋಡನೋಡಿ ಧನ್ಯರಾಗಿರುವದರಿಂದ, ಬಂಧ ವಿಮೋಚನಸಿತಿಯು ತಾನಾಗಿಯೇ ಒದಗುತ್ತದೆ. ಉಳಿದದ್ದೇನು; ಸ್ವಾನುಭವಗ್ರದರ್ಶ ನವು. ಸದುರವು ಸದಂತಃಕರಣದಿಂದ ಪರಮಶಿಷ್ಯನ ಉದ್ದಾರವಾಗಲೆಂದು ಶಿಷ್ಯನ ತಲೆ ಯಮೇಲೆ ಪರಮಪವಿತ್ರವಾದ ತನ್ನ ಹಸ್ತವನ್ನಿಟ್ಟರೆ ಅದು ಸಾಧಿಸಿ ಹೋಗುತ್ತದೆ. ಮನು ವ್ಯನು ಈ ಸ್ಥಿತಿಗೆ ಮುಟ್ಟಿ ಸದ್ಗುರುವಿನ ಪರಮಾನುಗ್ರಹದಿಂದ ಸ್ವಾನುಭವದಲ್ಲಿ ಮಗ್ನನಾಗಿ ಪರಮಾನಂದ ಪೂರ್ಣನಾದಮೇಲೆ ಮನಸ್ಸಿಗೂ ಇಂದ್ರಿಯಗಳಿಗೂ ಸಂಬಂಧವಿಲ್ಲ? ಇಂದ್ರಿಯಗಳಿಗೂ ವಿಷಯಗಳಿಗೂ ಸಂಬಂಧವೆಲ್ಲಿ? ಇಂಥ ಪ್ರಸಂಗದಲ್ಲಿ ಮನಸ್ಸು ವಿಷ ಯಗಳಿಂದ ತಿರುಗಿ ಸ್ವಾನುಭವಾನಂದದಲ್ಲಿಯೇ ಇರೋಣದರಿಂದ ಈ ಸಂಸಾರವೆಂಬ ದೃಢವಾದ ಬಂಧನವು ತಾನಾಗಿಯೇ ಕಳಚಿಹೋಗುತ್ತದೆಂಬ ತಾತ್ಪರ್ಯವನ್ನು "ಮನ ವಿವ” ಎಂಬ ಮೇಲಿನ ಶ್ರುತಿವಾಕ್ಯವು ತೋರಿಸುತ್ತದೆ.