ಮೇನ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಈಶಾನ್ಯ ತುದಿಯಲ್ಲಿರುವ ಹಾಗೂ ನ್ಯೂ ಇಂಗ್ಲೆಂಡ್ ವಿಭಾಗದ ಆರು ರಾಜ್ಯಗಳಲ್ಲಿ ಅತ್ಯಂತ ದೊಡ್ಡ ರಾಜ್ಯ. ಉ. ಅ. 4304' - 47028' ಹಾಗೂ ಪ. ರೇ. 66057' - 7107' ನಡುವೆ ಇದೆ. ಈಶಾನ್ಯ ಮತ್ತು ವಾಯವ್ಯದಲ್ಲಿ ಕೆನಡದ ಪ್ರಾಂತ್ಯಗಳಾದ ಕ್ವಿಬೆಕ್ ಮತ್ತು ನ್ಯೂಬ್ರನ್ಸ್‍ವಿಕ್ ಹಾಗೂ ಪಶ್ಚಿಮದಲ್ಲಿ ನ್ಯೂ ಹ್ಯಾಂಪ್‍ಷೈರ್. ದಕ್ಷಿಣ ಮತ್ತು ಆಗ್ನೇಯದಲ್ಲಿ ಅಟ್ಲಾಂಟಿಕ್ ಸಾಗರ ಇದನ್ನು ಸುತ್ತುವರಿದಿದೆ. ಪೈನ್ ಮರಗಳ ರಾಜ್ಯ ಎಂದು ಹೆಸರಾಗಿರುವ ಈ ರಾಜ್ಯ ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜ್ಯದಲ್ಲಿ 39 ನೆಯದು. ಒಳನಾಡಿನ ಜಲಪ್ರದೇಶ 5944 ಚ. ಕಿ. ಮೀ. ಸೇರಿಸಿ ಈ ರಾಜ್ಯದ ಒಟ್ಟು ವಿಸ್ತೀರ್ಣ 36,156 ಚ. ಕಿ. ಮೀ. ಜನಸಂಖ್ಯೆ 12,27,928 (1990). ರಾಜಧಾನಿ ಅಗಸ್ಟ.

ಭೂಲಕ್ಷಣ : ಅಪಲೇಷಿಯನ್ ಪರ್ವತ ಪಂಕ್ತಿಗಳು ನ್ಯೂಹ್ಯಾಂಪ್‍ಪೈರ್ ಮೂಲಕ ರಾಜ್ಯವನ್ನು ಪ್ರವೇಶಿಸಿ ರಾಜ್ಯದಲ್ಲಿಯ ಅತ್ಯಂತ ಎತ್ತರ ಶಿಖರ ಕಟಾಡನ್‍ನಲ್ಲಿ (1606 ಮೀ.) ಕೊನೆಗೊಳ್ಳುತ್ತದೆ. ನ್ಯೂ ಹ್ಯಾಂಪ್‍ಪೈರ್ ಹಾಗೂ ಕ್ವಿಬೆಕ್‍ನೊಡನೆ ಇರುವ ಗಡಿಪ್ರದೇಶ ಅತ್ಯಂತ ದುರ್ಗಮವಾಗಿದ್ದು ನೀರ್ಗಲ್ಲುಗಳಿಂದ ಕೂಡಿದ ಪರ್ವತ ಶೀಖರಗಳು, ಸರೋವರಗಳು ಮತ್ತು ಇಕ್ಕಟ್ಟಾದ ಕಣಿವೆಗಳಿಂದ ಕೂಡಿದೆ. ಇಲ್ಲಿಯ ಪರ್ವತಗಳಲ್ಲಿ ಪ್ರಮುಖವಾದವು ಸ್ಯಾಡಲ್, ಬ್ಯಾಕ್, ಮೌಂಟ್ ಅಬ್ರಹಾಮ್, ಮೌಂಟ್ ಬಿಗೆಲೋವ್ ಮತ್ತು ಮೌಂಟ್ ಬ್ಲೂ. ಇವುಗಳ ದಕ್ಷಿಣ ಭಾಗ ಸಾಗರದೆಡೆಗೆ ಇಳಿಜಾರಾಗಿದ್ದು ಉತ್ತರ ಹಾಗೂ ಪೂರ್ವ ಭಾಗಗಳು ಗುಡ್ಡಗಾಡು ಮತ್ತು ವಿಶಾಲವಾದ ನದಿಬಯಲುಗಳಿಂದ ಕೂಡಿದೆ. ರಾಜ್ಯದ ದಕ್ಷಿಣದ ತುದಿಯಲ್ಲಿರುವ ಕಿಟ್ಟರಿಯಿಂದ ರಾಜ್ಯದ ಅತ್ಯಂತ ದೊಡ್ಡ ನಗರ ಪೋರ್ಟ್ ಲ್ಯಾಂಡಿನ ನೈಋತ್ಯದಲ್ಲಿರುವ ಕೇಪ್ ಎಲಿಜಬೆತ್‍ವರೆಗೆ ಉದ್ದವಾದ ಸಮುದ್ರ ತೀರವಿದ್ದು (ಸುಮಾರು 5630 ಕಿ. ಮೀ.) ಮಧ್ಯೆ ಮಧ್ಯೆ ಬಂಡೆಗಳಿಂದ ಕೂಡಿದ ಭೂಶಿರಗಳಿವೆ. ಕೇಪ್ ಎಲಿಜಬೆತ್‍ನ ಉತ್ತರ ಹಾಗೂ ಪೂರ್ವದಲ್ಲಿಯ ತೀರಪ್ರದೇಶ ಪರ್ಯಾಯ ದ್ವೀಪಗಳಿಂದ ಇಕ್ಕಟ್ಟಾದ ಅಳಿವೆ, ಕೊಲ್ಲಿ ಹಾಗೂ ಹಿಮ ಯುಗದ ನೀರ್ಗಲ್ಲುಗಳಿಂದ ಸಮುದ್ರದಾಳಕ್ಕೆ ತಳ್ಳಿರುವ ಬೆಟ್ಟ ಮತ್ತು ಕಣಿವೆಗಳಿಂದ ಕೂಡಿದೆ. ಇಲ್ಲಿ ಬರುವ ಸಮುದ್ರದಲೆಗಳು ಸುಮಾರು 3.7 ರಿಂದ 7.3 ಮೀ. ಎತ್ತರವಿದ್ದು ಅತ್ಯಂತ ಬಲವಾದವು. ಇದಕ್ಕೆ ಸೇರಿದ 1200 ಕ್ಕೂ ಹೆಚ್ಚು ದ್ವೀಪಗಳಿವೆ. ತೀರಪ್ರದೇಶದಾಚೆಗೆ ಮೇನ್ ರಾಜ್ಯದಲ್ಲಿರುವ ಸುಮಾರು 1600 ಕ್ಕೂ ಹೆಚ್ಚು ಸರೋವರಗಳಿಂದ ಜಲವಿದ್ಯುತ್ ತಯಾರಿಸಲಾಗುತ್ತದೆ. ಇಲ್ಲಿಯ ಕೆನೆಬೆಕ್ ನದಿ ಹುಟ್ಟುವ ಮೂಸ್‍ಹೆಡ್ ಸರೋವರ 311 ಚ. ಕಿ. ಮೀ. ಇದ್ದು ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿಯೇ ಅತಿ ದೊಡ್ಡ ಎನಿಸಿದೆ. ರೇಂಜ್ಲೆಸ್, ಚೆಸನ್‍ಕುಕ್, ಟಿನ್ ಮತ್ತು ಗ್ರ್ಯಾಂಡ್ ಇಲ್ಲಿಯ ಇತರ ಪ್ರಮುಖ ಸರೋವರಗಳು. ಈ ರಾಜ್ಯದ ನದಿಗಳು ಹೆಚ್ಚಾಗಿ ಉತ್ತರದಿಂದ ದಕ್ಷಿಣದೆಡೆಗೆ ಹರಿಯುತ್ತವೆ. ಸೆಂಟ್ ಜಾನ್ ನದಿ ಹಾಗೂ ಅದರ ಉಪನದಿಯಾದ-ಅಲಗಾಸ್ ಉತ್ತರಕ್ಕೆ ಅನಂತರ ಪೂರ್ವಕ್ಕೆ ಹರಿದು ನ್ಯೂಬ್ರನ್ಸ್‍ವಿಕ್‍ನ ಮೂಲಕ ಸಮುದ್ರವನ್ನು ಸೇರುತ್ತದೆ. ದಕ್ಷಿಣ ಇಳಿಜಾರಿನಲ್ಲಿ ರಭಸವಾಗಿ ಹರಿಯುವ ಹಾಗೂ ಜಲಪಾತಗಳಿಂದ ಕೂಡಿದ ಪೆನಾಬ್ ಸ್ಕಾಟ್, ಕೆನೆಬೆಕ್, ಆ್ಯಂಡ್ರೋಸ್ಕೊಗಿನ್ ಮತ್ತು ಸ್ಯಾಕೊ ನದಿಗಳಿವೆ. ಮೇನ್‍ನ ನೈಋತ್ಯ ಭಾಗದ ಭೂಮಿ ಗ್ರಾನೈಟ್‍ನಿಂದ ಕೂಡಿದ್ದು ತೀರಪ್ರದೇಶ, ಮಧ್ಯಭಾಗ ಮತ್ತು ಪೂರ್ವಭಾಗಗಳಲ್ಲಿ ಭೂಮಿ ಜೇಡಿಮಣ್ಣು, ಪದರುಗಲ್ಲು, ಮರಳು ಮತ್ತು ಸುಣ್ಣಕಲ್ಲಿನಿಂದ ಕೂಡಿದೆ. ಈಶಾನ್ಯ ಭಾಗದ ಆರೂಸ್ಟೂಕ್ ಕೌಂಟಿಯಲ್ಲಿ ಜೇಡಿಮಣ್ಣಿನ ಭೂಮಿಯಿದ್ದು ರಾಜ್ಯದಲ್ಲೇ ಈ ಭಾಗ ಅತ್ಯಂತ ಫಲವತ್ತಾದ ಪ್ರದೇಶವೆನಿಸಿದೆ.

ವಾಯುಗುಣ: ಮೇನ್ ರಾಜ್ಯವನ್ನು ಅದರ ಹವಾಗುಣಕ್ಕನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ದಕ್ಷಿಣದ ಒಳಭಾಗ, ತೀರ ಪ್ರದೇಶ ಹಾಗೂ ಉತ್ತರಭಾಗ. ದಕ್ಷಿಣಭಾಗ ಹಾಗೂ ತೀರಪ್ರದೇಶಗಳು ದಕ್ಷಿಣ ಮತ್ತು ಪಶ್ಚಿಮದೆಡೆಯಿಂದ ಬೀಸುವ ಮಾರುತಗಳಿಂದ ಪ್ರಭಾವಿತವಾಗಿವೆ. ಇಲ್ಲಿನ ವಾರ್ಷಿಕ ಸರಾಸರಿ ಉಷ್ಣತೆ ಉತ್ತರದಲ್ಲಿ 3 0 - 4 0 ಅ. ದಕ್ಷಿಣದಲ್ಲಿ ಹಾಗೂ ತೀರ ಪ್ರದೇಶದಲ್ಲಿ 60 -70 ಅ. ರಾಜ್ಯದ ಒಟ್ಟೂ ಸರಾಸರಿ ಉಷ್ಣತೆ ಬೇಸಿಗೆಯಲ್ಲಿ 170 ಅ ಹಾಗೂ ಚಳಿಗಾಲದಲ್ಲಿ 70 ಅ ವರ್ಷದ ಸುಮಾರು 80 ದಿನಗಳಲ್ಲಿ ಬಿಸಿಲಿರುತ್ತವೆ. ವಾರ್ಷಿಕ ಅನುಪಾತದ ಪ್ರಮಾಣ 1060 - 1160 ಮಿ. ಮೀ. ಉತ್ತರಭಾಗ ಹಾಗೂ ಎತ್ತರ ಪ್ರದೇಶಗಳಲ್ಲಿ ಹಿಮಪಾತ ಸರಾಸರಿ 2539 - 9500 ಮಿ. ಮೀ. ಗಳಿಗೂ ಹೆಚ್ಚಾಗಿರುತ್ತವೆ.

ಸಸ್ಯ ಹಾಗೂ ಪ್ರಾಣಿ ಸಂಪತ್ತು: ಇಲ್ಲಿ ಕಂಡುಬರುವ ಸಸ್ಯ ಹಾಗೂ ಪ್ರಾಣಿಗಳು ಉತ್ತರ ಧ್ರುವದ ಸಮೀಪದ ಮತ್ತು ಅಪ್ಪಲೇಷಿಯನ್ ವಂಶಗಳ ಸಂಯುಕ್ತ ವರ್ಗಕ್ಕೆ ಸೇರಿದವು. ಮೇನ್ ಬಿಳಿ ಪೈನ್ ವೃಕ್ಷಗಳಿಗೆ ಹೆಸರುವಾಸಿ. ಇಲ್ಲಿಯ ಇತರ ಮರಗಳು ಫರ್, ಸ್ಟ್ರೂಸ್, ಹೆಮ್ಲಾಕ್, ಬಾಲ್ಸಮ್ ಫರ್, ಮೇಪಲ್, ಬಿಳಿದೇವದಾರು ಇತ್ಯಾದಿ. ಉತ್ತರ ಸಮಶೀತೋಷ್ಣವಲಯದಲ್ಲಿ ಬೆಳೆಯುವ ಹೂಗಿಡಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಕಂಡುಬರುವ ಪ್ರಾಣಿಗಳು ಜಿಂಕೆ, ಕಡವೆ, ಕಪ್ಪು ಕರಡಿ, ನರಿ, ಲಿಂಕ್ಸ್, ಮೊಲ, ಮುಳ್ಳುಹಂದಿ, ಇತ್ಯಾದಿ. ಸಂಗ್‍ಬರ್ಡ್, ಸಮುದ್ರ ಹಕ್ಕಿಗಳು, ಸರೋವರದ ಹಕ್ಕಿಗಳು ಇಲ್ಲಿ ಹೇರಳವಾಗಿವೆ. ಇಲ್ಲಿ ಸಿಗುವ ಜಲಚರ ಪ್ರಾಣಿಗಳೆಂದರೆ ಸೀಲ್, ತಿಮಿಂಗಲ, ಕಾಡ್, ಸಾಲಮನ್, ಸೀಗಡಿ, ಚಿಪ್ಪುಮೀನು ಇತ್ಯಾದಿ.

ಜನಜೀವನ : ಮೇನ್ ತೀರಪ್ರದೇಶವನ್ನು ನ್ಯೂ ಇಂಗ್ಲೆಂಡ್ ಪ್ರಾಂತ್ಯದ ಯಾಂಕಿಗಳ ಸಾಂಪ್ರದಾಯಿಕ ವಾಸಸ್ಥಾನವೆಂದು ಕರೆಯುವುದುಂಟು. ಇಲ್ಲಿಯ ಅನೇಕ ಸಮುದಾಯಗಳು ಹಿಂದೆ ಸಾಗರ ಹಾಗೂ ನದೀವ್ಯಾಪಾರಗಳ ಪ್ರಮುಖ ಕೇಂದ್ರಗಳಾಗಿದ್ದವು. ಕಿಟ್ಟರಿಯಿಂದ ಕ್ಯಾಸ್ಕೋ ಕೊಲ್ಲಿಯ ಮೇಲಿನ ಪೋರ್ಟ್ ಲ್ಯಾಂಡ್ ನಗರ ಪ್ರದೇಶದವರೆಗೆ ಇರುವ ನೈಋತ್ಯ ತೀರಪ್ರದೇಶ ಪ್ರವಾಸ ಸ್ಥಳವಾಗಿದೆ. ಬಾತ್‍ನಿಂದ ಬೆಲ್‍ಫಾಸ್ಟ್‍ವರೆಗೆ ಇರುವ ಮಧ್ಯದ ತೀರಪ್ರದೇಶ ಮೀನುಗಾರಿಕೆ ಹಾಗೂ ಕಡಲಸಂಬಂಧದ ಚಟುವಟಿಕೆಗಳ ಕೇಂದ್ರ. ಪೆನಾಬ್‍ಸ್ಕಾಟ್ ಕೊಲ್ಲಿಯ ಪೂರ್ವತೀರದಿಂದ ಸೇಂಟ್ ಕ್ರಾಯಿಕ್ಸ್ ನದಿಯ ಮೇಲಿನ ಕಲಾಯಿಸ್‍ವರೆಗೆ ಪೂರ್ವ ತೀರಪ್ರದೇಶವಿದೆ.

ರಾಜ್ಯದ ಜನಸಂಖ್ಯೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳ ಬಹುಭಾಗ ಮೇನ್‍ನ ಮಧ್ಯ ಹಾಗೂ ದಕ್ಷಿಣ ಭಾಗ ನ್ಯೂ ಹ್ಯಾಪ್‍ಷೈರ್ ಗಡಿಯಿಂದ ಪೆನಾಬ್‍ಸ್ಕಾಟ್ ನದಿಯವರೆಗೆ ಕೇಂದ್ರೀಕೃತವಾಗಿದೆ. ಆರೂಸ್ಟೂಕ್ ಕೌಂಟಿಯಲ್ಲಿ ಇಂಗ್ಲೀಷ್ ಹಾಗೂ ಐರಿಷ್ ವಲಸೆಗಾರರು ಬಂದು ನೆಲಸಿದ್ದು ಇವರ ಭಾಷೆ ಮೇನ್‍ಗಿಂತ ಹೆಚ್ಚಾಗಿ ಅಕ್ಕಪಕ್ಕದ ರಾಜ್ಯಗಳೊಡನೆ ಹೆಚ್ಚು ಹೋಲಿಕೆ ಪಡೆದಿದೆ. ರೂಸ್ಟೂಕ್ ಕೌಂಟಿಯ ಉತ್ತರ ಗಡಿಯಲ್ಲಿರುವ ಸೇಂಟ್ ಜಾನ್ ಕಣಿವೆಯಲ್ಲಿ ಫ್ರೆಂಚ್ ಮೂಲದ ಜನ ನೆಲೆಸಿದ್ದು ಇಂದಿಗೂ ತಮ್ಮ ಫ್ರೆಂಚ್ ವ್ಯಕ್ತಿತ್ವ ಹಾಗೂ ಫ್ರೆಂಚ್ ನುಡಿಯನ್ನು ಉಳಿಸಿಕೊಂಡಿರುವುದು ಕಂಡುಬುರತ್ತದೆ. ಮೇನ್‍ನ ಅತ್ಯಂತ ದೊಡ್ಡ ನಗರ ಪೋರ್ಟ್‍ಲ್ಯಾಂಡ್. ಇದು ರಾಜ್ಯದ ವಾಣಿಜ್ಯ ಹಾಗೂ ಸಾರಿಗೆಯ ಕೇಂದ್ರವಾಗಿದೆ. ಉಕ್ಕು ಮತ್ತು ಕಾಗದದ ಕಾರ್ಖಾನೆಗಳು ಹಗೂ ಇತರ ವೈವಿಧ್ಯಮಯ ಕೈಗಾರಿಕೆಗಳಿವೆ. ಬ್ಯಾಂಗಾರ್ ನಗರ ಪೆನಾಬ್‍ಸ್ಕಾಟ್ ನದಿಯ ಮೇಲಿದ್ದು, ಪೂರ್ವ ಹಾಗೂ ಉತ್ತರ ಮೇನ್‍ನ ವಾಣಿಜ್ಯ ಕೇಂದ್ರವಾಗಿದೆ. ಕೆನೆಬೆಕ್ ನದಿಯ ಮೇಲಿರುವ ಆಗಸ್ಟ್ ರಾಜ್ಯದ ರಾಜಧಾನಿ. ಇದು ಬಟ್ಟೆ, ಪಾದರಕ್ಷೆ ಮತ್ತು ಕಾಗದದ ಕೈಗಾರಿಕಾ ಕೇಂದ್ರ. ರಾಜ್ಯದ ಇತರ ಪ್ರಮುಖ ನಗರಗಳು ಲೆವಿಸ್ಟನ್, ಆಬರ್ನ್, ಬಿಡೆಫೋರ್ಡ್, ವಾಟರ್‍ವಿಲ್ಲೆ.

ನ್ಯೂ ಇಂಗ್ಲೆಂಡ್ ನಿವಾಸಿಗಳಲ್ಲಿ ಇಂಗ್ಲಿಷ್ - ಸ್ಕಾಟ್-ಐರಿಷ್ ಪ್ರಾಟೆಸ್ಟೆಂಟ್ ವಲಸೆಗಾರರು ಬಹುಸಂಖ್ಯಾತ ವರ್ಗದವರಾಗಿದ್ದು ಇಲ್ಲಿಯ ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಕಾಡಿಯನ್ನರೆಂದು ಕರೆಯುವ ಫ್ರೆಂಚ್ ಮೂಲದವರು ಇಲ್ಲಿಯ ಎರಡನೆಯ ಬಹುಸಂಖ್ಯಾತ ವರ್ಗ. ಇವರನ್ನು 1763 ರಲ್ಲಿ ನೋವಾ ಸ್ಕಾಟಿಯದಿಂದ ಬ್ರಿಟಿಷರು ಹೊರಹಾಕಿದರು. ಇವರು ಸೇಂಟ್ ಜಾನ್ ಕಣಿವೆಯಲ್ಲಿ ಹಾಗೂ ಲೂಸಿಯಾನಿಯದಲ್ಲಿ ನೆಲಸಿದರು. ಸೇಂಟ್ ಜಾನ್ ಕಣಿವೆಯಲ್ಲಿ ಫ್ರೆಂಚ್ ಪ್ರಮುಖ ಭಾಷೆಯಾಗಿದ್ದು, ಮೇನ್‍ನ ಕೈಗಾರಿಕಾ ನಗರಗಳಲ್ಲಿ ದ್ವಿತೀಯ ಭಾಷೆಯಾಗಿದೆ. 18 ನೆಯ ಶತಮಾನದಲ್ಲಿ ಇಲ್ಲಿಗೆ ಐರಿಷ್ ಜನರು ವಲಸೆ ಬಂದರು. ಮೇನ್ ರೋಮನ್ ಕ್ಯಾಥೊಲಿಕ್ ರಲ್ಲಿ ಬಹುಭಾಗ ಐರಿಷ್ ಹಾಗೂ ಫ್ರೆಂಚರಿದ್ದಾರೆ. 1870 ರ ದಶಕದಲ್ಲಿ ಕೃಷಿಯ ಅಭಿವೃದ್ಧಿ ಹಾಗೂ ಜನಸಂಖ್ಯೆಯ ಬೆಳವಣಿಗೆಯ ಉದ್ದೇಶಕ್ಕಾಗಿ ಆರೂಸ್ಟೂಕ್ ಕೌಂಟಿಯಲ್ಲಿ ಸರ್ಕಾರ ಸ್ವೀಡಿಷ್ ವಸಾಹತಿನ ಸ್ಥಾವಪನೆಗೆ ಉತ್ತೇಜನ ನೀಡಿತು. ಇಲ್ಲಿ ವಾಸಿಸುವ ಇತರ ಜನರ ಮೂಲ ಅಮೆರಿಕನ ಇಂಡಿಯನ್ನರು. ಮೇನ್‍ನಲ್ಲಿಯ ಬಿಳಿಯರಲ್ಲದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 9 ಕ್ಕಿಂತ ಕಡಿಮೆ. ಆರ್ಥಿಕತೆ: ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಮೇನ್‍ನಲ್ಲಿ ಸಿಗುವ ಅರಣ್ಯ ಸಂಪತ್ತು, ಜಲಸಂಪತ್ತು, ಕಡಿಮೆ ಕೂಲಿಗೆ ಸಿಗುವ ನಿಪುಣ ಕೆಲಸಗಾರರು ಇವೆಲ್ಲ ಉದ್ಯಮಿಗಳನ್ನು ಇಲ್ಲಿಗೆ ಆಕರ್ಷಿಸಿದವು. ಬಟ್ಟೆ ಹಾಗೂ ಪಾದರಕ್ಷೆಗಳ ಕಾರ್ಖಾನೆಗಳು ಸ್ಥಾಪಿತವಾದವು.

ಇಲ್ಲಿಯ ಅತ್ಯಂತ ಫಲವತ್ತಾದ ಪ್ರದೇಶವಾದ ಆರೂಸ್ಟೂಕ್ ಕೌಂಟಿಯ ಪ್ರಮುಖ ಬೆಳೆ ಆಲೂಗೆಡ್ಡೆ. ಉಳಿದ ಭಾಗದಲ್ಲಿಯ ಭೂಮಿ ಹಾಗೂ ಮಣ್ಣಿನ ಗುಣ ದೊಡ್ಡ ಪ್ರಮಾಣದ ಕೃಷಿಗೆ ಯೋಗ್ಯವಾಗಿಲ್ಲ. ಸಮುದ್ರ ನಳ್ಳಿಗಳನ್ನು ಬಿಟ್ಟರೆ ಉಳಿದ ಮೀನುಗಾರಿಕೆ ಸೀಮಿತವಾಗಿದೆ. ಈ ಕಾರಣಗಳಿಂದ ನ್ಯೂ ಇಂಗ್ಲೆಂಡಿನಲ್ಲಿ ಕಡಿಮೆ ಆದಾಯವಿರುವ ರಾಜ್ಯಗಳಲ್ಲಿ ಮೇನ್ ಎರಡನೆಯದೆನಿಸಿದೆ. ಇಲ್ಲಿ ಸಿಗುವ ನೈಸರ್ಗಿಕ ಸಂಪತ್ತಿನಲ್ಲಿ ಪ್ರಮುಖವಾದವು ಮರ, ಮರಳು, ಗ್ರಾವೆಲ್, ಸುಣ್ಣಕಲ್ಲು, ಹಾಗೂ ಮೀನು. ಅಲ್ಪ ಪ್ರಮಾಣದಲ್ಲಿ ತಾಮ್ರ, ಸತು ಫೆಲ್‍ಸ್ಟಾರ್ ಹಾಗೂ ಅರ್ಧಪ್ರಶಸ್ತ ಹರಳುಗಳು ಸಿಗುತ್ತವೆ. ಸಸ್ಯಾಗಾರವನ್ನು ತೋಟಗಾರಿಕೆಗಾಗಿ ಹೊರತೆಗೆಯಲಾಗುತ್ತದೆ. ಇಲ್ಲಿಯ ಪ್ರಮುಖ ಬೆಳೆಗಳು ಆಲೂಗಡ್ಡೆ, ಸೇಬು, ಬ್ಲೂಚೆರ್ರಿ, ಓಟ್ಸ್ ಇತ್ಯಾದಿ. ಪಶುಪಾಲನೆ ಹಾಗೂ ಕೋಳಿ ಸಾಕಾಣಿಕೆ ಇತರ ಕಸುಬುಗಳು. ಮನೋಹರವಾದ ಸರೋವರಗಳು, ಸಮುದ್ರತೀರ, ಈಜಲು, ದೋಣಿವಿಹಾರ ಮಾಡಲು, ಮೀನು ಹಿಡಿಯಲು, ಬೇಟೆಯಾಡಲು ಮೇನ್‍ನ ಪ್ರಮುಖ ಆಕರ್ಷಣೆಯಾಗಿವೆ. ಮೌಂಟ್ ಡೆಸರ್ಟ್ ದ್ವೀಪದಲ್ಲಿಯ ಮೇನ್‍ನ ಪ್ರಮುಖ ಆಕರ್ಷಣೆಯಾಗಿವೆ. ಮೌಂಟ್ ಡೆಸರ್ಟ್ ದ್ವೀಪದಲ್ಲಿಯ ಅಕಾಡಿಯ ನ್ಯಾಷನಲ್ ಪಾರ್ಕ್, ಬಾಕ್ಸಟರ್ ಸ್ಟೇಟ್ ಪಾರ್ಕ್, ಕಟಾಡಿನ ಪರ್ವತದ ಸುತ್ತಮುತ್ತ 80,940 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಪ್ರದೇಶ, 147 ಕಿ. ಮೀ. ಉದ್ದದ ಜಲಮಾರ್ಗ ಹಾಗೂ ನೂರಕ್ಕೆ ಹೆಚ್ಚು ರಾಜ್ಯಪಾರ್ಕ್‍ಗಳು ಮತ್ತು ಐತಿಹಾಸಿಕ ಸ್ಥಳಗಳು ಇದನ್ನು ಜನಪ್ರಿಯ ಪ್ರವಾಸಿ ಕೇಂದ್ರವನ್ನಾಗಿ ಮಾಡಿವೆ.

ಆಡಳಿತ : 1820 ರಲ್ಲಿ ರಚಿತವಾದ ರಾಜ್ಯಾಂಗ ಇನ್ನೂ ಅಸ್ತಿತ್ವದಲ್ಲಿದ್ದು ಅದನ್ನು ಈ ತನಕ 153 ಬಾರಿ ತಿದ್ದುಪಡಿ ಮಾಡಲಾಗಿದೆ. ಗವರ್ನರ್ ಆಡಳಿತದ ಮುಖ್ಯಸ್ಥ. ಅವನನ್ನು ಹತೋಟಿಯಲ್ಲಿಡಲು ಎರಡು ವರ್ಷಗಳಿಗೊಮ್ಮೆ ರಾಜ್ಯದ ಶಾಸನ ಸಭೆಯಿಂದ ಚುನಾಯಿತರಾದ ಏಳು ಸದಸ್ಯರುಳ್ಳ ಕಾರ್ಯಕಾರಿ ಸಮಿತಿ ಇದೆ. ಅಟಾರ್ನಿ ಜನರಲ್, ಸೆಕ್ರೆಟರಿ ಆಫ್ ಸ್ಟೇಟ್, ಆಡಿಟರ್, ರಾಜ್ಯ ಖಜಾನೆ ಅಧಿಕಾರಿ ಮೊದಲಾದವರು ಶಾಸನ ಸಭೆಯಿಂದ ಚುನಾಯಿತರಾಗುತ್ತಾರೆ. ಸೆನೆಟ್ಟಿನ ಅಧ್ಯಕ್ಷ ರಾಜ್ಯಂಗದ ಅನುಸಾರ ಗವರ್ನರನ ಉತ್ತರಾಧಿಕಾರಿಯಾಗಿರುತ್ತಾನೆ. ಮೆನ್‍ನಲ್ಲಿ 3 ಹಂತಗಳ ನ್ಯಾಯ ಪದ್ಧತಿ ಇದೆ. ಜಿಲ್ಲಾ ನ್ಯಾಯಾಧೀಶರ ಮಟ್ಟದಲ್ಲಿ ಪ್ರೊಬ್ರೇಟ್ ನ್ಯಾಯಾಲಯಗಳಿವೆ. ಗವರ್ನರನನ್ನು ನಾಲ್ಕು ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ. ರಾಜ್ಯದಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್ಸಿನ ಸೆನೆಟ್ ಹಾಗೂ ಪ್ರತಿನಿಧಿ ಸಭೆಗಳಿಗೆ ತಲಾ ಇಬ್ಬರು ಪ್ರತಿನಿಧಿಗಳನ್ನು ಜನರು ಚುನಾಯಿಸುತ್ತಾರೆ. ರಾಜ್ಯವನ್ನು 16 ಕೌಂಟಿಗಳಾಗಿ ವಿಭಾಗಿಸಲಾಗಿದೆ. ನಗರಗಳಿಗೆ ಪ್ರತ್ಯೇಕ ಸ್ಥಳೀಯ ಸರ್ಕಾರಗಳಿವೆ.

ಇತಿಹಾಸ: ಆಲ್ಗಾನ್ಕೀಯನ್ ಇಂಡಿಯನ್ನರು ಇಲ್ಲಿಯ ಮೂಲನಿವಾಸಿಗಳು. ಇವರು ನದೀಕಣಿವೆಗಳಲ್ಲೂ ತೀರಪ್ರದೇಶದಲ್ಲೂ ಇದ್ದು ಬೇಟೆ, ಮೀನುಗಾರಿಕೆ ಹಾಗೂ ಕೃಷಿಯಿಂದ ಜೀವನ ನಡೆಸುತ್ತಿದ್ದರು. ಯುರೋಪಿಯನ್ನರು ಪರಿಶೋಧಕರಲ್ಲಿ ಮೇನ್ ಪ್ರದೇಶವನ್ನು ಕ್ರಿ. ಶ. 1000 ದಲ್ಲಿ ನಾರ್ವೇ ದೇಶದವರು ಮೊಟ್ಟಮೊದಲು ಕಂಡುಹಿಡಿದವರೆಂಬ ಅಭಿಪ್ರಾಯವಿದ್ದರೂ ಇದಕ್ಕೆ ಸ್ಪಷ್ಟವಾದ ಪುರಾವೆಗಳಿಲ್ಲ. 1498 ರಲ್ಲಿ ಬ್ರಿಟಿಷ್ ನಾವಿಕ ಜಾನ್‍ಕಾರ್ಬೊಟ್ ತನ್ನ ಎರಡನೆಯ ಕಡಲಯಾನದಲ್ಲಿ ಇದನ್ನು ಪರಿಶೋಧಿಸಿದನೆಂದೂ ಹೇಳಲಾಗಿದೆ. 16ನೆಯ ಶತಮಾನದಲ್ಲಿ ಪೋರ್ಚುಗೀಸ್, ಸ್ಪಾನಿಷ್, ಫ್ರೆಂಚ್ ಹಾಗೂ ಇಂಗ್ಲಿಷ್ ಪರಿಶೋಧಕರು ಇಲ್ಲಿಗೆ ಬಂದಿದ್ದರು. ಹದಿನೇಳನೇಯ ಶತಮಾನದ ಮೊದಲ ಭಾಗದಲ್ಲಿ ಇಲ್ಲಿಯ ಸಮೀಪದ ದ್ವೀಪಗಳಲ್ಲಿ ಮೀನು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗಿತ್ತು ಹಾಗೂ ಇಂಡಿಯನ್ನರೊಡನೆ ತುಪ್ಪಳು ವ್ಯಾಪಾರ ಪ್ರಾರಂಭವಾಗಿತ್ತು. ಫ್ರೆಂಚ್ ಹಾಗೂ ಇಂಗ್ಲಿಷರು ಈ ಪ್ರದೇಶದ ಮೇಲೆ ಹಕ್ಕನ್ನು ಸಾಧಿಸಿದ್ದರಿಂದ 1615 ರಿಂದ 1763 ರ ತನಕ ಈ ಪ್ರದೇಶ ಇಂಗ್ಲಿಷ್, ಇಂಡಿಯನ್ ಹಾಗೂ ಫ್ರೆಂಚರ ನಡುವಣ ಕಾದಾಟದ ಕೆಂದ್ರವಾಗಿತ್ತು. 1763 ರಲ್ಲಿ ಬ್ರಿಟಿಷರು ಪೂರ್ವ ಕೆನಡದಲ್ಲಿ ಫ್ರೆಂಚರನ್ನು ಸೋಲಿಸಿದಾಗ ಈ ಕಾದಾಟ ಕೊನೆಗೊಂಡಿತು.

ಮೊದಲನೆಯ ಚಾಲ್ರ್ಸ್ ದೊರೆಯ ಕಾಲದಲ್ಲಿ ನ್ಯೂ ಇಂಗ್ಲೆಂಡಿನಲ್ಲಿ ಮೇನ್‍ಗೆ ಪ್ರತ್ಯೇಕ ಪ್ರಾಂತೀಯ ಸ್ಥಾನಮಾನವನ್ನು ಕೊಡಲಾಯಿತು. ಬ್ರಿಟಿಷ್ ಅಂತರ್ಯುದ್ಧದ ಕಾಲದಲ್ಲಿ ಈ ಪ್ರದೇಶದ ಒಡೆಯನಾದ ಸರ್ ಫರ್ಡಿನೆಂಡೊ ಜಾರ್ಜಿಸ್ ಸೋತವರ ಪಕ್ಷ ವಹಿಸಿದ್ದರಿಂದ ಮೇನ್ ಮೆಸಾಚುಸೆಟ್ಸ್‍ನ ಪ್ಯೂರಿಟನ್ನರ ವಶವಾಯಿತು. 1812ರ ಯುದ್ಧದಲ್ಲಿ ಬ್ರಿಟಿಷ್ ದಾಳಿಗಳಿಂದ ಮೇನ್‍ನನ್ನು ರಕ್ಷಿಸಲು ಮೆಸಾಚುಸೆಟ್ಸ್ ಕಾಮನ್‍ವೆಲ್ತ್ ವಿಫಲಗೊಂಡಿದ್ದರಿಂದ ಪ್ರತ್ಯೇಕತಾವಾದಕ್ಕೆ ಬೆಂಬಲ ದೊರೆತು 1820ರಲ್ಲಿ ಮೇನ್ ಸಂಯುಕ್ತ ಸಂಸ್ಥಾನಗಳ ಒಕ್ಕೂಟಕ್ಕೆ 23ನೆಯ ರಾಜ್ಯವಾಗಿ ಸೇರಿತು.

ರಾಜ್ಯದ ಈಶಾನ್ಯ ಗಡಿಯ ಬಗ್ಗೆ ಅಮೆರಿಕ ಹಾಗೂ ಇಂಗ್ಲೆಂಡಿನ ನಡುವೆ ಬಹುಕಾಲ ವಿವಾದವಿದ್ದಿತು. 1783ರ ಪ್ಯಾರಿಸ್ ಒಪ್ಪಂದಲ್ಲಿ ಗಡಿಯನ್ನು ಸೇಂಟ್ ಕ್ರಾಯಿಕ್ಸ್ ನದಿಯ ಮಧ್ಯದಿಂದ ಅದರ ಉಗಮ ಸ್ಥಾನದವರೆಗೆ ಮತ್ತು ಅನಂತರ ಪ್ರಸ್ಥಭೂಮಿಯ ಮೂಲಕ ಕನೆಕ್ಟಿಕಟ್ ನದಿಯ ನಿಖರವಾದ ಸ್ಥಾನ ಹಾಗೂ ಉಗಮದ ಬಗ್ಗೆ ವಿವಾದವಿದ್ದು ಇದನ್ನು 1794ರ ಜೇ ಒಪ್ಪಂದದಲ್ಲಿ ಪರಿಹರಿಸಲಾಯಿತು. ಅನಂತರ ಪ್ರಸ್ಥಭೂಮಿಯಲ್ಲಿಯ ಗಡಿಯ ಬಗ್ಗೆ ವಿವಾದವಿದ್ದು ಅದನ್ನು ತೀರ್ಮಾನಿಸಲು ನೆದರ್‍ಲೆಂಡಿನ ದೊರೆಯನ್ನು ನ್ಯಾಯ ನಿರ್ಣಯಕ್ಕಾಗಿ ಆಯ್ಕೆ ಮಾಡಲಾಯಿತು. 1831ರಲ್ಲಿ ಆ ದೊರೆ ಮೇನ್‍ನ ಹಕ್ಕಿಗೆ ವಿರುದ್ಧವಾಗಿ ತೀರ್ಮಾನ ಕೊಟ್ಟಿದ್ದರಿಂದ ಅಮೇರಿಕ ಒಕ್ಕೂಟದ ಸೆನೆಟ್ ಇದನ್ನು ತಡೆಹಿಡಿಯಿತು. 1838-39ರಲ್ಲಿ ಇದರ ಬಗ್ಗೆ ಯುದ್ಧ ಪ್ರಾರಂಭವಾಗುವ ಸ್ಥಿತಿಗೆ ಬಂದು ಜನರಲ್ ವಿನ್‍ಫೀಲ್ಡ್ ಸ್ಕಾಟ್ ಸಂಧಿಯನ್ನು ಏರ್ಪಡಿಸಿದ. ಮೂರು ವರ್ಷಗಳ ಅನಂತರ ವೆಬ್‍ಸ್ಟರ್ - ಆ್ಯಸ್‍ಬರ್ಟಿನ್ ಒಪ್ಪಂದದ ಮೇರೆಗೆ ಮೇನ್ ಹಾಗೂ ಬ್ರಿಟನ್ ವಿವಾದಾತ್ಮಕ ಪ್ರದೇಶವನ್ನು ಸಮನಾಗಿ ಹಂಚಿಕೊಂಡವು. (ಜೆ.ಎಸ್.ಎಸ್.)