ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಂಜರ್, ಕಾರ್ಲ್

ಮೆಂಜರ್, ಕಾರ್ಲ್ 1840-1921. ಪ್ರಸಿದ್ಧ ಅರ್ಥಶಾಸ್ತ್ರಜ್ಞ. ಹಿಂದೆ ಆಸ್ಟ್ರಿಯಕ್ಕೆ ಸೇರಿದ್ದು ಈಗ ಪೋಲೆಂಡಿಗೆ ಸೇರಿರುವ ಗಲೀಷಿಯಾದ ನ್ಯೂ ಸ್ಯಾಂಡಜ್ ಎಂಬಲ್ಲಿ 1840 ಫೆಬ್ರುವರಿ 23ರಂದು ಜನನ. ಇವನ ವಿದ್ಯಾಭ್ಯಾಸ ಪ್ರಾಗ್ ಮತ್ತು ವಿಯನ್ನ ವಿಶ್ವವಿದ್ಯಾಲಯಗಳಲ್ಲಿ ನಡೆಯಿತು. 1867ರಲ್ಲಿ ಕ್ರಾಕೊ ವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಪದವಿ ಗಳಿಸಿದ.

ಮೆಂಜರ್ ಅರ್ಥಶಾಸ್ತ್ರದಲ್ಲಿ ಆಸ್ಟ್ರಿಯನ್ ಪಂಥದ ವಿಚಾರಧಾರೆಗೆ ಅಸ್ತಿಭಾರ ಹಾಕಿದವನು. 1871ರಲ್ಲಿ ಪ್ರಕಟಗೊಂಡ ಇವನ ಗ್ರನ್ ಡ್ಸಾತ್ವೆಡೆರ್ ವಾಲ್ಕ್ಸ ವಿರ್‍ಚಾಪ್ಟ್ ಸ್ಲೆಹ್ರೆ ಅತ್ಯಂತ ಮಹತ್ತ್ವದ ಕೃತಿ. ಇವನ ಚಿಂತನೆ ಶಿಷ್ಯರಾದ ವೈಸರ್, ಬೋಹಮ್ ಬವರ್ಕ ಇವರ ಮೂಲಕ ಪ್ರಚಾರ ಪಡೆಯಿತು. ಇದೇ ಪಂಥಕ್ಕೆ ಸೇರಿದ ಜೇವನ್ಸ್, ವಾಲ್‍ರಾಸ್ ಸಹ ಮೆಂಬರ್ ವಿಚಾರವನ್ನೇ ಹೋಲುವ ಸಿದ್ಧಾಂತಗಳನ್ನು 1871ರಲ್ಲೇ ಪ್ರಕಟಿಸಿದ್ದು ಒಂದು ಆಕಸ್ಮಿಕವೆನ್ನಲಾಗಿದೆ. 1873ರಲ್ಲಿ ಮೆಂಜರ್ ವಿಯನ್ನ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಎಕಾನಮಿಯ ಪ್ರಾಧ್ಯಾಪಕನಾದ. 1883ರಲ್ಲಿ ಇನ್‍ವೆಸ್ಟಿಗೇಷನ್ ಇನ್ ಟು ದಿ ಮೆಥಡ್ಸ್ ಆಫ್ ಸೋಷಿಯಲ್ ಸೈನ್ಸ್ ಅಂಡ್ ಪೊಲಿಟಿಕಲ್ ಎಕಾನಮಿ ಇನ್ ಪರ್ಟಿಕ್ಯುಲರ್ ಎಂಬ ಗ್ರಂಥವನ್ನೂ 1950ರಲ್ಲಿ ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್ ಗ್ರಂಥವನ್ನೂ ಪ್ರಕಟಿಸಿದ. 1903ರಲ್ಲಿ ಕೆಲಸದಿಂದ ನಿವೃತ್ತನಾಗಿ ಸಂಶೋಧನೆ ಮತ್ತು ಬರೆವಣಿಗೆಗೆ ತೊಡಗಿದ.

ಮೆಂಜರ್‍ನ ವೈಶಿಷ್ಟ್ಯವೆಂದರೆ ಸುಸಂಬದ್ಧವಾದ ರೀತಿಯಲ್ಲಿ ಮತ್ತು ಸಂಕ್ಷಿಪ್ತವಾಗಿ ಸಿದ್ಧಾಂತಗಳನ್ನು ಮಂಡಿಸುವುದು. ವಿಶ್ಲೇಷಣೆಯ ವಿಧಾನದಲ್ಲಿ ಮೆಂಜರ್ ವೈಯಕ್ತಿಕತೆಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾನೆ. ಅವನ ವಿಚಾರವೆಂದರೆ, ಸಮಾಜದ ಆರ್ಥಿಕ ಕ್ರಿಯೆ, ಕೆಲವೊಂದು ಸಾಮಾಜಿಕ ಶಕ್ತಿಗಳ ನೇರ ನಿರೂಪಣೆಯಲ್ಲಿ ಅಂದರೆ ಆರ್ಥಿಕ ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಗಳ ನಡತೆಯ ಪರಿಣಾಮವಾಗಿ ಉಂಟಾಗುತ್ತದೆ. ಆದ್ದರಿಂದ ನಾವು ಇಡೀ ಆರ್ಥಿಕ ವಿಧಾನವನ್ನು ಗ್ರಹಿಸಬೇಕಾದರೆ ಅದರ ಮೂಲವಾಗಿ ವ್ಯಕ್ತಿಗಳ ನಡವಳಿಕೆಯನ್ನು ವಿಶ್ಲೇಷಿಸಬೇಕಾಗುತ್ತದೆ. ಈ ವಿಚಾರವನ್ನು ಆಧಾರವಾಗಿಟ್ಟುಕೊಂಡು ಮೆಂಜರ್ ಮೌಲ್ಯ ವಿನಿಮಯ ಮತ್ತು ವಿತರಣೆಗೆ ಸಂಬಂಧಿಸಿದ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದ. ಇವುಗಳಲ್ಲಿ ಮೌಲ್ಯ ಸಿದ್ಧಾಂತ ಬಹಳ ಮಹತ್ತ್ವದ್ದೆಂದು ಪರಿಗಣಿಸಲಾಗಿದೆ.

ವಿರಳತೆಯ ಏಕೈಕ ಕಾರಣದಿಂದ ಸರಕು ಆರ್ಥಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ನಮ್ಮ ಅಗತ್ಯತೆ ಮತ್ತು ಸರಕುಗಳ ಲಭ್ಯತೆಗಳ ಸಂಬಂಧಗಳಿಂದ ಸರಕುಗಳಿಗೆ ಮೌಲ್ಯ ಹುಟ್ಟಿಕೊಳ್ಳುತ್ತದೆ ಎಂಬುದು ಈತನ ವಿಚಾರ. ಮೆಂಜರ್‍ನ ಸಿದ್ಧಾಂತದ ಪ್ರಕಾರ ಸ್ಪಷ್ಟವಾಗುವ ಒಂದು ಅಂಶವೆಂದರೆ ಬೆಲೆಯ ನಿರ್ಧಾರಕ್ಕೆ ಆಧಾರವಾಗಿ ವೈಯಕ್ತಿಕ ಮೌಲ್ಯಗಳನ್ನು ಬಳಸಿಕೊಳ್ಳಬೇಕು. ಸಮತೋಲನ ಸ್ಥಿತಿಯಲ್ಲಿ ವಿನಿಮಯವಾಗುವ ಎರಡು ಸರಕುಗಳ ಸೀಮಾಂತ ತುಷ್ಟಿಗುಣ ದರಗಳು ಪರಸ್ಪರ ಸಮನಾಗಿರುತ್ತವೆ. ವೈಯಕ್ತಿಕ ಮೌಲ್ಯಗಳೇ ವಿನಿಮಯ ಮಿತಿಯನ್ನು ನಿಗದಿ ಮಾಡುತ್ತವೆ. ಆದರೆ ವೈಯಕ್ತಿಕ ಮೌಲ್ಯಗಳು ಅತ್ಯಂತ ನಿರ್ದಿಷ್ಟ ಪ್ರಮಾಣಗಳೆಂದು ಗ್ರಹಿಸಬಾರದು. ಮಾರುಕಟ್ಟೆಯಲ್ಲಿ ವಸ್ತುಗಳ ಬೇಡಿಕೆ, ನೀಡಿಕೆ ಮತ್ತು ವೈಯಕ್ತಿಕ ಮೌಲ್ಯಗಳು ಬೆಲೆಯ ನಿರ್ವಹಣೆಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ರೀತಿ ತನ್ನ ಸಿದ್ಧಾಂತದಲ್ಲಿ ಮೆಂಜರ್ ಮಾನಸಿಕ ನಿರ್ಣಯಗಳಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿರುವುದು ಕಂಡುಬರುತ್ತದೆ.

ಆದರೆ ಆರ್ಥಿಕ ವಿಧಾನದ ನಿರಪೇಕ್ಷ ಅಂಶಗಳಿಗೆ ಮೆಂಜರ್‍ನ ಮಾನಸಿಕ ಆಧಾರ ಕಲ್ಪನೆಗಳು ಸಂಪೂರ್ಣವಾಗಿ ಅಸಂಬದ್ಧವಾದವು ಹಾಗೂ ಈತನ ಸಿದ್ಧಾಂತಗಳಲ್ಲಿ ಸಾಮಾಜಿಕ ಅಂಶಗಳು ಇಲ್ಲವಾದುದರಿಂದ ಅವು ಜಡವಾದವು ಎಂದು ಟೀಕಿಸಲಾಗುತ್ತದೆ. ಇಷ್ಟಾದರೂ ಮೆಂಜರ್‍ನನ್ನು ಆಸ್ಟ್ರಿಯನ್ ಪಂಥದ ನೇತಾರನೆಂದು ವಿದ್ವಾಂಸರು ಗೌರವಿಸುತ್ತಾರೆ.

ಮೆಂಜರ್ 1921 ಫೆಬ್ರವರಿ 26ರಂದು ವಿಯನ್ನದಲ್ಲಿ ತೀರಿಕೊಂಡ. (ಸಿ.ಕೆ.ಆರ್.)