೪.ಬೀಜವು ಅಂಕುರಿಸಿತು ಸಂಪಾದಿಸಿ

ವಿಶ್ವರೂಪಾಚಾರ್ಯನು ದೇವತೆಗಳ ಧರ್ಮಾಚಾರ್ಯನಾದನೆಂದು ಅಸುರ ಗಣವು ಹರ್ಷ ಪಟ್ಟಿತು. ‘ಇದುವರೆಗೂ ಕಂಡು ಕಾಣದ ಹಾಗೆ ಅಮರಾವತಿಗೆ ಹೋಗಿಬರುತ್ತಿದ್ದ ಅವರಿಗೆ ಇನ್ನು ಧೈರ್ಯವಾಗಿ ಯಾವ ಅಡ್ಡಿಯೂ ಇಲ್ಲದೆ ಅಮರಾವತಿಗೆ ಹೋಗಿ ಬರುವಂತಾಯಿತು’ ಎಂದು ಸಂತೋಷ. ಎಷ್ಟಾಗಲಿ ವಿಶ್ವರೂಪನು ಅಸುರಸ್ತ್ರೀಯ ಗರ್ಭದಲ್ಲಿ ಹುಟ್ಟಿದವನು. ಅಸುರಗಣವೆಲ್ಲ ಆತನಿಗೆ ಮಾತಾಮಹವರ್ಗ.

ಒಂದು ದಿನ ರಾತ್ರಿ ಅಸುರಗಣದವರ ಕಡೆಯಿಂದ ವಿರೂಪಾಕ್ಷನು ವಿಶ್ವರೂಪಾಚಾರ್ಯನನ್ನು ನೋಡಲು ಬಂದನು. ವಿಶ್ವರೂಪನು ಮಾತಾಮಹರ ಕಡೆಯಿಂದ ಬಂದವನೆಂದು ಅವನಿಗೆ ಆದರವನ್ನು ತೋರಿಸಿ “ಏನು” ? ಎಂದು ವಿಚಾರಿಸಿದನು.

ವಿರೂಪಾಕ್ಷನು ಹೇಳಿದನು : “ಅಸುರೀಪುತ್ರನಾದ ವಿಶ್ವರೂಪಾಚಾರ್ಯ, ನಾನು ಈ ಧರ್ಮಾಚಾರ್ಯಸ್ಥಾನವನ್ನು ಅಂಗೀಕರಿಸಿದೆನು. ಧರ್ಮಾಚಾರ್ಯನಾದುದರಿಂದ ದೇವಕುಲಕ್ಕೆ ರಕ್ಷೆಯನ್ನು ಕೊಡಬೇಕಾಯಿತು, ಕೊಟ್ಟಿದ್ದೇನೆ. ಅದೂ ವಿಫಲವಾಗದ ರಕ್ಷೆಯನ್ನು ಕೊಟ್ಟಿದ್ದೇನೆ. ಮಾತಾಮಹರು ನಿನ್ನನ್ನು ಕಳುಹಿಸಿದುದು ಒಳ್ಳೆಯದಾಯಿತು. ಇನ್ನು ಮೇಲೆ ಅವರು ದೇವತೆಗಳ ಮೇಲೆ ಕೈ ಮಾಡಬಾರದು. ಶುಕ್ರಾಚಾರ್ಯರಿಂದ ಅವರು ಯಾವ ರಕ್ಷಣೆಯನ್ನು ಪಡೆಯುವರೋ ಅದಷ್ಟು ಸಾಧ್ಯವಾದರೆ ಅದರ ಜೊತೆಗೆ ಇನ್ನಷ್ಟು ರಕ್ಷಣೆಯು ದೆವಕುಲಕ್ಕೆ ಇನ್ನು ಮೇಲೆ ಉಂಟು ಎಂಬುದನ್ನು ನಮ್ಮ ಮಾತಾಮಹವರ್ಗವು ತಿಳಿದು, ಲೋಕರಕ್ಷಣವು ನಿಷ್ಕಂಟಕವಾಗುವಂತೆ ನಡೆದುಕೊಳ್ಳತಕ್ಕದ್ದೆಂದು ಹೇಳು.”

ವಿರೂಪಾಕ್ಷನು ಕೇಳಿದನು : “ಹಾಗಾದರೆ ನಮ್ಮ ಆಶೋತ್ತರಗಳೆಲ್ಲ ಮಣ್ಣುಗೂಡಿದವು ಎನ್ನಬೇಕು ?”

“ನಾನು ಧರ್ಮಾಚಾರ್ಯನಾಗಿರುವವರೆಗೂ ದೇವತೆಗಳ ತೇಜಸ್ಸು ಕಡಿಮೆಯಾಗದಂತೆ ಮಾಡಿರುವೆನು?”

“ಏನು ಮಾಡಿದೆಯೆಂದು ಕೇಳಬಹುದೆ?”

ವಿಶ್ವರೂಪನು ನಕ್ಕನು : “ವಿರೂಪಾಕ್ಷ ಇಲ್ಲಿ ನೀನು ತಪ್ಪಿದೆ. ಎಷ್ಟಾಗಲಿ ನಮ್ಮ ತಾಯಿ ಅಸುರವರ್ಗದವಳು. ಅವರ ಮೇಲೆ ನನಗೆ ಅಭಿಮಾನವಿಲ್ಲವೆಂದು ಕೊಂಡೆಯಾ ? ಅದರಿಂದ, ಅಸುರ ಪ್ರತಿನಿಧಿಯಾದ ನೀನು ನನ್ನನ್ನು ಏನು ಬೇಕಾದರೂ ಕೇಳು. ಅಷ್ಟೇನು ? ನೀನಲ್ಲ, ಅಸುರಪಕ್ಷದವರು ಯಾರೇ ಆದರೂ ನನ್ನಲ್ಲಿಗೆ ಬಂದು ಏನು ಕೇಳಿದರೂ ಮುಚ್ಚುಮರೆಯಿಲ್ಲದೆ ಹೇಳುವೆನು. ಹಾಗೆಂದು ದೇವಲೋಕದ ಮೇಲೆ ಮಾತ್ರ ದಾಳಿಯಿಡಬಾರದು. ಅದಿರಲಿ. ಈಗ ನಾನು ಕೊಟ್ಟಿರುವ ರಕ್ಷೆಯೇನೆಂದು ಕೇಳಿದೆಯಲ್ಲ ? ಮಹಾತ್ಮನಾದ ದಧೀಚಿಯನ್ನು ಕೇಳಿ ಬಲ್ಲಿರಲ್ಲಾ ? ಆತನು ತನ್ನ ತಪೆÇೕಬಲದಿಂದ ಮೈಯಲ್ಲಿರುವ ರಕ್ತಮಾಂಸಗಳೂ ವಜ್ರಗಳಾಗುವಂತೆ ಮಾಡಿಕೊಂಡಿರುವನು. ಆತನು ಶ್ರೀಮನ್ನಾರಾಯಣನಿಂದ ನೇರವಾಗಿ ಪಡೆದುಕೊಂಡಿರುವ ನಾರಾಯಣಕವಚವೆಂಬ ಮಂತ್ರ ಕವಚವುಂಟು. ಅದನ್ನು ಆತನು ರಹಸ್ಯವಾಗಿ ನಮ್ಮ ತಂದೆಯಾದ ತ್ವಷ್ಟೃಬ್ರಹ್ಮನಿಗೆ ಅನುಗ್ರಹಿಸಿದನು. ಆತನು ಅದನ್ನು ಶಿಷ್ಯನೂ ಪುತ್ರನೂ ಆದ ನನಗೆ ಅನುಗ್ರಹಿಸಿದನು. ಅದನ್ನು ನಾನು ಲೋಕರಕ್ಷಣಾರ್ಥವಾಗಿ ಇಂದ್ರನಿಗೆ ಕೊಟ್ಟಿರುವೆನು. ಆತನು ನನ್ನಲ್ಲಿ ಗುರುಭಾವವನ್ನು ಇಟ್ಟಿರುವವರೆಗೂ ಅದು ಆತನನ್ನು ಕಾಪಾಡುವುದು. ಅದರಿಂದ ನೀವು ಯಾರೂ ಆತನ ಕಡೆಯವರ ಮೇಲೆ ಬಿದ್ದು ವ್ಯರ್ಥವಾಗಿ ವಿನಾಶವನ್ನು ಪಡೆಯಬೇಡಿ. ಇದನ್ನು ಅಸುರ ಪ್ರಪಂಚಕ್ಕೆಲ್ಲ ತಿಳುಹಿಸು.”

ವಿರೂಪಾಕ್ಷನು ತಲೆದೂಗಿದನು. “ಅಲ್ಲಿಗೆ ದೇವತೇಜಸ್ಸು ಹಾನಿಯಾಗಿದ್ದುದು ಕೂಡಿಕೊಂಡಿತು. ಇನ್ನು ನಮ್ಮ ಕೈ ನಡೆಯುವುದಿಲ್ಲ. ಆಯಿತು, ಆದರೆ ನಾನು ಬಂದು, ಅಸುರರಿಗಾಗಿ ಏನೂ ಸಾಧಿಸದೆ ಹಿಂತಿರುಗಿದೆನೆಂಬುದು ಕೂಡದು. ಅದಕ್ಕಾಗಿ ಏನನ್ನಾದರೂ ಸಾಧಿಸಬೇಕು” ಎಂದು ಯೋಚನಾಪರನಾಗಿ ಹಾಗೆಯೇ ಕುಳಿತುಕೊಂಡನು. ಅವನು ಹಾಗೆ ವಿಷಣ್ಣನಾಗಿ ಕುಳಿತುದನ್ನು ನೋಡುವುದು ವಿಶ್ವರೂಪಾಚಾರ್ಯನಿಂದ ಆಗಲಿಲ್ಲ. ಕೇಳಿದನು : “ಏಕೆ, ವಿರೂಪಾಕ್ಷ ಹಾಗೆ ಕುಳಿತುಬಿಟ್ಟೆ?”

ವಿರೂಪಾಕ್ಷ ಸಣ್ಣಗೆ ಎಳೆಯುವ ದನಿಯಲ್ಲಿ ಹೇಳಿದನು : ‘ಸರ್ವನಾಶವಾಯಿತು. ನಾವು ನಮ್ಮ ವಿಶ್ವರೂಪಾಚಾರ್ಯನು ಧರ್ಮಾಚಾರ್ಯನಾದನು, ಇನ್ನು ದೇವಲೋಕವು ನಮ್ಮದಾಯಿತು ! ದೇವತೆಗಳ ಐಶ್ವರ್ಯವೆಲ್ಲ ನಮ್ಮದಾಯಿತು! ಎಂದು ಆನಂದದಲ್ಲಿದ್ದೆವು. ಈಗ ನೀನು ಎಚ್ಚರಿಕೆ ಕೊಡುತ್ತಾ ಆ ಪ್ರಯತ್ನವನ್ನೇ ಬಿಟ್ಟುಬಿಡಿ ಎಂದು ಹೇಳುತ್ತಿರುವೆ. ಈ ಮಾತನ್ನು ಹೋಗಿ ನಾನು ಯಾವ ಮುಖದಿಂದ ಹೇಳಲಿ ಎಂದು ಯೋಚಿಸುತ್ತಿರುವೆನು.”

“ನೋಡು, ವಿರೂಪಾಕ್ಷ ತಾಯಿಮನೆಯವರ ಪ್ರಭಾವಕ್ಕೆ ನಾನು ಎಷ್ಟು ಒಳಪಟ್ಟಿರುವೆನೆಂಬುದಕ್ಕೆ ನಾನು ಸತತವಾಗಿ ಸುರಾಪಾನ ಮಾಡುತ್ತಿರುವುದೇ ಸಾಕ್ಷಿ. ವೇದಾಧ್ಯಯನದಿಂದ ಲಭಿಸಿದ ಪುಣ್ಯದ ಬಲದಿಂದ ನಾನು ಈ ಸುರಾಪಾನದ ಪಾಪವನ್ನು ಅಡಗಿಸಿಟ್ಟಿರುವೆನು. ಇದೊಂದನ್ನು ಬಿಟ್ಟರೆ, ನನ್ನನ್ನು ಶುಕ್ರ ಬೃಹಸ್ಪತಿಗಳು ಇಬ್ಬರೂ ಸಮಗಟ್ಟಲಾರರು. ಇದನ್ನು ನಾನು ತಿಳಿಯೆನೆನ್ನುವೆಯಾ ? ನಾನಿದನ್ನು ಬಲ್ಲೆ, ಸಂಪೂರ್ಣವಾಗಿ ಬಲ್ಲೆ. ಆದರೂ ಇದನ್ನು ಮಾತೃಪ್ರೀತ್ಯರ್ಥವಾಗಿ ಮಾಡುತ್ತಿರುವೆನು. ನೀವೂ ಅದರಂತೆಯೇ ಲೋಕಹಿತವನ್ನು ಆಚರಿಸಿ, ಲೋಕ ಕಂಟಕರಾಗುವುದಕ್ಕೆ ಬದಲು, ಲೋಕರಕ್ಷಕರಾಗಿ, ನಿಮಗೂ ಯಜ್ಞಭಾಗವೂ ಬರುವಂತೆ ನಾನು ಏರ್ಪಡಿಸುವೆನು. ನಾನು ನನ್ನ ಪ್ರಾಣವನ್ನು ಕೊಟ್ಟಾದರೂ ಇದನ್ನು ಸಾಧಿಸುವೆನು. ಮಾತೃಕುಲ ಪಿತೃಕುಲಗಳೆರಡನ್ನು ಒಟ್ಟು ಸೇರಿಸಿದನೆಂದು ನನಗೆ ಖ್ಯಾತಿ ಬರಲಿ. ಇನ್ನು ಮುಂದೆ ದೇವಾಸುರರು ಯುದ್ಧವನ್ನು ಬಿಟ್ಟು ಪ್ರೀತಿಯಿಂದಿರಲಿ.”

ವಿರೂಪಾಕ್ಷನು ತಲೆಯಲ್ಲಾಡಿಸಿ ಹೇಳಿದನು : “ವಿಶ್ವರೂಪ, ನೀನು ವಿದ್ಯಾ ತಪೋಜನಗಳಲ್ಲಿ ಹಿರಿಯನು ಎಂದು ನಾವು ಒಪ್ಪಿದರೂ, ಸಹಜವಾದ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲೆಂಬುದನ್ನು ನೀನೂ ಮನಗಾಣುವವನಾಗು. ಸಿಂಹವು ಮಾಂಸವನ್ನು ತಿನ್ನುವ ಜಂತು. ಅದನ್ನುನೀನಾವ ಮಂತ್ರಬಲದಿಂದ ಹುಲ್ಲುತಿನ್ನುವಂತೆ ಮಾಡಬಲ್ಲೆ ? ನಿನಗೆ ಅಂತಹ ಮಂತ್ರಬಲವಿರುವುದಾದರೆ ಹುಲ್ಲನ್ನು ಮಾಂಸ ಮಾಡುವುದು ಸರಿಯೇ ಹೊರತು ಸಿಂಹವನ್ನು ಹುಲ್ಲು ತಿನ್ನುವಂತೆ ಮಾಡುವುದು ಸರಿಯಲ್ಲ. ಇನ್ನೊಂದು ಗುಟ್ಟು ಹೇಳುವೆ ಕೇಳು. ದೇವದಾನವರಿಬ್ಬರೂ ಪ್ರಾಜಾಪತ್ಯರೇ ! ಇಬ್ಬರೂ ಪ್ರಜಾಪತಿಯ ಸಂತಾನಗಳೇ ಹೊರತು ಬೇರೆ ಬೇರೆಯಲ್ಲ. ಆದರೂ ನಾವು ನಾವು ದ್ವೇಷಿಗಳಾಗಿರುವುದೇಕೆ ಬಲ್ಲೆಯಾ ? ನಮ್ಮ ನಮ್ಮ ದ್ವೇಷವು ಅರ್ಥಮೂಲವು. ನಾವು ದಾನವರು ಹಿರಿಯರು. ಆದ್ದರಿಂದ, ಈ ವಂಶದ ಸಂಪತ್ತೆಲ್ಲವೂ ದಾನವರಾದ ನಮಗೇ ಸೇರಬೇಕು. ಆದರೂ ಏನೋ ಸಂಚು ಮಾಡಿ, ತಾವು ಧರ್ಮಪರರು, ನಾವು ಅಧರ್ಮಪರರು ಎಂಬ ಆಟ ಹೂಡಿ, ಈ ದೇವತೆಗಳು ನಮಗೆ ಮೋಸಮಾಡಿ, ನಮ್ಮ ವಂಶದ ಸಂಪತ್ತನ್ನೂ ತಾವು ಕೊಳ್ಳೆ ಹೊಡೆದುಬಿಟ್ಟರು. ಈ ಸಂಕಟವನ್ನು ನಮ್ಮ ಕುಲವು ಮರೆಯುವುದೆಂತು? ಅದರಿಂದ ದೇವದಾನವರ ಸ್ನೇಹವೆಂಬುದು ಸಾಧ್ಯವಿಲ್ಲದ್ದು. ಜೊತೆಗೆ ಒಂದು ವೇಳೆ ಅದಾದರೂ ಹಿಂದೆ ಅಮೃತಮಂಥನ ಕಾಲದಲ್ಲಿ ಆದಂತೆ ದೇವತೆಗಳ ಅಭಿವೃದ್ಧಿಗೇ ಆಗುವುದು. ಅದರಿಂದ, ಅದು ಸಾಧ್ಯವಿಲ್ಲ. ನೀನು ನಿನ್ನ ಆದರ ಗೌರವಗಳಿಗೆ ಪಾತ್ರರಾದ ನಮಗೆ ಇನ್ನು ಯಾವ ವಿಧದಿಂದಾದರೂ ಶ್ರೇಯಸ್ಸಾಗುವಂತೆ ಮಾಡುವುದಾದರೆ ಮಾಡು. ಇಲ್ಲವಾದರೆ, ನಮ್ಮ ಕಾಳಿನಲ್ಲಿ ಇದೊಂದು ಜೊಳ್ಳಾಯಿತು ಎಂದುಕೊಂಡು ಇನ್ನು ಯಾವುದಾದರೂ ಮಾರ್ಗವನ್ನು ಹಿಡಿಯುವೆವು.”

ವಿಶ್ವರೂಪಾಚಾರ್ಯನು ವಿರೂಪಾಕ್ಷನ ವಾದವನ್ನು ಮನಃಪೂರ್ವಕವಾಗಿ ಕೇಳಿದನು. ಆತನೂ ಯೋಚಿಸಿದನು : “ಕೇವಲ ಅಭಿಮಾನದಿಂದ ಯಾವುದನ್ನೂ ಇತ್ಯರ್ಥ ಮಾಡಲಾಗುವುದಿಲ್ಲ. ತಾನು ದೇವಬೀಜದವನು. ಅಸುರಮಾತೃವೆಂದು ಅಭಿಮಾನದಿಂದ ಅತ್ತ ತಿರುಗಿದರೆ ಅದು ಅಧರ್ಮವಾಗುವುದು. ಹಾಗೆಂದು ಮಾತಾಮಹರ ಹಾನಿಗೆ ತಾನು ಕಾರಣವಾಗುವುದೂ ಸರಿಯಲ್ಲ. ಅದು ಮಾತೃದ್ರೋಹವಾದೀತು. ಬಿಟ್ಟು ಹೋದರೆ ಪಿತೃದ್ರೋಹ, ಬಿಡದಿದ್ದರೆ ಮಾತೃದ್ರೋಹ. ಏನುಮಾಡಬೇಕು ?” ಎಂದು ಬಹಳ ಹೊತ್ತು ಯೋಚಿಸಿ, ಕೊನೆಗೆ ಇತ್ಯರ್ಥಕ್ಕೆ ಬಂದನು. ಹೇಳಿದನು : “ವಿರೂಪಾಕ್ಷ, ನೀನು ಹೋಗಿ ಅಸುರೇಂದ್ರರಿಗೆ ನನ್ನ ನಮಸ್ಕಾರಗಳೊಡನೆ ಬಿನ್ನವಿಸು. ನಿಮಗೆ ಗೊತ್ತಿರುವಂತೆ ನನಗೆ ನಿದ್ದೆಯಿಲ್ಲ. ಪ್ರತಿದಿನವೂ ಸಮರಾತ್ರಿಗೆ ಸರಿಯಾಗಿ ಒಂದು ಯಜ್ಞವನ್ನು ಮಾಡುವೆನು. ಆ ಯಜ್ಞವನ್ನು ನಿಮಗಾಗಿ ನಿಮ್ಮ ಸಂವೃದ್ಧಿಗಾಗಿ, ನಿಮ್ಮ ಶ್ರೇಯಃಪ್ರೇಮಸ್ಸಾಧನೆಗಾಗಿಯೇ ಮಾಡುವೆನು. ಅದು ಸಂಚಿತವಾಗಿದ್ದು ಯಾವಾಗಲೋ ನಿಮಗೆ ಫಲವನ್ನು ಕೊಡುವುದು. ಇನ್ನು ಮುಂದೆ ನನ್ನನ್ನು ಒತ್ತಬಾರದು. ಇದಿಷ್ಟರಿಂದ ತೃಪ್ತರಾಗಿ ನನ್ನನ್ನು ಮಾತೃಋಣದಿಂದ ಮುಕ್ತನಾಗುವಂತೆ ಅನುಗ್ರಹಿಸಬೇಕು ಎಂದು ಹೇಳು ಹೋಗು” ಎಂದನು.

ವಿರೂಪಾಕ್ಷನಿಗೆ ಸಂತೋಷವಾಯಿತು. “ವಿಶ್ವರೂಪ, ನೀನು ನಿಜವಾಗಿಯೂ ನಮ್ಮ ಮೇಲೆ ಅಭಿಮಾನವುಳ್ಳವನು. ಸಂದೇಹವಿಲ್ಲ. ಆದರೆ, ನಾವು ದೇವತೆಗಳಂತೆ ಎಲ್ಲೆಂದರಲ್ಲಿ ಯಾವಾಗ ಎಂದರೆ ಆಗ ಬರಲಾರೆವು. ಅದರಿಂದ ದಿನದಿನವೂ ಅರ್ಧರಾತ್ರಿಯಲ್ಲಿ ಬಂದು ನಮ್ಮ ಹವಿರ್ಭಾಗವನ್ನು ತೆಗೆದುಕೊಂಡು ಹೋಗಲಪ್ಪಣೆ ಕೊಡು" ಎಂದನು.

ವಿಶ್ವರೂಪನು ತಲೆಯಲ್ಲಾಡಿಸಿದನು. “ನೀನು ಅಮರಾವತಿಯ ವ್ಯವಸ್ಥೆಯನ್ನು ಅರಿಯದವನಂತೆ ಹೇಳುವೆ. ಅದು ಸಾಧ್ಯವಿಲ್ಲ. ಸಮರಾತ್ರಿಯಲ್ಲಿ ಅದೇವತೆಯು ಪುರಪ್ರವೇಶ ಮಾಡಿದರೆ ಅಮರಾವತಿಯು ಅವನನ್ನು ನುಂಗಿಬಿಟ್ಟೀತು. ಅದರಿಂದ ನೀವು ಅನಧ್ಯಯನದ ದಿನಗಳಲ್ಲಿ ಬನ್ನಿ, ಕಾಲ ಪ್ರಚೋದಿತವಾಗಿ ಮೋಡಮುಚ್ಚಿ ಸೂರ್ಯರಶ್ಮಿ ಕಾಣದ ದಿನಗಳಲ್ಲಿ ಬಂದು ನಿಮ್ಮ ನಿಮ್ಮ ಹವಿರ್ಭಾಗಗಳನ್ನು ತೆಗೆದುಕೊಂಡು ಹೋಗಿ. ಪುರಪ್ರವೇಶ ಮಾಡುವಾಗ ‘ಇಂತಹ ಕಡೆಗೇ ಹೋಗುವೆವು. ನಾವು ಇಂಥವರು’ ಎಂದು ಧೈರ್ಯವಾಗಿ ಹೇಳಿ, ಉದ್ದೇಶವನ್ನು ಮಾತ್ರ ಹೇಳಬೇಡಿ” ಎಂದು ಹೇಳಿ ಆತನಿಗೆ ಸಲ್ಲಬೇಕಾದ ಗೌರವಗಳನ್ನೆಲ್ಲ ಸಲ್ಲಿಸಿ, ಆತನನ್ನು ಬೀಳ್ಕೊಟ್ಟನು.

ಅಲ್ಲಿರುವ ಕಂಭದೊಳಗೆ ಇದ್ದುಕೊಂಡಿದ್ದು ಅದೆಲ್ಲವನ್ನೂ ಕೇಳಿದ ದೇವತೆಯೊಬ್ಬನು ವಿಶ್ವರೂಪಾಚಾರ್ಯನು ಕಣ್ಮುಚ್ಚಿ ಧ್ಯಾನಪರನಾಗಿರುವಾಗ ಈಚೆಗೆ ಬಂದು, ಓಡಿ ಹೋಗಿ ನಡೆದುದೆಲ್ಲವನ್ನು ದೇವೇಂದ್ರನಿಗೆ ಅರಿಕೆ ಮಾಡಿದನು.

ಆತನೂ ಒಂದು ಗಳಿಗೆ ಯೋಚನೆಮಾಡಿ, “ದಿನದಿನವೂ ನಡೆಯುವ ವಿಷಯ. ಚತುರ್ಮುಖನವರೆಗೂ ಹೋಗಬೇಕಾಗಿಲ್ಲ. ನಾನೇ ಇದನ್ನು ಇತ್ಯರ್ಥಮಾಡಬೇಕು. ಮಾಡೋಣ” ಎಂದು ಸುಮ್ಮನಾದನು.

* * * *