ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಳಗಾಂವಕರ, ಮನೋಹರ

ಮಾಳಗಾಂವಕರ, ಮನೋಹರ 1913. ಇಂಗ್ಲಿಷ್ ಕಾದಂಬರಿ, ಕತೆಗಳನ್ನು ರಚಿಸಿರುವ ಪ್ರಸಿದ್ಧ ಭಾರತೀಯ ಬರೆಹಗಾರರು. ಹುಟ್ಟಿದ್ದು 12-7-1913ರಂದು. ತಂದೆ ದತ್ತಾತ್ರೇಯ, ತಾಯಿ ಪಾರ್ವತೀಬಾಯಿ, ವಾಸ ಬೆಳಗಾಂವ ಜಿಲ್ಲೆಯ ಲೋಡಾದ ಬಳಿ ಜಗಲಬೆಟ್ಟ ಗ್ರಾಮದಲ್ಲಿ, ಆರಂಭದ ಅಧ್ಯಯನ ಬೆಳಗಾಂವನಲ್ಲಿ ನಡೆಯಿತು. ಹೆಚ್ಚಿನ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿ, ಪದವಿ ಪಡೆದು ಸೈನ್ಯ ಸೇರಿದರು. ದ್ವಿತೀಯ ಜಾಗತಿಕ ಯುದ್ಧದಲ್ಲಿ ಭಾಗವಹಿಸಿದ ಇವರು ತಮ್ಮ 39ನೆಯ ವಯಸ್ಸಿನಲ್ಲಿಯೆ ನಿವೃತ್ತಿ ಹೊಂದಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟರು. ಶ್ರೀಮಂತಿಕೆ, ರಾಜಕೀಯ ಪರಿಸರದ ಅನುಭವ ಇವರಿಗೆ ಬಾಲ್ಯದಿಂದಲೇ ಉಂಟಾದವು. ಇವರ ತಾತ (ತಾಯಿಯ ತಂದೆ) ಗ್ವಾಲಿಯರ್ ರಾಜ್ಯದ ಮುಂತ್ರಿಯಾಗಿದ್ದರು. ಹೀಗಾಗಿ ಇವರ ರಾಜಕೀಯ ಪರಿಸರದ ಅನುಭವ ಶ್ರೀಮಂತಿಕೆ ಇವೆಲ್ಲ ಇವರ ಕಾದಂಬರಿ ಕಥೆಗಳಲ್ಲಿ ಪ್ರವಹಿಸಿ ನಿಂತಿವೆ. ಸೈನ್ಯ ಸೇರಿದ ಮಾಳಗಾಂವಕರ್ ನಿವೃತ್ತಿಯ ಸಮಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು (1952). ಆ ಕಾಲದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಸ್ವಭಾವತಃ ಬೇಟೆಯಲ್ಲಿ ನಿಷ್ಣಾತರಾದ ಮಾಳಗಾಂವಕರ್ ಬರೆಯಲು ಆರಂಭಿಸಿದ್ದು ಒಂದು ಯೋಗಾಯೋಗವೇ ಸರಿ. ಅವರ ಪತ್ನಿ ಮನೋರಮಾ ಕಾಣಿಕೆಯಾಗಿ ನೀಡಿದ ಟೈಪ್‍ರೈಟರ್ ಅವರ ಬರವಣಿಗೆಗೆ ಕಾರಣವಾಯಿತಂತೆ.

ಮಾಳಗಾಂವಕರರ ಬರೆವಣಿಗೆ ವಿಪುಲವಾಗಿದೆ. ಕತೆ, ಕವಿತೆ ಕಾದಂಬರಿ, ಹೆಚ್ಚು ಬರೆದಿದ್ದಾರೆ.

ಕಾನ್ಹೋಜಿ ಅಂಗ್ರೇ, ಮರಾಠ ನಾವಿಕ (1959); ಡಿಸ್ಟಂಟ್ ಡ್ರಮ್ (1960); ಕಾಂಬ್ಯಾಟ್ ಆಫ್ ಷಾಡೋಸ್ (1962); ಪ್ರಿನ್ಸೆಸ್ (1963); ಪುಆರಸ್ ಆಫ್ ದೇವಾಸ್ ಸೀನಿಯರ್ (1963); ಎ ಬೆಂಡ್ ಇನ್ ದಿ ಗ್ಯಾಂಜಸ್ (1964); ಛತ್ರಪತೀಸ್ ಆಫ್ ಕೊಲ್ಹಾಪುರ್ (1971); ಡೆವಿಲ್ಸ್ ವಿಂಡ್ (1972); ಮೆನ್ ಹೂ ಕಿಲ್ಡ್ ಗಾಂಧಿ (1978); ಓಪನ್ ಸೀಜನ್ (1978), ಸೀಹಾಕ್; ಸ್ಪೈಇನ್ ಅಂಬರ್-ಇವು ಇವರ ಕೆಲವು ಪ್ರಮುಖ ಕೃತಿಗಳು.

ಇವಲ್ಲದೆ ಐವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಆದರೂ ಕಾದಂಬರಿಗಳ ಮೂಲಕವೇ ಮಾಳಗಾಂವಕರ್ ಹೆಚ್ಚು ಪ್ರಸಿದ್ಧರು. ಇವರ ಕಾದಂಬರಿಗಳು ಕನ್ನಡ, ಮರಾಠಿ ಮುಂತಾಗಿ ಹಲವು ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡಿವೆ. ಪ್ರಿನ್‍ಸಸ್ ಹಾಗೂ ಎ ಬೆಂಡ್ ಇನ್ ದಿ ಗ್ಯಾಂಜಸ್ ಈ ಎರಡು ಕಾದಂಬರಿಗಳು ಮಾಳಗಾಂವ ಕರರಿಗೆ ಖ್ಯಾತಿ ತಂದುಕೊಟ್ಟಿವೆ. ಪ್ರಿನ್‍ಸಸ್ ಕಾದಂಬರಿ 'ರಾಜ ಮಹಾರಾಜರು ಎಂಬ ಹೆಸರಿನಲ್ಲಿ ಕನ್ನಡಕ್ಕೆ ಶಂಕರ ಪಾಟೀಲರಿಂದ ಅನುವಾದಗೊಂಡಿದೆ. ರಾಜಮಹಾರಾಜರು, ಭಾರತದ ಸಂಸ್ಥಾನಿಕರ ಜೀವನವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿತವಾದ ಕೃತಿ ಎ ಬೆಂಡ್ ಇನ್ ದಿ ಗ್ಯಾಂಜಸ್ ಅಹಿಂಸೆಯ ಅಸ್ತಿವಾರದಮೇಲೆ ನಿಂತ ಕಾದಂಬರಿ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಭಾರತದ ಚಿತ್ರ ಇದರಲ್ಲಿ ಮೂಡಿದೆ.

ಕತೆ, ಕಾದಂಬರಿ ಅದು ಯಾವುದೇ ಮಾಧ್ಯಮವಿರಲಿ ಮಾಳಗಾಂವಕರ್ ಬರೆವಣಿಗೆ ಎಲ್ಲ ಕಡೆಯಲ್ಲೂ ಸರಳ, ನೇರ, ಮಾರ್ಮಿಕ ಹಾಗೂ ವಸ್ತು ನಿರ್ದಿಷ್ಟ. (ಎಸ್.ಎಸ್.ಜೆ.ಎ.)

`ಡಿಸ್ಕೆಂಟ್ ಡ್ರಮ್ ಲ್ಲಿ ಮಳಗಾಂವಕರರು ಬ್ರಿಟಿಷ್ ಸೈನ್ಯದಲ್ಲಿನ ಬದುಕನ್ನು ಬಹು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. `ದಿ ಪ್ರಿನ್ಸಸ್ ಭಾರತದ ರಾಜಮಹಾರಾಜರುಗಳ ವರ್ಗಕರಗಿ ಹೋದುದನ್ನು ವಿಶ್ಲೇಷಣಾತ್ಮಕವಾಗಿ ಆದರೆ ಅನುಕಂಪದಿಂದ ಚಿತ್ರಿಸುತ್ತದೆ. ಈ ರಾಜಮಹಾರಾಜರುಗಳಲ್ಲಿ ಬಹುಮಂದಿ ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳದೆ ತಮ್ಮ ಪ್ರಜೆಗಳೊಡನೆ ಜೀವಂತ, ಸಂಪರ್ಕವನ್ನು ಇರಿಸಿಕೊಳ್ಳದೆ, ವಾಸ್ತವಿಕ ಜಗತ್ತಿನಲ್ಲಿಯೇ ಉಳಿದು ಕರಗಿಹೋದುದನ್ನು ಕಾದಂಬರಿ ಚಿತ್ರಿಸುತ್ತದೆ. `ಎ ಬೆಂಡ್ ಇನ್ ದಿ ಗ್ಯಾಂಜಸ್ ಸ್ವಾತಂತ್ರ್ಯದ ಹೋರಾಟದ ಯುಗವನ್ನು ಸ್ವಾತಂತ್ರ್ಯ ಬಂದ ಭಯಂಕರ ರಕ್ತಸಿಕ್ತ ದಿನಗಳವರೆಗೆ ಚಿತ್ರಿಸುತ್ತದೆ. ಕಾದಂಬರಿಯಲ್ಲಿ `ಮೆಲೊಡ್ರಾಮ ಇದೆ. ಹಿಂಸೆ-ಅಹಿಂಸೆಗಳ ಸ್ವರೂಪ ಮತ್ತು ಮಾರ್ಗಗಳ ವಿಶ್ಲೇಷಣೆ ಇದೆ. (ಆದರೆ ವಿಶ್ಲೇಷಣೆ ಸಾಲದು) ಇಲ್ಲಿನ ಎರಡು ಪ್ರಮುಖ ಪಾತ್ರಗಳು ಕಡೆಗೆ ಸಾರ್ಥಕ್ಯವನ್ನು ಕಂಡುಕೊಳ್ಳುವುದು ಪ್ರೇಮದಲ್ಲಿ-ಜಾತಿ ಧರ್ಮಗಳ ವ್ಯತ್ಯಾಸವನ್ನು ಮೀರಿದ ಪ್ರೇಮದಲ್ಲಿ. (ಎಲ್.ಎಸ್.ಎಸ್.)