ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಕ್ಕರೆಬಾದಾಮಿ

ಸಕ್ಕರೆಬಾದಾಮಿ ರೋಸೇಸೀ ಕುಟುಂಬಕ್ಕೆ ಸೇರಿದ ಪ್ರೂನಸ್ ಅಮಿಗ್ಡಾಲಿಸ್ ಪ್ರಭೇದದ ಮರ (ಸ್ವೀಟ್ ಆಲ್ಮಂಡ್). ಬಾದಾಮಿ, ಬಾದಾಮ್, ಸಿಹಿಬಾದಾಮಿ ಪರ್ಯಾಯ ಪದಗಳು. ಪಶ್ಚಿಮ ಏಷ್ಯದಲ್ಲಿ-ಹೆಚ್ಚಾಗಿ ಕಾಶ್ಮೀರ, ಪಂಜಾಬ್, ಆಫ್ಘಾನಿಸ್ತಾನ ಮುಂತಾದ ತಂಪು ಪ್ರದೇಶಗಳಲ್ಲಿ-ಸಮೃದ್ಧವಾಗಿ ಬೆಳೆಯುತ್ತದೆ. ಸಿಹಿಬಾದಾಮಿ ಮರದ ತೊಗಟೆ ಮತ್ತು ಪಕ್ವವಾದ ಬೀಜಗಳು ಬಲು ಉಪಯುಕ್ತ ಪದಾರ್ಥಗಳು. ಕಹಿಬಾದಾಮಿಯೂ ಉಂಟು. ಇದರ ತೈಲಕ್ಕೆ ಔಷಧೀಯ ಗುಣವಿದೆ. ಸಿಹಿಬಾದಾಮಿಯಲ್ಲಿ ಶೇ. 56 ಭಾಗ ಎಣ್ಣೆ ದೊರೆಯುತ್ತದೆ-ಮುಖ್ಯವಾಗಿ ಆಲ್ಬ್ಯುಮಿನ್ ದ್ರವ್ಯ. ಇದು ನೀರಿನಲ್ಲಿ ಲೀನಿಸುತ್ತದೆ. ಹುದುಗುಹಾಕಿದ ಎಮಲ್ಶನ್ನಿನಲ್ಲಿ ಸೇಕಡಾ 3 ಲೋಳೆಸರ, ಶೇಕಡಾ 6 ಸಕ್ಕರೆ, ಸೇಕಡಾ 18.58 ಸಾರಜನಕ ದ್ರವ್ಯಗಳು ಮತ್ತು ಶೇಕಡಾ 3-5 ಬೂದಿ ಇವೆ. ಉಳಿದದ್ದು ನಿರುಪಯುಕ್ತ ಚರಟ. ಸಕ್ಕರೆಬಾದಾಮಿ ಬೀಜವನ್ನು ಹಸಿಯಾಗಿ ತಿನ್ನಬಹುದು, ಅಡುಗೆಯ ವಿಶಿಷ್ಟಬಾಬುಗಳಲ್ಲಿ ಬಳಸಬಹುದು. ಔಷಧ ಪದಾರ್ಥವಾಗಿಯೂ ಸೇವಿಸಬಹುದು. (ಎಸ್.ಕೆ.ಎಚ್.)