೧೨.ಭಯವು ತಪ್ಪಿದ್ದಲ್ಲ ಸಂಪಾದಿಸಿ

ಇತ್ತ ಇಂದ್ರನಿಗೆ ವೃತ್ರಾಸುರನ ಸುದ್ದಿತಿಳಿಯದೆ ಇಲ್ಲ. ಆತನಿಗೆ ಕುಳಿತರೆ, ನಿಂತರೇ ಅದೇ ಯೋಚನೆ. ತನ್ನ ಮಿತ್ರರಾದ ಅಗ್ನಿವಾಯುಗಳೊಡನೆ ಏನಾದರೂ ಆಲೋಚನೆ ಮಾಡುತ್ತಿರುತ್ತಾನೆ. ಆಗ ನಡುವೆ ವೃತ್ರ ಚಿಂತೆಯು ಬಂದು, ವೃತ್ರನು ಬೆಳೆಯುತ್ತಿರುವಂತೆಯೇ ಬೆಳೆದು ತಾನೇ ತಾನಾಗುತ್ತದೆ. ಇನ್ನೊಮ್ಮೆ ಶಚಿಯೊಡನೆ ಏಕಾಂತದಲ್ಲಿ ಏನೋ ಮಾತಾಡುತ್ತಿರುತ್ತಾನೆ. ಅಲ್ಲಿ ವೃತ್ರ ವೃತ್ತಾಂತವು ಹೇಗೋ ನುಸುಳಿಕೊಂಡು ಬಂದು ಮಿಕ್ಕೆಲ್ಲವನ್ನೂ ಮೀರಿ ನಿಲ್ಲುತ್ತದೆ. ಮತ್ತೊಮ್ಮೆ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಬಳಿ ಏನೋ ರಾಜಕಾರಣವನ್ನು ಕುರಿತು ಮಾತನಾಡುವಾಗ ವೃತ್ರಾಸುರ ಸಮಾಚಾರವು ಬಂದು, ಇಂದ್ರನ ಹೃದಯದಲ್ಲಿ ಎಷ್ಟು ಭೀತಿಯು ತುಂಬಿದೆ ಎಂಬುದು ವ್ಯಕ್ತವಾಗುತ್ತದೆ. ಮರವು ಎತ್ತರವಾದಷ್ಟೂ ಕೊನೆಗಳು ಸಣ್ಣದಾಗಿರುತ್ತವೆ ; ಆ ಕೊನೆಕೊನೆಗಳಲ್ಲಿ ಗಾಳಿಯ ಭೀತಿಯು ಹೆಚ್ಚಿ ಅಲ್ಲಿ ಮರವು ಎಷ್ಟೋ ದಿನ ಕಷ್ಟಪಟ್ಟು ಬೆಳೆಸಿದ ಕೊನೆಗಳು ಲಟಕ್ಕನೆ ಮುರಿದು ಬೀಳುತ್ತವೆ. ಹಾಗೆ ಆಗಿದೆ ಇಂದ್ರನ ಸ್ಥಿತಿ. ಇಂದ್ರನಿಗೆ ವೃತ್ರನ ದಿಗಿಲು ಅಷ್ಟಿಷ್ಟಲ್ಲ. ಯಾವ ರಾಗವನ್ನು ಹಾಡಿದರೂ ಅದಕ್ಕೆ ಆಧಾರಶ್ರುತಿಯು ಇದ್ದೇ ಇರುವಂತೆ, ಅವನು ಯಾವ ಕೆಲಸಮಾಡುತ್ತಿರಲಿ, ತಪ್ಪದೆ ಅಲ್ಲಿ ಯಾವುದಾದರೂ ಒಂದು ರೂಪವಾಗಿ ವೃತ್ರಭೀತಿಯಿದ್ದೇ ಇದೆ.

ಒಮ್ಮೊಮ್ಮೆ ಹಿಂದಿನದೆಲ್ಲ ನೆನಪಾಗುತ್ತದೆ. “ಅದೊಂದು ವಿಷಗಳಿಗೆ.ಆ ಮುನಿಗಣವು ಬಂದಾಗ, ಸಭೆಯು ಎಷ್ಟಾದರೂ ದೇವಸಭೆ, ಅಲ್ಲಿ ಬ್ರಹ್ಮಪ್ರವಚನವು ಸರಿಯಲ್ಲ ಎನ್ನುವುದು ಮನಸ್ಸಿಗೆ ಬಂದಿದ್ದರೆ ಇಷ್ಟು ಅನರ್ಥವಾಗುತ್ತಿರಲಿಲ್ಲವೋ ಏನೊ” ಎನ್ನಿಸಿ, ಆಗ ಬೃಹಸ್ಪತಿಯು ಬಂದು ತನಗೆ ಮರ್ಯಾದೆಯಾಗಲಿಲ್ಲವೆಂದು ಹೊರಟುಹೊದುದು, ತಾನು ಹೋಗಿ ಬ್ರಹ್ಮನನ್ನು ಕಂಡು ಆಚಾರ್ಯನೊಬ್ಬನು ಬೇಕೆಂದುದು, ಆತನು ವಿಶ್ವರೂಪನನ್ನು ಕೊಡುವಾಗಲೇ ‘ಅನರ್ಥವಾಗದಂತೆ ನೋಡಿಕೋ’ ಎಂದುದು ಎಲ್ಲವೂ ನೆನಪಾಗುತ್ತದೆ.

“ಹಾಗಾದರೆ ನಾನು ವಿಶ್ವರೂಪಾಚಾರ್ಯನಲ್ಲಿ ತಪ್ಪಿ ನಡೆದೆನೆ ? ಆತನನ್ನು ಪ್ರಾರ್ಥನೆ ಮಾಡಿಕೊಂಡೆ. ದೇವಗುರುವಾಗಿ, ದೇವತೆಗಳಿಗೆ ಸಲ್ಲದ ರೀತಿಯಲ್ಲಿ ನಡೆಯಬಾರದು ಎಂದು ಎಷ್ಟು ಕೇಳಿಕೊಂಡೆ ! ಎಷ್ಟು ಜನರಿಂದ ಹೇಳಿಸಿದೆ ! ಆದರೂ ಆತನು ತನ್ನ ಕೆಟ್ಟ ಚಾಳಿಯನ್ನು ಬಿಡಲಿಲ್ಲ. ಅದೂ ಇರಲಿ, ಆ ಕೊನೆಯ ದಿವಸ ! ಆತನು ಅದೆಷ್ಟು ತಿರಸ್ಕಾರದಿಂದ ನಡೆದುಕೊಂಡ ! ನಾನು ದೇವೇಶ್ವರನೆಂಬುದು ಲಕ್ಷ್ಯವೇ ಇಲ್ಲದೆ, ‘ನೀನೇನು ಮಾಡಬಲ್ಲೆ ನೋಡೋಣ’ ಎಂದು ಎದೆಯನ್ನು ಚಾಚಿ ನಿಂತನಲ್ಲ ! ಆಗ ನಾನು ಕಡಿದು ಹಾಕದೆ ಇನ್ನೇನು ಮಾಡಬಹುದಾಗಿತ್ತು ? ಈಗ ಎಲ್ಲರೂ ‘ನೀನು ಮಾಡಿದೆ, ನೀನು ಮಾಡಿದೆ’ ಎಂದು ನನ್ನನ್ನು ಆಕ್ಷೇಪಿಸುವರಲ್ಲ ! ಆಗ ಏಕೆ ಬಂದು ವಿಶ್ವರೂಪಾಚಾರ್ಯನಿಗೆ ಹೇಳಬಾರದಾಗಿತ್ತು ? ಇವರನ್ನು ಬೇಡವೆಂದಿದ್ದವರು ಯಾರು ? ಎಂದು ಎದುರಿಗಿಲ್ಲದ ಅಹಿತೈಷಿಗಳನ್ನು ಕುರಿತು ನಿಂದಿಸುತ್ತಾನೆ. ಹಾಗೆಯೇ ಅಲ್ಲಿಂದ ಮುಂದೆ ತ್ವಷ್ಟೃವು ಕಶ್ಯಪನ ಮಾತನ್ನು ನಿರಾಕರಿಸಿದುದು, ಕೃತ್ಯವನ್ನು ಮಾಡಿದುದು, ಆ ಕೃತ್ಯವಿಂದು ತನ್ನನ್ನು ತಿನ್ನಲು ಕಾದಿರುವುದು, ಎಲ್ಲವೂ ಚಿತ್ರಪಟದಂತೆ ಮನಃಫಲಕದಲ್ಲಿ ಹಾದು ಹೋಗುತ್ತದೆ.

“ಹಾಗಾದರೆ ಈ ಕೃತ್ಯವು ನನ್ನನ್ನು ತಿನ್ನುವುದೇನು ! ನಾನು ಅಮರನಲ್ಲ! ಅಮೃತವನ್ನು ಸೇವಿಸಿರುವೆನಲ್ಲ ! ನನ್ನನ್ನು ಈ ಕೃತ್ಯವೆಂತು ಕೊನೆಗಾಣಿಸುವುದು? ಸಾಯಿಸುವಂತಿಲ್ಲ, ಈ ಮನ್ವಂತರದ ಕೊನೆಯವರೆಗೆ ಯಾರೂ ನನ್ನನ್ನು ಏನೂ ಮಾಡುವಂತಿಲ್ಲ, ಆದರೆ ಈ ಕೃತ್ಯ ! ಹಾಗಾದರೆ ನನ್ನನ್ನು ಇದೇನು ಮಾಡುವುದು? ವೃತ್ರನು ‘ಆ ಇಂದ್ರನನ್ನು ಹಿಡಿದು ತಿಂದುಬಿಡುವೆನು’ ಎಂದು ಹೇಳಿಕೊಂಡು ತಿರುಗುತ್ತಿರುವನಂತೆ ! ಅವನ ಆಕಾರವನ್ನು ನೋಡಿದರೆ ಅದು ಅಸಾಧ್ಯವಲ್ಲ. ಆದರೆ, ನನ್ನನ್ನು ಜೀರ್ಣಿಸಿಕೊಳ್ಳುವನೆ ? ನನ್ನನ್ನು ಜೀರ್ಣಮಾಡುವ ಅಗ್ನಿಯು ಹುಟ್ಟಿಲ್ಲ, ಇಂದಿನಿಂದ ನಾನು ಅದಕ್ಕೆ ಸಿದ್ಧನಾಗಿರಬೇಕು. ಅವನು ನನ್ನನ್ನು ಹಿಡಿದುಕೊಳ್ಳದಂತೆ ನೋಡಬೇಕು. ಗವಿಯಂತಿರುವ ಆ ಬಾಯೊಳಕ್ಕೆ ನನ್ನನ್ನು ಹಾಕಿಕೊಳ್ಳದಂತೆ ಎಚ್ಚರವಾಗಿರಬೇಕು. ಒಂದುವೇಳೆ ನುಂಗಿಯೇಬಿಟ್ಟರೆ ? ಆ ಜಠರಕುಹರದಿಂದ ತಪ್ಪಿಸಿಕೊಂಡು ಬರಲೂ ಸಿದ್ಧನಾಗಿರಬೇಕು.”

ಇಂದ್ರನಿಗೆ ಆ ಯೋಚನೆಯು ಬಹು ಭಯಂಕರವಾಯಿತು. ಕೆಟ್ಟ ಕನಸು ಕಾಣುತ್ತಿರುವವನು ಭಯಂಕರವಾದ ಏನೋ ಒಂದನ್ನು ಕಂಡು ಹೆದರಿ, ಕಿಟಾರನೆ ಕಿರಿಚುವಂತೆ, ಆತನಿಗೂ ಕಿರಿಚಿಕೊಳ್ಳಬೇಕೆನ್ನಿಸಿತು. ಆ ವೇಳೆಗೆ ತಾನು ಯಾರು ಎಂಬುದು ನೆನಪಾಗಿ ಕಿರುಚಿಕೊಳ್ಳುವುದು ತಪ್ಪಿದರೂ ಅಲ್ಲಿ ಕುಳಿತಿರಲು ಆಗಲಿಲ್ಲ. ಅಲ್ಲಿಂದ ಎದ್ದು ಯಾರೋ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವರು ಎಂದುಕೊಂಡು ಹೆದರಿ ಓಡಿಹೋಗಬೇಕೆಂದುಕೊಂಡನು. ಯಾರೊಡನೆಯೂ ಹೇಳಿಕೊಳ್ಳುವಂತಿಲ್ಲ, ಹಾಗೆಂದು ಸುಮ್ಮನಿರುವಂತಿಲ್ಲ, ಬಾಹ್ಯಪ್ರಜ್ಞೆಯಿದೆ. ತಾನು ದೇವೇಂದ್ರನೆಂಬುದು ಗೊತ್ತಿದೆ. ತಾನು ಕುಳಿತಿರುವ ಮಂದಿರದ ಬಾಗಿಲಲ್ಲಿ ಪ್ರಹರಿಯು ಕಾದು, ಸಾಯುಧನಾಗಿ ನಿಂತಿರುವುದು ಗೊತ್ತಿದೆ. ಹಾಗೆಯೇ ತನ್ನ ಅಂತಃಕರಣದಲ್ಲಿ ನಡೆದ ಯೋಚನೆಯು ತೀವ್ರವಾಗಿ ತನ್ನ ಮನೋಬಲವೇ ಅದಕ್ಕೆ ದೊರೆತು, ಅದು ನಿಜಕ್ಕಿಂತ ನಿಜವಾಗಿ ಎದುರಿಗೆ ನಿಂತಿದೆ. ಕಣ್ಣೆದುರು ನಿಂತು ಅಂಜಿಸುತ್ತಿದೆ. ವೃತ್ರನು ಎದುರಿಗೆ ನಿಂತಿದ್ದಾನೆ. ‘ಇದೋ ನಿನ್ನನ್ನು ಹಿಡಿದು ನುಂಗುವೆ’ ಎನ್ನುತ್ತಿದ್ದಾನೆ. ಅದನ್ನು ಸುಳ್ಳೆಂದು ನಿರಾಕರಿಸುವುದೆಂತು ?

ಒಂದು ಸಲ ನಕ್ಕು ಇದೆಲ್ಲ ಭ್ರಾಂತಿಯೆಂದುಕೊಂಡನು. ವಿಶ್ವರೂಪಾಚಾರ್ಯನನ್ನು ವಧೆಮಾಡಿದಾಗ, ಆತನ ದೇಹದಿಂದ ಎದ್ದು ಬಂದು ಧೂಮವು ತನ್ನನ್ನು ಸೋಕುತ್ತಿದ್ದ ಹಾಗೆಯೇ ತನಗೆ ಜ್ಞಾನ ತಪ್ಪಿದುದು ನೆನಪಾಗಿ ‘ಈ ವೃತ್ರಕೃತ್ಯವು ತತ್ಫಲವಾಗಿ ಬಂದುದು. ಇದನ್ನೆಂತು ಸುಳ್ಳು ಎನ್ನಲಿ? ಎಂದೆನ್ನಿಸಿತು. ಹಾಗೆಯೇ ಆ ತೋರುತ್ತಿರುವ ಚಿತ್ರವು ನಿಜ. ಸುಳ್ಳಲ್ಲ ಎನ್ನಿಸಿತು. ಇಂದ್ರನು ಇನ್ನೊಂದು ಗಳಿಗೆಯೊಳಗಾಗಿ ಅಲ್ಲಿ ನಿಲ್ಲಲಾರದೆ ಹೋದನು. ಆ ಮಂದಿರದಲ್ಲೆಲ್ಲಾ ವೃತ್ರನು ತುಂಬಿರುವಂತೆ ಭಾಸವಾಯಿತು. ಅಲ್ಲಿರುವ ಜೀವರತ್ನವೊಂದೊಂದೂ ಒಬ್ಬೊಬ್ಬ ವೃತ್ರನಾಗಿರುವಂತೆ. ಕಂಭ, ಬೋದಿಗೆಗಳೂ ವೃತ್ರರಾಗಿರುವಂತೆ ಅಷ್ಟೇನು? ಇಂದ್ರನ ಸಾವಿರ ಕಣ್ಣುಗಳೂ ಸಾವಿರ ಜನ ವೃತ್ರರನ್ನು ಕಂಡಂತೆ ಆಗಿ, ವೃತ್ರನ ವಿಶ್ವರೂಪವನ್ನು ನೋಡುತ್ತ ಮಹೇಂದ್ರನು ವಿಹ್ವಲನಾಗಿ, ಹೆದರಿ, ಅಲ್ಲಿ ನಿಲ್ಲಲಾರದೆ, ಎದ್ದು ಓಡಿದನು. ಬಾಗಿಲಲ್ಲಿರುವ ಪ್ರಹರಿಯು, ಬಾಗಿಲನ್ನು ತೆರೆದುಕೊಂಡು ಬಂದು, ಹಿಂದು ಮುಂದು ನೋಡದೆ ಓಡುತ್ತಿರುವ ಇಂದ್ರನ ಹಿಂದೆ ಹೋಗಬೇಕೋ ಅಥವಾ ಮಂದಿರದ ಬಾಗಿಲಲ್ಲಿಯೇ ನಿಂತಿರಬೇಕೋ ತಿಳಿಯದೆ ತಬ್ಬಿಬ್ಬಾಗಿ ನಿಂತ ಕಡೆಯೇ ನಿಂತುಬಿಟ್ಟನು.

ಮಂದಿರದಿಂದ ಹೊರಬಿದ್ದ ಇಂದ್ರನು ವಾಯುವೇಗ ಮನೋವೇಗಗಳಿಂದ ಓಡಿದನು. ಅಭ್ಯಾಸವು ಆತನನ್ನು ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಭವನಕ್ಕೆ ಕರೆದೊಯ್ದಿತು. ಬಾಗಿಲಲ್ಲಿ ನಿಂತಿರುವವನನ್ನು ಕೇಳಿ ಪ್ರವೇಶಿಸಬೇಕು ಎನ್ನುವ ಶಿಷ್ಟಾಚಾರವನ್ನೂ ಮೀರಿ ಒಳನುಗ್ಗಿದನು. ದೌವ್ವಾರಿಕನು ಈತನನ್ನು ತಡೆಯುವುದೋ ಒಳಬಿಡುವುದೋ ಎಂದುಕೊಳ್ಳುವುದರೊಳಗಾಗಿ, ಮಹೇಂದ್ರನು ದೇವಗುರುಗಳ ಸಮೀಪವರ್ತಿಯಾಗಿದ್ದಾನೆ. ಅಲ್ಲಿ ನಾಲ್ವರು ದೀಕ್ಷಿತರು ರಕ್ಷೋಘ್ನ ಮಂತ್ರಗಳನ್ನು ಪಾರಾಯಣ ಮಾಡುತ್ತಿದ್ದಾರೆ. ಅಲ್ಲಿ ಪಕ್ಕದ ಚುತುಶ್ಯಾಲೆಯಲ್ಲಿ ಇನ್ನು ನಾಲ್ವರು ದೀಕ್ಷಿತರು ದೇವೋತ್ತೇಜಕ ಮಂತ್ರಗಳಿಂದ ಹೋಮ ಮಾಡುತ್ತಿದ್ದಾರೆ. ಅಲ್ಲಿಯೇ ಮತ್ತೊಂದು ಕಡೆಯಲ್ಲಿ ಅಭಿಮಂತ್ರಿತವಾದ ಸಾಂತ್ಯುದಕವನ್ನು ಧರಿಸಿರುವ ಕಲಶಗಳು ಸಿದ್ಧವಾಗಿವೆ. ಅಲ್ಲಿಗೆ ಬರುತ್ತಲೂ ದೇವಗುರುವಿನ ದರ್ಶನ, ರಕ್ಷೋಘ್ನಮಂತ್ರಗಳ ಶ್ರವಣ ಮೊದಲಾದವುಗಳಿಂದ ದೇವರಾಜನು ಸ್ವಸ್ಥನಾಗಿದ್ದಾನೆ. ಆ ಚಿತ್ತಭ್ರಾಂತಿಯು ಅರ್ಧಭಾಗ ಕಡಿಮೆಯಾಗಿದೆ. ದೇವಗುರುಗಳಿಗೆ ನಮಸ್ಕಾರ ಮಾಡಿ, ಒಂದೆಡೆಗೆ ಕೈಮುಗಿದು ನಿಲ್ಲುತ್ತಾನೆ.

ದೇವಗುರುವು ಇಂದ್ರನ ಮುಖವನ್ನು ನೊಡುತ್ತಿದ್ದ ಹಾಗೆಯೇ, ಆತನ ಮನಃಕ್ಷೋಭವನ್ನು ಅರಿತಿದ್ದಾನೆ. ಪಕ್ಕದ ಆಸನದಲ್ಲಿ ಆತನನ್ನು ಕುಳ್ಳಿರಿಸಿ, ಒಳಗಿನಿಂದ ಸಾಂತ್ಯುದಕದ ಕಲಶವೊಂದನ್ನು ತರಿಸಿ, ತಾನೇ ತೆಗೆದುಕೊಂಡು ಅದರಿಂದ ದೇವೇಂದ್ರನಿಗೆ ಸಂಪ್ರೋಕ್ಷಣ ಮಾಡುತ್ತಾನೆ. ದೇವೇಂದ್ರನ ಅಂತಭ್ರಾಂತಿಯು ನಿವಾರಣವಾಗಿ ಆತನು ಸ್ವಸ್ಥನಾಗುತ್ತಾನೆ.

ದೇವೇಂದ್ರನು ಮತ್ತೆ ನಗುನಗುತ್ತ “ದೇವಗುರುಗಳಲ್ಲಿ ಪ್ರಸ್ತಾಪಿಸಬೇಕಾದ ವಿಷಯವೊಂದಿತ್ತು” ಎನ್ನುತ್ತಾನೆ. ಕೂಡಲೇ ದೇವಗುರುವೂ ದೇವೇಂದ್ರನೂ ಅಂತರ್ಗೃಹಕ್ಕೆ ಹೋಗುತ್ತಾರೆ. ಬಾಗಿಲಲ್ಲಿ ದೌವ್ವಾರಿಕನು ಬಾಗಿಲನ್ನು ಮುಚ್ಚಿಕೊಂಡು ಕಾವಲು ನಿಲ್ಲುತ್ತಾನೆ.

ದೇವಗುರುವು ಏಕಾಂತದಲ್ಲಿ ಕೇಳುತ್ತಾನೆ : “ಮಹೇಂದ್ರ ಏನಾಗಿದೆ ? ಏನೋ ಗಾಬರಿಪಟ್ಟಿರುವಂತಿದೆ, ಪಾತಾಳದಲ್ಲಿ ಭಯಂಕರವಾದ ಸುದ್ದಿಯೇನಾದರೂ ಬಂತೋ ?”

ಮಹೇಂದ್ರನಿಗೆ ಕಣ್ಣು ಮುಚ್ಚಿಕೊಂಡು ಕಿಂಚಿತ್ತೂ ಮನೋಭೀತಿಯಿಲ್ಲದಂತೆ ಮಾತನಾಡಬೇಕೆಂದು ಇಷ್ಟ. ಅಲ್ಲದೆ, ದೇವಗುರುವಿನ ಸನ್ನಿಧಾನದಲ್ಲಿ ಮನಸ್ಸು ಸ್ವಸ್ಥವಾಗಿದೆ. ಆದರೂ ಅಂತಸ್ಥವಾದ ಭೀತಿಯನ್ನು ಊದಿ ಪುಟಗೊಳಿಸುವ ‘ತಾನು ಅಪರಾಧಿ’ಯೆಂಬ ಭಾವವು ಬಲವಾಗಿರಲು, ವಿಕಲನಾಗದಿರುವುದೆಂತು? ಏನೋ ನಿರ್ದಿಷ್ಟವಲ್ಲದ ಹೆದರಿಕೆಯಿಂದ ಹೇಳಿದನು ; “ಗುರುಸನ್ನಿಧಾನದಲ್ಲಿಯೂ ಮುಚ್ಚಿಡಲೇಕೆ ? ನನಗೆ ವೃತ್ರಭೀತಿಯು ಬಹಳವಾಗಿದೆ.”

ದೇವಗುರುವು ನಕ್ಕನು : “ಹೌದು, ಆಗಬೇಕಾದುದೇ! ಅವನೂ ದೇವತೆಗಳನ್ನು ಗೆದ್ದು ದೇವಲೋಕವನ್ನು ತನ್ನದು ಮಾಡಿಕೊಳ್ಳಲು ಎಲ್ಲಾ ಸನ್ನಾಹಗಳನ್ನು ಮಾಡಿಕೊಳ್ಳುತ್ತಿದ್ದಾನೆ.”

“ಫಲಿತಾಂಶವು ಏನಾಗಬಹುದು, ಗುರುವರ್ಯಾ ?”

“ಶಕುನಗಳು ನಮಗೆ ಚೆನ್ನಾಗಿಲ್ಲ ಯುದ್ಧದಲ್ಲಿ ನಾವು ಸೋಲಬಹುದು.”

“ನಾವು ಸೋತರೆ ಏನಾದೀತು ?”

“ಆಗುವುದೇನು ? ನಮ್ಮನ್ನೆಲ್ಲ ಇಲ್ಲಿಂದ ಓಡಿಸುತ್ತಾರೆ. ಆಗ ನಾವು ಮೇರು ಪರ್ವತದ ಗುಹೆಗಳಲ್ಲಿ ಎಲ್ಲೋ ಸೇರಿಕೊಂಡು, ಬ್ರಹ್ಮನನ್ನೋ, ವಿಷ್ಣುವನ್ನೋ, ಮಹಾದೇವನನ್ನೋ ಪ್ರಾರ್ಥಿಸಿಕೊಳ್ಳುತ್ತ ಅಜ್ಞಾತವಾಸ ಮಾಡಬೇಕಾಗುವುದು.”

“ದೇವ, ಯುದ್ಧದಲ್ಲಿ ಸೋಲುವುದು ಮಾತ್ರವಾದರೆ, ತಾವು ಹೇಳಿದಂತಾಗಬಹುದು. ವೃತ್ರನ ಕೈಗೆ ಸಿಕ್ಕಿಬಿದ್ದರೆ ಆ ಬೃಹದಾಕಾರವು ನನ್ನನ್ನು ಹಿಡಿದು ನುಂಗಿಬಿಟ್ಟರೆ ?”

“ದೇವರಾಜ, ನೀನು ಭೀತನಾಗಿ ಯೋಚಿಸುತ್ತಿರುವೆ. ಅದನ್ನು ಬಿಡು. ಅವನು ನುಂಗಿದರೆ ಜಠರವಾಯುವಿಗೆ ನಿನ್ನನ್ನು ಹೊರಕ್ಕೆ ತರುವಂತೆ ಹೇಳು. ಅವನಿಗೆ ಒಂದು ತೇಗು ಬರುವುದು. ನೀನು ಈಚೆಗೆ ಬರುವೆ. ಅಥವಾ ನೀನು ಅವನ ಹೊಟ್ಟೆಯನ್ನು ಬಗೆದು-ಈಚೆಗೆ ಬಾ. ಆದರೆ ದೇವೇಂದ್ರ, ನೀನಿಷ್ಟು ಹೆದರಬೇಕಾಗಿಲ್ಲ, ಅಪಾಯ ಬಂದರೆ ಸಿದ್ಧನಾಗಿರಬೇಕು. ಹಾಗೆಂದು ಉಪಾಯವನ್ನು ಚಿಂತಿಸುವೆನೆಂದು ಅಪಾಯವನ್ನು ಧ್ಯಾನಿಸುತ್ತಿರುವುದು ಸರಿಯಲ್ಲ. ಅಲ್ಲದೆ, ನಾವು ದೇವತೆಗಳು ಲೋಕವನ್ನೆಲ್ಲಾ ಸೃಷ್ಟಿಸಿರುವ ಪ್ರಾಣದಿಂದ ಕಿಡಿಗಳಂತೆ ಹಾರಿ ಬಂದ ತೇಜಃಪಿಂಡಗಳಾಗಿ, ಲೋಕದ ರಕ್ಷಾಭಾರವನ್ನು ವಹಿಸಿರುವವರು ನಾವು. ಇದನ್ನು ಅಧಿಕಾರವೆಂದು, ಭೋಗಸ್ಥಾನವೆಂದು, ಇತರರು ಬಯಸಿ, ಇಲ್ಲಿರುವ ನಮ್ಮನ್ನು ದ್ವೇಷಿಸುತ್ತಿರುವರು. ಇದು ಲೋಕದ ಸ್ವಭಾವ ಅಲ್ಲದೆ, ಅಧಿಕಾರದಲ್ಲಿದ್ದು, ಹತ್ತು ಜನರ ಕಣ್ಣಿಗೆ ಬಿದ್ದವರಿಗಲ್ಲದೆ ಇನ್ನು ಯಾರಿಗೆ ಶತ್ರುಗಳು? ಅದರಿಂದ, ಆ ಯೋಚನೆಯನ್ನು ಬಿಡು.”

“ಹಾಗಾದರೆ ನಾನು ವೃತ್ರನಿಗೆ ಸೋಲಲೇಬೇಕೆ ?”

“ಹೌದು, ಯತ್ನವಿಲ್ಲ. ತ್ವಷ್ಟೃವು ಯಾಗ ಮಾಡುವಾಗಲೇ ಅತೀಂದ್ರನಾದ ಇಂದ್ರಶತ್ರುವು ಹುಟ್ಟಬೇಕೆಂದೇ ಸಂಕಲ್ಪ ಮಾಡಿರುವನಾಗಿ ನೀನು ಸೋಲಲೇ ಬೇಕು. ಆದರೆ ಅದು ಯಾವಾಗ, ಎಷ್ಟು ದಿನ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಆದರೆ ನಾನು ನಿನಗೆ ಒಂದು ರಹಸ್ಯವನ್ನು ಹೇಳುವೆನು ಕೇಳು. ಅದನ್ನು ನೀನೂ ಬಲ್ಲೆ. ಆದರೆ, ಭೀತಿಯಿಂದ ಚದುರಿರುವ ಈ ನಿನ್ನ ಸ್ಥಿತಿಯಲ್ಲಿ ನೀನು ಮರೆತಿದ್ದೀಯೆ. ದೇವತೆಗಳು ಧರ್ಮಪರರು. ನಿನ್ನ ಧರ್ಮಕ್ಕೆ ಅನುಗುಣವಾಗಿ ನೀನು ಇದ್ದರೆ, ನಿನ್ನ ಕಾರ್ಯದಿಂದ ನಿನಗೆ ಪುಣ್ಯವು ಬಂದು, ನಿನ್ನ ತೇಜಸ್ಸು ವಿವೃದ್ಧವಾಗುವುದು. ನಾಳೆ ವೃತ್ರನು ನಿನ್ನನ್ನು ಗೆದ್ದು ಇಂದ್ರನಾದನೆಂದುಕೊ. ಆಗ ಅವನು ದಿನ ದಿನವು ಅಧಿಕಾರವನ್ನು ಭೋಗಿಸಬೇಕು. ಎಂದರೆ, ತನ್ನ ಪುಣ್ಯವೆಂಬ ಪಣವನ್ನು ಕೊಟ್ಟು ಅದನ್ನು ಕೊಂಡುಕೊಳ್ಳಬೇಕು. ಅದರಿಂದ ಅವನ ಇಂದ್ರತ್ವವು ಸಾಂತವಲ್ಲದೆ ಅನಂತವಲ್ಲ.”

“ಹಾಗಾದರೆ, ಅವನು ಅಮರನಲ್ಲವೆ ?”

“ಅದು ನನಗೆ ತಿಳಿಯದು. ಆದರೆ ಅನುಮಾನಬಲದಿಂದ, ಅವನು ನಿನ್ನಂತೆ ಅಮರನಲ್ಲ ಎಂದು ನಾನು ಭಾವಿಸುತ್ತೇನೆ. ಏನೇ ಆಗಲಿ, ನೀನಂತೂ ಅವನಿಗೆ ಇಂದ್ರತ್ವವನ್ನು ಬಿಟ್ಟುಕೊಡಲೇಬೇಕು. ಅವನಷ್ಟು ದಿನ ಇಂದ್ರನಾಗಿಯೇ ತೀರಬೇಕು.”

“ಹಾಗಾದರೆ ಯುದ್ಧವಿಲ್ಲದೆ ಇಂದ್ರತ್ವವನ್ನು ಬಿಟ್ಟುಕೊಡಬೇಕೆ ?”

“ಅದು ಕೂಡದು. ಆಗ ನೀನು ಹೇಡಿಯಂತೆ ನಡೆದಂತಾಗುವುದು. ಯುದ್ಧಕ್ಕೆ ಸಿದ್ಧನಾಗಿರು. ಇನ್ನು ಸ್ವಲ್ಪಕಾಲದಲ್ಲಿಯೇ ಯುದ್ಧವೂ ಆಗುವಂತೆ ತೋರುವುದು. ಆದರೆ ಒಂದು ಕೆಲಸ ಮಾಡು. ಯುದ್ಧಕ್ಕೆ ಮೊದಲೋ, ಯುದ್ಧವಾದ ಮೇಲೋ, ಸಾಧ್ಯವಾದಾಗ ಶ್ರೀಮಹಾವಿಷ್ಣುವನ್ನು ನೋಡು. ಲೋಕಸ್ಥಿತಿ ಕಾರಣನಾತನು. ಆತನು ಏನು ಮಾಡಬೇಕು ಎಂಬುದನ್ನು ಹೇಳುವನು.”

“ಹಾಗೆಯೇ ಆಗಲಿ, ಗುರುದೇವ. ತಾವು ಹೇಳಿದಂತೆ, ಅನಿಷ್ಟ ಪರಿಹಾರವನ್ನು ಕುರಿತು ಚಿಂತಿಸುತ್ತ ಇರುವುದಕ್ಕೆ ಪ್ರತಿಯಾಗಿ, ಅದು ಯಾವ ರೂಪದಲ್ಲಿ ಬಂದರೂ ಸರಿಯೆಂದು ಸಿದ್ಧನಾಗಿರುವೆನು. ಆದರೆ ಅಪಾಯವನ್ನು ಎದುರಿಸುವ ಉಪಾಯವನ್ನು ಸಿದ್ಧಮಾಡಿಕೊಳ್ಳದಿರುವುದು ಸರಿಯಲ್ಲ. ಅದರಿಂದ ತಾವೂ ದಯಮಾಡಿಸಿದರೆ, ಒಮ್ಮೆ ಮಹಾವಿಷ್ಣುವಿನ ಬಳಿಗೆ ಹೋಗಿಬರೋಣ.”

“ಆಗಬಹುದು”

ಇಂದ್ರನು ದೇವಗುರುವಿಗೆ ನಮಸ್ಕಾರ ಮಾಡಿ ಆತನಪ್ಪಣೆ ಪಡೆದು, ಹೊರಟು ಹೋದನು.

****