ಮಹಾಕ್ಷತ್ರಿಯ/ಸೊತರೂ ಸೋಲಲಿಲ್ಲ

==೧೪.ಸೊತರೂ ಸೋಲಲಿಲ್ಲ==

ವೃತ್ರಾಸುರನು ತನ್ನ ಏಕಾಂತಗೃಹದಲ್ಲಿ ಕುಳಿತಿದ್ದಾನೆ. ದಾನವೇಂದ್ರರ ಗೂಢಚಾರರ ಪಡೆಯ ಒಡೆಯನು ಬಂದು ದಧೀಚಿಯಿಂದ ವಜ್ರಾಯುಧವನ್ನು ಇಂದ್ರನು ಸಂಪಾದಿಸಿದ ಕಥೆಯನ್ನೆಲ್ಲಾ ಹೇಳಿದ್ದಾನೆ. ದಾನವೇಂದ್ರರು “ಪ್ರಭು, ಹೀಗೇ ಬಿಟ್ಟುಕೊಂಡು ಬಂದರೆ, ದೇವತೆಗಳ ಆಯುಧಭಂಡಾರವು ಬಲವಾಗಿ ಅವರು ಅಜೇಯರಾಗುವರು. ಅದರಿಂದ ಆದಷ್ಟು ಬೇಗ ಮೇಲೆ ಬಿದ್ದು ಅವರನ್ನು ನಿರ್ನಾಮ ಮಡಬೇಕು” ಎಂದು ಹೇಳುತ್ತಿದ್ದಾರೆ. ವೃತ್ರಾಸುರನು ಸುಖಾಸನದಲ್ಲಿ ಕುಳಿತಿದ್ದಾನೆ. “ಈಗ ಆಚಾರ್ಯರು ಬರುವ ಹೊತ್ತಲ್ಲವೆ ?” ಎಂದು ಕೇಳುತ್ತಿದ್ದಾನೆ. ‘ಶುಕ್ರಾಚಾರ್ಯರು ದಯಮಾಡಿಸುತ್ತಿರುವರು’ ಎಂದು ಪ್ರಹರಿಯು ಬಂದು ಅರಿಕೆ ಮಾಡಿದನು. ವೃತ್ರನು ಪರ್ವತದಂತಹ ತನ್ನ ದೇಹವನ್ನು ಸುಲಭವಾಗಿ ಮೇಲಕ್ಕೆತ್ತಿಕೊಂಡು ಎದ್ದು ಆಚಾರ್ಯರಿಗೆ ನಮಸ್ಕಾರ ಮಾಡಿದನು. ಆಗ ಆಚಾರ್ಯರು “ವಿಜಯವಾಗಲಿ” ಎಂದು ಆಶೀರ್ವಾದ ಮಾಡಿ, ಇತರ ದಾನವೇಂದ್ರರ ನಮಸ್ಕಾರಗಳನ್ನು ಕೈಕೊಂಡು ತಮ್ಮ ಉನ್ನತಾಸನದಲ್ಲಿ ಕುಳಿತರು.

ವೃತ್ರಾಸುರನು ಶುಕ್ರನನ್ನು ಕೇಳಿದನು : “ನಾವಿನ್ನು ದೇವವಿಜಯಕ್ಕೆ ಹೊರಡಬಹುದೇ ?”

ಆಚಾರ್ಯನು “ವೃತ್ರೇಂದ್ರ, ಎಂದಿನಂತೆ ದೇವವಿಜಯಕ್ಕೆ ಹೊರಡುವುದು ಯಾವಾಗ ಎಂದು ಕೇಳಲಿಲ್ಲ, ಹೊರಡಬಹುದೇ ಎಂದು ಕೇಳಿದೆ. ಅಲ್ಲಿಗೆ ಹೊರಡಬೇಕೆಂದು ಸಂಕಲ್ಪಿಸಿದಂತೆ ಕಾಣುತ್ತದೆ, ಹೊರಡು” ಎಂದು ನಿಟ್ಟುಸಿರು ಬಿಟ್ಟನು.

“ನಿಟ್ಟುಸಿರೇಕೆ ಆಚಾರ್ಯ ?”

“ಈ ಲಗ್ನದಲ್ಲಿ ಹೊರಟರೆ ನಿನಗೆ ವಿಜಯವಾಗುವುದು. ಶತ್ರುವು ಕರಗತನಾಗುವನು. ಆದರೂ ಕಾಲಾಂತರದಲ್ಲಿ ಅವನೇ ಮೃತ್ಯುವಾಗುವನು. ನಾನು ಕಾಯುತ್ತಿದ್ದುದು ಇನ್ನೊಂದು ಮುಹೂರ್ತ. ಅದರಲ್ಲಿ ಪ್ರಸ್ಥಾನ ಮಾಡಿಹೊರಟರೆ, ಶತ್ರುವು ನಿರ್ನಾಮವಾಗಿ, ಸ್ವರ್ಗಾಧಿಪತ್ಯವು ಈ ಮನ್ವಂತರವು ಕಳೆಯುವವರೆಗೂ ನಿನ್ನದಾಗಿರುತ್ತಿತ್ತು.”

ವೃತ್ರಾಸುರನು ತಲೆದೂಗುತ್ತ ಹೇಳಿದನು, “ಸರಿ. ಆ ಮುಹೂರ್ತದವರೆಗೂ ಕಾಯೋಣ.”

ಶುಕ್ರನು ಪರಮಸಂಕಟದಿಂದ ಹೇಳಿದನು ; “ನೀನು ಸುಮ್ಮನಿದ್ದರೂ ನಿನ್ನ ಪರಿವಾರದವರು ಸುಮ್ಮನಿರುವರೆ ? ಅದರಲ್ಲೂ ಇಂದ್ರನು ವಜ್ರಾಯುಧವನ್ನು ಸಂಪಾದಿಸಿದನೆಂದ ಮೇಲೆ ಸುಮ್ಮನಿರುವುದೆಂತು ? ಪಿತೃದತ್ತವಾದ ನಿನ್ನ ಶಕ್ತಿಯನ್ನು ವಿವರ್ಧಿಸಬೇಕೆಂದು ನಾನು ಮಾಡುತ್ತಿರುವ ಪ್ರಯತ್ನವನ್ನು ಇಂದು ನಿನ್ನ ಸಂಕಲ್ಪವು ಮುರಿಯಿತು. ಈಗ ನೀನು ವಿದೇಹಿಯಾಗಿ ಪಂಚಭೂತಗಳನ್ನೂ ಅಹಂಕಾರವನ್ನೂ ಹಿಡಿಯಬಲ್ಲವನಾದೆ. ಸದೇಹಿಯಾಗಿ ಅವುಗಳನ್ನು ಹಿಡಿದು ಆಡಿಸಬಲ್ಲವನು ಇಂದ್ರನಾಗುವನು. ಆ ಇಂದ್ರಶಕ್ತಿಯನ್ನು ಧರ್ಮದಿಂದಾಗಲಿ, ತಪಸ್ಸಿನಿಂದಾಗಲಿ ಪಡೆಯಬೇಕು. ಅತೀಂದ್ರನಾಗುವ ಶಕ್ತಿಯನ್ನು ನಿನಗೆ ನಿನ್ನ ಪಿತೃವು ಕೊಟ್ಟರೂ ಇಂದ್ರನಾಗುವ ಶಕ್ತಿಯನ್ನು ಕೊಟ್ಟಿರಲಿಲ್ಲ. ನಾನು ಅದನ್ನು ಸಂಪಾದಿಸುವುದಕ್ಕೆ ಪ್ರಯತ್ನಪಟ್ಟು ಮುಕ್ಕಾಲಿನಷ್ಟು ಗೆದ್ದಿದ್ದೆ. ಇಂದು ನೀನು ಚೈತ್ರಯಾತ್ರೆಗೆ ಸಂಕಲ್ಪಮಾಡಿ, ಆ ಪ್ರಯತ್ನವನ್ನು ಪೂರ್ತಿ ಮಾಡಿಬಿಟ್ಟೆ ಹುಂ, ವಿಧಿಯ ಸಂಕಲ್ಪ.”

ವೃತ್ರನಿಗೂ, ದಾನವೇಂದ್ರನಿಗೂ ಅದನ್ನು ಕೇಳಿ ವ್ಯಥೆಯಾಯಿತು. ವೃತ್ರನು, ಪರಾಕ್ರಮಿಗೆ ತಕ್ಕ ರೀತಿಯಲ್ಲಿ ಮತ್ತೆ ಆಚಾರ್ಯರಲ್ಲಿ ವಿಜ್ಞಾಪಿಸಿದನು. “ದೇವ, ತಮ್ಮ ಮಂತ್ರಶಕ್ತಿಯಿಂದ ಆಗಿರುವುದನ್ನು ನಮ್ಮ ಪರಾಕ್ರಮದಿಂದ ಪೂರ್ಣ ಮಾಡಲು ಸಾಧ್ಯವಿಲ್ಲವೆ ?”

ಶುಕ್ರನು ಪ್ರಯತ್ನವು ವಿಫಲವಾಯಿತೆಂದು ತೋರಿಸುವ ಪೆಚ್ಚುನಗೆಯನ್ನು ನಕ್ಕು ಹೇಳಿದನು : “ವೃತ್ರೇಂದ್ರ, ನಾನೂ ನೀನೂ ಈ ದಾನವೇಂದ್ರರೂ ಎಲ್ಲರೂ ಕಾಲದ ಶಿಶುಗಳು ಎಂಬುದನ್ನು ಗಣಿಸದೆ ಮಾತನಾಡುತ್ತಿರುವೆ. ಕಾಲವು ಯಾವುದು, ಅದರ ಪ್ರಭಾವವೇನು ಬಲ್ಲೆಯಾ ? ತ್ರಿಮೂರ್ತಿಗಳೂ ಕಾಲದ ಶಿಶುಗಳು. ಪ್ರಜಾಪತಿಯು ಈ ಬ್ರಹ್ಮಾಂಡಕ್ಕೆ ಅಧಿಪತಿ. ಆತನನ್ನು ಸಂವತ್ಸರವೆಂದು ಪೂಜಿಸುವುದರ ಅರ್ಥವೇನು ಬಲ್ಲೆಯಾ ? ದೇಹದೇಹದಲ್ಲಿಯೂ ಕುಳಿತು, ಶ್ವಾಸರೂಪನಾಗಿ, ಆಯಾ ಪ್ರಾಣಿಯು ಆಯುರ್ದಾಯವನ್ನು ಅಳೆಯುತ್ತಿರುವ ಕಾಲವನ್ನು ನೀನೆಂತು ಮೀರಬಲ್ಲೆ ? ನಾನು ನಿನಗೆ ಹೇಳಿದ್ದುದು ಪ್ರಾಜಾಪತ್ಯವ್ರತ. ಆ ವ್ರತವನ್ನು ನೀನು ಕಾಲ ಪ್ರಚೋದಿತನಾಗಿ ಪೂರ್ಣ ಮಾಡಿ ನೀನು ಪ್ರಜಾಪತಿಯೇ ಆಗಿದ್ದರೆ, ಆಗ ಇಂದ್ರನನ್ನು ಮೂಲೆಗೊತ್ತುವವನಾಗುತ್ತಿದ್ದೆ. ಆ ವ್ರತವು ಪೂರ್ಣವಾಗಲಿಲ್ಲವಾಗಿ, ಈಗ ನೀನು ಇಂದ್ರನನ್ನು ಗೆದ್ದರೂ, ಸಮಯವನ್ನು ಸಾಧಿಸಿ ಇಂದ್ರನು ನಿನ್ನನ್ನು ಗೆಲ್ಲುವನು. ದಾನವರು ಮತ್ತೆ ಸ್ವರ್ಗವನ್ನು ಬಿಟ್ಟು ಪಾತಾಳವನ್ನು ಸೇರಬೇಕಾಗುವುದು.

“ಆಗಲಿ ದೇವ, ನೀವು ಮನಸ್ಸು ಮಾಡಿ ನನಗೆ ಇಂದ್ರತ್ವವನ್ನು ಕೊಡಿಸಿರಿ. ಅದನ್ನು ಕಾಪಾಡಿಕೊಳ್ಳುವ ಯೋಚನೆಯನ್ನು ಆಮೇಲೆ ಮಾಡಲು ತಾವು ಇದ್ದೀರಿ.”

“ಅಲ್ಲೇ ದಾನವರು ಎಡುವುತ್ತಿರುವುದು. ಯೋಗಕ್ಷೇಮಗಳೆರಡನ್ನೂ ಒಂದೇ ಕಾಲದಲ್ಲಿ ಸಾಧಿಸಬೇಕು ಅಸುರೇಂದ್ರ. ನೀರನ್ನು ತಡೆಯುವುದೊಮ್ಮೆ ತಡೆದ ನೀರು ನಿಲ್ಲುವಂತೆ ಮಾಡುವುದೊಮ್ಮೆಯಲ್ಲ. ಎರಡೂ ಒಟ್ಟಿಗೇ ನಡೆಯಬೇಕು. ಚಿಗುರೊಮ್ಮೆ ಒಡೆಯಲಿ. ಆಮೇಲೆ ಹೂವು ಬಿಡಲಿ ಎನ್ನುವುದಾಗುವುದಿಲ್ಲ. ಹೂ ಚಿಗುರೊಡನೆಯೇ ಹುಟ್ಟಿಬಂದರೆ, ಆಗ ಫಲವಾಗುವುದು. ಹುಂ, ಇರಲಿ, ಈಗಲೂ ನೀನು ಸಾವಿರಾರು ವರ್ಷ ಕಾಲ ಇಂದ್ರನಾಗಿರುವೆ. ನಾನು ನಿನಗೆ ವರವನ್ನು ಕೊಡುವೆನು. ನೀನು ಇಂದ್ರನಾಗಿರುವವರೆಗೂ ಇಂದ್ರನು ನಿನ್ನನ್ನು ಓಲೈಸುವಂತಾಗಲಿ. ಆಮೇಲೆ ಇಂದ್ರನನ್ನೂ ಹೆದರಿಸಬಲ್ಲ ಶಕ್ತಿವಂತನಾಗು. ಇನ್ನು ನೀನು ಈ ದಿನವೇ ದೇವಲೋಕದ ಮೇಲೆ ದಾಳಿಯಿಡಬಹುದು. ವಿಜಯಧ್ವಜವನ್ನೂ ಪ್ರಸ್ಥಾನಭೇರಿಯನ್ನೂ ಪೂಜೆಮಾಡಿಸು. ದಾನವಾದಿಗಳೆಲ್ಲ ತಮ್ಮ ತಮ್ಮ ಸೇನೆಯೊಡನೆ ಯಥಾಯೋಗ್ಯವಾಗಿ ವ್ಯೂಹಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಚತುರಂಗಸೇನೆಯೊಡನೆ ಬರಲಿ.”

“ತಾವೂ ನಮ್ಮೊಡನೆ ಬರುವಿರಾ”

ದಾನವಸೇನೆಯು ಹೊರಟ ಮೇಲೆ ನನ್ನ ಜಪ ಹೋಮಾದಿಗಳಿಂದ ಪ್ರಯೋಜನವಿಲ್ಲ. ಎಲ್ಲವೂ ಮುಗಿದಂತಾಯಿತು. ಆದರೂ ಕರ್ಮವು ಸಾಫಲ್ಯವಾಗಿ ಮುಗಿಯಲಿ ಎಂಬ ಭ್ರಾಂತಿಯಿಂದ ಅದನ್ನು ಮುಗಿಸಿ ಬರುವೆನು. ದೇವತೆಗಳೂ ನಿಮ್ಮೊಡನೆ ಹಿಂದಿನಂತೆ ಖಡಾಖಡಿಯಾಗಿ ನಿಂತು ಯುದ್ಧ ಮಾಡುವುದಿಲ್ಲ, ಹಾಗೆಂದು ನೀವು ನಿಮ್ಮ ಪೌರುಷವನ್ನು ತೋರಿಸದಿರಬೇಡಿ. ಯುದ್ಧವೆಲ್ಲವೂ ಮುಗಿದು ಅವರು ಅಮರಾವತಿಯನ್ನು ಬಿಟ್ಟೋಡುವ ವೇಳೆಗೆ ನಾನು ಬರುವೆನು.”

ಈ ಮಾತನ್ನು ಕೇಳಿ ದಾನವೇಂದ್ರರೆಲ್ಲರೂ ಬಹು ಸಂತೋಷಪಟ್ಟುಕೊಂಡರು. ಒಬ್ಬೊಬ್ಬರ ಮನಸ್ಸಿನಲ್ಲಿಯೂ “ಹಿಂದೆ ನಾವು ಗೆದ್ದಾಗ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳನ್ನು ಎಲ್ಲಿಯೋ ಮರೆಮಾಡಿದ್ದರು. ಈ ಸಲ ಹಾಗೆ ಮಾಡದಂತೆ ನೋಡಿಕೊಳ್ಳಬೇಕು” ಎಂದೆನಿಸಿತು. ಎಲ್ಲರಿಗೂ ಭೋಗದಾಸೆ, ಭೋಗದ ಹಂಬಲ, ಭೋಗದ ಚಿಂತೆ. ಅಮರಾವತಿಯನ್ನು ಹಿಡಿಯುವುದರಲ್ಲಿ ಇನ್ನೇನೂ ಉದ್ದೇಶವಿಲ್ಲ. ಎಲ್ಲರೂ ತಮ್ಮ ತಮ್ಮ ಆಸೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಆಗಲೇ ದೇವತೆಗಳು ಅಮರಾವತಿಯನ್ನು ಬಿಟ್ಟು ಓಡಿ ಹೋಗಿರುವಂತೆ, ತಾವು ನಿರಾತಂಕವಾಗಿ ಅಮರಾವತಿಗೆ ಅಧೀಶರಾಗಿರುವಂತೆ ಭಾವನೆ.

ದಾನವಸೇನೆಯು ದೇವಲೋಕದ ಮೇಲೆ ಧಾಳಿಯಿಟ್ಟಿತು. ದೇವೇಂದ್ರನು ಲೋಕಪಾಲಕರನ್ನೆಲ್ಲಾ ಸೇರಿಸಿಕೊಂಡು ರಣಾಂಗಣಕ್ಕೆ ಬಂದಿದ್ದಾನೆ. ಎರಡು ಸೇನೆಗಳಿಗೂ ಚೂಣೀಯುದ್ಧವಾಯಿತು. ದಾನವಸೇನಾಸಮೂಹದ ನಡುವೆ, ಕಿರುಗಿಡಗಳ ನಡುವೆ ನಿಂತಿರುವ ಮಹಾವೃಕ್ಷದಂತೆ, ಮೆರೆಯುತ್ತಿರುವ ವೃತ್ರವನ್ನು ನೋಡಿಯೇ ದೇವತೆಗಳು ಹೆದರಿ, ದೇವೇಂದ್ರನ ಕಡೆಗೆ ನೋಡುತ್ತಾರೆ. ಆತನೂ ಐರಾವತವನ್ನೇರಿದ್ದರೂ, ವೃತ್ರನನ್ನು ಕಂಡು ಭಯಪಡುತ್ತಾನೆ. ತಾನೇರಿರುವ ಐರಾವತದ ನಾಲ್ಕರಷ್ಟಾದರೂ ಇರುವ ಆ ದೇಹವನ್ನು ಕಂಡು ಹೆದರದೆ ಇರುವುದೆಂತು? ಸಾಲಿಗ್ರಾಮಕ್ಕಿಂತ ಕಪ್ಪಾದ ದೇಹ ! ಸೂರ್ಯನ ಪ್ರಕಾಶವು ಪ್ರಮುಖವಾಗಿದ್ದರೂ, ಅಮಾವಾಸ್ಯೆಯ ಕಾರಿರುಳ ಕಪ್ಪೆಲ್ಲವೂ ಒಟ್ಟುಗೂಡಿದಂತೆ ಬಂದಿರುವ ಆ ಮೂರ್ತಿಯ ಉನ್ನತವೂ ವಿಶಾಲವೂ ಆದ ಆ ದೇಹ ಒಂದು ಸಣ್ಣ ಬೆಟ್ಟದಂತಿದೆ. ಅದನ್ನು ಕಂಡು ದೇವತೆಗಳೂ ಅವರ ದೊರೆಯೂ ಹೆದರದಿರುವುದು ತಾನೇ ಹೇಗೆ?

ಅದಕ್ಕೆ ತಕ್ಕಂತೆ ಯುದ್ಧವು ಆರಂಭಿಸುತ್ತಿದ್ದ ಹಾಗೇ, ಅವನೇ ದಾರಿ ಮಾಡಿಕೊಂಡು ಮುಂದೆ ಬಂದನು. ದಾನವರು ಅಡ್ಡಡ್ಡವಾಗಿ ನಾಲ್ಕು ಆನೆಗಳು ಸಂಚರಿಸುವುದಕ್ಕೆ ಬೇಕಾದಷ್ಟು ದಾರಿಯನ್ನು ಮಾಡಿದ್ದಾರೆ. ವೃತ್ರನು, “ಆ ಇಂದ್ರನೆಲ್ಲಿ?” ಇಂದ್ರ ! ಇಂದ್ರನೆಲ್ಲಿ ? ಗುರುವೂ, ಭ್ರಾತೃವೂ, ವೇದಾಧ್ಯಯನ ಸಂಪನ್ನನೂ ಆದ ವಿಶ್ವರೂಪಾಚಾರ್ಯನನ್ನು ಕೊಲೆ ಮಾಡಿದ ಆ ಪಾತಕಿಯೆಲ್ಲಿ?” ಎಂದು ಅಬ್ಬರಿಸುತ್ತಾ ಮುಂದೆ ಬಂದಿದ್ದಾನೆ. ಅವನ ಗರ್ಜನೆಯನ್ನು ಕೇಳಿಯೇ ಲೋಕಪಾಲಕರು ಹೆದರುತ್ತಾರೆ. ಇನ್ನೆಲ್ಲಿ ಅವರು ಎದುರು ಬೀಳುವುದು?

ವೃತ್ರನು ಬರುತ್ತಿದ್ದಾನೆ. ಕ್ರೀಡಾಂಗಣದಲ್ಲಿ ಕ್ರೀಡಾಪಟುವು ಎಸೆದ ಚೆಂಡು ಹೋಗುವಂತೆ ಹೋಗುತ್ತಿದ್ದಾನೆ. ಅವನ ಆರ್ಭಟವನ್ನು ಕೇಳಿ ಎಲ್ಲರಂತೆ ಇಂದ್ರನೂ ಹೆದರಿದ್ದಾನೆ. ಐರಾವತದಿಂದ ಧುಮುಕಿ ಓಡಿಹೋಗಲೇ ಎನ್ನಿಸುತ್ತದೆ. ಅವನ ವೀರ ಗರ್ಜನೆಯನ್ನು ಕೇಳಿ ಎದೆಯು ನಡುಗುತ್ತದೆ. ವಿಶ್ವರೂಪಾಚಾರ್ಯನ ತೇಜಸ್ಸೇ ಈ ಘೋರಾಕಾರವನ್ನು ಪಡೆದು ಎದುರು ಬರುವಂತಿದೆ. ಸಾಯುವಾಗ ಅವನು ಮಡಿದ ವಿಕಟಾಟ್ಟಹಾಸವು ಒಂದಕ್ಕೆ ನೂರಾಗಿ ಕಿವಿಗೆ ಬಿದ್ದು ಹೃದಯವನ್ನು ಹೊಕ್ಕು ಹಿಡಿದು ಅಲ್ಲಾಡಿಸುವಂತಿದೆ. ಚಳಿಯು ಹಿಡಿದಂತಾಗಿದೆ. ನಡುಗಿಸುತ್ತಿದ್ದಾನೆ. ಆತನಿರಲಿ, ಆತನ ಐರಾವತವೂ ಒಂದೆರಡು ಹೆಜ್ಜೆ ಹಿಂದಿಡುತ್ತದೆ. ಎತ್ತಿದ್ದ ಸೊಂಡಿಲನ್ನು ಇಳಿಸಿದೆ. ಕಣ್ಣರಳಿಸಿ, ಭೀತಿಯಿಂದ, ಇದಾವ ಭೂತರಾಜನಿವನು ಎದುರು ಬರುತ್ತಿರುವನು ಎಂದು ಕೇಳುವಂತೆ, ಹೆದರಿಕೆಯಿಂದ ಸಣ್ಣದಾಗಿ ಗೊರಗೊರ ದನಿಮಾಡುತ್ತಿದೆ.

ಇಂದ್ರನು ಮತ್ತೆ ಸ್ವಸ್ಥನಾದನು. “ಜಯವೋ ಅಪಜಯವೋ ! ಅಂತೂ ಯುದ್ಧ ಮಾಡಬೇಕು. ನಾನೇ ಅಂಜಿದರೆ, ಈ ಭೂತದೊಡನೆ ಹೋರಾಡುವವರು ಯಾರು ?” ಎಂದು ತನ್ನ ಹೊಸ ಆಯುಧವಾದ ವಜ್ರವನ್ನು ನೋಡಿಕೊಳ್ಳುತ್ತಾನೆ. ಐರಾವತವು ಹಿಮ್ಮೆಟ್ಟದಂತೆ ಅದನ್ನು ಅಂಕುಶದಿಂದ ತಿವಿದು ಮುಂದಕ್ಕೆ ನೂಕುತ್ತಾನೆ. ಅಷ್ಟರೊಳಗಾಗಿ ವೃತ್ರನು “ಇಂದ್ರನೆಲ್ಲಿ ? ಇಂದ್ರನೆಲ್ಲಿ ?” ಎಂದು ಮುಂದೆ ನುಗ್ಗಿ ಬಂದಿದ್ದಾನೆ. ಅವನ ಅದ್ಭುತಾಕಾರವನ್ನು ಕಂಡು ವಿಸ್ಮಯಪಡುತ್ತ ದಾನವರ ಆಕ್ರಮಣವನ್ನೂ ಲಕ್ಷಿಸದೆ ದೇವಸೇನೆಯು ಅವನ ಕಡೆಯೇ ನೋಡುತ್ತಿದೆ.

ಇಂದ್ರನು “ಇದೋ ನಾನಿಲ್ಲಿದ್ದೇನೆ !” ಎಂದು ಎದುರುಬಿದ್ದನು. ಅನೇಕ ದಾನವೇಂದ್ರರ ಶಿರಸ್ಸುಗಳನ್ನು ನಿರ್ಲಕ್ಷ್ಯವಾಗಿ ಕತ್ತರಿಸಿದ್ದ ಖಡ್ಗವನ್ನು ಪ್ರಯೋಗಿಸಿ ತಾನೇ ಯುದ್ಧವನ್ನು ಆರಂಭಿಸಿದನು. ಆ ಮಹಾಭುಜನು ಪ್ರಯೋಗಿಸಿದ ಆ ಮಹಾಖಡ್ಗವನ್ನು ವೃತ್ರನು ಬರುತ್ತಿದ್ದ ಹಾಗೆಯೇ ಹಿಡಿದು ಅತ್ತ ಎಸೆದು ತನ್ನ ಬರಿಗೈಯಿಂದ ಐರಾವತವನ್ನು ಅಪ್ಪಳಿಸಿದನು. ಆ ಗಜೇಂದ್ರವು ಆ ಪ್ರಹರಣವನ್ನು ತಡೆಯಲಾರದೆ ಘೀಳಿಟ್ಟಿತು. ಕೆಳಕ್ಕೆ ಬಿತ್ತು. ಅದು ಹಪ್ಪಳವಾಯಿತೋ ಎಂದು ದೇವಸೇನೆಯು ಕಳವಳಿಸಿತು. ಇಂದ್ರನೂ ಐರಾವತದೊಡನೆ ಆ ಪ್ರಹರಣವನ್ನು ಸೈರಿಸಲಾರದೆ,, ಬಿದ್ದು ವಿಹ್ವಲನಾದನು, ಮೈಕೈಯೆಲ್ಲ ಮುರಿದುಹೋದಂತಾಗಿದ್ದರೂ, ಮತ್ತೆ ವೃತ್ರನನ್ನು ಹೊಡೆಯಲು ವಜ್ರವನ್ನು ಎತ್ತಿ, ಪುಟಚೆಂಡಿನಂತೆ ನೆಗೆದು ಬಂದನು. ವಜ್ರವನ್ನೆತ್ತಿ ಹೊಡೆಯುವುದರೊಳಗಾಗಿ ವೃತ್ರನು ಅವನನ್ನು ಸಣ್ಣಹುಳುವನ್ನು ಹಿಡಿಯುವ ಬಾಲಕನಂತೆ ಹಿಡಿದು ತನ್ನ ಬಾಯೊಳಗೆ ಹಾಕಿಕೊಂಡನು.

ದೇವತೆಗಳೆಲ್ಲರೂ ಹಾಹಾ ಎಂದರು. ಐರಾವತವು ತನ್ನ ಸ್ವಾಮಿಯ ದುರ್ದೆಶೆಯನ್ನು ತಪ್ಪಿಸಲೆಂದೋ ಎಂಬಂತೆ ರೇಗಿ ತನ್ನ ನಾಲ್ಕು ದಂತಗಳಿಂದಲೂ ವೃತ್ರನನ್ನು ತಿವಿಯಿತು. ಆ ಚೌದಂತದ ಪ್ರಹರಣವನ್ನು ತಪ್ಪಿಸಿಕೊಳ್ಳಲು ವೃತ್ರನು ತಿರುಗಿ ಆವ್ಯಗ್ರಹನಾಗಿರುವಾಗ, ದೇವೇಂದ್ರನು ತನ್ನ ಅನಿಮಾಸಿದ್ಧಿಯಿಂದ ಆ ವೃತ್ರಾಸುರನ ತೆರೆದ ಬಾಯಿಯಿಂದ ಈಚೆಗೆ ಬಂದುಬಿಟ್ಟನು.

ವೃತ್ರಾಸುರನು ಮತ್ತೆ ದೇವೇಂದ್ರನನ್ನು ಒಂದು ಕೈಯಿಂದ ಹಿಡಿದನು. ಇನ್ನೊಂದು ಕೈಯಿಂದ ತನ್ನನ್ನು ತಿವಿಯಲು ಬಂದಿದ್ದ ಐರಾವತವನ್ನು ಹಿಡಿದನು. ಇಬ್ಬರನ್ನೂ ಎರಡು ಕೈಗಳಲ್ಲಿ ಹಿಡಿದು ಎಸೆದುಬಿಟ್ಟನು. ಇಬ್ಬರೂ ರಣಾಂಗಣದಿಂದ ಸುಮಾರು ದೂರದಲ್ಲಿ ಬಂದು ಬಿದ್ದರು. “ಇಂದ್ರನೇ ರಣಾಂಗಣದಲ್ಲಿ ಇಲ್ಲದ ಮೇಲೆ ತಾವಿದ್ದು ಮಾಡುವುದೇನು ?” ಎಂದು ದೇವಸೇನೆಯು ಹಿಂತೆಗೆಯಿತು.

ಆ ಬೀಸಿ ಎಸೆಯಲು ಬಿದ್ದ ಪೆಟ್ಟಿಗೆ ಐರಾವತವು ಮೂರ್ಛೆಹೋಯಿತು. ಇಂದ್ರನಿಗೆ ಅರಿವು ಉಳಿಯಲಿಲ್ಲ. ಅಷ್ಟು ಹೊತ್ತಿನ ಮೇಲೆ ಎಚ್ಚರವಾಯಿತು. ಒಂದು ಕಡೆ ಆತನಿಗೆ ಎಲ್ಲೂ ಇಲ್ಲದ ಕೋಪ ಬಂದಿದೆ. ಇನ್ನೊಂದು ಕಡೆ ಎಲ್ಲೂ ಇಲ್ಲದ ಭಯವಾಗುತ್ತಿದೆ. ವೃತ್ರನ ಅಟ್ಟಹಾಸವು, ಓಡುತ್ತಿರುವ ದೇವಸೇನೆಯ ಆಕ್ರಂದನ, ಓಡಿಸಿಕೊಂಡು ಬರುತ್ತಿರುವ ದಾನವೇಂದ್ರರ ಅಟ್ಟಹಾಸ, ಎರಡನ್ನೂ ಮೀರಿ, ದಿಕ್ತಟಗಳನ್ನೆಲ್ಲಾ ಒಡೆಯುವಂತೆ ಬೃಹತ್ತಾಗಿ ಕೇಳಿಸುತ್ತಿದೆ.

ಇಂದ್ರನು ಆದುದಾಗಲಿ ಎಂದು ಹುಲ್ಲುಮುಡಿ ಕಚ್ಚಿ ವಜ್ರವನ್ನು ಪ್ರಯೋಗಿಸಲು ಕೈಎತ್ತಿದನು. ಯಾರೋ ಕಿವಿಯಲ್ಲಿ “ಇದು ಕಾಲವಲ್ಲ ಇಂದ್ರ, ಆ ಆಯುಧರಾಜನಿಗೆ ಅವಮಾನ ಮಾಡದಿರು. ಸಕಾಲದಲ್ಲಿ ಇದೆ ಆಯುಧವು ಅವನಿಗೆ ಮೃತ್ಯುವಾಗುವುದು” ಎಂದರು. ಇಂದ್ರನ ಎತ್ತಿದ ಕೈ ಇಳಿಯಿತು.

ಇಂದ್ರನು ತನಗೆ ಬಂದಿದ್ದ ರೋಷವನ್ನು ಉಪಸಂಹರಿಸಿಕೊಂಡು, ತನಗೆ ಬುದ್ಧಿಯನ್ನು ಹೇಳಿದವರು ದರ್ಶನಕೊಡಬೇಕು ಎಂದು ಪ್ರಾರ್ಥಿಸಿದನು. ಎದುರಿಗೆ ಮಂದಸ್ಮಿತ ಸುಂದರವದನಾರವಿಂದದಿಂದ ಪ್ರಕಾಶಿಸುತ್ತಿರುವ ಒಂದು ತೇಜೋರಾಶಿಯು ಆವಿರ್ಭವಿಸಿತು. ಪ್ರಸನ್ನವಾದರೂ ಕಣ್ಣು ಕುಕ್ಕುತ್ತಿರುವ ಆ ತೇಜೋರಾಶಿಯನ್ನು ಕಂಡು, ಸ್ಥಿತಿಕಾರಣನಾದ ನಾರಾಯಣನೇ ಆತನೆಂದರಿತು, ಇಂದ್ರನು ನಮಸ್ಕಾರಾದಿಗಳಿಂದ ಆತನನ್ನು ಅರ್ಚಿಸಿ “ಹಾಗಾದರೆ ಈಗ ನಾನು ಸುಮ್ಮನಾಗಬೇಕೆ ?” ಎಂದು ಕೇಳಿಕೊಳ್ಳುತ್ತಾನೆ.

ಆ ತೇಜೋರಾಶಿಯು ಸಮಾಧಾನದಿಂದ “ಅಮಾವಾಸ್ಯೆಯ ದಿನ ಸೂರ್ಯನಲ್ಲಿ ಸೇರಿಹೋಗುವ ಚಂದ್ರನಂತೆ, ಈಗ ನೀನು ಅವನನ್ನು ಆಶ್ರಯಿಸು. ಸೋತೆನೆಂದು ಒಪ್ಪಿಕೊಂಡು, ನಿನ್ನಂತಹ ಪರಾಕ್ರಮಶಾಲಿಯನ್ನು ನೋಡಿರಲಿಲ್ಲವೆಂದು ಆತನಿಗೆ ಇಂದ್ರ ಪದವಿಯನ್ನು ಬಿಟ್ಟುಕೊಟ್ಟು ಆತನ ಸ್ನೇಹವನ್ನು ಸಂಪಾದಿಸು, ಸಕಾಲದಲ್ಲಿ ಮತ್ತೆ ನಾನು ನಿನಗೆ ಎಚ್ಚರಿಕೆ ಕೊಡುವೆನು. ಆಗ ಅವನನ್ನು ಮುಗಿಸುವೆಯಂತೆ !” ಎಂದು ಹೇಳಿ ಅಂತರ್ಧಾನವಾಯಿತು.

ಇಂದ್ರನು ತನ್ನ ಸಮರವೇಷವನ್ನು ತೆಗೆದು ಹಾಕಿ, ಹೋಗಿ ವೃತ್ರಾಸುರನನ್ನು ಕಂಡನು. ಆ ವೇಳೆಗೆ ಅಮರಾವತಿಯು ದಾನವರ ವಶವಾಗಿದೆ. ವೃತ್ರನು ಇಂದ್ರನ ಅರಮನೆಯನ್ನು ನುಗ್ಗಿದ್ದಾನೆ. ಇಂದ್ರನು ಶಾಂತವೇಷದಿಂದ ಬಂದಿರುವುದನ್ನು ಕೇಳಿ ಅವನಿಗೂ ಆಶ್ಚರ್ಯವಾಯಿತು. ಬರಮಾಡಿಕೊಂಡನು.

ಇಂದ್ರನು ಬಹುದಿನದ ಮಿತ್ರನನ್ನು ಸಂಧಿಸುವಂತೆ ಸಂಧಿಸಿ, ಕೈಮುಗಿದು “ನಿನ್ನ ಪರಾಕ್ರಮವನ್ನು ಕೇಳಿದ್ದೆ. ಇಂದು ಅದರ ಪರಿಚಯವಾಯಿತು. ನಿನ್ನಂತಹ ಪರಾಕ್ರಮಿಯು ಇದುವರೆಗೆ ಇರಲಿಲ್ಲ. ಮುಂದಾಗುವುದಿಲ್ಲ. ಅದರಿಂದ ನಿನಗೆ ನಾನಾಗಿ ನನ್ನ ಇಂದ್ರತ್ವವನ್ನು ಕೊಡಲು ಬಂದಿದ್ದೇನೆ, ಸ್ವೀಕರಿಸಬೇಕು” ಎಂದು ವಿನಯದಿಂದ ಪ್ರಾರ್ಥಿಸಿದನು. ಆ ವಿನಯವು ಯಾರನ್ನೂ ಬೇಕಾದರೂ ಒಲಿಸಿಕೊಳ್ಳುವಂಥದಾಗಿತ್ತು.

“ನಿಯಮಗಳೇನು ?”

“ನಿಯಮವೇನೂ ಇಲ್ಲ. ಯುದ್ಧವು ಬೇಕಾಗಿಲ್ಲ, ಲೋಕಪಾಲಕರೆಲ್ಲರೂ ನಿನ್ನ ಆಜ್ಞಾನುವರ್ತಿಗಳಾಗುವರು. ತ್ರೈಲೋಕ್ಯಾಧಿಪತ್ಯವು ನಿನ್ನದಾಗುವುದು.”

“ನೀನೇನಾಗಿರುವೆ ?”

“ನಾನು ಶಚೀಪತಿಯಾಗಿ ಆಕೆಯ ಅರಮನೆಯಲ್ಲಿರುವೆನು. ನನ್ನನ್ನೂ ಪ್ರಧಾನ ದೇವತೆಗಳನ್ನೂ ಭೃತ್ಯರನ್ನಾಗಿ ಉಪಯೋಗಿಸಬೇಡ. ನಿನಗೆ ಸಮ್ಮತವಾಗಿದ್ದರೆ, ಇಂದ್ರನಾದ ನೀನು ಇಂದ್ರನಾಗಿದ್ದ ನನ್ನನ್ನು ಮಿತ್ರನಂತೆ ನಡೆಸಿಕೋ.”

“ನೀನು ಮಿತ್ರದ್ರೋಹವನ್ನು ಮಾಡುವುದಿಲ್ಲ ಎಂಬುದಕ್ಕೆ ಸಾಕ್ಷಿಯೇನು?”

“ಸಾಕ್ಷಿಯಾಗಿ ದೇವತಾರಹಸ್ಯವೊಂದನ್ನು ಹೇಳುವೆನು ಕೇಳು. ಇಂದ್ರ ಎಂಬುದು ಒಂದು ಅಧಿಕಾರದ ಹೆಸರು. ಅದು ಮೂರು ಲೋಕಗಳಲ್ಲಿ ಅವರವರು ತಮ್ಮ ತಮ್ಮ ಧರ್ಮದಲ್ಲಿರುವಂತೆ ನೋಡಿಕೊಳ್ಳಲು ಏರ್ಪಟ್ಟದ್ದು. ಇದನ್ನು ನೀನು ಪಾಲಿಸು. ಅವರವರ ಧರ್ಮದಿಂದ ಅವರವರಿಗೆ ಲಭಿಸುವ ಪುಣ್ಯದ ಭಾಗವನ್ನು ನೀನು ಸಂಗ್ರಹಿಸಿಕೊ. ಆಗ ಮರದಿಂದ ಹಣ್ಣನ್ನು ಮಾತ್ರ ತೆಗೆದುಕೊಂಡು ಸ್ವಾಮಿಯಂತೆ ನೀನು ಅಭಿವೃದ್ಧನಾಗುವೆ. ಅದಿಲ್ಲವೆ, ನಿನಗೆ ತೋರಿದ ಧರ್ಮವನ್ನು ಇತರರ ಮೇಲೆ ಹೇರಿದರೆ, ಮರಗಳನ್ನು ಕಡಿದು ಒಲೆಗೆ ಒಟ್ಟಿದವನಂತಾಗುವೆ.”

ಶಚೀಪತಿಯು ಹೇಳಿದುದು ವೃತ್ರನಿಗೆ ಹಿಡಿಯಿತು. “ಆಗಲಿ, ನಿನ್ನ ಕಾಲದಲ್ಲಿ ಪ್ರಧಾನರಾಗಿದ್ದವರನ್ನು ಯಾರನ್ನೂ ಭೃತ್ಯರನ್ನಾಗಿ ಉಪಯೋಗಿಸುವುದಿಲ್ಲ. ನಿನ್ನನ್ನು ಮಿತ್ರನಂತೆ ನಡೆಸಿಕೊಳ್ಳುವೆನು. ಮಿಕ್ಕದೇವತೆಗಳು ಎಲ್ಲಿರುವರು ?”

“ನಿನಗೆ ಸಮ್ಮತವಾದರೆ, ಅವರೆಲ್ಲ ಅಮರಾವತಿಯಲ್ಲಿರುವರು. ಇಲ್ಲದಿದ್ದರೆ, ಅವರು ತಮಗೆ ತೋರಿದೆಡೆ ಇರುವರು.”

“ಆಯಿತು, ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿಗಳು ಮರೆಯಾಗುವವಂತಲ್ಲ ಅದೇನು?

“ಅದರ ರಹಸ್ಯವಿದು. ಅವು ವರ ಕೊಡುವುವು. ಅದನ್ನು ಪಡೆದುಕೊಳ್ಳುವವರು ಧರ್ಮಿಷ್ಠರಾಗಿರಬೇಕು. ಹಾಗಿಲ್ಲದಿದ್ದರೆ ಅವುಗಳಲ್ಲಿರುವ ವಿಶೇಷಗುಣವು ಪ್ರಕಟವಾಗುವುದಿಲ್ಲ. ನೀನು ನಾನು ಹೇಳಿದಂತೆ ನಡೆದರೆ ಅವು ಬೇಕಾದುದನ್ನು ಕೊಡಬಲ್ಲವಾಗುವುವು.”

“ಸರಿ. ಹಾಗೆಯೇ ಆಗಬಹುದು. ನೀನು ಹೇಳಿದ ರಹಸ್ಯಕ್ಕೆ ಪ್ರತಿಯಾಗಿ ನಾನು ಒಂದು ರಹಸ್ಯವನ್ನು ಹೇಳುವೆನು ಕೇಳು. ವೃತ್ರನು ಸದೇಹನಾಗಿರುವಾಗ ನಿನ್ನ ಮಿತ್ರ. ವಿದೇಹನಾದರೆ ನಿನ್ನ ಮೃತ್ಯು. ಇದನ್ನು ವಿವರಿಸು ಎನ್ನಬೇಡ. ತಿಳಿದುಕೊಂಡಿರು. ಅಷ್ಟೇ !” ಎಂದನು.

ಶಚೀಪತಿಯು ಇಂದ್ರನಾದ ವೃತ್ರಾಸುರನಪ್ಪಣೆಯನ್ನು ಪಡೆದು ಹಿಂತಿರುಗಿದನು. ತಾನು ಶಚೀಪತಿಯಾಗಿರಲು ಅವನು ಒಪ್ಪಿಕೊಂಡುದರಿಂದ ಎಷ್ಟೋ ರಹಸ್ಯಗಳು ತನ್ನಲ್ಲಿಯೇ ಉಳಿಯಲು ಅನುಕೂಲವಾಯಿತೆಂದು ಆತನಿಗೆ ಒಂದು ಸಂತೋಷ. ಆದರೆ ವೃತ್ರನು ಹೇಳಿದ “ಸದೇಹನಾಗಿರುವಾಗ ಮಿತ್ರ, ವಿದೇಹನಾಗಿರುವಾಗ ಮೃತ್ಯು” ಎಂಬುದು ಮಾತ್ರ ಅರ್ಥವಾಗಲಿಲ್ಲ. ಅದನ್ನೇ ಚಿಂತಿಸುತ್ತಾ ಆತನು ಶಚೀದೇವಿಯ ಅರಮನೆಗೆ ಬಂದನು.

ನಾರಾಯಣನ ಅಪ್ಪಣೆಯಿಂದ ತಾನು ವೃತ್ರಾಸುರನಿಗೆ ಇಂದ್ರತ್ವವನ್ನು ಒಪ್ಪಿಸಿ, ಆತನ ಮಿತ್ರನಾದುದನ್ನೂ, ತಾನಿನ್ನು ಮುಂದೆ ಶಚೀಪತಿಯಾಗಿ ಮಾತ್ರ ಬಾಳುವುದನ್ನೂ ಆತನು ಶಚಿಗೆ ಹೇಳಿದನು. ಆಕೆಯು ಗಂಡನನ್ನು ತಬ್ಬಿಕೊಂಡು, “ಇಂದ್ರಪದವಿಯನ್ನು ಬಿಟ್ಟುಕೊಟ್ಟೆಯೆಂದು ನನಗೆ ದುಃಖವಿಲ್ಲ ನೀನು ಇಂದ್ರಾಣಿಯನ್ನೂ ಕೊಟ್ಟಿದ್ದರೆ ಆಗ ಯೋಚಿಸಬೇಕಾಗಿತ್ತು. ಶುಕ್ರಾಚಾರ್ಯನೂ ಆ ಗುಟ್ಟನ್ನರಿಯನು ಎಂದ ಮೇಲೆ, ಪಾಪಾ, ವೃತ್ರನಿಗೇನು ಗೊತ್ತು ?” ಎಂದು ಇಬ್ಬರೂ ಏಕಾಂತದಲ್ಲಿ ತಮ್ಮಷ್ಟಕ್ಕೆ ನಕ್ಕುಕೊಂಡರು.

* * * *