ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸತೀಶ್ ಧವನ್

ಸತೀಶ್ ಧವನ್ (1920-2002). ಸತೀಶ್ ಧವನ್ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಹತ್ತೊಂಬತ್ತು ವರ್ಷಗಳ ಕಾಲ ನಿರ್ದೇಶಿಸಿದ ಉನ್ನತ ವಿಜ್ಞಾನಿ ಮತ್ತು ಶ್ರೇಷ್ಠ ಉಪಾಧ್ಯಾಯ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯನ್ನು ಹನ್ನೆರಡು ವರ್ಷಗಳಕಾಲ ಬೆಳೆಸಿದ ಶ್ರೇಷ್ಠ ಆಡಳಿತಗಾರ, ಎಲ್ಲರೊಡನೆ ಒಂದಾಗಿ ಬೆರೆಯುತ್ತಿದ್ದ ಸಹೃದಯಿ, ಮಹಾ ಮಾನವತಾವಾದಿ.

ಧವನ್ ಹುಟ್ಟಿದ್ದು 1920ನೆಯ ಇಸವಿ ಸೆಪ್ಟೆಂಬರ್ 25ನೆಯ ತಾರೀಕು ಕಾಶ್ಮೀರದ ಶ್ರೀನಗರದಲ್ಲಿ. ಗುಣ, ಹಿರಿಮೆಗೆ ಹೆಸರಾದ ಒಳ್ಳೆಯ ಕುಟುಂಬದಲ್ಲಿ. ಚಿಕ್ಕಂದಿನಲ್ಲಿಯೇ ಓದು, ವಿಚಾರ, ಸಂಸ್ಕøತಿಯತ್ತ ಒಲವು. ಪಂಜಾಬ್ ವಿಶ್ವವಿದ್ಯಾಲಯದಿಂದ 1938ರಲ್ಲಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಇಂಗ್ಲಿಷ್ ಭಾಷಾ ಸಾಹಿತ್ಯವನ್ನು ಅಭ್ಯಾಸಮಾಡಿ, ಪಂಜಾಬ್ ವಿಶ್ವವಿದ್ಯಾನಿಲಯದಿಂದ, 1941ರಲ್ಲಿ ಎಂ.ಎ. ಪಡೆದರು. ಅದರ ನಂತರ ತಮ್ಮ ಆಸಕ್ತಿಯನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್‍ನತ್ತ ಹರಿಸಿ ಅದರಲ್ಲಿ ಬಿ.ಇ. ಪದವಿಯನ್ನು ಪಂಜಾಬ್ ವಿಶ್ವವಿದ್ಯಾನಿಲಯದಿಂದ 1944ರಲ್ಲಿ ಪಡೆದರು. ಅನಂತರ ಅವರ ಅಭಿರುಚಿ ವಾಯುವಿಮಾನಶಾಸ್ತ್ರದತ್ತ ಹರಿಯಿತು. ಅದರಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕದ ಮಿನೆಸೋಟಾ ವಿಶ್ವವಿದ್ಯಾಲಯ ಸೇರಿ ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಎಂ.ಇ. ಪದವಿ ಪಡೆದರು. ಅನಂತರ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾನಿಲಯವಾದ ಅಮೆರಿಕಾದ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸೇರಿ, ಅಲ್ಲಿ ಅಧ್ಯಯನಮಾಡಿ, ಆ ವಿಶ್ವವಿದ್ಯಾಯನಿಲಯದ ಏರೋನಾಟಿಕಲ್ ಇಂಜಿನಿಯರ್ ಹುದ್ದೆ ಪಡೆದರು. ಅಲ್ಲಿ ಹೆಚ್ಚಿನ ಸಂಶೋಧನೆ ಮಾಡಿ ಕ್ಯಾಲ್‍ಟೆಕ್‍ನಿಂದ 1951ರಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಅವರ ವಿದ್ಯಾಭ್ಯಾಸ ಅವರ ವಿಭಿನ್ನ ಅಭಿರುಚಿಗೆ, ವಿದ್ಯಾಕಾಂಕ್ಷೆಗೆ, ಸಾಧನೆಗೆ ಸಾಕ್ಷಿ.

ಸತೀಶ್ ಧವನ್‍ರವರು 1951ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯನ್ನು ವಿಜ್ಞಾನದ ಅಧಿಕಾರಿಯಾಗಿ ಸೇರಿದರು. ಅವರ ಕೆಲಸವನ್ನು ಮೆಚ್ಚಿದ ಸಂಸ್ಥೆಯವರು 1952ರಲ್ಲಿ ಅಲ್ಲಿನ ವಾಯುವಿಮಾನಶಾಸ್ತ್ರ ವಿಭಾಗದಲ್ಲಿ ಉಪ ಪ್ರಾಚಾರ್ಯರಾಗಿ ಅನಂತರ 1955ರಲ್ಲಿ ಪ್ರಾಚಾರ್ಯರಾಗಿ ನೇಮಕ ಮಾಡಿದರು. ಧವನ್‍ರವರು ಸಂಶೋಧನೆ ಮತ್ತು ಬೋಧನಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು, ವಿದ್ಯಾರ್ಥಿಗಳ ಮೆಚ್ಚುಗೆಯ ಉಪಾಧ್ಯಾಯರಾದರು. ಧವನ್‍ರ ಬೋಧನಾ ಶೈಲಿಯ ಬಗ್ಗೆ ಅನೇಕ ವಿದ್ಯಾರ್ಥಿಗಳು ಗುಣಗಾನ ಮಾಡಿದ್ದಾರೆ. ಕ್ಲಿಷ್ಟ ವಿಷಯಗಳನ್ನು ಪದರ ಪದರವಾಗಿ ಬಿಡಿಸಿ ವಿವರಿಸುತ್ತಿದ್ದ ರೀತಿ, ಸಹಜ ಸುಂದರ ಭಾಷೆಯ ಪ್ರಯೋಗ, ಮುಗುಳ್ನಗೆ, ಎಲ್ಲ ವಿದ್ಯಾರ್ಥಿಗಳಿಗೂ ತುಂಬ ಬೇಕಾದವರಾಗಿದ್ದರು. ಪ್ರತಿ ಪಾಠದ ನಂತರ, ಪಠ್ಯ ವಿಷಯಕ್ಕೆ ಪೂರಕವಾದ ಲೇಖನಗಳನ್ನು, ಮಾಹಿತಿಯನ್ನು, ಹೆಚ್ಚಿಗೆ ಅಭ್ಯಾಸ ಮಾಡಲು ಉಪಯುಕ್ತವಾದ ಲೇಖನಗಳ ಪಟ್ಟಿಯನ್ನು ಕೊಡುತ್ತಿದ್ದರು. ವಿದ್ಯಾರ್ಥಿಗೆ ಪಠ್ಯ ವಿಷಯದ ತಿರುಳು ತಿಳಿದಿದ್ದರೆ ಧವನ್‍ರಿಗೆ ಸಂತೋಷವಾಗುತ್ತಿತ್ತು. ಸಂಶೋಧನೆಯಲ್ಲಿಯೂ ಅಷ್ಟೇ, ಧವನ್‍ರ ರೀತಿ ನೇರ, ಸರಳ ಮತ್ತು ವಿಷಯದ ಬುಡಕ್ಕೆ ಹೋಗುವ ರೀತಿ ಒಳ್ಳೆಯ ಪರಿಣಾಮ ಕೊಡುತ್ತಿತ್ತು. ಸಂಶೋಧನೆಯಲ್ಲಿ ಅವರಿಗೆ ಎರಡು ಮುಖ್ಯ ಗುರಿ ಇತ್ತು. ಮೊದಲನೆಯದಾಗಿ ಸಂಶೋಧನೆಯ ವಿಷಯದ ತಿರುಳು ಅವರಿಗೆ ಮುಖ್ಯ. ಎರಡನೆಯದಾಗಿ ಸಂಶೋಧನೆ ತಾಂತ್ರಿಕ ಬೆಳೆವಣಿಗೆಗೆ ದಾರಿದೀಪವಾಗಬೇಕು. ಸಂಶೋಧನೆ ಕೇವಲ ಸಂಶೋಧನೆಗೋಸ್ಕರ ಅಲ್ಲ ಅದು ಮಾನವನ ಮತ್ತು ಸಮಾಜದ ಬೆಳೆವಣಿಗೆಗೆ ಸಹಾಯ ಆಗಬೇಕು ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಸಂಶೋಧನೆಯನ್ನು ಆಧರಿಸಿ ತಯಾರಿಸಿದ ಉಪಕರಣಗಳಿಗೆ ಅವರು ಹೆಚ್ಚು ವಿಶ್ವಾಸ ವ್ಯಕ್ತ ಪಡಿಸುತ್ತಿದ್ದರು. ತಮ್ಮ ಪ್ರಯೋಗ ಶಾಲೆಯಲ್ಲಿಯೂ ಸಹ ಇಂತಹ ಅನೇಕ ಉಪಕರಣಗಳನ್ನು ಅವರೇ ಸ್ವತಃ ತಯಾರಿಸಿದ್ದರು. ಅತಿಸೂಕ್ಷ ಟಂಗ್‍ಸ್ಟನ್ ತಂತಿಗಳನ್ನು ತಾಮ್ರದ ತಂತಿಗಳ ಜೊತೆ ಬೆಸುಗೆ ಹಾಕುವ ಯಂತ್ರ, ವಾಯು ಮಂಡಲದಲ್ಲಿ ಗಾಳಿಯ ಒತ್ತಡವನ್ನು ಪರೀಕ್ಷಿಸುವ ಸಾಧನ ಅವರೇ ತಯಾರಿಸಿ ಇಟ್ಟುಕೊಂಡಿದ್ದರು. ತಮ್ಮ ವಿದ್ಯಾರ್ಥಿಗಳಿಗೂ ಇದರ ಬಗ್ಗೆ ತರಪೇತಿ ಕೊಡುತ್ತಿದ್ದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅವರ ಮೇಧಾಶಕ್ತಿ, ಉತ್ಸಾಹ ಮತ್ತು ಮುಂದಾಲೋಚನೆಯ ಪ್ರವೃತ್ತಿಯನ್ನು ಗಮನಿಸಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅವರನ್ನು ಸಂಸ್ಥೆಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದಾಗ ಧವನ್‍ರ ವಯಸ್ಸು ಕೇವಲ ನಲವತ್ತೆರಡು ವರ್ಷ. 1963ರಿಂದ 1981ರವರೆಗೆ 19 ವರ್ಷಗಳ ಕಾಲ ಸಂಸ್ಥೆಯ ನಿರ್ದೇಶಕರಾಗಿ ಕೆಲಸ ಮಾಡಿದರು. ಇಷ್ಟು ದೀರ್ಘ ಕಾಲ ಸಂಸ್ಥೆಯ ನಿರ್ದೇಶಕರಾಗಿ ಬೇರೆಯಾರೂ ಕೆಲಸ ಮಾಡಿಲ್ಲ. ಅಷ್ಟೇ ಅಲ್ಲ, ಸಂಸ್ಥೆಗೆ ಹೊಸ ಹುರುಪು, ಹೊಸ ದಿಕ್ಕು, ಹೊಸ ಬೆಳೆವಣಿಗೆಗಳಿಗೆ ದಾರಿ ದೀಪವಾದರು. ಅನೇಕ ಹೊಸ ಸಂಶೋಧನಾ ವಿಭಾಗಗಳನ್ನು, ನುರಿತ ಸಂಶೋಧಕರನ್ನು, ಅವರು ಸಂಸ್ಥೆಗೆ ಬರುವಂತೆ ಮಾಡಿದರು. ಅಪ್ಲೈಡ್ ಮ್ಯಾತ್‍ಮ್ಯಾಟಿಕ್ಸ್-(ಅನ್ವಯ ಗಣಿತಶಾಸ್ತ್ರ) ಮೆಟೀರಿಯಲ್ ಸೈನ್ಸ್, (ವಸ್ತು ವಿಜ್ಞಾನಶಾಸ್ತ್ರ) ಬಯೋಫಿಸಿಕ್ಸ್ (ಜೈವಿಕ ಭೌತಶಾಸ್ತ್ರ) ಗ್ರಾಮಾಂತರ ಬೆಳೆವಣಿಗೆ ಅನುಗುಣವಾದ ವಿಜ್ಞಾನ ತಂತ್ರಶಾಸ್ತ್ರ ವಿಭಾಗಗಳನ್ನು ಪ್ರಾರಂಭಿಸಿದರು. ಪ್ರಾಚಾರ್ಯರಾದ ಜಿ.ಎನ್. ರಾಮಚಂದ್ರನ್, ಸಿ.ಎನ್.ಆರ್. ರಾವ್, ಎ.ಕೆ.ಎನ್ ರೆಡ್ಡಿ, ಜಾರ್ಜ್ ಸುದರ್ಶನ್ ಮುಂತಾದ ಪ್ರೌಢ ವಿಜ್ಞಾನಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಲು ಆಹ್ವಾನಿಸಿದರು. ಭಾರತೀಯ ವಿಜ್ಞಾನ ಸಂಸ್ಥೆ, ಭಾರತದಲ್ಲಿ ಮಾತ್ರವೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಶ್ರೇಷ್ಠ ಸಂಸ್ಥೆಯಾಗುವುದಕ್ಕೆ ಧವನ್‍ರವರ ಕಾಣಿಕೆ ಬಹಳ ಅಮೂಲ್ಯ.

ವಾಯು ವಿಮಾನ ಶಾಸ್ತ್ರದಲ್ಲಿನ ಅವರ ಅಗಾಧ ಪಾಂಡಿತ್ಯ ದೇಶದ ಅನೇಕ ಸಂಸ್ಥೆಗಳ ಬೆಳೆವಣಿಗೆಗೂ ಸಹಾಯ ಮಾಡಿತು. ಹಿಂದೂಸ್ತಾನ್ ವಿಮಾನ ಕಾರ್ಖಾನೆ, (ಎಚ್.ಎ.ಎಲ್), ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆ (ಎನ್.ಎ.ಎಲ್), ಅವರ ಮಾರ್ಗದರ್ಶನವನ್ನು ಪದೇ ಪದೇ ಪಡೆಯುತ್ತಿತ್ತು. ಆವ್ರೊ 748 ವಿಮಾನಗಳ ಗುಣ ಪರೀಕ್ಷೆ ಮಾಡುವ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದರು. ವಾಯು ವಿಮಾನಗಳ ಇಂಜಿನ್‍ಗಳ ತಯಾರಿಕೆಯ ಸಂಸ್ಥೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿದ್ದರು. ಭಾರತ ಸರ್ಕಾರದ ವಾಯು ವಿಮಾನ ಸಮಿತಿಗೆ ಅಧ್ಯಕ್ಷರೂ ಆದರು. ಕೇಂದ್ರ ಸರ್ಕಾರದ ವೈಜ್ಞಾನಿಕ ಸಮಿತಿ ಸದಸ್ಯರಾಗಿದ್ದರು. ಅವರ ಕಾರ್ಯ ವೈಶಾಲ್ಯ ಅಳತೆಗೂ ಮೀರಿತ್ತು

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾಗ 1971-72ನೆಯ ಇಸವಿ ಅಮೆರಿಕಾದ ಕ್ಯಾಲಿಫೋರ್ನಿಯ ತಾಂತ್ರಿಕ ಸಂಸ್ಥೆಯ ಸಂದರ್ಶಕ ಪ್ರಾಚಾರ್ಯರಾಗಿ ಹೋಗಿದ್ದರು. ಭಾರತಕ್ಕೆ ಹಿಂದಿರುಗಿ, ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂಬುದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಅಪೇಕ್ಷೆಯಾಗಿತ್ತು. ಇದಕ್ಕೆ ಕಾರಣ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ವಿಕ್ರಮ ಸಾರಾಭಾಯ್ ಅವರ ಅಕಾಲಿಕ ಮರಣ. ತಮ್ಮ ಸಂದರ್ಶಕ ಪ್ರಾಚಾರ್ಯರ ಕೆಲಸವನ್ನು ಪೂರ್ತಿ ಮಾಡಬೇಕು. ನಂತರ ಭಾರತಕ್ಕೆ ಹಿಂದಿರುಗಬೇಕು. ಹಾಗೆಯೇ ಬೇರೆ ಜವಾಬ್ದಾರಿ ವಹಿಸಬೇಕಾದರೆ ಭಾರತೀಯ ವಿಜ್ಞಾನ ಸಂಸ್ಥೆಯ ನೀತಿಗೆ ಅನುಗುಣವಾಗಿರಬೇಕು ಎಂದು ಧವನ್ ನಿರ್ಧರಿಸಿದರು. ಧವನ್‍ರವರು ಭಾರತಕ್ಕೆ ಹಿಂದಿರುಗುವುದನ್ನು ಎದುರು ನೋಡುತ್ತಾ ಭಾರತ ಸರ್ಕಾರ ಕಾದಿತ್ತು. ಹಿಂದಿರುಗಿದ ನಂತರ ಧವನ್‍ರು ಎರಡು ವಿಚಾರಗಳನ್ನು ಸರ್ಕಾರದ ಮುಂದೆ ಇಟ್ಟರು. ಮೊದಲನೆಯದಾಗಿ ತಾವು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಮುಂದುವರಿಯುವ ಇಚ್ಛೆ ವ್ಯಕ್ತ ಪಡಿಸಿದರು. ಇದರ ಜೊತೆಯಲ್ಲಿಯೇ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ಜವಾಬ್ದಾರಿ ವಹಿಸಲು ಸಿದ್ಧ ಎಂದರು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ಕೇಂದ್ರ ಬೆಂಗಳೂರಿನಲ್ಲಿಯೇ ಇರಬೇಕೆಂಬುದು ಧವನ್ ಅವರ ಇಚ್ಛೆ. ಭಾರತ ಸರ್ಕಾರ ಎರಡನ್ನೂ ಒಪ್ಪಿಕೊಂಡಿತು, ಸತೀಶ್ ಧವನ್‍ರು ಭಾರತೀಯ ಅಂತರಿಕ್ಷ ಸಂಶೋಧನೆಯ ಅಧ್ಯಕ್ಷರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಈ ಕೆಲಸಕ್ಕೆ ಅವರು ಪಡೆಯುತ್ತಿದ್ದ ಗೌರವ ಧನ ತಿಂಗಳಿಗೆ ಒಂದು ರೂಪಾಯಿ ಮಾತ್ರ.

ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಇವೆರಡರ ಜವಾಬ್ದಾರಿ ಧವನ್‍ರನ್ನು ಹಗಲು, ರಾತ್ರಿ ಕೆಲಸ ಮಾಡುವಂತೆ ಮಾಡಿತು. ಅವರ ಅನೇಕ ಕಾರ್ಯಕ್ರಮಗಳು ಸಂಜೆ, ರಾತ್ರಿ ನಡೆಯುತ್ತಿತ್ತು, ಅಂತರಿಕ್ಷ ಸಂಶೋಧನಾ ಸಂಸ್ಥೆಗೆ ಹೆಚ್ಚಿನ ಸ್ವಾಯತ್ತತೆ, ಗುರುತರ ಜವಾಬ್ದಾರಿ ಕೊಡಲು ಧವನ್‍ರು ತೀರ್ಮಾನಿಸಿದರು.

1975-76ರಲ್ಲಿ ಭಾರತದ ದೂರಸಂಪರ್ಕ ಯೋಜನೆಯಲ್ಲಿ ಧವನ್ ಕ್ರಾಂತಿಕಾರಿ ಮುನ್ನಡೆ ಸಾಧಿಸಿದರು. `ಸೈಟ್(¸Sಚಿಣeಟಟiಣe iಟಿsಣಡಿuಛಿಣioಟಿಚಿಟ ಖಿeಟevisioಟಿ ಇxಠಿeಡಿimeಟಿಣ) ಕಾರ್ಯಕ್ರಮ ರೂಪಿಸಿ ಅಮೆರಿಕದ ಂಖಿS-6 ಉಪಗ್ರಹದ ನೆರವಿನಿಂದ ಭಾರತದ ಆರು ರಾಜ್ಯಗಳ 2500 ಗ್ರಾಮಗಳನ್ನೊಳಗೊಂಡಂತೆ ದೂರದರ್ಶನ ಕಾರ್ಯಕ್ರಮವನ್ನು ದಿನವಹಿ ನಾಲ್ಕು ಗಂಟೆಗಳ ಕಾಲ ಬಿತ್ತರಿಸಲಾಯಿತು. ಸಾಮಾಜಿಕ ಪ್ರಯೋಗದಲ್ಲಿ ಇದು ಜಗತ್ತಿನಲ್ಲಿಯೇ ಅದ್ವತೀಯ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ಅಹಮದಾಬಾದ್ ಮತ್ತು ದೆಹಲಿಯ `ಇಸ್ರೊ ಕೇಂದ್ರಗಳು ರವಾನೆಮಾಡಿದವು. ಈ `ಸೈಟ್ ಕಾರ್ಯಕ್ರಮ ಅಂತಿಮವಾಗಿ ಇನ್ಸಾಟ್ ಉಪಗ್ರಹಗಳ ಶ್ರೇಣಿಯನ್ನು ರೂಪಿಸಲು ನಾಂದಿಯಾಯಿತು.

ಭಾಸ್ಕರ ಸರಣಿಯ ಎರಡು ದೂರ ಸಂವೇದಿ ಉಪಗ್ರಹಗಳು, ಭಾಸ್ಕರ-I (1978) ಭಾಸ್ಕರ II (1981) ತಯಾರಿಕೆಯಲ್ಲಿ ಭಾರತದ ಸಾಧನೆಗೆ ಧವನ್ ಅವರ ಕೊಡುಗೆ ಅತ್ಯಮೂಲ್ಯ. ದೂರದರ್ಶನ ಪ್ರಸಾರ, ಹವಾಮಾನ ವೀಕ್ಷಣೆ ಮುಂತಾದವಕ್ಕೆ ಬಳಸುತ್ತಿರುವ ದೂರ ಸಂಪರ್ಕ ಉಪಗ್ರಹಗಳು ರೂಪುಗೊಂಡಿದ್ದು ಧವನ್ ಅವರು ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿದ್ದಲೇ. 1980ರ ದಶಕದಲ್ಲಿ `ಆ್ಯಪಲ್ (ಂಡಿiಚಿಟಿe ಠಿಚಿsseಟಿgeಡಿ ಠಿಚಿಥಿಟoಚಿಜ exಠಿeಡಿimeಟಿಣ) ಈ ಶ್ರೇಣಿಯ ಮೊದಲ ಉಪಗ್ರಹ (ಉಡಾವಣೆ ಜೂನ್ 19, 1981). ಸ್ವದೇಶಿ ರಾಕೆಟ್ ನಿರ್ಮಾಣ ಯೋಜನೆಗೆ ಸ್ಪಷ್ಟ ರೂಪುರೇಖೆಯನ್ನು ಧವನ್ ನೀಡಿದರು. ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್, ಜಪಾನ್ ಮತ್ತು ಚೀನಾಗಳ ಪ್ರತಿಷ್ಠಿತ ಗುಂಪಿಗೆ ಭಾರತವು ಈ ಸಾಧನೆಯಿಂದಾಗಿ ಸೇರಿತು. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ ಎಸ್.ಎಲ್. ವಿ-3 ನಿರ್ಮಾಣ ಧವನ್ ಅವರ ಸಾಧನೆಯ ಮತ್ತೊಂದು ಮೈಲಿಗಲ್ಲು. ಇದನ್ನು ನಿರ್ವಹಿಸುವ ಹೊಣೆಯನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ವಹಿಸಿದ್ದರು.

ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕ ಹುದ್ದೆಯಿಂದ ಧವನ್ 1981ರಲ್ಲಿ ನಿವೃತ್ತಿಯಾದರು. 1984ರಲ್ಲಿ ಭಾರತದ ಅಂತರಿಕ್ಷ ಕಾರ್ಯಕ್ರಮದ ಮುಖ್ಯಸ್ಥರ ಸ್ಥಾನದಿಂದಲೂ ನಿವೃತ್ತಿಯಾದರು. ಆದರೆ ಅಂತರಿಕ್ಷ ಆಯೋಗದ ಸದಸ್ಯರಾಗಿ ಮುಂದುವರಿದು ಭಾರತದ ಅಂತರಿಕ್ಷ ಕಾರ್ಯಕ್ರಮದ ರೂಪುರೇಖೆಗಳನ್ನು ನೀಡುತ್ತ ಬಂದರು. ಧವನ್ ಅವರ ಕೊಡುಗೆಗಾಗಿ ದೇಶವಿದೇಶಗಳಲ್ಲಿ ಅವರಿಗೆ ಮನ್ನಣೆ ಸಂದಿದೆ. 1966ರಲ್ಲಿ ಪದ್ಮಶ್ರೀ ಪ್ರಶಸ್ತಿ ಪದ್ಮಭೂಷಣ 1971, ಪದ್ಮವಿಭೂಷಣ 1981. ರೂರ್ಕಿ ವಿಶ್ವವಿದ್ಯಾಲಯ (1972) ಯುಕೆ. ಕ್ರಾನ್‍ಫೀಲ್ಡ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (1975) ಪಂಜಾಬು ವಿಶ್ವವಿದ್ಯಾಲಯ (1978) ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚೆನೈ (1981) ದೆಹಲಿ ವಿಶ್ವವಿದ್ಯಾಲಯ 1984 ಧವನ್ ಅವರಿಗೆ ಗೌರವ ಡಾಕ್ಟೋರೇಟ್ ನೀಡಿದೆ. 1983ರಲ್ಲಿ ಆರ್ಯಭಟ ಪ್ರಶಸ್ತಿ, 1999ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ ಇವರಿಗೆ ಸಂದಿದೆ. ಲಂಡನ್ನಿನ ರಾಯಲ್ ಏರೊನಾಟಿಕಲ್ ಸೊಸೈಟಿ 1967ರಲ್ಲಿ ಕಾಮನ್ ವೆಲ್ತ್ ಉಪನ್ಯಾಸ ನೀಡಲು ವಿಶೇಷವಾಗಿ ಆಹ್ವಾನಿಸಿತ್ತು. ಶ್ರೀಹರಿಕೋಟದ ದ್ವೀಪಗಳಿಗೆ ನಿಯತವಾಗಿ ಬರುತ್ತಿದ್ದ ಹಕ್ಕಿಗಳನ್ನು ಗುರುತಿಸುತ್ತ ಅವುಗಳ ಹಾರಾಟವನ್ನು ಧವನ್ ಗಮನಿಸುತ್ತಿದ್ದರು. ಪಕ್ಷಿತಜ್ಞ ಸಲೀಂ ಆಲಿ ಅವರ ಬಗ್ಗೆ ಧವನ್ ಅವರಿಗೆ ಅಪಾರ ಗೌರವ. ಪಕ್ಷಿ ಹಾರಾಟದ ತಂತ್ರ ಕುರಿತು ಧವನ್ ರಾಮನ್ ಮೆಮೊರಿಯಲ್ ಉಪನ್ಯಾಸಗಳಲ್ಲಿ ಉಪನ್ಯಾಸ ಕೊಟ್ಟದ್ದು ಉಂಟು(1988). ಅವರ ಪಕ್ಷಿ ವೀಕ್ಷಣೆಯ ಆಸಕ್ತಿ ಎಷ್ಟು ಗಾಢವಾಗಿತ್ತೆಂದರೆ `ಬರ್ಡ್‍ಫ್ಲೈಟ್ ಎಂಬ ಕೃತಿಯನ್ನು ರಚಿಸಿದರು. ಈ ಕೃತಿ ಎಷ್ಟು ಜನಪ್ರಿಯವಾಯಿತೆಂದರೆ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಕೆಲವು ವರ್ಷಗಳಲ್ಲಿ ಮರು ಮುದ್ರಣ ಮಾಡಿತು. ಧವನ್ 2002, ಜನವರಿ 3ರಂದು ಬೆಂಗಳೂರಿನಲ್ಲಿ ನಿಧನರಾದರು. (ಎಸ್.ಎಸ್.ವಿ.; ಟಿ.ಆರ್.ಎ)