ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಳವಾಡ, ಸ ಸ

ಸ.ಸ.ಮಾಳವಾಡ : - 1910-87. ಕನ್ನಡ ಪ್ರಾಧ್ಯಾಪಕರು, ಪ್ರಾಚಾರ್ಯರು. ವಿಮರ್ಶಕರೂ ವಿದ್ವಾಂಸರೂ ಆಗಿ ಖ್ಯಾತನಾಮರು. ಇವರು ಮೂಲತಃ ಧಾರವಾಡ ಜಿಲ್ಲೆಯ ಮಾಳವಾಡದವರು; ಆದರೆ ಹಿರಿಯರು ನೆಲೆಸಿದ್ದು ಬಿಜಾಪುರ ಜಿಲ್ಲೆಯ ಗೋವನಕೊಪ್ಪ ಗ್ರಾಮದಲ್ಲಿ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೆಣಸಿಗಿ ಗ್ರಾಮದಲ್ಲಿ ದಿನಾಂಕ 14-11-1910ರಂದು. ತಂದೆ ಸಂಗನಬಸಪ್ಪ, ತಾಯಿ ಕಾಳಮ್ಮ. ಮಾಳವಾದರೆ ನಿಜನಾಮ ಸಂಗಪ್ಪ. ಇವರ ಬಾಲ್ಯ ಮತ್ತು ಪ್ರೌಢ ವಿದ್ಯಾಭ್ಯಾಸಗಳು ಗೋವನಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ ಮತ್ತು ಬಿಜಾಪುರಗಳಲ್ಲಿ ನಡೆದುವು (1916-29). ಬಾಗಲಕೋಟೆಯಲ್ಲಿರುವಾಗ ಗಜೇಂದ್ರಗಡ ಶಾಮರಾಯ ಮಾಸ್ತರ ಎಂಬುವರು ಇವರಲ್ಲಿ ಸಾಹಿತ್ಯಪ್ರೇಮ ಮೊಳೆಯಿಸಿದರು. ಮುಂದೆ ಬಿಜಾಪುರ ಧಾರವಾಡಗಳಲ್ಲಿ ಅದು ಬೆಳೆಯಿತು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇತಿಹಾಸ ಅರ್ಥಶಾಸ್ತ್ರಗಳ ವಿಶೇಷ ವಿಷಯಗಳ ಆಯ್ಕೆಯೊಂದಿಗೆ ವ್ಯಾಸಂಗ ಮುಂದುವರಿದು. 1933ರಲ್ಲಿ ಇವರು ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. ಪದವಿ ಪಡೆದರು. ಅನಂತರ ಕೊಲ್ಲಾಪುರದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಂದುವರಿಸಿ, ಕನ್ನಡ ಇಂಗ್ಲಿಷ್ ಭಾಷೆಗಳ ವಿಶೇಷ ಅಭ್ಯಾಸದೊಂದಿಗೆ ಅದೇ ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು 1935ರಲ್ಲಿ ಪ್ರಥಮ ಸ್ಥಾನದೊಂದಿಗೆ ಗಳಿಸಿದರು. ಮಾಳವಾಡರ ವೃತ್ತಿಜೀವನ ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸ್ವಲ್ಪ ಕಾಲ ನಡೆದು, 1936ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕರ್ನಾಟಕ ಕಾಲೇಜಿನಲ್ಲಿ ನೇಮಕಗೊಂಡರು. ಅಲ್ಲಿಯೇ ತಮ್ಮ ಶಿಕ್ಷಕವೃತ್ತಿಯನ್ನು ಪೂರೈಸಿ, 1966ರಲ್ಲಿ ಆ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. 1970ರ ತನಕ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಂಶೋಧಕ ಪ್ರಾಧ್ಯಾಪಕರಾಗಿ ಅಲ್ಲಿಯೇ ಇದ್ದು ಕೆಲಸ ಮಾಡಿದರು.

ಮಾಳವಾಡರು ಶೈಕ್ಷಣಿಕ ರಂಗದಲ್ಲಿ ಬಹುಮುಖವಾಗಿ ಸೇವೆ ಸಲ್ಲಿಸಿ, ಕರ್ನಾಟಕ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದರು. ಮೈಸೂರು ಮುಂಬಯಿ ಸರ್ಕಾರಗಳ ಶಿಕ್ಷಣ ಇಲಾಖೆಗೆ, ಅಭ್ಯಾಸ ನಿಯಾಮಕ ಮಂಡಳಿ, ಪಠ್ಯಪುಸ್ತಕ ಸಮಿತಿ, ನೇಮಕಾತಿ ಸಮಿತಿಗಳಲ್ಲಿ ತಮ್ಮ ಸಹಯೋಗ ನೀಡಿದರು. ಮುಂಬಯಿ ಸರ್ಕಾರದ ಕನ್ನಡ ಸಂಸ್ಕøತಿ ಸಂಶೋಧನ ಸಮಿತಿಯ ಕಾರ್ಯದರ್ಶಿಯಾಗಿದ್ದರು(1938-41). ಮುಂಬಯಿ ವಿಶ್ವವಿದ್ಯಾನಿಲಯದ ಶಿಕ್ಷಣಮಂಡಲಿ, ಸೆನೆಟ್ ಸಭೆಗಳಲ್ಲಿ ಸದಸ್ಯರಾಗಿದ್ದರು (1946-52). ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೊಳ್ಳಲು ಹಾಗೂ ಆಕಾಶವಾಣಿ ಕೇಂದ್ರ ಆರಂಭವಾಗಲು ಇವರು ಬಹುವಾಗಿ ಶ್ರಮಿಸಿದರು. ಅಲ್ಲಿಯ ಕನ್ನಡ ಸಂಶೋಧನ ಸಂಸ್ಥೆಯ ಸ್ಥಾಪನೆಯಲ್ಲಿಯೂ ಇವರ ಪಾತ್ರವಿದ್ದಿತು; 1953-57ರ ತನಕ ಆ ಸಂಸ್ಧೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅಲ್ಲಿ ವಿದ್ವತ್ತಿನ ಚಟುವಟಿಕೆಗಳನ್ನು ಹೆಚ್ಚಿಸಿದರು. 1956ರಲ್ಲಿ ಈ ಸಂಸ್ಧೆಯನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವಹಿಸಿಕೊಡುವಲ್ಲಿಯೂ (1968-70) ಇವರು ಶ್ರಮಿಸಿ. ಈ ವಿಭಾಗಕ್ಕೆ ಭದ್ರಬುನಾದಿಯನ್ನು ಹಾಕಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಅಖಿಲ ಭಾರತ ಪಿ.ಇ.ಎನ್. ಸಂಸ್ಥೆ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳು, ಭಾರತೀಯ ಜ್ಞಾನಪೀಠ, ಧಾರವಾಡದ ಲಿಂಗಾಯುತ ವಿದ್ಯಾಭಿವೃದ್ಧಿ ಸಂಸ್ಧೆ, ಕೇಂದ್ರಬಸವ ಸಮಿತಿ ಮುಂತಾದ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ಸಲಹೆಗಾರರಾಗಿ ಮಾಳವಾಡರು ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಹಲವು ವಿದ್ವತ್ಪತ್ರಿಕೆಗಳ ಸಂಪಾದಕ ಮಂಡಲಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಮಿತಿ ಸದಸ್ಯ ಉಪಾಧ್ಯಕ್ಷ ಆಗಿ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಮಿತಿ ಸದಸ್ಯರಾಗಿ ತಮ್ಮ ವಿದ್ವತ್ತಿನ ಪ್ರಯೋಜನ ದೊರಕಿಸಿದ್ದಾರೆ. ಫಿ.ಇ.ಎನ್. ಸಮ್ಮೇಳನಗಳಲ್ಲಿ, ಅಖಿಲಭಾರತ ಪ್ರಾಚ್ಯ ವಿದ್ಯಾಪರಿಷತ್ತಿನ ಅಧಿವೇಶನಗಳಲ್ಲಿ. ಅರವಿಂದ ಶತಾಬ್ದಿ ಮತ್ತು ಅಂಥ ಹಲವು ವಿಚಾರಗೋಷ್ಠಿಗಳಲ್ಲಿ ಇವರು ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಮದರಾಸು ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಗೋಷ್ಠಿಯ ಅಧ್ಯಕ್ಷರಾಗಿ (1945). ಧಾರವಾಡ ಬಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.

ಮಾಳವಾಡರು ತಮ್ಮ ನಲವತ್ತಕ್ಕೆ ಮೇಲ್ಪಟ್ಟು ರಚಿಸಿದ, ಸಂಪಾದಿಸಿದ ಕೃತಿಗಳ ಬೆಲೆಯುಳ್ಳ ಸಾಹಿತ್ಯ ಮೌಲ್ಯದ ಮೂಲಕ ಕನ್ನಡ ಭಾಷೆ ಸಾಹಿತ್ಯಗಳ ಸಂಪತ್ತನ್ನು ಹೆಚ್ಚಿಸಿದ್ದಾರೆ. ಇವು ಆತ್ಮಚರಿತ್ರೆ, ಪ್ರವಾಸ ಕಥನ. ವಿಚಾರ ಸಾಹಿತ್ಯ, ಆಧ್ಯಾತ್ಮಸಾಹಿತ್ಯ, ವಿಮರ್ಶೆ, ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ವ್ಯಾಪಿಸಿವೆ. 'ದಾರಿ ಸಾಗಿದೆ ಇವರ ಆತ್ಮಚರಿತ್ರೆ, ಉತ್ತಂಗಿ ಚನ್ನಪ್ಪ, ಮಧುರ ಚಿನ್ನ, ನಾಗಮಹಾಶಯ ಮೊದಲಾದವು ಜೀವನ ಚರಿತ್ರಗಳು; ಪಯಣದ ಕತೆ, ಸಂಚಾರ ಸಂಗಮ ಪ್ರವಾಸ ಕಥನ; ಸಂಸ್ಕøತಿ, ಕಾಲವಾಹಿನಿ, ದೃಷ್ಟಿಕೋನ ಮೊದಲಾದವು ವೈಚಾರಿಕ ಬರೆಹಗಳು; ಶ್ರೀಅರವಿಂದ ಸ್ಮರಣೆ, ಅರವಿಂದ ಮಾತಾಪಥ ಮುಂತಾದವು ಆಧ್ಯಾತ್ಮ ಸಾಹಿತ್ಯದ ರಚನೆಗಳು; ಕನ್ನಡ ಸಾಹಿತ್ಯ ಸಂಸ್ಕøತಿ ದರ್ಶನ, ಸಾಹಿತ್ಯ ಸಮಾಲೋಚನೆ, ಪುಸ್ತಕಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನದರ್ಶನ, ಕಾವ್ಯ ಮತ್ತು ಜೀವನಚಿತ್ರಣ ಈ ಕೆಲವು ಸಾಹಿತ್ಯ ವಿಮರ್ಶೆಯ ಕೃತಿಗಳು; ರಾಘವಾಂಕ ಚರಿತೆ, ಹರಿಹರನ ಮೂರು ರಗಳೆಗಳು ಮೊದಲಾದವು ಸಂಪಾದಿತ ಗ್ರಂಥಗಳು; ಸಂಗೀತರತ್ನ, ಕರ್ನಾಟಕ ಕುಲಪುರೋಹಿತರು ಇವರ ಸಂಪಾದಕತ್ವದ ಗೌರವಗ್ರಂಥಗಳು. ಸಾಹಿತ್ಯ ಸಂಗಮವೆಂಬ ಹೆಬ್ಬೊತ್ತಗೆಯಲ್ಲಿ ಇವರ ಸಾಹಿತ್ಯ ಕೃಷಿಯ ವೈವಿಧ್ಯವನ್ನು ನಿದರ್ಶಿಸುವ 60 ಲೇಖನಗಳು ಸಂಕಲಿತವಾಗಿದ್ದು ಅಭ್ಯಾಸಿಗಳಿಗೆ ತುಂಬ ಉಪಯುಕ್ತವಾಗಿವೆ. ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದ ಸಂದೇಶಗಳ ಪ್ರಸಾರದಲ್ಲಿ ಇವರು ಅಪಾರವಾಗಿ ಶ್ರಮಿಸಿರುವುದನ್ನು ಗುರುತಿಸಿ. ಶಿಕ್ಷಕರಾಗಿ ಶಿಕ್ಷಣ ತಜ್ಞರಾಗಿ ಇವರ ಸೇವೆಯನ್ನು ಗಮನಿಸಿ ಇವರ 73ನೆಯ ಹುಟ್ಟುಹಬ್ಬದಲ್ಲಿ 'ವ್ಯಾಸಂಗ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು (1983)

1972ರಲ್ಲಿ ಇವರನ್ನು ರಾಜ್ಯ ಸಾಹಿತ್ಯ ಅಕಾಡೆಮಿ ಗೌರವಿಸಿದೆ. ವ್ಯಕ್ತಿಯಾಗಿ ನೇರವಾದ ನಡೆನುಡಿಗಳಿಗೆ, ವಸ್ತುನಿಷ್ಠವಿಚಾರಗಳಿಗೆ, ಆಡಳಿತ ದಕ್ಷತೆಗೆ ಇವರು ಹೆಸರಾದವರು.

ಮಾಳವಾಡರು ಆಲೂರ ವೆಂಕಟರಾಯರು, ಬಿ.ಎಂ.ಶ್ರೀ. ಬಸವನಾಳ, ಬೇಂದ್ರೆ, ಕುವೆಂಪು, ಹಳಕಟ್ಟಿ, ಕುಂದಣಗಾರ್, ಕಾರಂತ, ತೀನಂಶ್ರೀ ಮೊದಲಾದವರ ಸ್ನೇಹ ಸಂಪರ್ಕಗಳನ್ನು ಗಳಿಸಿದ್ದರು; ಪ್ರತಿಭಾವಂತ ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದ ಅಧ್ಯಯನ ಮಾಡಿದ್ದರು: ಅವರ ಪತ್ನಿ ಶಾಂತಾದೇವಿ ಮಳವಾಡ ಅವರು ಸಹ ಮಹಿಳಾಸಾಹಿತಿಗಳಲ್ಲಿ ಗಣ್ಯರೆನಿಸಿದ್ದಾರೆ. ಇವರು ತಮ್ಮ ಗಳಿಕೆಯ 25 ಸಾವಿರ ರೂ.ಗಳನ್ನು ಕನ್ನಡ ಸಾಹಿತ್ಯಪೋಷಣೆಗೆ ಬೇರೆ ಬೇರೆ ದತ್ತಿಗಳ ರೂಪದಲ್ಲಿ ವಿನಿಯೋಗಿಸಿದ್ದಾರೆ. ಇವರು ದಿನಾಂಕ 30-8-87ರಂದು ನಿಧನರಾದರು.

   (ಟಿ.ವಿ.ವಿ.)