ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮಲಾ ಹಂಪನಾ

ಕಮಲಾ ಹಂಪನಾ : 1935-. ಕನ್ನಡ ಲೇಖಕಿ. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935 ಅಕ್ಟೋಬರ್ 28ರಂದು ಜನಿಸಿದರು. ತಂದೆ ಸಿ.ರಂಗಧಾಮ ನಾಯಕ್, ತಾಯಿ ಲಕ್ಷ್ಮಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಆನರ್ಸ್‌ (ಕನ್ನಡ) ಮತ್ತು ಎಂ.ಎ. (ಕನ್ನಡ) ಪದವಿ ಪಡೆದರು. "ತುರಂಗ ಭಾರತವನ್ನು ಕುರಿತ ಅಧ್ಯಯನ"ಕ್ಕೆ ಪಿಎಚ್.ಡಿ. ಪದವಿ ಗಳಿಸಿದರು. 1961ರಲ್ಲಿ ತಮ್ಮ ಸಹಪಾಠಿ ಹಂಪ ನಾಗರಾಜಯ್ಯ (ಹಂಪನಾ) ಅವರನ್ನು ವಿವಾಹವಾದರು. ಬೆಂಗಳೂರು ಮತ್ತು ಮೈಸೂರಿನ ಮಹಾರಾಣಿ ಕಾಲೇಜು ಹಾಗೂ ಬೆಂಗಳೂರು ಸರ್ಕಾರಿ ವಿಜ್ಞಾನ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು (1959-96). ಅನಂತರ ಬೆಂಗಳೂರಿನ ವಿಜಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಅನಂತರ ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಪ್ರಾಕೃತ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಅಧ್ಯಕ್ಷರೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶನ ಪ್ರಾಧ್ಯಾಪಕರೂ ಆಗಿದ್ದರು.

ದಲಿತರ ಹಾಗೂ ಮಹಿಳೆಯರ ಪರವಾದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಹತ್ತಾರು ಸಂಘ ಸಂಸ್ಥೆಗಳಲ್ಲಿ ಇವರು ದುಡಿದರೂ ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ ಅನೇಕ ಕೃತಿಗಳನ್ನು ರಚಿಸಿದರು. ಇವರು ರಚಿಸಿದ ಕೃತಿಗಳು 48ಕ್ಕೂ ಹೆಚ್ಚು. ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಮಹಾವೀರರ ಜೀವನ ಸಂದೇಶ, ಜೈನ ಸಾಹಿತ್ಯ ಪರಿಸರ, ಅನೇಕಾಂತವಾದ, ತುರಂಗಭಾರತ: ಒಂದು ಅಧ್ಯಯನ ಮುಂತಾದವು ಇವರಕೃತಿಗಳು. ಸುಕುಮಾರ ಚರಿತೆಯಸಂಗ್ರಹ, ‘ಭರತೇಶ ವೈಭವ’, ಚಾವುಂಡರಾಯ ಪುರಾಣ, ಡಿ.ಎಲ್.ಎನ್. ಆಯ್ದ ಲೇಖನಗಳು, ಜೈನ ಧರ್ಮ ಮುಂತಾದವು ಸಂಪಾದಿತ ಕೃತಿಗಳು.ಬಾಸಿಂಗ, ಬಾಂದಳ, ಬಡಬಾಗ್ನಿ- ಇವು ವೈಚಾರಿಕ ಕೃತಿಗಳು.ಬೀಜಾಕ್ಷರ ಮಾಲೆ, ಜಾತಿ ನಿರ್ಮೂಲನೆ, ಭಾರತದಲ್ಲಿ ಜಾತಿಗಳು, ಏಷಿಯಾದ ಹಣತೆಗಳು - ಅನುವಾದಗಳು. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಬಣವೆ, ಚಂದನಾ- ಕಥಾ ಸಂಕಲನಗಳು. ಬಿಂದಲಿ, ಬುಗುಡಿ - ಆಧುನಿಕ ವಚನ ಸಂಕಲನಗಳು. ಶಿಶು ಸಾಹಿತ್ಯಕ್ಕೆ ಸಂಬಂದಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ನಿರಂತರ ಅಧ್ಯಾಪನ, ಲೇಖನ, ಭಾಷಣಗಳ ಮೂಲಕ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳೆರಡರಲ್ಲೂ ಸಮಾನ ದುಡಿಮೆ ಮಾಡಿರುವ ಇವರಿಗೆ ಅನೇಕ ಗೌರವ, ಪ್ರಶಸ್ತಿಗಳು ದೊರೆತಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ರನ್ನಕವಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಐಐಟಿ ಮದರಾಸು ಕನ್ನಡ ಸಂಘದ ರಜತೋತ್ಸವ ಪುರಸ್ಕಾರ, ಶ್ರವಣಬೆಳಗೊಳ ಮಹಾಮಸ್ತಕಾಬಿಷೇಕದ ರಾಷ್ಟ್ರೀಯ ಪುರಸ್ಕಾರ -ಇವುಗಳನ್ನು ಹೆಸರಿಸಬಹುದು. ಇವರು ಮೂಡಬಿದಿರೆಯಲ್ಲಿ ನಡೆದ 71ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು (2003). (ಕೆ.ಆರ್.ಎಸ್.ಆರ್)