ತಾಲೀಸ್ ಕ್ರಿ.ಪೂ. ಸು. 640-546. ಗ್ರೀಕ್ ತತ್ತ್ವಜ್ಞಾನಿ, ಅಪೊಲೊ ಡಾರಸ್ ಎಂಬ ಗ್ರೀಕ್ ಲೇಖಕನ ವರದಿಯಂತೆ ತಾಲೀಸ್ ಜನಿಸಿದ್ದು ಕ್ರಿ. ಪೂ. 624ರಲ್ಲಿ ಮತ್ತು ಕಾಲವಾದದ್ದು ಕ್ರಿ.ಪೂ. 546ರಲ್ಲಿ. ಅನಂತರದ ದಿನಗಳ ಗ್ರೀಕರ ಪ್ರಕಾರ ಗ್ರೀಕ್ ವಿಜ್ಞಾನದ ಸಂಸ್ಥಾಪಕ ತಾಲೀಸ್. ಈತನಿಂದಲೇ ಗಣಿತ ತತ್ತ್ವಶಾಸ್ತ್ರ ಮುಂತಾದ ವಿವಿಧ ಜ್ಞಾನಭಾಗಗಳು ಉದ್ಭವಿಸಿದುವು ಎಂದಿದೆ. ಈ ಹೇಳಿಕೆಯಲ್ಲಿ ಎಷ್ಟು ಗಟ್ಟಿ ಎಷ್ಟು ಅಲಂಕಾರ ಎಂದು ತೀಮಾರ್ನಿಸುವುದು ಕಷ್ಟ.. ಈತ ಅಸಾಧಾರಣ ಪಂಡಿತ ಮತ್ತು ಕುಶಾಗ್ರಮತಿ ಆಗಿದ್ದ ಎಂಬುದಂತೂ ಖರೆ, ಗ್ರೀಸ್ ದೇಶದ ಏಳು ಜಾಣರ ಪೈಕಿ ತಾಲೀಸ್ ಒಬ್ಬನೆಂದು ಪ್ರಸಿದ್ಧಿ ಪಡೆದಿದ್ದ. ಹಳೆಯ ಕಂದಾಚಾರದ ಭಾವನೆಗಳನ್ನು ತಾಲೀಸ್ ಪೂರ್ಣವಾಗಿ ಅಲ್ಲಗಳೆಯದಿದ್ದರೂ ಅವನ್ನು ತರ್ಕದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುವ ಸಂಪ್ರದಾಯವನ್ನು ರೂಢಿಸಿದ. ಆದ್ದರಿಂದ ಪಾಶ್ಚಾತ್ಯ, ವಿಜ್ಞಾನದ ಪ್ರಥಮ ಪ್ರವರ್ತಕನೆಂಬ ಬಿರುದು ಇವನಿಗೆ ಸಲ್ಲುತ್ತದೆ.

ಮಧ್ಯ ವಯಸ್ಸಿನಲ್ಲಿ ಈತ ವ್ಯಾಪಾರದಲ್ಲಿ ತೊಡಗಿದ್ದ, ಆಗ ಕಾರ್ಯಗೌರವದ ಮೇಲೆ ಈಜಿಪ್ಟಿಗೆ ಹೋಗಬೇಕಾಯಿತು. ಅಲ್ಲಿನ ಪಂಡಿತರ ಹತ್ತಿರ ಶಿಷ್ಯವೃತ್ತಿಯನ್ನು ನಡೆಸಿ ಅವರಿಗೆ ಪ್ರಾಚೀನ ಕಾಲದಿಂದ ತಿಳಿದಿದ್ದ ಗಣಿತ ಮುಂತಾದ ವೈಜ್ಞಾನಿಕ ವಿಷಯಗಳ ವ್ಯಾಸಂಗಮಾಡಿ ಪ್ರಜ್ಞೆಯಲ್ಲಿ ಗುರುಗಳನ್ನೂ ಮೀರಿಸಿದನೆಂಬ ಪ್ರತೀತಿ ಉಂಟು. ಸೂರ್ಯನ ಬೆಳಕಿನಿಂದ ಬೀಳುವ ಒಂದು ಕೋಲಿನ ನೆರಳು ಕೋಲಿನ ಉದ್ದಕ್ಕೆ ಸಮವಾಗುವ ಕಾಲಕ್ಕೆ ಸರಿಯಾಗಿ ಈಜಿಪ್ಟಿನ ಪಿರಮಿಡ್ಡಿನ ಎತ್ತರವನ್ನು ಇವನು ಕಂಡುಹಿಡಿದಾಗ ದೇಶದ ದೊರೆಗೆ ಪರಮಾಶ್ವರ್ಯವಾಯಿತು.

ಖಗೋಳಶಾಸ್ತ್ರದಲ್ಲಿಯೂ ತಾಲೀಸನಿಗೆ ವಿಶೇಷವಾದ ಆಸಕ್ತಿ ಇತ್ತು. ಒಂದು ರಾತ್ರಿ ಈತ ನಕ್ಷತ್ರಗಳನ್ನು ನೋಡುತ್ತ ಹೋಗುತ್ತಿದ್ದಾಗ ದಾರಿಯಲ್ಲಿದ್ದ ಒಂದು ಹಳ್ಳದೊಳಗೆ ಬಿದ್ದುಬಿಟ್ಟನಂತೆ. ಅಲ್ಲಿಯೇ ಹೋಗುತ್ತಿದ್ದ ಹೆಂಗಸೊಬ್ಬಳು ಭೂಮಿಯ ಮೇಲೆ ಇರುವ ವಸ್ತುಗÀಳೇ ನಿನಗೆ ತಿಳಿಯದೇ ಹೋಗುವಾಗ ಆಕಾಶದಲ್ಲಿರುವ ನಕ್ಷತ್ರಗಳ ಬಗ್ಗೆ ನೀನು ಏನನ್ನು ತಾನೆ ಅರಿಯಬಲ್ಲೆ ಎಂದು ಅವನನ್ನು ಮೂದಲಿಸಿ ಅವನು ಹಳ್ಳದಿಂದ ಮೇಲೆ ಎದ್ದುಬರಲು ಸಹಾಯ ಮಾಡಿದಳಂತೆ. ಕ್ರಿ. ಪೂ. 585ರಲ್ಲಿ ಎರಡು ದೇಶಗಳ ನಡುವೆ ಭೀಕರವಾದ ಕಾಳಗ ನಡೆಯುತ್ತಿತ್ತು. ತಾಲೀಸನು ಭವಿಷ್ಯ ನುಡಿದಂತೆ ಆ ವೇಳೆಗೆ ಸರಿಯಾಗಿ ಸಂಪೂರ್ಣ ಸೂರ್ಯಗ್ರಹಣÀವಾದುದನ್ನು ನೋಡಿ ಚಕಿತರಾಗಿ ಉಭಯ ಹೋರಾಟಗಾರರೂ ಕಾಳಗವನ್ನು ನಿಲ್ಲಿಸಿದರು ಎಂಬುದು ಇತಿಹಾಸ ಪ್ರಸಿದ್ಧವಾಗಿದೆ. ರಾಜ್ಯಶಾಸ್ತ್ರದಲ್ಲೂ ತಾಲೀಸ್ ಆಸಕ್ತಿವಹಿಸಿ ಗ್ರೀಸಿನ ಭದ್ರತೆಗೆ ಆ ದೇಶದ ಪ್ರಾಂತಗಳನ್ನು ಏಕೀಕರಣ ಮಾಡುವುದು ಒಳ್ಳೆಯದೆಂಬ ಸಲಹೆ ನೀಡಿದ್ದ.

ಚಲನೆಯೇ ಜೀವ ಇರುವ ವಸ್ತುಗಳ ಲಕ್ಷಣವೆಂದು ಗ್ರೀಕರು ನಂಬಿದ್ದರು. ಈ ಭಾವನೆಗೆ ಆಧಾರವಾಗಿ ಭೌತ ಪ್ರಪಂಚದ ಮೂಲವಸ್ತು ನೀರೇ ಆಗಿರಬೇಕೆಂಬುದು ಇವನ ಅಭಿಪ್ರಾಯ. ದೇವರು ನೀರನ್ನು ಮೊದಲು ಸೃಷ್ಟಿಸಿದನೆಂಬ ಭಾರತೀಯ ಭಾವನೆಗೂ ಇದಕ್ಕೂ ಸಾಮ್ಯವಿದೆ. ಚಿತ್ರ-1

ಗ್ರೀಸ್‍ನಲ್ಲಿ ರೇಖಾಗಣಿತದ ಅಧ್ಯಾಯವನ್ನು ಮೊದಲು ಆರಂಭಿಸಿದವನು ತಾಲೀಸ್. ಅನೇಕ ಸಮಾಂತರ ರೇಖೆಗಳನ್ನು ಎರಡು ಸರಳರೇಖೆಗಳು ಛೇದಿಸಿದಾಗ ಛೇದಕಗಳ ಅನುರೂಪ ಖಂಡಗಳು ಒಂದೇ ನಿಷ್ಟತ್ತಿಯಲ್ಲಿರುತ್ತವೆ ಎಂಬ ಹೇಳಿಕೆಗೆ ತಾಲೀಸನ ಪ್ರಮೇಯವೆಂದು ಹೆಸರು. ಚಿತ್ರದಲ್ಲಿ AA', BB' , CC' , DD' ಸಮಾಂತರ ರೇಖೆಗಳು ಇವನ್ನು p ಮತ್ತು p' ಎಂಬ ಎರಡು ಸರಳರೇಖೆಗಳು ಛೇದಿಸುತ್ತವೆ. ಎಂದರೆ ಇತ್ಯಾದಿ AB A' B' BC B' C' --------- = -------- -------- = -------- BC B' C' , CD C'D'

	ಕೆಳಗೆ ಬರೆದಿರುವ ರೇಖಾಗಣಿತದ ಇತರ ಕೆಲವು ಪ್ರಮೇಯಗಳನ್ನು ತಾಲೀಸ್ ಆವಿಷ್ಕರಿಸಿದನೆಂದು ಹೇಳುವರು. 

1. ವೃತ್ತದ ವ್ಯಾಸ ವೃತ್ತವನ್ನು ಆರ್ಧಿಸುತ್ತದೆ. 2. ಸಮದ್ವಿಭುಜ ತ್ರಿಭುಜದ ಪಾದಕೋನಗಳು ಸಮ. 3. ಎರಡು ಸರಳರೇಖೆಗಳು ಪರಸ್ಪರ ಸಂಧಿಸಿದಾಗ ಶೃಂಗಾಭಿಮುಖ ಕೋನಗಳು ಪರಸ್ಪರ ಸಮ. 4. ಅರ್ಧವೃತ್ತದಲ್ಲಿರುವ ಕೋನ ಲಂಬ ಕೋನ. 5. ಎರಡು ತ್ರಿಭುಜಗಳ ಅನುರೂಪ ಕೋನಗಳು ಸಮವಾದರೆ, ಅನುರೂಪ ಭುಜಗಳ ಅನುಪಾತದಲ್ಲಿವೆ. ಒಂದು ತ್ರಿಭುಜದ ಮೂರು ಕೋನಗಳ ಮೊತ್ತ 180o ಗಳೆಂಬ ವಿಷಯ ಇವನಿಗೆ ತಿಳಿದಿದ್ದಿತೆಂದು ಹೇಳುವರು (ಎಲ್.ಎನ್.ಸಿ.)

ಯರೋಪಿಯನ್ ತತ್ತ್ವಶಾಸ್ತ್ರಕ್ಕೆಲ್ಲ ತಾಲೀಸನೇ ಮೂಲಪುರುಷನೆಂಬ ಪ್ರಖ್ಯಾತಿಗೆ ಮುಖ್ಯಕಾರಣ ಅರಿಸ್ಟಾಟಲ್ (ಕ್ರಿ,ಪೂ. 384-322). ಜಗತ್ತಿನ ಮೂಲದ್ರವ್ಯವೆಲ್ಲ ಜಲತತ್ತ್ವ ಎಂಬುದಾಗಿ ನಿರ್ಣಯಿಸಿದಾತ ತಾಲೀಸ್ ಎಂದು ಅರಿಸ್ಟಾಟಲ್ ಹೇಳಿದ್ದಾನೆ. ಅರಿಸ್ಟಾಟಲ್‍ನೇ ವಿವರಿಸುವಂತೆ ತಾಲೀಸನ ನಿರ್ಣಯಕ್ಕೆ ಪ್ರಯೋಜಕವಾದ ಅಂಶವೆಂದರೆ ಜಲಾಂಶವೇ ಸಕಲ ಜೀವಕ್ಕೂ ಆಧಾರವಾಗಿರುವ ಸತ್ಯ; ಜೀವಯೋಗ್ಯವಾದ ಶಾಖದ ಉತ್ಪತ್ತಿಗೂ ಜಲತತ್ತ್ವವೇ ಮೂಲ; ಧಾತು ರಸಕ್ಕೆಲ್ಲ ಅವೇ ಸರ್ವಸ್ವ. ಅರಿಸ್ಟಾಟಲ್ ತಾನು ಈ ವಿಚಾರವನ್ನು ಇತರರಿಂದ ಕೇಳಿ ಬಲ್ಲೆನೆಂದಷ್ಟೇ ಹೇಳುತ್ತಾನೆ. ತಾಲೀಸ್ ಬರೆದಿದ್ದುದು ಅವನ ಕಾಲಕ್ಕೇ ಉಪಲಬ್ಧವಿರಲಿಲ್ಲ. ಹೀಗೆ ಜಗತ್ತಿನ ಮೂಲತತ್ತ್ವ ಜಲವೆನ್ನುವ ರೂಢಿ ಪ್ರಾಚೀನ ಈಜಿಪ್ಟ್ ಮತ್ತು ಮೆಸಪೊಟೇಮಿಯದ ಪುರಾಣ ಕಥೆಗಳಲ್ಲಿಯೂ ಪ್ರಚಲಿತವಾಗಿತ್ತು; ಹೋಮರನಲ್ಲಿಯೂ ಸಾಗರವನ್ನೇ ಸಕಲದ ಆಲಂಬನವೆಂಬ ವರ್ಣನೆಯನ್ನು ನೋಡುತ್ತೇವೆ. ತಾಲೀಸ್ ಆ ತತ್ತ್ವದ ಕಥಾಂಶವನ್ನು ತೆಗೆದು ಹಾಕಿ ವೈಜ್ಞಾನಿಕ ಯುಕ್ತಿಗಳನ್ನಿತ್ತಂತೆ ಕಾಣುತ್ತವೆ.

ಹೀಗೆ ಜಗತ್ತಿನ ಮೂಲದ್ರವ್ಯ ವಸ್ತುರೂಪವಿರುವ ಜೊತೆಗೆ ಗತಿಶೀಲವೂ ಆಗಿರಬೇಕೆಂಬ ಕಲ್ಪನೆ ತಾಲೀಸನಿಗೆ ಇತ್ತೆನ್ನಬಹುದು. ಇಡಿಯ ಜಗತ್ತೇ ಒಂದು ಸಜೀವ ಘಟಕ ಜಲ ಅದರ ಜೀವದುಸಿರೆಗೆ ಸಮಾನ ಎಂಬುದೇ ಅವನ ಸಿದ್ಧಾಂತ. ಅರಿಸ್ಟಾಟಲ್ ತಾಲೀಸನಿಗೆ ಅನ್ವಯಿಸಿ ಹೇಳುವ ಇನ್ನು ಕೆಲವು ತತ್ತ್ವವಚನಗಳಿವು : 1 ಸೂಜಿಗಲ್ಲಿಗೆ ಜೀವವುಂಟು. ಅದು ಕಬ್ಬಿಣವನ್ನು ಆಕರ್ಷಿಸುವ ಕಾರಣ; 2 ಸಕಲ ವಸ್ತುಗಳೂ ದೇವತಾಮಯ.

ತಾಲೀಸನ ಜಗತ್ ಸೃಷ್ಟಿಯ ವಿಚಾರವಾಗಿ ಭೂಮಿ ನೀರಿನ ಮೇಲೆ ತೇಲುತ್ತದೆ ಎಂದು ಅರಿಸ್ಟಾಟಲ್ ಉಲ್ಲೇಖಿಸಿರುವುದನ್ನು ಬಿಟ್ಟರೆ ನಮಗೆ ಹೆಚ್ಚಿನದೇನೂ ಗೊತ್ತಿಲ್ಲ. ಜಗತ್ತಿನ ಸೃಷ್ಟಿ ಮತ್ತು ಆಗುಹೋಗುಗಳಲ್ಲಿ ದೇವತೆಗಳ ಮನಸ್ವೀ ವರ್ತನೆಯನ್ನು ಕಾರಣವೆನ್ನುತ್ತಿದ್ದ ಪೌರಾಣಿಕರ ವಾದವನ್ನು ಹಿಂದೂಡಿ ಪ್ರಾಕೃತಿಕ ತತ್ತ್ವಗಳಲ್ಲೇ ವೈಜ್ಞಾನಿಕವಾಗಿ ಉಪಪತ್ತಿ ಹೇಳಹೊರಟುದು ತಾಲೀಸನ ವಿಚಾರವಾದದ ಮಹತ್ತ್ವವಾಗಿದೆ. ಅನೇಕದ ಮೂಲ ಏಕವೇ ಇರಬೇಕೆಂಬ ತಾತ್ತ್ವಿಕ ಭಾವನೆ ಪ್ರಾಚೀನ ಗ್ರೀಸಿನಲ್ಲೂ ರೂಢಮೂಲವಾಗಿತ್ತು. ಹಿಂದಿನ ಪುರಾಣಕಥಾ ಲೋಕಕ್ಕೂ ವಿಜ್ಞಾನದ ವಾಸ್ತವಿಕ ಸತ್ಯಲೋಕಕ್ಕೂ ಸೇತುವೆಯಾಗಿದೆ ತಾಲೀಸನ ವಿಚಾರಸರಣಿ. ಆಧುನಿಕ ವಿಮರ್ಶಕರಲ್ಲಿ ಕೆಲವರು ಇದನ್ನು ಆದ್ಯತನ ವೈಜ್ಞಾನಿಕ ವಿಚಾರಧಾರೆಯ ಬೀಜಾಂಕುರವೆಂದು ಪ್ರಶಂಸೆ ಮಾಡಿದರೆ, ಇತರರು ಪ್ರಾಚೀನ ಕಥಾಕಲ್ಪನೆಗಳ ರೂಪಾಂತರವೆಂದು ನಿಂದಿಸುವುದೂ ಉಂಟು. (ಕೆ.ಕೆ.)