ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀ, ಧರ್ಮವೀರ್

ಭಾರತೀ, ಧರ್ಮವೀರ್ 1926._ಹಿಂದಿಯ ಶ್ರೇಷ್ಠಕವಿ ಹಾಗೂ ನಾಟಕಕಾರ. 1926 ಡಿಸೆಂಬರ್ 25ರಂದು ಅಲಹಾಬಾದಿನಲ್ಲಿ ಜನಿಸಿದರು. ಇವರು ಚಿಕ್ಕಂದಿನಲ್ಲಿಯೇ ತಮ್ಮ ತಂದೆ ಚಿರಂಜೀವಿಲಾಲ್ ವರ್ಮಾ ಅವರನ್ನು ಕಳೆದುಕೊಂಡು ಅತ್ಯಂತ ದುಃಖದ, ಬಡತನದ ದಿನಗಳನ್ನು ಎದುರಿಸಿ, ಮಾವ ಅಭಯಕೃಷ್ಣ ಚಾಹರಿಯವರ ಸಹಾಯ ಹಾಗೂ ಪ್ರೋತ್ಸಾಹಗಳಿಂದ ಶಿಕ್ಷಣ ಪಡೆದರು. 1942ರ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಒಂದು ವರ್ಷ ಓದು ನಿಲ್ಲಿಸಬೇಕಾಯಿತು. 1943ರಲ್ಲಿ ಪ್ರಯಾಗ ವಿಶ್ವವಿದ್ಯಾಲಯ ಸೇರಿ 1945ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಚಿಂತಾಮಣಿ ಘೋಷ್ ಪದಕ ಗಳಿಸಿದರು. 1947ರಲ್ಲಿ ಎಂ.ಎ. ಪದವಿ ಪಡೆದರು. ಅನಂತರ ಡಾ. ಧೀರೇಂದ್ರವರ್ಮಾ ಅವರ ನಿರ್ದೇಶನದಲ್ಲಿ ಹಿಂದಿಯ ಸಿದ್ಧ ಸಾಹಿತ್ಯ ಕುರಿತು ಸಂಶೋಧನ ಗ್ರಂಥ ರಚಿಸಿ ಪಿಎಚ್.ಡಿ ಪದವಿ ಗಳಿಸಿದರು. ಕೆಲಕಾಲ ಇವರು ಪದ್ಮಕಾಂತ್ ಮಾಳವೀಯ ಅವರ ಅಭ್ಯುದಯ್ ಪತ್ರಿಕೆಯಲ್ಲಿ ದುಡಿದರು. 1948ರಿಂದ ಎರಡುವರ್ಷ ಇಲಾಚಂದ್ರ ಜೋಶಿಯವರ ಸಂಗಮ್ ಪತ್ರಿಕೆಯ ಸಹ ಸಂಪಾದಕರಾಗಿದ್ದರು. ಒಂದು ವರ್ಷ ಅಲಹಾಬಾದಿನ ಹಿಂದುಸ್ಥಾನಿ ಅಕಾಡೆಮಿಯಲ್ಲಿ ಕಾರ್ಯದರ್ಶಿಯಾಗಿದ್ದರು. 1951ರಲ್ಲಿ ಪ್ರಯಾಗ ವಿಶ್ವವಿದ್ಯಾಲಯದ ಹಿಂದೀ ವಿಭಾಗದಲ್ಲಿ ಅಧ್ಯಾಪಕರಾಗಿ ನೇಮಕಗೊಂಡು 1960ರ ತನಕ ಅಲ್ಲಿದ್ದರು. ಅನಂತರ ಮುಂಬಯಿಯ ಪ್ರಸಿದ್ಧ ಹಿಂದೀವಾರಪತ್ರಿಕೆ ಧರ್ಮಯುಗ್‍ನ ಸಂಪಾದಕರಾದರು. ಈಗಲೂ ಅದೇ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಭಾರತೀ ಅವರು ಸಾಹಿತ್ಯರಂಗ ಪ್ರವೇಶಿಸಿದ್ದು ಕತೆಗಾರರಾಗಿ, ಕಾದಂಬರಿಕಾರರಾಗಿ. ಅನಂತರ ವಿಮರ್ಶಕ ಕವಿ ನಾಟಕಕಾರರೆಂದು ಖ್ಯಾತರಾದರು. ಆದರೆ ಈ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಮೂಲತ: ಇವರ ಕವಿಹೃದಯವೇ ಮಿಡಿಯುತ್ತಿದೆ. 1951ರಲ್ಲಿ ಅಜ್ಞೇಯರು ಸಂಪಾದಿಸಿ ಪ್ರಕಟಿಸಿದ ದೂಸರಾ ಸಪ್ತಕ್ ಕವನ ಸಂಕಲನದಲ್ಲಿ ಭಾರತಿಯವರ 13 ಕವನಗಳು ಮೊದಲಸಾರಿಗೆ ಪ್ರಕಟವಾದವು. ಸಪ್ತಕ್‍ದ ಕವನಗಳ ಜೊತೆಗೆ ಇನ್ನೂ ಹಲವಾರು ಕವನಗಳನ್ನು ಸೇರಿಸಿ 1952ರಲ್ಲಿ ಠಂಡಾ ಲೋಹಾ ಎಂಬ ಸಂಕಲನ ಪ್ರಕಟಿಸಿದರು. ಹಿಂದಿಯ ರಮ್ಯ ಕಾವ್ಯದ ಸುಂದರ ಬಂಧುರತೆ ಹಾಗೂ ಭಾವದೀಪ್ತಿ ಇಲ್ಲಿಯ ಗೀತಗಳಲ್ಲಿ ಗೋಚರಿಸುತ್ತದೆ. 1954ರಲ್ಲಿ ಪ್ರಕಟವಾದ ಅಂಧಾಯುಗ್ ಒಂದು ಕಾವ್ಯನಾಟಕ. ಇದರಲ್ಲಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಹದಿನೆಂಟನೆಯ ದಿನದ ಸೂಕ್ಷ್ಮ ಪ್ರಸಂಗವನ್ನು ವಿಶ್ಲೇಷಿಸುತ್ತ ಆಧುನಿಕ ಕಾಲದ ಯುದ್ಧ, ಶಾಂತಿ ಮುಂತಾದ ಶಾಶ್ವತ ಮಾನವೀಯ ಸಮಸ್ಯೆಗಳನ್ನು ಹೃದ್ಯವಾಗಿ ಚಿತ್ರಿಸಿದ್ದಾರೆ. ಕಾವ್ಯ ಮತ್ತು ನಾಟಕೀಯ ಅಂಶಗಳೆರಡರ ದೃಷ್ಟಿಯಿಂದಲೂ ಅಂಧಾಯುಗ್ ಹಿಂದಿಯ ಪ್ರಸಿದ್ಧ ಕೃತಿಗಳಲ್ಲಿ ಒಂದು. ಹಲವಾರು ನಾಟಕ ತಂಡಗಳು ಈ ಕಾವ್ಯನಾಟಕವನ್ನು ಭಾರತ ಮತ್ತು ವಿದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿವೆ. 1959ರಲ್ಲಿ ಪ್ರಕಟವಾದ ಕನುಪ್ರಿಯಾ ಮತ್ತು ಸಾತ್‍ಗೀತ್ ವರ್ಷ-ಈ ಎರಡು ಕೃತಿಗಳು ಭಾರತಿಯವರ ಕಾವ್ಯವ್ಯಕ್ತಿತ್ವವನ್ನು ಇನ್ನೂ ದೃಢಗೊಳಿಸಿದವು ಕನುಪ್ರಿಯಾ ಒಂದು ಪ್ರಬಂಧಕಾವ್ಯ; ಕೃಷ್ಣಪ್ರಿಯೆ ರಾಧೆಯ ಮನೋಭಾವಗಳ ಮೂಲಕ ಸಮಸ್ತ ಕೃಷ್ಣಚೈತನ್ಯವನ್ನು ಕನ್ನಡಿಸುವ ನವ್ಯ ಕವನಮಾಲೆ, ಕೇವಲ ಒಂದೆರಡು ಪಾತ್ರಗಳ ಮೂಲಕ ಇಲ್ಲಿ ಬಿಂಬಿತವಾಗಿರುವ ಪ್ರಣಯ-ವೈವಿಧ್ಯ ಸುಂದರವಾದದು, ರಮ್ಯವಾದುದು.

ಭಾರತೀಯವರ ಕಾದಂಬರಿಗಳು ಕೂಡ ಈ ನಾಟ್ಯಪ್ರಜ್ಞೆಯನ್ನು ಕೇಂದ್ರಬಿಂದುವಾಗಿ ಪಡೆದುಕೊಂಡಿವೆ. ಗುನಾಹೋಂಕಾ ದೇವತಾ (1949) ಭಾರತೀಯ ಮಾಧ್ಯಮ ವರ್ಗದ ಸಮಾಜದ ಪರಸ್ಪರ ವಿರೋಧಿ ಸ್ವಭಾವದ ಗೊಂದಲಗಳ ತಿಕ್ಕಾಟ, ಬಡತನ, ಯುವ ಮನಸ್ಸಿನ ಅಸ್ಪಷ್ಟ ಪ್ರಣಯ ಭಾವಾತುರತೆಗಳನ್ನು ನಿರೂಪಿಸುವ ಕಾವ್ಯಾತ್ಮಕ ಕಥೆ. ಅನಿವಾರ್ಯವಾಗಿ ಸೋಲುಗಳಿಗೆ ತುತ್ತಾಗಿ ಅಲ್ಪ ವಯಸ್ಸಿಗೇ ಮೂಕವಾಗಿ ಬದುಕಿನ ಪಕ್ವತೆಯ ಬಗ್ಗೆ ಯೋಚಿಸತೊಡಗುವ ಯುವಕ-ಯುವತಿಯರ ಚಿತ್ರಣ ಇಲ್ಲಿ ತುಂಬ ಮಾರ್ಮಿಕವಾಗಿದೆ. ಏಕ್ ಥಾ ಚಂದರ್ ಏಕ್ ಥೀ ಸುಧಾ ಎಂಬ ಹೆಸರಿನಿಂದ ಈ ಕಾದಂಬರಿ ಪ್ರಾಯೋಗಿಕ ಚಲನಚಿತ್ರವಾಗಿ ಕೂಡ ಪ್ರಸಿದ್ಧವಾಗಿದೆ. ಸೂರಜ್ ಕಾ ಸಾತವಾಂಘೋಡಾ (1952) ಇವರ ಇನ್ನೊಂದು ಪ್ರಾಯೋಗಿಕಕಾದಂಬರಿ. ಮುರ್ದೋಂ ಕಾೀಗಾಂವ್ (1946), ಸ್ವರ್ಗ್ ಔರ್ ಪ್ಲಥ್ವಿ (1950), ಚಾಂದ್ ಔರ್ ಔರ್ ಟೂಟೆ ಹುಏ ಲೋಗ್ ಮತ್ತು ಬಂದ್‍ಗಲೀ ಕಾ ಆಖಿರೀ ಮಕಾನ್-ಇವು ಇವರ ಕಥಾ ಸಂಗ್ರಹಗಳು. ನದೀ ಪ್ಯಾಸೀ ಥೀ ಎಂಬುದು ಏಕಾಂಕ ಸಂಗ್ರಹ. ಪ್ರತೀಕಾತ್ಮಕ ಪಾತ್ರಗಳ ಮೂಲಕ ನವ್ಯ ರೂಪಕಗಳನ್ನು ರಚಿಸಿದ ನಾಲ್ಕಾರು ಹಿಂದೀ ಏಕಾಂಕ ಕಾರರಲ್ಲಿ ಭಾರತಿಯರೂ ಒಬ್ಬರು.

ಇವರು ಅನೆಕ ವಿಮರ್ಶಾತ್ಮಕ ಹಾಗೂ ವೈಚಾರಿಕ ಕೃತಿಗಳನ್ನೂ ರಚಿಸಿದ್ದಾರೆ. ಪ್ರಗತಿವಾದ್, ಏಕ್ ಸಮೀಕ್ಷಾ (1949) ಮತ್ತು ಮಾನವ್ ಮೂಲ್ಯ ಔರ್ ಸಾಹಿತ್ಯ-ಇವು ಇವರ ವಿಮರ್ಶಾತ್ಮಕ ಬರೆಹಗಳು. `ಸಿದ್ಧಸಾಹಿತ್ಯ ಎಂಬುದು ಇವರ ಸಂಶೋಧನ ಮಹಾಪ್ರಬಂಧ. ಠೆ ಲೇಪರ್ ಹಿಮಾಲಯ್, ಕಹನೀ ಅನ್‍ತಕಹನೀ ಪಶ್ಯಂತೀ-ಇವು ಲಲಿತ ಪ್ರಬಂಧ ಸಂಗ್ರಹಗಳು. ಯುದ್ಧ ಯಾತ್ರಾ ಎಂಬ ಕೃತಿಯಲ್ಲಿ ಭಾರತ-ಪಾಕಿಸ್ತಾನ ಯುದ್ಧಕಾಲದಲಲ್ಲಿ ತಾವು ಕಣ್ಣಾರೆ ಕಂಡ ಬದುಕಿನ ಅನುಭವ ಸಂಗತಿಗಳನ್ನು ನಿರೂಪಿಸಿದ್ದಾರೆ.

ಅನುವಾದ ಕ್ಷೇತ್ರದಲ್ಲಿಯೂ ಭಾರತೀ ತಮ್ಮ ಆಸ್ಥೆಯನ್ನು ತೋರಿದ್ದಾರೆ. ಆಸ್ಕರ್ ವಾಇಲ್ಡ್ ಕೀ ಕಹಾನಿಯಾಂ (1946) ಎಂಬ ಕಥಾಸಂಕಲನದಲ್ಲಿ ಆಸ್ಕರ್ ವೈಲ್ಡ್‍ರ ಆಯ್ದ ಕಥೆಗಳ ಅನುವಾದವಿದೆ. `ದೇಶಾಂತರ್ ಎಂಬ ಕವನಸಂಕಲದಲ್ಲಿ ತಮಗೆ ಮೆಚ್ಚುಗೆಯಾದ ವಿವಿಧ ದೇಶಗಳ ಸಮಕಾಲೀನ ಪ್ರಮುಖ ಕವಿಗಳ ಕವನಗಳ ಪದ್ಯಾನುವಾದ ಮಾಡಿದ್ದಾರೆ.

ಧರ್ಮಯುಗ ಪತ್ರಿಕೆಯ ಸಂಪಾದಕರಾಗಿ ಹಿಂದೀ ಭಾಷೆ ಹಾಗೂ ಸಾಹಿತ್ಯಕ್ಕೆ ಭಾರತೀ ಸಲ್ಲಿಸಿದ ಸೇವೆಯೂ ತುಂಬ ಮಹತ್ತ್ವದ್ದು. ಈಗ ಹಿಂದಿಯಲ್ಲಿ ಬರೆಯುತ್ತಿರುವ ಅಸಂಖ್ಯ ನವ್ಯ ಲೇಖಕರನ್ನು ಬೆಳಕಿಗೆ ತರುವಲ್ಲಿ ಭಾರತೀ ಮಹತ್ತ್ವದ ಪಾತ್ರವಹಿಸಿದ್ದಾರೆ. ಸಾಮಾಜಿಕವಾಗಿ ರಾಜಕೀಯವಾಗಿ ಸಾಹಿತ್ಯಕವಾಗಿ ಹಿಂದಿಯನ್ನು ಸಮೃದ್ಧಗೊಳಿಸುವಲ್ಲಿ ಕೂಡ ಈ ಪತ್ರಿಕೆಯ ಮೂಲಕ ಹೋರಾಟ ಮಾಡಿದ್ದಾರೆ.

ಭಾರತೀಯವರಿಗೆ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿವೆ. 1967ರಲ್ಲಿ ಇವರನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ನೇಮಿಸಲಾಯಿತು. 1972ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ನೀಡಿ ಗೌರವಿಸಿತು. ಭಾರತೀ ಹಲವಾರು ಸಲ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. 1961ರಲ್ಲಿ ಕಾಮನ್ವೆಲ್ತ್ ರಿಲೇಶನ್ಸ್ ಕಮಿಟಿಯ ಆಮಂತ್ರಣದ ಮೇರೆಗೆ ಇಂಗ್ಲೆಂಡ್ ಮತ್ತು ಯೂರೊಪಿಗೆ ಭೇಟಿಕೊಟ್ಟಿದ್ದರು. ಪಶ್ಚಿಮ ಜರ್ಮನಿಯ ಆಮಂತ್ರಣ ಪಡೆದು 1962ರಲ್ಲಿ ಜರ್ಮನಿಯನ್ನೂ ಭಾರತೀಯ ರಾಜದೂತರ ಅತಿಥಿಯಾಗಿ 1966ರಲ್ಲಿ ಇಂಡೊನೇಶಿಯಾ ಮತ್ತು ಥಾಯ್‍ಲ್ಯಾಂಡ್‍ಗಳನ್ನೂ ಸಂದರ್ಶಿಸಿದರು. 1971ರ ಸೆಪ್ಟೆಂಬರಿನಲ್ಲಿ ಮುಕ್ತಿವಾಹಿನಿಯ ಕೂಡ ಬಾಂಗ್ಲಾದೇಶದಲ್ಲಿ ಗುಪ್ತವಾಗಿ ಸಂಚರಿಸಿ ಅಲ್ಲಿಯ ಕ್ರಾಂತಿಯ ಸಚಿತ್ರ ಪ್ರತ್ಯಕ್ಷ ವಿವರಣೆಗಳನ್ನು ಪ್ರಕಟಿಸಿದರು. ಅದೇ ವರ್ಷ ಪಾಕಿಸ್ತಾನದೊಡನೆ ನಡೆದ ಹೋರಾಟದಲ್ಲಿ ಭಾರತೀಯ ಕಾಲ್ದಳದ ಕೂಡ ಸಂಚರಿಸಿ ಯುದ್ಧದ ಭೀಕರ ಅನುಭವಗಳನ್ನು ಸಾಕ್ಷಾತ್ಕರಿಸಿದರು. ಮಾರಿಶಸ್‍ನಲ್ಲಿರುವ ಭಾರತೀಯ ಸಂಜಾತರ ಸಮಸ್ಯೆಗಳನ್ನು ಅಭ್ಯಸಿಸಲು 1947ರಲ್ಲಿ ಭೇಟಿಕೊಟ್ಟಿದ್ದರು. (ಎಸ್.ಪಿ.)