ಮೇನಕಾ ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಅಪ್ರತಿಮ ಸುಂದರಿಯಾದ ಒಬ್ಬ ಅಪ್ಸರೆ. ಕುಬೇರನ ಆಸ್ಥಾನ ನರ್ತಕಿ. ಈಕೆ ಇಂದ್ರನ ಸೂಚನೆಯ ಮೇರೆಗೆ ಅನೇಕ ಮುನಿಗಳನ್ನು ಆಕರ್ಷಿಸಿ ತಪಶ್ಯಕ್ತಿಯನ್ನು ಹಾಳುಮಾಡುತ್ತಿದ್ದಳು. ತತ್ಫಲವಾಗಿ ಹುಟ್ಟಿದ ಕೂಸುಗಳನ್ನು ಭೂಲೋಕದಲ್ಲಿ ಬಿಟ್ಟು ತಾನು ಸ್ವರ್ಗಕ್ಕೆ ಹೋಗಿಬಿಡುತ್ತಿದ್ದಳು. ಇಂಥ ಅನೇಕ ಕಥೆಗಳು ಭಾರತೀಯ ಪುರಾಣಗಳಲ್ಲಿವೆ.

ಒಮ್ಮೆ ಈಕೆ ವಿಶ್ವಾವಸು ಎಂಬ ಗಂಧರ್ವನೊಬ್ಬನಿಂದ ಗರ್ಭಿಣಿಯಾದಳು. ಹಡೆದನಂತರ ಆ ಮಗುವನ್ನು ನದಿಯ ದಂಡೆಯ ಮೇಲೆ ಎಸೆದು- ಸ್ವರ್ಗಕ್ಕೆ ಹೊರಟುಹೋದಳು. ಹತ್ತಿರದಲ್ಲೇ ತಪಸ್ಸುಮಾಡುತ್ತಿದ್ದ ಸ್ಥೂಲಕೇಶ ಮುನಿ ಆ ಮಗುವನ್ನು ಕಾಪಾಡಿ ಪ್ರಮದ್ವರಾ ಎಂದು ಹೆಸರಿಟ್ಟ. ಈಕೆ ಪ್ರಾಪ್ತ ವಯಸ್ಕಳಾದ ಮೇಲೆ ಪ್ರಮತಿ ಪುತ್ರ ರುರುಮಹರ್ಷಿಯನ್ನು ಮದುವೆಯಾದಳು.

ವಿಶ್ವಾಮಿತ್ರ ತಪಸ್ಸು ಮಾಡುತ್ತಿದ್ದಾಗ ಇಂದ್ರನ ಆದೇಶದ ಮೇರೆಗೆ ಮೇನಕಾ ಆತನಲ್ಲಿಗೆ ಹೋಗಿ ತಪಸ್ಸನ್ನು ಭಂಗಗೊಳಿಸಿ ಆತನೊಂದಿಗೆ ಅನುರಕ್ತಳಾದಳು. ಇವಳಿಗೆ ಹೆಣ್ಣು ಮಗುವೊಂದು ಹುಟ್ಟಿತು. ಅದನ್ನು ಅಲ್ಲಿಯೇ ಬಿಟ್ಟು ಸ್ವರ್ಗಕ್ಕೆ ಹೋದಳು. ಆ ಮಗುವೇ ಶಕುಂತಲೆ.

ಮೇನಕಾಳ ದರ್ಶನದಿಂದ ಎದೆಗುಂದಿದ ಪೃಷತ ರಾಜನಿಂದ ದ್ರುಪದ ಜನಿಸಿದ. *