ಮಾರ್ಸೇಲ್ - ಫ್ರಾನ್ಸಿನ ಬೂಸ್ ಡೂ ರೋಸ್ ವಿಭಾಗದ ರಾಜಧಾನಿ ಹಾಗೂ ಅತಿ ದೊಡ್ಡ ಬಂದರು. ಫ್ರಾನ್ಸಿನ ಎರಡನೆಯ ಈ ಮಹಾನಗರ ಪ್ಯಾರಿಸ್ ನಗರಕ್ಕೆ ಆಗ್ನೇಯದಲ್ಲಿ 856ಕಿಮೀ ದೂರದಲ್ಲಿದೆ. ಸುಣ್ಣಕಲ್ಲಿನ ಗುಡ್ಡಗಳಿಂದ ಸುತ್ತುವರಿಯಲ್ಪಟ್ಟಿರುವ ಈ ನಗರ ಅರ್ಧವೃತ್ತಾಕಾರದಲ್ಲಿದ್ದು ಮೆಡಿಟರೇನಿಯನ್ ಸಮುದ್ರದ ಲಯನ್ ಖಾರಿಯ ಈಶಾನ್ಯಭಾಗದಲ್ಲಿದೆ. ನಗರ ಜನಸಂಖ್ಯೆ 914,358(1975).

ಇಂದಿನ ಮಾರ್ಸೇಲ್ ನಗರ ವಿಶಾಲವಾದ ಹೆದ್ದಾರಿಗಳಿಂದ ದೊಡ್ಡ ದೊಡ್ಡ ಕಟ್ಟಡಗಳಿಂದ ಕೂಡಿದೆ. ಗ್ರೀಕರಿಂದ ಸ್ಥಾಪಿತವಾದ ಹಳೆಯ ಬಂದರು ವೆಯಿಕ್ಸ್ 1840ರ ತನಕ ಇಲ್ಲಿಯ ಏಕಮಾತ್ರ ಬಂದರಾಗಿತ್ತು. ಇದು ಚಿಕ್ಕದಾದ್ದರಿಂದ ಆಧುನಿಕ ಹಡಗುಗಳಿಗೆ ಅನುಕೂಲವಾದದ್ದಲ್ಲ. ಆದ್ದರಿಂದ ಇಲ್ಲಿ ವಿಹಾರನೌಕೆಗಳು ಮತ್ತು ಇತರ ಚಿಕ್ಕ ನೌಕೆಗಳು ತಂಗುತ್ತವೆ. ಸುತ್ತಮುತ್ತ ಇರುವ ಇಲ್ಲಿಯ ಹೊಟೆಲುಗಳು ಪ್ರವಾಸಿಗಳಿಗೆ ಆಕರ್ಷಕವಾದುವು. ಇಲ್ಲಿಂದ 8 ಕಿಮೀ ಪಶ್ಚಿಮಕ್ಕೆ ಹೊಸ ಬಂದರನ್ನು ಕಟ್ಟಲಾಗಿದ್ದು ಫ್ರಾನ್ಸಿನ ಒಟ್ಟು ವಿದೇಶೀ ವ್ಯಾಪಾರದಲ್ಲಿ 1/3 ಭಾಗದಷ್ಟು ಇದರ ಮೂಲಕವೇ ನಡೆಯುತ್ತದೆ. ಮಾರ್ಸೇಲ್‍ನ ಆರ್ಥಿಕತೆ ಇಲ್ಲಿಯ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಅವಲಂಬಿಸಿದೆ. 15ನೆಯ ಶತಮಾನದಿಂದ ಇಲ್ಲಿ ತಯಾರಿಸುತ್ತಿರುವ ಸಾವನ್ ಡಿ ಮಾರ್ಸೇಲ್ ಸಾಬೂನು ಜಗತ್ಪ್ರಸಿದ್ದ. ಎರಡನೆಯ ಮಹಾಯುದ್ಧದ ಬಳಿಕ ಇಲ್ಲಿಯ ಬಂದರಿನ ವಿಸ್ತರಣೆಯಾಗಿ ಅನೇಕ ಕೈಗಾರಿಕೆಗಳು ಸ್ಥಾಪಿತವಾದವು. ಇಲ್ಲಿ ಸೋವಿಯತ್ ಮತ್ತು ಫ್ರೆಂಚ್ ಸರ್ಕಾರಗಳ ನೆರವಿನಿಂದ ಒಂದು ಬೃಹತ್ ಪ್ರಮಾಣದ ಉಕ್ಕಿನ ಕೈಗಾರಿಕೆಯನ್ನು ಪ್ರಾರಂಭಿಸಲಾಗಿದೆ. ಬ್ರಿಟಿಷ್ ನೆರವಿನಿಂದ ಪ್ಲಾಸ್ಟಿಕ್ ಕೈಗಾರಿಕೆಯನ್ನೂ ಸ್ಥಾಪಿಸಲಾಗಿದೆ. ಇದಲ್ಲದೆ ಫ್ರೆಂಚ್ ಕಂಪನಿಗಳು ಅನೇಕ ಕೈಗಾರಿಕೆಗಳನ್ನು ಪ್ರಾರಂಭಿಸಿವೆ. ಇಲ್ಲಿಯ ಪ್ರಮುಖ ಉತ್ಪನ್ನಗಳು ಸಾಬೂನು, ರಾಸಾಯನಿಕ ಪದಾರ್ಥಗಳು, ಯಂತ್ರಗಳು, ಸಕ್ಕರೆ, ಆಲಿವ್ ಎಣ್ಣೆ, ಕಬ್ಬಿಣ ಮತ್ತು ಹಿತ್ತಾಳೆಯ ಸಾಮಾನುಗಳು, ಗಾಜು, ಬಟ್ಟೆ ಮತ್ತು ಹಡಗು ಕಟ್ಟುವುದು.

ಮಾರ್ಸೇಲ್ ನಗರ 2,500 ವರ್ಷಗಳಷ್ಟು ಹಳೆಯದಾಗಿ ಫ್ರಾನ್ಸಿನ ಅತ್ಯಂತ ಪ್ರಾಚೀನ ನಗರವಾದರೂ ಇಲ್ಲಿರುವ ಐತಿಹಾಸಿಕ ಸ್ಮಾರಕಗಳ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಬಂದರಿನ ಪ್ರವೇಶ ದ್ವಾರದಲ್ಲಿ 13ನೆಯ ಶತಮಾನದ ಸೇಂಟ್‍ಜೀನ್ ಕೋಟೆಯೂ ಮತ್ತೊಂದು ಪ್ರವೇಶದ್ವಾರದ ಕಡೆ ಸೇಂಟ್ ನಿಕೊಲಾಸ್ ಕೋಟೆಯೂ ಇವೆ. ಒಳಭಾಗದಲ್ಲಿ ಫ್ರಿಯೊಲ್ ದ್ವೀಪಗಳಿದ್ದು ಇವುಗಳಲ್ಲಿ ಜಲಕ್ರೀಡಾ ಕೇಂದ್ರಗಳಿವೆ. ಈ ದ್ವೀಪಗಳ ಹಾಗು ಮುಖ್ಯ ಭೂ ಭಾಗದ ನಡುವೆ ಇರುವ ಷಾಟೋ ಡಿ ಇಫ್ ಕೋಟೆಯಲ್ಲಿ ನೂರಾರು ಖೈದಿಗಳನ್ನು ಬಂಧನದಲ್ಲಿಡಲಾಗಿತ್ತು. ಅಲೆಕ್ಸಾಂಡರ್ ಡ್ಯೂಮಸ್‍ನ ಕಥೆಗಳಲ್ಲಿ ಬರುವ ಕಾಲ್ಪನಿಕ ನಾಯಕ ಮಾಂಟೆಕ್ರಿಸ್ಟೊ ಸಹ ಇಲ್ಲಿಯೇ ಬಂಧನದಲ್ಲಿದ್ದನೆಂಬ ಕಥೆಯಿದೆ.

ಹಳೆಯ ಬಂದರಿನ ದಕ್ಷಿಣ ಭಾಗದಲ್ಲಿ 8ನೆಯ ಶತಮಾನದಿಂದ ಪ್ರಸಿದ್ಧವಾಗಿರುವ ನಾಟ್ರ್ ಡೇಮ್ ಡಿಲಾ ಗಾರ್ಡೆ ಅರಾಧನಾ ಮಂದಿರವಿದೆ. ಇದರ ಈಗಿನ ಕಟ್ಟಡವನ್ನು 1853ರಲ್ಲಿ ಕಟ್ಟಲಾಯಿತು.

ಇದರ ಗೋಪುರದಲಿ ಸುಮಾರು 9.15 ಮೀ ಎತ್ತರದ ಗಿಲೀಟುಮಾಡಿದ ಮೇರಿ ಕನ್ನಿಕೆಯ ವಿಗ್ರಹವಿದೆ. ಗುಡ್ಡವೂ ಸೇರಿದಂತೆ ಇದರ ಒಟ್ಟು ಎತ್ತರ ಸುಮಾರು 46 ಮೀ. ಈ ವಿಗ್ರಹ ಸುಮುದ್ರ ಪ್ರಯಾಣಿಕರಿಗೆ ಬಲು ದೂರದಿಂದಲೇ ಕಾಣಿಸುತ್ತದೆ. ನಗರವಾಸಿಗಳಿಗೆ ಹಾಗೂ ನಾವಿಕರಿಗೆ ಇದು ಪವಿತ್ರ ಸ್ಥಳವಾಗಿದೆ. ಬಂದರಿನ ಎದುರು ಭಾಗದಲ್ಲಿ 13ನೆಯ ಶತಮಾನದ ಸೇಂಟ್ ವಿಸ್ಟರನ ಚರ್ಚು ಇದೆ. ಇಲ್ಲಿಯ ಮತ್ತೊಂದು ಚಾರಿತ್ರಿಕ ಕಟ್ಟಡ ಡಯಾನಾ ದೇಗುಲದ ಭಗ್ನಾವಶೇಷಗಳ ಮೇಲೆ ನಿರ್ಮಿತವಾದ 12ನೆಯ ಶತಮಾನದ ಸೇಂಟ್ ಮೇರಿ ಮೇಜರ್ ಚರ್ಚ್, ನಗರದಲ್ಲಿ 11 ವಸ್ತು ಸಂಗ್ರಹಾಲಯಗಳಿವೆ.

ಮಾರ್ಸೇಲ್ ನಗರವನ್ನು ಏಷ್ಯ ಮೈನರ್ ಪ್ರದೇಶದಿಂದ ಬಂದ ಗ್ರೀಕ್ ನಾವಿಕರು ಕ್ರಿ. ಪೂ. ಸು. 600ರಲ್ಲಿ ಮಸ್ಸಾಲಿಯ ಎಂದು ಕರೆದರು. ಆ ಹೆಸರಿನ ಆಧಾರದ ಮೇಲೆ ಈ ನಗರದ ಹೆಸರು ಮಾರ್ಸೇಲ್ ಎಂದಾಯಿತು. ಇಲ್ಲಿ ಕ್ರಿ. ಶ. 300ರ ತನಕ ಗ್ರೀಕ್ ಭಾಷೆ ಬಳಕೆಯಲ್ಲಿತ್ತು. ಆಗಿನ ಮಸ್ಸಾಲಿಯ ಸಂಪದ್ಭರಿತವಾಗಿದ್ದು ಇಲ್ಲಿಯ ವ್ಯಾಪಾರಿಗಳು ತಮ್ಮ ಕೋಠಿಗಳನ್ನು ಪಶ್ಚಿಮದಲ್ಲಿ ಸೈಯಿನ್‍ವರೆಗೆ, ಪೂರ್ವದಲ್ಲಿ ವೊನಾಕೋವರೆಗೆ ವಿಸ್ತರಿಸಿದ್ದರು. 3ನೆಯ ಶತಮಾನದ ಕೊನೆಯ ಭಾಗದಲ್ಲಿ ಕ್ರೈಸ್ತಧರ್ಮ ಪ್ರವೇಶಿಸಿತು. ಕಾರ್ಥೇಜಿಯನ್ನರ ಮತ್ತು ರೋಮನ್ನರ ನಡುವಿನ ಪ್ಯೂನಿಕ್ ಯುದ್ಧಗಳಲ್ಲಿ ಮಾರ್ಸೇಲ್ ರೋಮನ್ನರನ್ನು ಬೆಂಬಲಿಸಿತು. ಇದಕ್ಕೆ ಪ್ರತಿಫಲವಾಗಿ ಲಿಗೂರಿಯದ ಮೂಲನಿವಾಸಿಗಳನ್ನು ಅಡಗಿಸಲು ಮಾರ್ಸೇಲ್ ರೋಮನ್ನರ ಬೆಂಬಲ ಪಡೆಯಿತು. ಅನಂತರ ಪಾಂಪೆ ಮತ್ತು ಸೀಜರ್ ಪರಸ್ಪರ ಕಾದಾಡಿದಾಗ ಮಾರ್ಸೇಲ್ ಪಾಂಪೆಯ ಕಡೆ ಸೇರಿತು. ಇದರಿಂದ ಕ್ರಿ.ಪೂ. 49ರಲ್ಲಿ ಸೀಜರಿನ ಸೇನಾಧಿಕಾರಿ ಟ್ರೆಬೋನಿಯಸ್ ಈ ನಗರವನ್ನು ಗೆದ್ದುಕೊಂಡ.

10ನೆಯ ಶತಮಾನದಲ್ಲಿ ವೈಕೌಂಟರ ಆಡಳಿತದಲ್ಲಿ ಮಾರ್ಸೇಲಿನ ಜನಸಂಖ್ಯೆ ಹೆಚ್ಚಿ ಬಂದರು ಅಭಿವೃದ್ದಿ ಹೊಂದಿತು. 13ನೆಯ ಶತಮಾನದ ಆದಿಯಲ್ಲಿ ಇದು ಗಣ ರಾಜ್ಯವಾಯಿತು. 1423ರಲ್ಲಿ ಪ್ರಾವೆನ್ಸ್ ದೊರೆಯಾದ ರೆನೆ ಈ ನಗರವನ್ನು ತನ್ನ ಚಳಿಗಾಲದ ವಾಸಸ್ಥಾನವನ್ನಾಗಿ ಮಾಡಿಕೊಂಡು ಮತ್ತಷ್ಟು ಅಭಿವೃದ್ಧಿಪಡಿಸಿದ.

ಫ್ರೆಂಚ್ ಕ್ರಾಂತಿಯಲ್ಲಿ ಮಾರ್ಸೇಲ್ ಉತ್ಸಾಹದಿಂದ ಪಾಲ್ಗೊಂಡಿತ್ತು. 1792ರಲ್ಲಿ ಸುಮಾರು 50 ಜನ ಸ್ವಯಂ ಸೇವಕರು ಪ್ಯಾರಿಸಿಗೆ (ವಾರ್‍ಸಾಂಗ್) ಆಫ್ ದಿ ರೈನ್ ಆರ್ಮಿ) ರೈನ್ ಸೈನ್ಯದ ಕಾಳಗದ ಹಾಡನ್ನು ಹಾಡುತ್ತ ನಡೆದರು. ದಾರಿಯುದ್ಧಕ್ಕೂ ಈ ಹಾಡು ಅತ್ಯಂತ ಜನಪ್ರಿಯವಾಗಿ ಜನರಲ್ಲಿ ಉತ್ಸಾಹ ತುಂಬಿತು. ಲಾ ಮಾರ್ಸೇಲ್ ಎಂದು ಹೆಸರಾದ ಈ ಗೀತೆ ಅನಂತರ ಫ್ರಾನ್ಸಿನ ರಾಪ್ಟ್ರಗೀತೆಯಾಯಿತು.

19ನೆಯ ಶತಮಾನದಲ್ಲಿ ಫ್ರೆಂಚ್ ಸಾಮ್ರಾಜ್ಯ ಮೆಡಿಟರೇನಿಯನ್ ದಾಟಿ ಉತ್ತ ಅಫ್ರಿಕದಲ್ಲಿ ವಿಸ್ತಿರಿಸಿದ್ದರಿಂದ ಹಾಗೂ ಸೂಯೆಜ್ ಕಾಲುವೆಯ ನಿರ್ಮಾಣದಿಂದ ಮಾರ್ಸೇಲ್ ಫ್ರೆಂಚ್ ಸಾಮ್ರಾಜ್ಯದ ಪ್ರಮುಖ ಬಂದರಾಗಿ ಅಭಿವೃದ್ದಿ ಹೊಂದಿತು. ಈ ಕಾಲದಲ್ಲಿಯೇ ನಗರದಲ್ಲಿ ವಿಶಾಲವಾದ ಹೆದ್ದಾರಿಗಳೂ ಕಟ್ಟಡಗಳೂ ಸ್ಮಾರಕಗಳೂ ನಿರ್ಮಾಣವಾದುವು. ನಗರದಲ್ಲಿ ಇದು ನೀರಿನ ತೀವ್ರ ಕೊರತೆಯನ್ನು ಪರಿಹರಿಸಲು 1837-48ರಲ್ಲಿ ಡ್ಯೂರಾನ್ಸ್ ನದಿಯಿಂದ ನಗರಕ್ಕೆ ನೀರು ಪೂರೈಕೆ ಯೋಜನೆಯನ್ನು ಪೂರ್ಣಗೊಳಿಸಲಾಯಿತು.

1942ರ ನವೆಂಬರ್‍ನಲ್ಲಿ ಮಾರ್ಸೇಲನ್ನು ಜರ್ಮನರು ಆಕ್ರಮಿಸಿಕೊಂಡರು. 1943ರ ನವೆಂಬರ್‍ನಲ್ಲಿ ವಿರೋಧಿ ಚಳವಳಿಯನ್ನು ತಡೆಗಟ್ಟಲು ಜರ್ಮನ್ನರು ಬಂದರಿನ ಸಮೀಪದ ಕೊಳಚೆ ಪ್ರದೇಶಗಳ 40,000 ನಿವಾಸಿಗಳನ್ನು ಹೊರಹಾಕಿ ಅವುಗಳನ್ನು ಡೈನಮೈಟ್ ಇಟ್ಟು ನಾಶಪಡಿಸಿದರು. 1944ರಲ್ಲಿ ಜರ್ಮನರು ಸಿಡಿಮದ್ದಿನಿಂದ ಬಂದರಿನ ಹೆಚ್ಚು ಭಾಗವನ್ನು ನಾಶಪಡಿಸಿದರು. ಯುದ್ಧದ ಬಳಿಕ ಬಂದರನ್ನು ಪುನಃ ಕಟ್ಟೆ ಉತ್ತರ ಮತ್ತು ಪಶ್ಚಿಮಕ್ಕೆ ವಿಸ್ತರಿಸಲಾಯಿತು. 23 ಆಗಸ್ಟ್ 1944ರಂದು ಅಮೆರಿಕನ್ ಸೈನ್ಯ ಈ ನಗರವನ್ನು ವಶಪಡಿಸಿಕೊಂಡಿತು. (ಜೆ. ಎಸ್. ಎಸ್.)