ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂರ್ತಿಶಿಲ್ಪ

ಮೂರ್ತಿಶಿಲ್ಪ - ಚಿತ್ರಕಲೆಯಷ್ಟೇ ಪ್ರಾಚೀನವಾದ ಮತ್ತು ವೈವಿಧ್ಯಮಯವಾದ ಶಿಲ್ಪಕಲೆ, ಮಾನವನ ಅತ್ಯಂತ ಆಸಕ್ತಿದಾಯಕ ಸಂಕೀರ್ಣ ಕಲೆಗಳಲ್ಲೊಂದು. ಚಿತ್ರ ಸೃಷ್ಟಿಯಲ್ಲಿ ಎತ್ತರ ಮತ್ತು ಅಗಲಗಳೆಂಬ ಎರಡು ಆಯಾಮಗಳನ್ನು ಕಾಣಿಸಿದರೂ ನೈಜ ವಸ್ತುವಿನ ದಪ್ಪ ಅಥವಾ ಆಳವೆಂಬ ಮೂರನೆಯ ಆಯಾಮವನ್ನು ಪ್ರತ್ಯಕ್ಷವಾಗಿ ಸೂಚಿಸಲು ಸಾಧ್ಯವಾಗುವುದಿಲ್ಲ. ಆದರೆ ಶಿಲ್ಪದಲ್ಲಿ ಎತ್ತರ, ಅಗಲ, ಆಳ ಅಥವಾ ದಪ್ಪಗಳೆಂಬ ಮೂರು ಆಯಾಮಗಳನ್ನೂ ಸೂಚಿಸಲು ಸಾಧ್ಯ. ಹೀಗೆ ಶಿಲ್ಪ ಮೂರು ಆಯಾಮಗಳನ್ನು ರೂಪಿಸಬಲ್ಲ ಕಲೆ. ಮೇಜಿನ ಮೇಲಿಡಬಹುದಾದ ಪುಟ್ಟ ವಸ್ತುವಿನಿಂದ ಬೃಹನ್ಮೂರ್ತಿಯವರೆಗೆ ಶಿಲ್ಪದ ಗಾತ್ರ ವ್ಯತ್ಯಾಸವಾಗಬಹುದು.

ಧಾರ್ಮಿಕ ವಿಧಿ ವಿಧಾನಗಳು ಹಾಗೂ ಮಂತ್ರಮಾಟಗಳ ರೀತಿನೀತಿಗಳ ಸಂಬಂಧದಿಂದಾಗಿ ಶಿಲ್ಪಕಲೆ ಪ್ರಾಯಶಃ ಬೆಳೆಯಿತು. ಅತಿಪ್ರಾಚೀನ ಶಿಲ್ಪಗಳು ಸುಮಾರು 30 ಸಾವಿರ ವರ್ಷಗಳಷ್ಟು ಹಿಂದಿನದಾಗಿದ್ದು ಪ್ರಾಚೀನ ಶಿಲಾಯುಗಕ್ಕೆ ಸೇರುತ್ತವೆ. ಪ್ರಾಗೈತಿಹಾಸಿಕ ಮಾನವರು ಮೂಳೆ ಅಥವಾ ದಂತದಂಥ ಸಾಮಗ್ರಿಯಿಂದ ಆಭರಣಗಳನ್ನೂ ಮೂರ್ತಿಗಳನ್ನೂ ತಯಾರಿಸಿದರು. ಜೇಡಿಮಣ್ಣಿನಲ್ಲಿಯೂ ಇಂಥ ವಸ್ತುಗಳು ನಿರ್ಮಿತವಾದವು. ಇವನ್ನು ಪ್ರಾಯಶಃ ಹುಟ್ಟು-ಸಾವಿನ ಸಂದರ್ಭದಲ್ಲಿ ಬಳಸುತ್ತಿದ್ದರೆಂದು ತೋರುತ್ತದೆ.

ಪ್ರಾಮುಖ್ಯ : ಮಾನವ ಸಂಸ್ಕøತಿಯ ಬೆಳೆವಣಿಗೆಯನ್ನು ಮೂರ್ತಿಶಿಲ್ಪದಷ್ಟು ಸಮಗ್ರವಾಗಿ ಮತ್ತು ಸ್ಪಷ್ಟವಾಗಿ ದಾಖಲಿಸುವ ಕಲೆ ಬೇರೊಂದಿಲ್ಲ. ಒಂದು ಕಾಲದ ಜನಜೀವನದ ಮೌಲ್ಯಾದರ್ಶನಗಳನ್ನೂ ರೀತಿನೀತಿಗಳನ್ನೂ ಭೌತಿಕವಾಗಿ ಪ್ರತಿನಿಧಿಸುವುದರ ಮೂಲಕ ಮೂರ್ತಿಶಿಲ್ಪ ಸಶಕ್ತವಾಗಿ ತಿಳಿಸುತ್ತದೆ. ಉದಾಹರಣೆಗೆ, ಪ್ರಾಚೀನ ಗ್ರೀಕರು ಮತ್ತು ಮಧ್ಯಯುಗದ ಜನ ತಮ್ಮ ಶಿಲ್ಪಶೈಲಿಯಲ್ಲಿ ಮಾನವ ರೂಪವನ್ನು ಆದರ್ಶೀಕರಿಸಿದರು. ಗ್ರೀಕರು ಅಂಗಾಂಗಗಳ ಸಪ್ರಮಾಣತೆಗೆ ಆದ್ಯತೆ ನೀಡಿದರು. ಮಧ್ಯಯುಗದಲ್ಲಿ ಪ್ರಾಪಂಚಿಕ ಜೀವನಕ್ಕಿಂತ ಮರಣೋತ್ತರ ಜೀವನಕ್ಕೆ ಜನ ಹೆಚ್ಚು ಗಮನವಿತ್ತಿರುವುದು ಆ ಕಾಲದ ಶಿಲ್ಪದಲ್ಲಿ ವ್ಯಕ್ತವಾಗಿದೆ. ಮೆಕ್ಸಿಕೋದ ಆಜ್ಟೆಕ್ ಜನ ಮತಧರ್ಮದ ಪರಿಕಲ್ಪನೆಗಳ ಪ್ರಾಧಾನ್ಯವಿರುವ ಶಿಲ್ಪಗಳನ್ನು ತಯಾರಿಸಿದರು. ಇವು ಉಗ್ರಮುಖದ ಯಜ್ಞ ಸಂಬಂಧದ ಶಿಲ್ಪಗಳು. ಮೃತ್ಯುದೇವತೆ ಕ್ಷೊಲೋತ್ಲ್‍ಗೆ ಅಸ್ಥಿಪಂಜರದ ರೂಪವಿದೆ. ಮೃತವ್ಯಕ್ತಿಗಳಿಗೆ ಆತ ಬೆಳ್ಳಿಯ ರೂಪದಲ್ಲಿ ಮಾರ್ಗದರ್ಶನ ನೀಡುವನೆಂಬುದು ಅವರ ನಂಬಿಕೆಯಾಗಿತ್ತು.

ಭಾರತ, ಚೀನ ಮತ್ತು ಇತರ ಪ್ರಾಚ್ಯಸಂಸ್ಕøತಿಗಳಲ್ಲಿ ಮೂರ್ತಿಶಿಲ್ಪ ಧ್ಯಾನಕ್ಕೆ ನೆರವಾಗುವ ಸಾಧನವಾಗಿ ಬಳಕೆಯಾಯಿತು. ಹಿಂದೂ ಮತ್ತು ಬೌದ್ಧಧರ್ಮಗಳಂಥ ಪ್ರಾಚ್ಯಧರ್ಮಗಳು ನಿರಂತರವೂ ಶಾಶ್ವತವೂ ಅದೃಶ್ಯವೂ ಆದ ಪರಮ ವಿಶ್ವಶಕ್ತಿಗಳ ಬಗೆಗೆ ಮಹತ್ತ್ವ ನೀಡುತ್ತವೆಯೇ ಹೊರತು ತಾತ್ಕಾಲಿಕವೂ ದೃಶ್ಯವೂ ಆದ ದಿನನಿತ್ಯದ ಪ್ರಾಪಂಚಿಕ ವಾಸ್ತವತೆಗಳಿಗಲ್ಲ. ದೈವಿಕ ಶಕ್ತಿಗಳನ್ನು ಅರಿಯಲು ಮತ್ತು ನಿರಂತರವಾದ ಸತ್ಯಶಕ್ತಿಯೊಡನೆ ಐಕ್ಯಭಾವ ಸಾಧಿಸಲು ಪೌರ್ವಾತ್ಯರು ಪ್ರಯತ್ನಿಸಿದರು. ದೇವದೇವತೆಗಳ ಪೌರಾಣಿಕ ಪ್ರಸಂಗಗಳನ್ನು ಮೂರ್ತಿಶಿಲ್ಪದ ಮೂಲಕ ಅಭಿವ್ಯಕ್ತಿಸಲು ಪ್ರಯತ್ನಿಸಿರುವುದನ್ನು ಹಿಂದೂ ದೇಗುಲಗಳ ಶಿಲ್ಪಸಂಪತ್ತು ತೋರಿಸಿಕೊಡುತ್ತದೆ.

ಸಮಾಜದ ಸಮಕಾಲೀನ ಭಾವನೆ ಮತ್ತು ಮೌಲ್ಯಾದರ್ಶಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುವ ಶಿಲ್ಪಗಳನ್ನು ಕೆಲವು ಆಧುನಿಕ ಕಲಾಕಾರರೂ ರಚಿಸಿದ್ದಾರೆ. ಇಂದಿನ ಜಗತ್ತು ಯಂತ್ರ ಪ್ರಧಾನವಾದುದು; ಸಮಾಜದ ಯಂತ್ರದಾಸ್ಯವನ್ನು ಅಮೆರಿಕನ್ ಶಿಲ್ಪಿ ಕ್ಲೇಸ್ ಓಲ್ಡ್‍ನ್‍ಬರ್ಗ್ ವಿಡಂಬನೆ ಮಾಡಲು ತನ್ನ ಶಿಲ್ಪಶೈಲಿಯಲ್ಲಿ ಪ್ರಯತ್ನಿಸಿದ್ದಾನೆ (ಜಯಂಟ್ ಸಾಫ್ಟ್ ಫ್ಯಾನ್ ಮತ್ತು ಘೋಸ್ಟ್ ವರ್ಷನ್). ಟೈಪ್‍ರೈಟರ್, ವಿದ್ಯುತ್ ಉಪಕರಣಗಳು, ಯಂತ್ರಸಾಧನಗಳು ಮುಂತಾದವನ್ನು ಈತ ತನ್ನ ರಚನೆಯಲ್ಲಿ ಬಳಸಿಕೊಂಡಿದ್ದಾನೆ.

ಒಂದು ಸಮಾಜದ ಧಾರ್ಮಿಕ, ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವುದಕ್ಕಿಂತಲೂ ಹೆಚ್ಚಿನ ಕಾರ್ಯವನ್ನು ಮೂರ್ತಿಶಿಲ್ಪ ಮಾಡುವುದುಂಟು. ಒಂದು ನಿರ್ದಿಷ್ಟ ಕಾಲದ ದೈನಂದಿನ ಜೀವನವನ್ನೂ ಅದು ದಾಖಲಿಸಬಲ್ಲದು. ಈಜಿಪ್ಟ್, ಅಸ್ಸೀರಿಯ ಹಾಗೂ ಅಮೆರಿಕದ ಪ್ರಾಚೀನ ಸಂಸ್ಕøತಿಗಳ ಬಗೆಗಿನ ನಮ್ಮ ಜ್ಞಾನದ ಬಹುಪಾಲು ಮೂರ್ತಿಶಿಲ್ಪಕ್ಕೆ ಸಲ್ಲುತ್ತದೆ. ಈಜಿಪ್ಟಿನ ಸೆರೆಯಾಳುಗಳನ್ನು ಒಯ್ಯುತ್ತಿರುವ ಸೈನಿಕರು, ಶಿಲ್ಪದಲ್ಲಿ ಚಿತ್ರಿತವಾಗಿರುವ ವೇಷಭೂಷಣಗಳಿಂದ ಆ ಕಾಲದ ಜನಸಾಮಾನ್ಯರು ರೈತರಾಗಿದ್ದು ಹತ್ತಿ ಮತ್ತು ಫ್ಲ್ಯಾಕ್ಸ್ (ನಾರಿಗಾಗಿ ಬೆಳೆಸುವ ಒಂದು ಸಸ್ಯ) ಬೆಳೆಯುತ್ತಿದ್ದರೆಂದು ತಿಳಿದು ಬರುತ್ತದೆ. ಹಾಗೆಯೇ ಗ್ರಾಮೀಣ ಜೀವನದ ವಿವಿಧ ಸಮಾರಂಭಗಳು ಮತ್ತಿತರ ಕೆಲವು ಗಮನಾರ್ಹ ಸಂಗತಿಗಳನ್ನು ಪಶ್ಚಿಮ ಮೆಕ್ಸಿಕೋದ ಜೇಡಿ ಮಣ್ಣಿನ ಶಿಲ್ಪಗಳು ನಿರೂಪಿಸುತ್ತವೆ. 'ವೀಕ್ಷಕರಿಂದ ಕೂಡಿದ ಕ್ರೀಡಾಂಗಣ'ದ ಮಾದರಿ ಶಿಲ್ಪವು ಆರಿಜೋನ ಪ್ರದೇಶದಿಂದ ಕ್ಯಾರಿಬಿಯನ್ ತೀರದವರೆಗೆ ಹರಡಿದ ಪ್ರದೇಶದಲ್ಲಿ ಪರಿಚಿತವಾಗಿದ್ದ ಕ್ರೀಡೆಯನ್ನು ಸೂಚಿಸುತ್ತದೆ. ಈ ಕ್ರೀಡೆಯ ಉದ್ದೇಶ ಕೇವಲ ರಂಜನೆಯಾಗಿರಲಿಲ್ಲ; ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಪ್ರತಿನಿಧಿಸುವ ಸಮಾರಂಭ ಸಹ ಈ ಚೆಂಡಿನಾಟ ಎಂದು ವಿದ್ವಾಂಸರು ಭಾವಿಸುತ್ತಾರೆ.

ಸಮಾಧಿ ಕಟ್ಟಡ ಮತ್ತು ಸ್ಮಾರಕ: ಶಿಲೆ ಅಥವಾ ಲೋಹದಂಥ ದೀರ್ಘಕಾಲ ಬಾಳಿಕೆ ಬರುವ ಸಾಮಗ್ರಿಗಳಿಂದ ಶಿಲ್ಪನಿರ್ಮಾಣ ಸಾಧ್ಯವಾದುದರಿಂದ, ಇವು ಸಮಾಧಿ ಕಟ್ಟಡ ಮತ್ತು ಸ್ಮಾರಕಗಳ ಶಿಲ್ಪ ನಿರ್ಮಾಣಕ್ಕೆ ಯುಕ್ತ ಮಾಧ್ಯಮವಾದವು. ಈ ಪ್ರಕಾರಕ್ಕೆ ಸೇರುವ ಮೂರ್ತಿಶಿಲ್ಪವನ್ನು ಸ್ಮಾರಕಶಿಲ್ಪ ಎಂದು ಕರೆಯಲಾಗಿದೆ. ಪಾಶ್ಚಾತ್ಯ ನಾಗರಿಕತೆಗಳಲ್ಲಿ ಈ ಬಗೆಯ ಸ್ಮಾರಕ ಶಿಲ್ಪ ಪ್ರಸಿದ್ಧ ಪ್ರಮುಖ ವ್ಯಕ್ತಿಗಳನ್ನು ಅಥವಾ ಘಟನೆಗಳನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಇಟಲಿಯ ಪುನರುಜ್ಜೀವನ ಕಾಲದ ಖ್ಯಾತ ಶಿಲ್ಪಿ ಆ್ಯಂಡ್ರಿಯಾ ಡೆಲ್ ವೆರೋಷಿಯೋ ಇಟಲಿಯ ಪ್ರಸಿದ್ಧ ಸೇನಾನಿಯ ಗೌರವಸೂಚಕವಾಗಿ ಕಂಚುಶಿಲ್ಪಕೃತಿಯನ್ನು ವಿನ್ಯಾಸಗೊಳಿಸಿದ. ರಷ್ಯದಲ್ಲಿ ಬೇರೆ ಬೇರೆ ಸಂಸ್ಕøತಿಗಳಿಗೆ ಸೇರಿದ ಜನರಲ್ಲಿ ಏಕತೆಯ ಭಾವ ಮೂಡಿಸಲು 'ಮಾತೃಭೂಮಿಯಂಥ ಯುದ್ಧಸ್ಮಾರಕಶಿಲ್ಪವನ್ನು ಬಳಸಿಕೊಳ್ಳಲಾಯಿತು. ಸತ್ತವರು ಸಂತುಷ್ಟರಾಗಿರಬೇಕಾದರೆ ಅವರ ಶವಗಳನ್ನು ಕೆಡದಂತೆ ರಕ್ಷಿಸಬೇಕು ಅಥವಾ ಅವರ ಪ್ರತಿಮೆಗಳನ್ನಾದರೂ ನಿರ್ಮಿಸಬೇಕು ಎನ್ನುವುದು ಈಜಿಪ್ಟಿನ ಜನರ ನಂಬಿಕೆ. ಆದ್ದರಿಂದ ಇಲ್ಲಿ ಮನುಷ್ಯನ ಪ್ರತಿಮೆಗಳನ್ನು ರಚಿಸುವ ಕಲೆ ಬೆಳೆಯಿತು. ಭಾರತದಲ್ಲಿ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳು ಈ ವರ್ಗಕ್ಕೆ ಸೇರುತ್ತವೆ.

ಇತಿಹಾಸದುದ್ದಕ್ಕೂ ಮೂರ್ತಿಶಿಲ್ಪಕ್ಕೂ ವಾಸ್ತುಶಿಲ್ಪಕ್ಕೂ ನಿಕಟ ಬೆಸುಗೆ ಇದ್ದುದನ್ನು ಕಾಣುತ್ತೇವೆ. ಪ್ರಾಯಶಃ ಇವೆರಡೂ ಕ್ಷೇತ್ರಗಳಿಗೆ ಒಂದೇ ಬಗೆಯ ಸಾಮಗ್ರಿಯನ್ನು ಬಳಸಿದುದೂ ಇದಕ್ಕೆ ಭಾಗಶಃ ಕಾರಣವಿದ್ದಿರಬಹುದು. ಮಧ್ಯಪ್ರಾಚ್ಯ, ಭಾರತ, ಪ್ರಾಚೀನ ಗ್ರೀಸ್ ಹಾಗೂ ರೋಮ್‍ಗಳಲ್ಲಿ ಮತ್ತು ಮಧ್ಯಯುಗದ ಕಥೀಡ್ರಲುಗಳಲ್ಲಿ ಶಿಲ್ಪ ವಾಸ್ತುವಿನ ಅಂಗವಾಗಿರುವುದನ್ನು ಗುರುತಿಸಬಹುದು. ವಾಸ್ತು ಮತ್ತು ಶಿಲ್ಪಗಳ ಅನ್ಯೋನ್ಯ ಬೆಸುಗೆಯನ್ನು ಸ್ತಂಭಗಳ ಪೀಠಾಗ್ರಗಳಲ್ಲಿ, ಬಾಗಿಲುವಾಡದ ಅಲಂಕರಣ ಭಾಗಗಳಲ್ಲಿ ಹಾಗೂ ಚಾವಣಿಯ ಮೂಲೆಗಳಲ್ಲಿ ಗುರುತಿಸಬಹುದು. ಎಲ್ಲೋರದ ಕೈಲಾಸನಾಥ ದೇವಾಲಯದಂಥ ಕೆಲವು ನಿದರ್ಶನಗಳಲ್ಲಿ ಇಡೀ ವಾಸ್ತುರಚನೆಯನ್ನೇ ಬಂಡೆಯಲ್ಲಿ ಕೆತ್ತಿ ಬಿಡಿಸಿರುವುದುಂಟು.

ಗ್ರೀಕರು ತಮ್ಮ ಆಲಯಗಳಿಗೆ ಮೂರ್ತಿಶಿಲ್ಪಗಳನ್ನು ಜೋಡಿಸುವಲ್ಲಿ ವಿಶೇಷ ಗಮನ ನೀಡಿದ್ದರು. ಶಿಲ್ಪ ಕೇವಲ ಅಲಂಕರಣವಾಗಿರದೆ ವಾಸ್ತುರಚನೆಯೊಂದಿಗೆ ಸಮ್ಮಿಲಿತವಾಗಿತ್ತು. ಕಟ್ಟಡಗಳ ಪಟ್ಟಿಕೆ, ಫಲಕ, ಚಾವಣಿಯ ಇಳಿಜಾರು ಮೂಲೆ, ಸ್ತಂಭಾಗ್ರ ಮುಂತಾದೆಡೆ ಗ್ರೀಕ್ ಶಿಲ್ಪಿಗಳು ಕೆತ್ತನೆ ಕೆಲಸಗಳನ್ನು ಮಾಡಿದರು.

ಕೆಲವು ಶಿಲ್ಪಗಳು ಕಟ್ಟಡದ ಒಂದು ಭಾಗವಾಗಿ ವಾಸ್ತುವಿನ ಕಾರ್ಯವನ್ನು ನಿರ್ವಹಿಸುವುದುಂಟು. ಉದಾಹರಣೆಗೆ ಗ್ರೀಕ್ ಶಿಲ್ಪಿಗಳು ಅಥೆನ್ಸ್ ನಗರದ ಅಕ್ರಾಪೊಲಿಸ್‍ನ ಮಂಟಪವೊಂದರಲ್ಲಿ ಸ್ತ್ರೀ ಮೂರ್ತಿಗಳು ಚಾವಣಿಯನ್ನು ಹೊತ್ತಿರುವಂಥ ಶಿಲ್ಪವಿನ್ಯಾಸವಿದೆ. ಮಧ್ಯಯುಗದ ಹಲವು ಕಥೀಡ್ರಲುಗಳು ವಿಕಟ ಶಿಲ್ಪಗಳಿಂದ ಅಲಂಕೃತವಾಗಿವೆ; ಇವು ನೀರುಚಿಲುಮೆಗಳಾಗಿರುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿವೆ.

ವಾಸ್ತುವಿನಿಂದ ಸ್ವತಂತ್ರವಾದ ಶಿಲ್ಪ ಅಸಾಧಾರಣ ಕಲೆಯಾಗಿ ಬೆಳೆಯಿತು. ಶಿಲ್ಪದ ಗುಣವಿಶೇಷಗಳನ್ನು ತಿಳಿದು ಪ್ರಶಂಸಿಸಲೂ ವಿಶೇಷ ಜ್ಞಾನ ಮತ್ತು ಸಹೃದಯತೆ ಬೆಳೆಯಬೇಕಾಯಿತು. ಮೈಕೆಲೆಂಜಲೋ (16ನೆಯ ಶತಮಾನ) ಡೇವಿಡ್‍ನ ಪ್ರತಿಮೆಯನ್ನು ರೂಪಿಸಿದಾಗ, ಅದರ ಸ್ಥಾಪನೆಗೆ ಆತ ಯಾವುದೇ ನಿರ್ದಿಷ್ಟ ಸ್ಥಳವನ್ನು ಯೋಚಿಸಿರಲಿಲ್ಲ. ಕಲಾವಿದರ ಸಮಿತಿಯೊಂದು ರೂಪುಗೊಂಡು ಫ್ಲಾರೆನ್ಸಿನ ಒಂದು ಸ್ಥಳವನ್ನು ಆರಿಸಿತು.

ಕಲಾತ್ಮಕ ಅಭಿವ್ಯಕ್ತಿ : ಅನೇಕ ಶಿಲ್ಪಿಗಳು ತಮ್ಮಲ್ಲಿ ಹುದುಗಿರುವ ಸೃಜನಶೀಲ ಪ್ರತಿಭೆಯ ಅಭಿವ್ಯಕ್ತಿಗಾಗಿ ಶಿಲ್ಪರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸೌಂದರ್ಯಾರಾಧನೆ, ಆತ್ಮಸಂತೃಪ್ತಿ, ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿ ಮುಂತಾದವು ಶಿಲ್ಪಿಯ ಸಂವಹನಕ್ಕೆ ಸಂಬಂಧಿಸಿದ ಇತರ ಅಂಶಗಳು. ಶಿಲ್ಪಿಯ ಉದ್ದೇಶ ಶಿಲ್ಪದಲ್ಲಿ ವ್ಯಕ್ತವಾಗುತ್ತದೆ.

ಆಧುನಿಕ ಶಿಲ್ಪದ ಬಹುಭಾಗ ಹೊಸ ಹೊಸ ಸಾಮಗ್ರಿಗಳನ್ನು ಬಳಸಿ, ಹೊಸ ಹೊಸ ತಂತ್ರಗಳನ್ನು ರೂಪಿಸಿ ಅಳವಡಿಸಿ, ಹೊಸ ಹೊಸ ರೂಪಗಳನ್ನು ಸೃಷ್ಟಿಸಬಯಸುವ, ಶಿಲ್ಪಿಯ ಪ್ರಯೋಗಾಭೀಪ್ಸೆಯನ್ನು ಹಿಂಗಿಸಲು ನಿರ್ಮಿತವಾಗಿದೆ. ಕಲೆ ಪ್ರಕೃತಿಯ ಕೇವಲ ಅನುಕರಣೆಯಾಗದೆ ಸೃಷ್ಟ್ಯಾತ್ಮಕ ಅಂಶವನ್ನೊಳಗೊಂಡ ಕೃತಿಯಾಗಿರಬೇಕು ಎಂದು ಈ ಕಾಲದ ಶಿಲ್ಪಿ ಭಾವಿಸಿದ. ಆದ್ದರಿಂದ ಈ ಕಾಲದ ಶಿಲ್ಪಗಳಲ್ಲಿ ನಯನಾಜೂಕುಗಳಿಗಿಂತ ಸರಳತೆ ಮತ್ತು ಸಾಂಕೇತಿಕತೆ ಹೆಚ್ಚು. ನೋಡುಗರ ಕಲ್ಪನಾಶಕ್ತಿಯನ್ನು ಪ್ರಚೋದಿಸಬೇಕೆನ್ನುವುದು ಆಧುನಿಕ ಶಿಲ್ಪದ ಉದ್ದೇಶ.

ಶಿಲ್ಪಪ್ರಕಾರ : ಪೂರ್ಣ ಪ್ರಮಾಣದ ದುಂಡು ಶಿಲ್ಪಗಳು ಹೆಚ್ಚು ಪರಿಚಿತವಾದ ಪ್ರಕಾರ. ಎಲ್ಲ ಪಾಶ್ರ್ವಗಳಲ್ಲಿಯೂ ಇದನ್ನು ಕಡೆದು ರೂಪಿಸಲಾಗಿರುತ್ತದೆ; ಮುಂಭಾಗ ಹಿಂಭಾಗಗಳೆರಡನ್ನೂ ಸ್ಫುಟವಾಗಿ ಬಿಡಿಸಿರುತ್ತದೆ. ಯಾವುದೇ ಕೋನದಿಂದ ಈ ಶಿಲ್ಪಗಳನ್ನು ನೋಡುವ ಅವಕಾಶವಿರುತ್ತದೆ. ಒಮ್ಮೊಮ್ಮೆ ಒಂದು ವಿಗ್ರಹದ ಮುಂಭಾಗವನ್ನು ಸ್ಫುಟವಾಗಿ ಬಿಡಿಸಿ, ನಯಗೊಳಿಸಿ ಹೊಳಪು ನೀಡಿ ಹಿಂಭಾಗವನ್ನು ಒರಟೊರಟಾಗಿ ಕೆತ್ತಿ ಹಾಗೆಯೇ ಬಿಡುತ್ತಿದ್ದ ಉದಾಹರಣೆಗಳುಂಟು. ದುಂಡು ಶಿಲ್ಪಗಳು ಗಾತ್ರ ಪ್ರಮಾಣದಲ್ಲಿ ಬಹಳ ವೈವಿಧ್ಯಮಯವಾಗಿದೆ. ಕೆಲವು ಶಿಲ್ಪಗಳು ಜೀವ ಪ್ರಮಾಣದವು ಅಥವಾ ಅದಕ್ಕಿಂತ ದೊಡ್ಡವು; ಬೃಹನ್ಮೂರ್ತಿಗಳೂ ಇವೆ. ಸಪ್ರಮಾಣ, ಸ್ಪರ್ಶಗುಣ ತೋರುವ ಮೈವಳಿಕೆ, ಅವಕಾಶ (ಸ್ಪೇಸ್), ಗಾತ್ರ ಮುಂತಾದವು ಶಿಲ್ಪಸೌಂದರ್ಯಕ್ಕೆ ಕಾರಣವಾಗುತ್ತವೆ.

ಉಬ್ಬುಗೆತ್ತನೆ ಅಥವಾ ಉಬ್ಬು ಶಿಲ್ಪ ಇನ್ನೊಂದು ಶಿಲ್ಪಪ್ರಕಾರ. ನಾಣ್ಯಗಳಲ್ಲಿ ಉಬ್ಬಿ ಕಾಣಿಸುವ ಆಕೃತಿಗಳಂತೆ, ಉದ್ದ, ಅಗಲಗಳ ಆಕೃತಿಯನ್ನು ತೋರಿಸಿದರೂ ಆಕೃತಿಯ ಪೂರ್ಣ ದಪ್ಪವನ್ನು ಉಬ್ಬುಶಿಲ್ಪ ತೋರಿಸುವುದಿಲ್ಲ. ಉಬ್ಬು ಶಿಲ್ಪಗಳನ್ನು ಕೆತ್ತಿ ಬಿಡಿಸಬಹುದು ಅಥವಾ ಮಾದರಿ ರಚಿಸಬಹುದು. ಈಜಿಪ್ಟಿನ ಜನ ಮೊದಮೊದಲು ಬಿಡಿಸಿದ ಕೆಲವು ಉಬ್ಬು ಶಿಲ್ಪಗಳು ಕಲ್ಲಿನಲ್ಲಿ ಕೊರೆದ ರೇಖೆಗಳಿಗಿಂತ ತುಸು ಹೆಚ್ಚು ಆಳದ್ದಾಗಿದ್ದವು. ಅನೇಕ ಗ್ರೀಕ್ ಉಬ್ಬುಶಿಲ್ಪಗಳು ತಟ್ಟೆಯಾಗಿದ್ದವು. ತರುವಾಯ ಗ್ರೀಕ್ ಹಾಗೂ ರೋಮನ್ ಶಿಲ್ಪಿಗಳು ಹೆಚ್ಚು ಕಡಿಮೆ ಪೂರ್ಣರೂಪದ್ದೆನಿಸುವ ಹಾಗೆ ಉಬ್ಬುಶಿಲ್ಪಗಳನ್ನು ರಚಿಸಿದರು; ಇವು ಹಿನ್ನೆಲೆಯ ಮೈಯಿಂದ ಬಹುಮಟ್ಟಿಗೆ ಬೇರ್ಪಟ್ಟಂತೆ ತೋರುತ್ತಿದ್ದವು. ಜೇಡಿಮಣ್ಣು ಅಥವಾ ಮೇಣದಲ್ಲಿ ಶಿಲ್ಪ ಅಥವಾ ಉಬ್ಬು ಶಿಲ್ಪಗಳನ್ನು ರಚಿಸಿ ಕಂಚಿನಲ್ಲಿ ಎರಕ ಹುಯ್ಯುವುದರಿಂದ ಲೋಹಶಿಲ್ಪವನ್ನು ನಿರ್ಮಿಸಬಹುದಾಗಿತ್ತು.

ಶಿಲ್ಪ ತಂತ್ರ ವಿಧಾನ : ಕೆತ್ತನೆ ಹಾಗೂ ಮಾದರಿ ಶಿಲ್ಪ ರಚನೆ (ಮಾಡೆಲಿಂಗ್) ಮೂರ್ತಿಶಿಲ್ಪದ ಮೂಲ ತಂತ್ರಗಳು. ಗಟ್ಟಿಯಾದ ಮರ, ಕಲ್ಲು ಅಥವಾ ಅಂಥ ಬೇರೆ ಸಾಮಗ್ರಿಗಳನ್ನು ಆರಿಸಿ ರಚನೆಯ ಕೆಲಸಕ್ಕೆ ಶಿಲ್ಪಿ ಕೈಹಾಕುತ್ತಾನೆ. ತನ್ನ ಮನೋಚಿತ್ರಕ್ಕೆ ಅನುಗುಣವಾದ ರೂಪ ದೊರೆಯುವ ತನಕ ಕೆತ್ತನೆ ಕೆಲಸದಲ್ಲಿ ನಿರತನಾಗುತ್ತಾನೆ. ಆದರೆ ಮಾದರಿ ಶಿಲ್ಪ ರಚನೆಯಲ್ಲಿ ಶಿಲ್ಪಿಯು ಜೇಡಿಮಣ್ಣು, ಮೇಣ ಅಥವಾ ಮೆತ್ತಿಕೊಳ್ಳುವ ಗುಣದ ಇತರ ಮೆದು ಪದಾರ್ಥಗಳನ್ನು ಸೇರಿಸಿ ಕೃತಿಯನ್ನು ರಚಿಸುತ್ತಾನೆ. ಈ ಸಾಮಗ್ರಿಗಳು ಬೇಗ ಮುರಿದುಹೋಗುವಂಥವು ಹಾಗೂ ಹಾಳಾಗುವಂಥವು. ಪ್ರಾಚೀನಕಾಲದಿಂದಲೂ ಶಿಲ್ಪಿಗಳು ಮಣ್ಣಿನ ಮೂರ್ತಿಗಳನ್ನು ಮಾಡಿ, ಅವನ್ನು ಸುಟ್ಟು ಗಟ್ಟಿಗೊಳಿಸುತ್ತಿದ್ದರು. ಇವನ್ನು ಸುಡಾವೆ ಮಣ್ಣಿನ ಶಿಲ್ಪಗಳೆಂದು (ಟೆರಕೊಟ)ಕರೆದಿದೆ. ಶಿಲ್ಪ ಹೆಚ್ಚು ಬಾಳಿಕೆ ಬರುವಂತೆ ಮಾಡುವ ವಿಧಾನವೆಂದರೆ ಲೋಹ ಅಥವಾ ಇತರ ಗಟ್ಟಿ ಪದಾರ್ಥದಿಂದ ಎರಕ ಹೊಯ್ಯುವುದು. ಇದರಲ್ಲಿ ಕಲಾಕಾರ ಮೊದಲು ತನ್ನ ಕೃತಿಯ ಅಚ್ಚನ್ನು ತಯಾರಿಸಿಕೊಳ್ಳುವನು. ಇದರಿಂದ ಪಡಿಯಚ್ಚುಗಳನ್ನು ಪಡೆಯಲುಸಾಧ್ಯ.

ರೂಪ ಮತ್ತು ನಿರೂಪಣೆ : ವರ್ಣಚಿತ್ರಗಳಲ್ಲಿ ಕಂಡುಬರುವ ಹಲವು ಅಂಶಗಳು ಶಿಲ್ಪದಲ್ಲಿಯೂ ಕಂಡುಬರುತ್ತವೆ. ಶಿಲ್ಪದಲ್ಲಿ ರಾಶಿ, ಗಾತ್ರ, ಅವಕಾಶ, ಚಲನೆ, ಸ್ಪರ್ಶಗುಣ ತೋರುವ ಮೈವಳಿಕೆ, ಬೆಳಕು ನೆಳಲು ವಿನ್ಯಾಸ ಹಾಗೂ ಬಣ್ಣಗಳು ಗಮನಿಸಬೇಕಾದ ಮುಖ್ಯ ಅಂಶಗಳು. ಮೊದಲೇ ಹೇಳಿದಂತೆ ವರ್ಣಚಿತ್ರಕ್ಕೆ ಎರಡು ಆಯಾಮಗಳು ಮಾತ್ರ ಇದ್ದರೆ ಮೂರ್ತಿಶಿಲ್ಪಕ್ಕೆ ಮೂರು ಆಯಾಮಗಳು ಇರುತ್ತವೆ.

ಈಜಿಪ್ಟ್ ಮತ್ತು ಗ್ರೀಸಿನ ಶಿಲ್ಪಿಗಳು ಮೂರ್ತಿಶಿಲ್ಪಗಳ ಹೊರಮೈ, ತುಟಿ ಕಣ್ಣು ಹಾಗೂ ಕೂದಲುಗಳಿಗೆ ಸ್ವಾಭಾವಿಕವೆನ್ನಿಸುವ ಹಾಗೆ ಬಣ್ಣ ಬಳಿಯುವ ಪ್ರಯತ್ನ ಮಾಡಿದರು. ಆದರೆ ಬಣ್ಣಗಳು ಕ್ರಮೇಣ ಇಲ್ಲವಾದವು. ಆಧುನಿಕ ಶಿಲ್ಪಿಗಳು ಶಿಲ್ಪ ಮತ್ತು ವರ್ಣಗಳ ಸಾಂಗತ್ಯ ಸಾಧಿಸುವ ಪ್ರಯತ್ನ ನಡೆಸಿದ್ದಾರೆ.

ಶಿಲ್ಪಿ : ಶಿಲಾಯುಗದ ಜನ ಮರ ಮತ್ತು ಮೂಳೆಗಳನ್ನು ಕೆತ್ತಲು ಫ್ಲಿಂಟ್ ಶಿಲೆಯಿಂದ ಮಾಡಿದ ಚಾಕುಗಳನ್ನು ಬಳಸಿದರು. ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಮನುಷ್ಯರ ಗೀರು ಚಿತ್ರಗಳನ್ನು ತನ್ನ ಒರಟು ಉಪಕರಣಗಳಿಂದ ಕೆತ್ತಿದ್ದುಂಟು. ಮಾನವನ ಇತಿಹಾಸದಲ್ಲಿ ಕಲೆ ಕಾಲಿಟ್ಟಿದ್ದು ಈ ರೂಪದಲ್ಲಿ. ಕಲ್ಲಿನ ಆಕೃತಿಗಳನ್ನು ಕೆತ್ತುವ ಕಲೆ ಮೊದಲ ಹಂತ. ಕ್ರಮೇಣ ಉತ್ತಮ ಹತಾರಗಳು ತಯಾರಾದಂತೆ ಶಿಲ್ಪದಲ್ಲಿ ನಯ, ನೈಜತೆ ಹೆಚ್ಚಿದವು.

ಗಟ್ಟಿಯಾದ ಕಲ್ಲುಬಂಡೆಗಳನ್ನು ಜಾಣ್ಮೆಯಿಂದ ಕತ್ತರಿಸಿ ನಯಗೊಳಿಸಲು ಸರಳವಾದ ಕಲ್ಲಿನ ಉಪಕರಣಗಳನ್ನು ಪ್ರಾಚೀನ ಈಜಿಪ್ಟಿನ ಶಿಲ್ಪಿಗಳು ಬಳಸಿದರು. ಕಲ್ಲುದಿಮ್ಮಿಯ ಮೇಲೆ ರೇಖಾಚಿತ್ರವೊಂದನ್ನು ಬಿಡಿಸಿ, ತರುವಾಯ ಮೂರ್ತಿಯನ್ನು ಕೆತ್ತಿ ಪೂರ್ಣಗೊಳಿಸುತ್ತಿದ್ದರು. ಮರಳು, ನೀರು ಮತ್ತು ಸಮೆಗಲ್ಲುಗಳನ್ನು ಬಳಸಿ ಉಜ್ಜಿ ಶಿಲ್ಪಕೃತಿಗೆ ನಯ ಮತ್ತು ಹೊಳಪು ಬರುವಂತೆ ಮಾಡುತ್ತಿದ್ದರು. ಇದೇ ರೀತಿಯಲ್ಲಿ ಮರದ ಮೂರ್ತಿಗಳನ್ನೂ ತಯಾರಿಸುತ್ತಿದ್ದರು. ಕಲ್ಲಿಗಿಂತ ಮರ ಮೆದುವಾದ ಸಾಮಗ್ರಿಯಾದುದರಿಂದ ಕೆತ್ತನೆ ಸುಲಭವಾಗುತ್ತಿತ್ತು, ಬೇಗ ಪೂರ್ಣಗೊಳ್ಳುತ್ತಿತ್ತು. ಮೂರ್ತಿಗೆ ತೆಳುವಾಗಿ ಪ್ಲಾಸ್ಟರ್ ಅಥವಾ ಬಿಟ್ಯುಮೆನ್ ಲೇಪಮಾಡಿ ಅನಂತರ ಉಜ್ವಲ ಬಣ್ಣಗಳನ್ನು ಬಳಿಯುತ್ತಿದ್ದರು. ಕೆಲವೊಮ್ಮೆ ಬಂಗಾರದ ಮೆರುಗು ನೀಡುತ್ತಿದ್ದರು. ಕೆತ್ತನೆಯ ಮೊದಲಸ್ತರದ ಒರಟು ಕೆಲಸವನ್ನು ತರಬೇತಿ ಪಡೆಯುವ ಶಿಕ್ಷಣಾರ್ಥಿಗಳು ಮಾಡಿದರೆ, ಎರಡನೆಯ ಸ್ತರದ ತಿದ್ದಿ ತೀಡುವ ಸೂಕ್ಷ್ಮ ಕೆಲಸವನ್ನು ಕುಶಲ ಶಿಲ್ಪಿಗಳು ಮಾಡುತ್ತಿದ್ದರು. ಮುಖ್ಯ ಶಿಲ್ಪಿ ಒಂದು ವಿಧದಲ್ಲಿ ಎಲ್ಲ ಕೆಲಸಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ.

ಈಜಿಪ್ಟಿನ ಕೆತ್ತನೆಯ ವಿಧಾನವನ್ನೇ ಮೆಸಪೊಟೇಮಿಯ, ಅಸ್ಸೀರಿಯ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳಲ್ಲಿ ಅನುಸರಿಸಲಾಯಿತು. ಮಧ್ಯ ಪ್ರಾಚ್ಯದ ಶಿಲ್ಪಿಗಳು ಅಕ್ಕಸಾಲಿಗರ ಕೆಲಸಕ್ಕೆ ಸಮಾನವಾದ ಸೂಕ್ಷ್ಮ ಕೆತ್ತನೆ ಕೆಲಸವನ್ನು ಮಾಡಿದರು. ಶಿಲ್ಪಿ ಮೊದಲು ಮರದ ಮಾದರಿ ಶಿಲ್ಪವನ್ನು ಕೆತ್ತಿ. ತರುವಾಯ ಅದಕ್ಕೆ ಅನುರೂಪವಾಗಿ ಚಿನ್ನದ ಅಥವಾ ಬೆಳ್ಳಿಯ ಹಾಳೆಗಳನ್ನು ಬಳಸಿ ಕೃತಿ ರಚಿಸುತ್ತಿದ್ದ. ಸಣ್ಣ ಪ್ರಮಾಣದ ಶಿಲ್ಪವಸ್ತುಗಳು ಅರಮನೆಯ ಅಲಂಕರಣಗಳಾದವು.

ಗ್ರೀಕ್ ಶಿಲ್ಪಿಗಳು ಈಜಿಪ್ಟಿನ ಹಾಗೂ ಏಷ್ಯ ಮೈನರ್ ಪ್ರದೇಶದ ನಾಗರಿಕತೆಗಳ ಸಂಪರ್ಕದಿಂದ ಕಲ್ಲು ಕೆಲಸದ ತಂತ್ರ ವಿಧಾನಗಳನ್ನು ಕಲಿತುಕೊಂಡರು. ಕ್ರಿ.ಪೂ. 500ರ ಹೊತ್ತಿಗೆ ಗ್ರೀಕರು ಬಹುಪಾಲು ಮೂರ್ತಿಗಳನ್ನು ಹಾಲು ಬಣ್ಣದ ಅಮೃತಶಿಲೆಯಲ್ಲಿ ರೂಪಿಸುತ್ತಿದ್ದರು. ಕೆತ್ತನೆ ಕೆಲಸಕ್ಕೆ ಅವರು ಕಂಚಿನ ಮತ್ತು ಕಬ್ಬಿಣದ ಉಪಕರಣಗಳನ್ನು ಬಳಸಿದರು. ಅಮೃತಶಿಲೆಯ ದಿಮ್ಮಿಯ (ಬ್ಲಾಕ್) ಮೇಲೆ ಮೂರ್ತಿಯ ರೇಖಾಚಿತ್ರ ಬಿಡಿಸಿ, ಅದಕ್ಕನಾಗುಣವಾಗಿ ಉಳಿಯಿಂದ ಕೆತ್ತಿ ಸ್ಥೂಲ ಶಿಲ್ಪವನ್ನು ಕಡೆದು, ತರುವಾಯ ಮೊನೆಯುಳ್ಳ ಬಾಣಗಳಿಂದ ಸೂಕ್ಷ್ಮ ಕೆತ್ತನೆ ಮಾಡಿದರು. ಮೂರ್ತಿಯನ್ನು ತಿದ್ದಿ ತೀಡುತ್ತ ಅಂತಿಮವಾಗಿ ಕಣ್ಣು ತುಟಿ ಬಾಯಿಗಳನ್ನು ಬಿಡಿಸಲು ತ್ರಿಕೋಣಾಕಾರದ ಮೊನೆಯುಳ್ಳ ಸಾಧನವನ್ನು ಬಳಸಿದರು. ಮೂರ್ತಿಯ ಉಡುಪಿನ ನೆರಿಗೆ ವಿನ್ಯಾಸಗಳನ್ನು ಬಿಡಿಸಲು ವಿಶೇಷ ಉಪಕರಣಗಳಿದ್ದವು.

ದೇಗುಲಗಳ ಅಲಂಕರಣಕ್ಕೆ ಗೃಹಾಲಂಕಾರ ಮತ್ತು ಉಪಯೋಗಕ್ಕೆ ಚಿಕ್ಕಮೂರ್ತಿಗಳಿಂದ ಬೃಹನ್ಮೂರ್ತಿಗಳವರೆಗೆ ಸುಡಾವೆ ಮಣ್ಣಿನಲ್ಲಿ ಅನೇಕ ಶಿಲ್ಪಗಳನ್ನು ಗ್ರೀಕರು ರೂಪಿಸಿದರು. ಮುರಿದು ಹೋಗದಂತೆ ಬೃಹತ್ ಶಿಲ್ಪ ನಿರ್ಮಿಸಿ ಸುಡುವ ರೀತಿ ಅವರಿಗೆ ಸುಪರಿಚಿತವಾಗಿತ್ತು. ಪ್ರಾಣಿ ಮತ್ತು ಮಾನವ ಶಿಲ್ಪಗಳನ್ನು ಬೃಹತ್ ಪ್ರಮಾಣದಲ್ಲಿ ಎರಕ ಹೊಯ್ದು ನಿರ್ಮಿಸಲು ಅವರು ಈ ಜ್ಞಾನವನ್ನು ಬಳಸಿಕೊಂಡರು.

ರೋಮನ್ ಶಿಲ್ಪಿಗಳು ವ್ಯಕ್ತಿಪ್ರತಿಮೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿದರು; ಲುಸಿಯಸ್ ವೆರಸ್‍ನ ಪ್ರತಿಮೆ ಇದಕ್ಕೊಂದು ನಿದರ್ಶನ. ಈ ವಿಗ್ರಹದ ಅಪಾರ ಬೇಡಿಕೆಯ ಪೂರೈಕೆಗಾಗಿ ಎದೆಮಟ್ಟದ ಈ ಪ್ರತಿಮೆಯ ತಲೆಗೂದಲು, ಕಣ್ಣು, ಕಿವಿ, ಮೂಗು, ಬಾಯಿಗಳ ಅಳತೆಗೆ ಒಂದು ನಿರ್ದಿಷ್ಟ ಮಾನದಂಡವನ್ನು ಅಳವಡಿಸಿಕೊಂಡರು. ಒಂದು ಮಾದರಿಶಿಲ್ಪವನ್ನು ಅನುಕರಿಸುವುದಕ್ಕೆ ಬದಲು ಈ ಪ್ರತಿಮೆಯ ಅಂಗಾಂಗಗಳನ್ನು ಕರಾರುವಾಕ್ಕಾಗಿ ಕೆತ್ತುವುದನ್ನು ಕಲಾ ವಿದ್ಯಾರ್ಥಿಗಳು ಕಲಿಯಬೇಕಾಯಿತು. ನಿರ್ದಿಷ್ಟ ಪ್ರಮಾಣದ ಅಂಗಾಂಗಗಳನ್ನು ಕೆತ್ತಲು ಕಲಿತ ಅನಂತರ ವಿದ್ಯಾರ್ಥಿಗಳು ಯಾವುದೇ ವ್ಯಕ್ತಿಯನ್ನು ಹೋಲುವ ರೀತಿಯಲ್ಲಿ ಅವನ್ನು ತಿದ್ದಿ ತೀಡಲು ಕಲಿಯುತ್ತಿದ್ದರು. ಇದರಲ್ಲಿ ಶಿಲ್ಪವಸ್ತುವೇ ಮಾದರಿ (ಮಾಡೆಲ್) ಕೂಡ. 1940ರ ತನಕ ಕಲಾಶಾಲೆಗಳು ಈ ಬೋಧನ ವಿಧಾನವನ್ನು ಅನುಸರಿಸುತ್ತಿದ್ದವು. ರಷ್ಯದಲ್ಲಿ ಈಗಲೂ ಈ ವಿಧಾನವೇ ರೂಢಿಯಲ್ಲಿರುವುದಾಗಿ ತಿಳಿದುಬರುತ್ತದೆ.

ಪ್ರಾಚೀನ ಶಿಲ್ಪಿಗಳು ಅನುಸರಿಸಿದ ತಂತ್ರ ವಿಧಾನಗಳನ್ನು ಮಧ್ಯಯುಗೀನ ಮತ್ತು ಪುನರುಜ್ಜೀವನ ಕಾಲದ ಶಿಲ್ಪಿಗಳೂ ಅನುಸರಿಸಿದರು ಹಾಗೂ ಅವರು ಬಳಸಿದ ಉಪಕರಣಗಳನ್ನು ಬಳಸಿದರು; ಮರದ ಕೆತ್ತನೆ ಕೆಲಸಕ್ಕೆ ವಿಶೇಷವಾಗಿ ರೂಪಿಸಲಾದ ಸಲಕರಣೆಗಳನ್ನು ಉಪಯೋಗಿಸಿದರು. ಇದರಿಂದಾಗಿ ತುಂಬ ಸೂಕ್ಷ್ಮಚಿತ್ತಾರ ಬಿಡಿಸಲು ಸಾಧ್ಯವಾಯಿತು. 'ಗಿಲ್ಡ್ ಎಂದು ಕರೆಯಲಾದ ಸುವ್ಯವಸ್ಥಿತ ಕಾರ್ಯಾಗಾರಗಳಲ್ಲಿ ಕಲಾಕಾರರು ಕೆಲಸಮಾಡಿದರು. 15-16ನೆಯ ಶತಮಾನಗಳಲ್ಲಿ ಪುನರುಜ್ಜೀವನ ಕಾಲದ ಶಿಲ್ಪಿಗಳು ಸಣ್ಣ ಪ್ರಮಾಣದ ಕಂಚಿನ ಶಿಲ್ಪಗಳನ್ನು ನಿರ್ಮಿಸಿದರು. ಬೃಹತ್ ಪ್ರಮಾಣದಲ್ಲಿ ಲೋಹ ಶಿಲ್ಪರಚನೆಗೆ ಕಂಚಿನಲ್ಲಿ ಎರಕಹೊಯ್ಯುವ ಕಲೆಯನ್ನು ಇವರು ಪುನರನ್ವೇಷಿಸಿದರು. ಬೃಹದ್ಗಾತ್ರದ ಅಶ್ವಾರೋಹಿ ಲೋಹಶಿಲ್ಪಗಳನ್ನು ತಯಾರಿಸಲು ಇದರಿಂದ ಸಾಧ್ಯವಾಯಿತು. ಮೂಲ ಮಾದರಿಗಳನ್ನು ವಿಸ್ತರಿಸಿ ದೊಡ್ಡದಾಗಿ ಮಾಡಲು ಯಂತ್ರಗಳು ರೂಪುಗೊಂಡು ಅಭಿವೃದ್ಧಿ ಹೊಂದಿದವು. ಸಂಪೂರ್ಣವಾಗಿ ಯಂತ್ರಗಳಿಂದಲೇ ಶಿಲಾಶಿಲ್ಪಗಳನ್ನು ಪ್ರತಿಮಾಡುವ ಮತ್ತು ದೊಡ್ಡದಾಗಿ ಮಾಡುವ ಕೆತ್ತನೆ ಯಂತ್ರಗಳ ಬೆಳೆವಣಿಗೆಗೆ ಇವು ಕಾರಣವಾದವು. 18-19ನೆಯ ಶತಮಾನಗಳಲ್ಲಿ ಈ ಕೆತ್ತನೆ ಯಂತ್ರಗಳ ಬಳಕೆ ಸ್ವಲ್ಪ ಕಾಲ ನೆಡೆಯಿತು.

ಪುನರುಜ್ಜೀವನ ಕಾಲದ ಶಿಲ್ಪಿಗಳಂತೆ 19ನೆಯ ಶತಮಾನದ ಶಿಲ್ಪಿಗಳು ಬೃಹತ್ ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿ ಸಹಾಯಕರ ನೆರವಿನಿಂದ ಕೆಲಸ ಮಾಡಿದರು: ಬೃಹತ್ ಪ್ರಮಾಣದಲ್ಲಿ ಕಂಚಿನ ಶಿಲ್ಪಗಳ ಉತ್ಪಾದನೆಗೆ ಔದ್ಯಮಿಕವಾಗಿ ಅಭಿವೃದ್ಧಿ ಹೊಂದಿದ ಮರಳಚ್ಚಿನ (ಸ್ಯಾಂಡ್ ಮೌಲ್ಡ್) ತಂತ್ರವನ್ನು ಅನುಸರಿಸಲಾಯಿತು. 20ನೆಯ ಶತಮಾನದ ಮೊದಲ ದಶಕಗಳಲ್ಲಿ ಉಂಟಾದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳಿಂದಾಗಿ ಆಧುನಿಕ ಶಿಲ್ಪಿಗಳು ಗತಕಾಲದಲ್ಲಿ ಬಳಸಿದ ಶಿಲ್ಪ ತಂತ್ರ ವಿಧಾನಗಳನ್ನು ರೂಪಿಸಿ ಅಳವಡಿಸಿಕೊಂಡು ತಮ್ಮ ರಚನೆಯನ್ನು ಮಾಡಬೇಕಾಯಿತು. ಅನೇಕ ಶಿಲ್ಪಿಗಳು ಇಂದು ಕಾರ್ಯಾಗಾರಗಳಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಏಕಾಂಗಿಯಾಗಿ ಶಿಲ್ಪನಿರ್ಮಾಣದಲ್ಲಿ ತೊಡುಗುತ್ತಾರೆ. ಇವರಲ್ಲಿ ಹೆಚ್ಚಿನವರು ಕಲಾಶಾಲೆಗಳಲ್ಲಿ ಶಿಕ್ಷಣ ತರಬೇತಿ ಪಡೆದವರು.

ಮರ ಅಥವಾ ಕಲ್ಲಿನಲ್ಲಿ ಕೆಲಸಮಾಡುವ ಶಿಲ್ಪಿಗಳು ಈಗೀಗ ಕಡಿಮೆಯಾಗುತ್ತಿದ್ದಾರೆ. ಇದು ಕಷ್ಟದ ಕೆಲಸ ಮತ್ತು ಪೂರ್ಣಗೊಳ್ಳಲು ಬೇಕಾಗುವ ಕಾಲವೂ ಹೆಚ್ಚು. ಅಲ್ಲದೆ, ತೂಕವಾದ ಮತ್ತು ದುಬಾರಿಯಾದ ಶಿಲ್ಪ ಸಾಮಗ್ರಿಗೇ ಹೆಚ್ಚು ಖರ್ಚುಬೀಳುತ್ತದೆ. ಮಾದರಿ ರಚನೆ ಅಥವಾ ಮಾಡೆಲಿಂಗ್ ಹೆಚ್ಚು ವೇಗವಾಗಿ ಮಾಡಬಹುದು. ಈ ವಿಧಾನದಲ್ಲಿ ಶಿಲ್ಪರೂಪವನ್ನು ಹೇಗೆ ಬೇಕಾದರೂ ವಿನ್ಯಾಸಗೊಳಿಸಲು ಸಾಧ್ಯ. ಮಾಡೆಲರ್ ಮೆದು ಸಾಮಗ್ರಿಗಳನ್ನು ಮೇಣ, ನೆನೆಸಿದ ಪ್ಲಾಸ್ಟರ್, ಜೇಡಿಮಣ್ಣು, ಪ್ಲಾಸ್ಟಿಸೇನ್ (ಸಿಂಥೆಟಿಕ್ ಜೇಡಿಮಣ್ಣು) ಇತ್ಯಾದಿಗಳನ್ನು ಬಳಸುತ್ತಾನೆ. ಶಿಲ್ಪಿಯ ಪ್ರಧಾನ ಉಪಕರಣವೆಂದರೆ ಆತನ ಕೈಗಳೇ. ಆದರೂ ಅಂಚುಗಳನ್ನು ಸವರಿ ಒಪ್ಪಗೊಳಿಸುವ, ಆಕಾರ ನೀಡುವ ಕೆಲಸಗಳಿಗೆ ಆತ ಉಪಕರಣಗಳನ್ನು ಬಳಸಿಕೊಳ್ಳುತ್ತಾನೆ. ಮೆದುಕಬ್ಬಿಣದ ಶಿಲ್ಪ ರಚನೆಯಲ್ಲಿ ಚಿಕ್ಕಮೂರ್ತಿಗಳಿಗೆ ತಂತಿಯನ್ನು ಮತ್ತು ದೊಡ್ಡ ಮೂರ್ತಿಗಳಿಗೆ ಮರ ಅಥವಾ ಲೋಹದ ಕೊಳವೆಯನ್ನು ಬಳಸುತ್ತಾರೆ. ಶಿಲ್ಪಕೃತಿಯು ಹೆಚ್ಚು ಬಾಳಿಕೆ ಬರಲು ಎರಕ ಹೊಯ್ಯಬೇಕು ; ಇದಕ್ಕೆ ವಿಶೇಷ ಪರಿಣತಿ ಆವಶ್ಯ. ಅಲ್ಲದೆ ಹೆಚ್ಚು ವೆಚ್ಚ ತಗಲುತ್ತದೆ. ಆದ್ದರಿಂದ ಹೆಚ್ಚಿನವರು ಮಾದರಿ ಶಿಲ್ಪ ರೂಪಿಸಿ, ಫೌಂಡ್ರಿಗೆ ಒಯ್ದು ಕಲಾಕಾರನ ನೇತೃತ್ವದಲ್ಲಿ ವಿಸ್ತøತ ಪ್ರತಿರೂಪವನ್ನು ಪಡೆದುಕೊಳ್ಳುತ್ತಾರೆ. ಎರಕ ಕೆಲಸದಲ್ಲಿಯ ಹಲವು ತೊಂದರೆಗಳಿಂದಾಗಿ ಅನೇಕ ಶಿಲ್ಪಿಗಳು ಕೈಗಳಿಂದಲೇ ಲೋಹಶಿಲ್ಪಗಳನ್ನು ನಿರ್ಮಿಸುತ್ತಾರೆ. ಇದಕ್ಕೆ ಅವರು ವಿದ್ಯುಚ್ಚಾಪ ಹಾಗೂ ಅನಿಲಚಾಲಿತ ಬೆಸುಗೆಯ ಉಪಕರಣಗಳನ್ನು ಬಳಸುತ್ತಾರೆ. ಇದರಿಂದ ಲೋಹದ ಹಾಳೆ ಕತ್ತರಿಸಿ, ಬೇಕಾದ ಆಕೃತಿ, ರೂಪಿಸಿ ಬೆಸುಗೆ ಹಾಕಿ ಸೇರಿಸಲು ಅನುಕೂಲವಾಗಿದೆ. ತಂತಿ, ಪೈಪು, ಲೋಹದ ಹಾಳೆ, ಮುರಿದ ಮೋಟರು ಅವಶೇಷಗಳಿಂದ ಶಿಲ್ಪಕೃತಿಗಳನ್ನು ರೂಪಿಸಲು ಈಗ ಸಾಧ್ಯವಾಗಿದೆ. ಸಿದ್ಧ ಸಾಮಗ್ರಿಗಳನ್ನು ಆರಿಸಿಕೊಂಡು ಅವನ್ನು ಶಿಲ್ಪಕೃತಿಯಾಗಿ ಜೋಡಿಸುವುದೂ ಉಂಟು. ಉಕ್ಕಿನ ಬಳೆ, ಬೋಲ್ಟು, ರಟ್ಟು, ಗಾಜು, ಬಟ್ಟೆ, ಪ್ಲಾಸ್ಟಿಕ್ ಇತ್ಯಾದಿ ವಿವಿಧ ಬಗೆಯ ಸಾಮಗ್ರಿಗಳಿಂದ, ಗರಗಸ, ಕೊರೆಯುವ ಸಾಧನ, ಸುತ್ತಿಗೆ ಮುಂತಾದ ಸಾಧನಗಳನ್ನು ಬಳಸಿ ಶಿಲ್ಪ ನಿರ್ಮಾಣಕಾರ್ಯ ನಡೆದಿದೆ. ಮೋಟರ್ ಚಾಲಿತ ಉಪಕರಣ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಬೇಕಾದ ಆಕಾರ, ಗಾತ್ರ ಹಾಗೂ ವರ್ಣಗಳನ್ನು ಪಡೆಯಲು ಈಗ ಸಾಧ್ಯವಾಗಿದೆ.

ಮೂರ್ತಿಶಿಲ್ಪದ ಬೆಳೆವಣಿಗೆ, ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದೇಶದಲ್ಲಿ ಯಾವ ಬಗೆಯಲ್ಲಿ ನಡೆಯಿತು ಎಂಬ ಸಂಗತಿಗಳ ಸ್ಥೂಲ ಸಮೀಕ್ಷೆ ಈ ಮುಂದೆ ಇದೆ.

ಪ್ರಾಗೈತಿಹಾಸಿಕ ಶಿಲ್ಪ : ಶಿಲಾಯುಗದ ಮನುಷ್ಯ ಜೀವಂತ ಪ್ರಾಣಿರೂಪಗಳನ್ನು ಗುರುತಿಸಿ, ಮೂಳೆ, ಕೊಂಬು ಮತ್ತು ಬಂಡೆಗಳ ಮೇಲೆ ಅವನ್ನು ಕೆತ್ತಿ ಬಿಡಿಸುವ ಪ್ರಯತ್ನಮಾಡಿದ. ಸಿಸಿಲ್‍ದ್ವೀಪದ ಮಾಲೆರ್ಮೊ ಪ್ರಾಂತದ ಎಡೈರಾ ಗವಿಯಲ್ಲಿ ಒಂದು ಬಂಡೆಗೋಡೆಯ ಮೇಲೆ ಮೊನಚುಗಲ್ಲಿಂದ ಗೀರಿ ಕೆಲವು ಮಾನವಾಕೃತಿಗಳನ್ನು ಬಿಡಿಸಲಾಗಿದೆ. ಸುಣ್ಣಕಲ್ಲೊಂದರಲ್ಲಿ ಕೊರೆದ ನಾಲ್ಕಂಗುಲ ಎತ್ತರದ ಒಂದು ಶಿಲ್ಪ ಆಸ್ಟ್ರಿಯದಲ್ಲಿ ಲಭ್ಯವಾಗಿದೆ. ಇದು ಸು. 30,000 ವರ್ಷಗಳಷ್ಟು ಹಿಂದಿನದು. ಒಂದು ಸಮೆಗಲ್ಲಿನ ನೈಜ ಆಕೃತಿ, ಉಬ್ಬುತಗ್ಗುಗಳನ್ನು ಬಳಸಿಕೊಂಡು ಸ್ತ್ರೀರೂಪವನ್ನು ಮೂಡಿಸಿದೆ. ವಿಲೆನ್‍ಡಾರ್ಫ್ ಎಂಬ ಸ್ಥಳದಲ್ಲಿ ಈ ಶಿಲ್ಪ ಸಿಕ್ಕಿರುವುದರಿಂದ ಇದಕ್ಕೆ ವಿಲೆನ್‍ಡಾರ್ಫ್ ವೀನಸ್ ಎಂಬ ಹೆಸರು ಬಂದಿದೆ. ಈ ಮೂರ್ತಿಯ ದುಂಡುಮುಖದಲ್ಲಿ ಕಣ್ಣು, ಬಾಯಿ, ಮೂಗುಗಳಿಲ್ಲ; ಆದರೆ ಮಾತೃತ್ವ ಸೂಚಕವಾದ ತುಂಬುಸ್ತನಗಳು, ದೊಡ್ಡ ಹೊಟ್ಟೆ, ತುಂಬು ತೊಡೆಗಳು-ಈ ಅಂಗಾಂಗಗಳಿವೆ. ಇದು ಮಾತೃದೇವತೆ ಶಿಲ್ಪವಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಡೊರ್ಡೋನ್ ನದಿ ಕಣಿವೆಯ ಲಾಸೆಲ್ ಎಂಬಲ್ಲಿ ಇದೇ ಬಗೆಯ ಉಬ್ಬುಶಿಲ್ಪ ಕಂಡುಬಂದಿದೆ. ಚೆಕೊಸ್ಲೊವಾಕಿಯಾದ ಒಂದು ಗವಿಯಲ್ಲಿ 20,000 ವರ್ಷ ಪೂರ್ವದ ಸ್ತ್ರೀಶಿಲ್ಪ ಕಾಣಸಿಗುತ್ತದೆ.

ಈ ಕಾಲದ ಶಿಲ್ಪವಸ್ತುಗಳು ಕೆಲವೇ ಇದ್ದರೂ ಅವಕ್ಕೆ ಯಾವುದೋ ಮಾಂತ್ರಿಕ ಮಹತ್ವ ಇತ್ತೆಂದು ತೋರುತ್ತದೆ. ಕೆಲವು ಪ್ರಾಣಿಶಿಲ್ಪಗಳು, ಆ ಕಾಲದ ಬೇಟೆಗಾರರು ಕೊಂದ ಪ್ರಾಣಿಗಳನ್ನು ಪ್ರತಿನಿಧಿಸುತ್ತವೆ. ಸುಡಾವೆ ಮಣ್ಣಿಂದ ಮಡಿಕೆ ಕುಡಿಕೆಗಳನ್ನು ಮಾಡುವ ರೀತಿಯನ್ನು ಅರಿತ ತರುವಾಯ ಪ್ರ್ರಾಗೈತಿಹಾಸಿಕ ಜನ ಇದೇ ತಂತ್ರವನ್ನು ಅನುಸರಿಸಿ ಚಿಕ್ಕ ಮೂರ್ತಿಗಳನ್ನು ತಯಾರಿಸಿದರು. ಈ ಬಗೆಯ ಮೂರ್ತಿಗಳು ಈಜಿಪ್ಟ್, ಏಷ್ಯಮೈನರ್, ಮೆಸಪೊಟೇಮಿಯ ಮತ್ತು ಸಿಂಧೂ ಕಣಿವೆಗಳಲ್ಲಿ ದೊರೆತಿವೆ. ಪ್ರಾಣಿಗಳ ಕೋಡು ಅಥವಾ ಕುತ್ತಿಗೆ, ದೇವತೆಯ ವಕ್ಷಸ್ಥಳ ಮತ್ತು ಜಘನ ಭಾಗಗಳಿಗೆ ಈ ಕಾಲದ ಶಿಲ್ಪಿಗಳು ಒತ್ತುನೀಡಿದರು. ಕ್ರಿ.ಪೂ. ಸು. 3ನೆಯ ಸಹಸ್ರಮಾನದಿಂದ ಪ್ರಾಚೀನ ನಾಗರಿಕತೆಗಳಲ್ಲಿ ಅನೇಕ ಸುಂದರ ಮೂರ್ತಿಶಿಲ್ಪ ಕೃತಿಗಳು ಸೃಷ್ಟಿಯಾದವು. ಕಲ್ಲು ಲೋಹ ಮುಂತಾದ ಗಟ್ಟಿ ಸಾಮಗ್ರಿಗಳಲ್ಲಿ ಶಿಲ್ಪರಚಿಸುವ ಜಾಣ್ಮೆ ಮತ್ತು ವಿಧಾನವನ್ನು ಈ ಕಲಾಕಾರರು ರೂಢಿಸಿಕೊಂಡಿದ್ದರು.

ಮಧ್ಯ ಪ್ರಾಚ್ಯ : ಪ್ರಾಚೀನ ಮೆಸಪೊಟೇಮಿಯದ ಶಿಲ್ಪದಲ್ಲಿ ಬಹುಪಾಲು ಅರಸ ಅಥವಾ ಪುರೋಹಿತ ಮೂರ್ತಿಗಳಿವೆ. ಉದಾಹರಣೆಗೆ. 'ಉರ್—ನಮ್ಮು ಎಂಬ ಅರಸನ ಚಿಕ್ಕ ಮೂರ್ತಿ; ಆತ 'ನಿಂಗಲ್ ದೇವತೆಗೆ ನೈವೇದ್ಯ ಅರ್ಪಿಸುತ್ತಿರುವ ಚಿತ್ರಣ ಇದರಲ್ಲಿದೆ. ಮೆಸಪೊಟೇಮಿಯದ ಶಿಲ್ಪಗಳು ಸೆಟೆದ ಭಂಗಿಯವು; ಅವುಗಳಲ್ಲಿ ಲಾಲಿತ್ಯವಾಗಲಿ, ಚಲನಶೀಲತೆಯಾಗಲಿ, ವಾಸ್ತವತೆಯಾಗಲಿ ಕಂಡು ಬರುವುದಿಲ್ಲ. ಪೀಠೋಪಕರಣ ಅಥವಾ ಪೆಟ್ಟಿಗೆ ಪೆಠಾರಿಗಳ ಮೇಲಿನ ಅಲಂಕೃತ ಉಬ್ಬುಶಿಲ್ಪಗಳಲ್ಲಿ ದೈನಂದಿನ ಜೀವನಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರಣವಿದೆ.

ಕ್ರಿ. ಪೂ. 900-600ರ ಅವಧಿಯಲ್ಲಿ ಅಸ್ಸೀರಿಯನ್ನರ ಸಾಮ್ರಾಜ್ಯದ ಕಾಲದಲ್ಲಿ ಮೂರ್ತಿಶಿಲ್ಪ ವಾಸ್ತುವಿನ ಅಲಂಕರಣವಾಯಿತು. ಅರಮನೆಯ ದ್ವಾರಗಳಲ್ಲಿ ನಿಲ್ಲಿಸಲು ಮಾನವಶಿರದಿಂದ ಕೂಡಿದ ಬೃಹತ್ ವೃಷಭಶಿಲ್ಪಗಳನ್ನು ಶಿಲೆಯಲ್ಲಿ ನಿರ್ಮಿಸಲಾಯಿತು. ಅರಮನೆ, ದೇವಸ್ಥಾನ (ಜಿಗ್ಗುರಾಟ್) ಮುಂತಾದ ಕಟ್ಟಡ ಗೋಡೆಗಳು ಉಬ್ಬುಶಿಲ್ಪಗಳಿಂದ ಅಲಂಕೃತವಾಗಿ, ತತ್ಕಾಲೀನ ಸೈನ್ಯಯಾತ್ರೆ ಮತ್ತಿತರ ಪ್ರಮುಖ ಘಟನೆಗಳನ್ನು ನಿರೂಪಿಸಿವೆ. ಪ್ರಾಣಿಶಿಲ್ಪಗಳು ಹೆಚ್ಚು ಸಹಜ ಸುಂದರವಾಗಿವೆ; ಆದರೆ ಮಾನವಶಿಲ್ಪಗಳು ಭಾವರಹಿತವಾಗಿವೆ. (ನೋಡಿ- ಅಸ್ಸೀರಿಯನ್ನರ-ಕಲೆ)

ಅಖೆಮಿನಿಡ್ ಸಾಮಾಜ್ಯದ (ಕ್ರಿ.ಪೂ. 500-300) ಶಿಲ್ಪಿಗಳು ರಚಿಸಿದ ಮಾನವಮೂರ್ತಿಗಳಲ್ಲಿ ಮಾಂಸಖಂಡಗಳ ಪಟುತ್ವ ಎದ್ದುಕಾಣುತ್ತದೆ. ಈ ಕಾಲದ ಜನ ಕಟ್ಟಡಗಳನ್ನು ಬೃಹತ್ ಉಬ್ಬುಶಿಲ್ಪಗಳಿಂದ ಅಲಂಕರಿಸಿದರು. ಆದರೆ ಹೆಚ್ಚು ಸುಂದರವಾದ ಶಿಲ್ಪವೆಂದರೆ ಚಿಕ್ಕಮೂರ್ತಿಗಳೇ. ಇವುಗಳಲ್ಲಿ ಕೆಲವು ಕ್ಲಾಸಿಕಲ್ (ಮಾರ್ಗ) ಗ್ರೀಕ್ ಶೈಲಿಯ ಪ್ರಭಾವವನ್ನು ನಿಚ್ಚಳವಾಗಿ ತೋರುತ್ತವೆ.

ಹಿಟ್ಟೈಟರು (ಕ್ರಿ. ಪೂ. 200) ಅಸ್ಸೀರಿಯನ್ನರಂತೆಯೇ ಉಬ್ಬುಶಿಲ್ಪಗಳನ್ನು ವಾಸ್ತುವಿನ ರಚನೆಯಲ್ಲಿ ಅಂತರ್ಗವಾಗಿರುವಂತೆ ಅಳವಡಿಸಿದರು. ರಾಜ, ದೇವ ದೇವತೆ, ಧಾರ್ಮಿಕ ಸಮಾರಂಭ ಮುಂತಾದ ವಿಷಯಗಳನ್ನು ಬಂಡೆಯಲ್ಲಿ ಬೃಹತ್ ರೂಪದಲ್ಲಿ ಕೆತ್ತಿದರು.

ಈಜಿಯನ್ : ಕ್ರಿ. ಪೂ. 3ನೆಯ ಸಹಸ್ರಮಾನದಲ್ಲಿ ಈಜಿಯನ್ ಸಮುದ್ರದ ಸೈಕ್ಲಡೆಸ್ ದ್ವೀಪದ ಶಿಲ್ಪಿಗಳು ಬಿಳಿಯ ಅಮೃತಶಿಲೆಯಲ್ಲಿ ಮೂರ್ತಿಗಳನ್ನು ರೂಪಿಸಿದರು. ಇಲ್ಲಿ ಸ್ತ್ರೀಶಿಲ್ಪಗಳೇ ಅಧಿಕವಾಗಿವೆ. ಶಿಲ್ಪಿಗಳಿಗೆ ಲೋಹದ ಉಪಕರಣಗಳಿರಲಿಲ್ಲ. ಕುರುಂದದ ಕಲ್ಲಿನಿಂದ ಮೂರ್ತಿಗಳನ್ನು ಉಜ್ಜಿ ನಯಗೊಳಿಸುತ್ತಿದ್ದರು.

ಕ್ರಿ. ಪೂ. 16-15ನೆಯ ಶತಮಾನಗಳಲ್ಲಿ ಕ್ರೀಟ್‍ನ ಮಿನೋವನ್ನರು ಚಿಕ್ಕ ವಿಗ್ರಹಗಳನ್ನು ಕಂಚಿನಲ್ಲಿ ಎರಕಹೊಯ್ದರು. ಆದರೆ ಇವನ್ನು ಉಜ್ಜಿ ನಯಗೊಳಿಸಿ ಹೊಳಪು ನೀಡಲಿಲ್ಲ. ಈ ಕಾಲದಲ್ಲಿ ಬೇರೆಡೆ ಎಲ್ಲೂ ಕಾಣದ ಓಜಸ್ಸನ್ನು ಈ ಮೂರ್ತಿಗಳು ಬಿಂಬಿಸುತ್ತವೆ. ಮೈಸಿನೆಯ ಗ್ರೀಕರು ಮಿನೋವನ್ನರ ಶಿಲ್ಪಶೈಲಿಯನ್ನು ಅನುಕರಿಸಿದರೂ ಸಿದ್ಧಿ ಸಾಫಲ್ಯಗಳು ಕಡಿಮೆಯೇ. ಇವರ ಅತ್ಯುತ್ತಮ ಪ್ರಯತ್ನವೆಂದರೆ ಮೈಸಿನೆಯಲ್ಲಿ ಕಾಣಸಿಗುವ ಸಿಂಹದ್ವಾರ.

ಈಜಿಪ್ಟ್ : ಈಜಿಪ್ಟಿನಲ್ಲಿ ಕ್ರಿ. ಪೂ. 3ನೆಯ ಸಹಸ್ರಮಾನದಿಂದ ವಿಶಿಷ್ಟವಾದ ಶಿಲ್ಪಶೈಲಿ ಬೆಳೆದು ಸಾವಿರಾರು ವರ್ಷಗಳ ತನಕ ಮುಂದುವರಿಯಿತು. ಹೆಚ್ಚಿನ ಶಿಲ್ಪಗಳು ಮತಾಚಾರದಿಂದ ನಿರ್ಮಿತವಾದವು. ಇವುಗಳಲ್ಲಿ ಹಲವು ಮೃತರ ಉತ್ತರಕ್ರಿಯೆಗೆ ಸಂಬಂಧಿಸಿದ, ಸಮಾಧಿಗಳಲ್ಲಿ ಇರಿಸಿದಂಥ ಪುಟ್ಟ ಮೂರ್ತಿಗಳು. ಈ ಶಿಲ್ಪಗಳಲ್ಲಿ ಚಲನೆ, ರಾಗಭಾವಗಳ ಸುಳಿವಿಲ್ಲ ; ಬದಲಾಗಿ ಗಾಂಭೀರ್ಯವಿದೆ. ಅಪಾರ ಸಂಖ್ಯೆಯ ದೇವತಾ ಮೂರ್ತಿಗಳಲ್ಲಿ ಹೆಚ್ಚಿನವು ಅರೆಪಶು-ಅರೆಮಾನವ ರೂಪದವು. ಇವು ಭದ್ರವಾಗಿ ಕುಳಿತ ಅಥವಾ ನಿಂತ ಭಂಗಿಯ ಜಡ ವಿಗ್ರಹಗಳು.

ಮಾನವ ಮೂರ್ತಿಶಿಲ್ಪದಲ್ಲಿ ಈಜಿಪ್ಟಿನ ಶಿಲ್ಪಿಗಳು ವಾಸ್ತವ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ರಾಜ ತನ್ನ ಪ್ರಜೆಗಳು ಹಾಗೂ ಶತ್ರುಗಳಿಗಿಂತ ಎತ್ತರದವನೆಂಬಂತೆ ಕಾಣಿಸಲಾಯಿತು. ದೇಹದ ಅಂಗಾಂಗ ಪ್ರಮಾಣಗಳು ಗಾತ್ರಕ್ಕೆ ತಕ್ಕಂತೆ ಹೊಂದಿಕೆಯಾಗಿವೆ. ಶಾಂತ ಹಾಗೂ ವಿಶ್ರಾಂತ ಭಂಗಿಯ ಶಿಲ್ಪಗಳಲ್ಲಿ ಭಾವಾಭಿವ್ಯಕ್ತಿಯಿಲ್ಲ. ವಾಸ್ತವ ಅಥವಾ ಓಜಸ್ಸಿನ ಕ್ರಿಯಾಶೀಲ ಶಿಲ್ಪಗಳು ಅತಿವಿರಳ. ಕ್ರಿ. ಪೂ. 14ನೆಯ ಶತಮಾನದಲ್ಲಿ ಮಾತ್ರ ಸ್ವಲ್ಪ ವಾಸ್ತವವೆನಿಸುವ ಶಿಲ್ಪಗಳು ರಚಿತವಾದವು.

(ನೋಡಿ- ಈಜಿಪ್ಟಿನ-ವಾಸ್ತುಶಿಲ್ಪ,-ಕಲೆ)

ಭಾರತ: ಕ್ರಿ.ಪೂ. 2500-1700ರ ತನಕ ಭಾರತ ಮತ್ತು ಪಾಕಿಸ್ತಾನದ ಪ್ರದೇಶಗಳಲ್ಲಿ ವ್ಯಾಪಿಸಿದ್ದ ಸಿಂಧೂ ನಾಗರಿಕತೆಯ ಕೆಲವು ಶಿಲ್ಪಗಳು ಉಳಿದುಬಂದಿವೆ. ಮೊಹೆಂಜೊದಾರೊ, ಹರಪ್ಪ, ಲೋಥಲ್, ರೂಪಾರ್ ಮುಂತಾದ ಪ್ರಮುಖ ನಿವೇಶನಗಳಲ್ಲಿ ಸಣ್ಣ ಮುದ್ರೆಗಳು, ಪ್ರಾಣಿಶಿಲ್ಪಗಳು ಮತ್ತು ಮಾನವ ಮೂರ್ತಿಗಳು ಲಭ್ಯವಾಗಿವೆ. ವೃಷಭ, ಆನೆ, ಏಕಶೃಂಗಿ ಮುಂತಾದ ಶಿಲ್ಪಕೃತಿಗಳು ಸಹಜ ಸುಂದರವಾಗಿವೆ. ಪ್ರಸಿದ್ಧವಾಗಿರುವ ಕಂಚಿನ ನರ್ತಕಿಶಿಲ್ಪ ಸಪ್ರಮಾಣತೆ ಮತ್ತು ಎಚ್ಚರಿಕೆಯ ಕೆತ್ತನೆ ಕೆಲಸಕ್ಕೆ ಉತ್ತಮ ಉದಾಹರಣೆ. ನರ್ತಿಸಿ ತುಸು ವಿಶ್ರಾಂತಿಗಾಗಿ ನಿಂತ ಅಥವಾ ನರ್ತನಕ್ಕೆ ಹೊರಟಿರುವ ಈ ಶಿಲ್ಪದ ಸಹಜ ಸೌಂದರ್ಯ ಮನಸೆಳೆಯುತ್ತದೆ. ತ್ರಿಭಂಗಿಯ ಶಿಲ್ಪಗಳು ಭಾರತದಲ್ಲಿ ಹೆಚ್ಚು.

ಕ್ರಿ.ಪೂ. 500-ಕ್ರಿ.ಶ. 500ರ ತನಕದ ಒಂದು ಸಾವಿರ ವರ್ಷಗಳಲ್ಲಿ ಭಾರತೀಯ ಮೂರ್ತಿಶಿಲ್ಪದಲ್ಲಿ ಬೌದ್ಧಧರ್ಮದ ಪ್ರಭಾವ ಎದ್ದು ಕಾಣುತ್ತದೆ. ಅತ್ಯಂತ ಸೊಗಸಾದ ಬೌದ್ಧ ಶಿಲ್ಪಗಳಲ್ಲಿ ಕೆಲವು ಸ್ತೂಪದ್ವಾರ ಮತ್ತು ಕಟಾಂಜನಗಳನ್ನು ಅಲಂಕರಿಸಿವೆ. ಬುದ್ಧನ ಜೀವನ ಮತ್ತು ಉಪದೇಶಗಳನ್ನು ಈ ಉಬ್ಬುಗೆತ್ತನೆಗಳು ನಿರೂಪಿಸುತ್ತವೆ. ಭಾರ್ಹುತ್, ಅಮರಾವತಿ, ಸಾಂಚಿ ಮುಂತಾದ ಕಡೆಗಳಲ್ಲಿರುವ ಶಿಲ್ಪಸಂಪತ್ತು ಜೀವನದ ಸತ್ತ್ವವನ್ನೆಲ್ಲ ಹೀರಿಕೊಂಡು ಸೃಷ್ಟಿಯಾಗಿರುವಂತೆ ತೋರುತ್ತದೆ. ಇಲ್ಲಿಯ ಶಿಲ್ಪಗಳ ಸೂಕ್ಷ್ಮ ಕೆತ್ತನೆಕೆಲಸ ದಂತಕರ್ಮಿಗಳ ಕೌಶಲ ಪರಿಣತಿಗಳನ್ನು ನೆನಪಿಗೆ ತರುತ್ತದೆ.

ಆರಂಭದ ಉಬ್ಬುಗೆತ್ತನೆಗಳಲ್ಲಿ ಆಳದ ಆಯಾಮ ಅಷ್ಟಾಗಿ ಇರಲಿಲ್ಲ. ಕ್ರಿ.ಸ್ತ ಶಕೆಯ ಆರಂಭಾನಂತರ ಭಾರತದ ಶಿಲ್ಪಿಗಳು ರೋಮನ್ ಸಾಮ್ರಾಜ್ಯದ ಶಿಲ್ಪ ಕಲೆಯಿಂದ ಪ್ರಭಾವಿತರಾಗಿ ಹೆಚ್ಚು ಆಳವಾದ ಉಬ್ಬುಶಿಲ್ಪಗಳನ್ನು ರಚಿಸಿದರು. ದುಂಡುಶಿಲ್ಪಗಳೂ ಇದೇ ಕಾಲದಲ್ಲಿ ನಿರ್ಮಿತವಾದವು. ಮುದ್ರೆಯ ಭಂಗಿಗಳು ಭಾರತೀಯ ಪ್ರತಿಮಾಶಿಲ್ಪದ ವೈಶಿಷ್ಟ್ಯ.

ಕ್ರಿ.ಶ. 500ರ ತರುವಾಯ ಭಾರತೀಯ ಮೂರ್ತಿಶಿಲ್ಪದಲ್ಲಿ ಹಿಂದೂಧರ್ಮದ ಪ್ರಭಾವ ಸ್ಫುಟವಾಗಿ ಕಾಣುತ್ತದೆ. ಶಿವ, ವಿಷ್ಣು ಶಿಲ್ಪವಸ್ತುಗಳಾಗಿ ಮೈದಳೆದುನಿಂತರು. ಲತಾ ವಿನ್ಯಾಸ, ಪ್ರಾಣಿಶಿಲ್ಪ, ಜ್ಯಾಮಿತಿಯ ವಿನ್ಯಾಸಗಳು, ಪುರಾಣ ಪ್ರಸಂಗಗಳು, ದೇಗುಲ ಗೋಡೆಗಳನ್ನು ಅಲಂಕರಿಸಿದವು. ಜೀವನದ ಯಾವ ಕ್ಷೇತ್ರವನ್ನೂ ಹಿಂದೂ ಶಿಲ್ಪಿಗಳು ಕೆತ್ತದೆ ಬಿಡಲಿಲ್ಲ ಎನ್ನುವುದಕ್ಕೆ ಖಜುರಾಹೊವಿನಂಥ ದೇಗುಲಗಳು ಸಾಕ್ಷಿಯಾಗಿವೆ. ಜೈನಶಿಲ್ಪದಲ್ಲಿ ಶ್ರವಣಬೆಳಗೊಳದ ಗೊಮ್ಮಟನಂಥ ಬೃಹನ್ಮೂರ್ತಿಗಳು ರೂಪುಗೊಂಡವು. ಗುಪ್ತ, ಪಾಲ, ಸೇನ, ಚಾಳುಕ್ಯ, ಪಲ್ಲವ, ರಾಷ್ಟ್ರಕೂಟ, ಚೋಳ, ವಿಜಯನಗರ ಮುಂತಾದ ಹಲವು ರಾಜವಂಶಗಳು ಶಿಲ್ಪಕಲೆಗೆ ಪ್ರೋತ್ಸಾಹ ನೀಡಿದವು. ಲೋಹ ಶಿಲ್ಪಗಳೂ ಸಾಕಷ್ಟು ಪ್ರಮಾಣದಲ್ಲಿ ತಯಾರಾದವು. ನಟರಾಜಮೂರ್ತಿಯಂತೂ ವಿಶ್ವಖ್ಯಾತ ಶಿಲ್ಪ. ಸಪ್ರಮಾಣತೆ, ಚಲನೆ, ಅವಕಾಶ ಹಾಗೂ ಭಾವತೀವ್ರತೆ ಈ ಶಿಲ್ಪದಲ್ಲಿ ಸೊಗಸಾಗಿ ಮಡುಗಟ್ಟಿದೆ. ಎರಕ ಹೊಯ್ಯುವ ಕಲೆಯಲ್ಲಿಯೂ ದಕ್ಷಿಣಭಾರತದ ಶಿಲ್ಪಿಗಳು ನಿಷ್ಣಾತರಾಗಿದ್ದರು. (ನೋಡಿ- ಭಾರತೀಯ-ಮೂರ್ತಿಶಿಲ್ಪ)

ಚೀನ: ಇಲ್ಲಿನ ಅತಿ ಪ್ರಾಚೀನಶಿಲ್ಪಗಳೆಂದರೆ ಸಮಾಧಿಗಳಲ್ಲಿರಿಸಿದ ಪುಟ್ಟಮೂರ್ತಿಗಳು. ಇವುಗಳ ಕಾಲ ಕ್ರಿ.ಪೂ. ಸು. 1500ಕ್ಕೂ ಸ್ವಲ್ಪ ಹಿಂದೆ. ಈ ಶಿಲ್ಪಗಳ ಕೆತ್ತನೆ ಕೆಲಸ ಉತ್ಕøಷ್ಟವಾದುದು. ಕ್ರಿ.ಪೂ. 202-ಕ್ರಿ.ಶ. 220ರ ತನಕ ಚೀನೀ ಕಲಾಕಾರರು ಕುಂಭಕಲೆ ಮತ್ತು ಜೇಡಶಿಲೆಯ ಕೆತ್ತನೆಯ ಕೆಲಸದ ಜೊತೆಗೆ ಕಂಚಿನಗಂಟೆ ಮತ್ತು ಲೋಹವಸ್ತುಗಳನ್ನು ಮಾಡಿದರು. ಪೂರ್ವಜರ ಆರಾಧನೆಗೆ ಬಳಕೆಯಾದ ಇವುಗಳ ಉತ್ಪಾದನೆ ಅತಿ ಕುಶಲಕೆಲಸಗಾರರ ಸಂಘ (ಗಿಲ್ಡ್) ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತು. ಶಿಲ್ಪವಸ್ತುಗಳು ತೂಗುಹಾಕಲು ಅನುಕೂಲವಾಗುವಂತೆ ಅವಕ್ಕೆ ರಂಧ್ರವಿರುತ್ತಿತ್ತು.

ಹಾನ್‍ವಂಶದ ಆಳ್ವಿಕೆಯ ಕಾಲದಲ್ಲಿ ಚೀನ ಭಾರತದ ಬೌದ್ಧಧರ್ಮದ ಪ್ರಭಾವಕ್ಕೊಳಪಟ್ಟಿತು. ಶಿಲೆಯಲ್ಲಿ ಬುದ್ಧನ ಬೃಹನ್ಮೂರ್ತಿಗಳ ನಿರ್ಮಾಣಕಾರ್ಯ ಆರಂಭವಾಯಿತು. ವಿದೇಶಿ ಸಂಪ್ರದಾಯವನ್ನು ಚೀನೀಯರು ಜಾಣ್ಮೆಯಿಂದ ತಮ್ಮ ಅಗತ್ಯ ಅನುಕೂಲತೆಗಳಿಗೆ ತಕ್ಕಂತೆ ಪರಿವರ್ತಿಸಿಕೊಂಡರು. ಮರದಲ್ಲಿ ಕೆತ್ತಿದ ಬುದ್ಧನ ಶಿರಶಿಲ್ಪ ಅನುಪಮ ಲಾವಣ್ಯದಿಂದ ಕೂಡಿದೆ. ಅದ್ಭುತ ಅಥವಾ ನಿಗೂಢ ಮುಗುಳ್ನಗೆಯ ಸೂಚನೆ ಈ ಶಿಲ್ಪಕ್ಕೆ ದೈವತ್ವವನ್ನೂ ತುಂಬು ಪ್ರಶಾಂತತೆಯನ್ನೂ ತಂದಿದೆ.

ಬೋಧಿಸತ್ವ, ಪೌರ್ವಾತ್ಯ ಮೂರ್ತಿಶಿಲ್ಪದ ಪ್ರಿಯವಸ್ತುಗಳಲ್ಲೊಂದು. ಈ ವಿಷಯದಲ್ಲಿ ಚೀನದ ಶಿಲ್ಪಿಗಳು ಭಾರತದ ಶಿಲ್ಪಿಗಳಿಗಿಂತ ಮಿಗಿಲೆನಿಸಿದರು. ಮುತ್ತಿನ ಹಾರಗಳು, ವಿವಿಧ ಬಗೆಯ ಒಡವೆಗಳು, ಜಾರಿಬೀಳುತ್ತಿರುವ ಉತ್ತರೀಯ ಇತ್ಯಾದಿ ಅಲಂಕರಣ ಅಂಶಗಳಿಂದ ಏಷ್ಯದ ಶಿಲ್ಪಪರಂಪರೆಗೆ ಮತ್ತಷ್ಟು ಸೇರ್ಪಡೆಗಳನ್ನು ಮಾಡಿದರು. ಈ ಅಂಶವನ್ನು ದಯಾದೇವತೆ ಕುಅನ್-ಯಿನ್ (ಭಾರತದ ಬೋಧಿಸತ್ವ ಅವಲೋಕಿತೇಶ್ವರ) ಶಿಲ್ಪದಲ್ಲಿ ಚೆನ್ನಾಗಿ ಗುರುತಿಸಬಹುದು.

ಚೀನದ ಶಿಲ್ಪಿಗಳು ಅಲಂಕರಣದ ಹಾಗೂ ಮತೇತರ ಶಿಲ್ಪಕೃತಿಗಳನ್ನು ಜೇಡ್ ಶಿಲೆಯಲ್ಲಿ ಮಾಡಿದರು. ಕುಂಭ ತಯಾರಿಕೆಯಲ್ಲಿಯೂ ಶಿಲ್ಪಶೈಲಿಯನ್ನು ರೂಢಿಸಿಕೊಂಡರು. 1700ರ ತನಕ ಈ ಪರಂಪರೆ ಮುಂದುವರಿಯಿತು.

(ನೋಡಿ- ಚೀನೀ-ಶಿಲ್ಪ)

ಶ್ರೀಲಂಕಾ ಮತ್ತು ಆಗ್ನೇಯ ಏಷ್ಯ : ಕ್ರಿ. ಪೂ. 3ನೆಯ ಶತಮಾನದಿಂದ ಭಾರತದ ವ್ಯಾಪಾರ ವಾಣಿಜ್ಯೋದ್ಯಮಿಗಳು ಹಾಗೂ ಧರ್ಮಪ್ರಚಾರಕರು ಭಾರತೀಯ ಸಾಂಸ್ಕøತಿಕ ಪ್ರಭಾವಗಳನ್ನು ಹಿಂದೂಸಾಗರದ ಇತರ ದೇಶಗಳಲ್ಲಿ ಬಿತ್ತಿದರು. ಕ್ರಿಸ್ತಶಕಾರಂಭಾನಂತರ ಹಲವೆಡೆ ಭಾರತೀಯ ಮೂಲದ ದೊರೆಗಳ ಆಳ್ವಿಕೆಯಿಂದ ಈ ಸಂಸ್ಕøತಿಯ ಪ್ರಭಾವ ಬೇಗನೆ ವೃದ್ಧಿಸತೊಡಗಿತು. ಶ್ರೀಲಂಕಾ, ಬರ್ಮ, ಥಾಯ್ಲೆಂಡ್, ಕ್ಯಾಂಬೋಡಿಯ, ಜಾವ, ಸುಮಾತ್ರ ಮುಂತಾದ ಕಡೆಗಳಲ್ಲಿ ಸ್ಥಳೀಯ ಆಚಾರವಿಚಾರಗಳೂ ಹಿಂದೂ ಸಂಸ್ಕøತಿಯೊಡನೆ ಬೆರೆತವು. ಕ್ಯಾಂಬೋಡಿಯದ ಅಂಗ್ಕೋರ್‍ವಾಟ್ (ನೋಡಿ- ಅಂಗ್ಕೋರ್‍ವಾಟ್) ಮತ್ತು ಇತರ ಹಿಂದೂ ದೇಗುಲಗಳಲ್ಲಿರುವ ಉಬ್ಬುಗೆತ್ತನೆಗಳು ಭಾರತದಲ್ಲಿ ಸಾಧಿಸಲಾದುದಕ್ಕಿಂತ ಹೆಚ್ಚಿನ ಗಾತ್ರ, ಹಾಗೂ ಪ್ರಮಾಣದವು. ಜಾವಾದ ಬೋರಬುದೂರ್‍ನಲ್ಲಿರುವ ಬೌದ್ಧಾಲಯ ಪ್ರಪಂಚದ ಅತಿದೊಡ್ಡ ಮೂರು ಬೌದ್ಧಾಲಯಗಳಲ್ಲಿ ಒಂದೆನಿಸಿದೆ. ಇಲ್ಲಿನ ಬೌದ್ಧಶಿಲ್ಪಗಳು ಆ ಕಾಲದ ಕಲಾತ್ಮಕ ಸಾಧನೆಗಳಿಗೆ ಸಾಕ್ಷಿಯಾಗಿವೆ. ಶ್ರೀಲಂಕಾದ ಅನುರಾಧಪುರದ ಕುಳಿತ ಭಂಗಿಯ ಬುದ್ಧ ಮೂರ್ತಿ ಪರಿಪೂರ್ಣಯೋಗಿಯ ಚಿತ್ರವನ್ನು ಪರಿಣಾಮಕಾರಿಯಯಾಗಿ ನೀಡುತ್ತದೆ. ಭಾರತೀಯ ಶಿಲ್ಪಪರಂಪರೆಯ ಚಿಂತನಧಾರೆಯನ್ನೇ ಇಲ್ಲಿಯ ಶಿಲ್ಪಗಳಲ್ಲಿ ಹೊಮ್ಮಿಸಲು ಪ್ರಯತ್ನಿಸಲಾಗಿದೆ. ಶ್ರೀಲಂಕಾ ಮತ್ತು ಆಗ್ನೇಯ ಏಷ್ಯ ಶಿಲ್ಪಗಳಲ್ಲಿ ಪೂರ್ಣರೂಪ, ಅಂಗಾಂಗಸಾಮರಸ್ಯ, ರೇಖೆಗಳ ಸಾಂಗತ್ಯ, ಸಮತೋಲನ ಮುಂತಾದ ಅಂಶಗಳಿಗೆ ಒತ್ತು ನೀಡಿದೆ.

ಜಪಾನ್ : ಜಪಾನಿನ ಪ್ರಾಗೈತಿಹಾಸಿಕ ಕಾಲದ ಜನ ಶವಸಂಸ್ಕಾರಗಳ ಉದ್ದೇಶಕ್ಕಾಗಿ ಜೇಡಿಮಣ್ಣಿನ ಮೂರ್ತಿಗಳನ್ನು ನಿರ್ಮಿಸಿದರು. ಪ್ರಾಚೀನ ಮಾನವರ ಸ್ಮಾರಕದ ಒಲವನ್ನೂ ಮೋಹವನ್ನೂ ಇವು ಬಿಂಬಿಸುತ್ತವೆ. ಚೀನದ ಕೆಲವು ಶಿಲ್ಪಗಳನ್ನು ವಿಶೇಷವಾಗಿ ಹೋಲುತ್ತವೆ.

ಕ್ರಿ.ಶ. 10ನೆಯ ಶತಮಾನದಿಂದ ಆರಂಭವಾಗುವ ಮಧ್ಯಯುಗದಲ್ಲಿ ಜಪಾನಿನ ಶಿಲ್ಪಿಗಳು ಪ್ರಾಗೈತಿಹಾಸಿಕ ಕಾಲದ ಶಿಲ್ಪಸತ್ತ್ವ ಶಕ್ತಿಗಳನ್ನು ಹೀರಿಕೊಂಡು ಕೆತ್ತನೆ ಕೆಲಸವನ್ನು ಬೆಳೆಸಿಕೊಂಡು ಬಂದರು. ಪ್ರೇಮದೇವತೆ ಬಿಜೋನ್-ಮ್ಯೊ-ಓ ಮೂರ್ತಿ ಜಪಾನಿನ ಶಿಲ್ಪ ಪ್ರತಿಭೆಗೆ ದ್ಯೋತಕ. ಶಿಲ್ಪಗಳಲ್ಲಿ ದೈಹಿಕ ಸೌಂದರ್ಯ, ಮಾನಸಿಕಭಾವ__ಇವೆರಡೂ ನಿಚ್ಚಳವಾಗಿ ಕಾಣುತ್ತವೆ. ಚೀನದ ದುಂಡುಶಿಲ್ಪ ಶೈಲಿಯನ್ನೂ ಕೊರಿಯನ್ನರ ಶಿಲ್ಪಶೈಲಿಯನ್ನೂ ತಮ್ಮ ಶಿಲ್ಪತಂತ್ರಗಳಲ್ಲಿ ಅಳವಡಿಸಿಕೊಂಡಿದ್ದಾರೆ; ಮರದ ಕೆತ್ತನೆಯನ್ನು ಮಾಡಿ ಶಿಲ್ಪಕೃತಿಗಳಿಗೆ ಚಿನ್ನದ ಲೇಪಕೊಡುತ್ತಿದ್ದರು; ಸರಳತೆ, ಸಹಜತೆ, ನವವಿನ್ಯಾಸ, ಭಾವಗ್ರಹಣ ಸಾಮಥ್ರ್ಯ ಜಪಾನಿನ ಶಿಲ್ಪಶೈಲಿಯ ವಿಶೇಷ ಲಕ್ಷಣಗಳು. (ನೋಡಿ- ಜಪಾನ್)

ಗ್ರೀಸ್ : ಪ್ರಾಚೀನ ಗ್ರೀಕ್ ಶಿಲ್ಪಿಗಳು ಸರಳ ಸಾಂಪ್ರದಾಯಿಕ ಶಿಲ್ಪಕೃತಿಗಳನ್ನು ಮಾಡಿದರು; ಕ್ರಮೇಣ ವಾಸ್ತವತೆಗೆ ಹತ್ತಿರವಾದ ಮೂರ್ತಿಗಳನ್ನು, ಆಕರ್ಷಕ ಭಂಗಿಯಲ್ಲಿ ಹಾಗೂ ಯುಕ್ತ ಭಾವಾಭಿವ್ಯಕ್ತಿ ಸಹಿತ ನಿರ್ಮಿಸಲು ಪ್ರಯತ್ನಿಸಿ ಸಫಲರಾದರು. ಇವರ ಶಿಲ್ಪಶೈಲಿಯನ್ನು ರೋಮನ್ನರು ಕಲಿತರು; ಪುನರುಜ್ಜೀವನ ಕಾಲದ ಶಿಲ್ಪಿಗಳು ಪುನರನ್ವೇಷಿಸಿದರು. 19ನೆಯ ಶತಮಾನದ ಅಂತ್ಯದ ತನಕ ಇದು ಐರೋಪ್ಯ ಶಿಲ್ಪಕಲೆಯ ಪ್ರಧಾನ ಶೈಲಿಯಾಗಿ ಮುಂದುವರಿಯಿತು.

ಗ್ರೀಕ್ ಶಿಲ್ಪಕಲೆಯ ಬೆಳೆವಣಿಗೆಯಲ್ಲಿ ಮೂರು ಪ್ರಧಾನ ಕಾಲಗಳನ್ನು ಗುರುತಿಸಲಾಗಿದೆ : ಕ್ರಿ. ಪೂ. ಸು. 630-480ರ ತನಕ ಆರ್ಷೇಯ (ಆರ್ಕೇಯಿಕ್) ಕಾಲ; ಕ್ರಿ. ಪೂ. 480-323ರ ತನಕ ಮಾರ್ಗಶೈಲಿಯ (ಕ್ಲಾಸಿಕಲ್) ಕಾಲ; ಕ್ರಿ. ಪೂ. 323-146 (ಕೊನೆಗೊಂಡ) ಹೆಲೆನಿಸ್ಟಿಕ್ ಕಾಲ.

ಆರ್ಷೇಯಕಾಲಕ್ಕಿಂತ ಮೊದಲು ಕಲಾಕಾರರು ಜೇಡಿಮಣ್ಣು ಅಥವಾ ಕಂಚಿನಲ್ಲಿ ಚಿಕ್ಕ ವಸ್ತುಗಳನ್ನು ಮಾತ್ರ ಮಾಡುತ್ತಿದ್ದರು. ಮರದಲ್ಲಿಯೂ ಕೆಲವು ಮೂರ್ತಿಗಳನ್ನು ಮಾಡಿದ್ದಿರಬಹುದು. ಕ್ರಿ.ಪೂ. 600ರಿಂದ ಅವರು ಅಚ್ಚಿನ ಮೂಲಕ ಜೇಡಿಮಣ್ಣಿನ ಗೊಂಬೆಗಳನ್ನು ಮಾಡಲು ಪ್ರಾರಂಭಿಸಿದರು. ಈ ಶಿಲ್ಪತಂತ್ರವನ್ನು ಅವರು ಫಿನಿಷಿಯನ್ ಮತ್ತು ಇತರ ಪೌರ್ವಾತ್ಯ ಜನರಿಂದ ಕಲಿತರು. ಇದೇ ಹೊತ್ತಿಗೆ ಬೃಹನ್ಮೂರ್ತಿಗಳನ್ನು ಕಲ್ಲಿನಲ್ಲಿ ಕೆತ್ತಿ ತಯಾರಿಸುವ ಕಲೆಯನ್ನೂ ಅವರು ಈಜಿಪ್ಟಿನಿಂದ ಕಲಿತ್ತಿದ್ದರು. ಕ್ರಿ.ಪೂ. 480ರ ತನಕ ತಮ್ಮ ಶಿಲ್ಪತಂತ್ರಗಳನ್ನು ಗ್ರೀಕರು ಪರಿಷ್ಕರಿಸುತ್ತ, ಕ್ರಮೇಣ ಜೀವಂತವೆನಿಸುವ ಸುಂದರ ಮೂರ್ತಿಗಳನ್ನು ಕೆತ್ತುವಲ್ಲಿ ಸಫಲರಾದರು. ನಗ್ನವಾಗಿ ನಿಂತಭಂಗಿಯ ಪುರುಷಮೂರ್ತಿಗಳನ್ನು ಮತ್ತು ಉಡುಪುತೊಟ್ಟ ಸ್ತ್ರೀಮೂರ್ತಿಗಳನ್ನು ಸೊಗಸಾಗಿ ನಿರ್ಮಿಸಿದರು. ದೇಗುಲ ಮತ್ತಿತರ ಕಟ್ಟಡಗೋಡೆಗಳ ಮೇಲಿನ ಉಬ್ಬುಶಿಲ್ಪಗಳೂ ಅಷ್ಟೇ ಮನೋಹರವಾಗಿ ಕೆತ್ತಲ್ಪಟ್ಟಿವೆ.

ಮಾರ್ಗಶೈಲಿಯ ಕಾಲ ಮುಂದಿನ ಹಂತ. ದೇಹಪ್ರಮಾಣವನ್ನು ಕರಾರುವಾಕ್ಕಾಗಿ ರೂಪಿಸಲು ಕಲಿತ ತರುವಾಯ ಶಿಲ್ಪಿಗಳು ವೇಷಭೂಷಣಗಳಿಗೆ ಹೆಚ್ಚು ಗಮನ ಹರಿಸಿದರು. ಈ ಕಾಲದ ಪ್ರತಿಮೆಗಳಲ್ಲಿ ಮಾನವನ ಆದರ್ಶರೂಪವನ್ನು ಕಾಣಬಹುದು. ದೇವದೇವತೆಗಳ ಅಥವಾ ಪುರಾಣಪುರುಷರ ಮುಖದ ಚಿತ್ರಣದಲ್ಲಿ ಏಕರೂಪತೆಯನ್ನು ಕಾಣಬಹುದು. ಒಲಂಪಿಯಾದ 'ಜ್ಯೂಸ್ ದೇಗುಲದಲ್ಲಿ ಮಾರ್ಗಶೈಲಿಯ ಪ್ರಾಚೀನತಮ ಮೂರ್ತಿಯನ್ನು ನೋಡಬಹುದು. ಆಥೆನ್ಸಿನ ಪಾರ್ಥೆನಾನ್‍ನಲ್ಲಿ ಈ ಶೈಲಿ ಪರಾಕಾಷ್ಠೆ ತಲುಪಿತು. ಇವು ನಿರ್ಮಿತವಾದದ್ದು ಕ್ರಿ.ಪೂ.5ನೆಯ ಶತಮಾನದ ಮಧ್ಯಭಾಗದಲ್ಲಿ ಕ್ರಿ.ಪೂ. 4ನೆಯ ಶತಮಾನಕ್ಕೆ ಸೇರಿದ ಮಾನವಮೂರ್ತಿಗಳಲ್ಲಿ ತುಸುಮಟ್ಟಿನ ಭಾವ ಮತ್ತು ಓಜಸ್ವಿಯಾದ ಕ್ರಿಯೆ ಕಂಡುಬರುತ್ತದೆ. ಮೊದಲ ಬಾರಿಗೆ ದೇವವಿಗ್ರಹಗಳೂ ನಗ್ನರೂಪದಲ್ಲಿ ನಿರ್ಮಿಸಲ್ಪಟ್ಟವು. ಶಿಲ್ಪಸೌಂದರ್ಯದ ದೃಷ್ಟಿಯಿಂದ ಅಪೋಲೊ ದೇವತೆಯ ವಿಗ್ರಹ ಖ್ಯಾತಿಗಳಿಸಿದೆ. ಲಿಸಿಪ್ಸಸ್ ಎಂಬ ಶಿಲ್ಪಿಯಿಂದ ಜಟ್ಟಿಗಳ (ಅತ್ಲೀಟ್) ಮೂರ್ತಿಗಳು ರೂಪುಗೊಂಡವು. ದೇವವಿಗ್ರಹಗಳ ರಚನೆಯಲ್ಲಿ ಪ್ರಾಕ್ಸಿಟೆಲೆಸ್ ಎಂಬಾತ ನಿಷ್ಣಾತನಾಗಿದ್ದ. ಶಿಲಾಸಮಾಧಿಗಳೂ ಅಲಂಕೃತವಾಗತೊಡಗಿದವು. ಹಾಲುಗಲ್ಲು ಮತ್ತು ಕಂಚಿನಲ್ಲಿ ಭಾವಶಿಲ್ಪಗಳೂ ಸಿದ್ಧವಾದವು.

ಅಲೆಗ್ಸಾಂಡರನ ದಿಗ್ವಿಜಯಾನಂತರ ಗ್ರೀಕ್ ಸಂಸ್ಕøತಿ ಈಜಿಪ್ಟ್ ಮತ್ತು ಇತರ ಪೂರ್ವ ದೇಶಗಳಿಗೆ ಹಬ್ಬಿತು. ಕ್ರಿ. ಪೂ. 323ರಲ್ಲಿ ಆತ ಮೃತನಾದ ತರುವಾಯ ಆತನ ಸಾಮ್ರಾಜ್ಯ ಛಿದ್ರವಾಗಿ ಹಲವು ಸಣ್ಣಪುಟ್ಟ ರಾಜ್ಯಗಳು ತಲೆ ಎತ್ತಿದುವು. ಇವು ಸ್ಥಳೀಯ ಕಲಾ ಶೈಲಿಗೆ ವಿಶೇಷ ಪ್ರೋತ್ಸಾಹ ನೀಡಿದುವು. ಗ್ರೀಕರ ಸೌಂದರ್ಯಕಲ್ಪನೆಯ ಮಾನದಂಡವನ್ನು ಇರಿಸಿಕೊಂಡು ಅದಕ್ಕೆ ಸ್ಥಳೀಯ ಕಲ್ಪನೆ ಭಾವನೆಗಳನ್ನು ಕಲಾಕಾರರು ಸಮ್ಮಿಲನಗೊಳಿಸಿದರು. ಪರಿಣಾಮವಾಗಿ ಹೆಲೆನಿಸ್ಟಿಕ್ ಎಂಬ ವೈವಿಧ್ಯಮಯ ಕಲಾಶೈಲಿ ರೂಪುಗೊಂಡಿತು. ಈ ಶೈಲಿಯಲ್ಲಿ ಆದರ್ಶೀಕರಣಕ್ಕಿಂತ ವಾಸ್ತವತೆಗೆ ಹೆಚ್ಚು ಒತ್ತು ನೀಡಲಾಯಿತು. ಕ್ರಿಯಾಶೀಲವಾದ ಮತ್ತು ನಾಟಕೀಯ ಭಂಗಿಯ ಶಿಲ್ಪಗಳು ಹೆಸರು ಪಡೆದುವು. (ನೋಡಿ- ಗ್ರೀಕ್-ಕಲೆ,-ವಾಸ್ತು,-ಶಿಲ್ಪ)

ಎಟ್ರುಸ್ಕನ್ : ಕ್ರಿ.ಪೂ. ಸು. 1000ರ ಹೊತ್ತಿಗೆ ಮಧ್ಯ ಇಟಲಿಯಲ್ಲಿದ್ದ ಎಟ್ರುಸ್ಕನ್ನರು ಅಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನೆಲಸಿದ್ದ ಗ್ರೀಕ್ ಕಲಾಕಾರರಿಂದ ಶಿಲ್ಪಕಲೆಯನ್ನು ಕಲಿತು, ಕಂಚು ಮತ್ತು ಸುಡಾವೆಮಣ್ಣಿನ ಮೂರ್ತಿ ಶಿಲ್ಪರಚನೆಯಲ್ಲಿ ಪರಿಣತರಾದರು. ಸುಣ್ಣಕಲ್ಲಿನಲ್ಲಿಯೂ ಇವರು ಮೂರ್ತಿಗಳನ್ನು ಮಾಡಿದರು. ಸಮಾಧಿಗಳ ಮತ್ತು ಮೃತರ ಬೂದಿ ಇರುವ ಪೆಟ್ಟಿಗೆಗಳ ಮೇಲೆ ಉಬ್ಬುಗೆತ್ತನೆಗಳನ್ನು ಮಾಡಿದರು. ಈ ಕಾಲದ ಪ್ರಾಣಿಶಿಲ್ಪ ಚೇತೋಹಾರಿಯಾಗಿದೆ. ಕ್ರಮೇಣ ಇವರು ಗ್ರೀಕರ ಮಾರ್ಗ ಶೈಲಿಯನ್ನು ಅಳವಡಿಸಿಕೊಂಡರು.

ರೋಮನ್ : ರೋಮನರು ಗ್ರೀಕರನ್ನು ಗೆದ್ದು ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರೂ ಗ್ರೀಕರ ಕಲೆಗೆ ಮಾರುಹೋದರು. ಪ್ರಾಚೀನತಮ ರೋಮನ್ ಶಿಲ್ಪಶೈಲಿಯ ಮೇಲೆ ಎಟ್ರುಸ್ಕನ್ ಹಾಗೂ ಗ್ರೀಕ್‍ಶೈಲಿಗಳ ಪ್ರಭಾವವಿದ್ದುದು ಸಹಜವೇ. ಅಲ್ಲದೆ ಕ್ರಿ.ಪೂ. 2ನೆಯ ಶತಮಾನದಲ್ಲಿ ತಮ್ಮ ವಿಜಯದ ಅನಂತರ ನೂರಾರು ಗ್ರೀಕ್ ಶಿಲ್ಪಿಗಳನ್ನು ಇಟಲಿಗೆ ತಂದರು.

ರೋಮನ್ ಆಶ್ರಯ ಪಡೆದ ಗ್ರೀಕ್ ಶಿಲ್ಪಿಗಳು ಈ ಕಾಲಕ್ಕೆ ಪರಿಪೂರ್ಣವಾಗಿ ಬೆಳೆದಿದ್ದ ಅಲೆಗ್ಸಾಂಡ್ರಿಯಾದ ಶಿಲ್ಪಶೈಲಿಯನ್ನು ಅಳವಡಿಸಿಕೊಂಡರು. ಕ್ರಿ. ಪೂ 100- ಕ್ರಿ.ಶ. 100ರ ತನಕ ರೋಮನ್ ಭಾವನೆಗಳನ್ನು ಅಭಿವ್ಯಕ್ತಿಸುವ ಶಿಲ್ಪಕೃತಿಗಳನ್ನು ರಚಿಸಿದರು.

ರೋಮನ್ ಶಿಲ್ಪಕಲೆ ಭಾವಪ್ರಧಾನವಾದುದು. ಗ್ರೀಕ್ ದೇವತೆಗಳ ಶರೀರ ಪ್ರಮಾಣಕ್ಕೆ ರೋಮನ್ ವ್ಯಕ್ತಿರೂಪಗಳನ್ನು ಹೊಂದಿಸಿದರು. ಪ್ರಸಿದ್ಧ ಗ್ರೀಕ್ ಶಿಲ್ಪಗಳನ್ನು ತಮಗೆ ಬೇಕಾದಂತೆ ಅನುಕರಿಸಿದರು. ರೋಮನರು ಧಾರ್ಮಿಕ ಸ್ವರೂಪದವರಾಗಿದ್ದುದರಿಂದ ಅನೇಕ ಧಾರ್ಮಿಕ ವಿಧಿಗಳನ್ನು ತೋರುವ ಉಬ್ಬುಶಿಲ್ಪಗಳನ್ನು ರಚಿಸಿದರು. ಹಾಗೆಯೇ ಐತಿಹಾಸಿಕ ಘಟನೆಗಳನ್ನು ಶಿಲ್ಪಗಳ ಮೂಲಕ ನಿರೂಪಿಸುವಲ್ಲಿಯೂ ವಿಶೇಷಾಸಕ್ತಿ ತಳೆದರು. ಸ್ಮಾರಕ ಕಮಾನುಗಳ ಹಾಗೂ ಸ್ತಂಭಗಳ ಮೇಲಿನ ಉಬ್ಬುಗೆತ್ತನೆಗಳು ಸೈನಿಕ ದಿಗ್ವಿಜಯ ಯಾತ್ರೆಗಳನ್ನು ನಿರೂಪಿಸುತ್ತವೆ.

ಮಧ್ಯಯುಗ : ರೋಮನ್ ಸಾಮ್ರಾಜ್ಯದ ಪತನಾನಂತರ ಸ್ಮಾರಕಶಿಲ್ಪಗಳು ಮರೆಯಾದರೂ ದಂತದ ಕುಶಲಕೆತ್ತನೆಗಳಲ್ಲಿ ಕಲೆ ಮುಂದುವರಿಯಿತು. ಬೈಜಾಂಟೈನ್ ಸಾಮ್ರಾಜ್ಯದಲ್ಲಿ ಸಾಂಪ್ರದಾಯಿಕ ಮತ್ತು ಅನನ್ಯ ಶೈಲಿ ಬೆಳೆಯಿತು. ಈ ಕಾಲದ ಶಿಲ್ಪರಚನೆಗೆ ಉತ್ತರಕಾಲೀನ ರೋಮನ್ ಶಿಲ್ಪ ಪ್ರೇರಣೆಪ್ರಭಾವ ಬೀರಿತು. ಬ್ರಿಟನ್‍ನಲ್ಲಿ ಸೆಲ್ಟರು ಹಾಗೂ ಸ್ಯಾಕ್ಸನರು ತಮ್ಮ ಸಾಂಪ್ರದಾಯಿಕ ಕಲಾರೂಪಗಳನ್ನು ಕ್ರೈಸ್ತ ವಸ್ತುವಿಷಯಗಳಿಗೆ ಅನ್ವಯಿಸಿದರು. ಪಕ್ಷಿ, ಬಳ್ಳಿ ವಿನ್ಯಾಸದಿಂದ ಕೂಡಿದ, ಸಂಕೀರ್ಣವಾದ ಅಲಂಕರಣಶೈಲಿಯನ್ನು ತಮ್ಮ ರಚನೆಗಳಿಗೆ ಅಳವಡಿಸಿಕೊಂಡರು. ಕ್ರಿ.ಶ. 1100ರ ಸುಮಾರಿಗೆ ಸ್ಮಾರಕ ಶಿಲ್ಪ ಪುನಶ್ಚೇತನ ಪಡೆಯಿತು. ಚರ್ಚು ಪ್ರಧಾನಶಕ್ತಿಯಾಗಿ ಬೆಳೆಯಿತು. 1135ರ ಹೊತ್ತಿಗೆ ರೋಮನಸ್ಕ್ ಶೈಲಿ ಬೆಳೆವಣಿಗೆ ಹೊಂದಿತು. ಚರ್ಚಿನ ಅಲಂಕರಣಕ್ಕಾಗಿ ಶಿಲ್ಪಕಲೆ ಬೆಳೆಯಿತು. ಗಾತಿಕ್ ಶೈಲಿಯ ಕತೀಡ್ರಲುಗಳ (ಸು. 1150-1300) ನಿರ್ಮಾಣ ಹೆಚ್ಚಿತು.

13ನೆಯ ಶತಮಾನದಲ್ಲಿ ಸಮಾಧಿಶಿಲ್ಪ ಅಪಾರವಾಗಿ ಬೆಳೆಯಿತು. ಮೊದ ಮೊದಲು ರಾಜ ರಾಣಿಯರ, ಮಹಾಪುರಷರ ಅಥವಾ ಗಣ್ಯರ ಭಾವಶಿಲ್ಪಗಳಿಂದ ಕೂಡಿದ ಸಮಾಧಿಗಳು ರಚಿತವಾದವು. ಅನತಿ ಕಾಲದಲ್ಲಿಯೆ ಅಶ್ವಸೈನಿಕರಂಥ ಸಾಮಾನ್ಯರಿಗೂ ಶಿಲ್ಪಿತ ಸಮಾಧಿಗಳು ನಿರ್ಮಿತವಾದುವು. 14ನೆಯ ಶತಮಾನದ ಮೂರ್ತಿಶಿಲ್ಪ ಮಧ್ಯಕಾಲೀನ ಸಮಾಜದ ಈ ಬದಲಾದ ರಾಜಕೀಯ ವ್ಯವಸ್ಥೆಯನ್ನು ಬಿಂಬಿಸಿತು. ದೇಶೀಯ ಶೈಲಿಗೆ ಪ್ರೋತ್ಸಾಹ ಲಭಿಸಿ, ಅದು ಅಭಿವೃದ್ಧಿ ಹೊಂದಿತು. ಈ ಕಾಲದ ದೊಡ್ಡ ಹಾಗೂ ಚಿಕ್ಕ ಮೂರ್ತಿಗಳ ಮುಖದ ಮೇಲೆ ಮಧುರವಾದ ನಗುವನ್ನು ಕಾಣಬಹುದು. 15ನೆಯ ಶತಮಾನದಲ್ಲಿ ಚರ್ಚಿನ ನಿರ್ಮಾಣ ಕಾರ್ಯ ಕಡಿಮೆಯಾಯಿತು. ಚರ್ಚಿನ ಮುಂಭಾಗದ ಅಲಂಕರಣಕ್ಕೆ ಬದಲಾಗಿ, ಅಲಂಕಾರ ಹಾಗೂ ಆರಾಧನೆಗೆ ಒಳಭಾಗದಲ್ಲಿ ಪೀಠ ಮತ್ತು ಸಂತರ ಮೂರ್ತಿಗಳನ್ನು ಶಿಲ್ಪಿಸಲಾಯಿತು. ಫ್ಲಾಂಡೆರ್ಸ್ ಮತ್ತು ದಕ್ಷಿಣ ಜರ್ಮನಿಯ ಕಾರ್ಯಾಗಾರಗಳು ಬೃಹತ್ ಪ್ರಮಾಣದ ಪೀಠ ಮತ್ತು ಮೂರ್ತಿಗಳನ್ನು ತಯಾರಿಸಿ ರಫ್ತು ಮಾಡಿದವು. ವರ್ಣಲೇಪಿತ ಮರದ ಕೆತ್ತನೆಗಳು ಸಹಜಸೊಬಗಿನಿಂದ ಕೂಡಿದ್ದವು.

1490-1510ರ ನಡುವೆ ಉತ್ತರ ಯುರೋಪಿನಲ್ಲಿ ಅನಂತರ ಕಾಲದ ಗಾತಿಕ್ ಶಿಲ್ಪಶೈಲಿ ಪರಾಕಾಷ್ಠೆ ಮುಟ್ಟಿತು. ಅನೇಕ ವೈಯಕ್ತಿಕ ಶೈಲಿಗಳು ರೂಪುಗೊಂಡವು. ಇವಕ್ಕೆ ಇಟಲಿಯ ಪುನರುಜ್ಜೀವನ ಕಾಲದ ಕಲಾಚಟುವಟಿಕೆಗಳು ಸ್ಫೂರ್ತಿನೀಡಿದುವು. ಈ ಕಾಲದ ಶ್ರೇಷ್ಠ ಶಿಲ್ಪಿಗಳಲ್ಲಿ ವೆೃತ್ ಸ್ಟಾಸ್, ತಿಲ್ಮನ್ ರೈಮನ್‍ಷ್ನಿಡರ್ ಮತ್ತು ಮೈಕೆಲ್ ಪಾಷರ್ ಸೇರಿದ್ದಾರೆ. ಉತ್ತರ ಯುರೋಪಿನ ಶಿಲ್ಪ ಸಮುದಾಯವೊಂದು ಈಗಲೂ ಮಧ್ಯಯುಗೀನ ಪರಂಪರೆಯನ್ನು ಅನುಸರಿಸುತ್ತಿದೆ. ಪುನರುಜ್ಜೀವನ ಕಾಲದ ಕಲಾಪರಂಪರೆಯಿಂದ ತುಂಬ ಪ್ರಭಾವಿತರಾದವರಲ್ಲಿ ಕಾನ್ರಾಡ್ ಮೈತ್ ಮತ್ತು 1530ರಲ್ಲಿ ಗಾತಿಕ್‍ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ ವಿಷೆರ್ ಕುಟುಂಬದವರು ಪ್ರಮುಖರು.

ಇಟಲಿಯ ಪುನರಜ್ಜೀವನ ಕಾಲ : ಉತ್ತರ ಯುರೋಪಿನ ಮಧ್ಯಯುಗದ ಶಿಲ್ಪ ಕೆಲವು ಪ್ರಕಾರಗಳನ್ನು ಪ್ರತಿನಿಧಿಸಿತು. ಆದರೆ ಇಟಲಿಯ ಪುನರುಜ್ಜೀವನ ಕಾಲದ ಶಿಲ್ಪಿಗಳು ನಿರ್ದಿಷ್ಟ ಭಾವಶಿಲ್ಪಗಳನ್ನು ರಚಿಸಿದರು. ಈ ಕಾಲದ ಶಿಲ್ಪ ಜೀವನದ ಬಗ್ಗೆ ಹೊಸ ದೃಷ್ಟಿಯನ್ನು ಬಿಂಬಿಸಿತು. ಅನಂತರ ಕಾಲದ ವಿದ್ವಾಂಸರು ಇದನ್ನು 'ಮಾನವತಾವಾದ (ಹ್ಯೂಮನಿಸಂ) ಎಂದು ಕರೆದರು. ಪ್ರಾಚೀನ ಗ್ರೀಕ್ ಮತ್ತು ರೋಮಿನ ನಾಗರಿಕತೆಗಳ ಕಾಲದ ಶಿಲ್ಪದಲ್ಲಿಯೇ ಈ ದೃಷ್ಟಿಯ ಕುರುಹುಗಳನ್ನು ಗುರುತಿಸಬಹುದು. ಮಾರ್ಗಶೈಲಿಯ ವಾಸ್ತುಶಿಲ್ಪ, ಕಲೆ ಮತ್ತು ನಾಗರಿಕತೆಗಳ ಪುನಶ್ಚೇತನವೇ ಈ ಕಾಲದ ಉದ್ದೇಶವಾಗಿತ್ತು. 13ನೆಯ ಶತಮಾನದಲ್ಲಿ ನಿಕೊಲೊ ಪಿಸಾನೊ ಮತ್ತು ಆತನ ಮಗ ಗಿಯೊವಾನ್ನಿ ಮಾಡಿದ ಕ್ರಾಂತಿಕಾರ ಬದಲಾವಣೆಗಳು ಇಟಲಿಯ ಮೂರ್ತಿಶಿಲ್ಪದಲ್ಲಿ ಪುನರುಜ್ಜೀವನಕ್ಕೆ ಅವಕಾಶಮಾಡಿಕೊಟ್ಟವು. 14ನೆಯ ಶತಮಾನದಲ್ಲಿ ರಾಜಕೀಯ ಮತ್ತು ಆರ್ಥಿಕ ತೊಂದರೆಗಳಿಂದಾಗಿ ಇಟಲಿಯಲ್ಲಿ ಮೂರ್ತಿಶಿಲ್ಪ ಚಟುವಟಿಕೆಗಳು ಸೀಮಿತಗೊಂಡವು. ಸು. 1400ರ ಹೊತ್ತಿಗೆ ಫ್ಲಾರೆನ್ಸ್ ನಗರದಲ್ಲಿ ಕಲೆಗೆ ಪುನಶ್ಚೇತನ ದೊರೆತು, ಶಿಲ್ಪಿಗಳಿಗೆ ಪ್ರಾಧಾನ್ಯ ಬಂತು. ಆದರೆ ಗಾತಿಕ್ ಶೈಲಿಯನ್ನು ಬಿಟ್ಟು ಮತ್ತೆ ಮಾರ್ಗಶೈಲಿಯ ಮೆಡಿಟರೇನಿಯನ್ ಶಿಲ್ಪ ಪರಂಪರೆಗಳನ್ನು ಅನುಸರಿಸಿದರು. ಫ್ಲಾರೆನ್ಸ್, ರೋಮ್ ಮತ್ತು ವೆನಿಸ್ ಪ್ರಧಾನ ಕಲಾಕೇಂದ್ರಗಳೆನಿಸಿದವು.

ಫ್ಲಾರೆನ್ಸಿನ ಮಹಾಶಿಲ್ಪಿಗಳಲ್ಲಿ ಡೊನಾಟೆಲೋ ಹೊಸಶಿಲ್ಪ ಯುಗದ ಪ್ರವರ್ತಕನೆನಿಸಿದ. 1409ರ ಹೊತ್ತಿಗೆ ಈತ ರಚಿಸಿದ್ದ 'ಡೇವಿಡ್ ಶಿಲ್ಪದ ವಸ್ತು ಕ್ರೈಸ್ತ ಧರ್ಮದ್ದಾದರೂ ಜೀವಕಳೆ ಸಂಪೂರ್ಣ ಹೊಸದೆನಿಸಿತು. ಸು. 1430ರಲ್ಲಿ ಪೂರ್ಣಗೊಂಡ ಡೇವಿಡ್ ಕಂಚುಶಿಲ್ಪ ನಗ್ನಮೂರ್ತಿಶಿಲ್ಪ ರಚನೆಗೆ ಮತ್ತೆ ನಾಂದಿಹಾಕಿತು.

ಈ ಹೊಸ ಸಹಜತೆ ಮತ್ತು ಜೀವಕಳೆ ಇಟಲಿಯುದ್ದಕ್ಕೂ ಶಿಲ್ಪಕಲೆಯ ಮೇಲೆ ಪರಿಣಾಮ ಬೀರಿತು. ಹಾಡುವ ಮತ್ತು ಕುಣಿಯುವ ಮಕ್ಕಳ ಶಿಲ್ಪಗಳಿಂದ ಚರ್ಚಿನ ಗ್ಯಾಲರಿಗಳು ಅಲಂಕೃತವಾದವು. ಲುಕಡೆಲ್ಲಾ ರೊಬಿಯಾ ಎಂಬವವನು ಸುಡಾವೆ ಮಣ್ಣಿನಲ್ಲಿ ಮಾಡಿದ ಬಣ್ಣದ ಮೂರ್ತಿಗಳು ಜನಪ್ರಿಯವಾಗಿ ಹಲವು ತಲೆಮಾರುಗಳವರೆಗೆ ಅನುಕರಿಸಲ್ಪಟ್ಟವು. ಸ್ಥಳೀಯ ಸುಂದರಿಯರನ್ನೇ ಪ್ರಾಯಶಃ ಮಾದರಿಯಾಗಿಟ್ಟುಕೊಂಡು ಮೇರಿಕನ್ಯೆಯ ಮೂರ್ತಿಗಳನ್ನು ಶಿಲ್ಪಿಗಳು ನಿರ್ಮಿಸಲಾರಂಭಿಸಿದರು. ಇವುಗಳ ಶಿಲ್ಪಶೈಲಿ ರೋಮನಸ್ಕ್ ಮತ್ತು ಗಾತಿಕ್ ಶೈಲಿಗಳಿಗಿಂತ ಭಿನ್ನವಾದುದು.

15ನೆಯ ಶತಮಾನದಲ್ಲಿ ಇತರ ಹೊಸ ಶಿಲ್ಪರೂಪಗಳು-ಜೀವ ಪ್ರಮಾಣದ, ಎದೆಮಟ್ಟದ ಭಾವಶಿಲ್ಪಗಳು, ಮಾರ್ಗಶೈಲಿಯ ಬೃಹತ್ ಸ್ಮಾರಕಶಿಲ್ಪಗಳು ಇತ್ಯಾದಿ-ಅಭಿವೃದ್ಧಿ ಹೊಂದಿದವು. ಜ್ಯೂಲಿಯಸ್ ಸೀಸರ್‍ನ ಉಬ್ಬುಶಿಲ್ಪವೂ ಸೇರಿದಂತೆ ಅನೇಕ ಭಾವಶಿಲ್ಪಗಳ ರಚನೆಗೆ ಡೆಸಿಡೆರಿಯೊ ಡ ಸೆತಿಗ್ನಾನೊ ಎಂಬ ಶಿಲ್ಪಿ ಖ್ಯಾತಿಗಳಿಸಿದ. ಜಾಕೊಪೊ ಡೆಲ್ಲಾ ಕ್ವೆರ್ಸಿಯಾ, ಮೈಕೆಲೊಜೊಮೈಕೆಲೊಜಿ, ಆ್ಯಂಟೋನಿಯೊ ರೊಸಾಲಿಯೊ, ಡೊನಾಟೆಲೋ, ನವಶೈಲಿಯಿಂದ ಪ್ರಭಾವಿತರಾದ ಮಾಂಟೆಗಾಜಾ, ಗಿಯೋವಾನಿ ಮುಂತಾದ ಹಲವಾರು ಶಿಲ್ಪಿಗಳು ಈ ಕಾಲದಲ್ಲಿ ಪ್ರಖ್ಯಾತರಾದರು. ಈ ಶತಮಾನದ ಕೊನೆಯಲ್ಲಿ ಖ್ಯಾತರಾದವರಲ್ಲಿ ಆ್ಯಂಟೋನಿಯೊ ಡೆಲ್ ಪೊಲೈನಾಲೊ, ಆ್ಯಂಡ್ರಿಯಾ ಡೆಲ್‍ವೆರಾಷಿಯೊ ಮುಂತಾದವರಿದ್ದಾರೆ.

16ನೆಯ ಶತಮಾನದ ಮೈಕೆಲೆಂಜೆಲೋ (ನೋಡಿ- ಮೈಕೆಲೆಂಜೆಲೋ) ಎಂಬ ಕಲಾಕಾರನಲ್ಲಿ ಇಟಲಿಯ ಕಲಾ ಪ್ರತಿಭೆ ಪರಾಕಾಷ್ಠೆ ತಲುಪಿತು. ಈತ ತನ್ನ ಶಿಲ್ಪಗತ ವ್ಯಕ್ತಿಗಳನ್ನು ದೈವೀ ಮಟ್ಟಕ್ಕೆ ಒಯ್ಯುವ ಸಾಹಸ ಮಾಡಿದ್ದಾನೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. 6 ಮೀಟರ್ ಎತ್ತರದ ಡೇವಿಡ್‍ನ ಶಿಲ್ಪ. "ಮೊಸೆಸ್ 'ಕರುಣೆ ಮುಂತಾದವು ಈತನ ಅದ್ಭುತ ಸೃಷ್ಟಿಗಳು.

(ನೋಡಿ- ಇಟಲಿ)

ಐರೋಪ್ಯ ಶಿಲ್ಪಿಗಳು (1600-1900) : 17ನೆಯ ಶತಮಾನದ ಯುರೋಪಿನ ಮಾಹಾಶಿಲ್ಪಿ ಇಟಲಿಯ ಗಿಯೋವಾನ್ನಿ ಲೊರೆಂಜೊ. 'ಏಳನೆಯ ಪೋಪ್ ಅಲೆಗ್ಸಾಂಡರನ ಸಮಾಧಿ ಶಿಲ್ಪ ಈತನ ಬಹುಮುಖ ಪ್ರತಿಭೆಯ ದ್ಯೋತಕವಾಗಿದೆ. ಅನಂತರದ ಶಿಲ್ಪಿಗಳು ಈತನ ಶೈಲಿಯನ್ನು ಅನುಕರಿಸಿದರು. ಈ ಎಲ್ಲರ ಪ್ರಭಾವ ಫ್ರಾನ್ಸ್ ಮತ್ತು ಫ್ಲಾಂಡೆರ್ಸ್‍ನ ಶಿಲ್ಪಿಗಳ ಮೇಲಾಗಿ ಫ್ರಾಂಕೊ-ಫ್ಲೆಮಿಷ್ ಶಿಲ್ಪ ಪಂಥದ ಸ್ಥಾಪನೆಯಾಯಿತು.

ಫ್ರಾಂಕೊ-ಫ್ಲೆಮಿಷ್ ಶಿಲ್ಪಿಗಳು 18ನೆಯ ಶತಮಾನದಲ್ಲಿ ಉತ್ತರ ಯುರೋಪಿನಲ್ಲಿ ಕಟ್ಟಲಾದ ಚರ್ಚು ಮತ್ತು ಇತರ ಸಾರ್ವಜನಿಕ ಕಟ್ಟಡ ಶಿಲ್ಪಗಳಿಗೆ ಕಾರಣರಾದರು. ಇವರ ಶಿಲ್ಪಕೃತಿಗಳು ಅನೇಕ ಅರಮನೆ, ಉದ್ಯಾನವನಗಳನ್ನು ಅಲಂಕರಿಸಿದವು. ಈ ಕಲಾಕಾರರೆಲ್ಲ ಏಕರೂಪದ ಶೈಲಿಯನ್ನು ಅಳವಡಿಸಿಕೊಂಡರು.

ರೊಕೊಕೊ ಎಂದು ಕರೆಯಲಾದ ಹೊಸ ಕಲಾಚಳವಳಿಯೊಂದು ಬೆಳೆಯಿತು. 18ನೆಯ ಶತಮಾನದಲ್ಲಿ, ಜರ್ಮನಿಯಲ್ಲಿ ಇದರ ನೇತೃತ್ವವನ್ನು ಇಗ್ನಾಜ್‍ಗಂಥರ್, ಫರ್ಡಿನಾಂಡ್ ಡಿಯೆಜ್ ಎಂಬ ಕಲಾವಿದರು ವಹಿಸಿದರು. ಈ ಕಾಲದ ಶಿಲ್ಪಗಳು ನಾಟಕೀಯವಾದ, ವರ್ಣಮಯವಾದ ಮತ್ತು ತಾಂತ್ರಿಕವಾಗಿ ಶ್ರೇಷ್ಠವಾದ ರಚನೆಗಳಾಗಿದ್ದು 'ಫ್ಯಾಂಟಸಿಯ ಲೋಕಕ್ಕೆ ಕರೆದೊಯ್ಯುವಂಥವಾಗಿದ್ದವು.

18ನೆಯ ಶತಮಾನದ ಅಂತ್ಯದಲ್ಲಿ 'ನವಮಾರ್ಗ (ನಿಯೊಕ್ಲಾಸಿಕಲ್) ಚಳವಳಿ ಉದಿಸಿತು. ಅಂತಾರಾಷ್ಟ್ರೀಯ ಸ್ವರೂಪದ ಇದರ ಸದಸ್ಯರು ಕಲೆಯ ಮಾರ್ಗ ಶೈಲಿಯ ಸಿದ್ಧಾಂತಗಳನ್ನು ಸಂರಕ್ಷಿಸಲು ಪ್ರಯತ್ನಿಸಿದರು. ಇವರು ನೇರವಾಗಿ ಗ್ರೀಕ್ ಶಿಲ್ಪಶೈಲಿಯನ್ನು ಅನುಕರಿಸಿದರು; ನಗ್ನತೆ ಹಾಗೂ ನೆರಿಗೆಯುಳ್ಳ ವಸ್ತ್ರವಿನ್ಯಾಸವನ್ನು ಸಮರ್ಥಿಸಿದರು. ಇಟಲಿಯ ಆ್ಯಂಟೋನಿಯೊ ಕೆನೊವಾ, ಇಂಗ್ಲೆಂಡಿನ ಜಾನ್ ಫಾಕ್ಸ್‍ಮನ್, ಡೆನ್ಮಾರ್ಕಿನ ಬರ್ಟೆಲ್ ಥೊರ್ವಲ್ಸನ್ ಮುಂತಾದವರು ನವ ಮಾರ್ಗಶೈಲಿಯ ಶಿಲ್ಪಿಗಳಲ್ಲಿ ಪ್ರಖ್ಯಾತರಾದರು.

ಸು. 1830 ರ ದಶಕದಲ್ಲಿ ಆರಂಭವಾದ ರಮ್ಯ (ರೊಮ್ಯಾಂಟಿಕ್) ಪಂಥ 1900ರ ತನಕ ನವಮಾರ್ಗ ಶೈಲಿಯ ಜೊತೆಜೊತೆಯಲ್ಲಿಯೇ ಬೆಳೆಯಿತು. ಭಾವಪ್ರಧಾನವಾದ ಈ ಶೈಲಿ ವೈಯಕ್ತಿಕ ಭಾವನೆ ಕಲ್ಪನೆಗಳಿಗೆ ವಿಶೇಷ ಮಹತ್ತ್ವ ನೀಡಿತು. ಫ್ರೆಂಕೋ ರೂಡ್, ಬೇನ್ ಬ್ಯಾಪ್ಟಿಸ್ಟ ಕಾರ್ಪೆಕ್ಲ್, ಆಗಸ್ಟ್ ರೊಡಿನ್ ಮುಂತಾದವರು ಈ ಪಂಥದ ಮುಖ್ಯರು. ರೊಡಿನ್ನನ ತಂತ್ರ 20ನೆಯ ಶತಮಾನದ ಶಿಲ್ಪದ ಮೇಲೆ ತುಂಬ ಪ್ರಭಾವ ಬೀರಿತು.

ಅಮೆರಿಕನ್ ಶಿಲ್ಪಿಗಳು : 18ನೆಯ ಶತಮಾನದ ತನಕ ವೃತ್ತಿಪರ ಶಿಲ್ಪಿಗಳು ಉತ್ತರ ಅಮೆರಿಕದಲ್ಲಿ ಇರಲಿಲ್ಲವಾದರೂ ಸೊಗಸಾದ ಜನಪದ ಶಿಲ್ಪಕೃತಿಗಳು ಇಲ್ಲಿ ಕಂಡುಬರುತ್ತದೆ.

ಪ್ರಾಚೀನತಮ ಅಮೆರಿಕನ್ ಶಿಲ್ಪಿಗಳು ಮೇಣದಲ್ಲಿ ಉಬ್ಬು ಕೆತ್ತನೆಗಳನ್ನು ಮತ್ತು ಮರದಲ್ಲಿ ಅಲಂಕರಣ ಮೂರ್ತಿಗಳನ್ನು ರಚಿಸಿದರು. ಮರದ ಕೆತ್ತನೆಗಾರರಲ್ಲಿ ವಿಲಿಯಂ ರಷ್ ಶ್ರೇಷ್ಠನೆನಿಸಿದ. 1785ರಲ್ಲಿ ಫ್ರಾನ್ಸಿನ ಶ್ರೇಷ್ಠಶಿಲ್ಪಿ ಜೀನ್ ಆ್ಯಂಟೋನಿ ಹೌಡನ್ ಅಮೆರಿಕಕ್ಕೆ ಬಂದು ಜಾರ್ಜ್ ವಾಷಿಂಗ್‍ಟನ್‍ನ ಪ್ರತಿಮೆಯನ್ನು ಕಂಡರಿಸಿದ. ಇಟಲಿಯ ಹಲವು ಶಿಲ್ಪಿಗಳು ವಾಷಿಂಗ್‍ಟನ್ನಿನಲ್ಲಿ ಅಲಂಕರಣದ ಚಿತ್ತಾರ ಕೆಲಸವನ್ನು ಮಾಡಿದರು.

1820ರ ದಶಕದಲ್ಲಿ ಅಮೆರಿಕನ್ ಶಿಲ್ಪಿಗಳು ಇಟಲಿಗೆ ಹೋಗಿ ತರಬೇತಿ, ಪರಿಣತಿ ಪಡೆಯಲಾರಂಭಿಸಿದರು. ತಾವು ಕಂಡ ಮಾರ್ಗಶೈಲಿಯ ಶಿಲ್ಪಗಳಿಂದ ಇವರು ತುಂಬ ಪ್ರಭಾವಿತರಾದರು. ಅಮೃತಶಿಲೆಯಲ್ಲಿ ಜಾರ್ಜ್ ವಾಷಿಂಗ್‍ಟನ್‍ನ ಬೃಹನ್ಮೂರ್ತಿಯನ್ನು ಮಾಡಲು ಹೊರಾಷಿಯೊ ಗ್ರೀನಫ್‍ನನ್ನು ಅಮೆರಿಕದ ಕಾಂಗ್ರೆಸ್ ಆಹ್ವಾನಿಸಿತು. ಗ್ರೀಕ್ ದೇವತೆ 'ಜ್ಯೂಸ್ ಭಂಗಿಯಲ್ಲಿ ಕುಳಿತ ವಾಷಿಂಗ್‍ಟನ್‍ನ ಅರೆನಗ್ನ ಪ್ರತಿಮೆಯನ್ನು ಈತ ನಿರ್ಮಿಸಿದ. ಹೀರಂ ಪವರ್ಸ್ ಎಂಬಾತ ಪುರಾಣ ಪುರುಷರ ನಗ್ನ ಮೂರ್ತಿಗಳನ್ನು ಹಾಗೂ ಸಾರ್ವಜನಿಕ ಗಣ್ಯರ ಎದೆಮಟ್ಟದ ಶಿಲ್ಪಗಳನ್ನು ನಯವಾಗಿ ಹಾಗೂ ಮನೋಹರವಾಗಿ ರೂಪಿಸಿದ. ಕೆಲವು ನಾಟಕೀಯ ಭಂಗಿಯ ಮತ್ತು ಹೋರಾಟನಿರತ ಶಿಲ್ಪಗಳ ರೂವಾರಿ ವಿಲಿಯಂ ರಿಮ್ಮರ್; ಇವನ ಶಿಲ್ಪಗಳು ಹಿಂದಿನ ಶಿಲ್ಪಕ್ಕಿಂತ ಹೆಚ್ಚು ಭಾವಪ್ರಧಾನವಾದವು. ಇವುಗಳಲ್ಲಿ ಶಿಲ್ಪಿಯ ಶರೀರಶಾಸ್ತ್ರಜ್ಞಾನ ಎದ್ದು ಕಾಣುತ್ತದೆ. ನಾಗರಿಕ ಹೋರಾಟದ ದೃಶ್ಯಗಳನ್ನು ಮತ್ತು ದೈನಂದಿನ ಬದುಕಿನ ಸನ್ನಿವೇಶಗಳನ್ನು ಜಾನ್‍ರೋಜರ್ಸ್ ಎಂಬುವನು ಶಿಲ್ಪದಲ್ಲಿ ಸೆರೆಹಿಡಿದ.

19ನೆಯ ಶತಮಾನದ ಉತ್ತರಾರ್ಧದಲ್ಲಿ ಇಟಲಿಗಿಂತ ಫ್ರಾನ್ಸಿನ ಪ್ರಭಾವ ಹೆಚ್ಚಿತು. ಆಗಸ್ಟಸ್ ಸೇಂಟ್ ಗಾಡೆನ್ಸ್ ಈ ಕಾಲದ ಖ್ಯಾತ ಶಿಲ್ಪಿ: ಏಬ್ರಹ್ಯಾಮ್ ಲಿಂಕನ್ನನ ಪ್ರತಿಮೆ ಈತನ ಜನಪ್ರಿಯ ಕೃತಿಗಳಲ್ಲೊಂದು. ಈ ಶತಮಾನದ ಕೊನೆಯ ಭಾಗದ ಹೆಸರಾಂತ ಶಿಲ್ಪಿಗಳಲ್ಲಿ ಡೇನಿಯಲ್ ಚೆಸ್ಟರ್ ಫ್ರೆಂಚ್, ಜಾರ್ಜ್‍ಗ್ರೇ ಬರ್ನಾಡ್, ಫ್ರೆಡೆರಿಕ್ ಮ್ಯಾಕ್‍ಮನಿಸ್, ಫ್ರೆಡೆರಿಕ್ ರೆಮಿಂಗ್‍ಟನ್ ಮುಂತಾದವರು ಸೇರಿದ್ದಾರೆ.

ಆಫ್ರಿಕನ್ : ಇಲ್ಲಿಯ ಶಿಲ್ಪಮೂರ್ತಿ ಮುಖವಾಡ. ಆಲಂಕರಣ ಕೆತ್ತನೆ ಇತ್ಯಾದಿಗಳಿಂದ ಕೂಡಿದೆ. ಮರದ ಶಿಲ್ಪಗಳು ಹೆಚ್ಚು ಪ್ರಾಚೀನವಲ್ಲ. ಆದರೆ ದಂತ, ಕಂಚು ಮತ್ತು ಸುಡಾವೆಮಣ್ಣಿನ ಶಿಲ್ಪಗಳು ಹಲವು ಶತಮಾನಗಳಷ್ಟು ಹಿಂದಿನವು. ಅತಿಪ್ರಾಚೀನ ಶಿಲ್ಪವೆಂದರೆ ನ್ಯೆಜೀರಿಯದ ನೋಕ್ ಸಂಸ್ಕøತಿಗೆ ಸೇರಿದ ಸುಡಾವೆಮಣ್ಣಿನ ಮೂರ್ತಿಗಳು (ಕ್ರಿ. ಪೂ. 500).

ಆಫ್ರಿಕದ ಪಶ್ಚಿಮ ಹಾಗೂ ಮಧ್ಯಭಾಗಗಳಲ್ಲಿ ಪ್ರಮುಖವಾಗಿ ಮೂರ್ತಿ ಮತ್ತು ಮುಖವಾಡ ಶಿಲ್ಪಗಳು ಕಂಡುಬರುತ್ತವೆ. ಅನೇಕ ಮೂರ್ತಿಗಳು ಪೂರ್ವಜರನ್ನು ಪ್ರತಿನಿಧಿಸುತ್ತವೆ; ವೇಷಭೂಷಣಗಳಿಂದ ಅಲಂಕೃತವಾಗಿವೆ. ಎದ್ದುಕಾಣುವ ಬಣ್ಣಗಳನ್ನು ಬಳಿಯಲಾಗಿದೆ. ಪೀಠೋಪಕರಣ, ಕಿರೀಟ, ದಂಡ, ಪ್ರಸಾದನ ಪೆಟ್ಟಿಗೆ, ಬಾಗಿಲು, ಕಹಳೆ ಮುಂತಾದ ಶಿಲ್ಪಮಯ ವಸ್ತುಗಳೂ ರೂಪಿತವಾಗಿವೆ. ಪ್ರಾಣಿಶಿಲ್ಪ ಗಮನಾರ್ಹ. ಮೂರ್ತಿ ಮತ್ತು ಮುಖವಾಡ ಶಿಲ್ಪಗಳಲ್ಲಿ ಕ್ರೌರ್ಯ ಎದ್ದು ಕಾಣುವ ಅಂಶ. ಷಂಬಾ ಬೊಲೊಂಗಾಂಗೊ ಎಂಬ ರಾಜನ ಮೂರ್ತಿ ಇಲ್ಲಿಯ ಹೆಸರಾಂತ ಶಿಲ್ಪಕೃತಿಗಳಲ್ಲೊಂದು. ಫಲವತ್ತತೆ, ಆರೋಗ್ಯ, ಸಂಪತ್ತು, ವಿಶ್ವಶಕ್ತಿ ಮತ್ತಿತರ ಅಂಶಗಳನ್ನು ಇದು ಧ್ವನಿಸುತ್ತದೆ ಎಂದು ಹೇಳುತ್ತಾರೆ. ಬಟ್ಟೆ, ಲೋಹ, ಗರಿ, ಬಣ್ಣ ಮುಂತಾದವೆಲ್ಲ ಸೇರಿ ಆಫ್ರಿಕದ ಶಿಲ್ಪವಸ್ತುಗಳು ಸಂಕೀರ್ಣವಾಗಿ ತೋರುತ್ತವೆ.

ಪೆಸಿಫಿಕ್ ದ್ವೀಪಗಳು : ಆಫ್ರಿಕದ ಶಿಲ್ಪಕೃತಿಗಳಿಗಿಂತ ಇಲ್ಲಿಯ ಮುಖವಾಡ ಮತ್ತು ಮೂರ್ತಿ ಶಿಲ್ಪಗಳು ಹೆಚ್ಚು ವೈವಿಧ್ಯಮಯವಾಗಿ ಕಾಣುತ್ತವೆ. ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪವಾಸಿಗಳು ಮರದ ತೊಗಟೆ, ಚಿಪ್ಪು, ಗರಿ ಮುಂತಾದ ಸಾಮಗ್ರಿಗಳನ್ನು ಶಿಲ್ಪ ನಿರ್ಮಾಣಕ್ಕೆ ಬಳಸಿಕೊಂಡರು. ಆಫ್ರಿಕದಲ್ಲಿ ಅತಿವಿರಳವಾದ ಬೃಹತ್‍ಶಿಲಾಶಿಲ್ಪಗಳು ತಾಹಿತಿ, ಈಸ್ಟರ್‍ದ್ವೀಪ, ಆಸ್ಟ್ರಲ್, ಸೊಲೊಮನ್ ದ್ವೀಪಗಳಲ್ಲಿ ಕಂಡುಬರುತ್ತವೆ. ಇಂಡೋನೇಷ್ಯದ (ನೋಡಿ- ಇಂಡೋನೇಷ್ಯ) ಹಲವೆಡೆ ಸಹ ಗೋಚರಿಸುತ್ತವೆ. ಪೆಸಿಫಿಕ್ ದ್ವೀಪಗಳ ಶಿಲ್ಪಗಳು ಹೆಚ್ಚಾಗಿ ನಶಿಸಿಹೋಗುವ ಸಾಮಗ್ರಿಗಳಿಂದ ರೂಪುಗೊಂಡದ್ದರಿಂದ ಉಳಿದುಬಂದಿಲ್ಲ. ಅತಿ ಪ್ರಾಚೀನ ಶಿಲ್ಪಗಳ ಕಾಲ ಕ್ರಿ. ಪೂ. 1000-500.

ಇಲ್ಲಿಯ ಶಿಲ್ಪಗಳು ಭೂತ, ಪಿಶಾಚಿ, ರಾಕ್ಷಸ, ದೇವದೇವತೆ, ಪೂರ್ವಜರು, ಮೃತಾತ್ಮರು ಮುಂತಾದ ವಿಷಯಾಂಶಗಳಿಂದ ಕೂಡಿವೆ. ನ್ಯೂ ಬ್ರಿಟನ್ನಿನ ಬೈನಿಂಗ್ ಜನ ಬಿದಿರು, ಎಲೆ, ತೊಗಟೆ ಇತ್ಯಾದಿಗಳಿಂದ ಬೃಹನ್ಮೂರ್ತಿಗಳನ್ನು ಮಾಡಿದರು. ನ್ಯೂಗಿನಿ (ನೋಡಿ- ನ್ಯೂಗಿನಿ) ದ್ವೀಪದ ಅಸ್ಮತ್ ಎಂಬ ಜನ ಈಗಲೂ ಮೃತರಿಗೆ ಚಿತ್ತಾರಗಳಿಂದ ಕೂಡಿದ ಸ್ತಂಭಗಳನ್ನು ನಿಲ್ಲಿಸುತ್ತಾರೆ. ಅವರೆಲ್ಲ ಬೇಟೆ ಅಥವಾ ಮಾಟ ಮಂತ್ರಗಳಿಗೆ ಬಲಿಯಾದವರೆಂದು ನಂಬುತ್ತಾರೆ; ಮೃತರನ್ನು ಒಯ್ಯುವ ಬೃಹತ್ ದೋಣಿಶಿಲ್ಪಗಳನ್ನು ಬಿಡಿಸುತ್ತಾರೆ. ಪ್ರಾಯಶಃ ಇಂಡೋನೇಷ್ಯದ ಶಿಲ್ಪಕಲೆಯ ಪ್ರೇರಣೆ ಪ್ರಭಾವ ಇಲ್ಲಿದ್ದಿರಬಹುದು. ಕ್ರಿ. ಪೂ. 500ರಿಂದಲೂ ಮೃತಾತ್ಮ ದೋಣಿ (ಸೋಲ್‍ಬೋಟ್) ಒಂದು ಪ್ರಧಾನ ಶಿಲ್ಪವಸ್ತುವಾಗಿದೆ.

ನ್ಯೂ ಗಿನಿಯ ಸೆಪಿಕ್ ನದಿ ಪ್ರದೇಶದ ಜನ ಚಾಚಿದ ನಾಲಗೆಯ ರಾಕ್ಷಸ ಮುಖವಾಡ ಹಾಗೂ ಪ್ರತಿಮೆಗಳನ್ನು ತಯಾರಿಸುತ್ತಾರೆ. ಇವಕ್ಕೆ ಕೆಡುಕನ್ನು ದೂರ ಮಾಡುವ, ಶತ್ರುಗಳಿಗೆ ಕೇಡುಂಟುಮಾಡುವ ಶಕ್ತಿ ಇರುತ್ತದೆಂದು ಅವರು ನಂಬುತ್ತಾರೆ. ಸೆಪಿಕ್ ಶಿಲ್ಪಶೈಲಿ ಮೂಲತಃ ಆಗ್ನೇಯ ಏಷ್ಯ ಅಥವಾ ದಕ್ಷಿಣ ಚೀನದ ಭಾವನೆ ಕಲ್ಪನೆಗಳಿಂದ ಪ್ರಾಯಶಃ ಪ್ರಭಾವಿತವಾಯಿತು. ಮಧ್ಯಬೋರ್ನಿಯೊ ಮತ್ತು ಉತ್ತರ ಸುಮಾತ್ರ ದ್ವೀಪಗಳಲ್ಲಿ ಸೆಪಿಕ್ ಜನರನ್ನು ಹೋಲುವ ಶಿಲ್ಪಗಳು ಕಂಡುಬಂದಿವೆ. ನ್ಯೂಜಿಲೆಂಡಿನ ಮಾವೊರಿ ಶಿಲ್ಪ ಸಹ ಇದೇ ಶೈಲಿಯದು.

ಮಕ್ಕಳಿಗೆ ಆಯುರಾರೋಗ್ಯ ನೀಡುವ ಉದ್ದೇಶದ ಧಾರ್ಮಿಕ ವಿಧಿಗಳಿಗಾಗಿ ರೂಪಿಸಲಾದ 'ಗೂಬೆ-ಮುಖವಾಡ ಶಿಲ್ಪಗಳನ್ನು ಬೈನಿಂಗ್ ಜನ ತಯಾರಿಸಿದರು. ಬೃಹದ್ಗಾತ್ರ ಮತ್ತು ವಿಚಿತ್ರ ಆಕಾರದ ಇವು ನಶಿಸುವ ಸಾಮಗ್ರಿಗಳಲ್ಲಿ ರೂಪಿತವಾದವು. ಮೆಲನೇಷಿಯನ್ನರ ಕಲೆಯನ್ನು ವಿಶಿಷ್ಟವಾಗಿಸುವುದು ಇಂಥ ಶಿಲ್ಪ ಕೃತಿಗಳೇ.

ಪಾಲಿನೇಷಿಯನ್ ಶಿಲ್ಪಕಲೆಯಲ್ಲಿ ವರ್ಣಕ್ಕೆ ಪ್ರಾಧಾನ್ಯವಿಲ್ಲ. ಬದಲಾಗಿ ಅವಕಾಶಕ್ಕೆ ಒತ್ತು ನೀಡಿದ ಶಿಲ್ಪಕೃತಿಗಳು ಗಾಂಭೀರ್ಯದ ಭಾವ ಬಿಂಬಿಸುತ್ತವೆ. ಟ್ಯಾಂಗರೋವಾ ಎಂಬ ದೇವತೆ ತನ್ನ ದೇಹದಿಂದಲೇ ಇತರ ದೇವತೆಗಳನ್ನು ಸೃಷ್ಟಿಸುತ್ತಿರುವುದನ್ನು ತೋರುವ ಅಪೂರ್ವ ಶಿಲ್ಪ ಗಮನಾರ್ಹ. ಈ ದೇವತೆಯ ಶಾಂತ ಮತ್ತು ಅಚಲ ನಿಲುವು ಇತರ ದೇವತೆಗಳ ಸಕ್ರಿಯ ಭಾವ ಭಂಗಿಗಳು ಈ ಶಿಲ್ಪದ ಹಿರಿಮೆ ಗಾಂಭೀರ್ಯಗಳನ್ನು ಸಮರ್ಥವಾಗಿ ಬಿಂಬಿಸುತ್ತವೆ.

ಅಮೆರಿಕನ್-ಇಂಡಿಯನ್ : ಈ ಎರಡೂ ಸಂಸ್ಕøತಿಗಳನ್ನು ಸ್ಥೂಲವಾಗಿ ಎರಡು ಸಮುದಾಯಗಳಾಗಿ ವಿಂಗಡಿಸಬಹುದು_ಕೊಲಂಬಿಯನ್ ಪೂರ್ವ ಹಾಗೂ ಬುಡಕಟ್ಟು ಅಮೆರಿಕನ್-ಇಂಡಿಯನ್. ಕೊಲಂಬಿಯನ್ ಪೂರ್ವ ಸಂಸ್ಕøತಿಗಳಲ್ಲಿ ಮೆಕ್ಸಿಕನ್, ಪೆರುವಿಯನ್ ಹಾಗೂ ಇತರ ಪ್ರಾಚೀನ ಸಂಸ್ಕøತಿ ನಾಗರಿಕತೆಗಳು ಸೇರಿವೆ. ಬುಡಕಟ್ಟು ಅಮೆರಿಕನ್-ಇಂಡಿಯನ್ ಸಂಸ್ಕøತಿಗಳು ಎಸ್ಕಿಮೋಗಳನ್ನು ಹೊರತುಪಡಿಸಿ, ಉತ್ತರ, ಮತ್ತು ದಕ್ಷಿಣ ಅಮೆರಿಕದ ಮೂಲನಿವಾಸಿಗಳಿಗೆ ಸಂಬಂಧಿಸಿವೆ. ಕೊಲಂಬಿಯನ್ ಪೂರ್ವ ನಾಗರಿಕತೆಗಳಲ್ಲಿ ಪುರೋಹಿತ, ಯೋಧ, ನಾಯಕ, ವ್ಯಾಪಾರಿ, ಕಲಾವಿದ ಪ್ರಧಾನಪಾತ್ರ ವಹಿಸಿದರು. ಧರ್ಮಾಚರಣೆ, ಪಂಚಾಂಗ ಹಾಗೂ ಖಗೋಳ ವಿಜ್ಞಾನಗಳಿಗೆ ಸಂಬಂಧಿಸಿದ ಶಿಲ್ಪವೈಭವ ಬೆರಗುಗೊಳಿಸುತ್ತದೆ. ಗಾರೆ, ಜೇಡ್‍ಶಿಲೆ, ಟರ್‍ಕಾಯ್ಸ್ ಶಿಲೆ ಮುಂತಾದ ಕಠಿಣ ಸಾಮಗ್ರಿಗಳನ್ನು ಆರಿಸಿಕೊಂಡು ಕಲಾಕಾರರು ಶಿಲ್ಪರಚನೆಯಲ್ಲಿ ತೊಡಗಿದರು.

ಕೊಲಂಬಿಯನ್ ಪೂರ್ವಕಾಲದ ಅತಿಪ್ರಾಚೀನ ನಾಗರಿಕತೆ ಎಂದರೆ ಕ್ರಿ. ಪೂ. 1200-100ರ ತನಕ ಮೆಕ್ಸಿಕೋದ ಕೊಲ್ಲಿ ಪ್ರದೇಶದಲ್ಲಿದ್ದ ಓಲ್ಮೀ ನಾಗರಿಕತೆ. ಶಿಲೆಯ ಬೃಹತ್ ಶಿರಶಿಲ್ಪ, ಬಂಡೆಯಲ್ಲಿ ಬಿಡಿಸಿದ ಉಬ್ಬುಗೆತ್ತನೆ, ಶಿಲ್ಪಿತ ಪೀಠ, ಸ್ಮಾರಕಶಿಲ್ಪಸ್ತಂಭಗಳು, ಆವೆಮಣ್ಣಿನಲ್ಲಿ ಮತ್ತು ಜೇಡ್ ಶಿಲೆಯಲ್ಲಿ ಮಾಡಿದ ಪುಟ್ಟ ಮೂರ್ತಿಗಳು ಮುಂತಾದವು ಓಲ್ಮೀ ಶಿಲ್ಪ ಸಂಪತ್ತಿನಲ್ಲಿ ಸೇರಿವೆ. ಹೆಚ್ಚಾಗಿ ಕಂಡು ಬರುವ ಶಿಲ್ಪವಸ್ತು ಅರೆಚಿರತೆ-ಅರೆಮಗುವಿನ ಮೂರ್ತಿ. ಇದನ್ನು ಮಳೆ ದೇವತೆ ಎಂದು ವಿದ್ವಾಂಸರು ಭಾವಿಸುತ್ತಾರೆ. ಈ ಶಿಲ್ಪ ಗಾತ್ರದಲ್ಲಿ ದೊಡ್ಡದಿದ್ದರೂ ವಿನ್ಯಾಸದಲ್ಲಿ ಸರಳವಾಗಿದ್ದು, ವೇಷಭೂಷಣಕ್ಕೆ ಒತ್ತು ನೀಡಿರುವುದು ಕಂಡುಬರುತ್ತದೆ.

ಓಲ್ಮೀ ಸಂಸ್ಕøತಿ ಅವನತಿ ಹೊಂದಿದ ತರುವಾಯ ಮೆಕ್ಸಿಕೋದಲ್ಲಿ ಬೆಳೆದುಬಂದ ಪ್ರಧಾನ ನಾಗರಿಕತೆಗಳೆಂದರೆ ಟಿಯೊಟಿಹುಕನ್, ಕ್ಲಾಸಿಕ್ ವೆಕ್ರ್ರಜ್, ಮಾಂಟೆ ಅಲ್ಬನ್ ಹಾಗೂ ಮಾಯಾ (ನೋಡಿ- ಮಾಯಾ) ನಾಗರಿಕತೆಗಳು. ಆಜ್ಟೆಕ್ ಶೈಲಿಯ ಮೂರ್ತಿಗಳು ಉತ್ಕøಷ್ಟವಾದವು.

ಪೆರು ಮತ್ತು ನೆರೆಯ ಮಧ್ಯ ಆಂಡೀಸ್ ಪರ್ವತ ಪ್ರದೇಶದಲ್ಲಿಯೂ ಕೊಲಂಬಿಯ ಪೂರ್ವ ನಾಗರಿಕತೆಗಳು ಉನ್ನತಿ ಸಾಧಿಸಿದವು. ಕ್ರಿ. ಪೂ. 800ರಲ್ಲಿ ಆರಂಭವಾದ ಚಾವಿನ್ ಸಂಸ್ಕøತಿಯ ಜನ ರೆಕ್ಕೆಯುಳ್ಳ ಮಾನವ, ಚಿರತೆ. ಪಕ್ಷಿದೇವತೆ ಶಿಲ್ಪಗಳನ್ನು ಕಲ್ಲು, ಚಿನ್ನ, ಚಿಪ್ಪು ಅಥವಾ ಮಣ್ಣಿನಲ್ಲಿ ಸೃಷ್ಟಿಸಿದರು. ಪೆರುವಿನ ಉತ್ತರ ಕರಾವಳಿಯಲ್ಲಿ ಹಬ್ಬಿದ್ದ ಮೊಚಿಕಾ ನಾಗರಿಕತೆಗೆ ಸಂಬಂಧಿಸಿದ ಶವಸಂಸ್ಕಾರ ಶಿಲ್ಪ ಕೃತಿಗಳೂ ಲಭ್ಯವಾಗಿವೆ.

ಕ್ಯಾರಿಬಿಯನ್ ದ್ವೀಪಗಳ ಅರವಾಕ್ ಜನ ಕೊಲಂಬಿಯನ್ ಪೂರ್ವ ಸಂಸ್ಕøತಿಗಳ ಮತ್ತು ಬುಡಕಟ್ಟು ಅಮೆರಿಕನ್-ಇಂಡಿಯನ್ನರ ಕಲಾಶೈಲಿಗಳನ್ನು ತಮ್ಮ ಶಿಲ್ಪಗಳಲ್ಲಿ ಅಳವಡಿಸಿಕೊಂಡರು. ಸಾಮಾಜಿಕ ವರ್ಗಗಳ ಸಮೃದ್ಧಿ ಶ್ರೀಮಂತಿಕೆಯನ್ನು ಇವರ ಶಿಲ್ಪಗಳು ಬಿಂಬಿಸುತ್ತವೆ. ಇವರ ಸಂಸ್ಕøತಿಯ ಸರಳತೆಯನ್ನು ಬಹುಪಾಲು ಬೆತ್ತಲೆ ದೇಹದ ಮತ್ತು ಸ್ಥಾನಮಾನದ ಚಿಹ್ನೆಗಳಿಲ್ಲದ ಶಿಲ್ಪಗಳು ಸಾರುತ್ತವೆ.

ಅಮೆರಿಕನ್-ಇಂಡಿಯನ್ನರ ಅತ್ಯುತ್ತಮ ಶಿಲ್ಪವಸ್ತುಗಳೆಂದರೆ ಮುಖವಾಡಗಳು, ಮೂರ್ತಿಗಳು, ಟೋಟೆಂ (ಕುಲದೇವತಾ) ಸ್ತಂಭಗಳು, ಪಶುಪಕ್ಷಿಗಳು ಮುಂತಾದವು. ಪ್ರಾಚೀನ ಚೀನ ಮತ್ತು ಪೆಸಿಫಿಕ್ ಸಾಗರದ ವಾಯವ್ಯ ಕರಾವಳಿ ಪ್ರದೇಶದ ಶಿಲ್ಪಕಲೆಗಳಲ್ಲಿ ಹೋಲಿಕೆಗಳನ್ನು ಗುರುತಿಸುವ ವಿದ್ವಾಂಸರು ಇವೆರಡೂ ನಾಗರಿಕತೆಗಳ ನಡುವೆ ಸಂಬಂಧ ಸಂಪರ್ಕಗಳಿದ್ದುವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಆಧುನಿಕತೆ ಮತ್ತು ಅಂತರರಾಷ್ಟ್ರೀಯತೆ : 20ನೆಯ ಶತಮಾನದ ಕಲೆಯಲ್ಲಿ ರಾಷ್ಟ್ರೀಯ ವ್ಯತ್ಯಾಸಗಳು ಅಳಿದಿದ್ದರಿಂದ ಶಿಲ್ಪಕಲೆಗೆ ಅಂತರರಾಷ್ಟ್ರೀಯ ಸ್ವರೂಪ ಬಂತು. ಶಿಲ್ಪಿಗಳು ಭಿನ್ನ ಭಿನ್ನ ಶೈಲಿ-ತಂತ್ರಗಳನ್ನು ಅನುಸರಿಸುತ್ತಾರೆ: ಉತ್ಪ್ರೇಕ್ಷಿತ, ವಾಸ್ತವಿಕ ಮತ್ತು ಅಮೂರ್ತ- ಈ ಮೂರೂ ಶೈಲಿಯ ಕಲೆಯನ್ನು ಇಂದು ಕಾಣುತ್ತೇವೆ. ವಸ್ತು, ತಂತ್ರಗಳಲ್ಲಿ ಹೊಸ ಚಿಂತನೆ ಮೂಡಿದವು; ಹೊಸ ಶಿಲ್ಪ ಸಾಮಗ್ರಿಗಳು ಆಯ್ಕೆಯಾದವು; ಸ್ವೋಪಜ್ಞ ಬೆಳೆವಣಿಗೆಯುಂಟಾದವು. ಆಧುನಿಕ ಯಂತ್ರಗಳ ಆಕೃತಿಗಳೂ ಶಿಲ್ಪತಂತ್ರಕ್ಕೊಳಗಾದವು.

ಈ ಶತಮಾನದ ಮೊದಲಲ್ಲಿ ಮಾರ್ಗಶಿಲ್ಪಶೈಲಿಯನ್ನು ಎತ್ತಿ ಹಿಡಿದವರಲ್ಲಿ ಅರಿಸ್ಟೈದ್ ಮೈಲ್ಲೊಲ್ ಪ್ರಮುಖ. ಕಂಚಿನ ಮತ್ತು ಅಮೃತಶಿಲೆಯಲ್ಲಿ ರೂಪಿತವಾದ ಈತನ ಶಿಲ್ಪಗಳು ವಿಶಿಷ್ಟ ಪ್ರಶಾಂತಭಾವ ಹೊಮ್ಮಿಸುತ್ತವೆ; ರೂಪದಲ್ಲಿ ಗ್ರೀಕ್‍ಶಿಲ್ಪದ ಪರಿಶುದ್ಧತೆ ಕಂಡುಬರುತ್ತದೆ. ಗ್ಯಾಸ್ಟನ್ ಲೆಂಕೈಸ್ ಎಂಬ ಫ್ರೆಂಚ್ ಶಿಲ್ಪಿಯ ದುಂಡು ಶಿಲ್ಪಕ್ಕೆ ಅದ್ಭುತ ಲಘುತ್ವವಿದೆ. ಇಟಲಿಯ ಗಿಯಾಕೊಮೊ ಮಂಜು ಎಂಬಾತನ ಧಾರ್ಮಿಕ ಶಿಲ್ಪಗಳಲ್ಲಿ ಪರಿಣಾಮಕಾರಿ ನಿರೂಪಣೆಯಿದೆ. ಗಾತಿಕ್ ಶಿಲ್ಪವನ್ನು ಹೋಲುವ ಮೂರ್ತಿಗಳನ್ನು ಜರ್ಮನಿಯ ಅರ್ನಸ್ಟ್ ಬರ್ಲಾಕ್ ಮಾಡಿದ. ಇದೇ ದೇಶದವನಾದ ವಿಲ್‍ಹೆಮ್ ಲೇಂಬ್ರೂಕ್ ಹಲವು ಸೂಕ್ಷ್ಮಗಳಿಂದ ಕೂಡಿದ, ನೀಳವಾದ ಮಾನವ ಮೂರ್ತಿಗಳನ್ನು ರೂಪಿಸಿದ. ನ್ಯೂ ಯಾರ್ಕಿನ ಮಾಡರ್ನ್ ಆರ್ಟ್ ಮ್ಯೂಸಿಯಂನಲ್ಲಿರುವ 'ಮೊಣಕಾಲೂರಿದ ಹೆಂಗಸು, 'ನಿಂತ ಸ್ತ್ರೀ ಇತ್ಯಾದಿ ಶಿಲ್ಪಗಳು ಕಲಾ ವಿಮರ್ಶಕರ ಮನ್ನಣೆಗೆ ಪಾತ್ರವಾಗಿವೆ. ಕಂಚಿನ ಶಿಲ್ಪಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನ ಸರ್ ಜಾಕೊಬ್ ಎಪ್‍ಸ್ಟೈನ್ ಉಜ್ವಲ ಶೈಲಿಯೊಂದನ್ನು ಬೆಳೆಸಿದ. ಆಲ್ಬೆರ್ಟೊಗಿಯಾಕೊಮಿಟಿ ಹಾಗೂ ಪಾಬ್ಲೊ ಪಿಕಾಸೋ ಇನ್ನಿಬ್ಬರು ಗಮನಾರ್ಹಶಿಲ್ಪಿಗಳು. ಈ ಕಾಲದಲ್ಲಿ ಜ್ಯಾಮಿತಿಯ ಘನವಿನ್ಯಾಸ ಶಿಲ್ಪ (ಕ್ಯೂಬಿಸಂ) ಹಾಗೂ ಶಿಲ್ಪದಲ್ಲಿ ಅವಕಾಶ, ಚಲನಶೀಲತೆ ಮತ್ತು ಕಾಲದ ಪ್ರಭಾವ ತೋರುವ ಫ್ಯೂಚರಿಸಂ ಪಂಥ ಬೆಳೆದವು. ಇಟಲಿಯ ಉಂಬೆರ್ಟೊ ಬೋಚಿಯೋನಿ, ರೊಮೇನಿಯದ ಕಾಂಸ್ಟಾಂಟಿನ್ ಬ್ರಾಂಕುಶಿ, ಜರ್ಮನಿಯ ರುಡೋಲ್ಪ್ ಬೆಲಿಂಗ್, ಫ್ರಾನ್ಸಿನ ಜೀನ್ ಆರ್ಪ್, ಅಮೆರಿಕದ ಲೂಯಿ ನೆವಲ್ಸನ್, ಜೋಸ್ ಡಿ ರಿವೆರಾ, ಡೇವಿಡ್‍ಸ್ಮಿತ್, ರಿಚರ್ಡ್ ಲಿಪೋಲ್ಡ್ ಮತ್ತಿತರರು. ಇಂಗ್ಲೆಂಡಿನ ರೆಗ್ ಬಟ್ಲರ್, ಭಾರತದ ಶಂಖೋ ಚೌಧುರಿ ಮತ್ತು ಸತೀಶ್‍ಗುಜ್ರಾಲ್ ಮುಂತಾದವರು ಈ ಶತಮಾನದ ಹೆಸರಾಂತ ಶಿಲ್ಪಿಗಳಲ್ಲಿ ಸೇರಿದ್ದಾರೆ. ರಷ್ಯ ಮೂಲದ ನೌಮ್‍ಗಾಬೊ ತನ್ನ ಶಿಲ್ಪಗಳನ್ನು ಲೋಹ, ಪ್ಲಾಸ್ಟಿಕ್ ತಂತಿ ಇತ್ಯಾದಿ ಸಾಮಗ್ರಿಗಳಿಂದ ರಚಿಸಿದ. ಚಾವಣಿಗೆ ತೂಗುಹಾಕಲೆಂದೇ ಮಾಡಿದ 'ಚಲಿಸುವ ಆಕೃತಿಗಳನ್ನು ಅಲೆಗ್ಸಾಂಡರ್ ಕಾಲ್ಡರ್ ಮಾಡಿದ್ದಾನೆ. ಇವನ ಕಲೆಯಲ್ಲಿ ಲೋಹದ ತುಂಡುಗಳು ಚಿತ್ರವಿಚಿತ್ರವಾಗಿ ನಾನಾ ರೂಪಗಳನ್ನು ತಾಳುತ್ತವೆ. ಈಚೆಗೆ ಕಂಪ್ಯೂಟರ್ ಪ್ರೇರಣೆಯಿಂದ ಚಲಿಸುವ ಶಿಲ್ಪಗಳೂ ರಚಿತವಾಗಿವೆ.

ಇಂಗ್ಲೆಂಡಿನ ಹೆನ್ರಿಮೂರ್ ಈ ಕಾಲದ ಮಹಾಶಿಲ್ಪಿಗಳಲ್ಲೊಬ್ಬ. ಮೂರ್ತಿಯಲ್ಲಿ ರಂಧ್ರಗಳ ಮೂಲಕ ಶಿಲ್ಪಕೃತಿಗೆ 'ಅವಕಾಶ ಒದಗುವಂತೆ ಮಾಡಿರುವುದು ಈತನ ವೈಶಿಷ್ಟ್ಯ. 'ವಿಶ್ರಾಂತ ಸ್ತ್ರೀ ಶಿಲ್ಪದಲ್ಲಿ ಸ್ತ್ರೀಯ ಹೊಟ್ಟೆಯ ಭಾಗ ಕೊರೆದಿದೆ. ಆಕೆಯ ಅಂಗ ಪ್ರಮಾಣಗಳನ್ನು ಬಳಸಿಕೊಂಡು ಮೂರ್ ವಿಶ್ರಮಿಸುತ್ತಿರುವ ನದಿ ದೇವತೆಯ ಭಾವನೆ ಬರುವಂತೆ ಶಿಲ್ಪಿಸಿರುವನು. ಪ್ರಕೃತಿಯಿಂದ ಸಹಜವಾಗಿ ಮೂಡಿದ ಶಿಲ್ಪವೇನೋ ಎಂಬ ಭಾವನೆ ನೋಡುಗರಲ್ಲಿ ಮೂಡುತ್ತದೆ. ರಿಚರ್ಡ್ ಸ್ಟಾಂಕಿವೆಜ್ ಎಂಬ ಅಮೆರಿಕದ ಶಿಲ್ಪಿ ಚಕ್ರ, ಬಾಯ್ಲರ್, ಸರಪಳಿ, ಬೋಲ್ಟ್ ಮತ್ತಿತರ ಯಾಂತ್ರಿಕ ಬಿಡಿಭಾಗಗಳನ್ನು ತನ್ನ ಶಿಲ್ಪಸಂಯೋಜನೆಯಲ್ಲಿ ಬಳಸಿಕೊಂಡಿದ್ದಾನೆ. ಆದರೂ ಈತನ ಶಿಲ್ಪದಲ್ಲಿ ಮಾನವೀಯ ಗುಣ ಅಂತರ್ಗತವಾಗಿರುವುದು ಅನುಭವಕ್ಕೆ ಬರುತ್ತದೆ.

ಇಂದಿನ ಶಿಲ್ಪ ಅತ್ಯಂತ ಸಂಕೀರ್ಣವಾಗುತ್ತ ಬೆಳೆಯುತ್ತಿದೆ. ಶಿಲ್ಪಕಲೆ ಮತ್ತಿತರ ಕಲಾಪ್ರಕಾರಗಳ ನಡುವಣ ಅಂತರ ದೂರವಾಗುತ್ತ ಸಾಗಿದೆ. ಶಿಲ್ಪಸಾಮಗ್ರಿ ಯಾವುದು ಬೇಕಾದರೂ ಆಗಬಹುದು. ಮೇರಿಸೋತ್ ಎಂಬಾಕೆಯ 'ಕುಟುಂಬ (ದಿ ಫ್ಯಾಮಿಲಿ) ಶಿಲ್ಪದಲ್ಲಿ ವರ್ಣಚಿತ್ರ, ಬಟ್ಟೆ, ಮತ್ತಿತರ ಪೀಠೋಪಕರಣ ಭಾಗಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಲಾಗಿದೆ. ಕೆಲವೊಮ್ಮೆ ಸ್ವಮುಖ ಮತ್ತು ಕೈಗಳ ಪ್ಲಾಸ್ಟರ್ ಪ್ರತಿಕೃತಿಯನ್ನು ತನ್ನ ಶಿಲ್ಪಕೃತಿಯಲ್ಲಿ ಈಕೆ ಅಳವಡಿಸಿಕೊಂಡಿದ್ದಾಳೆ.

(ಎಚ್.ಎಂ.ಎನ್.ಆರ್.)