ರಾಮನವಮಿ ಭಾರತೀಯ ಸಂಸ್ಕøತಿಯ ಪರಂಪರೆಯಲ್ಲಿ ಆಚರಿಸಲಾಗುತ್ತಿರುವ ಹಬ್ಬಗಳ ಪೈಕಿ ಒಂದು. ಭಾರತೀಯ ಮಹಾಕಾವ್ಯಗಳ ಪೈಕಿ ಒಂದಾದ ರಾಮಾಯಣದಲ್ಲಿ ದೈವತ್ವದಿಂದ ಮೆರೆದ ದಶರಥ ಪುತ್ರ ರಾಮನ ಅವತಾರವನ್ನು ಕೊಂಡಾಡುವ ವಿಶೇಷ ದಿನ ಇದು. ರಾವಣನ ಸಂಹಾರಕ್ಕಾಗಿ ಅವತರಿಸಿದ ರಾಮನ ಜನ್ಮದಿನಾಚರಣೆಯನ್ನು ಚೈತ್ರ ಶುದ್ಧ ನವಮಿಯಂದು (ಪುನರ್ವಸು ನಕ್ಷತ್ರ) ಆಚರಿಸುವುದಿದೆ. ರಾಮನ ಪೂಜೆ ಮಾಡುವುದರ ಜೊತೆಗೆ ರಾಮಾಯಣ ಪಾರಾಯಣ, ಸಂಗೀತೋತ್ಸವಗಳ ಏರ್ಪಾಡು ಮುಂತಾದುವೆಲ್ಲ ಈ ಹಬ್ಬದ ವೈಶಿಷ್ಟ್ಯಗಳು. ಈ ಹಬ್ಬ ಬೇಸಗೆಯ ಸಮಯದಲ್ಲಿ ಬರುವುದಾದ್ದರಿಂದ ಆಗ ಮಾಡುವ ಕೆಲವೊಂದು ತಿನಿಸುಗಳು ಒಂದು ರೀತಿಯಲ್ಲಿ ಬೇಸಗೆಯ ಧಗೆಗೆ ಹಿತ ಎನಿಸುತ್ತವೆ. ಅಂತೆಯೇ ಪಾನಕ, ಕೋಸಂಬರಿ, ನೀರುಮಜ್ಜಿಗೆಗಳ ವಿತರಣೆಯೂ ನಡೆದಿರುತ್ತದೆ. ಕೆಲವೆಡೆ ಸಂಗೀತೋತ್ಸವ ಕಾರ್ಯಕ್ರಮಗಳನ್ನು ನವಮಿಗೆ ಎಂಟು ದಿನಗಳ ಮೊದಲು ಪ್ರಾರಂಭಿಸಿದರೆ, ಕೆಲವೆಡೆ ನವಮಿಯಿಂದ ಒಂಬತ್ತು ದಿನಗಳ ಪರ್ಯಂತ ನಡೆಸುವುದಿದೆ. ಹರಿಕಥಾ ಕಾರ್ಯಕ್ರಮಗಳೂ ನಡೆದು ಕೊನೆಯ ದಿವಸ ಶ್ರೀರಾಮಪಟ್ಟಾಭಿಷೇಕ. ಬೀದಿ ಮೆರವಣಿಗೆಗಳು ನಡೆದು ಆಚರಣೆ ಪೂರೈಸುತ್ತದೆ. ಕೆಲವೆಡೆ ಪಟ್ಟಾಭಿಷೇಕದ ಬಳಿಕ ಶಯನೋತ್ಸವ, ಹನುಮಂತೋತ್ಸವಗಳು ನಡೆಯುವುದುಂಟು. (ನೋಡಿ- ಭಾರತದ-ಹಬ್ಬಗಳು)